ಶಿಲ್ಪ ಶೈಲಿ ಮತ್ತು ಶಿಲ್ಪಿಗಳು

ಒಂದು ಮತ್ತು ಎರಡನೆ ಗುಹಾಲಯಗಳಲ್ಲಿ ಹೆಚ್ಚು ಕಡಿಮೆ ನಿರ್ದಿಷ್ಟ ಶಿಲ್ಪಿಶ್ರೇಣಿಗಳಲ್ಲಿ ತರಬೇತಾಗಿದ್ದ ಶಿಲ್ಪಿಗಳ ಶೈಲಿಯನ್ನು ಗಮನಿಸಿದ್ದೇವೆ. ಮೂರನೇ ಗುಹಾಲಯದಲ್ಲಿ ಇವೆರಡು ಶಿಲ್ಪಿಶ್ರೇಣಿಗಳ ಶಿಲ್ಪಿಗಳು ಸಮಪ್ರಮಾಣದಲ್ಲಿ ಕಾರ್ಯಪ್ರವೃತ್ತರಾಗಿದ್ದರೆಂದು ಅನಿಸುತ್ತದೆ. ಅನಂತಾಸೀನ ವಿಷ್ಣು ಮತ್ತು ವರಾಹ ಶಿಲ್ಪಗಳ ರೂಪಸಂಸ್ಕಾರಣ ವಿವರಗಳು ಎರಡನೇ ಗುಹಾಲಯದ ಶಿಲ್ಪಪರಂಪರೆಯ ಮುಂದುವರಿಕೆಯ ಸೂಚನೆಗಳನ್ನೊಳಗೊಂಡಿವೆ. ಅಷ್ಟಭುಜ ವಿಷ್ಣು, ಹರಿಹರ ಮತ್ತು ತ್ರಿವಿಕ್ರಮ ಶಿಲ್ಪಗಳು ಮೊದಲ ಗುಹಾಲಯದ ಶಿವ-ದ್ವಾರಪಾಲನ ಶಿಲ್ಪರೀತಿಯನ್ನು ನೆನಪಿಸುತ್ತವೆ. ಅನಂತಾಸೀನ ವಿಷ್ಣು, ವರಾಹ, ಅಷ್ಟಭುಜ ವಿಷ್ಣು, ತ್ರಿವಿಕ್ರಮ, ನರಸಿಂಹ ಶಿಲ್ಪಗಳಲ್ಲಿ ಮೂಲ ವಿಗ್ರಹಗಳ ಮುಖಗಳನ್ನು ವಿಜಯನಗರ ಕಾಲದಲ್ಲಿ ಸಂಸ್ಕರಿಸಿರುವದು ಸ್ಪಷ್ಟವಿದೆ. ಆದುದರಿಂದ ಮುಖ್ಯಭಾವವನ್ನು ಇತರ ಗುಹೆಗಳ ಶಿಲ್ಪಗಳಿಗೆ ಹೋಲಿಸುವುದು ಕಷ್ಟ. ಏನಿದ್ದರೂ ಶೈಲಿ ವೈವಿಧ್ಯಗಳು ಇಲ್ಲಿ ಒಂದೇ ಗುಹೆಯಲ್ಲಿ ಗುರುತರವಾಗಿ ಒಡೆದು ಕಾಣುತ್ತವೆ. ವ್ಯಕ್ತಿರೂಪಣದಲ್ಲಿ ಮುಖ ಮತ್ತು ಶರೀರದ ಉಳಿದ ಭಾಗದ ಎತ್ತರದ ಪ್ರಮಾಣ ೧:೫ ರಷ್ಟಿದೆ. ಆದ್ದರಿಂದ ಎತ್ತರ ಮೈಕಟ್ಟಿನ ದಷ್ಟಪುಷ್ಟ ಬಿಂಬಗಳಾಗಿ ಇವು ಗೋಚರಿಸುತ್ತವೆ. ಮೊದಲ ಗುಹಾಲಯದ ಶಿಲ್ಪಗಳಿಗಾದರೂ ಇದೇ ದೈಹಿಕ ಪ್ರಮಾಣವನ್ನು ಅನುಸರಿಸಲಾಗಿದೆ. ಎಂಬುದು ಗಮನಾರ್ಹ. ಇದಲ್ಲದೆ ಮೂರನೇ ಗುಹಾಲಯದ ಶಿಲ್ಪಗಳು ಮೂರನೇ ಆಯಾಮವಾದ ‘ಆಳಕ್ಕೆ’ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ ಈ ಶಿಲ್ಪಗಳು ಉಬ್ಬುಶಿಲ್ಪಗಳಾಗಿದ್ದರೂ ಮೂರೂ ಆಯಾಮಗಳಿರುವ ದುಂಡು ಶಿಲ್ಪಗಳು ಆಭಾಸ ಮೂಡಿಸುತ್ತವೆ.

ಶೈಲಿ ವೈವಿಧ್ಯವನ್ನು ಗುರುತಿಸಲು ಬಹುಶಃ ಮದನಕೈ ವಿಗ್ರಹಗಳು ಹೆಚ್ಚು ಸಹಕಾರಿಯಾಗಿವೆ. ಕೆಲವು ಶಿಲ್ಪಗಳಲ್ಲಿ ಹುಬ್ಬು, ಕಣ್ಣೆವೆಗಳನ್ನು ಸ್ಫುಟವಾಗಿ ತೋರಿಸಿದೆಯಾದರೆ ಇನ್ನು ಕೆಲವು ಶಿಲ್ಪಗಳಲ್ಲಿ ನೆಪಮಾತ್ರಕ್ಕೆ ಕಣ್ಣೆವೆಗಳನ್ನು ಏರಿಳಿತ ರೀತಿಯಲ್ಲಿ ತೋರಿಸಲಾಗಿದೆ. ಎಲ್ಲ ಶಿಲ್ಪಗಳನ್ನೂ ಯೋಗ್ಯ ಬಣ್ಣಗಳಿಂದ ಅಲಂಕರಿಸಿದ್ದರೆಂಬುದರ ಸೂಚನೆಗಳಿವೆ.

ಕೆಲವು ಶಿಲ್ಪಿಗಳ ಹೆಸರುಗಳನ್ನು ಗುಹಾಲಯವಿರುವ ಬಂಡೆಯ ಮೇಲೆ ಬರೆಯಲಾಗಿದೆ. ಕಪೋತದಲ್ಲಿಯ ಗರುಡನ ಉಬ್ಬುಶಿಲ್ಪ ನೆಲವಱ್ಕಯ ಅದ್ಭುತ ಕೃತಿ. ಕೊಣ್ಡಿಮಞ್ಚಿ, ವಸುದೇವ, ಶಕುಲ ಆಯ್ಯ, ಪಞ್ಚಣ, ಚೋಳ ದೇವೆಱೀಯ ಕಲ್ಕುಟ್ಟಿಗ, ಗುಣಪಾಲ, ಅಜ, ಆಚಾರಸಿದ್ದಿ, ರೂಪಶೇಖರ, ಆರ್ಯ್ಯಚಟ್ಟ, ಕೋಳಿಮನಞ್ಚಿ, ಪೆಲಮಞ್ಚಿ, ವಿಮಲ, ದೋಣ, ಕೊಟ್ಟಲ, ಕಾನ್ತಿಮಞ್ಚಿ, ಸಾಮಿಚನ್ದ, ಬಿಜಯ ಓವಜ ಮುಂತಾದವುಗಳಲ್ಲದೆ ನಾಲ್ಕನೇ ಗುಹಾಲಯದಲ್ಲಿಯೂ ಕೆಲಸ ಮಾಡಿರಬಹುದಾದ ಇನ್ನಿತರರು (ಮುಂದೆ ಉಲ್ಲೇಖಿಸಲಾಗಿದೆ) ಪ್ರಮುಖರಾಗಿದ್ದಾರೆ. ಅವಮೂರ್ಧ್ನ (ಶಂಕು) ಲಿಪಿಯಲ್ಲಿ ಬರೆದಿರುವ ಕೆಲವು ಹೆಸರುಗಳಿವೆಯಾದರೂ ಇವುಗಳನ್ನು ಓದುವುದಾಗಿಲ್ಲ. ವಿಪ್ರಮನೋಹರ ಎಂಬಾತನು ಈ ಗುಹೆಯ ಕೆಲವು ವರ್ಣಚಿತ್ರಗಳನ್ನು ರಚಿಸಿದಾತ; ಬಣ್ಣದಿಂದ ಬರೆದಿರುವ ಈತನ ಹೆಸರು ಕಪೋತದಲ್ಲಿ ಕಾಣಸಿಗುತ್ತದೆ.

ಒಟ್ಟಾರೆ ಈ ಗುಹಾಲಯದ ಶಿಲ್ಪಿಗಳು ಹೆಚ್ಚು ಸಂಕೀರ್ಣ ಶೈಲಿಗಳ ಪರಿಸರದಲ್ಲಿ ತರಬೇತಾದವರೆಂಬುದು ಈ ಶಿಲ್ಪಗಳ ಅಧ್ಯಯನದಿಂದ ವಿದಿತವಾಗುತ್ತದೆ.

ನಾಲ್ಕನೇ ಜೈನ ಗುಹೆಯ ಶಿಲ್ಪಗಳು

ಇಲ್ಲಿರುವ ಮುಖ್ಯ ಶಿಲ್ಪಗಳಲ್ಲಿ ಬಾದಾಮಿಯ ಚಾಲುಕ್ಯರ ಕಾಲಕ್ಕೆ ಅನ್ವಯಿಸಬಹು ದಾದವುಗಳು ಮೂರು ಮಾತ್ರ; ಗರ್ಭಗೃಹದಲ್ಲಿರುವ ಜಿನ; ಮುಖಮಂಟಪದಲ್ಲಿರುವ ಪಾರ್ಶ್ವನಾಥ ಹಾಗೂ ಬಾಹುಬಲಿ; ಗರ್ಬಗೃಹದ ಹಿಂಗೋಡೆಯಲ್ಲಿ ಸಿಂಹಾಸನದ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಜಿನನ ಕೈಗಳು ಯೋಗಮುದ್ರೆಯಲ್ಲಿವೆ. ತಲೆಯ ಹಿಂದೆ ಪ್ರಭಾಮಂಡಲವಿದೆ. ಮೇಲ್ಗಡೆ ಮುಕ್ಕೊಡೆ ಹಾಗು ಸಾಲ(?) ವೃಕ್ಷದ ಹಿನ್ನೆಲೆಯಿದೆ. ಜಿನನ ಎರಡೂ ಪಾರ್ಶ್ವಗಳಲ್ಲಿ ಚಾಮರಧಾರಿ ಪುರುಷರಿದ್ದಾರೆ. ಇಕ್ಕೆಲಗಳಲ್ಲಿ ಅಂತರಿಕ್ಷದಲ್ಲಿ ಮೃದಂಗ ಬಾರಿಸುತ್ತಿರುವ ಮುಂಗೈಗಳಿವೆ. ಬಹುಶಃ ಇದು ಮಹಾವೀರನು ಕೇವಲ ಜ್ಞಾನ ಪಡೆದ ಸಂದರ್ಭವನ್ನು ಸೂಚಿಸುತ್ತದೆ.

ಮುಖಮಂಟಪದ ಪೂರ್ವಗೋಡೆಯಲ್ಲಿ ಬಾಹುಬಲಿ (ಗೊಮ್ಮಟ) ಕಾಯೋತ್ಸರ್ಗ ಮುದ್ರೆಯಲ್ಲಿ ನಗ್ನನಾಗಿ ನಿಂತಿದ್ದಾನೆ. ಅವನ ಕೂದಲುಗಳು ಜಡೆಗಟ್ಟಿವೆ. ಕೈಕಾಲುಗಳಿಗೆ ಮಾಧವೀಲತೆಗಳು ಸುತ್ತಿಕೊಂಡಿವೆ. ಕಾಲ ಹತ್ತಿರ ಬೆಳೆದಿರುವ ಹುತ್ತಗಳಿಂದ ನಾಗರಹಾವುಗಳು ಹೊರ ಬಂದಿವೆ. ಬಾಹುಬಲಿಯ ಸಹೋದರಿಯರಾದ ಬ್ರಾಹ್ಮೀ ಮತ್ತು ಸುಂದರಿ ಅವನ ಕೈಕಾಲುಗಳಿಗೆ ಸುತ್ತಿಕೊಂಡಿರುವ ಮಾಧವೀಲತೆಗಳನ್ನು ಬಿಡಿಸುತ್ತ ನಿಂತಿದ್ದಾರೆ. ಇನ್ನಿಬ್ಬರು ಸ್ತ್ರೀಯರು ಅವನಿಗೆ ನಮಸ್ಕರಿಸುತ್ತ ಕುಳಿತಿದ್ದಾರೆ. ಬಾಹುಬಲಿಯ ಶಿಲ್ಪ ಮಾತ್ರ ಪೂರ್ತಿ ಗೊಂಡಿದೆ; ಬ್ರಾಹ್ಮಿ, ಸುಂದರಿ ಮತ್ತು ಇತರ ಸ್ತ್ರೀ ವಿಗ್ರಹಗಳು ಅಪೂರ್ಣವಾಗಿವೆ.

ಪಶ್ಚಿಮ ಗೋಡೆಯಲ್ಲಿರುವ ಪಾರ್ಶ್ವನಾಥನು ಐದು ಹೆಡೆಯ (ಧರಣೇಂದ್ರ ಯಕ್ಷ) ಹಾವಿನ ಅಸರೆಯಲ್ಲಿ ನಗ್ನನಾಗಿ ನಿಂತಿದ್ದಾನೆ. ಅವನ ಬಲ ಮತ್ತು ಎಡ ಪಾರ್ಶ್ವಗಳಲ್ಲಿ ಅಪೂರ್ಣ ಶಿಲ್ಪಗಳಿವೆ. ಬಲ ಪಕ್ಕದಲ್ಲಿರುವ ಪದ್ಮಾವತಿ ಯಕ್ಷಿ (ಇವಳ ತಲೆಯ ಮೇಲೆ ಹಾವಿನ ಹೆಡೆಯಿದೆ) ಪಾರ್ಶ್ವನಾಥನ ಮೇಲಿನ ಹಾವಿನ ಹೆಡೆಗಳ ಮೇಲೆ ಬರುವಂತೆ ಕೊಡೆ ಹಿಡಿದಿದ್ದಾಳೆ. ಮೆಲ್ಗಡೆ ಪಾರ್ಶ್ವನಾಥನ ಜನ್ಮ ಜನ್ಮಾಂತರಗಳ ವೈರಿಯಾಗಿದ್ದ ಉಗ್ರಮುಖದ ಕಮಠನು ಎರಡೂ ಕೈಗಳಿಂದ ಬಂಡೆಯನ್ನು ಎಸೆಯಲು ಪ್ರಯತ್ನಿಸುತ್ತಿರುವಂತಿದೆ. ಕೆಳಗಡೆ ಸೋತ ಕಮಠನು ಬಲಗೈಯನ್ನು ವಿಸ್ಮಯಮುದ್ರೆಯಲ್ಲಿ ಹಿಡಿದು ಕುಳಿತಿದ್ದಾನೆ.

ಈ ಮೂರೂ ಶಿಲ್ಪಗಳಲ್ಲಿ ಹುಬ್ಬುಗಳನ್ನು ಹಾಗೂ ತೆರೆದ ಕಣ್ಣುಗಳನ್ನು ಸ್ಪಷ್ಟವಾಗಿ ತೋರಿಸಲಾಗಿದೆ.

ಶಿಲ್ಪಶೈಲಿ ಮತ್ತು ಶಿಲ್ಪಿಗಳು

ಇಲ್ಲಿರುವ ಕೆಲವೇ ಶಿಲ್ಪಗಳು ಮೂರನೇ ಗುಹಾಲಯದ ಶಿಲ್ಪ ಪರಂಪರೆಯನ್ನು ನೆನಪಿಸುತ್ತವೆ. ಗುಹಾಲಯದ ಪರಿಸರದಲ್ಲಿ ಅನೇಕ ಶಿಲ್ಪಿಗಳ ಹೆಸರುಗಳಿವೆ. ಕಾನ್ತಿಮಞ್ಚಿ, ಕಣ್ಣ, ಪೆಲಮಞ್ಚಿ, ಸಿಂಗಮಞ್ಚಿ, ಹರಿಕೆ, ಭವಸ್ವಾಮಿ ಆರ್ಯ್ಯ, ಉದಗ್ರ, ಕೇಸವ, ಪಞ್ಚಣ, ವಿಜಾಮ್ಮ, ಪ್ರಸನ್ನ ಬುದ್ದಿ, ಆರಿಕ್ಕೆ, ಭಾದುಕ್ಕೆ, ಸಿರಿಗೆಱೀಯ, ಕೋಳಿಮಞ್ಚಿ, ಕದ್ರೆಸ್ವಾಮಿ, ಶ್ರೀಗೆಱೀಯ, ಮಾರ್ಗಜ, ಶ್ರೀನಿಧಿದೇವ, ಅನತ್ತಮಞ್ಚಿ, ಮುಂತಾದವು ಉಲ್ಲೇಖಾರ್ಹ. ಇದರಲ್ಲಿ ಕೆಲವರಾದರೂ ಮೂರನೇ ಗುಹಾಲಯದಲ್ಲಿ ಕೂಡ ಕೆಲಸ ಮಾಡಿರಬಹುದು.

ಐಹೊಳೆಯ ರಾವಳಫಡಿ ಗುಹೆಯ ಶಿಲ್ಪಗಳು

ರಾವಳಫಡಿ ಗುಹಾಲಯದ ಮುಮ್ಮಖದ ಇಕ್ಕೆಲಗಳಲ್ಲಿರುವ ಪದ್ಮನಿಧಿ, ಶಂಖನಿಧಿ ಹಾಗೂ ‘ಯವನ’ ದ್ವಾರಪಾಲರ ಶಿಲ್ಪಗಳು ಬಹಳಷ್ಟು ಸವೆದಿವೆ. ಇಷ್ಟು ದೊಡ್ಡ ‘ನಿಧಿ’ಗಳ ಬೇರಾವ ಗುಹಾಲಯದಲ್ಲೂ ಇಲ್ಲ ಎಂಬುದು ಗಮನೀಯ. ಕುಬೇರನ ನವನಿಧಿಗಳಲ್ಲಿ ಸೇರುವ ಶಂಖ ಮತ್ತು ಪದ್ಮವನ್ನು ಇವರು ಪ್ರತಿನಿಧಿಸುತ್ತಾರೆ. ಡೊಳ್ಳುಹೊಟ್ಟೆಯ ವ್ಯಕ್ತಿಗಳಾಗಿ ಇವರನ್ನು ಕುಳ್ಳಿರಿಸಲಾಗಿದೆ. ‘ಯವನ’ ದ್ವಾರಪಾಲರನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕ್ರಿ.ಪೂ.೨ನೇ ಶತಮಾನದ ಬೌದ್ಧ ಗುಹಾಲಯದ ‘ಯವನ’ ದ್ವಾರಪಾಲರನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ರಾವಳಫಡಿ ಗುಹಾಲಯದ ದಕ್ಷಿಣ ಪಾರ್ಶ್ವದ ದ್ವಾರಪಾಲನು ತನ್ನ ಎರಡೂ ಕೈಗಳನ್ನು ಗದೆಯ ಮೇಲಿಟ್ಟು ಅದರ ಮೇಲೆ ಮುಖವನ್ನಿರಿಸಿದ್ದಾನೆ. ಶಿಲ್ಪಗಳು ಬಹಳ ಸವೆದಿರುವುದರಿಂದ ವಿವರಗಳು ಸ್ಪಷ್ಟವಿಲ್ಲ.

ಸಭಾಮಂಟಪದಲ್ಲಿರುವ ಶಿಲ್ಪಗಳು ವಿಶಿಷ್ಟ ಪ್ರತಿಮಾಲಕ್ಷಣಗಳಿಂದೊಡಗೂಡಿ ಆಕರ್ಷಕವಾಗಿವೆ. ವಾಯವ್ಯ ಬದಿಯಲ್ಲಿ ತ್ರಿಭಂಗದಲ್ಲಿ ನಿಂತಿರುವ ಅರ್ಧನಾರೀಶ್ವರನ ಮೂರ್ತಿಯಿದೆ. ಬಲಗೈಯಲ್ಲಿ ಎತ್ತರವಾದ ತ್ರಿಶೂಲ ಧರಿಸಿರುವ ಅರ್ಧನಾರೀಶ್ವರನ ಎಡಗೈ ಕುರುಳನ್ನು ಸ್ತ್ರೀ ಸಹಜ ಲಾವಣ್ಯದಿಂದ ಹಿಡಿದಿದೆ. ವೇಷಭೂಷಣ ಹಾಗೂ ದೇಹ ವಿವರಗಳಲ್ಲಿ ಶಿವ ಮತ್ತು ಪಾರ್ವತಿ ಭಾಗಗಳ ಅಂತರವನ್ನು ಸೂಚಿಸಲಾಗಿದೆ. ತ್ರಿಶೂಲದ ಕೆಳಗಡೆ ಶಿವಗಣವನ್ನು ಹಾಗೂ ನಾರೀ ಭಾಗದ ಕೆಳಗಡೆ ಸಿಂಹವನ್ನು ಚಿತ್ರಿಸಿದೆ. ಶಿರೋಮಕುಟವು ಎತ್ತರವಾಗಿದ್ದು, ಶಿರದ ಹಿಂಗಡೆ ಬಿಚ್ಚಿದ ಬೀಸಣಿಕೆಯಂತಹ ಶಿರಶ್ಚಕ್ರವಿದೆ. ಮೈಮಾಟ, ಮುಖಭಾವ ಮತ್ತು ಭಂಗಿ ಆಕರ್ಷಕವಾಗಿವೆ.

ಈಶಾನ್ಯ ಭಾಗದಲ್ಲಿ ಶೈವ ದ್ವಾರಪಾಲನ ಶಿಲ್ಪವಿದೆ. ಇವನು ಬಲಗೈಯಲ್ಲಿ ಸರ್ಪವನ್ನು ಹಿಡಿದು ಎಡಕೈಯನ್ನು ಕಟ್ಯವಲಂಬಿತ ರೀತಿಯಲ್ಲಿ ಇರಿಸಿದ್ದಾನೆ. ಹಿನ್ನೆಲೆಯಲ್ಲಿ ಬಲಬದಿಗೆ ತ್ರಿಶೂಲವನ್ನೂ ಎಡಬದಿಗೆ ಪರಶುವನ್ನೂ ತೋರಿಸಲಾಗಿದೆ. ಇದೇ ರೀತಿಯ ಆಗ್ನೇಯ ಬದಿಯಲ್ಲಿಯೂ ದ್ವಿಭುಜ ಶೈವ ದ್ವಾರಪಾಲ ನಿಂತಿದ್ದಾನೆ. ಇವನ ಬಲಗೈಯಲ್ಲಿ ಖಟ್ಟಾಂಗವಿದೆ. ಎಡಗೈಯನ್ನು ಕಟ್ಯವಲಂಬಿತ ರೀತಿಯಲ್ಲಿರಿಸಿದ್ದಾನೆ. ಹಿನ್ನೆಲೆಯಲ್ಲಿ ಎಡಗಡೆ ಸರ್ಪ ಸುತ್ತಿಕೊಂಡಿರುವ ವಿಶಿಷ್ಟ ಆಯುಧವಿದೆ.

ಆಗ್ನೇಯ ಬದಿಯ ದ್ವಾರಪಾಲನ ಪಕ್ಕದಲ್ಲಿ ಹರಿಹರನ ಶಿಲ್ಪವಿದೆ. ಸಮಪಾದನಾಗಿ ನಿಂತಿರುವ ಈತನ ಬಲಗೈಗಳಲ್ಲಿ ರುದ್ರಾಕ್ಷಿಮಾಲೆ ಹಾಗೂ ಸರ್ವ ಇವೆ; ಎಡ ಕೈಗಳಲ್ಲಿ ಮೇಲಿನದು ಶಂಖವನ್ನು ಧರಿಸಿದ್ದು ಕೆಳಗಿನದನ್ನು ಕಟ್ಯವಲಂಬಿತ ರೀತಿಯಲ್ಲಿರಿಸಿದ್ದಾನೆ. ಶಿರಭಾಗವನ್ನು ಜಟಾಮಕುಟ, ವ್ಯಾಘ್ರಚರ್ಮದಿಂದಲೂ, ವಿಷ್ಣುಭಾಗವನ್ನು ಕಿರೀಟಮಕುಟ, ಮುಕ್ತಾಯಜ್ಞೋಪವೀತ, ಅರ್ಧೋರುಕ ಧೋತಿಯಿಂದಲೂ ವಿವಿಧ ಆಭರಣಗಳಿಂದಲೂ ಅಲಂಕರಿಸಲಾಗಿದೆ.

ಈ ಶಿಲ್ಪಕ್ಕೆ ಎದುರಾಗಿ ನೈಋತ್ಯ ಬದಿಯಲ್ಲಿ ಗಂಗಾಧರ ಶಿವನ ಅಪರೂಪದ ಶಿಲ್ಪವಿದೆ. ಚತುರ್ಭುಜವಾಗಿ ಸಮಪಾದದಲ್ಲಿ ನಿಂತಿರುವ ಶಿವನ ಮುಖ್ಯ ಬಲಗೈ ಕಟಕಹಸ್ತದಲ್ಲಿದೆ; ಎಡಗೈ ಕಟ್ಯವಲಂಬಿತವಾಗಿದೆ. ಉಳಿದೆರಡು ಮೇಲಣ ಕೈಗಳಿಂದ ಆತ ಗಂಗೆಯನ್ನು ಧರಿಸುವುದಕ್ಕಾಗಿ ಜಟೆಗಳನ್ನು ಬಿಡಿಸಿ ಹಿಡಿದಿದ್ದಾನೆ. ಮೇಲ್ಗಡೆ ಗಂಗೆ ಸ್ತ್ರೀರೂಪದಲ್ಲಿ, ತ್ರಿಪಥಗಾಮಿನಿಯಾಗಿ ಕೈಮುಗಿದು ಗಂಗಾ, ಯಮುನಾ, ಸರಸ್ವತೀ ನದಿಗಳಾಗಿ ಇಳಿದು ಬರುತ್ತಿದ್ದಾಳೆ. ಶಿವನ ಬಲಪಾರ್ಶ್ವದಲ್ಲಿ ಕೈಗಳನ್ನು ಮೇಲಕ್ಕೆ ಎತ್ತಿ ಒಂಟಿಗಾಲ ಮೇಲೆ ತಪಸ್ಸು ಮಾಡುತ್ತಿರುವ ಭಗೀರಥನಿದ್ದಾನೆ. ಎಡಪಾರ್ಶ್ವದಲ್ಲಿ ಪಾರ್ವತಿ ತ್ರಿಭಂಗಿಯಲ್ಲಿ ನಿಂತು ಬಲಗೈಯನ್ನು ಗದ್ದದ ಮೇಲೆ, ಚಿನ್ಮುದ್ರೆಯಲ್ಲಿರಿಸಿ ಆಶ್ಚರ್ಯ ಸೂಚಿಸುತ್ತಿದ್ದಾಳೆ. ಕೆಳಗಡೆ ನಮಸ್ಕರಿಸುತ್ತ ಕುಳಿತಿರುವ ಭಗೀರಥ (ಅಥವಾ ಗಂಗೆಯನ್ನು ಕುಡಿಯುತ್ತಿರುವ ಜಹ್ನು ಋಷಿ), ಸರ್ಪ ಹಿಡಿದ ಶಿವಗಣ, ತ್ರಿಶೂಲಧಾರಿ ಪುರುಷ ಹಾಗೂ ಇನ್ನೊಬ್ಬ ಕುಳಿತ ವ್ಯಕ್ತಿಯನ್ನು ಶಿಲ್ಪಿಸಿದೆ.

ಸಭಾಮಂಟಪದ ಉತ್ತರ ಪಾರ್ಶ್ವದಲ್ಲಿರುವ ನಟರಾಜ ಮಂಟಪದಲ್ಲಿ ದಶಭುಜ ನಟರಾಜಶಿವನು ಸಮಚತುರ ಸ್ಥಿತಿಯಲ್ಲಿ ಸಪ್ತಮಾತೃಕೆಯರ ಸಹಿತ ನೃತ್ಯದಲ್ಲಿ ತೊಡಗಿದ್ದಾನೆ. ಮೇಲಣ ಎರಡು ಕೈಗಳು ಸರ್ಪವನ್ನು ಎತ್ತಿ ಬಿಡಿಸಿ ಹಿಡಿದಿವೆ. ಬಲಗೈಗಳಲ್ಲಿ ಒಂದು ಪರಶು ಹಾಗೂ ಇನ್ನೊಂದು ಡಮರುಗ ಧರಿಸಿವೆ. ಉಳಿದ ಕೈಗಳು ವಿವಿಧ ನಾಟ್ಯಮುದ್ರೆಗಳಲ್ಲಿವೆ. ಶಿವನ ಬಲಬದಿಗೆ ಕುಳ್ಳ ಬಾಲ ಗಣೇಶನು ‘ಮೂಲಕನ್ದ’ (ಮೂಲಂಗಿ) ಹಾಗೂ ಮೋದಕ ಪಾತ್ರೆ ಹಿಡಿದು ನಿಂತಿದ್ದಾನೆ; ಎಡಗಡೆ ಕುಮಾರನಿದ್ದಾನೆ. ಶಿವನ ಎಡಪಕ್ಕದಲ್ಲಿ ಪಾರ್ವತಿ ವಿಶಿಷ್ಟ ತ್ರಿಭಂಗಿಯಲ್ಲಿದ್ದು, ಬಲಗೈಯನ್ನು ಭುಜದ ಹತ್ತಿರ ಇರಿಸಿ ಎಡಗೈಯನ್ನು ಲೋಲಹಸ್ತದಲ್ಲಿ ಇಳಿಬಿಟ್ಟಿದ್ದಾಳೆ. ಅವಳ ಕಟವಸ್ತ್ರ ಕಾಲ ಗಂಟಿನ ಸಮೀಪದವರೆಗೂ ಇಳಿದಿದ್ದು ಅದರ ಮಡಿಕೆಗಳನ್ನು ಸಮಾನಾಂತರವಾಗಿ ಕೊರೆದ ಗೆರೆಗಳಿಂದ ಸೂಚಿಸಿದೆ. ಶಿವನ ಬಲ ಪಕ್ಕದಲ್ಲಿ ವೈಷ್ಣವಿ ಇದ್ದಾಳೆ. ಮಂಟಪದ ಬಲ ಪಕ್ಕದ ಗೋಡೆಯಲ್ಲಿ ಕ್ರಮವಾಗಿ ಬ್ರಾಹ್ಮೀ, ಮಾಹೇಶ್ವರಿ, ಕೌಮಾರೀ ಹಾಗೂ ಭೃಂಗಿ ಶಿಲ್ಪಿತರಾಗಿದ್ದಾರೆ. ಎಡಪಕ್ಕದ ಗೋಡೆಯಲ್ಲಿ ವಾರಾಹೀ, ಇಂದ್ರಾಣೀ ಮತ್ತು ಚಾಮುಂಡಾ ವಿವಿಧ ಭಂಗಿಗಳಲ್ಲಿ ನರ್ತಿಸು ತ್ತಿದ್ದಾರೆ. ಸಪ್ತಮಾತೃಕೆಯರಲ್ಲಿ ಕೆಲವರು ಕಾಲಮಂಡಿಯವರೆಗೆ, ಇನ್ನು ಕೆಲವರು ಪಾದದವರೆಗೆ ವಸ್ತ್ರ ತೊಟ್ಟಿರುವಂತೆ ತೋರಿಸಿ ಎಲ್ಲರಿಗೂ ಸ್ತ್ರೀಯೋಗ್ಯ ಆಭರಣಾದಿಗಳು ಹಾಗೂ ಎತ್ತರವಾದ ಮಕುಟ ಮತ್ತು ಬಿಚ್ಚಿದ ಬೀಸಣಿಕೆಯಾಕಾರದ ಶಿರಶ್ಚಕ್ರ ಇವೆ.

ಅಂತರಾಳದ ಉತ್ತರ ಗೋಡೆಯಲ್ಲಿ ಭೂವರಾಹನ ಶಿಲ್ಪವಿದೆ. ‘ಚತುರ’ ರೀತಿಯಲ್ಲಿ ನಿಂತಿರುವ ವರಾಹನು ಎಡಗೈಯನ್ನು ಮಡಚಿ ಎತ್ತಿದ್ದು ಅದರ ಮೇಲ್ಗಡೆ ಭೂದೇವಿಯು ಎರಡೂ ಕಾಲುಗಳನ್ನು ಇಳಿಬಿಟ್ಟು ಕುಳಿತಿದ್ದಾಳೆ. ವರಾಹನ ಇನ್ನೊಂದು ಎಡಗೈ ಅವಳ ಕಾಲುಗಳಿಗೆ ಆಧಾರವೊದಗಿಸಿದೆ. ಬಲಗೈಗಳಲ್ಲಿ ಕೆಳಗಿನದು ಕಟ್ಯವಲಂಬಿತವಾಗಿದೆ; ಮೇಲಣ ಕೈಯಲ್ಲಿ ಪ್ರಯೋಗಚಕ್ರವಿದೆ. ಶಂಖವು ಎಡಪಾರ್ಶ್ವದಲ್ಲಿ ತೇಲುತ್ತಿದೆ. ನಿಮೀತ ರೀತಿಯಲ್ಲಿ ಮುಕ್ತಾಯಜ್ಞೋಪವೀತವನ್ನಷ್ಟೇ ಅಲ್ಲದೆ ದಪ್ಪಗಿರುವ ವನಮಾಲೆಯನ್ನೂ ಧರಿಸಿರುವುದು ಈ ವರಾಹ ಶಿಲ್ಪದ ವೈಶಿಷ್ಟ್ಯವಾಗಿದೆ. ಕೆಳಗಡೆ ಎಡ ಮೂಲೆಯಲ್ಲಿ ನಾಗರಾಜ ಮತ್ತು ನಾಗಿಣಿ ಅಂಜಲೀ ಮುದ್ರೆಯಲ್ಲಿ ಚಿತ್ರಿತರಾಗಿದ್ದಾರೆ.  ಸಂಯೋಜನೆ ಮತ್ತು ವಿವರಗಳಲ್ಲಿ ಈ ಶಿಲ್ಪ ಬಾದಾಮಿಯ ವರಾಹ ಶಿಲ್ಪಗಳಿಗಿಂತ ಭಿನ್ನವಾದುದು.

ಈ ಶಿಲ್ಪಕ್ಕೆ ಎದುರಾಗಿ ಅಂತರಾಳದ ದಕ್ಷಿಣ ಗೋಡೆಯಲ್ಲಿ ಮಹಿಷಮರ್ದಿನಿಯ ಶಿಲ್ಪವಿದೆ. ಅಷ್ಟ ಭುಜಳಾಗಿ ಶಿಲ್ಪಿತಳಾಗಿರುವ ದೇವಿಯು ಪೂರ್ಣ ಪ್ರಾಣಿರೂಪದ ಮಹಿಷದ ಮೋರೆಯನ್ನು ಎಡಗೈಯಿಂದ ಒತ್ತಿ ಹಿಡಿದು, ಮಡಿಚಿದ ತನ್ನ ಎಡಗಾಲ ಮಂಡಿಯಿಂದ ಕುತ್ತಿಗೆಯನ್ನು ಅದುಮಿ, ಬಲಗೈಯಲ್ಲಿರುವ ತ್ರಿಶೂಲದಿಂದ ಬೆನ್ನಲ್ಲಿ ತಿವಿದಿದ್ದಾಳೆ. ಉಳಿದ ಬಲಗೈಗಳಲ್ಲಿ ಖಡ್ಗ, ಲೀಲಾ ಶುಕ (ಗಿಳಿ), ಚಕ್ರವನ್ನೂ ಎಡಗೈಗಳಲ್ಲಿ ಶಂಖ, ಖೇಟಕ ಮತ್ತು ಬಿಲ್ಲನ್ನೂ ಹಿಡಿದಿದ್ದಾಳೆ. ಅವಳ ಎಡಪಾರ್ಶ್ವದಲ್ಲಿ ಸಿಂಹವನ್ನು ಚಿತ್ರಿಸಿದೆ.

ಶಿಲ್ಪ ಶೈಲಿ ಮತ್ತು ಶಿಲ್ಪಿಗಳು

ಶಿಲ್ಪರೂಪಣ ಮತ್ತು ರೂಪ ಸಂಸ್ಕರಣ ವಿವರಗಳಲ್ಲಿ ಹಲವು ಸಾಮಾನ್ಯ ಲಕ್ಷಣಗಳನ್ನು ರಾವಳಫಡಿಯ ಶಿಲ್ಪಗಳಲ್ಲಿ ಗುರುತಿಸಬಹುದು. ಎತ್ತರವಾದ ಸಿಲಿಂಡರಿನಾಕಾರದ ಮಕುಟ, ಬಿಚ್ಚು ಬೀಸಣಿಕೆಯಂತಹ ಶಿರಶ್ಚಕ್ರ, ತೆರೆದ ಕಣ್ಣುಗಳು, ಸ್ಪಷ್ಟ ಹುಬ್ಬು ಮತ್ತು ಕಣ್ಣೆವೆಗಳು, ಕಟಿವಸ್ತ್ರವನ್ನು ಹೆಚ್ಚಾಗಿ ಮಂಡಿಯವರೆಗೆ ಧೋತರದಂತೆ ಬಿಗಿದಿರುವುದು. ವಸ್ತ್ರದ ಮಡಿಕೆಗಳನ್ನು ಕೊರೆದ ಗೆರೆಗಳಿಂದ ಸೂಚ್ಯವಾಗಿ ತೋರಿಸಿರುವುದು, ಚರ್ಮಾಂಬರದ ಅಂಚನ್ನು ತರಂಗ ರೂಪದಲ್ಲಿ ಚಿತ್ರಿಸಿರುವುದು, ಮುಕ್ತಾಯಜ್ಞೋಪನೀತ ಮತ್ತು ಅದರಿಂದಲೇ ಹೊರಟು ಸರಪಳಿಯಂತೆ ಪಾದದವರೆಗೆ ಇಳಿಬಿದ್ದಿರುವ ಶೃಂಖಲಾಯಜ್ಞೋಪವೀತ, ಮೈಕಟ್ಟು, ಮುಖ ದೇಹಗಳ ಪ್ರಮಾಣ ಮುಂತಾದವೆಲ್ಲ ಈ ಶಿಲ್ಪಗಳು ನಿರ್ದಿಷ್ಟ ಹಿನ್ನೆಲೆಯಲ್ಲಿ ತರಬೇತಾದ ಶಿಲ್ಪಿಗಳ ಗುಂಪನ್ನು ಸೂಚಿಸುತ್ತವೆ. ಬಾದಾಮಿಯ ಒಂದನೇ ಗುಹಾಲಯದ ಶೈವ ದ್ವಾರಪಾಲ, ಮೂರನೇ ಗುಹಾಲಯದ ಹರಿಹರ, ತ್ರಿವಿಕ್ರಮ, ಅಷ್ಟಭುಜ ವಿಷ್ಣು ಶಿಲ್ಪಗಳಿಗೆ ಇವು ತಕ್ಕಮಟ್ಟಿಗೆ ಸಾಮ್ಯ ಹೊಂದಿವೆಯಾದರೂ ಹಲವು ವ್ಯತ್ಯಾಸಗಳೂ ಇಲ್ಲದಿಲ್ಲ. ವರಾಹ ಶಿಲ್ಪದಲ್ಲಿ ಶಂಖವನ್ನು ಹಿನ್ನೆಲೆಯಲ್ಲಿ ತೋರಿಸಿರುವುದು ಸ್ಥಳೀಯ ವೈಶಿಷ್ಟ್ಯವಾಗಿದೆ. ದುರ್ಗಾ ಗುಡಿಯಲ್ಲಿರುವ ವರಾಹ ಶಿಲ್ಪದಲ್ಲಿ ಕೂಡ ಈ ಲಕ್ಷಣವನ್ನು ಗುರುತಿಸಬಹುದು. ಭೂದೇವಿಯನ್ನು ವರಾಹನ ಕೈಗಂಟಿನ ಮೇಲೆ ಕುಳಿತಿರುವಂತೆ ತೋರಿಸಿರುವುದು ಭೂ ವರಾಹ ಪ್ರತಿಮಾ ಲಕ್ಷಣದ ಪ್ರಗತಿಯ ದ್ಯೋತಕವೆಂದು ಭಾವಿಸಬಹುದು. ದೇವತೆಗಳ ಎತ್ತರೆತ್ತರವಾದ ಮಕುಟಗಳು ಅವರ ದೇಹದ ಪ್ರಮಾಣಕ್ಕೆ ತುಸು ಅತಿಶಯವೆನಿಸುತ್ತವೆಯಾದರೂ ವೈಶಿಷ್ಟ್ಯವೊದಗಿಸಿವೆ. ಕೆಲವು ವಿದ್ವಾಂಸರ ಪ್ರಕಾರ ಇದು ‘ಪಲ್ಲವ’ ಶಿಲ್ಪ ಶೈಲಿಯ ಪ್ರಭಾವ. ಆದರೆ ಈ ಅಭಿಪ್ರಾಯವನ್ನು ಒಪ್ಪುವುದು ಕಷ್ಟ.

ಶಿಲ್ಪಿಗಳ ಹೆಸರನ್ನು ಸೂಚಿಸುವ ಶಾಸನಗಳು ರಾವಳಫಡಿ ಗುಹಾಲಯದ ಪರಿಸರದಲ್ಲಿಲ್ಲ. ನಟರಾಜ ಮಂಟಪದ ಅಧಿಷ್ಠಾನದಲ್ಲಿ ‘ರಣವಿ (ಕ್ರೌನ್ತ)’ ಹೆಸರನ್ನು ಬರೆದಿದೆ. ಇದು ಒಂದನೇ ಅಥವಾ ಇಮ್ಮಡಿ ಪುಲಕೇಶಿಯ ಬಿರುದು ಆಗಿರುವ ಸಾಧ್ಯತೆಯಿದೆ.

ಬೌದ್ಧ ಚೈತ್ಯಾಲಯದ ಶಿಲ್ಪಗಳು

ಬುದ್ಧನ ಜೀವನದ ಘಟನೆಗಳನ್ನು ನಿರೂಪಿಸುವ ಚಿಕಣಿ ಶಿಲ್ಪಗಳಲ್ಲಿ ಬುದ್ಧನ ಪರಿತ್ಯಾಗ, ನಲಗಿರಿ ಆನೆಯ ಸನ್ನಿವೇಶ, ದೇವದತ್ತನು ಬುದ್ಧನನ್ನು ಕೊಲ್ಲಲು ಯತ್ನಿಸಿದುದು, ಬುದ್ಧನು ಸಾರನಾಥದಲ್ಲಿ ಮಾಡಿದ ಮೊದಲ ಧರ್ಮೋಪದೇಶ ಮುಖ್ಯವಾಗಿವೆ. ಇದೇ ರೀತಿಯಾಗಿ ಚುಲ್ಲಹಂಸಜಾತಕ, ವಲಹಸ್ಸಜಾತಕ, ಸುರಾಪಾನಜಾತಕ, ಆರಾಮ ದೂಸಕಜಾತಕ ಮುಂತಾದ ಜಾತಕಕಥೆಗಳ ಸಂಕ್ಷಿಪ್ತ ನಿರೂಪಣೆ ಕೂಡ ದ್ವಾರಬಂಧದ ಚಿಕಣಿ ಶಿಲ್ಪಗಳಲ್ಲಿವೆ.

ಛತ್ತಿನಲ್ಲೆ ಮಧ್ಯದ ಅಂಕಣದಲ್ಲಿರುವ ಶಿಲ್ಪದಲ್ಲಿ ಬುದ್ಧನು ಪದ್ಮಾಸನದಲ್ಲಿ ಹಸನ್ಮುಖಿಯಾಗಿ ಕುಳಿತಿದ್ದಾನೆ. ಬಲಗೈಯನ್ನು ವ್ಯಾಖ್ಯಾನ ಮುದ್ರೆಯಲ್ಲಿ ಎತ್ತಿ ಹಿಡಿದಿದ್ದು ಎಡಗೈ ಕಾಲುಗಳ ಮಧ್ಯೆ ಯೋಗಮುದ್ರೆಯಲ್ಲಿದೆ. ಅವನು ತೊಟ್ಟಿರುವ ಸಂಘಾಟಿಯ ಸೆರಗು ಎಡಭುಜದಲ್ಲಿ ಮಡಿಕೆಗಳೊಂದಿಗೆ ಇಳಿಬಿದ್ದಿದೆ. ಬುದ್ಧನ ತಲೆಯ ಮೇಲೆ ಉಷ್ಣೀಷವಿಲ್ಲ, ಮೇಲ್ಗಡೆ ಮುಕ್ಕೊಡೆಯಿದೆ. ಮುಖದ ಹಿಂಗಡೆ ಬಿಚ್ಚಿದ ಬೀಸಣಿಕೆಯಾಕಾರದ ಶಿರಶ್ಚಕ್ರವಿದೆ. ಬುದ್ದನ ಅಕ್ಕಪಕ್ಕದಲ್ಲಿ ಚಾಮರಧಾರಿ ಸೇವಕರಿದ್ದಾರೆ.

ಶಿಲ್ಪ ಶೈಲಿ ಮತ್ತು ಶಿಲ್ಪಗಳು

ಮೇಲೆ ವರ್ಣಿಸಿದ ಬುದ್ಧ ಶಿಲ್ಪವೊಂದೇ ನಮಗೆ ಈ ಚೈತ್ಯಾಲಯದಲ್ಲಿ ಲಭ್ಯವಿರುವ ಮುಖ್ಯ ಶಿಲ್ಪವಾಗಿರುವುದರಿಂದ ಶೈಲಿಯ ಬಗ್ಗೆ ಹೆಚ್ಚು ಹೇಳುವುದಾಗದು. ಆದರೆ ಬುದ್ಧನ ಶಿರಶ್ಚಕ್ರವು ಬಿಚ್ಚಿದ ಬೀಸಣಿಗೆಯಂತೆ (ಅರಗಳುಳ್ಳ ಚಕ್ರದಂತೆ) ಇರುವುದನ್ನು ಗಮನಿಸಿದರೆ ರಾವಳಫಡಿಯ ಶಿಲ್ಪಗಳು ನೆನಪಾಗುತ್ತವೆ(ವಾಸ್ತುಶಿಲ್ಪ ದೃಷ್ಟಿಯಿಂದ ದ್ವಾರಬಂಧಗಳು ಉತ್ತರಾಂಗ ವಿವರಗಳಲ್ಲಿ ಶಾಲ‑ಕೂಟಗಳ ಹಾರ ವಿನ್ಯಾಸವನ್ನು ಅಲಂಕಾರಕ್ಕಾಗಿ ಬಳಸಿರುವುದನ್ನು ಗಮನಿಸಬೇಕು. ಡೆಕ್ಕನ್ ಪ್ರದೇಶದ ದಾಕ್ಷಿಣಾತ್ಯ ವಾಸ್ತುರೂಪದ ಪರಿಚಯವಿದ್ದವರು ಇದನ್ನು ಮಾಡಿರಬೇಕು).

ಕಂಬಗಳ ಮೇಲೆ ಕೆಲವು ಶಿಲ್ಪಿಗಳ ಹೆಸರುಗಳು ಕ್ರಿ.ಶ. ೭ನೇ ಶತಮಾನದ ಕನ್ನಡಾಕ್ಷರ ಗಳಲ್ಲಿ  ಕಂಡುಬರುತ್ತವೆ: ಬಿಞ್ಜಡಿ ಒವಜ್ಜ, ಬಿಣ ಅಮ್ಮ, ಬಿಸಾಟಿ, ವಾಘ್ಯಮನ್ತ. ಇವುಗಳಲ್ಲಿ ಬಿಞ್ಜಡಿ ಒವಜ್ಜನು ಪ್ರಮುಖನೆಂದು ತೋರುತ್ತದೆ. ನರಸೊಬ್ಬನು ಒಂದು ಶಾಸನದಲ್ಲಿ ತನ್ನನ್ನು ಬಿಞ್ಜಡಿ ಒವಜ್ಜನ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಈ ನರಸೊಬ್ಬನು ಮೇಗುತಿ ಬೆಟ್ಟದ ಮೀನಬಸದಿಯ ಸಮೀಪ ಇನ್ನೊಂದು ಗುಹಾಲಯ ನಿರ್ಮಿಸಲೆಂದು ಬಂಡೆಯ ಮುಖದಲ್ಲಿ ರೂಪರೇಷೆಗಳನ್ನು ಹಾಕಿರುವುದು ಕಂಡುಬಂದಿದೆ. ಈತ ಹುಚ್ಚಪ್ಪಯ್ಯ ಗುಡಿಯನ್ನು ನಿರ್ಮಾಣ ಮಾಡಿದ ವಾಸ್ತುಶಿಲ್ಪಿ, ಬೌದ್ಧಾಲಯದ ಪಕ್ಕದ ಬಿಲದಲ್ಲಿ ಶ್ರೀಪತಿ ಚಿತ್ರಾಧಿಪನ ಹೆಸರು ಇದೆ.

ಐಹೊಳೆಯ ಜೈನ ಗುಹಾಲಯದ (ಮೀನಬಸದಿಯ) ಶಿಲ್ಪಗಳು

ಐಹೊಳೆ ಜೈನ ಗುಹಾಲಯದ ಪೂರ್ವ ಪಾರ್ಶ್ವಗೋಡೆಯಲ್ಲಿ ಬಾಹುಬಲಿಯ (ಗೊಮ್ಮಟನ) ಹಿರಿಯ ಶಿಲ್ಪವಿದೆ. ಕಾಯೋತ್ಸರ್ಗ ಮುದ್ರೆಯಲ್ಲಿ ದಿಗಂಬರನಾಗಿ ನಿಂತಿರುವ ಬಾಹುಬಲಿ ತನ್ನ ಪರಿಸರದ ಆಗುಹೋಗುಗಳ ಪರಿವೆ ಇಲ್ಲದೆ ಅಚಲ ಮನಸ್ಕನಾಗಿ ತಪಸ್ಸನ್ನಾಚರಿಸುತ್ತಿದ್ದಾನೆ. ಅವನ ಕೂದಲುಗಳು ಜಡೆಗಟ್ಟಿ ಭುಜದ ಮೇಲೆ ಇಳಿಬಿದ್ದಿವೆ. ಕೆಳಗೆ ಹುತ್ತಗಳು ಬೆಳೆದು ಹಾವುಗಳು ಓಡಾಡುತ್ತಿವೆ. ಮಾಧವೀ ಬಳ್ಳಿಗಳು ಅವನ ಕೈಕಾಲುಗಳನ್ನು ಬಳಸಿ ಮೇಲೇರಿವೆ. ಇವನ ಎರಡೂ ಪಾರ್ಶ್ವಗಳಲ್ಲಿ ಒಬ್ಬೊಬ್ಬರಂತೆ ಕಿರೀಟಮುಕುಟಧಾರಿಗಳಾಗಿರುವ ಸ್ತ್ರೀಯರಿದ್ದಾರೆ. ಇವರು ಬಾಹುಬಲಿಯ ತಂಗಿಯರಾದ ಬ್ರಾಹ್ಮೀ ಮತ್ತು ಸುಂದರಿ. ಗ್ರೈವೇಯಕಹಾರಗಳು, ಕುಂಡಲಗಳು, ಧನ್ನವೀರದಂತೆ ಸಾಗಿರುವ ಸ್ತನಸೂತ್ರ, ಕಂಕಣಗಳು, ಪಾದಸರಗಳು ಮುಂತಾದ ಆಭರಣಗಳಿಂದ ಅಲಂಕೃತರಾಗಿ ತ್ರಿಭಂಗಿಯಲ್ಲಿ ನಿಂತಿದ್ದಾರೆ. ಅವರ ಕಟಿವಸ್ತ್ರ ಮೈಗೆ ಅಂಟಿಕೊಂಡಿರುವಂತೆ ಕಾಲಗಂಟಿನವರೆಗೂ ಇಳಿದಿದೆ. ಎಡಗಡೆ ಇರುವ ಸ್ತ್ರೀ ಬಲಗೈಯಿಂದ ಬಾಹುಬಲಿಯ ಮೈಗಂಟಿರುವ ಮಾಧವೀಲತೆಯನ್ನು ತೆಗೆಯುತ್ತಿದ್ದಾಳೆ. ಅವಳ ಎಡಗೈ ಲೋಲಹಸ್ತದಲ್ಲಿ ಇಳಿಬಿಟ್ಟಿದೆ. ಬಲಗಡೆ ಇರುವ ಸ್ತ್ರೀ ತನ್ನೆರಡೂ ಕೈಗಳಿಂದ ಮಾಧವೀಲತೆಯನ್ನು ಬಿಡಿಸುವುದರಲ್ಲಿ ಮಗ್ನಳಾಗಿದ್ದಾಳೆ. ಬಾಹುಬಲಿಯ ಹಿಂಭಾಗದಲ್ಲಿ ಎಡಗಡೆ ಇಬ್ಬರು ವಿದ್ಯಾಧರರು ತೇಲುತ್ತಿದ್ದಾರೆ. ಹಿನ್ನೆಲೆಯಲ್ಲಿ ವೃಕ್ಷಗಳನ್ನು ಚಿತ್ರಿಸಲಾಗಿದೆ.

ಮುಖಮಂಟಪದ ಪಶ್ಚಿಮ ಪಾರ್ಶ್ವಗೋಡೆಯಲ್ಲಿ ಕಾರ್ಯೋತ್ಸರ್ಗ ಮುದ್ರೆಯಲ್ಲಿ ದಿಗಂಬರನಾಗಿ ನಿಂತಿರುವ ಪಾರ್ಶ್ವನಾಥನ ಶಿಲ್ಪವಿದೆ. ಇವನ ಶಿರದ ಮೇಲ್ಗಡೆ ಐದು ಹೆಡೆಯ ಹಾವಿನ ಆಸರೆಯಿದೆ. ಪಾರ್ಶ್ವನಾಥನ ಬಲಪಕ್ಕದಲ್ಲಿ ಶಿರದ ಮೇಲೆ ನಾಗ ಹೆಡೆಯಿರುವ ಇಬ್ಬರು ಸ್ತ್ರೀಯರು ನಿಂತಿದ್ದಾರೆ. ಒಬ್ಬಳ ಬಲಗೈಯಲ್ಲಿ ಪದ್ಮವಿದೆ. ಇನ್ನೊಬ್ಬ ನಾಗಸ್ತ್ರೀಯು ತನ್ನೆರಡೂ ಕೈಗಳಿಂದ ದೊಡ್ಡ ಛತ್ರಿಯ ಕೋಲನ್ನು ಹಿಡಿದಿದ್ದಾಳೆ. ಈಕೆ ಪದ್ಮಾವತಿ ಇರಬೇಕು. ತ್ರಿಭಂಗಿಯಲ್ಲಿ ನಿಂತಿರುವ ಇವಳನ್ನು ಗ್ರೈವೇಯಕಹಾರಗಳು, ಕುಂಡಲಗಳು, ಕೇಯೂರಗಳು, ಉದರಬಂಧ, ಕಂಕಣಪಂಕ್ತಿಗಳು, ಕಟಿಬಂಧ, ಪಾದಸರಗಳು ಇತ್ಯಾದಿ ಆಭರಣಗಳಿಂದ ಸಿಂಗರಿಸಲಾಗಿದೆ. ಇವಳ ಕಟಿವಸ್ತ್ರವು ಮೈಗೆ ಅಂಟಿಕೊಂಡಿರುವಂತೆ ಕಾಲಗಂಟಿನವರೆಗೂ ನಿರೂಪಿತವಾಗಿದೆ. ಮೇಲ್ಗಡೆ ಎಡಮೂಲೆಯಲ್ಲಿ ಎರಡೂ ಕೈಗಳನ್ನೆತ್ತಿ ಬಂಡೆಯನ್ನು ಎಸೆಯಲು ಪ್ರಯತ್ನಿಸುತ್ತಿರುವ ಕಮಠನಿದ್ದಾನೆ. ಪಾರ್ಶ್ವನಾಥನ ತಪೋಭಂಗ ಮಾಡಲು ಅಸಮರ್ಥನಾದ ಕಮಠನನ್ನು ಎಡಪಕ್ಕದಲ್ಲಿ ಅಂಜಲಿ ಮುದ್ರೆಯಲ್ಲಿ ತೋರಿಸಲಾಗಿದೆ.

ಮಹಾಮಂಟಪದಲ್ಲಿ ಗರ್ಭಗೃಹದ ಮುಮ್ಮುಖದ ಪಾರ್ಶ್ವಗಳಲ್ಲಿ ತ್ರಿಭಂಗಿಯಲ್ಲಿ ನಿಂತಿರುವ ದ್ವಿಬುಜ ದ್ವಾರಪಾಲರಿದ್ದಾರೆ. ಇಬ್ಬರೂ ಎಡಗೈಯನ್ನು ಕಟ್ಯವಲಂಬಿತವಾಗಿರಿಸಿ ಬಲಗೈಯಲ್ಲಿ ಪದ್ಮವನ್ನು ಹಿಡಿದಿದ್ದಾರೆ. ಕಿರೀಟಮಕುಟ ಧರಿಸಿರುವ ಇವರ ಶಿರದ ಹಿಂದುಗಡೆ ಬಿಚ್ಚಿದ ಬೀಸಣಿಗೆಯಂತೆ ಕಾಣುವ ಶಿರಶ್ಚಕ್ರವಿದೆ. ಪತ್ರ ಕುಂಡಲಗಳು, ಕಂಠಹಾರ, ನಿವೀತ ರೀತಿಯಲ್ಲಿರುವ ಮುಕ್ತಾಯಜ್ಞೋಪವೀತ, ಕಂಕಣ, ಕಟಿಬಂಧ ಅರ್ಧೋರುಕ ವಸ್ತ್ರವನ್ನು ಇವರು ಧರಿಸಿದ್ದಾರೆ. ಎಡ ಪಾರ್ಶ್ವದ ದ್ವಾರಪಾಲಕನ ಬಲ ಪಕ್ಕದಲ್ಲಿ ಕೈಯಲ್ಲಿ ಮೀನು ಹಿಡಿದಿರುವ ಕುಳ್ಳ ಗಣನನ್ನು ಚಿತ್ರಿಸಿದೆ. ಬಲಪಾರ್ಶ್ವದ ದ್ವಾರಪಾಲಕನ ಬಲಪಕ್ಕದಲ್ಲಿ ಅಸ್ಪಷ್ಟ ವಸ್ತು ಹಿಡಿದಿರುವ ಸ್ತ್ರೀಯಿದ್ದಾಳೆ.

ಗರ್ಭಗೃಹದಲ್ಲಿರುವ ತೀರ್ಥಂಕರನು ಸಿಂಹಾಸನದ ಮೇಲೆ ಪದ್ಮಾಸನದಲ್ಲಿ ಕುಳಿತಿದ್ದಾನೆ. ಹಿಂಗಡೆ ದಿಂಬಿನ ಪಾರ್ಶ್ವಗಳನ್ನು ಮಕರಗಳಿಂದ ಅಲಂಕರಿಸಿದೆ. ವೃಕ್ಷದ ಕೆಳಗೆ ಯೋಗಮುದ್ರೆಯಲ್ಲಿ ಕುಳಿತಿರುವ ತೀರ್ಥಂಕರನ ಇಕ್ಕೆಲಗಳಲ್ಲಿ ಚಾಮರಧಾರಿ ಸೇವಕರಿದ್ದಾರೆ. ಅವನ ಶಿರದ ಹಿಂದುಗಡೆ ದೀರ್ಘವೃತ್ತಾಕಾರದ ಪ್ರಭಾಮಂಡಲವಿದೆ. ತಲೆಯ ಮೇಲೆ ಮುಕ್ಕೊಡೆಯಿದೆ. ಸಿಂಹಾಸನದ ಮುಮ್ಮುಖದಲ್ಲಿ ಸಿಂಹಗಳನ್ನು ತೋರಿಸಿದೆ. ಈ ತೀರ್ಥಂಕರನು ಮಹಾವೀರನಿರಬಹುದು.

ಮಹಾಮಂಟಪದ ಪಶ್ಚಿಮ ಪಾರ್ಶ್ವಮಂಟಪದ ಹಿಂಗೋಡೆಯಲ್ಲಿ ಮುಖ್ಯ ಗರ್ಭಗೃಹ ದಲ್ಲಿರುವಂತೆ ಸಿಂಹಾಸನದ ಮೆಲೆ ಪದ್ಮಾಸನದಲ್ಲಿ ತೀರ್ಥಂಕರನು ಕುಳಿತಿದ್ದಾನೆ. ಮೇಲೆ ಕೊಡೆಯಿದ್ದು, ಇಕ್ಕೆಲಗಳಲ್ಲಿ ಚಾಮರಧಾರಿ ಪುರುಷರಿದ್ದಾರೆ. ಹಿಂದುಗಡೆ ದಿಂಬು ಮತ್ತು ಮಕರದ ಆನಿಕೆಗಳಿವೆ. ಬಲಗಡೆ ಐದು ಹೆಡೆಯ ಧರಣೇಂದ್ರನು ಕುಳಿತು ತೀರ್ಥಂಕರನಿಗೆ ವಂದಿಸುತ್ತಿದ್ದಾನೆ. ಎಡ ಪಕ್ಕದಲ್ಲಿ ಪದ್ಮಾವತೀ ಯಕ್ಷಿಯೂ ಇದ್ದಾಳೆ. ಈ ಗುಂಪು ಜಿನಪದವಿಗೆ ತಲುಪಿದ ಪಾರ್ಶ್ವನಾಥನನ್ನು ತೋರಿಸುತ್ತದೆ. ಬಲಭಾಗದ ಗೋಡೆಯಲ್ಲಿ ಪಾರ್ಶ್ವನಾಥನು ಜಿನಪದವಿಗೇರುವ ಮೊದಲು ಅನುಭವಿಸಿದ ವಿಲಾಸಿ ಜೀವನವನ್ನು ಚಿತ್ರಿಸುವ ಶಿಲ್ಪವಿದೆ. ಇವನ ಎಡಪಕ್ಕದಲ್ಲಿ ಕಮಠನನ್ನೂ ಕಾಣಬಹುದು. ಎಡಭಾಗದ ಗೋಡೆಯಲ್ಲಿ ಐರಾವತ ವನ್ನೇರಿ ತನ್ನ ಸಕಲ ಪರಿವಾರದೊಂದಿಗೆ ಪಾರ್ಶ್ವನಾಥ ಜಿನನಿಗೆ ಅಭಿಷೇಕ ಮಾಡಲು ಧಾವಿಸುತ್ತಿರುವ ಇಂದ್ರನ ಮನಮೋಹಕ ಶಿಲ್ಪವಿದೆ. ಈ ಶಿಲ್ಪ ವಿವರ ಅಪೂರ್ಣವಾಗಿದೆ. ಪೂರ್ತಿಯಾಗಿದ್ದರೆ ಭಾರತದ ಅತ್ಯುತ್ತಮ ಶಿಲ್ಪಗಳಲ್ಲಿ ಇದೊಂದಾಗುತ್ತಿತ್ತು. ಉಳಿಯ ಗುರುತುಗಳು ಆಳವಾಗಿದ್ದು ಲಂಬಸೂತ್ರದ ಕುರುಹುಗಳು ಉಳಿದುಕೊಂಡಿವೆ. ಹೀಗೆ ಅಪೂರ್ಣವಾಗಿದ್ದರೂ ಸಹ ನೋಡುಗರನ್ನು ಸಂತೃಪ್ತಿಗೊಳಿಸುವ ಅಪರೂಪದ ಕಥಾವಸ್ತುವುಳ್ಳ ಶಿಲ್ಪಸಂಯೋಜನೆ ಇದಾಗಿದೆ.

ಶಿಲ್ಪಶೈಲಿ ಮತ್ತು ಶಿಲ್ಪಗಳು

ರಾವಳಫಡಿ ಶೈವ ಗುಹಾಲಯವನ್ನು ತಲವಿನ್ಯಾಸ, ಛತ್ತಿನ ಶಿಲ್ಪವಿವರ ಇತ್ಯಾದಿಗಳಲ್ಲಿ ಈ ಜೈನ ಗುಹಾಲಯ ತಕ್ಕಮಟ್ಟಿಗೆ ಹೋಲುತ್ತಿದ್ದರೂ ಶಿಲ್ಪನಿರೂಪಣೆ ಮತ್ತು ರೂಪಸಂಸ್ಕರಣ ವಿವರಗಳಲ್ಲಿ ವ್ಯತ್ಯಾಸಗಳಿವೆ. ರಾವಳಫಡಿಯ ಶಿಲ್ಪಗಳಲ್ಲಿ ಕಾಣುವ ಎತ್ತರೆತ್ತರವಾದ ಕಿರೀಟಗಳು ಇಲ್ಲಿಯ ಶಿಲ್ಪಗಳಲ್ಲಿಲ್ಲ; ಕಿರೀಟಗಳು ತುಸು ಶಂಕುವಿನಾಕೃತಿಯವಾಗಿವೆ. ದ್ವಾರಪಾಲಕರ ಶಿರಶ್ಚಕ್ರದ ಸ್ವರೂಪ ರಾವಳಫಡಿಯ ಶಿಲ್ಪಗಳನ್ನು ನೆನಪಿಸುತ್ತದೆ; ಆದರೆ ವ್ಯಕ್ತಿಗಳಿಗೆ ವಸ್ತ್ರವನ್ನು ತೊಡಿಸಿರುವ ರೀತಿಯಲ್ಲಿ, ಅದರ ವಿವರಗಳನ್ನು ಬಿಡಿಸಿರುವ ರೀತಿಯಲ್ಲಿ ಸ್ಪಷ್ಟ ವ್ಯತ್ಯಾಸಗಳಿವೆ. ಸ್ತ್ರೀಯರು ತೊಟ್ಟಿರುವ ಕಟಿವಸ್ತ್ರವು ಪಾರದರ್ಶಕವೆಂಬಂತೆ ತೊಡೆ‑ಕಾಲುಗಳಿಗೆ ಅಂಟಿಕೊಂಡಿದ್ದು ಅಂಗಾಂಗಗಳ ಏರಿಳಿತಗಳನ್ನು ಸ್ಫುಟವಾಗಿ ವ್ಯಕ್ತಪಡಿಸಿವೆ. ರಾವಳಫಡಿಯ ಶಿಲ್ಪಗಳಲ್ಲಿ ಕಂಡುಬರುವ ಏಕಸಾಮ್ಯ (uniform) ಶೈಲಿ ಇಲ್ಲಿಲ್ಲ ಎಂದೇ ಹೇಳಬೇಕು. ಬಾದಾಮಿಯ ಜೈನ ಗುಹಾಲಯದ ಶಿಲ್ಪಗಳಿಗೆ ಹೋಲಿಸಿದರೆ ಬಾಹುಬಲಿ ಮತ್ತು ಪಾರ್ಶ್ವನಾಥ ಶಿಲ್ಪಗಳಿರುವ ಸ್ಥಾನ ಸಾಮ್ಯ ಇದೆಯಾದರೂ ನಿರೂಪಣೆಯಲ್ಲಿ ವಿಭಿನ್ನತೆ ಕಾಣುತ್ತದೆ. ಉದಾಹರಣೆಗೆ, ಬಾದಾಮಿಯ ಬಾಹುಬಲಿ ಶಿಲ್ಪದಲ್ಲಿ ಅವನ ತಂಗಿಯರಾದ ಬ್ರಾಹ್ಮೀ ಮತ್ತು ಸುಂದರಿಯನ್ನಷ್ಟೇ ಅಲ್ಲದೆ ಇನ್ನಿಬ್ಬರು ಭಕ್ತರು ಕೈಮುಗಿದು ಕುಳಿತಿರುವಂತೆ ತೋರಿಸಿದೆ; ಐಹೊಳೆಯ ಶಿಲ್ಪದಲ್ಲಿ ಬ್ರಾಹ್ಮೀ ಮತ್ತು ಸುಂದರಿ ಮಾತ್ರ ಇದ್ದಾರೆ. ಅದೇ ರೀತಿಯಾಗಿ ಬಾದಾಮಿಯ ಪಾರ್ಶ್ವನಾಥಶಿಲ್ಪದಲ್ಲಿ ಬಲಬದಿಗೆ ಪದ್ಮಾವತೀ ಯಕ್ಷಿ ಕೊಡೆ ಹಿಡಿದು ನಿಂತಿದ್ದು, ಎಡಬದಿಗೆ ಕಮಠನು ಕುಳಿತು ಬಲಗೈಯನ್ನು ವಿಸ್ಮಯ ಮುದ್ರೆಯಲ್ಲಿ ಎತ್ತಿದ್ದಾನೆ; ಆದರೆ ಐಹೊಳೆಯ ಶಿಲ್ಪದಲ್ಲಿ ಪದ್ಮಾವತಿಯ ಪಕ್ಕದಲ್ಲಿ ಇನ್ನೊಬ್ಬ ನಾಗಿಣಿಯಿದ್ದಾಳೆ. ಎಡಬದಿಯಲ್ಲಿರುವ ಕಮಠ ಅಂಜಲಿ ಮುದ್ರೆಯಲ್ಲಿದ್ದಾನೆ. ಒಟ್ಟಾರೆ ಐಹೊಳೆಯ ಜೈನ ಗುಹಾಲಯದ ಶಿಲ್ಪಿಗಳು ತಮ್ಮ ಶೈಲಿ ವೈಶಿಷ್ಟ್ಯವನ್ನು ತೋರಿದ್ದಾರೆಂದರೆ ತಪ್ಪಾಗದು.

ಗುಹಾಲಯದ ಒಳಗಡೆ ಶಿಲ್ಪಿಗಳನ್ನು ಹೆಸರಿಸುವ ಶಾಸನಗಳು ಕಂಡುಬಂದಿಲ್ಲ. ಆದರೆ ಸಮೀಪದಲ್ಲಿ ‘ಶ್ರೀ ಅ(ಜ)ವಿಕ್ಕರ’, ‘ಶ್ರೀ ಅಜಕಸಿ,’ ‘ಶ್ರೀ ಪದ್ಮಸ್ವಾಮೀ ಮಹಾದಿವ್ಯ ಉತುಣನ್’, ‘ಪ್ರಿಯತ್ತಮ ಉತ್ತಣನ್’ ಎಂಬ ಸುಮಾರು ೭ನೇ ಶತಮಾನದ ಅಕ್ಷರಗಳಲ್ಲಿ ಬರೆದ ಹೆಸರುಗಳಿವೆ. ಇದರಂತೆ ಮೇಗುತಿ ಗುಡಿಯಿಂದ ಬೆಟ್ಟದ ಮೇಲಿನಿಂದ ಈ ಗುಹಾಲಯ ತಲುಪಲು ಬರುವಾಗ ‘ಶ್ರೀಯನ್’, ‘ಮನವಶನ್’, ‘ಚಿತ್ರನ್’, ‘ಶ್ರೀಮಾರ್ಗನ್’, ‘ಸುರತನ್’, ಇತ್ಯಾದಿ ಹೆಸರುಗಳಿವೆ. ‘ಚಿತ್ರನ್’, ‘ಮಾರ್ಗನ್’ ಎಂಬ ಹೆಸರುಗಳು ಬಾದಾಮಿ ಯಲ್ಲಿರುವ ಕೆಲವು ಹೆಸರುಗಳನ್ನು ನೆನಪಿಸುತ್ತವೆ. ಆದ್ದರಿಂದ ಇವುಗಳಲ್ಲಿ ಕೆಲವಾದರೂ ಈ ಗುಹಾಲಯದಲ್ಲಿ ಕೆಲಸ ಮಾಡಿದ ಶಿಲ್ಪಿ‑ಕಲ್ಕುಟ್ಟಿಗರ ಹೆಸರುಗಳೆಂದು ಹೇಳಬಹುದು.

ಸ್ಥಪತಿಶಿಲ್ಪಿಗಳ ಮೂಲ ಪ್ರದೇಶ

ಗುಹಾಲಯ ಶಿಲ್ಪಗಳ ಶೈಲಿಯ ಕುರಿತು ಚರ್ಚಿಸುವಾಗ ಕೆಲವು ಪ್ರಮುಖ ರೂಪಸಂಸ್ಕರಣ ವ್ಯತ್ಯಾಸಗಳನ್ನು ಸೂಚಿಸಲಾಯಿತು. ಶಿಲ್ಪಿಗಳ ಕೆಲವು ಹೆಸರುಗಳು ‘ಸಿದ್ಧಮಾತೃಕಾ’ ಲಿಪಿಯಲ್ಲಿಯೂ ಹೆಚ್ಚಿನವು ಅಂದಿನ ಕನ್ನಡ ಲಿಪಿಯಲ್ಲಿಯೂ ಬರೆದಿರುವುದನ್ನು ಕೂಡ ಗಮನಿಸಲಾಯಿತು. ಸಿದ್ಧಮಾತೃಕಾ ಲಿಪಿ ಉತ್ತರ ಡೆಕ್ಕನ್ ಮತ್ತು ಅದರಾಚೆಯ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಿದ್ದ ಲಿಪಿ. ಆ ಪ್ರದೇಶದಲ್ಲಿ ಗುಹಾವಾಸ್ತು ಪರಂಪರೆ ಕ್ರಿಸ್ತಪೂರ್ವ ಕಾಲದಿಂದಲೂ ರೂಢಿಯಲ್ಲಿದ್ದುದು ಸರ್ವವಿದಿತ. ಶಿಲ್ಪ‑ಶೈಲಿ ಮುಖ್ಯವಾಗಿ ಬಾದಾಮಿಯ ೨ನೇ ಗುಹಾಲಯದಲ್ಲಿ ಎಲ್ಲೋರ ಎಲಿಫೆಂಟಾ ಶೈಲಿಯನ್ನು ಹೋಲುತ್ತದೆ ಎಂಬುದನ್ನು ಕಂಡಿದ್ದೇವೆ. ಆದುದರಿಂದ ಗುಹಾವಾಸ್ತುರಚನಾ ಪರಂಪರೆ ಹಾಗೂ ಕೆಲಮಟ್ಟಿಗೆ ಶಿಲ್ಪಶೈಲಿ ಆ ಪ್ರದೇಶದಿಂದ ವಲಸೆ ಬಂದ ಅಥವಾ ಕರೆಸಲ್ಪಟ್ಟ, ವಾಸ್ತು ಶಿಲ್ಪಿಗಳ ಇರವನ್ನು ಸೂಚಿಸು ತ್ತದೆ. ಹೆಚ್ಚಿನ ಶಿಲ್ಪಿಗಳ ಹೆಸರುಗಳು ಕನ್ನಡ ಲಿಪಿಯಲ್ಲಿ ಇವೆಯೆಂಬುದೂ ಗಮನಾರ್ಹ. ನೃಪತುಂಗನ ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗಿನ ಪ್ರದೇಶ ಕನ್ನಡದ ಪ್ರದೇಶವಾಗಿತ್ತು; ಅವನಿಗಿಂತ ಹಿಂದೆ ಉತ್ತರದಲ್ಲಿ ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಕನ್ನಡ ಪ್ರಚಲಿತವಾಗಿದ್ದಿದ್ದರೆ ಆಶ್ಚರ್ಯವೇನಲ್ಲ. ಈ ವಿಶಾಲ ಕನ್ನಡ ಪ್ರದೇಶದಿಂದ ಪ್ರೋಅರಸಿ ಬಂದಿದ್ದ ಅನೇಕ ಶಿಲ್ಪಿಗಳು ಬಾದಾಮಿಯಲ್ಲಿದ್ದರೆಂದು ಇದರಿಂದ ಭಾವಿಸಬಹುದು.

ನಾಮಶಾಸ್ತ್ರದೃಷ್ಟಿಯಿಂದ ‘ಮಞ್ಚ’ ಎಂದು ಅಂತ್ಯಗೊಳ್ಳುವ ಕೋಳಿಮಞ್ಟ, ಸಿಂಗಮಞ್ಚ ಮುಂತಾದ ಹೆಸರುಗಳು ಗಮನೀಯ. ಆಂಧ್ರದಲ್ಲಿ ಎಲ್ಲೇಶ್ವರಂ ಎಂಬಲ್ಲಿ ಇದೇ ಕಾಲದಲ್ಲಿ ‘ಮಞ್ಚ’ ನಾಮಾಂತ್ಯವುಳ್ಳ ಹೆಸರುಗಳು ಕಂಡುಬಂದಿವೆ. ಅಲ್ಲದೆ ಇಂದಿಗೂ ‘ಮಞ್ಚ’ ಎಂದು ಅಂತ್ಯಗೊಳ್ಳುವ ವ್ಯಕ್ತಿನಾಮಗಳು ರೂಢಿಯಲ್ಲಿವೆ. ಉದಾಹರಣೆಗೆ, ಅಮರಾವತಿ ಕಥಲು ಬರೆದ ಶಂಕರಮಞ್ಚ. ಈ ಕಾರಣದಿಂದ ಆಂಧ್ರಪ್ರದೇಶದಿಂದಲೂ ವಲಸೆ ಬಂದಿದ್ದ ರೂವಾರಿ ಸೂತ್ರಧಾರಿಗಳು ಬಾದಾಮಿಯ ಗುಹಾಲಯ ಶಿಲ್ಪರಚನೆಯಲ್ಲಿ ಪಾತ್ರ ವಹಿಸಿದ್ದಾರೆಂದು ತಿಳಿಯಬೇಕಾಗುತ್ತದೆ. ಅಮರಾವತಿ, ನಾಗಾರ್ಜುನಕೊಂಡದ ಶಿಲ್ಪ ಶೈಲಿಯ ಛಾಯೆ ಗುಹಾಲಯದ ಅನೇಕ ಅಲಂಕರಣ ವಿನ್ಯಾಸಗಳಲ್ಲಿ ಉದಾಹರಣೆಗೆ ಮೂರನೇ ಮತ್ತು ನಾಲ್ಕನೇ ಗುಹಾಲಯಗಳ ಮುಖಮಂಟಪದ ಎದುರುಗಂಬಗಳಲ್ಲಿರುವ ತಟ್ಟೆಯಾಕಾರದ ಪದ್ಮವಿನ್ಯಾಸ, ಅವುಗಳೊಳಗಿನ ಮಿಥುನಗಳು, ಇತ್ಯಾದಿ ಕಂಡುಬರುವುದೆಂಬುದು ಈ ದೃಷ್ಟಿಯಿಂದ ಚಿಂತನೀಯವಾಗಿದೆ.