ಪ್ರಾಚೀನ ಭಾರತದಲ್ಲಿಯ ವಿಧ್ಯಾಭ್ಯಾಸ ಪದ್ಧತಿಯು ಬಹುಪಾಲು ಧಾರ್ಮಿಕವಾಗಿದ್ದು ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ನೀಡುವಂಥದಾಗಿತ್ತು. ಆತ್ಮಜ್ಞಾನ ಅಥವಾ ಮೋಕ್ಷ ಸಾಧನೆಯನ್ನು ಹೊಂದುವುದಕ್ಕೆ ಶಿಕ್ಷಣವು ಒಂದು ಸಾಧನವಾಗಿತ್ತು. ‘ಸಾ ವಿದ್ಯಾ ಯಾ ವಿಮುಕ್ತಯೇ’ ಅಂದರೆ ಯಾವುದು ನಮ್ಮನ್ನು ಮುಕ್ತರನ್ನಾಗಿ ಮಾಡುತ್ತದೋ ಅದೇ ವಿದ್ಯೆ ಎಂದು ಪ್ರಾಚೀನರು ನಂಬಿದ್ದರು. ವಿದ್ಯೆಯಿಂದ ಲೌಕಿಕ ಸುಖವೂ ಪ್ರಾಪ್ತವಾಗುತ್ತದೆ. ವಿದ್ಯೆಯಿಂದ ಧನ, ಧನದಿಂದ ಧರ್ಮ, ಧರ್ಮದಿಂದ ಸುಖ ಲಭಿಸುತ್ತದೆ. ಇದು ಪ್ರಾಚೀನರು ಕಂಡುಕೊಂಡ ಮಾರ್ಗವಾಗಿತ್ತು.

ಬಾದಾಮಿ ಚಾಲುಕ್ಯರ ಕಾಲದಲ್ಲಿಯೂ ಶಿಕ್ಷಣದ ಉದ್ದೇಶ ಇದೇ ಆಗಿತ್ತೆಂದು ತಿಳಿಯಲು ಅವಕಾಶವಿದೆ. ಅವರ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನದ ಅನುಕೂಲತೆಗಾಗಿ, ೧. ಬೌದ್ದ ಶಿಕ್ಷಣ ೨. ಜೈನ ಶಿಕ್ಷಣ ಹಾಗೂ ೩. ವೈದಿಕ ಶಿಕ್ಷಣ ಎಂದು ಮೂರು ಬಗೆ ಯಾಗಿ ವಿಂಗಡಿಸಬಹುದು.

. ಬೌದ್ಧ ಶಿಕ್ಷಣ

ಬೌದ್ಧ ಶಿಕ್ಷಣ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ ಸಂಘದಲ್ಲಿ ಸೇರಿಸಿಕೊಳ್ಳುವಾಗ ಜಾತಿ ಭೇದ ಎನ್ನದೆ ಎಲ್ಲರನ್ನೂ ಸೇರಿಸಿಕೊಳ್ಳುವುದು ಮತ್ತು ಅವರಿಗೆ ಧರ್ಮೋಪದೇಶ ಮಾಡುವುದರ ಮೂಲಕ ಸಾಮೂಹಿಕ ಶಿಕ್ಷಣವನ್ನು ನೀಡುವುದು. ಹೀಗಾಗಿ ಜಾತ್ಯತೀತತೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲು ಅಳವಡಿಸಿದ ಶ್ರೇಯಸ್ಸು ಬೌದ್ಧರಿಗೆ ಸಲ್ಲುತ್ತದೆ.

[1]

ಬೌದ್ಧ ವಿಹಾರದಲ್ಲಿ ಹಿರಿಯ ಭಿಕ್ಷುವಿನ ಮಾರ್ಗದರ್ಶನದಲ್ಲಿ ಅನೇಕ ಶಿಷ್ಯ ವರ್ಗದವರು ವಾಸಿಸುತ್ತಿದ್ದರು. ಹೀಗಾಗಿ ಅಲ್ಲಿ ಅನೇಕ ಕೋಣೆಗಳನ್ನು ನಿರ್ಮಿಸಲಾಗುತ್ತಿತ್ತು. ಮುಂದೆ ಇವೇ ಬೌದ್ಧ ಶಿಕ್ಷಣ ಕೇಂದ್ರಗಳಾಗಿ ಮಾರ್ಪಾಡು ಹೊಂದಿದವು. ಇಂತಹ ವಿಹಾರಗಳ ಉಲ್ಲೇಖಗಳು ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಲಭ್ಯವಾಗದಿದ್ದರೂ ಅವರ ಕಾಲದಲ್ಲಿ ಸಂಘಾರಾಮ, ವಿಹಾರ, ಚೈತ್ಯಾಲಯಗಳಿದ್ದವೆಂಬುದು ಹ್ಯೂಯೆನ್‌ತ್ಸಾಂಗನ ಪ್ರವಾಸ ಕಥನದಿಂದ ತಿಳಿದುಬರುತ್ತದೆ.

ಎರಡನೆಯ ಪುಲಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ ಚೀನಿ ಪ್ರವಾಸಿ ಹ್ಯೂಯೆನ್‌ತ್ಸಾಂಗನು ಕ್ರಿ.ಶ.೬೩೦ರಿಂದ ೬೪೪ರವರೆಗೆ ಈ ಪ್ರದೇಶದಲ್ಲಿ ಸಂಚರಿಸಿದನು. ಆಗ ತಾನು ನೋಡಿದ ಕೇಳಿದ ವಿಷಯವನ್ನು ತನ್ನ ಪ್ರವಾಸ ಕಥನದಲ್ಲಿ ಹೀಗೆ ದಾಖಲಿಸಿದ್ದಾನೆ. “ಕೊಂಕಣಪುರದಲ್ಲಿ ನಾನೂರು ಸಂಘಾರಾಮಗಳೂ ಹತ್ತು ಸಾವಿರಕ್ಕೂ ಹೆಚ್ಚು ಬೌದ್ಧ ಅನುಯಾಯಿಗಳೂ ಇದ್ದಾರೆ. ರಾಜನ ಅರಮನೆಯ ಬಳಿ ಮುನ್ನೂರು ಭಿಕ್ಷುಗಳಿರುವ ದೊಡ್ಡ ಸಂಘರಾಮವಿದೆ. ಇವರು ಸಾಹಿತ್ಯ ಪ್ರತಿಭೆಗೆ ಹೆಸರಾದವರು. ಈ ವಿಹಾರದಲ್ಲಿ ಎರಡು ಅಡಿ ಎತ್ತರದ ಸಿದ್ಧಾರ್ಥನ ತಲೆ ಬುರುಡೆಯಿದೆ. ಇದನ್ನು ಸೊಗಸಾಗಿ ಅಲಂಕರಿಸಿದ ಕರಂಡದಲ್ಲಿಟ್ಟಿದ್ದಾರೆ. ಪ್ರತಿ ಉಪವಾಸದ ದಿನ ಇದನ್ನು ಹೊರತೆಗೆದು ಭಕ್ತಿಯಿಂದ ಪೂಜಿಸುತ್ತಾರೆ. ನಗರದ ಬಳಿ ಇನ್ನೊಂದು ವಿಹಾರವಿದೆ. ಅಲ್ಲಿ ಗಂಧದ ಮರದಲ್ಲಿ ಕೆತ್ತಿರುವ ಹತ್ತು ಅಡಿ ಎತ್ತರದ ಮೈತ್ರೇಯನ ವಿಗ್ರಹವಿದೆ. ಇದು ಆಗಾಗ್ಗೆ ಪ್ರಜ್ವಲಿಸುತ್ತಿರುತ್ತದೆ. ಈ ವಿಹಾರವನ್ನು ಇಪ್ಪತ್ತು ದಶಲಕ್ಷ ಅರ್ಹಂತರು ಕಡೆದರೆಂದು ಹೇಳುತ್ತಾರೆ.”[2] ಹೀಗೆ ತನ್ನ ಪ್ರವಾಸ ಕಥನದಲ್ಲಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ವಿಹಾರಗಳಿದ್ದುದನ್ನು ಪ್ರಸ್ತಾಪಿಸುತ್ತಾನೆ. ಇತ್ಸಿಂಗನ ಪ್ರವಾಸ ಕಥನದಲ್ಲಿಯೂ ಬೌದ್ಧ ವಿಹಾರಗಳಿದ್ದುದರ ಉಲ್ಲೇಖಗಳಿವೆ.[3]

ಐಹೊಳೆಯಲ್ಲಿರುವ ಐದು ಗುಹಾಲಯಗಳಲ್ಲಿ ಒಂದು ಬೌದ್ಧ ಧರ್ಮಕ್ಕೆ ಸೇರಿದ್ದಾಗಿದ್ದು ಅದು ಉಳಿದವುಗಳಿಗಿಂತ ಪ್ರಾಚೀನವಾಗಿದ್ದು ಮಹಿಮೆಯನ್ನೊಳಗೊಂಡಿದೆ. ಮೇಲಣ ಮಹಡಿ ಒಂದು ಚೈತ್ಯ ಕೆಳಗಿನ ಅಂತಸ್ತಿನಲ್ಲಿ ಮೊಗಸಾಲೆ ಮತ್ತು ಗರ್ಭಗೃಹದ ದ್ವಾರಶಾಖೆಗಳಲ್ಲಿ ಚಿಕ್ಕ ಉಬ್ಬು ಶಿಲ್ಪಗಳಿದ್ದು ಇವು ಬುದ್ಧನ ಜೀವನದ ದೃಶ್ಯಗಳನ್ನು ಒಳಗೊಂಡಿವೆ. ಈ ಚೈತ್ಯಾಲಯದಲ್ಲಿ ಅಂದು ಬೌದ್ಧಶಿಕ್ಷಣ ನಡೆಯುತ್ತಿರಬೇಕೆಂದು ಊಹಿಸಲು ಅವಕಾಶವಿದೆ.

. ಜೈನ ಶಿಕ್ಷಣ ವ್ಯವಸ್ಥೆ

ಬೌದ್ಧರಂತೆ ಜೈನರು ಕೂಡ ಕರ್ನಾಟಕದಲ್ಲಿ ತಮ್ಮ ವಿದ್ಯಾಭ್ಯಾಸ ಕ್ರಮವನ್ನು ಅನುಸರಿಸಿದರು. ಜೈನ ಬಸದಿಗಳು ಪ್ರಾರಂಭದಲ್ಲಿ ಜೈನಯತಿಗಳು ಚಾತುರ್ಮಾಸದಲ್ಲಿ ನಾಲ್ಕು ತಿಂಗಳು ತಾತ್ಪೂರ್ತಿಕ ತಂಗುವ ತಾಣಗಳಾಗಿದ್ದವು. ಅನಂತರ ಸದಾ ನೆಲೆಯೂರಿ ನಿಲ್ಲುವ ಸ್ಥಳಗಳಾಗಿ ಪರಿಣಮಿಸಿದವು. ಅನಂತರ ಅಲ್ಲಿಗೆ ಶಿಷ್ಯವೃಂದವು ಬಂದು ಸೇರಿ ಅಲ್ಲಿ ವಿದ್ಯಾದಾನ, ಶಾಸ್ತ್ರದಾನ, ಅಷ್ಟವಿಧಾರ್ಚನ, ಹೋಮ ಸಲ್ಲೇಖನ ಮುಂತಾದವು ನಡೆದವು. ಅಲ್ಲದೇ ಜೈನ ಮುನಿಗಳು ಸಂಚಾರವನ್ನು ಕಡಿಮೆ ಮಾಡಿ ಬಸದಿಗಳಲ್ಲಿದ್ದು ಶಿಷ್ಯರಿಗೆ[4] ಬೋಧನೆಯನ್ನು ಮಾಡತೊಡಗಿದರು. ಹೀಗಾಗಿ ಬಸದಿಗಳು ಮುನಿಗಳ ವಾಸಸ್ಥಾನವು, ದೇವಮಂದಿರಗಳು ಹಾಗೂ ವಿದ್ಯಾಕೇಂದ್ರಗಳಾಗಿಯೂ ಮುಂದುವರೆದವು.[5]

ಜೈನ ಶಿಕ್ಷಣದ ಪ್ರಮುಖವಾದ ಅಂಶಗಳೆಂದರೆ ಜಾತಿಪದ್ಧತಿ, ಮೇಲುಕೀಳು, ಗಂಡು‑ಹೆಣ್ಣು ಎಂಬ ಭೇದ‑ಭಾವನೆಯನ್ನು ಹೋಗಲಾಡಿಸಿದ್ದುದು. ಅದನ್ನು ಸಾರ್ವತ್ರಿಕವಾಗಿಸಿದ್ದು ಜೈನ ಶಿಕ್ಷಣದ ವಿಶೇಷ ಲಕ್ಷಣ. ಅದರಂತೆಯೇ ಪ್ರಾಂತೀಯ ಭಾಷೆಗಳಲ್ಲಿ ಶಿಕ್ಷಣವನ್ನು ಹೇಳಲು ಪ್ರಾರಂಭಿಸಿದರು. ಇದರಿಂದ ಹೆಚ್ಚು ಹೆಚ್ಚು ಜನ ವಿದ್ಯಾವಂತರಾಗಲು ಅವಕಾಶವಾಯಿತು. ಇದರೊಂದಿಗೆ ಜೈನರು ಸಹ ಶಿಕ್ಷಣವನ್ನು ಜಾರಿಗೊಳಿಸಿದ್ದು ಅಂದಿನ ಯುಗ ಧರ್ಮಕ್ಕೆ ಹೊರತಾದ ವಿಚಾರವಾಗಿದ್ದಿತು. ಜೈನರಲ್ಲಿ ಶಿಕ್ಷಕನು ಧರ್ಮಬೋಧಕನು ಹೌದು ಧರ್ಮಪ್ರಚಾರಕನೂ, ಶಿಕ್ಷಕನೂ ಹೌದು. ಅಂತೆಯೇ ಅವರಲ್ಲಿ ಶಿಕ್ಷಣ, ಧರ್ಮ, ಅಧ್ಯಯನಗಳು ಸಕ್ರಿಯವಾಗಿ ಹಾಸುಹೊಕ್ಕಾಗಿವೆ.[6]

ಬಾದಾಮಿ ಚಾಲುಕ್ಯರು ಜೈನಧರ್ಮಕ್ಕೆ, ಸಾಕಷ್ಟು ಪ್ರೋನೀಡುವುದರ ಮೂಲಕ ಬಸದಿಗಳ ನಿರ್ಮಾಣವಲ್ಲದೆ ಜೈನಮುನಿಗಳಿಗೆ, ಸಂಘಗಳಿಗೆ ದಾನವನ್ನು ನೀಡುವುದರ ಮೂಲಕ ಜೈನಶಿಕ್ಷಣವನ್ನು ಪ್ರೋಮಂಗಳೇಶನ ಹೂಲಿಯ ತಾಮ್ರಪಟ ಶಾಸನದಲ್ಲಿ[7] ಚಾಲುಕ್ಯ ಮನೆತನದ ಸಾಮಂತ ರಾಜನಾದ ಸೇಂದ್ರಕ ಮನೆತನದ ರವಿ ಶಕ್ತಿ ಮತ್ತು ಕಣ್ಣಶಕ್ತಿಯರು ತಮ್ಮ ಆಡಳಿತದಲ್ಲಿದ್ದ ಕಿರುವಟ್ಟಿಕೆಯಲ್ಲಿಯ ೫೫ ನಿವರ್ತನ ಭೂಮಿಯನ್ನು ಹದಿನಾರನೆಯ ತೀರ್ಥಂಕರನಾದ ಶಾಸಾಂತಿನಾಥ ಚೈತ್ಯಾಲಯಕ್ಕೆ ದಾನ ಬಿಟ್ಟ ವಿಷಯವನ್ನು ಹೇಳಿದೆ. ಅಲ್ಲದೆ ಈ ದಾನವನ್ನು ಪರಲೂರ ಸಂಘಕ್ಕೆ ಸೇರಿದ ಶ್ರೀ ನಂದಿಯ ಶಿಷ್ಯನಾದ ಅಭಯನಂದಿಯು ಸ್ವೀಕರಿಸಿದನು ಎಂದು ಹೇಳಿದೆ. ಎರಡನೆಯ ಪುಲಕೇಶಿಯ ಐಹೊಳೆಯ ಪ್ರಶಸ್ತಿಯ ಕರ್ತೃವಾದ ರವಿಕೀರ್ತಿಯು ಜೈನನಾಗಿದ್ದುದಲ್ಲದೆ, ಜೈನಗೃಹವೊಂದನ್ನು ಕಟ್ಟಿಸಿದನೆಂದು ತಿಳಿದು ಬರುತ್ತದೆ. ಶಾಸನದ ಕೊನೆಯಲ್ಲಿ ಹತ್ತು ಗ್ರಾಮಗಳನ್ನು ಈ ಜಿನೇಂದ್ರಾಲಯದ ಉಪಭೋಗಕ್ಕೆ ಬಿಟ್ಟಂತೆ ಹೇಳಿದೆ. ಇದನ್ನು ಗಮನಿಸಿದರೆ ಅಲ್ಲಿ ಮುನಿಪರಂಪರೆಯೇ ಇದ್ದು ಶಿಷ್ಯವರ್ಗದವರಿಗೆ ಜೈನ ದರ್ಶನವನ್ನು ಹೇಳಿಕೊಡುತ್ತಿದ್ದಿರಬೇಕು. ರವಿಕೀರ್ತಿಯು ಶ್ರೇಷ್ಠ ಪಂಡಿತನಾಗಿದ್ದು, ತಾನು ಕಾಳಿದಾಸ ಮತ್ತು ಭಾರವಿಯರಿಗೇನೂ ಕಡಿಮೆ ಅಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.[8]

ಪುಲಿಗೆರೆಯು ಇವರ ಕಾಲದ ಪ್ರಮುಖ ಜೈನ ಕೇಂದ್ರವಾಗಿತ್ತು. ಎರೆಯಮ್ಮನ ಕಾಲದಲ್ಲಿ ವಿಜಯಶಕ್ತಿಯ ಮೊಮ್ಮಗನಾದ ಕುಂದಶೆಟ್ಟಿಯ ಮಗ ದುರ್ಗಶಕ್ತಿಯು ಪುಲಿಗೆರೆಯ ಶಂಖ ಜಿನೇಂದ್ರ ಚೈತ್ಯಾಲಯಕ್ಕೆ ದತ್ತಿಯನ್ನು ನೀಡಿರುವುದನ್ನು ಅಲ್ಲಿರುವ ಶಾಸನವೊಂದು ಹೇಳಿದೆ.[9] ಕ್ರಿ.ಶ.೬೮೩ರ ವಿಜಯಾದಿತ್ಯನ ಶಾಸನವು ಅಲ್ಲಿಯ ಮೂಲ ಸಂಘದ ದೇವಗಣತಿಲಕನಾದ ಧ್ರುವ ದೇವಾಚಾರ್ಯ ಎಂಬುವವನ ಧರ್ಮೋಪದೇಶದಂತೆ ಶಂಖ ಬಸದಿಯ ದುರಸ್ತಿಗೆ ಪೂಜೆಗೆ ಮತ್ತು ದಾನಶಾಲೆಗೆ ಮತ್ತು ಬೆಳೆವಲ ಮೂರುನೂರರಲ್ಲಿಯ ಹಡಿಗಿಲೆ ಎಂಬ ಗ್ರಾಮವನ್ನು ದಾನಬಿಟ್ಟ ವಿಷಯವನ್ನು ಉಲ್ಲೇಖಿಸುತ್ತದೆ. ಧ್ರುವದೇವಾಚಾರ್ಯನು ಜೈನ[10] ದರ್ಶನದಲ್ಲಿ ಪಾಂಡಿತ್ಯ ಪಡೆದವನಾಗಿದ್ದನಲ್ಲದೆ ಅನೇಕ ಶಿಷ್ಯವರ್ಗವನ್ನು ಹೊಂದಿದ್ದನು.

ಪುಲಿಗೆರೆಯಲ್ಲಿ ಇದ್ದ ಮೂಲ ಸಂಘದ ದೇವಗಣದ ಆಚಾರ್ಯರಾದ ಶ್ರೀಪೂಜ್ಯಪಾದ ಶಿಷ್ಯ ಉದಯದೇವ ಪಂಡಿತರು ಈತನ ಶಿಷ್ಯನಿರವದ್ಯ ಪಂಡಿತರು ಚಾಲುಕ್ಯ ದೊರೆ ವಿಜಯಾದಿತ್ಯನಿಗೆ ರಾಜಗುರುವಾಗಿದ್ದರೆಂದು ಕ್ರಿ.ಶ.೭೩೦ರ ಶಾಸನವೊಂದರಿಂದ ತಿಳಿದು ಬರುತ್ತದೆ.[11] ಅದರಂತೆ ವಿಜಯ ಜಿನಾಲಯವನ್ನು ಜೀರ್ೋದ್ಧಾರ ಮಾಡಿಸಿದ ಪದ್ಮಸೇನನು ರಾಜಗುರುವಾಗಿದ್ದನೆಂಬ ಅಂಶವು ಗಮನಾರ್ಹವಾಗಿದೆ.[12] ವಿಜಯಾದಿತ್ಯನು ತನ್ನ ಧರ್ಮಗುರುಗಳಾದ ನಿರವದ್ಯ ಪಂಡಿತರ ಧರ್ಮೋಪದೇಶದಂತೆ ಶಂಖ ಜಿನೇಂದ್ರ ಬಸದಿಗೆ ಕದಂಬ ಎಂಬ ಗ್ರಾಮವನ್ನು ದತ್ತಿಯಾಗಿ ನೀಡಿದನು.[13] ಅವನ ಸಹೋದರಿ ಕುಂಕುಮ ಮಹಾದೇವಿಯು ಅಲ್ಲಿ ಆನೆಯ ಸಜ್ಜೆ ಬಸದಿಯನ್ನು ನಿರ್ಮಿಸಿದಳೆಂದು ಹೇಳಿದುದಲ್ಲದೆ ಅದಕ್ಕೆ ರಾಜನು ದಾನ ನೀಡಿರುವುದನ್ನು ಶಾಸನವು ಉಲ್ಲೇಖಿಸಿದೆ.[14] ಕ್ರಿ.ಶ.೭೨೩ರ ಶಾಸನವೊಂದು ಬಿಕ್ಕರಣನೆಂಬ ಅಧಿಕಾರಿಯು ಪುಲಿಗೆರೆಯ ಶಂಖ ಜಿನಾಲಯಕ್ಕೆ ಸೆಂಬಳತ ಎಂಬ ಗ್ರಾಮವನ್ನು ದಾನವಾಗಿ ನೀಡಿರುವುದನ್ನು ಹೇಳಿದೆ.[15] ಎರಡನೆಯ ವಿಕ್ರಮಾದಿತ್ಯನು ಕ್ರಿ.ಶ. ೭೩೫ರಲ್ಲಿ ಪುಲಿಗೆರಿಯಲ್ಲಿರುವ ಧವಳ ಜಿನಾಲಯಕ್ಕೆ ನೀಡಿದ ಭೂದಾನವನ್ನು ಮೂಲ ಸಂಘದ ದೇವಗಣಕ್ಕೆ ಸೇರಿದ ವಿಜಯದೇವ ಪಂಡಿತಾಚಾರ್ಯರು ಸ್ವೀಕರಿಸಿರುವುದನ್ನು ಹೇಳಿದೆ.[16] ಎರಡನೆಯ ಕೀರ್ತಿವರ್ಮನ (ಹಾನಗಲ್ ತಾಲೂಕಿನ) ಆಡೂರು ಗ್ರಾಮದಲ್ಲಿಯ ಜಿನೇಂದ್ರ ಭವನಕ್ಕೆ ನೀಡಿದ ಭೂದಾನವನ್ನು ಪರಲೂರ ಗಣದ ಚೇದಿಯ ಬಳ್ಳಿಗೆ ಸೇರಿದ ಪ್ರಭಾಚಂದ್ರರು ಸ್ವೀಕರಿಸಿದ ವಿಷಯವನ್ನು ಹೇಳಿದೆ.[17] ಹೀಗೆ ಚಾಲುಕ್ಯರು ಜೈನ ಮುನಿಗಳಿಗೆ ಮತ್ತು ಜಿನಾಲಯಗಳಿಗೆ, ಬಸದಿಗಳಿಗೆ ದಾನ ನೀಡುವುದರ ಮೂಲಕ ಜೈನ ಶಿಕ್ಷಣವನ್ನು ಪ್ರೋ

. ವೈದಿಕ ಶಿಕ್ಷಣ

ಹಿಂದೂ ಸಂಸ್ಕೃತಿ, ಸಾಹಿತ್ಯ ಪರಂಪರೆಗಳನ್ನು ಉಳಿಸಿ ಬೆಳೆಯಿಸಿಕೊಂಡು ಬರುವುದರ ಸಲುವಾಗಿ ಹಿಂದುಗಳು ಸಹ ತಮ್ಮದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದರು. ಇದನ್ನು ವೈದಿಕ ಶಿಕ್ಷಣ ವ್ಯವಸ್ಥೆಯಂತಲೂ ಹೇಳುವುದುಂಟು. ಇದು ವ್ಯಕ್ತಿ ಕೇಂದ್ರಿತವಾಗಿದ್ದು ಉನ್ನತ ವರ್ಗದವರಿಗೆ ಮಾತ್ರ ಮೀಸಲಾಗಿದ್ದಂತೆ ತೋರುತ್ತದೆ.

ವೈದಿಕ ಶಿಕ್ಷಣವು ಮುಖ್ಯವಾಗಿ ಗುರುಕುಲ, ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ಥಾನ ಹಾಗೂ ದೇವಾಲಯ ಮತ್ತು ಮಠಗಳಲ್ಲಿ ನಡೆಯುತ್ತಿತ್ತು.

ಗುರುಕುಲ ಹಾಗೂ ಆಶ್ರಮ ಶಾಲೆಗಳು

ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿಯ ಶೈಕ್ಷಣಿಕ ವ್ಯವಸ್ಥೆಯ ಮುಖ್ಯ ಸಂಸ್ಥೆಯಾಗಿತ್ತು. ಬಾದಾಮಿ ಚಾಲುಕ್ಯರ ಕಾಲದಲ್ಲಿ ಗುರುಕುಲ ಪದ್ಧತಿಯು ಇತ್ತೆಂದು ಹ್ಯೂಯೆನ್‌ತ್ಸಾಂಗನ ಬರವಣಿಗೆಗಳಿಂದ ಹಾಗೂ ಶಿಲ್ಪಗಳಿಂದ ತಿಳಿದುಬರುತ್ತದೆ.

ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಸಭಾಮಂಟಪದ ಕಂಬದ ಮೇಲೆ ಗುರುಜಟಾಧಾರಿಯಾಗಿ ಎತ್ತರದ ಮಣೆಯ ಮೇಲೆ ಕುಳಿತಿದ್ದಾನೆ. ಆತನ ಎಡಗಾಲು ಪಾದಪೀಠದ ಮೇಲಿದೆ. ವಿದ್ಯಾರ್ಥಿಗಳು ತಾಳೆಗರಿಗಳನ್ನು ಹಿಡಿದುಕೊಂಡು ಕುಳಿತಿದ್ದಾರೆ. ಹಿನ್ನೆಲೆಗಳಲ್ಲಿ ಗುರುಗಳ ಆಶ್ರಮವಿದೆ. ಎಡಬಲದಲ್ಲಿರುವ ಸಸ್ಯ ಮತ್ತು ್ರಾಣಿ ಸಂಕುಲವು ಅಂದಿನ ಶಾಲಾಪರಿಸರವನ್ನು ಚಿತ್ರಿಸುತ್ತದೆ. ಇಂಥದೇ ಇನ್ನೊಂದು ಗುರುಕುಲ ದೃಶ್ಯವು ಮಲ್ಲಿಕಾರ್ಜುನನ ದೇವಾಲಯದ ಸಭಾ ಮಂಟಪದ ಕಂಬದ ಮೇಲೆ ಕಂಡರಿಸಲ್ಪಟ್ಟಿದೆ.[18]

ಬಾದಾಮಿ ಪಟ್ಟದಕಲ್ಲು ಮತ್ತು ಐಹೊಳೆಗಳಲ್ಲಿ ದೊರೆತಿರುವ ಎಂಟನೆಯ ಶತಮಾನದ ಬಿಡಿ ಶಾಸನಗಳಲ್ಲಿ ಬಾದಾಮಿಯ ಮಾಣಿ ಎಂಬುವವನ ಬಗ್ಗೆ ಉಲ್ಲೇಖಗಳಿವೆ. ಪಾಣಿನಿಯ ಪ್ರಕಾರ ಮಾಣವ ಎಂದರೆ ವಿದ್ಯಾಭ್ಯಾಸವನ್ನು  ಆರಂಭಿಸಿರುವ ಬಾಲಕ. ಶಾಸನಗಳಲ್ಲಿ ಶ್ರೀ ಕಡಪುದನ್ನಾಡಿದುದನ್ಸಲಿಪೋ ಬಾದಾಮಿಯ ಮಾಣಿ ಎಂದಿರುವುದರಿಂದ ಈ ಬಾಲಕನು ಕಡಪುದ ಎಂಬಾತನ ಅತ್ಯಂತ ಅಜ್ಞಾಧಾರಕ ಶಿಷ್ಯನಾಗಿರಬೇಕು.[19] ಲಕ್ಷ್ಮೇಶ್ವರದ ಶಾಸನವೊಂದರಲ್ಲಿ ಉದಯದೇವಪಂಡಿತನು ಪೂಜ್ಯಪಾದನ ಗೃಹವಿದ್ಯಾರ್ಥಿಯಾಗಿದ್ದನೆಂದು  ಉಲ್ಲೇಖಿಸುತ್ತದೆ.[20]

ಅಗ್ರಹಾರ

ಅಗ್ರ ಎಂದರೆ ಶ್ರೇಷ್ಟ; ಆಹಾರ ಎಂದರೆ ದೇಶ ಅಥವಾ ಸ್ಥಳ. ಅಗ್ರಹಾರವೆಂದರೆ ಬ್ರಾಹ್ಮಣರೇ ಇರಬೇಕಿಲ್ಲ. ಬೇರೆ ಜಾತಿಯ ಜನಾಂಗದವರು ಇರಬಹುದು. ಆದರೆ ಆ ಗ್ರಾಮದ ಆದಾಯವೆಲ್ಲವು ಬ್ರಾಹ್ಮಣರಿಗೆ ಸೇರುತ್ತಿತ್ತು.

ಅಗ್ರಹಾರವೆನ್ನುವುದು ಬ್ರಾಹ್ಮಣರಿಗೆ ಧಾರ್ಮಿಕವಾಗಿ ದಾನ ಕೊಡಲಾದ ದತ್ತಿ. ಅದರ ಸರ್ವಾಧಿಕಾರ ಅವರಿಗೆ ಸೇರಿದ್ದು ಎಂದು ಕೆ.ಎಂ. ಗುಪ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ.[21] ಒಂದು ಗ್ರಾಮವನ್ನು ಅಗ್ರಹಾರವಾಗಿ ಪರಿವರ್ತಿಸಿ ಬ್ರಾಹ್ಮಣರಿಗೆ ದಾನ ಮಾಡಿದರೆ ಪುಣ್ಯ ಬರುತ್ತದೆಂದು ರಾಜರು ನಂಬಿದ್ದರು. ಹೀಗಾಗಿ ಚಾಲಕ್ಯರ ಕಾಲದಲ್ಲಿ ಅನೇಕ ಅಗ್ರಹಾರಗಳು ಹುಟ್ಟಿಕೊಂಡವು. ಬಾದಾಮಿ ಚಾಲುಕ್ಯರ ೩೦೦ಕ್ಕೂ ಹೆಚ್ಚು ಶಾಸನಗಳಿದ್ದರೂ ಅವುಗಳಲ್ಲಿ ೪೨ ಶಾಸನಗಳು ಮಾತ್ರ ಬ್ರಾಹ್ಮಣರಿಗೆ, ವಿದ್ವಾಂಸರಿಗೆ, ಶೈವಯತಿಗಳಿಗೆ ಗ್ರಾಮ, ಭೂ, ಹಣ ಮುಂತಾದವುಗಳನ್ನು ದಾನ ನೀಡಿದ ವಿಷಯವನ್ನು ಹೇಳಿದರೆ ಕೇವಲ ಹನ್ನೆರಡು ಶಾಸನಗಳಲ್ಲಿ ಮಾತ್ರ ಅಗ್ರಹಾರಗಳ ಉಲ್ಲೇಖಗಳಿವೆ. ಮೊಟ್ಟಮೊದಲ ಉಲ್ಲೇಖವು ಒಂದನೆಯ ಪುಲಕೇಶಿಯ ಅಮ್ಮಿನಭಾವಿಯ ಶಾಸನವು ಅಲ್ಲಿಯ ಕಲಿದೇವ  ದೇವಾಲಯಕ್ಕೆ ದಾನ ನೀಡಿರುವುದನ್ನು ಹೇಳಿ, ಅಮ್ಮಿನಭಾವಿಯನ್ನು ಅಗ್ರಹಾರವೆಂದು ಕರೆದಿದೆ.[22] ಕ್ರಿ.ಶ.೫೯೯ರ ಮಾರಟೂರ ಶಾಸನವು ಮಂಗಳೇಶನು ವೇದಪಾರಂಗತರು ಮತ್ತು ತರ್ಕಶಾಸ್ತ್ರ ವಿಶಾರದರು ಆಗಿದ್ದ ಹನ್ನೆರಡು ಜನ ಬ್ರಾಹ್ಮಣರಿಗೆ ಮಾರಟೂರ ಗ್ರಾಮವನ್ನು  ಅಗ್ರಹಾರವನ್ನಾಗಿ ಮಾಡಿ ದಾನ ನೀಡಿರುವುದನ್ನು ಉಲ್ಲೇಖಿಸುತ್ತದೆ.[23] ಎರಡನೆಯ ಪುಲಕೇಶಿಯ ಪೆದ್ದವಡಗೂರ ಶಾಸನವು ಪುಲಕೇಶಿಯ ರಣವಿಕ್ರಮ ಎಂಬುವವನನ್ನು ಸೋಲಿಸಿದ ನಂತರ ವಿಜಯೋತ್ಸವದ ಸ್ಮರಣೆಗಾಗಿ ಎಱ್ಬಿತ್ತುಸಿಂಬಿಗೆ ಎಂಬ ಗ್ರಾಮವನ್ನು ಅಲ್ಲಿಯ ಮಹಾಜನರಿಗೆ ತೆರಿಗೆರಹಿತವಾಗಿ ದತ್ತಿಕೊಟ್ಟನೆಂದು ಹೇಳುವುದರೊಂದಿಗೆ ನಾಡನೂರು ಎಂಬ ಅಗ್ರಹಾರವನ್ನು ಅಲ್ಲಿಯ ಮಹಾಜನರಿಗೆ ತೆರಿಗೆರಹಿತವಾಗಿ ಕೊಟ್ಟನೆಂದು ಹೇಳಿದೆ.[24] ಅವನ ಕಾಲದ ಕ್ರಿ.ಶ. ೬೧೭ರ ಸಾತಾರ ತಾಮ್ರ ಶಾಸನವು ಅಣೂಪವ್ಯಾಗ್ರಹಾರದ ಉಲ್ಲೇಖ ಮಾಡಿದರೆ[25] ಪಿಂಪಲನೇರಿ ತಾಮ್ರಶಾಸನವು ಅಗ್ರಹಾರವನ್ನು ಹೆಸರಿಸಿದೆ.[26] ಆದರೆ ಇದು ಕೃತಕ ಶಾಸನವೆಂದು ಪರಿಗಣಿಸಲಾಗಿದೆ. ನವಸಾರಿ ತಾಮ್ರಶಾಸನದಲ್ಲಿಯೂ ಅಗ್ರಹಾರದ ಉಲ್ಲೇಖವಿದೆ.[27]

ವಿಜಯಾದಿತ್ಯನ ಚಿಪ್ಪಗಿರಿ ಶಾಸನವು ಮಹಾಜನರನ್ನು ಉಲ್ಲೇಖಿಸಿದ್ದು ಬಹುಶಃ ಅದು ಅಗ್ರಹಾರವಾಗಿರಬಹುದು. ಅವನ ಕ್ರಿ.ಶ.೬೯೯ರ ಬಾದಾಮಿಯ ಶಾಸನವು ವಾತಾಪ್ಯಧಿಷ್ಠಾನವು ಚತುರ್ದಶ[28] ವಿದ್ಯೋಪಲಸಿತಾನೇಕ ಸಹಸ್ರದ್ವಿಜವಲೋಪ್ತ ಶೋಭಿತೇ” ಎಂದು ಉಲ್ಲೇಖಿಸಿದೆ. ಹದಿನಾಲ್ಕು ವಿದ್ಯೆಗಳಲ್ಲಿ ಪರಿಣತರಾದ ಸಹಸ್ರಾರು ಬ್ರಾಹ್ಮಣರು ಈ ಪಟ್ಟಣದಲ್ಲಿ ವಾಸವಾಗಿದ್ದರು. ಇದರಿಂದಾಗಿ ಬಾದಾಮಿಯು ಶಿಕ್ಷಣ ಕೇಂದ್ರವಾಗಿತ್ತೆಂದು ಊಹಿಸಲು ಅವಕಾಶವಿದೆ.[29] ಅವರ ಇನ್ನೊಂದು ಶಾಸನವು ಸಹ ಅದನ್ನು ಅಧಿಷ್ಠಾನವೆಂದು ಹೆಸರಿಸಿದೆ.[30] ಮಹಾಕೂಟದ ಮಹಾಕೂಟೇಶ್ವರ ದೇವಾಲಯದ ಮುಖಮಂಟಪದ ಕಂಬದ ಮೇಲಿರುವ ಶಾಸನವು ಅದು ಅಗ್ರಹಾರವಿರುವುದನ್ನು ಸೂಚಿಸುವಂತಿದೆ.[31] ಐಹೊಳೆಯ ಎರಡು ಶಾಸನಗಳಲ್ಲಿ ಅದನ್ನು ಅಧಿಷ್ಠಾನವೆಂದು ಹೇಳಿದೆ.[32] ಈ ಶಾಸನಗಳಲ್ಲಿ ಆರ್ಯಪುರದ ಜನರಿಂದ ಯೋಗ್ಯರೆಂದು  ಆರಿಸಿದ ಚತುರ್ವೇದಿಗಳಾದ ಐನೂರ್ವ್ವರ ಉಲ್ಲೇಖವಿದೆ. ಈ ಎಲ್ಲ ಉಲ್ಲೇಖಗಳು ಚಾಲುಕ್ಯರ ಕಾಲದಲ್ಲಿ ಅನೇಕ ಅಗ್ರಹಾರಗಳಿದ್ದವೆಂದು ತಿಳಿದುಬರುತ್ತದೆ. ಆದರೆ ಇಲ್ಲಿ ಎಂತಹ ಶಿಕ್ಷಣ ವ್ಯವಸ್ಥೆ ಇತ್ತು ಎಂಬುದು ಸ್ಪಷ್ಟವಾಗುವುದಿಲ್ಲ.

ಬ್ರಹ್ಮಪುರಿ

ಅಗ್ರಹಾರಗಳಂತೆ ಬ್ರಹ್ಮಪುರಿಗಳೂ ವಿದ್ಯಾಕೇಂದ್ರಗಳಾಗಿದ್ದವು. ಬ್ರಹ್ಮಪುರಿ ಎಂದರೆ ಪಟ್ಟಣದಲ್ಲಿ ಬ್ರಾಹ್ಮಣ ವಿದ್ವಾಂಸರು ವಾಸವಾಗಿರುವ ಒಂದು ಭಾಗ ಅಥವಾ ಓಣಿ. ಪ್ರಾಚೀನ ಕಾಲದಲ್ಲಿ ಪಟ್ಟಣಗಳು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಬ್ರಹ್ಮಪುರಿಗಳ ಸಂಖ್ಯೆಯು ಕಡಿಮೆ. ಬಾದಾಮಿ, ಪುಲಿಗೆರೆಗಳಲ್ಲಿ ಬ್ರಹ್ಮಪುರಿಗಳಿದ್ದವೆಂಬ ಉಲ್ಲೇಖಗಳಿವೆ.

ಘಟಿಕಾ ಸ್ಥಾನ

ಘಟಿಕಾ ಸ್ಥಾನವು ಒಂದು ಉನ್ನತ ಶಿಕ್ಷಣ ಕೇಂದ್ರವಾಗಿತ್ತು. ಕರ್ನಾಟಕದಲ್ಲಿ ಪ್ರಥಮಭಾರಿಗೆ ಘಟಿಕಾಸ್ಥಾನದ ಉಲ್ಲೇಖ ಬರುವ ಶಾಸನವೆಂದರೆ ಕದಂಬ ಕಾಕುಸ್ಥವರ್ಮನ ತಾಳಗುಂದ ಶಾಸನ. ಇದರಲ್ಲಿ ಮಯೂರವರ್ಮನು ತನ್ನ ಆರಂಭದ ಶಿಕ್ಷಣವನ್ನು ಮುಗಿಸಿಕೊಂಡು ಉನ್ನತ ಶಿಕ್ಷಣಕ್ಕಾಗಿ ಕಾಂಚಿಯ ಘಟಿಕಾಸ್ಥಾನವನ್ನು ಪ್ರವೇಶಿಸಿದನೆಂದು ಹೇಳಿದೆ. ಚಾಲುಕ್ಯ ಎರಡನೆಯ ವಿಕ್ರಮಾದಿತ್ಯನು ಕಾಂಚಿಯ ಕೈಲಾಸನಾಥ ದೇವಾಲಯದ ಕಲ್ಲು ಕಂಬದ ಮೇಲೆ ಕೆತ್ತಿಸಿರುವ ಶಾಸನವೊಂದು “ಘಟಿಕೆಯಾ ಮಹಾಜನಮನ್ಕೊನ್ದಾರ ಲೋಕಕ್ಕೆ ಸನ್ದಾರಪ್ಪಾರ” ಎಂದು ಹೇಳಿದೆ. ಇಲ್ಲಿ ವಿಕ್ರಮಾದಿತ್ಯನು ಕಾಂಚಿಯನ್ನು ಗೆದ್ದುಕೊಂಡು ಅಲ್ಲಿ ಸೂರೆ ಮಾಡಿದ್ದ ಸಂಪತ್ತನ್ನು ಅಲ್ಲಿಯ ಮಹಾಜನರಿಗೆ ಮರಳಿ ಕೊಟ್ಟನೆಂದು ತಿಳಿಯುತ್ತದೆ. ಇದರಿಂದ ಮೂರು ಅಂಶಗಳು ಸ್ಪಷ್ಟವಾಗುತ್ತವೆ. ೧. ಕದಂಬರ ಕಾಲದಲ್ಲಿ ಉನ್ನತ ಶಿಕ್ಷಣ ಕೇಂದ್ರವಾಗಿದ್ದ ಕಾಂಚಿಯು ಚಾಲುಕ್ಯರ ಕಾಲದಲ್ಲಿಯೂ ಮುಂದುವರೆದು ಕೊಂಡು ಬಂದಿತು. ೨. ಅದರ ಆಡಳಿತವನ್ನು ನೋಡಿಕೊಳ್ಳಲು ಮಹಾಜನರಿರುತ್ತಿದ್ದರು. ೩. ರಾಜರು ದೇವಾಲಯಗಳ ಸಂಪತ್ತನ್ನು ಲೂಟಿ ಮಾಡಿದಾಗ ಅದನ್ನು ದೋಚಿಕೊಂಡು ಬರದೇ ಅಲ್ಲಿಯ ಬ್ರಾಹ್ಮಣರಿಗೆ, ದೇವಾಲಯಗಳಿಗೆ ಮರಳಿಸುತ್ತಿದ್ದರು.[33]

ಎರಡನೆಯ ಪುಲಕೇಶಿಯ ತಮ್ಮೆಯನೂರು ತಾಮ್ರಶಾಸನದಲ್ಲಿ ಇಂದುಪುರ ಘಟಿಕೆಯ ಉಲ್ಲೇಖವಿದೆ. ಅಲ್ಲಿಯ ಆತ್ರೇಯ ಗೋತ್ರದ ಆಪಸ್ತಂಭ ಸೂತ್ರದ ಮಾವುಗಣ ಸ್ವಾಮಿಗೆ ಚಾಲುಕ್ಯ ವಿಷಯದಲ್ಲಿ ಪನ್ನಾಸ ಭೂಮಿಯನ್ನು ದಾನ ಮಾಡಿದನು.[34] ಲಕ್ಷ್ಮೇಶ್ವರದ ಶಾಸನವು ದಾನ ಭೂಮಿಯ ಸೀಮೆಗಳನ್ನು ಹೇಳುವಾಗ ದಕ್ಷಿಣತಃ ಘಟಿಕಾಕ್ಷೇತ್ರಂ ಎಂದು ಉಲ್ಲೇಖಿಸಿದ್ದುದನ್ನು ಗಮನಿಸಿದರೆ ಆ ಕಾಲದಲ್ಲಿ ಲಕ್ಷ್ಮೇಶ್ವರದಲ್ಲಿ ಘಟಿಕಾಸ್ಥಾನವಿದ್ದಿರ ಬಹುದು.[35]

ದೇವಾಲಯಗಳು ಮತ್ತು ಮಠಗಳು

ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳು ಶೈವಯತಿಗಳ ವಾಸಸ್ಥಾನ ಆಗಿರುವುದರ ಜೊತೆಯಲ್ಲಿ ಅವು ವಿದ್ಯಾಕೇಂದ್ರಗಳಾಗಿದ್ದವು. ಒಂದನೆಯ ಪುಲಕೇಶಿಯ ಅಮ್ಮಿನಭಾವಿಯ ಶಾಸನವು ಅಲ್ಲಿರುವ ಕಲಿದೇವ ದೇವಾಲಯದಲ್ಲಿ ಅಧ್ಯಯನ ನಡೆಯುತ್ತಿದ್ದುದರ ಬಗ್ಗೆ ಹೇಳಿದೆ.[36] ಎರಡನೆಯ ಪುಲಕೇಶಿಯ ಸಹೋದರನಾದ ಜಯಸಿಂಹವರ್ಮನ ಮಗ ನಾಗವರ್ಧನನ ನಿರ್ಪಾನ ತಾಮ್ರಶಾಸನವು ಬಾಲಮ್ಮ ಠಕ್ಕುರನ ವಿಜ್ಞಾಪನೆಯ ಮೇರೆಗೆ ಕಪಾಲೇಶ್ವರನ ಗುಗ್ಗಳ ಪೂಜಾದಿಗಳನ್ನು ನಡೆಸುವುದಕ್ಕೆ ಮತ್ತು ಅಲ್ಲಿಯ ಮಹಾಯತಿಗಳ ಉಪಯೋಗಕ್ಕೆ ಗೋಪರಾಷ್ಟ್ರದಲ್ಲಿದ್ದ ಬಲೇ ಗ್ರಾಮವನ್ನು ದಾನ ನೀಡಿದ್ದನ್ನು ತಿಳಿಸುತ್ತದೆ. ಈ ಕಪಾಲೇಶ್ವರ ದೇವಾಲಯದಲ್ಲೂ ವಿದ್ಯಾಭ್ಯಾಸ ನಡೆಯುತ್ತಿತ್ತು. ಇಂತಹ ಹಲವಾರು ಉದಾಹರಣೆಗಳು ಶಾಸನದಲ್ಲಿವೆ.[37]

ಪಟ್ಟದಕಲ್ಲಿನ ಸಂಗಮೇಶ್ವರ ದೇವಾಲಯದಲ್ಲಿರುವ ಶಾಸನವೊಂದು ಅಲ್ಲಿರುವ ಭೀಮೇಶ್ವರ ಮಠದಲ್ಲಿರುವ ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರ ಕ್ಷೌರವನ್ನು ಮಾಡುತ್ತಿದ್ದ ನಾವಿದನ ಉಲ್ಲೇಖವನ್ನು ಮಾಡುತ್ತದೆ. ಅಲ್ಲದೇ ಅದಕ್ಕಾಗಿ ದತ್ತಿ ಬಿಟ್ಟಿರುವುದನ್ನು ಹೇಳಿದೆ.[38] ಇದರಿಂದ ಮಠಗಳಲ್ಲಿಯೂ ವ್ಯಾಸಂಗ ನಡೆಯುತ್ತಿದ್ದುದು ಗೊತ್ತಾಗುತ್ತದೆ.

ಹೀಗೆ ಗುರುಕುಲ, ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ಥಾನ ಮತ್ತು ದೇವಾಲಯ ಹಾಗೂ ಮಠಗಳಲ್ಲಿ ಶಿಕ್ಷಣವು ನಡೆಯುತ್ತಿತ್ತೆಂದು ಸ್ಪಷ್ಟವಾಗುತ್ತದೆ.

ಬೋಧನ ವಿಷಯಗಳು: ಮೊದಲನೆಯ ಕೀರ್ತಿವರ್ಮನ ಗೊಡಚಿಯ ತಾಮ್ರಶಾಸನವು ವ್ಯಾಘ್ರಸ್ವಾಮಿಯನ್ನು ಕುರಿತು ಹೇಳುವಾಗ ಅವನು ನೀತಿ ಶಾಸ್ತ್ರವಿಶಾರದ, ಸಕಲವ್ಯಾಕರಣ, ನ್ಯಾಯ, ಕಾಯ, ನಾಟಕೇತಿಹಾಸ, ಗಾಂಧರ್ವ ಪುರಾಣೇಶ್ವ ಅಸಾಧಾರಣ ವ್ಯಾಖ್ಯಾನ ಸಂಪದ ಆದ್ಯಕಾಲ, ಬ್ರಹ್ಮಸ್ಪತಿ, ರಾಜ್ಯಸರ್ವಸ್ವ ಧುರಂದರ ಎಂದು ಹೇಳಿರುವುದನ್ನು ಗಮನಿಸಿದರೆ ಅಂದು ಈ ಎಲ್ಲ ವಿಷಯಗಳನ್ನು ಕಲಿಸುತ್ತಿದ್ದರೆಂದು ತಿಳಿದುಬರುತ್ತದೆ.[39]

ವೃತ್ತಿಶಿಕ್ಷಣ: ವೃತ್ತಿಗಳು ವಂಶಪರಂಪರೆಯಾಗಿ ಮುಂದುವರೆಯುತ್ತಿದ್ದವು. ತಂದೆಯಿಂದ ಮಗನಿಗೆ ಮುಂದುವರೆದುದಕ್ಕೆ ಶಾಸನಗಳಲ್ಲಿ ಆಧಾರಗಳುಂಟು. ದೇವಾಲಯಗಳ ನಿರ್ಮಾಣ ಕಾರ್ಯದಲ್ಲಿ ತಂದೆ ಮಗ ಭಾಗವಹಿಸುತ್ತಿದ್ದುದನ್ನು ಶಾಸನಗಳು ಹೇಳಿವೆ. ಆದರೂ ಪ್ರಸಿದ್ಧ ಆಚಾರ್ಯರನ್ನು ಹುಡುಕಿಕೊಂಡು ಹೋಗಿ ಶಿಲ್ಪವಿದ್ಯೆಯನ್ನು ಕಲಿತಿರುವುದುಂಟು. ಪಟ್ಟದಕಲ್ಲಿನ ಶಾಸನವೊಂದರಲ್ಲಿ ಸರ್ವಸಿದ್ದಿ ಆಚಾರ್ಯನು ಒಬ್ಬ ಪ್ರಸಿದ್ಧ ಶಿಲ್ಪಿ. ಈತನ ಶಿಷ್ಯ ರೇವಡಿ ಓವಜ್ಜನೆಂದು ಹೇಳಿರುವುದನ್ನು ಗಮನಿಸಬಹುದು.[40]

ಗುರುಗಳು: ಪ್ರಾಚೀನ ಕಾಲದಲ್ಲಿ ಗುರುವೇ ಬ್ರಹ್ಮ. ಗುರುವೇ ವಿಷ್ಣು, ಗುರುವೇ ದೇವರಾದ ಮಹೇಶ್ವರ, ಗುರುವೇ ಸಾಕ್ಷಾತ್ ಪರಬ್ರಹ್ಮ ಸ್ವರೂಪವೆಂದು ಹೇಳಿ ಅಂತಹ ಗುರುವಿಗೆ ನಮಸ್ಕಾರ ಎಂದು ಹೇಳಲಾಗಿದೆ. ಚಾಲುಕ್ಯರ ಶಾಸನಗಳಲ್ಲಿ ಗುರು ದೀಕ್ಷಾಗುರು, ಶಿಕ್ಷಾಗುರು, ಆಚಾರ್ಯ ಓಜ, ಪಂಡಿತ, ಭದ್ರ ಮತ್ತು ಉಪಾಧ್ಯಾಯ ಎಂಬ ಪದಗಳನ್ನು ಉಪಯೋಗಿಸಲಾಗಿದೆ. ‘ವಿದ್ಯೆ’ ಮುಗಿದ ತಕ್ಷಣವೇ ಗುರುದಕ್ಷಿಣೆಯನ್ನು ಸಹ ನೀಡುತ್ತಿದ್ದು ದುಂಟು. ಒಂದನೆಯ ವಿಕ್ರಮಾದಿತ್ಯನು ತನ್ನ ಆಳ್ವಿಕೆಯ ಆರನೆಯ ವರ್ಷದಲ್ಲಿ ಎಳಸುತ್ತಿ ಗ್ರಾಮವನ್ನು ತನ್ನ ಗುರುಗಳಾದ ಮೇಘಾಚಾರ್ಯರಿಗೆ ಗುರುದಕ್ಷಿಣೆಯಾಗಿ ಕೊಟ್ಟಿರುವುದು ಅವನ ತಲಮಂಚಿ ಶಾಸನದಿಂದ  ತಿಳಿದು ಬರುತ್ತಿದೆ.[41]

ಗುರುಶಿಷ್ಯರ ಸಂಬಂಧ: ಚಾಲುಕ್ಯರ ಶಾಸನಗಳಲ್ಲಿ ಅಂತೇವಾಸಿ ಮತ್ತು ಛಾತ್ರ ಎಂಬ ಎರಡು ಪದಗಳ ಉಪಯೋಗವಿದೆ. ವಿದ್ಯಾರ್ಥಿ ಮತ್ತು ಉಪಾಧ್ಯಾಯರೀರ್ವರು ಒಂದೇ ಚಾವಣಿಯ ಕೆಳಗೆ ವಾಸವಾಗುತ್ತಿದ್ದರೆಂದು ತಿಳಿಯಬಹುದಾಗಿದೆ. ಇದರಿಂದ ಗುರುಶಿಷ್ಯ ರೀರ್ವರು ಹತ್ತಿರವಿದ್ದು ತಂದೆ‑ಮಕ್ಕಳ ಸಂಬಂಧದಂತೆ ಸಹಜವಾಗಿಯೇ ಏರ್ಪಟ್ಟಿತೆಂದು ಊಹಿಸಲವಕಾಶವಿದೆ.

ಮಹಿಳಾ ಶಿಕ್ಷಣ: “ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬ ಮಾತಿನಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು. ಆದರೆ ಯಾವುದೇ ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ಥಾನಗಳಲ್ಲಿ ಮಹಿಳೆಯರು ಅಧ್ಯಯನ ಮಾಡಿರುವುದನ್ನು ಶಾಸನಗಳು ಉಲ್ಲೇಖಿಸುವುದಿಲ್ಲ. ಮಹಿಳೆಯರು ಲಲಿತ ಕಲೆಗಳಾದ ನರ್ತನ ಸಂಗೀತ, ಮುಂತಾದವುಗಳನ್ನು ಮನೆಯಲ್ಲಿಯೇ ಕಲಿಯುತ್ತಿದ್ದರು. ಚಾಲುಕ್ಯ ಎರಡನೆಯ ಪುಲಕೇಶಿಯ ಮಗ ಚಂದ್ರಾದಿತ್ಯನ ಮಡದಿ ವಿಜಯಭಟ್ಟಾರಿಕೆಯು ವಿದ್ವಾಂಸೆಯಾಗಿದ್ದು ಅವಳು ‘ಕೌಮುದೀ ಮಹೋತ್ಸವ’ ಎಂಬ ಸಂಸ್ಕೃತ ನಾಟಕವನ್ನು ರಚಿಸಿದಳು. ಇದು ಐದು ಅಂಕದ ಚಿಕ್ಕದಾದ ನಾಟಕ. ರಾಜಕೀಯ ಹಿನ್ನೆಲೆಯ ಕಥಾ ವಸ್ತುವನ್ನು ಹೊಂದಿರುವಂತಹ ದಾಗಿದೆ.[42] ಚಾಲುಕ್ಯರ ಕಾಲದಲ್ಲಿ ಹಲವಾರು ಮಹಿಳೆಯರು ಸಂಗೀತ ನೃತ್ಯ ಕಲೆಗಳಲ್ಲಿ ಪರಿಣತರಾಗಿರುವುದರೊಂದಿಗೆ ಸಾಹಿತ್ಯದಲ್ಲಿಯೂ ಶ್ರೇಷ್ಠರಾದವರಾಗಿದ್ದರು.

ಹೀಗೆ ಚಾಲುಕ್ಯರ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಇದ್ದುದು ಶಾಸನಗಳಿಂದ ತಿಳಿದುಬರುತ್ತದೆ.


[1]     ವೀರಪ್ಪ ಎನ್.ಎಸ್.;ಭಾರತೀಯ ಶಿಕ್ಷಣದ ಇತಿಹಾಸ, ಪುಟ ೪೦

[2]     ತಾಳ್ತಜೆ ವಸಂತ ಕುಮಾರ:ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಪುಟ ೫೯

[3]     ಅದೇ.

[4]     ರಾಜಶೇಖರ ಎಸ್.;ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಪುಟ ೩೭-೩೮

[5]     ಈರಣ್ಣ ಕೆ.ಪಿ.;ಕರ್ನಾಟಕದ ಪ್ರಾಚೀನ ಜೈನ ಶಿಕ್ಷಣ ಕೇಂದ್ರಗಳು, ತೀರ್ಥವಂದನೆ (ಸಂ)ಎಸ್.ಪಿ. ಪಾಟೀಲ., ಪುಟ ೭೫

[6]     ಅದೇ.

[7]     The Journal of Karnataka University (S.S.Vol-V p-೧೭೫)

[8]     I A VIII p.೨೩೭-೨೪೫

[9]     ಅದೇ, ಪುಟ ೧೦೬

[10]    SII XX, ೪, ಕ್ರಿ.ಶ. ೬೮೩

[11]    ಅದೇ. ನಂ. ೬, ಕ್ರಿ.ಶ. ೭೩೦

[12]    Desai P.B., Jainism in South India p. ೩೯೮.

[13]    SII XX No. ೫

[14]    SII XX p.೫೩

[15]    SII XX No.‑೫

[16]    ಅದೇ, ಪುಟ ೮

[17]    ಪತ್ತಾರ ಶೀಲಾಕಾಂತ;ಬಾದಾಮಿ:ಸಾಂಸ್ಕೃತಿಕ ಅಧ್ಯಯನ ಪು ೬೮

[18]    ಅದೇ.

[19]    ಅದೇ.

[20]    SII XX No.೬.

[21]    ದೇಸಾಯಿ ಎಚ್.ಆ., ಕಲ್ಯಾಣ ಚಾಲುಕ್ಯ ಕಾಲದ ಶಿಕ್ಷಣ ವ್ಯವಸ್ಥೆ, ಪುಟ ೬೯

[22]    I.A.XXX p. ೨೦೯

[23]    A.P.G.S. No-೬ p-೧೧-೩೯.

[24]    ಆಂಧ್ರಪ್ರದೇಶದಲ್ಲಿ ಕನ್ನಡ ಶಾಸನಗಳು ಸಂಪುಟ-೧ ನಂ. ೧೫೪ (ಹಂಪಿ ಕನ್ನಡ ವಿಶ್ವವಿದ್ಯಾಲಯ)

[25]    I.A. XIX p. ೩೦೩-೩೧೧.

[26]    ಅದೇ, ಪುಟ ೨೯೩‑೨೯೫

[27]    ಈರಣ್ಣ ಕೆ.ಪಿ., ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಪರಂಪರೆ, ಪುಟ ೯೯

[28]    SII IX (i) No. ೪೮

[29]    KI vol-I No.೨

[30]    ಅದೇ ನಂ.೪

[31]    ಅದೇ.

[32]    ಅಣ್ಣಿಗೇರಿ, ಎ.ಎಂ. ಐಹೊಳೆ ಸಂಸ್ಕೃತಿ ಮತ್ತು ಕಲೆ, ಪುಟ ೧೪೬‑೪೭

[33]    ಈರಣ್ಣ ಕೆ.ಪಿ., ಪೂರ್ವೋಕ್ತ ಪುಟ. ೯೭

[34]    ಅದೇ.

[35]    ಅದೇ.

[36]    I.A.XXX p. ೨೦೯

[37]    I.A.IX P. ೧೨೩

[38]    SII CV p.೩೩೪

[39]    ಪ್ರಬುದ್ಧ ಕರ್ನಾಟಕ ಸಂಪುಟ ‑೨೩ ಸಂಚಿಕೆ‑೧, ಪುಟ ೨೫

[40]    ಅಣ್ಣಿಗೇರಿ ಎ.ಎಂ., ಪಟ್ಟದಕಲ್ಲು ಗುಡಿಗಳು, ಪುಟ ೨೯

[41]    ಈರಣ್ಣ ಕೆ.ಪಿ., ಅದೇ, ಪುಟ ೧೦೩

[42]    ಅದೇ, ಪುಟ ೮೪‑೮೫.