ಮಹಾವಿಷ್ಣುಗೃಹ

ಬದಿಯ ಪಾವಟಿಗೆಗಳನ್ನು ಹತ್ತಿ ಮುಂದೆ ಸಾಗಿದರೆ ಚಾಲುಕ್ಯರ ಪ್ರಸಿದ್ಧ ಗುಹಾಲಯದ ವಿಶಾಲ ಅಂಗಳಕ್ಕೆ ಬರುತ್ತೇವೆ. ಈ ಗುಹಾಲಯದ ಕಂಬವೊಂದರ ಮೇಲಿರುವ ಸಂಸ್ಕೃತ ಶಾಸನವು ಇದನ್ನು ‘ಮಹಾವಿಷ್ಣುಗೃಹ’ವೆಂದು ಬಣ್ಣಿಸಿದೆ. ಹೊರಗೋಡೆಯ ಮೇಲಿನ ಕನ್ನಡ ಶಾಸನವು ಇದನ್ನು ಮಂಗಲೇಶನ ‘ಕಲ್ಮನೆ’ ಎಂದು ಕರೆದಿದೆ. ಚಾಲುಕ್ಯರ ಗುಹಾದೇವಾಲಯ ಗಳಲ್ಲಿ ಇದೇ ಅತ್ಯಂತ ಸುಂದರವಾದುದು, ಕಲಾತ್ಮಕವಾದುದು ಹಾಗೂ ಭವ್ಯವಾದುದು. ಗಾತ್ರದಲ್ಲೂ, ಗುಣದಲ್ಲೂ ಭಾರತದ ಶ್ರೇಷ್ಠ ಗುಹಾಲಯಗಳ ಸಾಲಿಗೆ ಸೇರುವ ಗುಹಾದೇವಾಲಯವಿದು.

ಈ ಮೊದಲಿನ ಎರಡು ಗುಹಾಲಯಗಳನ್ನು ಕೊರೆಯಿಸಿದ ಕಾಲ ನಿಖರವಾಗಿ ತಿಳಿಯದು. ಆದರೆ ಈ ಗುಹಾಲಯವು ಕ್ರಿ.ಶ. ೫೭೮ರಲ್ಲಿ ಪೂರ್ಣಗೊಂಡಿತೆಂಬುದು ಮಂಗಲೇಶನ ಶಾಸನದಿಂದ ತಿಳಿದುಬರುತ್ತದೆ. ಇದೇ ಅತ್ಯಂತ ಹೆಚ್ಚು ಕಲಾತ್ಮಕವಾಗಿುವುದರಿಂದ ಮತ್ತು ವಾಸ್ತುವಿಜ್ಞಾನ ದೃಷ್ಟಿಯಿಂದ ವಿಕಸಿತ ದೇವಾಲಯವಾದ್ದರಿಂದ ಬಾದಾಮಿಯ ಗುಹಾಲಯಗಳಲ್ಲಿ ಇದೇ ಕೊನೆಯ ನಿರ್ಮಾಣವಾಗಿರಬೇಕು. ಉಳಿದೆರಡು ಗುಹಾಲಯಗಳು ಇದಕ್ಕಿಂತ ಮೊದಲಿನವು ಎಂಬುದು ಸರ್ವ ಸ್ವೀಕೃತ ಸಂಗತಿ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿದ್ದ ಕೆ.ಆರ್. ಶ್ರೀನಿವಾಸನ್ ತಮ್ಮ Cave temples of the Pallavas ಎಂಬ ಗ್ರಂಥದಲ್ಲಿ ಒಂದನೆಯ ಮಹೇಂದ್ರವರ್ಮನು ದಕ್ಷಿಣ ಭಾರತದ ಗುಹಾ ವಾಸ್ತುಶಿಲ್ಪದ ಜನಕನೆಂದು ಕರೆದಿದ್ದಾರೆ. ಮಂಡಗಪ್ಪಟ್ಟುನಲ್ಲಿ ಆತನು ಕೊರೆಯಿಸಿದ ಲಕ್ಷಿತ ಗುಹಾದೇವಾಲಯವೇ ಪ್ರಪ್ರಥಮ ಗುಹಾಲಯವೆಂದು ಹೇಳಿದ್ದಾರೆ.

ಇದು ಸತ್ಯಕ್ಕೆ ದೂರವಾದುದು. ಏಕೆಂದರೆ ಒಂದನೆಯ ಮಹೇಂದ್ರವರ್ಮನು ಪಟ್ಟಕ್ಕೆ ಬಂದದ್ದು ಕ್ರಿ.ಶ. ೫೮೦ರಲ್ಲಿ. ಚಾಲುಕ್ಯರ ಕೊನೆಯ ಹಾಗೂ ಶ್ರೇಷ್ಠ ಗುಹಾಲಯವಾದ ಮಹಾವಿಷ್ಣುಗೃಹವು ನಿರ್ಮಾಣವಾದದ್ದು ಕ್ರಿ.ಶ. ೫೭೮ರಲ್ಲಿ. ಅದಕ್ಕಿಂತ ಪೂರ್ವದಲ್ಲಿಯೇ ಬಾದಾಮಿಯ ಶೈವ ಹಾಗೂ ವೈಷ್ಣವ ಗುಹೆ ಹಾಗೂ ಐಹೊಳೆಯ ಶೈವ ಹಾಗೂ ಜೈನ ಗುಹೆಗಳು ರಚನೆಗೊಂಡಿವೆ. ಅಂದರೆ ಪಲ್ಲವರು ಗುಹಾವಾಸ್ತುವನ್ನು ನಿರ್ಮಿಸುವ ಮುನ್ನವೇ ಚಾಲುಕ್ಯರ ನಾಡಿನಲ್ಲಿ ಗುಹಾನಿರ್ಮಾಣ ಕಲೆಯು ಸಮೃದ್ಧವಾಗಿ ಬೆಳೆದಿತ್ತು ಎಂಬುದು ವಿದಿತವಾಗುತ್ತದೆ. ಪಲ್ಲವರು ಗುಹೆಗಳನ್ನು ಕೊರೆಯಿಸಲು ಪ್ರಾರಂಭ ಮಾಡುವ ಮೊದಲೇ ಚಾಲುಕ್ಯರ ಎಲ್ಲ ಗುಹಾಲಯಗಳು ನಿರ್ಮಾಣಗೊಂಡಿದ್ದವು.

ಮಹಾವಿಷ್ಣುಗೃಹವು ಎಪ್ಪತ್ತು ಅಡಿ ಅಗಲವಾಗಿದೆ. ಇಷ್ಟು ಉದ್ದಾದ ಅಧಿಷ್ಠಾನದಲ್ಲಿ ಮೂವತ್ತೈದು ಪುಟ್ಟ ಚೌಕಟ್ಟುಗಳಲ್ಲಿ ಜೋಡಿ ಗಣಗಳು ಮೂಡಿಬಂದಿವೆ. ಈ ಅಧಿಷ್ಠಾನದ ಭಾಗವು ಕಟ್ಟಿ ಮಾಡಲಾದ (ರಾಚನಿಕ)ಕಟ್ಟೆ. ಈ ವೇಳೆಗೆ (ಕ್ರಿ.ಶ. ೫೭೮) ಕಲ್ಲಿನ ಕಟ್ಟಡ ನಿರ್ಮಾಣ ಪ್ರಾರಂಭವಾಗಿತ್ತೆಂಬುದನ್ನು ಅಧಿಷ್ಠಾನ ಹಾಗೂ ಗುಹಾಲಯದ ಅಂಗಳದ ಪೂರ್ವದ ಗೋಡೆಗಳು ಸೂಚಿಸುತ್ತವೆ. ಗುಹಾಲಯದ ಛತ್ತಿನಿಂದ ಮುಂಜೂರು ಅಧಿಷ್ಠಾನದ ಮೇಲೆ ಇಳಿಬಿದ್ದಂತೆ ಭಾಸವಾಗುತ್ತದೆ. ಮುಂಜೂರಿನ ಮಧ್ಯದಲ್ಲಿ ರೆಕ್ಕೆಗಳನ್ನು ಬಿಚ್ಚಿಕೊಂಡ ಗರುಡನ ಮೂರ್ತಿ ಇದೆ. ಇದು ಪ್ರಾಯಶಃ ನೆಲವಱ್ಕೆ ಎಂಬ ರೂವಾರಿಯ ಕಲಾಕೃತಿ. ಈ ಶಿಲ್ಪದ ಪಶ್ಚಿಮ ಬದಿಯಲ್ಲಿ ಬಹಳಷ್ಟು ನಶಿಸಿಹೋದ ವರ್ಣಚಿತ್ರಗಳಿವೆ. ಹಿಂದೂ ದೇವಾಲಯದಲ್ಲಿ ಕಾಣಸಿಗುವ ಅತಿ ಪ್ರಾಚೀನ ವರ್ಣಚಿತ್ರಗಳಿವು.

ಬೋದಿಗೆ ಶಿಲ್ಪಗಳು : ಕಂಬಗಳ ಮೇಲ್ಭಾಗದಲ್ಲಿ ತರಂಗ ಬೋದಿಗೆಗಳಿರುವುದು ಚಾಲುಕ್ಯರ ಒಂದು ವಾಸ್ತುವಿಶೇಷ. ಹಾಗೆಯೇ ಬೋದಿಗೆ ಶಿಲ್ಪಗಳೂ ಕೂಡ ಅವರ ಕೊಡುಗೆ. ಮಹಾವಿಷ್ಣುಗೃಹದಲ್ಲಿ ಮಧ್ಯಮ ಗಾತ್ರದ (ಸು. ೧ ಮೀಟರ್) ಇಪ್ಪತ್ನಾಲ್ಕು ಬೋದಿಗೆ ಶಿಲ್ಪಗಳಿವೆ. ಇವು ಸಾಮಾನ್ಯವಾಗಿ ಲೌಕಿಕ ಶಿಲ್ಪಗಳು. ಬಹುಪಾಲು ಬೋದಿಗೆಗಳಲ್ಲಿ ರಸಿಕ ದಂಪತಿಗಳಿದ್ದಾರೆ. ರೂವಾರಿಗಳು ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಈ ಶಿಲ್ಪಗಳಲ್ಲಿ ಘನೀಕರಿಸಿದ್ದಾರೆ.

ಅವತಾರ ಶಿಲ್ಪಗಳು : ಮಹಾವಿಷ್ಣುಗೃಹದ ಬೃಹತ್ತು, ಮಹತ್ತುಗಳು ಅಲ್ಲಿನ ವಿಷ್ಣು ಅವತಾರದ ಶಿಲ್ಪಗಳಲ್ಲಿ ಪ್ರಕಟವಾಗಿವೆ. ಅಧಿಷ್ಠಾನಕ್ಕೆ ಹೊಂದಿಕೊಂಡಿರುವ ಪೂರ್ವದ ಗೋಡೆಯಲ್ಲಿ ವಿಷ್ಣು ವಿರಾಟ್ ಪುರುಷನಾಗಿ ಶಿಲ್ಪಿತನಾಗಿದ್ದಾನೆ. ಈತನು ಅಷ್ಟಭುಜಗಳ ವಿಷ್ಣು, ಕೈಗಳಲ್ಲಿ ಖಡ್ಗ, ಗದೆ, ಬಾಣ, ಚಕ್ರ, ಶಂಖ, ಢಾಲು, ಬಿಲ್ಲುಗಳನ್ನು ಹಿಡಿದು ಕೊಂಡಿದ್ದಾನೆ. ಬೀಸಣಿಕೆಯಂತೆ ಕಾಣುವ ಶಿರಶ್ಚಕ್ರವು ಹೆಚ್ಚು ಆಕರ್ಷಕವಾಗಿದೆ. ಇಡೀ ವಿಗ್ರಹವು ಆಭರಣಗಳಿಂದ ಅಂದಗೊಂಡಿದೆ.

ಈ ಮೂರ್ತಿಗೆ ಎದುರಾಗಿ ಪಶ್ಚಿಮ ಗೋಡೆಯಲ್ಲಿ ತ್ರಿವಿಕ್ರಮನ ವಿರಾಟ ರೂಪವಿದೆ. ಇದೊಂದು ಭವ್ಯ, ಬೃಹತ್ ಶಿಲ್ಪ. ತ್ರಿವಿಕ್ರಮನ ಪಕ್ಕದಲ್ಲಿ ಆಧುನಿಕರು ಬಳಸುವ ‘Flash back’ ತಂತ್ರದ ಸನ್ನಿವೇಶವಿದೆ. ಕುಬ್ಜ ಬ್ರಾಹ್ಮಣನ ರೂಪದಲ್ಲಿ ವಿಷ್ಣು ಬಲಿಯ ಗುರುಗಳಾದ ಶುಕ್ರಾಚಾರ್ಯರಿಂದ ಅರ್ಘ್ಯ ಸ್ವೀಕರಿಸುವ ದೃಶ್ಯವಿದೆ. ಬಲಿ ಮಡದಿ ವಿಂಧ್ಯಾವಲಿಯೊಂದಿಗೆ ನಿಂತಿದ್ದಾನೆ. ಇದೊಂದು ಕಥಾನಕ ಶಿಲ್ಪ. ಅಷ್ಟಭುಜ ತ್ರಿವಿಕ್ರಮನು ಖಡ್ಗ, ಗದೆ, ಬಾಣ, ಚಕ್ರ, ಶಂಖ, ಬಿಲ್ಲು, ಢಾಲು ಹಿಡಿದುಕೊಂಡು ನಿಂತಿದ್ದಾನೆ. ‘ಆಕಾಶವನ್ನೂ ಆವರಿಸಿರುವೆ’ ಎಂದು ಹೇಳುವ ರೀತಿಯಲ್ಲಿ ತ್ರಿವಿಕ್ರಮನು ಒಂದು ಕೈಯನ್ನು ರಾಹುವಿನತ್ತ ಚಾಚಿದ್ದಾನೆ. ಶಿಲ್ಪವು ನಾಟಕೀಯ ದೃಶ್ಯವನ್ನು ಕಣ್ಣಿಗೆ ಕಟ್ಟುತ್ತದೆ.

ಗುಹಾಲಯದ ಪೂರ್ವಗೋಡೆಯಲ್ಲಿ ಅಪರೂಪದ ಭಂಗಿಯಲ್ಲಿ ಅನಂತಾಸೀನ ವಿಷ್ಣು ವಿರಾಜಮಾನನಾಗಿದ್ದಾನೆ. ಈ ಶಿಲ್ಪವು ಸಿಂಹಾಸನಾರೂಢನಾದ ಚಾಲುಕ್ಯ ಅರಸನನ್ನು ನೆನಪಿಸುವಂತಿದೆ. ಚತುರ್ಭುಜನಾಗಿರುವ ಪರವಾಸುದೇವನು ಶಂಖ ಚಕ್ರಧಾರಿಯಾಗಿದ್ದಾನೆ. ಅನಂತನ ಐದು ಹೆಡೆಗಳು ಸಿಂಹಾಸನದ ಸತ್ತಿಗೆಯಂತೆ ತೋರುತ್ತವೆ. ಮೂರು ಸುತ್ತಿನ ಅನಂತನಿಗೆ ಒರಗಿಕೊಂಡು ಗರುಡ ಕೈಕಟ್ಟಿಕೊಂಡು ನಿಶ್ಚಿಂತನಾಗಿ ಕುಳಿತುಕೊಂಡಿದ್ದಾನೆ. ಇನ್ನೊಂದು ಬದಿಯಲ್ಲಿ ಲಕ್ಷ್ಮಿ ಆತುಕೊಂಡಿದ್ದಾಳೆ. ಶಿಲ್ಪಗಳ ಸಂಯೋಜನೆಯಲ್ಲಿ ಶಿಲ್ಪಿ ತನ್ನ ಪ್ರೌಢಿಮೆಯನ್ನು ತೋರಿದ್ದಾನೆ. ಪ್ರಧಾನ ಶಿಲ್ಪದಲ್ಲಿ ದೈವತ್ವವು ಘನೀಭವನಗೊಂಡಿದೆ. ಈ ಬೃಹತ್ ಶಿಲ್ಪದ ಕೆಳಗಿನ ಗಣ ಪಟ್ಟಿಕೆಯಲ್ಲಿ ಸಂಗೀತಗಾರರ ಮೇಳವಿದೆ.

ಪರವಾಸುದೇವನ ಪಕ್ಕದಲ್ಲಿ ಭೂವರಾಹನ ಬೃಹತ್ ಶಿಲ್ಪವನ್ನು ಕಂಡರಿಸಲಾಗಿದೆ. ಇವನು ಕೂಡ ಚತುರ್ಭುಜನು. ಮೇಲಿನ ಕೈಗಳಲ್ಲಿ ಶಂಖ, ಚಕ್ರಗಳಿವೆ. ಕೆಳ ಎಡಗೈಯಲ್ಲಿ ಭೂದೇವಿಯನ್ನು ಎತ್ತಿ ಹಿಡಿದಿದ್ದಾನೆ. ಆತನು ಹಿಡಿದ ಕಮಲದ ಮೇಲೆ ಭೂದೇವಿ ನಿಂತು ಬಲಗೈಯನ್ನು ವರಾಹನ ಭುಜದ ಮೇಲಿರಿಸಿ ಆಸರೆ ಪಡೆದಿದ್ದಾಳೆ. ಇನ್ನೊಂದು ಕೈಯಲ್ಲಿ ನೀಲೋತ್ಪಲವಿದೆ. ರಸಾತಲವನ್ನು ಸೂಚಿಸುವ ನಾಗರಾಜ, ನಾಗಿಣಿಯರನ್ನು ಹೆಚ್ಚು ಶಕ್ತಿಯುತವಾಗಿ, ಕಲಾತ್ಮಕವಾಗಿ ಬಿಡಿಸಲಾಗಿದೆ. ಶಿಲ್ಪ ಸಂಯೋಜನೆಯ ಸಮತೋಲನಕ್ಕಾಗಿ ಮೇಲ್ಭಾಗದಲ್ಲಿ ವಿದ್ಯಾಧರ ಂಪತಿಗಳನ್ನು ಕೆತ್ತಲಾಗಿದೆ.

ಪರವಾಸುದೇವನಿಗೆ ಎದುರಾಗಿ ಪಶ್ಚಿಮ ಗೋಡೆಯಲ್ಲಿ ಮೂಡಿಬಂದ ಭವ್ಯ ವಿಗ್ರಹ ನರಸಿಂಹನದು. ಈತನೂ ಚತುರ್ಭುಜನೇ. ವಾಡಿಕೆಯಂತೆ ಮೇಲಿನ ಕೈಗಳಲ್ಲಿ ಶಂಖ, ಚಕ್ರಗಳಿವೆ. ನರಸಿಂಹ ನಿಂತಿರುವ ಭಂಗಿ ಅಪರೂಪದ್ದಾಗಿದೆ. ಇದು ನರಸಿಂಹನ ಉಗ್ರ ರೂಪವಲ್ಲ. ನೆಲದ ಮೇಲೆ ಇರಿಸಿರುವ ಗದೆಯ ಮೇಲೆ ಎಡಗೈಯನ್ನು ಊರಿದ್ದಾನೆ. ಬಂಡೆಗಲ್ಲಿನಿಂದ ಕೈಕಾಲುಗಳನ್ನು ಪೂರ್ಣವಾಗಿ ಬಿಡಿಸಿರುವಂತೆ ಕೆತ್ತನೆ ಮಾಡಿರುವುದರಿಂದ ಇದೊಂದು ದುಂಡುಶಿಲ್ಪ ಎಂಬ ಭಾವನೆ ಬರುತ್ತದೆ. ನರಸಿಂಹನ ತಲೆಯ ಮೇಲಿನ ಪದ್ಮ ಕಿರೀಟವು ಯೋಗಚಕ್ರದ ಸಹಸ್ರಾರು ಕಮಲವನ್ನು ಸಂಕೇತಿಸುತ್ತದೆ. ಆತನ ಬಲಕ್ಕಿರುವ ಪುಟ್ಟ ಮೂರ್ತಿ ಪ್ರಹ್ಲಾದನದು.

ನರಸಿಂಹನ ಬಲಪಕ್ಕದಲ್ಲಿ ಹರಿಹರನ ಬೃಹದಾಕಾರದ ವಿಗ್ರಹವಿದೆ. ಶಿವನ ಅರ್ಧಭಾಗದಲ್ಲಿ ಸರ್ಪ, ಅರ್ಧಚಂದ್ರ, ಪರಶುಗಳಿವೆ. ಶಿವನಿಗೆ ಜಟಾಮಕುಟವಿದೆ. ಆದರೆ ವಿಷ್ಣು ಮಕುಟಧರನಾಗಿದ್ದಾನೆ. ಶಂಖಧಾರಿಯೂ ಹೌದು. ಶೈವಗುಹೆಯ ಹರಿಹರ ವಿಗ್ರಹದಲ್ಲಿರುವಂತೆ ಇಲ್ಲಿ ಲಕ್ಷ್ಮಿ ಪಾರ್ವತಿಯರಿಲ್ಲ. ನಂತರದ ಹರಿಹರ ಶಿಲ್ಪಗಳಲ್ಲಿ ಇದು ವಾಡಿಕೆಯಾಯಿತು. ಇದು ಹರಿಹರ ಮೂರ್ತಿಯ ಪ್ರತಿಮಾ ಲಕ್ಷಣವಾಗಿ ಉಳಿಯಿತು.

ಈ ಮೇಲೆ ಪ್ರಸ್ತಾಪಿಸಲಾದ ಬೃಹತ್ ಶಿಲ್ಪಗಳಲ್ಲಿ ಪರವಾಸುದೇವ ಮತ್ತು ಭೂವರಾಹ ಪ್ರತಿನಿಧಿಸುವ ಶಿಲ್ಪಗಳು ಮಾತ್ರ ಮೂಲವಿಗ್ರಹಗಳೆಂದೂ, ಉಳಿದವುಗಳು ತದನಂತರದ ಕಾಲದಲ್ಲಿ ನಿರ್ಮಿತವಾದವುಗಳೆಂದೂ ಕೆಲವರ ವಾದ. ಈ ವಾದವನ್ನು ಒಪ್ಪಲಾಗದು.

ಮುಖಮಂಟಪದ ತೊಲೆಗಳಲ್ಲಿ ಮಹಾಭಾರತ, ಹರಿವಂಶ, ವಿಷ್ಣು ಪುರಾಣಗಳಿಂದ ಆಯ್ದ ಸನ್ನಿವೇಶಗಳನ್ನು ಮೂರ್ತಗೊಳಿಸಲಾಗಿದೆ. ಈ ಬಗೆಯ ಕಥಾನಕ ಶಿಲ್ಪಗಳ ಪರಂಪರೆಯನ್ನು ದಕ್ಷಿಣದಲ್ಲಿ ಪ್ರಾರಂಭಿಸಿದವರು ಚಾಲುಕ್ಯ ರೂವಾರಿಗಳು. ನಂತರ ಈ ಬಗೆಯ ಶಿಲ್ಪಪಟ್ಟಿಕೆಗಳನ್ನು ರಾಚನಿಕ ಮಂದಿರಗಳಲ್ಲೂ ಅಳವಡಿಸಿದರು. ಮಹಾವಿಷ್ಣುಗೃಹವು ಶಿಲ್ಪಪ್ರಯೋಗ ಶಾಲೆ ಎನಿಸಿದೆ.

ಜಿನಾಲಯ

ಬಾದಾಮಿಯ ಗುಹಾದೇವಾಲಯಗಳಲ್ಲಿ ಇದು ಅತಿ ಚಿಕ್ಕದು. ಕಂಬ ಮತ್ತು ಛತ್ತುಗಳಿಗೆ ಹೆಚ್ಚಿನ ಅಲಂಕಾರವಿಲ್ಲದ ಸರಳ, ಸಾದಾ ಗುಹಾಲಯ. ಸಾಮಾನ್ಯವಾಗಿ ಮುಖಮಂಟಪಕ್ಕಿಂತ ಸಭಾಮಂಟಪವು ದೊಡ್ಡದಾಗಿರುತ್ತದೆ. ಇಲ್ಲಿಯ ಸಭಾಮಂಟಪ ಮುಖಮಂಟಪಕ್ಕಿಂತ ಚಿಕ್ಕದು. ಬಾದಾಮಿಯ ಉಳಿದ ಗುಹಾಲಯಗಳಲ್ಲಿ ಕಂಡುಬರುವಂತೆ ಇದರ ಅಧಿಷ್ಠಾನದಲ್ಲಿ ಗಣಪಟ್ಟಿಕೆ ಇಲ್ಲ.

ಈ ಜಿನಾಲಯದ ಮುಖಮಂಟಪದ ಕಂಬಗಳ ಕೆಳಗೆ ಸಿಂಹಗಳು ಆಸರೆ ನೀಡುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಬಾದಾಮಿಯನ್ನು ವಶಪಡಿಸಿಕೊಂಡ ಪಲ್ಲವರು ಈ ಮಾದರಿಯಿಂದ ಪ್ರಭಾವಿತರಾಗಿರಬೇಕು. ಕಂಬವನ್ನು ಹೊತ್ತಿರುವ ಸಿಂಹಗಳು ಪಲ್ಲವರ ವಾಸ್ತುಶಿಲ್ಪದ ಭಾಗವಾಗಿವೆ. ಈ ಶಿಲ್ಪ ಪ್ರಕಾರವನ್ನು ಪಲ್ಲವರು ಅನುಸರಿಸಿ, ಬೆಳೆಸಿದರು. ಚಾಲುಕ್ಯರು ತಮ್ಮ ಈ ಶಿಲ್ಪವನ್ನು ಮುಂದುವರಿಸಲಿಲ್ಲ.

ಜಿನಾಲಯದ ಪ್ರಧಾನ ಶಿಲ್ಪಗಳೆಂದರೆ ಗರ್ಭಗೃಹದಲ್ಲಿಯ ಮಹಾವೀರ, ಮುಖಮಂಟಪದ ಪೂರ್ವ ಮತ್ತು ಪಶ್ಚಿಮ ಗೋಡೆಗಳಲ್ಲಿರುವ ಬಾಹುಬಲಿ ಮತ್ತು ಪಾರ್ಶ್ವನಾಥರ ಶಿಲ್ಪಗಳು. ಗರ್ಭಗೃಹದಲ್ಲಿ ಮಹಾವೀರನು ಪದ್ಮಾಸನದಲ್ಲಿ ಧ್ಯಾನಸ್ಥನಾಗಿ ಕುಳಿತಿದ್ದಾನೆ. ಈ ಶಿಲ್ಪವು ಇಡೀ ಗೋಡೆಯನ್ನು ಆವರಿಸಿದೆ. ದೀಘ ವೃತ್ತಾಕಾರದ ಪ್ರಭಾವಳಿ, ಮುಕ್ಕೊಡೆ, ಮಕರ ವಿನ್ಯಾಸಗಳಿಂದ ಕೂಡಿದ ಸಿಂಹಾಸನಗಳು ಶಿಲ್ಪದ ಕಲಾ ಮೌಲ್ಯವನ್ನು ಹೆಚ್ಚಿಸಿವೆ. ಅದರಂತೆ ಗರ್ಭಗೃಹದ ಬಾಗಿಲುವಾಡವು ಪುಷ್ಪಶಾಖೆ, ವಜ್ರಶಾಖೆ ಮೊದಲಾದವುಗಳಿಂದ ಶೋಭಿತ ವಾಗಿದೆ.

ಮುಖಮಂಟಪದ ಪೂರ್ವದ ಗೋಡೆಯಲ್ಲಿ ಕಾಯೋತ್ಸರ್ಗ ಮುದ್ರೆಯಲ್ಲಿ ಬಾಹುಬಲಿ ದಿಗಂಬರನಾಗಿ ನಿಂತಿದ್ದಾನೆ. ಆತನ ಕೈಕಾಲುಗಳನ್ನು ಮಾಧವಿ ಲತೆ ಸುತ್ತಿಕೊಂಡಿದೆ. ಕಾಲಿನ ಹತ್ತಿರ ಹುತ್ತಗಳಿವೆ. ಹಾವುಗಳು ಹರಿದಾಡುತ್ತಿವೆ. ಬಾಹುಬಲಿಯ ಸೋದರಿಯರಾದ ಬ್ರಾಹ್ಮಿ ಮತ್ತು ಸುಂದರಿಯರು ಬಳ್ಳಿಯನ್ನು ಬಿಡಿಸುವ ಸನ್ನಿವೇಶದ ಚಿತ್ರಣವಿದು. ಬಾಹುಬಲಿಯ ಮೂರ್ತಿ ಪ್ರಧಾನವಾದ್ದರಿಂದ ಅದನ್ನು ರೂವಾರಿ ಪೂರ್ಣಗೊಳಿಸಿದ್ದಾನೆ. ಉಳಿದ ಶಿಲ್ಪಗಳು ಗೌಣವಾದ್ದರಿಂದ ಅವುಗಳ ಕೆತ್ತನೆ ಅಪೂರ್ಣವೆನಿಸುತ್ತದೆ.

ಪಶ್ಚಿಮದ ಗೋಡೆಯನ್ನು ಅಲಂಕರಿಸಿರುವ ಶಿಲ್ಪ ಪಾರ್ಶ್ವನಾಥನದು. ಈತನದು ಕೂಡ ಕಾಯೋತ್ಸರ್ಗ ನಿಲುವು. ಬಲಗಡೆ ಪದ್ಮಾವತಿ ಯಕ್ಷಿಯು ಕೊಡೆ ಹಿಡಿದುಕೊಂಡು ನಿಂತಿದ್ದಾಳೆ. ಐದು ಹೆಡೆಯ ಹಾವಾಗಿ ಧರಣೇಂದ್ರ ಯಕ್ಷನು ತೀರ್ಥಂಕರನ ಸೇವೆಯಲ್ಲಿ ನಿರತನಾಗಿದ್ದಾನೆ. ಪಾರ್ಶ್ವನಾಥನ ಜನ್ಮಾಂತರ ವೈರಿಯಾದ ಕಮಠನು ತೀರ್ಥಂಕರನ ಮೇಲೆ ಕಲ್ಲೆಸೆದು ಪೀಡಿಸುತ್ತಿರುವಂತೆ ಚಿತ್ರಣ ಮಾಡಲಾಗಿದೆ.

ಇಲ್ಲಿಯ ಉಳಿದ ಗುಹಾಲಯಗಳ ಸಭಾಮಂಟಪ ಗೋಡೆಗಳಲ್ಲಿ ಶಿಲ್ಪಗಳನ್ನು ರೂಪಿಸಿಲ್ಲವೆಂಬುದು ಗಮನಾರ್ಹ ಸಂಗತಿ. ಆದರೆ ಈ ಪುಟ್ಟ ಗುಹೆಯ ಮಿಥ್ಯಾ(?) ಸಭಾಮಂಟಪದ ಎಡಬಲದ ಗೋಡೆಗಳಲ್ಲಿ ಖಡ್ಗಾಸನದಲ್ಲಿರುವ ಮಹಾವೀರನ ಬೃಹತ್ ವಿಗ್ರಹಗಳಿವೆ. ಇವು ಮೂಲವಾದವುಗಳಲ್ಲ. ಇವನ್ನು ನಂತರದ ಕಾಲದಲ್ಲಿ ಕಂಡರಿಸಲಾಗಿದೆ. ಇವು ಪ್ರಾಯಶಃ ೧೧ನೆಯ ಶತಮಾನದ ಕಲಾಕೃತಿಗಳು.

ಆ. ರಾಚನಿಕ ದೇವಾಲಯಗಳು

ತಮ್ಮ ರಾಜಧಾನಿಯ ಘನತೆಯನ್ನು ಹೆಚ್ಚಿಸಲು ಚಾಲುಕ್ಯರು ಬಾದಾಮಿಯಲ್ಲಿ ಗುಹಾದೇವಾಲಯಗಳನ್ನು ಕೊರೆಯಿಸುವುದರ ಜೊತೆಗೆ ರಾಚನಿಕ ದೇವಾಲಯಗಳನ್ನು ಕೂಡ ನಿರ್ಮಿಸಿದರು. ಅವುಗಳಲ್ಲಿ ಕೆಳಗಿನ ಶಿವಾಲಯ, ಮೇಲಿನ ಶಿವಾಲಯ ಮತ್ತು ಮಾಲೆಗಿತ್ತಿ ಶಿವಾಲಯಗಳನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. (ಮೂಲತಃ ಇವಾವೂ ಶಿವಾಲಯಗಳಲ್ಲ) ಭೂತನಾಥ ಗುಡಿಯನ್ನು ಅಗಸ್ತ್ಯತೀರ್ಥದ ಪೂರ್ವದ ದಂಡೆಯ ಮೇಲೆ, ಜಂಬುಲಿಂಗ ಗುಡಿಯನ್ನು ಮತ್ತು ಪಶ್ಚಿಮದ ದಂಡೆಯಿಂದ ಅನತಿ ದೂರದಲ್ಲಿ ರಚಿಸಲಾಗಿದೆ. ಗಚ್ಚುಗಾರೆಯಂತಹ ಯಾವ ಬಂಧಕ ವಸ್ತುವನ್ನು ಬಳಸದೆ ಇರುವುದೊಂದು ವಿಸ್ಮಯದ ಸಂಗತಿ. ದೈತ್ಯಗಾತ್ರದ ಕಲ್ಲುಗಳನ್ನು ಒಂದರ ಮೇಲೆ ಒಂದನ್ನು ಇಟ್ಟು ಕಟ್ಟಲಾಗಿದೆ. ಇವು ಸರಿದಾಡದಂತೆ ಕಬ್ಬಿಣದ ಮೊಳೆಗಳನ್ನು ಮತ್ತು ಇಂಗ್ಲಿಷ್ ಚಿ ಅಕ್ಷರದಂತಿರುವ ಕಬ್ಬಿಣದ ಕೊಂಡಿಗಳನ್ನು ಬಳಸಲಾಗಿದೆ. ಗುಡಿ ನಿರ್ಮಾಣದಲ್ಲಿ ಚಾಲುಕ್ಯರು ತೋರಿದ ಆಸ್ಥೆ ಉತ್ಸಾಹಗಳು, ಸ್ಥಪತಿಗಳು ಸಾಧಿಸಿದ ವಾಸ್ತುವಿದ್ಯೆ ಮತ್ತು ರೂವಾರಿಗಳ ಪ್ರದರ್ಶಿಸಿದ ಕಲಾ ಪ್ರೌಢಿಮೆ ಪ್ರಶಂಸನೀಯವಾಗಿವೆ.

ಕೆಳಗಿನ ಶಿವಾಲಯ

ಬಾದಾಮಿಯ ಉತ್ತರ ಗುಡ್ಡದ ಅರ್ಧ ಎತ್ತರದಲ್ಲಿ ಗರ್ಭಗೃಹ ಮತ್ತು ಶಿಖರ ಭಾಗಗಳನ್ನು ಮಾತ್ರ ಉಳಿಸಿಕೊಂಡು ನಿಂತಿರುವ ದ್ರಾವಿಡ ವಿಮಾನ ಮಾದರಿಯ ದೇವಾಲಯವಿದೆ. ಇದನ್ನು ಕೆಳಗಿನ ಶಿವಾಲಯವೆಂದು ಕರೆಯಲಾಗುತ್ತದೆ. ಆದರೆ ಮೂಲತಃ ಶಿವಾಲಯವಲ್ಲ. ಬಾಗಿಲುವಾಡವು ಶಾಖೆಗಳಿಂದ ಶೋಭಿತವಾಗಿದೆ. ಪ್ರದಕ್ಷಿಣಾ ಪಥದ ಹೊರಗೋಡೆ, ಸಭಾಮಂಟಪ ಮತ್ತು ಮುಖಮಂಟಪಗಳು ಬಿದ್ದು ಹೋಗಿವೆ. ಗರ್ಭಗೃಹದಲ್ಲಿನ ಪೀಠವು ದೀರ್ಘ ವೃತ್ತಾಕಾರವಾಗಿದೆ. ಈ ಅಂಶವನ್ನು ಆಧರಿಸಿ ಡಾ. ಅ. ಸುಂದರ ಅವರು ಇದು ಮೂಲತಃ ವಾತಾಪಿ ಗಣಪತಿಯ ಮಂದಿರವಾಗಿರಬಹುದೆಂದು ಅಭಿಪ್ರಾಯಪಡುತ್ತಾರೆ.

ಮೇಲಿನ (ಮೇಲಣ) ಶಿವಾಲಯ

ಉತ್ತರ ಬೆಟ್ಟದ (ಬಾವನ ಬಂಡೆ ಕೋಟೆಯ) ಮೇಲೆ ಆಕಾಶದ ಹಿನ್ನೆಲೆಯಲ್ಲಿ ವೀಕ್ಷಕನ ಮನಸೆಳೆಯುವ ದೇವಾಲಯವಿದು. ಇದು ಶಿವಾಲಯವಾಗಿರದೆ ಮೂಲತಃ ವಿಷ್ಣು ಮಂದಿರವಾಗಿತ್ತೆಂಬುದು ಸ್ಪಷ್ಟ. ದೇವಾಲಯವು ವೈಷ್ಣವ ಶಿಲ್ಪಗಳಿಂದ ಅಲಂಕೃತವಾಗಿದೆ. ಪ್ರದಕ್ಷಿಣಾ ಪಥದ ಹೊರಗೋಡೆಗಳಲ್ಲಿಯ ದೇವಕೋಷ್ಠಗಳಲ್ಲಿ ಪ್ರಧಾನಶಿಲ್ಪಗಳಿವೆ. ಇವೆಲ್ಲವೂ ವಿಷ್ಣುವಿನ ಮೂರ್ತಿಗಳು. ಉತ್ತರ, ಪಶ್ಚಿಮ ಹಾಗೂ ದಕ್ಷಿಣ ದೇವಕೋಷ್ಠಗಳಲ್ಲಿ ಕ್ರಮವಾಗಿ ನರಸಿಂಹ, ಕಾಳಿಂಗ ಮರ್ದನ ಕೃಷ್ಣ ಮತ್ತು ಗೋವರ್ಧನ ಗಿರಿಧಾರಿ ಸ್ಥಾಪಿತವಾಗಿದ್ದಾರೆ. ಅಧಿಷ್ಠಾನದಲ್ಲಿ ರಾಮಾಯಣ ಮತ್ತು ಕೃಷ್ಣನ ಜೀವನವನ್ನು ಬಿಂಬಿಸುವ ಕಥಾನಕ ಶಿಲ್ಪ ಪಟ್ಟಿಕೆಗಳಿವೆ. ಈ ಸಾಂಧಾರ ದೇವಾಲಯದ ಶಿಖರವು ದ್ರಾವಿಡ ಶೈಲಿಯದು.

ಮಾಲೆಗಿತ್ತಿ ಶಿವಾಲಯ

ಮಾಲೆಗಿತ್ತಿ ಶಿವಾಲಯವು ಮೂಲತಃ ಸೂರ್ಯ ದೇವಾಲಯ. ಇದನ್ನು ಆರ್ಯಮಂಚಿ ಉಪಾಧ್ಯಾಯ ಎಂಬ ಸ್ಥಪತಿಯು ನಿರ್ಮಿಸಿದನು. ಮುಖಮಂಟಪ, ಸಭಾಮಂಟಪ, ಅಂತರಾಳ ಮತ್ತು ಗರ್ಭಗುಡಿಗಳಿಂದ ಕೂಡಿದ ನಿರಂಧಾರ ದೇವಾಲಯವಿದು. ಶುದ್ಧ ದ್ರಾವಿಡ ಶೈಲಿಯ ಶಿಖರ ಇದರದು. ಗರ್ಭಗುಡಿಯ ಬಾಗಿಲುವಾಡದ ಲಲಾಟದಲ್ಲಿ ಗರುಡಶಿಲ್ಪ, ಸಭಾಮಂಟಪದ ಛತ್ತಿನಲ್ಲಿ ವಿಷ್ಣು ಮೂರ್ತಿ ಇರುವುದನ್ನು ಕಂಡು ಹೆನ್ರಿ ಕಜಿನ್ಸ್‌ರು ಇದನ್ನು ವೈಷ್ಣವ ಗುಡಿ ಎಂದು ಭಾವಿಸಿದರು. ದೇವಾಲಯದ ಪೂರ್ವದ ಗೋಡೆಯ ಮೇಲೆ ಮುಖಮಂಟಪದ ಎಡಬಲಗಳಲ್ಲಿರುವ ಮಧ್ಯಮ ಗಾತ್ರದ ಶಿಲ್ಪಗಳನ್ನು ಯೋಧರ ಶಿಲ್ಪಗಳೆಂದು ತಿಳಿದರು. ವಸ್ತುತಃ ಗರುಡನ ಮೇಲೆ ಛತ್ತಿಗೆ ಸಮೀಪವಾಗಿ ಏಳು ಕುದುರೆಗಳ ರಥದಲ್ಲಿ ಸೂರ್ಯನ ಮೂರ್ತಿ ಇದೆ. ಪೂರ್ವದ ಗೋಡೆಯ ಮೇಲಿರುವ ಪ್ರತಿಮೆಗಳು ಸೂರ್ಯನ ದ್ವಾರಪಾಲಕರಾದ  ದಂಡ ಮತ್ತು ಪಿಂಗಳರವು. ಗರ್ಭಗುಡಿಯ ಬಾಗಿಲುವಾಡದ ಹತ್ತಿರ ಭಾಗಶಃ ಕುದುರೆಯ ದೇಹವಿರುವ ಸ್ತ್ರೀಯ ಶಿಲ್ಪವಿದೆ.

ಪುರುಷನೊಬ್ಬನು ಕುದುರೆಯ ಬೆನ್ನಿನ ಮೇಲೆ ಕಾಲಿಟ್ಟು ಅವಳ ಕೇಶರಾಶಿಯನ್ನು ಹಿಡಿದಿರುವಂತೆ ಶಿಲ್ಪಿಸಲಾಗಿದೆ. ಇವು ಛಾಯಾ ಮತ್ತು ಸೂರ್ಯರ ಮೂರ್ತಿಗಳು.

ಈ ದೇವಾಲಯದ ದಕ್ಷಿಣಗೋಡೆಯ ದೇವಕೋಷ್ಠದಲ್ಲಿ ಶಿವ ಮತ್ತು ಉತ್ತರ ಗೋಡೆಯ ದೇವಕೋಷ್ಠದಲ್ಲಿ ವಿಷ್ಣು ವಿಗ್ರಹಗಳನ್ನು ಕಂಡರಿಸಲಾಗಿದೆ. ಶಿವನು ಫಲ, ಸರ್ಪ, ತ್ರಿಶೂಲಗಳನ್ನು ಹಿಡಿದುಕೊಂಡು ಕಟ್ಯವಲಂಬಿತ ಹಸ್ತನಾಗಿ ನಿಂತುಕೊಂಡಿದ್ದಾನೆ. ಆತನ ಎಡಬಲಗಳಲ್ಲಿ ಋಷಿಗಳನ್ನು, ಮೇಲ್ಭಾಗದಲ್ಲಿ ಮಾಲಾವಾಹಕರನ್ನು ರೂಪಿಸಲಾಗಿದೆ. ಒಟ್ಟಾರೆ ಈ ಶಿಲ್ಪವು ಗುಪ್ತರ ಶಿಲ್ಪಶೈಲಿಯಲ್ಲಿ ಮೂಡಿಬಂದಿದೆ. ಉತ್ತರ ಗೋಡೆಯ ಮೇಲಿರುವ ವಿಷ್ಣುಮೂರ್ತಿಯೂ ಇದೇ ಶೈಲಿಯದು. ವಿಷ್ಣು ಫಲ, ಚಕ್ರ, ಶಂಖ ಹಿಡಿದು ಕಟ್ಯವಲಂಬಿತ ಹಸ್ತನಾಗಿ ನಿಂತಿದ್ದಾನೆ. ಚಕ್ರ, ಶಂಖಗಳ ಹತ್ತಿರ ಒಬ್ಬೊಬ್ಬ ಗಣರಿದ್ದಾರೆ. ಇವರು ಆಯುಧ ಪುರುಷರು. ಹೀಗೆ ಆಯುಧ ಪುರುಷರನ್ನು ವಿಷ್ಣುವಿನೊಂದಿಗೆ ಚಿತ್ರಿಸುವ ಶಿಲ್ಪ ಪರಂಪರೆ ಗುಪ್ತರದು.

ಜಂಬುಲಿಂಗ ಗುಡಿ

ಇದನ್ನು ಜಂಬುನಾಥ ದೇವಾಲಯವೆಂದೂ ಕರೆಯಲಾಗುತ್ತದೆ. ಈ ಮಂದಿರದ ನಿರ್ಮಾಣಕಾಲವನ್ನು ತಿಳಿಸುವ ಶಾಸನವೊಂದು ಇಲ್ಲಿದೆ. ವಿಜಯಾದಿತ್ಯನ ರಾಜಮಾತೆ ವಿನಯವತಿಯು ಕ್ರಿ.ಶ. ೬೯೯ರಲ್ಲಿ ಈ ತ್ರಿಕೂಟಾಲಯವನ್ನು ಕಟ್ಟಿಸಿದಳು. ಈ ದೇವಾಲಯವು ಪೂರ್ವ, ಉತ್ತರ ಹಾಗೂ ದಕ್ಷಿಣ ಮುಖವಾದ ಮೂರು ಪ್ರತ್ಯೇಕ ಗರ್ಭಗುಡಿಗಳನ್ನು ಒಳಗೊಂಡಿದ್ದು ದಕ್ಷಿಣ ಭಾರತದ ಪ್ರಪ್ರಥಮ ತ್ರಿಕೂಟಾಲಯವಾಗಿದೆ. ಸಭಾಮಂಟಪವು ಸಾಕಷ್ಟು ವಿಶಾಲವಾಗಿದ್ದು ಛತ್ತಿನಲ್ಲಿ ಶಿವ, ಬ್ರಹ್ಮ, ವಿಷ್ಣು ಮೂರ್ತಿಗಳನ್ನು ರೂಪಿಸಲಾಗಿದೆ. ಮುಖಮಂಟಪದ ಛತ್ತಿನಲ್ಲಿಯ ನಾಗರಾಜ ಶಿಲ್ಪವು ಶೈವ ಗುಹಾಲಯದ ನಾಗರಾಜನನ್ನು ನೆನಪಿಸುತ್ತದೆ. ಎರಡೂ ಗರ್ಭಗೃಹಗಳ ಎದುರು ಸಭಾಮಂಟಪದ ಛತ್ತಿನಲ್ಲಿ ಮತ್ಸ್ಯಚಕ್ರ ಮತ್ತು ಸ್ವಸ್ತಿಕಗಳು, ಗಂಧರ್ವ ಶಿಲ್ಪಗಳು ಮೂಡಿಬಂದಿವೆ. ಗರ್ಭಗೃಹಗಳ ಮೇಲಿನ ಶಿಖರಗಳು ಇಲ್ಲವಾಗಿವೆ. ಉತ್ತರ ಗರ್ಭಗೃಹದ ಮೇಲಿನ ಇಟ್ಟಿಗೆಯ ಶಿಖರವು ಪ್ರಾಯಶಃ ವಿಜಯನಗರ ಕಾಲದ ಸೇರ್ಪಡೆ.

ಭೂತನಾಥ ದೇವಾಲಯ

ಅಗಸ್ತ್ಯತೀರ್ಥದ ಪೂರ್ವದ ದಂಡೆಯ ಮೇಲಿರುವ ಗುಡಿ ಸಮುಚ್ಚಯದ ಪ್ರಧಾನ ದೇವಾಲಯವಿದು. ಇದನ್ನು ಭೂತೇಶ್ವರ ದೇವಾಲಯ ಎಂದೂ ಹೇಳಲಾಗುತ್ತದೆ. ಬಾದಾಮಿಯಲ್ಲಿ ಚಾಲುಕ್ಯರು ಕಟ್ಟಿಸಿದ ಕೊನೆಯ ಗುಡಿ ಇದು.

ನಿರಂಧಾರ ಮಾದರಿಯ ಈ ಗುಡಿಯ ಮೂಲಭಾಗಗಳು ಮುಖಮಂಟಪ, ಸಭಾಮಂಟಪ, ಅಂತರಾಳ ಮತ್ತು ಗರ್ಭಗೃಹ. ಮುಖಮಂಟಪಕ್ಕೆ ಕೆಲವು ಕಂಬಗಳನ್ನು ಸೇರಿಸಿ ಅದನ್ನು ನಂತರ ವಿಸ್ತರಿಸಲಾಗಿದೆ. ಸಭಾಮಂಟಪದ ಬಾಗಿಲುವಾಡದ ಮೂರ್ತಿಗಳನ್ನು ಉದ್ದೇಶ ಪೂರ್ವಕವಾಗಿ ಹಾಳು ಮಾಡಲಾಗಿದೆ. ಛತ್ತಿನಲ್ಲಿ ಕಮಲಗಳ ಕೆತ್ತನೆ ಇದೆ. ಸಭಾಗೃಹಕ್ಕೆ ನಾಲ್ಕು ಜಾಲಂಧ್ರಗಳಿವೆ. ಗರ್ಭಗೃಹದ ಬಾಗಿಲುವಾಡವು ತೀರ ಸರಳವಾಗಿದ್ದು ಲಲಾಟ ಬಿಂಬದಲ್ಲಿ ಯಾವುದೇ ಶಿಲ್ಪವಿಲ್ಲ. ಆದರೆ ಅಡಿ ಭಾಗದಲ್ಲಿ ಗಂಗೆ, ಯಮುನೆಯರಿದ್ದಾರೆ. ಗರ್ಭಗೃಹದಲ್ಲಿನ ಲಿಂಗವು ಮೂಲ ಲಿಂಗವೆನಿಸುವುದಿಲ್ಲ.

ಸಭಾಮಂಟಪದ ಉತ್ತರ ಗೋಡೆಯಲ್ಲಿ ಶಂಖ, ಚಕ್ರಧಾರಿ ವಿಷ್ಣು ವಿಗ್ರಹವಿದೆ. ಪಕ್ಕದಲ್ಲಿರುವ ೯ನೆಯ ಶತಮಾನದ ಶಾಸನವು ಪೈಂಗರ ಶ್ರೀಧರನು ಭೂತೇಶ್ವರನಿಗೆ ಭೂದಾನ ನೀಡಿದುದನ್ನು ಉಲ್ಲೇಖಿಸಿದೆ.

ಚಾಲುಕ್ಯೋತ್ತರ ಕಾಲದ ದೇವಾಲಯಗಳು

ಚಾಲುಕ್ಯ ಅರಸು ಮನೆತನವು ಕೊನೆಗೊಂಡ ಬಳಿಕ ಬಾದಾಮಿ ತನ್ನ ವೈಭವವನ್ನು ಕಳೆದುಕೊಂಡಿತು. ವಾಸ್ತು ನಿರ್ಮಿತಿಗಳು ಪೂರ್ತಿಯಾಗಿ ನಿಂತುಹೋಗಲಿಲ್ಲ. ಆದರೆ ಚಾಲುಕ್ಯೋತ್ತರ ಕಾಲದಲ್ಲಿ ತಲೆ ಎತ್ತಿದ ದೇವಾಲಯಗಳು ಅಷ್ಟು ಮೌಲಿಕವಾದವುಗಳಲ್ಲ. ವಾಸ್ತು ಪಾರಮ್ಯವಾಗಲಿ, ಶಿಲ್ಪ ಸೌಂದರ್ಯವಾಗಲಿ ಇಲ್ಲಿ ಗೋಚರಿಸುವುದಿಲ್ಲ.

ಭೂತನಾಥ ದೇವಾಲಯದ ಪಕ್ಕದಲ್ಲಿ ಹಾಗೂ ಅದರ ಹಿಂದೆ ರಾಷ್ಟ್ರಕೂಟ ಕಾಲದ ಮೂರು ಪುಟ್ಟ, ಸರಳ ದೇವಾಲಯಗಳಿವೆ. ಭಾಗಶಃ ರಾಚನಿಕವಾಗಿರುವ ಅನಂತಶಯನ ಗುಡಿಯು ಅಗಸ್ತ್ಯ ತೀರ್ಥದ ಪೂರ್ವದ ದಂಡೆಯ ಮೇಲಿದೆ. ಇದು ರಾಷ್ಟ್ರಕೂಟರ ಅವಧಿಯದು. ಈ ಅವಧಿಗೆ ಸೇರುವ ಇನ್ನೊಂದು ದೇವಾಲಯವು ಬನಶಂಕರಿ ಗುಡಿಯ ಈಶಾನ್ಯಕ್ಕೆ ಇದೆ. ಇದು ಅರ್ಧ ನೆಲದಲ್ಲಿ ಹೂತುಹೋಗಿದೆ. ಕಲಾದೃಷ್ಟಿಯಿಂದ ಗಮನಿಸಿದರೆ ಇವು ಗೌಣವೆನಿಸುತ್ತವೆ.

ಕಲ್ಯಾಣ ಚಾಲುಕ್ಯ ದೇವಾಲಯಗಳು ನಾಡಿನ ಉದ್ದಗಲಗಳನ್ನು ಚಾಚಿಕೊಂಡಿವೆ. ಕಲ್ಯಾಣ ಚಾಲುಕ್ಯ ಸ್ಥಪತಿಗಳು ಬಳಪದ ಕಲ್ಲನ್ನು ದೇವಾಲಯಗಳ ನಿರ್ಮಾಣಕ್ಕೆ ಬಳಸಿದುದು ಅವರ ವೈಶಿಷ್ಟ್ಯ. ಆದರೆ ಬಾದಾಮಿ ಪರಿಸರದಲ್ಲಿ ದೇವಾಲಯಗಳನ್ನು ಕಟ್ಟಲು ಅವರು ತಮಗೆ ಸರಳವಾಗಿ ಮತ್ತು ಹೇರಳ ಪ್ರಮಾಣದಲ್ಲಿ ಲಭ್ಯವಾದ ಉಸುಕುಕಲ್ಲನ್ನೇ ಬಳಸಿದ್ದಾರೆ. ಬಾದಾಮಿಯ ಎಲ್ಲಮ್ಮ ದೇವಾಲಯ, ವಿರೂಪಾಕ್ಷಗುಡಿ, ಮಲ್ಲಿಕಾರ್ಜುನ ಗುಡಿ, ದತ್ತಾತ್ರೇಯ ಮಂದಿರ, ಅಗಸ್ತ್ಯ ತೀರ್ಥದ ಉತ್ತರ ದಂಡೆಯ ಮೇಲಿರುವ ಗುಡಿಗಳು ಕಲ್ಯಾಣ ಚಾಲುಕ್ಯರ ಗುಡಿಗಳು. ಇವುಗಳಲ್ಲಿ ಎಲ್ಲಮ್ಮ ದೇವಾಲಯವು ಅತ್ಯಂತ ಚಿತ್ತಾಕರ್ಷಕವಾಗಿದೆ.

ಎಲ್ಲಮ್ಮಗುಡಿ

ಈ ದೇವಾಲಯದ ಹೊರಗೋಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಣೆ ಮುಂಬಣೆ ಗಳಿಂದ ಕೂಡಿದ್ದು ನೋಡಲು ಅಂದವಾಗಿವೆ. ಆದರೆ ಈ ಗೋಡೆಗಳಲ್ಲಿ ದೇವಕೋಷ್ಠ ಗಳಿಲ್ಲದ್ದು ಒಂದು ಕೊರತೆ. ಅಂತರಾಳದ ಬಾಗಿಲದ ಎರಡೂ ಬದಿಗಳಲ್ಲಿ ಜಾಲಂಧ್ರಗಳಿವೆ. ಕಲ್ಯಾಣ ಚಾಲುಕ್ಯರ ಗುಡಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಕರತೋರಣ ಇಲ್ಲಿಲ್ಲ. ಗುಡಿಯ ಹೊಸ್ತಿಲು ಕಲಾತ್ಮಕ ಚಂದ್ರಶಿಲೆಯಿಂದ ಅಲಂಕೃತವಾಗಿದೆ. ಕಲ್ಯಾಣ ಚಾಲುಕ್ಯರ ವಾಸ್ತುವಿಶೇಷತೆಗಳಲ್ಲಿ ಶಿಖರವೂ ಒಂದು.  ಎತ್ತರವಾದ ಶಿಖರವು ದೇವಾಲಯದ ಅಂದವನ್ನು ಹೆಚ್ಚಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆಯನ್ನು ಇಲ್ಲಿ ಕಾಣಬಹುದು. ಶಿಖರವು ನಕ್ಷತ್ರಾಕಾರದ ವಿನ್ಯಾಸದಿಂದ ಕೂಡಿದ್ದು ಸುಕನಾಸಿಯನ್ನು ಒಳಗೊಂಡಿದೆ. ಈ ದೇವಾಲಯವು ಮೂಲತಃ ವಿಷ್ಣು ಮಂದಿರ. ಇದರ  ಸುಕನಾಸಿಯಲ್ಲಿ ಯೋಗೇಶ್ವರ ಶಿಲ್ಪವಿದೆ. ಈ ಯೋಗೇಶ್ವರ ದೇವಾಲಯವನ್ನು ಕ್ರಿ.ಶ. ೧೧೩೯ರಲ್ಲಿ ಪರಮಾನಂದ ದೇವರು ಕಟ್ಟಿಸಿದನೆಂಬುದು ಶಾಸನದಿಂದ ತಿಳಿದುಬರುತ್ತದೆ.

ವಿಜಯನಗರದ ದೊರೆ ಅಚ್ಯುತರಾಯನ ಕಾಲದಲ್ಲಿ ಬಾದಾಮಿಯ ದೇವಾಲಯಗಳು ಜೀರ್ಣೋದ್ಧಾರಗೊಂಡವು. ಬನಶಂಕರಿ ಗುಡಿಯ ಮುಂದಿರುವ ವಿಶಾಲ ಪುಷ್ಕರಿಣಿಯ ಪೌಳಿಗಳು ಮತ್ತು ಪ್ರಾಕಾರದಲ್ಲಿರುವ ಕಂಬಗಳ ಮಂಟಪ, ಅರಳಿತೀರ್ಥದ ಶಿಲ್ಪಗಳು ಈ ಕಾಲದ ನಿರ್ಮಾಣಗಳು. ಈಗ ಪೂಜೆಗೊಳ್ಳುವ ಬನಶಂಕರಿ ಮಂದಿರವನ್ನು ಸಾತಾರೆಯ ಪರಶುರಾಮ ನಾಯಿಕ ಅಗಳೆ ಎಂಬಾತನು ಸುಮಾರು ಕ್ರಿ.ಶ. ೧೭೫೦ರಲ್ಲಿ ಕಟ್ಟಿಸಿದನೆಂದು ಮುಂಬೈ ಗ್ಯಾಸೆಟಿಯರ ದಾಖಲಿಸುತ್ತದೆ.

ಇ. ಕೋಟೆಗಳು

ರಾಜ್ಯದ ಸಪ್ತಾಂಗಗಳಲ್ಲಿ ಕೋಟೆಯೂ ಒಂದು. ಕೋಟೆಯಂತೆ ಚಾಚಿಕೊಂಡಿರುವ, ನಿಸರ್ಗದತ್ತವಾದ ಬಾದಾಮಿ ಬಂಡೆಗಲ್ಲುಗಳು ಅಭೇದ್ಯವಾಗಿವೆ. ಆದ್ದರಿಂದ ದುರ್ಗತ್ರಯ ಗಳಲ್ಲಿ ಬಾದಾಮಿಯದು ಗಿರಿದುರ್ಗ. ಈ ಸ್ಥಳದ ಆಯ್ಕೆ ಒಂದನೆಯ ಪುಲಿಕೇಶಿಯ ಯುದ್ಧ ನೈಪುಣ್ಯಕ್ಕೆ ಸಾಕ್ಷಿ ಎನಿಸಿದೆ. ಕ್ರಿ.ಶ. ೫೪೩ರಲ್ಲಿ ತನ್ನ ರಾಜಧಾನಿಯಾದ ವಾತಾಪಿ(ಬಾದಾಮಿ) ಯನ್ನು ಅಭೇದ್ಯ ಕೋಟೆಯಿಂದ ಭದ್ರಪಡಿಸಿದುದು ಶಾಸನದಿಂದ ತಿಳಿದುಬರುತ್ತದೆ.

ದೈತ್ಯಗಾರದ ಬಂಡೆಗಲ್ಲುಗಳ ನಡುವಿನ ಸಂದುಗಳನ್ನು ಕಲ್ಲುಗಳಿಂದ ಭದ್ರಪಡಿಸಿದು ದಷ್ಟೇ ಮನುಷ್ಯ ಪ್ರಯತ್ನ. ಕೋಟೆ ನಿರ್ಮಾಣವು ಆರ್ಥಿಕ ಹೊರೆಯಾಗಲಿಲ್ಲ. ಹೆಚ್ಚು ಸಮಯ ವ್ಯಯವಾಗಲಿಲ್ಲ

ಬಾದಾಮಿಯಲ್ಲಿ ರಾಷ್ಟ್ರಕೂಟರ ಕಾಲದ ಕೋಟೆಯೊಂದಿದೆ. ನೆಲದ ಮಟ್ಟದಲ್ಲಿ ಈ ರಕ್ಷಣಾ ಗೋಡೆಯನ್ನು ಕಟ್ಟಲಾಗಿದೆ. ಇದು ಉತ್ತರ ಬೆಟ್ಟದಿಂದ ಮೊದಲ್ಗೊಂಡು ಊರನ್ನು ಸುತ್ತುವರೆದು ಅಗಸ್ತ್ಯತೀರ್ಥದ ಪಶ್ಚಿಮ ದಂಡೆಯ ಮಧ್ಯದವರೆಗೆ ಚಾಚಿಕೊಂಡಿದೆ. ಜಂಬುಲಿಂಗ ಗುಡಿ ಮತ್ತು ಮಾಲೆಗಿತ್ತಿ ಶಿವಾಲಯಗಳು ಈ ಸ್ಥಲದುರ್ಗದ ಹೊರಗೆ ಉಳಿದುಕೊಂಡಿವೆ. ರಕ್ಷಣಾಗೋಡೆಯು ಸುಮಾರು ಆರು ಮೀಟರು ಎತ್ತರವಾಗಿದೆ. ಕೆಳಭಾಗದಲ್ಲಿ ಹೆಚ್ಚು ದೊಡ್ಡದಾದ ಕಲ್ಲುಗಳಿಂದ ರಚಿತವಾಗಿದ್ದು ಮೇಲೆ ಹೋದಂತೆ ಮಧ್ಯಮ ಗಾತ್ರದ ಕಲ್ಲುಗಳನ್ನು ಜೋಡಿಸಲಾಗಿದೆ. ತಳಭಾಗದಲ್ಲಿ ಗೋಡೆಯ ದಪ್ಪ ನಾಲ್ಕು ಮೀಟರ್ ಇದ್ದರೆ ತುದಿಯಲ್ಲಿ ಎರಡು ಮೀಟರ್ ಇದೆ. ಈ ಕೋಟೆಯ ಪ್ರವೇಶ ದ್ವಾರವು ಮಳಖೇಡದ ಪಶ್ಚಿಮ ದ್ವಾರವನ್ನು ನೆನಪಿಸುವಂತಿದೆ.

ವಿಜಯನಗರ ಅರಸರು ಹಳೆಯ ಕೋಟೆಗಳನ್ನು ಜೀರ್ಣೋದ್ಧಾರ ಮಾಡುವುದರ ಜೊತೆಗೆ ಹೊಸದಾಗಿ ಕೋಟೆಕೊತ್ತಲೆಗಳನ್ನು ಕಟ್ಟಿಸಿದರು. ಒಂದನೆಯ ಹರಿಹರನ ಕಾಲದಲ್ಲಿ ಚಾಮರಾಜ ಎಂಬುವನು ಬಾದಾಮಿಯ ದುರ್ಗವನ್ನು, ಮೂಡಣ ಪಾರಟವನ್ನು  ನಿರ್ಮಿಸಿದನು. ಬತ್ತೇರಪ್ಪ ಗುಡಿಯ ಪಕ್ಕದ ಬಂಡೆಗಳ ಮತ್ತು ಅಗಸ್ತ್ಯತೀರ್ಥದ ಉತ್ತರ ದಂಡೆಯ ನಡುವೆ ಇದನ್ನು ರಚಿಸಲಾಗಿದೆ. ವಿಜಯನಗರ ಅರಸರ ಇನ್ನೊಂದು ಕೋಟೆ ಮಾಲೆಗಿತ್ತಿ ಶಿವಾಲಯದ ಪಕ್ಕದಲ್ಲಿದೆ. ಸದಾಶಿವರಾಯನ ಕಾಲದಲ್ಲಿ ಕೃಷ್ಣಪ್ಪ ನಾಯಕನು ಈ ಕೊತ್ತಲವನ್ನು ಕಟ್ಟಿಸಿದನೆಂದು ಈ ಶಿವಾಲಯದ ಶಾಸನವು ತಿಳಿಸುತ್ತದೆ. ಮೂರನೆಯ ಗುಹಾದೇವಾಲಯದ ಇನ್ನೊಂದು ಶಾಸನವು ಕೊಂಡರಾಜ ಮಹಾಅರಸರು ಕೊತ್ತಲ ಕಟ್ಟಿಸಿದುದನ್ನು ದಾಖಲಿಸಿದೆ. ಇದು ಪ್ರಾಯಶಃ ಗುಹಾಲಯದ ಕೆಳಗೆ ಇರುವ ನೆಲಮಟ್ಟದ ಕೊತ್ತಲ, ಉತ್ತರ ಗುಡ್ಡ ಹಾಗೂ ರಣಮಂಡಲದ ಮೇಲೆ ಗಚ್ಚುಗಾರೆಗಳಿಂದ ನಿರ್ಮಿತವಾದ ಕೋಟೆಕೊತ್ತಲಗಳಿವೆ. ಇವು ಟೀಪುಸುಲ್ತಾನನ ಕಾಲದವು.

ಹೀಗೆ ಬಾದಾಮಿಯಲ್ಲಿ ಕೋಟೆಗಳ ನಿರ್ಮಾಣ ಕಾರ್ಯವು ಆರನೆಯ ಶತಮಾನದಿಂದ ಪ್ರಾರಂಭವಾಗಿ ಕಾಲಕಾಲಕ್ಕೆ ಅವಶ್ಯಕತೆಗಳಿಗೆ ಅನುಗುಣವಾಗಿ ಬೇರೆ ಜಾಗಗಳಲ್ಲಿ ನಡೆದದ್ದು ತಿಳಿದುಬರುತ್ತದೆ. ಅಷ್ಟು ಮಾತ್ರವಲ್ಲ ಕೋಟೆಗಳು ಶಿಥಿಲಗೊಂಡರೆ ಅವನ್ನು ಬಲಪಡಿಸುವ ಕಾರ್ಯವೂ ನಡೆಯುತ್ತಿತ್ತು. ವಿಜಯನಗರದ ಅರಸರು ಅಚ್ಯುತರಾಯನ ಕಾಲದಲ್ಲಿ ಚಿನ್ನಪ್ಪನಾಯಕನೆಂಬ ಸೇನಾಧಿಪತಿಯು ತನ್ನ ಮಗನಾದ ಚಿಕ್ಕ ಚಿನ್ನಪ್ಪನಾಯಕನಿಂದ ಬಾದಾಮಿಯ ಕೋಟೆಗಳನ್ನು ಮತ್ತು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದುದು ಕ್ರಿ.ಶ. ೧೫೩೩ರ ಶಾಸನದಿಂದ ವಿದಿತವಾಗುತ್ತದೆ.

೧೮೪೧ರಲ್ಲಿ ಬ್ರಿಟಿಶರ ವಿರುದ್ಧ ಬಂಡಾಯ ಹೂಡಿದ್ದ ನರಸಿಂಗ ದತ್ತಾತ್ರೇಯ ಪೇಟಕರನು ಅವರಿಂದ ಬಾದಾಮಿಯ ಕೋಟೆಯನ್ನು ವಶಪಡಿಸಿಕೊಂಡನಾದರೂ ಕೆಲವೇ ದಿನಗಳಲ್ಲಿ ಬೆಳಗಾವಿ, ಧಾರವಾಡದಿಂದ ಬ್ರಿಟಿಶ್ ಸೈನ್ಯವು ಬಾದಾಮಿ ಕೋಟೆಯನ್ನು ಮುತ್ತಿ ಪೇಟಕರನನ್ನು ಬಂಧಿಸಿತು. ಫ್ಲೀಟರು ಸಂಗ್ರಹಿಸಿದ ೧೮೭೪ರ ಲಾವಣಿಯ ಪಲ್ಲವಿ ಇದನ್ನು ಚಿತ್ರಿಸಿದ್ದು ಹೀಗೆ

ಬಾಹಾದ್ದುರ ಕಟ್ಟಿಸಿದ ಬಾದಾಮಿ ಕಿಲೆಕ
ಬಂತೊ ಪ್ರಳಯ ಕಾಲಾ
ಸುತ್ತರಾಜ್ಯದ ಮೇಲಾದ ಕಿಲ್ಲೆ
ಆದಿತು ನೆಲದ ಪಾಲಾ

ಶಾಸನ ಸಿರಿ

ಶಾಸನಗಳು ನಾಡಿನ ಸಾಂಸ್ಕೃತಿಕ ಸಂಪತ್ತು. ಕರ್ನಾಟಕದಲ್ಲಿ ಸಿಗುವ ಮೊಟ್ಟಮೊದಲಿನ ಶಾಸನಗಳೆಂದರೆ ಮೌರ್ಯ ಸಾಮ್ರಾಟ ಅಶೋಕನ ಧರ್ಮಶಾಸನಗಳು. ಇವುಗಳ ಕಾಲ ಕ್ರಿ.ಪೂ. ಮೂರನೆಯ ಶತಮಾನ. ಇವುಗಳ ಭಾಷೆ ಪ್ರಾಕೃತ. ನಾಲ್ಕನೆಯ ಶತಮಾನದ ವೇಳೆಗೆ ಸಂಸ್ಕೃತ ಭಾಷೆ ತಲೆ ಎತ್ತಿತು. ಕದಂಬರ ಶಾಸನಗಳು ಹೆಚ್ಚಾಗಿ ಸಂಸ್ಕೃತ ಶಾಸನಗಳು. ೫ನೆಯ ಶತಮಾನದಿಂದ ಸಂಸ್ಕೃತ ಶಾಸನಗಳ ಜೊತೆಗೆ ಕನ್ನಡದ ಗದ್ಯ ಹಾಗೂ ಪದ್ಯ ಶಾಸನಗಳು ಕಾಣಿಸಿಕೊಳ್ಳತೊಡಗಿದವು. ಕ್ರಿ.ಶ. ೪೫೦ರ ಸುಮಾರಿನ ಹಲ್ಮಿಡಿ ಶಾಸನವು ಕನ್ನಡದ ಅತಿ ಪ್ರಾಚೀನ ಶಾಸನವಾಗಿದೆ. ಕೆಲಗುಂದ್ಲಿ ಶಿಲಾಶಾಸನವು (ಸು. ಕ್ರಿ.ಶ. ೫೦೦) ಕದಂಬರ ಇನ್ನೊಂದು ಕನ್ನಡ ಶಾಸನ. ಇವನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಸಂಸ್ಕೃತ ಶಾಸನಗಳೇ. ಆದರೆ ಬಾದಾಮಿ ಚಾಲುಕ್ಯರ ಕಾಲಕ್ಕೆ ಸಂಸ್ಕೃತ ಮತ್ತು ಕನ್ನಡ ಶಾಸನಗಳು ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿ ದೊರೆಯುತ್ತವೆ. ಇವರ ಆಶ್ರಯದಲ್ಲಿ ಕನ್ನಡವು ಹುಲುಸಾಗಿ ಬೆಳೆಯಿತೆಂಬುದನ್ನು ಮನಗಾಣಬಹುದು.

ಚಿಕ್ಕಪುಟ್ಟ ಶಾಸನಗಳನ್ನೊಳಗೊಂಡು ಬಾದಾಮಿಯಲ್ಲಿ ೨೫೦ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಅವುಗಳಲ್ಲಿ ಬಹುಪಾಲು ಶಾಸನಗಳು ಒಂದು ಅಥವಾ ಎರಡು ಶಬ್ದಗಳಲ್ಲಿದ್ದು ಶಿಲ್ಪಗಳ ಹೆಸರುಗಳನ್ನು ಸೂಚಿಸುತ್ತವೆ. ಈ ಹೆಸರುಗಳು ಅಂದಿನ ಸಾಮಾಜಿಕ ಮೌಲ್ಯಗಳನ್ನು ಪರಿಚಯಿಸುತ್ತವೆ. ಶ್ರೀ ರಣ ರೌದ್ರನ್, ಶ್ರೀ ರಣ ಪರಾಕ್ರಮನ್, ಶ್ರೀ ರಣಘನನ್ ಎಂಬ ಹೆಸರುಗಳಲ್ಲಿ ಅಂದಿನ ಪ್ರಧಾನ ಜೀವನಮೌಲ್ಯವಾದ ಶೌರ್ಯವು ಪ್ರತಿಬಿಂಬಿತವಾಗಿದೆ. ಶ್ರೀ ಗುಣಶೀಲನ್, ಶ್ರೀ ಬಹುಗುಣ, ಶ್ರೀ ಗುಣಸಹಾಯನ್, ಶ್ರೀ ಗುಣನಿಧಿ ಎಂಬ ಶಾಸನೋಕ್ತ ಹೆಸರುಗಳು ಅವರು ಶೀಲ, ಸದ್ಗುಣಗಳಿಗೆ ಹೆಚ್ಚಿನ ಮಹತ್ವ ನೀಡಿದ್ದುದನ್ನು ತಿಳಿಸುತ್ತದೆ. ಶ್ರೀ ನೆಲವರ್ಕಿ ಶ್ರೀ ಚಾಳುಗೇಸಿ, ಶ್ರೀ ಕೋಳಿಮಂಚಿ, ಶ್ರೀ ಸಿಂಗಮಂಚಿ ಎಂಬ ಹೆಸರುಗಳು ಕುತೂಹಲಕಾರಿಯಾಗಿವೆ. ‘ಮೃತ್ಯುಸ್ತತಣಿಕೋ ದುಃಖಮ್ಮಾನ ಭಂಗನ್ದಿನೇ ದಿನೇ’ ಎಂಬ ಸಾಲು ಚಾಲುಕ್ಯರ ಸ್ವಾಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ.

ದತ್ತಿ ಬಿಟ್ಟು ಕೊಟ್ಟ ವಿಷಯ, ವಿಜಯಶಾಲಿಯಾದ ಸಮಾಚಾರ, ಕೋಟೆ ಅಥವಾ ದೇವಾಲಯವನ್ನು ಕಟ್ಟಿಸಿದ ವಿಚಾರ ಅಥವಾ ಜೀರ್ಣೋದ್ಧಾರ ಮಾಡಿಸಿದ ವಿವರ ಹೀಗೆ ಹಲವಾರು ವಿದ್ಯಮಾನಗಳನ್ನು ತಿಳಿಸುವ ಶಾಸನಗಳು ಬಾದಾಮಿಯಲ್ಲಿ ದೊರೆತಿವೆ. ಜೈನ ಬಸದಿಯಲ್ಲಿ ನಿಸಿದಿಗಲ್ಲು ಕೂಡ ಇದೆ. ಜಕ್ಕವ್ವೆ ಎಂಬಾಕೆಯನ್ನು ಅತ್ತಿಮಬ್ಬೆಗೆ ಹೋಲಿಸಿರುವ ಈ ಶಾಸನವು ಹನ್ನೊಂದನೆಯ ಶತಮಾನದ್ದು. ವಿಭಿನ್ನ ಕಾಲಕ್ಕೆ ಸೇರಿರುವ ಬಾದಾಮಿಯ ಶಾಸನಗಳು ವೈವಿಧ್ಯಪೂರ್ಣವೂ ಆಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ಅ. ಸಂಸ್ಕೃತ ಶಾಸನಗಳು

ಬಾದಾಮಿ ಚಾಲುಕ್ಯರ ಪ್ರಪ್ರಥಮ ಸಂಸ್ಕೃತ ಶಾಸನವೆಂದರೆ ಉತ್ತರಕೋಟೆಯ ಮೇಲಿನ ಒಂದೆರಡು ಪುಲಿಕೇಶಿ ಶಾಸನ. ಆತನು ಅಶ್ವಮೇಧ ಮೊದಲಾದ ಯಜ್ಞಗಳನ್ನು ಮಾಡಿ ವಾತಾಪಿಯಲ್ಲಿ ಕ್ರಿ.ಶ. ೫೪೩ರಲ್ಲಿ ಅಭೇದ್ಯವಾದ ಕೋಟೆಯನ್ನು ಕಟ್ಟಿಸಿದುದನ್ನು ಈ ಶಾಸನವು ದಾಖಲಿಸಿದೆ.

ಒಂದನೆಯ ಕೀರ್ತಿವರ್ಮನ ಕ್ರಿ.ಶ. ೫೭೮ರ ಸಂಸ್ಕೃತ ಶಾಸನವು ಸಾಹಿತ್ಯಿಕ ಗುಣವನ್ನು ಹೊಂದಿದೆ. ಮಹಾವಿಷ್ಣುಗೃಹವನ್ನು ಬಂಡೆಯಲ್ಲಿ ಕೊರೆಯಿಸಿದ ಮಂಗಲೇಶನನ್ನು ಶಕ್ತಿತ್ರಯ ಸಂಪನ್ನಃ ಚಲ್ಕ್ಯವಂಶಾಂಬರ ಪೂರ್ಣಚಂದ್ರಃ ಅತಿಬಲ ಪರಾಕ್ರಮೋತ್ಸಾಹ ಸಂಪನ್ನಃ ಎಂದು ಬಣ್ಣಿಸಲಾಗಿದೆ. ಮಂಗಲೀಶನ ಶರೀರವು ಆಭರಣಗಳಿಂದ ಅಲಂಕೃತವಾದುದನ್ನು ಹೇಳದೆ ಗುಣಗಳಿಂದ ಅಲಂಕೃತವಾಗಿತ್ತು ಎಂದು ಚಿತ್ರಿಸಲಾಗಿದೆ. ಹಾಗೆಯೇ ಆತನ ಪಾದಗಳು ಅವಕ್ಕೆ ಬಾಗಿದ ಅರಸರ ಶಿರೋ ಮಕುಟದ ಮಣಿಗಳ ರಶ್ಮಿಗಳಿಂದ ರಂಜಿತವಾಗಿದ್ದವೆಂದು ವರ್ಣಿಸುವಲ್ಲಿ ಈ ಶಾಸನ ಕವಿಯ ಕಾವ್ಯ ಪ್ರತಿಭೆ ಪ್ರಕಟಗೊಂಡಿದೆ.

ಮಹಾಕೂಟ ಸ್ತಂಭ ಶಾಸನವು ಚಾಲುಕ್ಯರ ಇನ್ನೊಂದು ಮಹತ್ವದ ಸಂಸ್ಕೃತ ಶಾಸನ. ಇದು ಸುಂದರ ಗದ್ಯ ರಚನೆಯಾಗಿದೆ. ಈ ಅಜ್ಞಾತ ಕವಿಯು ಮಂಗಲೀಶನನ್ನು ‘ದುರ್ಗ ವಿಧಾನ ಜಾನಪದ ಪೌರಮಾನ್ಯ ವಿಭಾಗ ಕುಶಲ’ಎಂದು ಹೊಗಳಿದ್ದಾನೆ.

ಸಾಹಿತ್ಯಿಕ ಮೌಲ್ಯದ ದೃಷ್ಟಿಯಿಂದ ಐಹೊಳೆಯ ಪ್ರಶಸ್ತಿ ಶಾಸನವು ಒಂದು ಉತ್ಕೃಷ್ಟ ರಚನೆ. ಕ್ರಿ.ಶ. ೬೩೪ರ ಈ ಶಾಸನದಲ್ಲಿ ರವಿಕೀರ್ತಿಯು ಚಾಲುಕ್ಯರ ವಂಶಾವಳಿ ಮತ್ತು ಇಮ್ಮಡಿ ಪುಲಿಕೇಶಿಯ ಯುದ್ಧ ಸಾಧನೆಯ ಬಗ್ಗೆ ವಸ್ತುನಿಷ್ಠ ವಿವರವನ್ನು ನೀಡಿದ್ದಾನೆ. ತಾನು ಕಾಳಿದಾಸ, ಭಾರವಿ ಮಹಾಕವಿಗಳ ಸಾಲಿಗೆ ಸೇರಿದನೆಂದು ಅಭಿಮಾನದಿಂದ ಹೇಳಿಕೊಂಡಿದ್ದಾನೆ. ಕಾಳಿದಾಸನ ಕಾಲ ನಿರ್ಣಯದಲ್ಲಿ ಈ ಶಾಸನವು ಮಹತ್ವದ ಪಾತ್ರ ವಹಿಸಿದೆ.

ಆ. ಕನ್ನಡ ಶಾಸನಗಳು

ಕದಂಬರ ಹಲ್ಮಿಡಿ ಶಾಸನವು ಮೊದಲ ಕನ್ನಡ ಶಾಸನ ಎಂಬುದನ್ನು ಗಮನಿಸಿದೆವು. ಆದರೆ ಶಾಸನದ ಭಾಷೆ ಪೂರ್ವದ ಹಳಗನ್ನಡವಾಗಿದ್ದು ಸಂಸ್ಕೃತಭೂಯಿಷ್ಠವಾದುದು. ಶಾಸನದ ಭಾಷೆ ಸರಳವಲ್ಲ. ಶಾಸನವು ಕನ್ನಡದಲ್ಲಿದ್ದರೂ ಕನ್ನಡ ಭಾಷೆ ಬಡವಾದುದು. ಇದರ ನಂತರ ಸುಮಾರು ಒಂದೂವರೆ ಶತಮಾನದ ನಂತರ ಕಾಣಿಸಿಕೊಂಡ ಮಂಗಲೀಶನ ಕನ್ನಡ ಶಾಸನವು ಗಮನಾರ್ಹವಾಗಿದೆ. ಈ ಶಾಸನ ಚಿಕ್ಕದು. ಭಾಷಾ ಪ್ರೌಢಿಮೆ ಸಾಹಿತ್ಯಿಕ ಗುಣವು ವಿಶೇಷವಾಗಿರದಿದ್ದರೂ ಭಾಷೆಯಲ್ಲಿ ಕನ್ನಡತನ ಎದ್ದುಕಾಣುತ್ತದೆ. ಮಂಗಲೀಶನು ಕೊರೆಯಿಸಿದ ಗುಹಾಲಯವನ್ನು ಸಂಸ್ಕೃತ ಶಾಸನವು ‘ಮಹಾವಿಷ್ಣುಗೃಹ’ ಎಂದು ಕರೆದರೆ ಈ ಶಾಸನವು ‘ಕಲ್ಮನೆ’ ಎಂದು ಕರೆದಿದೆ.

ಎಂಟನೆಯ ಶತಮಾನದಿಂದ ಇಂತಹ ಕನ್ನಡ ಶಾಸನಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಕನ್ನಡ ಸಂಸ್ಕೃತಗಳ ಮಧುರ ಬೆಸುಗೆ ಇದೆ. ವಿಜಯಾದಿತ್ಯನ ಪ್ರಾಣವಲ್ಲಭೆ ವಿನಾಪೋಟಿಯ ಮಹಾಕೂಟ ಶಾಸನವನ್ನು ಇಲ್ಲಿ ಸ್ಮರಿಸಬಹುದು. ೮, ೯ನೆಯ ಶತಮಾನದ ಶಾಸನಗಳಲ್ಲಿ ಸಾಹಿತ್ಯಿಕ ಶ್ರೀಮಂತಿಕೆ ಹೆಚ್ಚಿತು. ಪದ್ಯ ಶಾಸನಗಳು ಕಾಣಿಸಿಕೊಳ್ಳತೊಡಗಿದವು.

ತ್ರಿಪದಿಯು ಕನ್ನಡ ಛಂದಸ್ಸಿನ ತಾಯಿಬೇರೆನಿಸಿದ್ದು ಅದರ ಅತಿ ಪ್ರಾಚೀನ ಉದಾಹರಣೆ  ಬಾದಾಮಿಯ ಕಪ್ಪೆ ಅರಭಟ್ಟನ ಶಾಸನವಾಗಿದೆ. ಹತ್ತು ಸಾಲುಗಳಲ್ಲಿ ಮೂಡಿಬಂದ ಈ ಶಾಸನವು ಎರಡು ಸಾಲುಗಳ ಗದ್ಯದ ಭಾಗದಿಂದ ಪ್ರಾರಂಭವಾಗುತ್ತದೆ. ಮುಂದಿನ ಎರಡು ಸಾಲುಗಳು ಕನ್ನಡ ಲಿಪಿಯಲ್ಲಿ ಬರೆಯಲಾದ ಸಂಸ್ಕೃತ ಶ್ಲೋಕವನ್ನು ಒಳಗೊಂಡಿವೆ. ಕನ್ನಡ ಪದ್ಯ ಶಾಸನದಲ್ಲಿ ಸಂಸ್ಕೃತ ಶ್ಲೋಕವು ಸೇರಿದುದು ಒಂದು ವಿಶೇಷ ಸಂಗತಿ. ಪ್ರಸ್ತುತ ಶಾಸನದ ಐದನೆಯ ಸಾಲಿನಿಂದ ಕನ್ನಡ ತ್ರಿಪದಿಗಳು ಪ್ರಾರಂಭವಾಗುತ್ತವೆ. ಒಂದು ತ್ರಿಪದಿಯನ್ನು ಎರಡು ಸಾಲುಗಳಲ್ಲಿ ಕಂಡರಿಸಿರುವುದು ಇನ್ನೊಂದು ವಿಶೇಷ. ಒಟ್ಟು ಆರು ಸಾಲುಗಳಲ್ಲಿ ಮೂರು ತ್ರಿಪದಿಗಳು ಪ್ರಕಟಗೊಂಡಿವೆ.

ಈ ಶಾಸನದ ಮೊದಲನೆಯ ತ್ರಿಪದಿಯು ‘ಸಾಧುಗೆ ಸಾಧು’ ಎಂಬ ಶಬ್ದಗಳಿಂದ ಪ್ರಾರಂಭವಾಗುತ್ತದೆ. ಈ ತ್ರಿಪದಿಯಲ್ಲಿ ಅರ್ಥಸ್ಪಷ್ಟತೆ ಇದೆ. ಮುಂದಿನ ಎರಡು ತ್ರಿಪದಿಗಳಲ್ಲಿ ಅರ್ಥಕ್ಲಿಷ್ಟತೆ ಇದೆ. ಆದರೆ ಭಾವಗ್ರಾಹ್ಯವಾಗಿವೆ. ಇದೇ ಈ ತ್ರಿಪದಿಗಳ ವೈಶಿಷ್ಟ್ಯ. ಈ ಶಾಸನ ಕವಿಯ ಹೆಸರು ಲಭ್ಯವಾಗಿಲ್ಲ. ಇಲ್ಲಿ ಕಪ್ಪೆ ಅರಭಟ್ಟನೆಂಬುವನು ಬಣ್ಣಿತನಾಗಿರುವುದ ರಿಂದ ಇದು ಕಪ್ಪೆ ಅರಭಟ್ಟನ ಶಾಸನವೆಂದೇ ಹೆಸರಾಗಿದೆ.

ತ್ರಿಪದಿಯ ನಂತರ ಕನ್ನಡ ಪದ್ಯಸಾಹಿತ್ಯದಲ್ಲಿ ಪಿರಿಯಕ್ಕರದ್ದು ಹಿರಿಯ ಸ್ಥಾನ. ಪಿರಿಯಕ್ಕರವು ಕನ್ನಡಿಗರಿಗೆ ಜನಪ್ರಿಯ ಛಂದೋರೂಪವಾಗಿತ್ತು. ಮಹಾಕೂಟೇಶ್ವರ ಗುಡಿಯ ಮುಖಮಂಟಪದ ಶಾಸನವು ಈ ಬಗೆಯ ಪದ್ಯ ಶಾಸನವಾಗಿದೆ. ಜಗತುಂಗನಿಗೆ ಪ್ರಿಯನಾದ ಬೀರಗ್ರಹಾರ ಎಂಬುವನು ಕಾಳಗದಲ್ಲಿ ಒಂದು ಸಾವಿರದ ಒಂಬೈನೂರಾ ಅರವತ್ತಾರು ಜನರನ್ನು ಇರಿದನೆಂಬ ಸಂಗತಿ ಶಾಸನದ ಪಠ್ಯವಾಗಿದೆ.

ಬಾದಾಮಿಯ ಜಿನಾಲಯದ ಪಶ್ಚಿಮ ಗೋಡೆಯ ಮೇಲೆ ಕಲ್ಯಾಣ ಚಾಲುಕ್ಯರ ಕಾಲದ ಕನ್ನಡ ಶಾಸನವೊಂದಿದೆ. ಆರು ಸಾಲುಗಳ ಈ ಶಾಸನದಲ್ಲಿ ಮೂರು ಕನ್ನಡ ಕಂದ ಪದ್ಯಗಳಿವೆ. ಇದರಲ್ಲಿ ಜಕ್ಕವ್ವೆ ಎಂಬ ಭಕ್ತಳ ಗುಣಗಾನವಿದೆ. ಸಾಹಿತ್ಯಿಕವಾಗಿ ಪ್ರೌಢವಾಗಿರದ ಈ ಶಾಸನವು ಸಾಂಸ್ಕೃತಿಕವಾಗಿ ಮಹತ್ವದ್ದಾಗಿದೆ.

ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಬಾದಾಮಿಯ ಪಾತ್ರ ಗಮನಾರ್ಹವಾಗಿದೆ. ಶೈಶವಾವಸ್ಥೆಯಲ್ಲಿದ್ದ ಕನ್ನಡವನ್ನು ರಕ್ಷಿಸಿ, ಬೆಳೆಸಿದ ಅಗ್ಗಳಿಕೆ ಬಾದಾಮಿಯ ನೆಲಕ್ಕೆ ಸಲ್ಲುತ್ತದೆ.

ಇ. ತೆಲುಗು ಶಾಸನಗಳು

ವಿಜಯನಗರ ಅರಸರ ಕಾಲದಲ್ಲಿ ಬಾದಾಮಿಯು ತೆಲುಗು ಭಾಷೆಗೂ ಎಡೆಮಾಡಿ ಕೊಟ್ಟಿತು. ಮೂರನೆಯ ಗುಹಾಲಯದ ಎರಡು ತೆಲುಗು ಶಾಸನಗಳು ಈ ಮಾತನ್ನು ಸಮರ್ಥಿಸುತ್ತವೆ. ಹಾರಿಲರಡ ವೆಂಕಟಯ್ಯನು ಹನ್ನೆರಡು ಆಳ್ವಾರರ ಪ್ರತಿಮೆಗಳನ್ನು ಸ್ಥಾಪಿಸಿದುದು ಒಂದು ಶಾಸನದ ಪಠ್ಯವಾದರೆ ಚೆಂತಕುಪ್ಪ ರಂಗಯ್ಯನು ವಿಠಲನ ಎಡಬಲಗಳಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರ ವಿಗ್ರಹಗಳನ್ನು ನಿಲ್ಲಿಸಿದ್ದುದು ಇನ್ನೊಂದರ ವಸ್ತುವಾಗಿದೆ. ವಿಜಯನಗರದ ಪತನದ ನಂತರ ಆದಿಲಶಾಹಿಗಳ ಆಡಳಿತಕ್ಕೆ ಒಳಪಟ್ಟಿದ್ದರಿಂದ ಬಾದಾಮಿ ಯಲ್ಲಿ ತೆಲುಗು ಭಾಷೆ ಆಸರೆಯನ್ನು ಕಳೆದುಕೊಂಡಿತೆನ್ನಬಹುದು.

ಅನುಬಂಧ

ಶ್ರೀ ಬನಶಂಕರಿ

ಬಾದಾಮಿಯ ಆಗ್ನೇಯಕ್ಕೆ ಐದು ಕಿಲೋಮೀಟರ್ ಅಂತರದಲ್ಲಿ ಬನಶಂಕರಿ ಕ್ಷೇತ್ರವಿದೆ. ಇದು ಚೊಳಚಗುಡ್ಡ ಗ್ರಾಮದ ವ್ಯಾಪ್ತಿಯಲ್ಲಿದ್ದರೂ ಬಾದಾಮಿ ಬನಶಂಕರಿ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಈಗ ಪೂಜೆಗೊಳ್ಳುತ್ತಿರುವ ಬನಶಂಕರಿ ಮೂರ್ತಿ ಹಾಗೂ ದೇವಾಲಯ ಮರಾಠಾ ಅರಸರ ಕಾಲದವು. ಇದನ್ನು ಸಾತಾರೆಯ ಪರಶುರಾಮ ನಾಯಿಕ ಅಗಳೆ ಎಂಬಾತನು ಸುಮಾರು ಕ್ರಿ.ಶ. ೧೭೫೦ರಲ್ಲಿ ನಿರ್ಮಿಸಿದನೆಂದು ಮುಂಬೈ ಗ್ಯಾಸೆಟಿಯರ ದಲ್ಲಿ ಹೇಳಲಾಗಿದೆ.

ಬನಶಂಕರಿ ಆವರಣದಲ್ಲಿ ದೊರೆತ ಎಲ್ಲ ಶಾಸನಗಳಲ್ಲಿ ಇವಳನ್ನು ಬನದೇವಿ ಎಂದು ಕರೆಯಲಾಗಿದೆ. ಈಗಿರುವ ಬನಶಂಕರಿ ಗುಡಿಯ ಪಕ್ಕದಲ್ಲಿ ಪ್ರಾಚೀನ ದೇಗುಲವೊಂದು ಭಾಗಶಃ ಹೂತು ಹೋದ ಸ್ಥಿತಿಯಲ್ಲಿದೆ. ಇದೇ ದೇವಿಯ ಮೂಲಮಂದಿರವಾಗಿರುವಂತೆ ತೋರುತ್ತದೆ. ದೇವಾಲಯದ ವಾಸ್ತುವಿನ್ಯಾಸ ರಾಷ್ಟ್ರಕೂಟರ ಮಾದರಿಯಲ್ಲಿದೆ. ಈಗ ಪೂಜೆಗೊಳ್ಳುತ್ತಿರುವ ದೇವ ಮಂದಿರದ ಪ್ರಾಕಾರದಲ್ಲಿ ಕಲ್ಯಾಣ ಚಾಲುಕ್ಯರ ಮಾದರಿಯ ಪುಟ್ಟಗುಡಿ ಹಾಗೂ ವಿಜಯನಗರ ಅರಸರ ಕಾಲದ ಮಂಟಪ ಇವೆ. ಎತ್ತರವಾದ ಕಂಬಗಳಿಂದ ರಚಿತವಾದ ವಿಜಯನಗರ ಶೈಲಿಯ ಮಂಟಪವು ಸ್ವತಂತ್ರವಾಗಿದೆ.

ಬನಶಂಕರಿ ದೇವಾಲಯದ ವಾಸ್ತುರಚನೆ ಗಮನಾರ್ಹವಾಗಿದೆ. ಗುಡಿಯ ಸುತ್ತಲೂ ಪೌಳಿ ಸುತ್ತುವರೆದಿದೆ. ನಾಲ್ಕು ದಿಕ್ಕುಗಳಿಂದಲೂ ಭಕ್ತರು ದೇವಾಲಯದ ಪ್ರಾಕಾರವನ್ನು ಪ್ರವೇಶಿಸಬಹುದು. ದೇವಾಲಯವು ಪೂರ್ವಾಭಿಮುಖವಾಗಿದ್ದು ಪೂರ್ವದ್ವಾರವು ಪ್ರಧಾನವಾದದ್ದು, ಭವ್ಯವಾದದ್ದು. ಇದರ ಪಕ್ಕದ ಕಟ್ಟೆಗಳ ಮೇಲೆ ಎತ್ತರವಾದ ಮೂರು ದೀಪಮಾಲಾ ಸ್ತಂಭಗಳಿವೆ. ದೇವಸ್ಥಾನದ ಸಭಾಮಂಟಪ ಹಾಗೂ ಗರ್ಭಗೃಹಗಳು ಮುಖಮಂಟಪದ ಪಾತಳಿಗಿಂತ ಎತ್ತರದಲ್ಲಿವೆ. ಅಂತರಾಳವೆನ್ನಬಹುದಾದ ಭಾಗದ ಎಡಬಲಗಳಲ್ಲಿ ದ್ವಾರಗಳಿದ್ದು ಗರ್ಭಗೃಹವನ್ನು ಇವುಗಳ ಮೂಲಕವೂ ಪ್ರವೇಶಿಸಬಹುದು.

ಬನಶಂಕರಿ ವಿಗ್ರಹವು ಚಿತ್ತಾಕರ್ಷಕವಾಗಿದೆ. ಇದು ಕರಿಕಲ್ಲಿನ ಪ್ರತಿಮೆ. ದೇವಿ ಸಿಂಹವಾಹಿನಿಯಾಗಿದ್ದಾಳೆ. ಅವಳ ಕಣ್ಣುಗಳಲ್ಲಿ ತೇಜವಿದೆ, ಚೈತನ್ಯವಿದೆ. ಪ್ರತಿ ವರ್ಷ ಬನದ ಹುಣ್ಣಿಮೆಗೆ ಇಲ್ಲಿ ರಥೋತ್ಸವ ನಡೆಯುತ್ತದೆ. ಇದು ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಜಾತ್ರೆ.