ಬಾದಾಮಿಯಿಂದ ಆಳುತ್ತಿದ್ದ ಬನವಾಸಿಯ ಕದಂಬರನ್ನು ಪರಾಜಯಗೊಳಿಸಿದರು. ಕದಂಬರಾಗಲಿ, ಗಂಗರಾಗಲಿ ತಮ್ಮ ರಾಜ್ಯವನ್ನು ಒಂದು ಸಾಮ್ರಾಜ್ಯವಾಗಿ ಬೆಳೆಸಲಾಗದೆ ಹೋದರು. ಅವರು ಆ ಕಡೆಗೆ ಒಲವನ್ನು ತೋರಿಸಲಿಲ್ಲ. ಆದರೆ ಚಾಲುಕ್ಯರ ವಿಷಯ ಬೇರೆಯಾಗಿತ್ತು. ಅವರು ಕದಂಬರನ್ನು ಪೂರ್ಣವಾಗಿ ಪದಚ್ಯುತರನ್ನಾಗಿ ಮಾಡಿದರು. ಗಂಗರನ್ನು ತಮ್ಮ ಅಧೀನರನ್ನಾಗಿ ಮಾಡಿಕೊಂಡರು.

ಈ ಚಾಲುಕ್ಯರು ಯಾರು? ವಾತಾಪಿ ಅಥವಾ ಬಾದಾಮಿಯನ್ನು ರಾಜಧಾನಿಯನ್ನಾಗಿ ಹೊಂದಿದ್ದ ಪ್ರಾಚೀನ ಚಾಲುಕ್ಯರ ಶಾಸನಗಳು ಈ ವಿಷಯದಲ್ಲಿ ಮೌನವಾಗಿವೆ. ಆದರೆ ವೆಂಗಿಯ ಪೂರ್ವ ಚಾಲುಕ್ಯರ ಹಾಗೂ ಕಲ್ಯಾಣದ ಪಶ್ಚಿಮ ಚಾಲುಕ್ಯರ ೧೧-೧೨ನೇ ಶತಮಾನದ ಶಾಸನಗಳಲ್ಲಿ ಈ ಮನೆತನದ ಮೂಲದ ವಿಷಯವಾಗಿ ಕೆಲವು ಕತೆಗಳು ಕಂಡುಬರುತ್ತವೆ. ಕಲ್ಯಾಣದ ಚಾಲುಕ್ಯರ ಶಾಸನಗಳು ಮತ್ತು ಬಿಲ್ಹಣನ ವಿಕ್ರಮಾಂಕದೇವಚರಿತಂ ಎಂಬ ಕೃತಿಗಳಿಂದ ತಿಳಿಯುವಂತೆ, ಚಾಲುಕ್ಯ ಎಂಬ ಹೆಸರು ಬಂದದ್ದು ಚುಲುಕ ಎಂಬುದರಿಂದ. ಅದಕ್ಕೆ ಅಂಗೈಯ ಹಳ್ಳ ಎಂದು ಅರ್ಥ. ಸಂಧ್ಯೋಪಾಸನೆ ಮಾಡುತ್ತಿದ್ದಾಗ, ಭೂಮಿಯಲ್ಲಿ ಒಂದೇ ಸಮನೆ ಕೆಡಕು ಹೆಚ್ಚುತ್ತಿರುವುದರಿಂದ ಅದನ್ನು ಕೊನೆಗೊಳಿಸಲು ಒಬ್ಬ ವೀರನನ್ನು ಅನುಗ್ರಹಿಸಬೇಕೆಂದು ಇಂದ್ರನು ಬ್ರಹ್ಮನನ್ನು ಕೋರಿದನು. ಬ್ರಹ್ಮನು ತನ್ನ ಚುಲುಕ ಅಂದರೆ ಅಂಗೈಯನ್ನು ನೋಡಿದನು. ಅಲ್ಲಿಂದ ಒಬ್ಬ ಮಹಾಪರಾಕ್ರಮಿ ಚಾಲುಕ್ಯನು ಹುಟ್ಟಿಬಂದನು. ಅವನೇ ಚಾಲುಕ್ಯರ ಮೂಲಪುರುಷ. ಗುಜರಾತಿನ ಚಾಲುಕ್ಯರಲ್ಲೂ ಅಂಥದೇ ಕತೆಯಿದೆ.

ಪೂರ್ವಚಾಲುಕ್ಯರ ಶಾಸನಗಳು ಬೇರೆ ಕತೆಯನ್ನು ಹೇಳುತ್ತವೆ. ಮಹತ್ವಾಕಾಂಕ್ಷೆಯಿದ್ದ ಅಯೋಧ್ಯೆಯ ವಿಜಯಾದಿತ್ಯನೆಂಬ ರಾಜನು ದಕ್ಷಿಣಾಪಥವನ್ನು ಜಯಿಸುವ ಸಲುವಾಗಿ ದಕ್ಷಿಣಕ್ಕೆ ಬಂದನು. ಆದರೆ ತ್ರಿಲೋಚನ ಪಲ್ಲವನೊಂದಿಗೆ ನಡೆದ ಯುದ್ಧದಲ್ಲಿ ಅವನು ಮರಣ ಹೊಂದಿದನು. ಗರ್ಭಿಣಿಯಾಗಿದ್ದ ಪತ್ನಿಯೂ ಸೇರಿದಂತೆ ಅವನ ಆಪ್ತ ಪರಿವಾರವು ಮುಡಿವೇಮೂ ಎಂಬ ಬ್ರಾಹ್ಮಣ ಅಗ್ರಹಾರವೊಂದರಲ್ಲಿ ಆಶ್ರಯ ಪಡೆಯಿತು. ಅಲ್ಲಿ ವಿಷ್ಣುಭಟ್ಟ ಸೋಮಯಾಜಿ ಎಂಬ ಬ್ರಾಹ್ಮಣನು ಅವರನ್ನು ನೋಡಿಕೊಂಡನು. ಸೂಕ್ತಕಾಲದಲ್ಲಿ ರಾಣಿಯು ಮಗನನ್ನು ಹಡೆದಳು. ಮಗುವಿಗೆ ವಿಷ್ಣುವರ್ಧನ ಎಂದು ಹೆಸರಿಡಲಾಯಿತು. ಮುಂದೆ ಈ ಬಾಲಕನಿಗೆ ತನ್ನ ಜನ್ಮವಿವರ, ತಂದೆಯ ವಿಚಾರ ಎಲ್ಲಾ ತಿಳಿಯಿತು. ಅವನು ಅಲ್ಲೇ ಸಮೀಪದಲ್ಲಿದ್ದ ಚಾಲುಕ್ಯ ಎಂಬ ಬೆಟ್ಟದ ಮೇಲಕ್ಕೆ ಹೋಗಿ ಅಲ್ಲಿ ಕಾರ್ತಿಕೇಯ, ನಾರಾಯಣ, ಸಪ್ತಮಾತೃಕೆಯರು ಮತ್ತು ನಂದಭಗವತೀ ಮೊದಲಾದ ದೇವ ದೇವಿಯರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದನು. ಅವನಿಂದ ಅಪಾರಶಕ್ತಿಯನ್ನು ವರವಾಗಿ ಪಡೆದು ತನ್ನ ಮೊದಲಿನ ರಾಜತ್ವವನ್ನು ಗಳಿಸಲು ಸಮರ್ಥನಾದನು.

ಪೂರ್ವಚಾಲುಕ್ಯ ಶಾಸನಗಳು ಇನ್ನೂ ಒಂದು ಪೌರಾಣಿಕ ಸಂದರ್ಭವನ್ನು ವಿವರಿಸುತ್ತದೆ. ಭಗವಾನ್ ನಾರಾಯಣ(ವಿಷ್ಣು)ನಿಂದ ೫೨ ಜನ ರಾಜರು ವಿಜಯಾದಿತ್ಯನವರೆಗೆ ಅಯೋಧ್ಯೆಯಲ್ಲಿ ಆಳಿದರು. ಆಮೇಲೆ ಅಲ್ಲಿಂದ ದಕ್ಷಿಣಕ್ಕೆ ಬಂದರು. ಅಲ್ಲಿ ದಕ್ಷಿಣಾಪಥದಲ್ಲಿ ೧೬ ಜನ ರಾಜರು ಆಳಿದರು. ಆಮೇಲೆ ಅವರು ಕಳೆಗುಂದಿದರು. ಜಯಸಿಂಹನೆನ್ನುವವನು ಬಲವನ್ನು ಕೂಡಿಸಿಕೊಂಡು ರಾಷ್ಟ್ರಕೂಟನ ಮಗ ಇಂದ್ರನನ್ನು ಸೋಲಿಸಿದನು. ಈ ಕತೆಯು ತರ್ಕಸಮ್ಮತವಾಗಿಲ್ಲ.

ರಮೇಶ್ ಹೀಗೆ ಅಭಿಪ್ರಾಯಪಡುತ್ತಾರೆ: “ಚಾಲುಕ್ಯರ ಅಯೋಧ್ಯೆಯ ಸಂಬಂಧವನ್ನು ಸಾರಾಸಗಟಾಗಿ ನಿರಾಕರಿಸುವುದರಿಂದ ಇತಿಹಾಸಕಾರರು, ಸುವ್ಯವಸ್ಥಿತವಾದ ಸಾಮೂಹಿಕ ವಲಸೆ ಎಂಬಂತೆ ತೋರುವ ಘಟನೆಯನ್ನು ನೋಡಲಾರದೆ ಹೋಗಿದ್ದಾರೆ”. ವಾತಾಪಿಯಲ್ಲಿ ನೆಲೆಸುವುದಕ್ಕಿಂತ ಮೊದಲು ಅವರು ಉತ್ತರದಿಂದ ಗುಜರಾತ್ ಮತ್ತು ಮಹಾರಾಷ್ಟ್ರಗಳ ಮಾರ್ಗವಾಗಿ ಬಂದಿರುವುದು ಸಾಧ್ಯ. ಕ್ರಿ.ಶ.೨ನೆಯ ಶತಮಾನದ್ದೆಂದು ಹೇಳಲಾಗಿರುವ, ನಾಗಾರ್ಜುನಕೊಂಡದಲ್ಲಿ ದೊರೆತ ಪ್ರಾಕೃತ ಭಾಷೆಯ ಒಂದು ಸಣ್ಣ ಶಾಸನದಲ್ಲಿ ಒಬ್ಬ ಮಹಾಸಾಮಂತ ಮತ್ತು ಮಹಾತಳವಾರ ವಾಸಿಷ್ಠಪುತ್ರ ಖಂಡ ಚೆಲಿಕಿ ರಮ್ಮಾಣಕ ನೆಂಬುವವನನ್ನು ಉಲ್ಲೇಖಿಸಿದೆ. ಅವನು ಇಕ್ಷ್ವಾಕು ಮನೆತನಕ್ಕೆ ಸೇರಿದವನೆಂದು ಹೇಳಲಾಗಿದೆ. ಇದೇ ಚೆಲಿಕಿ/ಚಾಲುಕ್ಯ ಎಂಬ ಪದದ ಮೊದಲನೆಯ ಉಲ್ಲೇಖ. ಚಲುಕಿ ಎಂಬ ಮೂಲಪದ ಕನ್ನಡದ್ದು. ಚಲ್ಕಿ, ಸಲುಕಿ ಅಥವಾ ಸಲ್ಕಿ ಎಂದರೂ ಅದೇ. ಸಲ್ಕಿ ಎನ್ನುವುದು ಒಂದು ಕೃಷಿ ಉಪಕರಣದ ಹೆಸರು. ಚಾಲುಕ್ಯ ಪ್ರದೇಶದ ರೈತರು ಅದನ್ನು ಉಪನಾಮವಾಗಿ ಉಪಯೋಗಿಸಿರಬಹುದು. ಇಂದೂ ನಾವು ಸಲ್ಕೆಪ್ಪ, ಗುದ್ಲೆಪ್ಪ ಮೊದಲಾದ ಹೆಸರುಗಳನ್ನು ನೋಡುತ್ತೇವೆ. ಆದ್ದರಿಂದ, ಈ ಚಾಲುಕ್ಯರು ಮೊದಲು ಕೃಷಿಕರಾಗಿದ್ದೂ ನಿಧಾನವಾಗಿ ಅಧಿಕಾರಕ್ಕೆ ಏರಿ  ಒಂದು ರಾಜ್ಯದ ಅರಸರಾದರು. ಪರಂಪರೆಯಿಂದ ಬಂದಿದ್ದ ರೂಢಿಯಂತೆ ತಮ್ಮ ಕುಟುಂಬಕ್ಕೆ ಪೌರಾಣಿಕ ನಾಯಕರೊಂದಿಗೆ ಸಂಬಂಧ ಕಲ್ಪಿಸಿ ಅದಕ್ಕೆ ಪಾವಿತ್ರ್ಯವನ್ನು ಸಾಮಾಜಿಕ ಸ್ಥಾನಗೌರವವನ್ನೂ ಕೊಡಲು ಪ್ರಯತ್ನಿಸಿದರು. ಈ ಸಿದ್ಧಾಂತವನ್ನು ಇನ್ನಷ್ಟು ವಿಚಾರ ಮಾಡಬಹುದು. ಪುಲಿಕೇಶಿ, ಬಿಟ್ಟರಸ ಎಂಬುವಂತಹ ರಾಜರ ಹೆಸರುಗಳಾಗಲಿ, ನೋಡುತ್ತಗೆಲ್ವೊಂ ಮೊದಲಾದ ಬಿರುದುಗಳಾಗಲಿ ಕನ್ನಡ ಮೂಲವನ್ನು ಸೂಚಿಸುತ್ತದೆ. ಚಾಲುಕ್ಯರು ಕನ್ನಡ ಲಿಪಿಗೂ ಭಾಷೆಗೂ ಉದಾರ ಆಶ್ರಯ ನೀಡಿದರು. ಕನ್ನಡದ ಶಾಸನ ಸಾಹಿತ್ಯವು ವಿಕಾಸಗೊಂಡಿತು. ಚಾಲುಕ್ಯ ಸೈನ್ಯವನ್ನು ಪರಾಕ್ರಮಯುತವಾದು ದೆಂದು ಪರಿಗಣಿಸಿ ರಾಷ್ಟ್ರಕೂಟರು ಅವರನ್ನು ‘ಕರ್ನಾಟಕ ಬಲ’ ಎಂದು ಕರೆದರು.

ಈ ಚಾಲುಕ್ಯರು ವರಾಹ(ಹಂದಿ)ವನ್ನು ತಮ್ಮ ರಾಜಲಾಂಛನವಾಗಿರಿಸಿಕೊಂಡಿದ್ದರು. ಅವರ ಶಾಸನಗಳ ಪ್ರಾರಂಭದಲ್ಲಿ ಸಾಮಾನ್ಯವಾಗಿ ವಿಷ್ಣುಸ್ತುತಿಯು ಕಂಡುಬರುತ್ತದೆ. ಅಲ್ಲದೆ ತಾವು ಮಹಾಸೇನ, ಅಂದರೆ ಭಗವಾನ್ ಕಾರ್ತಿಕೇಯನ ಮತ್ತು ತಮ್ಮ ಕುಟುಂಬದ ಏಳಿಗೆಯನ್ನು ಅನುಗ್ರಹಿಸಿದ ಸಪ್ತಮಾತೃಕೆಯರ ಆರಾಧಕರೆಂದು ಹೇಳಿಕೊಳ್ಳುತ್ತಾರೆ. ಇದರಿಂದ ಅವರಿಗೆ ವೈಷ್ಣವ ಧರ್ಮದ ಕಡೆಗೆ ವಿಶೇಷವಾದ ಒಲವೇನೂ ಇರಲಿಲ್ಲವೆಂಬಂತೆ ವ್ಯಕ್ತವಾಗುತ್ತದೆ. ವೈದಿಕ ಧರ್ಮವನ್ನು ಅವರು ಪೋಷಿಸಿದರು. ಜೈನ ಮತ್ತು ಬೌದ್ಧ ಧರ್ಮಗಳಿಗೂ ಪೋಷಣೆ ನೀಡಿ ಅವರು ತಮ್ಮ ಅರ್ಧ ಸಹಿಷ್ಣುತೆಯನ್ನು ಮೆರೆದರು.

ಜಯಸಿಂಹ (ಸು.೫೦೦೫೨೦) ಮತ್ತು ರಣರಾಗ (೫೨೦೫೪೦)

ಈಗ ತಿಳಿದಿರುವಂತೆ ಅವರ ಮೊದಲ ರಾಜ ಜಯಸಿಂಹ. ಅವನನ್ನು ಕುರಿತು ಏನೂ ತಿಳಿದಿಲ್ಲ. ಅವನು ಕದಂಬರಿಗೆ ಸಾಮಂತನಾಗಿದ್ದಿರಬಹುದು. ಅವನೊಬ್ಬ ದೊಡ್ಡ ಪರಾಕ್ರಮಿ. ಅನೇಕ ಯುದ್ಧದಲ್ಲಿ ಜಯಲಕ್ಷ್ಮಿಯನ್ನು ತನ್ನವಳನ್ನಾಗಿಸಿಕೊಂಡಿದ್ದನು. ಆದರೆ ಅವನು ಮಾಡಿದ ಯುದ್ಧಗಳಾಗಲಿ, ಸೋಲಿಸಿದ ವೈರಿಗಳಾಗಲಿ ತಿಳಿಯುವುದಿಲ್ಲ. ಆದರೆ ಅವುಗಳಲ್ಲಿ ಒಂದು, ಬಾದಾಮಿಗೆ ಬರುವ ದಾರಿಯಲ್ಲಿ ಗುಜರಾತಿನಲ್ಲಿ ರಾಷ್ಟ್ರಕೂಟ ಇಂದ್ರನೊಂದಿಗೆ ಮಾಡಿದ ಯುದ್ಧವಾಗಿರಬೇಕು. ಈ ಸಾಮಾನ್ಯ ಹೇಳಿಕೆಯಿಂದ ನಮಗೆ ಯಾವ ಚಿತ್ರವೂ ದೊರಕುವುದಿಲ್ಲ. ಆತನ ಹಿರಿಯಮಗನ ಹೆಸರು ಬುದ್ಧವರ್ಮನ್ ಎಂದು ಹೇಳಲಾಗಿದೆ. ಅವನಿಗೆ ರಣವಿಕ್ರಾಂತ ಎಂಬ ಹೆಸರೂ ಇದ್ದಿತು. ಇವನೂ ರಣರಾಗನೂ ಒಬ್ಬನೆಯೋ ಅಲ್ಲವೋ ತಿಳಿಯದು. ಜಯಸಿಂಹನ ನಂತರ ಅವನ ಮಗ ರಣರಾಗನು ಪಟ್ಟಕ್ಕೆ ಬಂದನು. ತಂದೆಯೆಂತೆಯೇ ಅವನು ಹಲವು ಯುದ್ಧಗಳಲ್ಲಿ ಪಾಲುಗೊಂಡನು. ವೈರಿಗಳಲ್ಲಿ ಭೀತಿಯನ್ನು ಬಿತ್ತಿದನು. ತನ್ನ ಜನರ ಪ್ರೇಮವನ್ನು ಸಂಪಾದಿಸಿದನು. ಅವನು ಶಿವಭಕ್ತನಾಗಿದ್ದನು. ಈ ಇಬ್ಬರೂ ರಾಜರ ಒಟ್ಟು ಆಡಳಿತಾವಧಿ ೨೦ವರ್ಷ (ಸು. ೫೦೦-೫೨೦ ಮತ್ತು ೫೨೦ರಿಂದ ೫೪೦). ಎಂದು ಹೇಳಲಾಗಿದೆ. ಇಬ್ಬರನ್ನೂ ನೃಪ ಅಥವಾ ರಾಜ ಎಂದಷ್ಟೇ ಕರೆಯಲಾಗಿದೆ.

ಒಂದನೇ ಪುಲಕೇಶಿ (೫೪೦೫೬೬)

ಪುಲಕೇಶಿಯು ರಣರಾಗನ ಪ್ರೀತಿಯ ಮಗ. ಪೊಲಕೇಶಿ, ಪೊಲೆಕೇಶಿ, ಪೊಲಿಕೇಶಿ, ಪುಲಿಕೇಶಿ ಎಂದೆಲ್ಲಾ ರೂಪಗಳಿಂದ ಉಚ್ಚರಿಸುವ ಈ ಹೆಸರಿನ ಅರ್ಥವೇನೆಂಬುದು ಸ್ಪಷ್ಟವಾಗುವುದಿಲ್ಲ. ‘ಹುಲಿಯ ಕೂದಲುಳ್ಳವನು’ ‘ಕಾಂತಿಯುಕ್ತವಾದ ಕೂದಲುಳ್ಳವನು’ ‘ಹುಲಿ-ಸಿಂಹ’ ಇತ್ಯಾದಿಯಾಗಿ ಅರ್ಥಗಳನ್ನು ಕಲ್ಪಿಸಲಾಗಿದೆ. ರಮೇಶ್ ಅವರು ಸರಳವಾದ ಒಂದು ವಿವರಣೆ ಕೊಟ್ಟಿದ್ದಾರೆ. ಅವರ ಪ್ರಕಾರ ಪೊಲೆ ಎನ್ನುವುದು ತಮಿಳಿನ ಪುವೈ ಎಂಬುದರೊಂದಿಗೆ ಸಂಬಂಧಿಸಿದೆ. ಅದಕ್ಕೆ ಇರುವ ಹಲವು ಅರ್ಥಗಳಲ್ಲಿ ಒಂದು ‘ಗಂಟು ಹಾಕುವುದು’ ಎಂದು. ಕೇಶಿನ್ ಎಂದರೆ ತಲೆಗೂದಲುಳ್ಳವನು ಹಾಗಾಗಿ ಅದಕ್ಕೆ ತಲೆಗೂದಲನ್ನು ಗಂಟು ಹಾಕಿಕೊಂಡವನು ಎಂದು ಅವರು ಅರ್ಥ ಮಾಡಿದ್ದಾರೆ. ಇದೂ ಇತರ ತಮಿಳು ಮತ್ತು ಸಂಸ್ಕೃತಗಳಿಂದಲೋ, ಕನ್ನಡ, ಸಂಸ್ಕೃತ ಮತ್ತಿತರ ದ್ರಾವಿಡ ಭಾಷೆ ಮತ್ತು ಸಂಸ್ಕೃತದಿಂದಲೋ ಕಸಿಮಾಡಿದ ಅರ್ಥ. ಒಪ್ಪಿಕೊಳ್ಳಲು ಅರ್ಹವಾಗಿಲ್ಲ. ಭಗವಾನ್ ಕೇಶವನು ಬಾಣಂತಿಗೃಹ (ಹೆರಿಗೆ ಕೋಣೆ)ದಲ್ಲಿ ಜನಿಸಿದಾಗ ಹೇಗಿದ್ದನೋ ಹಾಗೆ ಕಾಣಿಸುವವನು ಎಂದು ಈ ಪದಕ್ಕೆ ಎನ್.ಎಲ್.ರಾವ್ ಅರ್ಥವನ್ನು ಸೂಚಿಸಿದ್ದಾರೆ. ಇದು ಸ್ಪಲ್ಪಮಟ್ಟಿಗೆ ಸ್ವೀಕಾರ ಯೋಗ್ಯವಾಗಿರು ವಂತೆ ತೋರುತ್ತದೆ.

ಒಂದನೇ ಪುಲಕೇಶಿಯೇ ವಾಸ್ತವವಾಗಿ ಚಾಲುಕ್ಯ ರಾಜ್ಯದ ಸ್ಥಾಪಕನೆನ್ನಬೇಕು. ಕದಂಬರನ್ನು ಸೋಲಿಸಿದ ಮೇಲೆ ಬಹುಬೇಗ ಕರ್ನಾಟಕದಲ್ಲಿ ಈ ರಾಜ್ಯವು ಬೆಳೆಯಿತು. ರಣವಿಕ್ರಮನೆಂದೂ ಹೆಸರಾಗಿದ್ದ ಅವನನ್ನು ಎಲ್ಲರಿಗೂ ಮಾದರಿಯಾಗುವ ಉತ್ತಮ ನಡವಳಿಕೆಗಾಗಿ ಸತ್ಯಾಶ್ರಯ ಎಂದೂ ಶ್ರೀಪೃಥ್ವೀವಲ್ಲಭ ಎಂದೂ ವರ್ಣಿಸಿದರು. ಅವನು ಮಾನವಧರ್ಮಶಾಸ್ತ್ರ, ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಇತಿಹಾಸಗಳಲ್ಲಿ ಕೋವಿದನಾಗಿದ್ದನು. ದುರ್ಭೇದ್ಯವಾದ ಒಂದು ಕೋಟೆಯನ್ನು ಕಟ್ಟಿಸಿದನು. ಶ್ರೌತನಿಯಮ ಗಳಿಗನುಗುಣವಾಗಿ ಅಶ್ವಮೇಧವನ್ನೂ ಇತರ ಕೆಲವು ಯಜ್ಞಗಳನ್ನೂ ಆಚರಿಸಿದನು. ಅಗ್ನಿಷ್ಟೋಮ, ವಾಜಪೇಯ, ಬಹುಸುವರ್ಣ ಮತ್ತು ಪುಂಡರೀಕ ಯಜ್ಞಗಳನ್ನು ಮಾಡಿ ಪ್ರತಿ ಸಂಕ್ರಾಂತಿಯಂದು ಷೋಡಶ ಮಹಾದಾನಗಳನ್ನು ಮಾಡಿದನು. ಇವೆಲ್ಲ ಅವನ ಸಾಮ್ರಾಟ ಸ್ಥಾನಗೌರವವನ್ನು ಸೂಚಿಸುತ್ತವೆ. ಬಾದಾಮಿಯಲ್ಲಿ ಅಜೇಯವೆನಿಸಿದ ಒಂದು ಕೋಟೆಯನ್ನು ಕಟ್ಟಿಸಿದನು. ಸೇಂದ್ರಕವಂಶದ ಶ್ರೀವಲ್ಲಭದೇವಿಯೂ, ಇಂದು ಕಾಂತಿಯೂ ಅವನ ಇಬ್ಬರು ರಾಣಿಯರು. ಜಯಸಿಂಹನಿಗೆ ಬುಧವರ್ಮನೆಂಬ ಹಿರಿಯ ಮಗನಿದ್ದನೆಂದೂ, ಅವನ ಬಿರುದು ರಣವಿಕ್ರಾಂತ ಎಂದೂ, ಆದ್ದರಿಂದ ಕೈರಾ ಫಲಕಗಳಲ್ಲಿ ಉಲ್ಲೇಖವಾಗುವ ವಿಜಯರಾಜನು ಪುಲಕೇಶಿಯ ಬಲಅಣ್ಣನಾಗಿರಬೇಕೆಂದೂ ರಮೇಶ್ ವಾದ ಮಾಡುತ್ತಾರೆ. ಒಂದನೇ ಪುಲಕೇಶಿಯ ಹಿರಿಯಮಗ ಪೂಗವರ್ಮ, ಇನ್ನಿಬ್ಬರು ಕೀರ್ತಿವರ್ಮ ಮತ್ತು ಮಂಗಳೇಶ. ತಮಿಳಿನಲ್ಲಿ ಪುಗಳ್ ಎಂದರೆ ‘ಕೀರ್ತಿ’ ಎಂದರ್ಥ. ಆದ್ದರಿಂದ ಪೂಗವರ್ಮ, ಒಂದನೇ ಕೀರ್ತಿವರ್ಮ ಒಬ್ಬರೇ ಎಂದು ರಮೇಶ್ ಹೇಳುವುದನ್ನು ಒಪ್ಪುವುದು ಕಷ್ಟ. ಕೀರ್ತಿವರ್ಮನು ಕತ್ತಿ-ಅರಸ ಎಂದೂ ಹೆಸರಾಗಿದ್ದಾನೆ.

ಒಂದನೇ ಪುಲಕೇಶಿಯು ಮಹಾಕೂಟ ದೇವಾಲಯವನ್ನು ಕಟ್ಟಿಸಿದನು. ಇದೇ ಹೊಸಮಹಾಕೂಟದಲ್ಲಿರುವ ಮಕುಟೇಶ್ವರ ದೇವಾಲಯ. ಮಂಗಳೇಶ ಶಾಸನದಲ್ಲಿ ಅವನ ತಂದೆ ಮತ್ತು ಅಣ್ಣ ಒಂದನೇ ಕೀರ್ತಿವರ್ಮರು ಮಕುಟೇಶ್ವರನಾಥ ದೇವಾಲಯಕ್ಕೆ ದಾನ ಮಾಡಿದುದನ್ನು ಸ್ಪಷ್ಟವಾಗಿ ಹೇಳಿದೆ. ಅವರು ಒಂದು ಕೆರೆಯನ್ನು ತೋಡಿಸಿದರು.

ಒಂದನೇ ಕೀರ್ತಿವರ್ಮ (ಸು.೫೬೬೫೫೯)

ಒಂದನೇ ಪುಲಕೇಶಿಯ ಹಿರಿಯ ಮಗನಾದ ಒಂದನೇ ಕೀರ್ತಿವರ್ಮನು ತನಗೆ ದೊರೆತ ರಾಜ್ಯವನ್ನು ವಿಸ್ತರಿಸುವ ಕಾರ್ಯವನ್ನು ಕೈಗೊಂಡನು. ನಳರು, ಮೌರ್ಯರು ಮತ್ತು ಕದಂಬರನ್ನು ಸೋಲಿಸಿ ಅವರ ರಾಜ್ಯಗಳನ್ನು ಸೇರಿಸಿಕೊಂಡನು. ಅಲ್ಲದೆ, ಉತ್ತರದಲ್ಲಿ ಅಂಗ, ವಂಗ, ಮಗಧ, ಕಳಿಂಗ, ಮಟ್ಟೂರ ಮತ್ತು ವದ್ರಕರನ್ನೂ; ದಕ್ಷಿಣದಲ್ಲಿ ವೈಜಯಂತ, ಕೇರಳ, ಗಂಗ, ಮೂಷಕ, ಪಾಂಡ್ಯ, ದ್ರಮಿಳ, ಚೋಳಿಯ ಮತ್ತು ಅಳುಕರನ್ನೂ ಗೆದ್ದನೆಂದು ವರ್ಣಿಸಲಾಗಿದೆ. ಉತ್ತರದಲ್ಲಿ ಗುಪ್ತರ ಅವನತಿಯ ನಂತರ ಹೆಸರಿಸಬಹುದಾದ ದೊಡ್ಡ ಶಕ್ತಿ ಯಾವುದೂ ಇರಲಿಲ್ಲ. ಅವರೆಲ್ಲ ಸಣ್ಣ ಸಣ್ಣ ವಿಭಾಗಗಳಾಗಿ ರೂಢಿಯ ಪಟ್ಟಿಗೆ ಸೇರಿದವರಾಗಿದ್ದರು. ಕಂದಬರು(ಗೋವಾದ ಸುತ್ತಮುತ್ತ ಇದ್ದ), ಕೊಂಕಣದ ಮೌರ್ಯರು, ದಕ್ಷಿಣದ ಕನ್ನಡದ ಆಳುಪರು (ಆಳುಕರು) ತಮ್ಮದೇ ದೃಷ್ಟಿಯಿಂದ ಬಲಶಾಲಿಗಳಾದ ಅರಸರಾಗಿದ್ದರು. ಅವರನ್ನು ಪುಲಕೇಶಿಯು ಪರಾಜಯಗೊಳಿಸಬೇಕಾಯಿತು. ಕದಂಬರನ್ನೇನೋ ಅವನು ಮೊದಲೇ ಪದಚ್ಯುತಗೊಳಿಸಿದ್ದನು. ಆದರೆ ಪೂರ್ತಿಯಾಗಿ ಅವರನ್ನು ಸೋಲಿಸಿರಲಿಲ್ಲ. ಮನೆತನದ ಕೆಲವು ಸದಸ್ಯರು ಇನ್ನೂ ಕೆಲವು ಸ್ಥಾನಗಳಲ್ಲಿ ಮುಂದುವರಿದಿದ್ದರು. ದಕ್ಷಿಣ ಕರ್ನಾಟಕದಲ್ಲಿ ಗಂಗವಂಶದ ದುರ್ವಿನೀತನು ಆಳುತ್ತಿದ್ದನು. ನಳರು ಬಳ್ಳಾರಿ-ಕರ್ನೂಲು ಪ್ರದೇಶದಲ್ಲಿ ಆಳುತ್ತಿದ್ದರು. ಸೇಂದ್ರಕರು ಚಾಲುಕ್ಯರ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು. ಶ್ರೀವಲ್ಲಭಸೇನಾ ನಂದರಾಜನು ತನ್ನ ಮಗಳನ್ನು ಕೀರ್ತಿವರ್ಮನಿಗೆ ಮದುವೆ ಮಾಡಿಕೊಟ್ಟನು. ಕೀರ್ತಿವರ್ಮನೂ ಬಹುಸುವರ್ಣ, ಅಗ್ನಿಷ್ಟೋಮ ಮೊದಲಾದ ಯಜ್ಞಗಳನ್ನು ಆಚರಿಸಿದನು. ಅವನ ತಮ್ಮ ಮಂಗಳೇಶನು ಬಾದಾಮಿಯಲ್ಲಿ ಒಂದು ಗುಹಾದೇವಾಲಯ(ವಿಷ್ಣುಗೃಹ)ವನ್ನು ನಿರ್ಮಿಸಿದನು. ಅದರಿಂದ ಬಂದ ಪುಣ್ಯವು ತನ್ನ ಅಣ್ಣನಿಗೆ ಸೇರಲಿ ಎಂದು ಬಯಸಿದನು. ಈ ಸಂದರ್ಭದಲ್ಲಿ ನಾರಾಯಣಬಲಿಯ ಭಾಗವಾಗಿ ಲಾಂಜಿಗೇಶ್ವರ ಎಂಬ ಗ್ರಾಮವನ್ನು ದಾನವಾಗಿ ಕೊಟ್ಟನು. ಸಾಮಾನ್ಯವಾಗಿ ಯಾರಾದರೂ ಅಸಹಜವಾದ ಸಾವನ್ನಪ್ಪಿದರೆ ಅವರ ಅಂತಿಮಕ್ರಿಯೆಗಳ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆದ್ದರಿಂದ, ಕೀರ್ತಿವರ್ಮನು ಬಹುಶಃ ಯಾವುದೋ ಅಪರಿಹಾರ್ಯಗಳಿಗೆ ಬಲಿಯಾಗಿ ಅಸಹಜವಾದ ಸಾವನ್ನು ಪಡೆದನು ಎಂದು ಸೂಚಿಸಬಹುದಾಗಿದೆ.

ಕೀರ್ತಿವರ್ಮನಿಗೆ ಸೇನಂದರಾಜನ ಮಗಳಲ್ಲಿ ಎರಡನೇ ಪುಲಕೇಶಿ ಎಂಬ ಮಗನು ಜನಿಸಿದನು. ಇತರ ಪುತ್ರರು ವಿಷ್ಣುವರ್ಧನ, ಧಾರಾಶ್ರಯ, ಜಯಸಿಂಹ ಮತ್ತು ಬುದ್ಧವಾರಸ. ಮಕ್ಕಳು ಇನ್ನೂ ಪ್ರಾಪ್ತವಯಸ್ಕರಾಗಿರಿಲ್ಲವಾದ್ದರಿಂದ ರಾಜ್ಯದ ಆಡಳಿತದ ಹೊಣೆಯನ್ನು ತನ್ನ ತಮ್ಮ ಮಂಗಳೇಶನಿಗೆ ಅವನು ವಹಿಸಿದನು. ಕೀರ್ತಿವರ್ಮನಿಗೆ ರಣಪರಾಕ್ರಮ ಎಂಬ ಬಿರುದು ಪ್ರಿಯವಾದರೆ, ಅವನ ತಮ್ಮನು ಉರುರಣ ಪರಾಕ್ರಮ ಎಂಬ ಬಿರುದನ್ನು ಧರಿಸಿದನು. ಬಾದಾಮಿ ಗುಹಾಶಾಸನದ ಕಾಲ ಕ್ರಿ.ಶ.೫೭೮, ಅಂದರೆ ಶಕ ೫೦೦ ಅದು ಕೀರ್ತಿವರ್ಮನ ಆಳಿಕೆಯ ೧೨ನೇ ವರ್ಷ. ಆದ್ದರಿಂದ ಅವನು ಕ್ರಿ.ಶ. ೫೬೬ರಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿರ ಬೇಕು.

ಮಂಗಳೇಶ (೫೯೬೬೧೦)

ಮಂಗಳೇಶನು ಪಟ್ಟಕ್ಕೆ ಬಂದನೆಂದು ಸಾಂಪ್ರದಾಯಿಕವಾಗಿ ಹೇಳುವ ಕಾಲ ಕ್ರಿ.ಶ. ೫೯೭-೯೮. ಆದರೆ ಈಗ ಅವನು  ೫೯೧-೯೨ರಲ್ಲಿ ಆಳತೊಡಗಿದನು ಎಂದು ವಾದ ಮಾಡಲಾಗಿದೆ. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನ ಗೋವಾ ಫಲಕಗಳಲ್ಲಿ ಆಳ್ವಿಕೆಯ ೨೦ನೇ ವರ್ಷ ಎಂದು ಹೇಳಿರುವುದು ಮಂಗಳೇಶನ ಆಳಿಕೆಯೇ ಇರಬೇಕು. ಈ ೨೦ನೇ ವರ್ಷವನ್ನು ಶಕವರ್ಷ ೫೩೨ (ಕ್ರಿ.ಶ.೬೧೦) ಎಂದು ಹೇಳಲಾಗಿದೆ. ಅಂದರೆ ಮಂಗಳೇಶನ ಆಳಿಕೆಯು ೫೯೧-೯೨ರಲ್ಲಿ ಯಾವಾಗಲೋ ಪ್ರಾರಂಭವಾಗಿರಬೇಕು. ಮೇಲೆ ಉಲ್ಲೇಖಿಸಿದ ಬಾದಾಮಿ ಗುಹಾಶಾಸನದಲ್ಲಿ ಮಂಗಳೇಶನು ಕ್ರಿ.ಶ. ೫೭೮ರಲ್ಲಿ, ತನ್ನ ಅಣ್ಣನು ಗತಿಸಿದ ಮೇಲೆ, ಪಟ್ಟಕ್ಕೆ ಬಂದನು ಎಂದು ಹೇಳಿದೆ. ಕೀರ್ತಿವರ್ಮನು ರಾಜ್ಯಭಾರವನ್ನು ವಿಶ್ವಸ್ಥನಾಗಿ ಆಳುತ್ತಿರಬೇಕೆಂದು ತಮ್ಮನಿಗೆ ವಹಿಸಿಕೊಟ್ಟಾಗ ಎರಡನೇ ಪುಲಕೇಶಿಗೆ ಬಹುಶಃ ೭-೮ವರ್ಷ ವಯಸ್ಸಾಗಿದ್ದಿರಬೇಕು. ಹಾಗಾಗಿ ಮಂಗಳೇಶನು ವಾಸ್ತವವಾಗಿ ಟ್ರಸ್ಟಿ ಎಂಬಂತೆ ಆಡಳಿತವನ್ನು ನಡೆಸಿದನು. ಆ ವೇಳೆಗೆ ಬಹುಶಃ ಮಂಗಳೇಶನಿಗೆ ೩೦ ವರ್ಷ ವಯಸ್ಸಾಗಿರಬೇಕು.

ತುಂಬಾ ಆಶೋತ್ತರಗಳನ್ನು ಹೊಂದಿದ್ದವನಾದ್ದರಿಂದ ಮಂಗಳೇಶನು ಅಧಿಕಾರ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿ ಉತ್ತರದ ದಂಡಯಾತ್ರೆಯನ್ನು ಕೈಗೊಂಡನು. ಭಾಗೀರಥಿ ನದಿಯ ದಂಡೆಯ ಮೇಲೆ ವಿಜಯಸ್ತಂಭವನ್ನು ನೆಡಿಸಬೇಕೆಂದು ಅವನು ಯೋಜನೆ ಹಾಕಿದ್ದನು. ಆದರೆ ಮಹಾಕೂಟದಲ್ಲಿ ಅದನ್ನು ಸ್ಥಾಪಿಸುವುದರಿಂದ ತೃಪ್ತನಾಗಬೇಕಾಯಿತು. ಶಂಕರಗಣ ಮತ್ತು ಬುಧವರ್ಮ ಎಂಬ ಕಲಚೂರಿ ರಾಜರನ್ನು ಅವನು ಸೋಲಿಸಿದನು. ಶಂಕರಗಣನು ಯುದ್ಧರಂಗದಲ್ಲಿ ಸತ್ತನು. ಚಾಲುಕ್ಯ ವಂಶಕ್ಕೇ ಸೇರಿದ್ದ, ಬಹುಶಃ ಬುಧವರ್ಮನೊಂದಿಗೆ ಸೇರಿಕೊಂಡಿದ್ದ ಸ್ವಾಮಿರಾಜನೂ ಸೋತನು. ಇವನು ಬಹುಶಃ ರೇವತಿ. ಇದಕ್ಕಾಗಿಯೇ ಮಂಗಳೇಶನು ಒಂದು ನೌಕಾಪಡೆಯನ್ನು ಕಟ್ಟಬೇಕಾಯಿತು. ಮುಂದೆ ಈ ಪ್ರದೇಶವನ್ನು ಮಂಗಳೇಶನ ಸಾಮಂತ ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನು ಆಳುತ್ತಿದ್ದನು. ಮಂಗಳೇಶನು ದೃಢನಿರ್ಧಾರ, ಬಲ, ಸತ್ವ, ಧೈರ್ಯ, ಸ್ಥಿರಚಿತ್ತ, ಪೌರುಷ ಮತ್ತು ತ್ಯಾಗ(ಮತಿಬಲ-ಉತ್ಸಾಹ-ಧೈರ್ಯ-ಸ್ಥೈರ್ಯ-ವೀರ್ಯ-ಗಾಂಭೀರ್ಯ ಮತ್ತು ತ್ಯಾಗ)ಗಳನ್ನು ಉಳ್ಳವನಾಗಿದ್ದನು. ಜೊತೆಗೆ ಮಾಧುರ್ಯ ಹಾಗೂ ಗಾಂಭೀರ್ಯಗಳನ್ನು ಹೊಂದಿದ್ದನು ಎಂದು ವರ್ಣಿಸಲಾಗಿದೆ. ಅವನನ್ನು ಸಿಂಹವಿಕ್ರಮನೆಂದೂ, ರಾಜನ ಶಕ್ತಿತ್ರಯಗಳನ್ನು (ಪ್ರಭುಶಕ್ತಿ, ಉತ್ಸಾಹಶಕ್ತಿ, ಮಂತ್ರಶಕ್ತಿ) ಹೊಂದಿದ್ದನೆಂದೂ ಕೊಂಡಾಡಲಾಗಿದೆ.

ಆದರೆ ಅಧಿಕಾರದ ರುಚಿ ಹತ್ತಿದ್ದ ಮಂಗಳೇಶ ಸಿಂಹಾಸನವನ್ನು ತನ್ನ ಅಣ್ಣನ ಮಗ ಎರಡನೇ ಪುಲಕೇಶಿಗೆ ವಹಿಸಿಕೊಡುವ ವಿಚಾರ ಹಿಡಿಸಲಿಲ್ಲ. ತನ್ನ ಮಗನಿಗೆ ಸಿಂಹಾಸನವನ್ನು ಕೊಡಬೇಕೆಂದು ಅವನು ಬಯಸಿರಬಹುದು. ಹಾಗಾಗಿ ರಾಜಕುಮಾರ ಪುಲಕೇಶಿಯು ದಂಗೆಯೇಳಬೇಕಾಯಿತು. ಇದಕ್ಕಾಗಿ ಅವನು ದೇಶತ್ಯಾಗ ಮಾಡಿ ಹೊರಕ್ಕೆ ಹೋಗಿ, ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಿಕೊಂಡು ಕೊನೆಗೆ ಚಿಕ್ಕಪ್ಪನ ಮೇಲೆ ಎರಗಿದನು. ಮಂಗಳೇಶನಿಂದ ಪೆಟ್ಟು ತಿಂದಿದ್ದ ಗಂಗ, ದಮಿಳ, ಚೋಳ, ಆಳುಪ ರಾಜರು ಈಗ ಎರಡನೇ ಪುಲಕೇಶಿಗೆ ಬೆಂಬಲವಾದರು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ನಾಡನೂರಿನ ಎಳ್ಪತ್ತುಸಿಂಬಿಗ ಎಂಬಲ್ಲಿ ನಡೆದ ಯುದ್ಧದಲ್ಲಿ ಎರೆಯನು (ಇಮ್ಮಡಿ ಪುಲಕೇಶಿ) ಮಂಗಳೇಶನನ್ನು ಎದುರಿಸಿದನು. ಬಾಣರು ರಾಜಕುಮಾರನಿಗೆ ಆಶ್ರಯ ನೀಡಿದ್ದರಾದ್ದರಿಂದ ಮಂಗಳೇಶನು ಬಾಣ ರಾಜ್ಯದ ಮೇಲೆ ಆಕ್ರಮಣ ಮಾಡಿದ್ದನು. ಯುದ್ಧವು ಭೀಕರವಾಗಿತ್ತು. ಮಂಗಳೇಶನು ಯುದ್ಧದಲ್ಲಿ ಹತನಾದನು. ಪುಲಕೇಶಿ ಸಿಂಹಾಸನವನ್ನೇರಿದನು. ಒಡನೆಯೇ ಕೆಲವು ಅಧೀನ ರಾಜರ ದಂಗೆಯನ್ನು ಅವನು ಎದುರಿಸಬೇಕಾಯಿತು. ಐಹೊಳೆ ಶಾಸನವು ಅವರನ್ನು ಅಪ್ರಾಯಿಕ ಮತ್ತು ಗೋವಿಂದ ಎಂದು ಹೆಸರಿಸುತ್ತದೆ. ಇವರಲ್ಲಿ ಒಬ್ಬನು ಮಂಗಳೇಶನ ಮಗನಾಗಿದ್ದಿರಬಹುದು. ಆದರೆ ಅದನ್ನು ಖಚಿತವಾಗಿ ಹೇಳಲು ಆಧಾರಗಳಿಲ್ಲ. ಮಹಾಕೂಟೇಶ್ವರ ದೇವಾಲಯವನ್ನು ಶ್ರೀಮಂತಗೊಳಿಸಿದ ಹಾಗೂ ಐಹೊಳೆಯ ರಾವಳಫಡಿ ಗುಹಾಲಯವನ್ನು ನಿರ್ಮಿಸಿದ ಕೀರ್ತಿ ಮಂಗಳೇಶನಿಗೆ ಸಲ್ಲುತ್ತದೆ. ರಮೇಶ ಅವರ ಪ್ರಕಾರ ರಾವಳಫಡಿಯು ರಾಜಕೂಟ ಪ್ರತಿಮಾಗೃಹ. ಅಲ್ಲಿರುವ ನಟರಾಜನ ಶಿಲ್ಪವು ಈ ವೇಳೆಗಾಗಲೇ ದೈವತ್ವಕ್ಕೆ ಏರಿದ್ದ ಮಂಗಳೇಶನ ಮೂರ್ತರೂಪ ಎಂದು ಹೇಳಲಾಯಿತು. ಹಾಗೆಯೇ ಅಲ್ಲಿನ ಚಿಕ್ಕಗುಡಿ ಎಂಬ ಇನ್ನೊಂದು ದೇವಾಲಯವು ಒಂದನೇ ಕೀರ್ತಿವರ್ಮನ ದೇವಾಲಯವೆಂದು ಹೇಳಲಾಗಿದೆ. ಇವೆಲ್ಲ ಕೇವಲ ಊಹಾಪೋಹಗಳು, ವಾಸ್ತವತೆಯ ಆಧಾರವಿಲ್ಲದವು.

ಎರಡನೇ ಪುಲಕೇಶಿಯು ನ್ಯಾಯಯುತವಾಗಿ ತನಗೆ ಸೇರಬೇಕಾಗಿದ್ದ ರಾಜ್ಯವನ್ನು ತನ್ನ ಚಿಕ್ಕಪ್ಪನಿಂದ ಸು.ಕ್ರಿ.ಶ.೬೧೦ರಲ್ಲಿ ಕಿತ್ತುಕೊಳ್ಳಬೇಕಾಯಿತು. ಸಿಂಹಾಸನಕ್ಕೆ ಬಂದಾಗ ಅವನಿಗೆ ೩೨ ವರ್ಷವಾಗಿತ್ತು. ಒಡನೆಯೇ ರಾಜ್ಯವನ್ನು ವಿಸ್ತರಿಸಲು ಅವನು ದಂಡಯಾತ್ರೆಗಳನ್ನು ಕೈಗೊಂಡನು.

ಇಮ್ಮಡಿ ಪುಲಕೇಶಿ (೬೧೦೬೪೨)

ಇಮ್ಮಡಿ ಪುಲಕೇಶಿಯಿಂದ ಮುಂದಕ್ಕೆ ಅವನ ವಂಶಜರೆಲ್ಲರೂ ಹೆಚ್ಚು ವಯಸ್ಸಾದ ಮೇಲೆಯೇ ಪಟ್ಟಕ್ಕೆ ಬಂದವರು. ಪುಲಕೇಶಿಯು ೬೪೨-೪೩ರವರೆಗೆ ಆಳಿದನು. ಆಗ ಅವನಿಗೆ ಸುಮಾರು ೬೫ ವರ್ಷ ವಯಸ್ಸು. ಅವನು ತನ್ನ ದಂಡಯಾತ್ರೆಯನ್ನು ದಕ್ಷಿಣದಿಂದ ರಾಜಧಾನಿಗೆ ಹಿಂದಿರುಗಿಸಿದನು. ಆದರೆ ವಾಸ್ತವದಲ್ಲಿ ಹೀಗಾಗಿರಲಾರದು. ಇದೇ ಅನುಕ್ರಮದಲ್ಲಿ ದಂಡೆಯಾತ್ರೆ ನಡೆದಿರಲಿಕ್ಕಿಲ್ಲ. ಪಟ್ಟಕ್ಕೆ ಬಂದೊಡನೆಯೇ ರಾಜ್ಯದ ಒಳಗೂ ಹೊರಗೂ ಅವನು ದಂಗೆಗಳನ್ನು ಎದುರಿಸಬೇಕಾಯಿತು ಎನ್ನುವುದಷ್ಟು ಸ್ಪಷ್ಟವಾಗಿದೆ. ರಾಜ್ಯದಲ್ಲಿದ್ದ ಗೊಂದಲ ಮತ್ತು ಅವ್ಯವಸ್ಥೆಗಳ ಪ್ರಯೋಜನವನ್ನು ಪಡೆದ ಇಬ್ಬರು ನಾಯಕರಾದ ಅಪ್ರಾಯಿಕ ಮತ್ತು ಗೋವಿಂದ, ಇತರ ಹಲವರ ಜೊತೆಗೆ ದಂಗೆಯೆದ್ದರು. ಅವರು ಗಜಸೈನ್ಯದೊಂದಿಗೆ ಭೀಮಾನದಿಯ ದಡದಿಂದ ಉತ್ತರಕ್ಕೆ ಚಲಿಸಿದರು. ಆದರೆ ಪುಲಕೇಶಿಯ ಆಗಾಧ ಸೇನೆಯೆದುರಿಗೆ ಅವರು ನಿಲ್ಲಲು ಸಾಧ್ಯವಾಗಲಿಲ್ಲ. ಭೀತಿಯಿಂದ ಅಪ್ರಾಯಿಕನು ಓಡಿಹೋದನು. ಇನ್ನೊಬ್ಬನು ಶರಣಾದನು. ಇವರು ಯಾರೆಂದು ಸರಿಯಾಗಿ ಗುರುತಿಸಿಲ್ಲ. ಆದರೆ ಇಬ್ಬರಲ್ಲಿ ಒಬ್ಬನು ಬಹುಶಃ ಮಂಗಳೇಶನ ಮಗನಾಗಿರಬಹುದು ಎಂದು ಭಾವಿಸಲಾಗಿದೆ. ಅಪ್ರಾಯಿಕನು ಕಲಚೂರಿ ಶಂಕರಗಣನ ಕೈ ಕೆಳಗಿದ್ದ ಒಬ್ಬ ರಾಜ, ಸಿರಿಹುಲ್ಲಕ ಕುಟುಂಬಕ್ಕೆ ಸೇರಿದವನೆಂದು ಊಹಿಸಲಾಗಿದೆ.

ಹೀಗೆ ಹಠಾತ್ತನೆ ದಂಗೆ ಸಂಭವಿಸಿದ್ದರಿಂದ ಪುಲಕೇಶಿಯು ಒಂದು ಜೈತ್ರಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿದನು. ಮೊದಲನೆಯ ಬಲಿ ಕದಂಬರಾಜ. ಕೀರ್ತಿವರ್ಮನು ಕದಂಬರನ್ನು ಸೋಲಿಸಿದ್ದನಾದರೂ ಅವರಿನ್ನೂ ಸ್ವತಂತ್ರರಾಜ್ಯದ ಕನಸು ಕಾಣುತ್ತಿದ್ದರು. ಬನವಾಸಿ ಮತ್ತು ಇತರ ಕೋಟೆಗಳನ್ನು ಚಾಲುಕ್ಯರಾಜನು ಗೆದ್ದುಕೊಂಡನು. ಆಮೇಲೆ ಅವನು ತುಳುನಾಡಿನ ಆಳುಪರ ಕಡೆಗೆ ನಡೆದು ಅವರನ್ನು ಸೋಲಿಸಿದನು. ಗಂಗರೂ ಶರಣಾಗತರಾಗಿ ತಮ್ಮ ಭಂಡಾರವನ್ನು ಅವನಿಗೆ ಒಪ್ಪಿಸಿದರು. ಗಂಗನು ದುರ್ವಿನೀತನೆಂದು ವಿದ್ವಾಂಸರು ಗುರುತಿಸಿದ್ದಾರೆ. ಆದ್ದರಿಂದ ಒಂದನೇ ಪುಲಕೇಶಿಯ ತಾತ ಜಯಸಿಂಹನ ಸಮಕಾಲೀನ ನಾಗಿರಬೇಕು. ಆದರೆ ಇಲ್ಲಿ ಉಕ್ತನಾದ ಗಂಗನು ಮುಷ್ಕರನ ತಮ್ಮ ಪೊಲವೀರನಾಗಿರಬಹುದು. ಪುಲಕೇಶಿಯು ಮೊದಲು ಗಂಗರನ್ನು ಗೆದ್ದು, ಆಮೇಲೆ ಕದಂಬರ ಬನವಾಸಿಯನ್ನು ಆಕ್ರಮಿಸಿಕೊಂಡನೆಂದು ಹೇಳುವುದು ಹೆಚ್ಚು ಸಮಂಜಸವಾಗುತ್ತದೆ. ಅಲ್ಲಿಂದ ಮುಂದೆ ಪುಲಕೇಶಿಯ ಗುರಿಯಾದದ್ದು ಕೊಂಕಣ. ಅಲ್ಲಿ ಮೌರ್ಯವಂಶದ ಕೆಲವರು ಅಧಿಕಾರದಲ್ಲಿದ್ದರು. ಆದಾದ ಮೇಲೆ ಗೆದ್ದುಕೊಂಡ ಪುರಿಯನ್ನು ಮುಂಬಯಿ ಬಳಿ ಇರುವ ಎಲಿಫೆಂಟಾ ದ್ವೀಪ ಎಂದು ಗುರುತಿಸಲಾಗಿದೆ. ಅದು ಬಂದರು ನಗರವಾಗಿತ್ತು. ಅದನ್ನು ಗೆಲ್ಲಲು ಪುಲಕೇಶಿಯು ಒಂದು ನೌಕಾಪಡೆಯನ್ನು ಕಟ್ಟಬೇಕಾಯಿತು. ಲಾಟ, ಮಾಳವ ಮತ್ತು ಗೂರ್ಜ ದೇಶದ ಅರಸರು ಪ್ರತಿಭಟನೆಯಿಲ್ಲದೆ ಶರಣಾಗತರಾದರು. ಹರ್ಷನು ಉತ್ತರಾಪಥೇಶ್ವರನಾಗಿ ಅಧಿಕಾರದಲ್ಲಿ ಬೆಳೆಯುತ್ತಿದ್ದು, ಪುಲಕೇಶಿಯ ಮೇಲೆ ದಂಡೆತ್ತಿ ಬರುತ್ತಿದ್ದುದರಿಂದ ಲಾಟ ಮೊದಲಾದ ಈ ಅರಸರು ತಾವಾಗಿ ಪುಲಕೇಶಿಯ ಪ್ರಭುತ್ವವನ್ನು ಒಪ್ಪಿಕೊಂಡರು ಎಂದು ಊಹಿಸಬಹುದು.

ಪುಲಕೇಶಿಯು ಕನೌಜಿನ ಹರ್ಷನನ್ನು ಸೋಲಿಸಿದ್ದು ಕ್ರಿ.ಶ. ೬೧೩ಕ್ಕಿಂತ ಮೊದಲು. ಒಂದು ನೂರು ಯುದ್ಧಗಳನ್ನು ಮಾಡಿದ್ದ ವೈರಿರಾಜನನ್ನು ಸೋಲಿಸಿ ಅವನು ಪರಮೇಶ್ವರ ಎಂಬ ಬಿರುದನ್ನು ಧರಿಸಿದನು. ಚೀನಾದೇಶದ ಪ್ರವಾಸಿ ಹ್ಯೂಯೆನ್‌ತ್ಸಾಂಗ್ ಹೇಳುವಂತೆ, ಅವನ ಆಳ್ವಿಕೆಯ ಮೊದಲ ಆರು ವರ್ಷಗಳು (ಸು.೬೦೬-೬೧೨) ಯುದ್ಧಗಳಲ್ಲಿ ಮತ್ತು ದಂಡಯಾತ್ರೆಗಳಲ್ಲಿ ಕಳೆದವು. ಪುಲಕೇಶಿಯ ಪ್ರಾಬಲ್ಯವು ದಿನೇ ದಿನೇ ಬೆಳೆಯುತ್ತಿದ್ದು, ಹರ್ಷನು ತನ್ನ ರಾಜ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಅವನನ್ನು ದಂಡಿಸಬೇಕೆಂದು ಬಯಸಿದನು.

ಸಕಲ ಉತ್ತರಾಪಥೇಶ್ವರನು ದಕ್ಷಿಣಾಪಥೇಶ್ವರನೂ ಜಯಿಸಲು ಬಯಸಿದನು. ಆದರೆ ಹರ್ಷನು ಸೋತದ್ದನ್ನು ಐಹೊಳೆ ಶಾಸನವು ಸಂದೇಹವೇ ಇಲ್ಲದ ಮಾತುಗಳಲ್ಲಿ ಹೇಳುತ್ತದೆ. ಬಹಿರಂಗವಾಗಿ ಶ್ರೀಮಂತರಾಗಿದ್ದ ಸಾಮಂತರ ನೆರವನ್ನು ಪಡೆದಿದ್ದ ಹರ್ಷನು ಇಮ್ಮಡಿ ಪುಲಕೇಶಿಗೆ ಸೋತು ತನ್ನ ‘ಹರ್ಷ’ವನ್ನು ಕಳೆದುಕೊಂಡನು. ಹ್ಯೂಯೆನ್‌ತ್ಸಾಂಗ್ ಹೇಳುತ್ತಾನೆ: “ಹಿರಿಯ ದೊರೆ ಶೀಲಾದಿತ್ಯನು ಈ ಸಮಯದಲ್ಲಿ ಪೂರ್ವದಲ್ಲಿ ಆಕ್ರಮಣ ಮಾಡಿದ್ದನು. ಪಶ್ಚಿಮವೂ ಇದರ ದೂರದ ಮತ್ತು ಸಮೀಪದ ರಾಜ್ಯಗಳೂ ಅವನಿಗೆ ವಿಧೇಯವಾಗಿದ್ದವು. ಆದರೆ ಮೊ-ಹ-ಲ-ಚವು (ಮಹಾರಾಷ್ಟ್ರ) ಅವನಿಗೆ ಅಧೀನವಾಗಲು ನಿರಾಕರಿಸಿತು.” ಅವನ ಜೀವನ ಚರಿತ್ರಕಾರ ಬಾಣನು ಬರೆಯುತ್ತಾನೆ: “ರಾಜನು ಐದು ಖಂಡಗಳಿಂದ ಸೇನೆಯನ್ನು ಸಂಗ್ರಹಿಸಿಕೊಂಡು, ಎಲ್ಲಾ ದೇಶಗಳ ಅತ್ಯುತ್ತಮ ನಾಯಕರನ್ನು ಕರೆಸಿಕೊಂಡು ತಾನೇ ಸೇನೆಯ ಮುಖ್ಯನಾಗಿ ಈ ಜನರನ್ನು ದಂಡಿಸಿ ಸೋಲಿಸಲು ನಡೆದನು, ಆದರೆ ಅದು ನಿಷ್ಫಲವಾಯಿತು. ಈ ವಿಜಯದಿಂದ ಪುಲಕೇಶಿಯು ಮರಮೇಶ್ವರ ಎಂಬ ಬಿರುದನ್ನು ಗಳಿಸಿದನು.”

ಇದರೊಂದಿಗೆ ಪುಲಕೇಶಿಯ ಯುದ್ಧ ಸಾಹಸಗಳ ಮೊದಲನೆಯ ಹಂತವು ಮುಕ್ತಾಯವಾಯಿತು. ಅಲ್ಲದೆ ಇದರಿಂದ ಅವನು ಮಹಾರಾಷ್ಟ್ರಕತ್ರಯ ಎಂದು ಪ್ರಸಿದ್ಧವಾದ ಪ್ರದೇಶದ ಪ್ರಭುವಾದನು. ಇದರಲ್ಲಿ ೯೯,೦೦೦ ಹಳ್ಳಿಗಳಿದ್ದವು. ಈ ಪ್ರದೇಶವು ಯಾವುದು ಎಂಬ ವಿಷಯದಲ್ಲಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಸಾಮಾನ್ಯವಾಗಿ ಒಪ್ಪಿರುವಂತೆ ಅದರಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಕೊಂಕಣ ಈ ಮೂರು ಭಾಗಗಳೂ ಸೇರಿದ್ದವು. ಸ್ವಲ್ಪ ಕಾಲ ರಾಜ್ಯದಲ್ಲಿ ಎಲ್ಲವೂ ಶಾಂತವಾಗಿತ್ತು. ಪುಲಕೇಶಿಯು ಆಡಳಿತ ಮತ್ತು ಪ್ರಜಾಕಲ್ಯಾಣದ ಕಡೆಗೆ ಗಮನ ಕೊಟ್ಟನು.

ಆಮೇಲೆ ಮತ್ತೆ ಅವನು ವಿಜಯೋದ್ಯೋಗದ ಎರಡನೆಯ ಹಂತವನ್ನು ಪ್ರಾರಂಭಿಸಿದನು. ಈ ಸಾರಿ ಅವನು ಪೂರ್ವಮುಖವಾಗಿ ನಡೆದನು. ಕೋಸಲದ ರಾಜರು ಅವನ ಮಹಾ ಪರಾಕ್ರಮದ ಬಗೆಗೆ ಕೇಳಿದ್ದರು. ಆಗ ಕೋಸಲದಲ್ಲಿ ಪಾಂಡುವಂಶೀ ಎಂಬ ಮನೆತನದ ಒಬ್ಬ ಸದಸ್ಯನು ರಾಜ್ಯವಾಳುತ್ತಿದ್ದನು. ಅವರ ಮೇಲೆ ಪ್ರಭುತ್ವ ಹೊಂದಿದ್ದವರು ಪೂರ್ವ ಗಂಗರು. ಅವರು ಒರಿಸ್ಸಾ ಪ್ರದೇಶದಲ್ಲಿ ಆಳುತ್ತಿದ್ದರು. ಆಗ ಅದು ಕಳಿಂಗ ದೇಶವೆನಿಸಿತ್ತು. ಪುಲಕೇಶಿಯು ಈ ಎರಡು ರಾಜ್ಯಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಆಮೇಲೆ ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಪಿಷ್ಟಪುರ ಅಥವಾ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೀಠಾಪುರಂ ಕೋಟೆಯನ್ನು ಆಕ್ರಮಿಸಿಕೊಂಡನು. ಆಗ ಕುನಾಲವು ವೆಂಗಿ ದೇಶದ ಭಾಗವಾಗಿತ್ತು (ಇದು ಏಲೂರು ಬಳಿಯ ಕೊ್ಲೇರು ಎಂದು ಹೇಳಲಾಗಿದೆ). ಆಗ ಈ ಪ್ರದೇಶವೆಲ್ಲವೂ ವಿಷ್ಣುಕುಂಡಿ ರಾಜ್ಯದ ಭಾಗವಾಗಿದ್ದಿತು. ಆಗ ಕೊಲ್ಲೇರು ಪ್ರದೇಶದಲ್ಲಿ ವಿಪರೀತ ಗೊಂದಲ. ಅವ್ಯವಸ್ಥೆ ಉಂಟಾಗಿದ್ದು ಪುಲಕೇಶಿಗೆ ದಾಳಿ ಮಾಡಲು ಆಮಿಷವೊಡ್ಡಿತು. ಅದು ಬಹು ಅಪಾಯಕಾರಿಯಾದ ಪ್ರದೇಶವಾಗಿತ್ತು ಎಂದು ಶಂಕರನಾರಾಯಣ್ ವಾದಿಸುತ್ತಾರೆ. ಕೊಳ್ಳೆ, ಸುಲಿಗೆಗಳಿಗೆ ಹೆಸರಾದ ಅದು ‘ಯಾರಿಗೂ ಸೇರದ ಭೂಮಿ’ ಆಗಿತ್ತು. ಅದುವರೆಗೆ ಅಲ್ಲಿ ಪ್ರಭಾವಶಾಲಿಗಳಾಗಿದ್ದ ವಿಷ್ಣುಕುಂಡಿನರು ರಾಜಕೀಯ ರಂಗದಿಂದ ಮರೆಯಾಗಿದ್ದರು. ಚಾಲುಕ್ಯರಿಗೆ ಪ್ರತಿಭಟನೆ ಕೊಡಬಹುದಾಗಿದ್ದ ಏಕೈಕ ಶಕ್ತಿ ಪಲ್ಲವರು. ಪಲ್ಲವ ಮಹೇಂದ್ರ ವರ್ಮನ ಸಾಮಂತನಾದ ಪೃಥ್ವೀಯುವರಾಜನು, ಪೃಥ್ವೀ ಧ್ರುವರಾಜನೆಂದೂ ಇವನಿಗೆ ಹೆಸರು ಕೊಲ್ಲೇರುವನ್ನು ನೋಡಿಕೊಳ್ಳುತ್ತಿದ್ದನು. ಪುಲಕೇಶಿಯು ಈ ಯುದ್ಧದಲ್ಲಿ ಬಹು ಸಂಖ್ಯೆಯ ಆನೆಗಳನ್ನು ಉಪಯೋಗಿಸುತ್ತಿದ್ದನು. ಕೊಲ್ಲೇರುವಿನ ಮೇಲೆ ಅವನು ಮಾಡಿದ ದಾಳಿ ಯಶಸ್ವಿಯಾಯಿತು. ಪೃಥ್ವೀ ಯುವರಾಜನು ಅವನಿಗೆ ಬಲವಾದ ಯುದ್ಧವನ್ನೇನೋ ಕೊಟ್ಟನು. ಪುಲಕೇಶಿಯು ತನ್ನ ಮಾವ, ರಾಣಿ ಕದಂಬಾಳ ತಂದೆ ಮಂಗಳಪುರ(ಮಂಗಳೂರು)ದ ಅಳುಪ ಮಹಾರಾಜನನ್ನು ಕರೆಸಿಕೊಳ್ಳಬೇಕಾಯಿತು. ಯುದ್ಧದಲ್ಲಿ ಈ ಅಳುಪ ಮಹಾರಾಜನು ಪ್ರಾಣ ಬಿಟ್ಟನು. ಅವನ ನೆನಪಿಗಾಗಿ, ರಾಣಿ ಕದಂಬಾಳ ಬಯಕೆಯಂತೆ ಪುಲಕೇಶಿಯು ಒಂದು ಗ್ರಾಮವನ್ನು ಅಗ್ರಹಾರವಾಗಿ ದಾನ ಮಾಡಿದನು.

ಪುಲಕೇಶಿಯ ಸೈನ್ಯವು ಅಜೇಯವಾಗಿತ್ತು. ಪಲ್ಲವ ರಾಜನು-ಬಹುಶಃ ಮಹೇಂದ್ರವರ್ಮ-ತನ್ನ ರಾಜಧಾನಿ ಕಾಂಚಿಯ ಕೋಟೆ ಗೋಡೆಗಳ ಹಿಂದೆ ಆಶ್ರಯ ಪಡೆಯಬೇಕಾಯಿತು. ಹೀಗೆ ವಿವರಿಸಿದರೆ, ಪುಲಕೇಶಿಯು ಪಲ್ಲವರೊಂದಿಗೆ ಎರಡುಸಾರಿ ಯುದ್ಧವನ್ನು ಮಾಡಿದನೆಂದು ಹೇಳಿದಂತಾಗುತ್ತದೆ. ಆಗ ಇದು ಮೊದಲನೆಯದಾಗುವುದು. ಆಮೇಲೆ ಪುಲಕೇಶಿಯು ಈ ವೆಂಗಿ ಪ್ರದೇಶವನ್ನು ತನ್ನ ತಮ್ಮ ಕುಬ್ಜ ವಿಷ್ಣುವರ್ಧನನಿಗೆ ಸ್ವತಂತ್ರವಾಗಿ ಆಳುವಂತೆ ವಹಿಸಿಕೊಟ್ಟನು. ಹೀಗೆ ಪೂರ್ವದ ವೆಂಗಿ ಚಾಲುಕ್ಯ ಮನೆತನವು ಅಸ್ತಿತ್ವಕ್ಕೆ ಬಂದಿತು. ಪಲ್ಲವ ಮಹೇಂದ್ರವರ್ಮನ ನಂತರ ರಾಜಧಾನಿ ನರಸಿಂಹವರ್ಮನು ಪರಿಯಾಳ, ಮಣಿಮಂಗಳ ಮತ್ತು ಶೂರಮಾರ ಮೊದಲಾದ ಕಡೆಗಳಲ್ಲಿ ಪುಲಕೇಶಿಯೊಂದಿಗೆ ಯುದ್ಧ ಮಾಡಿದುದಾಗಿ ಹೇಳಿಕೊಳ್ಳುತ್ತಾನೆ. ಇವುಗಳಲ್ಲಿ ಮಣಿಮಂಗಳವು ಕಾಂಚಿಯಿಂದ ಪೂರ್ವಕ್ಕೆ ೩೫ ಕಿ.ಮೀ. ದೂರದಲ್ಲಿದೆ. ನಿಜವಾಗಿಯೂ ಈ ಯುದ್ಧಗಳು ನಡೆದಿದ್ದರೆ ಅವು ಪುಲಕೇಶಿಗೆ ಅನುಕೂಲವಾಗಿರಲಿಲ್ಲ. ವೈರಿಯು ಬಾದಾಮಿಯವರೆಗೂ ಪುಲಕೇಶಿಯನ್ನು ಅಟ್ಟಿಸಿಕೊಂಡು ಬಂದನು. ನಗರವನ್ನು ವಶಪಡಿಸಿಕೊಂಡು ಅಲ್ಲಿ ಒಂದು ವಿಜಯಸ್ತಂಭವನ್ನು ನೆಡಿಸಿದನು. ಆ ಸ್ತಂಭವದ ಮೇಲಿರುವ ಶಾಸನವು ನರಸಿಂಹವರ್ಮನ ಆಳ್ವಿಕೆಯ ೧೩ನೇ ವರ್ಷಕ್ಕೆ ಸೇರಿದ್ದಾಗಿದೆ. ಈ ರಾಜನು ಸುಂದರವಾದ ವಾತಾಪಿ ನಗರವನ್ನು ನಾಶ ಮಾಡಿದನು.

ಪುಲಕೇಶಿಯು ತನ್ನ ರಾಜಧಾನಿಯಲ್ಲಿಯೇ ಪಲ್ಲವನಿಂದ ಪರಾಭವ ಹೊಂದಬೇಕಾಯಿತು. ಆಮೇಲೆ ಏನಾಯಿತೆನ್ನುವುದು ತಿಳಿಯುವುದಿಲ್ಲ. ಬಹುಶಃ ಅವನು ಸತ್ತುಹೋಗಿರಬಹುದು. ಗೆದ್ದ ನರಸಿಂಹವರ್ಮನು ಬಾದಾಮಿಯ ಗುಹೆಯ ತಳಹದಿಯ ಶಾಸನವೊಂದರಲ್ಲಿ ಗ್ರಂಥಾಕ್ಷರಗಳು ಮತ್ತು ಸಂಸ್ಕೃತಗಳಲ್ಲಿ ಒಂದನೇ ಪುಲಕೇಶಿಯ ಶಾಸನದ ಮೇಲೆಯೇ ಕೆತ್ತಿಸಿದನು. ಅದರಲ್ಲಿ ಪಲ್ಲವರಾಜನು ವಾತಾಪಿಕೊಂಡ ಎಂಬ ಬಿರುದನ್ನು ಧರಿಸಿದ್ದನು.

ಇರಾನಿನ ಎರಡನೇ ಖುಸ್ರೋ ಇಮ್ಮಡಿ ಪುಲಕೇಶಿಯ ಸಮಕಾಲೀನ. ಅವರಿಬ್ಬರ ನಡುವೆ ಪತ್ರ ವ್ಯವಹಾರವಿತ್ತು. ತನ್ನ ಮಗ ಶಿರಿಯನು ತನ್ನ ಮೇಲೆ ಕೆಲವು ಆಪಾದನೆಗಳನ್ನು ಮಾಡಿದುದು ಖುಸ್ರೋಗೆ ತಿಳಿಯತು. ಅರಬ್ ಇತಿಹಾಸಕಾರ ತಬರಿಯ ಪ್ರಕಾರ ಖುಸ್ರೋ ತನ್ನ ಮಗನಿಗೆ ಪುಲಕೇಶಿಯ ಬಗೆಗೆ ತಿಳಿಸಿದನು. ಅವನಿಗೊಂದು ಪತ್ರವನ್ನೂ ಕಳಿಸಿಕೊಟ್ಟನು. ರಾಜಕುಮಾರನಿಗೂ ಒಂದು ಪತ್ರವನ್ನು ಕಳಿಸಿದನು. ಆದರೆ ಅದು ಅವನಿಗೆ ತಲುಪಲಿಲ್ಲ. ‘ಖಾಸಗಿ’ ಎಂದು ಮೇಲೆ ನಮೂದಿಸಿದ್ದ ಆ ಪತ್ರದಲ್ಲಿ ರಾಜನು, ತನ್ನ ೩೮ನೇ ಆಡಳಿತ ವರ್ಷದಲ್ಲಿ ಇರಾನಿನ ರಾಜನಾಗುವುದಾಗಿಯೂ ಎದೆಗುಂದಬಾರದೆಂದೂ ಭರವಸೆ ಕೊಟ್ಟಿದ್ದನು. ಅಜಂತ ಗುಹೆಯಲ್ಲಿರುವ ಒಂದು ಚಿತ್ರದಲ್ಲಿ ಪುಲಕೇಶಿಯು ಇರಾನಿನ ರಾಯಭಾರಿಯನ್ನು ತನ್ನ ಆಸ್ಥಾನಕ್ಕೆ ಸ್ವಾಗತಿಸುತ್ತಿರುವ ದೃಶ್ಯವಿದೆ. ಬಹುಶಃ ಇದು ತಬರಿಯ ಮೇಲ್ಕಂಡ ಹೇಳಿಕೆಯನ್ನು ಪುಷ್ಟೀಕರಿಸುತ್ತದೆ.

ರಾಜಧಾನಿ ಬಾದಾಮಿ ನಗರವನ್ನು ಹ್ಯೂಯೆನ್‌ತ್ಸಾಂಗ್ ಸೊಗಸಾಗಿ ವರ್ಣಿಸಿದ್ದಾನೆ: ನಗರದ ಸುತ್ತಳತೆಯು ೩೦ ಮೀ. ಇದ್ದಿತು. ಮಣ್ಣು ಸಮೃದ್ಧವಾಗಿದೆ, ಫಲವತ್ತಾಗಿದೆ. ವಿಪುಲವಾಗಿ ಧಾನ್ಯಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಜನರು ಎತ್ತರವಾಗಿದ್ದಾರೆ, ದಾರ್ಢ್ಯವುಳ್ಳವರು, ಮೂಢನಂಬಿಕೆಗಳನ್ನುಳ್ಳವರು. ಅವರನ್ನು ಅಪಮಾನಿಸುವವರು ಪ್ರಾಣಕ್ಕೆ ಎರವಾಗುವ ಅಪಾಯವಿದೆ. ಚೈನಾದ ಪ್ರವಾಸಿಗನ ವರ್ಣನೆ ಸಂಪೂರ್ಣವಾಗಿ ಸರಿಯಾಗಿರ ಲಾರದು.

ಇಮ್ಮಡಿ ಪುಲಕೇಶಿಯ ಪತನಾನಂತರ ಮುಂದಿನ ೧೩ ವರ್ಷ ರಾಜ್ಯವು ಕತ್ತಲಯುಗದಲ್ಲಿತ್ತು. ಆಗ ಏನು ನಡೆಯಿತೆಂಬುದನ್ನು ಊಹಿಸಬೇಕು ಅಷ್ಟೆ. ಅವನ ಹಿರಿಯಮಗ ಆದಿತ್ಯವರ್ಮ ಮತ್ತು ಅವನ ಮಗ ಅಭಿನವಾದಿತ್ಯರು ಸುವ್ಯವಸ್ಥೆಯನ್ನು ಮೂಡಿಸಲು ಪ್ರಯತ್ನಿಸಿದರು. ಆದರೆ ಅದು ಅವರಿಗೆ ಸಾಧ್ಯವಾಗಲಿಲ್ಲ. ಪಿಟ್ಟಿಯಮ್ಮನ್ (ಪೃಥ್ವೀವರ್ಮ) ಎಂಬ ಒಬ್ಬನು ತನಗೂ ಸಿಂಹಾಸನದ ಮೇಲೆ ಹಕ್ಕಿದೆ ಎಂದು ಸಾರಿದನು, ಸೇಂದ್ರಕ ರಾಜ ಕಣ್ಣಶಕ್ತಿಯನ್ನೂ ಉಲ್ಲೇಖಿಸಲಾಗುತ್ತದೆ. ಆದರೆ ಅದೂ ಕೇವಲ ಊಹೆ. ಕೊನೆಗೆ ಕಿರಿಯಮಗ ಒಂದನೇ ವಿಕ್ರಮಾದಿತ್ಯನು, ಕಳೆದುಹೋದುದನ್ನು ಮರಳಿ ಗಳಿಸುವ ಗುರುತರ ಹೊಣೆಗಾರಿಕೆಯನ್ನು ಹೊತ್ತುಕೊಂಡನು.