ಕವುತ್ರಿಯರಾಗಲಿ, ಸಾಹಿತ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದ ಮಹಿಳೆಯರಾಗಲಿ ಒಟ್ಟಿನಲ್ಲಿಯೇ ಹೆಚ್ಚು ಸಂಖ್ಯೆಯಲ್ಲಿಲ್ಲ. ವೇದಕಾಲದ ಋಕ್ಕುಗಳನ್ನು ರಚಿಸಿದ ಬ್ರಹ್ಮವಾದಿನಿಯರನ್ನು ಬಿಟ್ಟರೆ, ತರುವಾಯದ ಕವಯಿತ್ರಿಯರ ಸಂಖ್ಯೆ ದೊಡ್ಡದಾಗಿಲ್ಲ. ಇದುವರೆಗೆ ಪರಿಶೀಲಿಸಿದಂತೆ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರಣಗಳು ಇದರ ಮೂಲದಲ್ಲಿವೆ. ಯಾವ ಸಾಹಿತ್ಯದ ಇತಿಹಾಸದಲ್ಲಾದರೂ ಇದೇ ಪರಿಸ್ಥಿತಿ ಗೋಚರವಾಗುತ್ತದೆ.

ಸಂಸ್ಕೃತಕ್ಕೆ ರಾಜಾಶ್ರಯ ದೊರೆತಾಗ, ರಾಜಮನೆತನದ ಕೆಲ ಮಹಿಳೆಯರು ಸಂಸ್ಕೃತಕ್ಕೆ ತಮ್ಮ ಸಾಹಿತ್ಯಿಕ ಕಾಣಿಕೆಯನ್ನು ಸಲ್ಲಿಸಿದರು. ಕನ್ನಡಕ್ಕೂ ರಾಜಾಶ್ರಯ ದೊರೆತಾಗ, ಕನ್ನಡ ಸಾಹಿತ್ಯಕ್ಕೂ  ಮಹಿಳೆಯರು ತಮ್ಮ ಕಾಣಿಕೆಯನ್ನು ಸಲ್ಲಿಸಿದರು. ಸಂಸ್ಕೃತ ಸಾಹಿತ್ಯಕ್ಕೂ ಕನ್ನಡಿತಿಯರು ಸಲ್ಲಿಸಿದ ಕಾಣಿಕೆಯಿದೆ.

ಅವರೇ ಕನ್ನಡತಿಯಾರದ

೧. ವಿಜಯಾ ೨. ಗಂಗಾಬಿಕೆ ೩. ತಿರುಮಲಾಂಬೆಯರು.

ಇವರು ೧೩ ರಿಂದ ೧೭ನೆಯ ಶತಮಾನದವರೆಗಿನ ಅವಧಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಕನ್ನಡತಿಯರೆಲ್ಲ ರಾಜಮನೆತನದವರೇ ಎಂಬುದು ಗಮನಾರ್ಹವಾದ ವಿಷಯವಾಗಿದೆ.

‘ಕೌಮುದಿ ಮಹೋತ್ಸವ’ವೆಂಬ ನಾಟಕವನ್ನು ಬರೆದಿರುವಳೆಂಬ ಖ್ಯಾತಿಯಿರುವ ವಿಜಯಾಂಬಿಕೆ (ವಿಜ್ಜಿಕೆ) ಪ್ರಾಚೀನಳು; ಅವಳ ಕಾಲ. ದೇಶ. ವ್ಯಕ್ತಿತ್ವದ ಬಗ್ಗೆ ನಿಶ್ಚಿತವಾದ ಅಭಿಪ್ರಾಯವಾವುದೂ ಇಲ್ಲ. ಹತ್ತನೆಯ ಶತಮಾನದ ರಾಜಶೇಖರನು,

ಸರಸ್ವತೀ ಕರ್ಣಾಟೀ ವಿಜಯಾಂಕಾ ಜಯತ್ಯಸೌ |
ಯಾ ವೈದರ್ಭಗಿರಾಂ ವಾಸಃ ಕಾಲಿದಾಸಾದನಂತರಮ್||

‘ಕಾಳಿದಾಸನ ತರುವಾಯ ವೈದರ್ಭೀ ಶೈಲಿಯಲ್ಲಿ ಬರೆದ ಕರ್ಣಾಟ ದೇಶದ ವಿಜಯಾ ಸರಸ್ವತಿಯಂತೆ ರಾಜಿಸುತ್ತಾಳೆ’- ಎಂದು ಅವಳನ್ನು ವರ್ಣಿಸಿದ್ದಾನೆ. ಇವಳು ಕರ್ಣಾಟ ದೇಶದವಳೆಂಬುದು ಇದರಿಂದ ಸಿದ್ಧವಾಗುತ್ತದೆ ಮತ್ತು ರಾಜಶೇಖರನಿಗಿಂತ ಪ್ರಾಚೀನಳೆಂಬುದು ಇದರಿಂದ ಗೊತ್ತಾಗುತ್ತದೆ.

ವಿಜ್ಜಿಕೆಯೇ ಹೇಳಿದ ಮಾತಿದು
ನಿಲೋತ್ಪಲದಲಶ್ಯಾಮಿಆಂ ವಿಜ್ಜಿಕಾ ಮಾಮಜಾನತಾ|
ವೈಥೈವ ದಂಡಿನಾ ಪ್ರೋಸರ್ವಶುಕ್ಲಾ ಸರಸ್ವತೀ||

[1]

‘ಶ್ಯಾಮಲವರ್ಣದ ವಿಜ್ಜಿಕೆಯನ್ನರಿಯದೇ, ದಂಡಿಯ ಸರಸ್ವತಿಯು ಗೌರವರ್ಣದವಳೆಂದು ಸುಮ್ಮನೆ ವರ್ಣಿಸಿದ್ದಾನೆ‘- ಅಂದರೆ ತಾನೇ ಸರಸ್ವತಿಯ ಅವತಾರವೆಂದು ಹೇಳಿಕೊಂಡಿದ್ದಾಳೆ. ಮೇಲೆ ವರ್ಣಿತಳಾದ ವಿಜಯಾ ಹಾಗೂ ವಿಜ್ಜಿಕೆ ಇಬ್ಬರೂ ಒಂದೇ ಆಗಿರಬೇಕು ಎಂಬ ಊಹೆಗೂ ಅವಕಾಶವಿದೆ. ದಂಡಿಯ ಕಾಲವು ಏಳನೆಯ ಶತಮಾನವಿರುವುದರಿಂದ ಇವಳು ಆ ತರುವಾಯದವಳಿರಬೇಕು.

ಏಕೋsಭೂತ್ ನಲಿನಾತ್ ತತಶ್ಚಪುಲಿನಾತ್ ಪವ್ಮೀಕತಶ್ಚಾಪರ|
ತೇ ಸರ್ವೆ ಭವಂತಿ ಕವಯುಸ್ತೇಭ್ಯೋ ನಮಸ್ಕುರ್ಮಹೆ||
ಆರ್ವಾಂಚೋ ಯದಿ ಗದ್ಯಪದ್ಯರಚನೈಶ್ಚೇಶ್ಚಮತ್ಕುರ್ವತೆ|
ತೇಷಾಂ ಮೂರ್ಧ್ನಿ ದದಾಮಿ ವಾಮಚರಣಂ ಕರ್ಣಾಟರಾಜಪ್ರಿಯಾ||

‘ಕಮಲದಿಂದ ಹುಟ್ಟಿದ ಬ್ರಹ್ಮ, ಮಳಲಿನಿಂದ ಹುಟ್ಟಿದ ವ್ಯಾಸ, ಹುತ್ತದಿಂದ ಹುಟ್ಟಿದ ವಾಲ್ಮೀಕಿ, ಇವರೇ ಕವಿಗಳು! ಅವರಿಗೆ ನಮ್ಮ ವಂದನೆ; ಉಳಿದವರು ಗದ್ಯ-ಪದ್ಯ ರಚನಾ ಚಾತುರ್ಯವನ್ನು ತೋರಿಸಹೋದರೆ, ಕರ್ಣಾಟ ರಾಜಪ್ರಿಯೆಯಾದ ನಾನು ಅವರ ತಲೆಯ ಮೇಲೆ ಎಡಗಾಲನ್ನಿರಿಸುತ್ತೇನೆ.’

ಈ ಎಲ್ಲ ವಿವೇಚನೆಯಿಂದ ದಂಡಿ ಹಾಗೂ ರಾಜಶೇಖರ ಕಾಲವಾದ ಏಳು ಮತ್ತು ಹತ್ತನೆಯ ಶತಮಾನಗಳ ಮಧ್ಯದಲ್ಲಿ ವಿಜ್ಜಿಕೆ ಅಥವಾ ವಿಜಯಾ ಇದ್ದಿರಬೇಕೆಂಬುದು ಸ್ಪಷ್ಟವಾಗುತ್ತದೆ. ವಿಜ್ಜಿಕೆ ಅಥವಾ ವಿಜಯಾ ಇದ್ದಿರಬೇಕೆಂಬುದು ಸ್ಪಷ್ಟವಾಗುತ್ತದೆ. ವಿಜ್ಜಿಕೆಯಿಂದ ರಚಿತವಾದ ಪದ್ಯಗಳನ್ನು ಲಾಕ್ಷಣಿಕರಾದ ಮುಕುಲಭಟ್ಟ(೯ನೆಯ ಶತಮಾನ), ಮಮ್ಮಟ, ಭೋಜ, ವಿಶ್ವನಾಥ ಮೊದಲಾದವರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿರುವರು.

‘ಕೌಮುದೀ ಮಹೋತ್ಸವ’ ನಾಟಕದ ಪ್ರತಿಯೂ, ಸದ್ಯ ದೊರೆತಿರುವುದು, ಗೆದ್ದಲು ತಿಂದು ಉಳಿದ ಭಾಗ! ಒಂದು ಶ್ಲೋಕದ ಅಳಿದುಳಿದ ಭಾಗದಲ್ಲಿ, ‘ಕಯಾನಿಬದ್ದಂ’ ಎಂಬುದರ ಆಧಾರದಿಂದಲೂ, ‘ಜಯಂತಿ ಪ್ರಥಮಂ ವಿಜಯಾ’ ಎಂಬ ನಾಟಕ ವಾಕ್ಯದಿಂದಲೂ, ಅಲ್ಲದೆ ದೊರೆವ ಆಂತರಿಕ ಆಧಾರದಿಂದಲೂ, ಎಂಟನೆಯ ಶತಮಾನದ ನಾಟಕವಿದು ಎಂದು ನಿರ್ಧರಿಸಲು ಬರಬುಾದ್ದರಿಂದಲೂ ವಿಜ್ಜಿಕೆ ಎಂಟನೆಯ ಅಥವಾ ಹತ್ತನೆಯ ಶತಮಾನದವಳಿದ್ದಿರಬೇಕು ಎಂಬ ಊಹೆಗೆ ಬಲವಾದ ಅವಕಾಶವಿದೆ.

ಕರ್ನಾಟಕದಲ್ಲಿ ಆಳಿದ ರಾಜಮನೆತನಗಳಲ್ಲಿ (ಅ) ಚಾಲುಕ್ಯ ವಂಶದ ಮೂಲ ಸಂಸ್ಥಾಪಕ ವಿಷ್ಣುವರ್ಧನನ ತಾಯಿ, ವಿಜಯಾದಿತ್ಯನ ಹೆಂಡತಿಯೊಬ್ಬಳು ವಿಜಯಾ (ಬ) ಪೂರ್ವ ಚಾಲುಕ್ಯ ಮನೆತನದಲ್ಲಿ ವಿಜಯಾದಿತ್ಯನೆಂಬ ಇನ್ನೋರ್ವನ ಹೆಂಡತಿ ವಿಜಯಮಹಾದೇವಿ. ಇದು ಪೀಠಪುರ ಶಾಸನದಿಂದ ವ್ಯಕ್ತವಾಗುತ್ತದೆ.

ಏತೇಷು ವಿಜಯಾದಿತ್ಯೊ ಸೂರ್ಯಾನ್ವಯ ಸಮುದ್ಭುವಾಮ್|
ಉಪಯೇಮೇಥ ವಿಜಯಾಂ ಮಹಾದೇವಿಯಂ ಮಹೀಸಮಾಮ್||[2]

(ಕ) ಬಾದಾಮಿಯ ಚಾಲುಕ್ಯ ಮನೆತನದಲ್ಲಿ ಎರಡನೆಯ ಪುಲಿಕೇಶಿಯ ಸೊಸೆ, ಚಂದ್ರಾದಿತ್ಯನ ಹೆಂಡತಿ ವಿಜಯಾ(ನೆರೂರ ಶಾಸನ). (ಡ) ನೃಪತುಂಗನ ಸೇನಾಪತಿ ಬಂಕೇಶನೆಂಬವನ ಹೆಂಡತಿ ವಿಜಯಾ.[3]

ಈ ನಾಲ್ವರು ವಿಜಯೆಯರಲ್ಲಿ ಬಂಕೇಶನ ಪತ್ನಿಯೊಬ್ಬಳೇ ಒಂಬತ್ತು ಹತ್ತನೆಯ ಶತಮಾನದ ಕಾಲಕ್ಕೆ ಹೊಂದಿಕೊಳ್ಳುತ್ತಾಳೆ. ಆದರೆ ಕರ್ಣಾಟಕರಾಜ ಪ್ರಿಯಾ ಎಂದು ಅವಳು ತನ್ನನ್ನು ಕರೆದುಕೊಳ್ಳುತ್ತಾಳೆ. ಆದರೆ ಕರ್ಣಾಟಕರಾಜ ಪ್ರಿಯಾ ಎಂದು ಅವಳು ತನ್ನನ್ನು ಕರೆದುಕೊಳ್ಳಬಹುದೇ ಎಂಬ ಶಂಕೆಯುಂಟಾಗುತ್ತದೆ. ಯಾರೆಂದು ಹೇಳುವುದು ಕಷ್ಟಕರವೇ! ಚಂದ್ರಾದಿತ್ಯನ ಹೆಂಡತಿಯೇ ಗ್ರಂಥಕರ್ತ್ರೆ ಎಂದು ಗ್ರಹಿಕೆ.[4] ಶಾಸನದಲ್ಲಿ ಇವಳು ‘ಕಲಿಕಾಲಪತಿಕ್ಷಭೂತಾ’ ಎಂದು ತನ್ನ ಧಾರ್ಮಿಕ ಮನೋಭಾವನೆಯಿಂದಾ ಹೊಗಳಲ್ಪಟ್ಟಿದ್ದಾಳೆ. ಈಕೆ ಪತಿಯ ಮರಣಾನಂತರ ರಾಜ್ಯಭಾರ ಮಾಡಿದ್ದಾಳೆಂದು ಡಾ.ಫ್ಲೀಟ್ ಅವರ ಅವರ ಅಭಿಪ್ರಾಯ[5]

“ಕೌಮುದೀ ಮಹೋತ್ಸವ” ಐದಂಕರ ನಾಟಕ: ಭಾಸ-ಕಾಲಿದಾಸರ ಪ್ರಭಾವವು ನಾಟಕದ ಮೇಲೆ ಬಹಳವಾದಂತಿದೆ. ನಾಟಕದ ಮೇಲೆ ‘ರತ್ನಾವಳಿ’ಯ ಪ್ರಭಾವವೂ ಇದೆ.

ವಿರಸಾಪಿ ಕೃತಿಃ ಪ್ರಪತ್ಸ್ಯಗೆ ಮಧುನಿಷ್ಯಂದಮಯೀಂ ದಶಾಂತರಂ|
ಯದಿ ನಾಮ ಸತಾಮನುಗ್ರಃ ಪ್ರಾಉರವೇರಿವಾತಪಮ್||

ಕೃತಿಯು ನೀರಸವಾಗಿದ್ದರೂ, ಸಹೃದಯರ ಕೃಪೆಯಿದ್ದರೆ, ಚಳಿಗಾಲದ ಬಿಸಿಲಿನಂತೆ ಸುಖಕರವಾಗಿಯೇ ಇರುವುದು. ಪ್ರೇಮ ಹಾಗೂ ರಾಜಕೀಯ ಘಟನೆಗಳಿಂದ ಕೂಡಿದ ನಾಟಕವಿದು. ನಾಯಕನಾದ ಕಲ್ಯಾಣವರ್ಮನಿಗೆ ರಾಜ್ಯಪ್ರಾಪ್ತಿ ಮತ್ತು ಕೀರ್ತಿಮತಿಯ ಸಮಾಗಮಗಳಿಂದ ಮುಕ್ತಾಯವಾಗುತ್ತದೆ. ಮಂತ್ರಿ ಮಂತ್ರಗುಪ್ತನ ಯೋಜನೆಯಿಂದಾಗಿ ರಾಜಕುಮಾರ ಕಲ್ಯಾಣವರ್ಮನು ಬದುಕಿ, ಬೆಳೆದು, ರಾಜ್ಯವನ್ನೂ ಕೀರ್ತಿಮತಿಯನ್ನೂ ಪಡೆಯುವುದು ಸಾಧ್ಯವಾಗುತ್ತದೆ. ಹಾಸ್ಯ, ವೀರ, ಶೃಂಗಾರ ಎಲ್ಲ ರಸಗಳ ಚಿತ್ರಣಕ್ಕೂ ಯಥಾವಕಾಶ ದೊರೆತಿದೆ.

‘ಅಂಧಸ್ಯ ಕೂಪಪತನಮ್ ಸಂವೃತ್ತಮ್, ಪೂರ್ವ ರಾಜ್ಯನಾಶಃ ತತಃ ಸ್ತ್ರೀ ತಂತುನಾ ಬಂಧನಂ.’

ಇದು ಕುರುಡನು ಭಾವಿಗೆ ಬಿದ್ದಂತಾಯಿತು. ಈಗಾಗಲೇ ರಾಜ್ಯವನ್ನು ಕಳೆದುಕೊಂಡಿರುವಿ; ಈಗ ಸ್ತ್ರೀಯೆಂಬ ಹಗ್ಗದಿಂದ ಬಿಗಿದುಕೊಳ್ಳುತ್ತಿರುವಿ’ ಎಂದು ವಿದೂಷಕನು ಕಲ್ಯಾಣವರ್ಮನಿಗೆ ಹೇಳಿದಾಗ, ಸಹೃದಯ ಪ್ರೇಕ್ಷಕರು ನಗದೇ ಇರಲಾರರು.

ಸನ್ಯಾಸಿನಿ ಯೋಗಸಿದ್ದಿಯು ನಾಟಕದ ವಸ್ತುವು ತ್ವರಿತಗತಿಯಿಂದ ವಿಕಾಸಹೊಂದಲು ಸಹಾಯಕಾರಿಯಾಗಿದ್ದಾಳೆ. “ಮಾಲತೀ ಮಾಧವ”ದ ಕಾಮಂದಕಿಯನ್ನು ಇವಳು ಹೋಲುತ್ತಾಳೆ. ಇದರಲ್ಲಿಯ ಕೌಮುದೀ ಮಹೋತ್ಸವದ ಕಲ್ಪನೆ “ಮುದ್ರಾರಾಕ್ಷಸ”ದಿಂದ ಬಂದಂತಿದೆ. ಒಟ್ಟಿನಲ್ಲಿ ಉಪಲಬ್ಧವಿದ್ದ ನಾಟಕಗಳಲ್ಲಿಯ ಎಲ್ಲ ಒಳ್ಳೆಯ ಅಂಶಗಳನ್ನೂ ತೆಗೆದುಕೊಳ್ಳಲು ನಾಟಕಕಾರ್ತಿ ಯತ್ನಿಸಿದ್ದಾಳೆ. ಮೇಲೆ ತನ್ನದೇ ಆದ ಪ್ರತಿಭೆ ಮೆರಗನ್ನೂ ಕೊಟ್ಟು, ನಾಟಕಕ್ಕೆ ಹೊಸ ಕಳೆಯನ್ನು ತಂದಿದ್ದಾಳೆ.

ನಾಟಕದ ನಿಯಮಗಳನ್ನೆಲ್ಲ ನಾಟಕದಲ್ಲಿ ಅನುಸರಿಸಲಾಗಿದೆ. ಪಾತ್ರಗಳ ರಚನೆ, ರಸನಿರೂಪಣೆ ಆಕರ್ಷಕವಾಗಿದೆ. ಅನುಭವದ ಆಣಿಮುತ್ತುಗಳು ಅಲ್ಲಲ್ಲಿ ಇವೆ. ನಾಟಕವು ಸಂಪ್ರದಾಯವನ್ನನುಸರಿಸಿದ್ದರೂ ನಾಟಕದ ಕೊನೆ ಮಾತ್ರ ಸಂಪ್ರದಾಯಕ್ಕೆ ಒಳಗಾಗಿಲ್ಲ. ನಾಟಕದ ಹೆಸರನ್ನೂ ಸಂಪಾದಕರೇ ಕೊಟ್ಟಂತಿದೆ.

ನಾಟಕದ ಜೊತೆಗೆ ವಿಜ್ಜಿಕೆಯವೆಂದು ಹೇಳಲ್ಪಡುವ ಮೂವತ್ತು ಬಿಡಿ ಪದ್ಯಗಳು ಅಲಂಕಾರವಿನ್ಯಾಸದಿಂದಲೂ, ಅರ್ಥವತ್ತಾಗಿರುವುದರಿಂದಲೂ ತುಂಬ ಆಕರ್ಷಕವಾಗಿವೆ, ಮಮ್ಮಟ, ಭೋಜ, ವಿಶ್ವನಾಥರು ಇವಳ ಪದ್ಯಗಳನ್ನು ತಮ್ಮಗ್ರಂಥಗಳಲ್ಲಿ ಉದಾಹರಿಸಿದ್ದಾರೆ.

ಪ್ರಕೃತಿ ವರ್ಣನೆಯಲ್ಲಿ ವಿಜ್ಜಿಕೆಯದು ಎತ್ತಿದ ಕೈ: ಕಿಂಶುಕ ಪುಷ್ಪವೊಂದನ್ನು ಅವಳು ಈ ರೀತಿಯಾಗಿ ವರ್ಣಿಸಿದ್ದಾಳೆ.

ಕಿಂಶುಕ ಕಲಿಕಾಂತರ್ಗರ್ತಂ ಇಂದುಕಲಾಸ್ಪರ್ಧಿ ಕೇಸರಂ ಭಾತಿ|
ರಕ್ತನಿಚೋಲಕವಿಹಿತಂ ಧನುರಿವ ಜಾತಮುದ್ರಿತಂ ವಿತನೊಃ||

ಚಂದ್ರನ ಕಲೆಯೊಂದಿಗೆ ಸ್ಪರ್ಧಿಸುತ್ತಿರುವಂತೆ ಕಿಂಶುಕದ ಕೇಸರ ಕಾಣಿಸಿತಂತೆ ಕವಯತ್ರಿಗೆ!

ಬತ್ತ ಕುಟ್ಟುವ ನಾರಿಯರ ಒಂದು ಚಿತ್ರವನ್ನು ಕವಯಿತ್ರಿ ಚಿತ್ರಿಸಿದ್ದಾಳೆ. ನಾರಿಯರು ಬತ್ತ ಕಟ್ಟುವಾಗ ತೋಳುಗಳನ್ನು ಮೇಲೆ ಕೆಳಗೆ ಎತ್ತಿದಾಗ ಉಂಟಾದ ಬಳೆಗಳ ನಿನಾದ, ಹುಂಕಾರ, ಒನಕೆಯ ಸಪ್ಪಳ ಎಲ್ಲವೂ ತಾಳಲಯ ಬದ್ಧ|  ಗೀತಕ್ಕೆ ಮೇಳವಾದ್ಯ|

ವಿಲಾಸಮಸೃಣೋಲ್ಲಸನ್ಮುಸಲ ಲೋಕದೋಃ ಕಂದಲೀ-
ಪರಸ್ಪರಪರಿಸ್ಖಲದ್‌ವಲಯನಿಸ್ವನೋದ್ ಬಂಧುರಾಃ|
ಲಸಂತಿ ಕಲಹುಂಕೃತಿ ಪ್ರಸಭಕಂಪಿತೋರಸ್ಥಲತೃಟ
ದ್ಗಲದ್ಗಮಕಸಂಕುಲಾಃ ಕಲಮಕಂಡಿನೀಗೀತಯಃ|

ಪ್ರೇಮದ ಕಥಾವಸ್ತುವು, ಮತ್ತೆ ಮೇಲೆ ಸುಖಾಂತವಾಗಿಯೆ ಕಾಣತಕ್ಕದ್ದು. ಅಂದ ಮೇಲೆ ನಾಯಕ ನಾಯಿಕೆಯರ ವರ್ಣನೆ, ಪರಿಚಯ ಕೆಲವು ವಿಶಿಷ್ಟ ಸನ್ನಿವೇಶಗಳು ಅನಿವಾರ್ಯವೋ ಎನ್ನುವಂತೆ ಇಲ್ಲಿಯೂ ಬಂದಿವೆ: ಬಲಭುಜ ಹಾರುವುದು, ನಾಯಕಿಯರು ಸೀರೆಯ ಸೆರಗು ಬಳ್ಳಿಗೆ ತೊಡಕಿ ನಾಯಕನನ್ನು ಓರೆಗಣ್ಣಿನಿಂದ ನೋಡುವುದು ಇವೆಲ್ಲ ಇಂತಹ ಎಲ್ಲ ನಾಟಕಗಳಲ್ಲಿಯೂ ಬರುವಂತೆ ಇಲ್ಲಿಯೂ ಬಂದಿವೆ. ರಾಜಕೀಯ ಘಟನೆಗಳಲ್ಲಿ “ಮುದ್ರಾರಾಕ್ಷಸ”ದ ಪ್ರಭಾವವಿದೆ: ಕವಯಿತ್ರಿ ತನ್ನ ಹಿಂದಿನ ನಾಟಕಕಾರರ ಕೃತಿಗಳನ್ನೆಲ್ಲ ಅಭ್ಯಾಸ ಮಾಡಿರಬೇಕು ಎಂಬುದು ನಿಶ್ಚಿತ.

ನಾಟಕದಲ್ಲಿಯ ಪಾತ್ರಗಳ ರಚನೆ ಆಕರ್ಷಕವಾಗಿದೆ: ಇದರಲ್ಲಿ ಬರುವ ಪಾತ್ರಗಳು ಐತಿಹಾಸಿಕ ವ್ಯಕ್ತಿಗಳೇ ಹೇಗೆಂಬುದು ತಿಳಿಯದು.

ನಾಟಕದಲ್ಲಿ ಶೃಂಗಾರರಸವು ಮುಖ್ಯವಾಗಿ, ವೀರರಸವು ಅಂಗರಸವಾಗಿ, ಇನ್ನುಳಿದ ರಸಗಳು ಔಚಿತ್ಯವನ್ನರಿತು ಬಂದಿವೆ. ಸಂಭಾಷಣೆಗಳು ಸುಧೀರ್ಘವಾಗಿಲ್ಲ, ಚುರುಕಾಗಿವೆ. ಅಲ್ಲಲ್ಲಿ ಗಾದೆಯ ಮಾತಿನಂತಹ ಮಾತುಗಳೂ ಬರುತ್ತವೆ. ಆಕೆಯಿಂದ ರಚಿತವಾದ ಬಿಡಿಪದ್ಯಗಳಲ್ಲಿ ವಿಶೇಷತಃ ವಿವಿಧ ಅಲಂಕಾರಗಳಿಗೆ ಉದಾಹರಣೆಯಾಗುವಂತಹ ಪದ್ಯಗಳೇ ಇವೆ.

ಉತ್ತಮ ಕಾವ್ಯದಲ್ಲಿ ರಸಾಸ್ವಾದವನ್ನು ಧ್ವನಿಯನ್ನು, ಸವಿಯುವ ಸಹೃದಯರಿಗೆ ಕವಯಿತ್ರಿ ತನ್ನ ಗೌರವವನ್ನು ವ್ಯಕ್ತಪಡಿಸುತ್ತಾಳೆ.

ಕವೇರಭಿಪ್ರಾಯಮಶಬ್ದ ಗೋಚರಮ್|
ಸ್ಫುರಂತಮಾರ್ದ್ರೇಷು ಪದೇಷು ಕೋಮಲಮ್||
ಸ್ಫುರದ್ಭಿರಂಗೈಃ ಕೃತರೋಮವಿಕ್ರಿಯೈಃ|
ಜನಸ್ಯ ತೂಷ್ಣೀಂ ಭವತೋಯಮಂಜಲಿಃ||

ಅನ್ಯೋಕ್ತಿ ಹಾಗೂ ಇನ್ನಿತರ ಅಲಂಕಾರಗಳಿಗೆ ಅವಳು ಕೊಡುವ ಉದಾಹರಣೆಗಳು ಮಾರ್ಮಿಕವಾಗಿವೆ. ಹಳೆಯ ವಸ್ತುವನ್ನೇ ಆದರೂ ನೋಡುವ ದೃಷ್ಟಿಕೋನ ಹೊಸದಾಗಿದೆ. “ಕಾಮವನ್ನು ಶಂಕರನು ಜಯಿಸಿದನು, ಬುದ್ಧನು ಜಯಿಸಿದನು, ಪ್ರವಾಸದಲ್ಲಿರುವ ಪತಿಯೂ ಜಯಿಸಿದನು, ಹೀಗಾಗಿ ಕಾಮನು ದಿಕ್ಕುಗಾಣದೆ ಮನೆಯಲ್ಲಿದ್ದ ಅಬಲೆಯನ್ನು ಹಿಂಸಿಸುತ್ತಾನೆ” ಎಂದು ಕವಯಿತ್ರಿ ಹೇಳಿದಳು. ಕವಿ ಸಮಯದಲ್ಲಿಯೂ ನಾವೀನ್ಯವನ್ನು ತರಲೆತ್ನಿಸಿದ್ದಾಳೆ ವಿಜ್ಜಿಕೆ.

ಇಂತಹ ಪ್ರತಿಭಾನಿತ್ವ ಕವಯಿತ್ರಿ ವಿಜ್ಜಿಕೆ ಯಾರೆಂದು ನಿಶ್ಚಿತವಾಗಿ ತಿಳಿಯದೇ ಹೋದರೂ ಕರ್ನಾಟಕದವಳೆಂಬುದು ಅಭಿಮಾನದ ವಿಷಯ!


[1]     ಚತುರ್ಮುಖ ಮುಖಾಂಭೋಜವನ ಹಂಸವಧೂರ್ಮಮ |
ಮಾನಸೇ ರಮತಾಂ ದೀರ್ಘಂ ಸರ್ವಶುಕ್ಲಾ ಸರಸ್ವತೀ ||

[2]     ಸಂಸ್ಕೃತ ಕವಯತ್ರಿಯರು, ಪುಟ ೧೬.

[3]     ಕರ್ನಾಟಕ ಗತವೈಭವ

[4]     P.V.Kane: History of Sanskrit Poetics, pp.SLI.

[5]      Indian Antiquary, Vol, VII pp.೪೫.