ಇತ್ತೀಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯದ ಸಂಶೋಧನಾ ತಂಡ ಪಟ್ಟದಕಲ್ಲಿನ ದೇವಾಲಯ ಪರಿಸರದಲ್ಲಿ ಆ ದೇವಾಲಯಗಳ ನಿರ್ಮಾಣಕ್ಕೆ ಅತ್ಯುತ್ತಮ ಮಟ್ಟದ ಶಿಲಾಸಾಮಗ್ರಿಯನ್ನು ಒದಗಿಸಿದ ಪ್ರಾಚೀನ ಕಲ್ಗಣಿ ನಿವೇಶನವನ್ನು ಪ್ರಪ್ರಥಮವಾಗಿ ಸಂಶೋಧಿಸಿದೆ.

ಗಣಿಯಿರುವ ಸ್ಥಳ ಮತ್ತು ಅದರ ಮಹತ್ವ

ಈ ನಿವೇಶನಗಳು ವಿಶ್ವಪರಂಪರೆ ಸ್ಮಾರಕಗಳೆಂದು ಪ್ರಸಿದ್ಧವಾಗಿರುವ ವಿರೂಪಾಕ್ಷ ದೇವಾಲಯ ಗುಂಪಿನಿಂದ ನೇರ ಉತ್ತರಕ್ಕೆ ೫ ಕಿ.ಮೀ ದೂರದಲ್ಲಿ ಜೈನ ದೇವಾಲಯದ ಉತ್ತರಕ್ಕೆ ೩.೫ ಕೀ.ಮೀ ದೂರದಲ್ಲಿವೆ. ಸುಮಾರು ೨ ಕಿ.ಮೀ ದೂರದವರೆಗೆ ಹರಡಿರುವ ಮರಳುಗಲ್ಲಿನ ಬೆಟ್ಟ ಸಾಲುಗಳಲ್ಲಿ ರಾಜ್ಯ ಸರ್ಕಾರದಿಂದ ರಕ್ಷಿತವಾದ ಅರಣ್ಯ ಪ್ರದೇಶದಲ್ಲಿದೆ. ಸ್ಥಳೀಯವಾಗಿ ಮೋಟರ ಮೊ(ಮ)ರಡಿ, ಶಂಕರಲಿಂಗನ ಗುಂಡು ಎಂದು ಗುರುತಿಸಲಾಗುವ, ಪರಸ್ಪರ ೧ ಕಿ.ಮೀ. ದೂರದಲ್ಲಿರುವ ಅಕ್ಕರಗಲ್ಲು ಗ್ರಾಮದ ವ್ಯಾಪ್ತಿಯಲ್ಲಿರುವ, ನೆಲಮಟ್ಟದಿಂದ ಸು. ೩೦೦ರಿಂದ ೩೮೦ ಅಡಿ ಎತ್ತರದ ಗುಡ್ಡಗಳಲ್ಲಿ ಈ ನಿವೇಶನಗಳಿವೆ. ಸ್ಥಳೀಯ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಿಗಳಾದ ಸರ್ವಶ್ರೀ ಸೋಮಶೇಖರ, ಎಸ್. ಕುಡಚಿ, ರಮೇಶ್, ಬಿ. ತಲವಾರ, ಈರಣ್ಣ ಬಿ. ಅಕ್ಕಿ ಹಾಗೂ ಸ್ಥಳೀಯ ಗಣಿ ಕಾರ್ಮಿಕರ ನೆರವಿನಿಂದ ಈ ಗಣಿ ನಿವೇಶನವನ್ನು ಎರಡು ದಿನಗಳ ಪರಿಶ್ರಮದಿಂದ ಕಂಡು ಹಿಡಿಯಲಾಯಿತು.

ದೇವಾಲಯ ಸಮೂಹ ಕಟ್ಟುವ ಸ್ಥಳಕ್ಕೆ ಅತ್ಯಂತ ಸಮೀಪದಲ್ಲಿ ಉತ್ತಮ ಶಿಲಾ ಸಾಮಗ್ರಿ ಅಖಂಡವಾಗಿ ದೊರೆಯುವ ಗಣಿ ಪ್ರದೇಶವನ್ನು ಆಯ್ಕೆ ಮಾಡುವಲ್ಲಿ ಅಂದಿನ ಸ್ಥಪತಿ, ಶಿಲ್ಪಿಗಳು ತೋರಿರುವ ತಾಂತ್ರಿಕ ಕೌಶಲ, ಉತ್ತಮ ನಿರ್ಮಾಣ ಸಾಮಗ್ರಿಯಾದ ಕಲ್ಲಿನ ವಿಶಿಷ್ಟ ಗುಣಲಕ್ಷಣಗಳ ಅರಿವು ಮೂಲಬಂಡೆಗಳಿಂದ ಬೇರ್ಪಡಿಸಿದ ಪ್ರತಿ ಶಿಲಾ ಖಂಡದ ಗುಣಾವಗುಣಗಳನ್ನು ಆಧರಿಸಿ ಅವುಗಳನ್ನು ರೂಪಿಸಬಹುದಾದ ವಾಸ್ತು ಭಾಗಗಳನ್ನು ಗುರುತಿಸಲು ವಿಶಿಷ್ಟ ಚಿಹ್ನೆಗಳು ಮುಂತಾದವು ಈ ನಿವೇಶನದ ವಿಶಿಷ್ಟ ಅಂಶಗಳಾಗಿವೆ.

ಗಣಿ ಕೈಗಾರಿಕೆ ಮತ್ತು ಬಳಸಿದ ವಿಧಾನಗಳನ್ನು ಕುರಿತ ಕುರುಹುಗಳು

ಶಂಕರಲಿಂಗನಗುಂಡು ಮತ್ತು ಮೋಟರ ಮರಡಿ ಈ ಎರಡೂ ನಿವೇಶನಗಳಲ್ಲಿ ಉತ್ತಮಮಟ್ಟದ ಶಿಲಾಖಂಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ನಿರಂತರ ಗಣಿಗಾರಿಕೆ ನಡೆದಿದ್ದ ಕುರುಹುಗಳು ಕಂಡು ಬಂದಿವೆ. ನಿವೇಶನವಿರುವ ಸ್ಥಳವು ರಾಜ್ಯ ಸರ್ಕಾರದಿಂದ ರಕ್ಷಿತ ಅರಣ್ಯದ ಮಿತಿಯೊಳಗಿರುವುದರಿಂದ ಈ ಕುರುಹುಗಳು ಸಾಕಷ್ಟು ಉತ್ತಮವಾಗಿಯೇ ಉಳಿದಿವೆ. ಸ್ಥೂಲ ಸ್ಥಳ ಪರಿಶೋಧನೆಯಿಂದ, ಹಂತ ಹಂತವಾಗಿ ಅಚ್ಚುಕಟ್ಟಾಗಿ ಬಹುಕಾಲ ಗಣಿಗಾರಿಕೆ ನಡೆಸಿರುವುದರಿಂದ ವಿವಿಧ ಎತ್ತರಗಳಲ್ಲಿ ಉಂಟಾಗಿರುವ ಸಮತಟ್ಟಾದ ಮಜಲುಗಳು ಮೂಲ ಶಿಲೆಯ ಸವೆದ ಹೊರಪದರದಿಂದ ಕೂಡಿದ್ದು ನಿರ್ಮಾಣ ಕಾರ್ಯಕ್ಕೆ ಅನುಪಯುಕ್ತವೆನಿಸಿ, ಸ್ಥಳದಲ್ಲಿಯೇ ತಿರಸ್ಕೃತವಾದ ಶಿಲಾಖಂಡಗಳು, ಕಲ್ಲೆಬ್ಪಿಸಲು ಮಾಡಿರುವ ಉಳಿ ಗುರುತುಗಳು, ನಿರ್ದಿಷ್ಟ ವಾಸ್ತು ಭಾಗಕ್ಕಾಗಿ ಅವಶ್ಯಕ ಗಾತ್ರಗಳಿಗನುಗುಣ ವಾಗಿ ಕತ್ತರಿಸಿ, ನಿರ್ಮಾಣ ಸ್ಥಾನಕ್ಕೆ ಸಾಗಾಣಿಕೆಯ ವಿವಿಧ ಹಂತಗಳಲ್ಲಿ ಜೋಡಿಸಿರುವ ಆಯ್ದ ಕಲ್ಲುಗಳು, ಸ್ಥಪತಿ, ಶಿಲ್ಪಿ ಕಾರ್ಮಿಕರ ಹೆಸರಿರುವ ಕಿರು ಶಾಸನಗಳು, ಹಾಜರಾತಿ ಚಿಹ್ನೆಗಳು, ಪ್ರಾಣಿ, ದೇವತೆಗಳ ಚಿತ್ರಣಗಳು, ಗಣಿಕಾರ್ಯಕ್ಕೆ ಬಳಸಿದ ಉಪಕರಣಗಳು ಇಂತಹ ಕುರುಹುಗಳಲ್ಲಿ ಮುಖ್ಯವಾದವು.

ಬಹುಪಾಲು ತಿರಸ್ಕೃತ ಶಿಲಾಖಂಡಗಳನ್ನು ಸಾಗಾಣಿಕೆಗೆ ಅನುವಾಗುವಂತೆ ದಾರಿಯಲ್ಲಿ ಹಳ್ಳ ತಗ್ಗುಗಳನ್ನು ಮುಚ್ಚಲು, ಸಮತಟ್ಟಾಗಿಸಲು, ನಂತರದ ಕೆಲಸಗಳಿಗೆ ಅಟ್ಟಣಿಗೆಯಾಗಿ ಹೀಗೆ ನಾನಾ ರೀತಿಯಲ್ಲಿ ಉಪಯೋಗಿಸಲಾಗಿದೆ. ೨.೯೦ x ೦.೯೦ ಮೀ; ೨.೮೫ x ೦.೮೦ x ೦.೩೦ ಮೀ; ೨ x ೧.೨೦ ೧.೨೦ ಮೀ, ೧.೮೦ x ೧.೦೦ x ೧.೦೦ ಮೀ. ಮುಂತಾದ ಅಳತೆಗೆ ಸರಿಯಾದ, ಭಾರವಾಹಕ ವಾಸ್ತು ಭಾಗಗಳಾದ ಕಂಬ, ತೊಲೆ, ಬೋದಿಗೆ, ಕಂಬಪೀಠ, ಛಾವಣಿ ಫಲಕ ಮುಂತಾದವುಗಳನ್ನು ರೂಪಿಸಲು ಸೂಕ್ತವಾದ ಶಿಲಾಖಂಡಗಳನ್ನು ಇನ್ನೇನು ನಿರ್ಮಾಣ ಸ್ಥಾನಕ್ಕೆ ಸಾಗಿಸಲು ಸಿದ್ಧಮಾಡಿಟ್ಟಂತೆ ಕ್ರಮವಾಗಿ ಜೋಡಿಸಿಟ್ಟಿದೆ. ಕತ್ತರಿಸಿದ ಕಲ್ಲುಗಳು ಮೂಲಶಿಲೆಯ ಮೇಲೆ ೧೦.೬ ಸೆಂ.ಮೀ. ಅಳತೆಯ ೮-೧೦ ಸೆ.ಮೀ. ಆಳದ, ಇದೇ ಸ್ಥಳದಲ್ಲಿ ದೊರೆತಿರುವ ಉಳಿಯ ಅಳತೆಗೆ ಸರಿಹೊಂದುವ ಉಳಿ ಗುರುತುಗಳ ಸಾಲು ಗಮನಾರ್ಹವಾದುದು. ಉಳಿ ಮತ್ತು ಭಾರವಾದ ಸುತ್ತಿಗೆಯಿಂದ ಇಂತಹ ಆಳವಾದ ಗುರುತುಗಳನ್ನು ಸಮಾನಾಂತರದಲ್ಲಿ (೧೦-೧೫ ಸೆಂ.ಮೀ.) ಸಾಲಾಗಿ ಮೂಡಿಸಿ ನಂತರ ಅದೇ ಅಳತೆಯ ಮರದ ಬೆಣೆಗಳನ್ನು ಸಿಗಿಸಿ ತೋಯಿಸಿದ ಬೆಣೆ ವಿಧಾನದಿಂದ ಉದ್ದೇಶಿತ ಗಾತ್ರದ ಕಲ್ಲುಗಳನ್ನು ಎಬ್ಬಿಸಿರುವುದು ಕಂಡುಬರುತ್ತದೆ.

ಕಿರುಶಾಸನಗಳು

ಚಾಲುಕ್ಯ ಕಾಲದ ಕಲಾಕುಸುಮಗಳನ್ನು ಅರಳಿಸಿದ ಶಿಲ್ಪಿ ಶ್ರೇಷ್ಠರು, ಸ್ಥಪತಿಗಳನ್ನು ಕುರಿತ ವಿವರಗಳನ್ನು ನೀಡುವ ಅನೇಕ ಶಾಸನಗಳು ಐಹೊಳೆ, ಬಾದಾಮಿ, ಪಟ್ಟದಕಲ್ಲು ಮತ್ತಿತರ ಸ್ಥಳಗಳಲ್ಲಿ ಬೆಳಕಿಗೆ ಬಂದಿವೆ. ಈಗ ಗಣಿ ಪ್ರದೇಶದಲ್ಲಿ ದೊರೆತಿರುವ ಎಂಟು ಕಿರುಶಾಸನಗಳು ಬಹುಶಃ ಗಣಿಯ ಒಡೆಯ, ಸ್ಥಪತಿ, ಕಾರ್ಮಿಕರ ಹೆಸರನ್ನು ದಾಖಲಿಸಿವೆ. ಬಂಡೆಗಳನ್ನು ಕಡಿದು ಕಲ್ಲೆಬ್ಬಿಸಿರುವ ಎತ್ತರವಾದ ಗೋಡೆಯಂತಹ ಸ್ಥಳದಲ್ಲಿ; ಶಿಲ್ಪಿ ದುಡಿದು ದಣಿದು ವಿಶ್ರಾಂತಿಗಾಗಿ ಕುಳಿತುಕೊಳ್ಳಲು ಅನುವಾದ ಸಮತಟ್ಟಾಗಿ ನೆರಳಿರುವ ಸ್ಥಳಗಳಲ್ಲಿ ಈ ಶಾಸನಗಳನ್ನು ಬರೆದಿದೆ. ಲಿಪಿ ಲಕ್ಷಣದ ಆಧಾರದ ಮೇಲೆ ಇವನ್ನೂ ಕ್ರಿ.ಶ. ೮ನೆಯ ಶತಮಾನದ ಮಧ್ಯಭಾಗಕ್ಕೆ ಸೇರಿಸಬಹುದು. ದೊರೆತಿರುವ ೮ ಶಾಸನಗಳಲ್ಲಿ ಕೆಳಗಣ ೫ ಶಾಸನಗಳು ಶಂಕರಲಿಂಗನ ಗುಡ್ಡದಲ್ಲಿವೆ.

ಮೂರು ಸಾಲಿನ ಶಾಸನ

ಪೀಠದ ಮೇಲೆ ಕುಳಿತ ಗಣೇಶ, ಎಡಬಲಕ್ಕೆ ಒಂಟೆ ಮತ್ತು ನವಿಲಿನ ಚಿತ್ರಗಳ ಮಧ್ಯೆ ಈ ಶಾಸನವಿದೆ. ಗಣೇಶ ಚಿತ್ರದ ನೇರ ಕೆಳಗೆ ‘ಸಿದ್ಧಂ’ ಎಂದು ಮಂಗಳ ಸೂಚಕ ಚಿಹ್ನೆಯಿಂದಾರಂಭವಾಗುವ ಶಾಸನಪಾಠ (೫)

೧. ಶ್ರೀ ಧರ್ಮ ಸಂಗಾತನಾ ಕಣಿ

೨. ಪಪಾಕೋ ಆಜ್ಞಾವೋ ಪರಮ ಮಾ

೩. ಹೇಶ್ವರ (ಎರಡು ಸುರುಳಿಗಳು)

ಅರ್ಥ ಸ್ಪಷ್ಟವಾಗಿಲ್ಲ. ಬಹುಶಃ ಶ್ರೀ ಧರ್ಮನೆಂಬುವನ ಸಂಘಕ್ಕೆ ಸಂಬಂಧಿಸಿದ ಅಥವಾ ಒಡೆತನದ ಕ (ಗ) ಣಿ. ಪಪಾಕ ಅಂಜುವರು ಈ ಸಂಘದ ಇತರ ಸದಸ್ಯರು. ಇವರೆಲ್ಲ ಪರಮಮಾಹೇಶ್ವರರು ಎಂದು ಅರ್ಥಮಾಡಬಹುದು.

೨, ೩ ಮತ್ತು ೪ನೆಯ ಶಾಸನಗಳನ್ನು ದೊಡ್ಡ ಬಂಡೆಯ ಕೆಳಭಾಗದಲ್ಲಿ ಬರೆಯಲಾಗಿದೆ.

೨. ಭೂಭೃಗು- ಕಾರ್ಮಿಕನ ಹೆಸರಿರಬಹುದು.

೩. ಸ್ವಸ್ತಿಶ್ರೀ ನಿಧಿಪುರುಷನ್- ಶ್ರೀ ನಿಧಿಪುರುಷ ಎನ್ನುವನ ಹೆಸರು

೪. ಶ್ರೀ ಓವಜ ರ (ರ) ಸನ್ – ಶಿಲ್ಪಿ ಕಾರ್ಮಿಕನ ಹೆಸರು

೩-೪ ಈ ಎರಡು ಶಾಸನಗಳನ್ನು ಒಂದೇ ಎಂದು ಭಾವಿಸಿದರೆ ಓವಜರರಸ ಶ್ರೀ ನಿಧಿಪುರುಷ- ಉಪಾಧ್ಯಾಯ ಅಥವಾ ಶಿಲ್ಪಿಗಳ ದೊರೆಯಾದ ನಿಧಿಪುರುಷ ಎಂದು ಅರ್ಥಮಾಡಬಹುದು.

೫. ಹೆಚ್ಚು ಪ್ರಾಕೃತಿಕ ಸವೆತಕ್ಕೊಳಗಾದ ಕಲ್ಲಿನ ಮೇಲೆ ವೀರವಿದ್ಯಾಧರನೆಂಬ ವ್ಯಕ್ತಿಯ ಹೆಸರಿದೆ.

ಶ್ರೀ ಬಿ(ವಿ)ೀರ ವಿದ್ಯಾಧರನ್

ಗಣೇಶ, ಚೈತ್ಯ, ತ್ರಿಶೂಲ, ಶಂಖಗಳ ಜೊತೆ, ಇವಲ್ಲದೆ ಈ ಬಗೆಯ ಬಂಡೆಗಳ ಮೇಲೆ ಅಲ್ಲಲ್ಲಿ ವಿವಿಧಾಕಾರ ಗಾತ್ರಗಳಲ್ಲಿರುವ ‘ಶ್ರೀ’ ಅಕ್ಷರ ಪದೇ ಪದೇ ಕಾಣಿಸುತ್ತದೆ.

ಉಳಿದ ಮೂರು ಕಿರು ಶಾಸನಗಳು ಮೋಟರ ಮರಡಿ ಗುಡ್ಡದ ತುದಿಯಲ್ಲಿ ಸು. ೧೮ ಅಡಿ ಎತ್ತರವಾದ ಬಂಡೆಯ ಸಮತಟ್ಟಾದ ಗೋಡೆಯಂತಹ ಭಾಗದ ಮೇಲೆ ಬರೆಯಲ್ಪಟ್ಟಿವೆ. ತೀರ ಸವೆದು ಹಾಳಾಗಿರುವುದರಿಂದ ಅಕ್ಷರಗಳು ಸ್ಪಷ್ಟವಾಗಿಲ್ಲ.

೬. ಶ್ರೀ

೭. ಶ್ರೀ ಮರುಳನ್ (?)

೮. ಶ್ರೀ ಗುಣ ವಿಕ್ರ (ಮನ್)

ಈ ಕಿರು ಶಾಸನಗಳ ಜೊತೆ ತ್ರಿಶೂಲ, ಅಂಕುಶ, ಪರಶುಗಳ ಚಿತ್ರಣಗಳೂ ಇವೆ.

ಲಿಪಿಯ ದೃಷ್ಟಿಯಿಂದ ಇವು ೮ನೆಯ ಶತಮಾನಕ್ಕೆ ಸೇರಿದವಾದರೂ ಅಷ್ಟು ಉತ್ತಮವಾಗಿಲ್ಲ. ಇದಕ್ಕೆ ಬಹುಶಃ ಇವು ನುರಿತ ಕಲಾವಿದರಾದರೂ ಅಷ್ಟೇನು ಶಿಕ್ಷಿತರಲ್ಲದ ಗ್ರಾಮೀಣ ಜನರು ಬರೆದುದಾಗಿರುವುದು. ಆದರೂ ಇಲ್ಲಿ ದೊರೆಯುವ ಹೆಸರುಗಳು ಬಾದಾಮಿ ಮತ್ತಿತರ ಕಡೆಯಲ್ಲಿ ದೊರೆತಿರುವ ಹೆಸರುಗಳೊಂದಿಗೆ ಹೋಲಿಕೆ ಹೊಂದಿರುವುದು ಗಮನಾರ್ಹ.

ಸ್ಥಪತಿ ಮತ್ತು ಹಾಜರಾತಿ ಚಿಹ್ನೆಗಳು

ಗಣಿಯ ಬಂಡೆಗಳ ಮೇಲೆ ಮತ್ತು ಕತ್ತರಿಸಿಟ್ಟ ಕಲ್ಲುಗಳ ಮೇಲೆ ವಿಚಿತ್ರವೆನಿಸಬಹುದಾದ ಜ್ಯಾಮಿತೀಯ ಚಿಹ್ನೆಗಳು, ವಿವಿಧ ಶೈಲಿಯ ಶಂಖ, ತ್ರಿಶೂಲ ಮುಂತಾದ ಸ್ಥಪತಿ ಚಿಹ್ನೆಗಳೂ ದೊರೆತಿವೆ. ಇವುಗಳಲ್ಲಿ ಕನಿಷ್ಠ ಮೂರು ರೀತಿಯ ತ್ರಿಶೂಲಗಳು ಮುಖ್ಯವಾದವು. ಇವು ಮತ್ತು ಶಂಖದ ಗುರುತುಗಳು ಬಹುಶಃ ಅಧಿಕೃತ ಮಾಲೀಕತ್ವದ ಗಣಿಯ ಪ್ರದೇಶವನ್ನು, ಅಲ್ಲಿಂದ ತೆಗೆದ ಕಲ್ಲುಗಳನ್ನು ಗುರುತಿಸಲು ಉಪಯೋಗಿಸಿರಬೇಕು. ಅಲ್ಲದೆ ಸಂಕಲನ, ವ್ಯವಕಲನ ಚಿಹ್ನೆಗಳು ಬಿಡಿಯಾಗಿ, ವೃತ್ತವೊಂದಕ್ಕೆ ಹೊಂದಿಸಿ ಅದರೊಳಗೆ, ಹೊರಗೆ ಹೀಗೆ ಸಂಯುಕ್ತವಾಗಿ ಸಹ ಬಳಕೆಯಾಗಿರುವುದು ಕಂಡುಬರುತ್ತದೆ. ಇವುಗಳನ್ನು ಶಿಲೆಯ ಗುಣಮಟ್ಟ, ಗಾತ್ರ ಮುಂತಾದವುಗಳನ್ನು ಆಧರಿಸಿ, ಭಾರವಾಹಕ ವಾಸ್ತು ಅಂಗಗಳಾದ ಕಂಬ, ತೊಲೆ, ಬೋದಿಗೆ, ವಿತಾನಫಲಕ ಮೊದಲಾದವುಗಳನ್ನು ರೂಪಿಸಲೆಂದು ಗಣಿಯಲ್ಲಿಯೇ ವರ್ಗೀಕರಣ ಸೂಚನೆ ನೀಡಿ ನಿರ್ಮಾಣ ಸ್ಥಾನಕ್ಕೆ ಸಾಗಿಸಲು ಅಥವಾ ಇನ್ನಾವುದೇ ವಿಶಿಷ್ಟ ಬಳಕೆಗಾಗಿ ನೀಡಿರುವ ಸೂಚನೆಗಳೆಂದು ಭಾವಿಸಬಹುದು. ಕಲ್ಬಂಡೆಗಳು, ಬೇರ್ಪಡಿಸಿದ ಕಲ್ಲುಗಳ ಮೇಲೂ ಕಂಡುಬರುವ ಇವೇ ಗುರುತುಗಳು ವಿರೂಪಾಕ್ಷ, ಮಲ್ಲಿಕಾರ್ಜುನ, ಜೈನ ಮತ್ತು ಭದ್ರನಾಯಕನ ಜಾಲಿಹಾಳದ ಕೆಲವು ಗುಡಿಗಳ ನಿರ್ದಿಷ್ಟ ವಾಸ್ತು ಭಾಗಗಳ ಮೇಲೂ ಕಾಣುವುದು ಈ ಊಹೆಯನ್ನು ಸಮರ್ಥಿಸುತ್ತದೆ.

ನಿವೇಶನದ ಹಲವೆಡೆ ೨.೫ರಿಂದ ೩.೫ ಸೆಂ.ಮೀ. ಉದ್ದದ, ಉದ್ದನೆಯ ಹಾಗೂ ಅಡ್ಡ ಗೆರೆಗಳ ಸಮಾನಾಂತರದ ಸಾಲುಗಳನ್ನು ಕೊರೆದಿರುವುದು ಒಂದು ಗಮನಾರ್ಹ ಅಂಶ. ಇಂತಹ ಗೆರೆ ಸಾಲುಗಳೂ ಬಾದಾಮಿ, ಐಹೊಳೆ, ಜಾಲಿಹಾಳ ಮುಂತಾದ ಗಣಿ ಹಾಗೂ ನಿರ್ಮಾಣ ಪ್ರದೇಶಗಳೆರಡರಲ್ಲಿಯೂ ಇವೆ. ಪ್ರತಿ ಸಾಲಿನ ಕೊನೆಯಲ್ಲಿ ಉದ್ದನೆಯ ಒಂದು ಗೆರೆ ಎಳೆದು ಸಾಲಿನಲ್ಲಿನ ಒಟ್ಟು ಗೆರೆಗಳ ಮೊತ್ತ ಅಥವಾ ಕಾರ್ಮಿಕ ಅಥವಾ ಸಾಗಿಸಿದ ಕಲ್ಲುಗಳ ಮೊತ್ತವನ್ನು ಸೂಚಿಸುವ ಚಿಹ್ನೆಯೂ ಇದೆ. ಕೆಲವು ಗೆರೆಗಳ ಉದ್ದ ಅರ್ಧ ಮಾತ್ರ ಇದೆ. ಇವು ಬಹುಶಃ ಗಣಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರ ಹಾಜರಾತಿಯನ್ನು ಸೂಚಿಸುತ್ತವೆ.  ಈ ಗೆರೆಗಳ ಮೊತ್ತ ಏಳು ಅಥವಾ ಅದರ ಗುಣಕಗಳಲ್ಲಿದ್ದು, ಇಂದಿಗೂ ಇಂಥಹ ವೇತನ ಪಾವತಿಯು ವಾರ ಅಥವಾ ಅದರ ಗುಣಕಗಳಲ್ಲಿಯೇ ನಡೆಯುವುದನ್ನು ನೆನಪಿಸುತ್ತದೆ. ಚಲುಕ್ಯ ಕಾಲದ ವಿವಿಧ ವಾಸ್ತು ಕೇಂದ್ರ ಗಣಿ ಪ್ರದೇಶದಲ್ಲಿ ಕಂಡು ಬರುವ ಇಂತಹ ಚಿಹ್ನೆಗಳ ವಿಶೇಷ ಅಧ್ಯಯನದಿಂದ ಪ್ರಾಚೀನ ಗಣಿಗಾರಿಕೆ ಪದ್ಧತಿಯ ವ್ಯವಹಾರದ ಒಂದು ಉತ್ತಮ ಒಳನೋಟ ದೊರೆಯಬಹುದು.

ಕಬ್ಬಿಣದ ಉಪಕರಣಗಳು

ಚಾಲುಕ್ಯರ ಕಾಲದಲ್ಲಿ ಗಣಿಗಾರಿಕೆಗೆ ಉಪಯೋಗಿಸಿದ ಉಳಿ, ಸುತ್ತಿಗೆ ಮುಂತಾದ ಉಪಕರಣಗಳು ನಿವೇಶನದಲ್ಲಿ ದೊರೆತಿರುವುದು ಈ ಸಂಶೋಧನೆಯ ಒಂದು ಗಮನಾರ್ಹ ಅಂಶ. ಇಲ್ಲಿ ದೊರೆತ ಕಬ್ಬಿಣದ ಆಯತಾಕಾರದ (೧೦ ಸೆಂ.ಮೀ. ಉದ್ದ ಮತ್ತು ೬ ಸೆಂ.ಮೀ. ಗರಿಷ್ಠ ಅಗಲ) ಉಳಿಯು ಸುಮಾರು ೧.೨೫ ಕಿ.ಗ್ರಾಂ. ತೂಕವಿದೆ. ಮೊಂಡಾದ ಇದರ ತುದಿ ೧.೨ ಸೆಂ.ಮೀ. ದಪ್ಪವಿದೆ ಮತ್ತು ಬಡಿಯುವ ತುದಿಯಲ್ಲಿ ೪.೫ ಸೆಂ.ಮೀ. ದಪ್ಪವಾಗಿದೆ. ನಿರಂತರ ಬಳಕೆಯಿಂದ ಎರಡೂ ತುದಿಗಳು ಮೊಂಡಾಗಿವೆ. ಈ ಮೊದಲು ಹೇಳಿರುವಂತೆ ಗಣಿಯ ಕಲ್ಬಂಡೆಗಳು ಮತ್ತು ಶಿಲಾಖಂಡಗಳ ಮೇಲಿರುವ ಉಳಿ ಗುರುತುಗಳ ಅಳತೆ ಮತ್ತು ಈ ಉಳಿಯ ಗಾತ್ರಕ್ಕೆ ಹೊಂದಿಕೆ ಇರುವುದು ಸಹಜವೇ ಆಗಿದೆ. ಅದರಂತೆಯೇ ೨.೫ ಕಿ.ಗ್ರಾಂ ತೂಕ ೧೨ ಸೆಂ.ಮೀ. ಉದ್ದ, ಗರಿಷ್ಠ ೭ ಸೆಂ.ಮೀ. ವ್ಯಾಸವಿರುವ ಸಿಲಿಂಡರಿನಾಕಾರದ ಭಾರ ಸುತ್ತಿಗೆಯೂ ಇಲ್ಲಿ ದೊರಕಿದೆ. ಇದು ಮೊದಲಿಗೆ ಆಯಘನಾಕಾರದಲ್ಲಿದ್ದು ಕ್ರಮೇಣ ಬಳಕೆಯಿಂದಾಗಿ ದುಂಡಾದಂತೆ ಕಾಣುತ್ತದೆ. ಇದರ ಒಂದು ತುದಿಯಲ್ಲಿ ೪ ಸೆಂ.ಮೀ. ವ್ಯಾಸ, ೧ ಸೆಂ.ಮೀ. ಆಳವಿರುವ ಕುಳಿಯಿದ್ದು, ಇನ್ನೊಂದು ತುದಿ ಬಳಕೆಯಿಂದ ಚಕ್ಕೆ ಏಳುವಷ್ಟು ಸವೆದಿದೆ. ಸುತ್ತಿಗೆಯ ಮಧ್ಯೆ ಹಿಡಿಯನ್ನು ಜೋಡಿಸಲು ರಂಧ್ರವು ಇದೆ.

ಈ ಎರಡು ಉಪಕರಣಗಳ ಜೊತೆಯಲ್ಲಿ ಉಳಿಯನ್ನು ಕೆಂಪಾಗಿ ಕಾಯಿಸಿ ನೀರಿನಲ್ಲಿ ತೋಯಿಸಿ ಹದ ಮಾಡಲು ಬಳಸಿರಬಹುದಾದ ಕಲ್ಲಿನ ಸಣ್ಣ (೨೦ ಸೆಂ.ಮೀ. ಚೌಕ, ೨೨ ಸೆಂ.ಮೀ. ಎತ್ತರ) ಬೋಗುಣಿಯಂತಹ ವಸ್ತುಗಳೂ ಇಲ್ಲಿ ದೊರಕಿವೆ. ಈ ಬೋಗುಣಿಯ ಒಂದು ತುದಿಯಲ್ಲಿ ೧೫ ಸೆಂ.ಮೀ. ವ್ಯಾಸ ಮತ್ತು ಅಷ್ಟೇ ಆಳವಿರುವ ದುಂಡನೆಯ ಕುಳಿಯೂ ಇದೆ.

ಆಕರ ಸೂಚಿ

೧. ಬಾದಾಮಿ: ನೆಲೆ‑ಹಿನ್ನೆಲೆ, ಡಾ. ಶೀಲಾಕಾಂತ ಪತ್ತಾರ, ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

೨. ಮಲಪ್ರಭೆಯ ಮಡಿಲು, ಡಾ. ಶೀಲಾಕಾಂತ ಪತ್ತಾರ, ಬಾದಾಮಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬.

೩. ಚಾಲುಕ್ಯ‑ಪುಲಕೇಶಿ: ಪದನಿಷ್ಪತ್ತಿ, ಡಾ.ಹಂಪ ನಾಗರಾಜಯ್ಯ, ಸಾಧನೆ, ಬೆಂಗಳೂರು ವಿ.ವಿ. ಬೆಂಗಳೂರು.

೪. ಬಾದಾಮಿ ಶಾಸನ ಅರ್ಥ, ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ, ಬಾದಾಮಿ ಚಾಲುಕ್ಯ ಸಂಪದ (ಸಂ) ೨೦೦೮, ಬಾದಾಮಿ.

೫. ಕಪ್ಪೆ ಅರಭಟ್ಟ ಮತ್ತು ಪೊಲೆಕೇಶಿ, ಹೆಚ್.ಎಸ್.ಗೋಪಾಲರಾವ್, ಸಮದರ್ಶಿ (ಸಂ) ಮೈಸೂರು ೧೯೯೬.

೬. ಪೊಲಿಕೇಶಿ, ಪುಲಿಕೇಶಿ ಎಂಬ ಹೆಸರಿನ ಅರ್ಥವೇನು, ಎನ್.ಲಕ್ಷ್ಮಿನಾರಾಯಣ ರಾವ್, ಶ್ರೀಕಂಠತೀರ್ಥ, ೧೯೮೦, ಬೆಂಗಳೂರು

೭. ಚಾಲುಕ್ಯ ಕಪ್ಪೆಆರ್ಯಭಟ್ಟ: ಎರಡು ಟಿಪ್ಪಣಿಗಳು, ಶೀಲಾಕಾಂತ್ ಪತ್ತಾರ.

೮. ಶಾಸನ ಕವಿಗಳು, ಸುಶೀಲೇಂದ್ರ ಕುಂದರಗಿ, ಬಾದಾಮಿ ಚಾಲುಕ್ಯ ಸಂಪದ (ಸಂ) ೨೦೦೮, ಬಾದಾಮಿ.

೯. ಬಾದಾಮಿ ಚಾಲುಕ್ಯರ ಕಾಲದ ಆಡಳಿತ, ಕೆ.ಆರ್.ಬಸವರಾಜು

೧೦. ಬಾದಾಮಿ ಚಾಲುಕ್ಯರ ಕಾಲದ ಪ್ರಾಂತ್ಯಾಡಳಿತ, ಲೇ: ಇಷಕವಕಾನ್(ಅನು) ಎಂ.ಎನ್. ಪ್ರಭಾಕರ್, ಬಾದಾಮಿ ಚಾಲುಕ್ಯ ಸಂಪದ (ಸಂ) ೨೦೦೮, ಬಾದಾಮಿ.

೧೧. ಬಾದಾಮಿ ಚಾಲುಕ್ಯರ ಕಾಲದ ಸಾಮಾಜಿಕ ವ್ಯವಸ್ಥೆ, ಶ್ರೀನಿವಾಸ ಪಾಡಿಗಾರ,

೧೨. ಬಾದಾಮಿ ಚಾಲುಕ್ಯರ ಕಾಲದ ಧಾರ್ಮಿಕ ಪರಿಸರ, ಬಿ.ವ್ಹಿ.ಮಲ್ಲಾಪುರ, ಬಾದಾಮಿ ಚಾಲುಕ್ಯ ಸಂಪದ (ಸಂ) ೨೦೦೮, ಬಾದಾಮಿ.

೧೩. ಬಾದಾಮಿ ಚಾಲುಕ್ಯರ ಕಾಲದ ಧಾರ್ಮಿಕ ವ್ಯವಸ್ಥೆ, ಶ್ರೀನಿವಾಸ ಪಾಡಿಗಾರ, ಕರ್ನಾಟಕ ಚರಿತ್ರೆ ಸಂಪುಟ ೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮.

೧೪. ಬಾದಾಮಿ ಚಾಲುಕ್ಯರ ಕಾಲದ ಧರ್ಮಗಳು, ಶೀಲಾಕಾಂತ ಪತ್ತಾರ, ಬಾದಾಮಿ ಸಾಂಸ್ಕೃತಿ ಅಧ್ಯಯನ, ೨೦೦೦, (ಸಂ) ಕನ್ನಡ ವಿಶ್ವವಿದ್ಯಾಲಯ, ಹಂಪಿ.

೧೫. ಬಾದಾಮಿ ಮತ್ತು ವೈಷ್ಣವ ಧರ್ಮ, ಶ್ರೀನಿವಾಸ ಪಾಡಿಗಾರ, ಕರ್ನಾಟಕ ಭಾರತಿ, ಸಂ.೨೧, ಸಂಚಿಕೆ ೩,೪ ಕರ್ನಾಟಕ ವಿ.ವಿ. ೧೯೯೮, ದಾರವಾಡ.

೧೬. ಬಾದಾಮಿ ಚಾಲುಕ್ಯರ ಕಾಲದ ಶೈಕ್ಷಣಕ ವ್ಯವಸ್ಥೆ, ಕೆ.ಪಿ.ಈರಣ್ಣ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೧೭. ಬಾದಾಮಿ ಚಾಲುಕ್ಯರ ಕಾಲದ ಆರ್ಥಿಕ ವ್ಯವಸ್ಥೆ, ಶೀಲಾಕಾಂತ ಪತ್ತಾರ, ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

೧೮. ನಾಣ್ಯ ಪದ್ಧತಿ, ಎ.ವಿ.ನರಸಿಂಹಮೂರ್ತಿ, ಕರ್ನಾಟಕ ಚರಿತ್ರೆ ಸಂಪುಟ ೧, (ಸಂ) ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮.

೧೯. ಬಾದಾಮಿಯ ಚಳುಕ್ಯರ ನಾಣ್ಯಗಳು ಎಚ್. ಖಂಡೋಬರಾವ್, ನಾಣ್ಯ ಕರ್ನಾಟಕ, ಶಿವಮೊಗ್ಗ, ೨೦೦೨.

೨೦. ಬಾದಾಮಿ ಚಾಲುಕ್ಯರ ಮಹಿಳೆಯರ ಮಹತ್ವದ ದಾಖಲೆಗಳು, ಚನ್ನಕ್ಕ ಪಾವಟೆ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೨೧. ಕವಯಿತ್ರಿ ವಿಜಯಭಟ್ಟಾರಿಕೆ, ಸರೋಜಿನಿ ಮಹಿಷಿ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೨೨. ಶಿಲ್ಪಕಲೆ, ಶಿವರಾಮ ಕಾರಂತ, ಕರ್ನಾಟಕದಲ್ಲಿ ಚಿತ್ರಕಲೆ, ಮೈಸೂರು, ೧೯೭೧.

೨೩. ಚಾಲುಕ್ಯರ ದ್ರಾವಿಡ ಶೈಲಿಯ ದೇವಾಲಯಗಳು, ಎಸ್.ರಾಜಶೇಖರ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೨೪. ವಾಸ್ತುಶಿಲ್ಪ, ಎಸ್.ರಾಜಶೇಖರ, ಕರ್ನಾಟಕ ಚರಿತ್ರೆ ಸಂಪುಟ‑೧, (ಸಂ) ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮.

೨೫. ಬಾದಾಮಿ ಗುಹೆಗಳು: ಒಂದು ಟಿಪ್ಪಣಿ, ಡಾ. ಕ.ವೆಂ.ರಾಜಗೋಪಾಲ್, ಇತಿಹಾಸ ದರ್ಶನ, ಬೆಂಗಳೂರು, ೧೯೯೫.

೨೬. ಬಾದಾಮಿಯ ಗುಹಾಲಯ ಶಿಲ್ಪಗಳು, ಶ್ರೀನಿವಾಸ ಪಾಡಿಗಾರ, ಕರ್ನಾಟಕ ಚರಿತ್ರೆ ಸಂಪುಟ‑೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮.

೨೭. ಮೇಣಬಸದಿ, ಎಂ.ಎಂ. ಕಲ್ಬುರ್ಗಿ, ಮಾರ್ಗ‑೨, ಸ್ವಪ್ನ ಬುಕ್ ಹೌಸ್, ಬೆಂಗಳೂರು, ೧೯೯೮

೨೮. ಚಾಲುಕ್ಯರ ಗುಹಾ ದೇವಾಲಯಗಳ ಶಿಲ್ಪ, ಶ್ರೀನಿವಾಸ ಪಾಡಿಗಾರ, ಕರ್ನಾಟಕ ಚರಿತ್ರೆ ಸಂಪುಟ‑೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮.

೨೯. ಬಾದಾಮಿ ಪರಿಸರದಲ್ಲಿನ ಲಕುಲೀಶ ಶಿಲ್ಪಿಗಳು, ಎಂ.ಎನ್. ಕಡಪಟ್ಟಿ, ಬಾದಾಮಿ ಚಾಲುಕ್ಯ ಸಂಪದ, (ಸಂ) ೨೦೦೮, ಬಾದಾಮಿ, ೨೦೦೮.

೩೦. ಚಾಲುಕ್ಯರ ಗಜಲಕ್ಷ್ಮಿ ಶಿಲ್ಪಗಳು, ಶೀಲಾಕಾಂತ ಪತ್ತಾರ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೩೧. ಚಾಲುಕ್ಯರ ವಿಜಯ ಸ್ತಂಭಗಳು, ಸಿ.ಆರ್.ಶ್ಯಾಮಲ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೩೨. ವರ್ಣಚಿತ್ರ ಕಲೆ, ಅ.ಸುಂದರ, ಕರ್ನಾಟಕ ಚರಿತ್ರೆ ಸಂಪುಟ-೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮.

೩೩. ಬಾದಾಮಿ ಪ್ರದೇಶದ ಐತಿಹಾಸಿಕ ಭಿತ್ತಿ ಚಿತ್ರಗಳು, ಯಾದಪ್ಪ ಪರದೇಶಿ, ಇತಿಹಾಸ ದರ್ಶನ, ಬೆಂಗಳೂರು.

೩೪. ವರ್ತಕರ ಸಂಘದ ಇತಿಹಾಸದಲ್ಲಿಯ ಕೆಲವು ಸಮಸ್ಯೆಗಳು, ಜಿ.ಎಸ್.ದೀಕ್ಷಿತ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೩೫. ದೆವಾಲಯಗಳ ಉಗಮ ಮತ್ತು ಲಾಡ್‌ಖಾನ್ ದೇವಾಲಯ, ಎಂ.ಎನ್,ಪ್ರಭಾಕರ್, ಇತಿಹಾಸ ದರ್ಶನ, ೪ನೇ ಸಂಪುಟ.

೩೬. ಪಟ್ಟದಕಲ್ಲಿನ ಚಾಲುಕ್ಯ ಪೂರ್ವಕಾಲದ ಒಂದು ಇಟ್ಟಿಗೆ ಕಟ್ಟಡ, ಅ.ಸುಂದರ, ಕರ್ನಾಟಕ ಭಾರತಿ, ಸಂಪುಟ ೯, ಕರ್ನಾಟಕ ವಿ.ವಿ. ಧಾರವಾಡ.

೩೭. ಮಹಾಕೂಟಾ, ಮೀನಾ ಮೋಹಿತೆ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೩೮. ಸಿದ್ಧನಕೊಳ್ಳದ ಚಾಲುಕ್ಯರ ಕಾಲದ ಸಂಗಮೇಶ್ವರ ದೇವಾಲಯ, ಎಂ.ಟಿ.ಕಾಂಬಳೆ, ಕರ್ನಾಟಕ ಭಾರತಿ.

೩೯. ಹುನಗುಂದದ ಬಾದಾಮಿ ಚಾಲುಕ್ಯರ ಅವಶೇಷಗಳು, ಎಸ್.ಶೆೆಟ್ಟರ್, ಕರ್ನಾಟಕ ಭಾರತಿ, ಕರ್ನಾಟಕ ವಿ.ವಿ. ಧಾರವಾಡ, ೧೯೮೯.

೪೦. ಆಲಂಪುರದ ದೇವಾಲಯಗಳು, ಜಿ.ಜ್ಞಾನಾನಂದ, ಬಾದಾಮಿ ಚಾಲುಕ್ಯ ಸಂಪದ, (ಸಂ) ಬಾದಾಮಿ, ೨೦೦೮.

೪೧. ಬಾದಾಮಿ ಚಾಲುಕ್ಯರ ಕೋಟೆಗಳು, ಎಸ್.ಕೆ.ಜೋಶಿ, ಚಾಲುಕ್ಯ ಶ್ರೀ, ಬಾದಾಮಿ,  ೧೯೮೨, ಬಾದಾಮಿ.

೪೨. ಬಾದಾಮಿ ಕಿಲೆ ಕೆಡವಿದ ಪದ, ಜಾನ್ ಎಫ್. ಫ್ಲೀಟ್, ಗುಳೆದಗುಡ್ಡ ೨೮ನೇ ಜನವರಿ, ೧೮೭೪.

೪೩. ಬಾದಾಮಿ ಬಂಡಾಯ, ಮೃತ್ಯುಂಜಯ ಹೊರಕೇರಿ, ಇತಿಹಾಸ ದರ್ಶನ, ಸಂಪುಟ ೧೦, ಬೆಂಗಳೂರು, ೧೯೯೫.

೪೪. ಬೆನಕವಾರಿಯ ಬೆನ್ನ ಹತ್ತಿ, ದ.ರಾ.ಪುರೋಹಿತ್, ಬಾದಾಮಿ ಚಾಲುಕ್ಯ ಸಂಪದ,  (ಸಂ) ಬಾದಾಮಿ, ೨೦೦೮.

೪೫. ಪಟ್ಟದಕಲ್ಲಿನ ಪರಿಸರದಲ್ಲಿ ಪ್ರಾಚೀನ ಕಲ್ಗಣಿಯ ಶೋಧ, ಎಸ್.ವಿ. ವೆಂಕಟೇಶಯ್ಯ, ಎಂ.ವಿ.ವಿಶ್ವೇಶ್ವರ, ಬಾದಾಮಿ ಚಾಲುಕ್ಯ ಸಂಪದ, (ಸಂ) (ಸಂ) ಬಾದಾಮಿ, ೨೦೦೮.