ಈ ಗುಹಾಲಯಗಳ ಅತ್ಯಾಕರ್ಷಕ ಘಟಕಗಳೆಂದರೆ ಅವುಗಳಲ್ಲಿರುವ ಹಿರಿ ಮತ್ತು ಕಿರುಗಾತ್ರದ ವೈವಿಧ್ಯಮಯ ಶಿಲ್ಪಗಳು, ಪ್ರತಿಮಾಲಕ್ಷಣ, ಶಿಲ್ಪತಂತ್ರ, ಶೈಲಿ, ರೂಪಸಂಸ್ಕಾರ ಮುಂತಾದ ಅನೇಕ ದೃಷ್ಟಿಕೋನಗಳಿಂದ ಇವು ವಿಶಿಷ್ಟವಾಗಿವೆ. ಅದರಿಂದ ಅವುಗಳ ವಿಶೇಷ ಅಧ್ಯಯನ ಅವಶ್ಯವಾಗುತ್ತದೆ.

ಬಾದಾಮಿಯ ಶೈವ ಗುಹೆಯ ಶಿಲ್ಪಗಳು

ಶೈವ ಗುಹಾಲಯದ ಮುಂದುಗಡೆಯ ಅಂಗಳದಲ್ಲಿ ನಿಂತರೆ ಪಶ್ಚಿಮ ಪಾರ್ಶ್ವದಲ್ಲಿ ಹದಿನೆಂಟು ಕೈಗಳುಳ್ಳ ಶಿವ-ನಟರಾಜನ ಅಪೂರ್ವ ಶಿಲ್ಪವಿದೆ. ಬಹುಶಃ ಭಾರತದಲ್ಲಿ ಇಷ್ಟು ಬಾಹುಗಳುಳ್ಳ ಪ್ರಾಚೀನ ನಟರಾಜನ ವಿಗ್ರಹ-ನಟರಾಜನ ಅಪೂರ್ವ ಶಿಲ್ಪವಿದೆ. ಬಹುಶಃ ಭಾರತದಲ್ಲಿ ಇಷ್ಟು ಬಾಹುಗಳುಳ್ಳ ಪ್ರಾಚೀನ ವೃತ್ತಾಕಾರದ ಪರಿಧಿಯನ್ನನುಸರಿಸಿ ಈ ಶಿಲ್ಪ ಸಂಯೋಜಿತವಾಗಿದೆ. ಬಲಗಾಲನ್ನು ಪದ್ಮಪೀಠದ ಮೇಲೆ ಭದ್ರವಾಗಿ ಊರಿ ‘ಚತುರ’ ನಾಟ್ಯ ಭಂಗಿಯಲ್ಲಿರುವ ಜಟಾಧಾರಿ ನಟರಾಜ-ಶಿವನ ಕೈಗಳು ಏಕಕೇಂದ್ರೀಯವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತದೆ. ಮೂರು ಬಲ ಕೈಗಳು ಅಕ್ಷರಮಾಲೆ, ಪಾಶ (?) ಹಾಗೂ ಡಮರುಗಳನ್ನು ತ್ರಿಶೂಲವನ್ನು ಹಾಗೂ ಇನ್ನೆರಡು ಎಡ ಕೈಗಳು ತಂತುವಾದ್ಯವನ್ನು ಹಿಡಿದಿವೆ ಇನ್ನುಇದರ ಕೈಗಳು ಅಭಯ ಹಸ್ತ, ತ್ರಿಪತಾಕ, ವಿಸ್ಮಯ (?) ಮುಂತಾದ ನಾಟ್ಯ ಮುದ್ರೆಗಳಲ್ಲಿ ಬೀಸು ಚಾಲನೆಯಲ್ಲಿವೆ. ನಟರಾಜನ ಭಂಗಿ ಪೀಠಕ್ಕಿಂತ ಕೆಳಮಟ್ಟದಲ್ಲಿ ದ್ವಿಭುಜ ಬಾಲ ಗಣೇಶ ತನ್ನ ಬಲಗೈ ಮತ್ತು ಸೊಂಡಿಲನ್ನು ಶಿವನ ಗಜಹಸ್ತಕ್ಕೆ ತಕ್ಕುದಾಗಿ ನಾಟ್ಯಭಂಗಿಯಲ್ಲಿ ಚಾಚಿ, ದ್ವಿಭಂಗಿಯಲ್ಲಿ ಶಿವನ ನಾಟ್ಯವನ್ನು ಅನುಕರಣೆ ಮಾಡುತ್ತಿದ್ದಾನೆ. ಶಿರದ ಹಿಂದಿರುವ ದೀರ್ಘ ವೃತ್ತಾಕಾರದ ಅಸ್ಪಷ್ಟ ಪ್ರಭಾಮಂಡಲ, ಆಕರ್ಷಕ ಭಂಗಿ ಮುಂತಾದವುಗಳೊಂದಿಗೆ ಇಲ್ಲಿ ಸಂಯೋಜನೆ ಸಹಜವಾಗಿಯೇ ಚಿತ್ತಾಕರ್ಷಕವಾಗಿದೆ.

ಶಿವ-ನಟರಾಜ ಮೂರ್ತಿ ಪರಿಕಲ್ಪನೆಯಲ್ಲಿ ಆಳವಾದ ಸಾಂಕೇತಿಕತೆ ಅಡಗಿದೆ. ಇದು ಶಿವನ ತಿರೋಭಾವ, ಸೃಷ್ಟಿ, ಸ್ಥಿತಿ, ಲಯ, ಅನುಗ್ರಹಗಳೆಂಬ ಪಂಚಕೃತ್ಯಗಳ ಮಾಯಾಲೀಲೆಯನ್ನು ಸಂಕೇತಿಸುವ ನಾಟ್ಯ, ಶಿವ ತಾಂಡವವನ್ನು ವಿಶ್ವಚಕ್ರವೆಂದು ಪರಿಗಣಿಸಿದರೆ ಆ ಚಕ್ರದ ಅರಗಳಂತೆ ವರ್ತಿಸುವ ನಟರಾಜನ ಕೈಗಳು ಚಲನೆ, ಆಯುಧ ಮುದ್ರೆಗಳ ಮೂಲಕ ಪರಮಾತ್ಮನ ಪಂಚಕೃತ್ಯಗಳನ್ನು ನಿರೂಪಿಸುತ್ತವೆ. ಸೃಷ್ಟಿಯ ಆರಂಭದಲ್ಲಿ ಮೊದಲ ಕಂಪನದಿಂದ ಅಶ್ರುತ ನಾದ ಹೊರಡಿಸಿ ಕದಡಿ ಅವ್ಯಕ್ತ ಸಮತೋಲನವನ್ನು ಅಕುಲಿತಗೊಳಿಸಿ ವ್ಯಕ್ತರೂಪದ ಸೃಷ್ಟಿ ಕ್ರಿಯೆಗೆ ಚಾಲನೆ ನೀಡಿದುದನ್ನು ಡಮರುಗವೂ, ಸ್ಥಿತಿಭಾವವನ್ನು ಎರಡು ಕೈಗಳಿಂದ ಎತ್ತಿ ಹಿಡಿದಿರುವ ಸರ್ಪವೂ(ಕಾಲದ ಸಂಕೇತ), ಸಂಸಾರ ಸಾಗರದಿಂದ ವಿಮುಕ್ತಗೊಳಿಸುವ ಪರಮಾತ್ಮನ ಅನುಗ್ರಹಭಾವವನ್ನು ಲಂಬವಾಗಿ ಹಿಡಿದಿರುವ ಸಂಹಾರಸೂಚಕ ತ್ರಿಶೂಲ ಸಂಕೇತಿಸುವ ಈ ಮಾಯಾಲೀಲೆಯ ನಾಟ್ಯದಲ್ಲಿ ಲಯಬದ್ಧ ಮೋಹಕ ನಾದ ಹೊರಡಿಸುವ ತಂತುವಾದ್ಯ ಜೀವಿಗಳನ್ನು ಪರಮಾತ್ಮ ತನ್ನೆಡೆ ಮರಳಿ ಸೆಳೆಯುವ ಭಾವವನ್ನು ಸಂಕೇತಿಸುತ್ತದೆ.

ಮುಖಮಂಟಪದಲ್ಲಿ ಪೂರ್ವ ಪಾರ್ಶ್ವದ ಗೋಡೆಯಲ್ಲಿರುವ ಲಕ್ಷ್ಮೀ-ಪಾರ್ವತೀ ಸಹಿತ ಹರಿಹರ ಶಿಲ್ಪ ಈ ಗುಹಾಲಯದ ಇನ್ನೊಂದು ಮಹತ್ವದ ಕಲಾಕೃತಿ. ಹರಿಹರನ ಬಲ ಅರ್ಧಭಾಗ ಶಿವನ ಮೂರ್ತಿ ಲಕ್ಷಣಗಳೊಂದಿಗೂ ವಾಮಾರ್ಧ ಭಾಗ ವಿಷ್ಟುವಿನ ಮೂರ್ತಿ ಲಕ್ಷಣಗಳೊಂದಿಗೂ ಮೂಡಿದೆ. ಶಿವಭಾಗ ಜಟಾಮಕುಟ, ಸರ್ಪಕುಂಡಲ, ಸರ್ಪಯಜ್ಞೋಪವೀತ, ವ್ಯಾಘ್ರಚರ್ಮ ಮುಂತಾದವುಗಳಿಂದಲೂ ವಿಷ್ಣು ಭಾಗ ಕಿರೀಟಮಕುಟ, ಮಕರಕುಂಡಲ, ಯಜ್ಞೋಪವೀತ  ಕಟಿವಸ್ತ್ರಗಳಿಂದಲೂ ಭೂಷಿತವಾಗಿದೆ. ಬಲ ಕೆಳಕೈ ಫಲವನ್ನು, ಬಲ ಮೇಲಣ ಕೈ ಪರಶುವನ್ನು, ಎಡ ಮೇಲಣ ಕೈ ಶಂಖವನ್ನು ಧರಿಸಿದ್ದು, ಎಡ ಕೆಳಕೈಯನ್ನು ಕಟ್ಯವಲಂಬಿತವಾಗಿ ಇರಿಸಿದೆ. ಹರಿಹರನ ಶಿರದ ಹಿಂದೆ ವೃತ್ತಾಕಾರದ ಸ್ಫುಟ ಪ್ರಭಾಮಂಡಲ ವಿದೆ. ಕಾಲುಗಳ ಸಮೀಪ ಬಲಗಡೆ ತ್ರಿಶೂಲಧಾರಿ ನಂದಿ ಹಾಗೂ ಎಡಗಡೆ ಕೈಕಟ್ಟಿ ನಿಂತಿರುವ ಗರುಡ ನಿಂತಿದ್ದಾರೆ. ಬಲಪಾರ್ಶ್ವದಲ್ಲಿ ಶಿವನ ಮಡದಿ ಪಾರ್ವತಿಯು ಎಡಕೈಯಲ್ಲಿ ಪದ್ಮ ಹಿಡಿದು ಬಲಗೈಯನ್ನು ಲೋಲಹಸ್ತದಲ್ಲಿ ಇಳಿಬಿಟ್ಟು, ದೇವನೆಡೆಗೆ ತುಸು ತಿರುಗಿ ತ್ರಿಭಂಗಿಯಲ್ಲಿ ನಿಂತಿದ್ದಾಳೆ. ವಿಶಿಷ್ಟ ವಿಧದ ಕೇಶಾಲಂಕಾರ, ಕಿವಿಗಳಲ್ಲಿ ಬೇರೆಬೇರೆ ರೀತಿಯ ಕುಂಡಲಗಳು, ಕಂಠಹಾರಗಳು, ಕಂಕಣಗಳು, ಕಾಲಗಂಟಿನ ಸಮೀಪದವರೆಗೂ ಮುಚ್ಚಿರುವ ಕಟಿವಸ್ತ್ರ, ಮೇಖಲಾ, ಕಾಲ್ಗಡಗ ಇತ್ಯಾದಿ ವೇಷ ಭೂಷಣಗಳು ಆಕೆಯನ್ನು ಅಲಂಕರಿಸಿ ಸ್ತ್ರೀಯೋಗ್ಯ ಲಾವಣ್ಯ ನೀಡಿವೆ. ಇದೇ ರೀತಿಯಾಗಿ ಎಡಬದಿಯಲ್ಲಿ ಲಕ್ಷ್ಮೀ ನಿಂತಿದ್ದಾಳೆ. ಆಕೆಯ ಬಲಗೈಯಲ್ಲಿ ಪದ್ಮವಿದೆ. ಮೇಲ್ಭಾಗದಲ್ಲಿ ಆಕಾಶದಲ್ಲಿ ಹೂಮಾಲೆ ಅಥವಾ ಮುಕ್ತಾಸರ ಹಿಡಿದು ವಿದ್ಯಾಧರ ದಂಪತಿಗಳು ಹಾರುತ್ತಿದ್ದಾಳೆ. ಇದು ಕೂಡ ವೃತ್ತಾಕಾರದ ಪರಿಧಿಗನುಗುಣವಾಗಿ ರಚಿತವಾದ, ಆದರೆ ಸಮಭಾಗ (Symmetrical) ಸಂಯೋಜನೆ. ಹರಿಹರನ ಭುಜಬಾಹುಗಳ ಸ್ಥಿತಿ, ಪ್ರಮಾಣಗಳಲ್ಲಿ ಏನೋ ಕೊರತೆ ಕಾಣುತ್ತದೆ. ರೂಪಸಂಸ್ಕಾರ ಉತ್ತಮ ಮಟ್ಟದ್ದಾಗಿದ್ದರೂ ಸಹ ನೋಡುಗನ ಲಕ್ಷ್ಯ ಒಮ್ಮೆಲೆ ಕೇಂದ್ರ ಪಾತ್ರವಾದ ಹರಿಹರನ ಕಡೆಗೆ ಹೋಗುವ ಬದಲು ಸಂಯೋಜಿತ ಸಂಪೂರ್ಣ ಗುಂಪಿನೆಡೆಗೆ ಹೋಗುತ್ತದೆ. ಹೀಗಾಗಿ ಉಳಿದ ಶಿಲ್ಪಗಳಿಗೆ ಲೋಲಿಸಿದಾಗ ಕಲಾದೃಷ್ಟಿಯಿಂದ ಇದು ಅವುಗಳ ಮಟ್ಟವನ್ನು ತಲುಪುವುದಿಲ್ಲ. ಇಡಿ ಶಿಲ್ಪ ಸಂಯೋಜನೆ ಗಣರ ಶಿಲ್ಪ ಪಟ್ಟಿಕೆಯಿರುವ ಪೀಠದ ಮೇಲೆ ರೂಪಿತವಾಗಿದೆ. ಈ ಗಣಗಳು ವಿವಿಧ ವಾದ್ಯಗಳನ್ನು ನುಡಿಸುತ್ತ ನೃತ್ಯ ಭಂಗಿ ಗಳಲ್ಲಿದ್ದಾರೆ.

ವೈಷ್ಣವರ ದೇವತೆ ವಿಷ್ಣು ಹಾಗೂ ಶೈವರ ದೇವತೆ ಶಿವ ಇವರ ನಡುವೆ ಭೇದ ಕಲ್ಪಿಸಲಾಗದೆಂದು ಸೂಚಿಸುವ ಉದ್ದೇಶ ಹರಿಹರ ಶಿಲ್ಪದಲ್ಲಿ ಅಡಗಿದೆ. ಮತೀಯ ಸದ್ಭಾವನೆ ಪ್ರಚುರಪಡಿಸುವುದು ಇಂಥ ಶಿಲ್ಪಗಳ ಗುರಿ. ಹರಿಹರ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷ ತತ್ವದ ಮಿಲನವನ್ನು ಕಂಡವರೂ ಇದ್ದಾರೆ.

ಮುಖಮಂಟಪದಲ್ಲಿ ಪಶ್ಚಿಮ ಪಾರ್ಶ್ವ ಗೋಡೆಯಲ್ಲಿರುವ ಅರ್ಧನಾರೀಶ್ವರ ಶಿಲ್ಪ ಈ ಗುಹಾಲಯದ ಮೇರು ಕೃತಿ. ಉಳಿದ ಮುಖ್ಯ ಶಿಲ್ಪಗಳಂತೆ ಇದು ಕೂಡ ವೃತ್ತ ಪರಿಧಿಯನ್ನ ನುಸರಿಸಿ ಸಂಯೋಜಿತವಾಗಿದೆ. ಇಲ್ಲಿ ಬಲಭಾಗ ಶಿವನದು ಹಾಗೂ ವಾಮಭಾಗ ಪಾರ್ವತಿ ಯದು. ತ್ರಿಭಂಗಿಯಲ್ಲಿ ಚತುರ್ಭುಜನಾಗಿ ನಿಂತಿರುವ ವೀಣಾಪಾಣಿ ಅರ್ಧನಾರೀಶ್ವರನು ಮುಂದಣ ಬಲಗೈಯಲ್ಲಿ ವೀಣೆಯನ್ನು, ಮೇಲಣ ಬಲಗೈಯಲ್ಲಿ ಸರ್ಪಸಹಿತ ಪರಶುವನ್ನು, ಮೇಲಣ ಎಡಕೈಯಲ್ಲಿ ಸ್ತ್ರೀಯೋಗ್ಯ ಪದ್ಮವನ್ನು ಹಾಗೂ ಮುಂದಣ ಎಡಗೈಯಿಂದ ವೀಣೆಯ ಮೇಲ್ಭಾಗವನ್ನು ಹಿಡಿದಿದ್ದಾನೆ. ಬಲಭಾಗದಲ್ಲಿ ಶಿವನ ಮೂರ್ತಿ ಲಕ್ಷಣಗಳಾದ ಜಟಾಮಕುಟ, ಸರ್ಪಕುಂಡಲ, ನಾಗಮುರಿಗೆಯ ತೋಳ್ಬಂದಿ, ಸರ್ಪಯಜ್ಞೋಪವೀತ, ವ್ಯಾಘ್ರಚರ್ಮ ಮುಂತಾದವು ಇವೆಯಾದರೆ, ವಾಮಾರ್ಧದಲ್ಲಿ ಸ್ತ್ರೀಯೋಗ್ಯವೆನಿಸುವ ಕೇಶಾಲಂಕಾರ, ಸಮೀಪದವರೆಗೆ ಇಳಿಬಿದ್ದಿರುವ ಕಟಿವಸ್ತ್ರ, ಕಾಲ್ಗಡಗ, ಪಾದಸರ ಇತ್ಯಾದಿ ಲಕ್ಷಣಗಳಿವೆ. ಶಿರದ ಹಿಂಭಾಗದಲ್ಲಿರುವ ದೀರ್ಘ ವೃತ್ತಾಕಾರ ಪ್ರಭಾಮಂಡಲ ಗೋಡೆಯಲ್ಲಿ ಲೀನವಾಗಿದೆ. ಪುಷ್ಪ ದೇಹ ರಚನೆ ದೇವತೆಯ ಆಂತರಿಕ ಶಕ್ತಿಯನ್ನು ಪ್ರಕಟಿಸುತ್ತದೆ. ತೆರೆದ ಕಣ್ಣುಗಳು, ಮೂಗು, ತುಟಿಗಳ ರಚನೆ, ದುಂಡುಮುಖ, ಮೈಕಟ್ಟು, ವೀಣೆ ಮುಂತಾದವುಗಳು ದೇವತೆಯ ಪ್ರಶಾಂತ ಲಲಿತಭಾವವನ್ನು ಸೂಚಿಸುತ್ತವೆ. ಬಲಗಡೆ, ಶಿವನ ಪಕ್ಕದಲ್ಲಿ ಮುಖ ಚಾಚಿರುವ ಬಸವ ಜೀವಕಳೆಯಿಂದ ಕೂಡಿದ್ದು, ಪೌರುಷದ ಸಂಕೇತವಾಗಿ ನಿಂತಿದೆ. ಅದರ ಬಲಪಕ್ಕದಲ್ಲಿ ಅಸ್ತಿಪಂಜರದಂತೆ ಕೃಶದೇಹದ ಬೃಂಗಿ ಕೈ ಮುಗಿದು ನಿಂತಿದ್ದು ಶಿವನ ರೌದ್ರರೂಪದ ಪ್ರತೀಕದಂತಿದ್ದಾನೆ. ಅರ್ಧನಾರೀಶ್ವರನ ಎಡಪಾರ್ಶ್ವದಲ್ಲಿ ಧಮ್ಮಿಲ್ಲ ರೀತಿಯ ವಿಶಿಷ್ಟ ಕೇಶಾಲಂಕಾರದಿಂದೊಡಗೂಡಿದ, ಎಡಗೈಯಲ್ಲಿ ಪ್ರಸಾದನ ಪೆಟ್ಟಿಗೆಯನ್ನು ಹೊತ್ತಿರುವ ಪ್ರಸಾದಿಕೆ (ಪಾರ್ವತಿಯ ಸೇವಕಿ) ತ್ರಿಭಂಗಿಯಲ್ಲಿ ನಿಂತಿದ್ದಾಳೆ. ಸ್ತ್ರೀಯೋಗ್ಯ ಲಾವಣ್ಯವನ್ನು ಇವಳಲ್ಲಿ ಕಾಣಬಹುದು. ಸಂಯೋಜನೆಯ ಮೇಲ್ಮೂಲೆಗಳಲ್ಲಿ ಹಾರಗಳನ್ನು ಹಿಡಿದು ಭಾರರಹಿತರಾಗಿ ಆಕಾಶದಲ್ಲಿ ಹಾರುತ್ತ ಸಾಗಿರುವ ಸುಂದರ ವಿದ್ಯಾಧರ ದಂಪತಿಗಳ ಜೋಡಿಗಳು ಒಮ್ಮೆಲೆ ಗಮನ ಸೆಳೆಯದೆ ಗೌಣವಾಗಿ ಉಳಿಯುತ್ತವೆ. ನೋಡುಗನ ದೃಷ್ಟಿ ನೇರವಾಗಿ ಕೆಂದ್ರಪಾತ್ರವಾದ ಅರ್ಧನಾರೀಶ್ವರ ಮೂರ್ತಿಯೆಡೆಗೆ ಸೆಳೆಯುವುದರಲ್ಲಿ ಶಿಲ್ಪಿ ಯಶಸ್ವಿಯಾಗಿದ್ದಾನೆ; ಸಂಸ್ಕಾರದ ಉತ್ಕೃಷ್ಟತೆ ಹಾಗೂ ಸಂಯೋಜನಾ ಚಾತುರ್ಯದ ದೃಷ್ಟಿಕೋನಗಳಿಂದ ಬಹುಶಃ ಇದು ಈ ಗುಹಾಲಯದ ಶಿಲ್ಪಗಳಲ್ಲೆಲ್ಲ ಹಿರಿದಾದುದು ಎಂದರೆ ಅತಿಶಯೋಕ್ತಿಯಾಗದು.

ಹರಿಹರ ಮೂರ್ತಿಯಂತೆಯೆ ಅರ್ಧನಾರೀಶ್ವರ ಮೂರ್ತಿಯಾದರೂ ಮತೀಯ ವೈಷಮ್ಯವನ್ನು ನಿವಾರಿಸುವುದಕ್ಕಾಗಿ ಹುಟ್ಟಿಕೊಂಡು ಮೂರ್ತಕಲ್ಪನೆ. ಶಿವ ಮತ್ತು ಶಕ್ತಿಯ ಐಕ್ಯತೆಯನ್ನು ಈ ಮೂರ್ತಿಯಲ್ಲಿ ರೂಪಿಸಿ ಶೈವ-ಶಾಕ್ತರ ಆರಾಧ್ಯ ದೈವಗಳ ನಡುವಣ ಭೇದವನ್ನು ನಿರಾಕರಿಸುವ ಪ್ರಯತ್ನವಿದು. ಇಲ್ಲಿ ಕೂಡ ಪುರುಷ-ಪ್ರಕೃತಿ ತತ್ವದ ಮಿಲನಭಾವ ಅಡಗಿದೆಯೆಂಬ ಅಭಿಪ್ರಾಯವಿದೆ.

ಗುಹಾಲಯದ ಮುಮ್ಮುಖದ ಪೂರ್ವಪಾರ್ಶ್ವದ ಗೋಡೆಯಲ್ಲಿರುವ ದ್ವಾರಪಾಲ ಶಿಲ್ಪ ಮೇಲೆ ವಿವರಿಸಿದ ಶಿಲ್ಪಗಳಿಗಿಂತ ಶೈಲಿಯಲ್ಲಿ ತುಸುಭಿನ್ನವಾದುದು. ದ್ವಿಭಂಗಿಯಲ್ಲಿ ಹಸನ್ಮುಖನಾಗಿ, ಕಿರೀಟಧಾರಿಯಾಗಿ ನಿಂತಿರುವ ಈ ದ್ವಿಭುಜ ದ್ವಾರಪಾಲನ ಬಲಗೈ ತ್ರಿಶೂಲವನ್ನು ಹಿಡಿದಿದೆಯಾದರೆ, ಎಡಗೈ ಕಟ್ಯವಲಂಬಿತ ರೀತಿಯಲ್ಲಿ ಇರಿಸಲ್ಪಟ್ಟಿದೆ. ಅರಗಳುಳ್ಳ (ಬೀಸಣಿಯಂತೆ ಕಾಣುವ) ವೃತ್ತಾಕಾರದ ಶಿರಚಕ್ರ ಈ ಗುಹಾಲಯದ ಇನ್ನಾವ ಪ್ರಮುಖ ಶಿಲ್ಪದಲ್ಲೂ ಕಾಣಸಿಗದು. ರೂಪಸಂಸ್ಕಾರ, ಭಂಗಿ ಹಾಗೂ ಶಿರಶ್ಚಕ್ರಗಳು ಐಹೊಳೆಯ ರಾವಳಫಡಿ ಶೈವ ಗುಹಾಲಯದ ಶಿಲ್ವಗಳನ್ನು ನೆನಪಿಸುತ್ತವೆ. ಆದರೆ ಕಿರೀಟ, ಕಟಿವಸ್ತ್ರ ವಿವರ, ಮೈಕಟ್ಟು, ರೂಪಸಂಸ್ಕಾರ ಮುಂತಾದವು ಇಲ್ಲಿ ಸ್ಪಷ್ಟವಾಗಿ ಐಹೊಳೆಗಿಂತ ಬೇರೆ ರೀತಿಯವಾಗಿವೆ. ಬಾದಾಮಿಯ ಮೂರನೇ (ವೈಷ್ಣವ) ಗುಹೆಯಲ್ಲಿ ಈ ಲಕ್ಷಣಗಳುಳ್ಳ ಕೆಲವು ಶಿಲ್ಪಗಳನ್ನು (ಉದಾ: ಅಷ್ಟಭುಜ ವಿಷ್ಣು) ಗಮನಿಸಬಹುದು. ಈ ಶಿಲ್ಪವನ್ನು ತುಸು ನಂತರ ಸೇರಿಸಿರುವ ಸಾಧ್ಯತೆಯಿದೆ. ಪಲ್ಲವ ಶಿಲ್ಪಶೈಲಿಯ ಪ್ರಭಾವ ಇಲ್ಲಿದೆಯೆಂದೂ, ಪಲ್ಲವ ನರಸಿಂಹವರ್ಮ ಮಾಮಲ್ಲನು ಬಾದಾಮಿಯನ್ನು ಆಕ್ರಮಿಸಿದ್ದಾಗ ಸೇರ್ಪಡೆಯಾದ ಶಿಲ್ಪಗಳಲ್ಲಿ ಇದೊಂದು ಎಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ ‘ಪಲ್ಲವ’ ಎಂದು ಕರೆಯಬಹುದಾದ ಯಾವುದೇ ನಿರ್ದಿಷ್ಟ ಲಕ್ಷಣ ಈ ಶಿಲ್ಪದಲ್ಲಿಲ್ಲ.

ಮುಮ್ಮುಖದ ಪಶ್ಚಿಮ ಪಾರ್ಶ್ವದಲ್ಲಿ ಪೂರ್ವಾಭಿಮುಖವಾಗಿರುವ ಮಹಿಷಮರ್ದಿನಿ ಮಂಟಪದಲ್ಲಿ ಮುಖ್ಯ ಶಿಲ್ಪ ಮಹಿಷಮರ್ದಿನಿಯದು. ಅಹಂಕಾರ, ಅಜ್ಞಾನ, ಜಡಬುದ್ದಿಯ ಪ್ರತೀಕವಾಗಿರುವ ಮಹಿಷಾಸುರನನ್ನು ಜಗನ್ಮಾತ ದುರ್ಗೆ ಸಂಹಾರ ಮಾಡುತ್ತಿರುವ, ದೃಶ್ಯವಿಲ್ಲಿದೆ. ಚತುರ್ಭುಜೆಯಾದ ದೇವಿಯು ಮೇಲಣ ಕೈಗಳಲ್ಲಿ ಚಕ್ರ, ಶಂಖಗಳನ್ನು ಹಿಡಿದು ಎಡಗೈಯಿಂದ ಪೂರ್ತಿ ಕೋಮನ ರೂಪದಲ್ಲಿರುವ ರಾಕ್ಷಸನ ಬಾಲವನ್ನು ಹಿಡಿದೆತ್ತಿ ಬಲಗೈಯಲ್ಲಿರುವ ತ್ರಿಶೂಲದ ಕೆಳ ಮೊನೆಯನ್ನು ಅದರ ಕತ್ತಿನೊಳಕ್ಕೆ ತೂರಿದ್ದಾಳೆ. ಎಡಗಾಲನ್ನು ನೆಲದ ಮೇಲೆ ಊರಿ ಬಲಗಾಲಿನಿಂದ ಕೋಣದ ಮುಖವನ್ನು ಅದುಮುತ್ತಿದ್ದಾಳೆ. ಕಿರೀಟ ಮಕುಟ, ಎರಡೂ ಕಿವಿಗಳಲ್ಲಿ ಬೇರೆ ಬೇರೆ ರೀತಿಯ ಕುಂಡಲಗಳು, ಕಂಠಹಾರಗಳು, ನಾಗಮುರಿಗೆಯ ಮೇಖಲೆ ಮುಂತಾದವುಗಳಿಂದ ಭೂಷಿತಳಾಗಿರುವ, ದೇವಿಯನ್ನು ಹಸನ್ಮುಖಳಾಗಿಯೂ ದುಂಡುದುಂಡಾದ ಅಂಗಾಂಗ ಹಾಗೂ ತುಂಬು ಕುಚದ್ವಯಗಳಿಂದೊಡ ಗೂಡಿಯೂ ತೋರಿಸಲಾಗಿದೆ. ಈಕೆಯ ಪಾದದಡಿಯಲ್ಲಿ ನರ್ತನದಲ್ಲಿ ತೊಡಗಿರುವ ಗಣರ ಉಬ್ಬು ಶಿಲ್ಪ ಫಲಕದ ಮೇಲ್ಮೂಲೆಗಳಲ್ಲಿ ಸಂಪ್ರದಾಯದಂತೆ ವಿದ್ಯಾಧರ ದಂಪತಿಗಳ ಜೋಡಿಗಳಿವೆ. ಹಿನ್ನೆಲೆಯ ಭಿತ್ತಿಯ ಸ್ಥಳಾವಕಾಶದ ಪ್ರಯೋಜನವನ್ನು ಶಿಲ್ಪಿ ಪೂರ್ತಿ ಪಡೆದಿಲ್ಲ. ಆದ್ದರಿಂದ ಸಂಯೋಜನೆ ಸರಳವಾಗಿದೆ.

ಮಹಿಷಮಮರ್ದಿನಿ ಮಂಟಪದ ಉತ್ತರ ಗೋಡೆಯಲ್ಲಿ ಗಣೇಶನ ಶಿಲ್ಪವಿದೆ. ಶಿರದಲ್ಲಿ ಜ್ಞಾನಸಂಕೇತವಾದ ಸಹಸ್ರಾರ ಪದ್ಮವನ್ನು ಹೊತ್ತಿರುವ ದ್ವಿಭುಜ ಗಣೇಶ ಕಂಠಹಾರ ಹಾಗೂ ಮಾಲಾಕಾರದಲ್ಲಿ ಯಜ್ಞೋಪವೀತವನ್ನು ಧರಿಸಿ, ಬಲಗೈಯಲ್ಲಿ ಭಗ್ನ ದಂತ (ಅಥವಾ ಕಂದಮೂಲ) ಮತ್ತು ಎಡಗೈಯಲ್ಲಿ ಮೋದಕ ಪಾತ್ರೆ ಹಿಡಿದು ಸುಖಾಸನದಲ್ಲಿ ಕುಳಿತಿದ್ದಾನೆ. ಮುಖ ಮರಿಯಾನೆಯದು ಹಾಗೂ ದೇಹದ ಪ್ರಮಾಣ ಬಾಲಕನದು. ಅಂತಾಗಿ ಇದು ಬಾಲ ಗಣೇಶನ ವಿಗ್ರಹವಿರಬೇಕು.

ಇದೇ ಮಂಟಪದ ದಕ್ಷಿಣ ಗೋಡೆಯಲ್ಲಿ ನವಿಲನ್ನೇರಿ ಸವಾರಿ ಮಾಡುತ್ತಿರುವ ಕುಮಾರನ ಶಿಲ್ಪವಿದೆ. ಕಾಲುಗಳನ್ನು ಮಡಿಚಿ ನವಿಲ ಮೇಲೆ ಕುಳಿತಿರುವ ಕುಮಾರ ಬಲಕೈಯಿಂದ ಲಗಾಮು ಹಿಡಿದು ಎಡಗೈಯನ್ನು ನವಿಲ ದೇಹದ ಮೇಲೆ ಇರಿಸಿದ್ದಾನೆ. ಕಿರೀಟಧಾರಿಯಾಗಿ ಹಾರ, ಮಾಲಾಕಾರದ ಮುಕ್ತಾ ಯಜ್ಞೋಪವೀತ, ಕೊರೆದ ಗೆರೆಗಳುಳ್ಳ ಕಟಿವಸ್ತ್ರವನ್ನು ಧರಿಸಿರುವ ಈತ ಇದೀಗ ಹೊರಡಲುದ್ಯುಕ್ತನಾಗಿರುವಂತೆ ಭಾಸವಾಗುತ್ತದೆ. ಹೆಸರಿಗೆ ತಕ್ಕಂತೆ ತಾರುಣ್ಯದ ಭಾವ ಇವನಲ್ಲಿ ವ್ಯಕ್ತವಾಗಿದೆ.

ಮುಖಮಂಟಪದ ಛತ್ತಿನಲ್ಲಿರುವ ಐದು ಹೆಡೆಯ ನಾಗರಾಜ ಮತ್ತು ವಿದ್ಯಾಧರ ದಂಪತಿಗಳ ಶಿಲ್ಪ ಕೂಡ ಆಕರ್ಷಕ ಶಿಲ್ಪಗಳಾಗಿವೆ.

ಇವಿಷ್ಟು ಹಿರಿಗಾತ್ರದ ಶಿಲ್ಪಗಳಾದರೆ, ಇನ್ನು ಕೆಲವು ಕಿರುಗಾತ್ರದ ಮತ್ತು ಕಥಾ ನಿರೂಪಕ ಶಿಲ್ಪ ಪಟ್ಟಿಕೆ ಮುಖಮಂಟಪದ ಜಂತಿಯ ಒಳಪಾರ್ಶ್ವದಲ್ಲಿದ್ದು ಪಾರ್ವತೀಕಲ್ಯಾಣವನ್ನು ಚಿತ್ರಿಸುತ್ತದೆ. ಇದರಲ್ಲಿ ಪಾರ್ವತಿ ಕೈಗಳನ್ನು ಮೇಲೆತ್ತಿ ಒಂಟಿಗಾಲಿನ ಮೇಲೆ ತಪಸ್ಸು ಮಾಡುತ್ತಿರುವುದು; ಬ್ರಾಹ್ಮಣ ಬ್ರಹ್ಮಚಾರಿ ವೇಷಧಾರಿ ಶಿವ ಛತ್ರಿ ಹಿಡಿದು ಅವಳಲ್ಲಿ ಭಿಕ್ಷಾಟನೆ ಮಾಡುತ್ತಿರುವುದು; ಸ್ನಾನಕ್ಕೆಂದು ಹೋದ ಬ್ರಹ್ಮಚಾರಿ ಶಿವನ ಕಾಲನ್ನು ಮೊಸಳೆ ಹಿಡಿದಿರುವುದು; ಅವನನ್ನು ರಕ್ಷಿಸಲೆಂದು ಪಾರ್ವತಿ ಅವನ ಕೈಹಿಡಿದಿರುವುದು ಹಾಗೂ ಶಿವನೊಂದಿಗೆ ಪಾರ್ವತಿಯ ಮದುವೆಯ ದೃಶ್ಯಗಳನ್ನು ಮೂಡಿಸಲಾಗಿದೆ. ಮದುವೆಯ ದೃಶ್ಯದಲ್ಲಿ ಚತುರ್ಮುಖ ಬ್ರಹ್ಮನು ಪುರೋಹಿತವಾಗಿ ಅಗ್ನಿಕುಂಡದ ಮುಂದುಗಡೆ ಕುಳಿತಿರುವುದು, ಪರ್ವತರಾಜನು ಧಾರೆಯೆರೆಯುತ್ತಿರುವುದು, ವಿಷ್ಣು, ದಿಕ್ಪಾಲಕರು ಹಾಗೂ ಋಷಿಮುನಿಗಳು ಮದುವೆಯನ್ನು ವೀಕ್ಷಿಸುತ್ತಿರುವುದು ಚಿತ್ರಿಸಲ್ಪಟ್ಟಿವೆ. ಇದಲ್ಲದೆ ಕಾಮಕೇಳಿಯಲ್ಲಿರುವ ಸ್ತ್ರೀ ಪುರುಷರು, ನರ್ತಿಸುತ್ತಿರುವ, ಗಣಗಳು ಮುಂತಾದ ಶಿಲ್ಪಪಟ್ಟಿಕೆಗಳು ತೊಲೆಗಳಲ್ಲಿವೆ.

ಇತರ ಕಿರುಶಿಲ್ಪಗಳಲ್ಲಿ ಶೈವ ದ್ವಾರಪಾಲ ಶಿಲ್ಪದ ಕೆಳಗಡೆ ಇರುವ ಗಜ-ವೃಷಭ ಉಲ್ಲೇಖಾರ್ಹವಾದುದು. ಎರಡು ಮೈ ಒಂದೇ ತಲೆಯಿರುವ ಈ ಶಿಲ್ಪದಲ್ಲಿ ಒಂದು ಮೈಯನ್ನು ಮುಚ್ಚಿದರೆ ವೃಷಭ (ಬಸವ) ಹಾಗೂ ಇನ್ನೊಂದು ಮೈಯನ್ನು ಮುಚ್ಚಿದರೆ (ಗಜ) ಆನೆ ಕಾಣುತ್ತವೆ. ಈ ಚತುರ ಶಿಲ್ಪ ಚಾಲುಕ್ಯ ಶಿಲ್ಪಿಗಳ ಸೃಷ್ಟಿ ಕೂಡ ಮನಮೋಹಕವಾದುದು.

ಶಿಲ್ಪಶೈಲಿ ಮತ್ತು ಶಿಲ್ಪಿಗಳು

ಮೊದಲನೇ ಗುಹಾಲಯದ ಶಿಲ್ಪ ತಂತ್ರದಲ್ಲಿ ಕೆಲವು ಸಾಮಾನ್ಯ ಗುಣಗಳನ್ನು ಕಾಣಬಹುದು. ಉದಾಹರಣೆಗೆ, ಎಲ್ಲ ಹಿರಿಗಾತ್ರದ ಹುಬ್ಬುಶಿಲ್ಪಗಳ ಕೆಳಗೆ ವಿವಿಧ ಭಾವಭಂಗಿಗಳಲ್ಲಿರುವ ಗಣರ ಶಿಲ್ಪಪಟ್ಟಿಕೆ ಇರುವುದು; ಹೆಚ್ಚಿನ ಶಿಲ್ಪಗಳು ಆಯತಾಕಾರದ ಚೌಕಟ್ಟಿನಲ್ಲಿ ರೂಪಿತವಾಗಿದ್ದರೂ ಕೂಡ ವೃತ್ತ ಪರಿಧಿಯನ್ನು ಅನುಸರಿಸಿ ಪಾತ್ರಗಳ ಸಂಯೋಜನೆ ರೂಪಿಸಿರುವುದು; ಉಡುಗೆ-ತೊಡುಗೆಗಳಲ್ಲಿ ಸಾಮ್ಯವಿರುವುದು; ಶಿಲ್ಪಗಳಲ್ಲಿಯೂ ಕಣ್ಣುಹುಬ್ಬುಗಳು, ತೆರೆದ ಕಣ್ಣುಗಳು, ಎರಡು ಸ್ಪಷ್ಟ ಗೆರೆಗಳಿಂದ ಮೀನಿನಾಕಾರದಲ್ಲಿ ಸೂಚಿತವಾಗಿರುವ ಕಣ್ಣೆವೆಗಳು ಕಂಡುಬರುತ್ತವೆ.

ಆದರೆ ಕೂಲಂಕಷವಾಗಿ ಪರೀಕ್ಷಿಸಿದಾಗ ಕೆಲವು ವ್ಯತ್ಯಾಸಗಳಿರುವುದು ಸ್ಪಷ್ಟ. ಉದಾಹರಣೆಗೆ ಹರಿಹರ ಶಿಲ್ಪದಲ್ಲಿ ಪ್ರಭಾಮಂಡಲ ವೃತ್ತಾಕಾರವಾಗಿದೆಯಾದರೆ, ಅರ್ಧನಾರೀಶ್ವರ ಮತ್ತು ನಟರಾಜ ಶಿಲ್ಪಗಳಲ್ಲಿ ಅದು ದೀರ್ಘವೃತ್ತಾಕಾರವಾಗಿ ಭಿತ್ತಿಯೊಂದಿಗೆ ಹೆಚ್ಚು ಕಡಿಮೆ ಲೀನವಾಗಿದೆ. ಹರಿಹರ ಶಿಲ್ಪದ ಪಾರ್ವತಿ, ಲಕ್ಷ್ಮಿಯರ ಕೇಶಾಲಂಕಾರ ಅರ್ಧನಾರೀ ಶಿಲ್ಪದ ಪ್ರಸಾದಿಕೆ ಹಾಗೂ ಮಹಿಷಮರ್ದಿನಿಯ ಕೇಶಾಲಂಕಾರದಿಂದ ಬೇರೆಯಾಗಿದೆ; ಇನ್ನು ಹೆಚ್ಚು ಸ್ಫುಟ ವ್ಯತ್ಯಾಸ ಕಾಣುವುದು ಶೈವ ದ್ವಾರಪಾಲಕನ ಶಿರಶ್ಚಕ್ರ ವಿವರದಲ್ಲಿ. ಇಂಥ ವಿವರ ವ್ಯತ್ಯಾಸಗಳನ್ನು ಪರಿಗಣಿಸಿದರೆ, ನಟರಾಜ, ಹರಿಹರ, ಅರ್ಧನಾರೀಶ್ವರ, ಮಹಿಷಮರ್ದಿನಿ, ಶೈವ ದ್ವಾರಪಾಲ ಮುಂತಾದ ಹಿರಿಯ ಶಿಲ್ಪಗಳು ಬೇರೆಬೇರೆ ಶಿಲ್ಪಿಗಳ ಕಲಾಚಾತುರ್ಯವನ್ನು ತೋರುತ್ತವೆ ಎಂದು ಹೇಳಬಹುದು.

ಕಿರುಶಿಲ್ಪಗಳಲ್ಲಿ, ಕೆಲವು-ಮುಖ್ಯವಾಗಿ ಮುಖಮಂಟಪದ ಛತ್ತಿನಲ್ಲಿರುವ ವಿದ್ಯಾಧರ ದಂಪತಿಗಳ ಶಿಲ್ಪ-ತುಸು ಭಿನ್ನ ಶೈಲಿಯವು. ಇಲ್ಲಿ ಮುಖ, ಅಸ್ಪಷ್ಟ ಹುಬ್ಬು ಹಾಗೂ ಮುಚ್ಚು ಕಣ್ಣುಗಳಿರುವುದು ಎರಡನೇ ಗುಹಾಲಯದ ಕೆಲ ಶಿಲ್ಪಗಳನ್ನು ನೆನಪಿಸುತ್ತವೆ. ಅಂತಾಗಿ ಇವು ಉತ್ತರ ಡೆಕನ್ ಶಿಲ್ಪಶೈಲಿಗೆ ಸಾಮ್ಯ ಹೊಂದಿವೆ. ಇದೇ ರೀತಿಯ ಸಾಮ್ಯವನ್ನು ವೃತ್ತಾಕಾರದ ಮೆತ್ತೆಯಂತಹ ಕಲಶ ಭಾಗವುಳ್ಳ ಕಂಬಗಳು, ಸರಳ ಅಲಂಕೃತ ದೀರ್ಘ ವೃತ್ತಾಕೃತಿಯ ಪ್ರಭಾಮಂಡಲ, ಕಥಾವಸ್ತು ಮುಂತಾದವುಗಳಲ್ಲಿ ಗಮನಿಸಬಹುದು.

ಒಟ್ಟಾರೆ ಮೊದಲ ಗುಹಾಲಯದಲ್ಲಿ ಬೇರೆ ಬೇರೆ ಶಿಲ್ಪ ಶ್ರೇಣಿಗಳ ಪರಂಪರೆಯಲ್ಲಿ ಮೂಡಿದ ಶಿಲ್ಪಗಳು ಸೇರಿರಬೇಕು. ಈ ಗುಹಾಲಯಕ್ಕನ್ವಯಿಸಬಹುದಾದ ಅಯ್ಚಸಾಮಿ ಕಲ್ಕುಟ್ಟಿ, ದೋಣಸಾಮಿ, ನಾಕೆಯ್ದ, ಮಾರುತಿಸಾಮಿ, ಶ್ರೀಶೋಪಕಾರಿ, ಉಮಾಭಟ, ಅಜ್ಕ, ಗಣಸಾಮಿ, ಮಲ್ಲಿಸಾಮಿ, ಕೋಳಿಮಞ್ಜಿ ಮುಂತಾದ ಶಿಲ್ಪಿಗಳ ಹೆಸರುಗಳು ನಮಗೆ ತಿಳಿದಿವೆ. ಈ ಹೆಸರುಗಳು ೬ನೇ ಶತಮಾನದ ಕನ್ನಡ ಅಕ್ಷರಗಳಲ್ಲಿವೆ. ಪಕ್ಕದ ಬಿಲದ ಛತ್ತಿನಲ್ಲಿ ಕೆಲವು ಇದೇ ಕಾಲದ ಸಿದ್ಧಮಾತೃಕಾ ಲಿಪಿಯಲ್ಲಿ ಬರೆದಿರುವ ಹೆಸರುಗಳಿವೆ(ಎರಡನೇ ಗುಹಾಲಯಕ್ಕೆ ಸಂಬಂಧಿಸಿದಂತೆ ಇವುಗಳನ್ನು ಮುಂದೆ ಉಲ್ಲೇಖಿಸಲಾಗಿದೆ). ಇದರಿಂದ ಶಿಲ್ಪಶೈಲಿ ಹಾಗೂ ಶಿಲ್ಪಿಗಳ ಹೆಸರುಗಳು ಇಲ್ಲಿ ಕೆಲಸ ಮಾಡಿದ ಶಿಲ್ಪಿಗಳ ಸಮೂಹ ಸಂಕೀರ್ಣ ಸ್ವರೂಪದ್ದಾಗಿತ್ತೆಂಬುದನ್ನು ಸೂಚಿಸುತ್ತವೆ. ಆಂಧ್ರ-ಕರ್ನಾಟಕ ಶಿಲ್ಪಿಗಳು ಹೆಚ್ಚಿನ ಪ್ರಮಾಣದಲ್ಲಿಯೂ, ಮಹಾರಾಷ್ಟ್ರ ಪ್ರದೇಶದ ಶಿಲ್ಪಿಗಳು ಸ್ವಲ್ಪ ಪ್ರಮಾಣದಲ್ಲಿಯೂ ಈ ಗುಹಾಲಯ ನಿರ್ಮಾಣದಲ್ಲಿ ಪಾತ್ರ ವಹಿಸಿದ್ದಾರೆಂದು ಭಾವಿಸಿದರೆ ತಪ್ಪಾಗದು.

ಎರಡನೇ ವೈಷ್ಣವ ಗುಹೆಯ ಶಿಲ್ಪಗಳು

ಎರಡನೇ ಗುಹಾಲಯದ ಮುಖ್ಯ ಶಿಲ್ಪಗಳೆಲ್ಲವೂ ಭೂತಗಣಗಳ ಸಾಲುಳ್ಳ ಪಟ್ಟಿಕೆಯ ಮೆಲ್ಗಡೆ ರಚಿತವಾಗಿವೆ. ದ್ವಾರಪಾಲರು, ವರಾಹ, ವಾಮನ-ತ್ರಿವಿಕ್ರಮ ಇವು ಹಿರಿಯ ಶಿಲ್ಪಗಳು.

ದ್ವಾರಪಾಲರು ದ್ವಿಭುಜರಾಗಿದ್ದು ಅವರ ಪಕ್ಕದಲ್ಲಿ ಸ್ತ್ರೀ ಸೇವಕಿಯನ್ನು ತೋರಿಸಿದೆ. ಅಭಂಗದಲ್ಲಿ ಕರ್ತ್ತರಿ ಹಸ್ತರಾಗಿ ದ್ವಾರಪಾಲರು ನಿಂತಿದ್ದಾರೆ. ಒಂದು ಕೈ ಕಟ್ಯವಲಂಬಿತವಾಗಿ ಸೊಂಟಕ್ಕೆ ಬಿಗಿದಿರುವ ವಸ್ತ್ರದ ಗಂಟಿನ ಮೇಲಿದೆ; ಇನ್ನೊಂದು ಕೈ ಧ್ಯಾನಮುದ್ರೆಯಲ್ಲಿ ಎದೆಯ ಹತ್ತಿರವಿದೆ. ಇವರು ಭಾರವಾದ ಮಕುಟ, ಪ್ರಭಾಮಂಡಲ, ದುಂಡುಮುಖ, ಪತ್ರ ಮತ್ತು ನಕ್ರ ಕುಂಡಲಗಳು, ಗ್ರೈವೇಯಕ ಹಾರ, ನಾಗಮುರಿಗೆಯ ತೋಳ್ಬಂದಿ, ಕಂಕಣ, ಉದರಬಂಧ, ಸೊಂಟಪಟ್ಟಿ, ಅರ್ಧೋರುಕ ವಸ್ತ್ರ, ಸರಪಳಿಯಂತಹ ಊರುದಾಮ, ನಿವೀತ ಯಜ್ಞೋಪವೀತ, ಪಾರ್ಶ್ವದಲ್ಲಿ ಬಿಗಿದಿರುವ ರಿಬ್ಬನ್ನಿನಂತಹ ಕಟಿಬಂಧ ಧರಿಸಿದ್ದಾರೆ. ಹುಬ್ಬುಗಳು ಸ್ಪಷ್ಟವಾಗಿ ಸೂಚಿತವಾಗಿಲ್ಲ. ಇವರು ಕಣ್ಣೆವೆಗಳನ್ನು ಮಚ್ಚಿ ಧ್ಯಾನಮಗ್ನರಾಗಿ ಆಂತರ್ಯದ ಅಳದೊಳಕ್ಕೆ ನೋಡುತ್ತಿರುವಂತಿದೆ.

ಮುಖಮಂಟಪದಲ್ಲಿ ಪೂರ್ವ ಪಾರ್ಶ್ವದ ಗೋಡೆಯಲ್ಲಿ ಭೂವರಾಹನನ್ನು ಚಿತ್ರಿಸುವ ಹಿರಿ ಶಿಲ್ಪವಿದೆ. ತನ್ನ ಎಡಕ್ಕೆ ತಿರುಗಿರುವ ವರಾಹನು ಚತುರ್ಭುಜನಾಗಿದ್ದಾನೆ. ಮುಖ್ಯ ಎಡಗೈಯಿಂದ ಪದ್ಮದ ಮೇಲೆ ನಿಂತಿರುವ ಭೂದೇವಿಗೆ ಅಧಾರವೊದಗಿಸಿದ್ದಾನೆ. ಅವಳ ಬಲಗೈ ವರಾಹನ ಮುಖದ ಮೇಲೆ ಇರಿಸಲ್ಪಟ್ಟಿದ್ದು ಎಡಗೈ ಇಳಿಬಿಟ್ಟಿದೆ. ವರಾಹನ ಮುಖ್ಯ ಬಲಗೈ ಕಟಿಬಂಧದ ಮೇಲಿದೆ. ಮೇಲಿನ ಕೈಗಳು ಪ್ರಯೋಗ ಚಕ್ರ ಹಾಗೂ ಶಂಖ ಧರಿಸಿವೆ. ಎಡಗಾಲು ಪದ್ಮದ ಮೇಲಿದೆ. ಕೆಳಗಡೆ ಎಡಮೂಲೆಯಲ್ಲಿ ಕೈಮುಗಿದಿರುವ ನಾಗರಾಜ ಮತ್ತು ಅವನ ಪತ್ನಿಯರು ಇದ್ದಾರೆ. ಮೇಲಿನ ಮೂಲೆಗಳಲ್ಲಿ ವಿಧ್ಯಾಧರ ದಂಪತಿಗಳಿದ್ದಾರೆ. ಗ್ರೈವೇಯಕ ಹಾರ, ನಿವೀತ ರೀತಿಯ ಮುಕ್ತಾಯಜ್ಞೋಪವೀತ, ತೋಳ್ಬಂದಿ, ಕಂಕಣ, ಉದರಬಂಧ ಅರ್ಧೋರುಕ, ಚಪ್ಪಟೆ ಅಗಲ ರಿಬ್ಬನ್ನಿನಂತಹ ಕಟಿಬಂಧ ಮುಂತಾದವುಗಳನ್ನು ಧರಿಸಿದ್ದಾನೆ.

ಮುಖಮಂಟಪದ ಪಶ್ಚಿಮ ಗೋಡೆಯಲ್ಲಿ ವಾಮನಾವತಾರದ ಕಥಾರೂಪಕ ಹಿರಿಶಿಲ್ಪವಿದೆ. ವಿರಾಟಾರೂಪದ ತ್ರಿವಿಕ್ರಮನ ಎಡಬದಿಗೆ ಕೆಳಗಡೆ ಅಸುರ ಬಲಿಚಕ್ರವರ್ತಿಯ ಪುರೋಹಿತ ಶುಕ್ರಾಚಾರ್ಯನು ವಟುರೂಪದ ಬ್ರಹ್ಮಚಾರಿ ಕುಳ್ಳ ವಾಮನರೂಪಿ ವಿಷ್ಮುವಿಗೆ ಅರ್ಘ್ಯ ನೀಡುತ್ತಿದ್ದಾನೆ. ಶುಕ್ರಾಚಾರ್ಯನು ಕೃಷ್ಣಾಜಿನ ಯಜ್ಞೋಪವೀತಧಾರಿಯಾಗಿದ್ದಾನೆ. ಅವನ ಹಿಂದುಗಡೆ ಬಲಿಚಕ್ರವರ್ತಿಯ ಶುಕ್ರಾಚಾರ್ಯನ ಬಲಗೈಯನ್ನು ಸ್ಪರ್ಶಿಸಿ ನಿಂತಿದ್ದಾನೆ; ‘ಶುಕ್ರಾಚಾರ್ಯನ ಎಡಕ್ಕೆ ಬಲಿಯ ಮಡದಿ ಹಾಗೂ ಇತರ ಪ್ರೇಕ್ಷಕರು ನಿಂತಿದ್ದಾರೆ. ವಾಮನನು ಬೇಡಿದ ಮೂರು ಹೆಜ್ಜೆ ಪ್ರದೇಶವನ್ನು ಬಲಿಚಕ್ರವರ್ತಿ ಅರ್ಘ್ಯ ಬಿಟ್ಟು ನೀಡುತ್ತಿರುವ ದೃಶ್ಯವಿದು. ಈ ಶಿಲ್ಪ ಸಂಯೋಜನೆಯಲ್ಲಿ ಕೇಂದ್ರ ವಸ್ತು ತ್ರಿವಿಕ್ರಮ ರೂಪದ ವಿಷ್ಣು. ಭೂಮಿ-ಆಕಾಶಗಳನ್ನು ಮುಟ್ಟಿರುವ ವಿರಾಟ್ ಸ್ವರೂಪದಲ್ಲಿ ಚಿತ್ರಿತನಾಗಿದ್ದಾನೆ. ಬಲಗಾಲನ್ನು ಭದ್ರವಾಗಿ ನೆಲದ ಮೇಲೆ ಊರಿ ಎಡಗಾಲನ್ನು ಭುಜದ ಎತ್ತರಕ್ಕೆ ನೇರವಾಗಿ ಎತ್ತಿದ್ದಾನೆ. ಏಳು ಕೈಗಳಲ್ಲಿ ಖಡ್ಗ, ಗದೆ, ಬಾಣ, ಚಕ್ರ, ಶಂಖ, ಖೇಟಕ, ಬಿಲ್ಲು ಧರಿಸಿ, ಎಂಟನೇ ಕೈಯನ್ನು ಸೂಚಿಹಸ್ತದಿಂದ ರಾಹುವಿನ ಮುಖವಾಡದಂತಹ ಮುಖದೆಡೆ ತೋರಿಸುತ್ತಿದ್ದಾನೆ. ಇವನ ಬಲಗಾಲನ್ನು ಅಪ್ಪಿಕೊಂಡು ಕುಳಿತಿರುವ ಕಿರೀಟಧಾರಿ ವ್ಯಕ್ತಿ ಮಗ ನಮುಚಿ. ತ್ರಿವಿಕ್ರಮನು ಹೆಜ್ಜೆ ಅಳೆಯುವುದನ್ನು ಈತ ತಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾನೆ. ಇವನ ಹಿಂದುಗಡೆ ಖಡ್ಗಧಾರಿ ಅಸುರನೊಬ್ಬನು ತ್ರಿವಿಕ್ರಮನನ್ನು ಹೊಡೆಯಲು ಯತ್ನಿಸುತ್ತಿದ್ದಾನೆ. ಮೇಲ್ಗಡೆ ಎಡಭಾಗದಲ್ಲಿ ವಿಸ್ಮಯಹಸ್ತರಾಗಿ ಜಾಂಬವಾನ್ ಮತ್ತು ಗರುಡ, ಅರ್ಧಚಂದ್ರ, ರಾಹುವಿನ ಮುಖ ಮತ್ತು ವಿದ್ಯಾಧರ ದಂಪತಿಗಳನ್ನು ಶಿಲ್ಪಿಸಲಾಗಿದೆ. ತ್ರಿವಿಕ್ರಮನು ಎಡಗಾಲನ್ನೆತ್ತಿದ ಹೊಡೆತಕ್ಕೆ ಅಸುರನೊಬ್ಬನು ಆಕಾಶದಲ್ಲಿ ತೂರಿ ತಲೆಕೆಳಗಾಗಿ ಬೀಳುತ್ತಿದ್ದಾನೆ. ಚೌಕಾಕಾರದ ಈ ಶಿಲ್ಪ ಸಂಯೋಜನೆಯಲ್ಲಿ ಬಳಸದೆ ಉಳಿದ ಸ್ಥಳಾವಕಾಶ ತೀರ ಕಡಿಮೆಯಾದ್ದರಿಂದ ಹೆಚ್ಚು ವ್ಯಕ್ತಿ ಪಾತ್ರಗಳನ್ನು ತುಂಬಿರುವಂತೆ ಗೋಚರವಾಗುತ್ತದೆ. ನಾಟಕೀಯ ಭಾವ ಉತ್ಕೃಷ್ಣವಾಗಿ ಅಭಿವ್ಯಕ್ತವಾಗಿದೆ.

ಕಂಬ-ಬೋದಿಗೆಗಳ ಮುಖಗಳಲ್ಲಿರುವ ಮುಖ್ಯ ಉಬ್ಬುಶಿಲ್ಪಗಳನ್ನು ಕುರಿತು ಮೇಲೆ ಈಗಾಗಲೇ ಉಲ್ಲೇಖ ಮಾಡಿದೆ. ಜಂತಿಗಳ ಒಳ ಪಾರ್ಶ್ವದಲ್ಲಿರುವ ಕಥಾನಿರೂಪಕ ಶಿಲ್ಪಪಟ್ಟಿಕೆಗಳ ಬಗ್ಗೆ ಒಂದೆರಡು ವಿಷಯಗಳನ್ನು ಇಲ್ಲಿ ಹೇಳಬಹುದು. ಅನಂತಶಾಯಿ ವಿಷ್ಣುವಿನ ಪಕ್ಕದಲ್ಲಿ ಅವನ ಆಯುಧಗಳಾದ ಖಡ್ಗ(ನಂದಕ), ಗದೆ(ಕೌಮೋದಕೀ), ಶಂಖ (ಪಾಂಚಜನ್ಯ), ಚಕ್ರ (ಸುದರ್ಶನ) ಇವುಗಳನ್ನು ಮನುಷ್ಯಾಕಾರದಲ್ಲಿ ಅಂದರೆ ಆಯುಧಪುರುಷರ ರೂಪದಲ್ಲಿ-ಮಧು ಕೈಟಭ ರಾಕ್ಷಸರನ್ನೆದುರಿಸುತ್ತಿರುವಂತೆ ತೋರಿಸುವುದು ಗಮನೀಯ. ಇನ್ನೊಂದು ಪಟ್ಟಿಕೆಯಲ್ಲಿ ದೇವತೆಗಳು ಮತ್ತು ಅಷ್ಟದಿಕ್ಪಾಲಕರಿಂದ ಸುತ್ತುವರಿಯಲ್ಪಟ್ಟಿರುವ ಗಜಲಕ್ಷ್ಮಿಯ ಪಕ್ಕದಲ್ಲಿ ಮಹಿಷಾಸುರ ಮರ್ದಿನಿಯನ್ನು ಚಿತ್ರಿಸಿದೆ. ಸಮುದ್ರಮಥನ ಪಟ್ಟಿಕೆಗಳಲ್ಲಿ ದೇವಾಸುರರು ಅರ್ಮತ ಮಥನದ ದೃಶ್ಯವಷ್ಟೇ ಅಲ್ಲದೆ ದೇವಾಸುರ ಯುದ್ಧ ದೃಶ್ಯವೂ ಸೇರಿದೆ. ಕೃಷ್ಣ ಚರಿತೆಯು ಮೂರು ಪಟ್ಟಿಕೆಗಳಲ್ಲಿದ್ದು, ಅದರಲ್ಲಿ ಕೃಷ್ಣನ ಜನ್ಮ ಗೋಕುಲದಲ್ಲಿ ಕೃಷ್ಣ-ಬಲರಾಮರು, ನವನೀತಚೋರ ಕೃಷ್ಣ, ಪೂತನಾವಧೆ, ಯಮಳಾರ್ಜುನ ಭಂಗ, ಶಕಟಭಂಗ ವತ್ಸ-ಅರಿಷ್ಟ-ಧೇನುಕ ಅಸುರರ ವಧೆ, ಕಾಲಿಯ ದಮನ, ಗೋವರ್ಧನ ಗಿರಿಧಾರಿ, ಮುಷ್ಟಿಕ ವಧೆ ಮತ್ತು ಕಂಸವಧೆ ದೃಶ್ಯಗಳಿವೆ. ವಿಷ್ಣುಪುರಾಣ ಹಾಗೂ ಹರಿವಂಶ ಪುರಾಣದಿಂದ ಸ್ಫೂರ್ತಿ ಪಡೆದು ರಚಿತವಾಗಿರುವ ಕಥಾನಕ ಶಿಲ್ಪಗಳಿವು.

ಶಿಲ್ಪಶೈಲಿ ಮತ್ತು ಶಿಲ್ಪಿಗಳು

ಮೊದಲ ಗುಹಾಲಯಕ್ಕೆ ಹೋಲಿಸಿದರೆ ಈ ವೈಷ್ಣವ ಗುಹಾಲಯ ಶಿಲ್ಪಗಳು ಸ್ಫುಟವಾಗಿ ಬೇರೆ ವಿಶಿಷ್ಟ ಶೈಲಿಯಲ್ಲಿರುವುದು ಗೋಚರವಾಗುತ್ತದೆ. ಭಂಗಿಗಳ ಆಯ್ಕೆ, ಮಕುಟ, ಆಭರಣ, ಪ್ರಭಾಮಂಡಲ, ವೇಷಭೂಷಣಗಳ ರಚನೆ, ಮುಖಭಾವ, ರೂಪ-ಸಂಸ್ಕರಣ ಮುಂತಾದವುಗಳಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಬಹುದು. ಮುಖ ಮತ್ತು ದೇಹದ ಎತ್ತರದ ಪರಸ್ಪರ ಪ್ರಮಾಣ ಸುಮಾರು ೧:೪ರಷ್ಟಿದೆ. ಹೀಗಾಗಿ ವ್ಯಕ್ತಿಗಳು ಕುಳ್ಳರಾಗಿ ಕಾಣುತ್ತಾರೆ. ಹಿರಿಯ ಶಿಲ್ಪಗಳಷ್ಟೇ ಅಲ್ಲದೆ ಅಧಿಕತರ ಕಿರುಶಿಲ್ಪಗಳು ಕೂಡ ಒಂದೇ ಶೈಲಿಗನುಗುಣವಾಗಿ ರಚಿತವಾಗಿರುವುದರಿಂದ, ಈ ಗುಹಾಲಯದ ಹೆಚ್ಚಿನ ಹಿರಿಕಿರಿಯ ಶಿಲ್ಪಗಳೆಲ್ಲವೂ ಒಂದೇ ಶಿಲ್ಪ ಶ್ರೇಣಿಯ ಪರಿಸರದಲ್ಲಿ ಬೆಳೆದು ಬಂದ ಶಿಲ್ಪಿಗಳ ಕೈಚಳಕದ ಪ್ರತಿನಿಧಿಯಾಗಿ. ದ್ವಾರಪಾಲ ಶಿಲ್ಪಗಳಂತೂ ಉತ್ತರ ಡಕ್ಕನ್ನಿನ ಎಲ್ಲೋರದ, ಎಲಿಫಂಟಾದ ಗುಹಾಲಯಗಳ ಶಿಲ್ಪಗಳನ್ನು ಶೈಲಿ, ಭಾವ, ಅಭಿವ್ಯಕ್ತಿಗಳಲ್ಲಿ ನೆನಪಿಸುತ್ತವೆ. ಆ ಪ್ರದೇಶದಿಂದ ಬಂದ ಶಿಲ್ಪಿಗಳಿವರಾಗಿರ ಬೇಕು.

ಈ ಗುಹಾಲಯದ ಪರಿಸರದಲ್ಲಿ ಕೂಡ ಹಲವು ಶಿಲ್ಪಿಗಳ ಹೆಸರುಗಳನ್ನು ಬರೆದಿವೆ. ಶಾಂತಿಮೂರ್ತಿ, ದುಟ್ಟೋಜ, ರೋಣ, ಗೊಟ್ಟೆಮೂರ್ಕ, ನಿದ್ದೆಗ, ಬುರು, ವಚ್ಯ, ಅಳಗೆರೆಯ, ಕೇಸವ, ದ್ವಿತ, ಭೀಮ, ದುರ್ವಿಟ ಇತ್ಯಾದಿ. ಇವೆಲ್ಲ ಕನ್ನಡ-ತೆಲುಗು ಲಿಪಿಯಲ್ಲಿವೆ. ವಚ್ಯನ ಹೆಸರನ್ನು ಸಿದ್ಧಮಾತೃಕಾಲಿಪಿಯಲ್ಲಿಯೂ ಬರೆದಿದೆ. ಇದಲ್ಲದೆ ಭಾರತಚಂದ್ರ, ಶರಣಚಂದ್ರ, ಸಿವಪುತ್ರ, ಯಶದೇವ, ದೇವದಾಸ, ಗಂಗೋಸ್ವಾಮಿ, ಮಹಾರಾಟೆ ಮುಂತಾದ ಸಿದ್ಧಮಾತೃಕಾ ಲಿಪಿಯಲ್ಲಿರುವ ಹೆಸರುಗಳು ಗುಹಾಲಯದ ಪಕ್ಕದ ಬಿಲದ ಛತ್ತಿನಲ್ಲಿವೆ. ಒಟ್ಟಾರೆ ಶಿಲ್ಪಶೈಲಿ ಮತ್ತು ಸಿದ್ಧಮಾತೃಕಾ ಲಿಪಿಯೆರಡೂ ಉತ್ತರ ಡೆಕ್ಕನ್ ಪ್ರದೇಶದ ಶಿಲ್ಪಿಗಳು ಇಲ್ಲಿ ಕಾರ್ಯ ಪ್ರವೃತ್ತರಾಗಿದ್ದುದನ್ನೇ ಪುಷ್ಟೀಕರಿಸುತ್ತವೆ.

ಮೂರನೇ ವೈಷ್ಣವ ಗುಹೆಯ ಶಿಲ್ಪಗಳು

ಸೋಪಾನವನ್ನೇರಿ ಅಧಿಷ್ಠಾನದ ಮೇಲೆ ನಿಂತರೆ ಪೂರ್ವಪಾರ್ಶ್ವದ ಗೋಡೆಯಲ್ಲಿ ಅಷ್ಟಭುಜ ವಿಷ್ಣುವಿನ ಬೃಹತ್ ಶಿಲ್ಪ ಕಾಣುತ್ತದೆ. ಸಮಪಾದದಲ್ಲೆ ನಿಂತಿರುವ ವಿಷ್ಣು ತನ್ನ ಬಲ ಕೈಗಳಲ್ಲಿ ಖಡ್ಗ, ಗದೆ, ಬಾಣ, ಚಕ್ರವನ್ನೂ, ಎಡಕೈಯಲ್ಲಿ ಶಂಖ, ಡಾಲು, ಬಿಲ್ಲನ್ನೂ ಧರಿಸಿ ಕಟ್ಯವಲಂಬಿತ ಹಸ್ತನಾಗಿದ್ದಾನೆ. ಎತ್ತರವಾಗಿರುವ ಸಿಲಿಂಡರಿನಾಕಾರದ ಕಿರೀಟಮಕುಟದ ಮೇಲೆ ನರಸಿಂಹನು ಚಕ್ರ ಶಂಖಗಳನ್ನು ಧರಿಸಿ ಮುಂದಣ ಎರಡು ಕೈಗಳನ್ನು ಇರಿಸಿರುವಂತೆ ತೋರಿಸಲಾಗಿರುವುದು ವೈಶಿಷ್ಟ್ಯ. ಶಿರಶ್ಚಕ್ರವು ಬಿಚ್ಚಿದ ಬೀಸಣಿಗೆಯಂತಿದೆ. ಮಕರಕುಂಡಲ, ಗ್ರೈವೇಯಕ, ನಿವೀತ ಮುಕ್ತಾಯಜ್ಞೋಪವೀತ, ಉದರಬಂಧ, ಕಟಿವಸ್ತ್ರ, ಕಟಿಬಂಧ ಮುಂತಾದವುಗಳಿಂದ ಅವನು ಅಲಂಕೃತನಾಗಿದ್ದಾನೆ. ಹುಬ್ಬುಗಳನ್ನು ಮತ್ತು ಗದ್ದವನ್ನು ಸ್ಫುಟವಾಗಿ ತೋರಿಸಿದೆ.

ಇದಕ್ಕೆ ಎದುರಾಗಿ, ಪಶ್ಚಿಮ ಪಾರ್ಶ್ವದ ಗೋಡೆಯಲ್ಲಿ ವಾಮನಾವತಾರ ನಿರೂಪಕ ಅದ್ಭುತ ಶಿಲ್ಪವಿದೆ. ತ್ರಿವಿಕ್ರಮನ ಎಡಪಕ್ಕದಲ್ಲೆ ವಟುರೂಪದ ವಾಮನ, ವಿಷ್ಣು, ಮಡದಿ ಸಮೇತನಾದ ಬಲಿಚಕ್ರವರ್ತಿಯಿಂದ ಪುರೋಹಿತ ಶುಕ್ರಾಚಾರ್ಯನ ಮೂಲಕ ಅರ್ಘ್ಯ ಸ್ವೀಕರಿಸುತ್ತಿರುವ ದೃಶ್ಯವಿದೆ. ಶುಕ್ರಾಚಾರ್ಯನನ್ನು ಬುದ್ಧನಂತೆ ತೋರಿಸಿರುವುದು  ಗಮನಾರ್ಹವಾಗಿದೆ. ಸಂಯೋಜನೆಯ ಕೇಂದ್ರವಸ್ತು ತ್ರಿವಿಕ್ರಮ ರೂಪ ತಾಳಿರುವ ಅಷ್ಟಭುಜ ವಿಷ್ಣು: ಖಡ್ಗ, ಗದೆ, ಬಾಣ, ಚಕ್ರ, ಶಂಖ ಬಿಲ್ಲು, ಢಾಲು ಧರಿಸಿ, ಮುಖ್ಯ ಎಡಗೈಯನ್ನು ಮೇಲೆತ್ತಿರುವ ಎಡಗಾಲಿಗೆ ಸಮಾನಾಂತರವಾಗಿ ಹಿಡಿದು ಬೆರಳನ್ನು ರಾಹುವಿನ ಮುಖವಾಡದಂತಹ ಮುಖದೆಡೆಗೆ ತೋರಿಸುತ್ತಿದ್ದಾನೆ. ಸಿಲಿಂಡರಿನಾಕಾರದ ಕಿರೀಟವನ್ನು ಆಕರ್ಷಕವಾಗಿ ಅಲಂಕರಿಸಿದೆಯಲ್ಲದೆ ಶಿರಶ್ಚಕ್ರವನ್ನು ಬಿಚ್ಚಿದ ಬೀಸಣಿಗೆಯಂತೆ ಶಿಲ್ಪಿಸಿದೆ. ಹುಬ್ಬು, ಕಣ್ಣೆವೆಗಳು, ಗದ್ದ, ಅಭರಣಾದಿಗಳನ್ನು ಸ್ಫುಟವಾಗಿ ನಿರೂಪಿಸಿದೆ. ಒಂದು ಕಿವಿಯಲ್ಲಿ ಮಕರಕುಂಡಲ, ಇನ್ನೊಂದರಲ್ಲಿಪತ್ರ ಕುಂಡಲವಿದೆ. ಬಲಿಯ ಮಗ ನಮುಚಿ ಬಲಪಕ್ಕದಲ್ಲಿ ತ್ರಿವಿಕ್ರಮನ ಕಾಲನ್ನು ಹಿಡಿದು ಅವನನ್ನು ತಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾನೆ. ಮೇಲ್ಗಡೆ ಜಾಂಬವಾನ್, ಗರುಡ ಹಾಗೂ ಚಂದ್ರರನ್ನು ವಿಸ್ಮಯ ಮುದ್ರೆಯಲ್ಲಿ ಕೈಯೆತ್ತಿ ಹಾರುತ್ತ ಬರುತ್ತಿರುವಂತೆ ಶಿಲ್ಪಿಸಿದೆ. ತ್ರಿವಿಕ್ರಮನು ಎತ್ತಿದ ಕಾಲಿನ ಸಮೀಪ ವರುಣನ ಮೇಲರ್ಧ ದೇಹವನ್ನು ಹಾಗೂ ಆಕಾಶದಿಂದ ಬೀಳುತ್ತಿರುವ ಖಡ್ಗಧಾರಿ ಅಸುರನನ್ನು ತೋರಿಸಿದೆ. ಒಟ್ಟಾರೆ ಸಂಯೋಜನೆ ನಾಟಕೀಯ ಸನ್ನಿವೇಶವನ್ನು ಅದ್ಭುತಾಶ್ಚರ್ಯ ರೀತಿಯಲ್ಲಿ ಮೂರ್ತಗೊಳಿಸುವಲ್ಲಿ ಇಲ್ಲಿ ಸಂಯೋಜನೆಯ ನಾಟಕೀಯ ನಿರೂಪಣೆ ಹೆಚ್ಚು ಆಕರ್ಷಕವೂ ಪ್ರಭಾವಿಯೂ ಆಗಿದೆ.

ಮುಖಮಂಟಪದ ಪೂರ್ವ ಗೋಡೆಯಲ್ಲಿರುವ ಶೇಷಾಸೀನ ವಿಷ್ಣುಶಿಲ್ಪವನ್ನು ಸಂಗೀತ, ವಾದ್ಯ, ನೃತ್ಯಗಳಲ್ಲಿ ತಲ್ಲೀನರಾಗಿರುವ ಗಣಗಳ ಪಟ್ಟಿಕೆಯಿರುವ ವೇದಿಕೆಯ ಮೇಲ್ಗಡೆ ಕಟೆಯಲಾಗಿದೆ. ಸುಖಾಸೀನನಾಗಿ ಐದು ಹೆಡೆಗಳ ಸರ್ಪದ ದೇಹದ ಮೇಲೆ ಕುಳಿತಿರುವ ಚತುರ್ಭುಜ ವಿಷ್ಣು, ಮುಖ್ಯ ಬಲಗೈಯಲ್ಲಿ ಫಲವನ್ನು ಹಿಡಿದು, ಎಡಗೈಯನ್ನು ತೊಡೆಯ ಮೇಲಿರಿಸಿದ್ದಾನೆ. ಮೇಲಣ ಕೈಗಳು ಚಕ್ರ ಮತ್ತು ಶಂಖ ಧರಿಸಿವೆ. ಕಿರೀಟ ಮಕುಟ, ಮಕರಕುಂಡಲ, ಗ್ರೈವೇಯಕ, ಕಂಠಹಾರ, ತೋಳ್ಬಂದಿ, ಕಂಕಣ, ಉದರಬಂಧ, ಸೊಂಟಪಟ್ಟಿ, ನಿವೀತ ಮುಕ್ತಾಯಜ್ಞೋಪವೀತ ಇತ್ಯಾದಿ ಆಭರಣಗಳನ್ನು ಧರಿಸಿದ್ದಾನೆ. ತಲೆಯ ಹಿಂದೆ ಸರಳವಾದ, ದೀರ್ಘವೃತ್ತಾಕೃತಿಯ ಪ್ರಭಾಮಂಡಲವಿದೆ. ಕಣ್ಣು ಹುಬ್ಬುಗಳನ್ನು ತೋರಿಸಿದೆ. ಇವನ ಅಕ್ಕಪಕ್ಕದಲ್ಲಿ ನಾಗಕನ್ನಿಕೆಯರು ನಿಂತಿದ್ದಾರೆ. ಸರ್ಪಾಸನದ ಬಲಪಾರ್ಶ್ವದಲ್ಲಿ ಗರುಡನು ಕೈಕಟ್ಟಿಕೊಂಡು ತನ್ನ ಸ್ವಾಮಿಯ ಆದೇಶಕ್ಕಾಗಿ ಕಾಯ್ದು ಕುಳಿತಿರುವಂತಿದೆ. ಎಡಪಾರ್ಶ್ವದಲ್ಲಿ ಸ್ತ್ರೀಯೊಬ್ಬಳು ಸರ್ಪಾಸನಕ್ಕೆ ಆತುಕೊಂಡು ಕುಳಿತಿದ್ದಾಳೆ. ವೇಷಭೂಷಣಗಳ ಕೂಲಂಕಷ ವಿವರಗಳುಳ್ಳ ಈ ಶಿಲ್ಪ ಪ್ರಮಾಣಬದ್ದತೆ, ದೈವೀವ್ಯಕ್ತಿತ್ವ, ನಿರೂಪಣೆ, ಗಾಂಬೀರ್ಯಾಭಿವ್ಯಕ್ತಿ, ಸಂಯೋಜನಾಚಾತುರ್ಯ, ರೂಪಸಂಸ್ಕರಣ ಮುಂತಾದ ದೃಷ್ಟಿಕೋನಗಳಿಂದ ಮನಸೆಳೆಯುವ ಅದ್ಭುತ ಕೃತಿ. ಎರಡನೇ ಗುಹೆಯ ಕಂಬವೊಂದರ ಮೇಲಿರುವ ಉಬ್ಬುಶಿಲ್ಪ ಇದಕ್ಕೆ ಮಾದರಿಯಾಗಿರುವ ಸಾಧ್ಯತೆಯಿದೆ. ಉಬ್ಬುಶಿಲ್ಪವಾಗಿದ್ದರೂ ದುಂಡುಶಿಲ್ಪದ ಆಭಾಸ ನೀಗಬಲ್ಲ ಸಾಮರ್ಥ್ಯ ಈ ಶಿಲ್ಪಕ್ಕಿದೆ.

ಇದರ ಪಕ್ಕದಲ್ಲಿ, ಮುಖಮಂಟಪವನ್ನು ಮಹಾಮಂಟಪದಿಂದ ಬೇರ್ಪಡಿಸಿರುವ ಚಾಚುಗೋಡೆಯ ಉತ್ತರ ಮುಖದಲ್ಲಿ ಬೃಹದಾಕಾರದ ಭೂವರಾಹ ಉಬ್ಬುಶಿಲ್ಪ ನೃತ್ಯದಲ್ಲಿ, ವಾದ್ಯ ಬಾರಿಸುವುದರಲ್ಲಿ ನಿರತ ಗಣಗಳ ಪಟ್ಟಿಕೆಯ ಮೇಗಡೆ ಕಟೆಯಲ್ಪಟ್ಟಿದೆ. ಸಾಗರದಾಳವನ್ನು ಸೂಚಿಸುವ ಸರ್ಪದ ದೇಹದ ಸುರುಳಿಯ ಮೇಲೆ ಎಡ ಕಾಲಿರಿಸಿ ನಿಂತಿರುವ ಭೂವರಾಹಮೂರ್ತಿ ಚತುರ್ಭುಜನಾಗಿದ್ದಾನೆ. ಮುಖ್ಯ ಬಲಗೈ ಕಟ್ಯವಲಂಬಿತವಾಗಿದೆ. ಎಡಗೈ ಪದ್ಮದ ಮೇಲೆ ನಿಂತಿರುವ ಭೂದೇವಿಗೆ ಆಧಾರವೊದಗಿಸಿದೆ. ಮೇಲಣ ಕೈಗಳ ಚಕ್ರ ಮತ್ತು ಶಂಖ ಹಿಡಿದಿವೆ. ಭೂದೇವಿಯು ತನ್ನ ಬಲಗೈಯನ್ನು ವರಾಹನ ಭುಜದ ಮೇಲಿರಿಸಿ ಎಡಗೈಯಲ್ಲಿ ನೀಲೋತ್ಪಲ ಹಿಡಿದಿದ್ದಾಳೆ. ವರಾಹನು ವಿವಿಧ ಆಭರಣಗಳನ್ನು ಧರಿಸಿದ್ದು, ಅವನ ಕಟಿಬಂಧವು ರಿಬ್ಬನ್ನಿನಂತೆ ಚಪ್ಪಟೆಯಾಗಿರುವುದು ಗಮನಾರ್ಹವಾಗಿದೆ. ಬಲಪಕ್ಕದಲ್ಲಿ ಓರ್ವ ನಾಗಕನ್ನಿಕೆಯು ಚಾಮರಧಾರಿಣಿಯಾಗಿ, ಆಶ್ಚರ್ಯಚಕಿತಳಾಗಿ ನಿಂತಿದ್ದಾಳೆ. ವರಾಹನ ಕಾಲುಗಳ ನಡುವಣ ಅವಕಾಶದಲ್ಲಿ ಐದು ಹೆಡೆಗಳುಳ್ಳ ನಾಗಿಣಿ ಹಾಗೂ ಎಡಪಕ್ಕದಲ್ಲಿ ಐದು ಹೆಡೆಯ ನಾಗರಾಜ ಕುಳಿತಿದ್ದಾರೆ. ಮೇಲ್ಭಾಗದಲ್ಲಿ ವಿದ್ಯಾಧರ ದಂಪತಿಗಳ ಎರಡು ಜೋಡಿಗಳು ವಿಸ್ಮಯಹಸ್ತರಾಗಿ ತೇಲುತ್ತಿದ್ದಾರೆ. ಈ ಶಿಲ್ಪವನ್ನು ಕಟೆದಿರುವ ಶಿಲೆಯ ನೈಸರ್ಗಿಕ ಸ್ವರೂಪದಿಂದಾಗಿ ಸಮುದ್ರತಳದ ನೀರಲೆಗಳ ಆಭಾಸವುಂಟಾಗಿದೆ. ಪೃಥ್ವೀವಲ್ಲಭಾದ ಚಾಲುಕ್ಯರ ರಾಜಲಾಂಛನವೆನಿಸಿರುವ ವರಾಹನಿಗೆ ರಾಜಪ್ರತಿಷ್ಠೆಯ ನಿರ್ಮಿತಿಯೆನಿಸುವ ಈ ಗುಹಾಲಯದಲ್ಲಿ ಮಹದಾಕಾರದ ಸ್ಥಾನ ಔಚಿತ್ಯಪೂರ್ಣವಾಗಿದೆ.

ಮುಖಮಂಟಪದ ಪಶ್ಚಿಮ ಗೋಡೆಯಲ್ಲಿ ಅಪರೂಪದ ಭಂಗಿಯಲ್ಲಿರುವ ಚತುರ್ಭುಜ ಸ್ಥಾನಕ ನರಸಿಂಹ ವಿಗ್ರಹವಿದೆ. ಅಭಂಗದಲ್ಲಿರುವ ನರಸಿಂಹನ ಮುಖ್ಯ ಬಲಗೈ ಕಟಕಮುದ್ರೆ ಯಲ್ಲಿದೆ; ಎಡಗೈ ಗದೆಯ ಮೇಲೆ ಇರಿಸಲ್ಪಟ್ಟಿದೆ. ಮೇಲಣ ಕೈಗಳಲ್ಲಿ ಆಯುಧ ಪುರುಷರು-ಸುದರ್ಶನ ಮತ್ತು ಪಾಂಚಜನ್ಯ ಶಂಖ ಇವೆ. ಸಿಂಹಮುಖದ ಶಿರೋಭಾಗದಲ್ಲಿ ಅರಳಿದ ಪದ್ಮವಿದೆ. ಇತರ ಶಿಲ್ಪಗಳಲ್ಲಿರುವಂತೆ ವಿವಿಧ ಆಭರಣಗಳು ನರಸಿಂಹನ ದೇಹವನ್ನು ಅಲಂಕರಿಸಿವೆ. ನರಸಿಂಹನ ಬಲ ಪಾರ್ಶ್ವದಲ್ಲಿ ಕುಬ್ಜಾಕಾರದ ಪ್ರಹ್ಲಾದನಿದ್ದಾನೆ. ಅಸುರನೆಂದು ಸೂಚಿಸಲು ಇವನ ಕೂದಲುಗಳನ್ನು ಗುಂಗುರು ಗುಂಗುರಾಗಿ ತೋರಿಸಿದೆ. ಎಡಪಾರ್ಶ್ವದಲ್ಲಿ, ಗದೆಯ ಪಕ್ಕದಲ್ಲಿ ಕಟ್ಯವಲಂಬಿತನಾಗಿ ಗರುಡನು ನಿಂತಿದ್ದಾನೆ. ಮೇಲ್ಗಡೆ ಮಾಲಾವಾಹಕರಾಗಿ ಎರಡು ಜೋಡಿ ವಿದ್ಯಾಧರ ದಂಪತಿಗಳು ತೇಲುತ್ತಿದ್ದಾರೆ. ಈ ವಿಶಿಷ್ಟ ಭಂಗಿಯಲ್ಲಿರುವ ನರಸಿಂಹನನ್ನು ತುಸುಮಟ್ಟಿಗೆ ಹೋಲುವ ಇನ್ನೊಂದು ಶಿಲ್ಪವನ್ನು ಐಹೊಳೆಯ ದುರ್ಗಾ ಗುಡಿಯ ದೇವಕೋಷ್ಠವೊಂದರಲ್ಲಿ ಕಾಣಬಹುದು. ಶಿರದಲ್ಲಿರುವ ಪದ್ಮ ಬಹುಶಃ ಜ್ಞಾನ ಸಂಕೇತವಾದ ಸಹಸ್ರಾರ ಚಕ್ರದ ಪ್ರತಿನಿಧಿ.

ಇದರ ಪಕ್ಕದಲ್ಲಿರುವ ಚಾಚು ಗೋಡೆಯಲ್ಲಿ ಸಮಪಾದದಲ್ಲಿರುವ ಹರಿಹರ ಶಿಲ್ಪವಿದೆ. ಬಲಗೈಗಳಲ್ಲಿ ಫಲ, ಪರಶು ಹಾಗೂ ಎಡಗೈಗಳಲ್ಲಿ ಶಂಖ ಮತ್ತು ಕಟ್ಯವಲಂಬಿತ ಹಸ್ತವಿರುವ ಈ ದೇವತೆಯ ಮಕುಟ ಎತ್ತರವಾಗಿದೆ; ತಲೆಯ ಹಿಂದಿರುವ ಶಿರಶ್ಚಕ್ರ ಬಿಚ್ಚಿದ ಬೀಸಣಿಕೆಯಂತಿದೆ. ಕಣ್ಣ ಹುಬ್ಬನ್ನು ಸ್ಪಷ್ಟವಾಗಿ ಸೂಚಿಸಿದ್ದರೂ ಕಣ್ಣೆವೆಗಳನ್ನು ಏರಿಳಿತಗಳ ಮೂಲಕ ಮಾತ್ರ ತೋರಿಸಿದ್ದಾರೆ. ತುಟಿ, ಗದ್ದ, ಸ್ಪಷ್ಟವಾಗಿವೆ. ಇತರ ಶಿಲ್ಪಗಳಲ್ಲಿರುವಂತೆ ವಿವಿಧ ಆಭರಣಗಳು ಅವನ ದೇಹವನ್ನು ಅಲಂಕರಿಸಿವೆ. ಬಲಭಾಗದಲ್ಲಿ ಶಿವನಿಗೆ ಯೋಗ್ಯವೆನಿಸುವ ಜಟಾಮಕುಟ, ಸರ್ಪಕುಂಡಲ, ಸೊಂಟದಲ್ಲಿ ನಾಗಬಂಧ ಇವೆಯಾದರೆ, ಎಡಭಾಗದಲ್ಲಿ ವಿಷ್ಣುವಿಗೆ ಯೋಗ್ಯವೆನಿಸುವ ಕಿರೀಟಮಕುಟ, ಮಕರಕುಂಡಲ ಮುಂತಾದ ಆಭರಣಗಳಿವೆ.

ಮೇಲೆ ವರ್ಣಿಸಿರುವ ಶಿಲ್ಪಗಳಲ್ಲಿ ಅನಂತಾಸೀನ ವಿಷ್ಣು ಮತ್ತು ವರಾಹ ವಿಗ್ರಹಗಳು ಮಾತ್ರ ಮೂಲ ವಿಗ್ರಹಗಳೆಂದೂ, ಉಳಿದವುಗಳು ತದನಂತರ ರೂಪಿತವಾಗಿವೆಯೆಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮೂರನೇ ಗುಹಾಲಯದಲ್ಲಿ ಮನಸೂರೆಗೊಳ್ಳುವ ಇತರ ಶಿಲ್ಪಗಳೆಂದರೆ ಮದನಕೈ ವಿಗ್ರಹಗಳು. ಎತ್ತರದಲ್ಲಿರುವುದರಿಂದ ತಮ್ಮ ಮೂಲ ಸ್ವರೂಪದಲ್ಲೆ ಇವು ಉಳಿದುಬಂದಿವೆ. ತುಸು ಎತ್ತರವಾದ ನೀಳ ಮೈಕಟ್ಟಿನ ವ್ಯಕ್ತಿಗಳು ಇಲ್ಲಿ ಕಂಡುಬರುತ್ತಿವೆ. ಸಾಮಾನ್ಯವಾಗಿ ಕಂಬಗಳ ಪೂರ್ವ, ಪಶ್ಚಿಮ ಪಾರ್ಶ್ವಗಳಲ್ಲಿ ಮಿಥುನಗಳು ಶಿಲ್ಪಿತವಾಗಿವೆಯಾದರೆ, ದಕ್ಷಿಣ ಪಾರ್ಶ್ವದಲ್ಲಿ ಅಪೂರ್ಣ ಮಿಥುನಗಳು-ಪ್ರೇಯಸಿಗಾಗಿ ಹಾತೊರೆಯುತ್ತ ನಿಂತಿರುವ ನಾಯಿಕೆಯರು ರೂಪಿತರಾಗಿದ್ದಾರೆ. ಇವುಗಳಲ್ಲಿ ನಾಗ-ನಾಗಿಣೀ ದಂಪತಿ ಕಾಪಾಲೀ ಶಿವ ಮತ್ತು ಪಾರ್ವತಿ(?), ಅರ್ಧನಾರೀ, ಇಕ್ಷುಚಾಪ, ಮಕರಧ್ವಜ, ವಸಂತ ಸಹಿತ ಕಾಮ-ರತಿ, ಮಗ ಸ್ಕಂದ ಸಹಿತ (ಚಂದ್ರಶೇಖರ?) ಶಿವ-ಪಾರ್ವತಿ ಹಾಗೂ ಮತ್ತಿತರ ಮಿಥುನಗಳು, ಹಾಗೂ ದರ್ಪಣಸುಂದರಿ, ಪ್ರಿಯಕರನಿಗೆ ಪತ್ರ ಬರೆಯಲು ಉದ್ಯುಕ್ತಳಾಗುತ್ತಿರುವ ಅಥವಾ ಬರೆದು ಮುಗಿಸಿರುವ) ನಾಯಿಕೆ, ಕಾಮಸೂತ್ರದ ಸನ್ನಿವೇಶಗಳನ್ನು ಉದಾಹರಿಸುವ ಮಿಥುನಗಳು, ಮುಂತಾದವು ಉಲ್ಲೇಖಾರ್ಹವಾಗಿವೆ. ಇವೆಲ್ಲವುಗಳು ವಿವಿಧ ವೃಕ್ಷಗಳ ಹಿನ್ನೆಲೆಯಲ್ಲಿ ಪ್ರತೀಹಾರ-ಪ್ರತೀಹಾರಿಯರೊಂದಿಗೆ ಶಿಲ್ಪಿತವಾಗಿವೆ. ಸ್ತ್ರೀಯರ ವೇಷ-ಭೂಷಣಗಳು ಮತ್ತು ಕೇಶಾಲಂಕಾರ ವೈವಿಧ್ಯಮಯವಾಗಿ ನಿರೂಪಿತವಾಗಿವೆ. ಇವು ಸಮಕಾಲೀನ ಸೌಂದರ್ಯ ಪ್ರಜ್ಞೆಯ ಪ್ರತೀಕದಂತಿವೆ. ರೂಪ ಸಂಸ್ಕರಣದಲ್ಲಿ ವಿವಿಧತೆ ಇದ್ದು, ಬೇರೆ ಬೇರೆ ಶಿಲ್ಪಿಗಳ ಕೈಚಳಕದ ಪ್ರತಿನಿಧಿಗಳಾಗಿವೆ.

ಕಪೋತದಲ್ಲಿರುವ ಗರ್ಭಗೃಹಕ್ಕೆ ಮುಖ ಮಾಡಿ ಹಾರುತ್ತಿರುವ ಗರುಡನ ಬೃಹತ್ ಶಿಲ್ಪ ಇಲ್ಲಿಯ ಇನ್ನೊಂದು ಅದ್ಭುತ ಕೃತಿ. ಹುಬ್ಬುಗಳನ್ನೇರಿಸಿ ಕಣ್ಣುಗಳನ್ನು ತೆರೆದು ಕುಬ್ಜ ಮೈಕಟ್ಟಿನೊಂದಿಗೆ ಬಲಗೈಯಲ್ಲಿ ಹಾವನ್ನು ಹಿಡಿದು ರೆಕ್ಕೆಗಳನ್ನು ಬಿಚ್ಚಿ ಹಾರುತ್ತಿರುವ ಗರುಡನ ಇಬ್ಬದಿಗಳಲ್ಲಿ ಖಡ್ಗ-ಢಾಲು ಹಿಡಿದು ಕಂಠಾಶ್ಲೇಷ ರೀತಿಯಲ್ಲಿ ಹಾರುತ್ತಿರುವ ವಿದ್ಯಾಧರ ದಂಪತಿಗಳನ್ನು ಶಿಲ್ಪಿಸಿದೆ. ಇದು ‘ನೆಲವಱ್ಕ’ ಎಂಬ ಶಿಲ್ಪಿಯ ಕೃತಿ. ಕಪೋತದ ಉದ್ದಕ್ಕೂ ವರ್ಣಚಿತ್ರಗಳಿದ್ದವು. ಈಗ ಹಾಳಾಗಿವೆ.

ಮುಖಮಂಟಪದ ತೊಲೆಗಳ ಒಳಪಾರ್ಶ್ವಗಳ ಗುಂಟ ಮಹಾಭಾರತ, ಹರಿವಂಶ, ವಿಷ್ಣು ಪುರಾಣಗಳಿಂದ ಆಯ್ದು ಪೌರಾಣಿಕ ಕಥಾನಿರೂಪಕ ಶಿಲ್ಪಪಟ್ಟಿಕೆಗಳಿವೆ. ಸಮುದ್ರ ಮಥನದ ಕಥಾನಿರೂಪಣೆಯು ಸಾಕಷ್ಟು ವಿವರಪೂರ್ಣವಾಗಿದೆ: ಕ್ಷೀರಸಾಗರದ ತೀರದಲ್ಲಿ ದೇವತೆಗಳು ಸೇರಿರುವುದು, ಮಂದಾರ ಪರ್ವತವನ್ನು ಎತ್ತಲು ದೇವತೆಗಳು ಅಸಮರ್ಥರಾದುದು, ವಿಷ್ಣು, ಬ್ರಹ್ಮ, ಶಿವ ಮುಂತಾದವರು ಆಲೋಚನೆಯಲ್ಲಿ ವಿಷ್ಣು ಕೂರ್ಮಾವತಾರ ತಾಳಿ ಮಂದಾರ ಪರ್ವತಕ್ಕೆ ಆಧಾರವೊದಗಿಸಿ ದೇವಾಸುರರಿಗೆ ಸಮುದ್ರಮಥನ ಮಾಡಲು ಅನುವು ಮಾಡಿಕೊಟ್ಟದ್ದು, ಅಮೃತಘಟವನ್ನು ರಕ್ಷಿಸುತ್ತಿರುವ ದೇವತೆಗಳ ಮೇಲೆ ಗರುಡನು ದಾಳಿಯಿಟ್ಟುದು, ಗರುಡನು ದೇವತೆಗಳನ್ನು ಸೋಲಿಸಿ ಅಮೃತಘಟವನ್ನು ರಕ್ಷಿಸುತ್ತಿರುವ ದೇವತೆಗಳ ಮೇಲೆ ಗರುಡನು ದಾಳಿಯಿಟ್ಟುದು, ಗರುಡನು ದೇವತೆಗಳನ್ನು ಸೋಲಿಸಿ ಅಮೃತಘಟವನ್ನು ಕೊಂಡೊಯ್ದುದು, ದೇವಾಸುರ ಯುದ್ದದಲ್ಲಿ ದೇವತೆಗಳು ಜಯಶೀಲ ರಾದುದು -ಇವೆಲ್ಲ ವಿವರಪೂರ್ಣವಾಗಿ ನಿರೂಪಿತವಾಗಿವೆ. ಪಾರಿಜಾತಾಹರಣವನ್ನು ಮೂರು ದೃಶ್ಯಗಳಲ್ಲಿ ತೋರಿಸಿದೆ: ಸತ್ಯಭಾಮೆಯ ಉದ್ಯಾನದಲ್ಲಿ ಪಾರಿಜಾತ ವೃಕ್ಷವನ್ನು ಕೃಷ್ಣ ನೆಟ್ಟಿರುವುದು; ಗರುಡಾರೂಢ ಕೃಷ್ಣನು ಪಾರಿಜಾತ ವೃಕ್ಷವನ್ನು ಕೊಂಡೊಯ್ಯುತ್ತಿರುವುದು; ಇಂದ್ರನೊಂದಿಗೆ ಗರುಡಾರೂಢ ಕೃಷ್ಣ ಯುದ್ಧ ಮಾಡುತ್ತಿರುವುದು. ಇನ್ನೊಂದು ಪಟ್ಟಿಕೆಯಲ್ಲಿ ಸುಭದ್ರಾಹರಣ ದೃಶ್ಯ, ಗಜಲಕ್ಷ್ಮಿ ಹಾಗೂ ಹಿರಣ್ಯಕಶಿಪು ವಧೆಯ ದೃಶ್ಯ ಇವೆ. ಕೃಷ್ಣಚರಿತ ಕಥಾನಿರೂಪಣೆಯಲ್ಲಿ ಅನಂತಶಯನ ಕಮಲನಾಭ ವಿಷ್ಣು, ಗರುಡನು ರಾಕ್ಷಸರೆಡೆಗೆ ಧಾವಿಸುತ್ತಿರುವುದು, ರಾಕ್ಷಸರು ವೃಷಭಗಳ ರೂಪದಲ್ಲಿ ಪೃಥ್ವಿಯನ್ನು ಹಿಂಸಿಸುತ್ತಿರುವುದು, ವಿಷ್ಣು ತನ್ನ ಮುಂದಿನ ಅವತಾರದ ಬಗ್ಗೆ ದೇವತೆಗಳಿಗೆ ತಿಳಿಸುತ್ತಿರುವುದು, ಕಂಸನು ವಾಸುದೇವ-ದೇವಕಿಯರನ್ನು ಸೆರೆಮನೆಯಲ್ಲಿ ಸಂಧಿಸುತ್ತಿರುವುದು, ಕೃಷ್ಣನ ಹಿರಿಯ ಸಹೋದರಿಯನ್ನು ಕಂಸ ಕೊಲ್ಲುತ್ತಿರುವುದು, ಕೃಷ್ಣನ ಜನ್ಮ, ಅವನನ್ನು ಗೋಕುಲಕ್ಕೆ ಕೊಂಡೊಯ್ದುದು, ಪೂತನಾ ವಧ, ಶಕಟ ಭಂಗ, ಮತ್ಸಾಸುರ ವಧ, ಯಮಳಾರ್ಜುನ ಭಂಗ, ಧೇನುಕ ವಧ, ಕೃಷ್ಣನ ಅಭಿಷೇಕ, ವೃಜದಲ್ಲಿ ಗೋಪಾಲಕನಾಗಿ ಕೃಷ್ಣ, ಗೋವರ್ಧನ ಗಿರಿಧಾರಿ ಕೃಷ್ಣ, ಕೇಶಿವಧ, ಕುವಲಯಾಪೀಡ ವಧ, ಕಾಲಿಯಾ ದಮನ, ಮುಷ್ಟಿಕ-ಚಾಣೂರ ವಧ, ಕೃಷ್ಣ-ಬಲರಾಮರನ್ನು ಕೊಲ್ಲಲು ಕಂಸನು ಮಲ್ಲರನ್ನು ಕಳುಹಿಸುತ್ತಿರುವುದು, ಮಲ್ಲರ ಸೋಲು ಇತ್ಯಾದಿ ದೃಶ್ಯಗಳಿವೆ. ಆದರೆ ನಿರೂಪಣೆ ಪುರಾಣಗಳಲ್ಲಿರುವ ನಿರ್ದಿಷ್ಟ ಕ್ರಮಕ್ಕನುಗುಣವಾಗಿಲ್ಲ.