ಹುಚ್ಚಿಮಲ್ಲಿ ಗುಡಿ

ಇದರಲ್ಲಿ ಒಂದು ಗರ್ಭಗೃಹ, ಒಂದು ಸಭಾಮಂಟಪ ಮತ್ತು ಒಂದು ಕೈಸಾಲೆ ಇವೆ. ಬಾಗಿಲಿನೊಂದಿಗೆ ಕಲ್ಲಿನ ತೆರೆಮರೆಯೊಂದನ್ನು ಅಳವಡಿಸಿ, ಮೊದಲ ಬಾರಿಗೆ ಸುಕನಾಸಿಯನ್ನು ಈ ದೇವಾಲಯದಲ್ಲಿ ರಚಿಸಲಾಯಿತು. ಎಂದು ಪರ್ಸಿ ಬ್ರೌನ್ ಭಾವಿಸುತ್ತಾನೆ. ಇದು ಸರಿಯಾದ ಹೇಳಿಕೆಯಲ್ಲ. ಏಕೆಂದರೆ ಬಾಗಿಲ ಚೌಕಟ್ಟಾಗಲಿ, ತೆರೆಯಾಗಲಿ ಆಮೇಲೆ ಸೃಷ್ಟಿಯಾದವು. ದೇವಾಲಯವು ಎತ್ತರವಾದ ಅಧಿಷ್ಠಾನದ ಮೇಲೆ ನಿಂತಿದೆ. ರೇಖಾನಾಗರ ಶಿಖರವಿದ್ದು, ಅದರ ಸುಕನಾಸಿಯಲ್ಲಿ ಒಂದು ಸಣ್ಣ ನಟರಾಜ ಮೂರ್ತಿಯನ್ನು ಕೆತ್ತಿದೆ. ಸಭಾಮಂಟಪದಲ್ಲಿ ಮಧ್ಯಾಂಗಣದ ಚಾವಣಿಯು ಒಂಬತ್ತು ಭಾಗಗಳಾಗಿ ವಿಭಾಗಿತವಾಗಿದೆ. ಪದ್ಮಗಳು, ಪುಷ್ಪ ವಿನ್ಯಾಸ, ಶಿವ, ವಿಷ್ಣು ಮತ್ತು ಇಂದ್ರರ ಶಿಲ್ಪಗಳ ಉಬ್ಬು ಕೆತ್ತನೆ ಕಂಡುಬರುತ್ತದೆ. ಸಭಾಮಂಟಪದಲ್ಲಿ ಹಿಂದೆ ಬಹುಭುಜ ನಟರಾಜಮೂರ್ತಿಯಿದ್ದಿತು. (ಹಾನಿಗೊಂಡಿರುವ ಈ ಮೂರ್ತಿಯನ್ನು ಈಗ ಮ್ಯೂಸಿಯಂಗೆ ವರ್ಗಾಯಿಸಲಾಗಿದೆ). ಕೈಸಾಲೆಯಲ್ಲಿ ಕಾರ್ತಿಕೇಯನು ತಾರಕಾಸುರನನ್ನು ವಧಿಸುತ್ತಿರುವ ದೃಶ್ಯವನ್ನು ಕೆತ್ತಿರುವ ಫಲಕವಿದೆ. ರೇಖಾನಾಗರ ಶಿಖರವು ತುಂಬಾ ಎತ್ತರವಾಗೇನೂ ಇಲ್ಲ. ಹುಚ್ಚಿಮಲ್ಲಿ ಗುಡಿಯು ಚಾಲುಕ್ಯರ ಅತ್ಯಂತ ಹಿಂದಿನ ರೇಖಾನಾಗರ ದೇವಾಲಯ. ಇದನ್ನು ಬಹುಶಃ ೭ನೇ ಶತಮಾನದ ಮೊದಲನೇ ಪಾದದಲ್ಲಿ ಎರಡನೇ ಪುಲಕೇಶಿಯ ಆಳಿಕೆಯಲ್ಲಿ ನಿರ್ಮಿಸಲಾಯಿತು.

ಮೇಗುತಿ

ಮೇಗುತ(ಮೇಗುಂಡಿ=ಮೇಲಿನ ದೇವಾಲಯ)ವನ್ನು ಒಂದು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಇದು ಐಹೊಳೆಯಲ್ಲಿರುವ ನಿರ್ಮಾಣವರ್ಷ ನಮೂದಾಗಿರುವ ಏಕೈಕ ದೇವಾಲಯ. ಎರಡನೇ ಪುಲಕೇಶಿಯ ಆಸ್ಥಾನದಲ್ಲಿ ಪ್ರಸಿದ್ದಿ ಪಡೆದಿದ್ದ ಕವಿ ರವಿಕೀರ್ತಿಯು ಕ್ರಿ.ಶ.೬೩೪ರಲ್ಲಿ ಇದನ್ನು ಕಟ್ಟಿಸಿದನು. ಈ ಬಸದಿಯು ದ್ರಾವಿಡ ಶೈಲಿಯಲ್ಲಿ ರಚಿತವಾದ ಅತಿ ಪ್ರಾಚೀನ ನಿರ್ಮಾಣಗಳಲ್ಲಿ ಒಂದು. ಸಾಕಷ್ಟು ದೊಡ್ಡದಾಗಿರುವ ಇದರಲ್ಲಿ, ಗರ್ಭಗೃಹ, ಪ್ರದಕ್ಷಿಣ ಪಥ, ಸುಕನಾಸಿ, ಅರ್ಧಮಂಟಪ ಅದಕ್ಕೆ ತಾಗಿದಂತೆ ಕಂಬಗಳಿರುವ ಕೈಸಾಲೆ ಇವೆ. ಎತ್ತರವಾದ ಅಧಿಷ್ಠಾನದ ಮೇಲೆ ಕಟ್ಟಡವು ನಿಂತಿದೆ. ಗೋಡೆಗಳಿಗೆ ಕೋಷ್ಠಗಳನ್ನೂ ಕಲ್ಲಿನ ಜಾಲಂಧ್ರಗಳನ್ನೂ ಅಳವಡಿಸಲಾಗಿದೆ. ಜಾಲಂಧ್ರಗಳು ಸರಳವಾದ ವಿನ್ಯಾಸದಿಂದ ಕೂಡಿವೆ. ಕೋಷ್ಠಗಳಲ್ಲಿ ಇರಿಸಿದ ವಿಗ್ರಹಗಳು ಈಗ ಕಣ್ಮರೆಯಾಗಿವೆ. ಗರ್ಭಗೃಹದ ಮೇಲೆ ಇನ್ನೊಂದು ಗರ್ಭಗೃಹವೂ ಕೈ ಸಾಲೆಯೂ ಇದ್ದು, ಇವು ಕೆಲವು ದಶಕಗಳ ಅನಂತರ ಸೇರಿಸಿದುವಾಗಿವೆ. ಮೇಲಿನ ಕೈಸಾಲೆ ಈಗ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಅಂತಸ್ತು ಇರುವ ಬಸದಿಗಳನ್ನು ನಿರ್ಮಿಸುವ ಪದ್ಧತಿಯನ್ನು ಕರ್ನಾಟಕದಲ್ಲಿ ಮೇಗುತಿಯಿಂದ ಪ್ರಾರಂಭಿಸಲಾಯಿತು. ಬಾದಾಮಿ ಚಾಲುಕ್ಯ ನಂತರದ ಕಾಲದಲ್ಲಿ ಇಂತಹ ಹಲವು ಬಸದಿಗಳು ನಿರ್ಮಾಣವಾದುದನ್ನು ನೋಡುತ್ತೇವೆ. ಇವುಗಳಲ್ಲಿ ತುಂಬಾ ಮುಖ್ಯವಾದದ್ದು ಶ್ರವಣಬೆಳಗೊಳದ ಚಾಮುಂಡರಾಯ ಬಸದಿ ಮತ್ತು ಲಕ್ಕುಂಡಿಯ ಬ್ರಹ್ಮ ಜಿನಾಲಯ. ಇವು ಕ್ರಮವಾಗಿ ಗಂಗ ಮತ್ತು ಕಲ್ಯಾಣ ಚಾಲುಕ್ಯ ಕಾಲಗಳಿಗೆ ಸೇರಿದವು. ಅಂಬಿಕೆಯ ದೊಡ್ಡದೊಂದು ಫಲಕವು (ಈಗ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದೆ) ಸುಕನಾಸಿಯಲ್ಲಿತ್ತು. ಗರ್ಭಗೃಹದಲ್ಲಿ ಜಿನನ ದೊಡ್ಡ ಫಲಕವಿದ್ದರೂ, ಇಪ್ಪತ್ತನಾಲ್ಕು ತೀರ್ಥಂಕರರ ಪೈಕಿ ಯಾರಿಗೆ ಈ ಬಸದಿಯನ್ನು ಅರ್ಪಿಸಲಾಗಿತ್ತು ಎನ್ನುವುದು ತಿಳಿಯುವುದಿಲ್ಲ. ರವಿಕೀರ್ತಿಯ ಶಾಸನವು ಪ್ರತಿಷ್ಠಿಸಿದ ದೇವರನ್ನು ‘ಜಿನೇಂದ್ರ’ ಎಂದು ಮಾತ್ರ ಉಲ್ಲೇಖಿಸುತ್ತದೆ.

ಲಾಡ್‌ಖಾನ್

ಇದು ಈ ದೇವಾಲಯಕ್ಕೆ ಸ್ಥಳೀಯವಾಗಿ ಕೊಟ್ಟ ಹೆಸರು. ಇದರಲ್ಲಿ ಒಂದು ವಿಶಾಲವಾದ, ಕಂಬಗಳಿರುವ ಹಜಾರವಿದೆ. ಚೌಕವಾಗಿರುವ ಈ ಹಜಾರದ ಹಿಂದಿನ ಗೋಡೆಗೆ ತಾಗಿದಂತೆ ಗರ್ಭಗೃಹವಿದೆ. ಹಜಾರದ ಪಕ್ಕದಲ್ಲಿ ಆಯಾಕಾರದ ಕಂಬಗಳಿರುವ ಕೈಸಾಲೆಯಿದೆ. ೧೪.೬೯ಮೀ. x ೧೪.೬೮ಮೀ. ಅಳತೆಯ ಹಜಾರದಲ್ಲೇ ನಾಲ್ಕು ಕಂಬಗಳ ನಾಲ್ಕು ಸಾಲುಗಳಿವೆ. ಹಜಾರದ ನಡುವೆ ಇರುವ ನಾಲ್ಕು ಕಂಬಗಳು ಉಳಿದವಕ್ಕಿಂತ ತುಸು ಎತ್ತರವಾಗಿವೆ. ಆಯಾಕಾರದ ಕಂಬಗಳು ಆಗಾಧವಾಗಿ ಕಾಣುತ್ತಿದ್ದ ಪಟ್ಟೆಗಳು, ಪದಕಾಲಂಕಾರ ಮತ್ತು ತರಂಗ ಚಾಚುಗಳನ್ನು ಹೊಂದಿವೆ. ಹಜಾರದ ತೊಲೆಗಳ ಮೇಲೆ ಹಾಗೂ ಕಂಬಗಳ ಮೇಲೆ ಅಲಂಕಾರ ಕೆತ್ತನೆಯಿದೆ. ಆನೆಗಳು, ಸವಾರರೊಂದಿಗೆ ಕುದುರೆಗಳು, ಎತ್ತುಗಳು, ನವಿಲು ಮತ್ತಿತರ ಪ್ರಾಣಿ ಪಕ್ಷಿಗಳ ಶಿಲ್ಪಗಳನ್ನೊಳಗೊಂಡ ಪಟ್ಟಿಕೆಗಳು, ಬಾದಾಮಿಯ ಜಂಬುಲಿಂಗ ದೇವಾಲಯದ ಇಂಥವೇ ಕಂಬಗಳು ಮತ್ತು ಪಟ್ಟಿಕೆಗಳನ್ನು ನೆನಪಿಗೆ ತರುತ್ತವೆ. ಮುಂದಿನ ಕೈಸಾಲೆಯಲ್ಲಿ ಕಂಬಗಳು ಪ್ರಧಾನವಾಗಿದ್ದು ಮುಂದೆ ಮೇಲಂತಸ್ತು ಕೂಡಿಸಲು ಅವಕಾಶವಾಗುವಂತಿವೆ. ಮೂಲತಃ ಲಾಡ್‌ಖಾನ್ ಒಂದು ಲೌಕಿಕವಾದ ರಚನೆಯಾಗಿತ್ತು. ಪ್ರಸಿದ್ಧ ಅಯ್ಯಾವೊಳೆ ಅಯ್ನೂರ್ವರ ಕೇಂದ್ರಕಾರ್ಯಸ್ಥಾನವಾಗಿತ್ತು. ಇಂದಿನ ಸಮುದಾಯ ಭವನದ ಹಾಗೆ. ಈ ಕಟ್ಟಡದ ಸಮೀಪದಲ್ಲೇ ಮೇಲೆ ಹೇಳಿದ ವಣಿಕ ಸಂಘದ ಅಧಿದೇವತೆ ಭಗವತಿಯ ದೇವಾಲಯ(ಗೌಡರಗುಡಿ)ವಿರುವುದು ಈ ಮಾತನ್ನು ಇನ್ನಷ್ಟು ಬಲಪಡಿಸುತ್ತದೆ. ದೊಡ್ಡದಾದ ಕಲ್ಲಿನ ಜಾಲಂಧ್ರಗಳಿರುವುದು ಈ ಕಟ್ಟಡದ ಲೌಕಿಕ ಸ್ವರೂಪವನ್ನು ಸೂಚಿಸುತ್ತವೆ. ಶೈಲಿಯ ಆಧಾರದ ಮೇಲೆ ಲಾಡ್‌ಖಾನ್ ಅನ್ನು ಏಳನೇ ಶತಮಾನದ ಕೊನೆಯ ವರ್ಷಗಳು ಹಾಗೂ ಎಂಟನೇ ಶತಮಾನದ ಪ್ರಾರಂಭ ಇವುಗಳ ನಡುವಿಗೆ ಸೇರಿದುದೆಂದು ಹೇಳಬಹುದು.

ಹುಚ್ಚಪ್ಪಯ್ಯ ಗುಡಿ

ರೇಖಾನಾಗರ ಶಿಖರದೊಂದಿಗೆ ೮ನೇ ಶತಮಾನದ ಪ್ರಾರಂಭದಲ್ಲಿ ಕಟ್ಟಿದ ಹುಚ್ಚಪ್ಪಯ್ಯ ಗುಡಿಯಲ್ಲಿ ಒಂದು ಗರ್ಭಗೃಹ, ಒಂದು ಸಭಾಮಂಟಪ ಮತ್ತು ಕೈಸಾಲೆ ಇವೆ. ಈ ದೇವಾಲಯವನ್ನು ಖ್ಯಾತ ವಾಸ್ತುಶಿಲ್ಪ ನರಸಬ್ಬನು ನಿರ್ಮಿಸಿದನು. ಕೈಸಾಲೆಗೆ ಪ್ರವೇಶ ಮಾಡುವಲ್ಲಿ ಶಂಖನಿಧಿ, ಪದ್ಮನಿಧಿಗಳನ್ನು ಕೆತ್ತಲಾಗಿದೆ. ಗರ್ಭಗೃಹದ ಹೊರಗೋಡೆಗಳಲ್ಲಿ ಎರಡು ಕಡೆಯೂ ಒಂದೊಂದು ದೇವಕೋಷ್ಠವಿರುವುದು ಬಿಟ್ಟರೆ ಮಿಕ್ಕಂತೆ ಅವು ಸಪಾಟಾಗಿವೆ. ಎರಡು ಕೋಷ್ಠಗಳಲ್ಲಿ ಕ್ರಮವಾಗಿ ಹಿರಣ್ಯಕಶಿಪುವನ್ನು ನರಸಿಂಹನು ಸಂಹರಿಸುತ್ತಿರುವುದು ಹಾಗೂ ಗಜಾಸುರ ಸಂಹಾರ ಶಿವ ಈ ಮೂರ್ತಿಗಳಿವೆ. ಸಭಾಮಂಟಪದ ತೊಲೆಗಳ ಮೇಲೆ ಯಕ್ಷರ ಸಣ್ಣ ಉಬ್ಬುಶಿಲ್ಪಗಳಿವೆ. ಈ ದೇವಾಲಯ ಗಮನಾರ್ಹವಾಗಿದೆ. ಯಕ್ಷರು ಏನೆಲ್ಲಾ ಬಗೆಯ ಆಟಗಳಲ್ಲಿ ಮುಳುಗಿಹೋಗಿರುವಂತೆ ಶಿಲ್ಪಿತರಾಗಿದ್ದಾರೆ. ಶಿಲ್ಪಿಯ ಅಪಾರ ಸೌಂದರ್ಯ ಪ್ರಜ್ಞೆಗೆ ಈ ಉಬ್ಬುಶಿಲ್ಪಗಳು ಸಾಕ್ಷಿಯಾಗಿವೆ. ಇವುಗಳ ಜೊತೆಗೆ ತೊಲೆಗಳ ಮೇಲೆ ತ್ರಿವಿಕ್ರಮ, ವರಾಹ, ನರಸಿಂಹ ಮತ್ತು ಅಷ್ಟದಿಕ್ಪಾಲರ ಶಿಲ್ಪಗಳಿವೆ. ಸಭಾಮಂಟಪದಲ್ಲಿ ಗಜಲಕ್ಷ್ಮಿಯನ್ನು ಕೆತ್ತಿರುವ ದೊಡ್ಡ ಫಲಕವಿದೆ. ಕೈಸಾಲೆಯ ಚಾವಣಿಯಲ್ಲಿ ನರ್ತಿಸುತ್ತಿರುವ ಶಿವನ ಒಂದು ಉಬ್ಬುಶಿಲ್ಪ ಫಲಕವಿದೆ. ಪಾರ್ವತಿ, ನಂದಿ, ವಾಮನ ಮತ್ತು ಭೃಂಗಿ ತನ್ಮಯರಾಗಿ ನೋಡುತ್ತಿದ್ದಾರೆ.

ದುರ್ಗಾ ದೇವಾಲಯ

ಈ ದೇವಾಲಯದ ತಲವಿನ್ಯಾಸ ಗಜಪೃಷ್ಠಾಕಾರದ್ದು ಅಥವಾ ಕಮಾನುಗೂಡಿನಂಥದು. ಈ ದೊಡ್ಡ ದೇವಾಲಯದಲ್ಲಿ ಒಂದು ಗರ್ಭಗೃಹ, ಆವೃತ ಪ್ರದಕ್ಷಿಣ ಪಥ, ಸಭಾಮಂಟಪ, ಕೈಸಾಲೆ ಮತ್ತು ಹೊರಗಿನ ಅರೆತೆರೆದ ಇನ್ನೊಂದು ಪ್ರದಕ್ಷಿಣಪಥಗಳಿವೆ. ಪೂರ್ವಾಭಿಮುಖವಾಗಿರುವ ದೇವಾಲಯಕ್ಕೆ ಒಂದು ಪ್ರವೇಶದ್ವಾರವಿದೆ. ದಕ್ಷಿಣದಲ್ಲಿ ಮೇಲೆ ಭಾರಿಯಾದ ಒಂದು ಚೈತ್ಯವಿದೆ. ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿಸಿದ ದೇವಾಲಯದ ಹೊರಗಿನ ಗೋಡೆಗಳಲ್ಲಿ ಹನ್ನೊಂದು ದೇವಕೋಷ್ಠಗಳಿವೆ. ಇವು ಒಂದೊಂದರ ಮೇಲೂ ಭಾರೀ ನಾಸಿಕವಿದೆ. ದೇವಕೋಷ್ಠಗಳ ಜೊತೆಗೆ ಹೂವು, ಸ್ವಸ್ತಿಕ, ಮತ್ಸ್ಯಚಕ್ರ ಮೊದಲಾದ ವಿವಿಧ ವಿನ್ಯಾಸಗಳಿರುವ ಜಾಲಂಧ್ರಗಳಿವೆ. ಇವುಗಳ ಮೇಲೂ ನಾಸಿಕಗಳು ಮತ್ತು ಮಕರ ತೋರಣಗಳು ಇವೆ. ದೇವಕೋಷ್ಠಗಳಲ್ಲಿ ಬಿಡಿ ವಿಗ್ರಹಗಳಿದ್ದುವು. ಈಗ ಎಲ್ಲೋ ಕೆಲವು ಮಾತ್ರ ಉಳಿದುಕೊಂಡಿವೆ. ಇವುಗಳಲ್ಲಿ ನರಸಿಂಹ, ವರಾಹ, ಹರಿಹರ, ಗರುಡವಾಹನನಾದ ವಿಷ್ಣು, ಮಹಿಷಾಸುರ ಮರ್ದಿನಿ ಮತ್ತು ಶಿವ ಈ ಮೂರ್ತಿಗಳನ್ನು ಹೆಸರಿಸಬಹುದು. ಈ ಶಿಲ್ಪಗಳು ಮನೋಜ್ಞವಾಗಿವೆ. ಮಹಿಷಮರ್ದಿನಿ ಮತ್ತು ನಂದಿಯನ್ನು ಒರಗಿಕೊಂಡ ಶಿವ ವಿಗ್ರಹಗಳನ್ನು ಗಮನಿಸಬಹುದು. ಮುಖ್ಯ ಪ್ರವೇಶದ್ವಾರದ ಬಾಗಿಲ ಚೌಕಟ್ಟಿನ ಸೆಜ್ಜದ ಮೇಲೆ ನಾಗಗಳ ಬಾಲಗಳನ್ನು ಹಿಡಿದ ಗರುಡ ಶಿಲ್ಪಗಳನ್ನು ಸುಂದರವಾಗಿ ಕೆತ್ತಲಾಗಿದೆ. ಕೈಸಾಲೆಯ ಚಾವಣಿಯಲ್ಲಿ ಮತ್ಸ್ಯ ಚಕ್ರವನ್ನೂ ನಾಗರಾಜನನ್ನೂ ಚಿತ್ರಿಸಿರುವ ಉಬ್ಬುಶಿಲ್ಪ ಫಲಕಗಳಿವೆ. ಕೈಸಾಲೆಯ ಕಂಬಗಳ ಮೇಲೂ ದೇವಾಲಯದ ಮುಂಭಾಗದಲ್ಲಿರುವ ಕಂಬಗಳ ಮೇಲೂ ದೊಡ್ಡ ಶಿಲ್ಪಗಳಿವೆ. ಕೈಸಾಲೆಯ ಕಂಬಗಳ ಮೇಲೆ ಮಿಥುನಗಳು, ಹಿರಣ್ಯ ಕಶಿಪುವನ್ನು ವಧಿಸುತ್ತಿರುವ ನರಸಿಂಹ, ಮತ್ತು ಅರ್ಧನಾರೀಶ್ವರ ಶಿಲ್ಪಗಳಿವೆ. ಗರ್ಭಗೃಹದ ಮೇಲೆ ಒಂದು ರೇಖಾನಾಗರ ಶಿಖರವು ನಿಂತಿದೆ. ಇದರ ನೆತ್ತಿ ಭಾಗವು ಈಗ ಮಾಯವಾಗಿದೆ. ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳೊಂದಿಗೆ ಅನೇಕ ಅಂಶಗಳನ್ನು ಹೋಲುವ ಈ ದೇವಾಲಯವನ್ನು ಎರಡನೇ ವಿಕ್ರಮಾದಿತ್ಯನ ಆಳಿಕೆಯಲ್ಲಿ ‘ಆಟದ ಅಲೆಕೊಮಾರಸಿಂಗ’ನು ಕಟ್ಟಿಸಿದನು. ಆದಿತ್ಯಭಟಾರರಿಗೆ ಅಂದರೆ ಸೂರ್ಯನಿಗೆ ಈ ದೇವಾಲಯವು ಮೀಸಲಾಯಿತು.

ಬಾದಾಮಿ

ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಗುಹಾಲಯಗಳೂ ನಿರ್ಮಿತಿ ದೇವಾಲಯಗಳೂ ಇವೆ. ಾರೀ ಸರೋವರವೊಂದರ ದಂಡೆಯ ಮೇಲೆ ಮತ್ತು ಬೆಟ್ಟದ ಮೇಲೆ ದೇವಾಲಯಗಳನ್ನು ನಿರ್ಮಿಸಲಾಗಿದೆ. ಐಹೊಳೆಯಲ್ಲಿರುವಂತೆ ಇಲ್ಲಿಯೂ ದೇವಾಲಯಗಳು ೭ನೇ ಮತ್ತು ೮ನೇ ಶತಮಾನಗಳವರೆಗೆ ಸೇರಿವೆ. ಇವುಗಳಲ್ಲಿ ಮೇಲು ಶಿವಾಲಯ, ಮಾಲೆಗಿತ್ತಿ ಶಿವಾಲಯ ಹಾಗೂ ಜಂಬುಲಿಂಗ ದೇವಾಲಯ ಗಮನಾರ್ಹವಾದವು.

ಮೇಲು ಶಿವಾಲಯ

ಎರಡನೇ ಪುಲಕೇಶಿಯ ಆಳಿಕೆಯಲ್ಲಿ ನಿರ್ಮಿಸಿದ ಈ ದೇವಾಲಯದಲ್ಲಿ ಐಹೊಳೆಯ ಮೇಗುತಿ ದೇವಾಲಯವನ್ನು ಹೋಲುವ ಹಲವಾರು ಅಂಶಗಳಿವೆ. ಹೆಸರಿಗೆ ಇದು ಮೇಲು ಶಿವಾಲಯವೆನಿಸಿದರೂ ವಸ್ತುತಃ ಇದು ಒಂದು ವೈಷ್ಣವ ದೇವಾಲಯವಾಗಿದೆ. ವೈಷ್ಣವ ಶಿಲ್ಪಗಳು ಇಲ್ಲಿ ವಿಪುಲವಾಗಿವೆ. ಸಾಂಧಾರ ಮಾದರಿಯ ಈ ದೇವಾಲಯದ ಶಿಖರ ದ್ರಾವಿಡ ಶೈಲಿಯದು. ಐಹೊಳೆಯ ರಾವಣಫಡಿ ಗುಹೆಯ ಬಳಿ ಇರುವ ಸಣ್ಣ ಗುಡಿಯ ಶಿಖರಕ್ಕಿಂತಲೂ ಹೆಚ್ಚು ವಿಸ್ತಾರವೂ ಅಲಂಕೃತವೂ ಆದ ಶಿಖರವಾಗಿದೆ. ಯೋಜನೆಯಲ್ಲಿ ಒಂದು ಗರ್ಭಗೃಹ, ಒಂದು ಪ್ರದಕ್ಷಿಣಪಥ, ಒಂದು ಸಭಾಮಂಟಪ ಮತ್ತು ಒಂದು ಕೈಸಾಲೆ ಇವೆ. ಈಗ ಸಭಾಮಂಟಪವೂ ಕೈಸಾಲೆಯೂ ನಾಪತ್ತೆಯಾಗಿವೆ! ಪ್ರದಕ್ಷಿಣಪಥದ ಹೊರಗೋಡೆಗಳಲ್ಲಿ ದೇವಕೋಷ್ಠಗಳಿದ್ದು ಅವುಗಳಲ್ಲಿ ಹಿರಣ್ಯಕಶಿಪುವನ್ನು ವಧಿಸುತ್ತಿರುವ ನರಸಿಂಹ, ಗೋವರ್ಧನಧಾರಿ ಕೃಷ್ಣ ಮತ್ತು ಕಾಳಿಂಗಮರ್ದನ ಕೃಷ್ಣಮೂರ್ತಿಗಳಿವೆ. ಅಧಿಷ್ಠಾನಕ್ಕೆ ಆಳವಾದ ಗಳವಿದ್ದು ಅದರಲ್ಲಿ ರಾಮಾಯಣ ಮತ್ತು ಭಾಗವತದ ದೃಶ್ಯಗಳನ್ನು ಕೆತ್ತಿದೆ. ದ್ರಾವಿಡ ಶಿಖರವು ತ್ರಿತಲ ರೂಪದ್ದಾಗಿದೆ. ವೈಷ್ಣವ ದೇವಾಲಯವಾದರೂ ಸೆಜ್ಜದ ಮೇಲೆ ಗರುಡ ಶಿಲ್ಪವಿಲ್ಲ.

ಮಾಲೆಗಿತ್ತಿ ಶಿವಾಲಯ

ಆರ್ಯಮಿಂಚಿ ಉಪಾಧ್ಯಾಯ ಎಂಬ ವಾಸ್ತುಶಿಲ್ಪಿಯು ಕಟ್ಟಿದ ಮಾಲೆಗಿತ್ತಿ ಶಿವಾಲಯವು ಏಳನೇ ಶತಮಾನದ ದ್ವಿತೀಯಾರ್ಧದ ಒಂದು ದೊಡ್ಡ ದೇವಾಲಯ. ಕ್ರಿ.ಶ. ೬೫೫ರಲ್ಲಿ ಚಾಲುಕ್ಯ ಆಳ್ವಿಕೆಯು ಮರುಸ್ಥಾಪನೆಗೊಂಡ ಒಡನೆಯೇ ನಿರ್ಮಿಸಿದ ಈ ಅಡಕವಾದ ಸಣ್ಣ ದೇವಾಲಯವು ಒಂದು ಭಾರೀ ಬಂಡೆಯ ಮೇಲೆ ನಿಂತಿದ್ದು ಒಳ್ಳೆಯ ನಿಸರ್ಗದೃಶ್ಯವನ್ನು ಒದಗಿಸುತ್ತದೆ. ಇದೊಂದು ನಿರಂಧಾರ ಮಾದರಿಯ ದೇವಾಲಯ. ಹೊರಗೋಡೆಗಳಲ್ಲಿ ಬೇಕಾದಷ್ಟು ಚಾಚುಗಳು, ಒಳಸರಿವುಗಳು ಕಂಡುಬರುತ್ತವೆ. ದೇವಕೋಷ್ಟಗಳ ಆಚೀಚೆ ಮಕರ ತೋರಣಗಳ ಕೆಳಗೆ ಜಾಲಂಧ್ರಗಳು ಮತ್ತು ಗೋಡೆಗಂಬಗಳ ಸಾಲು ಕಂಡುಬರುತ್ತವೆ. ಗರ್ಭಗೃಹದ ಮೇಲೆ ಅಷ್ಟಭುಜ ಸ್ತೂಪಿಯಿರುವ ದ್ವಿತಲ ದ್ರಾವಿಡ ಶಿಖರವಿದೆ. ಉತ್ತರ ಮತ್ತು ದಕ್ಷಿಣದ ಗೋಡೆಗಳಲ್ಲಿರುವ ದೇವಕೋಷ್ಠಗಳಲ್ಲಿ ಕ್ರಮವಾಗಿ ವಿಷ್ಣು ಮತ್ತು ಶಿವ ಮೂರ್ತಿಗಳಿವೆ. ಮುಂಭಾಗದ ಗೂಡುಗಳಲಿ್ಲ ದ್ವಾರಪಾಲರಿದ್ದಾರೆ.

ಜಂಬುಲಿಂಗ ದೇವಾಲಯ

ಬಾದಾಮಿಯಲ್ಲಿ  ನಿರ್ಮಾಣ ಕಾಲವು ಖಚಿತವಾಗಿರುವ ಏಕೈಕ ದೇವಾಲಯ ಜಂಬುಲಿಂಗ, ಇದನ್ನು ಜಂಬುನಾಥ ದೇವಾಲಯವೆಂದೂ ಕರೆಯುವುದುಂಟು. ವಿಜಯಾದಿತ್ಯನ ತಾಯಿ ರಾಣಿ ವಿನಯಾವತಿಯು ಕ್ರಿ.ಶ.೬೯೯ರಲ್ಲಿ ಈ ತ್ರಿಕೂಟ ದೇವಾಲಯವನ್ನು ಕಟ್ಟಿಸಿದಳು. ಇಲ್ಲಿ ಪೂರ್ವ, ಉತ್ತರ ಮತ್ತು ದಕ್ಷಿಣ ಮುಖವಾದ ಮೂರು ಗರ್ಭಗೃಹಗಳಿವೆ. ಇವುಗಳಿಗೆ ಸಮಾನವಾದ ಒಂದು ಚೌಕವಾದ ಸಭಾಮಂಟಪವಿದೆ. ಮುಂಭಾಗದಲ್ಲಿ ಕಂಬಗಳಿರುವ ತೆರೆದ ಕೈಸಾಲೆಯಿದೆ. ಸಭಾಮಂಟಪವನ್ನು ಒಂದು ಮಧ್ಯಾಂಗಣ ಮತ್ತು ನಾಲ್ಕು ಪಕ್ಕದ ಹಾದಿಗಳಾಗಿ ವಿಭಾಗಿಸಲಾಗಿದೆ. ಮಧ್ಯಾಂಗಣದ ಚಾವಣಿಯ ತುಂಬಾ ಶಿವ, ಬ್ರಹ್ಮ, ವಿಷ್ಣು ಇವರ ಶಿಲ್ಪಗಳು ತುಂಬಿವೆ. ಎರಡೂ ಗರ್ಭಗೃಹಗಳ ಎದುರಿಗಿರುವ ಚಾವಣಿಯಲ್ಲಿ ಮತ್ಸ್ಯಚಕ್ರ ಮತ್ತು ನಂದ್ಯಾವರ್ತ, ಸ್ವಸ್ತಿಕಗಳೂ, ಗಂಧರ್ವರ ಶಿಲ್ಪಗಳೂ ಇವೆ. ಈ ಅಲಂಕಾರ ಪಟ್ಟಿಕೆಗಳೂ ಮುಖಭಾಗದ ಮಂಟಪದ ಚಾವಣಿಯಲ್ಲಿರುವ ನಾಗರಾಜ ಶಿಲ್ಪವೂ, ದೇವಾಲಯದ ದಕ್ಷಿಣಕ್ಕೆ ಗುಹೆಗಳಲ್ಲಿರುವ ಇಂಥವೇ ಶಿಲ್ಪಗಳಿಂದ ನೇರವಾಗಿ ಪ್ರಭಾವಿತವಾದವು. ಸಭಾಮಂಟಪ ಮತ್ತು ಮುಖಮಂಟಪಗಳಲ್ಲಿರುವ ಸ್ತಂಭಗಳು ಪಟ್ಟಿ ಮತ್ತು ಪದಕ ಅಲಂಕರಣದಿಂದ ತುಂಬಿವೆ. ನೆತ್ತಿಯ ಮೇಲೆ ತರಂಗ ಚಾಚುಗಳೂ ಇವೆ. ಗರ್ಭಗೃಹಗಳ ಮೇಲೆ ಕಟ್ಟಿದ್ದ ಮೂರು ಶಿಖರಗಳು ಈಗ ಕಣ್ಮರೆಯಾಗಿವೆ. ಉತ್ತರ ದಿಕ್ಕಿನ ಒಂದು ಶಿಖರದ ಬದಲಿಗೆ ೧೭-೧೮ನೇ ಶತಮಾನದಲ್ಲಿ ಒಂದು ಇಟ್ಟಿಗೆಯ ಶಿಖರವನ್ನು ನಿರ್ಮಿಸಲಾಯಿತು.

ಪಟ್ಟದಕಲ್ಲು

ಮಲಪ್ರಭಾ ನದಿಯ ಎಡದಂಡೆಯ ಮೇಲಿರುವ ಪಟ್ಟದಕಲ್ಲು ೮ನೇ ಶತಮಾನದಲ್ಲಿ ಕಲೆಯ ಬಹುದೊಡ್ಡ ಕೇಂದ್ರವಾಗಿ ಹೆಸರಾಯಿತು. ಶಾಸನಗಳಲ್ಲಿ ಪಟ್ಟದ ಕಿಸುವೊಲು ಎಂದು ಕರೆದಿರುವ ಈ ಸ್ಥಳವು ಎರಡನೇ ವಿಕ್ರಮಾದಿತ್ಯ ಆಳಿಕೆಯ ಕಾಲದಲ್ಲಿ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳಿಂದಾಗಿ ಪ್ರಸಿದ್ದಿಯನ್ನು ಪಡೆಯಿತು. ರಾಷ್ಟ್ರಕೂಟ ಆಳಿಕೆಯಲ್ಲಿ ಕಟ್ಟಿದ ಜೈನ ಬಸದಿಯೂ ಸೇರಿದಂತೆ ಪಟ್ಟದಕಲ್ಲಿನಲ್ಲಿ ಹತ್ತು ದೇವಾಲಯಗಳಿವೆ. ಅವು ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ, ಗಳಗನಾಥ, ಕಾಶಿ ವಿಶ್ವೇಶ್ವರ, ಕಾಡ ಸಿದ್ಧೇಶ್ವರ, ಚಂದ್ರಶೇಖರ, ಜಂಬುಲಿಂಗ ಮತ್ತು ಪಾಪನಾಥ ದೇವಾಲಯಗಳು. ಇವೆಲ್ಲವೂ ಎಂಟನೇ ಶತಮಾನದ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತವೆ.

ಸಂಗಮೇಶ್ವರ ದೇವಾಲಯ

ಶಾಸನಗಳಲ್ಲಿ ವಿಜಯೇಶ್ವರ ಎಂದು ಹೆಸರಿಸಲಾದ ಈ ದೇವಾಲಯವನ್ನು ಸ್ಥಳೀಯವಾಗಿ ಸಂಗಮೇಶ್ವರ ಎಂದು ಕರೆಯುತ್ತಾರೆ. ಇದು ಪಟ್ಟದಕಲ್ಲು ಸರಣಿಯ ಅತಿಪ್ರಾಚೀನ ದೇವಾಲಯವಾಗಿದ್ದು, ವಿಜಯಾದಿತ್ಯನ ಆಳಿಕೆಯ ಅವಧಿಗೆ, ಅಂದರೆ ೮ನೇ ಶತಮಾನದ ಪ್ರಾರಂಭಕ್ಕೆ ಸೇರುತ್ತದೆ. ಇದು ಪಟ್ಟದಕಲ್ಲಿನಲ್ಲಿ ಬೃಹತ್ ನಿರ್ಮಾಣಗಳ  ಯುಗಕ್ಕೆ ಪ್ರಾರಂಭವಾಯಿತು. ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯದ ಒಳಗೆ ಗರ್ಭಗೃಹದ ಮುಂಭಾಗಕ್ಕೆ ಎರಡು ಮೂಲೆಗಳಲ್ಲಿ ಮಹಿಷಮರ್ದಿನಿ ಹಾಗೂ ಗಣೇಶರಿಗೆ ಪ್ರತ್ಯೇಕವಾದ ಉಪ ಆಲಯಗಳನ್ನು ಹೊಂದಿದೆ. ಇದನ್ನೇ ಇನ್ನೂ ವಿಸ್ತಾರವಾಗಿ ವಿರೂಪಾಕ್ಷ ದೇವಾಲಯದಲ್ಲಿ ಮುಂದುವರಿಸಿದೆ. ಈ ಸಾಂಧಾರ ದೇವಾಲಯವು ಗಮನಾರ್ಹ ಅಳತೆಯ ಹಜಾರವನ್ನು ಹೊಂದಿದೆ. ಐದು ಕಂಬಗಳ ನಾಲ್ಕು ಸಾಲಿನಲ್ಲಿ ಒಟ್ಟು ಇಪ್ಪತ್ತು ಕಂಬಗಳಿವೆ. ಪ್ರದಕ್ಷಿಣಪಥದ ಹೊರಗೋಡೆಗಳಲ್ಲಿ ಜಾಲಂಧ್ರಗಳಿವೆ. ಪಶ್ಚಿಮ ಮತ್ತು ಉತ್ತರ ಕೋಷ್ಠಗಳಲ್ಲಿ ಕ್ರಮವಾಗಿ ನಟರಾಜ ಮತ್ತು ಗಜಾಸುರ ಸಂಹಾರ ಶಿವ ಶಿಲ್ಪಗಳಿವೆ. ದಕ್ಷಿಣ ಕೋಷ್ಠದ ಶಿಲ್ಪವು ಅಪೂರ್ಣವಾಗಿದೆ. ಗರ್ಭಗೃಹದ ಮೇಲೆ ಒಂದು ದ್ವಿತಲ ದ್ರಾವಿಡ ಶಿಖರವಿದೆ. ಹೊಳೆಯುವ ಸ್ತೂಪಿ ಹಾಗೂ ಕಲಶ ಇವೆ. ಶಿಖರಕ್ಕೆ ವಿರೂಪಾಕ್ಷ ದೇವಾಲಯದ ಶಿಖರದಂತೆ ಮುಂಚಾಚು ಇಲ್ಲ.

ವಿರೂಪಾಕ್ಷ ದೇವಾಲಯ

ಬಾದಾಮಿ ಚಾಲುಕ್ಯರ ದೇವಾಲಯಗಳಲ್ಲೆಲ್ಲಾ ಇದು ಅತ್ಯಂತ ಪ್ರಸಿದ್ಧವಾದದ್ದು. ಕ್ರಿ.ಶ.೭೪೦ರ ನಂತರ ಎರಡನೇ ವಿಕ್ರಮಾದಿತ್ಯನು ಕಾಂಚೀನಗರವನ್ನು ಗೆದ್ದುದರ ಸ್ಮರಣಾರ್ಥವಾಗಿ ಅವನ ರಾಣಿ ಲೋಕ ಮಹಾದೇವಿಯು ಈ ದೇವಾಲಯವನ್ನು ಕಟ್ಟಿಸಿದಳು. ದೇವಾಲಯವು ವಿಸ್ತಾರವಾಗಿ ಯೋಜಿತವಾಗಿದೆ. ಒಂದು ಗರ್ಭಗೃಹ, ಪ್ರದಕ್ಷಿಣಪಥ, ಸಭಾಮಂಟಪ, ಗಣೇಶ ಮತ್ತು ಮಹಿಷಮರ್ದಿನಿಯರಿಗಾಗಿ ಎರಡು ಪ್ರತ್ಯೇಕ ಕೋಷ್ಠಗಳು, ಸಭಾಮಂಟಪದ ಮೂರೂಕಡೆ ಕಂಬಗಳಿರುವ ಮೂರು ಕೈಸಾಲೆ ಇವೆ. ದೇವಾಲಯದ ಮುಂಭಾಗದಲ್ಲಿ ದೊಡ್ಡ, ಚೌಕವಾದ ನಂದಿ ಮಂಟಪವಿದೆ. ಇಡೀ ದೇವಾಲಯವನ್ನು ಪ್ರಾಕಾರದ ಗೋಡೆಯು ಸುತ್ತುವರಿದಿದೆ. ಪೂರ್ವದಲ್ಲೂ ಪಶ್ಚಿಮದಲ್ಲೂ ಪ್ರವೇಶದ್ವಾರಗಳಿವೆ. ಗರ್ಭಗೃಹದ ಬಾಗಿಲವಾಡವು ಅದ್ಭುತವಾದ ಮಕರತೋರಣದ ಕೆತ್ತನೆಯಿಂದಾಗಿ ಪ್ರಭಾವಶಾಲಿಯಾಗಿದೆ. ಸಭಾಮಂಟಪದಲ್ಲಿ ನಾಲ್ಕು ಸಾಲುಗಳಲ್ಲಿ ೧೮ ಕಂಬಗಳಿವೆ. ಆಚೀಚೆ ಕೊನೆಯ ಸಾಲುಗಳಲ್ಲಿ ತಲಾ ಐದು ಕಂಬಗಳಿದ್ದು, ನಡುವಣ ಎರಡು ಸಾಲುಗಳಲ್ಲಿ ೧೮ ಕಂಬಗಳಿವೆ. ಸುಮಾರು ೨.೨.೫. ಮೀಟರ್ ಎತ್ತರವಾಗಿರುವ ಈ ಕಂಬಗಳು ಅಗಾಧವಾಗಿ ಕಾಣಿಸುತ್ತವೆ. ಕಾಂಡದ ಮೇಲುಭಾಗದಲ್ಲಿ ಕಥನಾತ್ಮಕ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಭಾಗವತ, ರಾಮಾಯಣ, ಮಹಾಭಾರತ, ಪುರಾಣಗಳು ಮತ್ತು ಪಂಚತಂತ್ರ ಇವುಗಳಿಂದ ಆರಿಸಿದ ಸಂದಭಗರ್ಳನ್ನು ಗಂಗಾವತರಣ, ಕೃಷ್ಣಲೀಲೆ, ಸಮುದ್ರಮಥನ ಇವುಗಳನ್ನು ಕೆತ್ತಲಾಗಿದೆ. ಜೊತೆಗೆ ಪದಕಗಳ ಅಲಂಕಾರವೂ ಇದೆ. ಸಭಾಮಂಟಪದ ಒಳಗೋಡೆಗಳಲ್ಲಿ ಹದಿನಾರು ಗೋಡೆಗಂಬಗಳಿವೆ. ಇವುಗಳ ಮೇಲೆ ವಿವಿಧ ಲಾಸ್ಯ ಭಂಗಿಗಳಲ್ಲಿ  ದೊಡ್ಡ ಗಾತ್ರದ ಮಿಥುನಗಳನ್ನು  ಕೆತ್ತಲಾಗಿದೆ. ಕೈಸಾಲೆಯ ಕಂಬಗಳ ಹೊರಮುಖದ ಮೇಲೂ ದೊಡ್ಡ ಗಾತ್ರದ ಶಿಲ್ಪಗಳಿವೆ. ಕೈಾಲೆಗಳಲ್ಲಿರುವ ದ್ವಾರಪಾಲರನ್ನು ಕೆತ್ತಿದವನು ಬಲದೇವ ಎಂಬ ಶಿಲ್ಪಿ. ದೇವಾಲಯದ ಹೊರಗೋಡೆಗಳಲ್ಲಿ ಕೋಷ್ಠಗಳು, ಅವುಗಳಲ್ಲಿ ಶಿಲ್ಪಗಳ ಅಲಂಕಾರ, ಬೇರೆ ಬೇರೆ ವಿನ್ಯಾಸದ ಜಾಲಂಧ್ರಗಳು ಮತ್ತು ಗೋಡೆಗಂಬಗಳು ಇವೆ, ಜೊತೆಗೆ ಮೂರ್ತಿಶಿಲ್ಪಗಳಿವೆ. ಗಮನಿಸಬೇಕಾದವು ಅಪಸ್ಮಾರನ ಮೇಲೆ ನಿಂತ ಶಿವ, ಲಿಂಗೋದ್ಭವ ಶಿವ, ರಾವಣ-ಜಟಾಯು ಕಾಳಗ, ನರಸಿಂಹನಿಂದ ಹಿರಣ್ಯಕಶಿಪು ವಧೆ, ಕೈಲಾಸ ಪವರ್ತದ ಮೇಲೆ ಶಿವ-ಪಾರ್ವತಿ, ನಂದಿ ಸಮೇತ ಶಿವ, ರಾವಣನು ಶಿವಲಿಂಗವನ್ನು ಪೂಜಿಸುವುದು, ನಟರಾಜ ಮತ್ತು ಅರ್ಧನಾರೀಶ್ವರ. ಈ ದೇವಾಲಯದಲ್ಲಿರುವ ದ್ವಾರಪಾಲರು ಬಿಗಿಯಾದ ಮುಖಮುದ್ರೆಯಿಂದಿದ್ದಾರೆ. ಕೋರೆ ದಾಡೆಗಳು ಹೊರಚಾಚಿವೆ. ಚಾಲುಕ್ಯ ರಾಜ್ಯದ ತಜ್ಞ ಸ್ಥಪತಿಗಳಾದ ಗುಂಡ ಅನಿವಾರಿತ ಮತ್ತು ಸರ್ವಸಿದ್ದಿ ಆಚಾರ್ಯರ ಮೇಲುಸ್ತುವಾರಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿರುವ ಒಂದು ಶಾಸನವು ಅಚಲನ್ ಎಂಬ ಭರತನಾಟ್ಯ ಕಲಾವಿದನೊಬ್ಬನನ್ನು ಕೊಂಡಾಡುತ್ತದೆ.

ಪಾಪನಾಥ ದೇವಾಲಯ

ಎರಡನೇ ಕೀರ್ತಿವರ್ಮನ ಆಳಿಕೆಯಲ್ಲಿ ಕಟ್ಟಿದ ಈ ದೇವಾಲಯವು ಸಾಕಷ್ಟು ದೊಡ್ಡದು. ಗರ್ಭಗೃಹ ಪ್ರದಕ್ಷಿಣ ಪಥ, ಕಂಬಗಳಿರುವ ಮಂಟಪಗಳು ಮತ್ತು ಕೈಸಾಲೆಗಳನ್ನು ಒಳಗೊಂಡಿದೆ. ಗರ್ಭಗೃಹದ ಮೇಲೆ ರೇಖಾನಾಗರ ಶಿಖರವಿದೆ. ಈ ದೇವಾಲಯದ ಒಂದು  ಸ್ವಾರಸ್ಯವೆಂದರೆ, ಅದೇ ಸ್ಥಳದ ಗಳಗನಾಥ ದೇವಾಲಯದಲ್ಲಿರುವ ಹಾಗೆಯೇ, ಪ್ರದಕ್ಷಿಣ ಪಥದ ಹೊರಗೋಡೆಗಳಿಗೆ ತಾಗಿದಂತೆ ಸಣ್ಣ ಕೈಸಾಲೆಗಳು ಅಥವಾ ಗಂಧರ್ವಗಳು ಇರುವುದು. ಇದು ಬೇರೆ ಚಾಲುಕ್ಯ ದೇವಾಲಯಗಳಲ್ಲಿ ಕಾಣಿಸಿದ ಅಂಶ. ಹೊರಗಿನ ಗೋಡೆಗಳ ವ್ಯವಹರಣೆಯೂ ಈ ದೇವಾಲಯದ ಮುಖ್ಯ ಲಕ್ಷಣವಾಗಿದೆ. ಲಲಿತ ಸುಂದರವಾದ ಕೋಷ್ಠಗಳು ಮತ್ತು ಜಾಲಂಧ್ರಗಳು ಇಲ್ಲಿ ಕಂಡುಬರುತ್ತವೆ. ಗೋಡೆಗಳ ಮೇಲೆ ಕಥನ ಶಿಲ್ಪಗಳಿವೆ. ರಾಮಾಯಣದ ಕೆಲವು ಸಂದರ್ಭಗಳನ್ನೂ ಕೆತ್ತಲಾಗಿದೆ. ಕೋಷ್ಠಗಳ ಮೇಲೆ ಚೈತ್ಯಗಳ ಅಲಂಕಾರವಿದೆ. ರಾಮಾಯಣ ಪಟ್ಟಿಕೆಗಳನ್ನು ಜಾಲಂಧ್ರಗಳನ್ನು ಬಲದೇವನು ಸಿದ್ಧಪಡಿಸಿದನು. ಕೈಸಾಲೆಯ ಚಾವಣಿಯಲ್ಲಿರುವ ಶಿವಫಲಕವು ಗಮನಾರ್ಹವಾಗಿದೆ. ದೇವಾಲಯದಲ್ಲಿರುವ ಒಂದು ಶಾಸನವು, ದೇವಾಲಯದ ದಕ್ಷಿಣ ಭಾಗವನ್ನು ರೇವಡಿ ಒವಜ್ಜ ಎಂಬ ವಾಸ್ತುಶಿಲ್ಪಿಯು ನಿರ್ಮಿಸಿದನು ಎಂದು ಉಲ್ಲೇಖಿಸುತ್ತದೆ.

ಮಹಾಕೂಟ

ಸಂಪ್ರದಾಯದ ಪ್ರಕಾರ ಮಹಾಕೂಟವು ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸರನ್ನು ಅಗಸ್ತ್ಯ ಋಷಿಯು ನಾಶ ಮಾಡಿದ ಸ್ಥಳ. ಇಲ್ಲಿನ ದೇವಾಲಯಗಳನ್ನು ವಿಷ್ಣು ಪುಷ್ಕರಣಿಯ ಸುತ್ತಲೂ ನಿರ್ಮಿಸಲಾಗಿದೆ. ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿನಂತೆಯೇ ಇಲ್ಲಿಯೂ ನಾಗರ ಮತ್ತು ದ್ರಾವಿಡ ಶೈಲಿಯ ದೇವಾಲಯಗಳನ್ನು ನಿರ್ಮಿಸಿದೆ. ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ದ್ರಾವಿಡ ಶಿಖರದೊಂದಿಗೆ ಕಟ್ಟಿದ್ದರೆ, ಸಂಗಮೇಶ್ವರ ಮತ್ತು ಅರಿಕೇಶ್ವರ ದೇವಾಲಯಗಳಿಗೆ ರೇಖಾನಾಗರ ಶಿಖರಗಳಿವೆ. ಲಕುಲೀಶ, ಚಂದ್ರಶೇಖರ, ಬಸವಲಿಂಗ ಮೊದಲಾದ ಕದಂಬನಾಗರ ಶಿಖರಗಳನ್ನುಳ್ಳ ದೇವಾಲಯಗಳೂ ಇವೆ. ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ಆಕಾರದಲ್ಲಿ ಬಹಳ ದೊಡ್ಡದಾಗಿವೆ. ಮಿಕ್ಕವು ಚಿಕ್ಕವು. ಮಹಾಕೂಟೇಶ್ವರವು ದ್ರಾವಿಡ ಶಿಖರದಿಂದ ಕೂಡಿದ ಒಂದು ಸಾಂಧಾರ ದೇವಾಲಯ. ಶಿಖರದ ಕೆಳಗಿನ ತಲ ಅಥವಾ ಅಂತಸ್ತು ಚೌಕವಾಗಿದೆ, ಮೇಲಿನ ಅಂತಸ್ತು ಅಷ್ಟಭುಜವುಳ್ಳ ಗುಮ್ಮಟವಾಗಿದ್ದು ಅದರ ಮೂಲೆಗಳಲ್ಲಿ ಕರ್ಣಕೂಟಗಳಿವೆ. ಅಧಿಷ್ಠಾನವು ಕಥನಾತ್ಮಕ ಶಿಲ್ಪಗಳಿಗೆ ಹೆಸರಾಗಿದೆ. ರಾವಣ ಮತ್ತು ಶಿವನ ಆತ್ಮಲಿಂಗದ ಕಥೆ, ಅಥವಾ ಜನಪ್ರಿಯವಾದ ಭೂಕೈಲಾಸದ ಕಥೆಯನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ. ಹೊರಗಿನ ಗೋಡೆಗಳಲ್ಲಿ ಕೋಷ್ಠಗಳನ್ನು, ಜಾಲಂಧ್ರಗಳನ್ನು ಹದವರಿತು ಅಳವಡಿಸಲಾಗಿದೆ.

*    *    *

ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸಂಖ್ಯಾತ ದೇವಾಲಯಗಳನ್ನು ನಿರ್ಮಿಸಲಾಗಿದ್ದರೂ, ಈ ಭವ್ಯಕಟ್ಟಡಗಳ ವಾಸ್ತುಶಿಲ್ಪಗಳು ಮತ್ತು ಶಿಲ್ಪಿಗಳನ್ನು ಕುರಿತ ಮಾಹಿತಿ ಹೆಚ್ಚಾಗಿ ತಿಳಿದುಬರುವುದಿಲ್ಲ. ಆದರೂ ೮ನೇ ಶತಮಾನದಲ್ಲಿ, ವಿಶೇಷವಾಗಿ ಪಟ್ಟದಕಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಕೆಲಸ ಮಾಡಿದ ಶಿಲ್ಪಿಗಳು ಮತ್ತು ವಾಸ್ತುಶಿಲ್ಪಿಗಳನ್ನು ಕುರಿತು ಸ್ವಲ್ಪ ಮಾಹಿತಿ ತಿಳಿದಿದೆ. ತನ್ನ ಕಲಾಕೃತಿಯ ಮೇಲೆ ತನ್ನ ಹೆಸರನ್ನು ನಮೂದಿಸುವುದು ಕರ್ನಾಟಕದಲ್ಲಿ ೭ನೇ ಶತಮಾನಕ್ಕಿಂತ ಮೊದಲು ರೂಢಿಯಲ್ಲಿರಲಿಲ್ಲ. ಚಾಲುಕ್ಯರ ಕೈಕೆಳಗೆ, ವಿಶೇಷವಾಗಿ ೮ನೇ ಶತಮಾನದಲ್ಲಿ ಈ ಅಭ್ಯಾಸವು ಮನ್ನಣೆ ಪಡೆಯಿತು. ಹೀಗೆ ಹೆಸರು ತಿಳಿದುಬಂದಿರುವ ಅನೇಕ ಕಲಾವಿದರು ಪಟ್ಟದಕಲ್ಲಿನಲ್ಲಿ ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ ಕೆಲಸ ಮಾಡಿದರು. ಸಂಖ್ಯೆ ಕಡಿಮೆಯಾದರೂ, ವಿವಿಧ ಕಲಾ ಸಂಪ್ರದಾಯಗಳಿಗೆ ಸೇರಿದ ವಾಸ್ತುಶಿಲ್ಪ ವಿಜ್ಞಾನದಲ್ಲಿ ಹೇಗೆ ಅವರು ಪರಿಣತಿಯನ್ನು ಪಡೆದಿದ್ದರು ಎನ್ನುವುದನ್ನು ಸೂಚಿಸಲು ಅಷ್ಟು ಸಾಕು.

ವಾಸ್ತುಶಿಲ್ಪಗಳಲ್ಲಿ ನರಸೊಬ್ಬನು ಐಹೊಳೆಯಲ್ಲಿ ಕೆಲಸ ಮಾಡಿದನು; ಆರ್ಯಮಿಂಚಿ ಉಪಾಧ್ಯಾಯನು ಬಾದಾಮಿಯಲ್ಲಿ, ಗುಂಡ ಅನಿವಾರಿತ, ಸರ್ವಸಿದ್ದಿ ಆಚಾರ್ಯ ಮತ್ತು ರೇವಡಿ ಓವಜ್ಜ ಇವರು ಪಟ್ಟದಕಲ್ಲಿನಲ್ಲಿ ಕೆಲಸ ಮಾಡಿದರು. ಮೊದಲನೆಯ ಮತ್ತು ಕೊನೆಯ ವಾಸ್ತುಶಿಲ್ಪಿಗಳು ರೇಖಾನಾಗರ ದೇವಾಲಯ ನಿರ್ಮಾಣದಲ್ಲಿ ಕುಶಲರಾಗಿದ್ದರೆ, ಇತರರು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ತಜ್ಞರು. ಮೇಲು ಮತ್ತು ಕೆಳ ಶಿವಾಲಯ, ಗೌಡರಗುಡಿ, ದುರ್ಗಾ ಮತ್ತು ಹುಚ್ಚಪ್ಪಯ್ಯ ಮಠಗಳನ್ನು, ಲಾಡಖಾನ್, ಗೌಡರಗುಡಿಯನ್ನು ಐಹೊಳೆ ಯಲ್ಲೂ; ಗಳಗನಾಥ, ಕಾಶಿವಿಶ್ವೇಶ್ವರ, ಮತ್ತು ಸಂಗಮೇಶ್ವರ ದೇವಾಲಯಗಳನ್ನು ಪಟ್ಟದಕಲ್ಲಿನಲ್ಲೂ ನಿರ್ಮಿಸಿದ ಸ್ಥಪತಿಗಳು ಮತ್ತು ಶಿಲ್ಪಿಗಳ ಬಗೆಗೆ ಏನೂ ತಿಳಿದುಬರದಿರುವುದು ನಿಜವಾಗಿ ದುರದೃಷ್ಟದ ಸಂಗತಿ. ಇನ್ನು ಪಾನ್ಯಂ, ಪಾಪನಾಶನಂ, ಆಲಂಪುರ ಮತ್ತು ಸಂಗಮಗಳಲ್ಲಿನ ದೇವಾಲಯಗಳ ಸ್ಥಪತಿಗಳ ಬಗೆಗೆ ಕೇಳುವುದೇ ಬೇಡ. ಬಹುಶಃ ೭ನೇ ಶತಮಾನದ ಮಧ್ಯಭಾಗದಲ್ಲಿದ್ದ ಆರ್ಯಮಿಂಚಿ ಉಪಾಧ್ಯಾಯನು ದ್ರಾವಿಡ ಶೈಲಿಯ ದೇವಾಲಯಗಳನ್ನು ನಿರ್ಮಿಸುವುದರಲ್ಲಿ ತಜ್ಞನಾಗಿದ್ದನು. ಐಹೊಳೆಯ ಮೇಗುತಿ ದೇವಾಲಯವನ್ನು, ಬಾದಾಮಿಯ ಎರಡು ಶಿವಾಲಯಗಳನ್ನು ತನ್ನ ಕಣ್ಣೆದುರಿಗೆ ಮಾದರಿಯಾಗಿ ಇಟ್ಟುಕೊಂಡಿದ್ದನು. ಬಾದಾಮಿಯಲ್ಲಿ ಮಾಲೆಗಿತ್ತಿ ಶಿವಾಲಯವನ್ನು ಯೋಜಿಸುವುದರಲ್ಲಿ ಇವು ಅವನಿಗೆ ಕೆಲವು ಮೂಲಭೂತ ಅಂಶಗಳನ್ನು ಒದಗಿಸಿದವು. ತನ್ನ ಈ ಅಡಕವಾದ ಆದರೆ ಭವ್ಯವಾದ ದೇವಾಲಯವನ್ನು ಕಟ್ಟಲು ನಿವೇಶನವನ್ನು ಆರಿಸಿರುವುದರಲ್ಲೇ ಅವನ ಸೌಂದರ್ಯಪ್ರಜ್ಞೆ ವ್ಯಕ್ತವಾಗುತ್ತದೆ. ಬೆಟ್ಟದ ಇಳುಕಲಿನ ಹಿನ್ನೆಲೆಯಲ್ಲಿ ಒಂದು ಭಾರೀ ಬಂಡೆಯ ಮೇಲೆ ಆರ್ಯಮಿಂಚಿಯು ಈ ಭವ್ಯ ದೇವಾಲಯವನ್ನು ಯೋಜಿಸಿದನು. ಹೊರಗೋಡೆಗಳನ್ನು ಅಲಂಕರಿಸಿರುವ ಕೆಲವು ಶಿಲ್ಪಗಳು, ಶುದ್ಧ ದ್ರಾವಿಡ ಶಿಖರದ ನಿರ್ಮಾಣ ಇವು ಆರ್ಯಮಿಂಚಿಯು ತಜ್ಞ ವಾಸ್ತುಶಿಲ್ಪಿಯೂ, ಶಿಲ್ಪ ಕಲಾವಿದನೂ ಆಗಿದ್ದುದಕ್ಕೆ ಸಾಕ್ಷಿ ನುಡಿಯುತ್ತವೆ.

ಐಹೊಳೆಯ ಹುಚ್ಚಪ್ಪಯ್ಯ ಗುಡಿಯು ೮ನೇ ಶತಮಾನದ ಮೊದಲನೆಯ ಪಾದದಲ್ಲಿ ನರಸೊಬ್ಬನ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿತು. ನರಸೊಬ್ಬನು ದೇವಾಲಯ ನಿರ್ಮಾಣದಲ್ಲಿ ಮಾತ್ರವಲ್ಲ, ಗುಹಾಲಯಗಳ ಉತ್ಖನನದಲ್ಲೂ ನಿಪುಣನಾಗಿದ್ದನು. ಒಂದು ಗುಹೆಯನ್ನು ಅಗೆದು ರೂಪಿಸಲು ಲಂಬಸೂತ್ರಗಳನ್ನೆಳೆದು ಗುರುತಿಸಿದ್ದನು. ತಿಳಿದು ಬಂದಿಲ್ಲದ ಯಾವುದೋ ಕಾರಣಕ್ಕೆ ಆ ಗುಹೆಯನ್ನು ಉತ್ಖನನ ಮಾಡಲಾಗಲಿಲ್ಲ. ಲಂಬಸೂತ್ರದ ಮೇಲೆ ಕೆತ್ತಿರುವ ಒಂದು ಶಾಸನವು ನರಸೊಬ್ಬನ ಪರಿಣತಿಯನ್ನು ಕೊಂಡಾಡುತ್ತದೆ. ರೇಖಾನಾಗರ ಶೈಲಿಯಲ್ಲಿ ಕಟ್ಟಿದ ಹುಚ್ಚಪ್ಪಯ್ಯ ಗುಡಿಯಲ್ಲೂ ನರಸೊಬ್ಬನ ಸಾಧನೆಗಳನ್ನು ಪ್ರಶಂಸಿಸುವ ಒಂದು ಶಾಸನವಿದೆ. ಅವನಂಥ ನಿಪುಣನು ಹಿಂದೆ ಹುಟ್ಟಲಿಲ್ಲ, ಮುಂದೆ ಹುಟ್ಟುವುದಿಲ್ಲ ಎಂದು ಶಾಸನವು ಹೇಳುತ್ತದೆ. ಪ್ರಾಸಾದಗಳನ್ನು ಕಟ್ಟುವುದರಲ್ಲಿ ಅವನು ತಜ್ಞನಾಗಿದ್ದನು. ಅವನಿಗೆ ಗಣಸೊಬ್ಬನು ಸಹಾಯಕನಾಗಿದ್ದನು. ಬಹುಶಃ ಅವನ ಮಗನಾಗಿರಬಹುದು. ದೇವಾಲಯದ ಶಿಲ್ಪಗಳನ್ನು ಸಿದ್ಧಪಡಿಸುವುದರಲ್ಲಿ ಅವನ ಸಹಾಯವಿತ್ತು. ನರಸೊಬ್ಬನ ಕಲಾಕೃತಿಗಳಲ್ಲಿ ತುಂಬಾ ಪ್ರಭಾವಶಾಲಿಯಾದವು, ಈ ದೇವಾಲಯದಲ್ಲಿ ಅವನು ಕೆತ್ತಿದ ವಿವಿಧ ಭಾವ ಭಂಗಿಗಳ ಸಣ್ಣ ಯಕ್ಷರ ವಿಗ್ರಹಗಳ ಸಾಲು. ಇವು ಬಹುರಮಣೀಯವಾದ ಶಿಲ್ಪಗಳಾಗಿವೆ.

ಚಾಲುಕ್ಯ ಯುಗದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿಗಳು ಗುಂಡ ಅನಿವಾರಿತ ಮತ್ತು ಸರ್ವಸಿದ್ದಿ ಆಚಾರ್ಯ ಅವರಿಬ್ಬರೂ ಸೇರಿ ಅಗಾಧವಾದ ಒಂದು ದೇವಾಲಯ ಸಮುಚ್ಚಯವನ್ನು ಯೋಚಿಸಿ ಅತ್ಯಂತ ಪರಿಪೂರ್ಣವಾದ ರೀತಿಯಲ್ಲಿ ನಿರ್ವಹಿಸಿದರು. ಅಂಥದೊಂದು ಮಹತ್ ಕೃತಿಯನ್ನು ಹಿಂದೆ ಯೋಚಿಸಿಯೂ ಇರಲಿಲ್ಲ. ಅವರು ಪಟ್ಟದಕಲ್ಲಿಲಿನ ವಿರೂಪಾಕ್ಷ ದೇವಾಲಯದ ವಾಸ್ತುಶಿಲ್ಪಿಗಳು. ಚಾಲುಕ್ಯ ದೇವಾಲಯವೊಂದರ ಅತ್ಯಂತ ಪರಿಪೂರ್ಣ ಮಾದರಿಯಾದ ಇದು ಆ ಕಾಲದ ನಿರ್ಮಾಣ ಮತ್ತು ಅಲಂಕರಣಗಳನ್ನು ನೋಡಿಕೊಂಡನು, ಸರ್ವಸಿದ್ದಿ ಆಚಾರ್ಯನು ದೇವಾಲಯದ ದಕ್ಷಿಣ ಅರ್ಧವನ್ನು ನೋಡಿ ಕೊಂಡನು. ಈ ಅಮೋಘ ಸಾಧನೆಗಾಗಿ ಅವರಿಗೆ ಬಿರುದುಗಳನ್ನಿತ್ತು ಪೆಜ್ಜರಿಪು ಸಮಾರಂಭ ವನ್ನು ನಡೆಸಲಾಯಿತು.

ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ವಾಸ್ತುಶಿಲ್ಪಿಯು ಪಲ್ಲವ ಪ್ರದೇಶಕ್ಕೆ ಸೇರಿದವನು. ಎರಡನೇ ವಿಕ್ರಮಾದಿತ್ಯನು ಸು.೭೪೦ರಲ್ಲಿ ಕಾಂಚಿಯನ್ನು ಗೆದ್ದಮೇಲೆ ಪಟ್ಟದಕಲ್ಲಿಗೆ ಬಂದನು ಎಂಬ ಅಭಿಪ್ರಾಯವು ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಅದನ್ನು ಸ್ವಲ್ಪ ಪರಿಶೀಲಿಸುವುದು ಸೂಕ್ತವಾಗುತ್ತದೆ. ಪಟ್ಟದಕಲ್ಲಿನಲ್ಲಿ ದೇವಾಲಯ ನಿರ್ಮಾಣ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಪಲ್ಲವ ರಾಜ್ಯದಿಂದ ಸರ್ವಸಿದ್ದಿ ಆಚಾರ್ಯನ ನೇತೃತ್ವದಲ್ಲಿ ಕಲಾವಿದರು ಒಂದು ತಂಡವನ್ನು ವಿಕ್ರಮಾದಿತ್ಯನು ಕರೆತಂದನು ಎಂದು ಹೇಳಲಾಗುತ್ತದೆ. ರಾಜನು ವಿರೂಪಾಕ್ಷ ದೇವಾಲಯದ ನಿರ್ಮಾಣವನ್ನು ಸರ್ವಸಿದ್ದಿಗೆ ವಹಿಸಿದನು. ಈ ಅಭಿಪ್ರಾಯಕ್ಕೆ ಆಧಾರ ಎರಡನೇ ಕೀರ್ತಿವರ್ಮನ ವಕ್ಕಲೇರಿ ಫಲಕಗಳಲ್ಲಿ ಉಲ್ಲೇಖಿಸಿರುವ ಸಂಗತಿಗಳು. ಈ ಶಾಸನವು ಹೇಳುವಂತೆ, ಎರಡನೇ ವಿಕ್ರಮಾದಿತ್ಯನು ಕಾಂಚಿಯಲ್ಲಿ ರಾಜಸಿಂಹೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟು ಅಲ್ಲಿದ್ದ ಸುಂದರವಾದ ಶಿಲ್ಪಗಳನ್ನು ನೋಡಿ ಮೆಚ್ಚಿದನು. ಚಾಲುಕ್ಯರಾಜನು ಕಾಂಚಿಯ ಅತ್ಯುತ್ತಮ ಶಿಲ್ಪಿಗಳಲ್ಲಿ ಕೆಲವರನ್ನು ತನ್ನ ಜೊತೆಯಲ್ಲಿ ಪಟ್ಟದಕಲ್ಲಿಗೆ ಬರುವಂತೆ ಪ್ರಚೋದಿಸಿರಬೇಕು ಎಂದು ಕಸಿನ್ಸ್ ಊಹಿಸಿದ್ದಾನೆ. ವಿರೂಪಾಕ್ಷ ದೇವಾಲಯದಲ್ಲಿರುವ ಎರಡು ಶಾಸನಗಳು ಈ ಮಾತಿಗೆ ಪೂರಕವಾಗಿವೆ ಎಂದು ಅವನು ಹೇಳುತ್ತಾನೆ. ಅವು ಸರ್ವಸಿದ್ದಿಯನ್ನು ದಕ್ಷಿಣ ದೇಶದ ಅತ್ಯಂತ ಪರಿಣತನಾದ ಸೂತ್ರಧಾರಿ ಎಂದು ಕೊಂಡಾಡುತ್ತವೆ. ಬೆಂಜಮಿನ್ ರೋಲಂಡ್ ಈ ಅಭಿಪ್ರಾಯವನ್ನೇ ಅನುಮೋದಿಸಿದನು. ಆದರೆ ಪರ್ಸಿಬ್ರೌನ್ ಇದನ್ನು ಒಪ್ಪಲಿಲ್ಲ.

ಎರಡನೇ ಪುಲಕೇಶಿಯ ಕಾಲದಿಂದಲೂ ಪಲ್ಲವರು ಮತ್ತು ಚಾಲುಕ್ಯರ ನಡುವೆ ನಿಕಟವಾದ ಸಂಪರ್ಕವಿದ್ದುದರಲ್ಲಿ ಸಂದೇಹವಿಲ್ಲ. ಇದು ಒಂದು ರೀತಿಯಲ್ಲಿ, ಎರಡೂ ಪ್ರದೇಶಗಳ ಕಲಾವಿದರ ನಡುವೆ ವಿಚಾರವಿನಿಮಯವನ್ನೂ, ಪರಸ್ಪರ ಸಂಪರ್ಕವನ್ನೂ ಬೆಳೆಸಿತು. ಏನೇ ಇರಲಿ, ಸರ್ವಸಿದ್ದಿ ಆಚಾರ್ಯನು ಪಲ್ಲವ ಕಲಾವಿದ ಎಂದು ಹೇಳಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ಎರಡನೇ ವಿಕ್ರಮಾದಿತ್ಯನು ಪಲ್ಲವ ರಾಜಧಾನಿಯಿಂದ ಜಯಶಾಲಿಯಾಗಿ ಹಿಂದಿರುಗಿದ ನಂತರ ನಿರ್ಮಿಸಲಾಯಿತೆನ್ನುವುದೇನೋ ನಿಜ. ಆದರೆ ವಿರೂಪಾಕ್ಷ ದೇವಾಲಯದಲ್ಲೇ ಸರ್ವಸಿದ್ದಿಯನ್ನು ಉಲ್ಲೇಖಿಸುವ ಎಡು ಶಾಸನಗಳಿವೆ. ಎರಡೂ ಅವನನ್ನು ತೆಂಕಣದಿಸೆ ಸೂತ್ರಧಾರಿ ಎಂದು ಉಲ್ಲೇಖಿಸಿವೆ. ಅವನು ದಕ್ಷಿಣ ದೇಶದಿಂದ ಬಂದ ವಾಸ್ತುಶಿಲ್ಪಿ ಎಂದು ಈ ಮಾತುಗಳು ಸೂಚಿಸುತ್ತವೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇದು ತಪ್ಪುದಾರಿಗೆಳೆಯುವ ವಿವರಣೆಯಾಗಿದೆ. ಶಾಸನಗಳು ಕಂಡುಬಂದಿರುವ ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ಈ ಮಾತುಗಳು ವಾಸ್ತವವಾಗಿ, ದೇವಾಲಯದ ದಕ್ಷಿಣ ಭಾಗ ಎಂದಷ್ಟೆ ಅರ್ಥಕೊಡುತ್ತವೆ.

ಪಾಪನಾಥ ದೇವಾಲಯದ ಒಂದು ಶಾಸನವು, ಸರ್ವಸಿದ್ದಿಯ ಶಿಷ್ಯನೂ, ಸಿಲೇಮುದ್ದನ ಮೊಮ್ಮಗನೂ ಆದ ರೇವಡಿ ಓವಜ್ಜ ಎಂಬ ವಾಸ್ತುಶಿಲ್ಪಿಯನ್ನು ಕುರಿತು ತೆಂಕಣದಿಸೆ ಮಾಡಿದೊರ್ ಎಂದು ಉಲ್ಲೇಖಿಸುತ್ತದೆ. ಮಾಡಿದೊರ್ ಎಂಬ ಪದಕ್ಕೆ ಸಂಪೂರ್ಣ ಮಾಡಿದವರು, ನಿರ್ಮಿಸಿದವರು ಎಂದರ್ಥ. ಆದ್ದರಿಂದ ಪಾಪನಾಥ ದೇವಾಲಯದ ದಕ್ಷಿಣ ಭಾಗವನ್ನು ರೇವಡಿ ಓವಜ್ಜನು ನಿರ್ಮಿಸಿದನು ಎಂದು ಅರ್ಥವಾಗುತ್ತದೆ. ವಿರೂಪಾಕ್ಷ ದೇವಾಲಯದ ರಚನೆಯಲ್ಲಿ ಇನ್ನೊಬ್ಬ ಶಿಲ್ಪಿಯ ಸಹಯೋಗವೂ ಇತ್ತು ಎಂಬುದನ್ನು ಮನಸ್ಸಿನಲ್ಲಿಡಬೇಕು. ಅವನು ಗುಂಡ ಅನಿವಾರಿತ. ಇವನು ಉತ್ತರಭಾಗದ ಹೊಣೆಯನ್ನು ಹೊತ್ತಿದ್ದನು. ಸರ್ವಸಿದ್ದಿಯ ಶಿಷ್ಯನಾದ ರೇವಡಿ ಒವಜ್ಜನು ಒಂದು ರೇಖಾನಾಗರ ದೇವಾಲಯದ ನಿರ್ಮಾಣದಲ್ಲೂ ತೊಡಗಿದ್ದನು. ಸರ್ವಸಿದ್ದಿಯು ಪಲ್ಲವ ವಾಸ್ತುಶಿಲ್ಪಿ ಯಾಗಿದ್ದ ಪಕ್ಷದಲ್ಲಿ, ಅವನು ತನ್ನ ಶಿಷ್ಯರನ್ನು ರೇಖಾನಾಗರ ಶೈಲಿಯ ದೇವಾಲಯಗಳ ನಿರ್ಮಾಣದಲ್ಲಿ ತರಬೇತಿ ಕೊಡುವ ತಜ್ಞನಾಗಿದ್ದನೆಂದು ಊಹಿಸಲೂ ಸಾಧ್ಯವಿಲ್ಲ. ಅದು ಚಾಲುಕ್ಯ ವಾಸ್ತುಶಿಲ್ಪಿಗೆ ಮಾತ್ರ ಸಾಧ್ಯವಾಗಿದ್ದ ಕೆಲಸ. ಏಕೆಂದರೆ, ಇಡೀ ದಕ್ಷಿಣದಲ್ಲಿ ಮತ್ತು ದಖ್ಖನಿನಲ್ಲಿ ವಾಸ್ತು ಶಿಲ್ಪಿಗಳಿಗೆ ನಾಗರ ಮತ್ತು ದ್ರಾವಿಡ ಎಂಬ ಎರಡು ಶೈಲಿಗಳ ಬಳಕೆ ಯಿದ್ದದ್ದು ಬಾದಾಮಿ ಪ್ರದೇಶದಲ್ಲಿ ಮಾತ್ರವೇ. ಅಲ್ಲದೆ ಪಲ್ಲವ ಕಲಾವಿದರು ಚಾರ್ಕೊನೈಟ್ (Charkonite) ಶಿಲೆಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರು. ಕೇವಲ ಚಾರ್ಕೊನೈಟ್ ಮಾಧ್ಯಮದಲ್ಲಿ ಅದುವರೆಗೆ ಕೆಲಸ ಮಾಡಿದ ಒಬ್ಬ ಕಲಾವಿದನು ದಿಢೀರನೆ ಮರಳುಗಲ್ಲನ್ನು ಆರಿಸಿಕೊಂಡು ವಿರೂಪಾಕ್ಷ ದೇವಾಲಯದಂತಹ ಅಪೂರ್ವವಾಸ್ತು ಕಲಾಕೃತಿಯನ್ನು ನಿರ್ಮಿಸಿದನು ಎಂಬುದನ್ನು ಊಹಿಸುವುದು ತುಂಬಾ ಕಷ್ಟ. ತಮಿಳು ಪ್ರದೇಶದಲ್ಲಿ ಪಲ್ಲವರಿಗೆ ಸೇರಿದ ಒಂದೇ ಒಂದು ರೇಖಾನಾಗರ ದೇವಾಲಯವೂ ಇಲ್ಲ ಎಂಬುದನ್ನು ಗಮನಿಸಬೇಕು. ಆದ್ದರಿಂದ ಮೇಲ್ಕಂಡ ಶಾಸನದ ಮಾತುಗಳನ್ನು ಅರ್ಥೈಸುವಾಗ ದೇವಾಲಯದ ದಕ್ಷಿಣ ಭಾಗವು ಸರ್ವಸಿದ್ದಿಯ ಉಸ್ತುವಾರಿಯಲ್ಲಿತ್ತು ಎಂದು ಹೇಳಬೇಕೆ ಹೊರತು ದಕ್ಷಿಣ ದೇಶದಿಂದ ಬಂದ ಸರ್ವಸಿದ್ದಿ ಎಂದಲ್ಲ.

ಸಿಲೇಮುದ್ಧನ ಮೊಮ್ಮಗನೂ ಸರ್ವಸಿದ್ದಿಯ ಶಿಷ್ಯನೂ ಆದ ರೇವಡಿ ಓವಜ್ಜನು ಪಟ್ಟದಕಲ್ಲಿನ ಪಾಪನಾಥ ದೇವಾಲಯದ ದಕ್ಷಿಣ ಭಾಗದ ವಾಸ್ತುಶಿಲ್ಪಿಯಾಗಿದ್ದನು. ಬಲದೇವ ಮತ್ತು ಚೆಂಗಮ್ಮ ಎಂಬ ಶಿಲ್ಪಿಗಳೊಂದಿಗೆ ಅವನು ರೇಖಾನಾಗರ ಶೈಲಿಯಲ್ಲಿ ನಿರ್ಮಿಸಿದ ಈ ದೇವಾಲಯದ ಉಸ್ತುವಾರಿಯನ್ನು ನೋಡಿಕೊಂಡನು. ಈ ದೇವಾಲಯದ ಹೊರಗೋಡೆಗಳಲ್ಲಿ ರಾಮಾಯಣದ ಸಂದರ್ಭಗಳನ್ನು ಚಿತ್ರಿಸುವ ಕಥನಶಿಲ್ಪಗಳೂ ಕೆಲವು ಸೂಕ್ಷ್ಮ ಕಲ್ಪನೆಯ ಜಾಲಂಧ್ರಗಳೂ ಚೈತ್ಯ ಪಟ್ಟಿಕೆಗಳೂ ಇವೆ.

ಪಟ್ಟದಕಲ್ಲಿನ ಸುಪ್ರಸಿದ್ಧ ಶಿಲ್ಪಿಗಳಲ್ಲಿ ಬಲದೇವ, ಚೆಂಗಮ್ಮ, ದಾಮೋದರ, ಪುಲ್ಲಪ್ಪ ಮತ್ತು ಆದಿತ್ಯರನ್ನು ಉಲ್ಲೇಖಿಸಬೇಕು. ಇವರು ವಿರೂಪಾಕ್ಷ ದೇವಾಲಯದ ಶಿಲ್ಪಗಳನ್ನು ತಯಾರಿಸಿದರು. ಇವರಲ್ಲಿ ಕೆಲವರನ್ನು ಪಾಪನಾಥ ದೇವಾಲಯ ಶಿಲ್ಪಗಳ ನಿರ್ಮಾಣಕ್ಕೂ ಬಳಸಿಕೊಳ್ಳಲಾಯಿತು. ಇವರಲ್ಲೂ ಬಲದೇವನು ತುಂಬಾ ಮುಖ್ಯನಾದವನು. ಭಯ ಹುಟ್ಟಿಸುವ ದ್ವಾರಪಾಲ ವಿಗ್ರಹಗಳನ್ನು ತಯಾರಿಸುವುದರಲ್ಲಿ ಅವನಿಗೆ ವಿಶೇಷವಾದ ಆಸಕ್ತಿಯಿತ್ತು. ದುಗ್ಗಿ ಆಚಾರಿಯ ಮಗನಾದ ಬಲದೇವನ ಕೆಲವು ಅಮೂಲ್ಯ ಕಲಾಕೃತಿಗಳನ್ನು ಪಾಪನಾಥ ದೇವಾಲಯದಲ್ಲಿ ನೋಡಬಹುದು. ಅವುಗಳಲ್ಲಿ ಒಂದು ಚತುರ ಭಂಗಿಯಲ್ಲಿರುವ ಶಿವ. ಅದೇ ದೇವಾಲಯದ ಹೊರಗೋಡೆಗಳ ಮೇಲೆ ರಾಮಾಯಣ ಪಟ್ಟಿಕೆಗಳನ್ನು ತಯಾರಿಸಿದವನು ಅವನೇ. ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಕಥನಾತ್ಮಕ ಉಬ್ಬುಶಿಲ್ಪಿಗಳ ಕಂಡರಣೆಯಲ್ಲೂ ಅವನು ಪಾಲುಗೊಂಡಿದ್ದ ಸಾಧ್ಯತೆಯಿದೆ. ಅವನ ಸಹಯೋಗವಿದ್ದ ಇನ್ನೊಂದು ಅಮೋಘ ಕಲಾಕೃತಿ ವಿರೂಪಾಕ್ಷ ದೇವಾಲಯದ ಕೈಸಾಲೆಯ ಕಂಬವೊಂದರ ಮೇಲಿರುವ ಶಿಲ್ಪ. ಅದು ರಾವಣನು ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನಿಸುತ್ತಿರುವುದನ್ನು ಚಿತ್ರಿಸುತ್ತದೆ. ಒಟ್ಟು ೨೦ ಕೈಗಳಿಂದ ಕೈಲಾಸ ಪರ್ವತವನ್ನು ಹಿಡಿದುಕೊಂಡಿರುವ ಪರಿಯು ಮನೋಜ್ಞವಾಗಿದೆ. ಶಿವ ಮತ್ತು ಪಾರ್ವತಿಯರೂ ಕೂಡಿದ ಪರ್ವತದ ಭಾರದಿಂದ ರಾವಣನು ಬಸವಳಿದಿರುವ ಭಾವವು ಸ್ಪಷ್ಟವಾಗಿ ಚಿತ್ರಿತವಾಗಿದೆ. ಸುಂದರ ವಿನ್ಯಾಸಗಳಿರುವ ಜಾಲಂಧ್ರಗಳ ತಯಾರಿಕೆಯಲ್ಲೂ ಬಲದೇವನು ಸಿದ್ಧಹಸ್ತನಾಗಿದ್ದನು. ಪಾಪನಾಥ ದೇವಾಲಯದಲ್ಲಿ ಇವುಗಳನ್ನು ನೋಡಬಹುದು. ವಿರೂಪಾಕ್ಷ ದೇವಾಲಯದಲ್ಲೂ ಅಂತಹ ಜಾಲಾಂಧ್ರಗಳ ತಯಾರಿಕೆಯಲ್ಲಿ ಅವನು ಪಾಲುಗೊಂಡಿದ್ದನು.

ಸಕರ ಸಿವಡಿಯ ಶಿಷ್ಯ ಆದಿತ್ಯನು, ಅರುಣನ ಸಾರಥ್ಯದಲ್ಲಿ ಉಷೆ-ಪ್ರತ್ಯೂಷೆಯರೊಂದಿಗೆ ಕೂಡಿಕೊಂಡು ಸೂರ್ಯನು ರಥದಲ್ಲಿ ಕುಳಿತು ಬರುತ್ತಿರುವ ದೊಡ್ಡ ಫಲಕವನ್ನು ಕೆತ್ತಿದನು. ಇದು ವಿರೂಪಾಕ್ಷ ದೇವಾಲಯದ ಕೈಸಾಲೆಯೊಂದರ ಚಾವಣಿಯಲ್ಲಿದೆ. ಇನ್ನೊಬ್ಬ ಶಿಲ್ಪಿ ಚೆಂಗಮ್ಮನು, ಅಪಸ್ಮಾರನ ಮೇಲೆ ಶಿವನು ತ್ರಿಭಂಗದಲ್ಲಿ ನಿಂತಿರುವ ಒಂದು ಶಿಲ್ಪವನ್ನು ಕೆತ್ತಿ, ತನ್ನ ಹೆಸರನ್ನು ನಮೂದಿಸಿದ್ದಾನೆ. ಇದು ವಿರೂಪಾಕ್ಷ ದೇವಾಲಯದ ಹೊರಗೋಡೆಯ ಮೇಲಿದೆ. ಬಲದೇವನಂತೆ, ಚೆಂಗಮ್ಮನೂ ಪಾಪನಾಥ ದೇವಾಲಯದ ಹಲವು ಶಿಲ್ಪಗಳನ್ನು ಸಿದ್ಧಪಡಿಸಿದನು. ಸಭಾಮಂಟಪದ ಕೆಲವು ಕಂಬಗಳನ್ನೂ, ಈ ಮಂಟಪದ ಗೂಡುಗಳಲ್ಲೊಂದರಲ್ಲಿ ಕಂಡುಬರುವ ಮಹಿಷಿಮರ್ದಿನಿಯ ಮೂರ್ತಿಯನ್ನೂ ಬಹುಶಃ ಇವನೇ ಸಿದ್ಧಪಡಿಸಿರಬೇಕು.