ಚಾಲುಕ್ಯ ರಾಚನಿಕ ದೇಗುಲಗಳ ಶಿಲ್ಪಕಲೆ

ಗುಹಾವಾಸ್ತು ಪರಂಪರೆ ಬಾದಾಮಿಯಲ್ಲಿ ಇನ್ನೂ ರೂಢವಾಗಿದ್ದಾಗಲೇ ಚಾಲುಕ್ಯರು ರಾಚನಿಕ ದೇಗುಲಗಳ ನಿರ್ಮಾಣಕ್ಕೆ ಹುಟ್ಟು ಹಾಕಿದರು. ಅನೇಕ ಸಂಖ್ಯೆಯಲ್ಲಿ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಸಂಡೂರು, ಆಲಂಪುರ, ಕೆಲೂರು ಮುಂತಾದೆಡೆ ರಾಚನಿಕ ಶಿಲಾದೇಗುಲಗಳು ನಿರ್ಮಾಣಗೊಂಡವು. ಅಂಥವುಗಳಲ್ಲಿ ಹಲವಾರು ಶಿಲ್ಪಗಳಿಂದ ಸಿಂಗರಿಸಲ್ಪಟ್ಟಿವೆ. ಗುಹಾಶಿಲ್ಪಗಳಲ್ಲಿ ಕಂಡುಬರುವ ಶೈಲಿ, ಪ್ರತಿಮಾಲಕ್ಷಣ ಇತ್ಯಾದಿ ವೈವಿಧ್ಯಗಳನ್ನು ಈ ಶಿಲ್ಪಗಳಲ್ಲಾದರೂ ಗಮನಿಸಬಹುದು. ಎಲ್ಲಾ ದೇಗುಲಗಳ ಶಿಲ್ಪಗಳನ್ನು ಪರೀಕ್ಷೆಗೊಳಪಡಿಸುವುದು ಇಲ್ಲಿ ಸಾಧ್ಯವೂ ಇಲ್ಲ; ಅವಶ್ಯವೂ ಅಲ್ಲ. ಯಾಕೆಂದರೆ ಅಂಥ ಪ್ರಯತ್ನ ಹೇಳಿದ ವಿಷಯಗಳನ್ನು ಮತ್ತೊಮ್ಮೆ ಹೇಳುವ ಸ್ಥಿತಿಗೆ ಎಡೆ ಮಾಡಿಕೊಡಬಹುದು. ನಾವಿಲ್ಲಿ ಶೈಲಿ, ಪ್ರತಿಮಾಲಕ್ಷಣ, ಕಾಲಾನುಕ್ರಮ ಇವುಗಳ ದೃಷ್ಟಿಯಿಂದ ಮಹತ್ವದ್ದೆನಿಸುವ ಕೆಲವು ದೇಗುಲಗಳ ಶಿಲ್ಪಗಳನ್ನು ಮಾತ್ರ ಪರಿಗಣಿಸುವದು ಯೋಗ್ಯ.

ಬಾದಾಮಿಯಲ್ಲಿರುವ ಮೇಲಣ ಶಿವಾಲಯ (ವಿಷ್ಣು ದೇವಾಲಯ) ಹಾಗೂ ಮಾಲಗಿತ್ತಿ ಶಿವಾಲಯ (ಸೂರ್ಯ ದೇವಾಲಯ) ಚಾಲುಕ್ಯರ ಪ್ರಾಚೀನ ರಾಚನಿಕ ಶೀಲಾದೇಗುಲ ಗಳಾಗಿದ್ದು, ಶಿಲ್ಪ ದೃಷ್ಟಿಯಿಂದ ಮಹತ್ವದ್ದಾಗಿವೆ. ಮೇಲಣ ಶಿವಾಲಯದ ಗೋಡೆಗಳಲ್ಲಿ ಗೋವರ್ಧನಧಾರಿ ಕೃಷ್ಣ, ಕಾಲಿಯ ದಮನ ಕೃಷ್ಣ ಹಾಗೂ ನರಸಿಂಹ ವಿಗ್ರಹಗಳಿವೆ. ದಕ್ಷಿಣ ಗೋಡೆಯಲ್ಲಿರುವ ಗೋವರ್ಧನಧಾರಿ ಕೃಷ್ಣನ ಉಬ್ಬುಶಿಲ್ಪ ಬಹಳಷ್ಟು ಹಾಳಾಗಿಯಾದರೂ ಬಹು ಸುಂದರ ಮತ್ತು ಅಪರೂಪದ ಕೃತಿ. ತೆಳು ಮೈಕಟ್ಟಿನ ಹಗುರ ವ್ಯಕ್ತಿತ್ವದ ಕೃಷ್ಣ ಬಲಗೈಯಿಂದ ಗೋವರ್ಧನ ಗಿರಿಯನ್ನೆತ್ತಿ ಎಡಗೈಯನ್ನು ಸೊಂಟದ ಸಮೀಪ ಇರಿಸಿದ್ದಾನೆ. ಗಿರಿಯ ಭಾರ ಅವನ ಮೇಲೆ ಪರಿಣಾಮ ಬೀರಿದಂತಿಲ್ಲ. ಕಿರೀಟ, ಮಣಿಸರ, ಮುಕ್ತಾ ಯಜ್ಞೋಪವೀತ ಮುಂತಾದ ಆಭರಣಗಳು, ಕಾಲಗಂಟಿನವರೆಗೆ ಇಳಿದಿರುವ ಧೋತಿ, ಬಿಗಿದ ಕಟಿವಸ್ತ್ರ ಇತ್ಯಾದಿಗಳಿಂದ  ಅವನು ಭೂಷಿತನಾಗಿದ್ದಾನೆ. ಗಿರಿಯ ಕೆಳಗೆ ಗೋವುಗಳು ಆಶ್ರಯ ಪಡೆದಿವೆ; ಗೋಪಿ‑ಗೋಪಾಲಕರು ಹಸನ್ಮುಖರಾಗಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮುಕ್ತಾಯಜ್ಞೋಪವೀತ ಹಾಗೂ ಕಟಿವಸ್ತ್ರದ ಸ್ವರೂಪ ಗುಹಾಶಿಲ್ಪಗಳನ್ನು ನೆನಪಿಸುತ್ತವೆ. ಆದರೆ ಮುಖ ಒಡೆದಿರುವುದರಿಂದ ಶೈಲಿಯ ಬಗ್ಗೆ ಸ್ಪಷ್ಟೋಕ್ತಿ ಸಾಧ್ಯವಾಗದು.

ಇದೇ ದೇವಾಲಯದ ಉತ್ತರ ಗೋಡೆಯ ಸ್ಥೌಣ ನರಸಿಂಹ ಶಿಲ್ಪದಲ್ಲಿ ನರಸಿಂಹನ ಎರಡೂ ಮಗ್ಗುಲಲ್ಲಿ ಎರಡು ಬಾರಿಯಂತೆ ನಾಲ್ಕು ಸಲ ಹಿರಣ್ಯಕಶಿಪುವನ್ನು ತೋರಿಸಲಾಗಿದೆ. ಅವನು ನರಸಿಂಹನ ಮೇಲೆ ಪ್ರಹಾರ ಮಾಡುವುದಕ್ಕಾಗಲಿ, ಅವನಿಂದ ತಪ್ಪಿಸಿಕೊಳ್ಳಲಿಕ್ಕಾಗಲಿ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾನೆ. ತೊಡೆಯ ಮೇಲಿರಿಸಿ ಹಿರಣ್ಯಕಶಿಪುವಿನ ಹೊಟ್ಟೆಯನ್ನು ನರಸಿಂಹನು ಬಗೆಯುತ್ತಿದ್ದಾನೆ. ಭಗವಂತನ ಲೀಲಾ ನಾಟಕ ಬಹು ಸುಂದರವಾಗಿ ಮೂಡಿಬಂದಿದೆ.

ಮಾಲಗಿತ್ತಿ ಶಿವಾಲಯದ ಗೋಡೆಯಲ್ಲಿರುವ ಹಿರಿ ಶಿಲ್ಪಗಳು ಶೈಲಿ ಹಾಗೂ ಪ್ರತಿಮಾ ಲಕ್ಷಣ ದೃಷ್ಟಿಯಿಂದ ಗಮನೀಯವಾಗಿದೆ. ದಕ್ಷಿಣ ಗೋಡೆಯಲ್ಲಿರುವ ಚತುರ್ಭುಜ ಸಮಸ್ಥಾನಕ ಶಿವನ ಶಿಲ್ಪ ಬಹು ಸುಂದರ ಕಲಾಕೃತಿ. ಫಲ, ಸರ್ಪ, ತ್ರಿಶೂಲಗಳನ್ನು ಹಿಡಿದು ಕಟ್ಯವಲಂಬಿತ ಹಸ್ತನಾಗಿ ನಿಂತಿರುವ ಶಿವನ ಇಕ್ಕೆಲಗಳಲ್ಲಿ ಒಬ್ಬೊಬ್ಬನಂತೆ ಋಷಿಗಳು ನಿಂತಿದ್ದಾರೆ. ಅವರ ಬಲಗೈ ಎದೆಯ ಹತ್ತಿರ ಧ್ಯಾನಮಗ್ನ ಭಾವವನ್ನು ಸೂಚಿಸುತ್ತಿದೆ. ಮೇಲಣ ಮೂಲೆಗಳಲ್ಲಿ ಮಾಲಾವಾಹಕ ಗಣರಿದ್ದಾರೆ. ಸರಳ ಹಿತಮಿತ ಆಭರಣಾದಿಗಳಿರುವ ಈ ಶಿಲ್ಪದಲ್ಲಿ ರೂಪಸಂಸ್ಕರಣ ರೀತಿ ಅತ್ಯಾಕರ್ಷಕವಾಗಿದೆ. ಶಿವನ ಜಟಾಭಾರದ ಸ್ವರೂಪ ಹಾಗೂ ಅಂತರ್ಮುಖಿಭಾವ ಮಾಲವ ಪ್ರದೇಶದ ಉತ್ತರ ಗುಪ್ತರ ಕಾಲದ ಕೊಂಕಣ ಮತ್ತು ಉತ್ತರ ಡೆಕ್ಕನ್ (ಎಲಿಫಂಟಾ‑ಎಲ್ಲೋರಾ) ಗುಹಾಲಯಗಳ ಶಿಲ್ಪಗಳನ್ನು ನೆನಪಿಸುತ್ತವೆ.

ಈ ದೇವಾಲಯದ ಉತ್ತರ ಗೋಡೆಯ ಸಮಸ್ಥಾನಕ ಚತುರ್ಭುಜ ವಿಷ್ಣು ಶಿಲ್ಪ ಕೂಡ ಇಂತಹುದೇ ಶೈಲಿಲಕ್ಷಣಗಳಿಂದೊಡಗೂಡಿದೆ. ಫಲ, ಚಕ್ರ, ಶಂಖ ಹಿಡಿದು ಕಟ್ಯವಲಂಬಿತನಾಗಿ, ಅಂತರ್ಮುಖಿ ಭಾವದೊಂದಿಗೆ ನಿಂತಿರುವ ವಿಷ್ಣುವಿನ ಬಲ ಮಗ್ಗುಲಲ್ಲಿ ಗದಾಕೌಮೋದಕೀ ತ್ರಿಭಂಗದಲ್ಲಿ ಸ್ಥಿತಳಾಗಿದ್ದಾಳೆ. ಎಡಮಗ್ಗುಲಲ್ಲಿ ಕುಳ್ಳ ಗರುಡನಿದ್ದಾನೆ. ಚಕ್ರ, ಶಂಖಗಳ ಸಮೀಪ ಒಬ್ಬೊಬ್ಬ ಗಣರಿದ್ದಾರೆ. ಗದಾದೇವಿ ನಿಂತಿರುವ ರೀತಿ ದೇವಗಡದ (ಮಧ್ಯಪ್ರದೇಶ) ಉತ್ತರ ಗುಪ್ತಕಾಲೀನ ದಶಾವತಾರ ದೇವಾಲಯದ ಅನಂತಶಯನ ಶಿಲ್ಪದ ಕೆಳಗಡೆ ಇರುವ ಗದಾದೇವಿಯನ್ನು ನೆನಪಿಸುತ್ತದೆ. ಈ ರೀತಿ ಆಯುಧ ಪುರುಷರನ್ನು ವಿಷ್ಣುವಿನ ಪಾರ್ಶ್ವದಲ್ಲಿ ತೋರಿಸುವ ಪರಂಪರೆ ಗುಪ್ತರ ಕಾಲದಿಂದ ಮುಂದುವರಿದು ಬಂದ ಬಳುವಳಿಯೆಂದು ಕಾಣುತ್ತದೆ. ವಿಷ್ಣುವಿನ ಮೈಕಟ್ಟು ಬಹು ಆಕರ್ಷಕವಾಗಿದೆ. ಅವನು ನಗ್ನನಾಗಿದ್ದಾನೋ ಎನಿಸುವಷ್ಟು ಮಟ್ಟಿಗೆ ಅವನ ವಸ್ತ್ರ ಮೈಗಂಟಿಕೊಂಡಿರುವಂತೆ ನಿರೂಪಿಸಿದೆ. ಮಾಲವ ಪ್ರದೇಶದ ಉತ್ತರ ಗುಪ್ತಕಾಲೀನ ಶಿಲ್ಪಶೈಲಿಯ ಪ್ರಭಾವ ಪ್ರತಿಬಿಂಬಗಳನ್ನು ಇದರಲ್ಲಿ ಕಂಡವರಿದ್ದಾರೆ.

ದೇಗುಲದ ಪೂರ್ವಗೋಡೆಯ ದೇವಕೋಷ್ಠಗಳಲ್ಲಿ ಖಡ್ಗ, ಖೇಟಕ ಹಿಡಿದಿರುವ ದಂಡ ಮತ್ತು ಪಿಂಗಳ ನಿಂತಿದ್ದಾರೆ. ಕೋಷ್ಠದ ನಾಲ್ಕೂ ಮೂಲೆಗಳಲ್ಲಿ ಒಬ್ಬೊಬ್ಬನಂತೆ ಗಣರಿದ್ದಾರೆ. ಇವು ತುಸು ಒರಟಾಗಿ ಕಂಡರೂ ರೂಪಸಂಸ್ಕರಣ ರೀತಿ ಮೇಲೆ ಹೇಳಿದ ಶಿಲ್ಪಗಳನ್ನು ಸಾಕಷ್ಟು ಹೋಲುತ್ತದೆ. ದೇವಾಲಯದ ಒಳಗಡೆ ಅಂತರಾಳದ ಗೋಡೆಯಲ್ಲಿ ಕಥಾವಸ್ತುವಿನ ದೃಷ್ಟಿಯಿಂದ   ಅಪೂರ್ವವೆನಿಸುವ ಶಿಲ್ಪವೊಂದಿದೆ. ಇಲ್ಲಿ ಸೂರ್ಯನು ಛಾಯಾದೇವಿಯ ತಲೆಗೂದಲನ್ನು ಹಿಡಿದು ದಂಡಿಸುತ್ತಿರುವ ಪೌರಾಣಿಕ ಕಥೆಯನ್ನು ತೋರಿಸಿದೆ. ಇಂತಹುದೇ ಇನ್ನೊಂದು ಶಿಲ್ಪವನ್ನು ಐಹೊಳೆಯ ದುರ್ಗಾಗುಡಿಯ ಕಂಬವೊಂದರ ಮೇಲೆ ಕಾಣಬಹುದು.

ಅಂತರ್ಮುಖಿ ಬಾವ, ಸುಂದರ ಆಕರ್ಷಕ ಮೈಮಾಟ, ಸಂಯೋಜನೆಯಲ್ಲಿ ಫಲಕದ ನಾಲ್ಕೂ ಮೂಲೆಗಳಲ್ಲಿ ಒಬ್ಬೊಬ್ಬ ಗಣ ಇಲ್ಲವೆ ಪೂರಕ ವ್ಯಕ್ತಿಗಳನ್ನು ತೋರಿಸುವುದು. ಹಿತ ಮಿತ ಅಲಂಕರಣ, ನಗ್ನಾಭಾಸ ಮೂಡಿಸುವ ರೂಪ ಸಂಸ್ಕರಣ ರೀತಿ ಇವೆಲ್ಲ ಮಾಲಗಿತ್ತಿ ಶಿವಾಲಯದ ಹಿರಿ ಶಿಲ್ಪಗಳ ಸಾಮಾನ್ಯ ಲಕ್ಷಣಗಳಾಗಿ ಒಡೆದು ಕಾಣುತ್ತವೆ. ದೇಗುಲ ದ್ರಾವಿಡ ಶೈಲಿಯದಾಗಿದ್ದು, ಅದರ ವಾಸ್ತುಶಿಲ್ಪಿ ಆರ್ಯಮಞ್ಚ ಉಪಾಧ್ಯಾಯ. ಈ ಹೆಸರು ಆಂಧ್ರದ ಶಿಲ್ಪಿಗಳನ್ನು ನೆನಪಿಸುತ್ತದೆಂಬುದನ್ನು ಮೇಲೆ ಗುಹಾಲಯ ಶಿಲ್ಪಪರಂಪರೆಯ ಸಂದರ್ಭದಲ್ಲಿ ಹೇಳಲಾಯಿತು. ಹೀಗಿದ್ದೂ ಗೋಡೆಯ ಶಿಲ್ಪಗಳು ಮಾಲವ‑ಕೊಂಕಣ ‑ಉತ್ತರ ಡೆಕ್ಕನ್ ಪ್ರದೇಶದ ಶಿಲ್ಪ ಲಕ್ಷಣಗಳನ್ನು ತಕ್ಕಮಟ್ಟಿಗೆ ಹೋಲುತ್ತವೆ ಎಂಬ ಸಂಗತಿ ಆ ಪ್ರದೇಶದ ಶಿಲ್ಪಿಗಳೂ ಇಲ್ಲಿ ಭಾಗವಹಿಸಿದ್ದಾರೆಂಬುದನ್ನು ಸೂಚಿಸುತ್ತದೆ. ಎರಡನೇ ಗುಹಾಲಯದ ದ್ವಾರಪಾಲ ಶಿಲ್ಪಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು; ಆದರೆ ದೇವತೆಯ ಮುಖ ಮತ್ತು ಶರೀರದ ಉಳಿದ ಭಾಗದ ಎತ್ತರದ ಪ್ರಮಾಣ ೧: ೫ ೧/೨ ಅಂತಾಗಿ ಮಾಲಗಿತ್ತಿ ಶಿವಾಲಯದ ಶಿಲ್ಪಗಳು ಹೆಚ್ಚು ಪ್ರಮಾಣಬದ್ಧವಾಗಿ ಕಾಣುತ್ತವೆ. ಏನಿದ್ದರೂ ಈ ಶಿಲ್ಪಗಳು ನಿರ್ದಿಷ್ಟ ಶಿಲ್ಪಶ್ರೇಣಿಯ ಕರಕುಶಲತೆಯ ಪ್ರತಿನಿಧಿಗಳೆಂಬುದರಲ್ಲಿ ಸಂಶಯವಿಲ್ಲ. ಚಾಲುಕ್ಯ ಶಿಲ್ಪ ಪರಂಪರೆಯಲ್ಲಿ ಅವುಗಳಿಗೆ ವಿಶಿಷ್ಟ ಸ್ಥಾನವಿದೆ.

ಮೇಲೆ ಗಮನಿಸಿದ ಶಿಲ್ಪಗಳು ಕ್ರಿ.ಶ. ೬೫೦ಕ್ಕಿಂತ ಮುಂಚಿನವು. ಐಹೊಳೆಯ ಚಿಕ್ಕಿಗುಡಿಯ ಛತಿನಲ್ಲಿರುವ ಶಿಲ್ಪಗಳು ಇದೇ ಕಾಲಾವಧಿಯ ಪ್ರತಿಮಾಲಕ್ಷಣಕ್ಕನುಗುಣವಾಗಿವೆ. ಇಲ್ಲಿಯ ಅನಂತಶಯನ ಮತ್ತು ವಾಮನ‑ತ್ರಿವಿಕ್ರಮ ಶಿಲ್ಪಗಳು ಬಾದಾಮಿಯ ಗುಹಾಶಿಲ್ಪಗಳ ಪ್ರತಿಮಾಲಕ್ಷಣ ಕ್ರಮವನ್ನನುಸರಿಸಿವೆ. ಅನಂತಶಯನನು ಐದು ಹೆಡೆಯ ಹಾವಿನ ಮೇಲೆ ಪವಡಿಸಿದ್ದಾನೆ. ಕೈಗಳಲ್ಲಿ ಆಯುಧಗಳಿಲ್ಲ. ನಾಭಿಯಿಂದ ಮೇಲೆದ್ದಿರುವ ಪದ್ಮದಲ್ಲಿ ಬ್ರಹ್ಮನು ಕುಳಿತಿದ್ದಾನೆ. ಮೇಲ್ಗಡೆ ಗದಾ, ಶಂಖ, ಚಕ್ರ ಮತ್ತು ಖಡ್ಗಗಳನ್ನು ಆಯುಧ ಪುರುಷರಾ ಕಾರದಲ್ಲಿ ಮಧು‑ಕೈಟಭ ರಾಕ್ಷಸರ ಮೆಲೆ ಆಕ್ರಮಣ ಮಾಡುತ್ತಿರುವಂತೆ ಚಿತ್ರಿಸಿದೆ. ತಲೆಯ ಸಮೀಪ ಭೂದೇವಿ, ಕಾಲನ್ನೊತ್ತುತ್ತ ಶ್ರೀದೇವಿ ಕುಳಿತಿದ್ದಾರೆ. ವೈಖಾನಸಾಗಮದಲ್ಲಿ ಹೇಳಿರುವ ‘ಭೂಗಶಯನ ಮೂರ್ತಿ’ಯ ವಿವರಕ್ಕೆ ಇದು ಹೊಂದುತ್ತದೆ. ಬಾದಾಮಿಯ ಎರಡನೇ ಮತ್ತು ಮೂರನೇ ವೈಷ್ಣವ ಗುಹಾಲಯಗಳಲ್ಲಿ ಇದನ್ನು ಹೋಲುವ ಶಿಲ್ಪಗಳನ್ನು ಜಂತಿಗಳಲ್ಲಿರುವ ಕಥಾ ನಿರೂಪಕ ಶಿಲ್ಪಗಳಲ್ಲಿ ಕಾಣಬಹುದು. ಇದರಂತೆ ಚಿಕ್ಕಿಗುಡಿಯ ವಾಮನ‑ತ್ರಿವಿಕ್ರಮ ಶಿಲ್ಪವನ್ನು ಅವೇ ಗುಹಾಲಯಗಳಲ್ಲಿರುವ ಹಿರಿ ಶಿಲ್ಪಗಳ ಪ್ರತಿಮಾಲಕ್ಷಣ ವಿವರಗಳಿಗೆ ಸುಲಭವಾಗಿ ಹೋಲಿಸಬಹುದು.

ಚಾಲುಕ್ಯರ ಆಡಳಿತದ ಉತ್ತರಾರ್ಧಕ್ಕನ್ವಯಿಸುವ ದೇವಾಲಯಗಳು ಐಹೊಳೆ, ಮಹಾಕೂಟ, ಪಟ್ಟದಕಲ್ಲು ಮತ್ತು ಕೆಲೂರಿನಲ್ಲಿವೆ. ಐಹೊಳೆಯ ಹುಚ್ಚಿಮಲ್ಲಿಗುಡಿ ಔತ್ತರೇಯ ನಾಗರ ರೀತಿಯ ದೇಗುಲ. ಇದರ ಮುಖಮಂಟಪದ ಮೇಲ್ಗಂಡಿನಲ್ಲಿ ನವಿಲನ್ನೇರಿರುವ ಕಾರ್ತಿಕೇಯನ ಉಬ್ಬುಶಿಲ್ಪವಿದೆ. ಕೆಳಗೆ ಬಿದ್ದಿರುವ ತಾರಕಾಸುರನ ಮೆಲೆ ನವಿಲು ಕಾಲನ್ನಿರಿಸಿದೆ. ಎಡಗೈಯಲ್ಲಿ ವಜ್ರ ಹಿಡಿದು, ಬಲಗೈಯಲ್ಲಿರುವ ಶೂಲದಿಂದ ಕಾರ್ತಿಕೇಯನು ಅಸುರನ ಮೇಲೆ ದಾಳಿ ಮಾಡುತ್ತಿದ್ದಾನೆ. ಅಸುರನ ಮೇಲೆ ಸಾಧಿಸಿದ ಜಯದಿಂದ ಅವನ ಹಸನ್ಮುಖದಲ್ಲಿ ಸಂತುಷ್ಟಿ ಗೋಚರಿಸುತ್ತಿದೆ. ಕೆಳಗೆ ಅಕ್ಕ‑ಪಕ್ಕದಲ್ಲಿ ಇಬ್ಬರು ಮುನಿಗಳು ವಿಸ್ಮಯ ಹಸ್ತರಾಗಿ ಅವನನ್ನು ಸ್ತುತಿಸುತ್ತಿದ್ದಾರೆ. ಮೆಲ್ಗಡೆ ಇನ್ನಿಬ್ಬರು ಮುನಿಗಳು ತೇಲುತ್ತಿದ್ದ ಕೈಗಳಲ್ಲಿ ಹಾರ ಮತ್ತು ನೈವೇದ್ಯ ಪಾತ್ರೆಗಳನ್ನು ಹಿಡಿದಿದ್ದಾರೆ. ಕಾರ್ತಿಕೇಯನ ಭಂಗಿ ಮತ್ತು ಮುಖಭಾವ ಐಹೊಳೆಯ ದುರ್ಗಾಗುಡಿಯ ಮುಖಮಂಡಪದ ಛತ್ತಿನಲ್ಲಿರುವ ನಾಗರಾಜನನ್ನು ಹೋಲುತ್ತದೆ. ಹುಚ್ಚಿಮಲ್ಲಿಗುಡಿಯ ಕಾರ್ತಿಕೇಯ ಶಿಲ್ಪದ ನಿರ್ಮಾತ್ತ ‘ಕೃಚುಙ್ಗ’.

ಐಹೊಳೆಯ ಲಾಡ್‌ಖಾನ್, ಹುಚ್ಚಪ್ಪಯ್ಯ ಮಠ ಹಾಗೂ ಹುಚ್ಚಪ್ಪಯ್ಯ ಗುಡಿಗಳ ಮುಖಮಂಟಪದ ಕಂಬಗಳ ಮುಖದಲ್ಲಿ ಗಂಗಾ, ಯಮುನಾ, ಮಿಥುನ, ಕಾಮ ರತಿ, ಅಶ್ವಮುಖಿ ಮುಂತಾದ ಶಿಲ್ಪಗಳನ್ನು ಬಹು ಸುಂದರವಾಗಿ ಕಟೆದಿದೆ. ಶೈಲಿ ಸಾಮ್ಯದ ದೃಷ್ಟಿಯಿಂದ ಇವೆಲ್ಲವನ್ನು ನಿರ್ದಿಷ್ಟ ಪರಂಪರೆಯಲ್ಲಿ ತರಬೇಕಾದ ಶಿಲ್ಪಿಗಳು ರಚಿಸಿದ್ದಾರೆಂದು ತಿಳಿಯಬಹುದು. ಲಾಡಖಾನ್ ಮುಖಮಂಟಪ ಕಂಬದ ಮೇಲಿರುವ ಮಿಥುನ ಶಿಲ್ಪದಲ್ಲಿ ತುಂಬಿದ ಅರಳು ಮುಖದ ಸುಂದರ ಮೈಮಾಟದ ದಂಪತಿಗಳು ವೃಕ್ಷದಡಿಯಲ್ಲಿ ಕಾಮೋನ್ಮುಖರಾಗಿ ನಿಂತಿರುವ ಆಕರ್ಷಕ ರೀತಿ ದಂಗುಬಡಿಸುವಂತಹದು. ಸ್ತ್ರೀಯ ಲಜ್ಜಾಭಾವ ಇಲ್ಲಿ ಅದ್ಭುತಾಭಿವ್ಯಕ್ತಿ ಕಂಡಿದೆ. ನಿರನುಭವ ತರುಣ ಬ್ರಹ್ಮಚಾರಿಗಳನ್ನು, ಮುನಿಗಳನ್ನು ಕಾಮಾತುರರಾಗಿಸಲು ಪ್ರಯತ್ನಿಸುತ್ತಿರುವ ಸುಂದರ ಸ್ತ್ರೀಯರ ಶಿಲ್ಪಗಳೂ ಅಷ್ಟೇ ಆಕರ್ಷಕ ವಾಗಿವೆ. ಗಂಡು ಹೆಣ್ಣುಗಳ ಮೈಮಾಟ, ಆಕರ್ಷಕ ಮುಖಭಾವ, ವೈವಿಧ್ಯಮಯ ಭಂಗಿಗಳು, ಲಾಲಿತ್ಯ, ಸ್ಫುಟ ರೂಪ ಸಂಸ್ಕರಣ ರೀತಿ ಇತ್ಯಾದಿಗಳು ಈ ಶಿಲ್ಪಗಳ ಗಮನಾರ್ಹ ಲಕ್ಷಣಗಳು.

ಈ ಶೈಲಿಯ ಇರವನ್ನು ಐಹೊಳೆಯ ದುರ್ಗಾಗುಡಿಯ ಕೆಲವು ಸ್ತಂಭಶಿಲ್ಪಗಳಲ್ಲಿ ಗುರುತಿಸಬಹುದು. ಆದರೆ ಈ ದೇಗುಲದ ವಿಪುಲ ಶಿಲ್ಪಗಳಲ್ಲಿ ಇತರ ವಿವಿಧ ಶೈಲಿಗಳನ್ನೂ ಗುರುತಿಸಲಾಗಿದೆ. ಸೂರ್ಯನು ಛಾಯಾದೇವಿಯನ್ನು ದಂಡಿಸುತ್ತಿರುವದು, ಅಶ್ವಮುಖಿ ಯಕ್ಷಿ ಮತ್ತು ಬ್ರಹ್ಮಚಾರಿ, ಬ್ರಹ್ಮಚಾರಿಯನ್ನು ಸೆಳೆದುಕೊಳ್ಳುತ್ತಿರುವ ಯಕ್ಷಿ, ದ್ವಾರಪಾಲಕ ಇತ್ಯಾದಿ ಶಿಲ್ಪಗಳು ಹೆಚ್ಚು ಕಡಿಮೆ ಲಾಡ್‌ಖಾನ್ ಮುಖ ಮಂಟಪದ ಶಿಲ್ಪ ಶೈಲಿಯಲ್ಲಿವೆ. ಆದರೆ ದುರ್ಗಾಗುಡಿಯ ಉತ್ತರ ಪಾರ್ಶ್ವದ ಕಂಬಗಳಲ್ಲಿರುವ ಮಿಥುನಗಳ ಶೈಲಿ ಬೇರೆಯದು. ಇವುಗಳ ಅಲಂಕರಣ ರೀತಿ, ವೇಷಭೂಷಣ, ಕೇಶಾಲಂಕಾರ, ಕಿರೀಟ ಸ್ವರೂಪ, ಭಂಗಿ, ಆಂತರ್ಯದೊಳಕ್ಕೆ ನೋಡುವ ಮುಚ್ಚುಗಣ್ಣುಗಳು ಇವೆಲ್ಲ ಔರಂಗಾಬಾದ ಗುಹಾಲಯಗಳ ಕೆಲವು ಶಿಲ್ಪಗಳನ್ನು ಕಣ್ಮುಂದೆ ತರುತ್ತವೆ. ಅಂತಾಗಿ ಇದು ಉತ್ತರ ಡಕ್ಕನ್ ಶೈಲಿಯ ಕುರುಹು ಎಂಬುದರಲ್ಲಿ ಸಂಶಯಕ್ಕೆಡೆಯಿಲ್ಲ. ದೇಗುಲದ ಈ ಪಾರ್ಶ್ವದ ಕಂಬವೊಂದರ ಮೇಲೆ ‘ಸುರೇಂದ್ರ ಪಾದಃ’ ಎಂಬ ಸಿದ್ಧಮಾತೃಕಾ ಲಿಪಿಯಲ್ಲಿರುವ ಶಿಲ್ಪಿಯ ಹೆಸರು ಈ ದೃಷ್ಟಿಯಿಂದ ಗಮನಾರ್ಹ.

ದುರ್ಗಾಗುಡಿಯ ದೇವಕೋಷ್ಠ ಶಿಲ್ಪಗಳು ಶೈಲಿ ವೈವಿಧ್ಯದ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತವೆ. ವೃಷಭಾಂತಿಕ ಶಿವ, ಸ್ಥಾನಕ ಕೇವಲ ನರಸಿಂಹ, ಕರಿವರದ ವಿಷ್ಣು, ನೃವರಾಹ, ದುರ್ಗಾಮಹಿಷಮರ್ದಿನಿ ಮತ್ತು ಹರಿಹರ ಇವು ಆಕರ್ಷಕ ಶಿಲ್ಪಗಳು. ಈಗ ಪುರಾತತ್ವ ಸಂಗ್ರಹಾಲಯದಲ್ಲಿರುವ ಭಿಕ್ಷಾಟನ ಶಿವನ ಮೂರ್ತಿ ಕೂಡ ಮೂಲತಃ ಈ ದೇಗುಲದ ದೇವಕೋಷ್ಠ ಶಿಲ್ಪವೇ. ಇವುಗಳಲ್ಲಿ ವೃಷಭಾಂತಿಕ ಶಿವ, ಕರಿವರದ ವಿಷ್ಣು, ದುರ್ಗಾಮಹಿಷಮರ್ದಿನಿ ಶಿಲ್ಪಗಳು ಒಂದೇ ನಿರ್ದಿಷ್ಟ ಶೈಲಿಯಲ್ಲಿವೆ. ಇವುಗಳ ಸಂಯೋಜನೆ, ಅಲಂಕರಣ ಮತ್ತು ರೂಪ-ಸಂಸ್ಕರಣ ರೀತಿಯಲ್ಲಿ ಸ್ಫುಟ ಸಾಮ್ಯವಿದೆ.

ತೆಳು ಮೈಕಟ್ಟಿನ ಸುಂದರ ಮೈಮಾಟದ ವೃಷಭಾಂತಿಕ ಶಿವನು ಭಾರವಾದ, ಎತ್ತರವಾದ ಜಟಾಮಕುಟದೊಂದಿಗೆ ಅರ್ಧ ನಿಮೀಲಿತ ಕಣ್ಣುಗಳೊಂದಿಗೆ ಅಭಂಗದಲ್ಲಿ ಹಸನ್ಮುಖನಾಗಿ ನಿಂತಿದ್ದಾನೆ. ದುಂಡಾದ ಪ್ರಭಾಮಂಡಲದಲ್ಲಿ ಪದ್ಮಾಕಾರದ ಶಿರಶ್ಚಕ್ರ, ಕಿವಿಗಳಲ್ಲಿ ಬೇರೆ ಬೇರೆ ರೀತಿಯ ಕುಂಡಲಗಳು, ಸರಳ ಮಣಿಹಾರ, ತೋಳುಗಳಿಗೆ ನಾಗಮುರಿಗೆಯ ಬಂದಿ, ರಿಬ್ಬನ್ನಿನಂತಹ ಉದರಬಂಧ, ಮಾಲಾಕಾರ ಮುಕ್ತಾಯಜ್ಞೋಪವೀತ, ಬಲಗಾಲ ಗಂಟಿನವರೆಗೂ ಮೈಗಂಟಿ ಇಳಿದು ಬಿದ್ದಿರುವ ಧೋತಿಯ ಮೇಲೆ ವ್ಯಾಘ್ರ ಚರ್ಮ, ಅದರ ಮೇಲೆ ಮಣಿಖಚಿತ ಸೊಂಟಪಟ್ಟಿ ಇವನ ಉಡುಗೆ ತೊಡಿಗೆಗಳು. ಎಂಟು ಕೈಗಳು. ಬಲಗೈಗಳಲ್ಲಿ ಬಹುಬೀಜ ಫಲ, ಅಕ್ಷಮಾಲೆ, ಡಮರುಗ, ಎತ್ತಿಹಿಡಿದ ವಸ್ತ್ರ. ಎಡಗೈಗಳಲ್ಲಿ ಸರ್ಪ (ತ್ರಿಶೂಲ). ಇನ್ನೆರಡು ಎಡಗೈಗಳು ವೃಷಭದ ಡುಬ್ಬದ ಮೇಲೆ ಆಧಾರವಾಗಿವೆ. ಬಲಗಡೆ ಶಿವಗಣನೊಬ್ಬ ನಂದಿಯ ಬಾಲವನ್ನು ತಿರುವಿ ಛೇಡಿಸುತ್ತಿದ್ದಾನೆ; ನಂದಿಯ ಮುಖಭಾವ, ತುಸು ನಿಮಿರಿದ ಕಿವಿಗಳು ಅದರ ಪರಿಣಾಮವನ್ನು ತೋರಿಸುತ್ತಿವೆ. ಶಿಲ್ಪದ ರೇಖೆಗಳೆಲ್ಲ ಲಯಬದ್ಧವಾಗಿ ಚಲಿಸುತ್ತಿವೆ. ಲಭ್ಯ ಸ್ಥಳಾವಕಾಶವನ್ನು ಶಿಲ್ಪಿ ತನ್ನ ಕಲ್ಪನಾ ಶಕ್ತಿಯ ಅಭಿವ್ಯಕ್ತಿಗೆ, ಅದ್ಭುತ ಸಂಯೋಜನೆಗೆ ಉತ್ಕೃಷ್ಟವಾಗಿ ಬಳಸಿದ್ದಾನೆ. ದುರ್ಗಾಗುಡಿಯ ಶ್ರೇಷ್ಠ ಶಿಲ್ಪಗಳಲ್ಲಿ ಇದು ಮೇರು ಕೃತಿಯೆಂದರೆ ತಪ್ಪಾಗದು.

ಕರಿವರದ ಶಿಲ್ಪದಲ್ಲಿ ವಿಷ್ಣು ವರದಹಸ್ತನಾಗಿ ಪ್ರಯೋಗಚಕ್ರ, ಶಂಖ ಧರಿಸಿ ಗರುಡನ ಮೇಲೇರಲು ಉದ್ಯುಕ್ತನಾಗಿದ್ದಾನೆ. ಬಲಗಡೆ ತ್ರಿಭಂಗಿಯಲ್ಲಿ ಗದಾಕೌಮೋದಕಿ ಸ್ತ್ರೀರೂಪಿ ಯಾಗಿ ನಿಂತಿದ್ದಾಳೆ. ಇದು ಮತ್ತೊಮ್ಮೆ ಔತ್ತರೇಯ ಆಯುಧ ಪುರುಷ ಪರಂಪರೆಯನ್ನು ನೆನಪಿಸುತ್ತದೆ. ಅಲಂಕಾರ, ರೂಪ ಸಂಸ್ಕರಣ ರೀತಿ ವೃಷಭಾಂತಿಕ ಶಿವನ ಬಿಂಬದಲ್ಲಿರುವಂತೆ ಇದೆಯಾದರೂ ಮುಖ ೇಹ ಪ್ರಮಾಣದಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಸಂಯೋಜನೆ ಸುಂದರವಾಗಿದೆ. ಗುಪ್ತಾನಂತರ ಕಾಲದ ಮಾನವ ಶೈಲಿಯ ಪ್ರಭಾವ ಇಲ್ಲಿದೆಯೆಂದು ಕೆಲವರು ಅಭಿಪ್ರಾಯಿಸಿದ್ದಾರೆ.

ಇದೇ ಶೈಲಿಯ, ಬಹುಶಃ ಇದೇ ಶಿಲ್ಪಿ ರಚಿಸಿರಬಹುದಾದ ಇನ್ನೊಂದು ಶ್ರೇಷ್ಠ ಕೃತಿ ದುರ್ಗಾ ಮಹಿಷಮರ್ದಿನಿಯದು. ಅಷ್ಟಭುಜೆಯಾದ ದೇವಿ ತನ್ನ ಬಲಗಾಲನ್ನು ದೃಢವಾಗಿ ಊರಿ, ಖಡ್ಗ, ವಜ್ರ, ಪ್ರಯೋಗ ಚಕ್ರ, ತ್ರಿಶೂಲ, ಘಟಾ, ಶಂಖ ಇತ್ಯಾದಿಗಳನ್ನು ಧರಿಸಿ, ಎಡಗಾಲಿನಿಂದ ಕೋಣದ ಕುತ್ತಿಗೆಯೊಳಕ್ಕೆ ಹೊಕ್ಕಿರುವ ತ್ರಿಶೂಲದ ಮೊನೆ ಆಕ್ರಂದನದೊಂದಿಗೆ ಅದು ಮೋರೆ ಮೇಲೆತ್ತುವಂತೆ ಮಾಡಿದೆ. ಬಲಗಡೆ ಸಿಂಹ ಈ ದೃಶ್ಯವನ್ನು ನೋಡುತ್ತಲಿದೆ. ಹಲವು ಆಭರಣಗಳೊಂದಿಗೆ, ದುಂಡು ಕುಚದ್ವಯಗಳೊಂದಿಗೆ ಜಯಶೀಲದೇವಿ ಹಸನ್ಮುಖಿಯಾಗಿದ್ದಾಳೆ. ಪ್ರಭಾವಮಂಡಲದಲ್ಲಿರುವ ಪುಷ್ಪ, ಶಿರಶ್ಚಕ್ರ ಕರಿವರದ ಶಿಲ್ಪದಲ್ಲಿರುವಂತೆಯೇ ಇದೆ. ಚಾಲುಕ್ಯಕಾಲೀನ ದುರ್ಗಾ ಶಿಲ್ಪಗಳಲ್ಲಿ ಇದೊಂದು ಉತ್ಕೃಷ್ಟ ಕೃತಿಯೆಂದರೆ ತಪ್ಪಾಗದು.

ಚತುರ್ಭುಜ ಸ್ಥಾನಕ ನರಸಿಂಹ ಶಿಲ್ಪ ಬಹುಶಃ ಬಾದಾಮಿಯ ಮೂರನೇ ಗುಹೆಯ ನರಸಿಂಹ ಶಿಲ್ಪದಿಂದ ‘ಸ್ಫೂರ್ತಿ’ ಪಡೆದಿರಬಹುದು, ಆದರೆ ಅನುಕರಣೆಯಂತೂ ಅಲ್ಲ. ನೃವರಾಹ ಶಿಲ್ಪ ಮೇಲೆ ಗಮನಿಸಿದ ದೇವಕೋಷ್ಠ ಶಿಲ್ಪ ಪರಂಪರೆಗೆ ಸೇರಬಹುದು; ಆದರೆ ಇದು ಅಷ್ಟಾಗಿ ಪ್ರಮಾಣಬದ್ಧವಾಗಿಲ್ಲ. ಅಲ್ಲದೆ ಸಂಯೋಜನೆ, ಪ್ರಮಾಣ ನಿರೂಪಣೆ ಮುಂತಾದವುಗಳಲ್ಲಿ ಶಿಲ್ಪಿ ಪಕ್ವತೆ ಸಾಧಿಸಿದಂತಿಲ್ಲ.

ಇವೆಲ್ಲವುಗಳಿಗಿಂತ ವಿಭಿನ್ನ ಶೈಲಿಯ ದೇವಕೋಷ್ಠ ಶಿಲ್ಪವೆಂದರೆ ಅಷ್ಟಭುಜ ಸಮಸ್ಥಾನಕ ಹರಿಹರ ಮೂರ್ತಿ. ಬಲಬಾಹುಗಳೆಲ್ಲ ಭಗ್ನವಾಗಿವೆ. ಎಡಗೈಗಳಲ್ಲಿ ಪ್ರಯೋಗ ಚಕ್ರ, ಶಾರ್ಙ್ದ, ಧನುಷ್, ಗದಾ ಕೌಮೋದಕಿ (ಸ್ತ್ರೀ ರೂಪದಲ್ಲಿ) ಹಾಗೂ ಶಂಖ ಇವೆ. ಮಕುಟ ಭಾರವಾಗಿದ್ದು ಪ್ರಭಾವಮಂಡಲ ಅಂಡಾಕಾರವಾಗಿದೆ. ಹರಿಹರನ ಮುಖ ಮತ್ತು ಶರೀರದ ಎತ್ತರದ ಪ್ರಮಾಣ ೧: ೪ ೧/೨ಯಷ್ಟಿದೆ. ಹುಬ್ಬುಗಳನ್ನು ತೋರಿಸದೆ ನೆಪಮಾತ್ರಕ್ಕೆ ಬಿಲ್ಲಿನಂತೆ ಉಬ್ಬು ತೋರಿಸಲಾಗಿದೆ. ಕಣ್ಣುಗಳು ಅರ್ಧ ನಿಮೀಲಿತವಾಗಿದ್ದರೂ ರೆಪ್ಪೆಗಳನ್ನು ಸ್ಫುಟವಾಗಿ ಸೂಚಿಸಿಲ್ಲ. ಅರ್ಧೋರುಕ ರೀತಿಯಲ್ಲಿ ಮೈಗಂಟಿದ ಧೋತಿ ಉಟ್ಟಿದ್ದಾನೆ. ಅದರ ಮಡಿಕೆಗಳನ್ನು ಕೊರೆದ ಗೆರೆಗಳಿಂದ ಅನಿರ್ದಿಷ್ಟ ರೀತಿಯಲ್ಲಿ ತೋರಿಸಿದೆ. ಬಲ ಪಾರ್ಶ್ವದಲ್ಲಿ ಕುಳ್ಳ ಗಣನೊಬ್ಬ (ತ್ರಿಶೂಲ ಪುರುಷ?) ಹರಿಹರನ ಮುಖದೆಡೆಗೆ ತಲೆಯೆತ್ತಿ ನೋಡುತ್ತಿದ್ದಾನೆ. ಸ್ತ್ರೀರೂಪದ ಗದಾ ಕೌಮೋದಕಿ ಎಡಪಾರ್ಶ್ವದಲ್ಲಿ ಅಸಹಜರೀತಿಯಲ್ಲಿ ನಿಂತಿದ್ದಾಳೆ. ಮೇಲ್ಗಡೆ ಮಾಲಾವಾಹಕ ಸ್ತ್ರೀಯರು ತೇಲುತ್ತ ದೇವನೆಡೆಗೆ ಬರುತ್ತಿದ್ದಾರೆ. ರೂಪ ಸಂಸ್ಕರಣ ರೀತಿ ಚೆನ್ನಾಗಿದ್ದರೂ ಪ್ರಮಾಣ ಬದ್ಧತೆಯ ಕೊರತೆಯಿದೆ. ಶೈಲಿ ಬಹುಶಃ ಉತ್ತರ ಡೆಕ್ಕನ್, ಮುಖ್ಯವಾಗಿ ಔರಂಗಾಬಾದ ಏಳನೇ ಗುಹೆಯ ಶಿಲ್ಪಶೈಲಿಯನ್ನು ನೆನಪಿಸುತ್ತದೆ. ಗದಾಕೌಮೋದಕಿಯು ನಿಂತಿರುವ ರೀತಿ, ಕೈಗಳನ್ನಿರಿಸಿರುವ ರೀತಿ, ಅವಳ ವೇಷ‑ಭೂಷಣ ಇತ್ಯಾದಿಗಳನ್ನು ಆ ಗುಹಾಲಯದ ‘ವಜ್ರ ಸ್ಫೋಟಾ’ ಶಿಲ್ಪಕ್ಕೆ ಹೋಲಿಸಬಹುದು. ಇಡೀ ಚಾಲುಕ್ಯ ಶಿಲ್ಪಶ್ರೇಣಿಯಲ್ಲಿ ಆಯುಧ ಪುರುಷ ಸಹಿತ ಸಮಸ್ಥಾನಕ ಅಷ್ಟಭುಜ ಹರಿಹರನ ಮೂರ್ತಿ ಇದೊಂದೆ.

ಮಹಾಕೂಟದ ಸಂಗಮೇಶ್ವರ ಮತ್ತು ಮಹಾಲಿಂಗ ದೇವಾಲಯಗಳು ಚಿಕ್ಕವಾಗಿದ್ದರೂ ಕೆಲವು ಉಲ್ಲೇಖಾರ್ಹ ಶಿಲ್ಪಗಳನ್ನೊಳಗೊಂಡಿವೆ. ಸಂಗಮೇಶ್ವರ ದೇಗುಲದ ದಕ್ಷಿಣ ದೇವಕೋಷ್ಠದಲ್ಲಿರುವ ಲಕುಲೀಶ ಶಿವನ ಶಿಲ್ಪ ಇವುಗಳಲ್ಲೊಂದು. ಸುಂದರ ಮುಖದೊಂದಿಗೆ ಅಕ್ಷಮಾಲೆ, ಯಜ್ಞೋಪವೀತ, ವ್ಯಾಘ್ರಚರ್ಮ ಧರಿಸಿ ಸಮಸ್ಥಾನಕ ಭಂಗಿಯಲ್ಲಿ ಅಪಸ್ಮಾರಪುರುಷನ ಮೇಲೆ ಊರ್ಧ್ವಲಿಂಗಿಯಾಗಿ ನಿಂತಿರುವ ಶಿವನ ಗುಂಗುರು ಜಟೆಗಳು ಭುಜಗಳ ಮೇಲೆ ಆಕರ್ಷಕವಾಗಿ ಇಳಿದಿವೆ. ಕೈಗಳು ವರದ ಹಸ್ತ ಹಾಗೂ ಪರಶು ಧರಿಸಿವೆ. ದೇಹದ ಅಂಗಾಂಗಗಳ ಪರಸ್ಪರ ಪ್ರಮಾಣ, ರೂಪಸಂಸ್ಕರಣ ಇತ್ಯಾದಿಗಳು ಉಚ್ಚಮಟ್ಟ ದ್ದಾಗಿವೆ.

ಇದೇ ಗುಡಿಯ ಇನ್ನೊಂದು ದೇವಕೋಷ್ಠದಲ್ಲಿ ತ್ರಿಭಂಗಿಯಲ್ಲಿರುವ ಅರ್ಧನಾರೀಶ್ವರ ಶಿಲ್ಪವಿದೆ. ಬಲಗೈಯಲ್ಲಿ ಕನ್ನಡಿ ಹಿಡಿದು ಎಡಗೈಯಿಂದ ಮುಂಗುರುಳನ್ನು ಸ್ಪರ್ಶಿಸುತ್ತಿರುವ ಈ ಅರ್ಧನಾರೀಶ್ವರ ಶಿಲ್ಪದಲ್ಲಿ ಶಿವ ‑ಪಾರ್ವತಿ ದೇಹವನ್ನು ಲಾವಣ್ಯಮಯವಾಗಿ ಬೆಸೆದಿರುವ ರೀತಿ ಮನಮೋಹಕವಾಗಿದೆ.

ಮಹಾಲಿಂಗ ದೇಗುಲದ ಶಿಲ್ಪಗಳಲ್ಲಿ ನೃವರಾಹ ಶಿಲ್ಪ ಉಲ್ಲೇಖಾರ್ಹವಾದುದು. ಬಲಗಾಲನ್ನು ಭದ್ರವಾಗಿ ನೆಲದ ಮೇಲೆ ಊರಿ, ಎಡಗಾಲನ್ನು ನಾಗರಾಜನ ಹೆಡೆಯ ಮೇಲಿರಿಸಿ, ಬಲಗೈಯನ್ನು ಕಟ್ಯವಲಂಬಿತವಾಗಿರಿಸಿ, ಎಡಗೈಯ ಮೆಲೆ ಭೂದೇವಿಯನ್ನು ಕುಳ್ಳಿರಿಸಿಕೊಂಡು, ಉಳಿದೆರಡು ಕೈಗಳಲ್ಲಿ ಚಕ್ರ ಶಂಖ ಧರಿಸಿ ಪಾತಾಳದಿಂದ ನೆಗೆಯಲು ಉದ್ಯುಕ್ತನಾಗಿರುವ ವರಾಹನ ಪ್ರಮಾಣಬದ್ಧ ಹಗುರ ಮೈಕಟ್ಟು ಬಹುಸುಂದರವಾಗಿ ಮೂಡಿಬಂದಿದೆ. ಮಿಗಿಲಾಗಿ ಮನುಷ್ಯ ದೇಹಕ್ಕೆ ಕಂಬುಗ್ರೀವದೊಂದಿಗೆ ವರಾಹದ ಸಹಜ ಮುಖವನ್ನು ಲಯಬದ್ಧವಾಗಿ ಬೆಸೆದಿರುವ ರೀತಿ ಶಿಲ್ಪಿಯ ಕಲಾಕೌಶಲ್ಯದ ಸೂಚನೆ ನೀಡುತ್ತದೆ. ಚಾಲುಕ್ಯ ಭೂವರಾಹ ಪ್ರತಿಮಾಲಕ್ಷಣ ಪ್ರಗತಿಯ ಪರಾಕಾಷ್ಠೆಯನ್ನು ಇಲ್ಲಿ ಕಾಣಬಹುದು.

ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಪಟ್ಟದಕಲ್ಲಿನಲ್ಲಿ ನಿರ್ಮಾಣಗೊಂಡ ವಿರೂಪಾಕ್ಷ (ಲೋಕೇಶ್ವರ) ಮತ್ತು ಮಲ್ಲಿಕಾರ್ಜುನ (ತ್ರೈಲೋಕ್ಯೇಶ್ವರ) ದೇವಾಲಯಗಳ ಶಿಲ್ಪಗಳು ವಸ್ತು ವಿವಿಧತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಶಿಲ್ಪ ರೂಪಣದಲ್ಲಿ ಇವು ಚಾಲುಕ್ಯರ ಕೊನೆಯ ಹಂತದ ಪ್ರತಿನಿಧಿಗಳು. ಶೈಲಿ ವೈವಿಧ್ಯ ಇಲ್ಲಿ ಅಷ್ಟಾಗಿ ಕಾಣದು. ಅಂದರೆ ಕರ್ಣಾಟ ಕಲಾಶೈಲಿ ಹರಳುಗಟ್ಟುವೆಡೆ ಹೆಜ್ಜೆ ಇಡುತ್ತಿರುವುದನ್ನು ಇಲ್ಲಿ ಗುರುತಿಸಬಹುದು. ‘ಕಾಂಚಿಯಾನ್ ಮೂಮೆ ಪರಾಜಿಸಿದ’ ಇಮ್ಮಡಿ ವಿಕ್ರಮಾದಿತ್ಯ ಕಾಂಚಿಯ ರಾಜಸಿಂಹೇಶ್ವರ (ಕೈಲಾಸನಾಥ) ದೇವಾಲಯದ ಸೌಂದರ್ಯಕ್ಕೆ ಮಾರುಹೋದ ಸಂಗತಿ ಸರ್ವವಿದಿತ. ಇದರಿಂದಲೇ ಪ್ರಭಾವಿತವಾಗಿ ಪಟ್ಟದಕಲ್ಲಿನಲ್ಲಿ ಈ ಜೋಡು ದೇಗುಲಗಳು ನಿರ್ಮಿತ ವಾದವೆಂಬ ಅಭಿಪ್ರಾಯ ಪ್ರಚಲಿತವಿದೆ. ಆದರೆ ನಿಜ ಸಂಗತಿ ಇದಕ್ಕೆ ವ್ಯತಿರಿಕ್ತವಾಗಿದೆ. ಪಟ್ಟದಕಲ್ಲಿನ ಪ್ರತಿಮೆಗಳ ಲಕ್ಷಣ‑ಶೈಲಿಗಳೆಡರನ್ನೂ ಆಲಂಪುರದ (ಆಂಧ್ರಪ್ರದೇಶ) ದೇಗುಲಗಳ ಶಿಲ್ಪಗಳಲ್ಲಿ ಗುರುತಿಸಬಹುದು. ಆದ್ದರಿಂದ ಆಲಂಪುರ ಪರಿಸರದಲ್ಲಿ ರೂಢಗೊಂಡ ಶೈಲಿ ಕ್ರಮೇಣ ಪಟ್ಟದಕಲ್ಲಿಗೆ ಪ್ರೌಢವಾಗಿ ಸಾಗಿ ಬಂದಿದೆ ಎಂದು ತಿಳಿಯುವುದು ಸರಿ. ಶೈವ ಶಿಲ್ಪಗಳಿಗೆ ಇಲ್ಲಿ ಮಹತ್ವ ನೀಡಲಾಗಿದೆಯಾದರೂ ಉಳಿದ ದೇವತೆಗಳ ಬಿಂಬಗಳಿಗೆ ಇಲ್ಲಿ ಕೊರತೆಯಿಲ್ಲ. ಚೆಂಗಮ್ಮ, ಪುಲ್ಲಪ್ಪ, ಬಲದೇವ ಮುಂತಾದ ಶಿಲ್ಪಿಗಳು ಇಲ್ಲಿ ತಮ್ಮ ಕಲಾ ಕೌಶಲ್ಯವನ್ನು ತೋರಿದ್ದಾರೆ.

ಅಪಸ್ಮಾರನ ಮೇಲೆ ವಿವಿಧ ನಾಟ್ಯ ಭಂಗಿಗಳಲ್ಲಿ ಕುಣಿಯುತ್ತಿರುವ ನಟರಾಜ ಶಿವನ ಬಿಂಬಗಳು ಇಲ್ಲಿ ಸಾಕಷ್ಟಿವೆ. ಇಂಥ ಒಂದು ಶಿಲ್ಪದಲ್ಲಿ ಭುಜ ಶಿವನು ಚತುರ ಭಂಗಿಯಲ್ಲಿ ಅಪಸ್ಮಾರನ ಮೇಲೆ ಕುಣಿಯುತ್ತಿದ್ದಾನೆ. ಸರ್ಪ, ಡಮರುಗ, ಅಗ್ನಿಪಾತ್ರೆ ಹಿಡಿದು ಹಸನ್ಮುಖಿಯಾಗಿರುವ ಶಿವನ ಉಳಿದ ಕೈಗಳು ವಿವಿಧ ಮುದ್ರೆಗಳಲ್ಲಿವೆ. ಅನೇಕ ಆಭರಣಗಳು, ಯಜ್ಞೋಪವೀತ, ಮೂರು ಮಡಿಕೆಗಳ ಕಟಿವಸ್ತ್ರ, ಅಂತಹುದೇ ಸೊಂಟಪಟ್ಟಿ, ನಾಗಮುರಿಗೆಯ ತೋಳ್ಬಂದಿ, ಕಾಲಲ್ಲಿ ಗೆಜ್ಜೆಸರ ಮುಂತಾದವು ಸಮಕಾಲೀನ ಶೈಲಿಯ ಸ್ವರೂಪವನ್ನು ಬಯಲುಮಾಡುತ್ತವೆ. ಅಗ್ನಿ ಪಾತ್ರೆಯನ್ನು ಕೈಯಲ್ಲಿ ಹಿಡಿದಿರುವ ನಟರಾಜನ ಚಾಲುಕ್ಯ ಕಾಲೀನ ವಿಗ್ರಹ ಇದೊಂದೆ. ವೃಷಭ ಧ್ವಜ ಹಿಡಿದು ನರ್ತಿಸುತ್ತಿರುವ ಶಿವನ ಇನ್ನೊಂದು ಪ್ರತಿಮೆ ಕೂಡ ಗಮನಾರ್ಹವಾದುದು. ಇಲ್ಲಿಯ ಎಲ್ಲ ನಟರಾಜ ಶಿಲ್ಪಗಳಲ್ಲಿ ಕಾಲಡಿ ಅಪಸ್ಮಾರ ಪುರುಷನಿರುವುದು ಗಮನೀಯವಾಗಿದೆ. ಗುಹಾಶಿಲ್ಪಗಳಲ್ಲಿ ಈ ಲಕ್ಷಣವಿಲ್ಲ.

ದಕ್ಷಿಣ ಮುಖಮಂಟಪದ ಕಂಬವೊಂದರಲ್ಲಿರುವ ಶಿವನ ರಾವಣಾನುಗ್ರಹ ಮೂರ್ತಿ ಇಲ್ಲಿಯ ಆಕರ್ಷಕ ಶಿಲ್ಪಗಳಲ್ಲೊಂದು. ದಶಾನನ ರಾವಣನು ಆಲೀಢ ಭಂಗಿಯಲ್ಲಿ ಕುಳಿತು ತನ್ನ ಇಪ್ಪತ್ತು ಬಾಹುಗಳಿಂದ ಕೈಲಾಸ ಪರ್ವತವನ್ನು ಎತ್ತುತ್ತಿರುವ ದೃಶ್ಯ ಬಹು ನಾಟಕೀಯವಾಗಿದೆ. ಅಲುಗಾಡುತ್ತಿರುವ ಕೈಲಾಸದ ಮೇಲ್ಗಡೆ ಭಯವಿಗಳಿತಳಾಗಿ ಪಾರ್ವತಿ ಶಿವನ ಆಸರೆಯನ್ನು ಬಯಸಲುದ್ಯುಕ್ತಳಾಗಿರುವ ರೀತಿ ಶಿಲ್ಪಿಯ ಕಲ್ಪನಾಚಾತುರ್ಯವನ್ನು ಪ್ರತಿಬಿಂಬಿಸುತ್ತದೆ.

ವಿರೂಪಾಕ್ಷ ದೇಗುಲದ ಪೂರ್ವಗೋಡೆಯಲ್ಲಿರುವ ಲಿಂಗೋದ್ಭವ ಮೂರ್ತಿಯು ಶಿಲ್ಪ ವಸ್ತು ದೃಷ್ಟಿಯಿಂದ ಅಪರೂಪದ್ದು. ಚಾಲುಕ್ಯ ಸಂದರ್ಭದಲ್ಲಿ ಆಲಂಪುರ ಮತ್ತು ಪಟ್ಟದಕಲ್ಲಿನ ಶೈವ ದೇವಾಲಯಗಳಲ್ಲಿ ಮಾತ್ರ ಈ ಶಿಲ್ಪ ಕಂಡುಬಂದಿದೆ.

ವೈಷ್ಣವ ಶಿಲ್ಪಗಳಲ್ಲಿ ‘ಗಜೇಂದ್ರ ಮೋಕ್ಷ’ ಹಾಗೂ ‘ತ್ರಿವಿಕ್ರಮ’ ಶಿಲ್ಪಗಳು ಉಲ್ಲೇಖನೀಯ. ಗರುಡನ ಮೇಲೆ ಕುಳಿತ ಭಕ್ತವತ್ಸಲ ವಿಷ್ಣು ಪ್ರಯೋಗ ಚಕ್ರದೊಂದಿಗೆ ಧಾವಿಸಿ ಗಜೇಂದ್ರನನ್ನು ‘ಗ್ರಾಹ’ದ ಹಿಡಿತದಿಂದ ಮುಕ್ತಗೊಳಿಸುತ್ತಿರುವ ದೃಶ್ಯ, ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇಗುಲಗಳ ಉತ್ತರ ಮುಖಮಂಟಪದ ಕಂಬಗಳ ಮೇಲಿವೆ. ಇಲ್ಲಿ ‘ಗ್ರಾಹ’ವನ್ನು ‘ಆಮೆ’ಯಾಗಿ ಚಿತ್ರಿಸಿರುವುದು ವೈಶಿಷ್ಟ್ಯ. ಈ ರೂಢಿ ಡೆಕ್ಕನ್ ಪ್ರದೇಶದಲ್ಲಿ ಪ್ರಚಲಿತವಿತ್ತು. ವಿರೂಪಾಕ್ಷ ದೇಗುಲದ ಪೂರ್ವ ಗೋಡೆಯಲ್ಲಿರುವ ವಾಮನ‑ತ್ರಿವಿಕ್ರಮ ಶಿಲ್ಪ ಪ್ರತಿಮಾಲಕ್ಷಣ ದೃಷ್ಟಿಯಿಂದ ಮಹತ್ವದ್ದು. ಮಧ್ಯದಲ್ಲಿ ತ್ರಿವಿಕ್ರಮ ವಿಷ್ಣು ತಲೆಯ ಮಟ್ಟದವರೆಗೂ ಕಾಲನ್ನೆತ್ತಿ ನಿಂತಿದ್ದಾನೆ. ಎಡ ಪಾರ್ಶ್ವದಲ್ಲಿ ಬಲಿ ಚಕ್ರವರ್ತಿ ವಾಮನನಿಗೆ ದಾನ ನೀಡುವ ಕಿರುಗಾತ್ರದ ಶಿಲ್ಪವಿದೆ. ಬಲ ಮಗ್ಗುಲಲ್ಲಿ ಗರುಡನು ಶುಕ್ರಾಚಾರ್ಯನನ್ನು ದಂಡಿಸುತ್ತಿರುವ ದೃಶ್ಯವಿದೆ. ಗುಹಾಶಿಲ್ಪದಲ್ಲಿ ಈ ಎರಡನೇ ಲಕ್ಷಣ ಇಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು.

ವಿರೂಪಾಕ್ಷ ದೇಗುಲದಲ್ಲಿರುವ ದುರ್ಗಾಮಹಿಷಮರ್ದಿನಿಯ ದುಂಡುಶಿಲ್ಪ ಅನೇಕ ವಿದ್ವಾಂಸರ ಹೊಗಳಿಕೆಗೆ ಪಾತ್ರವಾಗಿದೆ. ಅಷ್ಟ ಭುಜೆಯಾದ ಸುಂದರ ಮೈಮಾಟದ ದೇವಿ ತನ್ನ ಎಡಗಾಲನ್ನು ಮನುಷ್ಯರೂಪದ ದೈತ್ಯನ ತಲೆಯ ಮೇಲೆ ಇರಿಸಿ ಒತ್ತಿದ್ದಾಳೆ. ಬಲಗೈಯಲ್ಲಿರುವ ತ್ರಿಶೂಲ ದೈತ್ಯನ ಕತ್ತಿನೊಳಗೆ ತೂರಿದೆ; ಇನ್ನೊಂದು ಕೈಯಲ್ಲಿರುವ ಖಡ್ಗ ಅಸುರನ ಬಲ ಎದೆಯನ್ನು ಹರಿದು ಸೇರಿದೆ. ಇನ್ನುಳಿದ ಬಲಗೈಗಳಲ್ಲಿ ಒಂದು ಚಕ್ರವನ್ನು ಪ್ರಯೋಗ ರೀತಿಯಲ್ಲಿ ಹಿಡಿದಿದೆ; ಇನ್ನೊಂದು ಬತ್ತಳಿಕೆಯಿಂದ ಬಾಣವನ್ನು ಹೊರತೆಗೆಯುತ್ತಲಿದೆ. ಎಡಗೈಗಳಲ್ಲಿ ಘಂಟಾ, ಶಂಖ, ಖೇಟಕ ಮತ್ತು ಧನುಷ್ ಇವೆ. ಮಿತ ವೇಷಭೂಷಣ, ಚಟುವಟಿಕೆಯಿಂದ ಕೂಡಿದ ಅಂಗಾಂಗಗಳು, ವಿಶಿಷ್ಟ ಭಂಗಿ, ಸಮತೋಲನ, ಕೌಶಲ್ಯಪೂರ್ಣ ರೂಪ ಸಂಸ್ಕರಣ‑ಇವೆಲ್ಲ ಸೇರಿ ಚಾಲುಕ್ಯ ದುರ್ಗಾಮಹಿಷ ಮರ್ದಿನಿಯ ಶಿಲ್ಪಗಳಲ್ಲೆಲ್ಲ ಇದನ್ನು ಅತಿಶ್ರೇಷ್ಠ ಕೃತಿಯನ್ನಾಗಿಸಿವೆ.

ಪಟ್ಟದಕಲ್ಲಿನ ಈ ದೇಗುಲಗಳ ಉಲ್ಲೇಖಾರ್ಹ ಶಿಲ್ಪಗಳಲ್ಲಿ ದ್ವಾರಪಾಲಕರ ಸ್ಥಾನ ಅಪೂರ್ವವಾದುದು. ಮುಖಮಂಟಪಗಳಲ್ಲಿ ಆಳೆತ್ತರವಾಗಿ ಕಂಡುಬರುವ ಈ ವ್ಯಕ್ತಿಗಳು ಭಾರವಾದ ಗದೆಯ ಮೇಲೆ ವಿಶಿಷ್ಟ, ಸಹಜ, ಅನುಕೂಲಕರ ಭಂಗಿಗಳಲ್ಲಿ ನಿಂತಿದ್ದಾರೆ. ವಿಕಾರ ಕಣ್ಣುಗಳು, ಕೋರೆಗಳು ನೋಡುಗರ ಮನ ನಡುಗಿಸುವದರಲ್ಲಿ ಯಶಸ್ವಿಯಾಗುತ್ತವೆ. ಇವು ಆಯುಧ ಪುರುಷರ ಶಿಲ್ಪಗಳೇ ಆಗಿದ್ದು ತ್ರಿಶೂಲ ಮತ್ತು ಪರಶುವನ್ನು ಪ್ರತಿನಿಧಿಸುತ್ತವೆ. ‘ದಾಕ್ಷಿಣಾತ್ಯ’ ಎನ್ನಬಹುದಾದ ಈ ಭೀಕರ ದ್ವಾರಪಾಲರ ಬಿಂಬಗಳು ಕೆಲವು ಸಲ ದುಂಡು ಶಿಲ್ಪವೆನ್ನುವಷ್ಟು ಮಟ್ಟಿಗೆ ರೂಪಸಂಸ್ಕಾರ ಪಡೆದಿವೆ. ಬಾದಾಮಿಯ ಮೊದಲ ಶೈವ ಗುಹಾಲಯದ ಸೌಮ್ಯ ದ್ವಾರಪಾಲನಿಗೆ ಹೋಲಿಸಿದಾಗ ಈ ರೌದ್ರರೂಪದ ದ್ವಾರಪಾಲಕರು ಬದಲಾದ ಧಾರ್ಮಿಕ‑ವೈಚಾರಿಕತೆಯ ಪ್ರತಿನಿಧಿಗಳಾಗಿ ಕಾಣುತ್ತಾರೆ.

ಮೂಲತಃ ಜಂತಿಗಳು ಅಥವಾ ಅಧಿಷ್ಠಾನದ ‘ಗಳ’ ಭಾಗವನ್ನು ಅಲಂಕರಿಸಿದ್ದ ಕಥಾ ನಿರೂಪಕ ಶಿಲ್ಪಗಳು ಪಟ್ಟದಕಲ್ಲಿನಲ್ಲಿ ಅಪರೂಪಕ್ಕೆ ಗೋಡೆಗಳನ್ನು (ವಿರೂಪಾಕ್ಷ, ಪಾಪನಾಥ ದೇಗುಲಗಳು) ಸಾಮಾನ್ಯವಾಗಿ ಒಳಗಂಬಗಳನ್ನು ಆಕ್ರಮಿಸಿಕೊಂಡಿವೆ ಇವು ರಾಮಾಯಣ, ಮಹಾಭಾರತದ ಕಥೆಗಳಷ್ಟೆ ಅಲ್ಲದೆ, ಪುರಾಣಗಳು, ಪಂಚತಂತ್ರ, ಯಶೋಧರ ಚರಿತ ಮುಂತಾದ ಕೃತಿಗಳ ಕಥಾನಿರೂಪಣ ಮಾಡುತ್ತವೆ.

ಇವೇ ದೇಗುಲಗಳಲ್ಲಿ ಕಂಡುಬರುವ ಮಿಥುನ ಶಿಲ್ಪಗಳು ಸೌಂದರ್ಯಾಕರ್ಷಣೆಗಳಿಂದೊಡ ಗೂಡಿದ್ದರೂ ಸಹ ತೆಳುಮೈಕಟ್ಟಿದ್ದ ಎತ್ತರದಾಳುಗಳಾಗಿ ಕಾಣುತ್ತವೆ; ಇವು ಮೂಲತಃ ಮಿಥುನಗಳಲ್ಲಿ ಕಂಡುಬರುತ್ತಿದ್ದ ಲವಲವಿಕೆಯಿಂದ ತುಸು ವಂಚಿತವಾಗಿರುವಂತೆ ತೋರುತ್ತದೆ.

ಒಟ್ಟಾರೆ ನೋಡಿದಾಗ, ಚಾಲುಕ್ಯ ರಾಚನಿಕ ದೇಗುಲಗಳ ಶಿಲ್ಪಗಳು ಕೊನೆಯ ಹಂತದವರೆಗೆ ಪ್ರತಿಮಾಲಕ್ಷಣ ವೈವಿಧ್ಯ ಮತ್ತು ಶೈಲಿವೈವಿಧ್ಯವನ್ನು ನಿರೂಪಿಸುತ್ತವೆ. ಈ  ದೃಷ್ಟಿಯಿಂದ ಗುಹಾಶಿಲ್ಪ ಶೈಲಿಯಲ್ಲಿ ಕಂಡುಬರುವ ವೈವಿಧ್ಯತೆ ಇಲ್ಲಿಯೂ ಕಾಣುತ್ತದೆಂದು ಹೇಳಬೇಕು. ಮೊದಮೊದಲು ಔತ್ತರೇಯ, ಉತ್ತರ ಡೆಕ್ಕನ್ ಶಿಲ್ಪಪರಂಪರೆಯ ಪ್ರಾತಿನಿಧ್ಯವಿದೆಯಾದರೆ, ಕ್ರಮೇಣ ‘ದಾಕ್ಷಿಣಾತ್ಯ’ ವೆನ್ನಬಹುದಾದ ಶೈಲಿ ರೂಢವಾಗಿಬಿಟ್ಟಿದೆ. ಹೀಗಿದ್ದರೂ ಸಹ ಪ್ರತಿಯೊಂದು ಹಂತದಲ್ಲಿ, ಪ್ರತಿಯೊಂದು ಪ್ರತಿಮೆಯಲ್ಲಿ ಶಿಲ್ಪಿಯ ಸ್ವತಂತ್ರ ಕಲ್ಪನಾಶಕ್ತಿ, ಸ್ವಂತತ್ರ ಅಭಿವ್ಯಕ್ತಿ ಚಾತುರ್ಯ ಅಡಿಗಡಿಗೂ ಪ್ರಚುರಪಟ್ಟಿದೆ ಎಂಬುದು ಗಮನಾರ್ಹ. ಅದರೊಟ್ಟಿಗೆ ಬದಲಾಗುತ್ತಿರುವ ಧಾರ್ಮಿಕ ಭಾವನೆಗಳೂ ಪ್ರಕಟಗೊಂಡಿವೆ. ದೇವಾಲಯ ರೂಪಭೇದಗಳಲ್ಲಿ ಕಂಡುಬರುವ ಪ್ರಯೋಗಶೀಲ ಗುಣ ಶಿಲ್ಪಗಳಲ್ಲಿಯೂ ಪ್ರತಿಬಿಂಬಿತವಾಗಿದೆ. ಕೊನೆಯಲ್ಲಿ ಪಟ್ಟದಕಲ್ಲಿನ ವಿರೂಪಾಕ್ಷ ದೇಗುಲದಲ್ಲಿ ಹರಳುಗಟ್ಟಿದ್ದ ಕರ್ನಾಟಕ ಪ್ರಸಾರ ಲಕ್ಷಣ ವೈಶಿಷ್ಟ್ಯ ಅಲ್ಲಿಯ ಶಿಲ್ಪಗಳಲ್ಲಿ ಕೂಡ ನಿರ್ದಿಷ್ಟ ಶೈಲಿಯಲ್ಲಿ ಹರಳುಗಟ್ಟುತ್ತಿದೆ ಎಂಬುದನ್ನು ರಾಷ್ಟ್ರಕೂಟರ ಕಾಲದ ಪ್ರಸಾರ ಶಿಲ್ಪಗಳ ಅಧ್ಯಯನ ಸ್ಫುಟಗೊಳಿಸುತ್ತದೆ.