ಬಾದಾಮಿಯಲ್ಲಿ ಬ್ರಿಟಿಷರ ವಿರುದ್ಧ ನರಸಪ್ಪ ಪೆಟ್‌ಕರ್ ಎಂಬುವನು ನಡೆಸಿದ ಬಂಡಾಯ ಇತಿಹಾಸ ಪುಟಗಳಲ್ಲಿ ಸೇರಿಕೊಂಡಿದೆ. ಅದರ ಕಥೆ ಬಲು ಕುತೂಹಲಕರವಾಗಿದೆ. ಶಿವಾಜಿ ವಂಶಜನಾದ ಪ್ರತಾಪಸಿಂಹನು ಸತಾರಾ ಸಂಸ್ಥಾನದ ಮಹಾರಾಜನಾಗಿದ್ದು ‘‘ಸತಾರಾ ಛತ್ರಪತಿ’’ ಎಂಬ ಬಿರುದು ಹೊಂದಿದ್ದನು. ಆಗ ಮರಾಠರ ಸಾಮ್ರಾಜ್ಯವು ಪೇಶ್ವೆಯವರ ಹಿರಿತನದಲ್ಲಿತ್ತು. ಇದನ್ನರಿತ ಬ್ರಿಟಿಷರು ಪ್ರತಾಪಸಿಂಹನನ್ನು ‘‘ಮರಾಠಾ ಛತ್ರಪತಿ’’ಯನ್ನಾಗಿ ಮಾಡುತ್ತೇವೆಂದು ತಂತ್ರ ಹೂಡಿದರು. ಇದಕ್ಕೆ ಪ್ರತಾಪಸಿಂಹ ಮನಸೋಲಲಿಲ್ಲ. ಉಪಾಯಗಾಣದ ಬ್ರಿಟಿಷರು ಪ್ರತಾಪಸಿಂಹ ಸೋದರನಾದ ಅಪ್ಪಾಸಾಹೇಬನನ್ನು ಎತ್ತಿಕಟ್ಟಿ ೫.೯.೧೮೩೯ರಂದು ಪ್ರತಾಪಸಿಂಹನನ್ನು ಸತಾರಾ ಸಂಸ್ಥಾನದಿಂದ ಪದಚ್ಯುತನನ್ನಾಗಿಸಿ ಅದಕ್ಕೆ ಅಪ್ಪಾಸಾಹೇಬನನ್ನು ನೇಮಿಸಿದರು.

ಮರಾಠಾ ರಾಜರಲ್ಲಿಯೇ ಅಪ್ರತಿಮನೆನಿಸಿದ ಪ್ರತಾಪಸಿಂಹನು ಸತಾರೆಯನ್ನು ಕಳೆದುಕೊಂಡು ವಿಚಲಿತನಾಗಲಿಲ್ಲ. ತನ್ನೆಲ್ಲ ಆಪ್ತವಲಯಗಳನ್ನು ಕೂಡಿಸಿ ಸತಾರೆಯನ್ನು ಮರಳಿ ಪಡೆಯಲೆತ್ನಿಸಿದ. ಇದರ ಸುಳಿವನ್ನರಿತ ಬ್ರಿಟಿಷರು ಪ್ರತಾಪಸಿಂಹನನ್ನು ಬಂಧಿಸಿ ಮಾಸಿಕ ಹತ್ತು ಸಾವಿರ ರೂಪಾಯಿಗಳ ರಾಜಧನ ನೀಡಿ ಬನಾರಸಕ್ಕೆ ಕಳಿಸದರು.

ಸತಾರೆಯ ದಿವಾನರಾಗಿದ್ದ ದತ್ತಾತ್ರೇಯರಾಯರ ಮಗ ನರಸಿಂಹ ಪೇಟಕರ್ ಎಂಬಾತನು ಪ್ರತಾಪಸಿಂಹರಿಗೆ ಸ್ವಾಮಿನಿಷ್ಠನಾಗಿದ್ದ. ಆತ ಬ್ರಾಹ್ಮಣನಾಗಿದ್ದು ಬಾಲ್ಯದಲ್ಲಿ ಸಿಡುಬು ರೋಗಕ್ಕೆ ಬಲಿಯಾಗಿದ್ದರಿಂದ ಮುಖ ತುಂಬ ಸಿಡುಬು ಕಲೆಗಳಾಗಿದ್ದವಲ್ಲದೇ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದ. ನರಸಿಂಹನು ಸತಾರೆಯನ್ನು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದ. ಆತ ಸತಾರಾ ಬಿಟ್ಟು ಪುಣೆ, ನಾಸಿಕ, ಅಹಮ್ಮದ್‌ನಗರ, ರಾಯಚೂರು, ದೇವದುರ್ಗ ಮುಂತಾದೆಡೆ ತಿರುಗಾಡಿ ಬ್ರಿಟಿಷರನ್ನು ಎದುರಿಸಲು ತನ್ನದೇ ಆದ ಸೈನಿಕ ಸಂಘಟನೆಯಲ್ಲಿ ತೊಡಗಿದ.

ಪ್ರತಾಪಸಿಂಹನನ್ನು ಬನಾರಸಿಗೆ ಕಳಿಸುವ ಪೂರ್ವದಲ್ಲಿ ನಿಂಬ ಎಂಬ ಊರಲ್ಲಿ ಕೆಲಕಾಲವಿರಲು ಬ್ರಿಟಿಷರು ಅವಕಾಶ ನೀಡಿದ್ದರು. ಇದನ್ನರಿತ ನರಸಿಂಹನು ನಿಂಬಕ್ಕೆ ತೆರಳಿ ತಾನು ನಡೆಸಿದ ಪ್ರಯತ್ನಗಳನ್ನು ವಿವರಿಸಿದ. ನರಸಿಂಹನ ಪ್ರಯತ್ನದಲ್ಲಿ ಆಶಾಭಾವನೆ ತಾಳಿದ ಪ್ರತಾಪಸಿಂಹರು ಇವನಿಂದಲಾದರೂ ಸತಾರೆ ಸ್ವತಂತ್ರವಾಗಲೆಂದು ತಮ್ಮ ಬಳಿಯಿದ್ದ ಸಂಸ್ಥಾನದ ಬೆಳ್ಳಿ ಮೊಹರನ್ನು ನೀಡಿದರು. ಆನಂತರ ಅವರಿಬ್ಬರ ಭೆಟ್ಟಿ ನಡೆಯಲಿಲ್ಲ. ಮುಂದೆ ೧೫.೧೦.೧೮೪೭ರಂದು ಪ್ರತಾಪಸಿಂಹರು ನಿಧನರಾದರೆಂದು ತಿಳಿದುಬರುತ್ತದೆ.

ಮಹಾರಾಜರಿಂದ ಮೊಹರನ್ನು ಪಡೆದ ನರಸಿಂಹನು ಅದರ ಮೂಲಕ ಸಂಸ್ಥಾನದ ಜನರಲ್ಲಿ ನಂಬಿಕೆ ಹುಟ್ಟಿಸಿದ. ನೂರಾರು ಸೈನಿಕರನ್ನು ಸಂಘಟಿಸಿದ. ಅರಬ ಜನಾಂಗದ ಮುಖಂಡ ಜಮೇದಾರ್ ಸಲೀಮ್ ಬಿನ್ ಅಬೂದ್ ಉರುಫ್ ಕೊಹೆರೆನ್ ಎಂಬಾತ ಸುರಪುರದ ನಾಯಕರಲ್ಲಿದ್ದುದನ್ನರಿತು ಸುರಪುರಕ್ಕೆ ಹೋಗಿ ಕೊಹೆರೆನ್‌ನನ್ನು ಕಂಡನು. ಕೊಹೆರೆನ್‌ನೊಂದಿಗೆ ತಾಲೂಬ್ ಬಿನ್ ಆಲಿಯನ್ನು ಕಂಡು ತನ್ನೊಂದಿಗೆ ಹೋರಾಟಕ್ಕೆ ಒಪ್ಪಂದ ಮಾಡಿಕೊಂಡು, ಅವರಿಗೆ ವೇತನವನ್ನು ಗೊತ್ತುಪಡಿಸಿದ ಆತನ ಪ್ರಯತ್ನ ಹುಸಿ ಹೋಗಲಿಲ್ಲ. ಸೈನ್ಯದ ತುಕಡಿ ಯೊಂದನ್ನು ಸಿದ್ಧಪಡಿಸಿದ.

ನೇರವಾಗಿ ಸತಾರೆಗೆ ಮುತ್ತಿಗೆ ಹಾಕುವಂತಿರಲಿಲ್ಲ. ನರಸಿಂಹನು ಯೋಚಿಸಿ ಆಗ ಸತಾರಾ ಸಂಸ್ಥಾನದ ವಶದಲ್ಲಿದ್ದ ಬಾದಾಮಿ ಕೋಟೆಗೆ ಮೊದಲಿಗೆ ಲಗ್ಗೆ ಹಾಕಬೇಕೆಂದು ನಿರ್ಧರಿಸಿದ. ಅದರಂತೆ ಅವನ ಸೈನಿಕ ತುಕಡಿಯು ದೇವದುರ್ಗದಿಂದ ಲಿಂಗಸೂಗೂರು, ಹನುಮಸಾಗರ, ಹನುಮನಹಾಳ, ಜಾಲೀಹಾಳ ಮಾರ್ಗವಾಗಿ ಬಾದಾಮಿಗೆ ಬಂದಿತು.

ದಿನಾಂಕ ೨೭.೫.೧೮೪೧ರಂದು ನರಸಿಂಹನ ನೇತೃತ್ವದಲ್ಲಿ ಬಾದಾಮಿಯ ಕೋಟೆಗೆ ಮುತ್ತಿಗೆ ನಡೆದು ಬಾದಾಮಿಕೋಟೆ ನರಸಿಂಹನ ಕೈವಶವಾಯಿತು. ಬಾದಾಮಿ ಕೋಟೆಯನ್ನು ವಶಪಡಿಸಿಕೊಂಡ ನರಸಿಂಹ ಪೇಟಕರನು ಕೋಟೆಯ ಮೇಲೆ ಸಾತಾರ ಸಂಸ್ಥಾನದ ಧ್ವಜವನ್ನು ಹಾರಿಸಿದನು. ‘ನರಸಿಂಹ ಛತ್ರಪತಿ’ ಎಂಬ ಬಿರುದುಗಳಿಸಿ ಆ ಪ್ರದೇಶವನ್ನು ಆಳಹತ್ತಿದನು. ಅಲ್ಲಿದ್ದ ಬ್ರಿಟಿಷ್ ಖಜಾನೆ ವಶಪಡಿಸಿಕೊಂಡ. ರೈತರಿಗೆ ಜಮೀನು ಹಂಚಿದನೆಂಬುದು ತಿಳಿದುಬರುತ್ತದೆ. ಅಲ್ಲಿಂದ ಆತ ಸತಾರಾ ಸಂಸ್ಥಾನದ ವಿಮೋಚನೆಗೆ ಗುಪ್ತ ಚಟುವಟಿಕೆ ನಡೆಸುತ್ತಿದ್ದಂತೆ ಬ್ರಿಟೀಷರಿಗೆ ಈ ವಿಷಯ ಗೊತ್ತಾಗಿ ನರಸಿಂಹನನ್ನು ಹತ್ತಿಕ್ಕಲು ಸಿದ್ಧರಾದರು. ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದ ಬೆಟ್ಟಿಂಗಟನ್ ಮತ್ತು ಸೈನಿಕಾಧಿಕಾರಿಯಾಗಿದ್ದ ಎ.ಎನ್.ಷಾ ಅವರು ಧಾರವಾಡ ಹಾಗೂ ಬೆಳಗಾವಿಯಿಂದ ಬ್ರಿಟಿಷ್ ಸೈನಿಕ ಪಡೆಗಳನ್ನು ತೆಗೆದುಕೊಂಡು ಬಾದಾಮಿಗೆ ಬಂದು ಮುತ್ತಿಗೆ ಹಾಕಿ ನರಸಿಂಹ ಪೇಟಕರ್‌ನನ್ನು ಕ್ಷಿಪ್ರ ಅವಧಿಯಲ್ಲಿ ಬಂಧಿಸಿದರು. ಧಾರವಾಡದ ಕೋರ್ಟಿನಲ್ಲಿ ನರಸಿಂಹನನ್ನು ಹಾಜರುಪಡಿಸಿದರು. ಈ ನ್ಯಾಯಾಧೀಶರು ಮೊದಲಿಗೆ ನರಸಿಂಹನಿಗೆ ಮರಣದಂಡನೆ ವಿಧಿಸಿ ಆನಂತರ ಅದನ್ನು ಬದಲಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸುವರು. ಆನಂತರ ಅವನನ್ನು ಅಹಮದಾಬಾದ್ ಜೈಲಿಗೆ ಕಳಿಸಿದರೆಂದೂ ಅಲ್ಲಿ ಆತ ೧೮೬೨ರಲ್ಲಿ ಮರಣ ಹೊಂದಿದನೆಂದು ತಿಳಿದುಬರುತ್ತದೆ.

ಹೀಗೆ ಬಾದಾಮಿ ಬಂಡಾಯವು ಬ್ರಿಟಿಷರ ವಿರುದ್ಧ ನಡೆದ ಕ್ಷಿಪ್ರಕ್ರಾಂತಿಯಾಗಿದ್ದು ಅದು ವಿಫಲವಾಗಿದ್ದರೂ ಅದಕ್ಕೊಂದು ಮಹತ್ವವಿದೆ. ಬಾದಾಮಿ  ಬಂಡಾಯ ಕುರಿತು ರಚಿಸಲಾಗಿದ್ದ ಜಾನಪದ ಲಾವಣಿಯನ್ನು ಜೆ.ಎಫ್.ಫ್ಲೀಟ್ ಅವರು ಸಂಗ್ರಹಿಸಿ ‘ಇಂಡಿಯನ್ ಎಂಟಿಕ್ವೆರಿ’ ಯಲ್ಲಿ ಪ್ರಕಟಿಸಿದ್ದಾರೆ. ಈ ಬಗೆಗೆ ಹೆಚ್ಚಿನ ಶೋಧನೆ ನಡೆಯಬೇಕಾಗಿದೆ.

 

ಆಧಾರ ಗ್ರಂಥಗಳು

೧. Source Material for the History of the Freedom Movement in India, Bombay Govt, Records Vol. ೧

೨.  Civil Disurbances during the British Rule in India.

೩. Story of Satara, B.D.Basu

೪. ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ತಿ.ತಾ.ಶರ್ಮಾ

೫. The Freedom Movement in Karnataka Vol. ೧, M.V. Krishna Rao and G.S.Halappa.