ಈ ಲೇಖನದಲ್ಲಿ ಬಾದಾವಿು ಚಲುಕ್ಯರ ಕಾಲದಲ್ಲಿ ದ್ರಾವಿಡ ಪದ್ಧತಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳ ಮೂಲದ ಕುರಿತು ತಮ್ಮ ಗಮನ ಸೆಳಯಬಯಸುತ್ತೇನೆ. ಈ ದಿಶೆಯಲ್ಲಿ ಹಲವಾರು ಇತಿಹಾಸತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಹೆನ್ರಿ ಕಜಿನ್ಸ್(೧೯೨೬)ರಿಂದ ಹಿಡಿದು ಎ.ಕೆ. ಕುಮಾರಸ್ವಾಮಿ, ಬೆಂಜಮಿನ್ ರೊಲ್ಯಾಂಡ್ ಮತ್ತಿತರರು ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷ ದೇವಾಲಯವನ್ನು ಚಲುಕ್ಯ ದೊರೆ ಇಮ್ಮಡಿ ವಿಕ್ರಮಾದಿತ್ಯನ ಹಿರಿಯ ರಾಣಿ ಲೋಕಮಹಾದೇವಿಯು ಕಂಚಿಯಲ್ಲಿರುವ ಕೈಲಾಸನಾಥ ದೇವಾಲಯದಿಂದ ಸ್ಫೂರ್ತಿಗೊಂಡು ಪಲ್ಲವ ದೇಶದ ವಾಸ್ತುಶಿಲ್ಪಿಯ ಸಹಾಯ ಪಡೆದು ಕಟ್ಟಿಸಿದಳೆಂದು ಮತ್ತು ಈ ವಿರೂಪಾಕ್ಷ ದೇವಾಲಯದಿಂದ ಆರಂಭಗೊಂಡಂತೆ ಪಲ್ಲವರ ದ್ರಾವಿಡ ಶೈಲಿ ಮುಂದೆ ಇಡೀ ಕರ್ನಾಟಕದಲ್ಲಿ ಬೆಳೆದು ಬಂದಿತೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗೆಯ ಅಭಿಪ್ರಾಯಕ್ಕೆ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಲ್ಲಿರುವ ಶಿಲಾಶಾಸನದ ತೆಂಕಣದಿಸೆಯ ಸೂತ್ರಧಾರ ಸರ್ವಸಿದ್ದಿ ಆಚಾರ್ಯ ಈ ದೇವಾಲಯದ ವಾಸ್ತುಶಿಲ್ಪಿ ಎಂದು ದಾಖಲಾಗಿರುವುದನ್ನು ವಿದ್ವಾಂಸರು ಅವನು ದಕ್ಷಿಣ ದಿಕ್ಕಿನ ಪಲ್ಲವ ರಾಜ್ಯದಿಂದ ಬಂದ ವಾಸ್ತುಶಿಲ್ಪಿ ಎಂದು ಅರ್ಥೈಸಿರುವುದು ಕಾರಣವಾಗಿದೆ. ಆದರೆ ಇದು ತಪ್ಪು ಎಂದು ನಾನು ಇಲ್ಲಿ ಹೇಳಬಯಸುತ್ತೇನೆ.

ಈ ವಿರೂಪಾಕ್ಷ ದೇವಾಲಯ ನಿರ್ಮಾಣದ ಮುಖ್ಯ ಸೂತ್ರಧಾರಿಗಳು ಗುಂಡಅನಿವಾರಿತ ಮತ್ತು ಸರ್ವಸಿದ್ದಿ ಆಚಾರಿಗಳು. ಇವರು ಚಲುಕ್ಯರ ಪ್ರಮುಖ ವಾಸ್ತುಶಿಲ್ಪಿಗಳು. ಹಾಗೆಯೇ ಪಟ್ಟದಕಲ್ಲಿನಲ್ಲಿರುವ ರೇಖಾನಾಗರ ಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಪಾಪನಾಥ ದೇವಾಲಯದ ವಾಸ್ತುಶಿಲ್ಪಿ ರೇವಡಿ ಓವಜ್ಜನು ಈ ದೇವಾಲಯದ ದಕ್ಷಿಣ ದಿಕ್ಕಿನ ಶಿಷ್ಯನೆಂದೂ ಅದೇ ದೇವಾಲಯಗಳೂ ರೇಖಾನಾಗರ ಶೈಲಿಯಲ್ಲಿ ಕಟ್ಟಲ್ಪಟ್ಟಿಲ್ಲ. ಹೀಗಾಗಿರುವಾಗ, ಪಲ್ಲವ ನಾಡಿನ ಸ್ಥಪತಿಗಳು ದ್ರಾವಿಡ ಶೈಲಿಯನ್ನು ಹೊರತುಪಡಿಸಿ ಬೇರಾವುದೇ ಶೈಲಿ(ರೇಖಾನಾಗರ) ಯಲ್ಲಿ ನಿಷ್ಣಾತರಾಗಿದ್ದರೆಂದು ಹೇಳುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಆ ನಾಡಿನ ಸ್ಥಪತಿಯೊಬ್ಬನು ಇಲ್ಲಿಗೆ ಬಂದು ತನ್ನ ಶಿಷ್ಯರಿಗೆ ರೇಖಾನಾಗರ ಶೈಲಿಯನ್ನು ಕಲಿಸಿದನು ಎನ್ನುವುದು ನಂಬಲಸಾಧ್ಯ. ಸರ್ವಸಿದ್ದಿ ಆಚಾರಿ ಪಲ್ಲವ ನಾಡಿನಿಂದ ಬಂದವನೆಂದು ಅರ್ಥೈಸುವುದು ತಪ್ಪಾಗುತ್ತದೆ. ಅಲ್ಲದೆ ಐಹೊಳೆ, ಬಾದಾಮಿ, ಪಟ್ಟದಕಲ್ಲು ಮತ್ತು ಮಹಾಕೂಟದಲ್ಲಿ ರೇಖಾನಗರ, ದ್ರಾವಿಡ ಮತ್ತು ಕದಂಬನಾಗರ ಈ ಎಲ್ಲಾ ಶೈಲಿಗಳಲ್ಲಿ ನಿಷ್ಣಾತರಾದ ಸ್ಥಪತಿಗಳು ವಾಸವಾಗಿದ್ದರು ಎಂಬುದು ನಿರ್ವಿವಾದದ ಅಂಶವಾಗಿದೆ.

ಈ ಸಂದರ್ಭದಲ್ಲಿ ಈ ದ್ರಾವಿಡ ಶೈಲಿಯ ಉಗಮ ಎಲ್ಲಿ ಎಂಬುದನ್ನು ನಾವು ವಿಶ್ಲೇಷಿಸಬೇಕಾಗುತ್ತದೆ ಮತ್ತು ಪ್ರಾಚೀನವಾಗಿ ದ್ರಾವಿಡ ಶೈಲಿಯ ದೇವಾಲಯ ಎಲ್ಲಿ ಕಟ್ಟಲ್ಪಟ್ಟಿತು? ಅದು ಪಲ್ಲವ ನಾಡಿನಲ್ಲಿತ್ತೇ? ಅಥವಾ ಬಾದಾಮಿ ಚಲುಕ್ಯರ ರಾಜ್ಯದಲ್ಲಿತ್ತೇ?

ಈ ದ್ರಾವಿಡ ಶೈಲಿ ಚಾಲುಕ್ಯರ ನಾಡಿನಲ್ಲಿಯೇ ಉಗಮಗೊಂಡಿತೆ? ಹಾಗಿದ್ದರೆ ಎಲ್ಲಿ, ಎಂದು ಆರಂಭಗೊಂಡಿತು? ಮತ್ತು ಇಲ್ಲಿಂದ ಪಲ್ಲವ ರಾಜ್ಯಕ್ಕೆ ಹೇಗೆ ಮತ್ತು ಯಾರ ಮೂಲಕ ಪ್ರಸಾರಗೊಂಡಿತು?

ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳಲು ಅನುಕೂಲವಾಗುವ ಆಧಾರಗಳನ್ನು ನೀಡಬಹುದಾದ ಯಾವುದೇ ಪ್ರಾಚೀನ ದೇವಾಲಯ ಅಥವಾ ಅವಶೇಷಗಳು ದೊರಕುತ್ತವೆಯೇ?

ಇಂಥ ಹಲವಾರು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಹಳ ಕಷ್ಟಪಡಬೇಕಾಗಿಲ್ಲ. ಹಲವಾರು ವಾಸ್ತವಾಂಶಗಳನ್ನು ನಾವು ಗಮನಿಸಿದರೆ ಸಾಕು.

ಪಲ್ಲವ ರಾಜ್ಯದಲ್ಲಿ ನಿರ್ಮಿತವಾದ ಮೊಟ್ಟಮೊದಲಿನ ದ್ರಾವಿಡ ಶೈಲಿಯ ದೇವಾಲಯಗಳೆಂದರೆ ಮಹಾಬಲಿಪುರದಲ್ಲಿರುವ ಏಕಶಿಲಾರಥಗಳಾದ ಧರ್ಮರಾಜರಥ, ಭೀಮರಥ, ಅರ್ಜುನರಥ, ಸಹದೇವ ರಥ, ದ್ರೌಪದಿರಥ ಇತ್ಯಾದಿ. ಈ ರಥಗಳು ಪಲ್ಲವ ದೊರೆ ಮೊದಲನೆಯ ನರಸಿಂಹವರ್ಮನ ಕಾಲದಲ್ಲಿ ಅಂದರೆ ಕ್ರಿ.ಶ. ಏಳನೆಯ ಶತಮಾನದ ಮಧ್ಯಕಾಲದಲ್ಲಿ ಮೊಟ್ಟ ಮೊದಲು ಪಲ್ಲವರಿಂದ ಕಟ್ಟಲ್ಪಟ್ಟ ದೇವಾಲಯ ಕೂಡ ಮಹಾಬಲಿಪುರದ ಕಡಲತೀರದ ದೇವಾಲಯ. ಇದು ಪಲ್ಲವ ಅರಸು ಇಮ್ಮಡಿ ನರಸಿಂಹವರ್ಮನ ರಾಜಸಿಂಹ(ಕ್ರಿ.ಶ. ೭೦೦-೭೭೮)ನ ಕಾಲದಲ್ಲಿ ಕಟ್ಟಲ್ಪಟ್ಟಿದೆ. ಕಂಚಿಯ ಕೈಲಾಸನಾಥ ದೇವಾಲಯವನ್ನೂ ಕೂಡ ಇವನೇ ಕಟ್ಟಿಸಿದ್ದಾನೆ.

ಅಂದರೆ ಪಲ್ಲವ ರಾಜ್ಯದಲ್ಲಿ ದ್ರಾವಿಡ ಶೈಲಿಯಲ್ಲಿ ಕೊರೆಯಲ್ಪಟ್ಟ ಮೊಟ್ಟ ಮೊದಲಿನ ಏಕಶಿಲಾದೇಗುಲಗಳು ಏಳನೆಯ ಶತಮಾನಕ್ಕೆ ಸಂಬಂಧಿಸಿದ್ದರೆ, ಈ ಶೈಲಿಯಲ್ಲಿ ಕಟ್ಟಲ್ಪಟ್ಟ ಮೊಟ್ಟಮೊದಲಿನ ಕಟ್ಟಡ ಶೈಲಿಯ ದೇವಾಲಯವು ಎಂಟನೆಯ ಶತಮಾನದ ಆರಂಭಕಾಲಕ್ಕೆ ಸಂಬಂಧಿಸಿದೆ. ಮಂಡಗಪಟ್ಟುವಿನಲ್ಲಿರುವ ಕ್ರಿ.ಶ. ೭ನೆಯ ಶತಮಾನದ ಆರಂಭದಲ್ಲಿ ಮೊದಲನೆ ಮಹೇಂದ್ರವರ್ಮ ಕೊರೆಯಿಸಿದ್ದ ಗುಹಾದೇವಾಲಯವು ಪಲ್ಲವ ರಾಜ್ಯದಲ್ಲಿರುವ ಗುಹಾದೇಗುಲಗಳಲ್ಲಿ ಪ್ರಾಚೀನವಾದುದಾಗಿದೆ.

ಗುಹಾದೇವಾಲಯಗಳ ಮತ್ತು ಕಟ್ಟಡ ಶೈಲಿಯ ದೇವಾಲಯಗಳ ದೃಷ್ಟಿಯಿಂದ ಕ್ರಿ.ಶ. ೫೫೦ರ ನಂತರದಲ್ಲಿ ಬಾದಾಮಿ ಚಲುಕ್ಯರು ದಕ್ಷಿಣ ಭಾರತದಲ್ಲಿ ಪ್ರಭುತ್ವ ಸಾಧಿಸಿದ ಕಾಲ ಮುಖ್ಯವಾಗುತ್ತದೆ. ಕ್ರಿ.ಶ. ೫೩೫ರಿಂದ ೬೧೦ರ ಅವಧಿಗಾಗಲೇ ಬಾದಾಮಿ ಮತ್ತು ಐಹೊಳೆಗಳಲ್ಲಿ ಗುಹಾದೇವಾಲಯಗಳು ಕೊರೆಯಲ್ಪಟ್ಟಿದ್ದವು. ಪಲ್ಲವರು ಗುಹಾದೇವಾಲಯಗಳನ್ನು ಕೊರೆಯುವುದನ್ನು ಆರಂಭಿಸುವ ಕಾಲಕ್ಕಾಗಲೇ ಚಲುಕ್ಯರು ಈ ಗುಹಾದೇಲಯಗಳ ವಾಸ್ತುಶೈಲಿಯನ್ನು ಬಿಟ್ಟುಕೊಟ್ಟು ಕಟ್ಟಡ ದೇವಾಲಯಗಳ ವಾಸ್ತುಶೈಲಿಯನ್ನು ರೂಢಿಯಲ್ಲಿ ತಂದಿದ್ದರು. ಕ್ರಿ.ಶ. ೫೬೭ರಲ್ಲಿ ಮಂಗಳೇಶನು ಪಟ್ಟಕ್ಕೆ ಬರುವ ಪೂರ್ವದಲ್ಲಿ ಮಹಾಕೂಟದಲ್ಲಿರುವ ಬಾಣಂತಿ ಗುಡಿ ಮತ್ತು ಮುಕುಟೇಶ್ವರ ದೇವಾಲಯಗಳನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿ ಮುಗಿಸಲಾಗಿತ್ತು. ಅಲ್ಲದೆ ಕ್ರಿ.ಶ. ೫೯೭ರಿಂದ ೬೩೫ರ ಅವಧಿಯಲ್ಲಿ ದ್ರಾವಿಡ ಶೈಲಿಯಲ್ಲಿ ಇನ್ನೂ ಕೆಲವು ದೇಗುಲಗಳು ನಿರ್ಮಾಣಗೊಂಡಿದ್ದನ್ನು ಗಮನಿಸಬಹುದು. ಬಾದಾಮಿಯಲ್ಲಿರುವ ಮೇಗಣ ಮತ್ತು ಕೆಳಗಣ ಶಿವಾಲಯಗಳು ಹಾಗೂ ಐಹೊಳೆಯಲ್ಲಿ ರಾವಣಪಡಿಯ  ಹತ್ತಿರದ ಸಣ್ಣ ದೇವಾಲಯ ಮತ್ತು ಕ್ರಿ.ಶ. ೬೩೫ರಲ್ಲಿ ಕಟ್ಟಲ್ಪಟ್ಟ ಮೇಗುತಿ ದೇವಾಲಯಗಳನ್ನು ಉದಾಹರಿಸಬಹುದು.

ಈ ಸಂದರ್ಭದಲ್ಲಿ ಕ್ರಿ.ಶ. ೬೪೩ರಲ್ಲಿ ಪಲ್ಲವ ಅರಸು ಮೊದಲನೆ ನರಸಿಂಹವರ್ಮನು ಬಾದಾಮಿಯ ಮೇಲೆ ತನ್ನ ಪ್ರಭುತ್ವ ಸಾಧಿಸಿದ್ದು ಮತ್ತು ಅದರ ಪರಿಣಾಮವನ್ನು ನಾವು ಚರ್ಚಿಸಬೇಕಾಗುತ್ತದೆ. ಕ್ರಿ.ಶ. ೬೫೫ರಲ್ಲಿ ಮೊದಲನೆಯ ವಿಕ್ರಮಾದಿತ್ಯನು ಚಲುಕ್ಯ ಪ್ರಭುತ್ವವನ್ನು ಪುನರ್‌ಸ್ಥಾಪಿಸುವವರೆಗೆ ೧೩ ವರ್ಷಗಳ ಕಾಲ ಈ ನಾಡು ಪಲ್ಲವರ ಪ್ರಭಾವಕ್ಕೊಳಗಾಗಿತ್ತು. ಅದಕ್ಕೂ ಮೊದಲೇ ಮಹಾಕೂಟ, ಐಹೊಳೆ ಮತ್ತು ಬಾದಾಮಿಗಳಲ್ಲಿ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟ ದೇವಾಲಯಗಳು ಅಸ್ತಿತ್ವದಲ್ಲಿದ್ದವು ಎನ್ನುವುದು ಮುಖ್ಯ.

ಚಲುಕ್ಯ ನಾಡಿನಲ್ಲಿ ಕ್ರಿ.ಶ. ೬೩೫ರ ಹೊತ್ತಿಗಾಗಲೇ ಅಸ್ತಿತ್ವದಲ್ಲಿದ್ದ ಈ ದ್ರಾವಿಡ ಶೈಲಿ ದೇವಾಲಯಗಳ ಕಾಲಾವಧಿಯನ್ನು ಮಹಾಬಲಿಪುರದಲ್ಲಿರುವ ಏಕಶಿಲಾರಥಗಳು ಮತ್ತು ಕಡಲತೀರದ ದೇವಾಲಯಗಳ ಕಾಲಾವಧಿ(ಏಳನೆಯ ಶತಮಾನದ ಮಧ್ಯಕಾಲ ಮತ್ತು ಎಂಟನೆಯ ಶತಮಾನದ ಆರಂಭಕಾಲ)ಯೊಂದಿಗೆ ತೂಗಿ ನೋಡಿದಾಗ ಸುಸ್ಪಷ್ಟವಾದ ಅಂಶವೆಂದರೆ ಚಲುಕ್ಯ ನಾಡಿನ ಸ್ಥಪತಿಗಳು ದ್ರಾವಿಡ ಶೈಲಿಯಲ್ಲಿ ದೇವಾಲಯಗಳನ್ನು ಕಟ್ಟುವದನ್ನು ಪಲ್ಲವ ಸ್ಥಪತಿಗಳಿಗಿಂತಲೂ ಒಂದು ಶತಮಾನದಷ್ಟು ಮೊದಲೇ ಆರಂಭಿಸಿದ್ದರು ಎನ್ನುವುದು ಮತ್ತು ಚಲುಕ್ಯರ ನಾಡಿನ ವಾಸ್ತುಶಾಸ್ತ್ರಜ್ಞರು ಮತ್ತು ಶಿಲ್ಪಿಗಳು ದ್ರಾವಿಡ ಮತ್ತು ರೇಖಾನಾಗರ ಶೈಲಿಗಳೆರಡರಲ್ಲಿಯೂ ನಿಷ್ಣಾತರಾಗಿದ್ದರು ಎನ್ನುವುದು. ಬಾದಾಮಿಯ ಎರಡನೆಯ ಗುಹಾದೇಗುಲದ ಗರ್ಭಗೃಹದ ದ್ವಾರದ ಮೇಲಿನ ಕವಾಟಪಟ್ಟಿಯಲ್ಲಿ ಶಾಲಾ ಮತ್ತು ಕೂಟ ಶೈಲಿಯ ಶಿಖರಗಳ ಮಾದರಿಗಳನ್ನು ಕೆತ್ತಿರುವುದು; ಮೂರನೆಯ ಗುಹಾದೇಗುಲದ ಗರ್ಭಗೃಹದ ದ್ವಾರದ ಮೇಲಿನ ಕವಾಟಪಟ್ಟಿಯಲ್ಲಿ ಶಾಲಾ ಮತ್ತು ಕೂಟ ಶೈಲಿಯ ಶಿಖರಗಳ ಮಾದರಿಗಳನ್ನು ಕೊರೆಯಲಾಗಿರುವುದು ಹಾಗೂ ಐಹೊಳೆಯಲ್ಲಿರುವ ಬೌದ್ಧ ಚೈತ್ಯಾಲಯದ ಮೇಲಂತಸ್ತಿನ ಗರ್ಭಗುಡಿಯ ದ್ವಾರದ ಕವಾಟಿನ ಮೇಲೆ ಕೂಟ ಮತ್ತು ಶಾಲಾ ಶೈಲಿಯ ಇಡೀ ದೇವಾಲಯದ ಮಾದರಿಗಳನ್ನೇ ಕೆತ್ತಲಾಗಿರುವುದನ್ನು ಆಧಾರವಾಗಿ ಕೊಡಬಹುದು. ಇವನ್ನು ಕ್ರಿ.ಶ. ೫೭೮ರ ಕಾಲಾವಧಿಗಿಂತಲೂ ಮುಂಚೆಯೇ ಕಂಡರಿಸಲಾಗಿತ್ತು ಎನ್ನುವುದನ್ನು ನೆನಪಿಡಬೇಕು.

ಹೀಗೆ ದ್ರಾವಿಡ ಶೈಲಿಯ ಶಿಖರ ಮತ್ತು ದೇವಾಲಯಗಳ ಮಾದರಿಗಳನ್ನು ಮೊದಲು ಬರಿಯ ಅಲಂಕಾರಕ್ಕಾಗಿ ಕೊರೆದವರಲ್ಲಿ ಹಾಗೂ ನಂತರ ಪೂರ್ಣ ಪ್ರಮಾಣದ ದೇವಾಲಯಗಳನ್ನಾಗಿ ಕಟ್ಟಿದವರಲ್ಲಿ ಬಾದಾಮಿ ಚಲುಕ್ಯರೆ ಮೊದಲಿಗರು. ಬಾಣಂತಿ ಗುಡಿ, ಮುಕುಟೇಶ್ವರ, ಮೇಗಣ ಮತ್ತು ಕೆಳಗಣ ಶಿವಾಲಯ ಮತ್ತು ಐಹೊಳೆಯ ಮೇಗುತಿ ದೇವಾಲಯಗಳನ್ನು ಸಾಕ್ಷಿಯಾಗಿ ಕೊಡಬಹುದು.

ಕ್ರಿ.ಶ. ೬೪೨ರಲ್ಲಿ ಪಲ್ಲವ ಅರಸರು ಬಾದಾಮಿಯ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿದ ಮೇಲೆ, ಚಲುಕ್ಯ ಸ್ಥಪತಿಗಳು ಇಲ್ಲಿ ಆರಂಬಿಸಿದ ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ದೇವಾಲಯಗಳನ್ನು ನೋಡಿ ಮೆಚ್ಚಿಕೊಂಡು ನಂತರ ಮಹಾಬಲಿಪುರಂನ ಏಕಶಿಲಾರಥಗಳನ್ನು ಮತ್ತು ಕಡಲತೀರದ ದೇವಾಲಯವನ್ನು ನಿರ್ಮಿಸುವಾಗ ಈ ದ್ರಾವಿಡ ಶೈಲಿಯನ್ನು ತಮ್ಮ ನಾಡಿನಲ್ಲಿಯೂ ಬಳಸಿಕೊಂಡರು. ಅರ್ಥಾತ್ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಪದ್ಧತಿಯು ಚಲುಕ್ಯರ ನಾಡಿನಲ್ಲಿ ಆರಂಭಗೊಂಡು ಇಲ್ಲಿಂದ ಪಲ್ಲವರ ನಾಡಿಗೆ ವಲಸೆ ಹೋಯಿತು ಎಂಬುದು ನಿರ್ವಿವಾದ.

ಈ ಸಂದರ್ಭದಲ್ಲಿ ಬಾದಾಮಿ ಚಲುಕ್ಯರ ಕಾಲದಲ್ಲಿ ಆರಂಭಗೊಂಡ ರೇಖಾನಾಗರ ಶೈಲಿಯ ದೇವಾಲಯಗಳನ್ನು ಪರಾಮರ್ಶಿಸಬೇಕು. ಈ ಶೈಲಿಯ ದೇವಾಲಯಗಳಲ್ಲಿ ಐಹೊಳೆಯಲ್ಲಿ ಹುಚ್ಚಿಮಲ್ಲಿ, ಹುಚ್ಚಪ್ಪಯ್ಯ ಮತ್ತು ತಾರಪ್ಪ ದೇವಾಲಯಗಳು; ಮಹಾಕೂಟದ ವಿಷ್ಣು ಪುಷ್ಕರಣಿಯ ಅಂಚಿನಲ್ಲಿರುವ ಚಿಕ್ಕ ದೇವಾಲಯಗಳು; ಪಟ್ಟದಕಲ್ಲಿನಲ್ಲಿರುವ ಗಳಗನಾಥ, ಕಾಶಿವಿಶ್ವೇಶ್ವರ ಮತ್ತು ಪಾಪನಾಥ ದೇವಾಲಯಗಳು, ಸಿದ್ದನಕೊಳ್ಳದಲ್ಲಿರುವ ದೇವಾಲಯ; ಆಲಂಪುರನಲ್ಲಿರುವ ವೀರಬ್ರಹ್ಮ, ಬಾಲಬ್ರಹ್ಮ, ಸ್ವರ್ಗಬ್ರಹ್ಮ ಮುಂತಾದ ದೇವಾಲಯಗಳನ್ನು ನೋಡಬಹುದು. ಇವುಗಳಲ್ಲಿ ಮೊಟ್ಟ ಮೊದಲನೆಯ ರೇಖಾನಾಗರ ಶೈಲಿಯ ದೇವಾಲಯ ಯಾವುದು ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯಗಳುಂಟು. ಆದರೆ ಕ್ರಿ.ಶ. ೭ನೇ ಶತಮಾನದ ಆರಂಭದ ವರ್ಷಗಳ ಅವಧಿಯ ಹುಚ್ಚಿಮಲ್ಲಿ ದೇವಸ್ಥಾನವೇ ಅತಿ ಪೂರ್ವದ ಉದಾಹರಣೆ ಎನ್ನಲು ಸಾಕಷ್ಟು ಸಾಕ್ಷಾಧಾರಗಳಿವೆ.

ಇಲ್ಲಿಯವರೆಗೂ ಈ ರೇಖಾನಾಗರ ಶೈಲಿಯನ್ನು ಚಲುಕ್ಯ ನಾಡಿನ ಸ್ಥಪತಿಗಳು ಸ್ವೀಕಾರ ಮಾಡಿರುವುದಕ್ಕೆ ಯಾವ ಪ್ರಭಾವ ಕಾರಣವಾಯಿತು ಎಂಬ ಬಗ್ಗೆ ಅಷ್ಟೊಂದು ಸಂಶೋಧನೆ ನಡೆದಿಲ್ಲ. ಬಹುಶಃ ಒರಿಸ್ಸಾದಲ್ಲಿರುವ ದೇವಾಲಯಗಳ ಪ್ರಭಾವದಿಂದ ಈ ವಾಸ್ತುಶೈಲಿ ಇಲ್ಲಿ ರೂಢಿಯಲ್ಲಿ ಬಂದಿರಬೇಕು ಎಂಬ ಅಭಿಪ್ರಾಯವೊಂದಿದೆ. ಈ ವಿಷಯದಲ್ಲಿ ಆಳವಾದ ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಅಧ್ಯಯನದ ಅಗತ್ಯವಿದೆ. ಒರಿಸ್ಸಾ ಪ್ರಾಂತದಲ್ಲಿ ರೇಖಾನಾಗರ ಶೈಲಿಯಲ್ಲಿ ಕಟ್ಟಿದ ಕ್ರಿ.ಶ. ೭೫೦ರ ಪರಶುರಾಮೇಶ್ವರ ದೇವಸ್ಥಾನವೇ ಮೊದಲನೆಯದಾಗಿದೆ. ಆದ್ದರಿಂದ ವಿಶೇಷವಾಗಿ ಆಲಂಪುರದಲ್ಲಿ ಬಾದಾಮಿ ಚಲುಕ್ಯರ ಕಾಲದ ಸ್ಥಪತಿಗಳು ಕಟ್ಟಿದ ರೇಖಾನಾಗರ ಶೈಲಿಯ ದೇವಾಲಯಗಳು ಒರಿಸ್ಸಾ ಪ್ರಾಂತದ ಕಳಿಂಗ ವಾಸ್ತುಶಿಲ್ಪದ ಮೇಲೆ ಬೀರಿದ ಪ್ರಭಾವದ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ನನ್ನ ಅನಿಸಿಕೆ.