ರಾಜವಂಶದ ಹೆಸರು

‘ಚಲುಕ್ಯ’ ಎಂಬುದು ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿ ಆಳಿದ ರಾಜವಂಶದ ಹೆಸರು. ಈ ಪದವನ್ನು ಜೇಮ್ಸ್ ಬರ್ಜೆಸ್ (೧೮೭೪) ಹಾಗೂ ಹೆನ್ರಿ ಕಜಿನ್ಸ್ (೧೯೨೬) ತಪ್ಪಾಗಿ ಚಾಲುಕ್ಯ ಎಂದು ಬಳಸಿದರು. ಉಳಿದವರೂ ಹಾಗೆಯೇ ಬಳಸುತ್ತ ಬಂದಂತೆ ತೋರುತ್ತದೆ. ‘ಚಲ್ಕ್ಯ’ ಎಂಬುದು ಈ ರಾಜಕುಲದ ಹೆಸರಿನ ಸರಿಯಾದ ರೂಪವಿರಬಹುದು.

[1] ಆದರೆ ಇದುವರೆಗೆ ಲಭ್ಯವಾದ ಚಲುಕ್ಯರ ಶಾಸನಗಳಲ್ಲಿ ಅತಿ ಪ್ರಾಚೀನವಾದ ಕ್ರಿ.ಶ. ೫೪೩ರ ಪೊಲೆಕೇಶಿ ಬಂಡೆಗಲ್ಲು ಶಾಸನದಲ್ಲಿ ಈ ವಂಶದ ಹೆಸರು ಚಲಿಕ್ಯ[2] ಎಂದು ಕಾಣಿಸಿಕೊಂಡಿದ್ದು ಇದೇ ಕುಲನಾಮದ ಮೂಲರೂಪವೆನಿಸಿರಬೇಕು.  ನಂತರ ಸಂಕ್ಷೇಪಗೊಂಡು ಚಲ್ಕ್ಯ[3] ಎಂದಾಗಿದೆ, ಇಲ್ಲವೆ ಉಚ್ಚರಿಸಲು ಹೆಚ್ಚು ಸರಳವಾದ ಚಲುಕ್ಯ[4] ಎಂಬುದಾಗಿ ಬಳಕೆಯಲ್ಲಿ ಉಳಿದಿರುವಂತೆ ಕಾಣುತ್ತದೆ. ಶಾಸನಗಳಲ್ಲಿ ಹೆಚ್ಚಾಗಿ ಕಾಣಬರುವ ರೂಪಗಳೆಂದರೆ ಚಲುಕ್ಯ ಮತ್ತು ಚಲಿಕ್ಯ. ಇವುಗಳ ಜೊತೆಗೆ ವಿರಳವಾಗಿ ‘ಚಲುಕಿನ್,’[5] ‘ಚಳ್ಕಿ,’[6] ‘ಚಳುಕ್ಯ’[7] ಮತ್ತು ‘ಚಲುಕ್ಕಿ’[8] ಎಂಬ ರೂಪಗಳೂ ಇವೆ. ಚಲುಕ್ಯರ ನಂತರ ಶಾಖಾ ಮನೆತನದ ಹೆಸರುಗಳು ‘ಚಲುಕ್ಕಿ’ ಮತ್ತು ‘ಸಲುಕ್ಕಿ’ ಎಂದೂ ಕಾಣಿಸಿಕೊಂಡಿವೆ.[9] ಬಾದಾಮಿ ಅರಸರಿಗೆ ಸಂಬಂಧಿಸಿದಂತೆ ಆದಿಯ ‘ಆ’ಕಾರರೂಪ ‘ಚಾಲುಕ್ಯ’ವು ತೀರ ಅಪರೂಪ. ಆದ್ದರಿಂದ ಚಲುಕ್ಯ ಎಂಬುದು ಈ ರಾಜವಂಶದ ಸರಿಯಾದ ಹೆಸರೇ ಹೊರತು ಚಾಲುಕ್ಯ ಎಂದಲ್ಲ ಎಂದು ಸ್ಪಷ್ಟವಾಗುತ್ತದೆ.

ಈ ವಂಶದ ಶಾಖೆಯಾಗಿ ಬೆಳೆದ ರಾಜವಂಶವು ಚಾಲುಕ್ಯ ಕುಲವೆನಿಸಿತು. ಆದ್ದರಿಂದ ಕಲ್ಯಾಣದ ಅರಸರು, ವೆಂಗಿ ಅರಸರು ಚಾಲುಕ್ಯರು. ಪ್ರಸ್ತುತ ಲೇಖನದ ಉದ್ದಕ್ಕೂ ಬಾದಾಮಿಯ ಅರಸರನ್ನು ಚಲುಕ್ಯರೆಂದೂ ಆ ವಂಶದ ಶಾಖೆಗಳ ಅರಸರನ್ನು ಚಾಲುಕ್ಯರೆಂದೂ ಗಣಿಸಲಾಗಿದೆ.

ಬಿಲ್ಹಣನು ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಆಸ್ಥಾನ ಕವಿಯಾಗಿದ್ದ. ಬ್ರಹ್ಮದೇವನು ಇಂದ್ರನ ವಿನಂತಿಯ ಮೇರೆಗೆ ಧರ್ಮ ಸ್ಥಾಪನೆಗಾಗಿ ತನ್ನ  ಬೊಗಸೆ(ಚಲುಕ)ಯಿಂದ ಯೋಧನೊಬ್ಬನನ್ನು ಸೃಷ್ಟಿಸಿದನೆಂದೂ ಆತನ ವಂಶಜರೇ ಚಾಲುಕ್ಯರೆಂದೂ ತನ್ನ ವಿಕ್ರಮಾಂಕದೇವ ಚರಿತದಲ್ಲಿ ಕವಿ ಬಿಲ್ಹಣ ಹೇಳಿದ್ದಾನೆ.[10] ದ್ರೋಣನ ಚಲುಕದಿಂದ, ಅಶ್ವತ್ಥಾಮನ ಚಲುಕದಿಂದ ಚಾಲುಕ್ಯರು ಉದ್ಭವಿಸಿದರೆಂದು ಹೇಳುವ ಬೇರೆ ಶಾಸನಗಳಿವೆ.[11] ಹಾರ್ನ್ಲಿ ಎಂಬವರು ಕಲ್ಪಿತ ಕತೆಗಳನ್ನು ಅಲ್ಲಗಳೆದು ಚಲುಕ್ಯ ಪದವು ಸಂಸ್ಕೃತ ಮೂಲದಿಂದಿರದೆ ಅದು ಗುರ್ಜರ ಇಲ್ಲವೆ ಹೂಣರ ಅಥವಾ ತುರ್ಕಿಯ ಮೂಲದಿಂದ ಬಂದಿರಬಹುದೆಂದು ಸೂಚಿಸುತ್ತಾರೆ. ಅವರ ಅಭಿಪ್ರಾಯದ ಮೊದಲರ್ಧವನ್ನು ಅಂದರೆ ಸಂಸ್ಕೃತ ಮೂಲದಿಂದಲ್ಲ ಎಂಬ ಅಂಶವನ್ನು ಒಪ್ಪಬಹುದು, ಆದರೆ ಉತ್ತರಾರ್ಧದ ಹೇಳಿಕೆ ಮತ್ತು ಗ್ರೀಕ್ ಭಾಷೆಯ ಸೆಲೂಕಿಯ (Seleukeia) ಎಂಬ ಹೆಸರುಗಳಲ್ಲಿ ಸಾಮ್ಯವನ್ನು ಗುರುತಿಸುತ್ತಾರೆ. ಇದು ಕೇವಲ ಕಲ್ಪನೆ ಎನಿಸುತ್ತದೆ. ಚಲುಕ್ಯರು ಕನ್ನಡಿಗರು.

ಕೆಲವು ವಿದ್ವಾಂಸರು ಚಲುಕ್ಯ ವಂಶದ ಹೆಸರಿನ ಮೂಲವನ್ನು ಕನ್ನಡದಲ್ಲಿಯೂ ಹುಡುಕುವ ಪ್ರಯತ್ನ ಮಾಡಿದ್ದಾರೆ. ಚಲುಕ್ಯರ ಭಾಷೆ ಕನ್ನಡ ಎಂಬುದನ್ನು ಅವರ ಹೆಸರುಗಳು ಸಮರ್ಥಿಸುತ್ತವೆ.[12] ಪೊಲಕೇಶಿ,[13] ಎಱೀಯಪ್ಪ, ಅಂಬೇರಾ, ಕೊಕ್ಕುಲಿ, ಬುದ್ಧವರಸ, ರಾಹಪ್ಪ[14] ಮೊದಲಾದ ಹೆಸರುಗಳು ಅವರ ಭಾಷೆ ಕನ್ನಡ ಎಂಬುದನ್ನು ಸೂಚಿಸುತ್ತವೆ ಎಂಬುದನ್ನು ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಚಲುಕ್ಯರು ಧರಿಸಿದ ‘ನೋಡುತ್ತ ಗೆಲ್ವೊಂ,’ ‘ಪ್ರಿಯಗಳ್ಳಂ’ ಎಂಬ ಬಿರುದುಗಳು[15] ಮತ್ತು ಸಂಜಾನ ತಾಮ್ರ ಶಾಸನದಲ್ಲಿ ಬುದ್ಧವರಸನಿಗೆ ‘ಮದನಂಗಾಶ್ರಯ’ ಎಂಬ ಬಿರುದು[16] ಚಲುಕ್ಯರ ಭಾಷೆ ಕನ್ನಡವಾಗಿತ್ತೆಂಬುದನ್ನು ದೃಢಪಡಿಸುತ್ತದೆ ಎಂಬುದು ಪಿ.ಬಿ.ದೇಸಾಯಿಯವರ ಅಭಿಪ್ರಾಯ, ಚಲುಕಿ, ಚಲ್ಕಿ, ಸಲುಕಿ ಇವು ಸಲ್ಕಿ ಎಂಬ ಕನ್ನಡ ಪದದ ರೂಪಗಳೆಂದೂ ಸಲ್ಕಿ ಎಂಬುದು ಒಂದು ಕೃಷಿ ಉಪಕರಣವೆಂದೂ ಸಮೀಕರಿಸಿ ಎಸ್.ಸಿ.ನಂದಿಮಠರು ಚಲುಕ್ಯರು ಬಾದಾಮಿ ಪರಿಸರದ ಕೃಷಿಕರಾಗಿರಬೇಕೆಂದು ಊಹಿಸುತ್ತಾರೆ.[17]

ಸಲ್ಕಿ ಎಂಬುದು ಕೃಷಿ ಉಪಕರಣವಾಗಿರದೆ ಸಲ್ಲಕಿ ಎಂಬ ವೃಕ್ಷದ ಹೆಸರಾಗಿರಬಹುದು. ‘ಸಲ್ಲಕಿ’ ಪದವೇ ‘ಸಲ್ಕಿ’ಯಾಗಿ ನಂತರ ಚಲ್ಕಿ ಇಲ್ಲವೆ ಚಲಿಕ್ಯ ಎಂಬುದಾಗಿ ಬಳಕೆಯಾಗಿರುವ ಸಂಭಾವ್ಯವಿದೆ. ಸಲ್ಲಕಿ ಎಂದರೆ ಬೆಳವಲಮರ. ಈ ವೃಕ್ಷವು ಭಾರತದಲ್ಲೆಲ್ಲ ಬೆಳೆಯುತ್ತಿದ್ದರೂ ಬೆಳುವಲನಾಡಿನ ವಿಶೇಷತೆ ಎನ್ನಬಹುದು. ಇದು ಉತ್ತರ ಕರ್ನಾಟಕದ ಜನಪದರ ಅತ್ಯಂತ ಪ್ರಿಯವಾದ ಮರವಾಗಿದ್ದ ಐಹೊಳೆ, ಬಾದಾಮಿ ಪರಿಸರದಲ್ಲಿ, ಸಸ್ಯ ಸಂಪದ ಕ್ಷೀಣಗೊಂಡಿರುವ ಈ ದಿನಗಳಲ್ಲೂ, ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುವ ಮರವಾಗಿದೆ. ಹಣ್ಣಿನ ಮರಗಳ ಹೆಸರುಗಳು ಮನೆತನದ ಹೆಸರುಗಳಾಗಿರುವುದು  ಈ ಪ್ರದೇಶದಲ್ಲಿ ಸಾಮಾನ್ಯ. ಬಾರಿಗಿಡದ, ಮಾವಿನಮರದ, ಹುಣಸಿಮರದ ಎಂಬ ಹೆಸರುಗಳು ಅನೇಕ. ಬಳೂಲದ ಎಂಬ ಹೆಸರಿನ ಮನೆತನಗಳೂ ಇವೆ. ಬಳೂಲ ಎಂಬುದು ಬೆಳವಲ (=ಸಲ್ಲಕಿ) ಪದದ ಸಂಕ್ಷಿಪ್ತರೂಪ.

ಚಲುಕ್ಯರು ಕದಂಬರಂತೆ ತಾವು ಮಾನವ್ಯ ಗೋತ್ರದವರೆಂದೂ ಹಾರೀತಿ ಪುತ್ರರೆಂದೂ ಹೇಳಿಕೊಂಡರಲ್ಲದೆ ಧರ್ಮಾಚರಣೆ, ಆಡಳಿತ ವ್ಯವಸ್ಥೆಗಳನ್ನು ಕದಂಬರಂತೆಯೇ ಮುಂದುವರಿಸಿದರು. ಈ ಮನೋಭೂಮಿಕೆಯುಳ್ಳ ಅವರು ಕದಂಬರು ಕದಂಬ ವೃಕ್ಷವನ್ನು ತಮ್ಮ ಮನೆತನದ ಅಂಕಿತನಾಮವಾಗಿ ಸ್ವೀಕರಿಸುವಂತೆ ಚಲುಕ್ಯರು ಸಲ್ಲಿಕಿ (ಬೆಳವಲ) ಮರವನ್ನು ಸ್ವೀಕರಿಸಿದಂತೆ ಕಾಣುತ್ತದೆ. ಪ್ರಾಚೀನ ಕಾಲದಿಂದಲೂ ಸಲ್ಲಕಿ ಅಥವಾ ಬೆಳವಲ ಅಥವಾ ಕಪಿತ್ಥಮರಕ್ಕೆ ಪಾವಿತ್ರ್ಯದ ಹಿನ್ನೆಲೆ ಇದೆ. ಚಲುಕ್ಯರಿಗಂತೂ ಅದು ಇನ್ನೂ ಹೆಚ್ಚು ಪೂಜ್ಯವಾಗಿರಬೇಕು. ಏಕೆಂದರೆ ಗಣಪತಿ ಕಪಿತ್ಥಪ್ರಿಯ. ಗಜಪ್ರಿಯೆ ಎಂಬುದು ಬೆಳವಲದ ಇನ್ನೊಂದು ಹೆಸರು. ಇದನ್ನು ಆನೆಬೇಲ ಎಂದೂ ಕರೆಯುತ್ತಾರೆ. ಚಲುಕ್ಯರು ಗಣೇಶನ ಆರಾಧಕರು. ಕೆಳಗಿನ ಶಿವಾಲಯವು ಮೂಲತಃ ವಾತಾಪಿ ಗಣಪತಿಯ ಗುಡಿಯಾಗಿದ್ದಿರ ಬಹುದೆಂಬ ಅಭಿಪ್ರಾಯವಿದೆ. ಚಲುಕ್ಯರ ಕಾಲದ ಗಣೇಶ ಶಿಲ್ಪಗಳು ಬಿಡಿ ಬಿಡಿಯಾಗಿ ಅಗಣಿತ ಸಂಖ್ಯೆಯಲ್ಲಿವೆ. ಈ ಅಂಶಗಳು ಗಣಪತಿ ಆರಾಧನೆ ಪ್ರಾಮುಖ್ಯವನ್ನು ಸೂಚಿಸುತ್ತವೆ. ಗಣೇಶನ ಫಲ ವಿಶೇಷ ಸಲ್ಲಕಿಯಾಗಿದೆ. ಇಮ್ಮಡಿ ಪೊಲೆಕೇಶಿಯು ನೂರಾರು ಆನೆಗಳನ್ನು ಯುದ್ಧರಂಗಕ್ಕೆ ಕರೆದೊಯ್ಯುತ್ತಿದ್ದನೆಂಬುದನ್ನು ಹ್ಯೂಯೆನ್‌ತ್ಸಾಂಗ್ ತಿಳಿಸುತ್ತಾನೆ. ಅಂದ ಬಳಿಕ ಆನೆಗಳಿಗೆ ಪ್ರೀತಿಯ ಆಹಾರವಾದ ಕಪಿತ್ಥ ಫಲವು ಇಲ್ಲಿ ಹೇರಳವಾಗಿ ಬೆಳೆಯು ತ್ತಿರಬೇಕು. ಐಹೊಳೆ ಬಾದಾಮಿಯ ಪರಿಸರದ ನೆಲ, ಹವಾಮಾನವು ಸಲ್ಲಕಿ ಬೆಳವಣಿಗೆಗೆ ತಕ್ಕುದಾಗಿದೆ. ಸಲ್ಲಕಿ ಈ ಭಾಗದ ಫಲವಿಶೇಷವಾಗಿದೆ. ಗಣಪತಿಗೆ, ಗಜರಾಜನಿಗೆ ಪ್ರಿಯವಾದ ಸಲ್ಲಕಿ ವಕ್ಷದ ಹೆಸರನ್ನು ತಮ್ಮ ವಂಶದ ಅಂಕಿತನಾಮವೆಂದು ಚಲುಕ್ಯರು ಸ್ವೀಕರಿಸಿರಬಹುದುದಾಗಿದೆ.

ಚಲುಕ್ಯರು

ಚಲುಕ್ಯ ಮನೆತನದ ಚರಿತ್ರೆ ಜಯಸಿಂಹ(ಕ್ರಿ.ಶ.ಸು.೫೦೦-೫೨೦)ನಿಂದ  ಪ್ರಾರಂಭ ವಾಗುತ್ತದೆ. ಮಹಾಕೂಟ ಸ್ತಂಭ ಶಾಸನವು[18] ಈತನನ್ನು ಕುಬೇರ ವೈಶ್ರವಣನಿಗೆ ಹೋಲಿಸಿದೆ. ಐಹೊಳೆಯ ಪ್ರಶಸ್ತಿ ಶಾಸನವು ಜಯಸಿಂಹನನ್ನು ಮಹಾಯೋಧನೆಂದೂ, ಚಂಚಲೆಯಾದ ರಾಜಲಕ್ಷ್ಮಿಯನ್ನು ನಿಗ್ರಹಿಸಿದವನೆಂದು ಹೇಳಿದೆ. ರಣರಾಗನು (ಕ್ರಿ.ಶ.ಸು. ೫೨೦-೫೪೦) ಈತನ ಮಗ. ಮಹಾಕೂಟ ಸ್ತಂಭ ಶಾಸನವು ಇವನು ತಂದೆಯಂತೆ ಯೋಧನೂ ಸದ್ಗುಣಿಯೂ ಆಗಿದ್ದನೆಂದೂ ಹೊಗಳಿದೆ. ಐಹೊಳೆಯ ಶಾಸನವು ಇವನನ್ನು ದಿವ್ಯಶಕ್ತಿ ಸಮನ್ವಯಿತ, ಜಗದೇಕನಾಥ ಎಂಬ ಅನೇಕ ವಿಶೇಷಣಗಳಿಂದ ಬಣ್ಣಿಸಿದೆ. ಇಬ್ಬರೂ ಪ್ರಾಯಶಃ ಕದಂಬ ಸೈನ್ಯಾಧಿಕಾರಿಗಳಾಗಿ ಐಹೊಳೆಯಲ್ಲಿ ಆಡಳಿತ ನಡೆಸಿರಬಹುದು.[19] ಮೊದಲನೆಯ ಪೊಲೆಕೆಶಿಯು ಕದಂಬ ರಾಜವಂಶವು ರಾಜಕೀಯವಾಗಿ ದುರ್ಬಲವಾದಾಗ ಪರಿಸ್ಥಿತಿಯ ಲಾಭ ಪಡೆಯುತ್ತ ಸ್ವತಂತ್ರ ರಾಜನೆಂದು ತಲೆ ಎತ್ತಿ ಬಾದಾಮಿಯನ್ನು ರಾಜಧಾನಿಯಾಗಿ ಮಾಡಿಕೊಂಡಂತೆ ತೋರುತ್ತದೆ.

ಮೊದಲನೆಯ ಪೊಲೆಕೇಶಿಯೇ ಚಲುಕ್ಯ ವಂಶದ ನಿಜವಾದ ಸಂಸ್ಥಾಪಕ ಅರಸು. ಈತನ ಹೆಸರು ಶಾಸನಗಳಲ್ಲಿ ಪೊಲೆಕೇಶಿ, ಪೊಲಕೇಶಿ, ಪುಲಕೇಶಿ ಎಂದು ಮುಂತಾಗಿ ಕಾಣಿಸಿಕೊಂಡಿದೆ. ಕೊನೆಯ ‘ಶಿ’ಕಾರವು ಅನೇಕ ಬಾರಿ ‘ಸಿ’ಕಾರವಾಗಿಯೂ ಬರೆಯಲ್ಪಟ್ಟಿದೆ. ಈ ಹೆಸರಿನ ಅರ್ಥದ ಬಗ್ಗೆ ವಿದ್ವಾಂಸರು ಭಿನ್ನ ಭಿನ್ನ ಅಭಿಪ್ರಾಯ ಹೊಂದಿದ್ದಾರೆ.[20] ಐಹೊಳೆಯ ಪ್ರಶಸ್ತಿ ಶಾಸನದಲ್ಲಿ ಆಸ್ಥಾನ ಕವಿ ರವಿಕೀರ್ತಿಯು ಪೊಲೆಕೇಶಿ ಎಂದಿರುವುದರಿಂದ  ಮತ್ತು ಅವನೊಬ್ಬ ಸುಸಂಸ್ಕೃತ ಶ್ರೆಷ್ಠ ಕವಿಯಾದುದರಿಂದ ಅದೇ ಸರಿಯಾದುದೆಂದು ತಿಳಿಯಬೇಕಾಗುತ್ತದೆ. ಈ ಕಾರಣ ಪ್ರಬಂಧದ ಉದ್ದಕ್ಕೂ ಪೊಲೆಕೇಶಿ ಎಂಬ ರೂಪವನ್ನೇ ಬಳಸಲಾಗಿದೆ. ಈತನು ಅಶ್ವಮೇಧ ‘ಮೊದಲಾದ’ ಯಜ್ಞಗಳನ್ನು ನೆರವೇರಿಸಿದನು. ಹಿರಣ್ಯಗರ್ಭದಾನ ಮಾಡಿದ ಹಿರಿಮೆ ಈತನದು. ಪೊಲೆಕೇಶಿಯು ಯುದ್ಧತಂತ್ರದಲ್ಲಿ ನಿಪುಣನಾಗಿದ್ದನೆಂಬುದಕ್ಕೆ ಆಯಕಟ್ಟಿನ ಸ್ಥಳವಾದ ಬಾದಾಮಿ ಕಲ್ಬೆಟ್ಟವನ್ನು ರಾಜಧಾನಿಗಾಗಿ ಆಯ್ಕೆ ಮಾಡಿದುದೇ ಸಾಕ್ಷಿ. ರಾಜ್ಯದ ಸುಭದ್ರತೆಗಾಗಿ ಕೋಟೆ ಕಟ್ಟಿಸಿದ. ಕ್ರಿ.ಶ.೫೪೩ರಲ್ಲಿ ಕಟ್ಟಿಸಿದ ಈ ಕೋಟೆಯು ದಕ್ಷಿಣ ಭಾರತದ ಪ್ರಾಚೀನ ದುರ್ಗಗಳಲ್ಲಿ ಒಂದು. ಕೋಟೆ ಮಾತ್ರವಲ್ಲದೆ ವಾತಾಪಿ ಹಾಗೂ ಅದರ ಪರಿಸರದಲ್ಲಿ ಮೊದಲನೆಯ ಪೊಲೆಕೇಶಿಯು ಕೊರೆದು ಮಾಡಲಾದ ಮತ್ತು ರಾಚನಿಕ ದೇವಾಲಯಗಳನ್ನು ನಿರ್ಮಿಸಿರಬಹುದಾಗಿದೆ.[21] ಅಗಸ್ತ್ಯಕೆರೆ ಪ್ರಾಯಶಃ ಈತನ ಅವಧಿಯದು.[22] ಕೀರ್ತಿವರ್ಮ ಮತ್ತು ಮಂಗಲೇಶ ಈತನ ಮಕ್ಕಳು.

ಒಂದನೆಯ ಪೊಲೆಕೇಶಿಯು ರಾಜ್ಯದ ಬುನಾದಿಯನ್ನು ಭದ್ರಪಡಿಸಿದರೆ ಅದನ್ನು ವಿಸ್ತರಿಸಿ ವಾತಾಪಿಯನ್ನು ವಾಸ್ತು ಮತ್ತು ಶಿಲ್ಪಗಳಿಂದ ಸಿಂಗರಿಸಿದ ಕೀರ್ತಿ ಕೀರ್ತಿವರ್ಮನಿಗೆ ಸಲ್ಲುತ್ತದೆ. ಕ್ರಿ.ಶ.೫೬೬ರವರೆಗೆ ಈತನು ರಾಜ್ಯವಾಳಿದನು. ಈತನ ಮಗನಾದ ಇಮ್ಮಡಿ ಪೊಲೆಕೇಶಿಯು ತಂದೆಯನ್ನು ಐಹೊಳೆ ಶಾಸನದಲ್ಲಿ ‘ವಾತಾಪ್ಯಃ ಪ್ರಥಮ ವಿಧಾತಾ’ ಎಂದು ಹೊಗಳಿದ್ದಾನೆ.[23] ನಳ, ಮೌರ್ಯ ಮತ್ತು ಕದಂಬರಿಗೆ ಕೀರ್ತಿವರ್ಮನು ಕಾಳರಾತ್ರಿಯಾಗಿದ್ದನು.[24] ಕದಂಬರಿಂದ ಉತ್ತರ ಕರ್ನಾಟಕದ ಭಾಗವನ್ನು, ಮೌರ್ಯರಿಂದ ಕೊಂಕಣ ರಾಜ್ಯವನ್ನು, ಪೂರ್ವದ ನೆಲವಡಿ (ಬಳ್ಳಾರಿ, ಕರ್ನೂಲ) ಪ್ರದೇಶವನ್ನು ನಳರಿಂದ ವಶಪಡಿಸಿಕೊಂಡು ರಾಜ್ಯವನ್ನು ಎಲ್ಲ ದಿಕ್ಕುಗಳಲ್ಲಿ ವಿಸ್ತರಿಸಿದನು.

ರಾಜ್ಯ ವಿಸ್ತರಣೆಯ ಜೊತೆಗೆ ವಾತಾಪಿಯನ್ನು ಗುಹಾಲಯ ದೇವಾಲಯಗಳಿಂದ ಅಲಂಕರಿಸುವ ಕಲಾತ್ಮಕ ಚಟುವಟಿಕೆಗಳಲ್ಲಿಯೂ ಒಂದನೆಯ ಕೀರ್ತಿವರ್ಮನು ವಿಶೇಷ ಆಸಕ್ತಿ ವಹಿಸಿದ. ಬಾದಾಮಿಯ ಅತ್ಯಂತ ಭವ್ಯ ಹಾಗೂ ಸುಂದರವಾದ ವೈಷ್ಣವ ಗುಹಾಲಯವು ನಿರ್ಮಾಣಗೊಂಡದ್ದು ಈತನ ಆಳ್ವಿಕೆಯಲ್ಲಿಯೇ. ಪ್ರಾಯಶಃ ಮಹಾಕೂಟೇಶ್ವರ ಗುಡಿ, ಬಾಣಂತಿ ಗುಡಿಗಳು ಕೀರ್ತಿವರ್ಮನ ಕಾಲದಲ್ಲಿ ರಚಿತಗೊಂಡಿರಬಹುದು.[25] ಇವನು ಅಗ್ನಿಷ್ಟೋಮ ಮತ್ತು ಬಹುಸುವರ್ಣ ಯಜ್ಞಗಳನ್ನು ನೆರವೇರಿಸಿದನು. ಹೀಗೆ ಕೀರ್ತಿವರ್ಮನು ಕನ್ನಡ ನಾಡಿಗೆ ಸಾಮ್ರಾಜ್ಯದ ಸ್ಥಾನ ತಂದನು.

ಮೊದಲನೆಯ ಕೀರ್ತಿವರ್ಮನು ಮರಣ ಹೊಂದಿದಾಗ ಆತನ ಮಕ್ಕಳು ಇನ್ನೂ ಚಿಕ್ಕವರಾದ್ದರಿಂದ ತಮ್ಮನಾದ ಮಂಗಲೇಶನು ರಾಜ್ಯ ರಕ್ಷಣೆಯ ಭಾರವನ್ನು ಹೊತ್ತನು. ಮಂಗಲೇಶನು ಶಕ್ತಿತ್ರಯ ಸಂಪನ್ನನಾಗಿದ್ದನು.[26] ತನ್ನ ಆಳ್ವಿಕೆಯನ್ನು ಪ್ರಾರಂಭಿಸುತ್ತಲೇ ಕಳಚೂರಿ ಬುದ್ಧರಾಜನನ್ನು ಸೋಲಿಸಿ ವಿಪುಲ ದ್ರವ್ಯರಾಶಿಯನ್ನು ಸ್ವಾಧೀನಪಡಿಸಿಕೊಂಡು ಮಕುಟೇಶ್ವರ ದೇವನಿಗೆ ಅರ್ಪಿಸಿದನು. ಮಹಾಕೂಟದಲ್ಲಿ ಧರ್ಮಸ್ತಂಭವನ್ನು ಸ್ಥಾಪಿಸಿದನು.[27]

ಪರಮಭಾಗವತನಾದ ಮಂಗಲೇಶನು ಅಣ್ಣನಿಗೆ ಪುಣ್ಯ ಲಭಿಸಲಿ ಎಂದು ಬಾದಾಮಿಯಲ್ಲಿ ಭವ್ಯವಾದ ವಿಷ್ಣುಗೃಹ(ಕ್ರಿ.ಶ.೫೭೮)ವನ್ನು ಕೊರೆಯಿಸಿದನಾದರೂ ಅಣ್ಣನ ಮರಣಾನಂತರ ಅಧಿಕಾರ ಮದದಿಂದ ಮತ್ತನಾದನು. ಅಧಿಕಾರ ದಾಹವು ಮಂಗಲೇಶನ ಮಹಾ ವ್ಯಕ್ತಿತ್ವಕ್ಕೆ ಮಸಿ ಬೆಳೆಯಿತು. ಉತ್ತರಾಧಿಕಾರಿಯಾದ ಇಮ್ಮಡಿ ಪೊಲೆಕೇಶಿಯು ಪ್ರಾಪ್ತ ವಯಸ್ಕನಾದರೂ ಆತನು ಸಿಂಹಾಸನವನ್ನು ಬಿಟ್ಟುಕೊಡಲಿಲ್ಲ. ಇಮ್ಮಡಿ ಪೊಲೆಕೇಶಿ ಬಾಣರ ನೆರವಿನಿಂದ ಮಂಗಲೇಶನೊಂದಿಗೆ ನಾಡನೂರು ಗ್ರಾಮದ ಎಳ್ಪಟ್ಟು ಸಿಂಭಿಗೆ ಎಂಬ ರಣರಂಗದಲ್ಲಿ ಹೋರಾಡಿ ಆತನನ್ನು ಕೊಂದು ಹಕ್ಕಿನ ಸಿಂಹಾಸನವನ್ನು ಕ್ರಿ.ಶ. ೬೧೦ರಲ್ಲಿ ದಕ್ಕಿಸಿಕೊಂಡನು.[28] ಕ್ರಿ.ಶ.೬೩೪-೬೩೫ ರ ಐಹೊಳೆಯ ಪ್ರಶಸ್ತಿ ಶಾಸನವು[29] ಇಮ್ಮಡಿ ಪೊಲೆಕೇಶಿಯ ಪರಾಕ್ರಮ, ಸಾಧನೆಗಳನ್ನು ಸುದೀರ್ಘವಾಗಿ ಬಿಂಬಿಸಿದೆ. ಚತುರ್ದಿಶೆಗಳಲ್ಲಿ ಜಯ ಸಾಧಿಸಿದನು. ಕದಂಬರ ಬನವಾಸಿಯನ್ನು ವಶಪಡಿಸಿಕೊಂಡನು. ಗಂಗ ಆಳೂಪರು ಈತನ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಕೊಂಕಣದ ಮೌರ್ಯರು ಸೋಲನ್ನಪ್ಪಿಕೊಂಡರು. ಪಶ್ಚಿಮ ಸುಮುದ್ರದ ಸಿರಿ ಎನಿಸಿದ್ದ ಘಾರಾಪುರ[30]ಯನ್ನು ನೌಕಾದಳದಿಂದ ಧ್ವಂಸಗೊಳಿಸಿದನು. ಆಮೇಲೆ ತನ್ನ ದಂಡಯಾತ್ರೆಯನ್ನು ಉತ್ತರದ ರಾಜ್ಯಗಳತ್ತ ಹೊರಳಿಸಿದನು. ಈತನ ಪ್ರತಾಪವನ್ನರಿತ ಲಾಟ, ಮಾಳವ, ಗೂರ್ಜರು ಶರಣಾಗತರಾದರು. ಸಕಲ ಉತ್ತರಾಪಥಕ್ಕೆ ಆಧೀಶ್ವರನಾಗಿದ್ದ ಕನೋಜ ಹರ್ಷವರ್ಧನನನ್ನು ನರ್ಮದೆಯ ತೀರದ ರಣರಂಗದಲ್ಲಿ ಎದುರಿಸಿದನು. ಹರ್ಷನು ವಿಜಯದ ಹರ್ಷವನ್ನು ಕಳೆದುಕೊಂಡನು.

ಈತನು ಸೈನ್ಯವನ್ನು ಕಂಡು ಕೋಸಲ ಕಲಿಂಗ ಅರಸರು ಭಯಭೀತರಾದರು. ಪೂರ್ವ ಕರಾವಳಿಯ ವಿಷ್ಣುಕುಂಡಿನರನ್ನು ಸೋಲಿಸಿ ಪಿಷ್ಟಪುರ ದುರ್ಗವನ್ನು ಕೈವಶ ಮಾಡಿಕೊಂಡನು. ಘೋರಯುದ್ಧ ಮಾಡಿ ಕುನಾಳ ಪ್ರದೇಶವನ್ನು ಗೆದ್ದುಕೊಂಡನು. ನಂತರ ಇಮ್ಮಡಿ ಪೊಲೆಕೇಶಿಯು ಸೈನ್ಯವನ್ನು ದಕ್ಷಿಣಕ್ಕೆ ತಿರುಗಿಸಿದನು. ಈತನನ್ನು ಎದುರಿಸಲು ಸಾಧ್ಯವಾಗದ್ದರಿಂದ ಪಲ್ಲವ ದೊರೆ ಮೊದಲನೆಯ ಮಹೇಂದ್ರವರ್ಮನು ಕಾಂಚಿ ಕೋಟೆಯ ಹಿಂಭಾಗದಲ್ಲಿ ಅಡಗಿಕೊಂಡನು. ಪಲ್ಲವ ಚಲುಕ್ಯರ ವೈರವು ಪ್ರಕೃತಿ ನಿಯಮವೇ ಆಯಿತು.

ನಿಸ್ಸಂಶಯವಾಗಿ ಇಮ್ಮಡಿ ಪೊಲೆಕೇಶಿಯು ಚಲುಕ್ಯ ವಂಶದ ಸರ್ವಶ್ರೇಷ್ಠ ಸಮ್ರಾಟನು. ಈತನ ಖ್ಯಾತಿ ಭಾರತದಾಚೆಗೂ ಹರಡಿತು. ಮುಸ್ಲಿಂ ಇತಿಹಾಸಕಾರನಾದ ಟಬರಿಯ ಮೇರೆಗೆ ಪರ್ಶಿಯಾದ ದೊರೆಯಾದ ಎರಡನೆಯ ಖುಸ್ರು ಚಲುಕ್ಯ ದೊರೆಯ ರಾಯಭಾರಿಯನ್ನು ಸ್ವೀಕರಿಸಿದನು. ಈ ಅರಸರ ಮಧ್ಯೆ ಪತ್ರ ಹಾಗೂ ಕಾಣಿಕೆಗಳ ವಿನಿಮಯ ನಡೆದುದನ್ನು ಟಬರಿ ತಿಳಿಸುತ್ತಾನೆ. ಚೀನಿ ಪ್ರವಾಸಿ ಹೂಯೆನ್‌ತ್ಸಾಂಗನು ಇಮ್ಮಡಿ ಪೊಲೆಕೇಶಿಯ ಸಾಮ್ರಾಜ್ಯದ ವೈಭವವನ್ನು ಮನಸಾರೆ ಹೊಗಳಿದ್ದಾನೆ. ಪಲ್ಲವ ರಾಜನಾದ ಮೊದಲನೆಯ ನರಸಿಂಹ ವರ್ಮನು ತನ್ನ ತಂದೆಗೆ ಆದ ಅಪಮಾನದ ಸೇಡು ತೀರಿಸಿಕೊಳ್ಳಲು ಚಲುಕ್ಯ ರಾಜ್ಯವನ್ನು ಕ್ರಿ.ಶ. ೬೪೨ರಲ್ಲಿ ಮುತ್ತಿದನು. ಮಣಿಮಂಗಲ, ಪಿರಯಾಲ, ಸೂರಮಾರಗಳಲ್ಲಿ ನಡೆದ ಯುದ್ಧಗಳಲ್ಲಿ ಇಮ್ಮಡಿ ಪೊಲೆಕೇಶಿಯು ಸೋಲನ್ನನುಭವಿಸಿದನು. ಪಲ್ಲವ ಸೈನ್ಯವು ವಾತಾಪಿಯನ್ನು ನುಗ್ಗಿ ನಾಶ ಮಾಡಿತು. ಮೊದಲನೆಯ ನರಸಿಂಹವರ್ಮನು ವಾತಾಪಿಕೊಂಡ ಎಂಬ ಬಿರುದನ್ನು ಧರಿಸಿದನು. ಈ ಯುದ್ಧದಲ್ಲಿ ಪೊಲೆಕೇಶಿ ಹತನಾದನು. ಸುಮಾರು ಹದಿಮೂರು ವರ್ಷಗಳ ಕಾಲ ವಾತಾಪಿ ಪಲ್ಲವರ ವಶವಾಯಿತು.

ಮೊದಲನೆಯ ವಿಕ್ರಮಾದಿತ್ಯನು ಪಲ್ಲವರ ವಶದಲ್ಲಿದ್ದ ಚಲುಕ್ಯ ರಾಜ್ಯಲಕ್ಷ್ಮಿಯನ್ನು ೬೫೫ರಲ್ಲಿ ಬಿಡುಗಡೆ ಮಾಡಿದನು.[31] ನಿಸ್ತೇಜವಾಗಿದ್ದ ಸಾಮ್ರಾಜ್ಯಕ್ಕೆ ಜೀವಕಳೆ ತಂದನು. ಈ ಸಾಹಸದಲ್ಲಿ ‘ಚಿತ್ರಕಂಠ’ ಎಂಬ ಕುದುರೆ ಹಾಗೂ ಖಡ್ಗ ಮಾತ್ರ ಆತನಿಗೆ ನೆರವಾದವು![32] ಪಲ್ಲವ ನರಸಿಂಹವರ್ಮ, ಆತನ ಮಗ ಇಮ್ಮಡಿ ಮಹೇಂದ್ರವರ್ಮ, ಮತ್ತು ಆತನ ಮಗನಾದ ಮೊದಲನೆಯ ಪರಮೇಶ್ವರವರ್ಮ ಹೀಗೆ ಮೂರು ತಲೆಮಾರಿನ ಪಲ್ಲವರನ್ನು ವಿಕ್ರಮಾದಿತ್ಯನು ಸೋಲಿಸಿದನು.[33]

ವಿಕ್ರಮಾದಿತ್ಯನು ಸುದರ್ಶನಾಚಾರ್ಯರಿಂದ ಶಿವಮಂಡಲ ದೀಕ್ಷೆಯನ್ನು ಪಡೆದದ್ದು ಒಂದು ಮಹತ್ವದ ಘಟನೆ.[34] ತನ್ನ ತಂದೆ, ಅಜ್ಜಂದಿರು ಪರಮ ಭಾಗವತರೆಂದು ಹೆಸರಾದಂತೆ ವಿಕ್ರಮಾದಿತ್ಯನು ಪರಮ ಮಹೇಶ್ವರ[35]ನೆಂದು ಖ್ಯಾತನಾದ. ಈತನ ನಂತರ ಬಂದ ಚಲುಕ್ಯ ಅರಸರೂ ಶೈವ ಧರ್ಮಕ್ಕೆ ಹೆಚ್ಚಿನ ಒಲವು ತೋರಿದ್ದರಿಂದ ಬಾದಾಮಿ ಪರಿಸರವು ಶೈವ ಕೇಂದ್ರವೆನಿಸಿತು.

ವಿಕ್ರಮಾದಿತ್ಯನ ನಂತರ ಆತನ ಮಗನಾದ ವಿನಯಾದಿತ್ಯ ಪಟ್ಟವೇರಿದನು. ಈತನ ಆಳ್ವಿಕೆ ಶಾಂತಿಯುತವಾಗಿತ್ತು. ಆದ್ದರಿಂದ ದೇವಾಲಯ ನಿರ್ಮಾಣ ಮತ್ತು ಧರ್ಮಗಳಿಗೆ ಹೆಚ್ಚಿನ ಪ್ರೋದೊರೆಯಿತು. ಯುವರಾಜನಿರುವಾಗಲೇ ಇವನು ರಾಜ್ಯ ರಕ್ಷಣೆಯಲ್ಲಿ ತಂದೆಗೆ ನೆರವಾಗಿದ್ದನು.  ಕಾಂಚಿ, ಕೇರಳ, ಚೋಳ ಮೊದಲಾದ ಅರಸರನ್ನು ಸೋಲಿಸಿದುದಾಗಿ ಶಾಸನಗಳು ತಿಳಿಸುತ್ತವೆ. ವಿನಯಾದಿತ್ಯನ ಅರಸಿ ಮಹಾದೇವಿಯ ಗೌರವಾರ್ಥ ಲೋಕಾದಿತ್ಯ ಎಳಾ ಅರಸನು ಆಲಂಪುರದ ಸ್ವರ್ಗಬ್ರಹ್ಮ ದೇವಾಲಯವನ್ನು ನಿರ್ಮಿಸಿದನೆಂದು ಆ ದೇವಾಲಯದ ಕನ್ನಡ ಶಾಸನದಿಂದ ತಿಳಿದುಬರುತ್ತದೆ. ಇಟಗಿಯ ತೋರಣದ ಗುಡಿಯು ವಿನಯಾದಿತ್ಯನ ಕಾಲದ ವಾಸ್ತುನಿರ್ಮಾಣ.[36] ವಿನಯಾದಿತ್ಯನು ಉತ್ತರದ ಅರಸನೊಬ್ಬನನ್ನು ಗೆದ್ದು ಗಂಗಾ, ಯಮುನಾ ಹಾಗೂ ಪಾಲಿಧ್ವಜ ಚಿಹ್ನೆಗಳನ್ನು ಗೆಲವಿನ ಪ್ರತೀಕವಾಗಿ ತಂದುದನ್ನು ಆತನ ಮಗನಾದ ವಿಜಯಾದಿತ್ಯನ ಶಾಸನಗಳು ಹೇಳುತ್ತವೆ. ವಿನಯಾದಿತ್ಯನ ಅರಸಿ ವಿನಯವತಿಯು ಬಾದಾಮಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿಗಾಗಿ ಕ್ರಿ.ಶ. ೬೯೯ರಲ್ಲಿ ತ್ರಿಕೂಟಾಲಯವನ್ನು ಕಟ್ಟಿಸಿದಳು.[37] ಇದು ಕರ್ನಾಟಕದ ಪ್ರಪ್ರಥಮ ತ್ರಿಕೂಟಾಲಯವಾಗಿದೆ.

ಕ್ರಿ.ಶ. ೬೯೬ರಲ್ಲಿ ಸಿಂಹಾಸನವನ್ನೇರಿದ ವಿಜಯಾದಿತ್ಯನು ಕ್ರಿ.ಶ. ೭೩೩ರವರೆಗೆ ರಾಜ್ಯಭಾರ ಮಾಡಿದನು. ಅನೇಕ ದರ್ಮಗಳನ್ನು ಪೋಷಿಸಿದ ಖ್ಯಾತಿ ಈತನದು. ಈತನ ತಾಯಿ ವಿನಯವತಿಯು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ತ್ರಿಕೂಟಾಲಯ (ಜಂಬುಲಿಂಗ ದೇವಾಲಯ)ವನ್ನು ಬಾದಾಮಿಯಲ್ಲಿ ಕಟ್ಟಿಸಿದರೆ, ಈತನ ಸಹೋದರಿ ಕುಂಕುಮ ಮಹಾದೇವಿಯು ಲಕ್ಷ್ಮೇಶ್ವರದಲ್ಲಿ ಆನೆಸಜ್ಜೆ ಜಿನಾಲಯವನ್ನು ಕಟ್ಟಿಸಿದಳು.[38] ಅವನು ಪಟ್ಟದಕಲ್ಲಿನಲ್ಲಿ ವಿಜಯೇಶ್ವರ (ಸಂಗಮೇಶ್ವರ) ಗುಡಿಯನ್ನು ನಿರ್ಮಿಸಿದನು. ಈತನ ಪ್ರಾಣವಲ್ಲಭೆ ವಿನಾಪೊಟಿಯು ಮಾಹಾಕೂಟೇಶ್ವರನಿಗೆ ರತ್ನ ಪೀಠ, ರಜತ ಛತ್ರ ಮತ್ತು ಭೂದಾನ ಮಾಡಿದಳು.[39] ವಿಜಯಾದಿತ್ಯನು ಬ್ರಾಹ್ಮಣರಿಗೆ ಮಾತ್ರವಲ್ಲದೆ ದೀನ, ಅನಾಥ, ದರಿದ್ರ ಪ್ರಜೆಗಳಿಗೆ ಸಾವಿರಾರು ದಾನ ಮಾಡಿದ ಪ್ರಭುವೆಂದು ಹೊಗಳಲಾಗಿದೆ.[40] ಅಷ್ಟು ಮಾತ್ರವಲ್ಲದೆ ವೈಷ್ಣವ ಬೌದ್ಧ ಜೈನ ಧರ್ಮದ ಅನುಯಾಯಿಗಳಿಗೆ ರಕ್ಷಣೆ ನೀಡಿ ಪೃಥ್ವಿಯನ್ನು ಪಾವನಗೊಳಿಸಿದನೆಂದು ವರ್ಣಿಸಲಾಗಿದೆ.[41] ವಿಜಯಾದಿತ್ಯನು ನೃತ್ಯ ಸಂಗೀತದ ಕಲಾವಿದರಿಗೆ ಗೌರವ ನೀಡಿದ ಸಂಗತಿಯು ಪಟ್ಟದಕಲ್ಲಿನ ಶಾಸನವೊಂದರಿಂದ ತಿಳಿದುಬರುತ್ತದೆ.[42]

ವಿಜಯಾದಿತ್ಯನ ನಂತರ ಆತನ ಮಗನಾದ ಇಮ್ಮಡಿ ವಿಕ್ರಮಾದಿತ್ಯನು ಕ್ರಿ.ಶ. ೭೩೩ರಲ್ಲಿ ರಾಜ್ಯಸೂತ್ರವನ್ನು ವಹಿಸಿಕೊಂಡು ಕ್ರಿ.ಶ. ೭೪೪ರವರೆಗೆ ರಾಜ್ಯವಾಳಿದನು. ಪಲ್ಲವರೊಂದಿಗೆ ವೈರತ್ವ ಎಂದಿನಂತೆ ಇದ್ದೇ ಇತ್ತು. ಅವರನ್ನು ನಿರ್ಮೂಲಗೊಳಿಸಬೇಕೆಂಬ ಉದ್ದೇಶದಿಂದ ಇಮ್ಮಡಿ ವಿಕ್ರಮಾದಿತ್ಯನು ತುಂಡಾಕ ವಿಷಯವನ್ನು ಹೊಕ್ಕು ನಂದಿಪೋತವರ್ಮನನ್ನು ಹೊಡೆದೋಡಿಸಿದನು. ಮತ್ತು ರಾಜಚಿಹ್ನೆಗಳಾದ ಕಟುಮುಖವಾದಿತ್ರ ಮತ್ತು ಸಮುದ್ರಘೋಷ ಎಂಬ ವಿಶೇಷವಾದ್ಯಗಳನ್ನು ಖಟ್ವಾಂಗ ಪತಾಕೆಯನ್ನು, ಆನೆಗಳನ್ನೂ, ಚಿನ್ನ ಮಾಣಿಕ್ಯ ರಾಶಿಯನ್ನು ವಶಪಡಿಸಿಕೊಂಡನು. ಇಮ್ಮಡಿ ವಿಕ್ರಮಾದಿತ್ಯನು ಕಾಂಚಿಯನ್ನು ವಶಪಡಿಸಿಕೊಂಡನಾದರೂ ಅದನ್ನು ನಾಶ ಮಾಡದೆ ಅಲ್ಲಿಯ ರಾಜಸಿಂಹೇಶ್ವರ ದೇವಾಲಯಕ್ಕೆ ಸುವರ್ಣರಾಶಿಯನ್ನು  ಬಿಟ್ಟುಕೊಟ್ಟು ತನ್ನ ಔದಾರ್ಯವನ್ನು ತೋರಿದನು.[43] ಪಾಂಡ್ಯ ಚೋಳ ಕೇರಳ ಕಳಭ್ರರನ್ನು ಸೋಲಿಸಿ ದಕ್ಷಿಣ ಸಮುದ್ರತೀರದಲ್ಲಿ ಜಯಸ್ತಂಭವನ್ನು ನೆಟ್ಟನು.[44] ಇವನ ಮಾಂಡಲಿಕನೂ ಗುಜರಾತ ಚಾಲುಕ್ಯನೂ ಆದ ಅವನಿಜನಾಶ್ರಯ ಪುಲಿಕೇಶಿಯು ತಾಜಿಕ(ಅರಬ)ರನ್ನು ಬಗ್ಗು ಬಡೆದು ಹಿಂದಕ್ಕಟ್ಟಿದುದು ಒಂದು ಮಹತ್ವದ ಘಟನೆ.[45]

ಹೈಹಯ ವಂಶದ ರಾಜಕುಮಾರಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ಇವನ ಅರಸಿಯರು. ತಮ್ಮ ಪತಿಯು ಮೂರು ಸಾರಿ ಕಂಚಿಯನ್ನು ಗೆದ್ದ ಸವಿನೆನಪಿಗಾಗಿ ಇವರು ಪಟ್ಟದಕಲ್ಲಿನಲ್ಲಿ ಕ್ರಮವಾಗಿ ಲೋಕೇಶ್ವರ (ಇಂದಿನ ವಿರೂಪಾಕ್ಷ) ಮತ್ತು ತ್ರೈಲೋಕೇಶ್ವರ (ಇಂದಿನ ಮಲ್ಲಿಕಾರ್ಜುನ) ಗುಡಿಗಳನ್ನು ಕಟ್ಟಿಸಿದರು. ಸ್ಥಪತಿಗಳಾದ ಸರ್ವಸಿದ್ದಿ ಆಚಾರಿ ಹಾಗೂ ಗುಂಡ ಅನಿವಾರಿತಾಚಾರಿ ಇವರೀರ್ವರಿಗೆ ‘ಪೆರ್ಜೆಱೀಪು’ ಎಂಬ ಬಿರುದು ನೀಡಿ ಸನ್ಮಾನಿಸಿದರು.[46] ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಚಲುಕ್ಯರ ಕಲೆ ಉಚ್ಛ್ರಾಯ ಸ್ಥಿಯನ್ನು ಮುಟ್ಟಿತು. ಪಟ್ಟದಕಲ್ಲಿನ ಪಾಪನಾಥ ಗುಡಿಯ ನಿರ್ಮಾಣ ಇವನ ಕಾಲದಲ್ಲಿ ಪ್ರಾರಂಭವಾಯಿತು.[47] ಇದೇ ಅವಧಿಯಲ್ಲಿ ಐಹೊಳೆಯ ಸುಪ್ರಸಿದ್ಧ ದುರ್ಗದ ಗುಡಿಯು ನಿರ್ಮಿತವಾಯಿತು. ಮಹಾಕೂಟದಲ್ಲಿಯೂ ದೇವಾಲಯಗಳ ರಚನಾ ಕಾರ್ಯವು ತೀವ್ರಗೊಂಡಿತು. ಅಲ್ಲಿಯ ಪ್ರಾಕಾರದಲ್ಲಿಯ ರೇಖಾ ನಾಗರ ಶಿಖರ ವಿನ್ಯಾಸದ ಗುಡಿಗಳು ಈತನ ಕಾಲದಲ್ಲಿಯೇ ನಿರ್ಮಾಣಗೊಂಡವು.[48]

ಇಮ್ಮಡಿ ವಿಕ್ರಮಾದಿತ್ಯನ ನಂತರ ಅವನ ಮಗನಾದ ಇಮ್ಮಡಿ ಕೀರ್ತಿವರ್ಮನು ಕ್ರಿ.ಶ. ೭೪೪ರವರೆಗೆ ರಾಜಸೂತ್ರಗಳನ್ನು ನಿರ್ವಹಿಸಿದನು. ಇಮ್ಮಡಿ ಕೀರ್ತಿವರ್ಮನ ಅಳ್ವಿಕೆಯು ಶಾಂತಿಯುತವಾಗಿತ್ತು. ಆದರೆ ಚಲುಕ್ಯರ ಸಾಮಂತರು ಸ್ವತಂತ್ರರಾಗುವ ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಅವರಲ್ಲಿ ರಾಷ್ಟ್ರಕೂಟ ದಂತಿದುರ್ಗನು ಈ ‘ಕರ್ಣಾಟಬಲ’ವನ್ನು ಸೋಲಿಸುವಲ್ಲಿ ಯಶಸ್ವಿಯಾದನು.[49] ಇಮ್ಮಡಿ ಕೀರ್ತಿವರ್ಮನು ಚಲುಕ್ಯವಂಶದ ಕೊನೆಯ ಅರಸನಾದನು. ಈತನೊಂದಿಗೆ ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ವೈಭವದಿಂದ ರಾಜ್ಯವಾಳಿದ ಚಲುಕ್ಯರು ಅಸ್ತಂಗತರಾದರು.

ಚಲುಕ್ಯೋತ್ತರ ಬಾದಾಮಿ : ಇತಿಹಾಸ

ಬಾದಾಮಿಯು ರಾಜಧಾನಿ ಪಟ್ಟವನ್ನು ಕಳೆದುಕೊಂಡ ನಂತರ ಅದು ವಿವಿಧ ಅರಸು ಮನೆತನಗಳ ರಾಜ್ಯದ ಅಂಗವಾಗಿ ಉಳಿಯಿತು. ರಾಷ್ಟ್ರಕೂಟ ಕಲಿಬಲ್ಲಹನು ಈ ಭಾಗವನ್ನು ಆಳಿದನು.[50] ಐಹೊಳೆಯ ಲಾಡಖಾನ ಗುಡಿ ಶಾಸನ,[51] ಹುಚ್ಚಮಲ್ಲಿ ಗುಡಿ ಶಾಸನ[52] ಹಾಗೂ ರಾವಣಫಡಿ ಶಾಸನ[53]ಗಳು ತರುವಾಯ ಕ್ರಮವಾಗಿ ಇಮ್ಮಡಿ ಕೃಷ್ಣ, ಖೊಟ್ಟಿಗ ಮ್ತು ಅಮೋಘವರ್ಷ ಆಳಿದುದನ್ನು ತಿಳಿಸುತ್ತವೆ.

ರಾಷ್ಟ್ರಕೂಟರ ಪ್ರಾಬಲ್ಯ ಕುಂಠಿತವಾಗುತ್ತಲೆ ಇಮ್ಮಡಿ ತೈಲನು ಕ್ರಿ.ಶ. ೯೭೩ರಲ್ಲಿ ಇಮ್ಮಡಿ ಕರ್ಕನನ್ನು ತಳ್ಳಿ ಸ್ವಾತಂತ್ರ್ಯ ಸಾರಿ, ಕಲ್ಯಾಣ ಚಾಲುಕ್ಯ ಮನೆತನದ ಮೊದಲ ಅರಸನೆನಿಸಿದ. ಬನಶಂಕರಿ ಗುಡಿಯಲ್ಲಿ ಪ್ರಾಕಾರದಲ್ಲಿ ಕಾಲ್ಯಾಣ ಚಾಲುಕ್ಯ ಮೊದಲನೆಯ ಜಗದೇಕಮಲ್ಲನ ಎರಡು ಶಾಸನಗಳಿವೆ.[54] ಅರಸಿಬೀದಿಯ ಜೈನ ಬಸದಿ ಎದುರು ಆತನ ಮಗ ಮೊದಲನೆಯ ಸೋಮೇಶ್ವರನ ಶಾಸನ[55] ಮತ್ತು ಪಟ್ಟದಕಲ್ಲಿನಲ್ಲಿ ಮೊಮ್ಮಗನಾದ ಇಮ್ಮಡಿ ಸೋಮೇಶ್ವರನ ಶಾಸನ[56] ದೊರೆತಿವೆ. ಆರನೆಯ ವಿಕ್ರಮಾದಿತ್ಯನ ಎರಡು ಶಾಸನಗಳು[57] ಬಾದಾಮಿ ಹತ್ತಿರ ಇರುವ ಕಟಗೇರಿಯಲ್ಲಿಯೂ ಮತ್ತು ಇನ್ನೊಂದು ಶಾಸನವು[58] ಐಹೊಳೆಯ ಚರಂತಿ ಗುಡಿಯಲ್ಲಿಯೂ ಇವೆ. ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಬಾದಾಮಿಯ ಎಲ್ಲಮ್ಮ (ಯೋಗೇಶ್ವರ) ಗುಡಿ ನಿರ್ಮಾಣವಾಯಿತು.[59] ಅರಸಿಬೀದಿ ಜೈನ ಬಸದಿಯ ಶಾಸನವು[60] ಮುಮ್ಮಡಿ ತೈಲನು ಕಿಸುಕಾಡು ೭೦ನ್ನು ಆಳುತ್ತಿದ್ದನೆಂಬುದನ್ನು ತಿಳಿಸುತ್ತದೆ. ದೇವಾಲಯಗಳ ನಿರ್ಮಾಣದ ದೃಷ್ಟಿಯಿಂದ ಕಲ್ಯಾಣ ಚಾಲುಕ್ಯರ ಕಾಲವೆಂದರೆ ಕರ್ನಾಟಕದ ಸಮೃದ್ದಿಯ ಕಾಲ. ಬಾದಾಮಿ ಊರ ಮಧ್ಯದಲ್ಲಿರುವ ವಿರೂಪಾಕ್ಷ ಗುಡಿ. ಅಗಸ್ತ್ಯ ತೀರ್ಥದ ಉತ್ತರ ದಂಡೆಯ ಮೇಲಿರುವ ಮಲ್ಲಿಕಾರ್ಜುನ ಗುಡಿ, ಪಂಚಲಿಂಗೇಶ್ವರ ಫಡಿಯ ಗುಡಿಗಳು ಕಲ್ಯಾಣ ಚಾಲುಕ್ಯರ ವಾಸ್ತು ನಿರ್ಮಾಣಗಳಾಗಿವೆ.

ಕಲ್ಯಾಣ ಚಾಲುಕ್ಯರ ಮಾಂಡಲಿಕರಾಗಿ ಸಿಂಧರು ಈ ಭಾಗವನ್ನಾಳಿದರು. ಸಿಂಧಕುಲದ ಇಮ್ಮಡಿ ಸಿಂಗನು ಇಮ್ಮಡಿ ಸೋಮೇಶ್ವರನ ಮಹಾಮಂಡಲೇಶ್ವರನಾಗಿ ಕಿಸುಕಾಡು ೭೦ ಪ್ರದೇಶವನ್ನು ಕ್ರಿ.ಶ. ೧೦೭೬ರಲ್ಲಿ ಆಳುತ್ತಿದ್ದನು.[61] ಆತನ ಮಗನಾದ ಇಮ್ಮಡಿ ಆಚುಗಿ ಹಾಗೂ ಮೊಮ್ಮಗನಾದ ಒಂದನೆಯ ಪೆರ್ಮಾಡಿ ಈ ಪ್ರದೇಶವನ್ನು ಆರನೆಯ ವಿಕ್ರಮಾದಿತ್ಯ ಮತ್ತು ಇಮ್ಮಡಿ ಜಗದೇಕಮಲ್ಲನ ಮಾಂಡಲಿಕರಾಗಿ ಆಳಿದರು. ಒಂದನೆಯ ಪೆರ್ಮಾಡಿಯ ತಮ್ಮನಾದ ಇಮ್ಮಡಿ ಚಾವುಂಡನು ಮುಮ್ಮಡಿ ತೈಲನ ಮಾಂಡಲಿಕನಾಗಿದ್ದನು. ಇವನು ಕಿಸುಕಾಡನ್ನು ಆಳುತ್ತಿದ್ದನು.[62]

ಕಳಚುರಿ ವಂಶದ ಇಮ್ಮಡಿ ಬಿಜ