ಕರ್ನಾಟಕದಲ್ಲಿ ತೀರ ಮೊದಲಣ ಕದಂಬ ವಂಶದ ದೊರೆಗಳನ್ನು ಸೋಲಿಸಿ, ತಮ್ಮ ಆಧಿಪತ್ಯ ಸ್ಥಾಪಿಸಿದ ಚಾಲುಕ್ಯರ ಕಾಲದಲ್ಲಿ, ಮಧ್ಯ ದಕ್ಖಣದಲ್ಲಿ ಕಾಣಿಸಿಕೊಂಡ ವಾಸ್ತುಶಿಲ್ಪಾದಿ ಕಲೆಗಳ ಕಡೆಗೆ ನಾವು ನಮ್ಮ ದೃಷ್ಟಿಯನ್ನು ಹರಿಯಿಸಬಹುದು. ನಮಗೆ ತಿಳಿದುಬಂದ ಮೊದಲ ಚಾಲುಕ್ಯ ದೊರೆ ಜಯಸಿಂಹನೆಂಬಾತ. ಈತ ಮೊದಲು ರಾಷ್ಟ್ರಕೂಟರ ದೊರೆಯೊಬ್ಬನ ಮಾಂಡಲಿಕನಾಗಿದ್ದು, ಅವನನ್ನು ಬಿಟ್ಟು ದಕ್ಖಣದ ಕೆಳಭಾಗಕ್ಕೆ ಬಂದು, ದಕ್ಷಿಣ ದಕ್ಖಣವನ್ನು ಆಳುತ್ತಿದ್ದ ಕದಂಬರೊಡನೆ ಕಾದಿ ಅವರನ್ನು ಸೋಲಿಸಿ ಐಹೊಳೆ ಎಂಬಲ್ಲಿ ಅರಸರು ತಮ್ಮ ರಾಜಧಾನಿಯನ್ನು ಸ್ಥಾಪಿಸಿದ(ಸು.ಕ್ರಿ.ಶ.೫೦೦). ಅಲ್ಲಿಂದ ಮುಂದಣ ಚಾಲುಕ್ಯ ಅರಸರು ತಮ್ಮ ರಾಜಧಾನಿಯನ್ನು ಸಮೀಪದ ಬಾದಾಮಿ ಅಥವಾ ವಾತಾಪಿಪುರ ಎಂಬಲ್ಲಿಗೆ ಒಯ್ದರು. ಜಯಸಿಂಹನ ಮುಂದಿನ ಪೀಳಿಗೆಯ ಅರಸರು ಕಾಲಕ್ರಮದಲ್ಲಿ ಪ್ರಬಲಿಸುತ್ತ ತಮ್ಮ ರಾಜ್ಯವನ್ನು ವಿಸ್ತರಿಸುತ್ತಲೇ ಹೋದರು. ರಾಜ್ಯವಿಸ್ತಾರದ ಕೆಲಸದಲ್ಲಿ ಈ ಚಾಲುಕ್ಯ ದೊರೆಗಳಿಗೆ, ಅವರ ರಾಜ್ಯದ ದಕ್ಷಿಣದಲ್ಲಿದ್ದ ಗಂಗರು ಅಡ್ಡ ಬಂದುದುಂಟು; ಹಾಗೆಯೇ ಕರ್ನಾಟಕದ ಪೂರ್ವ ಮತ್ತು ದಕ್ಷಿಣದ ಪ್ರದೇಶಗಳಿಗೆ ಒಡೆಯರಾಗಿದ್ದ ಬೇರೆ ಅರಸು ವಂಶದವರೂ ಅಡ್ಡ ಬರುತ್ತಿದ್ದರು. ಅವರೂ ಸ್ವರಾಜ್ಯ ವಿಸ್ತಾರದ ಬಾಯಾರಿಕೆಯ ಅರಸರೇ. ಚಾಲುಕ್ಯ ವಂಶದ ಅರಸರಲ್ಲಿ ಕೀರ್ತಿವರ್ಮ(ಕ್ರಿ.ಶ.೫೬೬-೯೮), ಮಂಗಳೇಶ( ೫೯೮-೬೦೯) ಇಮ್ಮಡಿ ಪುಲಕೇಶಿ (೬೦೮-೪೨) ಮೊದಲಾದ ಕೆಲವರು  ಹೆಸರಾದವರು. ಇಮ್ಮಡಿ ಪುಲಿಕೇಶಿ, ಕನೋಜದ ಹರ್ಷವರ್ಧನನ ಪ್ರಾದುರ್ಭಾವವನ್ನು ಹಿಮ್ಮೆಟ್ಟಿಸಿದ ಒಬ್ಬ ದೊರೆ. ಸುಮಾರು ಐದನೆಯ ಶತಮಾನದಿಂದ ಎಂಟರ ಮಧ್ಯಾವಧಿಯ ತನಕವೂ ಚಾಲುಕ್ಯರು ಕರ್ನಾಟಕದ ಬಹುಮಟ್ಟಿನ ಪ್ರದೇಶಗಳ ಒಡೆಯರಾಗಿ ಮೆರೆದರು.

ಈ ಅವಧಿಯಲ್ಲಿ ಚಾಲುಕ್ಯರು ಪಲ್ಲವ ರಾಜಧಾನಿಗೆ ದಂಡೆತ್ತಿ ಹೋಗಿ ಆಕ್ರಮಿಸಿದ್ದುಂಟು. ಪಲ್ಲವ ದೊರೆಗಳು ಬಾದಾಮಿಯನ್ನು ಆಕ್ರಮಿಸಿದ್ದೂ ಉಂಟು. ಇಂಥ ಪರಸ್ಪರ ಕಾದಾಟ, ವಿಪ್ಲವಗಳ ಎಡೆಯಲ್ಲೇ ಚಾಲುಕ್ಯವಾಸ್ತು, ಶಿಲ್ಪಾದಿ ಕಲೆಗಳು ಬೆಳಗಿದುದು ಅಚ್ಚರಿಯ ಸಂಗತಿಯೇ. ಅವರ ಕಾಲದಲ್ಲಿ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಎಂಬ ಮೂರು ನಗರಗಳಲ್ಲಿ ಕಾಣಿಸಿಕೊಂಡ  ಬ್ರಾಹ್ಮಣ ದೇವಾಲಯಗಳ ವಾಸ್ತು ವಿಕಾಸ ಅತ್ಯದ್ಭುತವಾದದ್ದು. ಅವುಗಳಲ್ಲಿ ಹೆಚ್ಚಿನವು ಬ್ರಾಹ್ಮಣ ದೇಗುಲಗಳಾದರೂ, ಅಲ್ಲೊಂದು ಇಲ್ಲೊಂದು ಜೈನ ದೇವಾಲಯವನ್ನೂ ನಾವು ಕಾಣುತ್ತೇವೆ. ಚಾಲುಕ್ಯರು ಆಳಿದ ಮೂರು ಶತಮಾನಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ನಾಗರ ಮತ್ತು ದ್ರಾವಿಡ ಎಂಬ ಎರಡು ವಾಸ್ತುಶೈಲಿಗಳ ದೇವಾಲಯಗಳನ್ನು ಕಾಣುತ್ತೇವೆ. ತೀರ ಸರಳವಾದ ಚಿಕ್ಕ ಗುಡಿಗಳಿಂದ ತೊಡಗಿ ಕಲಾಪೂರ್ಣವಾದ ಅದ್ಭುತಮಂದಿರಗಳ ರಚನೆಯ ತನಕವೂ ಇವೆ. ಈ ವಾಸ್ತುಗಳ ಅಲಂಕರಣೆ ಬಳಸಿಕೊಂಡ ಅಸಂಖ್ಯ ಶಿಲ್ಪಕೃತಿಗಳು ಕನ್ನಡ ನಾಡಿನ ಇತಿಹಾಸದಲ್ಲೇ ಹೆಸರಾದವು. ಅವುಗಳಲ್ಲಿ ಹಲವು ಗುಪ್ತಯುಗದ ಅತ್ಯುತ್ತಮ ಕೃತಿಗಳಿಗೆ ಸಾಟಿಯಾದುವು.

ಇವರ ಕಾಲದಲ್ಲಿ ಐಹೊಳೆ ಮತ್ತು ಬಾದಾಮಿಗಳಲ್ಲಿ ಗುಹಾಲಯಗಳನ್ನು ಕೊರೆದಿದ್ದಾರೆ. ಐಹೊಳೆಯು ರಾವಣನ ಗುಹೆ ಎಂಬೊಂದು ಸಣ್ಣ ಗುಹೆ ತೀರ ಮೊದಲಿನದು. ಅನಂತರ, ಬಾದಾಮಿಯಲ್ಲಿ ಮೂರು ಗುಹೆಗಳನ್ನೂ ಒಂದು ಜೈನ ಗುಹೆಯನ್ನೂ ಕೊರೆದುದುಂಟು. ಈ ಗುಹೆಯಲ್ಲಿ ಕೀರ್ತಿವರ್ಮ ಎಂಬ ದೊರೆಯ ಸೋದರನಾದ ಮಂಗಲೇಶನು (ಕ್ರಿ.ಶ.೫೯೮-೬೦೯) ಕೊರೆಯಿಸಿದಂಥ ‘ವಿಷ್ಣುಗುಹೆ’ ಎಂಬುದು ಪ್ರಸಿದ್ಧವಾದುದು. ಆತ ಕೀರ್ತಿವರ್ಮನ ಮಗನಾದ ಎರಡನೆಯ ಪುಲಕೇಶಿಯನ್ನು ಮಗ್ಗುಲಿಗೆ ತಳ್ಳಿ ಪಟ್ಟಕ್ಕೆ ಬಂದವನು. ಮುಂದೆ ಇಮ್ಮಡಿ ಪುಲಕೇಶಿ ಅವನನ್ನು ಸೋಲಿಸಿ, ತಾನೇ ದೊರೆಯಾದ. ಈ ಇಮ್ಮಡಿ ಪುಲಕೇಶಿಯ ಪ್ರಭುತ್ವವನ್ನು ಅವನ ಆಸ್ಥಾನಕ್ಕೆ ಬಂದಿದ್ದ ಹ್ಯೂಯೆನ್‌ತ್ಸಾಂಗ್ ಎಂಬ ಚೀನೀ ಯಾತ್ರಿಕ ತುಂಬ ಕೊಂಡಾಡಿದ್ದಾನೆ. ಭಾರತದ ಪಶ್ಚಿಮ ಕರಾವಳಿಯ ಮೇಲೆ ದಂಡೆತ್ತಿ ಬಂದಂಥ ಪಲ್ಲವರು ವಾತಾಪಿಪುರಕ್ಕೆ ಬಂದು, ಅದೇ ಪ್ರತಿಯಾಗಿ ಮುಂದೆ ಬಂದ ಚಾಲುಕ್ಯ ದೊರೆ ಇಮ್ಮಡಿ ವಿಕ್ರಮಾದಿತ್ಯ (ಕ್ರಿ.ಶ.೬೫೫) ಪಲ್ಲವ ರಾಜಧಾನಿ ಕಂಚಿಯ ತನಕವೂ ದಂಡೆತ್ತಿ ಹೋಗಿ, ಅವರನ್ನು ಗೆದ್ದ. ಅನಂತರ ಇಮ್ಮಡಿ ಕೀರ್ತಿವರ್ಮನ (ಕ್ರಿ.ಶ. ೭೪೭-೫೭) ಆಳ್ವಿಕೆಯಲ್ಲಿ ಅವನಿಗೆ ರಾಷ್ಟ್ರಕೂಟ ದೊರೆ ದಂತಿದುರ್ಗನೆಂಬಾತನಿಂದ ಸೋಲುಂಟಾಯಿತು. ಇಷ್ಟೆಲ್ಲ ಬಾದಾಮಿಯ ಚಾಲುಕ್ಯರನ್ನು ಕುರಿತು ಸ್ಥೂಲ ಇತಿಹಾಸ. ಈ ಕಾಲದಲ್ಲಿ ಹಲವು ಸಂಸ್ಕೃತ ಕವಿಗಳು ಈ ಚಾಲುಕ್ಯ ದೊರೆಗಳಿಂದ ಮನ್ನಣೆ ಪಡೆದರು; ಇದೇ ಕಾಲದಲ್ಲಿಯೇ ಕನ್ನಡ ಸಾಹಿತ್ಯದ ಉದಯವೂ ಆದಂತೆ ಕಾಣಿಸುತ್ತದೆ.

ಶಿಲ್ಪಕಲೆ ಈ ಬರಹದ ಉದ್ದೇಶವಾದುದರಿಂದ, ಅದರ ಕಡೆಗೆ ಈಗ ಗಮನ ಹರಿಸೋಣ. ಐಹೊಳೆಯಲ್ಲಿ ಕರ್ನಾಟಕದ ಪಾಲಿನ ಮೊತ್ತ ಮೊದಲನೆಯ ದೇಗುಲ ಕ್ರಿ.ಶ.೪೫೦ರಷ್ಟು ಪೂರ್ವದ ಇತಿಹಾಸವುಳ್ಳದ್ದು. ಈ ದೇವಾಲಯಕ್ಕೆ ಯಾವ ಕಾರಣದಿಂದಲೋ ಏನೋ ‘ಲಡಖಾನ ದೇವಾಲಯ’ ಎಂಬ ಹೆಸರು ಬಂದಿದೆ. ಇದು ಚಾಲುಕ್ಯರು ಇಲ್ಲಿಗೆ ಬರುವುದಕ್ಕಿಂತ ಪೂರ್ವದ್ದು. ಐಹೊಳೆ ಬಹು ಹಿಂದಿನಿಂದಲೂ ಒಂದು ದೊಡ್ಡ ವ್ಯಾಪಾರೀ ಕೇಂದ್ರವಾಗಿತ್ತು. ಇಲ್ಲಿರುವ ಲಡಖಾನ ದೇವಾಲಯ ಒಂದು ಶಿವಾಲಯವಾಗಿದೆ. ಅದು ಸರಳ ರೀತಿಯ ಗರ್ಭಗೃಹ, ಪ್ರದಕ್ಷಿಣಾಪಥ, ಸಭಾಮಂಟಪ ಮತ್ತು ಮುಖಮಂಟಪಗಳುಳ್ಳ ಆಯತಾಕೃತಿಯ ಒಂದು ರಚನೆ. ಅದರ ಗರ್ಭಗೃಹದ ಮೇಲೆ ಒಂದು ಮಹಡಿಯೂ ಇದೆ. ಇಲ್ಲಿನ ಮುಖಮಂಟಪದ ಸ್ತಂಭಗಳ ಹೊರಮಗ್ಗಲುಗಳಲ್ಲಿ ಸುಮಾರು ಮೂರಡಿ ಗಾತ್ರದ ಪ್ರಮಣ ಶಿಲ್ಪಗಳಿವೆ. ಮಂದಣ ಶತಮಾನಗಳಲ್ಲಿ ಈ ದೇಗುಲದ ಪರಿಸರದಲ್ಲಿ ಹಲವು ಮನೋಹರ ದೇಗುಲಗಳು ನಿರ್ಮಾಣಗೊಂಡುವು. ದೇಗುಲಗಳ ಆಕೃತಿ ಮಾಡು, ಮುಚ್ಚಿಗೆ ಶಿಖರಗಳ ವಿಚಾರದಲ್ಲಿ ಈ ಒಂದೇ ತಾವಿನಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದರು. ವಾಸ್ತು ರಚನೆಯಲ್ಲಿ ಹಿತಮಿತವಾಗಿ ಆಲಂಕಾರಿಕ ಶಿಲ್ಪಕ್ಕೆ ಎಷ್ಟೆಲ್ಲ ಪ್ರಾಶಸ್ತ್ಯವನ್ನು ಕೊಡಬಹುದೋ ಅಷ್ಟೆಲ್ಲಾ ಕೊಟ್ಟರು.

ಮೊನ್ನೆ ಮೊನ್ನೆಯ ತನಕವೂ ಇಲ್ಲಿನ ಗುಡಿಗಳಲ್ಲಿ ಲಡಖಾನ ದೇಗುಲ ಅತಿ ಪ್ರಾಚೀನವಾದುದು ಎಂಬ ಭಾವನೆ ಉಳಿದಿತ್ತು. ಐಹೊಳೆ ಮಲಪ್ರಭಾ ನದಿಯ ದಂಡೆಯ ಮೇಲಣ ನಗರವಾದುದರಿಂದ, ಮಳೆಗಾಲದಲ್ಲಿ ನೆರೆನೀರು ಅದರ ದಂಡೆಗಳ ಮೇಲೆ ಆಗಾಗ ಮಣ್ಣನ್ನು ತಂದು ಚೆಲ್ಲುತ್ತಿತ್ತು. ಇದರಿಂದ ಹಲವು ಪುರಾತನ ವಾಸ್ತುಗಳು ಹುದುಗಿಹೋಗಿದ್ದವು. ಪ್ರಾಚ್ಯ ಇಲಾಖೆಯವರು ಮೂರು ನಾಲ್ಕು ವರುಷಗಳ ಹಿಂದೆ ಇಲ್ಲಿ ಅಗೆತ ನಡೆಸಿದ್ದಾರೆ. ಲಡಖಾನ ಗುಡಿಯ ಮುಂಭಾಗದ ನೆಲವನ್ನು ಅವರು ಅಗೆದಾಗ, ಇನ್ನೂ ನಾಲ್ಕಾರು ಅಡಿ ಆಳಕ್ಕೆ ಮತ್ತೂ ಪೂರ್ವದ ಗುಡಿಯೊಂದರ ಪಾಯ ಕಾಣಸಿಕ್ಕಿತು. ಅಲ್ಲದೆ, ಹೀಗೆ ಮಾಡಿದ ಅಗೆತದಲ್ಲಿ ಮರುಳುಗಲ್ಲಿನ ಮೂರಡಿ ಉನ್ನತವಾದ ಒಂದು ವಿಗ್ರಹವೂ ದೊರೆಯಿತು. ಇದು ಆಸೀನ ಕುಬೇರನ ವಿಗ್ರಹ. ಕಾಲಮಾನದ ದೃಷ್ಟಿಯಿಂದ, ಈ ವಿಗ್ರಹ ಲಡಖಾನ ದೇವಾಲಯಕ್ಕಿಂತ ಒಂದು ಶತಮಾನ ಹಿಂದಿನದೆಂದು ಎಣಿಸಬಹುದು. ಹಾಗಿದ್ದರೆ ಐಹೊಳೆಯಲ್ಲಿ ಕ್ರಿಸ್ತಶಕ ನಾಲ್ಕನೆಯ ಶತಮಾನದಿಂದಲೇ ದೇವಾಲಯಗಳಿದ್ದವು ಎಂದು ಊಹಿಸಬೇಕಾಗುತ್ತದೆ. ಇಲ್ಲಿ ದೊರೆತ ಈ ಶಿಲ್ಪವನ್ನು ಕುರಿತು ವಿಚಾರಿಸುವ ಉತ್ತರ ಹಿಂದುಸ್ಥಾನದ ಆದಿ ಶಿಲ್ಪಗಳಲ್ಲೂ ಕುಬೇರ ಸಿಗುತ್ತಾನೆ.

ವೈದಿಕ ಯುಗದಲ್ಲಿ ಕುಬೇರ ಒಬ್ಬ ದುಷ್ಟ ದೇವತೆ; ಮುಂದಣ ಶತಮಾನಗಳಲ್ಲಿ ಆತನ ಕತೆ ಮಾರ್ಪಟ್ಟು ಅವನೊಬ್ಬ ಶಿವಭಕ್ತನೆನಿಸುತ್ತಾನೆ. ಅಷ್ಟದಿಕ್ಕುಗಳಲ್ಲಿ ಉತ್ತರ ದಿಕ್ಕಿಗೆ ಒಡೆಯನಾಗುತ್ತಾನೆ; ಆತ ಸಂಪತ್ತಿಗೂ ಅಧಿದೇವತೆ ಎನಿಸುತ್ತಾನೆ.  ಕ್ರಮೇಣ ಅವನ ಪುರಾಣವು ಬೆಳೆದು ಆತ ಪ್ರಸಿದ್ದಿಗೆ ಬರುತ್ತಾನೆ. ಅವನ ದೇಹ ಕುಬ್ಜವಾಗಿದ್ದುದಲ್ಲದೆ ಆತ ಕುರೂಪಿ ಎಂಬುದಾಗಿ ಪುರಾಣಗಳು ಹೇಳುತ್ತವೆ. ಅವನಿಗೆ ಎರಡು ಕಾಲುಗಳ ಬದಲು ಮೂರು ಕಾಲುಗಳಿದ್ದು, ನಡೆಯುವುದಕ್ಕೆ ತೊಡಕು ಬಂದು, ಅವನ ಮೇಲೆ ಮರುಕಗೊಂಡ ವಿಶ್ವಕರ್ಮ ಅವನಿಗೆ ಪುಷ್ಪಕ ವಿಮಾನವನ್ನು ಒದಗಿಸಿದ ಎಂಬ ಕತೆಯಿದೆ. ಆತನ ರಾಜಧಾನಿಯಾದ ಲಂಕೆಯನ್ನು, ಅವನ ತಮ್ಮನಾದ ರಾವಣ ಒಂದು ದಿನ ಅಪಹರಿಸಿದನಂತೆ. ಹೀಗಾಗಿ, ವಿಶ್ವಕರ್ಮನು, ಅವನಿಗೆ ತಿರುಗಿ ಇ್ನೊಂದು ರಾಜಧಾನಿ (ಅಳಕಾವತಿ)ಯನ್ನು ಕಟ್ಟಿಕೊಡಬೇಕಾಯಿತು. ಈ ತೆರನಲ್ಲಿ ವೇದಗಳ ಕಾಲದ ಅನೇಕ ದೇವ ದೇವತೆಗಳು ವಿಚಿತ್ರ ಮಾರ್ಪಾಟು ಹೊಂದಿದ್ದಾರೆ. ಐಹೊಳೆಯ ಕುಬೇರನನ್ನು ಇಲ್ಲಿನ ಶಿಲ್ಪಿಗಳು ತೀರ ಅಸಹ್ಯವಾಗಿ ಇಲ್ಲವೆ ತೀರ ಆಕರ್ಷಕವಾಗಿ ಚಿತ್ರಿಸದೆ ಹೋದರೂ, ಒಬ್ಬ ಗಂಭೀರ ವ್ಯಕ್ತಿಯನ್ನಾಗಿ ಚಿತ್ರಿಸಿದ್ದಾರೆ.

ಸ್ವಂತಿಕೆ, ವೈವಿಧ್ಯ

ವಾಸ್ತು ರಚನೆಯ ದೃಷ್ಟಿಯಿಂದ ಈ ಪ್ರದೇಶ ಎಷ್ಟು ಕುತೂಹಲಕಾರಿಯೋ, ಅಷ್ಟೇ ಶಿಲ್ಪಕಲೆಯನ್ನು ಕುರಿತು ಆಶ್ಚರ್ಯ ಹುಟ್ಟಿಸುತ್ತದೆ. ಈ ಮೂರೂ ನಗರಗಳಲ್ಲಿ ಕಾಣಸಿಗುವ ಉಬ್ಬುಗೆತ್ತನೆ, ದುಂಡುಶಿಲ್ಪಗಳು ಅಸಂಖ್ಯಾತ. ಅವೆಲ್ಲವೂ ಮರಳುಗಲ್ಲಿನವು. ಹೆಚ್ಚಿನವು ಐದರಿಂದ ಎಂಟನೆಯ ಶತಮಾನದ ಅವಧಿಯಲ್ಲಿ ಕೆತ್ತಲ್ಪಟ್ಟವು. ಇಲ್ಲಿನ ಶಿಲ್ಪಿಗಳು ಬ್ರಹ್ಮ, ವಿಷ್ಣು, ಶಿವ ಮತ್ತು ದುರ್ಗೆಯರ ಎಷ್ಟೆಲ್ಲ ಅವತಾರಗಳನ್ನು ಚಿತ್ರಿಸಬಹುದೋ ಅಷ್ಟೆಲ್ಲವನ್ನೂ ಕೆತ್ತಿದ್ದಾರೆ. ಅದೇ ರೀತಿಯಲ್ಲಿ, ಭಾರತ, ರಾಮಾಯಣದ ಕತೆಗಳುಳ್ಳ ಹಲವು ಭಿತ್ತಿಶಿಲ್ಪಗಳೂ ಇವೆ. ಆರಂಗುಲ ಗಾತ್ರದ ಶಿಲ್ಪ ವಿಗ್ರಹಗಳಿಂದ ತೊಡಗಿ, ಹತ್ತಡಿ ಗಾತ್ರದ ದೈತ್ಯ ವಿಗ್ರಹಗಳನ್ನೂ ಇಲ್ಲಿ ಕಾಣಬಹುದು. ಅದಕ್ಕಿಂತ ಹೆಚ್ಚಿನ ಒಂದು ಸಂಗತಿಯೆಂದರೆ ಈ ತಾವು ಶಿಲ್ಪಿಗಳ ಪಾಲಿಗೆ ಒಂದು ಪ್ರಯೋಗಶಾಲೆಯೇ ಆಗಿತ್ತು. ಅನೇಕ ಶಿಲ್ಪಿಗಳು ಪೂರ್ವಪರಂಪರೆಯನ್ನು ಕುರುಡಾಗಿ ಅನುಕರಿಸದೆಯೇ ತಂತಮ್ಮ ಯೋಗ್ಯತೆಯನ್ನು ತೋರಿಸುವುದಕ್ಕೆ ಇಲ್ಲಿ ಹೆಚ್ಚಿನ ಅವಕಾಶ ದೊರಕಿತ್ತು. ಐಹೊಳೆಯ ದುರ್ಗೆ ದೇವಾಲಯದಂಥ ಒಂದೇ ಕಥಾನಕವನ್ನು, ಬೇರೆ ಬೇರೆ ಶಿಲ್ಪಿಗಳು ತಂತಮ್ಮದೇ ಆದ ರೀತಿಯಲ್ಲಿ, ಎಂದರೆ ಹಳಬರನ್ನು ಅನುಕರಿಸದೆಯೇ ಕೆತ್ತಿದ್ದನ್ನು ಕಾಣುತ್ತೇವೆ. ಇಲ್ಲಿ ಕಸುಬಿನಲ್ಲಿ ಪಳಗದವರ ಕೈವಾಡವನ್ನೂ ಕಾಣಬಹುದು; ಹೇಗೆ ಬೇಕಾದರೆ ಹಾಗೆ ಕಲ್ಲನ್ನು ಕಟೆದು, ಸೊಗಸು, ಲಾಲಿತ್ಯಗಳನ್ನು ತೋರಿಸಬಲ್ಲ ನಿಪುಣರನ್ನೂ ಕಾಣುತ್ತೇವೆ. ಈ ಪ್ರದೇಶದಲ್ಲಿ ಶಿಲ್ಪಕಲೆ ಎಷ್ಟೊಂದು ಪೋಷಣೆಯನ್ನು ಪಡೆಯಿತೆಂದು ಹೇಳುವುದಕ್ಕಿಲ್ಲ.

ಐಹೊಳೆ ಮತ್ತು ಬಾದಾಮಿ ದೇಗುಲಗಳ ಗುಹೆಗಳ ಮುಚ್ಚಿಗೆಗಳಲ್ಲಿ, ಆಯಾ ಸ್ಥಳಗಳನ್ನು ಹೊಂದಿಕೊಂಡು, ಹಲವು ತೆರನ ಶಿಲ್ಪಾಕೃತಿಗಳನ್ನು ತೋರಿಸಿದ್ದಾರೆ. ಕೆಲವು ಜಾಮಿತಿಕ ರೇಖಾ ವಿನ್ಯಾಸಗಳನ್ನು ಮೆರೆಸುವ ಮುಚ್ಚಿಗೆಯಂಥ ಕೆತ್ತನೆಗಳು; ಇನ್ನು ಕೆಲವು ಶಿಲ್ಪಭಿತ್ತಿಗಳು ತ್ರಿಮೂರ್ತಿಗಳಂಥ ದೇವರುಗಳದ್ದು. ಇನ್ನು ಕೆಲವು ‘ವಿದ್ಯಾಧರರು’ ಎಂಬ ಕಾಲ್ಪನಿಕ ಅಂತರಿಕ್ಷವಾಸಿಗಳಾಗಿದ್ದು, ಈ ಕೊನೆಯ ವಸ್ತುವನ್ನು ಗುಪ್ತಯುಗದ ಶಿಲ್ಪಿಗಳೂ ಬಳಸಿದ್ದಾರೆ; ವಕಾಟಕ ಶಿಲ್ಪಿಗಳೂ ಚಿತ್ರಿಸಿದ್ದಾರೆ. ಅಂತಹ ವಿದ್ಯಾಧರ ದಂಪತಿಗಳ ಕೆತ್ತನೆ ಈ ಗಗನಗಾಮಿಗಳು ವಿರಾಮಶೀಲರಾಗಿ ಅಂತರಿಕ್ಷದಲ್ಲಿ ಚಲಿಸುತ್ತಿದ್ದಾರೆಂಬ ಕಲ್ಪನೆ ಮೆಚ್ಚುಗೆಗೆ ತೀರ ಸೊಗಸಾದ ವಿಷಯವೇ. ಈ ದಂಪತಿಗಳ ಕೇಶರಾಶಿ, ಗಾಳಿಯಲ್ಲಿ ತೂರಾಡುವ ಸೆರಗು, ಮಲಗಿದಂತೆ ಅವರು ಬಾನಿನಲ್ಲಿ ಹಾರುತ್ತಿರುವ ಕಲ್ಪನೆಯನ್ನು ಬಲು ಮನೋಹರವಾಗಿ ತೋರಿಸುತ್ತವೆ.

ಐಹೊಳೆಯ ಕೊಂತಿ ಗುಡಿ ಎಂಬ ದೇಗುಲದ ಚಾವಡಿಯ ಮೇಲೆ, ನೀಳವೂ, ಅಗಲವೂ ಆದ ಮೂರು ಶಿಲ್ಪ ಭಿತ್ತಿಗಳನ್ನು ಮುಚ್ಚಿಗೆಗೆ ಹಾಸಿದ್ದಾರೆ. ಅವು ಒಂದೊಂದರಲ್ಲಿ ಬ್ರಹ್ಮ ಶೇಷಶಾಯಿ ವಿಷ್ಣು ಮತ್ತು ಶಿವರನ್ನು ಚಿತ್ರಿಸಿದ್ದಾರೆ. ಇಂಥ ಒಂದೊಂದು ಭಿತ್ತಿಯ ಗಾತ್ರ ೧೦x೬ ಅಡಿಗಳಷ್ಟಿದ್ದೀತು. ಇದೇ ವಸ್ತುವನ್ನು ಐಹೊಳೆಯ ಮತ್ತೊಂದು ದೇಗುಲದಿಂದ ಸಂಗ್ರಹಿಸಿ ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಸಂಗ್ರಹಾಲಯದಲ್ಲಿರಿಸಿದ್ದಾರೆ. ಅದರ ಗಾತ್ರ ೬x೪ ಅಡಿಗಳಷ್ಟಿದ್ದೀತು. ಇಲ್ಲಿನ ಪಾರ್ವತಿ ಸಹಿತನಾದ ಶಿವನ ಸುತ್ತ ಅವನ ಪರಿವಾರದ ಗಣಗಳಿವೆ. ಈ ಗಣಗಳ ಬಡ ಆಕಾರಕ್ಕೂ, ಶಿವ ಪಾರ್ವತಿಯರ ಭವ್ಯಮೋಹಕ ಅಂಗಭಂಗಿಗಳಿಗೂ ತಕ್ಕ ಅಂತರವಿದೆ.

ಶಿವ ಪಾರ್ವತಿಯರು

ಶಿವ ಮತ್ತು ಪಾರ್ವತಿಯರು ಐಹೊಳೆಯ ಶಿಲ್ಪಗಳಿಗೆ ವಿಶೇಷ ಪ್ರಿಯವಾದ ದೇವದೇವಿಯಯರು. ಅವರನ್ನು ಇನ್ನೊಂದೇ ರೀತಿಯಲ್ಲಿ ಚಿತ್ರಿಸುವ ಒಂದು ದೊಡ್ಡ ಶಿಲ್ಪಭಿತ್ತಿ. ಶಿವ ಪಾರ್ವತಿಯರಿಬ್ಬರನ್ನು ಇಲ್ಲಿ ಬಲು ಮೋಹಕವಾಗಿ ಚಿತ್ರಿಸಿದ್ದಾರೆ. ಶಿವನು ಸರ್ಪಭೂಷಣನಾಗಿ ಕಾಣಿಸುತ್ತಾನೆ; ಶಿವನ ಬಲಗಡೆ ಪಾರ್ವತಿ ಕುಳಿತಿದ್ದಾಳೆ. ಅವಳ ಮೇಲಕ್ಕೆ ಛತ್ರವಿದೆ. ಶಿವನ ಕಾಲು ನಂದಿಯ ನೇಲೆ ವಿರಮಿಸಿದೆ. ಸುತ್ತಮುತ್ತಲೂ ಅವನ ಗಣಗಳು ಹಿರಿಯ ಉತ್ಸವದಲ್ಲಿ ಭಾಗಿಯಾಗುವಷ್ಟು ಉತ್ಸಾಹದಲ್ಲಿ ನೆರೆದಿದ್ದಾರೆ. ಈ ಯಾವತ್ತೂ ಆಕೃತಿಗಳು ಒಂದು ಸುಂದರ ಪ್ರಬಂಧದಲ್ಲಿ ಮೇಳವಿಸಿವೆ. ಈ ವಿವಿಧ ಆಕೃತಿಗಳಲ್ಲಿ ಕಾಣಿಸುವ ಲಯಬದ್ಧ ಹೊಂದಿಕೆ ಶಿಲ್ಪಿಯ ಅಪೂರ್ವ ಸಾಧನೆಯೇ ಸರಿ ಎಂಬುದು ಐಹೊಳೆಯ ಪ್ರಾಚೀನವೂ, ಪ್ರಸಿದ್ಧವೂ ಆದ ದುರ್ಗಾದೇವಿ ಗುಡಿಯ ಹೊರ ಗೋಡೆಯಲ್ಲಿ ಕಾಣಿಸುವ ಎಂಟು ಹತ್ತು ಶಿಲ್ಪಗಳಲ್ಲಿ ಒಂದು. ಸುಮಾರು ನಾಲ್ಕಡಿ ಎತ್ತರದ ಈ ಶಿಲ್ಪ ಉಬ್ಬುಗೆತ್ತನೆಯಾಗಿರದೆ ಸಮನಾದ ದುಂಡು ಶಿಲ್ಪವೇ ಆಗಿದೆ. ನಂದಿಯ ಮಗ್ಗುಲಲ್ಲಿ ತ್ರಿಭಂಗಿಯಲ್ಲಿ ನಿಂತ ಶಿವ ಅತಿ ಮನೋಹರ ರೂಪಿ. ಅವನಿಗೆ  ತೊಡಿಸಿರುವ ಆಭರಣ ಅಲಂಕಾರಾದಿಗಳು, ಅವನ ಪ್ರಭಾವಳಿ ವಿಗ್ರಹದ ಮೈಮುಖಗಳ ಸೊಬಗನ್ನು ಎಷ್ಟೊಂದು ಹೆಚ್ಚಿಸುತ್ತವೆ ಎಂದು ಬಣ್ಣಿಸುವಂತಿಲ್ಲ. ಈ ಶಿಲ್ಪದ ಸೊಬಗು, ಲಾಲಿತ್ಯ ಗುಪ್ತಶೈಲಿಯ ಸೊಗಸನ್ನು ಮೀರಿಸುವಂಥದು; ಇದು ಯಾವ ಮಾರ್ಗ ಶೈಲಿಗೂ ಕಡಿಮೆಯಾಗಿಲ್ಲ. ಈ ವಿಗ್ರಹದ ಕೆಲವು ಭಾಗ ಮುರಿದುಹೋಗಿದ್ದರೂ, ನೋಡುವ ನಮಗೆ ಈ ಆ ನಷ್ಟದ ಅರಿವೇ ಆಗಲೊಲ್ಲದು. ಇಲ್ಲಿನ ಒಂದು ಕೊರತೆಯೆಂದರೆ ವಿಗ್ರಹವನ್ನು ನಿಲ್ಲಿಸಿದ ಗೋಡೆಯ ಮುಂಗಡೆ ಕೇವಲ ಮೂರು ನಾಲ್ಕಡಿ ಅಗಲದ ದಾರಿಯಿದ್ದು, ಶಿಲ್ಪವನ್ನು ಸಾಕಷ್ಟು ದೂರದಿಂದ ನೋಡಲಾಗದ ಸ್ಥಳ ಸಂಕೋಚವೊಂದೇ. ಹಾಗೆ ಇನ್ನಷ್ಟು ದೂರದಲ್ಲಿ ನಿಂತು ನೋಡಲು ಬರುವಂತಿದ್ದರೆ ನೋಟ ತೃಪ್ತಿ ಮತ್ತಷ್ಟು ಹೆಚ್ಚುತ್ತಿತ್ತು.

ಈ ದುರ್ಗಾ ಗುಡಿಯೊಂದರಲ್ಲೇ ಮೂರು ವಿಭಿನ್ನ ಶೈಲಿಗಳ ಶಿಲ್ಪಗಳನ್ನು ನಾವು ಕಾಣಬಹುದು. ಇಲ್ಲಿನ ಹೊರ ಸಾಲಿನ ಸ್ತಂಭಗಳ ಇಬ್ಬದಿಗಳಲ್ಲೂ ಶಿಲ್ಪ ಮೂರ್ತಿಗಳಿವೆ; ಅವುಗಳಲ್ಲಿ ಕೆಲವು ಮಿಥುನ ಶಿಲ್ಪಗಳು. ಆದರೆ, ಅವು ಅಷ್ಟೊಂದು ಸೊಗಸಿನವಲ್ಲ. ಇಂಥ ಮಿಥುನ ಶಿಲ್ಪಗಳು ಇಲ್ಲಿ ಲಡಖಾನ ಗುಡಿ ಮತ್ತು ಹುಚ್ಚಯ್ಯನ ಗುಡಿಗಳಲ್ಲೂ ಇವೆ. ಲಡಖಾನ ಗುಡಿಯ ಮುಖಮಂಟಪದ ಒಂದು ಮಿಥುನ ಶಿಲ್ಪದಲ್ಲಿ ಕಾಣಿಸುವ ಪ್ರಣಯಿಗಳಲ್ಲಿ ಪ್ರಣಯಿನಿಯಾದವಳು ಗಾರ್ದಭಮುಖಿಯಾದ ಸ್ತ್ರೀ ಅದನ್ನು ಎಣಿಸುವಾಗ ಈ ಮಿಥುನ ಶಿಲ್ಪಗಳಿಗೂ ಕೂಡ ಏನಾದರೊಂದು ಪೌರಾಣಿಕ ಹಿನ್ನೆಲೆ ಇದ್ದಿರಬಹುದೇ ಎಂಬ ಸಂಶಯ ಮೂಡುತ್ತದೆ.

ಮಿಥುನ ಶಿಲ್ಪಗಳ ಪರಂಪರೆ ಐಹೊಳೆಯಲ್ಲೇ ತೊಡಗಿದ್ದಂತೂ ಅಲ್ಲ. ಅವುಗಳ ಆರಂಭ ಸಾಂಚಿಯ ಸ್ತೂಪಗಳಲ್ಲೇ ಕಾಣಸಿಗುತ್ತದೆ. ಶೃಂಗಾರ ಮತ್ತು ಸೌಂದರ್ಯಗಳ ದೃಷ್ಟಿಯಿಂದ ಖಜುರಾಹೋ ಮತ್ತು ಚೆಲುವಿನಲ್ಲಿ ಅವನ್ನು ಮೀರಿಸುವ ತಾವು ಎಲ್ಲೋರ ಎಂದರೆ ತಪ್ಪಾಗದು.

ಐಹೊಳೆಗೆ ಸಮೀಪದಲ್ಲಿರುವ ಬಾದಾಮಿ(ವಾತಾಪಿಪುರ)ಯ ಬೆಟ್ಟದಲ್ಲೂ, ಮಹಾಕೂಟ ಬೆಟ್ಟದಲ್ಲೂ ಹಲವಾರು ದೇಗುಲಗಳಿವೆ. ಅವುಗಳ ಹೊರಮೈಯಲ್ಲಿ ಶಿಲ್ಪಪಂಕ್ತಿಗಳಿವೆ. ಬಾದಾಮಿಯ ಗುಹೆಗಳಲ್ಲಂತು ಭವ್ಯವೂ, ಗಾತ್ರವೂ ಆದ ದೈತ್ಯಶಿಲ್ಪಗಳನ್ನು ಕಾಣಬಹುದು. ಈ ಗುಹೆಗಳಲ್ಲಿ ವಿಷ್ಣು, ವರಾಹ, ನರಸಿಂಹ, ವಾಮನಾದಿ ಅವತಾರ ಕೃತಿಗಳೂ, ಶಿವ ದುರ್ಗೆಯರ ಸಾಹಸದ ಶಿಲ್ಪಗಳೂ ಕಾಣಸಿಗುತ್ತವೆ. ಇಲ್ಲಿನ ವಿಷ್ಣು ಗುಹೆಯಲ್ಲಿ ಮಹಾಶೇಷನ ವಿಗ್ರಹವಿದೆ. ಇಲ್ಲಿ ವಿಷ್ಣುವು ಗಂಭೀರ ಭಾವದಲ್ಲಿ ಚಿತ್ರಿತನಾಗಿದ್ದಾನೆ. ಅದೇ ಗುಹೆಯ ದೂರದ ಇನ್ನೊಂದು ಮಗ್ಗಲ ಗೋಡೆಯಲ್ಲಿ ‘ತ್ರಿವಿಕ್ರಮ’ನ ಶಿಲ್ಪವಿದೆ. ಅಲ್ಲದೇ ಇದೇ ಗುಹೆಯಲ್ಲಿ ನರಸಿಂಹ, ಮಹಿಷಾಮರ್ದಿನಿಯರ ಬೃಹತ್ ಪ್ರಮಾಣದ ಅನ್ಯ ಶಿಲ್ಪಗಳೂ ಇವೆ.

ಅದೇ ಮೂರನೆಯ ಗುಹೆಯ ಸ್ತಂಭರಾಜಿಗಳ ಮೇಲೆ ಬೇರೆಯೇ ಒಂದು ಶೈಲಿಯಲ್ಲಿ ಮದನ ಕೈ ವಿಗ್ರಹಗಳಿವೆ. ಅವು ಒಂಟಿ ವಿಗ್ರಹಗಳಲ್ಲ; ದೇವ ದೇವಿಯರನ್ನು ಜತೆಜತೆಯಾಗಿ ನಿಲ್ಲಿಸಿ ತೋರಿಸಿದ, ಸುಮಾರು ಮೂರಡಿ ಎತ್ತರದ ಶಿಲ್ಪಗಳು. ಒಂದೊಂದು ಕಂಬದ ಕುಡಿಯಲ್ಲೂ ಅಂಥ ಎರಡು ಮೂರು ಮದನ ಕೈ ಗೊಂಬೆಗಳು ಸ್ತಂಭದಿಂದ ಮೆಚ್ಚಿಗೆಗೆ ಅನಿಸಿ ನಿಂತಿವೆ. ಅಂಥವುಗಳಲ್ಲಿ ಎಂಬುದು ಶಿವ ಪಾರ್ವತಿಯನ್ನು ತೋರಿಸುವ ಒಂದು ಸುಂದರ ಮಾದರಿಯಾಗಿದೆ. ಸಾಂಚಿತೋರಣಗಳಲ್ಲಿ ಒಂಟಿಯಾದ ಸಾಲಭಂಜಿಕೆಯರನ್ನೂ, ಯಕ್ಷಕನ್ನಿಕೆಯರನ್ನೂ ಇಂಥದೇ ಸ್ಥಾನಗಳಲ್ಲಿ ನಿಲ್ಲಿಸಿ ತೋರಿಸಿದ್ದಾರೆ. ಇಲ್ಲಿ ಉದಹರಿಸಿದ ಮದನ ಕೈ ಗೊಂಬೆಗಳಲ್ಲಿ ಶಿವ, ಪಾರ್ವತಿಯರ ದೇಹದ ವಕ್ರಗತಿ ರೇಖೆಗಳಿಗೂ, ಶಿವನ ಮೈಯಿಂದ ಇಳಿದು ತೂಗುತ್ತಿರುವ ಸರ್ಪದ ವಕ್ರ ರೇಖೆಗೂ ಸುಂದರವಾದ ಮೇಳವಿದೆ.

ಚಾಲುಕ್ಯರ ಈ ರಾಜಧಾನಿಯ ಕೆಲವೇ ಹರದಾರಿಗಳ ದೂರದಲ್ಲಿ ಪಟ್ಟದಕಲ್ಲು ಎಂಬ ಇನ್ನೊಂದು ತಾಣವಿದೆ. ಅಲ್ಲಿ ಚಾಲುಕ್ಯ ದೊರೆಗಳಿಗೆ ಪಟ್ಟಾಭಿಷೇಕ ಉತ್ಸವ ನಡೆಯುತ್ತಿತ್ತು. ಪುರಾತನ ಕಾಲದಲ್ಲಿ ಅದನ್ನು ಕಿಸುವೊಳಲು ಎಂದು ಕರೆಯುತ್ತಿದ್ದರು. ಇಲ್ಲಿನ ನಾಗರ, ದ್ರಾವಿಡ ಶೈಲಿಗಳ ಹಲವು ದೇಗುಲಗಳು ಐಹೊಳೆಗಿಂತ ಭವ್ಯವೂ, ಗಾತ್ರವೂ ಆಗಿದ್ದು ವಾಸ್ತು ದೃಷ್ಟಿಯಿಂದ ವಿಶೇಷವೆನಿಸುತ್ತವೆ. ಅಲ್ಲಿನ ಪಾಪನಾಥ ದೇವಾಲಯದ ಗೋಡೆಯಲ್ಲಿ ಸೂಕ್ಷ್ಮ ತೆರನಲ್ಲಿ ಕೆತ್ತಿದ ರಾಮಾಯಣ ಮತ್ತು ಮಹಾಭಾರತ ಕಥಾನಕಗಳ ಭಿತ್ತಿಶಿಲ್ಪಗಳು ವಿಪುಲವಾಗಿವೆ. ಅಲ್ಲಿನ ಮಲ್ಲಿಕಾರ್ಜುನ ದೇಗುಲದ ಒಳಗಡೆಯ ಸಭಾಮಂಟಪದಲ್ಲಿ ತೀರ ತಗ್ಗಿನಲ್ಲಿ ಸ್ತಂಭಗಳ ಪೀಠಗಳಲ್ಲಿ ಕೆತ್ತಿರುವ ಶ್ಗಾರ ಶಿಲ್ಪಗಳು ಹಲವಿವೆ. ಅದೇ ರೀತಿ ಗೋಡೆಗಳ ಅಲಂಕರಣೆಗೆ ಬಳಸಿರುವ ಮೂರು ನಾಲ್ಕಡಿ ಗಾತ್ರದ ದೇವತಾ ವಿಗ್ರಹಗಳ ಸಂಖ್ಯೆಯೂ ಸಾಕಷ್ಟಿದೆ. ಚಾಲುಕ್ಯ ದೊರೆಗಳು ತಮ್ಮ ಆಶ್ರಯದಲ್ಲಿ ಪೋಷಿಸಿದ ವಾಸ್ತು ಮತ್ತು ಶಿಲ್ಪಗಳ ಸಂಭ್ರಮ, ಶಕ್ತಿಯುತವೂ, ವೈವಿಧ್ಯಪೂರ್ಣವೂ ಆಗಿದ್ದು ಈ ಚಾಲುಕ್ಯ ಯುಗ ಕರ್ನಾಟಕ ಶಿಲ್ಪ ವಾಸ್ತುಕಲೆಗಳ ಪಾಲಿಗೆ ಒಂದು ನಂದನವಾಯಿತು.