ಭಾದೂರ ಕಟ್ಟಿಸಿದಂಥ ಬಾದಾಮಿ ಕಿಲೇಕ
ಬಂತೊ ಪ್ರಳಯಕಾಲಾ |
ಸುತ್ತ ರಾಜ್ಯದೊಳು ಮೇಲಾದ ಕಿಲೆಯ
ಆಯಿತೊ ನೆಲದ ಪಾಲಾ ||ಪಲ್ಲ||

ಕಿಲೇದ ಚಮತ್ಕಾರ ಹೇಳತೀನಿ ಕೇಳರಿ ಮಜಕೂರಾ
ಗುಡ್ಡದ ಮೇಲೆ ಗಡಾ ಕಾಣತದ ಭಾಳ ಅಪರಂಪಾರಾ
ಮುನ್ನೂರ ಅರವತ್ತು ಕಿಲೇವು ಕಟ್ಟಿಸಿದ ಭಾದೂರ ಸಾಹೇಬರಾ
ಕುಂಟ ಕುರುಡರಿಗೆ ಅನ್ನಕ್ಷೇತ್ರ ಅಲಿ ಇಟ್ಟಿದ ಕರಾರಾ
ಬಸರ್ಹೆಂಗಸರಿಗೆ ಎರಡಾಳಿನ ಕೂಲಿ ಕೊಟ್ಟನ ಮಜೂರಾ
ಒಂಬತ್ತು ವರುಷ ಕಟ್ಟಿದ ಜನ ಹನ್ನೆರಡು ಸಾವಿರಾ
ಸುತ್ತ ಅಳವಾರಿ ಕಬ್ಬಿಣ ದ್ವಾರಗಸಿ ಇದ್ದವನೂ
ಕಲ್ಲು ಗಚ್ಚಿಲೆ ಕಟ್ಟಿದ ಗೊ(ೀ)ಡಿಗೆ ಬರದಾರ ಚಿತ್ತಾರಾ ||ಚಾಲ||

ಬ್ರಾಮರಿಗೆ ಜಂಗಮರಿಗೆ ಭೂಮಿದಾನ ಪತ್ತಾರಾ ಪತ್ತಾರಾ
ಕಾಜಿ ಮುಲ್ಲಾ ಪಕೀರಗೆ ಊರ ಕೊಟ್ಟ ಜಾಗೀರಾ ಜಾಗೀರಾ
ಸುರ ಶಿಪಾಯಿ ಚಾಕ್ರಿ ಅವರ ಮೇಲೆ ಇತ್ತು ಬಲ ಪೇರಾ ಪೇರಾ
ವರಟಾರು ಘನ ಶೀದಾ ಲೋಕದೊಳಗ ಜಾಹೀರಾ ಜಾಹೀರಾ
ಭೂದೂರನ ಹುಕುಮು ನಡಸುತಿದ್ದ ಬಲ ದೂರಾ ದೂರಾ ||ತೋಡ||

ಪುಣ್ಯವಂತ ಮಾರಾಯರ ಗುರತಾ ಉಳಿಯಲಿಲ್ಲ ಜರಾ
ಕೂನದ ಕಿಲ್ಲೆವು ಕುಂಪಣಿಯವರು ಮಾಡ್ಯಾರ ಸಂವಾರಾ  ||೧||

ಕಿಲೇ ಕೆಡುವಾಗ ನಾಡಮೇಗಿನ ಜನ ಮರಗಿತೊ ಮರಮರಾ
ಶಿಪಾಯಿ ಸೂರರು ಉಪಾಯ ಏನದೆ ತಂದರ ಕಂಣಿಗೆ ನಿ(ೀ)ರಾ
ಮುತ್ತಿನಂತ ಬುರಜು ಸುತ್ತಲೆ ಬಿದ್ದವು ಹೇಳಲೇನ ಹೆಸರಾ
ಹುಡುಗಾಟ ಆದಿತು ಕಲಿಯುಗದೊಳಗ ತಿಳಿಯ ಚಮತಕಾರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದ ತೇರಿನಗತಿ ಬಾದಾಮಿ ಶೃಂಗಾರಾ
ಚಪನ್ನ ದೇಶಕೆ ಪ್ರಸಿದ್ಧ ಜಾಗಾ ಆಳಿಕೆ ಧೋಪಾರಾ
ಸಾದಾಸಿ ನೋಡಲು ಶಾಸ್ತ್ರಸಿದಂತ ಬಾದಾಮಿ ಕ್ಷೇತರಾ               ||ಚಾಲ||

ದೇಸಾಯಿ ಅಂತಾನ ಗೋಷವಾದಿತು ಹಣೆಭಾರಾ ಹಣೆಭಾರಾ
ಯುಗತಿದಿಂದತಿ ತೊಗಂಡರು ಎಲ್ಲ ರಾಜದ ಕರಾಕರಾ
ಅಲ್ಲಿಂದ ಕಿಲೇ ಅಳಿದಾರೋ ಗುಡಿಯ ಗೋಪರಾ ಗೋಪರಾ
ದಿನ ಒಂದಕು ಹುಕುಮು ನಡಸುತಾರ ಇಲ್ಲ ಸ್ಥೀರಾ ಸ್ಥೀರಾ ||ತೋಡ||

ಕ್ಷಿತಿಯೊಳು ಬಾದಾಮಿ ಪತಿ ವಿರುಪಾಕ್ಷನ ಕರುಣದಿ ವಿಸ್ತಾರ
ತಿಳಿದು ಹೇಳಿದನು ಜಾಣಿಸಿ ಕೇಳಿರಿ ಬಲ್ಲಂತ ಹಿರಿಯರಾ ||೩||

ಪೇಶವಾನಾ ಮೊಗಲಾಯಿ ಕಾಲಕೆ ಲಡಾಯಿ ಆಯಿತ ಟೀಕ
ಏಳನೂರ ಪಾಲಕಿ ಕಾಲಿಮಾಡಿದ್ದು ಟಾವಿಕಿತ್ತೊ ಜನಕ
ಹತ್ತೆಂಟಸರ್ತಿ ಲಡಾಯಿ ಹೊಡದವರು ರಾಜ್ಯಕ ಬಿದ್ದು ಬೆಳಕ
ಟೀಪುಸುಲ್ತಾನ ಭಾದೂರ ಸಾಹೇಬಗೆ ಮುತ್ತೂ ಮಾಣಿಕ
ಮದ್ದುಗುಂಡು ಜಂಜಾಲು ಟೋಪಗಳು ಇದ್ದವು ಅನೇಕ
ಶಾಣೆ ಮುನುಷ್ಯನ ಜಾಣಿಸಿ ನೋಡಿರಿ ಕಂಡ್ಹಂಗ ಪ್ರತಿಲಂಕ   ||ಚಾಲ||

ಕರ್ನಾಟಕ ಪ್ರಾಂತಕೆ ಆಧಾರ ಇತ್ತು ಈಗಡಾ ಈಗಾಡಾ
ಬಡುಕೊಂಡು ಹೋದರ ಕೇಳವರ್ಯಾರಿಲ್ಲ ನಾಡಾ ಕೇಳ ನಾಡಾ
ಎಂತ ಹೊತ್ತು ತಂದ್ಯೊ ಪರಮೇಶ್ವರ ಕಿಲೆಯಕ ಕೇಡಾ ಭಲ ಕೇಡಾ
ಕೆಡುವಾಗ ಶಿಡಲಿನಂತ ಸಪ್ಪಳಾಯಿತೊ ಧಡಧಡಾ ದಢಧಡಾ
ಧುಳ ಮುಸಕಿ ಸೂರ್ಯಗೆ ಬಂದ್ಹಾಂಗಾಯಿತು
ನೋಡು ಮೂಡ ನೋಡ ಮೂಡಾ                      ||ತೋಡ||

ತಿಳಿದು ನೋಡ ಲೆಕ್ಕಾ
ಓದಿದ ಮನುಷ್ಯಗೆ ಕಾಲಗ್ನಾನ
ವಳದಿತು ಮನಾಕ         || ೪ ||