ಭಾರತೀಯ ಪ್ರಾಚೀನ ಧಾರ್ಮಿಕ ಪರಂಪರೆಗಳಲ್ಲಿ ಶೈವಧರ್ಮವೂ ಒಂದು. ಶಿವ ಪಾರಮ್ಯವನ್ನು ಒಪ್ಪಿಸಿಕೊಂಡಿರುವ ಈ ಧರ್ಮ ಕಾಲಾನುಕ್ರಮದಲ್ಲಿ ಬೆಳೆದುಬಂದ ಬಗೆ ಕುತೂಹಲಕಾರಿಯಾಗಿದೆ. ಅದರ ಅಭಿವೃದ್ದಿಕಾಲದಲ್ಲಿ ಲಕುಲೀಶ ಪರಿಕಲ್ಪನೆ ಸೇರಿಕೊಂಡಿದ್ದು ಗೋಚರಿಸುತ್ತದೆ. ವಾಯು ಪುರಾಣ

[1] ಹಾಗೂ ಲಿಂಗ ಮಹಾಪುರಾಣಗಳಲ್ಲಿ[2] ಲಕುಲೀಶನು ಶಿವನ ೨೮ನೇ ಅವತಾರವೆಂದು ಉಲ್ಲೇಖವಿದೆ. ಕಾಯಾವರೋಹಣದ ಸ್ಮಶಾನವೊಂದರಲ್ಲಿ ಶವವನ್ನು ಹೊಕ್ಕು ಶಿವನು ಲಕುಲೀಶನಾಗಿ ಪಾಶುಪತವೆಂಬ ಮತವನ್ನು ಬೋಧಿಸಿದನೆಂದೂ, ಇದೇ ಲಕುಲೀಶ ಪಾಶುಪತವೆಂದೂ ತಿಳಿಯಲಾಗಿದೆ.[3] ಮಾಧವರ ಸರ್ವದರ್ಶನ ಸಂಗ್ರಹದಲ್ಲಿ ಲಕುಲೀಶನನ್ನು ನಕುಲೀಶನೆಂದು ಕರೆದಿದ್ದಾರೆ.[4] ಲಕುಲೀಶ, ನಕುಲೀಶ, ಲಗುಡೀಶ ಈ ಮೂರು ಒಂದೇ ಹೆಸರಿನ ರೂಪಾಂತರಗಳಾಗಿವೆ.[5] ಇವನು ಬೋಧಿಸಿದ ತತ್ವವೇ ಲಕುಲೀಶ ಪಾಶುಪತವೆಂದು ಒಪ್ಪಲಾಗಿದೆ.

ಲಕುಲೀಶನ ಕಾಲದ ಬಗ್ಗೆ ನಿಖರ ಮಾಹಿತಿಯಿಲ್ಲ. ಬಹುಶಃ ಕ್ರಿ.ಶ.೧ನೇ ಶತಮಾನವಾಗಿರ ಬಹುದೆಂದು ಅಭಿಪ್ರಾಯವಿದೆ. ಈ ಕುರಿತು ಗುಪ್ತರ ಕಾಲದ ಮಥುರಾ ಶಾಸನ ಅತ್ಯಂತ ಮಹತ್ವದ್ದಾಗಿದೆ. ೨ನೇ ಚಂದ್ರಗುಪ್ತನ ಕಾಲದ ಮಥುರಾ ಶಾಸನ ಅತ್ಯಂತ ಮಹತ್ವದ್ದಾಗಿದೆ. ೨ನೇ ಚಂದ್ರಗುಪ್ತನ ಮಥುರಾ ಶಾಸನವು (ಗುಪ್ತವರ್ಷ ೬೧ ಕ್ರಿ.ಶ.೩೮೦) ಲಕುಲೀಶನ ಶಿಷ್ಯನ ಬಗ್ಗೆ ನೇರವಾಗಿ ಪ್ರಸ್ತಾಪಿಸುತ್ತದೆ ಹಾಗೂ ಲಕುಲೀಶನ ಬಗ್ಗೆಯೂ ವಿವರಣೆ ನೀಡುತ್ತದೆ. ಇದರ ಪ್ರಕಾರ ಭಗವತ್ ಕುಶಿಕನಿಂದ ೧೦ನೆಯವನಾದ ಹಾಗೂ ಭಗವತ್ ಪರಾಶರನಿಂದ ನಾಲ್ಕನೆಯವನಾದ ಭಗವತ್ ಉಪಮಿತ್ರನ ಪ್ರಶಿಷ್ಯನಾದ ಹಾಗೂ ಭಗವತ್ ಕಪಿಲನ ಶಿಷ್ಯನಾದ ಆರ್ಯ ಉದಿತಾಚಾರ್ಯನು ಉಪಮಿತೇಶ್ವರ ಹಾಗೂ ಕಪಿಲೇಶ್ವರ ಲಿಂಗಗಳನ್ನು ಗುರ‌್ವಾಯತನದಲ್ಲಿ ಪ್ರತಿಷ್ಠಾಪಿಸಿದನು.[6] ಇಲ್ಲಿ ಗುರುವಾದ ಲಕುಲೀಶನ ನೇರ ಶಿಷ್ಯನೆಂದು ಪುರಾಣಗಳಿಂದ ತಿಳಿದಿದೆ. ಈ ಶಾಸನ ೧೭ನೇ ಸಾಲಿನಲ್ಲಿ ಭಗವಾನ್ ದಂಡವನ್ನು ಹೆಸರಿಸಿದ್ದು, ಅವನನ್ನು ಉಗ್ರದಂಡ, ಅಗ್ರನಾಯಕ, ನಿತ್ಯ ಎಂದು ವರ್ಣಿಸಲಾಗಿದೆ(ಜಯಂತಿ ಚ ಭಗವಾನ್ದಂಡ ರುದ್ರದಂಡೋಗ್ರ(ನಾ)ಯಕೊನಿತ್ಯಃ).

ಇಲ್ಲಿ ಭಗವಾನ್ ಲಕುಟಪಾಣಿ ಲಕುಲೀಶ. ಲಕುಲೀಶ(ದಂಡ)ನನ್ನು ಆಗಲೇ ದೈವತ್ವಕ್ಕೇರಿಸುವುದರಿಂದ ಅವನ ಶಿಷ್ಯನಾದ ಕುಶಿಕನಿಂದ ಗುರುಪರಂಪರೆಯನ್ನು ಉಲ್ಲೇಖಿಸ ಲಾಗಿದೆ ಎಂದು ಭಾವಿಸಬಹುದು. ಕುಶಿಕನು ಲಕುಲೀಶನ ನೇರ ಶಿಷ್ಟನಾಗಿದ್ದನೆಂಬುದು ಶಾಸನಗಳಿಂದಲೂ ತಿಳಿದಿದೆ. ಉದಯಪುರದ ಸಮೀಪದಲ್ಲಿರುವ ಏಕಲಿಂಗಜಿಯ ಶಾಸನವು[7] (ಕ್ರಿ.ಶ.೯೭೧) ಲಕುಳವನ್ನು ಕೈಯಲ್ಲಿ ಹಿಡಿದಿರುವ ವ್ಯಕ್ತಿಯೊಬ್ಬ ಭೃಗುಕಚ್ಛದಲ್ಲಿ ಅವತಾರ ಮಾಡಿದನೆಂದೂ ಅವನಿಗೆ ಕುಶಿಕ, ಮಿತ್ರ, ಗರ್ಗ, ಕೌರುಷ್ಯರೆಂಬ ಶಿಷ್ಯರೆಂದೂ ಇವರು ಪಾಶುಪತಯೋಗವನ್ನು ಪ್ರಚಾರ ಮಾಡಿದರೆಂದೂ ಹೇಳುತ್ತದೆ.

“ವಿಶ್ವಕರ್ಮ ವಾಸ್ತುಶಾಸ್ತ್ರಂ”[8] ಎಂಬ ಕೃತಿಯಲ್ಲಿ ಲಕುಲೀಶನ ಪ್ರತಿಮಾ ಲಕ್ಷಣವನ್ನು ಈ ರೀತಿ ತಿಳಿಸಲಾಗಿದೆ: “ಲಕುಲೀಶನು ಊರ್ಧ್ವಮೇಢ್ರನಾಗಿ ಕಮಲದ ಮೇಲೆ ಕುಳಿತಿರುತ್ತಾನೆ ಅಥವಾ ಪದ್ಮಾಸನದಲ್ಲಿ ಕುಳಿತಿರುತ್ತಾನೆ. ಬಲಗೈಯಲ್ಲಿ ಮಾತುಲಿಂಗ ಹಿಡಿದು ಎಡಕೈಯಲ್ಲಿ ಲಕುಟ ಹಿಡಿದರುತ್ತಾನೆ.”

ಮಥುರಾದಲ್ಲಿನ ಕುಶಾನರ[9] ಕಾಲದ (ಕ್ರಿ.ಶ. ೨ ಅಥವಾ ೩ನೇ ಶತಮಾನ) ಒಂದು ಗಣ ವಿಗ್ರಹದಲ್ಲಿ ನಗ್ನನಾಗಿ ಕೈಯಲ್ಲಿ ದಂಡ ಮತ್ತು ಕಲಶವನ್ನು ಹಿಡಿದಿರುವಂತೆ ತೋರಿಸಿದೆ. ಇದನ್ನು ಲಕುಲೀಶನ ಪೂರ್ವಭಾವಿ ಪ್ರತಿಮೆಯಿಂದ ಗಣಿಸಬಹುದು. ಎಲ್ಲೋರಾ, ಎಲಿಫೆಂಟಾಗಳಲ್ಲಿ ಸುಮಾರು ಕ್ರಿ.ಶ. ೬ನೇ ಶತಮಾನದ ಕುಳಿತ ಲಕುಲೀಶ ವಿಗ್ರಹಗಳು ಗಮನಿತವಾಗಿವೆ.

ಬಾದಾಮಿಯ ಚಾಲುಕ್ಯರ ಕಾಲದಲ್ಲಿ ರಚಿತವಾದ ಬಾದಾಮಿ ಪರಿಸರದಲ್ಲಿನ ಲಕುಲೀಶ ಶಿಲ್ಪಗಳು ಪ್ರತಿಮಾ ಲಕ್ಷಣ ವೈವಿಧ್ಯ ದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿವೆ. ಇವುಗಳ ಪ್ರಭೇದಗಳನ್ನು ಗುರುತಿಸುವುದು ಈ ಪ್ರಬಂಧದ ಮುಖ್ಯ ಉದ್ದೇಶವಾಗಿದೆ. ಲಕುಲೀಶ ಶಿಲ್ಪಗಳನ್ನು ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲುಗಳ ದೇವಾಲಯಗಳ ಕಂಬ ಇಲ್ಲವೇ ಗೋಡೆಗಳ ಮೇಲೆ ಕಾಣುತ್ತೇವೆ. ಅವುಗಳ ಸಾಮಾನ್ಯ ಲಕ್ಷಣಗಳ ಆಧಾರದಿಂದ ಈ ರೀತಿ ವರ್ಗೀಕರಿಸಬಹುದು.

ದೇವಾಲಯದ ಸಭಾಮಂಟಪದಲ್ಲಿರುವ ಎಡ ಮೊದಲನೇ ಭಾಗದ ಕಂಬದ ಪಶ್ಚಿಮ ಮುಖದಲ್ಲಿ ಲಕುಲೀಶನನ್ನು ಚತುರ್ಭುಜನಾಗಿ, ನಗ್ನವಾಗಿ, ಊರ್ಧ್ವಮೇಢ್ರನಾಗಿ ಕುಳಿತಂತೆ ಶಿಲ್ಪಿಸಿದೆ. ಬಲಕೈಗಳಲ್ಲಿ ದಂಡ, ಪರಶು ಹಾಗೂ ಎಡಗೈಗಳಲ್ಲಿ ಅಕ್ಷಮಾಲಾ, ವ್ಯಾಖ್ಯಾನ ಮುದ್ರೆ ಇವೆ. ಯಜ್ಞೋಪವೀತ, ಜಟಾಮಕುಟ ಇವೆ. ಅಕ್ಕಪಕ್ಕದಲ್ಲಿ ನಾಲ್ಕು ಜನ ಶಿಷ್ಯರಿದ್ದಾರೆ. ಒಬ್ಬ ಶಿಷ್ಯ ಪಾಠ ಓದುತ್ತಿದ್ದಾನೆ. ಈ ಶಿಲ್ಪವನ್ನು ಬಾದಾಮಿ ಚಾಲುಕ್ಯರ ಕಾಲದ ಹಾಗೂ ಕರ್ನಾಟಕದ ಅತೀ ಪ್ರಾಚೀನ ಲಕುಲೀಶ ಶಿಲ್ಪವೆಂದು ಸದ್ಯ ಪರಿಗಣಿಸಬಹುದು. ಸಮಸ್ಥಾನಕ ಭಂಗಿಯಲ್ಲಿರುವ ದ್ವಿಭುಜ ಲಕುಲೀಶ ಶಿಲ್ಪಗಳು ಈ ರೀತಿಯ ಶಿಲ್ಪಗಳನ್ನು ಅವುಗಳ ಪ್ರಧಾನ ವ್ಯತ್ಯಾಸಗಳಿಗೆ ಅನುಗುಣವಾಗಿ ಉಪವರ್ಗಗಳಾಗಿ ವಿಂಗಡಿಸಬಹುದು. ಲಕುಟಪಾಣಿಯಾಗಿ ಸಮಸ್ಥಾನಕದಲ್ಲಿರುವ ಲಕುಲೀಶ: ಮಹಾಕೂಟದ ನಂದಿಮಂಟಪದ ಬಲಗಡೆ, ದೇವಾಲಯದ ದಕ್ಷಿಣ ಗೋಡೆಯಲ್ಲಿ ಸಮಸ್ಥಾನಕದಲ್ಲಿರುವ ಲಕುಲೀಶ ಶಿಲ್ಪವಿದೆ. ಇಲ್ಲಿ ಅಪಸ್ಮಾರನಿಲ್ಲ. ದ್ವಿಭುಜನಾಗಿದ್ದು ಬಲಗೈಯಲ್ಲಿ ಲಕುಟ, ಎಡಗೈ ಕಟ್ಯವಲಂಬಿತ ಹಸ್ತವಿದೆ. ಜಟೆ ಹರಡಿಕೊಂಡಿದೆ. ವ್ಯಾಘ್ರಚರ್ಮ ಮತ್ತು ಯಜ್ಞೋಪವೀತ ಇವೆ. ಇದು ಬಾದಾಮಿ ಚಾಲುಕ್ಯರ ಕಾಲದ ಎರಡನೆಯ ಹಂತದ ಲಕುಲೀಶ ಶಿಲ್ಪವಾಗಿರಬಹುದು.

ಲಕುಟಪಾಣಿಯಾಗಿ ಅಪಸ್ಮಾರನ ಮೇಲೆ ಸಮಸ್ಥಾನಕದಲ್ಲಿರುವ ಲಕುಲೀಶ

೧. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಲ್ಲಿರುವ ದಕ್ಷಿಣ ಗೋಡೆಯಲ್ಲಿ ಅಪಸ್ಮಾರನ ಮೇಲೆ ಸಮಸ್ಥಾನಕವಾಗಿದ್ದು ಬಲಕೈಯಲ್ಲಿ ಲಕುಟ, ಎಡಗೈ ಕಟ್ಯವಂಬಿತವಾಗಿದೆ. ವ್ಯಾಘ್ರ ಚರ್ಮವಿದ್ದು, ಸೊಂಟದಲ್ಲಿ ಹೆಜ್ಜೆಯ ಮೇಖಲೆಯನ್ನು ಧರಿಸಿದ್ದಾನೆ. ಯಜ್ಞೋಪವೀತವು ಗೆಜ್ಜೆಯಿಂದ ರಚಿತವಾಗಿದೆ. ಜಟೆ ಹರಡಿಕೊಂಡಿದೆ. ಊರ್ಧ್ವಮೇಢ್ರನಾಗಿದ್ದಾನೆ.

೨. ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯದ ದಕ್ಷಿಣ ಗೋಡೆಯಲ್ಲಿ ಅಪಸ್ಮಾರನ ಮೇಲೆ ಸಮಸ್ಥಾನಕದಲ್ಲಿದ್ದು ಬಲಗೈಯಲ್ಲಿ ಲಕುಟ, ಎಡಗೈ ಕಟ್ಯವಲಂಬಿತವಾಗಿದೆ. ಯಜ್ಞೋಪವೀತವಿದೆ. ಜಟಾಮುಕುಟ ಹೊಂದಿದ್ದಾನೆ. ಆದರೆ ಚರ್ಮದ ಬದಲಾಗಿ ಬಟ್ಟೆ ಧರಿಸಿದ್ದಾನೆ.

೧. ಮಹಾಕೂಟದಲ್ಲಿ ಸಂಗಮೇಶ್ವರ ಗುಡಿಯ ಗರ್ಭಗೃಹದ ದಕ್ಷಿಣ ಗೋಡೆಯಲ್ಲಿ ಅಪಸ್ಮಾರನ ಮೇಲೆ ಸಮಸ್ಥಾನಕದಲ್ಲಿರುವ ಲಕುಲೀಶ ಬಲಗೈವರದ ಹಸ್ತವಾಗಿದ್ದು, ಎಡಕೈಯಲ್ಲಿ ಪರಶು ಹಿಡಿದಿದ್ದಾನೆ. ಜಟೆ ಹರಡಿಕೊಂಡಿದ್ದು ಬಲಗಡೆ ಜಟೆಯ ಸಮೀಪದಲ್ಲಿ ಸುಂದರ ನಾಗವಿದೆ.

೨. ಮಹಾಕೂಟದಲ್ಲಿನ ಸಂಗಮೇಶ್ವರನ ಗುಡಿಯ ಮುಂದಿನ ಅರಳಿ ಗಿಡದ ಕೆಳಗಿನ ಒಂದು ಕಲ್ಲಿನಲ್ಲಿ ಅಪಸ್ಮಾರನ ಮೇಲೆ ಸಮಸ್ಥಾನಕದಲ್ಲಿರುವ ಲಕುಲೀಶ ಶಿಲ್ಪವಿದೆ. ಇದು ಸಂಗಮೇಶ್ವರ ಗುಡಿಯಲ್ಲಿನ ಶಿಲ್ಪದ ಮಾದರಿಯನ್ನೇ ಹೋಲುತ್ತದೆ. ಇದೇ ಮಾದರಿಯ ಶಿಲ್ಪ ಪಿನಾಕಪಾಣಿ ದೇವಾಲಯದ ದಕ್ಷಿಣಗೋಡೆಯಲ್ಲಿದೆ.

೩. ಪಟ್ಟದಕಲ್ಲಿನ ಕಾಡಸಿದ್ದೇಶ್ವರ ದೇವಾಲಯದ ದಕ್ಷಿಣ ಗೋಡೆಯಲ್ಲಿ ಅಪಸ್ಮಾರನ ಮೇಲೆ ಸಮಸ್ಥಾನಕದಲ್ಲಿರುವ ಲಕುಲೀಶ ಶಿಲ್ಪ ಬಲಗೈ ಬಹುಶಃ ವರದಹಸ್ತ(ಒಡೆದಿದೆ) ದಲ್ಲಿರಬಹುದು. ಎಡಗೈಯಲ್ಲಿ ಪರಶು ಹಿಡಿದಿದ್ದಾನೆ. ಯಜ್ಞೋಪವೀತವಿದೆ, ವ್ಯಾಘ್ರಚಮವಿರ್ದೆ.

೪. ಪಟ್ಟದಕಲ್ಲಿನ ಜಂಬುಲಿಂಗ ದೇವಾಲಯದ ದಕ್ಷಿಣ ಗೋಡೆಯಲ್ಲಿ ಅಪಸ್ಮಾರನ ಮೇಲೆ ಸಮಸ್ಥಾನಕವಾಗಿರುವ ಲಕುಲೀಶನು ಬಲಗೈ ಬಹುಶಃ (ಒಡೆದಿದೆ) ವರದಹಸ್ತದಲ್ಲಿದೆ. ಎಡಗೈಯಲ್ಲಿ ಪರಶು ಇದೆ.

೫. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಪಶ್ಚಿಮ ಗೋಡೆಯಲ್ಲಿ ಲಕುಲೀಶನ ಬಲಗೈಯಲ್ಲಿ ಪರಶು ಧರಿಸಿದ್ದು, ಎಡಗೈಕ ಟ್ಯವಲಂಬಿತವಾಗಿದೆ. ಜಟಾಮುಕುಟ, ವ್ಯಾಘ್ರಚರ್ಮ, ಯಜ್ಞೋಪವೀತಗಳಿವೆ.

ಷಡ್ಭುಜನಾಗಿ ಅಪಸ್ಮಾರನ ಮೇಲೆ ಸಮಸ್ಥಾನಕದಲ್ಲಿರುವ ಲಕುಲೀಶ

ಐಹೊಳೆಯ ದುರ್ಗಾದೇವಾಲಯದ ತೆರೆದ ಪ್ರದಕ್ಷಿಣಾ ಪಥದ ದಕ್ಷಿಣಕ್ಕಿರುವ ಕಂಬದ ಪೂರ್ವಮುಖದಲ್ಲಿ ಷಡ್ಭುಜನಾಗಿ ಅಪಸ್ಮಾರನ ಮೇಲೆ ಸಮಸ್ಥಾನಕನಾಗಿದ್ದಾನೆ. ಬಲಭಾಗದ ಎರಡು ಕೈಗಳಿಂದ ಕುಳ್ಳರಂತಿರುವ ವ್ಯಕ್ತಿಗಳನ್ನು ದಂಡಿಸುತ್ತಿರುವಂತಿದೆ. ಮೇಲಿನ ಕೈಯಲ್ಲಿ ಬಹುಶಃ ಪರಶು ಹಿಡಿದಿದ್ದಾನೆ. ಎಡಭಾಗದ ಮೇಲಿನ ಕೈಗಳಲ್ಲಿ ಬಹುಶಃ ಪರಶು ಹಿಡಿದಿದ್ದಾನೆ. ಎಡಭಾಗದ ಮೇಲಿನ ಕೈಗಳಲ್ಲಿ ಸರ್ಪ, ಕಟ್ಯವಲಂಬಿತ ಹಸ್ತ ಹಾಗೂ ಕಮಂಡಲ ಇನ್ನೊಂದು ಕೈಯಿಂದ ಒಬ್ಬ ಕುಳ್ಳನನ್ನು ದಂಡಿಸುತ್ತಿದ್ದಾನೆ. ಯಜ್ಞೋಪವೀತವಿದೆ. ಜಟಾಮುಕುಟದ ಬದಲು ಕಿರೀಟ ಮುಕುಟವಿರುವುದು ವಿಶೇಷ.

ಇತರ ಲಕುಲೀಶ ಶಿಲ್ಪಗಳು (ಒಡೆದ)

೧. ಗಳಗನಾಥ ದೇವಾಲಯದ ಬಲಭಾಗದ (ದಕ್ಷಿಣಕ್ಕೆ) ಜಾಲಾಂದ್ರದ ಮಂಟಪದ ಬಲಕ್ಕೆ ಚಿಕ್ಕದಾದ ಲಕುಲೀಶ ಶಿಲ್ಪ, ಕೆಳಗಡೆ ಇಕ್ಕೆಲದಲ್ಲಿ ಇಬ್ಬರು ಗಣರಿದ್ದಾರೆ. ಬಹುಶಃ ಅಪಸ್ಮಾರನಿಲ್ಲ.

೨. ಕಾಶೀ ವಿಶ್ವನಾಥ ದೇವಾಲಯದ ಉತ್ತರ ದಿಕ್ಕಿಗಿರುವ ನಾಲ್ಕನೆಯ ಚಿಕ್ಕ ಗುಡಿಯ ದಕ್ಷಿಣಕ್ಕೆ (ಬಹುಶಃ ಸ್ಮಾರಕ ದೇಗುಲಗಳು) ಲಕುಲೀಶ ಶಿಲ್ಪವಿದೆ. ಬಲಕೈಯಲ್ಲಿ ಪ್ರಾಯಶಃ ಬಹುಶಃ ದಂಡ(ಒಡೆದಿದೆ)ವಿದ್ದು ಎಡಗೈ ಕಟ್ಯವಲಂಬಿತವಾಗಿದೆ.

ಮೇಲಿನ ಲಕುಲೀಶ ಶಿಲ್ಪಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ.

೧. ಸಾಮಾನ್ಯವಾಗಿ ಲಕುಲೀಶ ಶಿಲ್ಪಗಳಲ್ಲಿ ಲಕುಲೀಶನು ವ್ಯಾಘ್ರ ಚರ್ಮವನ್ನು ಧರಿಸಿದ್ದು, ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯದಲ್ಲಿನ ಶಿಲ್ಪ ಬಟ್ಟೆಯನ್ನು ಧರಿಸಿದೆ.

೨. ಲಕುಲೀಶ ಶಿಲ್ಪಗಳಲ್ಲಿ ಜಟಾಮಕುಟ ಇರುವುದು ಸಾಮಾನ್ಯ. ಆದರೆ ಐಹೊಳೆ ಶಿಲ್ಪದಲ್ಲಿ ಕಿರೀಟ ಮಕುಟವಿದೆ.

೩. ಲಕುಲೀಶ ಶಿಲ್ಪಗಳು ಊರ್ಧ್ವಮೇಢ್ರವಾಗಿವೆ.

೪. ಮಹಾಕೂಟದ ನಂದಿ ಮಂಟಪದ ಶಿಲ್ಪ, ಬಾದಾಮಿಯಲ್ಲಿನ ಶಿಲ್ಪ, ಗಳಗನಾಥನ ಶಿಲ್ಪಗಳಲ್ಲಿ ಅಪಸ್ಮಾರನಿಲ್ಲ.

೫. ಲಕುಲೀಶ ಶಿಲ್ಪಗಳು ಯಜ್ಞೋಪವೀತ ಹೊಂದಿವೆ.

೬. ವಿರೂಪಾಕ್ಷ ದೇವಾಲಯದಲ್ಲಿನ ಶಿಲ್ಪದಲ್ಲಿ ಲಕುಲೀಶನು ಗೆಜ್ಜೆಯಂತಿರುವ ಮೇಖಲಾ (ಉಡಾದರ) ಹಾಗೂ ಯಜ್ಞೋಪವೀತ ಧರಿಸಿದ್ದಾನೆ.

೭. ಮಹಾಕೂಟದ ನಂದಿ ಮಂಟಪದ ಪಕ್ಕದಲ್ಲಿನ ಶಿಲ್ಪ, ವಿರೂಪಾಕ್ಷ ದೇವಾಲಯದಲ್ಲಿನ ಶಿಲ್ಪ, ಮಲ್ಲಿಕಾರ್ಜುನ ದೇವಾಲಯದಲ್ಲಿನ ಶಿಲ್ಪ ಬಲಕೈಯಲ್ಲಿ ಲಕುಟ ಹಿಡಿದಿದ್ದು, ಎಡಗೈ ಕಟ್ಯವಲಂಬಿತವಾಗಿದೆ.

೮. ಮಹಾಕೂಟದ ಸಂಗಮೇಶ್ವರ ದೇವಾಲಯದಲ್ಲಿನ ಶಿಲ್ಪ, ಅರಳಿ ಗಿಡದ ಕೆಳಗಿನ ಶಿಲ್ಪ, ಪಟ್ಟದಕಲ್ಲಿನ ಕಾಡಸಿದ್ದೇಶ್ವರ ಶಿಲ್ಪ, ಜಂಬುಲಿಂಗ ದೇವಾಲಯದಲ್ಲಿನ ಶಿಲ್ಪ ಇವುಗಳಲ್ಲಿ ಬಲಗೈ ವರಮುದ್ರೆಯಲ್ಲಿದ್ದು, ಎಡಗೈಯಲ್ಲಿ ಪರಶು ಹಿಡಿದಿದ್ದಾನೆ.

೯. ವಿರೂಪಾಕ್ಷ ದೇವಾಲಯದಲ್ಲಿನ ಶಿಲ್ಪ ಬಲಗೈಯಲ್ಲಿ ಪರಶು ಹಿಡಿದಿದ್ದು, ಎಡಗೈ ಕಟ್ಯವಲಂಬಿತವಾಗಿದೆ.

ಶೈವ ಸಂದರ್ಭದಲ್ಲಿ ಲಕುಲೀಶನನ್ನು ಲಕುಲೀಶ ಪಾಶುಪತ ಮತದ ಪ್ರವರ್ತಕನೆಂದು ಭಾವಿಸಲಾಗುತ್ತದೆ. ಈ ಶಿಲ್ಪಗಳಿರುವುದು ಪಾಶುಪತ ಮತದ ಪ್ರಭಾವದ ಸಂಕೇತವೆಂದು ಪರಿಗಣಿಸಬಹುದು.

ಇಲ್ಲಿನ ಶೈವ ದೇವಾಲಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಣುತ್ತಿರುವ ಲಕುಲೀಶ ವಿಗ್ರಹಗಳು, ದೇವಾಲಯಗಳ ಮೇಲೆ ಲಕುಲೀಶ ಪಾಶುಪತರ ಮುದ್ರೆಯ ದ್ಯೋತಕ ವಾಗಿರುವಂತೆ ಕಾಣುತ್ತದೆ. ಈ ದೇಗುಲಗಳಿಗಿಂತ ಪ್ರಾಚೀನವಾದಂತಹ ಬಾದಾಮಿ ಮತ್ತು ಐಹೊಳೆಯ ಶೈವ ಗುಹಾಲಯಗಳಲ್ಲಿ ಲಕುಲೀಶ ವಿಗ್ರಹಗಳು ಇರದಿರುವುದು ಕುತೂಹಲಕಾರಿಯಾಗಿದ್ದು ಬಹುಶಃ ಅವು ಪಾಶುಪತೇತರರ ಶೈವ ದೇಗುಲಗಳೆಂದು ಕಾಣುತ್ತವೆ. ಹೀಗಾಗಿ ನಮಗೆ ದೊರೆಯುವ ಲಕುಲೀಶ ವಿಗ್ರಹಗಳು ಚಾಲುಕ್ಯರ ಕಾಲದ ಉತ್ತರಾರ್ಧದಲ್ಲಿ ಉಂಟಾದ ಲಕುಲೀಶ ಪಾಶುಪತದ ಪ್ರಭಾವದ ಹಾಗೂ ಶೈವ ಮತ ಸ್ವರೂಪದ ಬದಲಾವಣೆಯ ಸಂಕೇತಗಳೆಂದು ಭಾವಿಸಬಹುದು.


[1]     ಸೇತುಮಾಧವಾಚಾರ್,ಆರ್., ಶ್ರೀಮದ್ವಾಯುಪುರಾಣಂ, ಅಧ್ಯಾಯ ೨೩,ಮಂತ್ರ ೨೦೬-೨೧೩, ಪುಟ ೩೭೪-೩೭೫.

[2]     ಎಡತೊರೆ ಚಂದ್ರಶೇಖರಶಾಸ್ತ್ರಿ, ೧೯೪೫:ಶ್ರೀಲಿಂಗಮಹಾಪುರಾಣಂ, ಸಂ-೧,ಅಧ್ಯಾಯ ೨೪, ಮಂತ್ರ ೧೨೨-೧೩೨ (ಅನುವಾದಕ)

[3]     ಹನುಮಂತರಾವ್ ಜಿ., ೧೯೭೨:ಪಾಶುಪತ ಆಗಮಗಳು”(ಸಾಹಿತ್ಯ ವಾಹಿನಿ-೫೦)ಪುಟ ೪.

[4]     ಚೌಬೆ.ಎಂ.ಸಿ., ೧೯೯೭:ಲಕುಲೀಶ ಇನ್ ಇಂಡಿಯನ್ ಆರ್ಟ್‌ಅಂಡ್ ಕಲ್ಚರ್,ಪುಟ ೭೧.

[5]     ಹನುಮಂತರಾವ್.ಜಿ., ಪಾಶುಪತ ಆಗಮಗಳು”(ಸಾಹಿತ್ಯ ವಾಹಿನಿ-೫೦)ಪುಟ ೪.

[6]     ಪಾಡಿಗಾರ್ ಎಸ್.ವಿ., ೧೯೯೮:ಪುರಾತತ್ವ ಮತ್ತು ವೀರಶೈವ ಪರಂಪರೆ”ವೀರಶೈವ ದರ್ಶನ, ‘ಸಂ.’ಹಿರೇಮಠ ಆರ್.ಸಿ. ಪುಟ ೨೯೬.

[7]     ಚೌಬೆ ಎಂ.ಸಿ., ೧೯೯೭:ಲಕುಲೀಶ ಇನ್ ಇಂಡಿಯನ್ ಆರ್ಟ್‌ಅಂಡ್ ಕಲ್ಚರ್,ಪುಟ ೧೧೫.

[8]     ಭಂಡಾರ‌್ಕರ್ ಆರ್.ಜಿ., ೧೯೨೮:ವೈಷ್ಣವಿಜಯಂ, ಶೈವಿಜಂ ಅಂಡ್ ಅದರ್ ಮೈನರ್ ರಿಲಿಜಿಯಸ್ ಸೆಕ್ಟ್ಸ್ಪುಟ ೧೬೫-೧೬೬.

[9]     ಚೌಬೆ ಎಂ.ಸಿ., ೧೯೯೭:ಲಕುಲೀಶ ಇನ್ ಇಂಡಿಯನ್ ಆರ್ಟ್‌ಅಂಡ್ ಕಲ್ಚರ್, ಪುಟ ೧೧೫.