ಕರ್ನಾಟಕದಲ್ಲಿ ತಲಕಾಡಿನ ಗಂಗರ ತನವಾದ ಮೇಲೆ ಕ್ರಿ.ಶ. ೬ನೇ ಶತಮಾನದಲ್ಲಿ ಬಾದಾಮಿ ಚಾಳುಕ್ಯರು ಪ್ರಾಬಲ್ಯಕ್ಕೆ ಬಂದರು. ಈ ಸಾಮ್ರಾಜ್ಯ ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ವಿಶೇಷ ಮಹತ್ವವನ್ನು ಪಡೆಯಿತು. ಇವರ ಆಡಳಿತ ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿ ನದಿಯವರೆಗೆ ವ್ಯಾಪಿಸಿತ್ತು. ಇವರ ಇತಿಹಾಸದ ಬಗ್ಗೆ ಈ ಶಾಸನಗಳು ಬೆಳಕು ಚೆಲ್ಲುತ್ತವೆ.

೧. ಮಂಗಳೇಶನ ಮಹಾಕೂಟ ಶಾಸನ

೨. ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನ (ರವಿಕೀರ್ತಿಯಿಂದ ವಿರಚಿತ) ಹಾಗೂ

೩. ಒಂದನೆ ಪುಲಿಕೇಶಿಯ ಬಾದಾಮಿ ಶಾಸನ ಮುಖ್ಯವಾದವು.

ಇವುಗಳಲ್ಲದೆ ಇವರ ಕಾಲಕ್ಕೆ ಭೇಟಿ ನೀಡಿದ ಚೀನಾದ ಪ್ರವಾಸಿ ಹ್ಯೂಯನ್‌ತ್ಸಾಂಗ್ ಹಾಗೂ ಅರಬ್ ಇತಿಹಾಸಕಾರ ತಬರಿಯ ಬರವಣಿಗೆ ಮತ್ತು ನಾಣ್ಯಗಳು ಇವರ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

ಬಾದಾಮಿ ಚಳುಕ್ಯರ ಇತಿಹಾಸವನ್ನು ಮೂರು ಭಾಗಗಳಲ್ಲಿ ಅಧ್ಯಯನ ಮಾಡಬಹುದು.

೧. ಬಾದಾಮಿ ಚಳುಕ್ಯರು ಅಥವಾ ಮೊದಲ ಪಶ್ಚಿಮ ಚಳುಕ್ಯರು ಕ್ರಿ.ಶ.೬ನೇ ಶತಮಾನದಿಂದ ೮ನೇ ಶತಮಾನದವರೆಗೆ ಬಾದಾಮಿಯಲ್ಲಿ ಆಳಿದರು.

೨. ಕಲ್ಯಾಣಿಯ ಚಳುಕ್ಯರು ಕ್ರಿ.ಶ.೮ನೇ ಶತಮಾನದಿಂದ ೧೨ನೇ ಶತಮಾನದವರೆಗೆ ಕಲ್ಯಾಣಿಯಲ್ಲಿ ಆಡಳಿತ ನಡೆಸಿದರು.

೩. ವೆಂಗಿಯ ಚಳುಕ್ಯರು ಅಥವಾ ಪೂರ್ವ ಚಳುಕ್ಯರು ಕ್ರಿ.ಶ. ೭ನೇ ಶತಮಾನದಿಂದ ೧೨ನೇ ಶತಮಾನದವರೆಗೆ ವೆಂಗಿಯಲ್ಲಿ ಆಡಳಿತ ನಡೆಸಿದರು.

ಚಳುಕ್ಯರ ಮೂಲ

ಇವರ ಮೂಲದ ಬಗ್ಗೆ ವಿಭಿನ್ನ ಹೇಳಿಕೆಗಳಿವೆ. ಇವರ ಹೆಸರಿಗೆ ಸಂಬಂಧಿಸಿದಂತೆ ಶಾಸನಗಳಲ್ಲಿ ‘ಚಳುಕ್ಯ’ ‘ಚಳಿಕ’ ಎಂಬ ಪದಗಳನ್ನು ಕಾಣಬಹುದಾಗಿದೆ. ಇವರು ತಮ್ಮನ್ನು ‘ಹರೀತಿುತ್ರರೆಂದೂ’ ಮಾನವ್ಯಗೋತ್ರಕ್ಕೆ ಸೇರಿದ ಕಾರ್ತಿಕೇಯನ ಕೃಪೆಗೊಳಗಾದವರೆಂದೂ ತಿಳಿಸಿದ್ದಾರೆ. ಮುಂದುವರಿದು ಶ್ರೀಮನ್ನಾರಾಯಾಣನ ಕೃಪೆಯಿಂದ ಸಕಲ ಧರಣಿಯನ್ನು ಶರಣಾಗುವಂತೆ ಮಾಡಿಕೊಂಡರೆಂದು ಹೇಳಿಕೊಂಡಿದ್ದಾರೆ. ಇವರ ಲಾಂಛನ ಹಂದಿ(ವರಾಹ).

ನಂತರದ ಶಾಸನದ ಪ್ರಕಾರ ಋಷಿಪುಂಗವ ಹರೀತಪಂಚಮುಖನು ಸಂಧ್ಯಾವಂದನೆಯಲ್ಲಿ ಆರ್ಘ್ಯ ಕೊಡುತ್ತಿರುವಾಗ ಅವನ ಚುಳಕ(ಬೊಗಸೆ)ದಿಂದ ಒಬ್ಬ ವೀರನು ಜನಿಸಿದನೆಂದೂ ಅವನನ್ನು ‘ಚಲಕ’ ಎಂದು ಕರೆದನೆಂದೂ, ಅವನ ವಂಶಜರೇ ಚಾಲುಕ್ಯರಾದರೆಂದು ತಿಳಿಸುತ್ತದೆ.

ಕಲ್ಯಾಣಿಯ ಚಾಳುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಸ್ಥಾನಕವಿಯಾಗಿದ್ದ ಬಿಲ್ಹಣನು ಬ್ರಹ್ಮನು ಸಂಧ್ಯಾವಂದನೆ ಮಾಡುತ್ತಿದ್ದಾಗ ಇಂದ್ರನು ಅಲ್ಲಿಗೆ ಬಂದು ಪೃಥ್ವಿಯಲ್ಲಿ ನಾಸ್ತಿಕರು ಮತ್ತು ದುಷ್ಟರು ಹೆಚ್ಚಾಗುತ್ತಿದ್ದಾರೆ. ಅವರಿಂದ ರಕ್ಷಣೆ ಪಡೆಯಲು ಜನತೆಗೆ ಓರ್ವ ವೀರನ ಅವಶ್ಯಕತೆ ಇದೆ ಎಂದು ಪ್ರಾರ್ಥಿಸಿದಾಗ ಬ್ರಹ್ಮನು ತನ್ನ ಚುಲಕದತ್ತ ನೋಡಿದನೆಂದು, ಅದರೊಳಗಿನಿಂದ ಒಬ್ಬ ಯೋಧನು ಉದ್ಭವಿಸಿದನೆಂದೂ, ಅವನ ವಂಶಜರೇ ಚಾಲುಕ್ಯರೆಂದು ತಿಳಿಸಿದ್ದಾನೆ. (ಚುಳಕ ಅಂದರೆ ಬೊಗಸೆ) ಆದರೆ ವಿದ್ವಾಂಸರು ಈ ಹೇಳಿಕೆಯನ್ನು ಅಲ್ಲಗಳೆದು ಇದು ಕೇವಲ ಕಾಲ್ಪನಿಕಕಥೆಯಾಗಿದೆ, ಇದನ್ನು ಒಪ್ಪುವಂತಿಲ್ಲವೆಂದು ತಿಳಿಸಿದ್ದಾರೆ.

ಮತ್ತೆ ಕೆಲವು ವಿದ್ವಾಂಸರು ಇವರ ಉಗಮ ನಾಮವು ‘ಚಲ್ಕ’, ‘ಚುಲಕಿ’ ಎಂಬ ಕನ್ನಡ ಪದದ ಒಂದು ಕೃಷಿ ಉಪಕರಣವಾಗಿದ್ದು, ಇವರು ಮೂಲತಃ ಬಾದಾಮಿಯ ಸುತ್ತಮುತ್ತ ವಾಸಿಸುತ್ತಿದ್ದ ಕೃಷಿಕರೆಂದೂ ನಂತರ ಪ್ರಾಬಲ್ಯಕ್ಕೆ ಬಂದು ಈ ಸಾಮ್ರಾಜ್ಯದ ಸ್ಥಾಪಕರಾಗಿರಬಹು ದೆಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಂಶದ ಮೂಲ ಪುರುಷರು ಒಂದನೆ ಜಯಸಿಂಹ ಹಾಗೂ ರಣರಾಗ. ಇವರ ಬಗ್ಗೆ ಶಾಸನಗಳಲ್ಲಿ ವಿವರಗಳಿಲ್ಲದೆ ಇರುವುದರಿಂದ ಇವರು ಕದಂಬರ ಅಧೀನರಾಗಿರಬಹುದೆಂದೂ ಈ ವಂಶದ ಮೂಲ ಪುರುಷರಲ್ಲವೆಂದು ತಿಳಿದುಬರುತ್ತದೆ.

ಕ್ರಿ.ಶ. ೫೪೦ರಲ್ಲಿ ಮೊದಲನೆಯ ಪುಲಿಕೇಶಿಯು ಕದಂಬರಿಂದ ಸ್ವತಂತ್ರವನ್ನು ಘೋಷಿಸಿ ಕೊಂಡು ಚಾಲುಕ್ಯರ ಸ್ವತಂತ್ರ ಅರಸರ ಪರಂಪರೆಯನ್ನು ಸ್ಥಾಪಿಸಿದನು. ಇದರ ಸವಿನೆನಪಿಗಾಗಿ ಅಶ್ವಮೇಧಯಾಗವನ್ನು ಮಾಡಿ, ಸತ್ಯಾಶ್ರಯ, ರಣವಿಕ್ರಮ, ಪೃಥ್ವಿವಲ್ಲಭ ಎಂಬ ಬಿರುದನ್ನು ಧರಿಸಿದನು. ಈತನು ಬಾದಾಮಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕ್ರಿ.ಶ. ೫೬೬ರವರೆಗೆ ಆಡಳಿತ ನಡೆಸಿದನು. ಇವನ ನಂತರ ಆಳಿದ ಅರಸರು ಮೊದಲನೆ ಕೀರ್ತಿವರ್ಮ (ಕ್ರಿ.ಶ. ೫೬೬-೫೬೯), ಮಂಗಳೇಶ(ಕ್ರಿ.ಶ.೫೬೯-೬೧೦), ಎರಡನೇ ಪುಲಿಕೇಶಿ(ಕ್ರಿ.ಶ. ೬೧೦-೬೪೨), ಮೊದಲನೆಯ ವಿಕ್ರಮಾದಿತ್ಯ (ಕ್ರಿ.ಶ.೬೫೫-೬೮೧), ವಿನಯಾದಿತ್ಯ (ಕ್ರಿ.ಶ.೬೮೧-೬೯೬), ವಿಜಯಾದಿತ್ಯ (ಕ್ರಿ.ಶ.೬೯೦-೭೩೭), ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ. ೭೩೩-೭೪೫) ಹಾಗೂ ಎರಡನೇ ಕೀರ್ತಿವರ್ಮ (ಕ್ರಿ.ಶ.೭೪೫-೭೫೭).

ಬಾದಾಮಿ ಚಳುಕ್ಯರಲ್ಲಿ ಎರಡನೇ ಪುಲಿಕೇಶಿಯು (ಕ್ರಿ.ಶ. ೬೧೦-೬೪೨) ಅತ್ಯಂತ ಪ್ರಸಿದ್ಧ ದೊರೆ. ಈತನು ತನ್ನ ಚಿಕ್ಕಪ್ಪನಾದ ಮಂಗಳೇಶನನ್ನು ಕೊಂದು ಸಿಂಹಾಸನಕ್ಕೆ ಬಂದನು. ಇವನು ಪರಾಕ್ರಮಿಯಾಗಿ ಚಾಲುಕ್ಯ ಸಾಮ್ರಾಜ್ಯವನ್ನು ಉತ್ತರ ಭಾರತದ ನರ್ಮದಾ ನದಿಯವರೆಗೆ ವಿಸ್ತರಿಸಿದನು.

ಉತ್ತರ ಪಥೇಶ್ವರ ಎಂಬ ಬಿರುದು ಪಡೆದ ಶ್ರೀಹರ್ಷ(ಶಿಲಾದಿತ್ಯ)ನನ್ನು ಕ್ರಿ.ಶ.೬೩೦ರಲ್ಲಿ ಸೋಲಿಸಿ ಪರಮೇಶ್ವರ ಹಾಗೂ ದಕ್ಷಿಣ ಪಥೇಶ್ವರ, ರಣವಿಕ್ರಮ ಎಂಬ ಬಿರುದುಗಳನ್ನು ಪಡೆದನು. ಈತನು ಸಾಹಿತ್ಯ ಪ್ರೇಮಿಯಾಗಿ ಅತ್ಯಂತ ಪ್ರಸಿದ್ಧ ದೊರೆ ಎನಿಸಿಕೊಂಡು ಕರ್ನಾಟಕದ ಇತಿಹಾಸದಲ್ಲಿ ಶಾಶ್ವತಸ್ಥಾನಗಳಿಸಿದ್ದಾನೆ.

ಬಾದಾಮಿಯ ಚಾಳುಕ್ಯರು ಕನ್ನಡದ ಸಾಹಿತ್ಯಾಭಿವೃದ್ದಿಗೆ ಕಾರಣರಾಗಿ ‘ತ್ರಿಪದಿ’ಯನ್ನು  ಅಭಿವೃದ್ದಿಗೊಳಿಸಿದರು. ಗುಹಾಂತರ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾಗಿ ಐಹೊಳೆ, ಪಟ್ಟದಕಲ್ಲು ಹಾಗೂ ಬಾದಾಮಿಯಲ್ಲಿ ನೂರಾರು ದೇವಸ್ಥಾನಗಳನ್ನು ನಿರ್ಮಿಸಿದರು. ಹಾಗೂ ನಾಗರ ಮತ್ತು ದ್ರಾವಿಡ ಶಿಲ್ಪಕಲೆಯನ್ನು ಒಂದುಗೂಡಿಸಿ ‘ವೇಸರಶೈಲಿ’ ಎಂಬ ಹೊಸ ಶಿಲ್ಪಕಲಾ ಶೈಲಿಯನ್ನು ಅಭಿವೃದ್ದಿಗೊಳಿಸಿದರು.

ಎರಡನೇ ಪುಲಕೇಶಿಯ ನಂತರ ಬಂದ ಚಾಲುಕ್ಯ ಸಂತತಿಯ ದೊರೆಗಳ ಅಸಮರ್ಥತೆಯಿಂದಾಗಿ ಪತನದ ಹಾದಿ ಹಿಡಿಯಿತು. ಎರಡನೇ ಕೀರ್ತಿವರ್ಮನ ಕಾಲಕ್ಕೆ (ಕ್ರಿ.ಶ.೭೫೪-೭೫೭) ರಾಷ್ಟ್ರಕೂಟರು ಪ್ರಬಲರಾದರು. ಕೀರ್ತಿವರ್ಮನನ್ನು ಸೋಲಿಸಿ ರಾಷ್ಟ್ರಕೂಟರ ದೊರೆ ಮೊದಲನೆ ಕೃಷ್ಣನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ಬಾದಾಮಿ ಚಳುಕ್ಯರು ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಗಮನ ನೀಡಿದರಾದರೂ ನಾಣ್ಯಗಳ ಬೆಳವಣಿಗೆಗೆ ಹೆಚ್ಚಿನ ಗಮನ ನೀಡಲಿಲ್ಲವೆಂಬುದು ಇತಿಹಾಸಕಾರರ ಅಭಿಪ್ರಾಯ. ಇವರ ಲಾಂಛನವಾದ ‘ವರಾಹ’ದ ಬಗ್ಗೆ ಶಾಸನಗಳಲ್ಲಿ ಮಾಹಿತಿಗಳಿವೆ. ಇವರು ವರಾಹಚಿಹ್ನೆಯನ್ನು ತಮ್ಮ ನಾಣ್ಯಗಳಲ್ಲಿಯೂ ಮುದ್ರಿಸಿ ‘ವರಾಹ’ (ಹಂದಿ) ನಾಣ್ಯಗಳೆಂದು ಕರೆದರು. ಇವರ ಶಾಸನಗಳಲ್ಲಿ ಗದ್ಯಾಣ, ಧಾರಣ, ಸುವರ್ಣ, ಪತ, ಪಾಲ ಮತ್ತು ವೀಸ ಎಂಬ ಹೆಸರು ಕಂಡುಬಂದಿವೆ.

ಬಾದಾಮಿ ಚಳುಕ್ಯರ ಕಾಲದಲ್ಲಿ ‘ಗದ್ಯಾಣ’ ಅತ್ಯಂತ ಪ್ರಮುಖವಾದ ಚಿನ್ನದ ನಾಣ್ಯ. ಇದನ್ನು ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ವ್ಯಾಪಾರಕ್ಕೋಸ್ಕರ ಉಪಯೋಗಿಸುತ್ತಿದ್ದರು. ಪಟ್ಟದಕಲ್ಲಿನ ಗದ್ಯಾಣವನ್ನು ನೀಡಿದ ಬಗ್ಗೆ ಉಲ್ಲೇಖವಿದೆ. ‘ಸುವರ್ಣ’ ಎಂಬುದು ಮತ್ತೊಂದು ಚಿನ್ನದ ನಾಣ್ಯ. ಇದು ಗದ್ಯಾಣದ ಸಮಾನವಾಗಿತ್ತು. ‘ಧಾರಣ’ ಚಿನ್ನದ ನಾಣ್ಯ. ಇದರ ಬಗ್ಗೆ ಐಹೊಳೆ ಶಾಸನದಲ್ಲಿ ತಿಳಿಸಲಾಗಿದೆ. ‘ಪೊನ್’ ಎಂಬುದು ಚಿನ್ನದ ನಾಣ್ಯ. ಇದನ್ನು ‘ನವಿಲಪೊನ್’ ಅಥವಾ ‘ನವಿಲುಹೊನ್ನು’ ಎಂದು ಕರೆಯುತ್ತಿದ್ದರು. ಇದರಲ್ಲಿ ನವಿಲಿನ ಚಿತ್ರವನ್ನು ಮುದ್ರಿಸಿದ್ದರು. ‘ಪನ’ ಅಥವಾ ‘ಹನ’ ಹಾಗೂ ‘ವೀಸ’ ನಾಣ್ಯಗಳ ಬಗ್ಗೆಯೂ ಶಾಸನಗಳಲ್ಲಿ ಉಲ್ಲೇಖವಿದೆ. ‘ರೂಪಕ’ ಬೆಳ್ಳಿಯ ನಾಣ್ಯವಾಗಿದ್ದು, ಸಾಮಂತ ರಾಜರು ಮುದ್ರಿಸುವ ಹಕ್ಕನ್ನು ಹೊಂದಿದ್ದರು.

ಬಾದಾಮಿ ಕಾಲದಲ್ಲಿದ್ದ ನಾಣ್ಯ ಕೋಷ್ಟಕ

ಗದ್ಯಾಣ=ಸುವರ್ಣ=೬೦ ಗ್ರೇನ್

ದಾರಣ=೧/೪  ಗದ್ಯಾಣ=೧೫ ಗ್ರೇನ್

ಗದ್ಯಾಣ=೧೦ ಪಣ

೧ ಪಣ=೧೬ ವೀಸ

ಮೊದಲನೆ ಪುಲಿಕೇಶಿಯು ಮುದ್ರಿಸಿದ ಬೆಳ್ಳಿಯ ನಾಣ್ಯ ವೃತ್ತಾಕಾರವಿದ್ದು, ೧.೯ ಸೆಂ.ಮೀ, ವ್ಯಾಸವಿದ್ದು, ೪.೧೫ ಗ್ರಾಂ ತೂಕವಿತ್ತು. ಒಂದು ಮಗ್ಗುಲಲ್ಲಿ ಸಿಂಹವು ಎಡಕ್ಕೆ ತಿರುಗಿ ಮುಂಗಾಲನ್ನು ಎತ್ತಿದ್ದು, ಬಾಲವು ಸುರುಳಿಯಾಗಿದೆ. ಹಿಂಭಾಗದಲ್ಲಿ ಶಂಕವಿದ್ದು, ಅದರ ಎರಡೂ ಮಗ್ಗುಲಲ್ಲಿ ಎರಡು ದೀಪದ ಕಂಬಗಳು ಕಂಡುಬಂದಿವೆ. ಅವುಗಳ ಮೇಲ್ಭಾಗದಲ್ಲಿ ‘ಶ್ರೀಪೃಥ್ವಿ’ ಎಂಬ ಕನ್ನಡ ಬರಹ ಕಂಡುಬರುತ್ತದೆ. ‘ಶ್ರೀಪೃಥ್ವಿ’ ಎಂಬುದು ಮೊದಲನೆ ಪುಲಿಕೇಶಿಯು ಇಟ್ಟುಕೊಂಡ ‘ಶ್ರೀಪೃಥ್ವಿವಲ್ಲಭ’ ಎಂಬ ಬಿರುದೆಂದು ಅಭಿಪ್ರಾಯಪಡಲಾಗಿದೆ.

ಇತ್ತೀಚಿಗೆ ಮುಂಬೈ ಹತ್ತಿರದ ಎಲಿಫೆಂಟಾ ದ್ವೀಪದಲ್ಲಿ ದೊರೆತಿರುವ ತಾಮ್ರದ ನಾಣ್ಯ ಎರಡನೇ ಪುಲಿಕೇಶಿಗೆ ಸೇರಿದ್ದು. ೧.೧ x ೦.೯ ಸೆಂ.ಮೀ. ವ್ಯಾಸವಿದ್ದು ೦.೫. ಗ್ರಾಂನಿಂದ ೦.೭೧ ಹಾಗೂ೧.೩. ಗ್ರೇನ್ ತೂಕವಿದೆ. ಇದರ ಒಂದು ಮಗ್ಗುಲಲ್ಲಿ ಕನ್ನಡದಲ್ಲಿ ಶ್ರೀಸತಾ ಶ್ರಯ ಎಂಬ ಕನ್ನಡದ ಬರಹವಿದ್ದು, ಹಿಂಭಾಗದಲ್ಲಿ ಚುಕ್ಕೆಗಳು ಹಾಗೂ ಕುಳಿತಿರುವ ಗೂಳಿಯ (ಬಸವನ) ಚಿತ್ರವಿದೆ. ಇದರಿಂದ ಎರಡನೆಯ ಪುಲಿಕೇಶಿಯ ಸತ್ಯಾಶ್ರಯ ಎಂಬ ಬಿರುದನ್ನು ಹೊಂದಿದ್ದನೆಂದು ತಿಳಿಯಬಹುದು.

ಕ್ರಿ.ಶ.೬೫೫-೬೮೧ರವರೆಗೆ ಆಳಿದ ಮೊದಲನೆಯ ವಿಕ್ರಮಾದಿತ್ಯನ ನಾಣ್ಯ ೧೧೭ ಗ್ರೇನ್ ತೂಕದವಿದ್ದು ೦.೭೬ “ಡಯಾಮೀಟರ್ ಸುತ್ತಳತೆಯಿಂದ ಕೂಡಿದ್ದು, ಒಂದು ಮಗ್ಗುಲಲ್ಲಿ ವರಹ ಚಿತ್ರವಿದ್ದು, ಅದು ಬಲಭಾಗಕ್ಕೆ ತಿರುಗಿ ನಿಂತಿದ್ದು, ಅದರ ಮುಂಭಾಗದಲ್ಲಿ ದೀಪದ ಕಂಬ ಕಂಡುಬರುತ್ತವೆ. ಹಾಗೂ ವರಹ ಚಿತ್ರದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಚಿತ್ರವಿದ್ದು ಅದರ ಕೆಳಭಾಗದಲ್ಲಿ (ವರಹದ) ‘ಶ್ರೀವಿಕ್ರಮ’ ಎಂಬ ಬರಹವಿದೆ.

ಈ ನಾಣ್ಯಗಳ ಸಹಾಯದಿಂದ ಬಾದಾಮಿ ಚಾಳುಕ್ಯರು ಸಹ ಸ್ವಂತ ನಾಣ್ಯಗಳನ್ನು ಅಚ್ಚುಹಾಕಿಸಿ ‘ವರಹ’ ನಾಣ್ಯದ ಕರ್ತೃಗಳಾದರು. ಇವರ ನಂತರ ಕಲ್ಯಾಣದ ಚಾಳುಕ್ಯರು ಹಾಗೂ ವಿಜಯನಗರದ ಅರಸರು ‘ವರಹ’ ನಾಣ್ಯವನ್ನು ಮುದ್ರಿಸಿದರು.