ಅಯ್ಯಾವೊಳೆ ಐನೂರ್ವರು ಈ ಸಂಘದ ಪ್ರಶಸ್ತಿಗಳಲ್ಲಿ ಸಂಘವು ಅಯ್ಯಾವೊಳೆಯಲ್ಲಿ ಜನಿಸಿತ್ತೆಂದು ಹೇಳಿದೆ. ಆದರೆ ಇದರ ಜನ್ಮದಾತರು ಅಲ್ಲಿಯ ಮಹಾಜನರೇ ಅಥವಾ ಅಲ್ಲಿಯ ನಗರ ಸಂಸ್ಥೆಯೇ? ಮಹಾಜನರು ಅಥವಾ ಅವರ ಇನ್ನೊಂದು ಹೆಸರಾದ ಚತುರ್ವಿದ್ಯಾ ಸಮುದಾಯದವರು ಬ್ರಾಹ್ಮಣರು. ನಗರ ಸಂಸ್ಥೆಯವರು ಬ್ರಾಹ್ಮಣರಲ್ಲ. ಅವರು ಜೈನರು, ವೈಶ್ಯರು, ಶೈವರು ಅಥವಾ ವೀರಶೈವರು. ಬಾದಾಮಿ ಚಾಳುಕ್ಯರ ಕಾಲದಲ್ಲಿಯ ಎರಡು ಶಾಸನಗಳಲ್ಲಿ ಅಯ್ಯಾವೊಳೆಯ ಐನೂರ್ವ ವರ್ತಕರ ಸಂಘದ ಅತೀ ಪ್ರಾಚೀನ ಉಲ್ಲೇಖ ಬರುತ್ತದೆ. ಮೊದಲನೆಯ ಶಾಸನ

[1] “ಐಹೊಳೆಯ ಲಾಡಖಾನ್ ದೇವಸ್ಥಾನದಲ್ಲಿದೆ. ಅದರಲ್ಲಿ ನಮಗೆ ಬೇಕಾದ ವಿಷಯ ಹೀಗಿದೆ: “ಶ್ರೀ ಮಹಾಚತುರ್ವ್ವಿದ್ಯಾ ಸಮುದಾಯಂ ಐನೂರ್ವರಕ್ಕಂ” ಬೆಣ್ಣಮ್ಮ ಸೋಮಯಾಜಿಗಳು ಕೊಟ್ಟ ದಾನ. ಅದೇ ಶಾಸನದಲ್ಲಿ “ರಾಜ ಶ್ರಾವಿತಂ ಮಹಾಜನಮುಂ ನಕರ ಶ್ರಾವಿತು” ಎಂದಿರುವುದರಿಂದ ಮಹಾಜನರ ಜನತೆ ನಕರ ಅಥವಾ ನಗರ ಅಥವಾ ವರ್ತಕರು ದಾನವನ್ನು ಘೋಷಿಸಿದರು. ರಾಜರು, ಮಹಾಜನರು ಮತ್ತು ವರ್ತಕರು ಈ ದಾನವನ್ನು ಊರಿನವರಿಗೆ ಸಾರಿದರು ಅಥವಾ ತಿಳಿಯಪಡಿಸಿದರು. ಎರಡನೇ ಶಾಸನ, ಐಹೊಳೆಯಲ್ಲಿ ಮೊದಲಿನ ಶಾಸನದ ಪಕ್ಕದಲ್ಲಿರುವ ಗೌಡರ ಗುಡಿಯಲ್ಲಿದೆ. ಇದರಲ್ಲಿ “ಶ್ರೀ ಮದಾರ್ಯವುರಂ ಶ್ರೀಮಹಾಚತುರ್ವಿದ್ಯಾ ಸಮುದಾಯ ಮಯೈನೂರು ಮಹಾಜನಮುಂ ಎಂಟು ನಗರಮುಂ ದುರ್ಗ್ಗಾ ಭಗವತಿ”ಯರಿಗೆ ದಾನ ಕೊಟ್ಟರೆಂದಿದೆ. ಹೀಗಿ ಅತೀ ಪ್ರಾಚೀನ ಶಾಸನಗಳಲ್ಲಿ ಐನೂರು ಮಹಾಜನರು ಮತ್ತು ನಗರ ಸಂಸ್ಥೆಯವರ ಉಲ್ಲೇಖ ಜತೆಜತೆಯಲ್ಲಿ ಬಂದಿದೆ. ಎರಡನೇ ಶಾಸನದ ತೇದಿಯ ಮೊದಲಿನ ಶಾಸನದ ಕಾಲಕ್ಕೇ ಅಂದರೆ ೮ನೇ ಶತಮಾನದ ಮಧ್ಯಭಾಗ ಇದರಲ್ಲಿ ಶ್ರೀಮದಾರ್ಯವುದರ ಶ್ರೀ ಮಹಾ ಚತುರ್ ವಿದ್ಯಾಸಮುದಾಯ ಮೈನೂರಂ ಮಹಾಜನಮುಂ ಎಂಟುಂ ನಗರಮುಂ.. ದುರ್ಗ್ಗಾ ಭಗವತಿಯರ್ಕೆ” ದಾನವನ್ನು ಕೊಟ್ಟರು ಎಂದಿದೆ.

ಹೀಗೆ ಎರಡೂ ಶಾಸನಗಳಲಿ್ಲ ೫೦೦ ಮಹಾಜನರು ಮತ್ತು ನಗರ ಸಂಸ್ಥೆಯವರ ಉಲ್ಲೇಖವಿದೆ. ಐಹೊಳೆಯಲ್ಲಿ ಇನ್ನೂ ಎರಡು ಶಾಸನಗಳಲ್ಲಿ[2] ಐನೂರು ಮಹಾಜನರ ಉಲ್ಲೇಖವಿದೆ. ಈ ಎರಡೂ ಶಾಸನಗಳು ೧೨ನೇ ಶತಮಾನದವು. ಅಂದರೆ ಐಹೊಳೆ ೧೧ನೇ ಶತಮಾನದಿಂದ ೧೨ನೇ ಶತಮಾನದವರೆಗೂ ಐನೂರು ಮಹಾಜನಗಳುಳ್ಳ ಅಗ್ರಹಾರವಾಗಿದ್ದಿತು. ಮತ್ತು ಮೊದಲಿನ ಎರಡು ಶಾಸನಗಳಲ್ಲಿ ಮಹಾಜನರೂ ಮತ್ತು ನಗರಗಳು ಸೇರಿ ದಾನ ಕೊಟ್ಟರು. ಇವುಗಳಲ್ಲಿ ಈ ಮೊದಲನೆಯದು ಲಾಡ್‌ಖಾನ್ ಎನ್ನುವ ಕಟ್ಟಡದಲ್ಲಿದೆ. ಎರಡನೆಯದು ಅದರ ಪಕ್ಕದಲ್ಲಿರುವ ಗೌಡರ ಗುಡಿಯಲ್ಲಿದೆ. ಬಾದಾಮಿಯಲ್ಲಾದ ಇತಿಹಾಸ ಅಕಾಡೆಮಿ ವಾರ್ಷಿಕೋತ್ಸವ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ.ಎಸ್.ರಾಜಶೇಖರ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಹಳ ಮಹತ್ವದ ಶೋಧನೆಯನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಪ್ರಸ್ತುತವಾದದ್ದು;

ಲಾಡ್‌ಖಾನ್ ದೇವಸ್ಥಾನವು ಐಹೊಳೆಯ ನಗರ ವರ್ತಕ ಸಂಘದ ಸಭಾಗೃಹವಾಗಿತ್ತು ಮತ್ತು ಈಗ ಕರೆಯಲಾಗಿರುವ ಗೌಡರಗುಡಿಯು ದುರ್ಗ್ಗಾಭಗವತಿಯ ಗುಡಿಯಾಗಿತ್ತು.

ಈ ಊಹೆಗಳು ನಂಬಲರ್ಹವಾಗಿವೆ. ಎಲ್ಲರೂ ಲಾಡ್‌ಖಾನ್ ದೇವಸ್ಥಾನ ಆಗಿರಲಿಕ್ಕಿಲ್ಲ. ಅದು ಲೌಕಿಕ ಕಾರ್ಯಗಳಿಗೆ ಉಪಯೋಗಿಸುತ್ತಿದ್ದಿರಬೇಕೆನ್ನುವ ಅನುಭವವನ್ನು ವ್ಯಕ್ತಪಡಿಸಿದ್ದರು. ಡಾ. ರಾಜಶೇಖರರ ಊಹೆ ಈ ದೃಷ್ಟಿಯಿಂದ ಬಹಳ ಮಹತ್ವದ್ದು. ಅಷ್ಟೇ ಮಹತ್ವದ್ದು ಅದರ ಪಕ್ಕದ ಗುಡಿ ದುರ್ಗ್ಗಾಭಗವತಿಯದೆನ್ನುವುದು. ಈ ಊಹೆಗಳು ನಿಜವಾದರೆ ಐಹೊಳೆ ಐನೂರರ ವರ್ತಕ ಸಂಘ ಐಹೊಳೆಯಲ್ಲಿ ಯಾವ ಸ್ಮಾರಕವನ್ನು ಹೊಂದಿಲ್ಲವೆಂದು ಹೇಳಲು ಬರುವುದಿಲ್ಲ. ಹಾಗಿದ್ದರೆ ಈ ವರ್ತಕ ಸಂಘದವರಿಗೂ ಮತ್ತು ಅಲ್ಲಿಯ ೪೦೦ ವರ್ಷಗಳಿಂದ ಇದ್ದ ಮಹಾಜನಸಂಸ್ಥೆಗೂ ಯಾವ ರೀತಿಯ ಸಂಬಂಧ ವಿತ್ತೆನ್ನುವುದನ್ನು ತಿಳಿದುಕೊಳ್ಳಬೇಕು. ವರ್ತಕ ಸಂಘದ ಹೆಸರು ಅಯ್ಯಾವೊಳೆ ಐನೂರು ಮತ್ತು ಮಹಾಜನರ ಹೆಸರು ಅಯ್ಯಾವೊಳೆ ಐನೂರು ಎಂದಿರುವುದರಿಂದ, ಮಹಾಜನರೇ ವರ್ತಕ ಸಂಘದ ಸ್ಥಾಪಕರೆಂದು ಫ್ಲೀಟ್[3] ಮೊದಲು ಮಾಡಿ ಅನೇಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ವೀರಾ ಅಬ್ರಹಾಂ[4] ಮತ್ತು ಚಂಪಕ ಲಕ್ಷ್ಮಿಯವರು[5] ಈ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಕರಷಿಮಾ ಮತ್ತು ಸುಬ್ಬರಾಯಲು[6] ಅವರು ಇವೆರಡರ ಸಂಬಂಧ ನಿಗೂಢವಾಗಿದೆ ಅಂದರೆ ಅಷ್ಟು ಸಷ್ಟವಾಗಿಲ್ಲವೆಂದಿದ್ದಾರೆ. ಆದರೆ ಅದರಲ್ಲಿ ನಿಗೂಢತೆ ಏನೂ ಇಲ್ಲ. ಮಹಾಜನರು ಅಥವಾ ಬ್ರಾಹ್ಮಣರು ಬ್ರಾಹ್ಮಣರಲ್ಲದ ವರ್ತಕ ಸಂಘದ ಸ್ಥಾಪಕರು ಹೇಗೆ ಆಗುತ್ತಾರೆ? ನಗರ ಎನ್ನುವ ವರ್ತಕರ ಸಂಘದವರು ಅಯ್ಯಾವೊಳೆ ಎನ್ನುವ ವರ್ತಕ ಸಂಘದ ಸ್ಥಾಪಕರು. ಇವರು ಮೊದಲಿನಿಂದಲೂ ಅಂದರೆ ಬಾದಾಮಿ ಚಾಳುಕ್ಯರ ಕಾಲದಿಂದಲೂ ಮಹಾಜನರ ಜತೆಗಿರುವುದನ್ನು ಲಾಡ್‌ಖಾನ್ ಮತ್ತು ಗೌಡರಗುಡಿ ಶಾಸನಗಳಿಂದ ನೋಡಿದ್ದೇವೆ. ಅವರಲ್ಲಿ ಯಾರು ವರ್ತಕ ಸಂಘದ ಸ್ಥಾಪಕರೆನ್ನುವ ಪ್ರಶ್ನೆಯನ್ನೂ ಕೇಳುವುದೇ ಸರಿಯಲ್ಲ.

ವರ್ತಕ ಸಂಘದ ಸ್ಥಾಪಕರು ವರ್ತಕರೇ ಹೊರತು, ವರ್ತಕರಲ್ಲದವರು ಆಗುವುದಿಲ್ಲ. ಆದರೆ ಈ ವರ್ತಕ ಸಂಘದವರಿಗೆ ಮಹಾಜನರ ಬೆಂಬಲವಿತ್ತು. ಹೇಗೆಂದರೆ ಮಹಾಜನರು ಅಯ್ಯಾವೊಳೆಯ ಪುರವರಾಧೀಶ್ವರ ಅಂದರೆ ಅದರ ಆಡಳಿತಗಾರರು. ವ್ಯಾಪಾರಸಂಘವನ್ನೂ ಸ್ಥಾಪಿಸಲಿಕ್ಕೆ ಮತ್ತು ವ್ಯಾಪಾರ ಮಾಡಲಿಕ್ಕೆ ಅವರಿಗೆ ಶಾಸನಗಳನ್ನು ಕೊಟ್ಟರು. ಅದಕ್ಕೆ ವರ್ತಕರು ತಮ್ಮ ಶಾಸನಗಳಲ್ಲಿ ಮಹಾಜನರಿಗೆ ಕೃತಜ್ಞರಾಗಿ ಪಂಚಶತವೀರ ಶಾಸನ ಲಬ್ಧರೆಂದು ಹೇಳಿಕೊಂಡಿದ್ದಾರೆ.

ಅದೇ ಪ್ರಶಸ್ತಿಗಳಲ್ಲಿ ವರ್ತಕರು ತಮ್ಮ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾರೆ[7]; “ರುಜಶತ ವೀರಶಾಸನ ಲಬ್ದಾನೇಕಗುಣ ಗಣಾಲಂಕಿತ ಸತ್ಯಾ ಶೌಚಾಚಾರ ನಯವಿನಯ ಸಂಪನ್ನರಪ್ಪ ಶ್ರೀ ವೀರಬಣಂಜು ಧರ್ಮಪ್ರತಿಪಾಲನ ವಿಶುದ್ಧಗುಡ್ಢಧ್ವಜ ವಿರಾಜಿತ ಲಕ್ಷ್ಮೀ ವೃಕ್ಷಸ್ಥಳಂ ವಾಸುದೇವ ಕಂಡಲಿ ಮೂಲ ಭದ್ರೋದ್ಭವಂ ಭಾಗವತೀ ವರಪ್ರಸಾದಂ… ನಡೆಗುಂ ನುಡಿಗಂ.” ಇವು ಅವರ ಗುಣಗಾನ ಮತ್ತು ಮೂಲ ದೇವತೆಗಳು.

ಇವರು ಅನೇಕ ರಾಷ್ಟ್ರಗಳಲ್ಲಿ ವ್ಯವಹರಿಸುತ್ತಿದ್ದರು. ಎಲ್ಲಾ ತರಹ ವಾಹನಗಳನ್ನು ಉಪಯೋಗಿಸುತ್ತಿದ್ದರು. ಮತ್ತು ಎಲ್ಲಿ ಲಾಭವಿದೆಯೋ ಅಲ್ಲಿಗೆ ಹೋಗಿ, ಹೋದಲ್ಲೆಲ್ಲಾ ದಾನಧರ್ಮ ಮಾಡಿ ಸ್ಥಳೀಯ ವ್ಯಾಪಾರಿಗಳಿಗೆ ಮಾದರಿಯಾದರು. ಮತ್ತು ಸ್ಥಳೀಯ ವ್ಯಾಪಾರಿಗಳು ತಮ್ಮ ಹೆಸರು ಅಯ್ಯಾವೊಳೆ ಐನೂರು ಅಥವಾ ನಾನಾದೇಶಿ ಇತ್ಯಾದಿಗಳಿಂದ ಹೇಳಿಕೊಳ್ಳಹತ್ತಿದ್ದನ್ನು ನಾವು ಮುಂದೆ ನೋಡುತ್ತೇವೆ. ಇವರು ಹೋದಲ್ಲೆಲ್ಲಾ ದಾನ ಧರ್ಮ ಮಾಡಿ, ಸ್ಥಳೀಯ ವ್ಯಾಪಾರಿಗಳಿಗೆ ಮಾದರಿಯಾದರು ಮತ್ತು ಅಲ್ಲಿಯ ಜನರಿಗೆ ಬೇಕಾದವರಾದರು.

ಹೀಗೆ ಮಾಡಿದ್ದರಿಂದ ಅಯ್ಯಾವೊಳೆ ದೊಡ್ಡ ವ್ಯಾಪಾರ ಕೇಂದ್ರವಾಯಿತು. ಇದೇ ಸಮಯದಲ್ಲಿ ಅಯ್ಯಾವೊಳೆಯಲ್ಲಿ ಆಳಿದ ಬಾದಾಮಿ ಚಾಳುಕ್ಯರು, ರಾಷ್ಟ್ರಕೂಟರು, ಕಲ್ಯಾಣಚಾಳುಕ್ಯ ರಾಜರುಗಳ ಪ್ರೋಅಯ್ಯೋವೊಳೆಯಲ್ಲಿ ಅನೇಕ ದೇವಸ್ಥಾನಗಳು ಜನ್ಮ ತಾಳಿದವು. ಹೀಗೆ ಆಗುವುದರಲ್ಲಿ ವರ್ತಕರದು ದೊಡ್ಡ ಪಾತ್ರವು ಇತ್ತೆಂದು ನಾವು ಊಹಿಸಬಹುದು. ಈ ಅಸಂಖ್ಯ ದೇವಸ್ಥಾನಗಳಿಂದ, ಅಯ್ಯಾವೊಳೆ ದೊಡ್ಡ ಯಾತ್ರಾ ಸ್ಥಳವಾಯಿತು. ಒಂದು ಶಾಸನದಲ್ಲಿ ಅದನ್ನು ಮಹಾಕಾಶಿಯೆಂದು ಕರೆಯಲಾಗಿದೆ.[8] ಇಂಥವರು ರಾಷ್ಟ್ರಕೂಟ ಮೂರನೇ ಕೃಷ್ಣನ ಜನತೆ ತಮಿಳುನಾಡಿಗೆ ಹೋದಾಗ ಅಲ್ಲಿಯ ವರ್ತಕರು ಇವರ ದೇವರನ್ನು ಇವರ ಪದ್ಧತಿಗಳನ್ನು ಇವರ ಶಾಸನಗಳಲ್ಲಿಯ ಇವರ ಪ್ರಶಂಸೆಯನ್ನು ಇವರ ಬೇರೆ ಬೇರೆ ಹೆಸರುಗಳನ್ನು ತಮ್ಮದನ್ನಾಗಿಸಿದರು. ಹೋದ ಸ್ವಲ್ಪ ದಿನಗಳಲ್ಲಿಯೇ ತಮಿಳುನಾಡಿನ ಕೆಲವು ಊರುಗಳಿಗೆ ಕೇರಿಗಳಿಗೆ ದೇವರುಗಳಿಗೆ ಅಯ್ಯಾವೊಳೆಯ ಅಥವಾ ಐನೂರ್ವರ ಅಥವಾ ಅವಕ್ಕೆ ಸಮನಾದ ದೇಶಿ ನಾನಾ ದೇಶಿ-ಈ ಹೆಸರುಗಳನ್ನಿಟ್ಟರು. ಉದಾಹರಣೆಗೆ ಕರ್ನಾಟಕದ ವರ್ತಕರಂತೆ ತಮಿಳರು ಭಗವತೀ ಆರಾಧಕರೆಂದೂ ವಾಸುದೇವ ಖಂಡಲಿ ಮೂಲಭದ್ರರಿಂದ ಉದ್ಭವವಾದರೆಂದು ತಮ್ಮ ಪ್ರಶಸ್ತಿಗಳಲ್ಲಿ ಹೇಳಿಕೊಂಡರು.[9]

ತಮಿಳುನಾಡಿನ ನಾಟುಕೋಟಿ ಚಟ್ಟಿಯವರು ಇವತ್ತಿಗೂ ಅಯ್ಯಾವೊಳೆಯ ಈಶ್ವರನನ್ನು ಆರಾಧಿಸುತ್ತಾರೆ. ಯಾವುದಾದರೂ ಶುಭಕಾರ್ಯ ಆರಂಭಿಸುವ ಮುಂಚೆ ಈ ಈಶ್ವರನಿಗೆ ನಡೆದುಕೊಳ್ಳುವುದು, ತಮ್ಮೆಲ್ಲ ಯಾವ ವರ್ತಕನು ದಿವಾಳಿಯಾದಾಗ ಅವನಿಗೆ ಸಹಾಯ ಮಾಡುವುದು, ದಾನ ಧರ್ಮಗಳನ್ನು ಮಾಡುವುದು ಈ ಎಲ್ಲಾ ಕೆಲಸಗಳನ್ನು ಒಗ್ಗಟ್ಟಿನಿಂದ ಮಾಡುವುದು, ಈ ಪದ್ಧತಿಗಳಿಂದ ಇವತ್ತು ಅಯ್ಯಾವೊಳೆಯ ಹೆಸರು ಉಳಿದಿದ್ದರೆ, ಅದು ನಾಟುಕೋಟಿ ಚೆಟ್ಟಿಯರಲ್ಲಿ.[10] ಅವರೇ ಈ ಹೆಸರನ್ನು ಶ್ರೀಲಂಕಾ ಮತ್ತು ಸುಮಾತ್ರ[11]ಗಳಿಗೆ ಕೊಂಡೊಯ್ದರು. ಕರ್ನಾಟಕದಲ್ಲಿ ಇವರ ಹೆಸರು ಹೇಳಹೆಸರಿಲ್ಲದ ಹಾಗೆ ಮಾಯವಾಗಿದೆ. ಕರ್ನಾಟಕದಲ್ಲಿ ಇವರ ಹೆಸರು ಅಯ್ಯಪ್ಪ ಶೆಟ್ಟಿಯಾಗಿ ಉಳಿದಿದೆ ಎಂದು ಡಾ.ಎ.ಎಂ. ಕಲಬುರ್ಗಿ ಮತ್ತು ಡಾ. ಬಿ.ಆರ್. ಹಿರೇಮಠರು ಹೇಳುತ್ತಾರೆ.[12]

ಈಗ ಅಯ್ಯಾವೊಳೆ ಅಥವಾ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಅಲ್ಲಿಯ ಅಸಂಖ್ಯ ದೇವಸ್ಥಾನಗಳಿಗೆ ಪ್ರಸಿದ್ದಿಯಾಗಿದೆ. ಆದರೆ ಬಾದಾಮಿ ಚಾಳುಕ್ಯರ ಕಾಲದಿಂದ ವಿಜಯನಗರ ಕಾಲದವರೆಗೂ ಅಯ್ಯಾವೊಳೆ ಐನೂರ್ವರೆಂದು ಪ್ರಸಿದ್ಧ ವರ್ತಕ ಸಂಘದ ಜನ್ಮಸ್ಥಾನವಾಗಿ ಅಲ್ಲಿಂದ ದಕ್ಷಿಣ ಭಾರತ, ಶ್ರೀಲಂಕಾ, ಸುಮಾತ್ರಗಳಿಗೆ ತಮಿಳುನಾಡಿನ ನಾಟುಕೋಟಿ ಚೆಟ್ಟಿಯವರ ಮುಖಾಂತರ ತನ್ನ ಹೆಸರನ್ನು ಹರಡಿತೆನ್ನುವುದು ಒಂದು ರೋಚಕ ಕಥೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]     ಇ.ಎ.೮., ೧೮೭೬, ಪು. ೨೮೭, ಸು. ೭೪೦ ಕ್ರಿ.ಶ.

[2]      ಅದೇ., ನಂ. ೮೫, ೧೧೩೬ ಮತ್ತು ನಂ. ೮೯, ೧೧೫೬

[3]      ಮೊದಲನೇ ಟಿಪ್ಪಣಿ ನೋಡಿ

[4]      ಮೀರಾ ಅಬ್ರಾಹಂ., ೧೯೮೮ Two Medival Guilds South India New Delhi, ಪು. ೧೫೧ ಮತ್ತು ನಂತರದ ಪುಟಗಳು

[5]      ಚಂಪಕ ಲಕ್ಷ್ಮೀ ಆರ್. Urbanisation in South India; The role of ideology and polity.ಪು. ೨೪

[6]      Noboru Karashima., (Ed) Ancient and Medival Commercial Activities in South India, ಪು. ೭೨ ಮತ್ತು ನಂತರದವು

[7]      ಬಳ್ಳಿಗಾವೆ ಪ್ರಶಸ್ತಿ, E.C. VII., SK೧೧೮

[8]      SII XV.,೮೫

[9]      K.R. Venkataraman, “Medieval Trade, Craft and Merchant guilds in South India, Journal of Indian History XXV ೧೯೪೮ p.೨೭೮.

[10]     Pudukottai District Gazetteer., p. ೨೧೯-೨೪

[11]     (Ed) Noboru Karashima., op. cit, p-೨೭

[12]     ಬಿ.ಆರ್. ಹಿರೇಮಠ., ಶಾಸನಗಳಲ್ಲಿ ಕರ್ನಾಟಕದ ವರ್ತಕರು.