ತೆರಿಗೆಗಳು

ಚಲುಕ್ಯರ ಅಳಿಕೆಯ ಕಾಲದ ದಾನ ಶಾಸನಗಳನ್ನು ಅವಲೋಕಿಸಿದರೆ ಆ ಕಾಲದಲ್ಲಿ ಪ್ರಚಲಿತವಿದ್ದ ತೆರಿಗೆ, ಸುಂಕಗಳ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ. ಭೂಕಂದಾಯದ ಜೊತೆಗೆ ಆಸ್ತಿ ತೆರಿಗೆ, ವೃತ್ತಿ ತೆರಿಗೆ, ವಾಣಿಜ್ಯ ತೆರಿಗೆ, ಸಾಮಾಜಿಕ ತೆರಿಗೆ ಮೊದಲಾದವುಗಳು ಅಸ್ತಿತ್ವದಲ್ಲಿ ಇದ್ದುದನ್ನು ಮನಗಾಣುತ್ತೇವೆ. ರಾಜ್ಯದ ಭೂ ತೆರಿಗೆ ನೀತಿ, ಸಂಗ್ರಹಣೆಗೆ ಸಂಬಂಧಿಸಿದಂತೆ ಶಾಸನಗಳಲ್ಲಿ ಸೂಚನೆಗಳಿವೆ. ಆದರೆ ಅಂದಿನ ಪದಗಳು ಇಂದು ಬಳಕೆಯಲ್ಲಿ ಇಲ್ಲದಿರುವುದರಿಂದ ಅವನ್ನು ಅರ‌್ಥೈಸಿಕೊಳ್ಳುವುದುದ ಕಷ್ಟ. ಹೆಚ್ಚೆಂದರೆ ನಾವು ಆ ಪದದ ಅರ್ಥವನ್ನು ಶಬ್ಧದ ವ್ಯತ್ಪತ್ತಿಯನ್ನು ಊಹಿಸಿ ಗ್ರಹಿಸಬಹುದಾಗಿದೆ. ಪಟ್ಟದಕಲ್ಲಿನ ಎರಡು ಶಾಸನಗಳಲ್ಲಿ ಬಳ್ಳಿಗವರ್ತ್ತಿ ಎಂಬ ತೆರಿಗೆಯನ್ನು ವಿನಾಯಿತಿ ಮಾಡಿದುದನ್ನು ಉಲ್ಲೇಖಿಸಲಾಗಿದೆ.

[1] ಇದರ ಶಬ್ದಾರ್ಥವನ್ನೇ ಅವಲಂಬಿಸಿ ನಿಘಂಟುಕಾರರು ಇದನ್ನು ವೀಳ್ಯದೆಲೆ(ಬಳ್ಳಿ)ಯ ಮೇಲಿನ ತೆರಿಗೆ ಎಂದು ಅರ್ಥೈಸಿದ್ದಾರೆ. ಈ ತೆರಿಗೆಯ ವಿನಾಯತಿ ಪಡೆದವರು ಸರ್ವ ಸಿದ್ದಿ ಆಚಾರಿ ಹಾಗೂ ಗುಂಡ ಅನಿವಾರಿತಾಚಾರಿ ಎಂಬ ಮಹಾಶಿಲ್ಪಿಗಳು. ಶಿಲ್ಪಿಗೂ, ಬಳ್ಳಿಗೂ ಏನು ಸಂಬಂಧ? ಶಿಲ್ಪಿಗಳಿಗೆ ಈ ತೆರಿಗೆ ವಿನಾಯತಿ ಮಾಡುವ ಸಂದರ್ಭ ಏನೆಂಬುದು ಅರ್ಥವಾಗುವುದಿಲ್ಲ. ಆದ್ದರಿಂದ ಬಳ್ಳಿಗವರ್ತ್ತೆಯ ಅರ್ಥವನ್ನು ಬೇರೆ ಮೂಲದಿಂದ ಹುಡುಕಬೇಕಾಗುತ್ತದೆ. ಬಳ್ಳಿಗವರ್ತ್ತೆಯ ಶಿಲ್ಪಿಯ ಉದ್ಯೋಗಕ್ಕೆ ಸಂಬಂಧಿಸಿದ ತೆರಿಗೆಯಾಗಿರಬೇಕೆಂಬ ಎಸ್.ವಿ.ಪಾಡಿಗಾರ ಅವರ ಅಭಿಪ್ರಾಯವು ಸ್ವಾಗತಾರ್ಹ. ಹೀಗೆ ಅನೇಕ ತೆರಿಗೆಗಳ ಅರ್ಥಗಳನ್ನು ಪುನಃ ಪರಿಶೀಲಿಸಿದರೆ ಅಂದಿನ ಜೀವನದ ಆರ್ಥಿಕ ಒಳನೋಟವೊಂದು ಗೋಚರಿಸಬಹುದು.

ತೆರಿಗೆಗಳನ್ನು ಸಂಗ್ರಹಿಸುವ ಅಧಿಕಾರಿಗಳಿದ್ದದ್ದು ಶಾಸನಗಳಿಂದ ಸ್ಪಷ್ಟವಾಗಿದೆ. ಇಮ್ಮಡಿ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ರೇವಡಿ ಎಂಬಾತನು ಬಡ್ಡರಾವುಳ ವಡ್ಡರಾವುಳ ತೆರಿಗೆಗೆ ಸಂಬಂಧದ ಅಧಿಕಾರಿಯಾದದ್ದು ಐಹೊಳೆಯ ದುರ್ಗಗುಡಿ ಶಾಸನದಿಂದ[2] ತಿಳಿದು ಬರುತ್ತದೆ.

ಸ್ವಂತ ಮನೆಯುಳ್ಳವರು ಮತ್ತು ಜಾಗೆಯುಳ್ಳವರು ತಮ್ಮ ಆಸ್ತಿಯ ಮೇಲೆ ತೆರಿಗೆ ಕೊಡಬೇಕಾಗುತ್ತಿತ್ತು. ಯುವರಾಜ ವಿಕ್ರಮಾದಿತ್ಯನ ಲಕ್ಷ್ಮೇಶ್ವರ ಶಾಸನವು[3] ಪ್ರಜೆಗಳು ಕೊಡಬೇಕಾದ ಮನೆ ತೆರಿಗಗಳ ಬಗ್ಗೆ ಸೂಚನೆ ನೀಡುತ್ತದೆ. ಮನೆಯಿಲ್ಲದವರು ಕೂಡ ತಮ್ಮ ಅಂತಸ್ತಿಗೆ ಅನುಗುಣವಾಗಿ ಪ್ರತಿವರ್ಷ ೧೫,೧೦,೭ ಇಲ್ಲವೆ ೫ ಪಣಗಳನ್ನು ಅಧಿಕಾರಿಗಗೆ ತೆರಿಗೆಯಾಗಿ ನೀಡಬೇಕಾಗಿತ್ತು. ಊರುಗಳಿಗೆ ರಾಜಭಟರು ಇಲ್ಲವೇ ಸೈನಿಕರು ಬಂದರೆ ಅವರ ಊಟ ಮೊದಲಾದವುಗಳ ವೆಚ್ಚವನ್ನು ಊರಿನವರೇ ನಿರ್ವಹಿಸಬೇಕಾಗುತ್ತಿತ್ತು. ಯುವರಾಜ ವಿಷ್ಣುವರ್ಥನನ ಸಾತಾರಾ ಶಾಸನವು[4] ಆಲಂದತೀರ್ಥ ಗ್ರಾಮವು ಚಾಟರು, ಭಟರು ಹಾಗೂ ಕುಸೀದರಿಂದ ಮುಕ್ತವಾದುದನ್ನು, ಎಲ್ಲ ತೆರಿಗೆಗಳಿಂದ ವಿನಾಯಿತಿ ಹೊಂರುವುದನ್ನು ಉಲ್ಲೇಖಿಸುತ್ತದೆ. ಹೀಗೆ ತೆರಿಗೆಗಳನ್ನು ವಿನಾಯತಿ ನೀಡಿದುದನ್ನು ತೆಲಮಂ[5] ಶಾಸನದಲ್ಲಿಯ ಸರ್ವೋಪಧಾ ಪರಿಹಾರಂ ಮತ್ತು ಸೊರಬ ಶಾಸನ[6] ಸರ್ವಬಾಧಾ ಪರಿಹಾರಂ ಎಂಬ ಪದಗಳು ಸೂಚಿಸುತ್ತವೆ. ತೆರಿಗೆಗಳು ಬಾಧೆ ಕೊಡುವಷ್ಟು ಭಾರವಾಗಿದ್ದವೆಂಬ ಅಂಶವೂ ಈ ಪದಗಳಲ್ಲಿ ವ್ಯಕ್ತವಾಗಿದೆ. ಇಮ್ಮಡಿ ಪೊಲಿಕೇಶಿಯು ಮಕರಪ್ಪಿ ಗ್ರಾಮವನ್ನೂ, ಗ್ರಾಮದ ನಿಧಿ, ಉಪನಿಧಿಗಳನ್ನೂ ಜೊತೆಗೆ ಪರಿಕರ ತೆರಿಗೆಗಳನ್ನೂ ಬಿಟ್ಟುಕೊಟ್ಟ ವಿಷಯವು ಹೈದರಾಬಾದ ಶಾಸನದಲ್ಲಿ[7] ಉಕ್ತವಾಗಿದೆ. ಮಾರುಕಟ್ಟೆಯ ತೆರಿಗೆಗಳನ್ನೂ ಹೇರಲಾಗಿತ್ತು. ಶೀಲಾದಿತ್ಯನ ನೌಸಾರಿ ಶಾಸನದಲ್ಲಿ ಉದ್ರಂಗ, ಪರಿಕರಗಳನ್ನು ಬಿಟ್ಟುಕೊಟ್ಟ ಸಂಗತಿ ದಾಖಲಾಗಿದೆ.[8] ಉದ್ರಂಗ ಮಾರುಕಟ್ಟೆ ಸುಂಕವೆಂದೂ ಪರಿಕರ ಜಕಾತಿ ಸುಂಕವೆಂದೂ ಗ್ರಹಿಸಲಾಗಿದೆ.

ಕಾಂದರ್ಬ ಎಂಬ ಹೆಸರಿನ ಅಧಿಕಾರಿಯು ಪೆರಿಯ ಒಸಗೆ. ಉಪ್ಪು ಇವುಗಳ ಹಣವನ್ನು ಹಾಗೂ ಅಪುತ್ರಕ ಧನವನ್ನು ನಾಗರಖಂಡ-೭೦, ಜೆಜುಗೂರು-೭೦ ಎಂಬೆರಡು ಜಿಲ್ಲೆಗಳಿಂದ ರಾಜನ ಪರವಾಗಿ ಸಂಗ್ರಹಿಸುತ್ತಿದ್ದ ವಿಷಯವು ವಿನಯಾದಿತ್ಯನ ಶಾಸನ[9]ದಿಂದ ವಿದಿತವಾಗುತ್ತದೆ. ರಾಜನು ಸಾಮಾಜಿಕ ಕಾರ್ಯಗಳ ಮೇಲೆಯೂ ತೆರಿಗೆಯನ್ನು ಹೇರುತ್ತಿದ್ದನು. ಪೆರಿಯ ಒಸಗೆ ಮಹೋತ್ಸವಗಳ ಬಗೆಗಿನ ತೆರಿಗೆ ಇರಬಹುದಾಗಿದೆ. ಮುಂಜಿವೆ, ಮದುವೆ ಮೊದಲಾದ ಧಾರ್ಮಿಕ ಸಂಸ್ಕಾರಗಳಿಗೆ ತೆರಿಗೆಯನ್ನು ವಿಧಿಸಲಾಗುತ್ತಿತ್ತು[10] ತೆರಿಗೆಗಳು ಹಣದ ರೂಪದಲ್ಲಿಯೂ, ಉತ್ಪನ್ನ ರೂಪದಲ್ಲಿಯೂ ಸಂಗ್ರಹವಾಗುತ್ತಿದ್ದವು. ವಿಜಯಾದಿತ್ಯನ ಜುಂಬುಲಿಂಗ ಗುಡಿ ಶಾಸನವು[11] ತೆರಿಗೆಗಳನ್ನು ಎಣ್ಣೆ, ಸಕ್ಕರೆಗಳ ರೂಪದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ದೇವಾಲಯಕ್ಕೆ ಕೊಡಲಾಗುತ್ತಿತ್ತೆಂದು ತಿಳಿಸುತ್ತದೆ. ಅದೇ ಅರಸನ ಐಹೊಳೆಯ ಶಾಸನವೊಂದು[12] ಪ್ರತಿ ಗಾಣದಿಂದ ಒಂದು ಸೊಂತಿಗೆ ಅಳತೆಯ ಎಣ್ಣೆಯು ಧರ್ಮದ ಸಲುವಾಗಿ ಸಂದಾಯವಾಗಬೇಕೆಂದು ಆದೇಶಿಸುತ್ತದೆ. ಪಟ್ಟದಕಲ್ಲಿನ ಲೋಕೇಶ್ವರ ಗುಡಿಗೆ ನೆರೆಯಂಗಲ್-೫೦ನ್ನು ನೀಡಿದ ಲೋಕ ಮಹಾದೇ ಅರಸಯ ಒಂದು ಮತ್ತರಿಗೆ ಎರಡು ಕೊಳಗ (ಇಕ್ಕುಳ) ಜೋಳ ಕೊಡಬೇಕೆಂದು ಆಜ್ಞಾಪಿಸಿದ್ದಾಳೆ.[13] ಈ ತೆರಿಗೆಗೆ ರಾಜಪುರುಷರ ಒತ್ತಾಯವಿಲ್ಲ ಎಂಬ ಅಭಯ ನುಡಿ ಪ್ರಸ್ತುತ ಶಾಸನದಲ್ಲಿದೆ ಧಾರ್ಮಿಕ ಕಾರ್ಯಗಳಿಗೆ ನೀಡಲಾಗುವ ತೆರಿಗೆಗಳನ್ನು ಬಲವಂತವಾಗಿ ಕಸಿದುಕೊಳ್ಳುತ್ತಿರಲಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹಾಗೆ ಮಾಡಿದಲ್ಲಿ ಧರ್ಮಕ್ಕೆ ಅಪಚಾರವಾಗುತ್ತದೆಂಬ ಅಳುಕು ಇರಬೇಕು. ರಾಜಕೀಯವಾಗಿ ಪ್ರದೇಶವನ್ನು ವಶಪಡಿಸಿಕೊಂಡಾಗ ಒತ್ತಾಯ ತೆರಿಗೆಗಳು ಹೇರಲ್ಪಡುತ್ತಿದ್ದವು. ಇಮ್ಮಡಿ ಪೊಲೆಕೇಶಿಯು ಬಾಣರಾಜನ ವಿಷಯವನ್ನು ಗೆದ್ದ ಬಳಿಕ ಅದರ ಪ್ರತಿಯೊಂದು ಹಳ್ಳಿಯೂ ತೆರೆಪೊನ್ ಎಂಬ ಅಪರೂಪದ ತೆರಿಗೆಯನ್ನು ನೀಡಬೇಕೆಂದು ಕಡ್ಡಾಯ ಮಾಡಿದುದನ್ನು ಇಲ್ಲಿ ಗಮನಿಸಬಹುದು.[14] ಕರ್ನೂಲು ಜಿಲ್ಲೆಯ ಚಲುಕ್ಯ ಶಾಸನಗಳಲ್ಲಿ ಮಾರುಂಚ, ಆದಿತ್ಯುಂಚ, ಉಂಚಮನ್ನ, ಮರುಮನ್ನ ಎಂಬ ತೆರಿಗೆಗಳು ಕಾಣಿಸಿಕೊಂಡಿವೆ.[15] ವಡ್ಡರಾವುಳ ಎಂಬ ತೆರಿಗೆಯು ವಾಸ್ತವವಾಗಿ ವೃದ್ಧರಾಜ ಕುಲ ವೆನಿಸಿತ್ತು. ಅದು ರಾಜರ ಜೀವನಾಂಶದ ಹಿಡುವಳಿಯನ್ನು ಸೂಚಿಸುತ್ತದೆ ಎಂದು ಕೆ.ವಿ.ರಮೇಶ ಅವರು ಅಭಿಪ್ರಾಯ ಪಡುತ್ತಾರೆ. ಪಂಗು ಎಂಬ ಇನ್ನೊಂದು ಬಗೆಯ ತೆರಿಗೆಯು ಚಲುಕ್ಯ[16] ಕಾಲದಲ್ಲಿ ಇದ್ದುದು ತಿಳಿದು ಬರುತ್ತದೆ.[17] ಕರ ಎನ್ನುವುದು ಇನ್ನೊಂದು ವಿಶಿಷ್ಟ ತೆರಿಗೆ. ಇದು ಮಾಂಡಲಿಕರು ಮಹಾರಾಜನಿಗೆ ಸಲ್ಲಿಸುವ ಕಾಣಿಕೆಯಾಗಿತ್ತು. ಚಲುಕ್ಯ ವಿನಯಾದಿತ್ಯನ ಸೊರಬ ಶಾಸನದಲ್ಲಿ ಇದರ ಉಲ್ಲೇಖವನ್ನು ಕಾಣಬಹುದು. ಕ್ಲಿಪ್ತ, ಉಪಕ್ಲಿಪ್ತಗಳು ಪ್ರಚಲಿತ ಮತ್ತೆರಡು ತೆರಿಗೆಗಳು. ಇಮ್ಮಡಿ ಪೊಲೆಕೇಶಿಯ ಹೈದ್ರಾಬಾದ ಶಾಸನದಲ್ಲಿ[18] ನಿಧಿ. ಉಪನಿಧಿಗಳೊಂದಿಗೆ ಇವೆರಡನ್ನು ಹೆಸರಿಸಲಾಗಿದೆ. ಈ ತೆರಿಗೆಗಳ ಸ್ವರೂಪ ತಿಳಿದು ಬಂದಿಲ್ಲ.

ಇಷ್ಟೆಲ್ಲ ಬಗೆಯ ತೆರಿಗೆಗಳು ಇದ್ದುದನ್ನು ಗಮನಿಸಿದಾಗ ಅವೆಲ್ಲವುಗಳ ವ್ಯವಸ್ಥಿತ ಸಂಗ್ರಹಣೆಗಾಗಿ ಆಡಳಿತದ ಸಿಬ್ಬಂದಿ ಇದ್ದಿರಬೇಕೆಂಬುದು ಸ್ಪಷ್ಟವಾಗುತ್ತದೆ. ತೆರಿಗೆದಾರರು ತೆರಿಗೆ ಕೊಟ್ಟದ್ದು. ಬಿಟ್ಟದ್ದು ದಾಕಲಾಗುತ್ತಿರಬೇಕು. ಜೀವನದ ಎಲ್ಲ ಪ್ರಧಾನ ವಸ್ತುಗಳ ಮೇಲೆ ಕರಾಕರಣೆ ಇದ್ದದ್ದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯನ ಜೀವನವನ್ನು ಊಹಿಸಿದರೆ ತೆರಿಗೆಯ ಭಾರದಿಂದ ಪ್ರಜೆಯ ಬೆನ್ನು ಬಾಗಿರಬಹುದೆನ್ನಿಸುತ್ತದೆ. ಆದರೆ ಈ ತೆರಿಗೆಗಳೇ ರಾಜನ ಬೆನ್ನಲುವಾಗಿದ್ದವು.

ನಾಣ್ಯಗಳು

ಆರ್ಥಿಕ ವ್ಯವಸ್ಥೆಯಲ್ಲಿ ನಾಣ್ಯ ಪದ್ಧತಿಯ ಪಾತ್ರ ಪ್ರಾಮುಖ್ಯವಾದುದು. ಚಲುಕ್ಯರ ಆಡಳಿತ ಕಲೆ ಮೊದಲಾದವುಗಳ ಬಗ್ಗೆ ವಿವರಗಳು ಲಭ್ಯವಿರುವಂತೆ ನಾಣ್ಯಗಳ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ರಾಷ್ಟ್ರಕೂಟ. ಕಲ್ಯಾಣ ಚಾಲುಕ್ಯರ ವಿಷಯದಲ್ಲೂ ಅಷ್ಟೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಅರಸರ ನಾಣ್ಯಗಳು ದೊರೆಯದೆ ಇದ್ದುದಕ್ಕೆ ಅವರು ಹೆಚ್ಚಾಗಿ ಚಿನ್ನದ ನಾಣ್ಯಗಳಿರುವುದೇ ಕಾರಣವಾಗಿರಬಹುದು.[19] ವರಾಹ ಚಲುಕ್ಯರ ರಾಜ ಲಾಂಛನವಾಗಿತ್ತು. ಅವರ ತಾಮ್ರ ಶಾಸನಗಳ ಉಂಗುರಗಳ ಮೇಲೆ ವರಾಹದ ಮುದ್ರೆ ಇರುವುದು ಸಾಮಾನ್ಯ ಅದ್ದರಿಂದ ವರಾಹ ಚಿತ್ರವಿರುವ ಚಿನ್ನದ ನಾಣ್ಯಗಳು ಚಲುಕ್ಯರವು ಎಂದು ತಿಳಿಯಬಾಗಿದೆ. ವರಾಹ ಮುದ್ರೆಯ ನಾಣ್ಯಗಳನ್ನು ಪ್ರಾರಂಭಿಸಿದವರು ಚಲುಕ್ಯರೇ. ವರಾಹ ಮುದ್ರೆಯ ಈ ಚಿನ್ನದ ನಾಣ್ಯಗಳು ವರಹಗಳೆನಿಸಿದವು. ಕ್ರಮೇಣ ಚಿನ್ನದ ನಾಣ್ಯಗಳನ್ನು ವರಾಹ ಮುದ್ರೆ ಇರದಿದ್ದರೂ ವರಹಗಳೆಂದೇ ಕರೆಯತೊಡಗಿದರು. ಚಲುಕ್ಯರು ಚಿನ್ನದಲ್ಲಿ ಮಾತ್ರವಲ್ಲದೆ ಬೆಳ್ಳಿ ಮಿಶ್ರಲೋಹ ಹಾಗೂ ತಾಮ್ರಗಳ ಮಾಧ್ಯಮಗಳ ನಾಣ್ಯಗಳನ್ನು ಚಲಾವಣೆಗೆ ತಂದದ್ದು ತಿಳಿದು ಬರುತ್ತದೆ.

ಚಿನ್ನದ ನಾಣ್ಯ

ಒಂದನೆಯ ವಿಕ್ರಮಾದಿತ್ಯನ ಲಿಪಿಯುಳ್ಳ ಚಿನ್ನದ ನಾಣ್ಯವನ್ನು ಎಸ್.ರಾಮಯ್ಯನವರು ಬೆಳಕಿಗೆ ತಂದಿದ್ದಾರೆ. ಇದು ೧೧೭ ಗ್ರೇನುಗಳ ಶುದ್ಧ ಚಿನ್ನದ ನಾಣ್ಯವಾಗಿದ್ದು ಅದರ ವ್ಯಾಸ ೦.೭೬ ಇದೆ. ಮುಮ್ಮುಖದಲ್ಲಿ ವರಾಹ ಚಿತ್ರವಿದ್ದು ಅದರ ಮುಂದೆ ದೀಪವಿದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರಿದ್ದಾರೆ. ಕೆಳಗೆ ಶ್ರೀವಿಕ್ರಮ ಎಂಬ ಅಕ್ಷರಗಳಿವೆ. ವರಾಹದ ಮೇಲ್ಭಾಗದಲ್ಲಿಯೂ ಅಕ್ಷರಗಳಿದ್ದು ಅವು ಅಸ್ಪಷ್ಟವಿವೆ. ನಾಣ್ಯದ ಹಿಮ್ಮುಖದಲ್ಲಿ ನಿಂತ ಮನುಷ್ಯನ ಆಕೃತಿ ಇದೆ. ಆತನ ಬಲಗೈ ಟೊಂಕದ ಹೆಡೆ ಎತ್ತಿದ ನಾಗವಿದೆ. ಒಂದು ತುದಿಯಲ್ಲಿ ಚಿಕ್ಕ ವರಾಹವಿದೆ. ಇನ್ನೊಂದು ತುದಿಗೆ, ಎಡಕ್ಕೆ, ವಿಕ್ರಮ ಎಂಬ ಅಕ್ಷರಗಳಿವೆ. ಅದೇ ಅಕ್ಷರಗಳು ನಾಗದ ಮೇಲೆಯೂ ಕಾಣಸಿಗುತ್ತವೆ. ಹೀಗೆ ಒಟ್ಟು ಮೂರೂ ಬರಹಗಳಿವೆ.

ಈ ಬರಹಗಳ ಲಿಪಿಯು ಏಳನೆಯ ಶತಮಾನದ ಅಕ್ಷರಗಳದ್ದಾಗಿದೆ. ಈ ನಾಣ್ಯವನ್ನು ಶೋಧಿಸಿದ ರಾಮಯ್ಯನವರು ಅದು ಮೊದಲನೆಯ ವಿಕ್ರಮಾದಿತ್ಯನದೆಂದು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀವಿಕ್ರಮ ಎಂದರೆ ಮೊದಲನೆಯ ವಿಕ್ರಮಾದಿತ್ಯನದೇ ಎಂದು ಹೇಗೆ ಹೇಳುವುದು? ಮೊದಲನೆಯ ವಿಕ್ರಮಾದಿತ್ಯನು ಮಹಾನ್ ಅರಸನಾಗಿದ್ದು ೨೬ ವರ್ಷಗಳ ಕಾಲ ರಾಜ್ಯವಾಳಿದ. ಇಮ್ಮಡಿ ವಿಕ್ರಮಾದಿತ್ಯನು ಕೇವಲ ೧೨ ವರ್ಷಗಳ ಕಾಲ ರಾಜ್ಯಭಾರ ಮಾಡಿದ. ಈ ಕಾರಣ ದಿಂದಲೇ ಪ್ರಸ್ತಾಪಿತ ನಾಣ್ಯವು ಮೊದಲನೆಯ ವಿಕ್ರಮಾದಿತ್ಯನದೆಂದು ರಾಮಯ್ಯ ಪ್ರತಿಪಾದಿಸಿದ್ದಾರೆ. ಇದು ಸಂಭಾವ್ಯವನ್ನು ಸೂಚಿಸುತ್ತದೆ ಅಷ್ಟೇ. ಆದರೆ ನಾಣ್ಯವು ಸಿಗುವಾಗ ಸುದೀರ್ಘ ಕಾಲ ರಾಜ್ಯವಾಳಿದ ರಾಜನದೇ ಸಿಗಬೇಕೆಂಬ ನಿಯಮವಿಲ್ಲ. ೩೭ ವರ್ಷ ಸಿಂಹಾಸನಾರೂಢನಾಗಿದ್ದ ವಿಜಯಾದಿತ್ಯನ ನಾಣ್ಯವಾದರೂ ಎಲ್ಲಿ ಸಿಕ್ಕಿದೆ?

ಪ್ರಸ್ತುತ ಚಿನ್ನದ ನಾಣ್ಯವು ೧೧೭ ಗ್ರೇನುಗಳ ತೂಕದ್ದು ಎಂದು ಹಿಂದೆ ಹೇಳಲಾಯಿತು. ಮೂಲತಃ ಅದು ೧೨೦ ಗ್ರೇನುಗಳದ್ದಾಗಿರಬಹುದು. ಗುಪ್ತರ ನಾಣ್ಯಗಳು ೧೨೦ ಗ್ರೇನುಗಳಷ್ಟು ಇದ್ದುದನ್ನು ಗಮನಿಸಿದಾಗ ಪ್ರಾಯಶಃ ಗುಪ್ತರ ಮಾನವನ್ನೇ ವಿಕ್ರಮಾದಿತ್ಯನು ಅನುಸರಿಸಿದಂತೆ ತೋರುತ್ತದೆ.

ಬೆಳ್ಳಿಯ ನಾಣ್ಯ

ಇತ್ತೀಚೆಗೆ ಚಲುಕ್ಯರ ಕಾಲದ ಬೆಳ್ಳಿಯ ನಾಣ್ಯವೊಂದನ್ನು ಶ್ರೀನಿವಾಸ ಪಾಡಿಗಾರ ಗುರುತಿಸಿದ್ದಾರೆ. ಈ ನಾಣ್ಯದ ವಿವರವನ್ನು ಅವರು ಹೀಗೆ ಕೊಟ್ಟಿದ್ದಾರೆ.[20] ಈ ಬೆಳ್ಳಿಯ ನಾಣ್ಯವು ಬಿಜಾಪುರ ಜಿಲ್ಲೆಯ ಕೋಳೂರೂ ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ದೊರೆತಿದೆ. ನಾಣ್ಯವು ಸಮ ತ್ರಿಜ್ಯದ ವೃತ್ತವಾಗಿಲ್ಲ. ಅದರ ಸರಾಸರಿ ವ್ಯಾಸ ೧.೯ಸೆಂ.ಮೀ. ಆಗಿದೆ. ಅದರ ತೂಕ ೪.೧೫ ಗ್ರಾಂ. ಇದೆ. ಮುಮ್ಮುಖದಲ್ಲಿ ಬಲ ಮುಂಗಾಲನ್ನು ಎತ್ತಿದ ಸುತ್ತಿದ ಬಾಲುಳ್ಳ ಗರ್ಜಿಸುವ ಸಿಂಹವಿದೆ. ಸುತ್ತಲೂ ಬಿಂದುಗಳಿಂದಾದ ವೃತ್ತವಿದೆ. ಹಿಮ್ಮುಖದಲ್ಲಿ ಶಂಖವಿದೆ. ಎಡ ಬಲಗಳಲ್ಲಿ ದೀಪದ ಸಮೆಗಳಿವೆ. ಈ ಎರಡೂ ದೀಪದ ಸಮೆಗಳ ಮೇಲ್ಭಾಗದಲ್ಲಿ ಶಂಖದ ಮೇಲೆ, ಅರ‌್ಧ ವೃತ್ತಾಕಾರದ ವಿನ್ಯಾಸದಲ್ಲಿ ಶ್ರೀಪ್ರಿಥಿವಿ ಎಂಬ ೬-೭ ಶತಮಾನದ ಕನ್ನಡ ತೆಲುಗು ಅ೭ರಗಳ ಬರಹವಿದೆ. ಈ ನಾಣ್ಯವು ವಿಷ್ಣುಕುಂಡಿನ ನಾಣ್ಯಗಳನ್ನು ಹೋಲುತ್ತದೆ. ಶ್ರೀ ಪ್ರಿಥಿವೀ ಎಂಬ ಬರಹ, ಆ ಬರಹದ ಲಿಪಿ ವಿನ್ಯಾಸ. ಶಂಖ, ಸಿಂಹ ಮತ್ತು ನಾಣ್ಯ ದೊರೆತ ಸ್ಥಳವನ್ನಾಧರಿಸಿ ಶ್ರೀನಿವಾಸ ಪಾಡಿಗಾರ ಈ ನಾಣ್ಯವು ಚಾಲುಕ್ಯ ದೊರೆ ಮೊದಲನೆಯ ಪೊಲೆಕೇಶಿಯದೆಂದು ತರ್ಕಿಸಿದ್ದಾರೆ. ಇಮ್ಮಡಿ ಪೊಲೆಕೇಶಿಯ ಸಹೋದರನಾದ ವಿಷ್ಣುವರ್ಧನನ ಕಾಲದ ಬೆಳ್ಳಿಯ ನಾಣ್ಯಗಳು ದೊರೆತಿವೆ. ಆತ ವೆಂಗಿ ಮಂಡಲದ ದೊರೆಯಾಗಿ ಹೊರಡಿಸಿದ ನಾಣ್ಯಗಳಿವು. ಇವುಗಳ ಮುಮ್ಮುಖದಲ್ಲಿ ವಿಷಮ ಸಿದ್ದಿ ಎಂಬ ಬರಹವಿದೆ. ಹಿಮ್ಮುಖದಲ್ಲಿ ತ್ರಿಶೂಲವಿದ್ದು ಅದರ ಎಡಬಲಗಳಲ್ಲಿ ದೀಪದ ಸಮೆಗಳಿವೆ.[21]

ಮಿಶ್ರ ಲೋಹದ ನಾಣ್ಯ

ಈ ಮೇಲೆ ಚರ್ಚಿಸಲಾದ ಚಿನ್ನದ ನಾಣ್ಯವಲ್ಲದೆ ಎಸ್.ರಾಮಯ್ಯನವರು ಚಲುಕ್ಯರ ಕಾಲದ ಮಿಶ್ರಲೋಹದ ಮೂರು ನಾಣ್ಯಗಳನ್ನು ಶೋಧಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿ ಈ ಮಿಶ್ರ ಲೋಹದ ಘಟಕಗಳಾಗಿದ್ದು ಕ್ರಮವಾಗಿ ಶೇ. ೩೦ ಮತ್ತು ೭೦ ಪ್ರಮಾಣದಲ್ಲಿವೆ. ವೃತ್ತಾಕಾರದ ಈ ನಾಣ್ಯಗಳ ವ್ಯಾಸ ೦.೭೬ ಆಗಿದೆ.

ಈ ನಾಣ್ಯಗಳ ಮುಮ್ಮುಖದಲ್ಲಿ ವರಾಹವಿದ್ದು ಅದು ದಪ್ಪನಾದ ಕಾಲು ಹಾಗೂ ಬಾಲದಿಂದ ಸ್ಪಷ್ಟವಾಗಿದೆ. ಶ್ರೀ ವಿಕ್ರಮರಾಜ ಎಂಬ ಕನ್ನಡ ಬರಹವಿದೆ. ಲಿಪಿ ವಿನ್ಯಾಸವು ಅದು ೭ನೆಯ ಶತಮಾನದ್ದೆಂದು ಸೂಚಿಸುತ್ತದೆ. ಹಿಮ್ಮುಖದಲ್ಲಿ ಪುರುಷನ ಚಿತ್ರವಿದೆ. ಜೊತೆಗೆ ನವಿರುಗರಿಯ ವಿನ್ಯಾಸವಿದೆ ಮತ್ತು ‘ಶ್ರೀ ವಿಕ್ರಮ ಮಹಾರಾಜ’ ಎಂಬ ಬರಹ ಹಿಮ್ಮುಖದಲ್ಲಿಯೂ ಇದೆ. ಈ ಹಿಂದೆ ಗಮನಿಸಲಾದ ಚಿನ್ನದ ನಾಣ್ಯವು ಇದೇ ಬಗೆಯದಾಗಿದ್ದು ಅದರ ಮೇಲೆ ಮಹಾರಾಜ ಎಂಬ ಬರಹವಿರಲಿಲ್ಲ. ಚಿನ್ನದ ಹಾಗೂ ಮಿಶ್ರ ಲೋಹದ ಈ ನಾಣ್ಯಗಳ ಸಾಮ್ಯದಿಂದ ಅವು ಮೊದಲನೆಯ ವಿಕ್ರಮಾದಿತ್ಯನ ನಾಣ್ಯಗಳೆಂದು ತಿಳಿಯಬಹುದು.

ಇತರ ನಾಣ್ಯಗಳು

ಉಚ್ಚ ತರಗತಿಯದಲ್ಲದ ಲೋಹದಿಂದ ತಯಾರಾದ ಎರಡು ನಾಣ್ಯಗಳನ್ನು ಚಲುಕ್ಯರವು ಎಂದು ಎಂ.ಎಚ್.ಕೃಷ್ಣ ಅವರು ಗುರುತಿಸಿದ್ದಾರೆ. ಈ ಎರಡರಲ್ಲಿ ಒಂದು ನಾಣ್ಯವು ಒಂದನೆಯ ಪೊಲೆಕೇಶಿಯದೆಂದು ಊಹಿಸಲಾಗಿದೆ. ಇದು ಎರಕದಿಂದ ತಯಾರಾದುದು. ೫೭.೨ ಗ್ರೇನುಗಳ ಈ ನಾಣ್ಯದ ವ್ಯಾಸ ೦.೫೫. ನಾಣ್ಯದ ಮುಮ್ಮುಖದಲ್ಲಿ ವರಾಹವಿದೆ. ಜೊತೆಗೆ ಸೂರ್ಯ-ಚಂದ್ರರ ಆಕೃತಿಗಳಿವೆ. ಹಿಮ್ಮುಖದಲ್ಲಿ ಎಂಟು ದಳಗಳ ದೊಡ್ಡ ಕಮಲವಿದೆ. ಕಮಲವು ಬನವಾಸಿ ಕದಂಬರ ಚಿಹ್ನೆಯಾಗಿದ್ದು ಅವರನ್ನು ಜಯಸಿದುದರ ಸಂಕೇತವಾಗಿ ಇದನ್ನು ನಾಣ್ಯದಲ್ಲಿ ಬಳಸಿರಬಹುದೆಂಬ ಅಭಿಪ್ರಾಯ ಕೃಷ್ಣ ಅವರದು.

ಇನ್ನೊಂದು ನಾಣ್ಯವು ೫೭.೨ ಗ್ರೇನು ತೂಕದ್ದಿದ್ದು ಬಟ್ಟಲಾಕಾರವಾಗಿದೆ. ಮುಮ್ಮುಖದಲ್ಲಿ ವರಾಹವಿದೆ. ಮೇಲ್ಭಾಗದಲ್ಲಿ ಕಮಲವಿದೆ. ಜೊತೆಗೆ ಶ್ರೀ ಎಂಬ ಕನ್ನಡ ಅಕ್ಷರ. ಅಷ್ಟದಳ ಕಮಲ. ಶಂಖ ಮತ್ತು ಬಾಣ ಇವೆ. ಎಂ.ಎಚ್.ಕೃಷ್ಣ ಅವರು ಇದು ಚಲುಕ್ಯರ ಸಾಮಂತರಾದ ಯಾದವರದ್ದಾಗಿರಬಹುದೆಂದು ಊಹಿಸಿದರೆ ಎ.ವಿ. ನರಸಿಂಹಮೂರ್ತಿಯವರು ಅದು ಕಲ್ಯಾಣ ಚಾಲುಕ್ಯರದ್ದೆಂದು ಭಾವಿಸುತ್ತಾರೆ.[22] ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಾದು.

ನಾಣ್ಯಗಳ ಮುದ್ರಣ ಶೈಲಿಯನ್ನಾಧರಿಸಿ ಎಲಿಯಟ್ ಅವರು ಕೆಲವು ನಾಣ್ಯಗಳನ್ನು ಚಲುಕ್ಯರವು ಎಂದು ಊಹಿಸುತ್ತಾರೆ. ಅವೆಲ್ಲವುಗಳ ಮೇಲೆ ವರಾಹದ ಆಕೃತಿಯಿರುವುದೇ ಈ ಊಹೆಗೆ ಕಾರಣವಾಗಿದೆ.

ಇವುಗಳಲ್ಲದೆ ಇತ್ತೀಚೆಗೆ ಚಾಲುಕ್ಯರ ಎರಡು ಬಗೆಯ ನಾಣ್ಯಗಳು ಪ್ರಕಾಶಕ್ಕೆ ಬಂದಿವೆ. ಒಂದನೆಯ ಪ್ರಕಾರದ ನಾಣ್ಯಗಳು ಎಲಿಫಂಟಾದಲ್ಲಿ ದೊರೆತಿವೆ.[23] ಇವು ತಾಮ್ರದ ನಾಣ್ಯಗಳು; ಆಯತಾಕಾರದ್ದಾಗಿವೆ. ಮುಮ್ಮುಖದಲ್ಲಿ ಆರನೆಯ ಶತಮಾನದ ಕನ್ನಡ ಬರಹವು. ಎರಡು ಸಾಲುಗಳಲ್ಲಿ ‘ಶ್ರೀ ಸತ್ಯಾಶ್ರಯ’ ಎಂದಿದೆ. ಸತ್ಯಾಶ್ರಯ ಎಂಬುದು ಒಂದನೆಯ ಪೊಲೆಕೇಶಿ. ಮಂಗಲೇಶ, ಇಮ್ಮಡಿ ಪೊಲೆಕೇಶಿ ಇವರ ಬಿರುದಾಗಿತ್ತು. ಇವರಲ್ಲಿ ಇಮ್ಮಡಿ ಪೊಲೆಕೇಶಿಯು ಕೊಂಕಣದ ಮೌರ್ಯರನ್ನು ಸೋಲಿಸಿ ಪುರಿ (ಎಲಿಫೆಂಟಾ) ದ್ವೀಪವನ್ನು ವಶಪಡಿಸಿಕೊಂಡ ನಂತರ ಈ ದ್ವೀಪಕ್ಕೆ ಚಲುಕ್ಯರ ಸಂಪರ್ಕ ಬಂದಿರುವುದರಿಂದ ಮತ್ತು ಈ ನಾಣ್ಯಗಳು ಎಲಿಫಂಟಾದಲ್ಲಿ ದೊರೆತದ್ದರಿಂದ ಅದರ ಮೇಲಿನ ಸತ್ಯಾಶ್ರಯ ಬಿರುದು ಇಮ್ಮಡಿ ಪೊಲೆಕೇಶಿಯನ್ನು ಸೂಚಿಸುತ್ತಿರಬೇಕು.

ಈ ನಾಣ್ಯದ ಹಿಮ್ಮುಖದಲ್ಲಿ ವರಾಹವಿರದೆ ನಂದಿಯ ಆಕೃತಿ ಇರುವುದು ಕುತೂಹಲಕಾರಿ. ಬಹುಶಃ ಚಿನ್ನದ ನಾಣ್ಯಗಳಿಗೆ ವರಾಹವನ್ನು. ತಾಮ್ರದ ನಾಣ್ಯಗಳಿಗೆ ನಂದಿಯನ್ನು ಬಳಸಿದಂತೆ ತೋರುತ್ತದೆ. ಒಂದನೆಯ ವಿಕ್ರಮಾದಿತ್ಯನ ಕಾಲದಿಂದ ಚಲುಕ್ಯರು ಶೈವ ಮತಾವಲಂಬಿಗಳಾದುದರಿಂದ ನಂದಿಯನ್ನು ತೋರಿಸುವ ರೂಢಿ ಬಳಕೆಗೆ ಬಂದಿರಬಹುದು.

ಇನ್ನೊಂದು ಬಗೆಯ ನಾಣ್ಯವು ಸೀಸದ ಮಿಶ್ರಲೋಹದ್ದಾಗಿದೆ.[24] ನಾಣ್ಯದ ವ್ಯಾಸ ೧.೮ ಸೆಂ.ಮೀ. ಮತ್ತು ತೂಕ ೪ ಗ್ರಾಂ ಇದೆ. ಮುಮ್ಮುಖದಲ್ಲಿ ಬಲಕ್ಕೆ ಮುಖ ಮಾಡಿದ ನಂದಿ ಚಿತ್ರವಿದೆ. ಹಿಮ್ಮುಖದಲ್ಲಿ ಕುಂಭ ಮತ್ತು ಎರಡು ದೀಪದ ಸಮೆಗಳಿವೆ ಹಾಗೂ ಎರಡು ಸಾಲಿನ ‘ಶ್ರೀ ಕಿೃತರಾಜ’ ಎಂಬ ಬರಹವಿದೆ. ಇದು ಕೀರ್ತಿರಾಜನನ್ನು ಸೂಚಿಸುತ್ತಿರಬೇಕು. ಅಂದರೆ ಅದು ಕೀರ್ತಿವರ್ಮನ ನಾಣ್ಯವಾಗಿರಬೇಕು. ಇಬ್ಬರು ಕೀರ್ತಿವರ್ಮರಲ್ಲಿ ಯಾರದೀ ನಾಣ್ಯ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಈ ನಾಣ್ಯದ ಮೇಲೆ ವರಾಹ ಮುದ್ರೆ ಇಲ್ಲದಿರುವುದೊಂದು ವಿಶೇಷ.

ಚಲುಕ್ಯರ ಶಾಸನಗಳು ಗದ್ಯಾಣ, ಸುವರ್ಣ, ಧರಣ, ನವಿಲಪೊನ್, ಪಣ, ವಿಸ ಮೊದಲಾದ ನಾಣ್ಯಗಳನ್ನು  ಹೆಸರಿಸಿವೆ. ಐಹೊಳೆಯ ಲಾಡಖಾನ ಗುಡಿ ಶಾಸನವೊಂದರಲ್ಲಿ[25] ಗದ್ಯಣ ಗದ್ಯಾಣ ಪ್ರಸ್ತಾವಿತವಾಗಿದೆ. ಮೂವತ್ತು ನಿವರ್ತನ ಭೂಮಿಯನ್ನು ಮೂವತ್ತು ಗದ್ಯಾಣಗಳಿಗೆ ಕೊಂಡು ಜ್ಞಾನ ಶಿವಾಚಾರ್ಯನು ಪಟ್ಟದಕಲ್ಲಿನ ವಿಜಯೇಶ್ವರ ದೇವಾಲಯದ ಪೂಜಾವಿಧಿಗಳಿಗಾಗಿಕೊಟ್ಟನೆಂಬುದು ತಿಳಿದು ಬರುತ್ತದೆ.[26] ಇದರಿಂದ ಗದ್ಯಾಣದ ಆರ್ಥಿಕ ಮೌಲ್ಯ ಅರ್ಥವಾಗುತ್ತದೆ. ಬಿಜೇಶ್ವರಕ್ಕೆ ಮಾಡಿಕೊಟ್ಟ ಪೊನ್ನು ಅಯ್ವತ್ತೊಂದು ಗದ್ಯಾಣ ಎಂದಿರುವುದರಿಂದ ಗದ್ಯಾಣವು ಬಂಗಾರದ ನಾಣ್ಯವೆಂದು ಗೊತ್ತಾಗುತ್ತದೆ. ಸುವರ್ಣ ಎಂಬ ನಾಣ್ಯವು ಎರಡು ಶಾಸನಗಳಲ್ಲಿ ಕಾಣಿಸಿಕೊಂಡಿದೆ.[27] ಇದು ಗದ್ಯಾಣ ಎಂದಿರುವುದರಿಂದ ಗದ್ಯಾಣವು ಬಂಗಾರದ ನಾಣ್ಯವೆಂದು ಗೊತ್ತಾಗುತ್ತದೆ. ಸುವರ್ಣ ಎಂಬ ನಾಣ್ಯವು ಎರಡು ಶಾಸನಗಳಲ್ಲಿ ಕಾಣಿಸಿಕೊಂಡಿದೆ.[28] ಇದು ಗದ್ಯಾಣದ ಮೌಲ್ಯವನ್ನು ಹೊಂದಿದೆ. ಐಹೊಳೆಯ ಇನೊಂದು ಶಾಸನವು[29] ಧರಣಿ ಎಂಬ ನಾಣ್ಯವನ್ನು ಹೆಸರಿಸಿದೆ. ಇದು ಗದ್ಯಾಣದ ಕಾಲು ಭಾಗ ಮೌಲ್ಯವುಳ್ಳದ್ದು. ಇಮ್ಮಡಿ ಪುಲೆಕೇಶಿಯ ಕುರುಗೋಡು ಶಾಸನದಲ್ಲಿ[30] ನವಿಲಪೊನ್ ಎಂಬ ಚಿನ್ನದ ನಾಣ್ಯದ ಉಲ್ಲೇಖವಿದೆ. ಇದು ನವಿಲಿನ ಗುರುತನ್ನು ಹೊಂದಿದ್ದು ಕಾರ್ತಿಕೇಯನ ಪೂಜೆಗಿರುವ ಪ್ರಾಶಸ್ಯವನ್ನು ವ್ಯಕ್ತಪಡಿಸುತ್ತದೆ. ಲಕ್ಷೇಶ್ವರದ ಶಾಸನ[31] ವೊಂದರಲ್ಲಿ ಪಣ ಪ್ರಸ್ತಾಪಗೊಂಡಿದೆ. ಇದು ಗದ್ಯಾಣದ ಹತ್ತರಲ್ಲಿ ಒಂದಂಶ ಮೌಲ್ಯದ್ದು. ಐಹೊಳೆಯ ದುರ್ಗಗುಡಿಯ ಒಂದು ಶಾಸನದಲ್ಲಿ[32] ವೀಸ ನಾಣ್ಯವನ್ನು ಹೆಸರಿಸಲಾಗಿದೆ. ವೀಸವು ಪಣದ ಹದಿನಾರರ ಒಂದಂಶ ಬೆಲೆಯುಳ್ಳದ್ದು. ಇವೆಲ್ಲ ಶಾಸನಗಳ ಮೂಲಕ ತಿಳಿದು ಬರುವ ನಾಣ್ಯಗಳು.

ಬಾದಾಮಿಯು ರಾಷ್ಟ್ರಕೂಟರ ಆಡಳಿತಕ್ಕೆ ಒಳಪಟ್ಟಿದ್ದರೂ ಬಾದಾಮಿಯ ಪರಿಸರದಲ್ಲಿ ರಾಷ್ಟ್ರಕೂಟರ ನಾಣ್ಯಗಳು ದೊರೆತಿಲ್ಲ. ಅವರ ನಾಣ್ಯಗಳನ್ನು ಪ್ರಸ್ತಾಪಿಸುವ ಶಾಸನಗಳೂ ಬಾದಾಮಿಯಲ್ಲಿ ಕಂಡುಬಂದಿರುವುದಿಲ್ಲ. ಆದರೆ ಕಲ್ಯಾಣ ಚಾಲುಕ್ಯರ ಕಾಲದ ಕೆಲವು ಶಾಸನಗಳು ಬಾದಾಮಿಯ ಎಡಬಲಗಳಲ್ಲಿದ್ದು ಅವು ಈ ಭಾಗದಲ್ಲಿ ಅಂದು ಪ್ರಚಲಿತವಿದ್ದ ನಾಣ್ಯಗಳನ್ನು ಪರಿಚಯಿಸುತ್ತವೆ. ಬಾದಾಮಿಯ ಎಲ್ಲಮ್ಮ ದೇವಾಲಯ ಪ್ರಾಕಾರದಲ್ಲಿದ್ದ ಶಾಸನದಲ್ಲಿ[33] ದಂಡನಾಯಕರು ಹತ್ತು ಗದ್ಯಾಣಗಳ ವಾರ್ಷಿಕ ಅನುದಾನವನ್ನು ನೀಡಿದುದು ವ್ಯಕ್ತವಾಗಿದೆ. ಇದು ಇಮ್ಮಡಿ ಜಗದೇಕಮಲ್ಲನ ಕಾಲದ ಶಾಸನವಾಗಿದೆ. ಐಹೊಳೆಯ ದುರ್ಗ ಗುಡಿ ಬಾವಿಯ ಶಿಲಾಶಾಸನವು ಚಲುಕ್ಯ ಭುವನಯ್ಕಮಲ್ಲನು ಆಳುತ್ತಿದ್ದಾಗ ಆತನ ಮಗ ನೀಡಿದ ದಾನದಲ್ಲಿ ಗದ್ಯಣ, ಪಣ, ಹಾಗ ಎಂಬು ನಾಣ್ಯಗಳು ಉಲ್ಲೇಖಗೊಂಡಿವೆ.[34]

ಕ್ರಿ.ಶ.೧೩೪೦ರ ವೇಳೆಗೆ ಬಾದಾಮಿಯು ವಿಜಯನಗರದ ಅರಸು ಹರಿಹರನ ಆಡಳಿತಕ್ಕೆ ಒಳಪಟ್ಟಿತ್ತೆಂದು ಶಾಸನದಿಂದ ಸ್ಪಷ್ಟವಿದೆ.[35] ಒಂದನೆಯ ಹರಿಹರ ಹಾಗೂ ಒಂದನೆಯ ಬುಕ್ಕ ಕನ್ನಡ ಅಕ್ಷರಗಳನ್ನು ತಮ್ಮ ನಾಣ್ಯಗಳ ಮೇಲೆ ಬರೆಯಿಸಿದ್ದಾರೆ. ಗದ್ಯಾಣವು ಬಂಗಾರದ ನಾಣ್ಯವಾಗಿತ್ತು. ಇದನ್ನು ವರಾಹ ಎಂದೂ ಕರೆಯುತ್ತಿದ್ದರು. ಪ್ರತಾಪ, ಕಾಟಿ, ಪಣ, ಹಾಗ ಎಂಬ ನಾಣ್ಯಗಳೂ ಚಿನ್ನದ ನಾಣ್ಯಗಳೇ ಆಗಿದ್ದವು. ಇವರ ಬೆಳ್ಳಿಯ ನಾಣ್ಯಕ್ಕೆ ತಾರ ಎನ್ನುತ್ತಿದ್ದರು. ತಾಮ್ರದ ನಾಣ್ಯಗಳಿಗೆ ಜಿತಲ್, ಕಾಸು ಎಂಬ ಹೆಸರುಗಳಿದ್ದವು. ವಿಜಯನಗರದ ನಾಣ್ಯಗಳು ಮುಂದಿನ ಅರಸುಮನೆತನಗಳ ನಾಣ್ಯಗಳಿಗೆ ಬುನಾದಿ ಎನಿಸಿವೆ


[1]     IA, X,pp. ೧೬೪-೫.

[2]     IA, VII, ೨೮೬.

[3]     EHD, p. ೨೩೮.

[4]     IA, XIX, p.೩೦೯.

[5]     EI, IX, ೧೨, pp. ೯೮-೧೦೨.

[6]     IA, XIX, ೧೮೭.

[7]     IA, VI, ೭೩.

[8]     EHD, p. ೨೩೮.

[9]     IA, XIX, p. ೧೪೪.

[10]    IA, VII, p. ೨೮೭.

[11]    KI, I, ೨.

[12]    IA, VIII, ೨೮೫.

[13]    IA, X, ೧೬೭.

[14]    SII, IX (i), ೪೭.

[15]    EHD, p. ೨೩೮.

[16]    JBBRAS, X, p. ೩೪೮.

[17]     IA, XIX, ೧೪೬.

[18]    IA, VI, p. ೭೨.

[19]    Desai P.B., (Ed.), ೧೯೭೦, A History of Karnataka, Dharwad, P. ೧೩.

[20]    Padigar Srinivas, ೧೯೯೫, A Unique Silvercoin of the Chalukyas of Vatapi Vishvambhara (Ed.), Ajaya Mitra Sastri, Harman Publishing, Delhi, pp. ೨೦೮-೨೧೫.

[21]    ಅಣ್ಣಿಗೇರಿ ಎ.ಎಂ., ೧೯೭೪:ಭಾರತದ ಪ್ರಾಚೀನ ನಾಣ್ಯಗಳು, ಧಾರವಾಡ ಪು. ೬೦-೬೧.

[22]    Narasimhamurthy A.V., ೧೯೭೮, ‘Coins of the Chalukyas of Badami’, The Chalukyas of Badami, Bangalore, P. ೧೮೯.

[23]    Narasimhamurthy A.V., (Ed.), Studies in South Indian Coins, Vo.l. ೩, pp ೮೯-೯೬.

[24]    JNSI, L, pp. ೩೭-೩೮.

[25]    ಅಣ್ಣಿಗೇರಿ ಎ.ಎಂ., ೧೯೭೪ :ಪೂರ್ವೋಕ್ತ, ಪು. ೧೪೬

[26]    ಗದ್ಯಾಣವು ಲ್ಯಾಟಿನ್ ಭಾಷೆಯ ಗಾರ್ಡಿಯನ್ ಪದದಿಂದ ಬಂದುದೆಂದು ಹೇಳಲಾಗಿದೆ.

[27]    EI.III, p.೧.

[28]    IA, VII, p. ೧೬೨   ಮತ್ತು IA, VIII, p.೪೪.

[29]    IA, VII, p.೨೮೭.

[30]    EI, XXX, pp. ೧೩-೧೭

[31]    EI, XII, ೪೧.

[32]    ಅಣ್ಣಿಗೇರಿ ಎ.ಎಂ., ೧೯೭೪: ಪೂರ್ವೋಕ್ತ, ಪು. ೧೪೯.

[33]    IA, VI, ೩೩ pp. ೧೩೯-೧೪೨.

[34]    ಅಣ್ಣಿಗೇರಿ ಎ.ಎಂ., ೧೯೭೪:ಪೂರ್ವೋಕ್ತ. ಪು. ೧೫೦-೧೫೧

[35]     IA, X, ೮೭.