ಬಾದಾಮಿಯ ಚಲುಕ್ಯ ದೊರೆಗಳು ನಾಲ್ಕು ಮಹತ್ವದ ಕಲಾ ನೆಲೆಗಳನ್ನು ಕೊಡುಗೆ ಯಾಗಿ ನೀಡಿದ್ದಾರೆ. ಇವು ನಾಲ್ಕೂ ಕರ್ನಾಟಕದ ಬಾಗಿಲುಕೋಟೆ ಜಿಲ್ಲೆಯಲ್ಲಿ ನೆಲೆಗೊಂಡಿವೆ. ಅವುಗಳಲ್ಲಿ ಮಹಾಕೂಟವೂ ಒಂದು. ತಾಲೂಕು ಕೇಂದ್ರವಾದ ಬಾದಾಮಿಯಿಂದ ೧೪ ಕಿ.ಮೀ. ದೂರದಲ್ಲಿರುವ ಮಹಾಕೂಟವು ಒಂದು ಚೆಲುವಿನ ನೈಸರ್ಗಿಕ ತಾಣ. ಈ ಕ್ಷೇತ್ರವನ್ನು ಬೆಟ್ಟದ ಸಾಲು ಮೂರು ದಿಕ್ಕುಗಳಿಂದ ಚಾಚಿಕೊಂಡಿದೆ. ಔಷಧಿ ಸಸ್ಯಗಳಿಂದ ಕೂಡಿದ ಹಸಿರು ಹಸಿರಾದ ಕೊಳ್ಳವದು.

ಮಹಾಕೂಟವು ಒಂದು ಪ್ರಾಚೀನ ಧಾರ್ಮಿಕ ಕೇಂದ್ರ. ಈ ಕುರಿತಾಗಿ ಮಂಗಲೀಶನ ಮಹಾಕೂಟ ಸ್ತಂಭ ಶಾಸನವು ಕ್ರಿ.ಶ. ೬೦೨ ಸಾಕ್ಷಿ ನುಡಿಯುತ್ತದೆ. ಅಂದಿನಿಂದ ಇಂದಿನವರೆಗೆ, ಅಂದರೆ ಸುಮಾರು ೧೪೦೦ ವರ್ಷಗಳಿಂದ ಇಲ್ಲಿ ಧಾರ್ಮಿಕ ಚಟುವಟಿಕೆಗಳು ಸಾಗುತ್ತ ಬಂದಿವೆ. ಹೀಗಾಗಿ ಅನೇಕ ದೇವಾಲಯಗಳು ಮಹಾಕೂಟ ಕ್ಷೇತ್ರದಲ್ಲಿ ತಲೆ ಎತ್ತಿವೆ.

ಮಹಾಕೂಟದಿಂದ ಶಿವಯೋಗ ಮಂದಿರಕ್ಕೆ ಹೋಗುವ ದಾರಿಯಲ್ಲಿ ಸುಮಾರು ೧ ಕಿ.ಮೀ. ಅಂತರದಲ್ಲಿ ಬಾದಾಮಿ ಚಲುಕ್ಯರ ಇನ್ನೊಂದು ತಾಣವಿದೆ. ಇದನ್ನು ಸ್ಥಳೀಯರು ಹಳೆ ಮಹಾಕೂಟ ಇಲ್ಲವೆ ಚಿಕ್ಕಮಹಾಕೂಟ ಎಂದು ಕರೆಯುವುದುಂಟು. ಇಲ್ಲಿ ಮೂರು ದೇಗುಲಗಳನ್ನು, ಕೋಟಿ ತೀರ್ಥ ಎಂಬ ಪುಷ್ಕರಿಣಿಯನ್ನೂ ಕಾಣುತ್ತೇವೆ.

ಇಲ್ಲಿ  ಗಜಪೃಷ್ಠ ವಿನ್ಯಾಸದ ದೇವಾಲಯವಿದೆ. ಬಾದಾಮಿ ಪರಿಸರದಲ್ಲಿರುವ ಮೂರು ಈ ಬಗೆಯ ದೇವಾಲಯಗಳಲ್ಲಿ ಇದೇ ಪ್ರಾಚೀನತಮವಾದುದೆಂದು ಅಧ್ಯಯನವು ತಿಳಿಸುತ್ತದೆ. ಈ ದೇವಾಲಯವೀಗ ಜೀರ್ಣಾವಸ್ಥೆಯಲ್ಲಿದ್ದು ಶಿಖರವು ನೆಲ ಕಚ್ಚಿದೆ. ಚಲುಕ್ಯರ ಕಾಲದ ಶಿವಲಿಂಗ ಗರ್ಭಗೃಹದಲ್ಲಿದೆ. ಗರ್ಭಗೃಹದ ಬಾಗಿಲುವಾಡದ ಎಡಬಲಗಳಲ್ಲಿ ಶಿವನ ಇಬ್ಬರು ಮಕ್ಕಳು ದ್ವಾರಪಾಲಕರಾಗಿ ಇರುವುದು ಕುತೂಹಲಕಾರಿ ಸಂಗತಿ. ಅಳಿದುಳಿದ ಶಿಲ್ಪಗಳ ಉಳಿಕೆಗಳಿಂದ ಈ ಅಂಶವನ್ನು ಗಮನಿಸಬಹುದು. ಎಡಬದಿಗೆ ಸುಂದರವಾಗಿ ಕೆತ್ತನೆಗೊಂಡಿರುವ ಸ್ಕಂದನ ಕಾಲ್ಬೆರಳು, ಈಟಿಯ ಕೆಳ ತುದಿ, ಅರ್ಧ ತುಂಡಾದ ನವಿಲಿನ ಬಾಲ ಕಾಣಸಿಗುತ್ತವೆ. ಬಲ ಬದಿಯಲ್ಲಿ ವೃತ್ತಾಕಾರದ ಪೀಠವಿದೆ. ಇದು ಗಣೇಶ ಶಿಲ್ಪವನ್ನಿರಿಸಿದ ಪೀಠ.

ಈ ದೇಗುಲದ ದಕ್ಷಿಣಕ್ಕೆ ಇನ್ನೆರಡು ಪ್ರತ್ಯೇಕವಾಗಿರುವ ವಿಭಿನ್ನ ವಾಸ್ತು ಸಂಪ್ರದಾಯದ ದೇವಾಲಯಗಳಿವೆ. ಅವುಗಳ ಪ್ರಧಾನ ದೇವಾಲಯವು ರಾಷ್ಟ್ರಕೂಟ ಶೈಲಿಯಲ್ಲಿದೆ. ಪಕ್ಕದಲ್ಲಿಯದು ಕಲ್ಯಾಣ ಚಾಲುಕ್ಯ ಶೈಲಿಯದು. ಕೋಟಿ ತೀರ್ಥದ ದಡವು ದೇವಾಲಯದ ಬಿಡಿ ಭಾಗಗಳಿಂದ ಕಟ್ಟಲಾಗಿದೆ. ಇಡೀ ನೆಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈಗ ಉಳಿದಿರುವ ಕಲಾತ್ಮಕ ಬಿಡಿ ತುಂಡುಗಳನ್ನು ರಕ್ಷಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಅವೂ ಇಲ್ಲವಾಗ ಬಹುದು.

ಇಲ್ಲಿಂದ ಹೊಸ ಮಹಾಕೂಟದತ್ತ ಹೋಗುವ ದಾರಿಯಲ್ಲಿ ೧ ಕಿ.ಮೀ. ಅಂತರದಲ್ಲಿ, ಬಲಬದಿಯಲ್ಲಿ ತೆಂಗಿನ ಗುಂಪಿನ ಮಧ್ಯದಲ್ಲಿ ಅಡಕೇಶ್ವರ ಮತ್ತು ಭೈರವೇಶ್ವರ ದೇವಾಲಯಗಳಿವೆ. ವಾಸ್ತು ಲಕ್ಷಣಗಳನ್ನಾಧರಿಸಿ ಅವು ರಾಷ್ಟ್ರಕೂಟರ ಕೊನೆಯ ಹಂತದ ರಚನೆಗಳೆಂದು ಹೇಳಬಹುದು. ಇದೀಗ ಈ ದೇವಾಲಯಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಆ ಜೀರ್ಣೋದ್ಧಾರ ಕಾರ್ಯದ ಮೊದಲೇ ಈ ಕ್ಷೇತ್ರ ಕಾರ್ಯ ಮಾಡಿದುದು ನನ್ನ ಸುಕೃತವೆಂದು ಭಾವಿಸುತ್ತೇನೆ. ಅನಂತರದಲ್ಲಿಯ ಅಧ್ಯಯನವು ಅವುಗಳ ಮೂಲ ಸ್ವರೂಪವನ್ನು ಅರ್ಥೈಸಲು ವಿಫಲವಾಗಬಹುದಿತ್ತು. ಈ ನೆಲೆಯ ವಿವರಗಳನ್ನು ನನ್ನ ಮಹಾಪ್ರಬಂಧದಲ್ಲಿ ದಾಖಲಿಸಿ ರುವೆನು.

ಈ ತೋಟದಿಂದ ಮಹಾಕೂಟ ಗುಡಿ ಗುಚ್ಛವು ಹತ್ತು ನಿಮಿಷಗಳ ನಡಿಗೆಯಷ್ಟು ದೂರ. ಮಹಾಕೂಟದ ಮುಖ್ಯ ಪ್ರವೇಶದ್ವಾರವನ್ನು ದಾಟಿ ಗುಡಿ ಗುಂಪಿನ ಪ್ರಕಾರದಲ್ಲಿ ಬರುತ್ತಿದ್ದಂತೆ ಪ್ರಾಚೀನ ಕಾಲವನ್ನು ಪ್ರವೇಶಿಸಿದಂತಾಗುತ್ತದೆ. ಈ ಪ್ರಕಾರದಲ್ಲಿ ೧೮ ದೇವಾಲಯಗಳು ‘ವಿಷ್ಣು ಪುಷ್ಕರಿಣಿ’ ಎಂಬ ಹೆಸರಿನ ಕಲ್ಯಾಣಿಯನ್ನು ಸುತ್ತುವರೆದು ನಿಂತುಕೊಂಡಿವೆ. ಈ ದೇವಾಲಯಗಳ ಸಮುಚ್ಚಯದ ಆಗ್ನೇಯ ಮೂಲೆಯಲ್ಲಿ ಒಂದು ಬೃಹದಾಕಾರದ ಪ್ರವೇಶ ದ್ವಾರವಿದ್ದು ಅದರ ದಕ್ಷಿಣ ಬದಿಯಲ್ಲಿ ಇಬ್ಬರು ರಾಕ್ಷಸರ ಶಿಲ್ಪಗಳನ್ನು ಕೆತ್ತಲಾಗಿದೆ. ಈ ದ್ವಾರದಿಂದ ಆಗ್ನೇಯಕ್ಕೆ ಸುಮಾರು ೧೦೦ ಮೀಟರ್ ದೂರದಲ್ಲಿಯ ದಿನ್ನೆಯ ಮೇಲೆ ಒಂಟಿಯಾಗಿ ನಿಂತ ಬಾಣಂತಿಗುಡಿ ನೋಡುಗರ ಚಿತ್ತ ಸೆಳೆಯುತ್ತದೆ. ನೈಋತ್ಯ ದಿಕ್ಕಿನತ್ತ ಅರ್ಧ ಕಿಲೋಮೀಟರ್ ಕಾಡು ಕೊಳ್ಳದಲ್ಲಿ, ಬಂಡೆಯ ಅಡಿಯತ್ತ ಸಾಗಿದರೆ ಹಿರೇಮಹಾಕೂಟೇಶ್ವರನ ಸಣ್ಣಗುಡಿ ಕಣ್ಣಿಗೆ ಬೀಳುತ್ತದೆ. ಇದನ್ನು ಬಂಡೆಯ ಗುಡಿ ಎಂದೂ ಕರೆಯುವುದುಂಟು.

ಈ ಎಲ್ಲ ದೇವಾಲಯಗಳ ಅಧ್ಯಯನವು ಹೊಸ ಅರ್ಥವಿವರಣೆಗೆ ಎಡೆ ಮಾಡಿಕೊಟ್ಟಿದೆ ಮತ್ತು ಈ ಮೊದಲಿನ ಸ್ವೀಕೃತ ಪರಿಕಲ್ಪನೆಗಳ ಬಗ್ಗೆ ಕೆಲವು ಸಂದೇಹಗಳನ್ನುಂಟು ಮಾಡಿದೆ. ಗುಡಿಗುಚ್ಛದಿಂದ ಪ್ರಾರಂಭಿಸಲು ತೊಡಗಿದರೆ ಮಹಾಕೂಟೇಶ್ವರ ದೇವಾಲಯವು ಈ ನೆಲೆಯ ಅತಿ ಪ್ರಾಚೀನ ಗುಡಿ ಎನ್ನಲಾಗಿದೆ. ಚಲುಕ್ಯರ ಆಳ್ವಿಕೆಯ ಅವಧಿಯಲ್ಲಿಯೇ ಅತಿ ಪ್ರಾಚೀನ ಮಂದಿರವದಾಗಿದೆ. ಮಹಾಕೂಟ ಸ್ತಂಭ ಶಾಸನವು ಈ ದೇವಾಲಯದ ಅಸ್ತಿತ್ವದ ಬಗ್ಗೆ ತಿಳಿಸುತ್ತದೆ. ಆ ಶಾಸನದ ೧೩ನೆಯ ಸಾಲು ಮಕುಟೇಶ್ವರ ನಾಥನನ್ನು ಪ್ರಸ್ತಾಪಿಸುತ್ತದೆ. ಈ ಕ್ಷೇತ್ರವು ಚಲುಕ್ಯರ ಮೂಲಪುರುಷ ಜಯಸಿಂಹ ಮತ್ತು ರಣರಾಗರಿಂದ ಪೂಜಿತವಾದುದು. ಇದರಿಂದಾಗಿ ಕ್ರಿ.ಶ. ೬೦೨ಕ್ಕಿಂತ ಪೂರ್ವದಲ್ಲಿಯೇ ಇದು ಶೈವಕೇಂದ್ರವಾಗಿರಬೇಕೆಂಬುದು ವಿದಿತವಾಗುತ್ತದೆ. ದೇವಾಲಯದ ವಾಸ್ತುರಚನೆಯ ಅಧ್ಯಯನವು, ೮ನೆಯ ಶತಮಾನದಲ್ಲಿ ವಿಜಯಾದಿತ್ಯನ ಅವಧಿಯಲ್ಲಿ ಇಡೀ ದೇವಾಲಯವು ಪುನರ್‌ನಿರ್ಮಿತವಾದುದನ್ನು ಸ್ಪಷ್ಟಪಡಿಸುತ್ತದೆ.

ಇದಾದ ಕೆಲ ಕಾಲದ ನಂತರ ಉಳಿದ ದೇವಾಲಯಗಳು ಕ್ರಿ.ಶ. ೬೯೬ ಮತ್ತು ೮೪೫ರ ಅವಧಿಯಲ್ಲಿ ತಲೆ ಎತ್ತಿವೆ. ಕ್ರಿ.ಶ. ೬೬೦ರಲ್ಲಿ ೧ನೇ ವಿಕ್ರಮಾದಿತ್ಯನು ಶಿವಮಂಡಲ ದೀಕ್ಷೆಯನ್ನು ಪಡೆದ ನಂತರ ಪ್ರಧಾನ ಶೈವ ಕೇಂದ್ರವಾಗಿ ಈ ಕ್ಷೇತ್ರವು ಬೆಳೆಯಿತು. ಶೈವಧರ್ಮಕ್ಕೆ ವಿಶೇಷವಾದ ರಾಜಾಶ್ರಯ ದೊರೆತ ಪರಿಣಾಮವಾಗಿ ಮಹಾಕೂಟ ಮತ್ತು ಆಲಂಪುರ(ಆಂಧ್ರಪ್ರದೇಶ)ಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಸಾಂದ್ರಗೊಂಡವು.

ಈ ದೇಗುಲ ಸಂಕೀರ್ಣದಲ್ಲಿಯ ಭೈರವಲಿಂಗ ಗುಡಿಯ ನಿರ್ಮಾಣ ಕಾಲದ ಬಗೆಗೆ ಒಂದು ತಪ್ಪುಗ್ರಹಿಕೆಯಿಂದೆ. ಈ ಮಂದಿರವು ಈ ಕ್ಷೇತ್ರದ ಅತಿ ಪ್ರಾಚೀನ ಗುಡಿಯೆಂದು ಗ್ರಹಿಸಲಾಗಿತ್ತು. ಈ ದೇವಾಲಯವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಅದು ದೇವಾಲಯವೇ ಆಗಿರಲಿಲ್ಲವೆಂಬುದು ವೇದ್ಯವಾಗುತ್ತದೆ. ಅದು ಮೂಲತಃ ಸೋಮೇಶ್ವರ ದೇವಾಲಯದ ನಂದಿಮಂಟಪವಾಗಿದ್ದಿತು. ಕಾಲಾಂತರದಲ್ಲಿ ಅದೊಂದು ಗೋಡೆಗಳಿಲ್ಲದ ಗುಡಿಯೆಂದು ಜನರು ಭಾವಿಸಿದುದು ಗೊತ್ತಾಗುತ್ತದೆ.

ವಾಸ್ತುಶೈಲಿಯ ದೃಷ್ಟಿಯಿಂದ ಬಾಣಂತಿ ಗುಡಿಯನ್ನು ಬಾದಾಮಿಯ ಮೇಲಿನ ಶಿವಾಲಯಕ್ಕೆ ಹೋಲಿಸಲಾಗಿದೆ. ಅವುಗಳ ವಾಸ್ತು ಲಕ್ಷಣಗಳಲ್ಲಿ ಸಾಮ್ಯವಿದೆ. ಬಾಣಂತಿ ಗುಡಿಯು ಮೊದಲನೆಯ ಪುಲಿಕೇಶಿಯ ಅವಧಿಯದೆಂದೂ, ಮೇಲಿನ ಶಿವಾಲಯಕ್ಕಿಂತ ಮುಂಚಿನದೆಂದೂ ತೀರ್ಮಾನಿಬಹುದು.

ಬಂಡೆ ಗುಡಿ (ಹಿರೇಮಹಾಕೂಟ ಗುಡಿ) ಈ ನೆಲೆಯ ಅತ್ಯಂತ ಪ್ರಾಚೀನ ದೇವಾಲಯವೆಂದು ಗುರುತಿಸಲಾಗಿದೆ. ಆದರೆ ಇನ್ನುಳಿದ ದೇವಾಲಯಗಳ ಲಕ್ಷಣಗಳೊಂದಿಗೆ ತೌಲನಿಕವಾಗಿ ಪರಿಶೀಲಿಸಿದಾಗ ಅದು ಎಂಟನೆಯ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿತವಾದುದೆಂದು ಸ್ಪಷ್ಟವಾಗುತ್ತದೆ.

ಮಹಾಕೂಟವು ಶಿಲ್ಪಾಗರವೂ ಹೌದು. ಇಲ್ಲಿಯ ಶಿಲ್ಪಗಳು ಶೈವಧರ್ಮ ಪ್ರಾಧ್ಯಾನ್ಯವನ್ನು ಸೂಚಿಸುತ್ತದೆ. ಈ ನೆಲೆಯಲ್ಲಿ ಆರು ಲಕುಲೀಶ ಪ್ರತಿಮೆಗಳಿದ್ದು ಅವು ಈ ಭಾಗದಲ್ಲಿದ್ದ ಲಾಕುಳ ಪಂಥದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. ಇಂದಿಗೂ ಶೈವಭಕ್ತರ ಪ್ರಬಲ ಆಕರ್ಷಕ ಧಾರ್ಮಿಕ ಕೇಂದ್ರವಾಗಿದೆ.