ಕರ್ನಾಟಕದಲ್ಲಿ ಬಾಳಿ ಬದುಕಿದ ಅರಸು ಮನೆತನಗಳು ಅಂತಸ್ತು, ಗೌರವ, ಪ್ರತಿಷ್ಠೆಯಿಂದ ರಾಜ್ಯವಾಳಿವೆ. ಹೀಗೆ ಆತ್ಮಶ್ರೀ, ಪ್ರತಿಷ್ಠೆಯಿಂದ ರಾಜ್ಯವಾಳಿದ ಅರಸು ಮನೆತನ ಬಾದಾಮಿ ಚಾಲುಕ್ಯರದು. ಬಾದಾಮಿಯನ್ನು ಸಂಸ್ಕೃತಿ ಉತ್ಕೃರ್ಷದ ಕೇಂದ್ರವನ್ನಾಗಿಸಿಕೊಂಡು ಕರ್ನಾಟಕ ಸಂಸ್ಕೃತಿಗೆ ಭದ್ರಬುನಾದಿ ಹಾಕಿ ಸುಮಾರು ಇನ್ನೂರು ವರ್ಷ ರಾಜ್ಯವಾಳಿದರು. ಇವರ ಆಳ್ವಿಕೆಯ ಕಾಲ ಕರ್ನಾಟಕದಲ್ಲಿ ಸುವರ್ಣಯುಗವೆಂದು ಹೆಸರಾಗಿದೆ.

ಚಾಲುಕ್ಯರು ಸಾಮ್ರಾಜ್ಯದ ಭದ್ರತೆ ಮತ್ತು ವಿಶಾಲ ವಿಸ್ತಾರಕ್ಕಾಗಿ ತಮ್ಮ ಸುತ್ತ ಮುತ್ತಲಿನ ಮಂಡಲೇಶ್ವರ, ಸಾಮಂತರೊಡನೆ ರಕ್ತ ಸಂಬಂಧ ಬೆಸೆದು ಅನುಕೂಲ ಕಲ್ಪಿಸಿಕೊಂಡಿದ್ದರು. ಇವರಲ್ಲಿ ಸಮಾನ ಅಂತಸ್ತು, ಗೌರವ, ಮನಸ್ಸು ಮನಗಂಡ ಚಾಲುಕ್ಯರು ಸಂಬಂಧವನ್ನು ಸದೃಢಗೊಳಿಸಿಕೊಳ್ಳುವಲ್ಲಿ ಪ್ರಯನ್ನಶೀಲರಾಗಿದ್ದರು. ಇದರಿಂದಾಗಿ ಸಾಮಂತರ ಅಂತಸ್ತು, ಗೌರವ, ಪ್ರತಿಷ್ಠೆಗೆ ಗರಿಮೂಡಿಸಿದಂತಾಗಿತ್ತು. ಹೀಗೆ ಬಾಂಧವ್ಯದ ಬೆಸುಗೆಯಲ್ಲಿ ಪಾಲುಗಾರರಾದವರಲ್ಲಿ ಪ್ರಮುಖರು ಗಂಗರು, ಬಟ್ಟೂರ ಕುಲದವರು, ಸೇಂದ್ರಕರು, ಕದಂಬರು, ಆಳುಪರು ಮತ್ತು ಕಲಚೂರ್ಯರು. ಇವರನ್ನೆಲ್ಲ ತಬ್ಬಿಕೊಂಡು ಚಾಲುಕ್ಯರು ಕರ್ನಾಟಕ ಸಂಸ್ಕೃತಿಯನ್ನು ವಿಸ್ತರಿಸಿದ ರಾಜ್ಯದಲ್ಲಿ ಪಸರಿಸಿದರು.

ಬಾದಾಮಿ ಚಾಲುಕ್ಯರು ಸಾಮ್ರಾಜ್ಯದ ಭದ್ರತೆಗಾಗಿ ಕೈಕೊಂಡಿದ್ದ ಬಾಂಧವ್ಯ ಅಂದು ಮಹಾಮಂಡಲೇಶ್ವರ, ಸಾಮಂತರಿಗೆ ಬಲಿಷ್ಠತೆ ತಂದಿತ್ತು. ಮೊದಲನೆಯ ಪುಲಿಕೇಶಿಯ ಪತ್ನಿ ದುರ್ಲಭಾದೇವಿ ಬಟ್ಟೂರ ಕುಲದವಳು. ಈಕೆ ಬಾದಾಮಿಯ ಸುತ್ತಮುತ್ತಲಿನ ಕೆಲವು ಪ್ರಾಂತಗಳ ಆಡಳಿತ ಸೂತ್ರ ಹಿಡಿದಿರುವ ಸಂಭಾವ್ಯವಿದೆ. ಕಿಸುವೊಳಲು, ಕೆಂದೂರು, ನಂದಿಗ್ರಾಮ(ಇಂದಿನ ನಂದಿಕೇಶ್ವರ), ವ್ರೀಹಿ ಮುಖ ಗ್ರಾಮ, ಶ್ರೀಯಂಬಾಟಕ ಮೊದಲಾದ ಹತ್ತು ಗ್ರಾಮಗಳನ್ನು ದುರ್ಲಭಾದೇವಿಯ ಆಜ್ಞೆಯ ಮೇರೆಗೆ ಮಗ ಮಂಗಳೇಶನು ಮಕುಟೇಶ್ವರ ದೇವರಿಗೆ ದಾನ ನೀಡಿದ ದಾಖಲೆ ಇದೆ

[1] ಹೀಗೆ ದಾನ ನೀಡಿದ ದುರ್ಲಭಾದೇವಿಯನ್ನು ಮಹಾಕೂಟ ಶಾಸನವು ‘ಸ್ವಗುರುಪತ್ನಿ’ ಎಂದು ಉಚ್ಚರಿಸಿದೆ. ಆದರೆ ದುರ್ಲಭಾದೇವಿಯು ಮಂಗಳೇಶನ ತಾಯಿ ಎಂಬುದು ಶಾಸನದಂದ ಸ್ಪಷ್ಟ. ಮೊದಲನೆಯ ಪುಲಿಕೇಶಿಯ ದ್ವಿತೀಯ ಪುತ್ರ ಕೀರ್ತಿವರ್ಮನು ಸೇಂದ್ರಕ ವಂಶದ ದೊರೆ ಶ್ರೀ ವಲ್ಲಭ ಸೇನಾನಂದನನ ಸಹೋದರಿಯನ್ನು ಮದುವೆ ಮಾಡಿಕೊಂಡುದಕ್ಕೆ ಉಲ್ಲೇಖವಿದೆ.[2] ಇಮ್ಮಡಿ ಪುಲಿಕೇಶಿಯು ತನ್ನ ಅರ್ಧಾಂಗಿಯನ್ನಾಗಿ ಸ್ವೀಕರಿಸಿದ್ದು ಅಗ್ರಮಹಾದೇವಿಯನ್ನು. ಈಕೆ ಸಾಮಂತ ಕದಂಬರ ವರಪುತ್ರಿ.[3] ಒಂದನೆಯ ವಿಕ್ರಮಾದಿತ್ಯನು ಗಂಗ ದುರ್ವಿನೀತನ ಮಗಳಾದ ಗಂಗ ಮಹಾದೇವಿಯನ್ನು ವರಿಸಿದ್ದನು.[4] ಆತನ ಸಹೋದರ ಚಂದ್ರಾದಿತ್ಯನ ಮಡದಿ ವಿಜಯಾ (ವಿಜ್ಜಿಕೆ) ಖ್ಯಾತ ಸಂಸ್ಕೃತ ಸಾಹಿತಿ. ‘ಕೌಮುದಿ ಮಹೋತ್ಸವ’ ಎಂಬ ಸಂಸ್ಕೃತ ನಾಟಕದ ಕರ್ತೃ. ತನ್ನ ಸಮಕಾಲೀನ ಕವಿಗಲಿಗಿಂತ ತನಾನು ಶ್ರೇಷ್ಠಗಳೆಂಬ ಅಭಿಮಾನ ಆಕೆಯದು.

ವಿನಯವತಿಯು ವಿನಯಾದಿತ್ಯನ ಮಡದಿ. ಈಕೆ ಬಾದಾಮಿಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಒಂದೇ ಮಂದಿರಲ್ಲಿ ಪ್ರತಿಷ್ಠಾಪಿಸಿರುವಳ. ಇದು ಕರ್ಟಕದ ಮೊದಲ ತ್ರಿಕೂಟಾಲಯವೆನಿಸಿದೆ. ವಿನಯಾದಿತ್ಯನ ಮಗಳಾದ ಕುಂಕುಮ ಮಹಾದೇಯ ಆಳುವ ವಂಶದ ದೊರೆ ಚಿತ್ರವಾಹನನನ್ನು ವರಿಸಿದಳು. ಈಕೆ ಲಕ್ಷ್ಮೇಶ್ವರದಲ್ಲಿ ಆನೆಸಜ್ಜೆ ಬಸದಿಯನ್ನು ಕಟ್ಟಿಸಿದ ಗೌರವಕ್ಕೆ ಪಾತ್ರಳಾಗಿದ್ದಾಳೆ.

ಮಹಾಕೂಟ ಶಾಸನದಲ್ಲಿ ‘ವಿಜಯಾದಿತ್ಯ ಸತ್ಯಾಶ್ರಯ ಶ್ರೀ ಪೃಧ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಭಟಾರರಾ ಪ್ರಾಣವಲ್ಲಭೆ ವಿನಾಪೊಟಿಗಳೆ ನ್ವೊರ್ಸೂಳೆಯರ್….’ ಎಂಬ ರಾವೇಶ್ಯೆಯೋರ್ವಳ ಪ್ರಸ್ತಾಪವಿದೆ. ವಂಶ ಪಾರಂಪರ್ಯ ಸೂಳೆಗಾರಿಕೆಯ ತಮ್ಮ ಪರಂಪರೆಯನ್ನು ತಿಳಿಸುವಲ್ಲಿ ಯಾವುದೇ ಅಗೌರವದ ಭಾವನೆ ಇಲ್ಲ. ವಿನಾಪೊಟಿಯ ತಾಯಿ ಕುಚಿಪೊಟಿ ಅಜ್ಜಿ ರೇವಮಂಚಳನ್ನು ಈ ಶಾಸನವು ಉಲ್ಲೇಖಿಸಿಸೂ[5] ವಿನಾಪೋಟಿಯು ಹಿರಣ್ಯಗರ್ಭ ದಾನವನ್ನು ಮಾಡಿ ದೇವರಿಗೆ ರತ್ನ ಪೀಠವನ್ನೂ, ಬೆಳ್ಳಿಯ ಕೊಡೆಯನ್ನು ನೀಡಿ ‘ಅಷ್ಟಶತಂ ಕ್ಷೇತ್ರಂ’ ಭೂಮಿಯನ್ನು ದಾನ ಮಾಡಿದಳು. ಪಟ್ಟದಕಲ್ಲಿನ ಶಾಸನವೊಂದರಲ್ಲಿ ವಿಜಯಾದಿತ್ಯನು, ಸಂಗೀತಗಾರ ಈ ಹಿಂದೆ ನೀಡಿದ್ದ ಕೆಲವು ಮರ್ಯಾದೆಗಳನ್ನು  ರಾಣಿ ಲೋಕಮಹಾದೇವಿಯು ನವೀಕರಿಸಿದುದು ದಾಖಲಾಗಿದೆ.[6]

ಇಮ್ಮಡಿ ವಿಕ್ರಮಾದಿತ್ಯನ ಪತ್ನಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ಇಂದಿನ ವಿರೂಪಾಕ್ಷ ಗುಡಿ) ಮತ್ತು ತ್ರೈಲೋಕೇಶ್ವರ (ಇಂದಿನ ಮಲ್ಲಿಕಾರ್ಜುನ ಗುಡಿ) ದೇವಾಲಯಗಳನ್ನು ಕಟ್ಟಿಸಿರುವರು. ಇವರು ಹೈಹಯ ವಂಶದ ಸೋದರಿಯರು ಲೋಕೇಶ್ವರ ದೆವಾಲಯದ ಸೂತ್ರಧಾರಿ ಸರ್ವಸಿದ್ದಿ ಆ ವೂರು ಬಾರಿ ‘ಪೆರ್ಜೆಱೀಪು’ ಎಂಬ ಘನತರ ಗೌರವವನ್ನು ಸಲ್ಲಿಸಿರುವರು. ಲೋಕಮಹಾದೇವಿಯು ಕಟ್ಟಿಸಿದ ಲೋಕೇಶ್ವರ ದೇವರಿಗೆ ನರೆಯಂಗಲ್ಲಿನ ಪನ್ನಾಸ (ಎಲೆಯ ಸುಂಕ?) ವನ್ನು ವಿಕ್ರಮಾದಿತ್ಯ ಅರಸನು ಬಿಟ್ಟಿದ್ದನ್ನು ಶಾಸನವೊಂದು ತಿಳಿಸುತ್ತದೆ.[7]

ಬಾದಾಮಿ ಚಾಲುಕ್ಯ ರಾಣಿಯರು ಶಾಂತಿ, ಸೌಹಾರ್ದತೆಯನ್ನು ನೆಲೆಸುವಲ್ಲಿ, ಸಾಮ್ರಾಜ್ಯದ ಸರ್ವತೋಮುಖ ಬೆಳವಣಿಗೆಯನ್ನು ತೀವ್ರಗೊಳಿಸುವಲ್ಲಿ ನೆರವಾದದ್ದನ್ನು ಈ ಮೇಲಿನ ಸಂಗತಿಗಳನ್ನು ಪುಷ್ಟೀಕರಿಸುತ್ತವೆ. ಆಡಳಿತ ನಿರ್ವಹಣೆಯಲ್ಲಿ ಕಲಾ ಪೋಷಣೆಯಲ್ಲಿ, ಅವರು ತೋರಿದ ಔದಾರ್ಯ, ಮಾಡಿದ ದಾನ ಧರ್ಮಗಳು ಉಳಿದ ಸಾಮ್ರಾಜ್ಯಗಳಿಗೆ ಮಾರ್ಗದರ್ಶಕ ವಾದವು.


—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]      ಅಯ್.ಎ., XIX ಪು. ೧೬‑೧೮, (ಕ್ರಿ.ಶ.೬೦೨)

[2]      ಆಯ್.ಎ., IX, ಪು. ೧೨೪

[3]      ಎ.ಇ. VI., ಪು.೪

[4]      ಎ.ಇ. X, ಪು.೧೦೦

[5]     ಆಯ್. ಎ VII, ಪು. ೧೦೩

[6]     ಆಯ್. ಎ. X, ಪು ೧೬೬

[7]     ಆಯ್.ಎ. X, ಪು. ೧೬೭