ಕದಂಬರನ್ನು ಸೋಲಿಸಿದ ಚಾಲುಕ್ಯರು ದಖ್ಖನ್‌ದಲ್ಲಿ ತಮ್ಮದೇಯಾದ ಒಂದು ಸಾಮ್ರಾಜ್ಯವನ್ನು ಕಟ್ಟಿದರು. ಕರ್ನಾಟಕದ ನಾಣ್ಯಪದ್ಧತಿಗೆ ಅವರು ಇತ್ತ ಕೊಡುಗೆ ಬಹಳ ಮಹತ್ವದ್ದು. ವರಾಹವು ಅವರ ರಾಜಲಾಂಛನ. ಆದ್ದರಿಂದ ಅವರು ತಮ್ಮ ನಾಣ್ಯಗಳ ಮೇಲೆ ವರಾಹವನ್ನು ಮುದ್ರಿಸುತ್ತಿದ್ದರು. ಆದ್ದರಿಂದಲೆ, ನಾಣ್ಯಗಳನ್ನು ವರಹಾಗಳು ಎಂದು ಕರೆಯುವ ಪದ್ಧತಿ ಬೆಳೆದುಬಂದಿತು. ಇವು ದೇಶಾದ್ಯಂತ ಬಳಕೆಯಲ್ಲಿ ಬಂದವು. ಅನಂತರ ವರಹಕ್ಕೆ (೫೬ರಿಂದ ೬೦ ಗ್ರೇನಿನಷ್ಟಿದೆ) ಬಂಗಾರದ ನಾಣ್ಯ ಎಂಬ ಅರ್ಥ ಬಂದಿತು. ಆ ನಾಣ್ಯದ ಮೇಲೆ ವರಾಹಮುದ್ರೆ ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ, ಅದನ್ನು ವರಹಾ ಎಂದೇ ಕರೆಯುತ್ತಿದ್ದರು.

ಚಾಲುಕ್ಯರ ಶಾಸನಗಳಲ್ಲಿ ನಾಣ್ಯಗಳನ್ನು ಗದ್ಯಾಣ, ಸುವರ್ಣ, ಧರಣ, ಪಣ, ಪಲ ಮತ್ತು ವಿಸ ಎಂದು ಕರೆಯಲಾಗಿದೆ. ಆದರೆ ಚಾಲುಕ್ಯರ ಶಾಸನಗಳಲ್ಲಿ ಗದ್ಯಾಣವನ್ನು ಅನೇಕ ಬಾರಿ ಮೇಲಿಂದ ಮೇಲೆ ಉಲ್ಲೇಖಿಸಲಾಗಿದೆ. ಬಹುಶಃ ಅವರ ಎಲ್ಲ ಬಗೆಯ ನಾಣ್ಯಗಳಲ್ಲಿ ಗದ್ಯಾಣವು ಹೆಚ್ಚು ಚಲಾವಣೆಯಲ್ಲಿ ಇದ್ದಂಥ ನಾಣ್ಯವಾಗಿರಬಹುದು. ಐಹೊಳೆ ಲಾಡಖಾನ ದೇವಸ್ಥಾನದ ಚಾಲುಕ್ಯರ ಶಾಸನವೊಂದರಲ್ಲಿ ‘ಗದ್ಯಾಣ’ ಪದವನ್ನು ಐದು ಬಾರಿ ಹೇಳಲಾಗಿದೆ. ದ್ವಾದಶದ ಆಚರಣೆಗಾಗಿ ಒಂದು ಸಾವಿರದ ಒಂದುನೂರ ಹದಿನೆರಡು ಗದ್ಯಾಣವೆಂದರೆ ಒಂದು ಬಂಗಾರದ ನಾಣ್ಯ. ಪಟ್ಟದಕಲ್ಲಿನಲ್ಲಿಯ ಇನ್ನೊಂದು ಶಾಸನದಲ್ಲಿ ಭೂವ್ಯವಹಾರವೊಂದನ್ನು ಉಲ್ಲೇಖಿಸುತ್ತ ಮೂವತ್ತು ನಿವರ್ತನಗಳಷ್ಟು ಭೂಮಿಯನ್ನು ೩೦ ಗದ್ಯಾಣಗಳಿಗೆ ಖರೀದಿಸಿದ್ದನ್ನು ಹೇಳಿದೆ. ಈ ಉಲ್ಲೇಖಗಳು ಗದ್ಯಾಣ ಅತ್ಯಂತ ಚಲಾವಣೆಯಲ್ಲಿ ಇದ್ದ ನಾಣ್ಯವಾಗಿತ್ತೆಂಬುದನ್ನು ತೋರಿಸಿಕೊಡುತ್ತವೆ.

‘ಸುವರ್ಣ’ ನಾಣ್ಯದ ಉಲ್ಲೇಖ ಎರಡು ಶಾಸನಗಳಲ್ಲಿ ಬಂದಿದೆ. ಇದು ಉತ್ತರಭಾರತದಲ್ಲಿ ಮೌರ್ಯ ಮತ್ತು ಗುಪ್ತರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯದ ಹೆಸರಾಗಿದೆ. ಅದು ಗದ್ಯಾಣದಷ್ಟೆ ತೂಕ ಮತ್ತು ಮೌಲ್ಯವನ್ನು ಹೊಂದಿತ್ತು. ಆದರೆ ಕರ್ನಾಟಕವನ್ನೊಳಗೊಂಡು ದಕ್ಷಿಣ ಭಾರತದಲ್ಲಿ ಈ ನಾಣ್ಯ ಅಷ್ಟಾಗಿ ಬಳಕೆಯಲ್ಲಿ ಇದ್ದಿರಲಿಲ್ಲ. ಆದರೂ ಈ ನಾಣ್ಯದ ಉಲ್ಲೇಖ ಕೆಲವೆಡೆ ಅಲ್ಲಲ್ಲಿ ಬರುತ್ತದೆ. ಐಹೊಳೆಯ ಶಾಸನವೊಂದರಲ್ಲಿ ‘ಧರಣ’ ನಾಣ್ಯವನ್ನು ಹೆಸರಿಸಲಾಗಿದೆ. ರಾಷ್ಟ್ರಕೂಟ ಶಾಸನಗಳಲ್ಲಿ ಧರಣವು ಬಂಗಾರದ ನಾಣ್ಯವೆಂದು ಹೇಳಿದೆ. ಅವರ ಮೌಲ್ಯವು ಗದ್ಯಾಣದ ಅಥವಾ ಹೊನ್ನಿನ ನಾಲ್ಕರಲ್ಲಿ ಒಂದರಷ್ಟು ಇದ್ದಿತು. ಎರಡನೇ ಪುಲಕೇಶಿಯ ಕಟ್ಟೆಬಂದರೆ ಶಾಸನದಲ್ಲಿ ‘ನವಿಲಪೊನ್ನು’ ಎಂಬ ಒಂದು ನಾಣ್ಯದ ಉಲ್ಲೇಖವಿದೆ. ಈ ನಾಣ್ಯ ನವಿಲಿನ ಚಿಹ್ನೆಯನ್ನು ಹೊಂದಿತ್ತು ಎಂಬುದು ಸ್ಪಷ್ಟ. ನವಿಲು ಕಾರ್ತಿಕೇಯನ ವಾಹನ. ಕಾರ್ತಿಕೇಯನ ಚಾಲುಕ್ಯರು ಅತ್ಯಂತವಾದ ಭಕ್ತಿಭಾವವನ್ನು ಹೊಂದಿದ್ದನ್ನು ಅವರ ಬಿರುದುಗಳು ತೋರಿಸಿಕೊಡುತ್ತವೆ. ಆದ್ದರಿಂದ ನವಿಲಿನ ಚಿಹ್ನೆಯುಳ್ಳ ನಾಣ್ಯಗಳನ್ನು ಮುದ್ರಿಸುತ್ತಿದ್ದರು. ಆದರೆ ಇಂತಹ ನಾಣ್ಯಗಳ ಶೋಧ ನಡೆಯಬೇಕಾಗಿದೆ.

ಚಾಲುಕ್ಯರು ಶಾಸನಗಳಲ್ಲಿ ‘ಪಣ’ ಎಂಬ ನಾಣ್ಯದ ಉಲ್ಲೇಖವು ಬರುತ್ತದೆ. ಉದಾ: ಎರಡನೇ ವಿಕ್ರಮಾದಿತ್ಯನ ಲಕ್ಷ್ಮೇಶ್ವರ ಶಾಸನ. ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ‘ಪಣ’ವು ಬಂಗಾರ ನಾಣ್ಯವಾಗಿತ್ತು ಎಂದು ಹೇಳಿದೆ. ‘ಪಣ’ವನ್ನು ‘ಹಣ’ ಎಂದು ಕರೆಯುತ್ತಿದ್ದರು. ಹತ್ತು ಪಣಗಳಿಂದ ಒಂದು ಗದ್ಯಾಣವಾಗುತ್ತಿತ್ತು. ಹೊಯ್ಸಳರ ಹಾಗೂ ದೇವಗಿರಿಯ ಸೇವುಣರ ಶಾಸನಗಳಲ್ಲಿಯೂ ಪಣಕ್ಕೆ ಇದೇ ಮೌಲ್ಯವನ್ನು ಆಕರಿಸಲಾಗಿದೆ. ಈ ಕಾಲಗಳಲ್ಲಿ ಪಣದ ತೂಕ ೫ ರಿಂದ ೬ ಗ್ರೇನುಗಳಷ್ಟು ಇರುತ್ತಿತ್ತು. ಇದನ್ನೆ ಪ್ರಮಾಣವಾಗಿ ತೆಗೆದುಕೊಂಡರೆ ಬಾದಾಮಿ ಚಾಲುಕ್ಯರ ಕಾಲದಲ್ಲಿಯೂ ಪಣವು ಇದೇ ಮೌಲ್ಯವನ್ನು ಹೊಂದಿತ್ತು ಎಂದು ಹೇಳಬಹುದು.

ಎರಡನೇ ವಿಕ್ರಮಾದಿತ್ಯನ ಲಕ್ಷ್ಮೇಶ್ವರದ ಶಾಸನದಲ್ಲಿ ‘ಪಲ’ ಎಂಬ ನಾಣ್ಯವನ್ನು ಹೆಸರಿಸಲಾಗಿದೆ. ಇದರ ಮೌಲ್ಯ ಎಷ್ಟಿತ್ತು ಎಂಬುದನ್ನು ಹೇಳುವುದು ಕಠಿಣ. ಹೊಯ್ಸಳರ ಕಾಲದಲ್ಲಿ ರಚಿತವಾದ ‘ವ್ಯವಹಾರ ಗಣಿತ’ ಎಂಬ ಗ್ರಂಥದಲ್ಲಿ ಒಂದು ಪಲ ಅಂದರೆ ಒಂದು ಕರ್ಪಸ್ ಎಂದು ಹೇಳಿದೆ.

ಐಹೊಳೆ ದುರ್ಗಾ ದೇವಸ್ಥಾನ ಶಾಸನದಲ್ಲಿ ‘ಎಸ’ ಎಂಬ ನಾಣ್ಯದ ಹೆಸರು ಬರುತ್ತದೆ. ಅದು ಒಂದು ತೆರಿಗೆಯ ಸಂಗತಿಯನ್ನು ಹೇಳುವ ಸಂದರ್ಭದಲ್ಲಿ ಉಕ್ತವಾಗಿದೆ. ಒಂದು ಬಂಡಿಯ ಭಾರಕ್ಕೆ ೫ ಎಸಗಳಷ್ಟು ತೆರಿಗೆ ಎಂದು ಒಂದರಲ್ಲಿ ಹೇಳಿದೆ. ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರ ಕಾಲದಲ್ಲಿ ಒಂದು ಪಣದ ಮೌಲ್ಯವು ೧೬ ಎಸಗಳಷ್ಟು ಇರುತ್ತಿತ್ತು. ಚಾಲುಕ್ಯರ ಕಾಲದಲ್ಲಿಯೂ ಇದೇ ವಿನಿಮಯ ಬೆಲೆ ಇದ್ದಿರಲು ಸಾಕು.

ಚಾಲುಕ್ಯರ ನಾಣ್ಯಗಳನ್ನು ಆಲೇಖಿತವಾದ ಮತ್ತು ಆಲೇಖಿತವಲ್ಲದ ನಾಣ್ಯಗಳು ಎಂದು ಎರಡು ಆಲೇಖನದ ಕೆತ್ತನೆಯೂ ಇರುವುದಿಲ್ಲ. ವರಾಹ ಲಾಂಛನ ಮಾತ್ರ ಇವೆ. ಆ ನಾಣ್ಯದ ತೂಕ ೬೬ಗ್ರೇನುಗಳಷ್ಟು ಇದೆ. ಈ ಬಗೆಯಾಗಿ ಶೋಧಿತವಾದ ನಾಣ್ಯಗಳಲ್ಲಿಯ ಒಂದು ನಾಣ್ಯದ ಮೇಲ್ಮುಖದ ಮೇಲೆ ಚಕ್ರದ ಲಾಂಛನವಿದ್ದರೆ, ಅದರ ಹಿಂಬದಿಗೆ ವರಾಹ ಚಿತ್ರವಿದೆ. ಇನ್ನೊಂದು ನಾಣ್ಯದಂಚಿನಲ್ಲಿ ಎರಕ ಹೊಯ್ದು ಮಾಡಿದ್ದು, ಒಂದು ನಾಲ್ಕಾಂಶ ಸೆಂ.ಮೀ. ವ್ಯಾಸದಷ್ಟಿದ್ದ ಈ ನಾಣ್ಯವು ೫೬ ಗ್ರೇನು ತೂಕವನ್ನು ಹೊಂದಿದೆ. ಮೇಲ್ಮುಖದಲ್ಲಿ ಅಲಂಕೃತವಾದ ವರಾಹ ಕದಂಬರ ಮೇಲೆ ವಿಜಯ ಸಂಪಾದನೆ ಮಾಡಿದ ಸ್ಮರಣಾರ್ಥವಾಗಿ ಈ ನಾಣ್ಯಗಳನ್ನು ಮುದ್ರಿಸಿದರು ಎಂಬ ಅಭಿಪ್ರಾಯಗಳು ಇವೆ. ಒಂದನೇ ಪುಲಕೇಶಿಯ ಕಂದಬರನ್ನು ಸೋಲಿಸಿದ ಚಾಲುಕ್ಯನಾದ್ದರಿಂದ ಇವು ಪುಲಕೇಶಿಯ ನಾಣ್ಯಗಳು ಆಗಿರಬೇಕು.

ಆಲೇಖಿತವಲ್ಲದ ಚಾಲುಕ್ಯರ ನಾಣ್ಯಗಳಲ್ಲಿ ಕೆಲವುಗಳ ಮೇಲ್ಮುಖದ ಮೇಲೆ ಸಾಲಂಕೃತವಾದ ಶೃಂಗಾರ ಭರಿತವಾದ ವರಾಹ ಚಿಹ್ನೆ ಇದ್ದರೆ, ಅವುಗಳ ಹಿಂಬದಿಗೆ ಪುಷ್ಪ ನಕ್ಷೆಗಳಿವೆ. ಇನ್ನೂ ಕೆಲವು ನಾಣ್ಯಗಳ ಮೇಲ್ಮುಖದಲ್ಲಿ ವರಾಹ ಚಿಹ್ನೆ ಇದ್ದ ಒಂದು ಕಾರಣಕ್ಕಾಗಿ ಅವು ಚಾಲುಕ್ಯರ ನಾಣ್ಯಗಳು ಎಂದು ಕರೆಸಿಕೊಳ್ಳುತ್ತವೆ.

ಆಲೇಖಿತವಾದ ಚಾಲುಕ್ಯರ ನಾಣ್ಯಗಳಲ್ಲಿ ಶೋಧಿತವಾದ ಮೊದಲನೆಯ ನಾಣ್ಯ ಬಂಗಾರದ್ದಿದೆ. ಅದರ ತೂಕ ೧೧೮ ಗ್ರೇನು, ‘ವ್ಯಾಸ ೦.೭೫’ಗಳು. ಅದರ ಮೇಲ್ಮುಖದ ಮೇಲೆ ಬಲದ ದಿಕ್ಕಿಗೆ ಮುಖಮಾಡಿ ನಿಂತ ವರಾಹ ಮತ್ತು ಜ್ಯೋತಿ, ಸೂರ್ಯ-ಚಂದ್ರ ಮತ್ತು ಪುಷ್ಪನಕ,ಎಗಳಿವೆ. ವರಾಹದ ಕೆಳಬದಿಗೆ ‘ಶ್ರೀ ವಿಕ್ರಮ’ ಎಂಬ ಆಲೇಖನವಿದೆ. ಹಿಂಬದಿಗೆ ಒಬ್ಬ ವ್ಯಕ್ತಿಯ ಚಿತ್ರವಿದ್ದು, ಅವನು ಎಡದ ದಿಕ್ಕಿಗೆ ಮುಖಮಾಡಿ ನಿಂತಿದ್ದಾನೆ. ಅವರ ಎದುರಿಗೆ ಹೆಡೆ ಎತ್ತಿದ ಹಾವಿನ ಚಿತ್ರವಿದೆ. ಎಡಕಿನ ತುದಿಗೆ ‘ವಿಕ್ರಮ’ ಎಂಬ ಆಲೇಖನವಿದೆ. ಅದೇ ಬದಿಯ ಮೇಲೆ ಹಾಗೂ ಬಲಕ್ಕೂ ಇದೇ ಆಲೇಖನವನ್ನು ಪುನರುಚ್ಚರಿಸಲಾಗಿದೆ. ಈ ನಾಣ್ಯಗಳು ಚಾಲುಕ್ಯ ಅರಸ ಒಂದನೇ ವಿಕ್ರಮಾದಿತ್ಯನವು ಎಂಬ ಮತುಗಳನ್ನು ಮಂಡಿಸಲಾಗಿದೆ. ಈ ನಾಣ್ಯದ ಹಿಂಬದಿಗೆ ಇದ್ದ ಕೃತಿಯನ್ನು ಕಾರ್ತಿಕೇಯ ಎಂದು ಊಹಿಸಲಾಗಿದೆ. ಏಕೆಂದರೆ ಅಲ್ಲಿ ನವಿಲಿನ ಚಿತ್ರದ ಅಸ್ಪಷ್ಟ ಗುರುತುಗಳು ಇವೆ. ಚಾಲುಕ್ಯರು ಕಾರ್ತಿಕೇಯ ಭಕ್ತರು. ಅದು ಬಂಗಾರದ ನಾಣ್ಯ. ಅದರ ತೂಕ ೧೧೭ಗ್ರೇನು ಎಂಬುದು ಕುತೂಹಲಕ್ಕೆ ಎಡೆ ಮಾಡುತ್ತದೆ. ವಾಸ್ತವದಲ್ಲಿ ಇಷ್ಟೊಂದು ತೂಕದ ನಾಣ್ಯವನ್ನು ಗುಪ್ತವಂಶದ ಅರಸರು ಹೊರಡಿಸುತ್ತಿದ್ದರು. ಚಾಲುಕ್ಯರು ಗುಪ್ತರ ನಂತರ ಬಂದ ಅವರ ಸಮಕಾಲೀನರು. ಅವರು ಈ ತೂಕ ವಿಷಯದಲ್ಲಿ ಗುಪ್ತರನ್ನೆ ಅನುಸರಿಸಿರಬಹುದು.

ಇದೇ ಬಗೆಯ ಇನ್ನೂ ಮೂರು ನಾಣ್ಯಗಳು ದೊರೆತಿದ್ದು, ಅವು ಇಲೆಕ್ಟ್ರಮ್‌ದಲ್ಲಿ (ಶೇಕಡ ೩೦ ಬಂಗಾರ ಮತ್ತು ಶೇಕಡ ೭೦ ಬೆಳ್ಳಿಯಿಂದ ಮಾಡಿದ ಲೋಹ) ಮಾಡಿದೆ. ಈ ನಾಣ್ಯದ ತೂಕ ೧೫೩ ಗ್ರೇನು, ವ್ಯಾಸ ೦.೭೫’ಗಳು. ಅಂದರೆ ಬಂಗಾರ ಹಾಗೂ ಇಲೆಕ್ಟ್ರಮ್ ನಾಣ್ಯಗಳಗಳಲ್ಲಿ ಅಲ್ಪ ಸ್ವರೂಪದಲ್ಲಿ ಕೆಲವೊಂದು ವ್ಯತ್ಯಾಸಗಳು ಇವೆ. ಈ ನಾಣ್ಯಗಳ ಮುಖದ ಮೇಲೆ ‘ಶ್ರೀ ವಿಕ್ರಮರಾಜ’ ಎಂಬ ಆಲೇಖನವೂ ಇವೆ. ಇವು ಕ್ರಿ.ಶ. ೭ನೇ ಶತಮಾನದ ನಾಣ್ಯಗಳು. ಆದ್ದರಿಂದ ಇಲೆಕ್ಟ್ರಮ್ ನಾಣ್ಯಗಳು ಇದೇ ವಂಶದ ಒಂದನೇ ವಿಕ್ರಮಾದಿತ್ಯನ ನಾಣ್ಯಗಳಾಗಿರುವ ಸಾಧ್ಯತೆಯನ್ನೂ ಮುಂದುಮಾಡಲಾಗಿದೆ.

ಇತ್ತೀಚೆಗೆ ಎಲಿಫೆಂಟಾ(ಪ್ರಾಚೀನಪುರಿ)ದಲ್ಲಿ ದೊರೆತ ಇನ್ನೊಂದು ನಾಣ್ಯವು ದೀಪ ಚೌಕಾಕೃತಿಯಲ್ಲಿದ್ದು, ಅದು ತಾಮ್ರದ ನಾಣ್ಯವಾಗಿದೆ. ಅದರ ಮುಖದ ಮೇಲೆ ಕ್ರಿ.ಶ. ೬ನೇ ಶತಮಾನದ ಪ್ರಾಚೀನ ಕನ್ನಡ ಲಿಪಿಯಲ್ಲಿ ಎರಡು ಸಾಲಿನಲ್ಲಿ ಒಂದು ಆಲೇಖನವಿದೆ. ಅದು ‘ಶ್ರೀ ಸತ್ಯಾಶ್ರಯ’ ಎಂಬ ಆಲೇಖನ. ಎರಡನೇ ಪುಲಕೇಶಿಯು ಕೊಂಕಣದ ಮೌರ್ಯರನ್ನು ಪುರಿ ಎಂಬಲ್ಲಿ ಪರಾಭವಗೊಳಿಸಿದನು. ಆ ವಿಷಯದ ಸ್ಮರಣಾರ್ಥವಾಗಿ ಎರಡನೇ ಪುಲಕೇಶಿಯು ಈ ನಾಣ್ಯಗಳನ್ನು ಹೊರಡಿಸಿರಬಹುದು. ಈ ಎಲ್ಲ ಸಾಕ್ಷ್ಯಗಳನ್ನು ನೋಡಿದರೆ ಬಾದಾಮಿಯ ಚಾಲುಕ್ಯರು ಕರ್ನಾಟಕದ ನಾಣ್ಯಪದ್ಧತಿಗೆ ಭದ್ರ ಬುನಾದಿಯನ್ನು ಹಾಕಿದರು  ಎಂದು ಹೇಳಬಹುದು.