ಐಹೊಳೆಯ ಗುಹಾಲಯಗಳು

ಐಹೊಳೆಯಲ್ಲಿ ಕಲ್ಲನ್ನು ಕೊರೆದು ನಿರ್ಮಿಸಿದ ಗುಹಾದೇವಾಲಯಗಳ ವಾಸ್ತುಶಿಲ್ಪವನ್ನು ಐದು ನಿದರ್ಶನಗಳಿಂದ ಪ್ರತಿನಿಧಿಸಿದೆ. ಇವುಗಳಲ್ಲಿ ಒಂದು, ಅರ್ಧ ನಿರ್ಮಾಣಗೊಂಡಿದ್ದು, ಇನ್ನರ್ಧ ಕೊರೆದದ್ದು. ಗುಹೆಗಳಲ್ಲಿ ಎರಡೂ ಹಿಂದೂ, ಒಂದು ಬೌದ್ಧ, ಒಂದು ಜೈನ ಮತ್ತು ಐದನೆಯದು ಬೌದ್ಧ ಅಥವಾ ಜೈನ ಯಾವ ಪಂಥಕ್ಕೆ ಬೇಕಾದರೂ ಸೇರಬಹುದಾದಂಥದು. ಐಹೊಳೆಯ ಗುಹೆಗಳು ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯ ಅಂಶಗಳಲ್ಲಿ ಬಾದಾಮಿಯ ಗುಹೆಗಳಿಗಿಂತ ಬಹುಮಟ್ಟಿಗೆ ಬೇರೆಯಾದವು. ಜೈನ ಗುಹೆಯ (ಸ್ಥಳೀಯವಾಗಿ ಮೀನಬಸದಿ ಎಂಬ ಹೆಸರಿನದು) ಹಾಗೂ ದೊಡ್ಡ ಹಿಂದೂ ಗುಹೆಯ (ಸ್ಥಳೀಯವಾಗಿ ರಾವಣಫಡಿ ಎಂಬ ಹೆಸರಿನದು) ನಕ್ಷಗಳಲ್ಲೇ ಕೆಲವು ಸಮಾನ ಅಂಶಗಳಿವೆ. ಮೊದಲಿನದರಲ್ಲಿ ಒಂದು ಗರ್ಭಗೃಹ, ಎರಡು ಪಾರ್ಶ್ವಕೋಷ್ಠಗಳು, ಒಂದು ಚಚ್ಚೌಕವಾದ ಹಜಾರ ಮತ್ತು ಆಯಾಕಾರದ ಮೊಗಸಾಲೆ ಇವೆ. ಎರಡನೆಯದರಲ್ಲಿ, ಒಂದು ಗರ್ಭಗೃಹ, ಒಂದು ಸುಕನಾಸಿ, ಎರಡು ಪಾರ್ಶ್ವಕೋಷ್ಠಗಳು, ಒಂದು ಸಮಾನವಾದ ಹಜಾರ ಇವೆ. ಇದರಲ್ಲಿ ಮೊಗಸಾಲೆಯಿಲ್ಲ. ಆದರೆ ಗುಹೆಯ ಹೊರಗೆ, ಎದುರಿಗೆ ಒಂದು ನಂದಿ ಮಂಟಪವಿದೆ. ಇದರ ಹಿಂದೆ ಎತ್ತರವಾದೊಂದು ಏಕಶಿಲಾ ಸ್ತಂಭವಿದೆ. ಒಮ್ಮೆ ಅದರ ನೆತ್ತಿಯ ಮೇಲೆ ಒಂದು ಅಮಲಕವಿದ್ದಿತು. ರಾವಣಫಡಿಯ ನಕ್ಷೆ ಬಾದಾಮಿ ಚಾಲುಕ್ಯರ ಬೇರಾವುದೇ ಗುಹಾಲಯಕ್ಕಿಂತ ಹೆಚ್ಚು ಮುಂದುವರಿದದ್ದು.

ರಾವಣಫಡಿಯನ್ನು ಸ್ವಲ್ಪ ಎತ್ತರದಲ್ಲಿ ಕೊರೆಯಲಾಗಿದೆ. ಆದ್ದರಿಂದ ಮೆಟ್ಟಿಲುಗಳನ್ನೇರಿ ಅದನ್ನು ಪ್ರವೇಶಿಸಬೇಕು. ಮೀನಬಸದಿಯಾದರೆ ನೆಲಮಟ್ಟದಲ್ಲೇ ಇದೆ. ಮುಂಭಾಗದಲ್ಲಿರುವ ಮೊಗಸಾಲೆಯ ಸುತ್ತ ಪೌಳಿಗೋಡೆಯಿದ್ದು, ಪ್ರವೇಶದ್ವಾರವಿದೆ ಎಂಬುದು ಗಮನಾರ್ಹ. ರಾವಣಫಡಿಗೆ ಎತ್ತರವಾದ ಅಧಿಷ್ಠಾನವಿದೆ. ಮೀನಬಸದಿಯಿದ್ದು, ಪ್ರವೇಶದ್ವಾರವಿದೆ ಎಂಬುದು ಗಮನಾರ್ಹ. ರಾವಣಫಡಿಗೆ ಎತ್ತರವಾದ ಅಧಿಷ್ಠಾನವಿದೆ. ಮೀನಬಸದಿಯಲ್ಲಿ ಅದಿಲ್ಲ. ಇದರ ಇನ್ನೊಂದು ವಿಶೇಷ ಲಕ್ಷಣವೆಂದರೆ, ಕಂಬಗಳಿರುವ ಮುಂಭಾಗವಿರುವುದು, ಈ ಭಾಗದ ಎರಡೂ ಕಡೆ ನಿಧಿಶಿಲ್ಪಗಳಿರುವುದು.

ಎರಡೂ ಗುಹೆಗಳಿಗೆ ಸಮಾನವಾದ ಒಂದು ಲಕ್ಷಣವೆಂದರೆ, ಬಲಪಕ್ಕದ ಕೊಠಡಿಯಲ್ಲಿ ದೊಡ್ಡ ಕೆತ್ತನೆಯಿರುವ ಫಲಕವು ಮೂರೂ ಗೋಡೆಗಳಲ್ಲಿ ಕಂಡುಬರುವುದು. ರಾವಣಫಡಿಯಲ್ಲಿ ಈ ಫಲಕದಲ್ಲಿ ನಟರಾಜ ಮತ್ತು ಸಪ್ತಮಾತೃಕೆಯರ ಶಿಲ್ಪಗಳಿದ್ದರೆ, ಮೀನಬಸದಿಯ ಫಲಕದಲ್ಲಿ ಪಾರ್ಶ್ವನಾಥನ ಬದುಕಿನ ಮೂರು ಮುಖ್ಯವಾದ ಹಂತಗಳನ್ನು ನಿರೂಪಿಸುವ ಶಿಲ್ಪಗಳಿವೆ.

ಬೌದ್ಧ ಚೈತ್ಯ

ಐಹೊಳೆಯ ಬೌದ್ಧ ಚೈತ್ಯಕ್ಕೆ ಸರಿಸಮಾನವಾದುದು ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದಲ್ಲಿ ಬೇರೊಂದಿಲ್ಲ. ಅದೊಂದು ಅಂತಸ್ತುಗಳಿರುವ ಕಟ್ಟಡ. ಚೈತ್ಯದ ಗರ್ಭಗೃಹ ಭಾಗವು ಕಲ್ಲಿನಲ್ಲಿ ಕೊರೆದದ್ದು. ಮೇಲಿನ ಚೈತ್ಯದಲ್ಲಿ ಒಂದು ಗರ್ಭಗೃಹವೂ ಒಂದು ದೀರ್ಘಚತುರಸ್ರಾಕಾರದ ಮೊಗಸಾಲೆಯೂ ಇವೆ. ಮೊಗಸಾಲೆಯಲ್ಲಿ ನಾಲ್ಕು ಕಂಬಗಳಿವೆ. ಎರಡು ಗೋಡೆಗಂಬಗಳು ಚೈತ್ಯದ ಮುಖಭಾಗವಾಗಿವೆ. ಚೌಕವಾಗಿರುವ ಕಂಬಗಳು, ಒಂದುಪಟ್ಟಿಕೆ ಹಾಗೂ ಯಾವುದೇ ಉಬ್ಬುಶಿಲ್ಪವಿಲ್ಲದ ಅರೆಪದರಗಳಿಂದ ಅಲಂಕೃತವಾಗಿವೆ. ಚಾಚುವಿಗ್ರಹಗಳು ಮುಂದಕ್ಕೆ ಬಾಗಿರುವ ಮಾದರಿಯಲ್ಲಿವೆ. ಮೊಗಸಾಲೆಯ ಚಾವಣಿಯು ಐದು ಅಂಕಣಗಳಾಗಿ ವಿಭಜಿತವಾಗಿದೆ. ಗರ್ಭಗೃಹ ಬಾಗಿಲ ಎದುರಿಗೆ ಮಧ್ಯದ ಅಂಕಣದಲ್ಲಿ ವ್ಯಾಖ್ಯಾನ ಮುದ್ರೆಯಲ್ಲಿರುವ ಬುದ್ಧನ ಸುಂದರವಾದ ವಿಗ್ರಹವಿದೆ. ಇದನ್ನು ಹಿಂದೆ ಬಟ್ಟೆ ನೇಯುತ್ತಿರುವ ವಿಗ್ರಹವೆಂದು ಭಾವಿಸಲಾಗಿತ್ತು. ಈ ಉಬ್ಬುಶಿಲ್ಪದಲ್ಲಿ ಬುದ್ಧನು ಪದ್ಮಪೀಠದ ಮೇಲೆ ಸತ್ವಪರ್ಯಂಕಾಸನದಲ್ಲಿ ಆಸೀನನಾಗಿದ್ದಾನೆ. ಬಲಗೈಯನ್ನು ಎದೆಯ ಮೇಲೆ ವ್ಯಾಖ್ಯಾನ ಮುದ್ರೆಯಲ್ಲಿ ಇರಿಸಿಕೊಂಡಿದ್ದಾನೆ. ಎಡಗೈಯನ್ನು ಬಲ ಅಂಗಾಲಿನ ಮೇಲೆ ಅಂಗೈಯನ್ನು ಮೇಲ್ಮುಖವಾಗಿ ಇರಿಸಿಕೊಂಡಿದ್ದಾನೆ. ಬಲಭುಜದ ಮೇಲೆ ಹೊದಿಕೆಯಿದೆ. ಬಲ ಎದೆಯ ಸ್ವಲ್ಪಭಾಗ ಹೊದಿಕೆಯಿಲ್ಲದೆ ತೆರೆದಿದೆ. ಅವನ ತಲೆಯ ಮೇಲೆ ತ್ರಿ-ಛತ್ರವಿದೆ. ಪಕ್ಕಗಳಲ್ಲಿ ಅನುಚರರು ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ ಕೆಲವೇ ಬುದ್ಧವಿಗ್ರಹಗಳಲ್ಲಿ ಇದು ಅತ್ಯಂತ ಉತ್ತಮವಾದದ್ದು.

ಗರ್ಭಗೃಹದಲ್ಲಿ ಹಿಂದೊಮ್ಮೆ ಸ್ತೂಪವಿದ್ದಿತು. ಕಲ್ಲನ್ನು ಅರೆವರ್ತುಲಾಕಾರವಾಗಿ ಕೊರೆದಿರುವುದರಿಂದ ಇದನ್ನು ಊಹಿಸಬಹುದು. ಬಹುಶಃ ಈ ಸ್ತೂಪದ ಮೇಲೆ ಒಂದು ಬುದ್ಧ ಮೂರ್ತಿಯಿದ್ದಿರಬೇಕು. ಗರ್ಭಗೃಹದ ಬಾಗಿಲು ಸರಳವಾಗಿದೆ. ಸುತ್ತಲಂಕಾರದಲ್ಲಿ, ಸಾಲದಲ್ಲಿ ಒಂದು ಚಿಕ್ಕ ಚೈತ್ಯದ ಅಲಂಕಾರವಿದೆ. ಅದರ ನಡುವೆ ಕುಳಿತ ಬುದ್ಧನ ಒಂದು ಸಣ್ಣ ಮೂರ್ತಿಯಿದೆ.

ಕೆಳಚೈತ್ಯವೂ ಮೇಲಿನದರಂತೆಯೇ ಅರ್ಧ ಕಲ್ಲಿನಲ್ಲಿ ಕೊರದದ್ದು, ಇನ್ನರ್ಧ ಕಟ್ಟಿದ್ದು. ಕೆಳಚೈತ್ಯದ ಒಂದು ಹೆಚ್ಚಳ ಲಕ್ಷಣ ಅದಕ್ಕೊಂದು ಸುಕನಾಸಿಯಿರುವುದು. ಸುಕನಾಸಿಯ ಪಕ್ಕದಲ್ಲಿ ಒಂದು ತೆರೆದ ಮೊಗಸಾಲೆಯಿದೆ. ಅದರಲ್ಲೂ ನಾಲ್ಕು ಕಂಬಗಳು ಮತ್ತು ಮುಖಭಾಗವಾಗುವ ಎರಡು ಗೋಡೆಗಂಬಗಳು ಇವೆ. ಕಂಬಗಳು ಚೌಕಾಕೃತಿಯಲ್ಲಿದ್ದು ಕಾಂಡದ ಮೇಲೆ ಸರಳವಾದ ಪಟ್ಟಿಕೆಯಿದೆ. ಅವುಗಳ ನೆತ್ತಿಯ ಮೇಲೆ ಎರಡು ಒಳಭಾಗದ ಚಾಚುಪೀಠಗಳಿವೆ(ಮುಷ್ಟಿಬಂಧ). ಮೊಗಸಾಲೆಯ ಚಾವಣಿಯು ಚಪ್ಪಟೆಯಾಗಿದೆ, ಸರಳವಾಗಿದೆ, ನಡುವೆ ಒಂದು ಪದ್ಮವಿದೆ. ಚಾವಣಿಗೆ ಆಧಾರವಾಗಿರುವ ತೊಲೆಗಳು ಮಕರ ವಿನ್ಯಾಸದಿಂದ ಕೂಡಿವೆ.

ಗರ್ಭಗೃಹ ಮತ್ತು ಸುಕನಾಸಿಯ ಬಾಗಿಲುಗಳಲ್ಲಿ ಸಮೃದ್ಧವಾದ ಕೆತ್ತನೆಯಿದೆ. ಬಾಗಿಲ ಮೇಲೆ ಗುಲಾಬಿ ಪಟ್ಟಿಕೆಗಳು, ಹೂವುಗಳು. ಚಾಚು ಕಂಬಗಳು, ಬಳ್ಳಿ ಮತ್ತು ಬುದ್ಧನ ಜೀವನದ ಸಂದರ್ಭಗಳನ್ನೂ ಜಾತಕ ಕಥೆಗಳನ್ನೂ ನಿರೂಪಿಸುವ ಘಟನೆಗಳ ಉಬ್ಬುಶಿಲ್ಪಗಳಿವೆ. ಬುದ್ಧನು ಮಾಡಿದ ಮೊದಲನೆಯ ಉಪದೇಶ, ಸುರಪಾನ ಜಾತಕ ಮತ್ತು ವೆಸ್ಸಂತರ ಜಾತಕಗಳೂ ಇದರಲ್ಲಿ ಸೇರಿವೆ. ಸುಕನಾಸಿ ದ್ವಾರದ ಕಂಬ ತೋಳುಗಲಲ್ಲಿ ಗುಲಾಬಿ ಪಟ್ಟಿಕೆಗಳು, ಗೇರುಬೀಜ ಆಕಾರದ ಚಿತ್ರಗಳು, ಯಕ್ಷರು, ಗೋಡೆಗಂಬ, ಬಳ್ಳಿ, ಬುದ್ಧನ ಜೀವನ ಮತ್ತು ಜಾತಕ ಕಥೆಗಳ ಸಂದರ್ಭಗಳ ಉಬ್ಬುಶಿಲ್ಪಗಳು ಬಾಗಿಲ ಮೇಲೆ ಇವೆ. ಕೆಲವು ಸಂದರ್ಭಗಳು ಚುಳ್ಳಹಂಸ ಜಾತಕ, ಅರಾಮದುಸಕ ಜಾತಕ, ವಲಹಸ್ಯ ಜಾತಕ, ನಳಾಗಿರಿ ಘಟನೆ ಮತ್ತು ದೇವದತ್ತನು ಒಂದು ಬಂಡೆಯನ್ನು ಎತ್ತಿ ಹಾಕಿ ಬುದ್ಧನನ್ನು ಜಜ್ಜುವ ಪ್ರಯತ್ನ ಮಾಡಿದ್ದು ಇವುಗಳನ್ನು ಒಳಗೊಂಡಿವೆ.

ಈ ಚೈತ್ಯವು ಐಹೊಳೆಯಲ್ಲಿ ಬಾದಾಮಿ ಚಾಲುಕ್ಯರಿಗೆ ಸೇರಿದ ಕಟ್ಟಡಗಳಲ್ಲಿ ಪ್ರಾಚೀನವಾದದ್ದು. ಅದು ಒಂದನೇ ಪುಲಕೇಶಿಯ ಅಡಳಿತಾವಧಿಗೆ ಸೇರಿದ್ದಿರಬಹುದಾದ ಸಂಭವವಿದೆ.

ಮೀನಬಸದಿ

ಸ್ಥಳೀಯವಾಗಿ ಮೀನಬಸದಿ ಎಂದು ಕರೆಯುವ ಜೈನಗುಹೆಯು ಒಂದು ಗರ್ಭಗೃಹ. ಎರಡೂ ಕಡೆ ಒಂದೊಂದು ಕೊಠಡಿಯಿರುವ ಒಂದು ಹಜಾರಗಳನ್ನು ಒಳಗೊಂಡಿದೆ. ಎಡಗಡೆಯ ಕೊಠಡಿಯು ಅಪೂರ್ಣವಾಗಿ ಉಳಿದುಹೋಗಿದೆ. ಗರ್ಭಗೃಹದ ನಡುವೆ ಒಂದು ಭಾರಿಯಾದ ಸಿಂಹ-ಪೀಠವಿದೆ. ನೆಲವೂ, ಈ ಪೀಠವೂ ಒಂದೇ ಶಿಲೆಯಲ್ಲಿ ಕೊರೆದಿರುವಂಥವು. ಪೀಠದ ಮೇಲೆ ದೊಡ್ಡ ಜಿನಗ್ರಹವು ಮುಕ್ಕೊಡೆಯ ಕೆಳಗೆ ಕುಳಿತಿರುವ ಭಂಗಿಯಲ್ಲಿದೆ. ತಲೆಯ ಹಿಂಭಾಗದಲ್ಲಿ ಕಾಂತಿ ಪರಿವೇಷವಿದೆ. ಜಿನನ ಪಕ್ಕಗಳಲ್ಲಿ ಚೌರಿ ಹಿಡಿದವರು ನಿಂತಿದ್ದಾರೆ. ಜಿನನ್ನು ಗುರುತಿಸುವುದು ಕಷ್ಟ, ಏಕೆಂದರೆ ಪೀಠದ ಮೇಲೆ ಲಾಂಛನವಿಲ್ಲ. ಗರ್ಭಗೃಹವು ಹಜಾರಕ್ಕಿಂತ ಸ್ವಲ್ಪ ಎತ್ತರವಾಗಿದೆ. ಗರ್ಭಗೃಹದ ಮುಖಭಾಗದಲ್ಲಿ ಒಂದು ಅಂಚುಕಟ್ಟಿದ್ದು, ಎಲೆಗಳು ಮತ್ತು ಹೂವುಗಳ ವಿನ್ಯಾಸವನ್ನು ಕೆತ್ತಿದೆ, ಎರಡು ಕಂಬಗಳ ಜೊತೆಗೆ ಚೈತ್ಯದ ಮಾದರಿಯ ಅಲಂಕಾರವೂ ಇದೆ.

ಹಜಾರವನ್ನು ಕಂಬಗಳು ಮೊಗಸಾಲೆಯಿಂದ ಬೇರ್ಪಡಿಸುತ್ತವೆ. ಈ ಕಂಬಗಳಿಗೆ ಚೌಕವಾದ ತಳಭಾಗವೂ ಅಷ್ಟಭುಜ, ಷೋಡಶಭುಜ, ಕಾಂಡಭಾಗವೂ, ಮೇಲೆ ಷೋಡಶ ಮುಖಗಳುಳ್ಳ ಕಂಭವೂ, ಚೌಕಾಕೃತಿಯ ಮುಚ್ಚಿಗೆಯೂ ಮುಷ್ಟಿಬಂಧಾಕೃತಿಯ ಚಾಚು ಶಿಲ್ಪವೂ ಇವೆ. ಚಾವಣಿಯಲ್ಲಿ ದೊಡ್ಡ ಪದ್ಮಗಳು, ಹೂವುಗಳ ಅಲಂಕಾರ ಹೆಣಿಗೆಗಳು, ಸುಂದರವಾದ ಬಾಲಗಳುಳ್ಳ ಮೀನುಗಳು, ಮಕರಗಳು ಹಾಗೂ ಬಾಲಗಳಿರುವ ದಂಪತಿ ಆಕೃತಿಗಳು ಕೆತ್ತಲ್ಪಟ್ಟಿವೆ. ಚಾವಣಿಯ ಚೌಕಾಕಾರದ ಅಂಚು ಗುಲಾಬಿ ಪಟ್ಟಿಕೆಗಳಿಂದ ಕೂಡಿದೆ. ಗರ್ಭಗೃಹಕ್ಕೆ ಹೋಗುವ ದ್ವಾರದ ಬಾಗಿಲಿನ ಎರಡೂ ಪಕ್ಕಗಳಲ್ಲಿ ತ್ರಿಭಂಗದಲ್ಲಿ ನಿಂತ ದಿವ್ಯಾಕೃತಿಗಳಿವೆ. ಎಡಗಡೆಯ ಶಿಲ್ಪದಲ್ಲಿ ಮೀನನ್ನು ಹಿಡಿದುಕೊಂಡಿರುವ ಯಕ್ಷ ಶಿಲ್ಪವಿದೆ. ಯಕ್ಷನು ಹೀಗೆ ಮೀನನ್ನು ಹಿಡಿದಿರುವುದರಿಂದಾಗಿಯೇ ಈ ಗುಹೆಗೆ ಮೀನಬಸದಿ ಎಂಬ ಹೆಸರು ಬಂದಿರುವುದು.

ಬಲಕೊಠಡಿಯ ಹಜಾರಕ್ಕಿಂತ ಸ್ವಲ್ಪ ಎತ್ತರದಲ್ಲಿದ್ದು ಪಾರ್ಶ್ವನಾಥನ ಬದುಕನ್ನು ನಿರೂಪಿಸುವ ಒಂದು ವಿಶೇಷ ಫಲಕ ಗಮನಾರ್ಹವಾಗಿದೆ. ಮೂರೂ ಗೋಡೆಗಳಲ್ಲಿ ಕೊರೆದಿರುವ ಫಲಕಗಳು ಚೆನ್ನಾಗಿ ಯೋಜಿತವಾಗಿದೆ. ಆದರೆ ದುರದೃಷ್ಟಕ್ಕೆ, ಕೆಲವು ಮೂರ್ತಿಗಳನ್ನು ಪೂರ್ತಿಗೊಳಿಸಲಾಗಿಲ್ಲ. ಬಲಗೋಡೆಯ ಮೇಲೆ ಪಾರ್ಶ್ವನಾಥನನ್ನು ತೀರ್ಥಂಕರನನ್ನಾಗಿ ಚಿತ್ರಿಸುತ್ತದೆ. ಅವನ ಪಕ್ಕಗಳಲ್ಲಿ ಧರಣೇಂದ್ರನೂ ಪದ್ಮಾವತಿಯೂ ನಿಂತಿದ್ದಾರೆ. ಎಡಗೋಡೆಯ ಮೇಲಿನ ಶಿಲ್ಪವು ಇಂದ್ರನು ಐರಾವತವನ್ನು ಏರಿಕೊಂಡು ತನ್ನ ಅನುಚರರೊಂದಿಗೆ ಪಂಚಕಲ್ಯಾಣಗಳಲ್ಲಿ ಒಂದನ್ನು ನೆರವೆರಿಸಲು ತೀರ್ಥಂಕರನ ಕಡೆಗೆ ಹೋಗುತ್ತಿರುವಂತೆ ಚಿತ್ರಿಸುತ್ತದೆ.

ಮೊಗಸಾಲೆಯೂ ಆಯಾಕಾರದಲ್ಲಿದ್ದು, ಇಡೀ ಚಾವಣಿಯು ಹೂವುಗಳಿಂದಲೂ ಇತರ ಅಲಂಕಾರ ಪಟ್ಟಿಕೆಗಳಿಂದಲೂ ಸಿಂಗರಗೊಂಡಿದೆ. ಪಕ್ಕಗೋಡೆಗಳಲ್ಲಿ ಬಾಹುಬಲಿ ಮತ್ತು ಪಾರ್ಶ್ವನಾಥರ ದೊಡ್ಡ ಶಿಲ್ಪಗಳಿವೆ. ಬಾಹುಬಲಿಗೆ ನೀಳವಾದ ಕೇಶರಾಶಿಯಿದೆ. ಪಾರ್ಶ್ವನಾಥನ ಜೊತೆಯಲ್ಲಿ ಧರಣೇಂದ್ರ ಮತ್ತು ಪದ್ಮಾವತಿಯರಿದ್ದಾರೆ.

ಮೀನಬಸದಿಯ ಕಾಲವು ಬಾದಾಮಿಯ ಜೈನ ಗುಹೆಗಿಂತ ಮುಂಚಿನದು. ಅದನ್ನು ಬಹುಶಃ ೬ನೇ ಶತಮಾನದ ಮೊದಲರ್ಧದಲ್ಲಿ ಕೊರೆಯದಿರಬಹುದು.

ರಾವಣಫಡಿ

ಇದೊಂದು ದೊಡ್ಡ ಶೈವಗುಹೆ. ಉತ್ತಮವಾದ ನಕ್ಷೆಯಿಂದ ರಚಿತವಾಗಿದೆ. ಒಂದು ಗರ್ಭಗೃಹ, ಒಂದು ಸುಕನಾಸಿ, ಎರಡು ಕೋಷ್ಠಗಳಿರುವ ಒಂದು ಹಜಾರ ಇವು ಇಲ್ಲಿ ಕಂಡುಬರುತ್ತವೆ. ಹೊರಗೆ ಗರ್ಭಗೃಹಕ್ಕೆ ನೇರವಾಗಿ ನಂಗಿಗಾಗಿ ಒಂದು ವೇದಿಕೆಯಿದೆ. ನಂದಿಯ ಹಿಂಭಾಗದಲ್ಲಿ ಒಂದು ಏಕಶಿಲಾ ಸ್ತಂಭವಿದ್ದು ಹಿಂದೆ ಅದರ ಮೇಲೆ ಒಂದು ಆಮಲಕವಿದ್ದಿತು. ಈ ಕಂಬವು ಮಹಾಕೂಟದಲ್ಲಿ ಮಂಗಳೇಶನು ಕ್ರಿ.ಶ. ೬೦೨ರಲ್ಲಿ ಸ್ಥಾಪಿಸಿದ ಸ್ತಂಭವನ್ನು (ಈಗ ಅದನ್ನು ಬಿಜಾಪುರದ ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಲಾಗಿದೆ) ನೆನಪಿಗೆ ತರುತ್ತದೆ.

ಗರ್ಭಗೃಹದ ನಡುವೆ ಒಂದು ಲಿಂಗವಿದೆ. ಪೀಠವೂ ಲಿಂಗವೂ ಒಂದವೇ ಕಲ್ಲಿನಿಂದ ಕೊರೆಯಲ್ಪಟ್ಟಿವೆ. ಅದೇ ಕಲ್ಲಿನಲ್ಲೇ ಗರ್ಬಗೃಹದ ನೆಲವನ್ನೂ ಕೊರೆದಿದೆ. ಈಗ ಹಾನಿಗೊಂಡಿರುವ ಚಾವಣಿಯಲ್ಲಿ ಪದ್ಮಗಳಿವೆ. ಸುಕನಾಸಿಯೂ ಆಯಾಕಾರವಾಗಿದೆ. ಸುಕನಾಸಿಯಿರುವುದು ಮೀನ ಬಸದಿಗಿಂತ ಮುಂದಿನ ಬೆಳವಣಿಗೆ. ಗರ್ಭಗೃಹವನ್ನು ಬೇರ್ಪಡಿಸುವ ಬಾಗಿಲಿದೆ, ಆದರೆ ಗೋಡೆ ಬಿದ್ದುಹೋಗಿದೆ. ಸ್ವಲ್ಪ ಭಾಗ ಮಾತ್ರ ಉಳಿದಿದೆ. ಪಕ್ಕಗೋಡೆಗಲಲ್ಲಿ ದೊಡ್ಡ ವರಾಹ ಮತ್ತು ಮಹಿಷಾಸುರಮರ್ದಿನಿ ಶಿಲ್ಪಗಳಿವೆ. ಭೂದೇವಿಯು ವರಾಹನ ಎಡ ಭುಜದ ಮೇಲೆ ಕುಳಿತಂತೆ ಶಿಲ್ಪಿತವಾಗಿರುವುದನ್ನು ಇಲ್ಲಿ ಗಮನಿಸಬೇಕು. ಚಾವಣಿಯಲ್ಲಿ ಮೂರು ದೊಡ್ಡ ಪದಕಗಳಿದ್ದು, ಮಧ್ಯದ ಪದಕದಲ್ಲಿ ಸೂಕ್ಷ್ಮವಾಗಿ ಕೆತ್ತಿರುವ ಪದ್ಮವಿದೆ. ಇನ್ನೆರಡರಲ್ಲಿ ಐರಾವತವನ್ನೇರಿದ ಇಂದ್ರ, ಗರುಡನನ್ನೇರಿದ ವಿಷ್ಣುಮೂರ್ತಿಗಳನ್ನು ಕೆತ್ತಲಾಗಿದೆ.

ಹಜಾರವು ಎರಡು ಪಕ್ಕದ ಕೊಠಡಿಗಳನ್ನು ಒಳಗೊಂಡಿದೆ. ಇವುಗಳಲ್ಲಿ ಒಂದು ಅಪೂರ್ಣವಾಗಿ ಉಳಿದಿದೆ. ಈ ಪಾರ್ಶ್ವಕೋಷ್ಠಗಳಿಗೂ ಸುಕನಾಸಿಗೂ ಸೋಪಾನಗಳನ್ನೇರಿ ಹೋಗಬೇಕು. ಹಜಾರದ ಗೋಡೆಗಳಲ್ಲಿ ಶಿವ, ಹರಿಹರ, ಅರ್ಧನಾರೀಶ್ವರ ಮತ್ತು ಗಂಗಾಧರ ಮೂರ್ತಿಗಳನ್ನು ಕೆತ್ತಲಾಗಿದೆ. ಆಕಾರದಲ್ಲಿ ಇವು ದೊಡ್ಡವಾಗಿವೆ. ಕೋಷ್ಠಗಳ ತಳಹದಿಯೂ ಸುಕನಾಸಿಯ ಕೆಳಭಾಗವೂ ವಿವಿಧ ಬಂಗಿಗಳಲ್ಲಿರುವ ಯಕ್ಷರ ಶಿಲ್ಪಗಳಿಂದ ಕೂಡಿದೆ. ಯಕ್ಷರು ವೀಣೆ, ಮದ್ದಳೆ ಮತ್ತು ಶಂಖಗಳನ್ನು ಬಾಜಿಸುತ್ತಿರುವಂತೆ ಚಿತ್ರಿಸಲಾಗಿದೆ.

ಬಲಗಡೆಯ ಕೋಷ್ಠಕದಲ್ಲಿ ವಿಶೇಷವಾದ ಒಂದು ನಟರಾಜ ಫಲಕವಿದೆ. ಕೋಷ್ಠದ ಮೂರು ಗೋಡೆಗಳ ಮೇಲೆ ಅದನ್ನು ಕೆತ್ತಿದೆ. ಮಧ್ಯದಲ್ಲಿ ದಶಭುಜ ನಟರಾಜನಿದ್ದಾನೆ. ಅವನ ಆಚೆ ಈಚೆ ಮಾತೃಕೆಯರು, ಪಾರ್ವತಿ, ಕಾರ್ತಿಕೇಯ ಮತ್ತು ಗಣೇಶರಿದ್ದಾರೆ. ಎಲ್ಲರೂ ಭಗವಂತನ ನೃತ್ಯದಿಂದ ರೋಮಾಂಚಿತರಾಗಿದ್ದಾರೆ. ಗುಹೆಯ ಮುಂಭಾಗದಲ್ಲಿ ಪ್ರವೇಶದ್ವಾರದ ಪಕ್ಕದಲ್ಲಿ ನಿಧಿಗಳಿವೆ. ಇವು ಗಾತ್ರದಲ್ಲಿ ಬಹುದೊಡ್ಡವಾಗಿವೆ.

ಈ ಗುಹೆಯನ್ನು ಉತ್ಖನನ ಮಾಡಿದ್ದು ಸುಮಾರು ಕ್ರಿ.ಶ.೭೦೦ರಲ್ಲಿ ಎಂದು ಕೆ.ಆರ್.ಶ್ರೀನಿವಾಸನ್ ಭಾವಿಸುತ್ತಾರೆ. ೮ನೇ ಶತಮಾನದ ಪ್ರಾರಂಭ ಎಂದು ಅದರ ಕಾಲವನ್ನು ಎಚ್.ಸರ್ಕಾರ್ ನಿರ್ಣಯಿಸುತ್ತಾರೆ. ಕೆ.ವಿ.ರಮೇಶ್ ಅದನ್ನು ಮಂಗಳೇಶನ ಆಳಿಕೆಯ ಕಾಲದ್ದೆಂದು ಹೇಳುತ್ತಾರೆ. ಕೆರೋಲ್ ರ್ಯಾಡ್‌ಕ್ಲಿಫ್ ಸು.ಕ್ರಿ.ಶ.೫೪೫-೫೫೫ ಎಂದು ಹೇಳುತ್ತಾರೆ. ಬಿ.ಆರ್.ಗೋಪಾಲ್ ಅವರು ಆರನೇ ಶತಮಾನದ ಮೊದಲ ದಶಕ ಎಂದು ನಿಗದಿಪಡಿಸುತ್ತಾರೆ.

ರಾವಣಫಡಿಯು, ಗರ್ಭಗೃಹ, ಸುಕನಾಸಿ, ಹಜಾರ ಎರಡು ಪಾರ್ಶ್ವಕೋಷ್ಠಗಳು, ನಂದಿವೇದಿಕೆ, ಧರ್ಮಸ್ತಂಭ, ಹಜಾರದಲ್ಲಿ ಒಂದು ಬಲಿಪೀಠ ಇತ್ಯಾದಿಗಳಿಂದ ಸಂಪೂರ್ಣವಾಗಿ ಬೆಳವಣಿಗೆ ಹೊಂದಿದ ಯೋಜನೆಯನ್ನು ಪ್ರತಿನಿಧಿಸುತ್ತದೆ. ಬಾದಾಮಿ ಚಾಲುಕ್ಯರ ಬೇರೆ ಯಾವ ಗುಹೆಯಲ್ಲೂ ರಾವಣಫಡಿಯಲ್ಲಿ ಕಾಣುವಷ್ಟು ಅಂಗಗಳನ್ನು ಕಾಣಲಾರೆವು. ಪೂರ್ಣವಿಕಾಸಗೊಂಡ ನಿರ್ಮಿತಿ ದೇವಾಲಯವೊಂದರ ಎಲ್ಲಾ ಅಂಗಗಳೂ ಇದರಲ್ಲಿ ಕಂಡುಬರುತ್ತವೆ. ವರಾಹ ಮತ್ತು ಮಹಿಷಾಸುರಮರ್ದಿನಿ ಶಿಲ್ಪಗಳು ಬೆಳವಣಿಗೆ ಹೊಂದಿವೆ, ಪ್ರಮಾಣೀಕೃತವಾಗಿವೆ. ಬಾದಾಮಿಯ ಗುಹೆಗಳಲ್ಲಿ ಭೂದೇವಿಯ ಶಿಲ್ಪದಲ್ಲಿ ಕ್ರಮೇಣ ಪರಿವರ್ತನೆ ಆದುದನ್ನು ನೋಡಬಹುದು. ಅಲ್ಲಿ ವರಾಹನ ಎಡ ಅಂಗೈ ಮೇಲೆ ನಿಂತು ಎಡ ಭುಜದ ಕಡೆಗೆ ಎತ್ತಲ್ಪಡುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿ ರಾವಣಪಡಿಯಲ್ಲಿ ಭೂದೇವಿಯು ವರಾಹನ ಎಡಭುಜದ ಮೇಲೆ ಕುಳಿತಿದ್ದಾಳೆ. ಇದು ಮುಂದೆ ವಿಜಯನಗರ ಕಾಲದ ಕೊನೆಯವರೆಗೂ ವರಾಹ ಮತ್ತು ಭೂದೇವಿಯರ ಪ್ರಮಾಣಿತ ರೂಪವಾಗಿ ಪರಿಣಿಸಿದೆ. ವಾಸ್ತುಶಿಲ್ಪ, ಶಿಲ್ಪಕಲೆ, ಮೂರ್ತಿಶಿಲ್ಪ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ, ಈ ಗುಹೆಯ ನಿರ್ಮಾಣಕಾಲವನ್ನು ಕ್ರಿ.ಶ. ೭ನೇ ಶತಮಾನದ ಎರಡನೆಯ ಪಾದ ಎಂದು ಹೇಳಬಹುದು.

ಬಾದಾಮಿ ಚಾಲುಕ್ಯರ ನಿರ್ಮಿತಿ ದೇವಾಲಯಗಳು ಬಹುತೇಕ ಬಾದಾಮಿ, ಮಹಾಕೂಟ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿಯೂ ಆಂಧ್ರಪ್ರದೇಶದ ಆಲಂಪುರ, ಪಾಪನಾಶನಂ, ಪಾನ್ಯಂ ಮತ್ತು ಸತ್ಯವೋಲುಗಳಲ್ಲಿಯೂ ಕೇಂದ್ರೀಕೃತವಾಗಿವೆ. ಇವಲ್ಲದೆ ಇತರ ನಿವೇಶನಗಳು ಕರ್ನಾಟಕದ ಬನವಾಸಿ, ಸಿದ್ಧನಕೊಳ್ಳ, ಸೂಳೇಭಾವಿ, ಬನಶಂಕರಿ, ಕೇಲೂರು, ಬಾಚನಗುಡ್ಡ, ಜಾಲಿಹಾಳ, ನಾಗನಾಥಕೊಳ್ಳ (ನಕ್ರಾಲ್), ಹುನಗುಂದ,  ಸುಬ್ಬಲಹುಣಸಿ ಮತ್ತು ಸಂಡೂರಿನ ಬಳಿ ಕುಮಾರಸ್ವಾಮಿ ಬೆಟ್ಟ; ಆಂಧ್ರಪ್ರದೇಶದ ಮಹಾನಂದಿ, ಸಂಗಮ (ಈಗ ಈ ದೇವಾಲಯವನ್ನು ಆಲಂಪುರಕ್ಕೆ ಸ್ಥಳಾಂತರಿಸಲಾಗಿದೆ), ಕದಮರಕಾಲವ, ಪಿಟಿಕಾಯಗುಳ್ಳ ಮತ್ತು ತಂಡ್ರಪಾಡು ಈ ಸ್ಥಳಗಳಲ್ಲಿವೆ. ಐಹೊಳೆ, ಬಾದಾಮಿ, ಮಹಾಕೂಟ, ಪಟ್ಟದಕಲ್ಲು ಮತ್ತು ಆಲಂಪುರಗಳಲ್ಲಿ ದೇವಾಲಯಗಳು ಸುಪ್ರಸಿದ್ಧವಾದವು.

ದೇವಾಲಯಗಳ ವೈವಿಧ್ಯದಿಂದ ಬೇರೆ ಯಾವ ಸ್ಥಳವೂ ಐಹೊಳೆಯಷ್ಟು ಸಮೃದ್ಧವಾಗಿಲ್ಲ. ಹೀಗೆ ಬೇರೆ ಬೇರೆ ಸಂಪ್ರದಾಯ ಮತ್ತು ಶೈಲಿಗಳಿಗೆ ಸೇರಿದ ದೇವಾಲಯಗಳನ್ನು ಭಾರತದ ಬೇರೆ ಯಾವ ಸ್ಥಳದಲ್ಲೂ ನೋಡಲು ಸಾಧ್ಯವಿಲ್ಲ. ವೈವಿಧ್ಯ ಇಲ್ಲಿ ಎದ್ದುಕಾಣುತ್ತದೆ. ಬೇರೆ ಬೇರೆ ಬಗೆಯ ದೇವಾಲಯ ಶೈಲಿಗಳನ್ನು ಬೆಳೆಸುವ ಕಡೆಗೆ ವಾಸ್ತುಶಿಲ್ಪಗಳು ಇಲ್ಲಿ ಗಮನವನ್ನು ಕೇಂದ್ರೀಕರಿಸಿದರು. ಸಂಧಾರ ಮತ್ತು ನಿರಂಧಾರ ಎರಡೂ ಬಗೆಯ ದೇವಾಲಯಗಳನ್ನು ಅವರು ಕಟ್ಟಿದರು. ಮೇಗುತಿ, ಹುಚ್ಚಮಲ್ಲಿ ಗುಡಿ, ದುರ್ಗಾ, ಭಗವತಿ (ಗೌಡರ ಗುಡಿ) ಮತ್ತು ಚೆಕ್ಕೆಗುಡಿಗಳು ಸಂಧಾರ ಮಾದರಿಯವಾದರೆ, ತಾರಪ್ಪ, ಹುಚ್ಚಪ್ಪಯ್ಯಗುಡಿ, ಹುಚ್ಚಪ್ಪಯ್ಯನ ಮಠ, ಗಳಗನಾಥ, ಸೂರ್ಯ, ಚಕ್ರಗುಡಿ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ನಿರಂಧಾರ ಬಗೆಯವು. ಚಾಲುಕ್ಯ ವಾಸ್ತುಶಿಲ್ಪಿಗಳು ರೇಖಾನಗರ ಶಿಖರಗಳಿರುವ ದೇವಾಲಯಗಳನ್ನು ನಿರ್ಮಿಸಿದರು. ಹುಚ್ಚಮಲ್ಲಿಗುಡಿ, ದುರ್ಗಾ, ಚಕ್ರಗುಡಿ, ಸೂರ್ಯ ಮತ್ತು ಹುಚ್ಚಪ್ಪಯ್ಯ ಗುಡಿ ಇಂಥವು: ಹಾಗೆಯೇ ಕದಂಬ ನಾಗರ ಶಿಖರಗಳಿರುವ ದೇವಾಲಯಗಳನ್ನೂ ಕಟ್ಟಿದರು. ಮಲ್ಲಿಕಾರ್ಜುನ ಮತ್ತು ಗಳಗನಾಥ ಇಂತಹ ದೇವಾಲಯಗಳು ದ್ರಾವಿಡ ಶಿಖರದಿಂದ ಕೂಡಿದ ಬಾದಾಮಿ ಚಾಲುಕ್ಯರ ಅತಿ ಪ್ರಾಚೀನ ದೇವಾಲಯಗಳಲ್ಲಿ ಒಂದು. ಇರುವ ಗರ್ಭಗೃಹದ ಮೇಲೆ ಇನ್ನೊಂದು ಗರ್ಭಗೃಹವನ್ನು ನಿರ್ಮಿಸಿ ಅಂತಸ್ತುಗಳ ದೇವಾಲಯವನ್ನು ಕಟ್ಟುವ ಪ್ರಯೋಗವನ್ನೂ ಮಾಡಲಾಯಿತು. ಲಾಡ್‌ಖಾನ್ ದೇವಾಲಯದಲ್ಲಿ ಇದನ್ನು ನೋಡಬಹುದು, ಲೌಕಿಕ ಉಪಯೋಗಗಳಿಗಾಗಿ ವಿಶಾಲವಾದ ಸಭಾಭವನಗಳನ್ನು ನಿರ್ಮಿಸಲಾಯಿತು. ಮುಂದೆ ಇವುಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸಲಾಯಿತು. ಲಾಡ್‌ಖಾನ್ ದೇವಾಲಯದಲ್ಲಿ ಹೀಗೆ ಮಾಡಿರುವುದು ಕಂಡುಬರುತ್ತದೆ.

ದೇವಾಲಯದ ಯೋಜನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಐಹೊಳೆಯಲ್ಲಿ, ಎಲ್ಲವೂ ಏಕಕೂಟವೇ ಆದರೂ ವಿಧವಿಧವಾದ ಯೋಜನೆಗಳು ಪ್ರವರ್ತಿಸುವುದನ್ನು ನೋಡುತ್ತೇವೆ. ಅತಿ ಸರಳವಾದ ಯೋಜನೆಯಲ್ಲಿ ಒಂದು ಗರ್ಭಗೃಹ ಮತ್ತು ಕಂಬಗಳಿರುವ ಕೈಸಾಲೆ ಇರುತ್ತವೆ. ಇದಕ್ಕೆ ಉದಾಹರಣೆ ರಾವಣಫಡಿ ಸಮೀಪದ ಸಣ್ಣಗುಡಿ. ಹುಚ್ಚಯಲ್ಲಿಗುಡಿ ಮತ್ತು ಮೇಗುತಿಗಳಲ್ಲಿ ಒಂದು ಪ್ರದಕ್ಷಿಣಪಥವಿರುತ್ತದೆ. ಈ ದೇವಾಲಯಗಲಲ್ಲಿ ಅದು ಆವೃತ ವಾಗಿರುವ ಮಾದರಿಯಾದರೆ, ಭಗವತಿ ದೇವಾಲಯ(ಗೌಡರಗುಡಿ)ದ ಪ್ರದಕ್ಷಿಣ ಪಥವು ತೆರೆದದ್ದು. ಕಂಬಗಳಿರುವ ತೆರೆದ ಹಜಾರದಲ್ಲಿ ಗರ್ಭಗೃಹವಿರುವುದರಿಂದ ತೆರೆದ ಪ್ರದಕ್ಷಿಣ ಪಥವು ನಿರ್ಮಾಣವಾಗಿದೆ.

ಮೇಗುತಿಯ ಇನ್ನೂ ಸ್ವಲ್ಪ ಬೆಳವಣಿಗೆಯಿರುವಂಥದು. ಗರ್ಭಗೃಹ, ಪ್ರದಕ್ಷಿಣ ಪಥ, ಸುಕನಾಸಿ, ಅರ್ಧಮಂಟಪ ಮತ್ತು ಕಂಬಗಳಿರುವ ಹಜಾರ ಇವೆ. ಇವುಗಳ ಜೊತೆಗೆ ಮೇಲೊಂದು ಗರ್ಭಗೃಹ ಮತ್ತು ಒಂದು ಕೈಸಾಲೆ (ಈಗ ಇದರ ತಳಪಾಯ ಹೊರತು ಮಿಕ್ಕದ್ದೆಲ್ಲ ಹಾಳಾಗಿದೆ) ಇವೆ. ಕೊಂತಗುಡಿಯಲ್ಲಿ ಮುಂದೆ ಒಂದು ಆಯಾಕಾರದ ಹಜಾರವಿದೆ, ಪಕ್ಕ ಗೋಡೆಗಳ ಅರ್ಧ ಭಾಗ ತೆರೆದಿದೆ. ಹಿಂದಿನ ಗೋಡೆಗೆ ತಾಗಿದಂತೆ ಗರ್ಭಗೃಹವಿದೆ. ಲಾಡ್‌ಖಾನ್ ದೇವಾಲಯದಲ್ಲೂ ಯೋಜನೆ ಕೊಂತಗುಡಿಯ ಬಗೆಯದೇ ಆದರೂ ಅಲ್ಲಿ ಹಜಾರವು ಚೌಕವಾಗಿದೆ ಮತ್ತು ಗರ್ಭಗುಡಿ ಆಮೇಲಿನ ಸೇರ್ಪಡೆ. ಲಾಡ್‌ಖಾನ್‌ದ ಮುಂಭಾಗದಲ್ಲಿ ಒಂದು ಆಯಾಕಾರದ ಕೈಸಾಲೆಯಿದೆ. ಇವುಗಳನ್ನು ಅನೇಕ ವೇಳೆ ಮಂಟಪಮಾದರಿ ದೇವಾಲಯಗಳೆಂದು ಕರೆಯುತ್ತಾರೆ.

ಗಜಪೃಷ್ಠ ಯೋಜನೆಯಂತೆ ಕಟ್ಟಿದ ದೇವಾಲಯಗಳು ಚಾಲುಕ್ಯರಲ್ಲಿ ತುಂಬಾ ವಿರಳ. ಇದುವರೆಗೆ ಈ ಬಗೆಯ ಆರು ದೇವಾಲಯಗಳು ಮಾತ್ರ ತಿಳಿದುಬಂದಿವೆ. ಇವುಗಳಲ್ಲಿ ಎರಡು ಐಹೊಳೆಯಲ್ಲೂ, ಹಳೆ ಮಹಾಕೂಟ, ಸತ್ಯವೋಲು, ಪಿಟಿಕಾಯಗುಳ್ಳ ಮತ್ತು ಪಾಪನಾಶನಂಗಳಲ್ಲಿ ಒಂದೊಂದೂ ಕಂಡುಬರುತ್ತವೆ. ಐಹೊಳೆಯ ಚಕ್ಕೆಗುಡಿಯ ಬಳಿ ಇರುವ ಇಂತಹ ಒಂದು ದೇವಾಲಯವು ತಳಪಾಯ ಮತ್ತು ಬಾಗಿಲ ಚೌಕಟ್ಟು ಹೊರತು ಮಿಕ್ಕದ್ದೆಲ್ಲ ಶಿಥಿಲವಾಗಿದೆ. ಇಂಥದೇ ಇನ್ನೊಂದು, ಐಹೊಳೆಯ ದುರ್ಗಾ ದೇವಾಲಯ. ಅದರ ಯೋಜನೆ ವಿಶಿಷ್ಟವಾಗಿದೆ. ಹುಚ್ಚಮಲ್ಲಿಗುಡಿ ಮತ್ತು ಭಗವತಿ ದೇವಾಲಯಗಳಲ್ಲಿ ಕಂಡುಬರುವ ಆವೃತ ಮತ್ತು ಅನಾವೃತ ಪ್ರದಕ್ಷಿಣ ಪಥಗಳ ಲಕ್ಷಣಗಳನ್ನು ಹದವಾಗಿ ಮೇಳೈಸಿಕೊಂಡಿದೆ. ದೀರ್ಘವ್ಯಾಸವುಳ್ಳ ಒಂದು ಗರ್ಭಗೃಹ, ಮುಚ್ಚಿದ ಪ್ರದಕ್ಷಿಣ ಪಥ, ಒಂದು ಸಭಾಮಂಟಪ, ಕಂಬಗಳಿರುವ ಕೈಸಾಲೆ ಇವೆಲ್ಲವನ್ನೂ ಒಳಗೊಂಡ ಅರೆ ತೆರೆದ ಹೊರ-ಪ್ರದಕ್ಷಿಣ ಪಥ ಇವೆ. ದುರ್ಗಾದೇವಾಲಯ ಯೋಜನೆಯ ಒಂದು ಹೆಚ್ಚಿನ ಅಂಶ, ದಕ್ಷಿಣ ಪಾರ್ಶ್ವದಲ್ಲಿ ಒಂದು ಪ್ರವೇಶ ದ್ವಾರ. ಐಹೊಳೆಯ ಬೇರೆ ಯಾವ ದೇವಾಲಯದಲ್ಲೂ ಇಂಥದೊಂದು ದ್ವಾರವಿಲ್ಲ.

ಬೇರೆ ಕಡೆಗಳಲ್ಲಿ ಕಂಡುಬರುವ ಚಾಲುಕ್ಯ ಕಾಲದ ಎರಡು ದೇವಾಲಯ ಯೋಜನೆಗಳನ್ನು ಗಮನಿಸುವುದು ಇಲ್ಲಿ ಸೂಕ್ತವಾಗಿದೆ. ಬಾದಾಮಿಯ ಜಂಬುಲಿಂಗ ದೇವಾಲಯದ ಅಸಾಧಾರಣತ್ವವನ್ನು ಆಗಲೇ ಗಮನಿಸಿದ್ದಾಗಿದೆ. ಅದೊಂದು ತ್ರಿಕೂಟ ದೇವಾಲಯ. ಮೂರು ದಿಕ್ಕುಗಳಿಗೆ ಮುಖ ಮಾಡಿದ ಮೂರು ಗರ್ಭಗೃಹಗಳು, ಒಂದು ದೊಡ್ಡ ಚೌಕವಾದ ಸಭಾಮಂಟಪ, ಮುಂದುಗಡೆ ಆಯತಾಕಾರದ ಕೈಸಾಲೆ ಇವೆ. ಚಾಲುಕ್ಯ ಕಾಲದ ತ್ರಿಕೂಟ ದೇವಾಲಯ ಇದೊಂದೇ ಆಗಿದ್ದು, ಮುಂದೆ ಕರ್ನಾಟಕದಲ್ಲಿ ನಿರ್ಮಿಸಿದ ತ್ರಿಕೂಟಗಳಿಗೆ ಮಾದರಿಯಾಗಿ ಪರಿಣಮಿಸಿತು. ಅಷ್ಟೇಕೆ, ಇಡೀ ದಕ್ಷಿಣ ಭಾರತದಲ್ಲೇ ನಿರ್ಮಿತರೂಪದ ಏಕೈಕ ಪ್ರಾಚೀನ ತ್ರಿಕೂಟ ದೇವಾಲಯ ಇದು.

ಗಮನಿಸಬೇಕಾದ ಇನ್ನೊಂದು ಯೋಜನೆ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ್ದು. ಇದು ಚಾಲುಕ್ಯರ ಕಾಲದ ಅತ್ಯಂತ ವಿಸ್ತಾರವಾಗಿ ಯೋಜಿಸಿದ ದೇವಾಲಯ ಸಮುಚ್ಚಯ. ಗರ್ಭಗೃಹ, ಪ್ರದಕ್ಷಿಣ ಪಥ, ಸಭಾಮಂಟಪ, ಅದರೊಳಗೇ ಮಹಿಷಮರ್ದಿನಿ ಮತ್ತು ಗಣೇಶರಿಗಾಗಿ ಎರಡು ಸಣ್ಣ ಗುಡಿಗಳು ಇವೆ. ಸಭಾಮಂಟಪಕ್ಕೆ ತಾಗಿದಂತೆ ಮೂರೂ ಪಕ್ಕಗಳಲ್ಲಿ ಸಣ್ಣ ಕೈಸಾಲೆಗಳಿವೆ. ದೇವಾಲಯದ ಮುಂದೆ, ದೊಡ್ಡದಾದ, ಚೌಕನಾದ, ತೆರೆದ ನಂದಿ ಮಂಟಪವಿದೆ. ಒಂದು ಅಂಗಳ, ಅದರ ಸುತ್ತ ಪ್ರಾಕಾರ ಗೋಡೆ, ಪೂರ್ವ ಮತ್ತು ಪಶ್ಚಿಮಗಳಲ್ಲಿ ಪ್ರವೇಶದ್ವಾರಗಳು ಇವೆ. ಪ್ರಾಕಾರದುದ್ದಕ್ಕೂ ಪರಿವಾರ ದೇವತೆಗಳಿಗಾಗಿ ಗುಡಿಗಳಿವೆ, ಸಪ್ತಮಾತೃಕೆಯರ ಗುಡಿಯೂ ಇಲ್ಲೇ ಸೇರಿದೆ.

ಲಾಡ್‌ಖಾನ್, ಮೇಗುತಿ, ಹುಚ್ಚಿಮಲ್ಲಿಗುಡಿ, ಮಲ್ಲಿಕಾರ್ಜುನ, ದುರ್ಗಾ, ಹುಚ್ಚಪ್ಪಯ್ಯ ಗುಡಿ ಮತ್ತು ತಾರಪ್ಪ ಇವು ಐಹೊಳೆಯಲ್ಲಿ; ಬಾದಾಮಿಯ ಮೂರು ಶಿವಾಲಯಗಳು ಮತ್ತು ಜಂಬುಲಿಂಗ; ಮಹಾಕೂಟದ ಮಹಾಕೂಟೇಶ್ವರ ಮತ್ತು ಬಾಣಂತಿಗುಡಿ; ಪಟ್ಟದಕಲ್ಲಿನ ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ ಪಾಪನಾಥ ಮತ್ತು ಗಳಗನಾಥ; ಆಲಂಪುರದ ಸ್ವರ್ಗಬ್ರಹ್ಮ ಮತ್ತು ವಿಶ್ವಬ್ರಹ್ಮ ದೇವಾಲಯ-ಇವು ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ವಿಕಾಸವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ನದಿ ದಡದಲ್ಲೊ, ಕೆರೆ ಅಥವಾ ಬಾವಿಯ ಬಳಿಯೋ ಕಟ್ಟಿದ ಚಾಲುಕ್ಯ ದೇವಾಲಯಗಳಲ್ಲಿ ಎಷ್ಟೋ ಸಮಾನ ಅಂಶಗಳಿರುತ್ತವೆ. ಬಿಡಿ ಬಿಡಿಯಾಗಿ ಅವುಗಳಲ್ಲಿ ಹೆಚ್ಚಿನ ಅಂಶಗಳಿರಬಹುದು.

ಚಾಲುಕ್ಯ ದೇವಾಲಯಗಳು ಒಂದು ಅಧಿಷ್ಠಾನದ ಮೇಲೆ ನಿಲ್ಲುತ್ತವೆ. ಅದರಲ್ಲಿ ಆಳವಾದ ಗಳವೂ, ಯಕ್ಷರ ಉಬ್ಬುಶಿಲ್ಪದ ಅಲಂಕಾರವೂ ಕಂಡುಬರುತ್ತದೆ. ಮೇಲೆ ಕಪೋತ ಅಚ್ಚುಗಳಿರುತ್ತವೆ. ಸಾಮಾನ್ಯವಾಗಿ ಕಪೋತದ ಮೇಲೆ ಮಾನವ ಶಿರ ಅಥವಾ ಹೂವುಗಳ ಶಿಲ್ಪ ತುಂಬಿದ ಚೈತ್ಯಗಳನ್ನು ಕೆತ್ತಲಾಗಿರುತ್ತದೆ. ಕೆಲವೊಮ್ಮೆ ವೃತ್ತ ಅಥವಾ ತ್ರಿಪಟ್ಟಿ ಅಥವಾ ಬಹುಮುಖಗಳುಳ್ಳ ಕುಮುದ ಇವು ದೊಡ್ಡ ದೇವಾಲಯಗಳ ಅಧಿಷ್ಠಾನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ.

ಗೋಡೆಗಳು ಯಾವುದೇ ಮುಂಚಾಚು ಆಗಲಿ ಗೂಡಾಗಲಿ ಇಲ್ಲದೆ ಸಪಾಟಾಗಿರಬಹುದು ಹುಚ್ಚಮಲ್ಲಿ ಗುಡಿಯಲ್ಲಿನಂತೆ; ಇಲ್ಲವೆ ಅವು ಐಹೊಳೆಯ ಮಲ್ಲಿಕಾರ್ಜುನ ದೇವಾಲಯದಂತೆ ಇರಬಹುದು. ಹೊರಗೋಡೆಗಳ ಸಾಮಾನ್ಯ ಅಲಂಕರಣವು ಚಾಚುಗಳನ್ನೂ ದೇವಕೋಷ್ಠ ಗಳನ್ನೂ ಜಾಲಾಂಧ್ರಗಳು ಮತ್ತು ಗೋಡೆಗಂಬಗಳನ್ನೂ ಒಳಗೊಂಡಿರುತ್ತದೆ. ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಐಹೊಳೆಯ ದುರ್ಗಾ ದೇವಾಲಯಗಳಲ್ಲಿ ದೊಡ್ಡ ದೊಡ್ಡ ಶಿಲ್ಪಗಳಿರುವ ಅನೇಕ ದೇವಕೋಷ್ಠಗಳಿರುತ್ತವೆ. ಬಹುಮಟ್ಟಿಗೆ ಇವು ದುರ್ಗಾ, ಹುಚ್ಚಪ್ಪಯ್ಯನ ಗುಡಿ ಮತ್ತು ಮೇಗುತಿಗಳಲ್ಲಿ ಕಂಡುಬರುವಂತೆ ಕೋಷ್ಠಗಳಲ್ಲಿರಿಸಿದ ಬಿಡಿ ಶಿಲ್ಪಗಳು. ಹಾಗಾಗಿ ಅನೇಕ ಸಂದರ್ಭಗಳಲ್ಲಿ ಈ ಬಿಡಿ ಶಿಲ್ಪಗಳು ಕಣ್ಮರೆಯಾಗಿವೆ. ಪಟ್ಟದಕಲ್ಲಿನ ವಿರೂಪಾಕ್ಷದಲ್ಲಿ ಈ ಶಿಲ್ಪಗಳನ್ನು ಗೋಡೆಯ ಕೋಷ್ಠದೊಳಗೆ ಕೆತ್ತಲಾಗಿದೆ. ಕೋಷ್ಠಗಳ ಒಂದು ಲಕ್ಷಣ, ಅವುಗಳ ಮೇಲುಭಾಗದಲ್ಲಿ ಮಕರತೋರಣವೋ ಅಥವಾ ಚೈತ್ಯವೋ ಇರುವುದು. ಪಾಪನಾಥ ದೇವಾಲಯದ ಕೋಷ್ಠಗಳ ನೆತ್ತಿಯ ಮೇಲೆ ಕಿರಿದಾದ ಚೈತ್ಯಗಳ ಸಾಲಿದೆ.

ಅನೇಕ ದೇವಾಲಯಗಳ ಹೊರಗೋಡೆಗಳ ಅಂತರ್ಗತ ಭಾಗವಾಗಿರುವ ಜಾಲಂಧ್ರಗಳು ಮೊದಮೊದಲಿನ ದೇವಾಲಯಗಳಲ್ಲಿ ಸಣ್ಣದಾಗಿವೆ ಮತ್ತು ಸರಳವಾಗಿವೆ. ಐಹೊಳೆಯ ಹುಚ್ಚಿಮಲ್ಲಿಗುಡಿ ಮತ್ತು ಬಾದಾಮಿಯ ಮೇಲು ಶಿವಾಲಯಗಳಲ್ಲಿ ಇದನ್ನು ನೋಡಬಹುದು. ಆದರೆ ೭ನೇ ಶತಮಾನದ ಕೊನೆಯ ವರ್ಷಗಳಲ್ಲೂ ೮ನೇ ಶತಮಾನದಲ್ಲೂ ಕಟ್ಟಿದ ದೇವಾಲಯಗಳಲ್ಲಿ ಇವನ್ನು ವಿಸ್ತಾರವಾಗಿ ಯೋಜಿಸಿ ನಿರ್ವಹಿಸಲಾಗಿದೆ. ಲಾಡಖಾನದ ಜಾಲಂಧ್ರಗಳು ತುಂಬಾ ದೊಡ್ಡವು (೨.೯. ಮೀ. ೧.೧೭ ಮೀ). ಹಾಗೆಯೇ ಐಹೊಳೆಯ ಚೆಕ್ಕಿಗುಡಿಯಲ್ಲೂ ಕೂಡ. ೮ನೇ ಶತಮಾನದ ದೇವಾಲಯಗಳಲ್ಲಿ, ವಿಶೇಷವಾಗಿ ಪಟ್ಟದಕಲ್ಲಿನಲ್ಲಿ ಶಿಲ್ಪಿಗಳು ಜಾಲಂಧ್ರಗಳಲ್ಲಿ ಹೆಚ್ಚಿನ ಕೌಶಲವನ್ನೂ ಕಲ್ಪನಾಚಾತುರ್ಯವನ್ನೂ ಪ್ರದರ್ಶಿಸಿದ್ದಾರೆ. ಪ್ರಾಣಿ-ಪಕ್ಷಿಗಳ ಮೋಹಕ ವಿನ್ಯಾಸಗಳ ಜೊತೆಗೆ ಹೂವು-ಬಳ್ಳಿಗಳು ಮತ್ತು ರೇಖಾಗಣಿತೀಯ ವಿನ್ಯಾಸಗಳನ್ನು ಸೇರಿಸಿದ್ದಾರೆ. ವಿರೂಪಾಕ್ಷ ಮತ್ತು ಪಾಪನಾಥ ದೇವಾಲಯಗಳ ಜಾಲಂಧ್ರಗಳು ಅತ್ಯಂತ ರಮಣೀಯವಾಗಿವೆ. ಈ ಕಾಲದಲ್ಲಿ ಜಾಲಂಧ್ರದಲ್ಲಿ ಅಳವಡಿಸಲು ಮತ್ಸ್ಯಚಕ್ರ ಶಿಲ್ಪವನ್ನು ಬಹುವಾಗಿ ಇಷ್ಟಪಡುತ್ತಿದ್ದರೆಂದು ತೋರುತ್ತದೆ. ಐಹೊಳೆಯ ಲಾಡ್‌ಖಾನ್ ಮತ್ತು ದುರ್ಗಾ, ಬಾದಾಮಿಯ ಮೇಲು ಶಿವಾಲಯ, ಮಹಾಕೂಟದ ಮಲ್ಲಿಕಾರ್ಜುನ ದೇವಾಲಯಗಲಲ್ಲಿ ಇದನ್ನು ನೋಡಬಹುದು. ಮತ್ಸ್ಯಚಕ್ರ ಪಟ್ಟಿಕೆಯು ಮೊದಲು ಕಾಣಿಸಿಕೊಳ್ಳುವುದು ಬಾದಾಮಿಯ ವೈಷ್ಣವ ಗುಹಾದೇವಾಲಯದ ಚಾವಣಿಯಲ್ಲಿ.

ದೊಡ್ಡ ದೇವಾಲಯಗಳಲ್ಲಿ ಕಂಡುಬರುವ ಒಂದು ವಿಶಿಷ್ಟ ಕ್ಷಣ ಸೂರುಗಳ ಒಳಭಾಗದ ಅಲಂಕರಣ. ಬಾತುಕೋಳಿಗಳ ಸಾಲು ಜೋಡಣೆಯ ವಿನ್ಯಾಸ ಮನಸೆಳೆಯುತ್ತದೆ. ಐಹೊಳೆಯ ಲಾಡಖಾನ್‌ದಲ್ಲಿ ಗಿಣಿಗಳು, ಹಂಸಗಳು ಹಾರಗಳನ್ನು ಹಿಡಿದುಕೊಂಡಿರುವಂತೆ ನಿರೂಪಿತವಾಗಿೆ.

ೇವಾಲಯದ ಒಳಗೆ ಒಂದು ಮಧ್ಯಾಂಗಣ, ಪಕ್ಕದ ದಾರಿಗಳು, ಗರ್ಭಗೃಹದ ಎದುರಿಗಿರುವ ಕಂಬಗಳ ಸಾಲು ಇರುತ್ತವೆ. ಮಧ್ಯಾಂಗಣದ ಚಾವಣಿಯು ಯಾವಾಗಲೂ ಚಪ್ಪಟೆ, ಆದರೆ ಪಕ್ಕಹಾದಿಯ ಮೇಲಿನ ಚಾವಣಿ ಇಳಿಜಾರಾಗಿದೆ. ಹೀಗೆ ಇಳುಕಲಾದ ಚಾವಣಿಯು ಬಾದಾಮಿ ಚಾಲುಕ್ಯ ದೇವಾಲಯಗಳ ಒಂದು ಲಕ್ಷಣವಾಗಿದೆ. ಐಹೊಳೆಯ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಅನೇಕ ಸಂದರ್ಭಗಳಲ್ಲಿ ಮಧ್ಯಾಂಗಣದ ಚಾವಣಿಯಲ್ಲಿ ಬ್ರಹ್ಮ, ಶಿವ, ವಿಷ್ಣು ಮೊದಲಾದ ಶಿಲ್ಪಗಳನ್ನು ನೋಡುತ್ತೇವೆ. ಸಾಮಾನ್ಯವಾಗಿ ಕಂಡುಬರುವ ಇತರ ಶಿಲ್ಪಗಳೆಂದರೆ ಅಷ್ಟದಿಕ್ಪಾಲಕರು, ನಾಗರಾಜ ಇಲ್ಲವೆ ತ್ರೈಪುರುಷ ಶಿಲ್ಪಗಳು. ನಾಗನಾಥ, ಜಂಬುಲಿಂಗದ ದೇವಾಲಯಗಳಲ್ಲಿ; ಹುಚ್ಚಪ್ಪಯ್ಯ ಗುಡಿ, ಹುಚ್ಚಪ್ಪಯ್ಯ ಮಠ ಮತ್ತು ಕೊಂಡಗುಡಿಗಳಲ್ಲಿ ಇವು ಕಂಡುಬರುತ್ತವೆ. ನಾಗನಾಥ ದೇವಾಲಯದಲ್ಲಿ ತ್ರೈಪುರುಷ ಶಿಲ್ಪದ ಫಲಕದೊಂದಿಗೆ ನಾಗರಾಜ ಮತ್ತು ಅಷ್ಟದಿಕ್ಪಾಲಕರ ವಿಗ್ರಹಗಳನ್ನು ನೋಡುತ್ತೇವೆ.

ಬಾದಾಮಿ ಚಾಲುಕ್ಯರ ದೇವಾಲಯಗಳ ಬಾಗಿಲುವಾಡವನ್ನು ಸಾಮಾನ್ಯವಾಗಿ ಬಹು ಸುಂದರವಾಗಿ ಕೆತ್ತಲಾಗಿರುತ್ತದೆ. ಗುಲಾಬಿ ಹೂವು ಪಟ್ಟಿಕೆಗಳು, ಹೂವು ವಿನ್ಯಾಸಗಳು, ಚಾಚು ಕಂಬಗಳು ಮತ್ತು ಎಲೆಗಳ ಅಲಂಕಾರಗಳಿಂದ ಅವು ಮನಸೆಳೆಯುತ್ತವೆ. ಇಲ್ಲಿ ಬಹಳ ಸ್ವಾರಸ್ಯವಾದ ವಿಚಾರ ಸೆಜ್ಜದ ಮೇಲಿರುವ ಗರುಡನ ಶಿಲ್ಪ ಹಾರುತ್ತಿರುವ ಭಂಗಿಯಲ್ಲಿ ಶಿಲ್ಪಿತವಾಗಿರುವುದು. ರೆಕ್ಕೆಗಳು ಹರಡಿಕೊಂಡು, ಸರ್ಪಗಳ ಬಾಲಗಳನ್ನೊ ತಲೆಗಳನ್ನೊ ಹಿಡಿದುಕೊಂಡು ಅವು ನಿಂತಿರುವಂತಿದೆ. ಚಾಲುಕ್ಯ ಬಾಗಿಲ ಚೌಕಟ್ಟುಗಳಲ್ಲಿ ಈ ಫಲಕವನ್ನು ಅಲಂಕಾರವಾಗಿಯೂ ಮಂಗಳಕರವಾದ ವೈಷ್ಣವ ಸಂಕೇತವಾಗಿಯೂ ಬಳಸಲಾಗುತ್ತದೆ. ಸುಂದರವಾದ, ಕುಸುರಿ ಕೆತ್ತನೆ ಮಾಡಿದ ಬಾಗಿಲ ಚೌಕಟ್ಟುಗಳನ್ನು ಐಹೊಳೆಯ ಭಗವತಿ ದೇವಾಲಯದಲ್ಲಿ (ಗೌಡರ ಗುಡಿ) ನೋಡಬಹುದು.

ಗರ್ಭಗೃಹದ ಬಾಗಿಲಿನ ಸುತ್ತಲಂಕಾರವು ಹೆಚ್ಚು ಕಡಿಮೆ ಎಲ್ಲಾ ಬಾದಾಮಿ ಚಾಲುಕ್ಯ ದೇವಾಲಯದಲ್ಲಿ ಸ್ವಾರಸ್ಯವಾಗಿರುತ್ತದೆ. ಅದರಲ್ಲಿ ಮೂರು ದೊಡ್ಡ ಚೈತ್ಯ ಗೂಡುಗಳಿರುತ್ತವೆ. ಇವುಗಳಲ್ಲಿ ದೇವತಾ ಮೂರ್ತಿಗಳ ಕಿರು ಉಬ್ಬುಶಿಲ್ಪಗಳು ಕಾಣಿಸುತ್ತವೆ. ಮಧ್ಯದ ಚೈತ್ಯದಲ್ಲಿರುವ ಕಿರಿ ಶಿಲ್ಪವು ಗರ್ಭಗೃಹದಲ್ಲಿ ಪ್ರತಿಷ್ಠೆ ಮಾಡಿರುವ ದೇವ ವಿಗ್ರಹದೊಂದಿಗೆ ಸಂಬಂಧಪಟ್ಟಿರುತ್ತದೆ. ಶೈವ ದೇವಾಲಯಗಳಲ್ಲಿ ಸಾಮಾನ್ಯವಾಗಿ ನಟರಾಜ ಅಥವಾ ವೃಷಭವಾಹನ, ಶಿವಲಿಂಗ ಇದು ಯಾವುದನ್ನಾದರೂ ಮಧ್ಯ ಚೈತ್ಯದಲ್ಲಿ ತೋರಿಸಿ, ಮಿಕ್ಕ ಎರಡರಲ್ಲಿ, ಬ್ರಹ್ಮ ಮತ್ತು ವಿಷ್ಣು ಇವರ ಉಬ್ಬುಶಿಲ್ಪಗಳನ್ನು ಅಳವಡಿಸಲಾಗಿರುತ್ತದೆ. ಸೂರ್ಯ ದೇವಾಲಯದ ಮಧ್ಯ ಚೈತ್ಯದಲ್ಲಿ ಸೂರ್ಯನ ಕಿರುಶಿಲ್ಪವೂ, ಶಕ್ತಿದೇವಾಲಯದಲ್ಲಿ ಗಜಲಕ್ಷ್ಮಿಯ ಶಿಲ್ಪವೂ ಕಂಡುಬರುತ್ತವೆ. ಭಗವತಿ ದೇವಾಲಯದಲ್ಲಿ ಇದನ್ನು ನೋಡಬಹುದು. ಐಹೊಳೆಯ ಬೌದ್ಧಗುಹೆಯ ಮಧ್ಯಗೂಡು, ಬುದ್ಧನು ವ್ಯಾಖ್ಯಾನ ಮುದ್ರೆಯಲ್ಲಿ ಕುಳಿತಿರುವ ಶಿಲ್ಪವನ್ನು ಒಳಗೊಂಡಿದೆ.

ಬಾದಾಮಿ ಚಾಲುಕ್ಯರ ನಿರ್ಮಿತಿ ದೇವಾಲಯಗಳ ಸ್ತಂಭಗಳು ಮೂಲತಃ ಚೌಕಾಕಾರ ದಲ್ಲಿವೆ. ಕೆಲವೊಮ್ಮೆ ಕಾಂಡದ ಮೇಲ್ಭಾಗದಲ್ಲಿ ಎಂಟು ಮೂಲೆಯ ಕಂಠಭಾಗವಿರುತ್ತದೆ. ಕೆತ್ತನೆ ಮಾಡಿದ ಪಟ್ಟೆಗಳು, ಅರ್ಧ ಅಥವಾ ಪೂರ್ಣ ಪದಕಾಲಂಕಾರಗಳು ಕಂಬಗಳ ಮೇಲಿವೆ. ಐಹೊಳೆಯ ಲಾಡ್‌ಖಾನ್ ಮತ್ತು ದುರ್ಗಾ ದೇವಾಲಯಗಳಲ್ಲಿ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ಗುಡಿಗಳಲ್ಲಿ ಕಂಬಗಳ ಮೇಲೆ ಕಿರಿಗಾತ್ರದ ಉಬ್ಬುಶಿಲ್ಪಗಳಿವೆ. ಮಹಾಕಾವ್ಯಗಳು ಮತ್ತು ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಸಂದರ್ಭಗಳನ್ನು ಈ ಕಂಬಗಳ ಪಟ್ಟೆಗಳ ಮೇಲೆ ಬಿಡಿಸಲಾಗಿದೆ. ಮೇಲಿನ ದೇವಾಲಯ ಕಂಬಗಳ ಪದಕಗಳಲ್ಲಿ ಪಂಚತಂತ್ರದ ದೃಶ್ಯಗಳೂ ಇವೆ. ಕಾಂಡದ ಮೇಲಿನ ಚಾಚು ಬಾಗಿರುತ್ತದೆ ಅಥವಾ ತರಂಗ ಮಾದರಿಯು ಅಚ್ಚಾಗಿರುತ್ತದೆ.

೭ನೇ ಶತಮಾನದ ಕೊನೆಯಲ್ಲಿ ಮತ್ತು ೮ನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯಗಳಲ್ಲಿ ಮಾತ್ರ ಕಂಡುಬರುವ ಇನ್ನೊಂದು ಬಗೆಯ ಕಂಬಗಳಲ್ಲಿ, ಕಾಂಡದ ಹೊರಮುಖದ ಮೇಲೆ ದೊಡ್ಡದೊಂದು ಶಿಲ್ಪವನ್ನು ಕೆತ್ತಲಾಗಿರುತ್ತದೆ. ಇಂತಹ ಕಂಬಗಳನ್ನು ನಾಗನಾಥ, ಲಾಡ್‌ಖಾನ್, ಹುಚ್ಚಪ್ಪಯ್ಯಗುಡಿ, ಹುಚ್ಚಪ್ಪಯ್ಯಮಠ, ಜ್ಯೋತಿರ್ಲಿಂಗ ಸಮೂಹದ ಸಣ್ಣ ಗುಡಿಗಳು, ಐಹೊಳೆಯ ದುರ್ಗಾ ಮತ್ತು ಕೊಂತಗುಡಿ, ಪಟ್ಟದಕಲ್ಲಿನ ವಿರೂಪಾಕ್ಷ, ಮಲ್ಲಿಕಾರ್ಜುನ ಮತ್ತು ಪಾಪನಾಥ ದೇವಾಲಯಗಳಲ್ಲಿ ನೋಡಬಹುದು. ಲಾಡ್‌ಖಾನ್ ದೇವಾಲಯದ ಕಂಬಗಳಲ್ಲಿ ಮಿಥುನಗಳು, ಗಂಗೆ ಮತ್ತು ಯಮುನೆ; ದುರ್ಗಾದೇವಾಲಯದಲ್ಲಿ ಅರ್ಧನಾರೀಶ್ವರ, ಹಿರಣ್ಯಕಶಿಪುವನ್ನು ಸಂಹರಿಸುತ್ತಿರುವ ಉಗ್ರನರಸಿಂಹ, ದಿವ್ಯ ಮಿಥುನ ಈ ಶಿಲ್ಪಗಳು ಕಂಡುಬರುತ್ತವೆ. ಹುಚ್ಚಪ್ಪಯ್ಯನ ಗುಡಿಯಲ್ಲಿ ಕಿನ್ನರರು ಮತ್ತು ಮಿಥುನಗಳು ಇವೆ; ಕೊಂತಗುಡಿಯಲ್ಲೂ ಅವುಗಳನ್ನು ನೋಡುತ್ತೇವೆ. ಕೊಂತಗುಡಿಯಲ್ಲಿ ಅರ್ಧನಾರೀಶ್ವರ, ರತಿ-ಮನ್ಮಥ, ತ್ರಿವಿಕ್ರಮ, ನರಸಿಂಹ ಮತ್ತು ದ್ವಾರಪಾಲರು ಶಿಲ್ಪಗಳನ್ನು ನೋಡಬಹುದು. ಜ್ಯೋತಿರ್ಲಿಂಗ ಸಮೂಹದ ದೇವಾಲಯಗಳ ಸ್ತಂಭಶಿಲ್ಪಗಳಲ್ಲಿ ಕಿನ್ನರರು, ಮಿಥುನಗಳು, ವರಾಹ, ಬ್ರಹ್ಮ, ಬಲಿ ಮತ್ತು ವಾಮನರೊಂದಿಗೆ ತ್ರಿವಿಕ್ರಮ ಮತ್ತು ಅರ್ಧನಾರೀಶ್ವರ ಇವುಗಳನ್ನು ನೋಡಬಹುದು. ಪಟ್ಟದಕಲ್ಲು ದೇವಾಲಯಗಳ ಸ್ತಂಭಶಿಲ್ಪಗಳಲ್ಲಿ, ಮಲ್ಲಿಕಾರ್ಜುನ ದೇವಾಲಯದಲ್ಲಿ ಹಿರಣ್ಯಕಶಿಪುವನ್ನು ವಧಿಸುತ್ತಿರುವ ನರಸಿಂಹ, ಅಪ್ಸರೆಯರು; ವಿರೂಪಾಕ್ಷ ದೇವಾಲಯದಲ್ಲಿ ಶೈವದಂಪತಿ, ಗಜೇಂದ್ರ ಮೋಕ್ಷ, ನರನಾರಾಯಣ ಮತ್ತು ಕೈಲಾಸ ಪರ್ವತವನ್ನು ಎತ್ತುತ್ತಿರುವ ರಾವಣ ಇವೆ. ನಾಗನಾಥ ದೇವಾಲಯದ ಸ್ತಂಭಗಳಲ್ಲಿ ಮಿಥುನಗಳಿವೆ.

ಚಾಲುಕ್ಯ ದೇವಾಲಯಗಳಲ್ಲಿ ಶಂಖನಿಧಿ, ಪದ್ಮನಿಧಿಗಳು ಸಾಮಾನ್ಯ. ಈ ನಿಧಿಗಳನ್ನು ದೇವಾಲಯದ ಪ್ರವೇಶದಲ್ಲಿ ಕೆತ್ತಿರುತ್ತಾರೆ. ಐಹೊಳೆಯ ಹುಚ್ಚಪ್ಪನಗುಡಿ ಮತ್ತು ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಹಾಗೆ ಇಲ್ಲವೆ, ಕಂಬತೋಳುಗಳ ಮೇಲೆ ಕೆತ್ತಿರುತ್ತಾರೆ, ಕೊಂಡಗುಡಿ ದೇವಾಲಯಗಳ ಒಂದರಲ್ಲಿ ಕಂಡುಬರುವ ಹಾಗೆ. ಇಂತಹ ನಿಧಿಶಿಲ್ಪಗಳು ಸಂಗಮದ ಸಂಗಮೇಶ್ವರ ದೇವಾಲಯದಲ್ಲೂ ಇವೆ. ಚಾಲುಕ್ಯರ ಗುಹಾಂತರ್ದೇವಾಲಯ ಗಳಲ್ಲೂ ನಿಧಿಶಿಲ್ಪಗಳು ಶಿಲ್ಪಯೋಜನೆಯ ಅಂತರ್ಗತ ಭಾಗವಾಗಿದ್ದುವು ಎಂಬುದನ್ನು ಇಲ್ಲಿ ನೆನಪಿನಲ್ಲಿಡಬೇಕು.

ಈ ನಿರ್ಮಿತಿ ದೇವಾಲಯಗಳಲ್ಲಿ ಮಹಿಷಮರ್ದಿನಿ ಮತ್ತು ಗಣೇಶ ಶಿಲ್ಪಗಳು ಗಮನಾರ್ಹವಾದ ಅಂಶಗಳಾಗಿದ್ದು ಯಾರೂ ಗಮನಿಸದೆ ಇರಲು ಸಾಧ್ಯವಿಲ್ಲ. ಐಹೊಳೆಯ ದೇವಾಲಯಗಳಲ್ಲಿ ಈ ಶಿಲ್ಪಗಳು ಸಭಾಮಂಟಪದ ಹಿಂದಿನ ಮೂಲೆಗಳಲ್ಲಿ ಅಥವಾ ಗರ್ಭಗೃಹದ ದ್ವಾರದ ಎರಡೂ ಪಕ್ಕಗಳಲ್ಲಿ ಕಂಡುಬರುತ್ತವೆ. ಉದಾಹರಣೆಗೆ, ಹುಚ್ಚಪ್ಪಯ್ಯನ ಗುಡಿಯಲ್ಲಿ ಗರ್ಭಗೃಹ ದ್ವಾರದ ಆಚೆ ಈಚೆ ಇರುವ ಗೋಡೆಗಂಬಗಳಲ್ಲಿ ಕಾಣಬರುತ್ತವೆ. ತಾರಬಸಪ್ಪ ದೇವಾಲಯದಲ್ಲಿ ಈ ದೇವತೆಗಳ ಬಿಡಿ ಮೂರ್ತಿಗಳಿವೆ. ಇವುಗಳನ್ನು ಈಗ ಅಲ್ಲಿಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಪಟ್ಟದಕಲ್ಲಿನ ದೇವಾಲಯಗಳಲ್ಲಿ ಸಭಾಮಂಟಪದೊಳಗೆ ಶಿಲ್ಪಗಳನ್ನು ಇರಿಸುವ ಗುಡಿಗಳೊಳಗೆ ಇವಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಇಂತಹ ಕಿರು ಗರ್ಭಗೃಹಗಳು ಸಂಗಮೇಶ್ವರ ಮತ್ತು ವಿರೂಪಾಕ್ಷ ದೇವಾಲಯಗಳಲ್ಲೂ ಕಂಡುಬರುತ್ತವೆ. ಪಾಪನಾಥ ದೇವಾಲಯದಲ್ಲಿ ಕಂಬಗಳಿರುವ ಹಜಾರದಲ್ಲಿ ಮಹಿಷಿಮರ್ದಿನಿ ಮತ್ತು ಗಣೇಶ ಮೂರ್ತಿಗಳನ್ನು ಅಳವಡಿಸಲು ಪ್ರತ್ಯೇಕ ಕೋಷ್ಠಗಳನ್ನು ನಿರ್ಮಿಸಲಾಗಿದೆ.

ಚಾಲುಕ್ಯ ವಾಸ್ತುಶಿಲ್ಪವನ್ನು ಅರ್ಥಮಾಡಿಕೊಳ್ಳಲು ಕೆಲವು ಮುಖ್ಯ ದೇವಾಲಯಗಳ ಬಗೆಗೆ ಹೆಚ್ಚಿನ ವಿವರಗಳನ್ನು ಪರಿಶೀಲಿಸಬೇಕು.

ಐಹೊಳೆ

ಐಹೊಳೆಯಲ್ಲಿ ೬ನೇ ಶತಮಾನದ ಮಧ್ಯಭಾಗದಿಂದ ಚಾಲುಕ್ಯ ಆಳಿಕೆಯ ಕೊನೆಯವರೆಗೆ ನಿರ್ಮಿಸಿದ ಬಾದಾಮಿ ಚಾಲುಕ್ಯ ನಿರ್ಮಾಣಗಳೇ ಎಪ್ಪತ್ತಕ್ಕಿಂತಲೂ ಅಧಿಕವಾಗಿವೆ. ಐಹೊಳೆಯಲ್ಲೂ ಅದರ ಸುತ್ತುಮುತ್ತಲೂ ಹೇರಳವಾಗಿ ದೊರೆಯುವ ಮರಳುಗಲ್ಲಿನಿಂದ ಈ ದೇವಾಲಯಗಳನ್ನು ಕಟ್ಟಲಾಗಿದೆ. ಇವು ಬಾದಾಮಿ ಚಾಲುಕ್ಯ ಕಲೆಯ ವಿಕಾಸವನ್ನು ಅರಿಯಲು ಅಮೂಲ್ಯವಾದ ಸಹಾಯವಾಗುತ್ತವೆ. ಇಲ್ಲಿರುವ ಎಪ್ಪತ್ತಕ್ಕೂ ಹೆಚ್ಚು ದೇವಾಲಯಗಳಲ್ಲಿ ಈ ಕೆಳಗಿನವು ಗಮನಾರ್ಹವಾದವು: