ಕ್ರಿ.ಶ. ೫೩೦ರಲ್ಲಿ ಚಾಲುಕ್ಯ ಆಳಿಕೆಯ ಸ್ಥಾಪನೆ ಮತ್ತು ಒಂದನೇ ಪುಲಿಕೇಶಿಯ ಆದೇಶದಂತೆ ಕ್ರಿ.ಶ. ೫೪೩ರಲ್ಲಿ ಬಾದಾಮಿಯಲ್ಲಿ ಅಭೇದ್ಯವಾದ ಕೋಟೆಯ ನಿರ್ಮಾಣ -ಇವು ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದಷ್ಟು ಪ್ರಮಾಣದ ನಿರ್ಮಾಣ ಚಟುವಟಿಕೆಗಳಿಗೆ ನಾಂದಿಯನ್ನು ಹಾಡಿದವು. ಅವರ ಶಾಂತವಾದ ಆಳ್ವಿಕೆಯಲ್ಲಿ ಇಡೀ ದಖ್ಖನ್ ಪ್ರದೇಶವು ಒಂದು ರಾಜಕೀಯ ಪ್ರಭುತ್ವಕ್ಕೆ ಒಳಪಟ್ಟಿತು. ರಾಜಕೀಯ ಸ್ಥಿರತೆಗೆ ಆರ್ಥಿಕ ಸಮೃದ್ದಿಯೂ ಸೇರಿಕೊಂಡು ಗುಹಾದೇವಾಲಯಗಳ ಪರಿಶೋಧನೆ ಮತ್ತು ದೇವಾಲಯಗಳ ನಿರ್ಮಾಣಕಾರ್ಯಗಳಿಗೆ ದಾರಿಯನ್ನು ಹಾಕಿಕೊಟ್ಟವು. ಇದರ ಜೊತೆಗೆ ವೈದಿಕ ಸಂಪ್ರದಾಯಗಳ ಪುನರುಜ್ಜೀವನ ಹಾಗೂ ಭಾಗವತ ಪಂಥದ ಉದಯಗಳು ಬೌದ್ಧ ಮತ್ತು ಜೈನ ಪ್ರಭಾವವನ್ನು ಹದ್ದುಬಸ್ತಿನಲ್ಲಿಡಲು ನೆರವಾದವು. ಅರಸರೂ ಕೂಡ ವೈದಿಕ ಮತ್ತು ಭಾಗವತ ಸಂಸ್ಕೃತಿಯ ಪ್ರಸಾರಕರಾದರು. ಅವರು ಪರಮ ಭಾಗವತ, ಪರಮ ಮಾಹೇಶ್ವರ ಎಂಬ ಬಿರುದುಗಳನ್ನು ಧರಿಸಿದರು. ಅವರ ದಾಖಲೆಗಳು ಸಂಸ್ಕೃತದಲ್ಲಿ ರಚಿತವಾಗುತ್ತಿದ್ದವು. ಪೌರಾಣಿಕ ಮತ್ತು ಧಾರ್ಮಿಕ ತತ್ವಗಳನ್ನು ಪ್ರವರ್ತಿಸಲು ರಾಜರು ತಾವೇ ಸ್ವತಃ ದೇವಾಲಯ ನಿರ್ಮಾಣವನ್ನು ಕೈಗೆತ್ತಿಕೊಂಡು ಇತರರಿಗೆ ಮಾದರಿ ಹಾಕಿಕೊಟ್ಟರು. ಆದರೆ ಒಂದು ಮಾತು. ಅವರು ವೈದಿಕ ಸಂಸ್ಕೃತಿಯನ್ನು ಪ್ರಸಾರ ಮಾಡಿದರೂ ಅಂಧಾಭಿಮಾನಿಗಳಾಗಿರಲಿಲ್ಲ. ಜೈನರು ಮತ್ತು ಬೌದ್ಧರು ತಮ್ಮ ತಮ್ಮ ಧರ್ಮಗಳನ್ನು ಅನಿರ್ಬಂಧಿತವಾಗಿ ಅನುಸರಿಸುತ್ತಾ ತಮ್ಮ ಪೂಜಾಗೃಹಗಳನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳಲು ಅವಕಾಶ ಕೊಟ್ಟು ಸಹಿಷ್ಣುತೆಯನ್ನು ಪ್ರದರ್ಶಿಸಿದರು. ಅದರಿಂದಾಗಿ ಅಲ್ಪಸಂಖ್ಯಾತರಾಗಿದ್ದರೂ ಅವರೂ ಕೂಡ ಆಡಳಿತವರ್ಗದ ಪೋಷಣೆಯನ್ನು ಪಡೆಯುವಂತಾಯಿತು. ಚಾಲುಕ್ಯ ಅರಸರಿಗೆ ಉತ್ತಮ ಸೌಂದರ್ಯಪ್ರಜ್ಞೆಯಿತ್ತು, ಕಲಾಕೃತಿಗಳನ್ನು ಪೋಷಿಸುವುದರಲ್ಲಿ ಅವರು ಹೆಮ್ಮೆ ಪಡುತ್ತಿದ್ದರು. ಹಾಗಾಗಿ ಅಸಂಖ್ಯಾತ ವಾಸ್ತುಶಿಲ್ಪಿಗಳಿಗೂ, ಶಿಲ್ಪಿಗಳಿಗೂ ಅವರು ಆಶ್ರಯ ನೀಡಿದುದರಲ್ಲಿ ಆಶ್ಚರ್ಯವಿಲ್ಲ.

ವಿಂಧ್ಯದಿಂದ ಕಾವೇರಿಯವರೆಗಿನ ವಿಸ್ತಾರವಾದ ರಾಜ್ಯವನ್ನು ಆಳಿದ ಚಾಲುಕ್ಯರ ಆಶ್ರಯದಲ್ಲಿ ದೇವಾಲಯ ವಾಸ್ತುಶಿಲ್ಪ ಮತ್ತು ಹಿಂದೂ ಮೂರ್ತಿಶಿಲ್ಪಗಳಲ್ಲಿ ಅಸಾಧಾರಣ ಬೆಳವಣಿಗೆಯಾದುದನ್ನು ನೋಡಬಹುದು. ಬನವಾಸಿ ಕದಂಬರ ಆಳಿಕೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ದೇವಾಲಯ ನಿರ್ಮಾಣಕಾರ್ಯವು ಈಗ ಚಾಲುಕ್ಯರ ಆಳಿಕೆಯಲ್ಲಿ ಖಾಯಂ ಲಕ್ಷಣವೇ ಆಯಿತು. ಪೌರಾಣಿಕ ಪರಂಪರೆಯಲ್ಲಿ ಪವಿತ್ರವಾದವೆಂದು ಹೆಸರಾದ ಕೆಲವು ಸ್ಥಳಗಳನ್ನು ಕಲೆ ಮತ್ತು ವಾಸ್ತುಶಿಲ್ಪಗಳ ದೊಡ್ಡ ಕೇಂದ್ರಗಳನ್ನಾಗಿ ಪರಿವರ್ತಿಸ ಲಾಯಿತು. ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಆಲಂಪುರ ಮತ್ತು ಮಹಾ ನಂದಿಗಳು ಇಂತಹ ಕೆಲವು ಕೇಂದ್ರಗಳಾದವು.

ರಾಜಕೀಯ ಇತಿಹಾಸದಂತೆಯೇ ಚಾಲುಕ್ಯರ ವಾಸ್ತುಶಿಲ್ಪ ಚಟುವಟಿಕೆಯೂ ಎರಡು ನಿರ್ದಿಷ್ಟ ಹಂತಗಳನ್ನು ಕಂಡಿತು. ಮೊದಲನೆಯ ಹಂತವು ಕ್ರಿ.ಶ. ೫೩೫ರಲ್ಲಿ ಚಾಲುಕ್ಯ ಆಳಿಕೆಯ ಸ್ಥಾಪನೆಗೆ ಸಂವಾದಿಯಾಯಿತು. ಕ್ರಿ.ಶ. ೬೪೨ರಲ್ಲಿ ತಾತ್ಕಾಲಿಕ ಗ್ರಹಣದವರೆಗೆ ಬಹುದೊಡ್ಡ ರಾಜಕೀಯ ಶಕ್ತಿಯಾಗಿ ಅವರು ಬೆಳೆದರು. ಎರಡನೆಯ ಹಂತವು ಕ್ರಿ.ಶ. ೬೩೫ರಲ್ಲಿ ಮತ್ತೆ ಚಾಲುಕ್ಯ ಆಳಿಕೆಯು ಸ್ಥಾಪನೆಗೊಳ್ಳುವುದರಿಂದ ಪ್ರಾರಂಭವಾಗಿ ಕ್ರಿ.ಶ.೭೫೭ರಲ್ಲಿ ಮುಗಿಯುವವರೆಗೂ ಮುಂದುವರಿಯುತ್ತದೆ. ಮೊದಲ ಹಂತವು ಮುಖ್ಯವಾಗಿ ಗುಹಾಂತರ್ಗತ ದೇವಾಲಯಗಳ ಉತ್ಖನನ, ನಿರ್ಮಾಣ ಬಾದಾಮಿ ಮತ್ತು ಐಹೊಳೆಗಳಲ್ಲಿ ನಡೆಯಿತು. ರಾಜಧಾನಿಯಲ್ಲೂ ಸನಿಹದ ಕೆಲವು ಸ್ಥಳಗಳಲ್ಲೂ ದೇವಾಲಯಗಳು ನಿರ್ಮಾಣಗೊಂಡವು. ಎರಡನೆಯ ಹಂತದಲ್ಲಿ  ಗುಹಾಂತರ್ಗತ ದೇವಾಲಯಗಳ ಬಗೆಗೆ ಒಲವು ಕಡಿಮೆಯಾಯಿತು. ಅದಕ್ಕೆ ಬದಲು ಹೇರಳ ಸಂಖ್ಯೆಯಲ್ಲಿ ದೇವಾಲಯಗಳನ್ನು ಕಟ್ಟಲಾಯಿತು. ಪಟ್ಟದಕಲ್ಲು ಮತ್ತು ಆಲಂಪುರಗಳು ಕಲೆಯ ನೂತನ ಕೇಂದ್ರಗಳಾದುವು. ಮೊದಲನೆಯ ಹಂತದಲ್ಲಿ ಚಾಲುಕ್ಯ ವಾಸ್ತುಶಿಲ್ಪಗಳು ಮತ್ತು ಪಶ್ಚಿಮಭಾರತ ಮತ್ತು ಗೋವಾಗಳ ಕಲ್ಲು ಕೊರೆದು ದೇವಾಲಯ ಕಟ್ಟುವ ಸಂಪ್ರದಾಯವನ್ನು ಮುಂದುವರಿಸಿದರು. ಪೌರಾಣಿಕ ಧರ್ಮಗಳಿಗನುಸಾರವಾಗಿ ಅವುಗಳಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿದರು. ಹಿಂದೂ ಆಗಲಿ, ಜೈನ ಆಗಲಿ ಶಿಲ್ಪಗಳ ಹಂತವು ನಿರ್ಮಿತಿ ವಾಸ್ತುಶಿಲ್ಪ ಕಲೆಯು ವೇಗವಾಗಿ ಬೆಳೆದುದಕ್ಕೂ, ಶಿಲ್ಪಗಳ ಲಾಲಿತ್ಯ, ಗಾಂಭೀರ್ಯ, ನವ್ಯತೆಗಳಿಗೂ ವಿಶಿಷ್ಟವಾಯಿತು. ಇದು ಕಂಡುಬಂದದ್ದು ವಿಶೇಷವಾಗಿ ಐಹೊಳೆ, ಪಟ್ಟದಕಲ್ಲು ಮತ್ತು ಆಲಂಪುರಗಳಲ್ಲಿ.

ಒಂದನೇ ಹಂತ

ಒಂದನೇ ಪುಲಕೇಶಿಯು ಬಾದಾಮಿಯಲ್ಲಿ ಕೋಟೆಯನ್ನು ಕಟ್ಟಿಸಿದ್ದು ಮಾತ್ರವಲ್ಲದೆ, ಬಾದಾಮಿಯ ಮೊದಲ ಎರಡು ಗುಹೆಗಳ ಉತ್ಖನನ ಹಾಗೂ ಐಹೊಳೆಯಲ್ಲಿ ಅರ್ಧಭಾಗ ಕಲ್ಲಿನಲ್ಲಿ ಕೊರೆದ, ಇನ್ನರ್ಧಭಾಗ ಕಟ್ಟಿದ ಬೌದ್ಧ ಚೈತ್ಯದ ನಿರ್ಮಾಣಕ್ಕೆ ಕಾರಣನೂ ಆದನು. ಒಂದನೇ ಪುಲಕೇಶಿಯು ಸುಭದ್ರವಾದ ತಳಹದಿಯ ಮೇಲೆ ಚಾಲುಕ್ಯ ಆಡಳಿತವನ್ನು ಸ್ಥಾಪಿಸಿದ್ದು, ಅವನ ಅನಂತರ ಬಂದ ರಾಜರಿಗೆ ಅಂಥದೆ ನಿರ್ಮಾಣಕಾರ್ಯಗಳಲ್ಲಿ ತೊಡಗಲು ಸ್ಫೂರ್ತಿಯನ್ನು ಪ್ರೇರಣೆಯನ್ನೂ ನೀಡಿತು. ಒಂದನೇ ಕೀರ್ತಿವರ್ಮನ ಕಾಲದಲ್ಲಿ ಚಾಲುಕ್ಯ ಪ್ರಭುತ್ವದ ಸಂಘಟನೆಯಾದುದು ಮಾತ್ರವಲ್ಲದೆ, ರಾಜಧಾನಿ ಬಾದಾಮಿ ನಗರವನ್ನು ಸುಂದರಗೊಳಿಸುವ ಕೆಲಸವೂ ಮುಂದುವರಿಯಿತು. ಬಾದಾಮಿಯ ಅತಿದೊಡ್ಡ ಚಾಲುಕ್ಯ ಗುಹೆಯ ಉತ್ಖನನವನ್ನು ಕೈಗೊಳ್ಳಲು ಅವನು ತನ್ನ ತಮ್ಮ ಯುವರಾಜ ಮಂಗಳೇಶನಿಗೆ ಬೆಂಬಲ ನೀಡಿದನು. ವಿಷ್ಣುವಿಗೆ ಅರ್ಪಿತವಾದ ಈ ಗುಹಾ ದೇವಾಲಯವು ಕ್ರಿ.ಶ. ೫೭೮ರಲ್ಲಿ ಮುಗಿಯಿತು. ಮಹಾಕೂಟವು ಮಕುಟೇಶ್ವರ (ಮುಂದೆ ಮಹಾಕೂಟೇಶ್ವರ ಎಂದೇ ಪ್ರಸಿದ್ಧವಾದ) ದೇವಾಲಯದಿಂದಾಗಿ ಶೈವಧರ್ಮ ಮತ್ತು ಕಲೆಗಳ ದೊಡ್ಡ ಕೇಂದ್ರವಾಗಿ ಬೆಳೆಯಿತು. ಚಾಲುಕ್ಯರ ಅತಿ ಪ್ರಾಚೀನ ನಿರ್ಮಿತಿ ದೇವಾಲಯಗಳಲ್ಲೊಂದೆಂದು ಪರಿಗಣಿಸಿರುವ ಇನ್ನೊಂದು ಮಹಾಕೂಟದ ಬಾಣಂತಿಗುಡಿ. ಇದೊಂದು ಆಡಂಬರರಹಿತವಾದ ಸಣ್ಣ ಗುಡಿ. ಅತ್ಯಂತ ಪ್ರಾಚೀನ ರೂಪದ ದ್ರಾವಿಡ ಶೈಲಿಯ ಶಿಖರವನ್ನು ಹೊಂದಿದೆ. ಪರಮಭಾಗವತ ಮಂಗಳೇಶನು ಕಲಚೂರಿಗಳ ವಿರುದ್ಧ ಯುದ್ಧದಲ್ಲಿ ಗೆದ್ದು ಹಿಂದಿರುಗುವಾಗ ಮಹಾಕೂಟದಲ್ಲಿ ಮಹಾಕೋಟೇಶ್ವರ ದೇವಾಲಯದ ಮುಂಭಾಗದಲ್ಲಿ ಒಂದು ಧರ್ಮಸ್ತಂಭವನ್ನು ನಿಲ್ಲಿಸಿದನು. ಬಾದಾಮಿ ಮತ್ತು ಐಹೊಳೆಯ ಜೈನ ಗುಹೆಗಳು ಮಂಗಳೇಶನ ಆಳಿಕೆಯ ಕಾಲದ ಇತರ ನಿರ್ಮಿತಿಗಳು.

ಕ್ರಿ.ಶ.೬೧೦ರಲ್ಲಿ ಮಂಗಳೇಶನೊಂದಿಗೆ ನಡೆದ ಅಂತರ್ಯುದ್ಧದಲ್ಲಿ ಜಯಶಾಲಿಯಾದ ಎರಡನೇ ಪುಲಕೇಶಿಯು ತನ್ನ ಯುದ್ಧ ಸಾಹಸಗಳಿಗೆ ಚಾಲುಕ್ಯ ಅರಸರಲ್ಲೆಲ್ಲಾ ತುಂಬಾ ಪ್ರಸಿದ್ಧನಾದವನು. ಅವನು ಶ್ರೇಷ್ಠ ಕಲಾಪೋಷಕನೂ ಆಗಿದ್ದನು. ಅವನ ಕಾಲದಲ್ಲಿ ದ್ರಾವಿಡ ಮತ್ತು ರೇಖಾನಗರ ಎರಡೂ ಶೈಲಿಯ ದೇವಾಲಯಗಳನ್ನು ನಿರ್ಮಿಸಲಾಯಿತು. ಬಾದಾಮಿಯ ಮೇಲು ಶಿವಾಲಯ (ವಾಸ್ತವವಾಗಿ ಅದು ಒಂದು ವಿಷ್ಣುದೇವಾಲಯ) ಮತ್ತು ಕೆಳ ಶಿವಾಲಯಗಳು, ಸಂಗಮದ ಸಂಗಮೇಶ್ವರ ದೇವಾಲಯ (ಈಗ ಆಲಂಪುರಕ್ಕೆ ಸ್ಥಳಾಂತರಿಸಲಾಗಿದೆ) ಮತ್ತು ಐಹೊಳೆಯಲ್ಲಿ ಎರಡನೇ ಪುಲಕೇಶಿಯ ಆಸ್ಥಾನ ಕವಿ ರವಿಕೀರ್ತಿಯು ಕ್ರಿ.ಶ. ೬೩೫ರಲ್ಲಿ ಕಟ್ಟಿಸಿದ ಮೇಗುತಿಯ ದೇವಾಲಯ ಇವು ದ್ರಾವಿಡ ಶೈಲಿಯವಾದರೆ, ಐಹೊಳೆಯ ಹುಚ್ಚಿಮಲ್ಲಿಗುಡಿ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಅತಿ ಪ್ರಾಚೀನ ರೇಖಾನಾಗರ ಮಾದರಿಯ ದೇವಾಲಯ. ಈ ಎಲ್ಲ ದೇವಾಲಯಗಳೂ ಕರ್ನಾಟಕ ವಾಸ್ತುಶಿಲ್ಪದಲ್ಲಿ ಮುಖ್ಯವಾದ ಮಜಲುಗಳಾಗಿದ್ದು, ಎರಡನೇ ಪುಲಕೇಶಿಯ ಕಾಲದಲ್ಲಿ ನಿರ್ಮಿತವಾದವು, ಕ್ರಿ.ಶ.೬೪೨ರಲ್ಲಿ ಪಲ್ಲವ ಎರಡನೇ ನರಸಿಂಹವರ್ಮನ್ ಬಾದಾಮಿಯನ್ನು ಆಕ್ರಮಿಸಿಕೊಂಡುದರಿಂದ, ನಿರ್ಮಾಣಕಾರ್ಯಗಳಿಗೆ ತಾತ್ಕಾಲಿಕವಾದ ನಿಲುಗಡೆಯುಂಟಾಯಿತು.

ಎರಡನೇ ಹಂತ

ಚಾಲುಕ್ಯ ಆಳಿಕೆಗೆ ಒದಗಿದ ಅಲ್ಪಕಾಲಿಕ ಗ್ರಹಣ, ಕ್ರಿ.ಶ.೬೪೨ರಲ್ಲಿ ಪಲ್ಲವರು ಬಾದಾಮಿಯನ್ನು ಆಕ್ರಮಿಸಿಕೊಂಡದ್ದು, ಎರಡನೇ ಪುಲಕೇಶಿಯ ಮಕ್ಕಳು ಕರ್ನೂಲು-ಬಳ್ಳಾರಿ  ಪ್ರದೇಶಕ್ಕೆ ಓಡಿಹೋಗುವಂತೆ ಮಾಡಿದವು. ಅಲ್ಲಿಂದ ಬಾದಾಮಿಯನ್ನು ಮರಳಿ ಗೆದ್ದುಕೊಳ್ಳಲು ಪ್ರಯತ್ನಗಳು ನಡೆದವು. ವಿಶೇಷವಾಗಿ ಮೊದಲನೇ ವಿಕ್ರಮಾದಿತ್ಯನು ಹೋರಾಡಿದನು. ಕ್ರಿ.ಶ.೬೫೫ರಲ್ಲಿ ಮತ್ತೆ ಚಾಲುಕ್ಯ ಆಡಳಿತವು ಸ್ಥಾಪನೆಗೊಂಡಿತು. ಕ್ರಿ.ಶ. ೬೫೫ರಿಂದ ಕ್ರಿ.ಶ. ೭೫೭ರವರೆಗಿನ ಅವಧಿಯಲ್ಲಿ ಚಾಲುಕ್ಯ ಅರಸರೂ, ಇತರ ಶ್ರೀಮಂತರೂ ವಾಸ್ತುಶಿಲ್ಪವನ್ನೂ ಶಿಲ್ಪಕಲೆಯನ್ನೂ ಬೆಳೆಸಲು ಅತೀವ ಉತ್ಸಾಹದಿಂದ ಪ್ರಯತ್ನಿಸಿದರು. ದೇವಾಲಯ ವಾಸ್ತುಶಿಲ್ಪ ಮತ್ತು ಹಿಂದೂ ಮೂರ್ತಿಶಿಲ್ಪಗಳಿಗೆ ಸಂಬಂಧಿಸಿದಂತೆ ಅನೇಕ ಮಾನಕಗಳನ್ನು ನಿರ್ಮಿಸುವಷ್ಟು ಮಟ್ಟಿಗೆ ಅವು ವೈಭವೋಪೇತವಾಗಿ ಬೆಳೆದವು.

ಎರಡನೇ ಹಂತದ ದೇವಾಲಯದ ನಿರ್ಮಾಣದ ಮೇಲೆ ಗಾಢವಾದ ಪ್ರಭಾವ ಬೀರಿದ ಒಂದು ಘಟನೆ, ಒಂದನೆಯ ವಿಕ್ರಮಾದಿತ್ಯನು ಶೈವ ಮತಕ್ಕೆ ಪರಿವರ್ತನೆಗೊಂಡದ್ದು. ಅವನ ಪೂರ್ವಿಕರೆಲ್ಲರೂ ಶ್ರೇಷ್ಠ ವಿಷ್ಣುಪೂಜಕರು. ವಿಕ್ರಮಾದಿತ್ಯನಿಗೆ ಸುದರ್ಶನಾಚಾರ್ಯರು ಶಿವಮಂಡಲ ದೀಕ್ಷೆಯನ್ನು ನೀಡಿದರು. ಇದರ ಫಲವಾಗಿ ಒಂದನೇ ವಿಕ್ರಮಾದಿತ್ಯನೂ ಅವನ ವಂಶಜರೂ ಉತ್ಕಟ ಶಿವಭಕ್ತರಾದರು. ವಿಕ್ರಮಾದಿತ್ಯನು ಹೀಗೆ ಶೈವ ಮತಕ್ಕೆ ಪರಿವರ್ತಿತನಾದುದರಿಂದ ದೇವಾಲಯ ನಿರ್ಮಾಣದ ಮೂಲಕ ಶೈವಧರ್ಮದ ಪ್ರಸಾರಕ್ಕೆ ಅವಕಾಶವಾಯಿತು. ಅವನ ಮತ್ತು ಮುಂದಿನವರ ಕಾಲದಲ್ಲಿ ಬೇಕಾದಷ್ಟು ಶಿವದೇವಾಲಯಗಳು ನಿರ್ಮಾಣಗೊಂಡವು. ಪಟ್ಟದಕಲ್ಲು, ಆಲಂಪುರ, ಮಹಾನಂದಿ, ಪಾಪನಾಶನಂ ಮತ್ತು ಪಾನ್ಯಂ ಮೊದಲಾದ ಶೈವ ಕೇಂದ್ರಗಳು ಪ್ರಾಧಾನ್ಯ ಗಳಿಸಿದುವು. ಹಾಗೂ ಐಹೊಳೆ, ಬಾದಾಮಿ ಮತ್ತು ಮಹಾಕೂಟಗಳು ಹೊಸಹೊಸದಾಗಿ ದೇವಾಲಯಗಳನ್ನು ಕಟ್ಟಿಸಲು ವ್ಯಕ್ತಿಗಳನ್ನು ಆಕರ್ಷಿಸುತ್ತಲೇ ಇದ್ದವು.

ಒಂದನೇ ವಿಕ್ರಮಾದಿತ್ಯನ ಕಾಲದಲ್ಲಿ ಅಕರ ಬ್ರಹ್ಮ ರೂಪದ ಒಂದನೇ ದೇವಾಲಯವನ್ನು ನಿರ್ಮಿಸಲಾಯಿತು. ಅದನ್ನು ಅನುಸರಿಸಿ ವೀರಬ್ರಹ್ಮ, ಕುಮಾರಬ್ರಹ್ಮ ದೇವಾಲಯಗಳು ನಿರ್ಮಿಸಲ್ಪಟ್ಟವು. ಬಾದಾಮಿಯ ಮಾಲೆಗಿತ್ತಿ ಶಿವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿದ್ದು, ಅದು ಈ ಕಾಲದ ಅತಿ ಮುಖ್ಯವಾದ ರಚನೆಗಳಲ್ಲಿ ಒಂದಾಗಿದೆ. ಕಮಾನುಗೂಡು ಆಕಾರದ ದೇವಾಲಯಗಳಲ್ಲಿ ಮೊದಲನೆಯದು ಹಳೆ ಮಹಾಕೂಟದಲ್ಲಿ ಮೇಲೆದ್ದಿತು. ಈ ಪುಟ್ಟ ಸಾಂಧಾರ ದೇವಾಲಯದಲ್ಲಿ ಕಮಾನುಗೂಡಿನಂತಹ ಗರ್ಭಗೃಹವೂ, ಅಂಥದೇ ಪ್ರದಕ್ಷಿಣಪಥವೂ ಇವೆ. ಇದು ಮುಂದಿನ ದಶಕಗಳಲ್ಲಿ ಅಂಥದೇ ದೊಡ್ಡ ದೇವಾಲಯಗಳಿಗೆ ಪ್ರೇರಣೆಯನ್ನು ನೀಡಿತು. ಕದಮರಕಲವುನಲ್ಲಿರುವ ಸಣ್ಣ ದೇವಾಲಯವೂ ಈ ಯುಗಕ್ಕೆ ಸೇರಿದ ಇನ್ನೊಂದು.

ಒಂದನೇ ವಿಕ್ರಮಾದಿತ್ಯನ ನಂತರ ೬೮೧ರಲ್ಲಿ ಪಟ್ಟಕ್ಕೆ ಬಂದ ವಿನಯಾದಿತ್ಯನು ರಾಜ್ಯದಲ್ಲಿ ದೇವಾಲಯ ನಿರ್ಮಾಣಕ್ಕೆ ದೇವಾಲಯವನ್ನು ನಿರ್ಮಿಸಲಾಯಿತು. ಸಾಮಾನ್ಯವಾಗಿ ಸ್ವರ್ಗಬ್ರಹ್ಮ ದೇವಾಲಯವೆಂದು ಕರೆಯುವ ಇದು ರೇಖಾನಗರ ಶಿಖರಕ್ಕಾಗಿಯೂ ದೇವಕೋಷ್ಠಗಳಲ್ಲಿನ ಕೆಲವು ಸುಂದರ ಶಿಲ್ಪಗಳಿಗಾಗಿಯೂ ಗಮನಾರ್ಹವಾಗಿದೆ. ರಾಯಚೂರು ಜಿಲ್ಲೆಯ ಇಟ್ಟಿಗಿಯಲ್ಲಿ ಸುಂದರವಾದ ವಿನ್ಯಾಸವುಳ್ಳ ಒಂದು ತೋರಣವನ್ನು ನಿಲ್ಲಿಸಲಾಯಿತು. ಈ ಕಾಲದ ಇನ್ನೆರಡು ದೇವಾಲಯಗಳೆಂದರೆ, ಪಾನ್ಯದ ಶಿವದೇವಾಲಯ ಮತ್ತು ಮಹಾನಂದಿಯ ಮಹಾನಂದೀಶ್ವರ ದೇವಾಲಯ.

ವಿನಯಾದಿತ್ಯನ ನಂತರ ಕ್ರಿ.ಶ. ೬೯೬ರಲ್ಲಿ ಪಟ್ಟಕ್ಕೆ ಬಂದ ವಿಜಯಾದಿತ್ಯನು ಸುಮಾರು ೩೭ ವರ್ಷಗಳ ಸುದೀರ್ಘ ಆಳಿಕೆಯನ್ನು ನಡೆಸಿದನು. ಪಟ್ಟದಕಲ್ಲಿನಲ್ಲಿ ದೇವಾಲಯ ನಿರ್ಮಾಣ ಚಟುವಟಿಕೆಯನ್ನು ಪ್ರಾರಂಭ ಮಾಡಿದವನೇ ಇವನು. ಶುದ್ಧಾಂಗವಾಗಿ ದ್ರಾವಿಡ ಶಿಖರದ ಮೊದಲರೂಪವನ್ನು ಹೊಂದಿರುವ ವಿಜಯೇಶ್ವರ (ಸಂಗಮೇಶ್ವರ) ದೇವಾಲಯವನ್ನು ಅವನು ನಿರ್ಮಿಸಿದನು. ಕರ್ನಾಟಕದ ಮೊತ್ತಮೊದಲ ತ್ರಿಕೂಟ ದೇವಾಲಯದ ನಿರ್ಮಾಣವಾದ ಕೀರ್ತಿ ಇವನ ಆಳಿಕೆಗೇ ಸಲ್ಲುತ್ತದೆ. ಅವನ ತಾಯಿ ವಿನಯವತಿಯು ಬಾದಾಮಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪ್ರತಿಷ್ಠಿಸಲು ಒಂದು ತ್ರಿಕೂಟ ದೇವಾಲಯವನ್ನು ಕಟ್ಟಿಸಿದಳು. ಈ ದೇವಾಲಯವು ಈಗ ತುಂಬಾ ಶಿಥಿಲವಾಗಿದ್ದು, ಜಂಬುಲಿಂಗ ದೇವಾಲಯವೆಂದು ಹೆಸರಾಗಿದೆ. ಇದರ ಕಾಲ ಕ್ರಿ.ಶ. ೬೯೯. ಕಾಲವು ಖಚಿತವಾಗಿ ತಿಳಿಯುವುದರಿಂದ ಅದರ ಆಧಾರದ ಮೇಲೆ ಐಹೊಳೆ ಮತ್ತು ಬಾದಾಮಿಗಳ ಚಾಲುಕ್ಯ ಕಟ್ಟಡಗಳ ಕಾಲಾನುಕ್ರಮಣಿಕೆಯನ್ನು ರಚಿಸಲು ಅದು ತುಂಬಾ ಸಹಾಯ ಮಾಡುತ್ತದೆ. ವಿಜಯಾದಿತ್ಯನ ಸಹೋದರಿ ಕುಂಕುಮ ಮಹಾದೇವಿ ಆಳುಪರಾಜ ಚಿತ್ರವಾಹನನ ಪತ್ನಿ. ಅವಳು ಪುರಿಗೆರೆ(ಲಕ್ಷ್ಮೇಶ್ವರ)ಯ ಆನೆಸೆಜ್ಜೆ ಬಸದಿಯನ್ನು ಕಟ್ಟಿಸಲು ಕಾರಣಳಾದಳು. ವಿಜಯಾದಿತ್ಯನ ಕಾಲದ ಇತರ ದೇವಾಲಯಗಳೆಂದರೆ ಮಹಾಕೂಟದ ಬಳಿ ನಾಗನಾಥ ಕೊಳ್ಳದಲ್ಲಿ ನಾಗನಾಥ ದೇವಾಲಯ, ಬನ್ನಿಕೊಪ್ಪದಲ್ಲಿ ಅರ್ಜುನೀಶ್ವರ ದೇವಾಲಯ, ಆಲಂಪುರದಲ್ಲಿ ವಿಶ್ವಬ್ರಹ್ಮ ಮತ್ತು ಗರುಡಬ್ರಹ್ಮ, ಮಹಾಕೂಟದ ಮಲ್ಲಿಕಾರ್ಜುನ ದೇವಾಲಯ. ಲಾಡ್‌ಖಾನ್, ಹುಚ್ಚಪ್ಪಯ್ಯಗುಡಿ, ಐಹೊಳೆಯ ಹುಚ್ಚಪ್ಪಯ್ಯಮಠ, ಗೌಡರಗುಡಿ ಮತ್ತು ಸಿದ್ಧನಕೊಳ್ಳದಲ್ಲಿ ಲಕುಲೀಶ ದೇವಾಲಯ.

ಚಾಲುಕ್ಯರ ಪ್ರಭಾವ ಮತ್ತು ಅಭ್ಯುದಯವು ಶಿಖರವನ್ನು ಮುಟ್ಟಿದ್ದು ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ. ಅವನು ಕ್ರಿ.ಶ. ೭೩೩ರಲ್ಲಿ ಸಿಂಹಾಸನಕ್ಕೆ ಬಂದನು. ಆಲಂಪುರ, ಐಹೊಳೆ, ಮಹಾಕೂಟ ಮತ್ತು ಪಟ್ಟದಕಲ್ಲುಗಳು ದೇವಾಲಯ ನಿರ್ಮಾಣ ಕಾರ್ಯದಲ್ಲಿ ಆಸಕ್ತರಾದವರನ್ನು ಆಕರ್ಷಿಸುತ್ತಲೇ ಹೋದುವು. ಪಟ್ಟದಕಲ್ಲು ಚಾಲುಕ್ಯ ಕಲೆಯ ಅತ್ಯಂತ ಮುಖ್ಯವಾದ ಕೇಂದ್ರವಾಯಿತು. ಎರಡನೇ ವಿಕ್ರಮಾದಿತ್ಯನ ರಾಣಿಯರಾದ ಲೋಕ ಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ಚಾಲುಕ್ಯ ವಾಸ್ತುಶಿಲ್ಪದ ಎರಡು ಅತ್ಯುತ್ತಮ ಮಾದರಿಗಳನ್ನು ಕಟ್ಟಿಸಿದರು. ಅವು ಲೋಕೇಶ್ವರ (ವಿರೂಪಾಕ್ಷ) ಹಾಗೂ ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯಗಳು ಪಟ್ಟದಕಲ್ಲಿನಲ್ಲಿ ಇವುಗಳನ್ನು ಅವರು ಕಟ್ಟಿಸಿದ್ದು ರಾಜನು ಮೂರು ಸಂದರ್ಭಗಳಲ್ಲಿ, ಕಾಂಚಿಯನ್ನು ಗೆದ್ದುದರ ಸ್ಮರಣಾರ್ಥವಾಗಿ, ಮಹಾಕೂಟದಲ್ಲಿ ವಿಷ್ಣು ಪುಷ್ಕರಣಿಯ ಸುತ್ತಲೂ ಇನ್ನು ಕೆಲವು ಸಣ್ಣ ದೇವಾಲಯಗಳು ನಿರ್ಮಾಣಗೊಂಡವು. ಬಹುತೇಕ ರೇಖಾನಗರ ಶಿಖರಗಳನ್ನು ಹೊಂದಿರುವಂಥವು. ರಾಜನ ಒಬ್ಬ ಅಧಿಕಾರ ಆಟದ ಅಲೆಕೊಮಾರಸಿಂಗ ಎನ್ನುವವನು ಐಹೊಳೆಯಲ್ಲಿ ಭವ್ಯವಾದ ದೇವಾಲಯವೊಂದನ್ನು ನಿರ್ಮಿಸಿದನು. ಇದು ಗಜಪೃಷ್ಠ ವಿನ್ಯಾಸದ ಸುಪ್ರಸಿದ್ಧ ದುರ್ಗಾ ದೇವಾಲಯ. ಈ ಕಾಲದಲ್ಲೇ ಹುಟ್ಟಿದ್ದ ಇನ್ನೊಂದು ದೇವಾಲಯ ಐಹೊಳೆಯ ಚಿಕ್ಕಗುಡಿ, ವಿಸ್ತಾರವಾದ ಶಿಲಾಜಾಲಂಧ್ರಗಳಿಂದಲೂ ಅಲಂಕೃತ ಕಂಬಗಳಿಂದಲೂ ಕೂಡಿದ ಸಾಂಧಾರ ರಚನೆ. ಇದೇ ಸ್ಥಳದ ಜ್ಯೋತಿರ್ಲಿಂಗ ಸಮೂಹಕ್ಕೆ ಸೇರಿದ, ದೊಡ್ಡ ಸ್ತಂಭಶಿಲ್ಪಗಳುಳ್ಳ ಚಿಕ್ಕ ಗುಡಿಗಳೂ ಈ ಕಾಲಕ್ಕೇ ಸೇರಿದವು. ಎರಡನೇ ವಿಕ್ರಮಾದಿತ್ಯನು ಆಳುತ್ತಿದ್ದಾಗಲೇ ಆಲಂಪುರದಲ್ಲಿ ಕೊನೆಯ ದೇವಾಲಯವೂ, ಪದ್ಮಬ್ರಹ್ಮ ದೇವಾಲಯವೂ ನಿರ್ಮಾಣಗೊಂಡವು.

ವಂಶದ ಕೊನೆಯ ಅರಸ ಎರಡನೇ ಕೀರ್ತಿವರ್ಮನು ನಿರ್ಮಾಣ ಕಾರ್ಯಗಳ ಪ್ರೋಮುಂದುವರಿಸಿದನು. ಅವನ ಆಳಿಕೆಯಲ್ಲಿ ಅತ್ಯಂತ ಗಮನಾರ್ಹವಾದದ್ದು, ಪಟ್ಟದಕಲ್ಲಿನ ಪಾಪನಾಥ ದೇವಾಲಯ ರೇಖಾನಗರ ಶಿಖರವನ್ನು ಹೊಂದಿರುವುದು. ಹೊರಗೋಡೆಗಳ ಮೇಲೆ ರಾಮಾಯಣದ ಸೂಕ್ಷ್ಮವಾದ ಉಬ್ಬುಶಿಲ್ಪಗಳೂ ಮೋಹಕವಾದ ಕಲ್ಲಿನ ಜಾಲಂಧ್ರಗಳೂ ಇಲ್ಲಿ ಕಂಡುಬರುತ್ತವೆ. ಮಹಾಕೂಟದಲ್ಲಿ ಕದಂಬ ನಾಗರ ಶಿಖರ ವಿನ್ಯಾಸದ ಇನ್ನು ಕೆಲವು ಸಣ್ಣ ದೇವಾಲಯಗಳು ನಿರ್ಮಾಣಗೊಂಡವು. ಈ ಕಾಲದ ಇತರ ಗಮನಾರ್ಹ ನಿರ್ಮಿತಿಗಳೆಂದರೆ, ಬಾದಾಮಿಯ ಭೂತನಾಥ ಮತ್ತು ಐಹೊಳೆಯ ಚಕ್ರಗುಡಿ ದೇವಾಲಯಗಳು.

ಬಾದಾಮಿಯ ಗುಹಾ ದೇವಾಲುಗಳು

ಬಾದಾಮಿ ಚಾಲುಕ್ಯರು ಐಹೊಳೆ ಮತ್ತು ಬಾದಾಮಿಗಳಲ್ಲಿ ಗುಹಾದೇವಾಲಯ ಗಳನ್ನು ಉತ್ಖನನ ಮಾಡಿ ನಿರ್ಮಿಸಿದರು. ಉತ್ತರಕ್ಕೆ ಮುಖಮಾಡಿ ನಾಲ್ಕು ಗುಹಾದೇವಾಲಯಗಳು ಸಾಲಾಗಿ ಕಂಡುಬರುತ್ತವೆ. ಇವುಗಳಲ್ಲಿ ಮೊದಲನೆಯದು ಶೈವ, ಮುಂದಿನ ಎರಡು ವೈಷ್ಣವ ಮತ್ತು ಕೊನೆಯದು ಜೈನ ದೇವಾಲಯ. ಶಿವ ಗುಹೆಯು ಸರಣಿಯಲ್ಲಿ ಅತಿ ಪ್ರಾಚೀನವಾದದ್ದು. ನಾಲ್ಕನೆಯದಾದ ಜೈನ ಗುಹೆಯು ಸರಣಿಯಲ್ಲಿ ಕೊನೆಯದು. ದೊಡ್ಡದಾದ ಮೂರನೆಯದಾದ ವಿಷ್ಣು ಗುಹೆಯನ್ನು ೫೭೮ರಲ್ಲಿ ಕೀರ್ತಿವರ್ಮನ ಆಳಿಕೆಯಲ್ಲಿ ಮಂಗಳೇಶನು ಉತ್ಖನನ ಮಾಡಿಸಿದನು. ಬಾದಾಮಿ ಚಾಲುಕ್ಯರ ಗುಹಾದೇವಾಲಯಗಳಲ್ಲಿ ಕಾಲವು ಖಚಿತವಾಗಿ ತಿಳಿದಿರುವುದು ಇದೊಂದೇ. ವಾಸ್ತುಶಿಲ್ಪ ಮತ್ತು ಶಿಲ್ಪಕಲಾ ಲಕ್ಷಣಗಳ ಅಧ್ಯಯನ ಹಾಗೂ ಒಂದು ಗುಹೆಯಿಂದ ಮತ್ತೊಂದಕ್ಕೆ ಕಂಡುಬರುವ ಸ್ಪಷ್ಟ ಬೆಳವಣಿಗೆಗೆ ಇವುಗಳಿಂದಾಗಿ ಈಗಿರುವಂತೆ ಒಂದನೇ ಗುಹೆ, ಎರಡನೇ ಗುಹೆ, ಮೂರನೇ ಗುಹೆ ಮತ್ತು ನಾಲ್ಕನೇ ಗುಹೆ ಎಂದು ಕಾಲಾನುಕ್ರಮವಾಗಿ ಗುರುತಿಸಲು ಸಹಾಯವಾಗಿದೆ. ದಖ್ಖನಿನ ಹಿಂದೂ ಗುಹಾದೇವಾಲಯಗಳಲ್ಲಿ ಅತ್ಯುತ್ತಮವಾದ್ದರಿಂದ ಇವು ಪ್ರಾಚೀನ ಕರ್ನಾಟಕದ ವಾಸ್ತುಶಿಲ್ಪವನ್ನೂ ಬಾದಾಮಿ ಚಾಲುಕ್ಯರ ನಿರ್ಮಿತಿ ವಾಸ್ತುಶಿಲ್ಪದ ಮೇಲೆ ಅದರ ಪ್ರಭಾವವನ್ನೂ ನೆರೆಯ ಸಮಕಾಲೀನ ಪಲ್ಲವರ ಗುಹಾ ವಾಸ್ತುಶಿಲ್ಪದ ಮೇಲೆ ಅದು ಬೀರಿದ ಪ್ರಭಾವವನ್ನೂ ಅರ್ಥಮಾಡಿಕೊ್ಳಲು ತುಂಬಾ ಅನುಕೂಲವಾಗಿದೆ.

ಮೊದಲ ಮೂರು ಗುಹಾ ದೇವಾಲಯಗಳಲ್ಲಿ ಒಂದು ಮೊಗಸಾಲೆ, ಕಂಬಗಳ ಹಜಾರ ಮತ್ತು ಒಂದು ಗರ್ಭಗೃಹ ಇವೆ. ಜೈನ ಗುಹೆಯಲ್ಲಿ ಕಂಬಗಳ ಹಜಾರವಿಲ್ಲ. ಅದಕ್ಕೆ ಬದಲು ಕಂಬಗಳಿಲ್ಲದ ಆಯಾಕಾರದ ಮಂಟಪವಿದೆ. ಎಲ್ಲ ಗುಹೆಗಳೂ ನಿರಂಧಾರ ಮಾದರಿಯವು. ಮೊದಲನೇ ಗುಹೆಯಲ್ಲಿ ಮೊಗಸಾಲೆಯ ಮುಂದೆ ನೆಲದ ಚಂದ್ರಶಿಲೆ ಇಲ್ಲ. ಮಂಟಪದ ಕಂಬಗಳು ಎಡದಿಂದ ಬಲಕ್ಕೆ ಸಾಲು ಸಾಲಾಗಿ ನಿಲ್ಲಿಸಲ್ಪಟ್ಟಿವೆ. ಈ ಕಂಬಗಳು ಮೂಲತಃ ಚೌಕವಾಗಿವೆ. ಅಲಂಕಾರ ವಿನ್ಯಾಸಗಳಿರುವ ಒಂದು ಪಟ್ಟಿಕೆಯ ಕಾಂಡಭಾಗದಲ್ಲಿ ಮಕರಗಳು ಮತ್ತು ಪೌರಾಣಿಕ ಪ್ರಾಣಿಗಳು ಇರುವ ಪದಕಾಲಂಕಾರ ಇವೆ. ಚಾಚುಪೀಠಗಳು ತರಂಗ ಮಾದರಿಯವು. ಚಾಚುಪೀಠಗಳ ಮೇಲೆ ವಿಷ್ಣು, ಕೈಲಾಸದಲ್ಲಿರುವ ಶಿವ ಮತ್ತು ಕಮಲದ ಮೇಲೆ ಆಸೀನಳಾದ ಲಕ್ಷ್ಮಿ ಈ ವಿಗ್ರಹಗಳಿವೆ.

ಎರಡನೇ ಗುಹೆಯಲ್ಲಿ ಅತ್ಯಂತ ಗಮನಾರ್ಹವಾದ ಕಂಬಗಳೆಂದರೆ ಹಜಾರ ಮತ್ತು ಮೊಗಸಾಲೆಗಳ ನಡುವೆ ಇರುವಂಥವು. ಅವೂ ಬುಡದಲ್ಲಿ ಚೌಕಾಕಾರವಾಗಿವೆ. ಕಾಂಡಭಾಗದಲ್ಲಿ ಅಲಂಕಾರ ಪಟ್ಟಿಕೆಯಿದೆ. ಇದರ ಮೇಲೆ ಚೌಕಾಕೃತಿಯ ಬಹುಕೊಳವೆಯಾಕಾರದ ಬಟ್ಟಲ ಮಾದರಿಯೂ ಅದರ ಮೇಲೆ ಚೌಕಾಕೃತಿಯ ಮುಚ್ಚಳವೂ ಇವೆ. ತರಂಗ ಚಾಚುಪೀಠಗಳಿವೆ. ಈ ಪೀಠಗಳಲ್ಲಿ ನವಿಲು, ಹೂವು ಮೊದಲಾದ ಕಿರು ಉಬ್ಬುಶಿಲ್ಪಗಳಿವೆ.

ಮೂರನೇ ಗುಹೆಯಲ್ಲಿ ಬಗೆಬಗೆಯ ಕಂಬಗಳಿವೆ. ಕೆಲವು ಕಂಬಗಳ  ಕಾಂಡ ಭಾಗವು ಚೌಕಾಕೃತಿಯಲ್ಲಿದ್ದು, ಅವುಗಳ ಮೇಲೆ ಮಿಥುನಗಳು ಮತ್ತು ದೇವತೆಗಳ ಉಬ್ಬುಶಿಲ್ಪ ಗಳನ್ನೊಳಗೊಂಡ ಪದಕಾಲಂಕಾರವಿದೆ. ಅಲ್ಲದೆ ಈ ಕಂಬಗಳ ಮೇಲೆ ಅತ್ಯಂತ ಸುಂದರವಾದ ಚಾಚುಪೀಠಗಳ ಮೇಲೆ ನಿಲ್ಲಿಸಿದ ಮೂರ್ತಿಗಳಿವೆ. ಇನ್ನು ಕೆಲವು ಕಂಬಗಳ ಪೀಠ ಅಷ್ಟ ಭುಜಾಕೃತಿಯವು. ೧೬ ಮುಖಗಳ ಕಾಂಡ, ಚಾವಣಿಯನ್ನು ಕೂಡಿಸುವ ಪಟ್ಟಿಗಳಿರುವ ಕುಂಭ, ಅದರ ಮೇಲೆ ಮತ್ತೆ ಮಾದರಿಯ ಪಟ್ಟಿಗಳಿರುವ ಮುಚ್ಚಳ ಇವೆ. ಇನ್ನೊಂದು ಬಗೆಯ ಕಂಬ ಮೂಲದಲ್ಲಿ ಚೌಕಾಕೃತಿಯಾಗಿದ್ದು, ಒಳಸರಿದ ಕುಂಭ ಮತ್ತು ಒಳಸರಿದ ಮುಚ್ಚಳ ಇವೆ.

ನಾಲ್ಕನೇ ಗುಹೆಯ ಮುಖಭಾಗದ ಕಂಬಗಳು ನೆಲದ ಮೇಲೆ ಮಲಗಿರುವ ಸಿಂಹದ ಬೆನ್ನ ಮೇಲೆ ನಿಂತಿರುವಂತಿವೆ. ಕಂಬದ ಕಾಂಡವು ಚೌಕವಾಗಿದ್ದು, ಮೇಲ್ತುದಿಯಲ್ಲಿ ವಿನ್ಯಾಸವಿರುವ ಪಟ್ಟಿಕೆಯನ್ನು ಹೊಂದಿದೆ. ಅರೆಗೊಳವಿಯಾಕಾರದ ಕುಂಭಕ್ಕೆ ಪದಕದ ಅಲಂಕಾರವಿದೆ. ಎಲ್ಲಾ ಕಂಬಗಳ ಮೆತ್ತೆ ಮುಚ್ಚಳವು ಚೌಕವಾಗಿವೆ. ಚಾಚುಗಳು ತರಂಗ ಮಾದರಿಯವು. ಕಂಬಗಳ ಹೊರಮುಖದಲ್ಲಿ ಕೊಂಬಿರುವ ಸಿಂಹಗಳು ಗುಹೆಗೆ ಆಧಾರವನ್ನು ಒದಗಿಸಿರುವಂತೆ ನಿಂತಿವೆ.

ಒಂದು ಮತ್ತು ಎರಡನೇ ಗುಹೆಗಳಲ್ಲಿ ಮೊಗಸಾಲೆಯ ಪಕ್ಕಗೋಡೆಗಳ ಮೇಲೆ ಮಾತ್ರ ಗನ(Gana) ಪಟ್ಟಿಕೆಗಳ ಮೇಲೆ ನಿಂತ ದೊಡ್ಡ ಶಿಲ್ಪಗಳಿವೆ. ಮೂರನೇ ಗುಹೆಯಲ್ಲಿ ಮೊಗಸಾಲೆಯ ಪಕ್ಕ ಗೋಡೆಗಳು ಮತ್ತು ಹಿಂಭಾಗದ ಗೋಡೆಗಳ ಮೇಲೂ ಅಂತಹ ದೊಡ್ಡ ಆಕೃತಿಗಳನ್ನು ಕೆತ್ತಲಾಗಿದೆ. ಅವುಗಳಲ್ಲಿ ಪೂರ್ವದ ಗೋಡೆಯ ಮೇಲೆ ಅನಂತನ ಮೇಲೆ ಕುಳಿತ ಪರವಾಸುದೇವ ವಿಷ್ಣುವಿನ ಹಾಗೂ ಪಕ್ಕದಲ್ಲೇ ಇರುವ ವರಾಹನ ಆಕೃತಿಗಳನ್ನು ನೋಡಬಹುದಾಗಿದೆ. ನಾಲ್ಕನೇ ಗುಹೆಯ ಮೊಗಸಾಲೆಯಲ್ಲಿ ಪಕ್ಕ ಗೋಡೆಗಳ ಮೇಲೆ ಬಾಹುಬಲಿ ಗೊಮ್ಮಟ ಮತ್ತು ಪಾರ್ಶ್ವನಾಥರ ದೊಡ್ಡ ಶಿಲ್ಪಗಳಿರುವುದನ್ನು ನೋಡಬಹುದು.

ಒಂದನೇ ಗುಹೆಯ ಗೋಡೆ ಶಿಲ್ಪಗಳು ಹರಿಹರ ಮತ್ತು ಅರ್ಧನಾರೀಶ್ವರ; ಎರಡನೇ ಗುಹೆಯಲ್ಲಿ ತ್ರಿವಿಕ್ರಮ ಮತ್ತು ವರಾಹ; ಮೂರನೇ ಗುಹೆಯಲ್ಲಿ ನರಸಿಂಹ, ಪರವಾಸುದೇವ, ವರಾಹ ಮತ್ತು ಹರಿಹರ; ಮತ್ತು ನಾಲ್ಕನೇ ಗುಹೆಯಲ್ಲಿ, ಆಗಲೆ ನೋಡಿದಂತೆ ಗೊಮ್ಮಟ ಮತ್ತು ಪಾರ್ಶ್ವನಾಥ ಮೂರ್ತಿಗಳು. ಎರಡನೇ ಗುಹೆಯ ಶಿಲ್ಪಗಳು ಮೂರನೆಯದರಲ್ಲಿ ಶಿಲ್ಪಗಳಿಗಿಂತ ಕಾಲದಲ್ಲಿ ಹಿಂದಿನವು ಎನ್ನುವುದನ್ನು ಎರಡರಲ್ಲೂ ಇರುವ ವರಾಹಮೂರ್ತಿ ಯನ್ನು ಹೋಲಿಸಿ ನೋಡುವುದರಿಂದ ತಿಳಿದುಕೊಳ್ಳಬಹುದು. ವರಾಹ ಮತ್ತು ಭೂದೇವಿಯರ ಪ್ರಮಾಣಿತ ಸ್ವರೂಪದ ಕಡೆಗೆ ಆಗಿರುವ ವಿಕಾಸವನ್ನು ಅಲ್ಲಿ ಗಮನಿಸಬಹುದು. ಎರಡನೇ ಗುಹೆಯಲ್ಲಿ ಭೂದೇವಿಯು ವರಾಹನು ತನ್ನ ಕೆಳ ಎಡಗೈಯಲ್ಲಿ ಹಿಡಿದಿರುವ ಕಮಲದ ಮೇಲೆ ನಿಂತಿದ್ದಾಳೆ. ಅವಳ ಬಲಗೈ ಮೇಲಕ್ಕೆತ್ತಿದೆ. ಮೂರನೇ ಗುಹೆಯಲ್ಲಿ, ಭೂದೇವಿಯು ಕಮಲದ ಮೇಲೆ ನಿಂತು ತನ್ನ ಬಲಗೈಯನ್ನು ವರಾಹನ ಭುಜದ ಮೇಲಿರಿಸಿದ್ದಾಳೆ. ಕಾಲಕಳೆದಂತೆ ಭೂದೇವಿ ನಿಂತ ಕಮಲವೂ ಕಣ್ಮರೆಯಾಗುತ್ತದೆ, ಅವಳು ವರಾಹನ ಎಡ ಅಂಗೈಮೇಲೆ ನಿಲ್ಲದೆ, ಅವನ ಎಡಭುಜದ ಮೇಲೆ ಕುಳ್ಳಿರುತ್ತಾಳೆ. ಇದನ್ನು ಐಹೊಳೆಯ ‘ರಾವನಫಡಿ’ ಗುಹೆಯಲ್ಲಿರುವ ವರಾಹನ ಉಬ್ಬುಶಿಲ್ಪದಲ್ಲಿ ನೋಡಬಹುದು.

ಮೂರನೇ ಗುಹೆಯಲ್ಲಿರುವ ಕೇವಲ ನರಸಿಂಹ ಶಿಲ್ಪವು ಚಾಲುಕ್ಯರಾಜ ಒಂದನೇ ಕೀರ್ತಿವರ್ಮನನ್ನು ಸಂಕೇತಿಸುವುದೆಂದೂ, ಕಮಲ ಪುಷ್ಪವು ಭೂದೇವಿಯ ಸಂಕೇತವಾಗಿರಬಹುದೆಂದೂ, ಕೆರೋಲ್ ಬೆಲಾನ್ ತಾತ್ಕಾಲಿಕವಾಗಿ ಸೂಚಿಸುತ್ತಾನೆ. ಬಾದಾಮಿಯ ಒಂದನೇ ಗುಹೆಯಲ್ಲೂ ಇಂತಹ ನರಸಿಂಹ ಶಿಲ್ಪವು ಕಂಡುಬರುತ್ತದೆ. ಮೂರನೇ ಗುಹೆಯಲ್ಲಿರುವ ವಿರಾಟ ಪುರುಷಮೂರ್ತಿಯ ನೆತ್ತಿಯ ಮೇಲೂ ಕಮಲಪುಷ್ಪವಿದೆ. ಈ ಮಾದರಿಯ ಒಂದು ಶಿಲ್ಪವು ಕಳುಗುಮಲೈಯಲ್ಲಿ ಪಾಂಡ್ಯ ಕಟ್ಟಡವೊಂದರಲ್ಲಿ ಕೂಡ ಕಂಡುಬರುವುದನ್ನು ಕೆರೋಲ್ ಬೆಲಾನ್ ಗುರುತಿಸುತ್ತಾನೆ. ಈ ಶಿಲ್ಪಕ್ಕೆ ಪ್ರೇರಣೆಯನ್ನು ೬ನೇ ಶತಮಾನದಲ್ಲಿ ಗುರುತಿಸಬಹುದು. ಗೋವಾ ಪ್ರದೇಶದ ಹಿಂದೂ ಗುಹೆಗಳು ಇದಕ್ಕೆ ಉತ್ತರವನ್ನು ಕೊಡುವಂತೆ ತೋರುತ್ತವೆ. ನೋರ್ವಾದ ಗುಹೆಯಲ್ಲಿ ಸ್ಪಷ್ಟವಾಗಿ ಬಿಡಿಸಿದ ಕೇಸರಗಳಿರುವ ಸಿಂಹದ ನೆತ್ತಿಯ ಮೇಲೆ ಒಂದು ಕಮಲ ಪುಷ್ಚವಿದೆ. ಕೆಳಭಾಗದಲ್ಲಿ ಸಿಂಹದ ಕೆಳಗೆ ಒಂದು ಪಟ್ಟಿಕೆಯಿದೆ. ಅದರ ಮೇಲೆ ಅಸ್ಪಷ್ಟವಾದ ಒಂದು ಶಾಸನವಿದೆ. ಪ್ರಾಚೀನ ಕದಂಬರ ತಾಳಗುಂದ ಶಾಸನದ ಅಕ್ಷರಗಳನ್ನು ಹೋಲುವ ಚೌಕತಲೆಯುಳ್ಳ ಅಕ್ಷರಗಳನ್ನು ಉಪಯೋಗಿಸಲಾಗಿದೆ. ನೋರ್ವದ ಬಳಿಯ ಅರ್ವಲದಲ್ಲಿ ಇಂಥವೇ ಅಕ್ಷರಗಳಿಂದ ಕೆತ್ತಿರುವ ಒಂದು ಶಾಸನವಿರುವುದನ್ನು ಗಮನಿಸಬೇಕು. ತಲೆಯ ಮೇಲೆ ಕಮಲವಿರುವ ಸಿಂಹದ ಶಿಲ್ಪವು ಗೋವಾದಲ್ಲಿ ಇರುವುದು ಅರ್ಥವತ್ತಾಗಿದೆ. ಏಕೆಂದರೆ, ಗೋವಾದ ಗುಹೆಗಳು ಬಾದಾಮಿ ಗುಹೆಗಳಿಗಿಂತ ಪ್ರಾಚೀನವಾದವು. ಬಾದಾಮಿ ಶಿಲ್ಪಗಳ ಮೇಲೆ ಮತ್ತು ಅವಕ್ಕಿಂತ ನಂತರ ಕಾಲದ ಕಳುಗುಮಲೈಯಲ್ಲಿರುವ ಪಾಂಡ್ಯ ಮಾದರಿಯ ಶಿಲ್ಪಗಳ ಮೇಲೆ ನೋರ್ವಾದ ಸಿಂಹ ಶಿಲ್ಪವು ಪ್ರಭಾವ ಬೀರಿರುವುದನ್ನು ತಳ್ಳಿಹಾಕುವಂತಿಲ್ಲ.

ಮೊಗಸಾಲೆಯ ತೊಲೆಗಳ ಅಲಂಕಾರದಲ್ಲಿ ಕ್ರಮೇಣ ಹೆಚ್ಚಳವುಂಟಾಗಿರುವುದೂ ಸ್ಪಷ್ಟವಾಗಿದೆ. ಒಂದನೇ ಗುಹೆಯಲ್ಲಿ ಮುಂಭಾಗದ ಒಳಗಿರುವ ಸೆಜ್ಜೆಗಳು ಶಿವ-ಪಾರ್ವತಿಯರ ವಿವಾಹವನ್ನು ಚಿತ್ರಿಸುವ ಸಣ್ಣ ಉಬ್ಬುಶಿಲ್ಪಗಳಿಂದ ಅಲಂಕೃತವಾಗಿವೆ. ಎರಡನೇ ಗುಹೆಯಲ್ಲಿರುವ ಅವೇ ತೊಲೆಗಳ ಮೇಲೆ ಕಥನಾತ್ಮಕ ಸ್ವರೂಪದ ಕಿರು ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಮೂರನೇ ಗುಹೆಯಲ್ಲಿ ಮೊಗಸಾಲೆಯ ಎಲ್ಲಾ ತೊಲೆಗಳ ಮೇಲೂ ಉಬ್ಬುಶಿಲ್ಪಗಳಿವೆ. ಬಾದಾಮಿಯ ಗುಹೆಗಳ ಸಜ್ಜಗಳ ಮೇಲಿನ ಕೆತ್ತನೆಯ ಸಂದರ್ಭಗಳು ಕೃಷ್ಣಲೀಲೆಯಿಂದ ಸಮುದ್ರಮಥನದವರೆಗೆ ಹರಡಿವೆ.

ಗರ್ಭಗೃಹದ ಬಾಗಿಲಚೌಕಟ್ಟನ್ನು ಅಧ್ಯಯನ ಮಾಡಿದರೆ ಅಲ್ಲೂ ಒಂದನೇ ಗುಹೆಯು ಅತ್ಯಂತ ಸರಳ ಬಾಗಿಲುವಾಡದಿಂದ ಮೂರನೇ ಗುಹೆಯ ಅಲಂಕೃತ ಬಾಗಿಲುವಾಡದವರೆಗೆ ಬೆಳವಣಿಗೆಯಾಗಿರುವುದನ್ನು ಗಮನಿಸಬಹುದು. ಒಂದನೇ ಗುಹೆಯ ಅಲಂಕೃತ ಬಾಗಿಲುವಾಡದ ಮೇಲೆ ದಳಗಳು, ಹೂವಿನ ವಿನ್ಯಾಸಗಳು, ಬಹುಕೊಳವಿ ಆಕಾರದ ಗೋಡೆಗಂಬಗಳು, ಚೌಕಾಕೃತಿಯ ಕಾಂಡಭಾಗ ಮತ್ತು ಗುಲಾಬಿಗಳ ಸಾಲು ಕೆತ್ತಲ್ಪಟ್ಟಿವೆ. ವಿವಿಧ ಪಟ್ಟಿಕೆಗಳಲ್ಲಿ ಗುಲಾಬಿ ಪಟ್ಟಿಕೆ ಮಾತ್ರ ಬಾಗಿಲಿನ ಮೂರೂ ಪಕ್ಕಗಳಲ್ಲಿ ಹಾಯುತ್ತದೆ. ಬಾಗಿಲ ಚೌಕಟ್ಟಿನ ಮೇಲೆ ಯಾವುದೇ ಮೂರ್ತಿಯ ಶಿಲ್ಪವಿಲ್ಲ. ಸುತ್ತಲಂಕಾರ ಸರಳವಾಗಿದೆ.

ಎರಡನೇ ಗುಹೆಯ ಗರ್ಭಗೃಹ ದ್ವಾರವು ಅದಕ್ಕಿಂತ ಮುಂದುವರಿದಿದೆ. ಇಲ್ಲಿ ಕಂಬ ತೋಳಗಳ ಮೇಲೆ ಹೂವುಗಳ ಅಲಂಕಾರವನ್ನು ಕೆತ್ತಿದೆ. ಅಷ್ಟ ಭುಜದ ಮತ್ತು ಚೌಕಾಕಾರದ ಕಾಂಡವುಳ್ಳ ಗೋಡೆಗಂಬ, ಗುಲಾಬಿ ಪಟ್ಟಿಕೆ, ಎಲೆಗಳು ಮತ್ತು ಹಗ್ಗದ ವಿನ್ಯಾಸವಿರುವ ಪಟ್ಟಿಕೆಗಳು ಇವೆ. ಗುಲಾಬಿ ಪಟ್ಟಿಕೆಯು ಬಾಗಿಲ ಚೌಕಟ್ಟಿಗೆ ಮೂರೂ ಪಕ್ಕಗಳಲ್ಲಿದೆ. ಈ ಪಟ್ಟಿಕೆಯ ಕೆಳಭಾಗದಲ್ಲಿ ಒಬ್ಬ ಹೆಂಗಸು ಕಮಲವನ್ನು ಹಿಡಿದುಕೊಂಡಿರುವಂತೆ ಚಿತ್ರಿಸಿದೆ. ಕೆಳಭಾಗದಲ್ಲಿ ದ್ವಾರಪಾಲ ವಿಗ್ರಹಗಳೂ ಇವೆ. ಸುತ್ತಲಂಕಾರವು ಸಾಲುಗಳ ಮತ್ತು ರೇಖಾನಾಗರ ಶಿಖರಗಳ ರೂಪದ ಕಿರು ಮಾದರಿಗಳಿಂದ ಅಲಂಕೃತವಾಗಿದೆ.

ಮೂರನೇ ಗುಹೆಯಲ್ಲಿ ಗರ್ಭಗೃಹದ ಬಾಗಿಲುವಾಡದಲ್ಲಿ ಸೂಕ್ಷ್ಮವಾದ ಕೆತ್ತನೆ ಕೆಲಸ ಮಾಡಲಾಗಿದೆ. ಅದಕ್ಕೆ ಏಳು ಕಂಬತೋಳುಗಳಿವೆ. ಗುಲಾಬಿ ಅಲಂಕಾರ, ಚೌಕಗಳು, ಹಗ್ಗದ ಹೆಣಿಗೆ, ನಿಯತ ಅಂತರದಲ್ಲಿ ಚೌಕ ಅಚ್ಚುಗಳು, ಅವುಗಳಲ್ಲಿ ಹೂವುಗಳು, ಹಲವು ಪುಷ್ಪವಿನ್ಯಾಸಗಳು, ಗೋಡೆಗಂಬ ಮತ್ತು ಒಂದು ಸಾಲು ಹೂವಿನದಳಗಳು-ಈ ಉಬ್ಬುಶಿಲ್ಪಗಳಿವೆ. ಹಗ್ಗ, ಹೂವು ಪಟ್ಟಿಕೆಗಳು ಮತ್ತು ಪಿಲಾಸ್ಟರ್‌ಗಳ ಕೆಳಗೆ ದೇವದಂಪತಿಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಗುಲಾಬಿ ಹೂವುಗಳು, ಸರಳ ಪಟ್ಟಿಕೆ ಮತ್ತು ಹೂಗಳ ಪಟ್ಟಿಕೆ ಇವು ಬಾಗಿಲುವಾಡದ ಮೂರೂ ಪಕ್ಕಗಳಲ್ಲಿ ಹಾಯ್ದಿವೆ. ಸೆಜ್ಜೆ ಭಾಗದಲ್ಲಿರುವ ಹಗ್ಗ ಪಟ್ಟಿಕೆಯು ಮಕರಶಿಲ್ಪದಲ್ಲಿ ಕೊನೆಗೊಳ್ಳುವುದು ಸ್ವಾರಸ್ಯವಾದ ವಿಚಾರವಾಗಿದೆ. ಗರ್ಭಗೃಹಕ್ಕೆ ಹೋಗಲು ಹತ್ತಬೇಕಾದ ಮೆಟ್ಟಿಲುಗಳ ಪಕ್ಕದಲ್ಲೂ, ದೈವ ದಂಪತಿಗಳ ಕೆಳಗೂ, ದ್ವಾರಪಾರ ದೊಡ್ಡ ಮೂರ್ತಿಗಳನ್ನು ಕೆತ್ತಲಾಗಿದೆ.

ಸುತ್ತಲಂಕಾರವು ವಿಸ್ತಾರವಾದ ಕೆತ್ತನೆಯಿಂದ ಕೂಡಿದೆ. ಒಂದು ದೊಡ್ಡ ಸಾಲ ಗುಡಿಯು ಮಧ್ಯಭಾಗದಲ್ಲಿದ್ದು, ಆಚೆ ಈಚೆ ಎರಡು ಕೂಟ ಗುಡಿಗಳಿವೆ. ಇವುಗಳ ಒಳಗೆ ಕಿರಿದಾದ ವಿಗ್ರಹಗಳಿವೆ. ಸಾಲಗುಡಿಯಲ್ಲಿ ಗರುಡನ ಬೆನ್ನ ಮೇಲೆ ಕುಳಿತ ವಿಷ್ಣುಮೂರ್ತಿಯನ್ನು ಕೆತ್ತಲಾಗಿದೆ.

ನಾಲ್ಕನೇ ಗುಹೆಯ ಗರ್ಭಗೃಹದ ಬಾಗಿಲುವಾಡದ ವಿವಿಧ ಪಟ್ಟಿಗಳ ಮೇಲೆ ಹೂವುಗಳು, ವಜ್ರಾಕೃತಿಯ ಹೆಣಿಗೆ, ಕೊಳವಿಯಾಕಾರದ ದಂಡ, ಕೊಳವಿಯಾಕಾರದ ಕುಂಭ ಮತ್ತು ವೃತ್ತಾಕಾರದ ಮುಚ್ಚಳ ಮತ್ತು ಚೌಕಾಕೃತಿಯ ಮಣಿ ಚೌಕಟ್ಟುಗಳನ್ನು ಕೆತ್ತಲಾಗಿದೆ. ಬಾಗಿಲುವಾಡದ ಕೆಳಭಾಗದಲ್ಲಿ ದ್ವಾರಪಾಲರಿದ್ದಾರೆ. ಸುತ್ತಲಂಕಾರದಲ್ಲಿ ಮೂರು ದೊಡ್ಡ ಕೂಡು(kudus)ಗಳಿವೆ.

ಮೇಲಿನ ವಿವರಣೆಯಿಂದ ಒಂದನೇ ಗುಹೆಯಲ್ಲಿ ದ್ವಾರಪಾಲರಿಲ್ಲವೆನ್ನುವುದೂ, ಕೆತ್ತನೆಯಿಲ್ಲದ ಸರಳ ಸುತ್ತಲಂಕಾರವಿರುವುದೂ ತಿಳಿದುಬರುತ್ತದೆ. ಎರಡನೇ ಗುಹೆಯಲ್ಲಿ ದ್ವಾರಪಾಲಕರು ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಸುತ್ತಲಂಕಾರದಲ್ಲಿ ಕಿರಿ ಗರ್ಭಗೃಹಗಳ ಮಾದರಿಗಳಿವೆ. ಮೂರನೇ ಗುಹೆಯಲ್ಲಿ ಇನ್ನೂ ಹೆಚ್ಚು ಕೆತ್ತನೆಗಳಿದ್ದು, ದೊಡ್ಡಗಾತ್ರದ ದ್ವಾರಪಾಲಕರ ವಿಗ್ರಹಗಳಿವೆ. ಸುತ್ತಲಂಕಾರದಲ್ಲಿ ಸಾಲಗಳು ಮತ್ತು ಕೂಟಗಳ ರೂಪದಲ್ಲಿ ಐದು ಗುಡಿಗಳ ಕಿರು ಕೆತ್ತನೆಗಳಿವೆ. ಇವನ್ನೇ ನಾಲ್ಕನೇ ಗುಹೆಯಲ್ಲೂ ಬಹಳ ಸಂಯಮಿತ ರೀತಿಯಲ್ಲಿ ಮುಂದುವರಿಸಲಾಗಿದೆ.

ಶಂಖನಿಧಿ ಮತ್ತು ಪದ್ಮನಿಧಿಗಳ ಅಭಿವ್ಯಕ್ತಿಯಲ್ಲೂ ಇದೇ ರೀತಿ ಬೆಳವಣಿಗೆಯನ್ನು ಗಮನಿಸಬಹುದಾಗಿದೆ. ಒಂದು ಮತ್ತು ಎರಡನೇ ಗುಹೆಗಳಲ್ಲಿ, ಅವುಗಳನ್ನು ಗರ್ಭಗೃಹದ ಬಾಗಿಲಿನ ಆಚೀಚೆ ಇರುವ ದೊಡ್ಡ ಗೋಡೆಗಂಬಗಳ ಮೇಲೆ ಕೆತ್ತಲಾಗಿದೆ. ಮೂರನೇ ಗುಹೆಯಲ್ಲಿ ನಿಧಿಗಳನ್ನು ಅವುಗಳ ಪ್ರಿಯಕರರೊಂದಿಗೆ ಇರುವಂತೆ ತೋರಿಸಲಾಗಿದೆ.

ಸೂರಿನ ಅಲಂಾರವೂ ವಿಶೇಷವಾಗಿ ಒಳಭಾಗದಲ್ಲಿ ಬೆಳವಣಿಗೆಯನ್ನು ತೋರಿಸುತ್ತದೆ. ಒಂದನೇ ಗುಹೆಯ ಸೂರು ಸರಳವಾಗಿದೆ, ನಿರಲಂಕೃತವಾಗಿದೆ. ಎರಡನೇ ಗುಹೆಯಲ್ಲಾದರೆ ಅಡ್ಡಡ್ಡವಾಗಿ ಜೋಡಿಸಿದ ಪಟ್ಟಿಗಳ ವಿನ್ಯಾಸವಿದೆ. ಅಲ್ಲದೆ ಕೊಂಬುಳ್ಳ ಸಿಂಹಗಳು ಮುಂಭಾಗದ ಕಂಬಗಳ ಮೇಲೆ ನಿಂತು ಸೂರಿಗೆ ಅವಲಂಬನವಾಗಿವೆ. ಮೂರನೇ ಗುಹೆಯ ಒಳಸೂರಿನಲ್ಲಿ ಎರಡು ಭಾಗಗಳಿವೆ. ಬಲಭಾಗದಲ್ಲಿ ಹಿಂದೆ ಬಣ್ಣಬಳಿದ ದೂಲಗಳಿವೆ. ಅವುಗಳನ್ನು ಅಡ್ಡಡ್ಡವಾಗಿ ಜೋಡಿಸಲಾಗಿದೆ. ಇನ್ನೊಂದು ಭಾಗದಲ್ಲಿ ಚಿತ್ರಬರೆದ ದೊಡ್ಡ ಫಲಕಗಳು ಸುಪ್ರಸಿದ್ಧವಾಗಿವೆ. ಈಗ ಈ ವರ್ಣಚಿತ್ರಗಳನ್ನು ಗುರುತಿಸುವುದು ಕಷ್ಟ. ಸೂರಿನ ನಡುವೆ ದೊಡ್ಡ ಆಕಾರದ, ಉತ್ತಮವಾಗಿ ಕೆತ್ತಿದ ಗರುಡ ವಿಗ್ರಹವು ಗರ್ಭಗೃಹಕ್ಕೆ ಅಭಿಮುಖವಾಗಿದೆ. ಜೊತೆಯಲ್ಲಿ ಗಂಧರ್ವ ದಂಪತಿಗಳ ಶಿಲ್ಪವಿದೆ. ಸೂರಿನ ಈ ಒಳಭಾಗಕ್ಕೆ ಆಸರೆಯಾಗಿ ಯಕ್ಷರ ಬೆನ್ನ ಮೇಲೆ ನಿಂತ ಕೊಂಬಳ್ಳು ಸಿಂಹಗಳಿವೆ. ಮುಂಭಾಗದ ಕಂಬಗಳ ಚಾಚುಪೀಠಗಳ ಮೇಲೂ ಈ ಶಿಲ್ಪಗಳಿವೆ. ನಾಲ್ಕನೇ ಗುಹೆಯಲ್ಲಿಯೂ ಮೂರನೆಯದರಂತೆಯೇ ಸೂರು ಎರಡು ಭಾಗವಾಗಿದೆ. ಒಂದು ಭಾಗದಲ್ಲಿ ಅಡ್ಡದಿಡ್ಡವಾದ ದೂಲಗಳಿದ್ದು, ಇನ್ನೊಂದರಲ್ಲಿ ನಿಯತ ಅಂತರದಲ್ಲಿ ಜೋಡಿಸಿದ ದೂಲಗಳ ಸಾಲಿದೆ. ಸೂರಿನ ನಡುವೆ ಗರ್ಭಗೃಹದ ಮುಂದೆ ಯಕ್ಷನ ದೊಡ್ಡ ಮೂರ್ತಿಯಿದೆ. ಮುಂಭಾಗದ ಕಂಬಗಳ ಮೇಲೆ ಸೂರನ್ನು ೊತ್ತ ಕೊಂಬಿರುವ ಸಿಂಹಗಳಿವೆ.

ಮೂರನೇ ಗುಹೆಯಲ್ಲಿ ಕಂಡುಬರುವ ಚಾಚುಪೀಠದ ವಿಗ್ರಹಗಳು, ದೇವದಂಪತಿ ಮತ್ತಿತರ ವಿಗ್ರಹಗಳು ಕರ್ನಾಟಕದಲ್ಲಿ ಸಿದ್ಧಪಡಿಸಿದ ಇಂತಹ ಅತಿ ಪ್ರಾಚೀನ ವಿಗ್ರಹಗಳು ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಇವು ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ ಮತ್ತು ವಿಶೇಷವಾಗಿ ಹೊಯ್ಸಳರ ಆಶ್ರಯದಲ್ಲಿ ಕೆಲಸ ಮಾಡಿದ ಕಲಾವಿದರು ತಯಾರಿಸಿದ ವಿಗ್ರಹಗಳಿಗೆ ಮಾದರಿಯಾಗಿ ಪರಿಣಮಿಸಿದವು.

ತಮಿಳು ಪ್ರದೇಶ ಮತ್ತು ಕರ್ನಾಟಕ ಎಂದೂ ಬೇರೆಬೇರೆಯೇ ಆಗಿ ಉಳಿದಿವೆ. ಆದರೂ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಕ್ಷೇತ್ರದಲ್ಲಿ ಒಂದರ ಮೇಲೆ ಇನ್ನೊಂದರ ಪ್ರಭಾವವನ್ನು ಸುಲಭವಾಗಿ ಗುರುತಿಸಬಹುದು. ಪರಸ್ಪರ ಪ್ರಭಾವದ ಈ ಪ್ರಕ್ರಿಯೆ ಸುಮಾರು ೭ನೇ ಶತಮಾನದ ಆದಿಯಿಂದ ಪ್ರಾರಂಭವಾಯಿತು. ೭ ಮತ್ತು ೮ನೇ ಶತಮಾನಗಳುದ್ದಕ್ಕೂ ಚಾಲುಕ್ಯರು ಮತ್ತು ಪಲ್ಲವರ ನಡುವೆ ವಾಸ್ತುಶಿಲ್ಪ ನಿರ್ಮಿತಿಗಳಿಗೆ ಆಶ್ರಯ ಕೊಡುವುದರಲ್ಲಿ ಸ್ಪರ್ಧೆ ನಡೆದಂತೆ ತೋರಿತು. ಕೊನೆಯ ಪಕ್ಷ ಒಂದು ಸಂದರ್ಭದಲ್ಲಿ ಎರಡೂ ರಾಜವಂಶಗಳು ಒಬ್ಬರ ರಾಜಧಾನಿಯನ್ನು ಇನ್ನೊಬ್ಬರು ಆಕ್ರಮಿಸಿಕೊಂಡಿದ್ದರು. ಆದ್ದರಿಂದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ಕ್ಷೇತ್ರದಲ್ಲಿ ಎರಡೂ ಶೈಲಿಗಳು ಅನೇಕ ಸಾಂಪ್ರದಾಯಿಕ ಅಲಂಕಾರಗಳನ್ನು ಪರಸ್ಪರ ಎರವಲು ಪಡೆದುಕೊಂಡುದು ಅತ್ಯಂತ ಸಹಜವಾಗಿಯೇ ಇದೆ.

ನಾಲ್ಕನೇ ಗುಹೆಯ ಕಂಬಗಳು ಮತ್ತು ಬಾದಾಮಿಯ ಎಲ್ಲಾ ಗುಹೆಗಳಲ್ಲಿ ಕಾಣಬರುವ ತರಂಗ ಚಾಚುವಿಗ್ರಹಗಳು ಪಲ್ಲವರ ಮೇಲೆ ಆಳವಾದ ಪ್ರಭಾವವನ್ನು ಬೀರಿದವು. ಬಾದಾಮಿಯನ್ನು ಆಕ್ರಮಿಸಿಕೊಂಡಿದ್ದ ಅವರು ಕ್ರಿ.ಶ. ೬೪೨ರಲ್ಲಿ ಅಲ್ಲಿಂದ ತಮ್ಮ ಪ್ರದೇಶಕ್ಕೆ ಹಿಂದಿರುಗಿದ ಮೇಲೆ ತಮ್ಮ ದೇವಾಲಯದ ಕಂಬಗಳಲ್ಲಿ ಚಾಲುಕ್ಯಶೈಲಿಯ ತರಂಗ ವಿಗ್ರಹ ಮಾದರಿಯನ್ನು ಅಳವಡಿಸಿಕೊಂಡರು. ಬಾದಾಮಿಯ ನಾಲ್ಕನೇ ಗುಹೆಯಲ್ಲಿ ಕೆಳಗೆ ಸಿಂಹಗಳು ಆಸರೆ ಕೊಟ್ಟಿರುವ ಕಂಬಗಳಿವೆ. ಕಂಬಗಳೊಂದಿಗೆ ಸಿಂಹಗಳಿಗೆ ಸಂಬಂಧ ಕಲ್ಪಿಸಿರುವ ಬಾದಾಮಿ ಚಾಲುಕ್ಯ ಮಾದರಿ ಇವು ಮಾತ್ರ. ಮುಂದೆ ಚಾಲುಕ್ಯರು ಈ ಮಾದರಿಗೆ ಅಷ್ಟಾಗಿ ಒಲಿಯಲಿಲ್ಲವಾದರೂ ಪಲ್ಲವರಿಗೆ ಅದು ಬಹುಪ್ರಿಯವಾದಂತೆ ತೋರುತ್ತದೆ. ಕಾಂಡದ ಬುಡದಲ್ಲಿ ಕುಳಿತ ಸಿಂಹವಿರುವ ಕಂಬಗಳು ಒಂದನೇ ನರಸಿಂಹವರ್ಮನ ಕಾಲದಿಂದಲೂ ತುಂಬಾ ಜನಪ್ರಿಯವಾಯಿತು. ವರಾಹ ಮಂಡಪಂ, ಪುಳಿಪದರ್ ಮಂಡಪಂ, ಕೊನೇರಿ ಮಂಡಪಂ, ಪಂಚಪಾಂಡವ ಮಂಡಪಂ ಮತ್ತು ರಾಮಾನುಜ ಮಂಡಪಂಗಳಲ್ಲಿ ಇವನ್ನು ನೋಡಬಹುದು. ಇವೆಲ್ಲ ಮಹಾಬಲಿಪುರದಲ್ಲಿವೆ. ಒಂದನೇ ನರಸಿಂಹವರ್ಮ ಮಹಾಮಲ್ಲನ ಆಳಿಕೆಗೆ ಸೇರುತ್ತವೆ.

ಚಾಲುಕ್ಯರಲ್ಲಿ ಬಹಳ ಪ್ರಿಯವೆನಿಸಿದ ತರಂಗ ವಿಗ್ರಹಗಳನ್ನು ಪಲ್ಲವರು ಬಹಳವಾಗಿ ಮೆಚ್ಚಿದರು. ತಮ್ಮ ಕಟ್ಟಡಗಳಲ್ಲಿ ಅವುಗಳನ್ನು ಅಳವಡಿಸಿಕೊಂಡರು. ಚಿರುಚಿನಾಪಳ್ಳಿಯ ಲಲಿತಾಂಕುರದ ಗುಹೆಗಳಲ್ಲಿ, ಸಾಳುವಂಕುಪ್ಪಂನಲ್ಲಿನ ಅತಿರಣಚಂಡ, ಮಹಾಬಲಿಪುರದ ವರಾಹ ಮಂಡಪ, ಕೊನೇರಿ ಮಂಡಪ ಮತ್ತು ರಾಮಾನುಜ ಮಂಡಪಗಳಲ್ಲಿ ಇವುಗಳನ್ನು ನೋಡಬಹುದು.

ಕಂಬದ ಮೇಲೆ ಪದಕಗಳನ್ನು ಮತಂಗನಕ್ರ, ಹಂಸ, ಕಿನ್ನರ, ಸುರುಳಿ, ಪದ್ಮ, ಪತ್ರಲತಾ, ನವಿಲು ಮತ್ತು ಅರೆಮಾನವ-ಅರೆಹಕ್ಕಿ ಮೊದಲಾದ ಕಲ್ಪಿತ ಆಕೃತಿಗಳಿಂದ ಅಲಂಕರಿಸುವುದು ಬಾದಾಮಿಯ ಗುಹೆಗಳಲ್ಲಿ ತುಂಬಾ ಸಾಮಾನ್ಯ. ಈ ಅಲಂಕಾರ ಪದಕಗಳೂ ಹೆಣಿಗೆ ಪಟ್ಟಿಕೆಗಳೂ ಪಲ್ಲವ ಕಟ್ಟಡಗಳಿಗೆ ಹೋದುವು.

ಮುಂಗಾಲುಗಳನ್ನು ಮೇಲೆತ್ತಿ ಹಿಂಗಾಲುಗಳ ಮೇಲೆ ನಿಂತು ಗುಹೆಯನ್ನು ಹೊತ್ತಿರುವಂತೆ ಕಾಣುವ ಸಿಂಹಗಳು ಬಾದಾಮಿಯಲ್ಲಿವೆ. ಇವೂ ಪಲ್ಲವರಾಜ ಒಂದನೇ ನರಸಿಂಹವರ್ಮನ ಮೇಲೆ ಪ್ರಭಾವ ಬೀರಿದವು. ಗುಹೆಯ ಒಳಭಾಗವನ್ನು ಹೀಗೆ ಅಲಂಕರಿಸುವ ಪದ್ಧತಿಯನ್ನು ಅವನು ತನ್ನ ಕಟ್ಟಡಗಳಲ್ಲಿ ಬಳಕೆಗೆ ತಂದನು. ಮಹಾಬಲಿಪುರದ ಪಂಚಪಾಂಡವ ಮಂಟಪದಲ್ಲಿ ಗುಹೆಯ ಒಳಚಾವಣಿಯವರೆಗೆ ಕಂಬಗಳ ಮುಖದಲ್ಲಿ ಎದ್ದುನಿಂತು ಮೂರು ಸಿಂಹಗಳನ್ನು ಅಥವಾ ವ್ಯಾಳಗಳನು್ನ ನೋಡಬಹುದು. ಬಾದಾಮಿಯ ಗುಹೆಯಲ್ಲಿ ಮುಂಗಾಲು ಮೇಲೆತ್ತಿ ನಿಂತ ಕೊಂಬುಗಳಿರುವ ಒಂದು ಸಿಂಹವನ್ನು ನೋಡಿದರೆ, ಪಲ್ಲವ ಮಾದರಿಯಲ್ಲಿ ಅಂತಹ ಮೂರು ವ್ಯಾಳಗಳನ್ನು ನೋಡಬಹುದು.

ಕ್ರಿ.ಶ.೬೪೨ರಲ್ಲಿ ಬಾದಾಮಿಯನ್ನು ಆಕ್ರಮಿಸಿಕೊಂಡ ನಂತರ ಪಲ್ಲವ ರಾಜ್ಯಕ್ಕೆ ಪರಿಚಯವಾದ ಇತರ ಶಿಲ್ಪಗಳು ತ್ರಿವಿಕ್ರಮ, ಗಣೇಶ ಮತ್ತು ಗಜಲಕ್ಷ್ಮಿ, ಬಾದಾಮಿ ಎರಡನೇ ಗುಹೆಯಲ್ಲಿರುವ ಪ್ರಾಚೀನ ತ್ರಿವಿಕ್ರಮ ಫಲಕಗಳಲ್ಲಿ ಒಂದು ಪಲ್ಲವರ ಗುಹೆಗಳಲ್ಲೂ ಮುತ್ತರಾಯರ ಗುಹೆಗಳಲ್ಲೂ ಕಂಡುಬರುವ ಅಂಥವೇ ಶಿಲ್ಪದ ಮೇಲೆ ಆಳವಾದ ಪ್ರಭಾವ ಬೀರಿವೆ. ಪಲ್ಲವ ಪ್ರದೇಶದ ಅತ್ಯಂತ ಪ್ರಾಚೀನ ತ್ರಿವಿಕ್ರಮ ಫಲಕಗಳಲ್ಲಿ ಒಂದು ಮಹಾಬಲಿಪುರದ ವರಾಹ ಮಂಡಪದಲ್ಲಿರುವುದು. ಈ ಎಂಟು ಭುಜದ ತ್ರಿವಿಕ್ರಮ ಮೂರ್ತಿಯು ಬಾದಾಮಿ ಎರಡನೇ ಗುಹೆಯಲ್ಲಿರುವ ತ್ರಿವಿಕ್ರಮನನ್ನು ಹೋಲುತ್ತದೆ. ವಿಶೇಷವಾಗಿ ಕೈಗಳನ್ನು ಇಟ್ಟುಕೊಂಡಿರುವ ರೀತಿಯಲ್ಲಿ ಹಾಗೂ ಕಾಲುಗಳ ಭಂಗಿಯಲ್ಲಿ. ಬಾದಾಮಿಯ ಒಂದನೇ ಗುಹೆಯಲ್ಲಿ ಮುಖ್ಯ ಗುಹೆಯ ಹೊರಗಿರುವ ಕೋಷ್ಠದಲ್ಲಿ ಗಣೇಶ ಮತ್ತು ಕಾರ್ತಿಕೇಯರ ಮೂರ್ತಿಗಳಿವೆ. ಪಲ್ಲವರ ಮೊದಮೊದಲ ಗುಹೆಗಳಲ್ಲಿ ಇವು ಕಾಣದಿದ್ದರೂ, ಎರಡನೇ ನರಸಿಂಹವರ್ಮನ ಕಾಲದಲ್ಲಿ ಕಾಂಚಿಯ ಕೈಲಾಸನಾಥ ದೇವಾಲಯದಲ್ಲಿ ಮೊದಲಾಗಿ ಕಾಣಿಸಿಕೊಳ್ಳುತ್ತವೆ. ಪುದುಕೋಟೆ ಪ್ರದೇಶದಲ್ಲೂ ಸುಮಾರು ಕ್ರಿ.ಶ.೭೦೦ರಿಂದ ಮುಂದಕ್ಕೆ ಪಾಂಡ್ಯರ ಮೊದಮೊದಲಿನ ಗುಹೆಗಳಲ್ಲಿ ಅವು ಗೋಚರಿಸುತ್ತವೆ. ಹಾಗೆಯೇ ಬಾದಾಮಿಯ ಒಂದನೇ ಗುಹೆಯ ಒಂದು ಕಂಬದ ಮೇಲಿರುವ ಗಜಲಕ್ಷ್ಮಿ ಶಿಲ್ಪವು ಒಂದನೇ ನರಸಿಂಹವಮನರ್ ಕಾಲದಿಂದ ಪಲ್ಲವ ಕಟ್ಟಡಗಳ ಗಜಲಕ್ಷ್ಮಿ ಶಿಲ್ಪಗಳಿಗೆ ಪ್ರೇರಣೆಯನ್ನು ಒದಗಿಸಿದಂತೆ ತೋರುತ್ತದೆ.

ಹಾಗೆಯೇ ಪಲ್ಲವ-ಚಾಲುಕ್ಯ ಸಂಘರ್ಷದ ನಂತರ ಚಾಲುಕ್ಯ ಕಲೆಯು ಪಲ್ಲವರ ಕಲಾಕೃತಿಗಳಿಂದ ಪ್ರಭಾವಿತವಾಯಿತು. ಇದು ಮಹಿಷಿಮರ್ದಿನಿ ಮತ್ತು ದ್ವಾರಪಾಲಕರ ಶಿಲ್ಪಗಳಲ್ಲಿ ಸ್ಪಷ್ಟವಾಗಿದೆ. ಪಟ್ಟದಕಲ್ಲಿನ ದೇವಾಲಯಗಳಲ್ಲಿ ಮಲ್ಲಿಕಾರ್ಜುನ ದೇವಾಲಯದ ಹಜಾರದ ಒಂದು ಕಂಬದ ಮೇಲೆ ಮಹಿಷಮರ್ದಿನಿ ಫಲಕವಿದೆ. ಇದು ದೇವಿಯೂ ಮಹಿಷಿಯೂ ಯುದ್ಧದಲ್ಲಿ ತೊಡಗಿರುವುದನ್ನು ಚಿತ್ರಿಸುತ್ತದೆ. ಇದು ಮಹಾಬಲಿಪುರದ ಮಹಿಷಿಮರ್ದಿನಿ ಮಂಟಪದ ಸುಪ್ರಸಿದ್ಧ ಪಲ್ಲವ ಮಾದರಿಯ ಉಬ್ಬುಕೆತ್ತನೆಯನ್ನು ಅನುಸರಿಸಿ ಸಿದ್ಧಪಡಿಸಿರುವುದಾಗಿದೆ. ಯುದ್ಧದಲ್ಲಿ ಮಹಿಷನು ಮಾನವರೂಪದಲ್ಲಿ ಭಾರೀ ಗದೆಯನ್ನು ಎತ್ತಿಕೊಂಡು, ಉಗ್ರವಾದ ಸಿಂಹದ ಮೇಲೆ ಕುಳಿತ ದೇವಿಯತ್ತ ಉದ್ಧಟತನದಿಂದ ನೋಡುತ್ತಿರುವ ಕ್ಷಣವನ್ನು ಈ ಶಿಲ್ಪವು ಚಿತ್ರಿಸುತ್ತದೆ. ದೇವಿಯು ಅವನ ಮೇಲೆ ಬಾಣಗಳನ್ನು ಸುರಿಸುತ್ತಿದ್ದಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಹಾಬಲಿಪುರ ಮತ್ತು ಪಟ್ಟದಕಲ್ಲು ಎರಡರಲ್ಲೂ ದೇವಿಯು ಕುಚಬಂಧವನ್ನು ಧರಿಸಿದ್ದಾಳೆ. ಇದು ವಿಶಿಷ್ಟವಾದ ಪಲ್ಲವ ಅಲಂಕಾರ. ಮೊದಲ ಬಾರಿಗೆ ಚಾಲುಕ್ಯ ಶಿಲ್ಪದಲ್ಲಿ ಕಾಣಿಸಿರುವಂಥದು.

ಇನ್ನೊಂದು ಮಹಿಷಮರ್ದಿನಿ ಶಿಲ್ಪವು ವಿರೂಪಾಕ್ಷ ದೇವಾಲಯದ ಹೊರಗೋಡೆಯಲ್ಲಿ ಕಂಡುಬರುತ್ತದೆ, ಇದು ಮೊದಲು ಹೇಳಿದುದಕ್ಕಿಂತಲೂ ಸ್ವಾರಸ್ಯವಾದ ಶಿಲ್ಪವಾಗಿದೆ. ಇಲ್ಲಿ ದೇವಿಗೆ ಆರು ತೋಳುಗಳಿವೆ. ಬಲಗಾಲನ್ನು ನೆಲದ ಮೇಲೆ ಭದ್ರವಾಗಿ ಊರಿ, ಎಡ ಹೆಜ್ಜೆಯನ್ನು ಮಹಿಷನ ಬೆನ್ನಮೇಲೆ ಇರಿಸಿದ್ದಾಳೆ. ಅವಳು ಹಿಡಿದಿರುವ ತ್ರಿಶೂಲವು ಕೋಣದ ಕುತ್ತಿಗೆಯನ್ನು ಇರಿದಿದೆ. ಎರಡು ಕೈಗಳಲ್ಲಿ ಚಕ್ರ ಮತ್ತು ಶಂಖಗಳನ್ನು ಹಿಡಿದಿದ್ದಾಳೆ. ಇನ್ನೆರಡು ವರದ ಹಸ್ತಗಳಾಗಿವೆ. ಫಲಕದ ಮೇಲು ಮೂಲೆಗಳಲ್ಲಿ ಅವಳ ವಾಹನವಾದ ಸಿಂಹವನ್ನೂ ಒಂದು ಜಿಂಕೆಯನ್ನೂ ತೋರಿಸಿದೆ. ದೇವಿಯ ಎಡಗಡೆಗೆ ಒಬ್ಬ ದಾಸಿಯಿದ್ದಾಳೆ. ದೇವಿಯ ಪಕ್ಕಗಳಲ್ಲಿ ಕೆಳಗೆ ಇಬ್ಬರು ಭಕ್ತರು ಕುಳಿತಿದ್ದಾರೆ. ಅವರಲ್ಲಿ ಒಬ್ಬನು ತನ್ನ ತಲೆಯನ್ನು ದೇವಿಗೆ ಅರ್ಪಿಸಲು ಹೊರಟಿದ್ದಾನೆ. ದೇವಿಯ ಭಂಗಿಯು ಸಾಂಪ್ರದಾಯಿಕವಾಗಿದೆ. ಆದರೆ ಚಾಲುಕ್ಯ ಪ್ರದೇಶದಲ್ಲಿ ಷಡ್ಬುಜ ಮಹಿಷಿಮರ್ದಿನಿ ವಿಗ್ರಹಗಳು ಸಾಮಾನ್ಯವಾಗಿ ಕಾಣಿಸುವುದಿಲ್ಲ. ಹೆಚ್ಚಿನ ಸಂಗತಿಯೆಂದರೆ, ಭಕ್ತರ ಮೂರ್ತಿಗಳನ್ನು ಫಲಕದಲ್ಲಿ ಸೇರಿಸಿರುವುದು. ದೇವಿಗೆ ತನ್ನ ತಲೆಯನ್ನು ಅರ್ಪಿಸುತ್ತಿರುವ ಭಕ್ತನ ಶಿಲ್ಪವಿರುವ ಮಹಿಷಮರ್ದಿನಿ ಫಲಕವು ಚಾಲುಕ್ಯ ರಾಜ್ಯದಲ್ಲಿ ಇದೊಂದೇ.

ಮೇಲಿನ ಶಿಲ್ಪದ ರಚನೆಯ ಮಹಾಬಲಿಪುರದ ವರಾಹ ಮಂಟಪದಲ್ಲಿರುವ ದುರ್ಗೆಯ ಫಲಕವನ್ನು ಹೋಲುತ್ತದೆ, ಅದರಿಂದ ಪ್ರಭಾವಿತವಾಗಿರಬಹುದು. ಅಲ್ಲಿ ದುರ್ಗೆಯು ಒಂದು ತಾವರೆಯ ಪೀಠದ ಮೇಲೆ ನಿಂತಿದ್ದಾಳೆ. ಗರ್ಜಿಸುತ್ತಿರುವ ಸಿಂಹ ಮತ್ತು ಒಂದು ಜಿಂಕೆ ಫಲಕದ ಬಲ ಮತ್ತು ಎಡ ಮೇಲು ಮೂಲೆಗಳಿಂದ ಹೊರಬರುತ್ತಿರುವಂತೆ ಕಾಣಿಸುತ್ತದೆ. ದುರ್ಗೆಯ ಬಲಗಡೆಗೆ ಒಬ್ಬ ಭಕ್ತನು ಮಂಡಿಯೂರಿ ಕುಳಿತು ತನ್ನ ತಲೆಯನ್ನು ಕಡಿದು ದೇವಿಗೆ ಅರ್ಪಿಸಲು ಸಿದ್ಧನಾಗಿದ್ದಾನೆ. ಎಡಗೈಯಿಂದ ತನ್ನ ತಲೆಯ ಮುಡಿಯನ್ನು ಹಿಡಿದುಕೊಂಡು ಬಲಗೈಯಲ್ಲಿ ಖಡ್ಗವನ್ನು ಹಿಡಿದು ಕಡಿದುಕೊಳ್ಳಲು ಹೊರಟಿದ್ದಾನೆ. ದುರ್ಗೆಯ ಎಡಗಡೆಗೆ ಇನ್ನೊಬ್ಬ ಭಕ್ತನಿದ್ದಾನೆ. ಸಿಂಹ, ಜಿಂಕೆ, ಭಕ್ತರ ಮೂರ್ತಿಗಳು, ವಿಶೇಷವಾಗಿ ಮಂಡಿಯೂರಿ ಕುಳಿತು ತನ್ನ ತಲೆಯನ್ನು ಕಡಿದುಕೊಳ್ಳಲು ಸಿದ್ಧನಾಗಿರುವ ಭಕ್ತನ ಮೂರ್ತಿ ಇವುಗಳನ್ನು ಚಾಲುಕ್ಯ ಕಲಾವಿದನು ತನ್ನ ರಚನೆಗೆ ತಕ್ಕ ಅಲ್ಪ ಬದಲಾವಣೆಗಳೊಂದಿಗೆ ಅಳವಡಿಸಿಕೊಂಡನು. ಪಟ್ಟದಕಲ್ಲಿನ ಉಬ್ಬುಶಿಲ್ಪದ ಮೂಲಾಂಶಗಳು ಪಲ್ಲವ ಮಾದರಿಯನ್ನು ಹೋಲುತ್ತವೆ.

ಮೇಲೆ ಗಮನಿಸಿದ ಎರಡು ದೇವಿ ವಿಗ್ರಹಗಳೂ ಪಟ್ಟದಕಲ್ಲಿನ ದೇವಾಲಯಗಳಲ್ಲಿ ಕಂಡುಬರುತ್ತವೆ. ಇಂಥವೇ ಫಲಕಗಳು ಎರಡನೇ ವಿಕ್ರಮಾದಿತ್ಯನು ಕಾಂಚಿಯನ್ನು ಗೆದ್ದುದಕ್ಕೆ ಪೂರ್ವಭಾವಿಯಾದ ಇತರ ಚಾಲುಕ್ಯ ದೇವಾಲಯಗಳಲ್ಲಿ ಕಂಡುಬರದಿರುವುದು, ಚಾಲುಕ್ಯ ಶಿಲ್ಪಿಗಳ ಮೇಲೆ ಪಲ್ಲವ ಫಲಕಗಳ ಪ್ರಭಾವವಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಮಲ್ಲಿಕಾರ್ಜುನ ದೇವಾಲಯ ಮಹಿಷಮರ್ದಿನಿ ಫಲಕವನ್ನು ಕುರಿತು ಹೇಳುತ್ತಾ, ಗ್ಯಾರಿ ತರ್ತಕೋವ್ ಮತ್ತು ವಿದ್ಯಾ ದೇಹೇಜಿಯಾ ಅವರು, ‘ಯಾವುದೇ ಪರಿಣಾಮರಹಿತ ಪಲ್ಲವ ಮಧ್ಯ ಪ್ರವೇಶದ ಬಿಡಿ ಘಟನೆ’ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಒಂದು  ಫಲಕವನ್ನು ಪ್ರತ್ಯೇಕವಾಗಿ, ಬಿಡಿಯಾಗಿ ಅಧ್ಯಯನ ಮಾಡುವುದರ ಮೂಲಕ ಹಾಗೆ ಊಹೆಗಳಿಗೆ ಬರುವುದು ನ್ಯಾಯವಲ್ಲ. ಬಾದಾಮಿ ಚಾಲುಕ್ಯ ದೇವಾಲಯಗಳ ಕೆಲವು ಶಿಲ್ಪಗಳು ಮತ್ತು ವಾಸ್ತುಶಿಲ್ಪ ಘಟಕಗಳು ಪಲ್ಲವರಿಂದ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯ ಅಂಶಗಳನ್ನು ಎರವಲು ಪಡೆದುವು ಮತ್ತು ಅಲ್ಲಿಗೆ ಒದಗಿಸಿದುವು ಎನ್ನುವುದು ಖಚಿತವಾಗುತ್ತದೆ. ದೇವಿ ಮತ್ತು ರಾಕ್ಷಸರ ನಡುವೆ ಕಾಳಗವನ್ನು ತೋರಿಸುವ ಬೇರೊಂದು ಮಹಿಷಮರ್ದಿನಿ ಫಲಕವು ಚಾಲುಕ್ಯರ ಕಾಲದಲ್ಲಿ ಕಂಡುಬರದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ಮಲ್ಲಿಕಾರ್ಜುನ ದೇವಾಲಯವು ಸಂಪೂರ್ಣಗೊಂಡ ಎರಡು ದಶಕಗಳಿಗೂ ಕಡಿಮೆ ಅವಧಿಯಲ್ಲಿ ಬಾದಾಮಿ ಚಾಲುಕ್ಯರು ದಖ್ಖನಿನ ಪ್ರಭುಗಳಾಗಿ ಉಳಿದಿರಲಿಲ್ಲ.

ಬಾದಾಮಿ ಚಾಲುಕ್ಯರ ದ್ವಾರಪಾಲಕ ಶಿಲ್ಪಗಳು ೮ನೇ ಶತಮಾನದ ಪ್ರಾರಂಭದವರೆಗೂ ಸಾಮಾನ್ಯವಾಗಿ ಗಾತ್ರದಲ್ಲಿ ಕಿರಿದಾದವು. ೮ನೇ ಶತಮಾನದಿಂದ ಮುಂದಕ್ಕೆ ದ್ವಾರಪಾಲಕರ ಚಿತ್ರಣದಲ್ಲಿ ಸ್ಪಷ್ಟವಾದ ವ್ಯತ್ಯಾಸವು ಕಂಡುಬರುತ್ತದೆ. ಭಂಗಿಯಲ್ಲಿಯೂ ಮುಖಮುದ್ರೆಯಲ್ಲಿಯೂ ವ್ಯತ್ಯಾಸವು ಸ್ಪಷ್ಟವಾಗಿದೆ. ಪಟ್ಟದಕಲ್ಲು ಮತ್ತು ಇತರ ಸ್ಥಳಗಳ ದೇವಾಲಯಗಳಲ್ಲಿ ದ್ವಾರಪಾಲಕರು ಬಹಳ ಭಾರವಾಗಿರುವಂತೆ ತೋರುವ ಗದೆಯನ್ನು ಹಿಡಿದುಕೊಂಡಿದ್ದಾರೆ. ಅದನ್ನು ತಮ್ಮ ಕಾಲುಗಳ ನಡುವೆ ನಿಲ್ಲಿಸಿಕೊಂಡಿದ್ದಾರೆ. ಇಲ್ಲವೆ ಅಡ್ಡಗಾಲಿಟ್ಟುಕೊಂಡು ಗದೆಯನ್ನು ಮುಂದಿರಿಸಿಕೊಂಡಿದ್ದಾರೆ. ಈ ಮಾದರಿಯ ಶಿಲ್ಪಗಳು ಹುಚ್ಚಪ್ಪಯ್ಯನ ಗುಡಿ, ಐಹೊಳೆಯ ಜೋತಿರ್ಲಿಂಗ ಮತ್ತು ಕೊಂತಗುಡಿಗಳಲ್ಲಿ ಕಂಡುಬರುತ್ತವೆ. ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಪಾಪನಾಥ ದೇವಾಲಯಗಳ ದ್ವಾರಪಾಲಕ ಶಿಲ್ಪಗಳು ಸ್ವಲ್ಪ ಬೇರೆ ಮಾದರಿಯವು. ಇಲ್ಲಿ ದ್ವಾರಪಾಲರಿಗೆ ಕೋರೆದಾಡೆಗಳಿವೆ. ಪಾಪನಾಥ ದೇವಾಲಯದಲ್ಲಿ ಅವನಿಗೆ ಕೋರೆ ಹಲ್ಲು ಮಾತ್ರವಲ್ಲದೆ, ಕೊಂಬು ಇರುವ ತಲೆಪಾಗನ್ನು ಧರಿಸಿದ್ದಾನೆ. ಇದು ಪಲ್ಲವ ದ್ವಾರಪಾಲರ ವಿಶಿಷ್ಟ ಲಕ್ಷಣ. ಬಾದಾಮಿ ಚಾಲುಕ್ಯರ ಈ ದೇವಾಲಯಗಳ ಪಲ್ಲವ ದ್ವಾರಪಾಲರ ಪ್ರಭಾವವನ್ನು ಬಹು ಸ್ಪಷ್ಟವಾಗಿ ಸೂಚಿಸುತ್ತವೆ. ಹೀಗೆ ಕೋರೆಹಲ್ಲುಗಳೂ, ವ್ಯಗ್ರವಾದ ದೃಷ್ಟಿಯೂ ಇರುವ, ಕಾಲ ಮುಂದೆ ಅಡ್ಡಗಾಲು ಇರಿಸಿಕೊಂಡ ಭಂಗಿಯಲ್ಲಿರುವ ದ್ವಾರಪಾಲರ ವಿಗ್ರಹಗಳು ಬಾದಾಮಿ ಚಾಲುಕ್ಯರ ಈ ದೇವಾಲಯಗಳ ಪಲ್ಲವ ದ್ವಾರಪಾಲರ ಪ್ರಭಾವವನ್ನು ಬಹುಸ್ಪಷ್ಟವಾಗಿ ಸೂಚಿಸುತ್ತವೆ. ಹೀಗೆ ಕೋರೆ ಹಲ್ಲುಗಳೂ, ವ್ಯಗ್ರವಾದ ದೃಷ್ಟಿಯೂ ಇರುವ, ಕಾಲ ಮುಂದೆ ಅಡ್ಡಗಾಲು ಇರಿಸಿಕೊಂಡ ಬಂಗಿಯಲ್ಲಿರುವ ದ್ವಾರಪಾಲರ ವಿಗ್ರಹಗಳು ಬಾದಾಮಿ ಚಾಲುಕ್ಯರ ಆಳಿಕೆಯುದ್ದಕ್ಕೂ, ಕರ್ನಾಟಕದಲ್ಲಿ ವಿಜುನಗರ ಕಾಲದ ಕೊನೆಯವರೆಗೂ ಮುಂದುವರಿದವು.