ಒಂದನೇ ವಿಕ್ರಮಾದಿತ್ಯ (೬೫೫೬೮೧)

ಭುಜಬಲದ ಮೇಲೆ ವಿಶ್ವಾಸವಿದ್ದ ವಿಕ್ರಮಾದಿತ್ಯ ಮುನ್ನುಗ್ಗಿ ಇತರ ಹಕ್ಕುದಾರರನ್ನೆಲ್ಲ ಗೆದ್ದು ತನ್ನನ್ನು ರಾಜನೆಂದು ಘೋಷಿಸಿಕೊಂಡನು. ಇದು ೧೨ ವರ್ಷವಾದ ನಂತರ ಕ್ರಿ.ಶ. ೬೫೪-೫೫ರಲ್ಲಿ. ಅವನು ಮೂವರು ರಾಜರನ್ನು ಅವನಿಪತಿತ್ರಯ(ಸೋಲಿಸಿದನು). ಈ ಮೂವರು ರಾಜರು ಯಾರೆಂಬ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಪಲ್ಲವರಾಜ ಆದಿತ್ಯವರ್ಮ ಮತ್ತು ಚಂದ್ರಾದಿತ್ಯರೂ ಆ ಮೂವರಲ್ಲಿ ಸೇರಿರಬಹುದು. ಮಹಾರಾಷ್ಟ್ರ-ಕರ್ನಾಟಕ, ಆಂಧ್ರ ಮತ್ತು ಕೊಂಕಣ, ಮಹಾರಾಷ್ಟ್ರ-ಗುಜರಾತ್, ಚೇರ, ಚೋಳ ಯಾರೇ ಆಗಲಿ, ವಿಕ್ರಮಾದಿತ್ಯನು ಕ್ರಿ.ಶ. ೬೫೪-೫೫ರಲ್ಲಿ ಸಿಂಹಾಸನವನ್ನೇರುವುದಕ್ಕೆ ಮೊದಲು ಅವರನ್ನು ಸೋಲಿಸಬೇಕಾಗಿತ್ತು. ರಾಜ್ಯವನ್ನು ಮರಳಿ ಗಳಿಸಿದುದರ ನೆನಪಿಗಾಗಿ ಆ ಮೊದಲು ಬ್ರಾಹ್ಮಣರಿಗೂ ದೇವಾಲಯ ಗಳಿಗೂ ನೀಡಿದ್ದ ರಾಜ್ಯಗಳನ್ನು ಹೊಸದುಗೊಳಿಸಿದನು. ರಾಜಕೀಯ ಶೂನ್ಯತೆಯ ಅವಧಿಯಲ್ಲಿ ಬಹುಶಃ ಈ ದಾನಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಅವೆಲ್ಲವನ್ನೂ ಸರಿಪಡಿಸಿದ ಮೇಲೆ ವಿಕ್ರಮಾದಿತ್ಯನು ಪರಮೇಶ್ವರ ಎಂಬ ಬಿರುದನ್ನು ಧರಿಸಿದನು.

ರಾಜನಾದ ಮೇಲೆ ಒಂದನೇ ವಿಕ್ರಮಾದಿತ್ಯನು ಪಲ್ಲವ, ಕೇರಳ(ಚೇರ), ಚೋಳ, ಪಾಂಡ್ಯ ಮತ್ತು ಸಿಂಹಳ ರಾಜರನ್ನು ಸೋಲಿಸಿದನು ಎಂದು ವರ್ಣಿಸಲಾಗಿದೆ. ತನ್ನ ಸ್ಥಾನವನ್ನು ಸುಭದ್ರಪಡಿಸಿಕೊಂಡು, ಅಜೇಯವಾದ ಸೇನೆಯನ್ನು ಕೂಡಿಸಿಕೊಂಡು ಸುಮಾರು ಕ್ರಿ.ಶ. ೬೯೦ರಲ್ಲಿ ಅವನು ಪಲ್ಲವರ ಮೇಲೆ ಯುದ್ಧವನ್ನು ಸಾರಿ ಕಾಂಚೀಪುರದ ಪಶ್ಚಿಮಕ್ಕೆ ಮಲ್ಲಿಯೂರು ಎಂಬಲ್ಲಿ ಶಿಬಿರ ಹೂಡಿದನು. ನರಸಿಂಹವರ್ಮ, ಎರಡನೇ ಮಹೇಂದ್ರವರ್ಮ ಮತ್ತು ಪರಮೇಶ್ವರವರ್ಮ ಎಂಬ ಮೂವರು ಪಲ್ಲವ ರಾಜರ ಮೇಲೆ ಯುದ್ಧ ಮಾಡಿದನು. ಕ್ರಿ.ಶ. ೬೭೪ರಲ್ಲಿ ಉರಗಪುರ-ಇಂದಿನ ತಿರುಚನಾಪಳ್ಳಿ ಜಿಲ್ಲೆಯ ಉರೈಯೂರು ಅನ್ನು ಹಿಡಿದನು. ಈ ಯುದ್ಧಗಳಲ್ಲಿ ಅವನ ಮಗ ವಿನಯಾದಿತ್ಯನು ತುಂಬಾ ಸಹಾಯ ಮಾಡಿದನು. ಅಲ್ಲದೆ ತಂದೆಯ ಅಣತಿಯಂತೆ ತಾನೇ ಪಾಂಡ್ಯನ ಮೇಲೆ ಯುದ್ಧಕ್ಕೆ ಹೋದನು. ಕೇರಳದ ರಾಜನು ಶರಣಾದನು. ಆದರೆ ಪಾಂಡ್ಯ ಅರಿಕೇಸರಿ ಮಾರವರ್ಮನು (ಸು.ಕ್ರಿ.ಶ.೬೦೦-೭೦೦) ಪ್ರತಿಭಟಿಸಲು ವಿನಯಾದಿತ್ಯನು ಅವನನ್ನು ಸೋಲಿಸಿದನು. ಸಿಂಹಳವನ್ನು ಗೆದ್ದನೆನ್ನುವುದು ಉತ್ಪ್ರೇಕ್ಷೆಯಿರಬಹುದು. ತನ್ನ ಯುದ್ಧಾಶ್ವ ಚಿತ್ರಕಾಂತವನ್ನೇರಿ ವಿನಯಾದಿತ್ಯನು ಹಲವು ಯುದ್ಧಗಳನ್ನು ಯಶಸ್ವಿಯಾಗಿ ಗೆದ್ದನು.

ಆದರೆ ಹಲವು ಲಕ್ಷಗಳಿದ್ದ ಚಾಲುಕ್ಯ ಸೇನೆಯನ್ನು ಅಟ್ಟಿ ಓಡಿಸಿದುದಾಗಿ ಪಲ್ಲವರಾಜ ಪರಮೇಶ್ವರವರ್ಮನು ಹೇಳಿಕೊಳ್ಳುತ್ತಾನೆ. ಇದು ಬಹುಶಃ ಪೆರುವಳನಲ್ಲೂರಿನಲ್ಲಿ ನಡೆದ ಯುದ್ಧದಲ್ಲಾಗಿರಬಹುದು. ಪೆರಿಯಪುರಾಣದಲ್ಲಿ, ಒಬ್ಬ ಸೇನಾಪತಿ ಪರಂಜೋತಿ ಅಥವಾ ಶಿರುತ್ತೊಂಡರ್ ಎನ್ನುವವನು ಬಾದಾಮಿಗೆ ಮುತ್ತಿಗೆ ಹಾಕಿ ಭಾರೀ ಲೂಟಿಯನ್ನು ತಂದನು ಎಂದು ಉಲ್ಲೇಖಿಸುತ್ತದೆ. ಆದರೆ ಶಿರುತ್ತೊಂಡರ್ ಕಾಣಿಸಿಕೊಳ್ಳುವುದು ಮುಂದಿನ ಇನ್ನೊಬ್ಬ ಪಲ್ಲವರಾಜನ ಆಡಳಿತ ಕಾಲದಲ್ಲಿ. ಈ ಎಲ್ಲಾ ಯುದ್ಧಗಳಲ್ಲಿ ವಿಕ್ರಮಾದಿತ್ಯನಿಗೆ ಅವನ ಮಗ ವಿನಯಾದಿತ್ಯ ಹಾಗೂ ಮೊಮ್ಮಗ ವಿಜಯಾದಿತ್ಯರ ಸಮರ್ಥವಾದ ಬೆಂಬಲ ದೊರಕಿತು. ವಿಜಯಾದಿತ್ಯನನ್ನು ರಾಜಧಾನಿಯ ರಕ್ಷಣೆಗೆ, ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಇರಿಸಲಾಗಿತ್ತು. ಗಂಗ ವಂಶದ ಮಾಧವನೆನ್ನುವವನು ರಣರಾಗವರ್ಮನ ಅಳಿಯನೂ ವಿಕ್ರಮಾದಿತ್ಯನ ಅಣ್ಣನೂ ಆಗಿದ್ದನು. ಈ ಮಾಧವನು ಯಾರೆಂದು ಗುರುತಿಸುವುದು ಕಷ್ಟ. ವಿಕ್ರಮಾದಿತ್ಯನಿಗೆ ಗಂಗಮಹಾದೇವಿ ಎಂಬ ಹೆಸರಿನ ಒಬ್ಬ ಪತ್ನಿಯಿದ್ದಳು. ಆದರೆ ಆಕೆ ವಿಕ್ರಮಾದಿತ್ಯನ ತಾಯಿ ಎಂದು ನೀಲಕಂಠಶಾಸ್ತ್ರಿ ಅಭಿಪ್ರಾಯ ಪಡುತ್ತಾರೆ. ಗದ್ವಾಲ್ ಫಲಕಗಳು ಆಕೆಯನ್ನು ರಾಣಿ ಎಂದು ಉಲ್ಲೇಖಿಸುವುದಿಲ್ಲ, ‘ಮಹಾದೇವಿ’ ಎಂದು ಮಾತ್ರ ಹೇಳುತ್ತವೆ. ಆಕೆಯು ವಿಕ್ರಮಾದಿತ್ಯನ ಗೌರವಾನ್ವಿತ ರಾಣಿಯಾಗಿದ್ದಳೆಂಬುದನ್ನು ಇದು ಸೂಚಿಸುತ್ತದೆ ಎಂದು ರಮೇಶ್ ಭಾವಿಸುತ್ತಾರೆ. ಉರಪುರದಲ್ಲಿ ವಿಕ್ರಮಾದಿತ್ಯನ ಅಂತಃಪುರದಲ್ಲಿ ಅಂಗಿಪೊಡಿ ಎಂಬ ಹೆಂಗಸು ಇದ್ದುದರ ಉಲ್ಲೇಖವಿದೆ. ಈಕೆ ಬಹುಶಃ ಒಬ್ಬ ವೇಶ್ಯೆಯಿದ್ದಿರಬಹುದು. ಚಂದ್ರಾದಿತ್ಯನಿಗೆ ವಿಜಯಭಟ್ಟಾರಿಕೆ ಎಂಬ ಪತ್ನಿಯಿದ್ದಳು. ಅವಳನ್ನು ವಿಜಯಮಹಾದೇವಿ, ಬೊಡ್ಡಿಪೋಟ್ನಿ ಎಂದು ವರ್ಣಿಸಲಾಗಿದೆ. ಅವಳನ್ನು ಪ್ರಿಯಮಹಿಷೀ ಎಂದು ವರ್ಣಿಸಿದೆ.

ಜಯಸಿಂಹವರ್ಮನು ಎರಡನೇ ಪುಲಕೇಶಿಯ ಇನ್ನೊಬ್ಬ ಮಗ. ಅವನು ಗುಜರಾತಿನಲ್ಲಿ ಆಳುತ್ತಿದ್ದನು. ಅಲ್ಲಿ ಚಾಲುಕ್ಯರ ಒಂದು ಶಾಖೆಯು ಆಳತೊಡಗಿತು. ಅವನ ಮಗ ಶ್ರೀಯಾಶ್ರಯ ಶಿಲಾದಿತ್ಯನು ಕ್ರಿ.ಶ. ೬೭೦ಕ್ಕಿಂತ ಮೊದಲು ಪಟ್ಟಕ್ಕೆ ಬಂದನು. ತನ್ನ ದೊಡ್ಡಪ್ಪ ಮೊದಲನೆಯ ವಿಕ್ರಮಾದಿತ್ಯನ ನಂತರವೂ ಬದುಕಿದ್ದನು. ಬುದ್ಧವರಸ ಎನ್ನುವವನು ಇಮ್ಮಡಿ ಪುಲಕೇಶಿಯ ಒಬ್ಬ ತಮ್ಮ. ಅವನು ಉತ್ತರ ಕೊಂಕಣ ಎಂದು ಗುರುತಿಸಲಾಗಿರುವ ಅಪರಾಂತವೆಂಬ ಪ್ರದೇಶವನ್ನು ಆಳುತ್ತಿದ್ದನು.

ವಿನಯಾದಿತ್ಯ (೬೮೧೬೯೬)

ಕ್ರಿಸ್ತಶಕ ೬೮೧ರಲ್ಲಿ ಒಂದನೇ ವಿಕ್ರಮಾದಿತ್ಯನ ನಂತರ ವಿನಯಾದಿತ್ಯನು ಪಟ್ಟಕ್ಕೆ ಬಂದನು. ಆ ವೇಳೆಗೆ ಅವನಿಗೆ ೬೩ ವರ್ಷ ವಯಸ್ಸಾಗಿತ್ತು, ಅವನ ಮಗ ವಿಜಯಾದಿತ್ಯನು, ತಂದೆ-ತಾತರಿಬ್ಬರೂ ಯುದ್ಧಗಳಲ್ಲಿ ನಿರತರಾಗಿದ್ದಾಗ ರಾಜಧಾನಿಯಲ್ಲಿ ಉಳಿದುಕೊಂಡಿದ್ದನು. ಅವನ ಹದಿನೈದು ವರ್ಷಗಳ ಆಳ್ವಿಕೆಯು ಶಾಂತಯುತವಾಗಿತ್ತು. ವಾತ್ಸಲ್ಯದ ಯುಧಿಷ್ಟಿರನೆಂದೂ, ಸಂಪದಭ್ಯುದಯದಲ್ಲಿ ವಾಸುದೇವನೆಂದೂ, ಆಶ್ರಯ ನೀಡುವುದರಲ್ಲಿ ಪರುಶರಾಮನೆಂದೂ, ಭರತನೆಂದೂ ಕೊಂಡಾಡಲಾಗಿದೆ. ಆಳ್ವಿಕೆಯ ಮೊದಲ ವರ್ಷಗಳಲ್ಲಿ ಅವನು ರಾಜ್ಯಾದ್ಯಂತ ಪ್ರವಾಸ ಮಾಡಿದನು. ಐದು ವರ್ಷವಾದ ಮೇಲೆ ಲಾಟದ ಮೇಲೆ ದಾಳಿ ಮಾಡಿದ್ದ ಮಾಳವ ರಾಜ ವಜ್ರಟನ ಮೇಲೆ ದಂಡೆತ್ತಿ ಹೋದನು. ಈ ಯುದ್ಧದಲ್ಲಿ ವಿಜಯಾದಿತ್ಯನು ಮುಖ್ಯವಾದ ಪಾತ್ರವನ್ನು ನಿರ್ವಹಿಸಿದನು. ಶತ್ರುವನ್ನು ನಾಶಪಡಿಸಿದ ಮೇಲೆ ರಾಜಕುಮಾರನು ತನ್ನ ತಂದೆಗೆ ಗಂಗಾ ಮತ್ತು ಯಮುನಾ ವಿಗ್ರಹಗಳನ್ನೂ, ಪಾಳಿಧ್ವಜ, ನಗಾರಿ, ಭೇರಿ ಇತ್ಯಾದಿ ರಾಜಲಾಂಛನಗಳನ್ನೂ ನೀಡಿದನು. ಆದರೆ ದುರದೃಷ್ಟವಶಾತ್, ಹಿಮ್ಮೆಟ್ಟುತ್ತಿದ್ದ ವೈರಿಯು ವಿಜಯಾದಿತ್ಯನನ್ನು ಸೆರೆಹಿಡಿದನು. ಇದು ಸುಮಾರು ಕ್ರಿ.ಶ.೬೮೬ರಲ್ಲಿ ಮತ್ತೆ ೬೯೧ರ ವೇಳೆಗೆ ಅವನು ಆಂಧ್ರಪ್ರೇಶದ ಕರ್ನೂಲು ಜಿಲ್ಲೆಯ ಎರುಪುಂದಲೆಯಲ್ಲಿ ಶಿಬಿರ ಹೂಡಿದ್ದುದನ್ನು ನೋಡುತ್ತೇವೆ. ಸೆರೆಯಿಂದ ತಪ್ಪಿಸಿಕೊಂಡು ಬರಲು ಅವನಿಗೆ ಹೆಚ್ಚುಕಡಿಮೆ ಐದು ವರ್ಷಗಳು ಹಿಡಿದವು.

ವಿಜಯಾದಿತ್ಯ (೬೯೬೭೩೩)

ವಿಜಯಾದಿತ್ಯನು ಪಟ್ಟಕ್ಕೆ ಬಂದದ್ದು ಕ್ರಿ.ಶ. ೬೮೬ರಲ್ಲಿ. ಆ ವೇಳೆಗಾಗಲೆ ಅವನಿಗೆ ೫೦ ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು. ಅವನು ೩೮ ವರ್ಷ ಸುದೀರ್ಘ ಆಳಿಕೆಯನ್ನು ನಡೆಸಿದನು. ಅವನ ಆಳ್ವಿಕೆಯ ಅವಧಿಯನ್ನು ಪ್ರಜಾ ಕಲ್ಯಾಣದ ಕಾಲಾವಧಿ ಎಂದು ವರ್ಣಿಸಲಾಗಿದೆ. ದೇವಾಲಯಗಳಿಗೆ ಉದಾರವಾಗಿ ದಾನ ಮಾಡಿದನು. ಬ್ರಹ್ಮದೇಯಗಳನ್ನು (ಅಗ್ರಹಾರ) ಸ್ಥಾಪಿಸಿದನು. ಆಲಂಪುರ ಪ್ರಶಸ್ತಿಯು ಹೇಳುವಂತೆ: ಬಡವರಿಗೆ, ಅಸಹಾಯಕರಿಗೆ, ಅನಾಥರಿಗೆ ಕೊಡಬೇಕಾದಷ್ಟು ದಾನಧರ್ಮಗಳನ್ನು ಮಾಡಿದನು(ದೀನನಾಥ ದಾರಿದ್ರ್ಯೇಭ್ಯ). ಬಹುಶಃ ಇದು ಆ ಕಾಲದ ವಿಶೇಷವಾದ ಆದರ್ಶಗುಣವಾಗಿತ್ತು. ಬಡವರಿಗೆ ಒಂದು ಆಶ್ರಯ ಧಾಮವನ್ನೂ, ಆಸ್ಪತ್ರೆಯನ್ನೂ ಕಟ್ಟಿಸಿದನು; ಕೆರೆಗಳನ್ನು ತೋಡಿಸಿ ನೀರಾವರಿಯನ್ನು ಪ್ರೋಹಲವು ಧರ್ಮಗಳ ಅನುಯಾಯಿಗಳನ್ನು ಅವನು ರಕ್ಷಿಸಿದನು. ಅವರು ಬೌದ್ಧರಾಗಲಿ, ಜೈನರಾಗಲಿ, ಭಾಗವತರಾಗಲಿ ಅವನ ಆಶ್ರಯವನ್ನು ಪಡೆದರು. ಬಾದಾಮಿಯ ಜಂಬುಲಿಂಗ ದೇವಾಲಯದಲ್ಲಿ ಕ್ರಿ.ಶ. ೬೯೯ರಲ್ಲಿ ರಾಜಮಾತೆ ವಿನಯವತಿಯು ಬ್ರಹ್ಮ, ವಿಷ್ಣು, ಮಹೇಶ್ವರ ಮೂರ್ತಿಗಳನ್ನು  ಪ್ರತಿಷ್ಠೆ ಮಾಡಿಸಿದಳು. ಅವನ ಭಾವಮೈದುನ ಆಳುಪ ವಂಶದ ಚಿತ್ರವಾಹನ ಅವನ ತಂಗಿ ಕುಂಕುಮ ಮಹಾದೇವಿಯ ಪತಿ. ಅವನ ಸೂಚನೆಯಂತೆ ರಾಜನು ಗುಡ್ಡಿಗೆರೆ ಗ್ರಾಮವನ್ನು(ಗುಡಗೇರಿ), ಆಕೆ ಲಕ್ಷ್ಮೇಶ್ವರದಲ್ಲಿ ಕಟ್ಟಿಸಿದ ಜಿನ ಭವನಕ್ಕೆ ದಾನವಾಗಿ ಅರ್ಪಿಸಿದಳು. ಚತ್ರವಾಹನನಿಗೆ ಗೌರವವನ್ನು ಸೂಚಿಸಲು ಪಟ್ಟದಕಲ್ಲಿನಿಂದ ಬನವಾಸಿಗೆ ವಿಜಯಾದಿತ್ಯನು ಪ್ರಯಾಣ ಮಾಡಿ ಬಂದನು. ಕುಂಕುಮ ಮಹಾದೇವಿಯು ಹಿರಣ್ಯಗರ್ಭವನ್ನು ಆಚರಿಸಿ, ವೇದವಿದನಾದ ಒಬ್ಬ ಬ್ರಾಹ್ಮಣನಿಗೆ ದಾನ ಮಾಡುವಂತೆ ತನ್ನ ಸಹೋದರನನ್ನು ಕೋರಿದಳು. ಕ್ರಿ.ಶ. ೭೨೩ರಲ್ಲಿ ಬಿಕ್ಕಿರಾಣಕನು, ಇವನು ಇಮ್ಮಡಿ ವಿಕ್ರಮಾದಿತ್ಯನೆಂದು ಗುರುತಿಸಲಾಗಿದೆ. ಸಂಬೊಳಲ್ ಎಂಬ ಗ್ರಾಮವನ್ನು ವಿಜಯನೆಂಬ ಅಧಿಕಾರಿಯ (ಮಹತ್ತರ) ಕೋರಿಕೆಯಂತೆ ಲಕ್ಷ್ಮೇಶ್ವರದ ಶಂಖಬಸ್ತಿಗೆ ದಾನ ಮಾಡಿದನು. ದೇವಾಲಯಗಳನ್ನು ದುರಸ್ತಿ ಮಾಡಿಸಿದನು. ಅಲ್ಲಿ ಸಂಗೀತ ಕಚೇರಿಗಳು ನಡೆಯಲು ಏರ್ಪಾಟು ಮಾಡಿದನು. ನೀರಾವರಿಗಾಗಿ ಕೆರೆಗಳನ್ನು ತೋಡಿಸಿದನು. ಅವನ ಪತ್ನಿ ಮಹಾದೇವಿ ಕರಹಾಡದ ಸೇಂದ್ರಕನಾಯಕ ವಿಷ್ಣುರಾಜನ ಮಗಳು. ವೀಣಾ ಪೋಟಿಯೆನ್ನುವವಳು ಒಬ್ಬ ವೇಶ್ಯೆ ಯಾಗಿದ್ದು, ಮಹಾಕೂಟದ ಮುಕ್ತೇಶ್ವರನಿಗೆ ಒಂದು ರತ್ನಖಚಿತ ಪೀಠವನ್ನೂ ಬೆಳ್ಳಿಯ ಕೊಡೆಯನ್ನೂ ಅರ್ಪಿಸಿದಳು.

ಇಮ್ಮಡಿ ವಿಕ್ರಮಾದಿತ್ಯ (೭೩೩೭೪೪)

ವಯಸ್ಸಾಗಿದ್ದುದರಿಂದ ವಿಜಯಾದಿತ್ಯನು ತನ್ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ತನ್ನ ಮಗ ಇಮ್ಮಡಿ ವಿಕ್ರಮಾದಿತ್ಯನನ್ನು ಆಡಳಿತದಲ್ಲಿ ಸಹಭಾಗಿಯಾಗಿ ಮಾಡಿಕೊಂಡನು. ಶಾಂತಿಯ ಕಾಲಾವಧಿಯನ್ನು ದೌರ್ಬಲ್ಯವೆಂದು ತಪ್ಪಾಗಿ ಲೆಕ್ಕ ಹಾಕಿದ ಸಾಂಪ್ರದಾಯಿಕ ಶತ್ರು ಪಲ್ಲವ ಪರಮೇಶ್ವರವರ್ಮನು ಚಾಲುಕ್ಯರ ವಿರುದ್ಧವಾಗಿ ಬಂಡೆದ್ದನು. ಆಗ ವಿಕ್ರಮಾದಿತ್ಯನು ದಂಡೆತ್ತಿ ಕಾಂಚೀಪುರಕ್ಕೆ ಹೋಗಿ, ಪಲ್ಲವನನ್ನು ಸೋಲಿಸಿ ಅವನಿಂದ ಕಪ್ಪ ವಸೂಲು ಮಾಡಿಕೊಂಡು ಬಂದನು. ಇದು ನಡೆದದ್ದು ೭೩೦-೩೧ರಲ್ಲಿ. ಇದರಲ್ಲಿ ಅವನಿಗೆ ದುರ್ವಿನೀತ ಎರೆಯಪ್ಪನ ಸಮರ್ಥ ನೆರವು ದೊರಕಿತು. ರಾಜನು ಅವನಿಗೆ ಉಳ್ಚಲು ಮತ್ತು ಪರಿಯಳಗಳೆಂಬ ಎರಡು ಗ್ರಾಮಗಳನ್ನು ಕೊಡುಗೆಯಾಗಿ ನೀಡಿದನು. ಈ ಗಂಗನನ್ನು ದುಗ್ಗಮಾರ, ಶ್ರೀಪುರುಷನ ಮಗ ಎಂದು ಗುರುತಿಸಲಾಗಿದೆ. ವಿಕ್ರಮಾದಿತ್ಯನು ಸು. ಕ್ರಿ.ಶ.೭೪೦ರಲ್ಲಿ ತನ್ನ ಸ್ವತಂತ್ರ ಆಳ್ವಿಕೆಯು ಪ್ರಾರಂಭವಾದ ಒಡನೆಯೇ ತನ್ನ ಅಧೀನರಾಜ ಗಂಗ ಪುರುಷನನ್ನು ಜೊತೆಗೆ ಸೇರಿಸಿಕೊಂಡು ಪಲ್ಲವನ ಮೇಲೆ ಯುದ್ಧಕ್ಕೆ ನಡೆದನು. ಆಗ ಇನ್ನೂ ಬಾಲಕನಾಗಿದ್ದರೂ ಪಲ್ಲವ ನಂದಿವರ್ಮನು ಉಗ್ರವಾದ ಪ್ರತಿಭಟನೆಯನ್ನು ಕೊಟ್ಟನು, ಆದರೂ ಫಲವಾಗಲಿಲ್ಲ. ಕಟಮುಖ(ಮದ್ದಳೆ), ಸಮುದ್ರಘೋಷ(ಒಂದು ಬಗೆಯ ಕಹಳೆ), ರಾಜದಂಡ ಮೊದಲಾದ ತನ್ನ ರಾಜಲಾಂಛನಗಳನ್ನು ತೊರೆದು ಪಲಾಯನ ಮಾಡಿದನು. ಚಾಲುಕ್ಯನು ರಾಜಧಾನಿಯನ್ನು ವಶಪಡಿಸಿಕೊಂಡನು. ಆದರೆ ಅದನ್ನು ಲೂಟಿ ಮಾಡದೆ, ಬ್ರಾಹ್ಮಣರಿಗೆ ದೀನ-ದರಿದ್ರರಿಗೆ ಬೇಕಾದಷ್ಟು ದಾನಧರ್ಮಗಳನ್ನು ಮಾಡಿದನು. ರಾಜಸಿಂಹೇಶ್ವರ ದೇವಾಲಯದಂತಹ ಭವ್ಯವಾದ ಶಿಲಾದೇವಾಲಯವನ್ನು ನೋಡಿ ಅವನು ಪ್ರಭಾವಿತನಾದನು. ಆ ದೇವಾಲಯದ ಸಂಪತ್ತನ್ನು ನೋಡಿ ಅವನಿಗೆ ಬೆರಗಾಯಿತು! ಅದಷ್ಟನ್ನೂ ಅವನು ಲೂಟಿ ಮಾಡಿಕೊಂಡು ತರಬಹುದಾಗಿತ್ತು. ಆದರೆ ಅಂತಹ ಹೀನಕಾರ್ಯಕ್ಕೆ ಅವನ ಮನಸ್ಸು ಒಪ್ಪದಾಯಿತು. ಅದಕ್ಕೆ ಬದಲು ತಾನೇ ಇನ್ನಷ್ಟು ದಾನಗಳನ್ನು ನೀಡಿದನು. ಈ ದಂಡಯಾತ್ರೆಯಲ್ಲಿ ಅವನು ಪಾಂಡ್ಯ, ಚೋಳ, ಕೇರಳ, ಕಳಭ್ರರಿಗೆ ತಲ್ಲಣವನ್ನುಂಟು ಮಾಡಿದನು. ಕೊನೆಗೆ ದಕ್ಷಿಣ ಸಮುದ್ರದ ತೀರದಲ್ಲಿ ಒಂದು ಜಯಸ್ತಂಭವನ್ನು ನೆಡಿಸಿದನು. ಕರ್ನಾಟಕದ ರಾಜನೊಬ್ಬನು ದಂಡಯಾತ್ರೆ ಮಾಡಿದ ವಿರಳ ಸಂದರ್ಭದಲ್ಲಿ ಇದೂ ಒಂದು.

ಮೂರನೆಯ ಸಾರಿ ಚಾಲುಕ್ಯರಿಗೂ ಪಲ್ಲವರಿಗೂ ಮುಖಾಮುಖಿಯಾದದ್ದು, ಕಾಂಚಿಯ ಅರಸನನ್ನು ಜಯಿಸಲು ಇಮ್ಮಡಿ ಕೀರ್ತಿವರ್ಮನು ತನ್ನ ತಂದೆಯ ಅನುಮತಿಯನ್ನು ಪಡೆದು ಯುದ್ಧಕ್ಕೆ ಹೋದಾಗ. ಬಾಲಕನಾಗಿದ್ದಾಗಲೇ ಅವನು ವಿವಿಧ ಆಯುಧಗಳ ಮೇಲೆ ಪ್ರಭುತ್ವವನ್ನು ಸಂಪಾದಿಸಿದ್ದನು. ಮೂರನೆಯ ದಂಡಯಾತ್ರೆ ನಡೆಸಿ ಪಲ್ಲವನನ್ನು ಸೋಲಿಸಿ ಅವನು ಕೋಟೆಯ ಹಿಂದೆ ಅಡಗಿಕೊಳ್ಳುವಂತೆ ಮಾಡಿದನು. ಜಯಶಾಲಿಯಾಗಿ, ಬೇಕಾದಷ್ಟು ಆನೆಗಳು, ಅಪಾರವಾದ ಧನಕನಕಗಳೊಂದಿಗೆ ಹಿಂದಿರುಗಿ ಬಂದು ತಂದೆಗೆ ಅವುಗಳನ್ನು ಒಪ್ಪಿಸಿದನು. ಬಹುಶಃ ಈ ಮೂರು ಕಾಂಚಿ ವಿಜಯಗಳ ಸ್ಮರಣಾರ್ಥವಾಗಿ, ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು, ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ತ್ರೈಲೋಕೇಶ್ವರ ದೇವಾಲಯಗಳನ್ನು ಕಟ್ಟಿಸಿದರು. ಈಗ ಅವೇ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳೆಂದು ಹೆಸರಾಗಿವೆ.

ಗುಜರಾತಿನಲ್ಲಿ ಧಾರಾಶ್ರಯ ಜಯಸಿಂಹನ ಮಗ ಅವನಿಜಾಶ್ರಯ ಪುಲಕೇಶಿಯು, ಗುಜರಾತಿನ ಮೇಲೆ ದಾಳಿ ಮಾಡಿದ್ದ ಜಾತಿಕರ (ಅರಬ್ಬರು) ವಿರುದ್ಧ ಯುದ್ಧ ಮಾಡ ಬೇಕಾಯಿತು. ವಿಕ್ರಮಾದಿತ್ಯನಿಗೆ ಕುಳಿತು ನೋಡುವುದಲ್ಲದೆ ಇದರಲ್ಲಿ ಬೇರೆ ಯಾವ ಪಾತ್ರವೂ ಇರಲಿಲ್ಲ. ಅವನಿಗೆ ತುಂಬಾ ಸಂತೋಷವಾಗಿ ಪುಲಕೇಶಿಗೆ ಅವನಿಜಾಶ್ರಯ ಎಂಬ ಬಿರುದು ನೀಡಿದನು. ಹೀಗೆ ಅವನು ಯುವರಾಜನಾಗಿ ಒಮ್ಮೆ, ರಾಜನಾಗಿ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಮಾಡಿದುದಲ್ಲದೆ ತನ್ನ ಮಗನು ಅವರ ಮೇಲೆ ಕೊನೆಯ ಯುದ್ಧ ಮಾಡಲು ಅವಕಾಶ ಕೊಟ್ಟನು.

ಇಷ್ಟು ಬಿಟ್ಟರೆ ಅವನ ಆಳ್ವಿಕೆ ಶಾಂತಿಯುತವಾಗಿತ್ತು. ಬೇಕಾದಷ್ಟು ದೇವಾಲಯ ನಿರ್ಮಾಣ ಚಟುವಟಿಕೆಗಳು ನಡೆದವು. ಹೈಹಯ ರಾಜಮನೆತನಕ್ಕೆ ಸೇರಿದ ಅವನ ಇಬ್ಬರು ರಾಣಿಯರು ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ಈಗಿನ ವಿರೂಪಾಕ್ಷ) ಮತ್ತು ತ್ರೈಲೋಕೇಶ್ವರ-ಈಗ ಮಲ್ಲಿಕಾರ್ಜುನ- ದೇವಾಲಯಗಳನ್ನು ಕಟ್ಟಿಸಿದರು.

ಎರಡನೇ ಕೀರ್ತಿವರ್ಮ (೭೪೪೭೫೬)

ಇಮ್ಮಡಿ ಕೀರ್ತಿವರ್ಮನು ವಂಶದ ಕೊನೆಯ ಅರಸ. ಅವನು ಆಳತೊಡಗಿದುದು ಕ್ರಿ.ಶ. ೭೪೪ರಲ್ಲಿ. ಯುವರಾಜನಾಗಿದ್ದಾಗಲೇ ಪಲ್ಲವರ ಮೇಲೆ ಯಶಸ್ವಿ ಜೈತ್ರಯಾತ್ರೆಯನ್ನು ನಡೆಸಿದ್ದನು. ಆದರೆ ಅದು ಅವನ ಮೊದಲನೆಯದರಂತೆಯೇ ಕೊನೆಯ ಬಲಪ್ರದರ್ಶನವೂ ಆಯಿತು. ಅವನ ಅಧೀನರಾಗಿದ್ದ ಅರಸರು ಸ್ವಾತಂತ್ರ್ಯವನ್ನು ಸಾರಿಕೊಳ್ಳಲು ತೊಡಗಿದರು. ಇಮ್ಮಡಿ ಆಳುವರಸನು ನಂದಿವರ್ಮನ ಸೇನಾಪತಿ ಉದಯಚಂದ್ರನೊಂದಿಗೆ ಸೇರಿಕೊಂಡಂತೆ ತೋರುತ್ತದೆ. ರಾಷ್ಟ್ರಕೂಟ ದಂತಿಗನೇ ಮೊದಲು ದಂಗೆಯ ಧ್ವಜವನ್ನು ಹಾರಿಸಿದ್ದು. ತಾನು ಕರ್ನಾಟಕ ಬಲವನ್ನು-ಅದು ಚಾಲುಕ್ಯ ಸೇನೆಗೆ ಕೊಟ್ಟಿದ್ದ ಹೆಸರು-ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಆದರೆ ಅವನು ಹೆಚ್ಚು ಕಾಲ ಬದುಕಿರಲಿಲ್ಲ. ಜವಾಬ್ದಾರಿ ಅವನ ಕಿರಿಯ ಚಿಕ್ಕಪ್ಪ ಮೊದಲನೆಯ ಕೃಷ್ಣನ ಮೇಲೆ ಬಿದ್ದಿತು. ಈಗ ಕೃಷ್ಣನು ಚಾಲುಕ್ಯ ಸಾಮ್ರಾಜ್ಯದ ಉತ್ತರ ಭಾಗವನ್ನು ಆಳುತ್ತಿದ್ದನು. ಅವನು ಚಾಲುಕ್ಯರು ಮೇಲೆ ಕೊನೆಯ ಹೊಡೆತವನ್ನು ಕೊಟ್ಟಿದ್ದು ಕ್ರಿ.ಶ. ೭೫೭ರಲ್ಲಿ. ಎರಡು ಶತಮಾನಗಳ ಆಳಿಕೆಯ ನಂತರ ಚಾಲುಕ್ಯರ ಮರವೆಗೆ ಸಂದರು. ಆದರೂ ಅಲ್ಲಲ್ಲಿ ಚಾಲುಕ್ಯರ ವಂಶದ ಕೆಲವರು ಇದ್ದರು. ಉದಾಹರಣೆಗೆ ಕ್ರಿ.ಶ.೮೦೦ರಲ್ಲಿ ಕತ್ತಿಯರನೆನ್ನುವವನು ಧಾರವಾಡ ಪ್ರದೇಶವನ್ನು ಆಳುತ್ತಿದ್ದನು. ರಾಜಾದಿತ್ಯನೆಂಬ ಇನ್ನೊಬ್ಬನು ಕಂದಬಳಿಗೆ ೧೦೦೦ವನ್ನು ಆಳುತ್ತಿದ್ದನು. ಇದು ತುಂಗಭದ್ರೆಯ ಪೂರ್ವಕ್ಕಿದ್ದ ಪ್ರದೇಶ. ಕ್ರಿ.ಶ. ೮೧೩ರಲ್ಲಿ ಕುಣಿಗಲ್ ದೇಶದಲ್ಲಿ ವಿಮಲಾದಿತ್ಯನೆಂಬುವನು ಆಳುತ್ತಿದ್ದನು. ಮೈಸೂರಿನ ಬಳಿಯ ವರುಣದಲ್ಲಿ ಕಂಡುಬಂದ ೯-೧೦ನೇ ಶತಮಾನಗಳಿಗೆ ಸೇರಿದ ಶಾಸನವು ಚಾಲುಕ್ಯರ ನರಸಿಂಹನೆಂಬ ರಾಜನನ್ನೂ ಅವನ ರಾಣಿ ಗಾವಿಲಬ್ಬರಸಿಯನ್ನೂ ಉಲ್ಲೇಖಿಸುತ್ತದೆ.