ಬಾದಾಮಿಯ ಮೇಣಬಸದಿ ಕನ್ನಡ ನಾಡಿನ ಒಂದು ಅಪೂರ್ವ ಶಿಲ್ಪಕಲಾಕೃತಿ. ಕರ್ನಾಟಕಕ್ಕೆ ಜಾಗತಿಕ ಮಹತ್ವವನ್ನು ತಂದು ಕೊಟ್ಟ ಈ ಗುಹಾಶಿಲ್ಪ, ಬಾದಾಮಿ ಚಾಲುಕ್ಯ ಮುಖ್ಯ ಕೊಡುಗೆಗಳಲ್ಲಿ ಒಂದು.

ಕಲ್ಲಿನಲ್ಲಿ ನಾಲ್ಕು ಕಲಾತ್ಮಕ ಗವಿಗಳನ್ನು ಇಲ್ಲಿ ಕೊರೆಯಲಾಗಿದೆ. ಒಂದನೆಯದು ಶಿವಪರ, ಎರಡನೆಯದು ಮತ್ತು ಮೂರನೆಯ ಗವಿಯ ಪೂರ್ವಭಾಗದಲ್ಲಿ ಒಂದು ನೈಸರ್ಗಿಕ ಗವಿಯಿದೆ ಇದು ಬೌದ್ಧಪರ.

ಮಂಗಳೇಶನ ಶಾಸನದ ಪ್ರಕಾರ ಇದರ ಹೆಸರು ಕಲ್ಮನೆ. ಆದರೆ ಇಂದು ರೂಢಿಯಲ್ಲಿರುವ ಹೆಸರು ಮೇಣಬಸದಿ. ಇಲ್ಲಿ ಶೈವ, ವೈಷ್ಣವ ಗವಿಗಳೇ ಹೆಚ್ಚು ಕಲಾತ್ಮಕ, ಹೆಚ್ಚು ವಿಸ್ತಾರ. ಹೀಗಿದ್ದೂ ಇದರ ಹೆಸರಿನಲ್ಲಿ ‘ಬಸದಿ’ ಎಂಬ ಜೈನ ಪದವೇಕೆ? ‘ಮೇಣ’ ಎಂಬುದಕ್ಕೆ ಅರ್ಥವೇನು? ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಭಾಷೆ, ಧರ್ಮ, ಗವಿನಿರ್ಮಾಣದ ಕಾಲಗಳ ಮೇಲೆ ಬೆಳಕು ಚೆಲ್ಲಬಹುದಾಗಿದೆ.

ಕಲ್ಲನ್ನು ಮೇಣದಂತೆ ಕೊರೆದಿರುವ ಕೆತ್ತನೆಯಾಗಿರುವುದರಿಂದ ಇದರ ಹೆಸರು ಮೇಣಬಸದಿ, ಎಂದು ಜನಸಾಮಾನ್ಯರು ಹೇಳುತ್ತಾರೆ. ಹಾಗಿದ್ದರೆ ಇದೇ ರೀತಿ ಏಕಶಿಲೆಯಲ್ಲಿ ಕೊರೆದು ಅಜಂತಾ ಮೊದಲಾದ ಗವಿಗಳಿಗೆ ಮೇಣಬಸದಿ ಎಂದು ಏಕೆ ಕರೆಯುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮೇಗಣ ಬಸದಿ ಎಂಬುದೇ ಆಡುಮಾತಿನಲ್ಲಿ ಮೇಣಬಸದಿಯಾಗಿರಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಹಾಗಿದ್ದರೆ ಕೆಳಗೆ ಒಂದು ಬಸದಿ ಇರಬೇಕಾಗುತ್ತದೆ. ಬಾದಾಮಿಯಲ್ಲಿ ಅಂಥ ಕುರುಹು ಕಂಡುಬರುವುದಿಲ್ಲ. ಭಾಷಾನಿಯಮದ ಪ್ರಕಾರ ಮೇಗಣ ಶಬ್ದ ಮೇಣವಾಗುವುದಿಲ್ಲ. ಬಹಳೆಂದರೆ ಮೇಲಿನ ಅಥವಾ ಮ್ಯಾಲಿನ ಆಗಬಹುದು. ಇಲ್ಲವೆ ಶ್ರವಣಬೆಳ್ಗೊಳದಲ್ಲಿಯ ಒಂದು ಬಸದಿಗೆ ‘ಮೇಗಣ ಬಸದಿ’ ಎಂಬ ಹಳೆಯ ಹೆಸರೇ ಇನ್ನೂ ಮುಂದುವರಿದಂತೆ ಇಲ್ಲಿಯೂ ಮುಂದುವರಿಯಬಹುದಿತ್ತು. ಹೀಗಾಗಿ ಈ ವಿವರಣೆಯನ್ನೂ ಕೈಬಿಟ್ಟು ಬೇರೊಂದು ಅರ್ಥ ಹುಡುಕಬೇಕಾಗುತ್ತದೆ.

ಬೌದ್ಧ ಭಿಕ್ಷುಗಳು ಾಸ ಮಾಡುವ ಗವಿಗೆ ಲಯನ ಅಥವಾ ಲಯಣವೆನ್ನುತ್ತಾರೆ.  ಇವು ಅಖಂಡ ಕಲ್ಲಿನಲ್ಲಿ ಕೊರೆದ ವಸತಿಗಳು. ಸುತ್ತಲೂ ಕೊಠಡಿಯುಳ್ಳ ದೊಡ್ಡ ಅಂಗಳ, ಕೊಠಡಿಯುಳ್ಳ ದೊಡ್ಡ ಅಂಗಳ, ಕೊಠಡಿಗಳಲ್ಲಿ ಭಿಕ್ಷುವಿಗೆ ಮಲಗಲು ಕಲ್ಲು ಹಾಸಿಗೆ, ನೀರಿಗಾಗಿ ಪೋಥಿ ಹೆಸರಿನ ಒಂದೆರಡು ಕಲ್ಲಿನ ತೊಟ್ಟಿಗಳು, ಮಳೆಗಾಲದಲ್ಲಿ ಬೌದ್ಧ ಭಿಕ್ಷುಗಳು ವಾಸ ಮಾಡುವ ಲಯಣಗಳ ಸ್ವರೂಪವಿದು. ಲಯಣವೆಂಬುದು ಆಡುಮಾತಿನಲ್ಲಿ ಲೇಣ ಎಂದಾಗುತ್ತದೆ.

ಬಾದಾಮಿ ಬೌದ್ಧರ ನೆಲೆಯಾಗಿದ್ದಿತೆಂದೂ, ಅಲ್ಲಿ ಅನೇಕ ಸಂಘಾರಾಮಗಳಿದ್ದವೆಂದೂ ಪುಲಿಕೇಶಿಯ ಆಸ್ಥಾನಕ್ಕೆ ಬಂದಿದ್ದ ಚೀನಿ ಪ್ರವಾಸಿ ಹ್ಯೂಯನ್‌ತ್ಸಾಂಗ್ ಹೇಳುತ್ತಾನೆ. ಪದ್ಮಪಾಣಿ ಬುದ್ಧನ ಶಿಲ್ಪವಿರುವ ನೈಸರ್ಗಿಕ ಗವಿ ಈ ಬೆಟ್ಟದಲ್ಲಿದೆ. ಈ ಗವಿ ಬೌದ್ಧಯತಿಗಳ ವಾಸಸ್ಥಾನವಾಗಿರುವುದರಿಂದ ಇದು ಲಯಣವೇ ಆಗಿದೆ. ಇದರಿಂದಾಗಿ ಒಂದು ಕಾಲಕ್ಕೆ ಇಡೀ ಬೆಟ್ಟವನ್ನು ಲಯಣ ಇಲ್ಲವೆ ಲೇಣವೆಂದು ಕರೆಯುತ್ತಿರಬಹುದು. ವೈದಿಕ ಸಂಪ್ರದಾಯದವರಾದ ಬಾದಾಮಿ ಚಾಲುಕ್ಯರ ಕಾರಣವಾಗಿ ಈ ಭಾಗದಲ್ಲಿ ಬೌದ್ಧಮತ ಕ್ರಮೇಣ ನಾಶವಾಯಿತೆಂದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

ಬಾದಾಮಿಯಲ್ಲಿ ಬೌದ್ಧರಂತೆ ಜೈನರೂ ವಾಸವಾಗಿದ್ದರು. ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿ ಜೈನ. ಬಾದಾಮಿಯ ನಾಲ್ಕನೆಯ ಗವಿ ಜೈನರದು. ಬೌದ್ಧಯತಿಗಳ ವಾಸಸ್ಥಾನ ಲಯಣವಾದರೆ ಜೈನಯತಿಗಳ ವಾಸಸ್ಥಾನ ಬಸದಿ (ಲಯಣ ಪದ ಜೈನರಲ್ಲಿ ಇದ್ದರೂ ಗೌಣ). ಬಾದಾಮಿ ಬೆಟ್ಟದಲ್ಲಿಯ ಬೌದ್ಧಗವಿಗಿಂತ ಜೈನಗವಿ ತರುವಾಯದ್ದು. ಹೀಗೆ ಬೌದ್ಧಗವಿಗೆ ಜೈನಗವಿ ಜೊತೆಯಾದಾಗ ಆ ಬೆಟ್ಟವನ್ನು ಲೇಣ+ಬಸದಿ ಎಂದು ಕರೆಯತೊಡಗಿರಬೇಕು. ಈ ಹೆಸರಿನಲ್ಲಿ ಬೌದ್ಧ ಮತ್ತು ಜೈನ ಗವಿಗಳ ಸೂಚನೆ ಮಾತ್ರ ಕಂಡು ಬರುವುದರಿಂದ ಶೈವ, ವೈಷ್ಣವ ಗವಿಗಳು ಇವುಗಳಿಗೆ ತರುವಾಯ ಹುಟ್ಟಿರುವ ಸಾಧ್ಯತೆಯಿದೆ. ಹೀಗೆ ಹೊಸ ಗವಿಗಳು ನಿರ್ಮಾಣವಾದರೂ ಹೆಸರು ಮಾತ್ರ ಹಳೆಯದೇ ಮುಂದುವರಿಯಿತೆಂದು ಕಾಣುತ್ತದೆ.

ಕಾಲಕ್ರಮದಲ್ಲಿ ಲೇಣಬಸದಿ ಹೆಸರಿನ ಅರ್ಥ ಅಪರಿಚಿತವಾದಾಗ ಜನಸಾಮಾನ್ಯರು ಲೇಣದ ಸ್ಥಾನದಲ್ಲಿ ತಮಗೆ ಪರಿಚಿತವಿರುವ, ಧ್ವನಿಸಾಮ್ಯದ ಮೇಣ ಪದವನ್ನು ಬಳಸಿದಂತಿದೆ. ಇದು ಭಾಷೆಯಲ್ಲಿ ಜರುಗುವ ಸಹಜ ಕ್ರಿಯೆ. ಅಂದಿನಿಂದ ಮೇಣಬಸದಿ ಎಂಬ ಹೆಸರು ಮೇಣದಲ್ಲಿ ಕೆತ್ತಿದಂಥ ಶಿಲ್ಪಕಲೆ ಎಂಬ ಅರ್ಥವಿವರಣೆಯೂ ಪ್ರಚಾರದಲ್ಲಿ ಬಂದವು.

ಹೀಗೆ ಶೈವ, ವೈಷ್ಣವ ಗವಿಗಳು ಇಲ್ಲಿಯ ಮುಖ್ಯ ಆಕರ್ಷಣೆಗಳಾಗಿದ್ದರೂ ಈ ಬೆಟ್ಟಕ್ಕೆ ಯಾವ ಕಾಲಕ್ಕೂ ಹಿಂದೂ ಹೆಸರು ಪ್ರಾಪ್ತವಾಗಲಿಲ್ಲ. ಬೌದ್ಧರ ಕಾಲದಲ್ಲಿ ಲೇಣವೆಂಬ, ಜೈನರ ಕಾಲದಲ್ಲಿ ಲೇಣ ಬಸದಿಯೆಂಬ, ತರುವಾಯ ಮೇಣ ಬಸದಿಯೆಂಬ ಹೆಸರುಗಳು ಬೆಳೆದು ಬಂದಿವೆ. ಒಂದೂವರೆ ಸಾವಿರ ವರ್ಷ ಕಳೆದರೂ ಲೇಣವೆಂಬ ಹಳೆಯ ಶಬ್ದ ಮೇಣವೆಂಬ ಹೊಸ ಶಬ್ದದ ಹೊಟ್ಟೆಯಲ್ಲಿ ಇನ್ನೂ ಜೀವ ಹಿಡಿದುಕೊಂಡು ಉಳಿದು ಬಂದಿೆ.