ಕ್ರಿಸ್ತಶಕಕ್ಕೆ ಮುನ್ನ ದೇವಾಲಯಗಳು ರಚನೆಗೊಂಡವು ಎಂದು ಹೇಳಲು ಸಾಧ್ಯ ವಿದ್ದರೂ ಅವುಗಳ ಸ್ವರೂಪ ವ್ಯಕ್ತವಾಗುವುದಿಲ್ಲ. ಹರಪ್ಪ-ಮಹೆಂಜೊದಾರೋ ಉತ್ಖನನಗಳಲ್ಲಿ ಸಾರ್ವಜನಿಕ ಕಟ್ಟಡಗಳನ್ನು ಗುರುತಿಸಬಹುದೇ ಹೊರತು ದೇವಾಲಯಗಳೆನ್ನಬಹುದಾದ ರಚನೆಗಳು ಕಾಣಸಿಗುವುದಿಲ್ಲ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

[1] ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿ ಹೆಲಿಯೋಡೊರಸ್ ಸ್ಥಾಪಿಸಿದ ಗರುಡಸ್ತಂಭದ ಉಲ್ಲೇಖ ವಾಸುದೇವನ ದೇವಾಲಯಕ್ಕೆ ಸಂಬಂಧಿಸಿದ್ದು,[2] ಇದು ದೇವಾಲಯಗಳಿಗೆ ಸಂಬಂಧಿಸಿದ ಅತಿಪ್ರಾಚೀನ ಉಲ್ಲೇಖವೆನಿಸಿದೆ. ಕ್ರಿ.ಶ. ಒಂದನೇ ಶತಮಾನದಲ್ಲಿ ರಾಜಾಸ್ಥಾನದ ಗೌಸುಂದಿಯಲ್ಲಿ ನಾರಾಯಣನಿಗಾಗಿ ಕಟ್ಟಲ್ಪಟ್ಟ ‘ನಾರಾಯಣ ವಾಟಕ’ದ ಸ್ಪಷ್ಟ ಉಲ್ಲೇಖವಿದೆ.[3]ಕಟ್ಟಡಗಳೊಂದಿಗೆ ಗುರುತಿಸಲ್ಪಡುವ ಅತಿಪ್ರಾಚೀನ ದೇವಾಲಯ ತಿಗುವಾದಲ್ಲಿಯ ವಿಷ್ಣುದೇವಾಲಯ. ಇದರೊಂದಿಗೆ ಸಾಂಚಿಯ ಹದಿನೇಳನೆಯ ದೇವಾಲಯವನ್ನೂ ವಿದ್ವಾಂಸರು ಐದನೆಯ ಶತಮಾನಕ್ಕೆ ಸೇರಿದ್ದೆಂದು ಪರಿಗಣಿಸಿದ್ದಾರೆ. ಈ ದೇವಾಲಯಗಳಲ್ಲಿ ಚತುರಶ್ರಾಕಾರದ ಗರ್ಭಗೃಹವಿದ್ದು, ಮುಂಗಡೆ ಸ್ತಂಭಗಳನ್ನಾಧರಿಸಿದ ಮುಖಮಂಟಪವಿದೆ. ಇವೆರಡೂ ಸ್ವತಂತ್ರ ದೇವಾಲಯಗಳ ಮೂಲಸ್ವರೂಪವೆನಿಸಿವೆ. ಈ ರಚನೆಗಳ ಚಾವಣಿ ಸಮತಟ್ಟಾಗಿದ್ದು, ನೀರು ಹರಿದುಹೋಗಲು ಅವಕಾಶವಿದೆ.

ಗರ್ಭಗೃಹವೊಂದರಿಂದಲೇ ದೇವಾಲಯವೆಂದು ಗುರುತಿಸಲು ಸಾಧ್ಯವಿದೆ. ವಸ್ತುಶಃ ದೇವಾಲಯಗಳ ಮಾದರಿಗಳನ್ನು ಗಮನಿಸಿದಾಗ, ಗರ್ಭಗೃಹ ಮತ್ತು ಅದಕ್ಕೆ ಹೊಂದಿಕೊಂಡ ಮುಖಮಂಟಪ, ಇದು ಕನಿಷ್ಠ ಅವಶ್ಯಕತೆ ಎಂದು ಗುರುತಿಸಬಹುದಾಗಿದೆ. ಪಾಶ್ಚಾತ್ಯರ ದೇವಾಲಯಗಳ ಸ್ವರೂಪವನ್ನು ಗಮನಿಸಿದಾಗ ಈ ಕನಿಷ್ಠ ಅವಶ್ಯಕತೆಯು ಸಾರ್ವತ್ರಿಕವಾಗಿ ಮನ್ನಣೆ ಗಳಿಸಿರುವುದನ್ನು ಕಾಣಬಹುದು. ವಿಟ್ರೂವಿಯಸ್ ಗುರುತಿಸುವ ಯ್ಯಾಂಟಿಸ್ ಮತ್ತು ಪ್ರೊಸ್ಟೈಲ್ ಮಾದರಿಗಳಲ್ಲಿ ಗರ್ಭಗೃಹ ಮತ್ತು ಮುಖಮಂಟಪವನ್ನು ಮಾತ್ರ ಕಾಣುತ್ತೇವೆ. ತಿಗುವಾ ಹಾಗೂ ಸಾಂಚಿ ದೇವಾಲಯಗಳ ನಂತರ ಗುಪ್ತರ ಕಾಲದ, ದೇವಘರ್‌ನ ವಿಷ್ಣು ದೇವಾಲಯ, ಭೂಮಾರದಲ್ಲಿನ ಶಿವಾಲಯ, ನಾಚ್ನಕುಟಾರದ ಪಾರ್ವತಿ ದೇವಾಲಯ, ಇವುಗಳಲ್ಲಿ ಗರ್ಭಗೃಹವು ಮಧ್ಯ ಪ್ರದೇಶವನ್ನಾವರಿಸಿದೆ. ಈ ರಚನೆಗಳನ್ನೂ ವಿದ್ವಾಂಸರು ಐದನೇ ಶತಮಾನವೆಂದು ಗುರುತಿಸಿದ್ದಾರೆ.[4] ಇದೇ ಹಾದಿಯಲ್ಲಿ ಐಹೊಳೆಯ ಲಾಡ್‌ಖಾನ್ ದೇವಾಲಯವನ್ನೂ ಪರಿಗಣಿಸಬಹುದು.

ಕರ್ನಾಟಕದಲ್ಲಿ ಕ್ರಿಸ್ತಶಕದ ಆರಂಭದಲ್ಲಿ ಕಟ್ಟಿದ ದೇವಾಲಯಗಳು ಉಳಿದಿಲ್ಲವಾದರೂ ಕ್ರಿ.ಶ. ೧೫೦ರ ಕದಂಬರ ಪ್ರಾಕೃತ ಶಾಸನವು ದೇವಾಲಯಗಳು ರಚನೆಗೊಂಡದ್ದನ್ನು ದೃಢಪಡಿಸುತ್ತದೆ.[5] ಕರ್ನಾಟಕದ ಪ್ರಾಚೀನ ದೇವಾಲಯವೆನಿಸಿದ ಕ್ರಿ.ಶ.೪೫೦ರ ತಾಳಗುಂದದ ದೇವಾಲಯವು.[6] ತನ್ನ ಮೂಲರೂಪವನ್ನು ಕಳೆದುಕೊಂಡಿರುವುದರಿಂದ ದೇವಾಲಯವಿತ್ತೆಂಬ ದಾಖಲೆಯಾಗಿ ಮಾತ್ರ ಗುರುತಿಸಲ್ಪಡುತ್ತದೆ. ಆದ್ದರಿಂದ ದೇವಾಲಯಗಳ ಉಗಮವನ್ನು ಗುರುತಿಸುವಾಗ ಐಹೊಳೆ, ಬಾದಾಮಿ, ಪಟ್ಟದಕಲ್ಲು ದೇವಾಲಯಗಳಿಗೇ ಮೊರೆ ಹೋಗಬೇಕು. ಕನಿಷ್ಠ ಅವಶ್ಯಕತೆಗಳೊಡನೆ ನಿಂತ ಹಲವಾರು ಕಟ್ಟಡಗಳನ್ನು ಮಹಾಕೂಟದಲ್ಲಿಯ ಪುಷ್ಕರಿಣಿಯ ಆವರಣದಲ್ಲಿ, ಬಾದಾಮಿಯ ಭೂತನಾಥ ದೇವಾಲಯದ ಆವರಣದಲ್ಲಿ ಹಾಗೂ ಐಹೊಳೆಯಲ್ಲಿ ಕಾಣುತ್ತೇವೆ. ಕೆಲವೆಡೆಗಳಲ್ಲಿ ಗರ್ಭಗೃಹ, ಎರಡು ಅಥವಾ ನಾಲ್ಕು ಸ್ತಂಭಗಳ ಮುಖಮಂಟಪ, ಮತ್ತೊಂದೆಡೆಯಲ್ಲಿ ಗರ್ಭಗೃಹ, ಮಂಟಪ, ಕಕ್ಷಾಸನಗಳುಳ್ಳ ಮುಖಮಂಟಪ ರಚನೆಗಳನ್ನು ಕಾಣುತ್ತೇವೆ. ತಿಗುವಾ ಮತ್ತು ಸಾಂಚಿ ದೇವಾಲಯಗಳಿಗೂ ಮಹಾಕೂಟ, ಬಾದಾಮಿ, ಇತ್ಯಾದಿಗಳಲ್ಲಿ ಕಂಡು ಬರುವ ಕನಿಷ್ಠ ದೇವಾಲಯಗಳಿಗೂ ಯಾವುದೇ ಸಂಬಂಧಗಳು ಗುರುತಿಸಲ್ಪಡದಿದ್ದರೂ ದೇವಾಲಯಗಳ ಬೆಳವಣಿಗೆಯಲ್ಲಿ ಇವುಗಳ ಅಧ್ಯಯನ ಅಗತ್ಯವೆನಿಸಿದೆ.

ಕರ್ನಾಟಕದ ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮಹಾಕೂಟ, ಇತ್ಯಾದಿ ಸ್ಥಳಗಳನ್ನು ದೇವಾಲಯದ ತೊಟ್ಟಿಲು ಎಂದು ಕರೆದಿದ್ದು, ಈ ದೇವಾಲಯಗಳ ರಚನೆಯನ್ನು ವಿಶ್ಲೇಷಿಸಿ ಬೆಳೆದುಬಂದ ಬಗೆಯನ್ನು ಗುರುತಿಸುವ ಹಲವಾರು ಪ್ರಯತ್ನಗಳು ನಡೆದಿದೆ. ಐಹೊಳೆಯ ಲಾಡ್‌ಖಾನ್ ದೇವಾಲಯ, ಗೌಡರಗುಡಿ, ಕೊಂತಿಗುಡಿಗಳು ಪ್ರಾರಂಭಿಕ ದೇವಾಲಯಗಳೆನಿಸಿದ್ದು, ಪ್ರಾಚೀನತೆಯನ್ನು ನಿರ್ಧರಿಸುವಲ್ಲಿ ವಾದವಿವಾದಗಳ ಸುಳಿಯಲ್ಲಿ ಸಿಕ್ಕಿಕೊಂಡಿವೆ. ದಾಕ್ಷಿಣಾತ್ಯ ಹಾಗೂ ಔತ್ತರೇಯ ದೇವಾಲಯಗಳ ಕವಲು ಕಾಣಿಸಿ ಕೊಂಡಿರುವುದು ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ. ಇದಕ್ಕೆ ಮುನ್ನ ಉತ್ತರದಲ್ಲಿ ದೇವಾಲಯಗಳು ರಚಿಸಲ್ಪಟ್ಟರೂ ಖಚಿತ ಆಕಾರ ಪಡೆದದ್ದು ಈ ಪ್ರದೇಶದಲ್ಲಿ. ಇದರಿಂದಾಗಿ ಈ ಪ್ರದೇಶವು ದೇವಾಲಯಗಳ ಅಧ್ಯಯನದಲ್ಲಿ ಮಹತ್ವಪೂರ್ಣವೆನಿಸಿದೆ.

ಇಲ್ಲಿಯ ದೇವಾಲಯಗಳ ರಚನೆ, ವಿನ್ಯಾಸಗಳನ್ನೂ ಸಾಧ್ಯವಾದೆಡೆಯಲ್ಲಿ ಶಾಸನಗಳನ್ನೂ, ಆಧರಿಸಿ ವಿದ್ವಾಂಸರು ಪ್ರಾಚೀನತೆಯನ್ನು ನಿರ್ಧರಿಸುತ್ತಿದ್ದರು. ಇದರೊಡನೆ ದೇವಾಲಯಗಳ ಸುತ್ತಣ ಮಣ್ಣಿನ ಸ್ತರಗಳ ಸರ್ವೇಕ್ಷಣೆ ನಡೆಸಿ ಪ್ರಾಚೀನತೆಯನ್ನು ನಿಷ್ಕರ್ಷಿಸಿದರು. ಇವೆರಡೂ ರೀತಿಯ ಅಧ್ಯಯನದಿಂದ ಮೂಡಿಬಂದ ಫಲಿತಾಂಶಗಳು ವಿವಿಧ ರೀತಿಯವು. ವಿದ್ವಾಂಸ ಪರ್ಸಿಬ್ರೌನ್ ವಾಸ್ತುಮೂಲವನ್ನಾಧರಿಸಿ ಲಾಡ್‌ಖಾನ್ ದೇವಾಲಯವನ್ನು ಅತಿ ಪ್ರಾಚೀನ ದೇವಾಲಯವೆಂದು ಗುರುತಿಸಿದರು. ಕೆ.ವಿ.ಸೌಂದರರಾಜನ್ ಅವರ ಐಹೊಳೆಯ ಜ್ಯೋತಿರ್ಲಿಂಗ ಗುಡಿಗಳಲ್ಲಿಯ ನಾಲ್ಕುಸ್ತಂಭಗಳ ಮಂಟಪ ರಚನೆಯನ್ನು ಗುರುತಿಸಿದ್ದು, ಈ ರಚನೆಗಳು ದೇವಾಲಯಗಳ ಮೂಲವಿರಬಹುದೆಂದು ಗುರುತಿಸಿದರು.[7] ದೇವಾಲಯಗಳ ಸುತ್ತ ತುಂಬಿದ್ದ ಮಣ್ಣಿನ ಸ್ತರಗಳ ಸರ್ವೇಕ್ಷಣೆಯಿಂದ ಇದಕ್ಕಿಂತ ಭಿನ್ನವಾದ ಫಲಿತಾಂಶ ಕಂಡುಬಂದಿದ್ದು, ಈ ಅಧ್ಯಯನರೀತ್ಯಾ ಗೌಡರಗುಡಿಯನ್ನು ಅತಿ ಪ್ರಾಚೀನವೆಂದು ಡಾ.ಎಸ್.ಆರ್.ರಾವ್ ಅವರು ಗುರುತಿಸಿದರು.[8]

ದೇವಾಲಯಕ್ಕೆ ಸಂಬಂಧಿಸಿದಂತೆ ವಾಸ್ತುಗ್ರಂಥಗಳೇ ಅಲ್ಲದೆ, ಮತ್ಸ್ಯಪುರಾಣ, ಶುಕ್ರನೀತಿ, ಮಾನಸೋಲ್ಲಾಸ, ಇತ್ಯಾದಿ ಪ್ರಾಚೀನ ಗ್ರಂಥಗಳೂ ವಾಸ್ತು ರಚನೆಯನ್ನು ಪ್ರಾಸಂಗಿಕವಾಗಿ ವಿವರಿಸಿವೆ. ಈ ಗ್ರಂಥಗಳು ವಿವರಿಸುವ ವಾಸ್ತುರೂಪಗಳು ಆಯಾ ಗ್ರಂಥರಚನಾ ಕಾಲಕ್ಕೆ ಅಥವಾ ಹಿಂದಕ್ಕೆ ಪ್ರಚಲಿತದಲ್ಲಿದ್ದು, ದೇವಾಲಯಗಳ ಬೆಳವಣಿಗೆಗೆ ಕಾರಣವಾಗಿವೆ ಎನ್ನ ಬಹುದು. ಪ್ರಾಚೀನವೆನ್ನುವ ಈ ಗ್ರಂಥಗಳ ಕಾಲ ಖಚಿತವಾಗಿ ನಿಷ್ಕರ್ಷೆಯಾಗದಿದ್ದರೂ ಈ ವಿವರಗಳನ್ನು ವ್ಯವಸ್ಥಿತವಾದ ಕಕ್ಷೆಯಲ್ಲಿರಿಸಿ ದೇವಾಲಯಗಳ ಮೂಲವನ್ನು ಗುರುತಿಸ ಬಹುದು. ಈ ವಿವರಗಳು ದೇವಾಲಯಗಳ ರಚನೆಯ ವಿಕಾಸವನ್ನು ಗುರುತಿಸಲು ಸಹಾಯಕ ವಾಗಲಿವೆ. ಅಂತಹ ಪ್ರಯತ್ನವೇ ಈ ಲೇಖನದ ಉದ್ದೇಶ.

ಐಹೊಳೆಯ ಲಾಡ್‌ಖಾನ್ ಕಟ್ಟಡವು ವಿದ್ವಾಂಸ ಪರ್ಸಿಬ್ರೌನರ, ಪ್ರಕಾರ ಅತಿಪ್ರಾಚೀನ ದೇವಾಲಯ. ಈ ವಾಸ್ತುರಚನೆಯು ಚತುರಶ್ರಾಕಾರದ ರಚನೆಯೆನಿಸಿದ್ದು ಮುಂಗಡೆ ಮುಖ ಮಂಟಪವಿದೆ. ಚತುರಶ್ರಾಕಾರದ ರಚನೆಯ ಮಧ್ಯಭಾಗವು ನಾಲ್ಕು ಬೃಹತ್‌ಸ್ತಂಭಗಳಿಂದ ಕೂಡಿದ್ದ ಚತುಷ್ಕವೆನಿಸಿದೆ. ಚತುಷ್ಕದ ಸುತ್ತ ಅಲಿಂದ ರಚನೆಯಿದೆ. ಅಲಿಂದ ರಚನೆಯಲ್ಲಿ ಎರಡು ಹಂತಗಳಿದ್ದು, ಈ ಹಂತಗಳ ಸ್ತಂಭಗಳು ಸ್ಥಾನಕ್ಕೆ ತಕ್ಕಂತೆ ಗಾತ್ರ ಹಾಗೂ ಎತ್ತರದಲ್ಲಿ ಬದಲಾಗಿವೆ. ಮೊದಲ ಹಂತದ ಹನ್ನೆರಡು ಸ್ತಂಭಗಳು ಚತುಷ್ಕದ ನಾಲ್ಕು ಸ್ತಂಭಗಳನ್ನು ಆವರಿಸಿ ನಿಂತಿವೆ. ಹೊರಾಂಗಣದ ಎರಡೂ ಪಾರ್ಶ್ವಗಳಲ್ಲಿ ಗಾಳಿ ಬೆಳಕಿನ ಅನುಕೂಲಕ್ಕಾಗಿ ಜಾಲಂಧ್ರಗಳ ಜೋಡಣೆಯಿದ್ದು, ಜಾಲಂಧ್ರಗಳೊಡನೆ ಸ್ತಂಭರಚನೆಯಿದೆ. ಹೆಚ್ಚಿನ ಭಾಗದಲ್ಲಿ ಭಿತ್ತಿರಚನೆಯಿದ್ದು, ಮೂಲೆಗಳಲ್ಲಿ ಕುಡ್ಯಸ್ತಂಭಗಳ ರಚನೆಯಿದೆ. ಹಿಂಬದಿಯ ಭಿತ್ತಿಗೆ ಅಂಟಿಕೊಂಡಂತೆ ತದನಂತರ ಕಾಲದಲ್ಲಿ ರಚಿತವಾದ ಪ್ರತ್ಯೇಕ ಗರ್ಭಗೃಹವಿದೆ. ಮುಂಗಡೆಯ ಮುಖಮಂಟಪವು ಹನ್ನೆರಡು ಸ್ತಂಭಗಳಿಂದ ರಚಿಸಲ್ಪಟ್ಟಿದ್ದು ಕಕ್ಷಾಸನದಿಂದಲೂ ಆವರಿಸಿದೆ. ಮುಖಮಂಟಪದ ಸ್ತಂಭಗಳ ಮೇಲೆ ಮೂರ್ತಿ ರಚನೆಗಳಿವೆ. ಪರ್ಸಿಬ್ರೌನರ ಪ್ರಕಾರ ಈ ದೇವಾಲಯವು ಸಾರ್ವಜನಿಕ ಸಭೆ ನಡೆಸಬಹುದಾದ ‘ಶಾಂತಾಗಾರ’. ಇಂತಹ ರಚನೆಗಳನ್ನು ವಾಸ್ತುಶಾಸ್ತ್ರಗಳು ಸಭಾ ಎಂದು ಗುರುತಿಸುತ್ತವೆ. ಸಭಾ ಎನ್ನುವುದು ವಾಸ್ತುವಿಶೇಷರಚನೆಯೂ ಹೌದು. ದೇವಾಲಯಗಳು ನಿಶ್ಚಿತ ಆಕಾರ ತಳೆಯುವುದಕ್ಕೆ ಮುನ್ನ ಸಾರ್ವಜನಿಕ ಕಟ್ಟಡಗಳನ್ನು ಬಳಸಿದವು ಎಂದು ಹೇಳಲು ಅವಕಾಶವಿದ್ದು, ಲಾಡ್‌ಖಾನ್ ಕಟ್ಟಡವು ಸ್ಪಷ್ಟ ಉದಾಹರಣೆ ಯಾಗಿ ನಿಲ್ಲುತ್ತದೆ. ಈ ರೀತಿಯ ಕಟ್ಟಡಗಳು ಬೆಳೆದುಬಂದ ಬಗೆಯನ್ನು ಶಾಸ್ತ್ರರೀತ್ಯಾ ಹಂತ ಹಂತವಾಗಿ ಗುರುತಿಸಿದಲ್ಲಿ, ದೇವಾಲಯಗಳು ಅನುಸರಿಸಿದ ಹಾದಿಯೂ ವ್ಯಕ್ತ ಗೊಳ್ಳುವುದು.

ಕ್ರಿಸ್ತಶಕ ೯೪೫ರ ರಾಷ್ಟ್ರಕೂಟರ ಮೂರನೆಯ ಕೃಷ್ಣನ ಪ್ರಧಾನಿ ನಾರಾಯಣನು ಶಾಲೆಯನ್ನು ನಿರ್ಮಿಸಿ ತ್ರಿಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದನ್ನು ಬಿಜಾಪುರದ ಸಾಲೊಟಗಿಯ ಶಾಸನವು ಗುರುತಿಸುತ್ತದೆ.[9] ಕ್ರಿ.ಶ.೧೦೫೮ರ ಚಾಲುಕ್ಯ ಅಹವಮಲ್ಲನ ಕಾಲದ ಕಲಬುರ್ಗಿ ಜಿಲ್ಲೆಯ ನಾಗಾವಿ ಶಾಸನವು ಮತ್ತೊಂದು ತ್ರೈಪುರುಷ ದೇವರ ಶಾಲೆಯನ್ನು ಹೆಸರಿಸುತ್ತದೆ.[10] ಈ ಶಾಸನಗಳಿಂದ ಕ್ರಿ.ಶ.ಹತ್ತು-ಹನ್ನೊಂದನೆಯ ಶತಮಾನದಲ್ಲಿ ತ್ರೈಪುರುಷರ ದೇವಾಲಯವನ್ನು ಶಾಲಾ ಎಂದು ಕರೆದಿದ್ದನ್ನು ಗಮನಿಸಬಹುದು. ಶಾಲಾ ರಚನೆಯು ವಾಸ್ತುಶಾಸ್ತ್ರಗಳ ಪ್ರಕಾರ ವಾಸ್ತುವಿಶೇಷರಚನೆಯೂ ಹೌದು. ಮತ್ಸ್ಯಪುರಾಣ, ಮಾನಸೋಲ್ಲಾಸ, ಸಮರಾಂಗಣ ಸೂತ್ರಧಾರ, ಅಪರಾಜಿತ ಪೃಚ್ಛಾ ಗ್ರಂಥಗಳು ಶಾಲಾರಚನೆಯ ವೈವಿಧ್ಯತೆಯನ್ನೊದಗಿಸಿವೆ. ಈ ನಾಡಿನಲ್ಲಿಯೂ ವೈವಿಧ್ಯತೆಗಳನ್ನೊಳಗೊಂಡ ಶಾಲಾ ರಚನೆಗಳು ಬಳಕೆಯಲ್ಲಿದ್ದು ವೆಂಬುದಕ್ಕೆ ಕೆಳಕಂಡ ಶಾಸನೋಲ್ಲೇಖವು ಸಾಕ್ಷಿಯಾಗಿದೆ.

ಲೀಲೆಯಿನೆಸೆವೇಕ
ಶಾಲ ದ್ವಿಶಾಲ ತ್ರಿ
ಶಾಲ ಚತುಶ್ಶಾಲ ಪಂಚಶಾಲಂ
ಮೇಲೆನಿಸಿತ್ತಲ್ಲಿಂ
ಮೇಲೆ ಪಲ್ಲವನ ಜಿ
ನಾಲಯಂ ಸರ್ವ್ವತೋಭದ್ರದಿಂದಂ[11]

ಶಾಲಾರಚನೆಗಳು ಪ್ರಮುಖವಾಗಿ ರಾಜಗೃಹಗಳಿಗಾಗಿ ಎಂದು ವಿವರಿಸಿದ್ದರೂ ಕಾಲಾನಂತರ ಮಾರ್ಪಾಡು ಹೊಂದಿ ಬಹು ಉಪಯೋಗಿ ಎನಿಸಿದವು. ಈ ಮಾರ್ಪಾಡುಗಳೊಂದಿಗೆ ಸಭಾ, ಮಠ ಮುಂತಾಗಿ ಹೆಸರಿಸಲ್ಪಟ್ಟವು. ಮತ್ಸ್ಯಪುರಾಣ, ಮಾನಸೋಲ್ಲಾಸ ಗ್ರಂಥಗಳಲ್ಲಿ ಶಾಲಾರಚನೆಯನ್ನು ಮಾತ್ರ ವಿವರಿಸಿದ್ದು ದೇವಾಲಯಗಳಿಗಾಗಿ ಪ್ರತ್ಯೇಕ ವಿವರಣೆಯಿಲ್ಲ. ಚತುಶ್ಶಾಲಗಳ ವಿವರಣೆಯಲ್ಲಿ “ಶುಭಂ ದೇವ ನೃಪಾಲಯೇ” ಎಂದಿದ್ದು, ದೇವಾಲಯಗಳ ರಚನೆಗೂ ಈ ರಚನೆಯನ್ನು ಬಳಸಿರಲು ಸಾಧ್ಯವಿದೆ. ಮತ್ಸ್ಯಪುರಾಣ ಮತ್ತು ಮಾನಸೋಲ್ಲಾಸ ಗ್ರಂಥಗಳ ವಾಸ್ತು ವಿವರಗಳು ಒಂದೇ ಮೂಲವನ್ನು ಆಶ್ರಯಿಸಿ ಬೆಳೆದ ಗ್ರಂಥಗಳು.

ಚತ್ವಾರೋ ಮಧ್ಯಗಾಸ್ತಂಭಾಯತ್ರ ತಸ್ಯಾ ಚತುಷ್ಕಕಂ

ತಸ್ಮಾದ್ ಬಹಿರಲಿಂದಂ ಸ್ಯಾಚ್ಛಾಲಾ ಸಾ್ಯತದ ನಂತರಂ[12]

ಮಾನಸೋಲ್ಲಾಸ ಗ್ರಂಥದ ಪ್ರಕಾರ, ಮಧ್ಯೆ ನಾಲ್ಕು ಸ್ತಂಭಗಳಿಂದ ಕೂಡಿದ ಚತುಷ್ಕ, ಅದನ್ನು ಸುತ್ತುವರೆದಂತೆ ಮೊದಲ ಹಂತದಲ್ಲಿ ಅಲಿಂದ, ನಂತರ ಎರಡನೆಯ ಹಂತದ ಶಾಲಾರಚನೆ ಇದನ್ನು ಸಮಗ್ರವಾಗಿಯೂ ಶಾಲಾ ಎಂದು ಗುರುತಿಸಿದ್ದಾರೆ ‘ಅಲಿಂದಂ ಚ ಪುನಃ ಶಾಲಾ ಕ್ರಮೇಣೈವ ಪ್ರವರ್ಧತೇ’[13]

ರಾಜಗೃಹಗಳಿಗೆ ಸಂಬಂಧಿಸಿದಂತೆ, ಚತುಷ್ಕ, ಅಲಿಂದ, ಶಾಲಾ, ಅಲಿಂದ, ಶಾಲಾ ಹೀಗೆ ಹಂತ ಹಂತವಾಗಿ, ವಿಸ್ತಾರವಾಗಿ ಬೆಳೆಯಲು ಅವಕಾಶ ಕಲ್ಪಿಸಿದ್ದನ್ನು ಕಾಣಬಹುದು. ಅಲಿಂದವು ಚತುಷ್ಕವನ್ನಾವರಿಸಿ ಪ್ರದಕ್ಷಿಣಪಥದಂತೆ ಕಾಣುವುದು ಸಹಜ.

ಗೃಹ ಮೇಕಂ ತು ಯಚ್ಛನ್ನಂ ಸರ್ವಂ ಶಾಲೇತಿ ಸಾ ಸ್ಮೃತಾ[14]

ಶಾಲಾ ಪದವನ್ನು ಸಮರಾಂಗಣ ಸೂತ್ರಧಾರ ಗ್ರಂಥವು ವಿವರಿಸಿದ್ದು, ಮೇಲ್ಛಾವಣಿಯೊಡನೆ ನಿಂತ ವಾಸ್ತುರಚನೆಯನ್ನು ಶಾಲಾ ಎಂದು ಗುರುತಿಸುತ್ತದೆ. ಶಾಲಾ ಪದವು ಒಟ್ಟಾರೆ ಒಂದು ವಾಸ್ತು ಸಮುಚ್ಚಯಕ್ಕೆ ಅಥವಾ ಒಂದು ಭಾಗಕ್ಕೆ ಗುರುತಿಸಲ್ಪಡುತ್ತದೆ. ಪ್ರಸ್ತುತ ಗುರುತಿಸಲ್ಪಟ್ಟ ಶಾಲಾರಚನೆಗೂ ವಿಮಾನರಚನೆಯಲ್ಲಿ ಗುರುತಿಸಬಹುದಾದ ಶಾಲಾ, ಭದ್ರಶಾಲಾ ರಚನೆಗಳಿಗೂ ಯಾವುದೇ ಸಾಮ್ಯವಿಲ್ಲವೆಂದು ಗಮನಿಸಬಹುದು. ಆದ್ದರಿಂದ ಶಾಲಾ ಪದದ ಅರ್ಥವನ್ನು ಸಂದರ್ಭೋಚಿತವಾಗಿ ತಿಳಿಯಬೇಕು. ಶಾಲಾ ಹಾಗೂ ಮಂಟಪಗಳ ರಚನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲವೆಂದೆನಿಸುತ್ತದೆ. ಮೇಲ್ಫಾಗದಿಂದ ಮುಚ್ಚಲ್ಪಟ್ಟಿದ್ದು ಶಾಲಾ ಎಂದೂ ಹಲವು ಸ್ತಂಭಗಳಿಂದ ಕೂಡಿದ್ದು ಮಂಟಪ ಎಂದೂ ಅರ್ಥೈಸಬಹುದು. ಮೂಲತಃ ಇವು ತೆರೆದ ರಚನೆಗಳಾಗಿದ್ದು, ತದನಂತರದ ಕಾಲದಲ್ಲಿ ಕಕ್ಷಾಸನ, ಜಾಲಂಧ್ರ, ಭಿತ್ತಿ ಇತ್ಯಾದಿಗಳನ್ನು ಅಳವಡಿಸಿಕೊಂಡಿವೆ.

ಶಾಲಾ ವಿವರಣೆಯೊಂದಿಗೆ ಗರ್ಭಗೃಹದ ವಿವರಣೆಯನ್ನೂ ಗಮನಿಸಬಹುದು. ಮೂಲಬೇರವನ್ನೊಳಗೊಂಡ ದೇವಾಲಯದ ಭಾಗವನ್ನು ಗರ್ಭಗೃಹವೆಂದು ಗುರುತಿಸುವುದು ವಾಡಿಕೆಯಲ್ಲಿದೆ. ಸಾಮಾನ್ಯವಾಗಿ ಗರ್ಭಗೃಹವು ಹಿಂದಕ್ಕಿದ್ದು ಪ್ರತ್ಯೇಕವಾಗಿ ಗುರುತಿಸಲ್ಪ ಡುತ್ತದೆ. ಶಾಲಾರಚನೆಯಲ್ಲಿ ಮಧ್ಯದ ನಾಲ್ಕು ಸ್ತಂಭಗಳ ಚತುಷ್ಕವು ಗರ್ಭಗೃಹವೆಂದೂ ಗುರುತಿಸಲ್ಪಡುತ್ತದೆ.

ಶಾಲಾನಾಂ ಯತ್ ಪುನರ್‌ಮಧ್ಯಂ ವಾಪಿ ಪುಷ್ಕರಿಣೀ ಚ ಸಾ
ಸಚ್ಛನ್ನಾಪಿ ಯಸ್ಯ ಸ್ಯಾತ್ ತದ್ ಗರ್ಭಗೃಹ ಮುಚ್ಯತೇ [15]

ಹಿಂದಿನಕಾಲದ ಮನೆಗಳ ರಚನೆಯಲ್ಲಿ ಮಧ್ಯೆ ಬಾವಿಯಿದ್ದು ಸುತ್ತ ಪಡಸಾಲೆಯಂಥ ರಚನೆಗಳನ್ನು ನಿರ್ಮಿಸುತ್ತಿದ್ದರು. ಅದೇ ರೀತಿ ದೇವಾಲಯಗಳಲ್ಲೂ ಪುಷ್ಕರಿಣಿಗಳಿದ್ದು ಸುತ್ತ ಪಡಸಾಲೆಯಂಥ ಶಾಲಾರಚನೆಗಳನ್ನು ಈಗಲೂ ಕಾಣಬಹುದು. ಸುತ್ತ ಶಾಲೆಯಿದ್ದು ಮಧ್ಯೆ ಮೇಲ್ಚಾವಣಿಯಿಂದ ಹೊದ್ದಿಸಿದ್ದಲ್ಲಿ ಅದು ಗರ್ಭ ಗೃಹವೆನಿಸುತ್ತದೆ. ಸಂಸ್ಕೃತದ ‘ಪಟ್ಟಶಾಲಾ’ ರಚನೆಯೇ ಕನ್ನದ ಪಡಸಾಲೆ ಎನಿಸುತ್ತದೆ. ಇದೇ ರೀತಿ ಮುಖ ಶಾಲಾ ರಚನೆಯು ಮೊಗಸಾಲೆ ಎನಿಸಿದೆ.

ಯತ್ ಶಾಲಾಲಿಂದಯೋಃ ಶೇಷಂ ಗರ್ಭಗೃಹಂ ಹಿ ತತ್[16]

ಶಾಲಾ ಸಮುಚ್ಚಯವು ಚತುಷ್ಕ, ಅಲಿಂದ, ಶಾಲಾ ಇತ್ಯಾದಿ ರಚನೆಗಳಿಂದ ಕೂಡಿದ್ದೆಂದು ತಿಳಿದೆವಷ್ಟೆ. ಆದ್ದರಿಂದ ಶಾಲಾ, ಅಲಿಂದಗಳನ್ನುಳಿದು ಚತುಷ್ಕವೇ ಗರ್ಭಗೃಹವೆನಿಸುತ್ತದೆ.

ಮೇಲ್ಕಂಡ ವಿವರಣೆಗಳೊಡನೆ ಲಾಡ್‌ಖಾನ್ ರಚನೆಯನ್ನು ಪರಿಶೀಲಿಸಬಹುದು. ಮಧ್ಯೆ ನಾಲ್ಕು ಸ್ತಂಭಗಳ ಚತುಷ್ಕವು ಗರ್ಭಗೃಹ. ಸುತ್ತ ಅಲಿಂದ ಮತ್ತು ಶಾಲಾರಚನೆಯಿದೆ. ಇದು ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸಿದ ವಾಸ್ತುರಚನೆ. ತದನಂತರ ಕಾಲದಲ್ಲಿ ಶಿವಾಲಯವಾಗಿ ಮಾರ್ಪಡಿಸುವ ಸಲುವಾಗಿ ಹಿಂಬದಿಯ ಗೋಡೆಗೆ ಹೊಂದಿಕೊಂಡಂತೆ ಮತ್ತೊಂದು ಗರ್ಭಗೃಹವನ್ನು ನಿರ್ಮಿಸಿದರು. ಇವರಿಗೆ ಮಧ್ಯದ ಚತುಷ್ಕವನ್ನೇ ಗರ್ಭಗೃಹವಾಗಿ ಭಿತ್ತಿಗಳನ್ನು ನಿರ್ಮಿಸಿ ಮಾರ್ಪಡಿಸಲಾಗಲಿಲ್ಲವೆನ್ನಬಹುದು. ಬಹುಶಃ ಬೃಹತ್ತಾದ ಸ್ತಂಭಗಳು ಅಡ್ಡಿ ಎನಿಸಿರಬಹುದು.

ವಿಶ್ವಕರ್ಮಪ್ರಕಾಶ ಗ್ರಂಥವು ದ್ವಾರವಿಲ್ಲದ ಶಾಲಾರಚನೆಯನ್ನು ನಿಷೇಧಿಸಿದೆ.

ಯತ್ರಾಲಿಂದಂ ತತ್ರಶಾಲಾ ತತ್ರದ್ವಾರಂ ಚ ಶೋಭನಂ
ಶಾಲಾಲಿಂದ ದ್ವಾರಹೀನಂ ನಕಾರಯೇತ್ ಬುಧಃ[17]

ಶಾಲಾ, ಅಲಿಂದ, ದ್ವಾರಗಳ ಸಾಮಾನ್ಯ ರಚನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲವೆಂದು ಶಾಸ್ತ್ರಗಳು ಗುರುತಿಸುತ್ತವೆ.

ಕೇಚಿದಲಿಂದಕಂ ದ್ವಾರಂ ಪ್ರವದಂತಿ ಮನೀಷಿಣಃ
ಕೇಚಿದಲಿಂದಂ ಶಾಲಾಂ ಚ ಕೇಚಿಚ್ಛಾಲಾಲಿಂದಕಂ ಚ ತತ್[18]

ಶಾಲಾರಚನೆಯಲ್ಲಿ ಶುದ್ಧ, ಸಂಬದ್ಧ, ಸಂಯುತ, ಪರಿಭ್ರಮ ಎಂದು ನಾಲ್ಕು ಪ್ರಭೇದಗಳು

ಶುದ್ಧಾ ಚ ಕೇವಲಾ ಶಾಲಾ ಸಂಬದ್ಧಾಲಿಂದ ತಸ್ತಥಾ
ಶಾಲ ಶ್ರೇಣ್ಯಾ ಸಂಯುತಾ ಸ್ಯಾತ್ ಮಧ್ಯಾ ಲಿಂದಾ ಪರಿಭ್ರಮಾ[19]

ಶುದ್ಧ ಎಂದಲ್ಲಿ ಶಾಲಾ ಅಥವಾ ಚತುಷ್ಕ ಮಾತ್ರ, ಈ ಸ್ವರೂಪವನ್ನು ಅಲಿಂದವಿಲ್ಲದ್ದು ಎಂದು ಅರ್ಥೈಸಬಹುದು. ಕೇವಲ ನಾಲ್ಕು ಸ್ತಂಭಗಳಿಂದ ಕೂಡಿದ ಗರ್ಭಗೃಹ ಮಾತ್ರ ವೆನ್ನಬಹುದು.

ಸರ್ವಶ್ಚಾಲಿಂದ ರಹಿತಾಃ  ಶುದ್ದಾ ನಾಮ್ನಾ ಸಮೀರಿತಾಃ

ಈ ರಚನೆಯನ್ನು ಮಾನಸೋಲ್ಲಾಸ ಗ್ರಂಥವು “ಧ್ರುವಂ ಹೀನಮಾನಿಂದೇನ” ಎಂದು ಗುರುತಿಸುತ್ತದೆ. ಈ ರಚನೆ ನಾಲ್ಕು ಸ್ತಂಭಗಳಿಂದ ಕೂಡಿದ ಮಂಟಪವೂ ಹೌದು, ಮಹಾಕೂಟದಲ್ಲಿರುವ ಪುಷ್ಕರಿಣಿಯೊಳಗಿರುವ ಮಂಟಪವನ್ನು ಧ್ರುವ ಅಥವಾ ಶುದ್ದ ಶಾಲಾಗೃಹ ಎಂದು ಗುರುತಿಸಬಹುದು. ಮಾನಸೋಲ್ಲಾಸ ಗ್ರಂಥವು ಒಂದು ದಿಕ್ಕಿನಲ್ಲಿ ಮಾತ್ರ ಆಲಿಂದವಿರುವ ನಾಲ್ಕು ಪ್ರಭೇದಗಳನ್ನು ಗುರುತಿಸುತ್ತದೆ:

ಧ್ರುವಂ ಹೀನಮಾಲಿಂದೇನ ಪೂರ್ವಾಲಿಂದಂ ತು ಧಾನ್ಯಕಂ
ಜಯಂ ಸ್ಯಾತ್ ದಕ್ಷಿಣಾಲಿಂದಂ ಪ್ಚಾದಲಿಂದಂ ಖರಂಭವೇತ್
ದುರ್ಮುಖಂ ಚೋತ್ತರಾಲಿಂದಮೇಕಾಲಿಂದಂ ಚತುರ್ಗೃಹಂ[20]

ಸಾಂಚಿಯ ಹದಿನೇಳನೇ ಸಂಖ್ಯೆಯ ದೇವಾಲಯವನ್ನಾಗಲಿ, ತಿಗುವಾದಲ್ಲಿಯ ದೇವಾಲಯವನ್ನಾಗಲಿ ಏಕಾಲಿಂದ ರಚನೆ ಎಂದು ಗುರುತಿಸಬಹುದು. ಐಹೊಳೆ, ಬಾದಾಮಿ, ಪಟ್ಟದಕಲ್ಲು ಮುಂತಾದ ಎಡೆಗಳಲ್ಲಿ ಕನಿಷ್ಠ ರಚನೆಗಳೆಂದಲ್ಲಿ ಗರ್ಭಗೃಹ ಹಾಗೂ ನಾಲ್ಕು ಸ್ತಂಭಗಳ ಮುಖಮಂಟಪ ಮಾತ್ರ. ಮಧ್ಯದಲ್ಲಿ ಚತುಷ್ಕ, ಸುತ್ತ ಅಲಿಂದ, ಒಂದೆಡೆ ದ್ವಾರ ಅಥವಾ ಶಾಲಾ, ಈ ರಚನೆಯನ್ನು ಏಕಶಾಲಾ ರಚನೆಯೆಂದು ಗಮನಿಸಬಹುದು. ಈ ರಚನೆ ವಿಸ್ತಾರಗೊಂಡಾಗ ಅನುಕೂಲಕ್ಕೆ ತಕ್ಕಂತೆ ಸಭಾ ಎಂದು ಗುರುತಿಸಲ್ಪಟ್ಟಿದೆ.

ಐಹೊಳೆಯ ಒಂಬತ್ತನೇ ಸಂಖ್ಯೆಯ ದೇವಾಲಯವನ್ನು ಗಮನಿಸಿದಾಗ ಈ ರಚನೆಯಲ್ಲಿ ಒಂದೆಡೆ ಗರ್ಭಗೃಹ, ನಂತರ ಮಂಟಪ, ಮುಂಗಡೆ ಮುಖಮಂಟಪವಿದೆ. ತಳಪಾಯದ ನಕ್ಷೆಯಿಂದ ಗಮನಿಸಿದಾಗ ಮಧ್ಯೆ ನಾಲ್ಕು ಸ್ತಂಭಗಳ ಚತುಷ್ಕ, ಸುತ್ತ ಅಲಿಂದ, ನಂತರ ಇಕ್ಕೆಲಗಳಲ್ಲಿ ಶಾಲಾರಚನೆಯಿದ್ದು, ಒಂದು ಗರ್ಭಗೃಹವೆನ್ನಿಸಿದ್ದು ಮತ್ತೊಂದು ಮುಖಮಂಟಪ ವೆನ್ನಿಸಿದೆ. ಇದು ದ್ವಿಶಾಲಾ ರಚನೆಯ ಉದಾಹರಣೆಯೂ ಹೌದು. ಈ ರಚನೆ ದೇವಾಲಯಗಳ ವಿಕಾಸವನ್ನು ಗುರುತಿಸುವಲ್ಲಿ ಗಮನಾರ್ಹವಾದುದು.

ಈವರೆಗೆ ಗಮನಿಸಿದ ವಾಸ್ತುರಚನೆಗಳನ್ನು ಹಂತ ಹಂತವಾಗಿ ಒಂದೆಡೆ ಕೆಳಕಂಡಂತೆ ಗುರುತಿಸಬಹುದು.

೧. ಚತುಷ್ಕ ಅಥವಾ ಮಂಟಪ ರಚನೆ : ಮಹಾ ಕೂಟದಲ್ಲಿಯ ಪುಷ್ಕರಿಣಿಯೊಳಗಿನ ಮಂಟಪ.

೨. ಏಕಾಲಿಂದ ರಚನೆ : ಸಾಂಚಿಯ ಹದಿನೇಳನೆಯ ದೇವಾಲಯ ಮತ್ತು ತಿಗುವಾದಲ್ಲಿಯ ದೇವಾಲಯ. ಐಹೊಳೆ, ಬಾದಾಮಿಗಳಲ್ಲಿ ಕಂಡುಬರುವ ದೇವಾಲಯ ರಚನೆಗಳು ಕೊಂಚ ಮುಂದುವರೆದದ್ದು.

೩. ಏಕಶಾಲಾ ರಚನೆ : ಉದಾಹರಣೆಗಳನ್ನು ಗುರುತಿಸಬೇಕಾಗಿದೆ. ಮಧ್ಯೆ ಚತುಷ್ಕ, ಸುತ್ತ ಅಲಿಂದ, ಒಂದೆಡೆ ಶಾಲಾ ಅಥವಾ ಮುಖಮಂಟಪ.

೪. ದ್ವಿಶಾಲಾ ರಚನೆ : ಐಹೊಳೆಯ ಒಂಬತ್ತನೆಯ ದೇವಾಲಯ.

ಸಾಂಚಿಯ ದೇವಾಲಯ ಹಾಗೂ ತಿಗುವಾದಲ್ಲಿಯ ದೇವಾಲಯಗಳು ಕ್ರಿಸ್ತಶಕದ ರಚನೆಗಳಾದರೂ, ಈ ರಚನೆಗಳಿಗಿಂತ ಹಿಂದೆ ಕೆಲವಾರು ಶತಮಾನಗಳ ಪೂರ್ವದಲ್ಲಿ ಕಟ್ಟಡಗಳು ಖಚಿತ ಆಕಾರ ತಳೆದಿದ್ದವು ಎಂದು ಗುರುತಿಸಲು ಸಾಧ್ಯವಿದೆ. ಭರತನ ನಾಟ್ಯ ಶಾಸ್ತ್ರದಲ್ಲಿ ನಾಟ್ಯಗೃಹದ ರಚನೆಯನ್ನು ವಿವರಿಸುತ್ತಾ, ಮತ್ತವಾರಣ ರಚನೆ, ರಂಗಶೀರ್ಷದ ರಚನೆಯಲ್ಲಿ ಷಡ್ಡಾರುಕಗಳ ಜೋಡಣೆಗಳು ಉಲ್ಲೇಖಿಸಲ್ಪಟ್ಟಿದೆ.[21] ಇವು ಭರತನ ನಾಟ್ಯಶಾಸ್ತ್ರದ ಕಾಲಕ್ಕೆ ಖಚಿತಗೊಂಡ ವಾಸ್ತು ವಿನ್ಯಾಸಗಳು. ಇಲ್ಲಿ ವಿವರಿಸಲ್ಪಟ್ಟಿರುವ ನಾಟ್ಯಗೃಹದ ಅಥವಾ ನಾಟ್ಯಮಂಟಪದ ಅಳತೆಗಳನ್ನು ಸಮರಾಂಗಣ ಸೂತ್ರಧಾರ ಗ್ರಂಥದ ಕರ್ತೃವೂ ಸಂಕ್ಷಿಪ್ತವಾಗಿ ಸೂಚಿಸಿದ್ದಾನೆ.

ಗರ್ಭಗೃಹವನ್ನು ಮಧ್ಯಭಾಗದಲ್ಲಿ ಗುರುತಿಸುವುದರೊಂದಿಗೆ ಮೇಲ್ಭಾಗದಲ್ಲಿ ಭೂಮಿರಚನೆಯೂ ಕಾಣಿಸಿದ್ದು ಹರ್ಮ್ಯ ಎಂದೆನಿಸಿತು.

ಗೃಹಸ್ಯೋಪರಿ ಭೂಮಿರ್ಯಾ ಹರ್ಮ್ಯ ತತ್ ಪರಿಕೀರ್ತತಂ[22]

ಲಾಡ್‌ಖಾನ್ ದೇವಾಲಯದ ಮೇಲ್ಭಾಗದ ಕೋಷ್ಠ ರಚನೆಯನ್ನು ಉಪಸ್ಥಾನಕ ಅಥವಾ ಅಪವರಕಾ ಎಂದು ಗುರುತಿಸಬಹುದು.

ಯದುಪಸ್ಥಾನಕಂ ನಾಮಯೇ ಚಾಪವರಕಾ ಸ್ತಥಾ
ತೇ ಕೋಷ್ಠಕಾ ಕಂಠಾ ಕುಡ್ಯಂ ಭಿತ್ತಿಶ್ಚಯಶ್ಚಸಾ[23]

ಗರ್ಭಗೃಹವನ್ನು ಮಧ್ಯೆ ಗುರುತಿಸುವುದರೊಂದಿಗೆ ಸುತ್ತಲಿರುವ ಅಂಕಣಗಳಲ್ಲಿ ಪರಿವಾರದೇವತೆಗಳನ್ನು ಇರಿಸುವ ಕಲ್ಪನೆ ಗುಪ್ತರ ಕಾಲದಲ್ಲಿ ಮೂಡಿಬಂತು ಎಂದು ವಿದ್ವಾಂಸರು ವಿವರಿಸುತ್ತಾರೆ. ಸಮರಾಂಗಣ ಸೂತ್ರಧಾರ ಹಾಗೂ ಅಪರಾಜಿತಪೃಚ್ಛಾ ಗ್ರಂಥಗಳಲ್ಲಿ ‘ಸಭಾಷ್ಟಕ’ವೆನ್ನುವ ಪ್ರತ್ಯೇಕ ಅಧ್ಯಾಯಗಳಿವೆ. ಸಭಾ ಎಂದಲ್ಲಿ ಸಾರ್ವಜನಿಕ ಸಮಾರಂಭ ಗಳಿಗಾಗಿ ರಚಿಸಲ್ಪಟ್ಟಿದ್ದು ಎಂಬ ಧ್ವನಿ ಇದೆ. ಡಾ. ಎಂ. ಚಿದಾನಂದಮೂರ್ತಿ ಯವರು ಪ್ರಾಚೀನ ಅಗ್ರಹಾರಗಳಲ್ಲಿ ಮಹಾ ಜನರು ಸೇರಲು ಪ್ರತ್ಯೇಕ ಸಭೆಗಳು ಇದ್ದವು ಎಂದು ಗುರುತಿಸಿದ್ದಾರೆ.[24] ಪ್ರಸ್ತುತ ವಿವರಿಸಲ್ಪಡುವ ಸಭಾ ಪದವೂ ವಾಸ್ತುರಚನೆಗೆ ಸಂಬಂಧಿಸಿದ್ದೆಂದು ಗಮನಿಸಬಹುದು.

ಛನ್ನಂ ಭವೇತ್ ಯತ್ತು ಮಹಾಜನಸ್ಯ ಸ್ಥಾನಂ ಸಭಾ ಸಾ ಕಥಿತಾ ಚ ಶಾಲಾ[25]

ಸಮರಾಂಗಣ ಸೂತ್ರಧಾರ ಗ್ರಂಥದ ಪ್ರಕಾರ ಮಹಾಜನರು ಸಮಾವೇಶಗೊಳ್ಳುವ ಸ್ಥಾನ ಸಭಾ. ಸಭಾ ಎನ್ನುವುದು ಶಾಲಾರಚನೆಯ ವಿಶಿಷ್ಟ ರೂಪ. ಈಗ ಬಳಕೆಯಲ್ಲಿರುವ ಸಭಾ ಎನ್ನುವ ಪದ ವಾಸ್ತು ಮೂಲದ್ದೆಂದೂ ಗುರುತಿಸಬಹುದು. ಕೆಳಕಂಡ ವಿವರಣೆಯು ಸಭಾರಚನೆಯ ಸ್ವರೂಪವನ್ನು ಗುರುತಿಸುತ್ತದೆ.

ಚತುರಶ್ರೀ ಕೃತೇ ಕ್ಷೇತ್ರೇ ದ್ವಿರಷ್ಟಪದ ಭಾಜಿತೆ
ಮಧ್ಯಮ ಪದ ಚತುಷ್ಕೇಣ ಚತುಷ್ಕೋಲಿಂದ ಶೇಷತಃ
ನಂದಾ ನಾಮ ಸಮಾಖ್ಯಾತಾ ಸರ್ವಕಾಮ ಫಲಪ್ರದಾ
ಚತುಷ್ಟೋ ಭದ್ರ ವಿಸ್ತಾರ ಏಕೋ ಭಾಗಶ್ದ ನಿರ್ಗಮಃ[26]

ಅಪರಾಜಿತಪೃಚ್ಛಾ ಗ್ರಂಥದ ಪ್ರಕಾರ, ಚತುರಶ್ರಾಕಾರದ ಕ್ಷೇತ್ರವನ್ನು ಹದಿನಾರು ಭಾಗಗಳಾಗಿ ವಿಂಗಡಿಸಿ ಮಧ್ಯದಲ್ಲಿ ಚತುಷ್ಕವನ್ನು ಗುರುತಿಸಬೇಕು. ತದನಂತರ ಉಳಿದ ಭಾಗವು ಅಲಿಂದವೆನಿಸುತ್ತದೆ. ಇದರೊಂದಿಗೆ ಚತುಷ್ಕದಷ್ಟೇ ವಿಸ್ತಾರವುಳ್ಳ ಒಂದು ಭಾಗದಷ್ಟು ನಿರ್ಗಮನ ಅಥವಾ ಮುಖಮಂಟಪವನ್ನು ನಿರ್ಮಿಸಬೇಕು. ಈ ರಚನೆಯು ನಂದಾ ಎಂಬ ಪ್ರಭೇದವೆನಿಸುತ್ತದೆ. ಸಮರಾಂಗಣ ಸೂತ್ರಧಾರ ಗ್ರಂಥವು ನಾಲ್ಕುದಿಕ್ಕುಗಳಲ್ಲಿಯೂ ಪ್ರಾಗ್ರೀವವನ್ನು ರಚಿಸಬೇಕೆಂದು ನಿರ್ದೇಶಿಸುತ್ತದೆ.

ಪ್ರಾಗ್ರೀವಾಖ್ಯಾ ಸ್ತೃತೀಯಶ್ಚ ಬಹಿಃಕ್ಷೇತ್ರಾ ಚತುರ್ದಿಶಾ[27]

ಪ್ರಾಗ್ರೀವವೆಂದಲ್ಲಿ ಪ್ರಾಸಾದಗಳ ಮುಂಭಾಗದದಲ್ಲಿ ರಚಿಸಲ್ಪಟ್ಟ ಎರಡು ಸ್ತಂಭಗಳ ನ್ನಾಧರಿಸಿದ ಮುಖ ಮಂಟಪ.

ಪ್ರಾಸಾದಾಗ್ರೇ ತು ದ್ವೌ ಸ್ತಂಭೌ ಪ್ರಾಗ್ರೀವಃ ಪ್ರಕೀರ್ತಿತಃ[28]

ಗರ್ಭಗೃಹ ಅಥವಾ ಚತುಷ್ಕ, ಅಲಿಂದ, ಪ್ರಾಗ್ರೀವ ಅಥವಾ ಮುಖಮಂಟಪ ಇವು ಸಭಾರಚನೆಯ ಅಂಗಗಳೆನಿಸಿವೆ. ಸಭಾರಚನೆಯಲ್ಲಿ ಎಂಡು ಪ್ರಭೇದಗಳಿದ್ದು, ಅಂಕಣಗಳ ಹಾಗೂ ಸ್ತಂಭಗಳ ಸಂಖ್ಯೆಯಿಂದ ಈ ಪ್ರಭೇದಗಳು ಗುರುತಿಸಲ್ಪಟ್ಟಿವೆ.

ಚತುರಶ್ರ ಸಮಂಕ್ಷೇತ್ರಂ ವಿಭಕ್ತಂ ನವಾಂಶಕೈಃ
ಕೇವಲಾ ನವಶಾಲಾಶ್ಚ ದಿವ್ಯಾ ನಾಮಪಿ ಸುಂದರೀ[29]

ಕ್ಷೇತ್ರದಲ್ಲಿ ಒಂಬತ್ತು ಅಂಕಣಗಳನ್ನು ಗುರುತಿಸಿ ಮಧ್ಯೆ ಚತುಷ್ಕವನ್ನು ಗುರುತಿಸಿದಲ್ಲಿ ಸುತ್ತ ಅಲಿಂದ ರಚನೆ ಏರ್ಪಡುತ್ತದೆ. ಈ ರಚನೆಯಲ್ಲಿ ಹದಿನಾರು ಸ್ತಂಭಗಳನ್ನು ಗುರುತಿಸ ಬಹುದು. ಮುಂಗಡೆ ಮುಖಮಂಟಪದೊಂದಿಗೆ ಏಕಶಾಲಾ ರಚನೆಯೆನಿಸುತ್ತದೆ. ಇದು ಸಭಾರಚನೆಯ ಅತಿ ಸಾಮಾನ್ಯ ರಚನೆಯೂ ಹೌದು. ಹದಿನಾರು ಅಂಕಣಗಳ ರಚನೆಯಲ್ಲಿ ಸಭಾ ಗೃಹವು ಇಪ್ಪತ್ತೈದು ಸ್ತಂಭಗಳಿಂದ ರಚಿಸಬೇಕು. ಮಧ್ಯದ ಒಂದು ಸ್ತಂಭವನ್ನು ಕಳಚಿದಲ್ಲಿ ವಿಶಾಲವಾದ ಚತುಷ್ಕವನ್ನೂ ಸುತ್ತ ಅಲಿಂದ ರಚನೆಯನ್ನೂ ಗುರುತಿಸಬಹುದು.

ಮೂವತ್ತಾರು ಸ್ತಂಭಗಳ ರಚನೆಯಿಂದ ಇಪ್ಪತ್ತೈದು ಅಂಕಣಗಳುಳ್ಳ ರಚನೆ ಸಾಧ್ಯವಿದೆ. ಈ ರಚನೆಯಲ್ಲಿ ಮಧ್ಯಭಾಗದಲ್ಲಿ ಚತುಷ್ಕವೂ ಎರಡು ಹಂತಗಳ ಅಲಿಂದವೂ ಸಾಧ್ಯವಿದೆ.

ಸ್ತಂಭಾನ್ ಷಟ್‌ತ್ರಿಂಶದೇತಾಸು ಪಂಚಸ್ವಪಿ ನಿವೇಶಯೇತ್
ಸ್ತಂಭಾನ್ ಪ್ರಾಗ್ರೀವ ಸಂಬದ್ಧಾನ್ ಪೃಥಗೇ್ಯೋ ವಿನಿರ್ದಿಶೇತ್[30]

ಪ್ರಾಗ್ರೀವವೆಂದಲ್ಲಿ ಎರಡು ಸ್ತಂಭಗಳಿಂದ ಕೂಡಿದ್ದು, ಲಾಡ್‌ಖಾನ್ ದೇವಾಲಯದಲ್ಲಿ ಮುಖಮಂಟಪವು ಹನ್ನೆರಡು ಸ್ತಂಭಗಳಿಂದ ಕೂಡಿದ್ದು, ಪ್ರಾಗ್ರೀವಾದಿ ಪ್ರಭೇದಗಳಲ್ಲಿ ವಿವರಿಸಲ್ಪಡುವ ಪುಷ್ಪಕವೆನಿಸಿದೆ.

ಲಾಡ್‌ಖಾನ್ ರಚನೆಯ ಹೊರಾಂಗಣದ ಭಿತ್ತಿಗೆ ಬದಲಾಗಿ ಸ್ತಂಭಗಳನ್ನು ನಿಯತವಾಗಿ ನಿರ್ಮಿಸಿದ್ದಲ್ಲಿ ಗೌಡರಗುಡಿಯ ಪಾರ್ಶ್ವ ರಚನೆಯಂತೆ ಆರು ಸ್ತಂಭಗಳ ಸಾಲನ್ನು ರಚಿಸಬೇಕಾಗಿತ್ತು. ಆದರೆ ಜಾಲಂಧ್ರಗಳ ಜೋಡಣೆಗೆ ಇಕ್ಕೆಲಗಳಲ್ಲಿ ನಾಲ್ಕು ಸ್ತಂಭಗಳಿದ್ದು ಮೂಲೆಗಳಲ್ಲಿ ಭಿತ್ತಿ ರಚನೆಯಿದೆ. ಸಮರಾಂಗಣ ಸೂತ್ರಧಾರ ಗ್ರಂಥವು ಸಭಾರಚನೆಯು ವಿಶಾಲವಾದಂತೆ ಮೂಲೆಗಳಲ್ಲಿ ರಚನೆಯನ್ನು ಸೂಚಿಸಿದ್ದು, ಕರ್ಣಭಿತ್ತಿ ಎಂದು ಗುರುತಿಸಲ್ಪಟ್ಟಿದೆ.

ಷಡ್ಭಾಗ ಭಾಜಿತೇ ಕ್ಷೇತ್ರೇ ಕರ್ಣಭಿತ್ತಿಂ ನಿವೇಶಯೇತ್[31]

ಕರ್ಣಭಿತ್ತಿಯೊಂದಿಗೆ ಕೂಟಸ್ತಂಭ ಅಥವಾ ಕುಡ್ಯಸ್ತಂಭ ರಚನೆಗಳನ್ನೂ ಕಾಣಬಹುದು. ಸ್ತಂಭಗಳು ಸಾಲಭಂಜಿಕೆಗಳಿಂದ ಅಥವಾ ಪ್ರತಿಮೆಗಳಿಂದ ಕೂಡಿರುವಂತೆ ರಚಿಸಬಹುದು, ಛಾದ್ಯದ ನಂತರ ಘಂಟಾಕೂಟ ರಚನೆಗಳನ್ನೂ ಶಾಸ್ತ್ರಗಳು ಸಮ್ಮತಿಸಿವೆ.

ಶಾಲಭಂಜ್ಯಾದಿ ಪ್ರತಿಮಾ ಸ್ತಂಭ ವಿಮಾನ ಸಂಭವಾಃ
ಮುಕ್ತಾಲೂಮಾ ಛಾದ್ಯೋಪರಿ ಘಂಟಾಕೂಟೈರ ಲಂಕೃತಾಃ[32]

ಲಾಡ್‌ಖಾನ್ ದೇವಾಲಯದ ಮೇಲ್ಭಾಗದಲ್ಲಿ ಗರ್ಭಗೃಹದ ಮೇಲೆ ಚತುಷ್ಕವನ್ನಾಧರಿಸಿದ ದೇವಕೋಷ್ಠವಿದೆ. ಇದನ್ನು ಉಪಸ್ಥಾನಕ ಅಥವಾ ಅಪವರಕಾ ಎಂದು ಗುರುತಿಸಬಹುದು. ಅಪವರಕವನ್ನು “ಅಲ್ಪಾಲ್ಪಸ್ತು ಚತುಷ್ಕುಡ್ಯಾ ಯೇತೇಪವರಕಾ ಮತಾಃ”[33] ಎಂದು ಸೂಚಿಸಿದ್ದು, ಇದರ ಖಚಿತಾರ್ಥಕ್ಕೆ ಮತ್ತಷ್ಟು ಸಾಕ್ಷ್ಯಾಧಾರಗಳು ಬೇಕು. ಮುಖಮಂಟಪದ ಸಾಲ ಭಂಜಿಕೆಯರ ಕಂಡರಣೆ ಮುಂದಿನ ದೇವಾಲಯಗಳಲ್ಲಿ ಮುಂದುವರೆದಿದ್ದರೂ ಮೂಲತಃ ಶಾಲಾ ಅಥವಾ ಸಭಾರಚನೆಯಿಂದ ಪಡೆದ ಅಂಗಗಳು.

ಲಾಡ್‌ಖಾನ್ ದೇವಾಲಯ ರಚನೆಯಲ್ಲಿರುವ ಚತುಷ್ಕವು ಮುಂದಿನ ದೇವಾಲಯಗಳಲ್ಲಿ ಪ್ರತ್ಯೇಕ ಭಿತ್ತಿಯನ್ನಳವಡಿಸಿಕೊಂಡು ಗರ್ಭಗೃಹವೆನಿಸಿತು. ಇದರಿಂದ ಪ್ರದಕ್ಷಿಣಾಪಥವೂ ಸಮರ್ಥವಾಗಿ ಗುರುತಿಸಲ್ಪಟ್ಟಿತು. ಇಂತಹ ಸ್ಥಿತಿಯನ್ನು ಗೌಡರಗುಡಿಯಲ್ಲಿ ಕಾಣಬಹುದು. ಇಲ್ಲಿ ಅಗಲವೂ ಕಿರಿದಾದದ್ದನ್ನು ಗಮನಿಸಬಹುದು. ಸಭಾರಚನೆಯ ನಂತರ ಸಾಂಧಾರ ರಚನೆಯ ಮೊದಲ ಹಂತವೆಂದು ಗೌಡರಗುಡಿಯನ್ನು ಗುರುತಿಸಬಹುದು. ಇದೇ ರೀತಿ ಪ್ರತ್ಯೇಕ ಗರ್ಭಗೃಹ, ಮುಖಮಂಟಪವುಳ್ಳ ಗರ್ಭಗೃಹ ಇತ್ಯಾದಿಗಳು ಶಾಲಾರಚನೆಯ ಧ್ರುವ, ಏಕಾಲಿಂದ ರಚನೆಗಳಿಂದ ಮೂಡಿದ್ದನ್ನು ವಿಕಾಸದ ಹಂತಗಳಲ್ಲಿ ಗುರುತಿಸಬಹುದು. ಇವುಗಳಲ್ಲಿ ಯಾವುದು ಪ್ರಾಚೀನ ಎಂದು ಗುರುತಿಸುವುದು ಸಾಧ್ಯವಾಗದು. ಆದರೆ ದೇವಾಲಯಗಳ ಪರಿಕಲ್ಪನೆ ಸಾರ್ವಜನಿಕ ಕಟ್ಟಡಗಳ ನಂತರವೇ ಎಂಬ ಅಂಶ ಪ್ರವುುಖವಾಗುತ್ತದೆ.

ಪಿ.ಎನ್. ಬೋಸ್ ತಮ್ಮ ಗ್ರಂಥದಲ್ಲಿ ದೇವಾಲಯಗಳ ಹದಿನಾರು ಪ್ರಭೇದಗಳನ್ನು ಪಟ್ಟಿ ಮಾಡಿದ್ದಾರೆ.[34]  ಇದರೊಂದಿಗೆ ವರಾಹಮಿಹಿರನ ಬೃಹತ್ ಸಂಹಿತೆಯಲ್ಲಿ ಗುರುತಿಸುವ ಇಪ್ಪತ್ತು ಪ್ರಭೇದಗಳನ್ನೂ ಗುರುತಿಸಿದ್ದಾರೆ.[35] ಈ ಪ್ರಭೇದಗಳನ್ನು ಹೆಸರಿಸಬಹುದೇ ಹೊರತು ಹೆಚ್ಚಿನ ಉಪಯೋಗವಾಗದು. ಶುಕ್ರನೀತಿ ಗ್ರಂಥವು ಚತುಃಶಾಲಾ ಪ್ರಾಸಾದವನ್ನು ಮಾತ್ರ ಉಲ್ಲೇಖಿಸಿದೆ. ಈ ಪ್ರಾಸಾದವು ದೇವಮಂದಿರಗಳಿಗೆ ಸಂಬಂಧಿಸಿದಂತೆ ಒಂದುನೂರಾ ಇಪ್ಪತ್ತೈದು ಭೂಮಿಗಳಿರುವ ಆಲಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ[36]  ಈ ಸಂಖ್ಯೆಯಲ್ಲಿ ಉತ್ಪ್ರೇಕ್ಷೆಯಿದ್ದರೂ ಈ ಗ್ರಂಥರಚನಾ ಕಾಲಕ್ಕೆ ಭೂಮಿಗಳಿಂದ ಕೂಡಿದ ವಿಮಾನರಚನೆಯ ಸ್ಪಷ್ಟ ಕಲ್ಪನೆ ಮೂಡಿತ್ತು ಎನ್ನಬಹುದು.

ಲಾಡ್‌ಖಾನ್ ಕಟ್ಟಡದ ನಿರ್ಮಾಣದ ವೇಳೆಗೆ ಸಭಾ ಇತ್ಯಾದಿ ಸರ್ವಜನೋಪಯೋಗಿ ವಿವಿಧ ರಚನೆಗಳು ಖಚಿತ ಆಕಾರ ತಳೆದಿದ್ದವು. ಆದರೆ ಈ ದೇವಾಲಯದ ಮೇಲಣ ಉಪಸ್ಥಾಪಕ ಅಥವಾ ಅಪವರಕಾ ರಚನೆಯು ಮಾತ್ರ ಪ್ರಯೋಗದೃಷ್ಟಿಯಿಂದ ರಚಿತವಾದು ದೆಂದು ತಿಳಿಯಬಹುದು.

ಔತ್ತರೇಯ ಶಿಖರದ ಕಲ್ಪನೆ ಹಾಗೂ ಮೂಲ ಬೇರಕ್ಕಾಗಿ ಪ್ರತ್ಯೇಕಗೊಳ್ಳುವ ಗರ್ಭಗೃಹ ರಚನೆ ತದನಂತರ ಕಾಲದ್ದು. ಐಹೊಳೆ, ಬಾದಾಮಿ, ಮಹಾಕೂಟ, ಪಟ್ಟದಕಲ್ಲುಗಳಲ್ಲಿಯ ದೇವಾಲಯಗಳ ನಿರ್ಮಾಣದ ಕಾಲ ಮಾನವನ್ನು ನಿರ್ಧರಿಸುವಲ್ಲಿ ಅವುಗಳೊಂದಿಗೆ ದೊರೆತ ಶಾಸನಗಳೇ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಔತ್ತರೇಯ ಸಂಪ್ರದಾಯದ ಶಿಖರದ ಕಲ್ಪನೆ ಮೂಡುವ ವೇಳೆಗೆ ದಾಕ್ಷಿಣಾತ್ಯ ಸಂಪ್ರದಾಯದ ಶೈಲಿಗಳು ಸಂಪೂರ್ಣವಾಗಿ ವಿಕಸನ ಗೊಂಡಿದ್ದವು ಎಂದು ಖಚಿತವಾಗಿ ಗುರುತಿಸಬಹುದು.

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]     ಕೆ.ಶಿವರಾಮ ಕಾರಂತ, ಭಾರತೇಯ ಶಿಲ್ಪ, ಬೆಂಗಳೂರು, ೧೯೭೫, ಪು. ೧೫

[2]     ಡಿ.ಸಿ.ಸರ್ಕಾರ್, ಸೆಲೆಕ್ಟ್ ಇನ್‌ಸ್ಕ್ರಿಪ್ಷನ್ಸ್, ಕಲ್ಕತ್ತಾ, ೧೯೪೨, ಪು. ೯೦-೯೧

[3]     ಅದೇ, ಪು. ೯೧-೯೨

[4]     ಪಿ.ಕೆ.ಅಗರ್‌ವಾಲಾ, ಟೆಂಪಲ್ ಆಕಿಟೆಕ್ಚರ್ ಇನ್ ಗುಪ್ತ ಪೀರಿಯಡ್, ವಾರಣಾಸಿ, ೧೯೬೮, ಪು. ೩೫-೩೬,೪೨

[5]     ಎಂ.ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೬೬, ಪು. ೧೭೫೩

[6]     ಅದೇ, ಪು. ೧೭೪

[7]     ಕೆ.ವಿ.ಸೌಂದರರಾಜನ್, ಟೆಂಪಲ್ ಆರ್ಕಿಟೆಕ್ಚರ್ ಇನ್ ಕರ್ನಾಟಕ ಅಂಡ್ ಇಟ್ಸ್ ರಾಮಿಫಿಕೇಷನ್ಸ್, ಧಾರವಾಡ, ೧೯೫೯, ಪು. ೩

[8]     ಎಸ್.ಆರ್.ರಾವ್, ದಿ ನೋಟ್ ಆನ್ ದಿ ಕ್ರಾನಾಲಜಿ ಆಫ್ ಅರ‌್ಲಿ ಚಾಲುಕ್ಯನ್ ಟೆಂಪಲ್ಸ್, ಲಲಿತಕಲಾ ಸಂಖ್ಯೆ ೧೫, ನವದೆಹಲಿ, ೧೯೭೨, ಪು.೯

[9]     ಎಪಿಗ್ರಾಫಿಯ ಇಂಡಿಕಾ, ಸಂಪುಟ ೪, ಪು.೬೦-೬೧

[10]    ಎ.ಎನ್.ಅಣ್ಣಿಗೇರಿ ಮತ್ತು ಮೇವುಂಡಿ ಮಲ್ಲಾರಿ ಸಂ. ಶಾಸನಸಾಹಿತ್ಯ ಸಂಚಯ, ಧಾರವಾಡ, ಪು. ೪೩

[11]    ಸೀತಾರಾಮ ಜಾಗೀರ್‌ದಾರ್, ಶಾಸನದಲ್ಲಿ ಇನ್ನೊಂದು ಷಟ್ಪದ, ಕನ್ನಡನುಡಿ, ಸಂಪುಟ ೫೧, ಸಂಚಿಕೆ ೭೮, ೧೯೮೮, ಪು.೧೩-೧೪ ನೆರವು, ಶ್ರೀ ಬಿ. ರಾಜಶೇಖರಪ್ಪ

[12]    ಜಿ.ಕೆ.ಶ್ರೀಗೊಂದೇಕರ್ ಸಂ. ಮಾನಸೋಲ್ಲಾಸ, ಸಂ.೨, ಬರೋಡಾ, ೧೯೩೯, ಪು. ೪, ಶ್ಲೋಕ ೩೧

[13]    ಅದೇ, ಶ್ಲೋಕ ೩೨

[14]    ವಿ.ಎಸ್. ಅಗರ್‌ವಾಲಾ, ಸಂ. ಸಮರಾಂಗಣ ಸೂತ್ರಧಾರ, ಬರೋಡಾ, ೧೯೬೬, ಪು. ೯೦, ಅಧ್ಯಾಯ ೧೮, ಶ್ಲೋಕ ೧೯

[15]    ಅದೇ, ಶ್ಲೋಕ ೨೦

[16]    ಅದೇ, ಪು. ೯೬, ಅಧ್ಯಾಯ ೧೯, ಶ್ಲೋಕ ೨೭

[17]    ಮಾನಸೋಲ್ಲಾಸ, ಉಪೋದ್ಘಾತ, ಪು.೬, ಅಡಿಟಿಪ್ಪಣಿ, ಶ್ಲೋಕ ೨೪೬

[18]    ಅದೇ, ಶ್ಲೋಕ ೨೩೮-೨೩೯

[19]     ಪಿ.ಎ.ಮಂಕಡ್ ಸಂ, ಅಪರಾಜಿತಪೃಚ್ಛಾ, ಬರೋಡಾ, ೧೯೫೦, ಪು.೨೫೨, ಅಧ್ಯಾಯ ೧೦೦, ಶ್ಲೋಕ ೨

[20]    ಮಾನಸೋಲ್ಲಾಸ, ಪು. ೬, ಶ್ಲೋಕ ೬೦-೬೧

[21]    ಕೆ.ಎಲ್.ನರಸಿಂಹಶಾಸ್ತ್ರಿ, ಅನು:ನಾಟ್ಯಶಾಸ್ತ್ರ, ಬೆಂಗಳೂರು, ೧೯೭೭, ಪು. ೨೭, ಅಧ್ಯಾಯ ೨, ಶ್ಲೋಕ ೯-೧೦, ಪು. ೩೯-೪೦, ಶ್ಲೋಕ ೬೮-೭೩

[22]    ಸಮರಾಂಗಣ ಸೂತ್ರಧಾರ, ಪು.೮೯, ಅಧ್ಯಾಯ ೧೮, ಶ್ಲೋಕ ೧೦

[23]    ಅದೇ, ಪು.೯೧, ಶ್ಲೋಕ ೨೬

[24]    ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು. ೨೧೩

[25]    ಸಮರಾಂಗಣ ಸೂತ್ರಧಾರ, ಪು.೯೩, ಅಧ್ಯಾಯ ೧೮, ಶ್ಲೋಕ ೫೮

[26]    ಅಪರಾಜಿತಪೃಚ್ಛಾ, ಪು. ೧೯೨, ಅಧ್ಯಾಯ ೭೭, ಶ್ಲೋಕ ೨-೩

[27]    ಸಮರಾಂಗಣ ಸೂತ್ರಧಾರ, ಪು.೧೫೨, ಅಧ್ಯಾಯ ೨೭, ಶ್ಲೋಕ ೩

[28]    ಅಪರಾಜಿತಪೃಚ್ಛಾ, ಪು. ೪೮೪, ಅಧ್ಯಾಯ ೧೮೮, ಶ್ಲೋಕ ೫

[29]    ಅದೇ, ಪು.೧೯೨,  ಅಧ್ಯಾಯ ೭೭, ಶ್ಲೋಕ ೬

[30]    ಸಮರಾಂಗಣ ಸೂತ್ರಧಾರ, ಪು.೧೫೩, ಅಧ್ಯಾಯ ೨೭, ಶ್ಲೋಕ ೬

[31]    ಅದೇ, ಶ್ಲೋಕ ೫

[32]    ಅಪರಾಜಿತಪೃಚ್ಛಾ, ಪು. ೧೯೨, ಅಧ್ಯಾಯ ೭೭, ಶ್ಲೋಕ ೧೦

[33]    ಸಮರಾಂಗಣ ಸೂತ್ರಧಾರ, ಪು.೯೦, ಅಧ್ಯಾಯ ೧೮, ಶ್ಲೋಕ ೨೪

[34]    ಪಿ.ಎನ್.ಬೋಸ್, ಪ್ರಿನ್ಸಿಪಲ್ಸ್ ಆಫ್ ಶಿಲ್ಪಶಾಸ್ತ್ರ, ದೆಹಲಿ, ೧೯೭೮, ಪು. ೭೪-೭೫

[35]    ಅದೇ, ಪು. ೭೧

[36]     ಬ್ರಹ್ಮಾನಂದ ಮಿಶ್ರಾ ಸಂ. ಶುಕ್ರನೀತಿ, ವಾರಣಾಸಿ, ೧೯೬೮, ಪು. ೨೪೭, ಶ್ಲೋಕ ೬೭-೬೯