ಧಡಲ್ ಎಂದು ಬಂಡೆಯೊಂದು ಸಿಡಿದ ಸದ್ದು! ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ ಕಿವಿಗಪ್ಪಳಿಸಿತು. ಐಹೊಳೆಯ ದುರ್ಗಗುಡಿಯ ಆವರಣದಲ್ಲಿ ನಿಂತವನ ಗಮನ ಅತ್ತ ಸರಿದಾಡಿತು. ನನ್ನೊಂದಿಗಿದ್ದ ಪ್ರವಾಸಿ ಮಾರ್ಗದರ್ಶಿ ಅಶೋಕ್ ಮಾಯಾಚಾರ ನನ್ನ ಗಮನವನ್ನು ಅರ್ಥ ಮಾಡಿಕೊಂಡವನಂತೆ ಬೆನಕನವಾರಿ ‘ಗುಡ್ಡದಾಗ ಬಂಡೀ ಒಡಿಲಿಕತ್ತಾರ‌್ರೀ’ ಎಂದು ಆ ಗುಡ್ಡದೆಡೆಗೆ ಕೈ ಮಾಡಿ ತೋರಿಸಿದ. ಐಹೊಳೆಯ ದಕ್ಷಿಣಕ್ಕೆ ಮೂರು ಕಿಲೋ ಮೀಟರ್ ದೂರದಲ್ಲಿ ಮೈಚಾಚಿಕೊಂಡು ಬಿದ್ದ ವಿಶಾಲವಾದ ಗುಡ್ಡವದು. ‘ಗುಡ್ಡದಾಗಿರುವ ಬಂಡೆಗಳನ್ನ ಒಡೆದು ಅವನ್ನ ಚಪ್ಪಡಿ (ಫರಸಿ) ಕಲ್ಲನ್ನಾಗಿಸಿ ಮಾರಾಟಾ ಮಾಡ್ತಾರ‌್ರೀ’ ಅಶೋಕ್ ಹೇಳುತ್ತಿದ್ದ. 

ಐಹೊಳೆಯ ಶಿಲ್ಪ ವೈಭವಕೆ ಪೂರಕವಾಗಿ ಕಂಗೊಳಿಸುತ್ತಿದ್ದ ಹಸಿರಿನಿಂದಾವೃತ ಬೆನಕನವಾರಿ ಗುಡ್ಡ ಇಟ್ಟ ಸಿಡಿಮದ್ದಿನಿಂದಾಗಿ ಬೋಳಾಗುತ್ತಿತ್ತು. ಐಹೊಳೆಯ ಬೆನಕನವಾರಿ ಗುಡ್ಡವೊಂದೇ ಏಕೆ? ಪಟ್ಟದಕಲ್ಲು ಬಾದಾಮಿ ಮುಂತಾದ ಕಡೆಗಳಲ್ಲಿ ಕಣ್ಸೆಳೆಯುತ್ತಿರುವ ಕೆಂಪು ಬಣ್ಣದ ಬೃಹತ್ ಶಿಲಾಬಂಡೆಗಳು ಕಲ್ಲು ಒಡೆಯುವವರ ಕೆಂಗಣ್ಣಿಗೆ ಬಲಿಯಾಗಿವೆ. ಮತ್ತಷ್ಟು ಬಲಿಯಾಗುತ್ತಲಿವೆ. ಈ ಪರಿಸರದಲ್ಲಿ ಅಲೆಯುವಾಗ ಕಲ್ಲು ಒಡೆಯುವ ಸದ್ದು ಸಾಮಾನ್ಯವೆನಿಸುತ್ತದೆ. ಕಲ್ಲು ಚಪ್ಪಡಿಗಳಿಗಾಗಿ ಚಂದದ ಬಂಡೆಗಳನ್ನೇ ಒಡೆಯುವ ಆ ಮೂಲಕ ನಿಸರ್ಗ ಸಂಪತ್ತನ್ನು ಹಾಳು ಮಾಡುವ ಈ ವ್ಯವಸ್ಥಿತ ವ್ಯವಹಾರದ ಬಗ್ಗೆ ಒಂದಿಷ್ಟು ಚರ್ಚಿಸಿ ಆ ಕುರಿತ ವಿಚಾರವನ್ನು ಅಲ್ಲಿಗೇ ಬಿಟ್ಟೆ.

ಆದರೆ ಮುಂದೆ ಕೆಲ ದಿನಗಳಲ್ಲಿ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಉದ್ಘಾಟನೆಗೆಂದು ನನ್ನೊಂದಿಗೆ ಅಂದು ವೇದಿಕೆಯಲ್ಲಿದ್ದ ಡಾ. ಶೀಲಾಕಾಂತ ಪತ್ತಾರ ತಮ್ಮ ಮಾತುಗಳ ನಡುವೆ ಬೆನಕನವಾರಿಯ ಗುಡ್ಡದ ಬಂಡೆ ಒಡೆಯುವ ಕೆಲಸದ ಬಗ್ಗೆ ಹೇಳುತ್ತ ‘ಬೆನಕನವಾರಿ ಗುಡ್ಡದಾಗ ಚಾಲುಕ್ಯರದೆನ್ನಬಹುದಾದ ಜೈನ ದೇವಾಲಯ ಇದೆ. ಅದರ ಸಮೀಪ ಬಂಡೆ ಒಡೆಯುವ ಕೆಲ್ಸ ನಡೆದಿದೆ. ಆ ಗುಡಿ ಗಂಡಾಂತರದಲ್ಲಿದೆ ಎಂದರು. ಬಂಡೆ ಸ್ಫೋಟಗೊಂಡ ಸದ್ದು ಆ ಕ್ಷಣದಲ್ಲಿ ಮತ್ತೆ ಮಾರ್ದನಿಸಿದಂತಾಯಿತು. ಕೂಡಲೆ, ಕೆಮರಾ ಎತ್ತಿಕೊಂಡು ಅಶೋಕ್ ಮಾಯಾಚಾರನೊಂದಿಗೆ ಬೆನಕನವಾರಿಯ ಬೆನ್ನಹತ್ತಿ ನಡದೇ ಬಿಟ್ಟೆ. ಐಹೊಳೆಯಿಂದ ಪಟ್ಟದಕಲ್ಲಿಗೆ ಸಾಗುವ ರಸ್ತೆಯಲಿ ಸುಮಾರು ಮೂರು ಕಿಲೋಮೀಟರ್ ಬಂದರೆ ಬೆನಕನವಾರಿ ಗುಡ್ಡದ ಸಮೀಪಕ್ಕೆ ಬರಬಹುದು. ಬಂಡೆ ಒಡೆಯುವ ಸ್ಥಳದಿಂದ ಸಿದ್ಧಗೊಂಡ ಚಪ್ಪಡಿ ಕಲ್ಲುಗಳನ್ನು ಹೊತ್ತು ತರಲು ಗುಡ್ಡದ ತುದಿಯಿಂದ ಮುಖ್ಯ ರಸ್ತೆಗೆ ಟ್ರ್ಯಾಕ್ಟರ್ ಓಡಾಡುವ ಕಲ್ಲುರಸ್ತೆ ಇದೆ. ಈ ರಸ್ತೆಯಲ್ಲಿ ಏಳುತ್ತ ಬೀಳುತ್ತ ಏದುಸಿರು ಬಿಡುತ್ತ ಮೇಲೇರಬೇಕು. ಕಲ್ಲು ಒಡೆಯುವವರು ಸ್ಥಳೀಯರಿಂದ ಬೆನಕಪ್ಪನೆಂದು ಗುರುತಿಸಿಕೊಳ್ಳುವ ಆ ಜೈನ ದೇವಾಲಯದ ಇರುವಿಕೆಯ ಬಗ್ಗೆ ‘ಹಿಂಗs ಹೋಗ್ರೀ’ ಎಂದು ಮಾರ್ಗ ತೋರಿಸುತ್ತಾರೆ. ಅಶೋಕ ಮಾಯಾಚಾರ ಹಿಂತಿರುಗಿ ಹೋಗಿ ಕಲ್ಲು ಒಡೆಯುವ ವ್ಯಕ್ತಿಯೋರ್ವನನ್ನು ಕರೆತಂದ. ಒಂದಿಷ್ಟು ಬಂಡೆಗಳ ನಡುವೆ ಸರ್ಕಸ್ ಮಾಡಿ, ಗಿಡಮರಗಳ ನಡುವೆ ಅಪಾಯಕರ ಹೆಜ್ಜೆಗಳನ್ನಿಟ್ಟು ಆತನ ಹಿಂದೆ ನಡೆಯುತ್ತಿದ್ದಂತೆ ಪುಟ್ಟ ಜೈನ ಗುಹಾಲಯ ಕಂಡು ಬಂತು. ಬೃಹತ್ ಬಂಡೆಯೊಂದರ ಮೇಲೆ ಕೊರೆದ ಗುಹೆಯ ಒಳಭಾಗದಲ್ಲಿ ಸುಮಾರು ಐದು ಅಡಿ ಎತ್ತರದ ಧ್ಯಾನಾಸಕ್ತ ಜಿನ ಮೂರ್ತಿ ರೂಪಿತಗೊಂಡಿತ್ತು. ಒಂದಿಷ್ಟು ಭಗ್ನಗೊಂಡ ಶಿಲಾ ಮೂರ್ತಿಗಳು ಕೆಳಗುರುಳಿದ ಶಿಲಾಕಂಭಗಳು ಅಲ್ಲಿ ಕಂಡುಬರುತ್ತವೆ. ಆ ಸ್ಥಳದಲ್ಲಿ ನಿಂತೊಮ್ಮೆ ಐಹೊಳೆಯತ್ತ ಕಣ್ಣು ಹಾಸಿದರೆ ಚಂದದ ನೋಟ ದಕ್ಕುತ್ತವೆ. ಗುಡ್ಡದ ಕೆಳಗಿರುವ ಬೆನಕನವಾರಿ ಎಂಬ ಹಳ್ಳಿಯವರಿಗೆ ಈ ಜಿನ ಮೂರ್ತಿ ಬೆನಕಪ್ಪನಾಗಿ ಗುರುತಿಸಿಕೊಳ್ಳುತ್ತದೆ. ಆಗಾಗ್ಗೆ ಆ ಹಳ್ಳಿಗರು ಅಲ್ಲಿಗೆ ಬರುವುದುಂಟಂತೆ. ಎರಡು ದಶಕಗಳ ಹಿಂದೆ ಸುಮಾರು ಕಾಲು ಶತಮಾನದಷ್ಟು ಹಿಂದೆಯೇ ನಾಡಿನ ಖ್ಯಾತ ಪುರಾತತ್ವ ವಿದ್ವಾಂಸರಾದ ಡಾ. ಅ. ಸುಂದರ ಇದನ್ನು ಗುರುತಿಸಿದ್ದಾರೆ. “ಚಾಲುಕ್ಯರ ಕಾಲದ ಶಿಲ್ಪಗಳು” ಎಂಬ ವಿಷಯದ ಮೇಲೆ ಮಹಾಪ್ರಬಂಧ ಬರೆದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕಿ ಕೆರೊಲ್ ರ್ಯಾಡ್‌ಕ್ಲಿಪ್ ತನ್ನ ಪ್ರಬಂಧದಲ್ಲಿ ಈ ಜಿನ ಮೂರ್ತಿಯ ಇರುವಿಕೆಯ ಬಗ್ಗೆ ೧೯೮೧ರಲ್ಲಿಯೇ ಬರೆದಿದ್ದಾಳೆ!

‘ಚಾರಣ ಮಾಡಿ ಏನನ್ನೋ ಪತ್ತೆ ಹಚ್ಚಿದೆವು, ನೋಡಿದೆವು’ ಎಂಬ ಹುಮ್ಮಸ್ಸಿನಲ್ಲಿ ಕೆಳಗಿಳಿಯುತ್ತಿದ್ದಂತೆ ಐಹೊಳೆ ಕಡೆಯಿಂದ ಮತ್ತೊಂದು ಭಾರಿ ಬಂಡೆ ಸಿಡಿದ ಸ್ಫೋಟ ಕಿವಿಗಪ್ಪಳಿಸಿತು. ಅಶೋಕ್ ಅಲ್ಲೇ ನೋಡ್ರೀ ಎಂದು ಕೈತೋರಿಸಿದ. ಮಲಪ್ರಭೆಯ ದಂಡೆಗೆ ಹೊಂದಿಕೊಂಡಂತಿದ್ದ ದೊಡ್ಡ ಬಂಡೆಗೆ ಮದ್ದನ್ನಿಟ್ಟು ಸ್ಫೋಟಿಸಿದ್ದರು. ‘ಆ ಸ್ಫೋಟಗೊಂಡ ಬಂಡೆ ಈ ಬೆನಕಪ್ಪನ ಗುಡ್ಡದ್ದು! ಐತಿಹಾಸಿಕ ಸ್ಮಾರಕವದು. ಹಾಳಾಗುತ್ತೆ. ಬಂಡೆ ಒಡೆಯಬೇಡಿ’ ಎಂದು ಹೇಳುವ ಧೈರ್ಯವನ್ನು ಯಾರೂ ಆ ಪರಿಸರದಲ್ಲಿ ತೋರಿಸಿಲ್ಲ. ಈ ಪರಿಸರದ ಚಂದದ ಶಿಲಾ ಸಮೂಹಗಳು ಸ್ಫೋಟಗೊಳ್ಳುತ್ತಲೇ ಇವೆ. ಅದರ ಸದ್ದಡಗಿಸು ವವರ್ಯಾರು?