ಬಾದಾಮಿಯಲ್ಲಿ ಚಾಲುಕ್ಯ ಮಂಗಳೇಶನ ವಿಷ್ಣುಗುಹಾ ದೇವಾಲಯದ ಮೊಗಸಾಲೆಯ ಕಪೋತದ ಒಳಬದಿಯಲ್ಲಿ ಶಿಷ್ಟ ಸಂಪ್ರದಾಯದ ಶ್ರೇಷ್ಠ ವರ್ಣಚಿತ್ರಗಳಿವೆ. ನೋಡಿದೊಡನೆಯೆ ಜಗತ್ಪ್ರಸಿದ್ಧ ಅಜಂತಾದ ಬೌದ್ಧ ಗುಹಾಲಯಗಳಲ್ಲಿಯ ವರ್ಣಚಿತ್ರಗಳು ನೆನಪಿಗೆ ಬರುತ್ತವೆ. ಆದರೆ ಗುಹಾಲಯದ ಚಿತ್ರಗಳು ಬಹಳಷ್ಟು ಗೀಚುಗಳಿಂದ ಹಾಳಾಗಿ ದುಃಸ್ಥಿತಿಯಲ್ಲಿವೆ. ಮೊದಲು ಒಳ್ಳೆ ಜೇಡಿಮಣ್ಣು ಬತ್ತದ ಹೊಟ್ಟು ಕತ್ತರಿಸಿದ ಹುಲ್ಲು ಮುಂತಾದ ಮಿಶ್ರಣವನ್ನು ಕಲ್ಲಿನ ಮೇಲೆ ಗಟ್ಟಿಯಾಗಿ ಅಂಟಿಕೊಳ್ಳುವಂತೆ ಮೆತ್ತಲಾಗಿದೆ. ಇದರ ಮೇಲ್ಮೈಯನ್ನು ಸಮತಲ ಮಾಡಿ ಸುಣ್ಣದ ತಿಳಿಯನ್ನು ಬಳಿಯಲಾಗಿದೆ. ಅದು ಪೂರ್ಣವಾಗಿ ಒಣಗುವುದಕ್ಕಿಂತ ಮುಂಚೆ ಚಿತ್ರಗಳನ್ನು ಬಿಡಿಸಲಾಗಿದೆ. ಈ ರೀತಿ ಫಲಕವನ್ನು ಸಿದ್ಧ ಮಾಡುವುದು ಒಂದು ವಿಶಿಷ್ಟ ತಂತ್ರ. ಹೀಗೆ ಮಾಡುವುದರಿಂದ ಚಿತ್ರಗಳು ಕಾಲಾಂತರದಲ್ಲಿಯೂ ಅಳಿಸಿ ಹೋಗುವುದಿಲ್ಲ. ಕಪೋತದಲ್ಲಿಯ ಕೈಮುಗಿದುಕೊಂಡಿರುವ ಗರುಡನ ಉಬ್ಬುಶಿಲ್ಪದ ಎರಡೂ ಬದಿಗಳಲ್ಲಿ ವರ್ಣಚಿತ್ರಗಳಿವೆ. ಇವುಗಳಲ್ಲಿ ಮೂರು ಭಾಗಗಳಿವೆ. ಗರುಡನ ಬಲಬದಿಯ ವರ್ಣಚಿತ್ರವು ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದೆ. ಮೊದಲನೇ ಭಾಗದಲ್ಲಿ ಅರಮನೆಯ ನೃತ್ಯಶಾಲೆಯ ಒಂದು ದೃಶ್ಯ. ಇಬ್ಬರು ಕಲಾವಿದರು ನೃತ್ಯವಾಡುತ್ತಿದ್ದಾರೆ. ರಾಜರಾಣಿಯರು ಆಸನಾಸೀನರಾಗಿ ನೃತ್ಯವನ್ನು ನೋಡುತ್ತಿದ್ದಾರೆ. ಇವರ ಬದಿಗಳಲ್ಲಿ ಚಾಮರಧಾರಿಗಳು, ಇತರ ಸೇವಕರು ಇದ್ದಾರೆ. ನೃತ್ಯದ ಅಂಗವಾಗಿ ವಾದ್ಯಗಳನ್ನು ನುಡಿಸುತ್ತಿರುವವರು ಒಂದು ಬದಿಯಲ್ಲಿದ್ದಾರೆ. ರಾಜನು ಸಂಪೂರ್ಣವಾಗಿ ನೃತ್ಯಾಭಿನಯದಲ್ಲಿ ತಲ್ಲೀನನಾಗಿ ತಾಳ ಹಾಕುತ್ತಿದ್ದಾನೆ ಎಂಬಂತಿದೆ. ಈ ರೀತಿ ನೃತ್ಯದ ರಸಘಟ್ಟವನ್ನು ಸೂಚಿಸಲಾಗಿದೆ. ಹಿಂಬದಿಯಲ್ಲಿ ಇದ್ದ ಪರದೆಯ ಹಿಂದಿನಿಂದ ಅರಮನೆ ವಾಸಿಗಳು ನೃತ್ಯವನ್ನು ಇಣುಕಿ ನೋಡಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಉಪ್ಪರಿಗೆ ಯಿಂದ ನೋಡುತ್ತಿದ್ದು, ಕೈಗಳ ಚಲನದಿಂದ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಎರಡನೇ ಫಲಕದಲ್ಲಿ ಒಂದು ರಾಜ ಸಭೆಯ ದೃಶ್ಯ. ರಾಜರಾಣಿಯರು ಸಿಂಹಾಸನದ ಮೇಲೆ ಕುಳಿತಿದ್ದಾರೆ. ಅಕ್ಕಪಕ್ಕದಲ್ಲಿ ಚಾಮರಧಾರಿ ಹಾಗೂ ಸೇವಕರು ಇದ್ದಾರೆ. ಮುಂಭಾಗದಲ್ಲಿ ಸಭಾಸದರು ಕುಳಿತುಕೊಂಡಿದ್ದಾರೆ. ಮತ್ತೆ ಕೆಲವರು ಕೈಮುಗಿದುಕೊಂಡು ನಿಂತು ಏನನ್ನೋ ಹೇಳುತ್ತಿರುವಂತೆ ಕಾಣುತ್ತದೆ. ಪ್ರಾಯಶಃ ಪ್ರಜೆಗಳ ದೂರು ದುಮ್ಮಾನಗಳನ್ನು ಸಭಾಸದಸ್ಯರೊಡನೆ ರಾಜನು ಪತ್ನಿ ಸಮೇತನಾಗಿ ಕೇಳುತ್ತಿರುವ ಒಂದು ಮನಮುಟ್ಟುವ ಚಿತ್ರ.

ಮೂರನೇ ಫಲಕದಲ್ಲಿ ಆಕರ್ಷಕ ದೈಹಿಕ ನಿಲುವುಳ್ಳ ಒಬ್ಬ ರಾಜನು ಕೈಯಲ್ಲಿ ಶಸ್ತ್ರವನ್ನು (ಗದೆ?) ಹಿಡಿದು ನಿಂತಿದ್ದಾನೆ. ಒಬ್ಬ ಸುಂದರ ಸ್ತ್ರೀಯು ಅವನೆಡೆಗೆ ಬರುತ್ತಿದ್ದಾಳೆ. ಆಕಾಶದಲ್ಲಿ ಅಪ್ಸರೆಯರು ತೇಲಾಡುತ್ತಿದ್ದಾರೆ. ಪ್ರಾಯಶಃ ಇದೊಂದು ಪೌರಾಣಿಕ ಕಥಾ ಸನ್ನಿವೇಶವಿರಬಹುದು. ಇದನ್ನು ಸರಿಯಾಗಿ ಗುರುತಿಸಬೇಕಾಗಿದೆ.

ಈ ಮೂರು ದೃಶ್ಯಗಳು ತುಂಬಾ ಸಹಜವಾಗಿದ್ದು ಲವಲವಿಕೆಯಿಂದ ಕೂಡಿವೆ. ಅಷ್ಟೇ ಘನತೆ ಗಂಭೀರತೆಗಳಿಂದ ಶೋಭಿಸುತ್ತವೆ. ಚಿತ್ರಗಳಲ್ಲಿ ವೈವಿಧ್ಯವಿದೆ. ಸನ್ನಿವೇಶಕ್ಕೆ ತಕ್ಕಂತೆ ಕಥಾವಸ್ತುವನ್ನು ಮಾರ್ಮಿಕವಾಗಿ ಬಣ್ಣಗಳಿಂದ, ರೇಖೆಗಳಿಂದ ಸೂಚಿಸಲಾಗಿದೆ. ವ್ಯಕ್ತಿಗಳನ್ನು ಅವರವರ ಸಂವೇದನೆಗಳನ್ನು ಮುಖಭಾವಗಳ ಮೂಲಕ ಎದ್ದು ಕಾಣುವಂತೆ ಮಾಡಿರುವುದು ಈ ಚಿತ್ರ ಮತ್ತು ಸಮಕಾಲೀನ ಚಿತ್ರಗಳ ವೈಶಿಷ್ಟವೆಂದೇ ಹೇಳಬಹುದು. ವೇಷ ಭೂಷಣಗಳು ಮತ್ತು ವರ್ಣ ಸಂಯೋಜನೆ ಆಯಾಯ ವ್ಯಕ್ತಿಗಳ ಅಂತಸ್ತು ಮತ್ತು ಸನ್ನಿವೇಶಕ್ಕನುಗುಣವಾಗಿ ಪೂರಕವಾಗಿವೆ. ಎರಡನೆಯದಾಗಿ ರಾಜಸಭೆಯಂಥ ದೃಶ್ಯದಲ್ಲಿ ಕಲಾವಿದನ ಸೂಕ್ಷ್ಮಾವಲೋಕನ ಮತ್ತು ಕಲ್ಪನಾಶಕ್ತಿ ಅಸಾಧಾರಣ. ಹಿನ್ನೆಲೆಯಲ್ಲಿ ಸಿಂಹಾಸನರೂಢ ರಾಜನನ್ನು ಮುಂಭಾಗದಲ್ಲಿಯ ಸಭಾ ಸದಸ್ಯರಿಗಿಂತ ದೊಡ್ಡ ಪ್ರಮಾಣದಲ್ಲಿ ತೋರಿಸಿರುವುದು ಅಸಹಜವಾಗಿ ಕಾಣಬಹುದು. ಆದರೆ ರಾಜಸಭೆಯಲ್ಲಿ ರಾಜನೇ ಪ್ರಧಾನ ಎಂಬ ಸತ್ಯದ ಅರಿವು ಇಲ್ಲಿ ಎದ್ದು ಕಾಣುತ್ತದೆ ಮತ್ತು ಒಬ್ಬ ಪ್ರತಿಭಾನ್ವಿತ ಕಲಾವಿದನಿಗೆ ಕಲಾ ವಸ್ತುವಿನ ಪ್ರಧಾನ ವಿಷಯವನ್ನು ತನ್ನ ವಿಶಿಷ್ಟ ತಂತ್ರ ಶೈಲಿಯಿಂದ ತಿಳಿಸಲು ಪ್ರಯತ್ನಿಸುತ್ತಾನೆ. ಇಲ್ಲಿ ನೈಜತೆ ಅಪ್ರಧಾನ. ಈ ಪ್ರಾಚೀನ ಕಲಾವಿದರು ಇಂಥ ಪ್ರತಿಭಾನ್ವಿತ ವರ್ಗಕ್ಕೆ ಸೇರಿದವರು. ಈ ರೀತಿ ಜಗತ್ತಿನ ಸುಪ್ರಸಿದ್ಧ ಕಲಾವಿಮರ್ಶಕರಿಂದ ಪ್ರಶಂಸಿಸಲ್ಪಟ್ಟ ಅಜಂತಾ ವರ್ಣಚಿತ್ರಗಳಿಗೆ ಸರಿಸಮಾನವಾಗಿವೆ ಈ ವರ್ಣಚಿತ್ರಗಳು.

ಗವಿವರ್ಣ ಚಿತ್ರ

ಬಾದಾಮಿಯ ಹೊರ ಪ್ರದೇಶದಲ್ಲಿ ಮತ್ತು ಊರೊಳಗೆ ಪ್ರಾಗೈತಿಹಾಸಿಕ ಮತ್ತು ಇತಿಹಾಸ ಕಾಲದ ಸುಮಾರು ಒಂಬತ್ತು ಗವಿ ವರ್ಣಚಿತ್ರಗಳಿವೆ. ಇತಿಹಾಸಕಾಲದ ಎರಡು ಚಿತ್ರಗಳಲ್ಲಿ ಒಂದು ಮಾತ್ರ ಬಹು ವಿಶೇಷವಾದದ್ದು. ಎಲ್ಲ ಕಾಲದ ಗವಿವರ್ಣಚಿತ್ರಗಳಲ್ಲೆಲ್ಲ ಶೈಲಿ ಮತ್ತು ವಿಷಯದಲ್ಲಿ ಇದು ತೀರ ಭಿನ್ನವಾದುದಲ್ಲದ ಈ ತರಹದ ಸಂಪ್ರದಾಯಕ್ಕೆ ಎರಡೇ ಉದಾಹರಣೆ ಇದೊಂದು ಮತ್ತು ಮಾನ್ವಿ ಗುಡ್ಡದಲ್ಲಿರುವಂಥದು. ಬಾದಾಮಿಯದು ಮಂಗಳೇಶನು ನಿರ್ಮಿಸಿದ ವಿಷ್ಣು ಲಯಣ(ಗುಹಾ ದೇವಾಲಯ ೧೧೧)ದಲ್ಲಿರುವ ಪ್ರಬುದ್ಧಪೂರ್ಣ ವರ್ಣಚಿತ್ರ ಕಲೆಯು ಶಿಷ್ಟ ಸಂಪ್ರದಾಯದ ವರ್ಣಚಿತ್ರಗಳನ್ನು ಹೋಲುತ್ತದೆ. ಒಂದನೇ ಪುಲಕೇಶಿಯ ಕೋಟೆ, ‘ಮೇಲಣ’ ಮತ್ತು ‘ಕೆಳಗಿನ’ ಶಿವಾಲಯಗಳನ್ನುಳ್ಳ ಎತ್ತರ ಗುಡ್ಡದ ಉತ್ತರಕ್ಕೆ ಒಂದು ಬೆಟ್ಟದ ಸಾಲಿದೆ. ಈ ಸಾಲಿನಲ್ಲಿ ಅಲ್ಲಲ್ಲಿ ಒಟ್ಟು ೬ ಗವಿಚಿತ್ರಗಳಿವೆ.

೧. ಅವುಗಳಲ್ಲಿ ಒಂದು ಕಲ್ಲಾಸರೆಯ ಹಿಂಬದಿಯ ನೆಟ್ಟಗಿನ ಕಲ್ಲು ಬಂಡೆಯ ಮೇಲೆ ತೆಳ್ಳಗೆ ಸ್ವಲ್ಪ ಹಳದಿ ಬಣ್ಣದ ಸುಣ್ಣದ ಲೇಪನ ಮಾಡಿದೆ. ಇದರ ಮೇಲೆ ಕೆಂಪು ಬಣ್ಣದ ರೇಖೆಗಳಲ್ಲಿ ಪ್ರಮಾಣಬದ್ಧವಾಗಿ ಎಲ್ಲ ದೈಹಿಕ ಲಕ್ಷಣಗಳನ್ನು ಕಾಣುವ ಹಾಗೆ ಗಣ್ಯವ್ಯಕ್ತಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ರೇಖೆಗಳೊಳಗಿನ ಭಾಗವು ಹಿನ್ನೆಲೆ ಹಳದಿ ಬಿಳಿಬಣ್ಣದಿಂದ ತುಂಬಿರುವುದರಿಂದ ವ್ಯಕ್ತಿಗಳ ಮೈಮಾಟ ಸ್ಫುಟವಾಗಿ ಕಾಣುತ್ತದೆ. ಒಬ್ಬಳು ಗಣ್ಯ ಸ್ತ್ರಿ ಕುಳಿತಿದ್ದಾಳೆ. ಅವಳ ಬಲಬದಿಗೆ ಅಪೂರ್ಣವಾಗಿ ಬಿಡಿಸಿದ ಮತ್ತೊಬ್ಬ ವ್ಯಕ್ತಿ ಕುಳಿತಿದ್ದು ಮತ್ತು ಎಡಬದಿಗೆ ಇಬ್ಬರು ನಿಂತಿದ್ದಾರೆ. ಈ ಗಣ್ಯ ವ್ಯಕ್ತಿಯ ಕಡೆಗೆ ಮೂವರು ಸ್ತ್ರೀಯರು ಕಮಲ ಪುಷ್ಪವನ್ನು ಹಿಡಿದು ಬರುತ್ತಿರುವ ಹಾಗಿದೆ. ಎಲ್ಲರೂ ಮಿತವಾಗಿ ಆಭರಣಗಳನ್ನು ತೊಟ್ಟಿದ್ದಾರೆ. ಪ್ರಾಯಶಃ ಉಳಿದವರು ಕುಳಿತ ಗಣ್ಯ ಸ್ತ್ರೀಯ ಸಖಿಯರಿರಬಹುದು. ಇದು ಚಿತ್ರದ ವಿಷಯವಾಗಿದ್ದು, ಸುಮಾರು ೨.೨೦ ೧.೦೦ ಮೀ. ಕ್ಷೇತ್ರದಲ್ಲಿ ಬಿಡಿಸಲಾಗಿದೆ. ನೈಸರ್ಗಿಕವಾಗಿ ಬಣ್ಣ ಬಣ್ಣ ಪಟ್ಟಿಯುಳ್ಳ ಮರಳುಕಲ್ಲಿನ ಹಿನ್ನೆಲೆ, ನಿಂತ ವ್ಯಕ್ತಿಗಳ ಮೊಳಕಾಲಿನ ಕೆಳಭಾಗ ಸಹಜವಾಗಿ ಕಪ್ಪು ಬಣ್ಣದ್ದಾದ್ದರಿಂದ ವ್ಯಕ್ತಿಗಳು ಆಕಾಶದಲ್ಲಿ ಸಂಚರಿಸುತ್ತಿದ್ದಾರೇನೊ ಎಂಬ ಭ್ರಮೆ ಉಂಟಾಗುತ್ತದೆ. ವ್ಯಕ್ತಿಗಳ ಮೈಮಾಟ, ಪ್ರಮಾಣಬದ್ಧತೆ, ಅಂಗಾಂಗಗಳನ್ನು ಬಿಡಿಸಿದ ಶೈಲಿ, ಸರಳ ಆಭರಣಗಳ ಅಲಂಕಾರ ಇವೆಲ್ಲವೂ ಬಾದಾಮಿ ಊರೊಳಗಿನ ಮೂರನೆೀ ವಿಷ್ಣು ಲಯಣದಲ್ಲಿರುವ ವರ್ಣಚಿತ್ರಗಳಿಗೆ ಸಮೀಪವಾಗಿದ್ದು, ಈ ಚಿತ್ರ ಒಬ್ಬ ನುರಿತ ಚಿತ್ರಕಾರನಿಂದ ಬಿಡಿಸಿದ್ದೆಂದು ಸೂಚಿಸುವುವು. ಇದರ ಕಾಲ ನಿಸ್ಸಂಶಯವಾಗಿ ಬಾದಾಮಿ ಚಾಲುಕ್ಯರ ಕಾಲದ್ದು. ವಿಷ್ಣು ಲಯಣದಲ್ಲಿರುವ ವರ್ಣಚಿತ್ರಗಳನ್ನು ಬಿಟ್ಟು ಈ ಕಾಲದ ಇಂಥ ಕಲಾ ಸಂಪ್ರದಾಯಕ್ಕೆ ಸಂಬಂಧಪಟ್ಟ ಚಿತ್ರಗಳು ಮತ್ತೆಲ್ಲಿಯೂ ಗೋಚರವಾಗಿಲ್ಲ. ಆದ್ದರಿಂದ ಈ ಬಂಡೆಚಿತ್ರವು ಮಹತ್ವದ್ದು. ಇತ್ತೀಚೆಗೆ ಈ ಸ್ಥಳದಲ್ಲಿ ಇದೇ ತರಹದ ಮತ್ತು ಶೈಲಿಯ ಇನ್ನೊಂದು ಕಲ್ಲಾಸರೆ ವರ್ಣಚಿತ್ರವನ್ನು ಶೀಲಾಕಾಂತ ಪತ್ತಾರ ಅವರು ಶೋಧಿಸಿದ್ದಾರೆ.

೨. ವೈಲ್ ಮರ್ಚೇಡಿನ ಚಿತ್ರವು ಒಂದು ದೊಡ್ಡ ಕಲ್ಗುಡ್ಡದ ಬದಿಯಲ್ಲಿ ಇದೆ. ಇದರ ನೈರುತ್ಯಕ್ಕೆ ಗುಡ್ಡದಂಚಿನಲ್ಲಿ ಮುಂಚಾಚಿದ ಒಂದು ದೊಡ್ಡ ಬಂಡೆ. ಇದರ ಒಳಮೈ ಮೇಲೆ ಹಲವಾರು ಕುದುರೆ ಸವಾರರ ಚಿತ್ರಗಳಿವೆ. ಈ ಚಿತ್ರದ ಕಲ್ಗುಂಡಿಗೆ ಸ್ಥಳೀಕವಾಗಿ ‘ಕಾಟಮಯ್ಯನ ಗುಂಡು’ ಎಂದು ಹೆಸರು. ಇದರ ಅನತಿ ದೂರದಲ್ಲಿ ಉತ್ತರ ಬದಿಗೆ ಕೆಂಪು ಕಪ್ಪು ದ್ವಿವರ್ಣದ ಮೃತ್ಪಾತ್ರೆಯ ಚೂರುಗಳು ಅಲ್ಲಲ್ಲಿ ಬಿದ್ದಿವೆ. ಬಹುಶಃ ಬೃಹತ್ ಶಿಲಾ ಸಂಸ್ಕೃತಿಯ ಅವಶೇಷಗಳೆಂದು ಕಾಣುವುದು. ಈ ಗುಂಪಿನ ಹಿಂಬದಿಗೆ ಬಯಲಿನಲ್ಲಿ ಮಧ್ಯಯುಗೀನ ಕಾಲದ ಒಂದು ಜನವಾಸ್ತವ್ಯದ ನೆಲೆಯೂ ಇದೆ. ಇದರಲ್ಲಿ ಮನೆಗಳ ನೆಲೆಗಟ್ಟಿನ, ಬೂದು ಬಣ್ಣದ ಮೃತ್ಪಾತ್ರೆಗಳ ಅವಶೇಷಗಳು ಮೊದಲಾದವು ಇವೆ.

ಚಿತ್ರಗಳು ಎರಡು ಗುಂಪುಗಳಲ್ಲಿವೆ. ಮೇಲಿನ ಗುಂಪಿನಲ್ಲಿ ಕುದುರೆ ಸವಾರರ ಮತ್ತು ಗೂಳಿಗಳ ಚಿತ್ರಗಳು. ಒಬ್ಬ ಕುದುರೆ ಸವಾರನ ಎಡಗೈಯಲ್ಲಿ ಉದ್ದನೆಯ ಈಟಿ ಇದೆ. ಕುದುರೆಗೆ ಜೀನು ತೊಡಿಸಲಾಗಿದೆ. ತಲೆಯ ಮೇಲೆ ರಕ್ಷಣಾ ಕವಚವಿದೆ. ಬಾಯಿಗೆ ಹಾಕಿದ ಕಡಿವಾಣದಿಂದ ಲಗಾಮು ಸಹಜವಾಗಿ ಕುತ್ತಿಗೆ ಕೆಳಗಡೆಯಿಂದ ಹಾದು ಸವಾರನ ಬಲಗೈಯಲ್ಲಿದೆ. ಸವಾರನು ತಲೆಗೆ ಪೇಟ(ಪಟಗಾ)ವನ್ನು ಕಟ್ಟಿದ್ದಾನೆ. ಇದೇ ತರಹದ ಜೋಡಿ ಸವಾರರು ಎದುರು ಬದುರಿದ್ದು ತಮ್ಮ ಈಟಿಗಳಿಂದ ಕಾದಾಡುತ್ತಿದ್ದಾರೆ. ಇಂಥ ಕಾದಾಟದ ಚಿತ್ರ ಮೂರಿವೆ. ಚಿತ್ರಗಳ ಮಧ್ಯದಲ್ಲಿ ಓಡುತ್ತಿರುವ ಇಣಿಯುಳ್ಳ ಎರಡು ದನ ಗೂಳಿಗಳಿವೆ.

ಎರಡನೇ ಗುಂಪಿನಲ್ಲಿ ಇಬ್ಬರು ಸವಾರರು ಈಟಿ ಮತ್ತು ಕತ್ತಿಯನ್ನು ಹಿಡಿದು ಜೀನು ಕಡಿವಾಣ ಹಾಕಿದ ಕುದುರೆಯ ಮೇಲೆ ಹೋಗುತ್ತಿರುವುದು. ಇವಲ್ಲದೆ ಬಾಲ ಎತ್ತಿಕೊಂಡು ಗುಂಪು ಗುಂಪಾಗಿ (ಎರಡೆರಡು, ಮೂರು, ನಾಲ್ಕು, ಐದು) ದನ ಗೂಳಿಗಳು ಕುದುರೆ ಸವಾರರ ಮಧ್ಯ ಮುಂದೆ ಓಡುತ್ತಿರುವುದು. ಬಹುಶಃ ಆಗಿನ ಕಾಲದಲ್ಲಿ ಆಗಾಗ್ಗೆ ನಡೆಯುತ್ತಿದ್ದ ಗೋಗ್ರಹಣದ ವಿಷಯದ ನಿರೂಪಣೆ ಇರಬಹುದು. ನಿರೂಪಣಾ ಶೈಲಿ ಬಹಳ ಸಹಜವಾಗಿದೆ. ವೀರಗಲ್ಲು, ಶಿಲ್ಪಫಲಕಗಳಲ್ಲಿ ಸುಮಾರು ೯ನೇ ಶತಮಾನದಿಂದ ಈ ವಿಷಯ ಸರ್ವೇಸಾಮಾನ್ಯ. ವರ್ಣಚಿತ್ರದಲ್ಲಿ ಈ ವಿಷಯ ತೋರಿಸಿರುವ ಉದಾಹರಣೆ ಇದೊಂದೇ. ಇವೆರಡು ಗುಂಪು ಚಿತ್ರಗಳ ಮತ್ತೊಂದು ಬದಿಯಲ್ಲಿ ಸ್ವಲ್ವ ಆಚೆಗೆ ಮತ್ತೊಂದು ಬಂಡೆಯ ಮೇಲೆ ಅಂಗೈಯ ಚಟ್ಟುಗಳಿವೆ. ಚಿತ್ರಗಳೆಲ್ಲವೂ ಕಂದು ಕೆಂಪು ಕೆಮ್ಮಣ್ಣಿನ ಬಣ್ಣದಲ್ಲಿವೆ. ಮೊದಲು ಸ್ವಲ್ಪ ಹಳದಿ ಮಿಶ್ರಿತ ಸುಣ್ಣವನ್ನು ಬಂಡೆಯ ಮೇಲ್ಮೈಯ ಮೇಲೆ ಬಳಿದು, ಅದರ ಮೇಲೆ ಈ ಚಿತ್ರಗಳನ್ನು ತೆಗೆಯಲಾಗಿದೆ. ಚಿತ್ರಗಳೆಲ್ಲವೂ ಛಾಯಾಕೃತಿಗಳು.

ಹಿಂದೆ ಮುಖ್ಯವಾಗಿ ಕುದುರೆ ಸವಾರರ ಚಿತ್ರಗಳು ವಿಜಯನಗರ ಕಾಲದ ಇಂಥ ಶಿಲ್ಪಗಳಿಗೆ ಹೋಲುವುದರಿಂದ ಮತ್ತು ಈ ಚಿತ್ರಗಳಿರುವ ನೆಲೆಯ ಸಮೀಪ ಉತ್ತರ ಮಧ್ಯಕಾಲೀನ ಜನವಾಸ್ತವ್ಯದ ನೆಲೆಯಿರುವುದರಿಂದ ನನ್ನ ಅಧ್ಯಯನದಲ್ಲಿ ಈ ಚಿತ್ರಗಳು ಪ್ರಾಯಶಃ ಹೆಚ್ಚು ಕಡಿಮೆ ಅದೇ ಕಾಲದ್ದಿರಬಹುದೆಂದು ಅಭಿಪ್ರಾಯಪಟ್ಟಿದೆ. ಆದರೆ ಇತ್ತೀಚೆಗೆ ಇವುಗಳನ್ನು ಮತ್ತೆ ಪರಿಶೀಲಿಸಿದಾಗ ಇಣಿಯುಳ್ಳ, ಹಿಂದೆ ಬಾಗಿದ ಕೋಡುಗಳುಳ್ಳ ಎತ್ತು ದನಗಳ ಮಾದರಿಗಳನ್ನು ಮತ್ತೆ ಕುದುರೆ ಸವಾರರೆಲ್ಲರೂ ಭಲ್ಲೆಯನ್ನೆ ಹಿಡಿದಿರುವುದನ್ನು ಗಮನಿಸಿದಾಗ ಬ್ರಹ್ಮಗಿರಿ ಮೊದಲಾದೆಡೆಗಳಲ್ಲಿಯ ಕಬ್ಬಿಣ ಯುಗದ ಬೃಹತ್ ಶಿಲಾ ಗೋರಿಗಳಲ್ಲಿಯ ಭಲ್ಲೆಗಳ ಮತ್ತು ಹಿರೇಬೆನಕಲ್ಲಿನ ಈಟಿ ಭಲ್ಲೆ ಹಿಡಿದ ಕುದುರೆ ಸವಾರರ ಚಿತ್ರಗಳ ಒಟ್ಟಾರೆ ಮಾದರಿಗಳು ನೆನಪಿಗೆ ಬರುತ್ತವೆ. ಆದರೆ, ಕುದುರೆಗಳನ್ನು ನಡೆಸುವ ರೀತಿ ಮತ್ತು ಗೋಗ್ರಹಣವನ್ನು ಚಿತ್ರಗಳು ನಿರ್ದೇಶಿಸುವುದರಿಂದ ಇವು ಇತಿಹಾಸ ಕಾಲದವು. ಈಗಾಗಲೇ ಶಾತವಾಹನ ಕಾಲದ ಕಲೆಯನ್ನು ವಿವರಿಸುವಾಗ ಚಿಕ್ಕರಾಮಪುರದ ಗೋ ಗ್ರಹಣ(?)ವೇ ವಸ್ತುವಾಗಿರುವ ಒಂದು ವರ್ಣಚಿತ್ರವು ಪ್ರಾಯಶಃ ಆದಿ ಇತಿಹಾಸದ್ದೆಂದು ಅಭಿಪ್ರಾಯ ಪಡಲಾಗಿದೆಯಷ್ಟೆ. ಆ ಚಿತ್ರದಲ್ಲಿಯ ವ್ಯಕ್ತಿ ಕುದುರೆ, ಎತ್ತುಗಳ ಮಾದರಿಗಳಿಗಿಂತ ಈ ನೆಲೆಯ ಚಿತ್ರಗಳು ಸ್ವಲ್ಪ ಭಿನ್ನವಾಗಿವೆ. ಆದ್ದರಿಂದ ಇವು ಶಾತವಾಹನ ಕಾಲದಿಂದ ಮುಂದುವರೆದ ಪರಂಪರೆಯದಾಗಿದ್ದು, ಬಹುಶಃ ಬಾದಾಮಿ ಚಾಲುಕ್ಯ ಕಾಲದ್ದಾಗಿರಬಹುದೆಂದು  ಸದ್ಯಕ್ಕೆ ನನ್ನ ಅಭಿಪ್ರಾಯ.

ಬೈಲ್‌ಮರ್ಚೇಡಿನ ಚಿತ್ರಗಳು ಬಾದಾಮಿ ಚಾಲುಕ್ಯ ಕಾಲದ್ದಾಗಿದ್ದಲ್ಲಿ ಆ ಕಾಲದ ಗವಿವರ್ಣ ಚಿತ್ರಗಳಲ್ಲಿ ಎರಡು ಮುಖ್ಯ ಸಂಪ್ರದಾಯಗಳನ್ನು ಸ್ಪಷ್ಟವಾಗಿ ಗುರುತಿಸಬಹುದು: ಒಂದು ಶಿಷ್ಟ ಸಂಪ್ರದಾಯ ಮತ್ತು ಇನ್ನೊಂದು ಜಾನಪದ ಸಂಪ್ರದಾಯ. ಮೇಲೆ ವಿವರಿಸಿದ ಬಾದಾಮಿ ಮತ್ತು ಬೈಲ್‌ಮೆರ್ಚೇಡಿನ ಚಿತ್ರಗಳು ಕ್ರಮವಾಗಿ ಇವೆರಡು ಸಂಪ್ರದಾಯಗಳ ಪ್ರತೀಕಗಳು.

ಈ ಚಿತ್ರಗಳನ್ನು ತೆಗೆದ ಸ್ವಲ್ಪ ಕಾಲದ ಮೇಲೆ ದಪ್ಪನೆಯ ಕವಲೊಡೆದ ರೆಂಬೆಯ ಚಿತ್ರ ಮೂಡಿಸಲಾಗಿದೆ. ಇದು ಸುಮಾರು ೨೦೦ ವರ್ಷಗಳಿಂದೀಚಿನದಿರಬಹುದು. ಈ ರೆಂಬೆಯ ಚಿತ್ರದ ಮೇಲೆ ಸುಣ್ಣದಲ್ಲಿ ಹನುಮಂತನ ಚಿತ್ರ ಬರೆಯಲಾಗಿದೆ. ಇದು ತೀರ ಇತ್ತೀಚಿನು.