ಮಾನವ ಜೀವನ ಮುಖ್ಯವಾಗಿ ಕೃಷಿ ಉತ್ಪನ್ನಗಳನ್ನು ಅವಲಂಬಿಸಿದೆ. ಆದ್ದರಿಂದ ಭೂಮಿಯು ಪ್ರಧಾನ ಆರ್ಥಿಕ ಮೌಲ್ಯವಾಯಿತು. ಭೂದಾನಗಳ ಸಂಖ್ಯೆಯೇ ಹೆಚ್ಚಾಗಿದ್ದುದು ಇದನ್ನು ಸಮರ್ಥಿಸುತ್ತದೆ. ಚಲುಕ್ಯರ ಕಾಲದಲ್ಲಿ ವ್ಯವಸ್ಥಿತವಾಗಿ ಊರ್ಜಿತಗೊಂಡಿದ್ದರೂ ಇವರ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು (ಅಲ್ಲೊಂದು ಇಲ್ಲೊಂದು ಬಿಟ್ಟರೆ) ಬೆಳಕಿಗೆ ಬಂದಿಲ್ಲ. ಚಲುಕ್ಯ ಅರಸ ಅರಸಿಯರು ಮತ್ತು ಯುವರಾಜರು, ಬ್ರಾಹ್ಮಣರಿಗೆ, ಆಚಾರ್ಯರಿಗೆ, ಯೋಧರಿಗೆ ಭೂದಾನ ಮಾಡಿದುದನ್ನು ಶಾಸನಗಳು ತಿಳಿಸುತ್ತವೆ. ಹೆಚ್ಚೆಚ್ಚು ಭೂಮಿಯನ್ನು ಸಾಗುವಳಿಗೆ ಒಳಪಡಿಸುವುದೇ ಚಲುಕ್ಯರ ಆರ್ಥಿಕ ಧೋರಣೆಯಾಗಿತ್ತು. ಭೂದಾನಗಳು ನಾಡಿನ ಆರ್ಥಿಕ ಅಭಿವೃದ್ದಿಗೆ ದಾರಿ ಮಾಡಿಕೊಟ್ಟವು. ಇದೇ ಹಿನ್ನೆಲೆಯಲ್ಲಿ ಸ್ಮೃತಿಕಾರರು ಭೂಧಾನವು ಪುಣ್ಯ ತರುವಂತಹುದೆಂದು ಹೇಳಿರಬೇಕು.

ಚಲುಕ್ಯರ ಕಾಲದಲ್ಲಿ ಭೂಮಿಯ ಒಡೆಯ ರಾಜನೋ ಅಥವಾ ಅದಕ್ಕೆ ಸಂಬಂಧಿಸಿದ ವ್ಯಕ್ತಿಯೋ ಎಂಬುದು ಸ್ಪಷ್ಟವಿಲ್ಲ. ರಾಜ್ಯ ರಾಜನದು. ಅದರೊಳಗಿನ ಎಲ್ಲ ಭೂಮಿಯೂ ರಾಜನ ಒಡೆತನಕ್ಕೆ ಸೇರಿದ್ದೆಂದು ಕೆಲವರ ಅಭಿಪ್ರಾಯ ಏಕೆಂದರೆ ಇಡಿ ಹಳ್ಳಿಯನ್ನೇ ರಾಜನು ದಾನ ಮಾಡಿರುವುದನ್ನು ಶಾಸನಗಳಲ್ಲಿ ಕಾಣುತ್ತೇವೆ. ಮಂಗಲೇಶನ ನೇರೂರು ತಾಮ್ರಶಾಸನ,

[1] ಇಮ್ಮಡಿ ಪೊಲೆಕೇಶಿಯ ಲೋಹನೇರ,[2] ಹೈದರಾಬಾದ,[3] ಚಿಪ್ಲಂ[4] ಶಾಸನಗಳು; ಯುವರಾಜ ವಿಷ್ಣುವರ್ಧನನ ಸಾತಾರಾ ಶಾಸನ[5] ಮೊದಲನೆಯ ವಿಕ್ರಮಾದಿತ್ಯನ ತೆಲಮಂಚಿ[6], ಆಮುದಲಪಾಡು[7] ಶಾಸನಗಳು; ವಿನಯಾದಿತ್ಯನ ಸೊರಬ[8]. ಹರಿಹರ[9] ಶಾಸನಗಳು; ವಿಜಯಾದಿತ್ಯನ ಕಾರುವ,[10] ನೇರೂರು,[11] ಚೊಳಚಗುಡ್ಡ,[12] ಶಾಸನಗಳು ಇಮ್ಮಡಿ ಕೀರ್ತಿವರ್ಮನ ವಕ್ಕಲೇರಿ,[13] ಕೆಂದೂರು[14] ಶಾಸನಗಳು ಹಳ್ಳಿಯನ್ನು ದಾನವಾಗಿ ಕೆಡಮಾಡಿದುದನ್ನು ತಿಳಿಸುತ್ತವೆ. ವಿಜಯನಗರ ಅರಸು ಹರಿಹರನ ಕಾಲದಲ್ಲಿ ಚಾಮೆಯನಾಯಕನು[15] ಬಾದಾಮಿಯನ್ನೇ ದಾನ ರೂಪವಾಗಿ ಮಹಾಜನರಿಗೆ ಕೊಟ್ಟುಬಿಟ್ಟನು! ಆಗ ಬಾದಾಮಿ ಗ್ರಾಮ ರೂಪಕ್ಕೆ ಇಳಿದಿತ್ತು!

ಆದರೆ ಕೆಲವು ಸಲ ರಾಜನು ಮಹಾಜನರ ಅನುಮತಿ ಪಡೆದು ಭೂದಾನ ಮಾಡಿದುದು ತಿಳಿದು ಬರುತ್ತದೆ. ವಿಜಯಾದಿತ್ಯನ ಚಿಪ್ಪಗಿರಿ (ಭೋಗೇಶ್ವರ ಗುಡಿ) ಶಾಸನದಲ್ಲಿ[16] ಬಂತರಸನು ಮಹಾಜನರ ಸಮ್ಮತಿ ಪಡೆದು ಭಟಾರರಿಗೆ ಭೂದಾನ ಮಾಡಿದುದು ವ್ಯಕ್ತವಾಗಿದೆ. ಬಂತರಸನು ರಾಜನ ಅನುಮತಿಯನ್ನು ಕೇಳದೆ ಮಹಾಜನರ ಅನುತಿಯನ್ನು ಕೇಳಿರುವ ಸಂಗತಿಯಿಂದ ಭೂಮಿಯು ಮಹಾಜನರ ಒಡೆತನಕ್ಕೆ ಸೇರಿದುದೆಂಬುದು ಸ್ಪಷ್ಟವಾಗುತ್ತದೆ. ಸ್ಮೃತಿಕಾರರೂ ಕೂಡ ರಾಜನು ಭೂಮಿಗೆ ಒಡೆಯನಲ್ಲವೆಂದೂ ಆತ ಕೇವಲ ಭೂಪಾಲಕನೆಂದೂ ಹೇಳುತ್ತಾರೆ. ಆದಾಗ್ಯೂ ರಾಜರು ತಾವೇ ಒಡೆಯರೆನ್ನುವ ರೀತಿಯಲ್ಲಿ ಭೂದಾನ ಮಾಡಿದುದು ವ್ಯಕ್ತಗೊಂಡಿದೆ. ಹೀಗಾದಾಗ ಭೂಮಿಯ ಒಡೆಯನು ಪ್ರತಿಭಟನೆಯ ಧ್ವನಿಯನ್ನು ಎತ್ತಿದ್ದು ಇತಿಹಾಸದಲ್ಲಿ ಕಂಡುಬರುವುದಿಲ್ಲ.

ಚಲುಕ್ಯರ ಬಹುಪಾಲು ಶಾಸನಗಳು ‘ಬ್ರಹ್ಮದೇಯ’ ದಾನಗಳನ್ನು ಕುರಿತು ಇವೆ. ಬ್ರಾಹ್ಮಣರಿಗೆ ಕೊಡಲಾದ ದತ್ತಿಗಳನ್ನು ಬ್ರಹ್ಮದೇಯಗಳೆನ್ನುತ್ತಾರೆ. ಹೀಗೆ ಕೊಡಲಾದ ಭೂದಾನಗಳು ಗ್ರಾಮದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಬೆಳವಣಿಗೆಗೆ ಮುಖ್ಯ ಸಾಧನಗಳಾಗಿದ್ದವು. ದಾನವಾಗಿ ಪಡೆದ ಭೂಮಿಗೆ ತೆರಿಗೆ ವಿನಾಯಿತಿ ಇರುವುದು ರೂಢಿಯಾಗಿತ್ತು. ಇಮ್ಮಡಿ ಪೊಲೆಕೇಶಿಯ ಹೈದರಾಬಾದ್[17]ಪೆದ್ದವಡಗೂರು[18] ಶಾಸನಗಳನ್ನು ಇಲ್ಲಿ ಉದಾಹರಿಸಬಹುದು.

ಭೂವಿಧಗಳು

ಚಲುಕ್ಯರ ಶಾಸನಗಳಲ್ಲಿ ನಾಲ್ಕು ಬಗೆಯ ಭೂವಿಧಗಳನ್ನು ಕಾಣುತ್ತೇವೆ. ಅವು ೧. ಗೞ್ದೆ(ಹಸಿ ನೆಲ), ೨. ಬೆದ್ದಲೆ(ಒಣ ನೆಲ), ೩. ತೋಟದ ನೆಲ, ೪. ಬರಡು ನೆಲ, ವಿಜಯಾದಿತ್ಯನ ಬೆಟಪಳ್ಳಿ ಶಾಸನ[19]ದಲ್ಲಿ ಈ ವಿಧಗಳನ್ನು ಕಾಣಬಹುದು. ಅಲ್ಲಿ ಕೊಡಲಾದ ಭೂದಾನವು ೨೫ ಮತ್ತರ ಕಪ್ಪು ಮಣ್ಣು. ೫೦ ಮತ್ತರ ಕೆಂಪು ಮಣ್ಣು. ೩೬ ಮಡಿ ಕಾಡನ್ನು, ಒಂದು ಮತ್ತರ (ಹಸಿ ನೆಲ) ಮತ್ತು ೨ ಮತ್ತರ ತೋಟವನ್ನು ಒಳಗೊಂಡಿದೆ. ಮಣ್ಣಿನ ಗುಣ ನೀರಾವರಿ ಸೌಲಭ್ಯ ಹಾಗೂ ಬೆಳೆಯ ಆಧಾರದ ಮೇಲೆ ಭೂ ಪ್ರಕಾರಗಳನ್ನು ವಿಂಗಡಿಸಿದುದು. ಇದರಿಂದ ಗೊತ್ತಾಗುತ್ತದೆ. ೨೬ ಮಡಿ ಕಾಡನ್ನು ನೀಡಿದುದು ಕೃಷಿ ವಿಸ್ತರಣಾ ನೀತಿಯನ್ನು ಸೂಚಿಸುತ್ತದೆ.[20] ಗದ್ದೆಯನ್ನು ಮಾತ್ರ ಕೇವಲ ಒಂದು ಮತ್ತರ ನೀಡಿದುದು ಅದು ಹೆಚ್ಚು ಮೌಲಿಕವಾಗಿತ್ತೆಂಬುದನ್ನು ಸೂಚಿಸುತ್ತದೆ. ಹಸಿ ನೆಲದ ಪ್ರಯೋಜನವನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು. ಇಮ್ಮಡಿ ಕೀರ್ತಿವರ್ಮನ ಆಡೂರ ಶಾಸನದಲ್ಲಿ[21] ಗದ್ದೆಯ ಪ್ರಸ್ತಾಪವಿದೆ. ಮೊದಲನೆಯ ವಿಕ್ರಮಾದಿತ್ಯನ ಶಾಸನ[22]ವೊಂದರಲ್ಲಿ ವ್ರೀಹಿ ಕ್ಷೇತ್ರದ ದಾನವನ್ನು ಉಲ್ಲೇಖಿಸಲಾಗಿದೆ. ವ್ರೀಹಿ ಎಂದರೆ ನೆಲ್ಲು. ವ್ರೀಹಿ ಕ್ಷೇತ್ರವು ಹಸಿ ನೆಲವೇ ಆಗಿರುತ್ತದೆ. ಪೆದ್ದವಡಗೂರು ಶಾಸನದಲ್ಲಿ[23] ೧೨ ಮತ್ತರ ಹಸಿ ನೆಲವನ್ನು ಶಾಸನ ಬರೆದ ಮಹೇಂದ್ರ ಪಲ್ಲವಾಚಾರಿಗೆ ದಾನ ನೀಡಿದುದು ದಾಖಲಾಗಿದೆ. ಮೊದಲನೆಯ ಪೊಲೆಕೇಶಿಯ ಅಳ್ತಂ ಶಾಸನದಲ್ಲಿಯೂ[24] ಬತ್ತದ ಗದ್ದೆಯ ಪ್ರಸ್ತಾಪವಿದೆ.

ಬೆೞ್ದೆಲೆ ಅಥವಾ ಬೆದ್ದಲೆಯೆಂದು ಶಾಸನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದು ಒಣಭೂಮಿಯಾಗಿದೆ. ಅಂದರೆ ಕೇವಲ ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ಹೊಲ. ಮೊದಲನೆಯ ವಿಕ್ರಮಾದಿತ್ಯನ ಶಾಸನವೊಂದು ಆತನು ರತ್ನಾಗಿರಿಯಲ್ಲಿ ೧೨೦ ನಿವರ್ತನ ಬೆದ್ದೆಲೆ ಭೂಮಿಯನ್ನು ದಾನ ಮಾಡಿದುದನ್ನು ಉಲ್ಲೇಖಿಸಿದೆ. ಶಾಸನಗಳಲ್ಲಿ ಕಾಣಿಸಿಕೊಳ್ಳುವ ಕರಿ ನೆಲವನ್ನು ಒಣಭೂಮಿ ಎಂದು ಗುರುತಿಸಬಹುದು. ಬೆಟಪಳ್ಳಿ ಶಾಸನದಲ್ಲಿ[25] ೫೦ ಮತ್ತರ ಕರಿ ನೆಲವನ್ನು ದಾನವಾಗಿ ನೀಡಿದುದನ್ನು ಹಿಂದೆಯೇ ನೋಡಿದ್ದೇವೆ. ಹತ್ತಿ, ಜೋಳ ಬೆಳೆಯಲು ತಕ್ಕ ಭೂಮಿ ಇದು. ಈ ಬೆಳೆಗಳಿಗೆ ಮಳೆಯ ನೀರು ಸಾಕು. ಹತ್ತಿ ಇಲ್ಲಿಯ ಮುಖ್ಯ ಬೆಳೆಗಳಲ್ಲಿ ಒಂದಾಗಿರಬೇಕು. ಶಿಲ್ಪಗಳಲ್ಲಿ ಕಾಣುವ ಉಡುಪುಗಳು ಇದನ್ನು ಸಮರ್ಥಿಸುತ್ತವೆ.

ಶಾಸನಗಳು ಹೂವಿನ ತೋಟವನ್ನು ‘ಹೂವಿನ ಗದ್ದೆ’ ಎಂದೂ ಮಾವಿನ ತೋಟವನ್ನು ‘ಮಾವಿನ ಗದ್ದೆ’ ಎಂದೂ ಕರೆದಿವೆ. ಸಂಜಾನ ಶಾಸನವು[26] ೧೦ ನಿವರ್ತನ ಮಾವಿನ ಗದ್ದೆಯನ್ನು ಬ್ರಾಹ್ಮಣನಿಗೆ ದಾನ ಮಾಡಿದುದನ್ನು ತಿಳಿಸುತ್ತದೆ. ವಿಜಯಾದಿತ್ಯನ ಕಾರುವ ಶಾಸನದಲ್ಲಿ[27] ಆಮ್ರಪಟ್ಟಿಕೆ ದಾನದ ಉಲ್ಲೇಖವಿದೆ. ಆಮ್ರಪಟ್ಟಿಕೆ ಎಂದರೆ ಮಾವಿನ ತೋಟ ಎಂದು ಗ್ರಹಿಸಬಹುದು. ಹಿರೇಮಾಗಡಿ[28] ಹಾಗೂ ಚಿಪ್ಪಗಿರಿ[29] ಶಾಸನಗಳಲ್ಲಿ ಹೂದೋಟಗಳನ್ನು ಕಾಣುತ್ತೇವೆ. ಹೀಗೆ ಬಹು ಸಂಖ್ಯೆಯಲ್ಲಿ ತೋಟಗಳು ಶಾಸನಗಳಲ್ಲಿ ಉಕ್ತವಾಗಿರುವುದರಿಂದ ಚಲುಕ್ಯರ ಕಾಲದಲ್ಲಿಯ ಫಲ, ಪುಷ್ಪಗಳ ಸಮೃದ್ದಿಯನ್ನು ಗುರುತಿಸಬಹುದು. ಶಿಲ್ಪಗಳಲ್ಲಿಯ ಗಿಡ-ಮರಗಳು, ಫಲ-ಪುಷ್ಪಗಳು ಈ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.

ವಿನಯಾದಿತ್ಯನ ಹರಿಹರ ಶಾಸನದಲ್ಲಿ[30] ಸಾಗುವಳಿಯ ಭೂಮಿಯ ಜೊತೆಗೆ ಸಾಗುವಳಿ ಮಾಡಿರದ ಭೂಮಿಯನ್ನೂ ದಾನವಾಗಿ ನೀಡಿದುದು ತಿಳಿದು ಬರುತ್ತದೆ. ಹೀಗೆ ಮಾಡಿರದ ಹೆಚ್ಚಿನ ಭೂಮಿಯನ್ನು ಕೊಟ್ಟಿರುವುದಾದರೂ ಏಕೆ? ಅದೂ ಕೂಡ ಸಾಗುವಳಿಯಾಗಲಿ ಎಂಬುದು ಉದ್ದೇಶವಾಗಿರಬೇಕು. ವಿಜಯ ಭಟ್ಟಾರಿಕೆಯ ಶಾಸನದಲ್ಲಿ[31] ಖಜ್ಜನ (ಉಪ್ಪಿನ) ಭೂಮಿಯನ್ನು ದಾನ ಮಾಡಲಾಗಿದೆ. ದಾನ ಪಡೆದವನು ಅದನ್ನು ಫಲವತ್ತತೆಗೊಳಿಸಿ ಬಳಸಿರಬೇಕು. ಇಂಥ ದಾನಗಳು ವೈಯಕ್ತಿಕ ಮತ್ತು ಸಾಮಾಜಿಕ ಆರ್ಥಿಕಾಭಿವೃದ್ದಿಗೆ ಎಡೆ ಮಾಡಿದವು.

ಕೃಷಿ

ಗ್ರಾಮೀಣ ಆರ್ಥಿಕ ಜೀವನದಲ್ಲಿ ಕೃಷಿಯು ಮುಖ್ಯವಾದ ಘಟಕ. ಕೃಷಿಗೆ ಭೂಮಿಯಷ್ಟೇ ನೀರೂ ಅವಶ್ಯಕವಾದ್ದರಿಂದ ರಾಜರು ಕೆರೆ ಬಾವಿಗಳನ್ನು ಕಟ್ಟಿಸಲು ಮುಂದಾದರು. ಕದಂಬ ಮಯೂರ ಶರ್ಮನ ಚಂದ್ರವಳ್ಳಿ ಶಾಸನದಲ್ಲಿ ಮತ್ತು ಕಾಕುಸ್ಥವರ್ಮನ ತಾಳಗುಂದ ಶಾಸನದಲ್ಲಿ ಕೆರೆ-ನಿರ್ಮಾಣದ ಪ್ರಸ್ತಾಪವಿದೆ. ಚಲುಕ್ಯರೂ ಕೆರೆಗಳನ್ನು ಕಟ್ಟಿಸುವಲ್ಲಿ ಹೆಚ್ಚಿನ ಆಸ್ಥೆ ತೋರಿದುದು ಶಾಸನಗಳಲ್ಲಿ ಕಂಡು ಬರುತ್ತದೆ.

ಮೊದಲನೆಯ ಪೊಲೆಕೇಶಿಯ ಆಲ್ತೆಂ ಶಾಸನದಲ್ಲಿ[32] ನಾಲ್ಕಾರು ತಟಾಕಗಳ ಉಲ್ಲೇಖವಿದೆ. ಈ ಅರಸನೇ ಬಾದಾಮಿಯ ಪ್ರಸಿದ್ಧ ಅಗಸ್ತ್ಯ ಕೆರೆಯನ್ನು ನಿರ್ಮಿಸಿರಬಹುದು.[33] ಇಮ್ಮಡಿ ಪೊಲೆಕೇಶಿಯ ಮೊಡ್ಲಿಂಬ ಶಾಸನವು[34] ಕೆರೆಯ ನಿರ್ಮಾಣಕ್ಕೆಂದು ದೇವಗಣ ಸ್ವಾಮಿಗೆ ಗ್ರಾಮ ದಾನವನ್ನು ಮಾಡಲಾಯಿತೆಂದು ಹೇಳುತ್ತದೆ. ವಿಜಯಾದಿತ್ಯನ ಚಿಪ್ಪಗಿರಿ ಶಾಸನವು[35] ಭೂಮಿಯ ಜೊತೆಗೆ ಕೆರೆ ಬಾವಿಯನ್ನು ದತ್ತಿಯಾಗಿ ದೇವಾಲಯಕ್ಕೆ ನೀಡಿದುದನ್ನು ಬಣ್ಣಿಸಿದೆ. ಅಲಂಪುರದ ಬಾಲಬ್ರಹ್ಮ ದೇವಸ್ಥಾನದ ವಿಜಯಾದಿತ್ಯನ ಪ್ರಶಸ್ತಿಯು[36] ಆತನು ಸಾಮ್ರಾಜ್ಯದ ಎಲ್ಲೆಡೆಗಳಲ್ಲೂ ಕೆರೆಗಳನ್ನು ನಿರ್ಮಿಸಿದುದನ್ನು ವರ್ಣಿಸುತ್ತದೆ. ವಿಜಯಾದಿತ್ಯನ ಶಿಗ್ಗಾಂವ ಶಾಸನದಲ್ಲಿ[37] ಗುಡಿಗೆರೆ ಗ್ರಾಮದ ಸೀಮೆಯನ್ನು ವಿವರಿಸುವಾಗ ವೆಣ್ಣೆ ತಟಾಕ. ಕುವೇರ ತಟಾಕ, ಕೋಡಿ ತಟಾಕ, ತಪಸ್ವಿ ತಟಾಕ, ಪುಲಿವಾರ ತಟಾಕ, ಮತ್ಕುಣ ತಟಾಕ, ಅರಸಿ ತಟಾಕ ಎಂಬ ಕೆರೆಗಳನ್ನು ಹೆಸರಿಸಲಾಗಿದೆ. ಇಷ್ಟು ಕೆರೆಗಳಲ್ಲಿರುವ ಆ ಭೂಪ್ರದೇಶದ ಸಮೃದ್ದಿಯನ್ನು ಕಲ್ಪಿಸಬಹುದು.

ಉತ್ಪನ್ನಗಳು

ಚಲುಕ್ಯರ ಕಾಲದ ಕೃಷಿ ಉತ್ಪನ್ನಗಳನ್ನು ತಿಳಿದುಕೊಳ್ಲಲು ಶಾಸನಗಳು ನೆರವಾಗಿವೆ. ಈ ಶಾಸನಗಳಲ್ಲಿ ಬತ್ತ.[38] ಜೋಳ[39], ರಾಗಿ[40], ಗೋದಿ[41] ಮೊದಲಾದ ಧಾನ್ಯಗಳು ಮಾವು[42], ಹಲಸು[43], ಹುಣಸೆ[44], ದಾಳಿಂಬೆ[45], ತೆಂಗು[46] ಮೊದಲಾದ ಹಣ್ಣುಗಳನ್ನು ಹೆಸರಿಸುತ್ತವೆ. ಖರ್ಜೂರವೂ[47] ಶಾಸನದಲ್ಲಿ ಕಾಣಿಸಿಕೊಂಡಿದೆ. ಇದನ್ನು ಬೆರೆದೆಂದ (ಪರ್ಶಿಯಾದಿಂದ)? ಆಮದು ಮಾಡಿಕೊಂಡಿರಬಹುದು. ಬಾದಾಮಿಯ ಪುರಾತತ್ವ ಸಂಗ್ರಹಾಲಯದಲ್ಲಿಯ ಒಂದು ವೀರಗಲ್ಲಿನಲ್ಲಿ ಜೋಳದ ಪೈರನ್ನು ಯೋಧನ ಹಿಂದೆ ಕೆತ್ತಲಾಗಿದೆ. ಬಾದಾಮಿಯ ಮಹಾವಿಷ್ಣು ಗೃಹದ ಸಾಲಭಂಜಿಕಾ ಶಿಲ್ಪಗಳಲ್ಲಿ ಮಾವು ಹಲಸು ಮೊದಲಾದ ಮರಗಳನ್ನು ಕಾಣಬಹುದು. ಚಲುಕ್ಯ ಶಿಲ್ಪಗಳಲ್ಲಿ ಹತ್ತಿಯಿಂದ ತಯಾರಾದ ಬಟ್ಟೆಗಳನ್ನು ತೋರಿಸಲಾಗಿದೆ. ಹತ್ತಿಯ ಉತ್ಪಾದನೆ ಇದ್ದುದು ಇದರಿಂದ ಸ್ಪಷ್ಟ. ಆದರೆ ಶಾಸನಗಳಲ್ಲಿ ಹತ್ತಿ ಪ್ರಸ್ತಾಪವಿಲ್ಲ. ಬೆಳವಲ ಮರದ ಪ್ರಸ್ತಾಪವೂ ಇಲ್ಲ! ಮೊದಲನೆಯ ಪೊಲೆಕೇಶಿಯ ಅಳ್ತೆಂ ಶಾಸನದಲ್ಲಿ[48] ಕುಹುಂಡೀ ವಿಷಯದ ಅಲಕ್ತಕ (ಅಲ್ತೆ) ನಗರದ ವರ್ಣನೆ ಇದೆ. ಅದರಲ್ಲಿ ಭತ್ತ, ಕಬ್ಬು, ಬಟಗಡ್ಲಿ, ನವಣೆ, ಗೋದಿ ಮೊದಲಾದ ಧಾನ್ಯದಿಂದ ಪ್ರಾಂತವು ಸಮೃದ್ಧವಾಗಿತ್ತೆಂದು ಹೇಳಾಗಿದೆ. ದುರ್ಲಭಾ ದೇವಿಯು ಮಕುಟೇಶ್ವರ (ಮಹಾಕೂಟೇಶ್ವರ) ಗುಡಿಗೆ ಕೊಡಮಾಡಿದ ದತ್ತಿ ಗ್ರಾಮಗಳಲ್ಲಿ ವ್ರೀಹಿ ಮುಖಗ್ರಾಮ ಎಂಬುದೂ ಒಂದು. ವ್ರೀಹಿ ಎಂದರೆ ನೆಲ್ಲು, ವ್ರೀಹಿ ಮುಖ ಗ್ರಾಮ ಎಂದರೆ ನೆಲ್ಲಿನ ಮೊಗದಂತಿರುವ ಗ್ರಾಮ. ಈಗಲೂ ಈ ಗ್ರಾಮವು ನೆಲುವಿಗೆ[49] ಎಂದೇ ಕರೆಯಲ್ಪಡುತ್ತದೆ. ಮಲಪ್ರಭಾ ದಡದಗುಂಟ ಈ ಗ್ರಾಮದ ಎಡಬಲಗಳಲ್ಲಿ ಈಗಲೂ ನೆಲ್ಲು ಬೆಳೆಯುತ್ತಾರೆ.

ವ್ಯಾಪಾರ ವಾಣಿಜ್ಯ

ಒಂದು ದೇಶದ ಆರ್ಥಿಕ ಅಭಿವೃದ್ದಿಗೆ ಫಲವತ್ತಾದ ಭೂಮಿ ಹಾಗೂ ಅದರ ಉತ್ಪನ್ನಗಳು ಕಾರಣವಾಗಿರುತ್ತವೆ. ಕರ್ನಾಟಕವು ಭೌಗೋಲಿಕವಾಗಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಮಧ್ಯೆ ಇರುವುದರಿಂದ ವ್ಯಾಪಾರಕ್ಕೆ ಅನುಕೂಲಕರ ಸ್ಥಳವೆನಿಸಿರುವುದು ಸಹಜ. ಅದರಂತೆ ಪಶ್ಚಿಮ ಕರಾವಳಿಯಲ್ಲಿಯ ಬಂದರುಗಳ ಮೂಲಕ ಜಲಮಾರ್ಗದ ಮೂಲಕ ವಿದೇಶಗಳೊಂದಿಗೆ ವ್ಯಾಪಾರದ ಸಂಬಂಧಗಳನ್ನು ಬೆಳೆಯಿಸಲು ಸಾಧ್ಯವಾಯಿತು.

ಚಲುಕ್ಯರ ಕಾಲದಲ್ಲಿ ಐಹೊಳೆಯಲ್ಲಿ ೫೦೦ ಜನ ಸದಸ್ಯರ ವರ್ತಕ ಸಂಘವೊಂದು ವ್ಯಾಪಾರದ ಹುಟ್ಟು ಹಾಕಿತು. ಪ್ರಸಿದ್ಧವಾದ ಈ ವರ್ತಕ ಸಂಘವು ವ್ಯಾಪಾರಿಶಾಹಿ ಪ್ರಭುತ್ವವನ್ನು ಸ್ಥಾಪಿಸಿದಂತೆ ತಿಳಿದು ಬರುತ್ತದೆ. ಈ ಸಂಘದಲ್ಲಿ ಸೆಟ್ಟಿಗಳುಂ. ಸೆಟ್ಟಗುತ್ತರುಂ ನಾನಾ ದೇಶಿಗಳುಂ, ನಖರಂಗಳುಂ, ಗವಱೀ, ಮುಮ್ಮುರಿದಂಡ ಎಂದು ಮುಂತಾಗಿ ಉಪಸಮಿತಿ ಗಳಿದ್ದವು. ಐಹೊಳೆಯ ಗೌಡರ ಗುಡಿಯ ತೊಲೆಯ ಮೇಲೆ ಚಲುಕ್ಯರ ಕಾಲದ ಎಂಟು ವ್ಯಾಪಾರಿ ಸಂಘಗಳ ಉಲ್ಲೇಖವಿದೆ.[50] ‘ಅಯ್ಯಾವೊಳೆ ಅಯ್ನೂರು’ ಎಂಬ ವ್ಯಾಪಾರ ಸಂಘವು ಬೇರೆ ಬೇರೆ ಜಾಗಗಳಲ್ಲಿ ನಕರಗಳನ್ನು ನಿಯಮಿಸಿ ದಕ್ಷಿಣ ಭಾರತದ ವ್ಯಾಪಾರವನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತ್ತು. ದುರ್ಗ ಗುಡಿಯಲ್ಲಿಯ ಇಮ್ಮಡಿ(?) ವಿಕ್ರಮಾದಿತ್ಯನ ಶಾಸನವು[51] ‘ಇನಿತುಂ ರಾಜಶ್ರಾವಿತಂ ಮಹಾಜನಮು ನಕರ ಶ್ರಾವಿತಂ ಇದಾನ್ಸಲಿಸುಗೆ’ ಎಂದು ಹೇಳಿರುವು ದರಿಂದ ಮಹಾಜನರಿಗೂ, ವ್ಯಾಪಾರ ಸಂಘಕ್ಕೂ ರಾಜನಿಗೆ ಸಮನಾದ ಅಧಿಕಾರವಿದ್ದದ್ದು ಸ್ಪಷ್ಟವಿದೆ. ಇದು ವ್ಯಾಪಾರ ಸಂಘದ ಪ್ರಾಬಲ್ಯವನ್ನು ಮನದಟ್ಟು ಮಾಡಿಕೊಡುತ್ತದೆ. ಈ ಸಂಘವು ಇಂದಿನ ‘ಚೇಂಬರ್ ಆಫ್ ಕಾಮರ್ಸ್‌’ನ್ನು ಹೋಲುತ್ತದೆನ್ನಬಹುದು.

ಅಯ್ಯಾವೊಳೆ ಅಯ್ನೂರರ ವ್ಯಾಪಾರವು ದೇಶ-ವಿದೇಶಗಳಿಗೆ ವ್ಯಾಪಿಸಿತ್ತು. ಆನೆಗಳು. ಕುದುರೆಗಳು, ಮುತ್ತು, ರತ್ನಗಳು, ಮಸಾಲಿ ಸಾಮಾನುಗಳು, ಸುಗಂಧ ದ್ರವ್ಯಗಳು, ಔಷಧಿ ಮೊದಲಾದವು ವ್ಯಾಪಾರದ ಸರಕುಗಳಾಗಿದ್ದವು. ಸರಕು ಸಾಗಾಣಿಕೆಗಾಗಿ ಬಂಡಿಗಳನ್ನು ಮತ್ತು ಕುದುರೆ, ಕೋಣ, ಎತ್ತು, ಕತ್ತೆಗಳನ್ನು ಬಳಸುತ್ತಿದ್ದರು.

ಅಳತೆಗಳು, ತೂಕಗಳು

ಚಲುಕ್ಯರ ಕಾಲದಲ್ಲಿ ಭೂಮಿಯನ್ನು ನಿವರ್ತನ ಎಂಬ ಮಾನದಿಂದ ಅಳೆಯಲಾಗುತ್ತಿತ್ತು. ಸಂಸ್ಕೃತ ಶಾಸನಗಳಲ್ಲಿ ನಿವರ್ತನವು ಕಾಣಿಸಿಕೊಂಡರೆ ಕನ್ನಡ ಶಾಸನಗಳಲ್ಲಿ ‘ಮತ್ತರ’ ಎಂಬ ಮಾನವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮತ್ತರವು ನಿವರ್ತನದ ಸಮಾನ ಪದವೆಂದು ಹೇಳಲಾಗಿದೆ. ನಿವರ್ತನ ಅಥವಾ ಮತ್ತರಕ್ಕೆ ಸಮನಾದ ಆಧುನಿಕ ಅಳತೆಯನ್ನು ಕಂಡು ಹಿಡಿಯುವಲ್ಲಿ ವಿದ್ವಾಂಸರು ವಿಫಲರಾಗಿದ್ದಾರೆ. ಒಂದು ನಿವರ್ತನವು ಇಂದಿನ ಐದು ಎಕರೆಗಳ ವಿಸ್ತೀರ್ಣದ್ದು ಎಂಬ ಎ.ಎಸ್.ಅಲ್ಟೇಕರ್[52] ಅವರ ಅಭಿಪ್ರಾಯವನ್ನು ಸದ್ಯಕ್ಕೆ ಒಪ್ಪಲಾಗಿದೆ. ಚಲುಕ್ಯರ ಶಾಸನಗಳಲ್ಲಿ ಭೂದಾನಗಳು ಎರಡು ನಿವರ್ತನಗಳಿಂದ ಎಂಟು ನೂರು ನಿವರ್ತನಗಳವರೆಗೆ ಆದುದನ್ನು ಗುರುತಿಸಬಹುದು. ಐವತ್ತು ನಿವರ್ತನ ಅಳತೆಯ ಭೂದಾನದ ಶಾಸನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಪ್ಪತ್ತೈದು ನಿವರ್ತನದ ಭೂದಾನದ ಕಡಿಮೆ ಸಂಖ್ಯೆಯಲ್ಲಿಯೂ ಇಪ್ಪತ್ತು ನಿವರ್ತನದ ಭೂದಾನಗಳು ವಿರಳವಾಗಿಯೂ ಕಂಡು ಬರುತ್ತವೆ. ಕೆಲವು ಶಾಸನಗಳಲ್ಲಿ ಪನ್ನಾಸ. ಪನ್ನಾವೀಸ ಮತ್ತು ವೀಸ ಅಳತೆಗಳೂ ಬಳಕೆಯಾಗಿವೆ.[53] ವಿಜಯಾದಿತ್ಯನ ಕೊಟ್ಟೂರಿನ ತೆಲುಗು ಶಾಸನ[54] ಹಾಗೂ ಇಮ್ಮಡಿ ಪೊಲೆಕೇಶಿಯ ತಮ್ಮೆಯನೂರು ಶಾಸನದಲ್ಲಿ[55] ಪನ್ನಾಸ ಪದದ ಪ್ರಯೋಗವನ್ನು ಕಾಣುತ್ತೇವೆ. ಮಂಗಲೇಶನ ಬಾದಾಮಿ ಶಾಸನದಲ್ಲಿ[56] ಮಾಲಕಾರರಿಗೆ ಅರ‌್ಧ ವಿಸ ನೀಡಿದುದನ್ನು ಹೇಳಿದೆ. ‘ವಿಸ’ ವಿಂಶತಿಯ ತದ್ಭವವೆಂಬ ರಮೇಶ ಅವರ ವಿಚಾರವನ್ನು ಸ್ವೀಕರಿಸಿದರೆ ಇದು ೫೦ ಎಕರೆಯಾಗುತ್ತದೆ. ಚಲುಕ್ಯರ ಅನೇಕ ಶಾಸನಗಳಲ್ಲಿ ಭೂ ಅಳತೆಗೆ ಸಂಬಂಧಿಸಿದಂತೆ ರಾಜಮಾನ ಎಂಬ ಪದಪ್ರಯೋಗವು ಕಂಡು ಬರುತ್ತದೆ. ಇಂದಿನ ಭಾರತೀಯ ಮಾನಕ ಸಂಸ್ಥೆ(ISI)ಯ ಅಧಿಕೃತ ಮಾನದಂತೆ ರಾಜನಿಂದ ಮಾನ್ಯತೆ ಪಡೆದ ಅಳತೆ ರಾಜಮಾನವಾಗಿರಬಹುದು. ಭೂಮಿಯನ್ನು ಅಳತೆಯಲು ಅಳತೆಯ ಕೋಲನ್ನು ಉಪಯೋಗಿಸುತ್ತಿದ್ದ ಸಂಗತಿ ಕುರುಗೋಡಿನ ಚಲುಕ್ಯ ಶಾಸನದಿಂದ[57] ತಿಳಿದು ಬರುತ್ತದೆ. ಇದರಲ್ಲಿ ೧೮ ಗೇಣಿನ ಅಳತೆಗೋಲನ್ನು ಬಳಸಲು ಸೂಚಿಸಲಾಗಿದೆ. ಇಂತಹ ಕೋಲಿನ ಒಂದು ಮಾದರಿಯನ್ನು ಆ ಊರಿನ ದೇವಾಲಯಗಳಲ್ಲಿ ಇಡುತ್ತಿದ್ದರು ಅಥವಾ ಗುಡಿಯ ಗೋಡೆಯ ಮೇಲೆ ಕೆತ್ತುತ್ತಿದ್ದರು.[58] ದಾನ ಮಾಡಿದ ಭೂಮಿಯೊಂದು ಅಳೆದ ಐವರನ್ನು ಇಮ್ಮಡಿ ವಿಕ್ರಮಾದಿತ್ಯನ ತಿಪ್ಪಲೂರು ಶಾಸನವು[59] ಹೆಸರಿಸಿದೆ. ಇದರಿಂದ ಭೂ ಅಳತೆಗಾಗಿ ನಿರ್ದಿಷ್ಟ ಅಳತೆಗೋಲು ಇದ್ದುದಾಗಿಯೂ. ಅದಕ್ಕಾಗಿ ಅರಸನ ಸಿಬ್ಬಂದಿ ಇದ್ದುದಾಗಿಯೂ ಸ್ಪಷ್ಟವಾಗುತ್ತದೆ.

ಐಹೊಳೆಯ ದುರ್ಗಗುಡಿಯ ಶಾಸನದಲ್ಲಿ[60] ಮಣ. ಪೇರು, ವೀಸ, ಭಂಡ ಪೇರುಗಳ ಪ್ರಸ್ತಾಪವಿದೆ. ಸಲಗೆ,[61] ಕುಳ,[62] ಕುಳಗ,[63] ಖಂಡುಗ,[64] ಮಡಿ.[65] ಸೊಂತಿಗೆ[66] ಎಂಬ ಮಾನಗಳೂ ಕಾಣಸಿಗುತ್ತವೆ. ಮಣ ಎಂಬುದು ಈಗಿನ ಕಾಲದ ಮಣ(=೧೧.೨ಕೆಜಿ), ಪೇರು ಎಂಬುದು ೬೪೪ ಸೇರುಗಳುಳ್ಳ ಚೀಲ; ವೀಸ (ವೀಸೆ) ಐದು ಸೇರುಗಳಿಗೆ ಸಮವಾದುದು;[67] ವೀಸೆ ಇಲ್ಲಿ ತೂಕದ ಮಾನ. ವೀಸ ಹಣದ ಮಾನವಾಗಿತ್ತು. ೨೦೦ ವೀಸಗಳು ೧ ಗದ್ಯಾಣ್ಕೆ ಸಮ.[68] ವಿಸವನ್ನು ವಿಸ್ತೀರ್ಣದ ಮಾನವೆಂದೂ, ವೀಸೆಯನ್ನು ತೂಕದ ಮಾನವೆಂದೂ, ವೀಸವನ್ನು ಹಣದ ಮಾನವೆಂದೂ ಬಳಸಿದಂತೆ ಕಾಣುತ್ತದೆ. ಭಂಡಪೇರು ಒಂದು ಬಂಡಿಯ ಹೊರೆಗೆ ಸಮನಾದುದು. ಕುಳ, ಕುಳಗ ಅಥವಾ ಕೊಳಗ ೬೪ ಸೇರುಗಳಿಗೆ. ಸರಿಯಾದುದು. ಸೊಂತಿಗೆ ದ್ರವದ ಮಾಪನವಾಗಿತ್ತು.


[1]     IA, VII, ೪೦.

[2]      EI, XXVII, ೯, ೧೯೪೭-೪೮.

[3]     IA, IV, ೨೭, pp. ೭೨-೭೫  ಮತ್ತು EI, IX,p.೧೦೨.

[4]     EI.III, ೮.

[5]     IA, XIX, p.೩೦೯.

[6]     EI, IX, ೧೨, pp ೯೮-೧೦೨.

[7]     EC, XXXII, ೨೧, pp. ೧೭೫-೮೪.

[8]      IA, XIX, ೧೮೭.

[9]     IA,VII, ೪೮, p. ೩೦೦.

[10]    EI, XXVE, ೪೭.

[11]    IA, IX,೭೭.

[12]     JKU, I, ೨.

[13]     EI, V, ೨೨.

[14]    EI, IX, ೨೮ ಮತ್ತು IA, XI, p.೬೮.

[15]    IA, X, p. ೬೨-೬೩.

[16]    SII, IX (I), p.೪೮ ಮತ್ತು A.R. ೧೯೧; ೧೯೧೯.

[17]    IA, IV, ೨೭, pp. ೭೨-೭೫ ಮತ್ತು EI,IX,p. ೧೦೨.

[18]    SII IX (i), ೪೬  ಮತ್ತು AR, ೩೪೩ (೧೯೨೦).

[19]    SII, IX (i), ೪೭, p. ೨೭.

[20]    ರಾಜೇಂದ್ರಪ್ಪ ಶಿ., ೧೯೮೪, ಬಾದಮಿ ಚಾಲುಕ್ಯರ ಆಳ್ವಿಕೆಯಲ್ಲಿ ಕೃಷಿ, ಮಾನವಿಕ ಕರ್ನಾಟಕ ಸಂಪುಟ ೧೪, ಸಂಚಿಕೆ ೪, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಪು. ೪೧.

[21]    IA, IX, p.೮.

[22]    MAR, ೧೯೩೯ p. ೧೩೦.

[23]    SII, IX (i) ೪೬, pp ೨೬-೨೭.

[24]    IA, VII, p.೨೦೦.

[25]    SII, IX (i), ೪೭, pp. ೨೬-೨೭.

[26]    EI XIV, pp.೧೪೪-೪೭.

[27]    EI, XXVI, pp.೩೨೨-೬.

[28]    EC, VIII, Sb ೪೧೧.

[29]    SII, IX (i), ೪೮.

[30]    IA, VII, p,೩೦೦ FF.

[31]    IA, VII, p.೪೪.

[32]    IA, VII, p. ೨೦೯.

[33]    Radcliffe, Carol Elizabeth, ೧೯೮೩, ‘Recent Inscriptions Relating to Karnataka history’ QJMS Volume ೭೪; Part ೪, P.೩೨೫-೨೬

[34]    EI, XXXVII, ೩೬.

[35]    SII, IX (i), ೪೮.

[36]    Ramesh K.V., ೧೯೮೩, ‘recent Inscriptions Relating to karnataka History’ QJMS Volume ೭೪; part ೪, P. ೩೨೫-೨೬

[37]    IA, XVIII, p.೩೫.

[38]    MAR, ೧೯೩೦, ೫೦ p. ೧೨೯-೫೭.

[39]    IA, X,p.೧೬.

[40]    IA, VII, p. ೨೦೯.

[41]    ಅದೇ.

[42]    EI, XXVI, pp. ೬-೯.

[43]     EI, V, pp. ೬-೯.

[44]     EI,XXXV, p. ೩೧೭.

[45]    ನಾಗೇಗೌಡ, ಎಚ್.ಎಲ್., ೧೯೬೪, ಪ್ರವಾಸಿ ಕಂಡ ಇಂಡಿಯ, ಮೈಸೂರು, ಪು. ೨೦೫.

[46]    ಅದೇ.

[47]    IA, VII, ೪೬, p.೨೪೦.

[48]    IA, VII, p.೨೦೯

[49]    ನೆಲ್ಲಿನ ಮೊಗದಂತಿರುವ ಈ ಹಳ್ಳಿ ನೆಲ್‌ವೊಗ ಅಥವಾ ನೆಲ್‌ವಿಗಿ ಆಗಿರಬೇಕು. ಇದೇ ಪ್ರಾಚೀನ ಹೆಸರೆಂದು ತೋರುತ್ತದೆ. ಸಂಸ್ಕೃತೀಕರಣಗೊಂಡು ವ್ರೀಹಿ ಮುಖ ಗ್ರಾಮ ವೆನಿಸಿದೆ.

[50]    SII, XV, ೪೬೩.

[51]    ಅಣ್ಣಿಗೇರಿ ಎ.ಎಂ., ೧೯೭೪:ಐಹೊಳೆ ಸಂಸ್ಕೃತಿ ಮತ್ತು ಕಲೆ, ಧಾರವಾಡ. ಪು. ೧೪೯.

[52]    Altekar, A.S., The Rashtrakutas and Their times, p.೨೨೦.

[53]    ಇವು ಕ್ರಮವಾಗಿ ಪಂಚಾಶತ (೫೦)ಪಂಚ ವಿಂಶತಿ (೨೫)ಮತ್ತು ವಿಂಶತಿ (೨೦)ಪದಗಳ ತದ್ಭವಗಳೆಂಬುದು ಕೆ.ವಿ.ರಮೇಶ ಅವರ ಅಭಿಪ್ರಾಯ ನೋಡಿ : Chalukyas of Vatapi, p.೯೧.

[54]    EI, XXX, ೪.

[55]    ಪಂಚಮುಖಿ ಆರ್.ಎಸ್., ೧೯೬೭, ಕರ್ನಾಟಕದ ಇತಿಹಾಸ, ಧಾರವಾಡ, ಪು. ೧೮೮.

[56]    IA, X, p.೫೯-೬೦;

[57]    EI,XXX, p. ೧೩-೧೭.

[58]    ಚಿದಾನಂದ ಮೂರ್ತಿ ಎಂ., ೧೯೭೯, ಕನ್ನಡ ಸಾಸನಗಳ ಸಾಂಸ್ಕೃತಿಕ ಅಧ್ಯಯನ. ಮೈ.ವಿ.ವಿ., ಮೈಸೂರು.

[59]    SII, IX (i), ೫೩, p. ೩೦.

[60]    IA, VII, ೫೮, pp. ೨೮೫-೭.

[61]     EI, X, pp. ೧೦೦-೧೦೬.

[62]    IA, X, p. ೧೩೭.

[63]    SII, IX (i), ೪೮, p. ೨೮.

[64]    EI, X, p. ೧೦೦-೧೦೬.

[65]    SII, IX (i), ೪೭, p.೨೮.

[66]     IA, VII, ೫೭, p. ೨೩೫ ff.

[67]    ಕಿಟೆಲ್ಲರ ಕನ್ನಡ-ಇಂಗ್ಲೀಷ ನಿಘಂಟು.

[68]    ಕನ್ನಡ ಸಾಹಿತ್ಯ ಚರಿತ್ರೆ ೧೯೭೭. ನಾಲ್ಕನೆಯ ಸಂಪುಟ ಮೈಸೂರು ಪು. ೧೦೪೦.