ಚಾಳುಕ್ಯ ಕುಲ ಮತ್ತು ಪುಲಕೇಶಿ

ಚಾಳುಕ್ಯರದು ಕೂಡ ಅಚ್ಚ ಕನ್ನಡ ಅರಸು ಕುಲ. ಚಾಳುಕ್ಯ ವಂಶದ ಉಗಮ ಹಾಗೂ ನಿಷ್ಪತ್ತಿಯನ್ನು ಕುರಿತು ಚರ್ಚೆಗಳಾಗಿವೆ. ಚರಿತ್ರಕಾರರು ನಡೆಸಿರುವ ಚಿಂತನ ಮಂಥನಗಳ ಸಾರಾಂಶಕ್ಕಿಂತ ಬೇರೆಯದಾದ ನಿಲವು ನನ್ನದು. ಇದುವರೆಗೆ ಸೂಚಿತವಾಗಿರುವ ಶಬ್ದಾರ್ಥ ಜಿಜ್ಞಾಸೆಗೆ ಇನ್ನೊಂದು ಅರ್ಥವನ್ನು ಪೋಣಿಸುವುದಷ್ಟೇ ನನ್ನ ಉದ್ದೇಶವಲ್ಲ. ಭಾಷಿಕ, ಸಾಮಾಜಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಂದ ಈ ಚಾಳುಕ್ಯ ಶಬ್ದದ ನಿರ್ವಚನ ಮತ್ತು ಪುನರ್ ವ್ಯಾಖ್ಯೆಗೆ ಅವಕಾಶವಿದೆ. ‘ಚಾಳುಕ್ಯ’ ಎಂಬ ಶಬ್ದರೂಪಕ್ಕೆ ಸಂಬಂಧಿಸಿದ ಕೆಲವು ಪ್ರಾಚೀನ ಶಾಸನ ಪ್ರಯೋಗಗಳು

೧. ಚಲ್ಕ್ಯ   : ಬಾದಾಮಿ ಶಾಸನ: ಕ್ರಿ.ಶ.೫೭೮

೨. ಚಳಿಕ್ಯ   : ಮಹಾಕೂಟ ಸ್ತಂಭ ಶಾಸನ: ಕ್ರಿ.ಶ. ೬೦೨

೩. ಚಲಿಕ್ಯ   : ಮಂಗಳೇಶನ ಶಾಸನ: ಕ್ರಿ.ಶ. ೭ನೆಯ ಶತಮಾನ

೪. ಚಲುಕ್ಯ : ಪುಲಿಕೇಶಿ II. ಐಹೊಳೆಯ ಶಾಸನ: ಕ್ರಿ.ಶ. ೬೩೪

೫. ಚಳುಕಿ  : SILXVII. ೨೭ ಅತೇದಿ.

೬. ಸಳುಕಿ  : SII, XI-i. ೧೪. ಕ್ರಿ.ಶ. ೮೭೨.

ಈ ಶಬ್ದದ ಚರ್ಚೆಯ ಕಕ್ಷೆಗೆ ಒಳಪಡುವ ಸಮಾನ ಮೂಲದ ಶಬ್ದಗಳ ಜಾತಕವನ್ನೂ ಬಿಡಿಸಿ ನೋಡಬಹುದು.

ಚವುಳು, ನವುಳ Brackishness, ತಮಿಳು, ಚವುಡು. ತೆಲುಗು, ಚವುಡು, ಚವಡು, ಚೌಡು.

ಚವುಳುಪ್ಪು Impure soda, Soda-Saltpeter

ಚವುಳು ಮಣ್ಣು Fullers earth, earth impregnated with carbonate of soda.

ಜಾಳ್ನೆಲ, ಜವುಳು ನೆಲ ಊಷ, ಕ್ಷಾರಮೃತ್ತಿಕೆ

ಚಳಿಯ the state of growing putrid of muddy

ತಮಿಳು, ಮಲೆಯಾಳಂ. ಚಳಿ to grow putrid, mud, mire ಕೆಸಱು wet soil, mud, mire ತಮಿಳು, ಮಲೆಯಾಳಂ, ಚಳಿ, ಸುಳಿ, ಚದುಕು, ಜೀರುಕು

ಸಲಿಕೆ (ತ್ಭ) ಸಲಾಕೆ, ಸಂಸ್ಕೃತ ‑ಶಲಾಕೆ, ಕಬ್ಬಿಣದ ಸರಳು, ಕೃಷಿ ಉಪಕರಣ ಮೇಲಿನ ಶಬ್ದರೂಪಗಳ ಹಿನ್ನೆಲೆಯಿಂದ ನೋಡುವಾಗ ಚಳಿಯ, ಚವುಳು, ಜವುಳು ಎಂಬ ಶಬ್ದಗಳು ಒಂದು ಮೂಲ ಪ್ರಕೃತಿ(ಆಕೃತಿ)ಯಿಂದ ನಿಷ್ಪನ್ನವಾದ ಶಬ್ದಗಳೆಂದು ಕಾಣುತ್ತದೆ. ಇವೆಲ್ಲವೂ ಮಣ್ಣಿಗೆ ಸಂಬಂಧಿಸಿದ ಮಾತುಗಳು. ಸಲಿಕೆ, ಸಲಾಕೆ ಎಂಬುದನ್ನೂ ‘ಚಳುಕ್ಯ‑ಸಳುಕಿ’ ಎಂಬ ಶಬ್ದ ಮೂಲಕ ಜ್ಞಾತಿ ಶಬ್ದಗಳೆಂದು, (Cognate words) ಕಲ್ಪಿಸಬಹುದು. ಇದರಿಂದ ಪ್ರತೀತವಾಗುವಂತೆ ಈ ಚಾಳುಕ್ಯ ವಂಶದ ಮೂಲ ಪುರುಷರು ಒಕ್ಕಲ ಮಕ್ಕಳಾಗಿದ್ದರು. ಅವರು ಮೊದಲು ಮಣ್ಣಿನ ಮಕ್ಕಳಾಗಿದ್ದು ಪ್ರಭುಶಕ್ತಿ ಗಳಿಸಿ, ಒಂದು ರಾಜಕುಲವಾಗಿ ಬೆಳೆದರು. ಚಾಳುಕ್ಯರದು ಕೃಷಿಕ ಕುಟುಂಬವೆಂಬ ತೀರ್ಮಾನ ತಳೆಯಲು ನೆರವಾಗುವುದು ಈ ವಂಶದ ಪೊಲಕೇಸಿನ್ ಎಂಬ ಹೆಸರು.

ಪೊಲಕೇಸಿನ್ (SIL. XX. ೪. ೬೮೩. ಲಕ್ಷ್ಮೇಶ್ವರ (ಧಾರವಾಡ ಜಿ. ಶಿರಹಟ್ಟಿ ತಾ): ಅದೇ. ೫.೭೨೩: ೫.೭೨೩: ಅದೇ. ೬.೭೩೦: ಅದೇ ೭. ೭೩೫: SILXI. ೧೩೬. ೧೦೯೧.  ಆಲೂರು (ಧಾ.ಜಿ. ಮುಂಡರಗಿ ತಾ) ಎಂಬ ಅಂಕಿತನಾಮ ರೂಪದಲ್ಲಿ ಎರಡು ಮುಕ್ತ ಆಕೃತಿಗಳಿವೆ: ಪೊಲ(ನ್)+ಕೇಸಿನ್, ಇವು ಮೂಲದ್ರಾವಿಡಕ್ಕೂ, ಪೂರ್ವದ ಹಳೆಗನ್ನಡಕ್ಕೂ ಸೇರಿದ ಶಬ್ದಗಳು. ಪೊಲ (ಹೊಲ)+ಕೇಸಿನ್ (ಚೇಸಿನ್ =ಮಾಡುವವನು) =ಪೊಲಕೇಸಿನ್ ಎಂದಾಗಿದೆ. ತೆಲುಗು ಭಾಷೆಯಲ್ಲಿ ಚೇಸಿನ ಎಂಬ ಕ್ರಿಯಾರೂಪಕ್ಕೆ ಮಾಡಿದ ಎಂದೂ, ಚೇಸಿನವಾರು ಎಂಬುದಕ್ಕೆ ಮಾಡಿದವರು ಎಂದೂ ಅರ್ಥ. ಕೇಸಿನ್‑ಚೇಸಿನ ಎಂಬುದು ತಾಲವೀಕರಣಗೊಂಡಿರುವ (palatalisation) ದ್ರಾವಿಡರೂಪ. ಇಂಥ ಇನ್ನೂ ಹತ್ತಾರು ಸಮಾನ‑ಸದೃಶ ರೂಪಗಳಿವೆ. ಕೆಲವು ಉದಾ: ಕೇರ‑ಚೇರ, ಕೆಯ್‑ಚಯ್, ಕೆದರು‑ಚೆದರ್, ಗೆದ್ದಲು‑ಚೆದಲ್, ಕೆಱೀ‑ಚೆಱೀವು. ಮೂಲದ್ರಾವಿಡ *ಕ್‑ಸ್ವನವು, ಅದರ ಮುಂದೆ ಇಈ ‑ಎಏ ಎಂಬ ಪೂರ್ವ ಸ್ವರಗಳು (front vowels) ಬಂದಾಗ ಅದು ತಮಿಳು ತೆಲುಗು ಮಲೆಯಾಳ ಭಾಷೆಗಳಲ್ಲಿ ಚ್‑ಆಗುತ್ತದೆ. ಪೂರ್ವೇತರ ಸ್ವರಗಳಾದ (non‑front vowels) ಅ ಉ ಒ ಪರವಾದಾಗ ವ್ಯತ್ಯಾಸವಾಗುವುದಿಲ್ಲ. ಕನ್ನಡ ತುಳು ಭಾಷೆಗಳಲ್ಲಿ, ಪೂರ್ವ‑ ಪೂರ್ವೇತರ ಸ್ವರಗಳಲ್ಲಿ ಯಾವುದೇ ಬಂದರೂ ಸ್ವನ ವ್ಯತ್ಯಾಸ ಸಂಭವಿಸದೆ *ಕ್‑ಸ್ವನ ಅಬಾಧಿತವಾಗಿಯೇ ನಿಲ್ಲುತ್ತದೆ: ಉದಾ; (ಕನ್ನಡ) ಕಿರಿ, ಕೆಯ್, ಕೇರು, ಕೆದರು‑ಈ ಶಬ್ದಗಳಿಗೆ ತಮಿಳು ತೆಲುಗು ಮಲೆಯಾಳ ಭಾಷೆಗಳಲ್ಲಿ ಕ್ರಮವಾಗಿ ಚಿರಿ, ಚೆಯ್‑ಚೇತ, ಚೇರುಕ ‑ಚೆರುಗು, ಚೆದರು ಎಂಬ ರೂಪಗಳಿವೆ(ಹಂಪ. ನಾಗರಾಜಯ್ಯ, ‘ದ್ರಾವಿಡ ಭಾಷಾ ವಿಜ್ಞಾನ’, ನಾಲ್ಕನೆಯ ಮುದ್ರಣ ೧೯೯೪). ಏಳನೆಯ ಶತಮಾನದ ತೆಲುಗು ಶಾಸನಗಳಲ್ಲಿ ಕೇಸಿರಿ ಎಂಬ ಕಕಾರವೇ ಶಬ್ದದ ಆದಿಯಲ್ಲಿ ಪ್ರಯೋಗವಾಗಿರುವ ರೂಪಗಳಿವೆ. ಪನಿಕೇಸಿರಿ (ಪನಿಚೇಸಿರಿ)

ಪೊಲಕೇಸಿನ್ ಎಂಬುದು ‘ಹೊಲ ಮಾಡುವವನು’ ಎಂಬ ಅರ್ಥದ ಮಾತಾಗಿದೆ: ಒಕ್ಕಲ್ತನಂ ಕೆಯ್ವನ್ (IA.XIX. ಸು. ೬೯೦. ಬಳ್ಳಿಗಾವೆ ಪು. ೧೪೪‑೪೫) ಇಂದಿಗೂ ಹೊಲ ಮಾಡಿಕೊಂಡಿದ್ದಾನೆ, ಹೊಲಗೆಯ್ಕಂಡಿದ್ದಾನೆ, ಹೊಲಗೆಯ್ಯಂಬುವು ರೈತಾಪಿ ಜನರ ರೂಢಿಯ ಮಾತುಗಳಾಗಿವೆ.  ಪೊಲಕೇಸಿನ್ (ಹೊಲ ಮಾಡುವವನು) ಎಂಬ ಹೆಸರಿನ ಸ್ತ್ರೀ ಪುರುಷರನ್ನು ಕನ್ನಡ ಶಾಸನಗಳು ಹೆಸರಿಸಿವೆ.

೧. ಗಂಗರ ರಾಜರಲ್ಲಿ ಪೊಲವೀರನೆಂಬ ಕೊಙ್ಗುಣಿ ಮಹಾರಾಜನಿದ್ದಾನೆ. ಈತನು ಗಂಗರ ದುರ್ವಿನೀತನ (೪೯೫‑೫೩೫) ಒಬ್ಬ ಮಗ; ಇನ್ನೊಬ್ಬ ಮಗನೇ ಮುಷ್ಕರ. ಪೊಲವೀರನು ಸೇಂದ್ರಕ ವಿಷಯದಲ್ಲಿ ಪಲಚ್ಚೊಗೆ ಎಂಬ ಹಳ್ಳಿ ದತ್ತಿಯಿತ್ತನು (EC.IX (೧೯೯೦) ೫೩೭, ಕ್ರಿ.ಶ.೬ ಶ, ತಗರೆ (ಹಾಸನ ಜಿ. ಬೇಲೂರು ತಾ. ಪು. ೪೭೨).

೨. ನಾಗುಳರ ಪೊಲ್ಲಬ್ಬೆ ಮಾಡಿಸಿದ ಬಸದಿ [SII.XVIII, ೩೧೫, ೮೫೯‑೬೦ ರಾಣಿಬೆನ್ನೂರು (ಧಾರವಾಡ ಜಿ.) ಪು. ೪೨೦]

೩. ಪ್ರತಾಪಶಾಲಿಯುಮಪ್ಪ ಹೊಲ್ಲಗಾವುಂಡನ ಗುಣ ಪ್ರಭಾವಂ [B.K. No.೧೦೮ of ೧೯೨೬‑೨೭; BK. ೫೧, ೧೧೫೫]

೪. ನೊಳಂಬ ಪೊಲವೀರನೆಂಬುವನು ಗಂಗರ ಪೃಥ್ವೀಪತಿ ದಿಡಿಗ ರಾಜನ ಮೇಲೆ ದಂಡೆತ್ತಿ ಬಂದ ದಾಖಲೆಯಿದೆ.

ಇದುವರೆಗಿನ ಚರ್ಚೆಯ, ಮಂಥನದ ಸಾರಾಂಶ

೧. ಚಾಳುಕ್ಯರದು ‘ಚಳುಕ್ಯ’ ಕುಲ. ಅವರ ವಿವಿಧ ಪ್ರಾಚೀನ ರೂಪಗಳು ಹ್ರಸ್ವ ಸ್ವರಾದಿ ಯಾದ ಚಳುಕಿ, ಸಳುಕಿ, ಚಳುಕ್ಯ, ಚಲಿಕ್ಯ, ಚಲ್ಕ್ಯ ಎಂಬುವಾಗಿವೆ. ಇವುಗಳನ್ನು ಸಲಿಕೆ, ಸಲಾಕಿ ಎಂಬ ಕೃಷಿಕ ಉಪಕರಣಗಳೊಂದಿಗೆ ಸಮೀಕರಿಸಬಹುದು.

೨. ಚಳುಕಿ ‑ಸಳುಕಿ ಎಂಬ ಶಬ್ದಗಳು ನೆಲ, ಮಣ್ಣು ಎಂಬರ್ಥದ ಶಬ್ದಗಳಿಗೆ ಹೊಂದಿವೆ. ಇವು ದ್ರಾವಿಡ ಮೂಲದ ಶಬ್ದಗಳಾಗಿದ್ದು ಇದರ ಜ್ಞಾತಿ ರೂಪಗಳು, ಜ್ಞಾತಿ ಭಾಷೆಗಳಲ್ಲಿ, ಸಮಾನ ಅರ್ಥ ಪ್ರಭೇದಗಳಿಂದ ಕಂಡುಬರುತ್ತವೆ. ಆದ್ದರಿಂದ, ಇವನ್ನು ಸಂಸ್ಕೃತದಿಂದ ನಿಷ್ಪನ್ನ ಮಾಡುವುದು ಸರಿಲ್ಲ; ದ್ರಾವಿಡ ರೂಪವೇ ಸಂಸ್ಕೃತೀಕರಣ ಗೊಂಡಿದೆ.

೩. ‘ಪೊಲಕೇಸಿನ್’ ಎಂಬ ಶಬ್ದದ ಮೂಲ ಅರ್ಥವೂ ಸಹ ಒಕ್ಕಲುತನಕ್ಕೆ ಸೇರಿದ್ದಾಗಿದೆ. ಪೊಲಕೇಸಿನ್ ಎಂದರೆ ನೆಲದೊಡೆಯ, ನೆಲ ಸಂಬಂಧದ ಕೆಲಸ ಮಾಡುವಾತ ಎಂದರ್ಥ.

೪. ಚಾಳುಕ್ಯರದು ಒಕ್ಕಲು ಮೂಲದ ಮನೆತನ, ಕೃಷಿಕ ಕುಟುಂಬ.

೫. ಚಾಳುಕ್ಯರು ಮೂಲತಃ ಬಿಜಾಪುರ ಜಿಲ್ಲೆಯ ಬಾದಾಮಿ, ಶಿರಹಟ್ಟಿ ಸುತ್ತಲು ರೈತಾಪಿಗಳು. ಸ್ವಸಾಮರ್ಥ್ಯ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯಿಂದ ಈ ಒಕ್ಕಲ ಕುಟುಂಬದ ಪೊಲವೀರರು ದೊಡ್ಡ ಸಾಮ್ರಾಜ್ಯವನ್ನಾಳುವಷ್ಟು ಬಲಿಷ್ಟರಾದರು. ರಾಷ್ಟ್ರಕೂಟರೂ ಮೊದಲಿಗೆ ಒಕ್ಕಲಿಗರೆಂಬುದಕ್ಕೆ ಅವರ ರಾಜ ಲಾಂಛನದಲ್ಲಿ ನೇಗಿಲು ಇರುವುದು ಸಾಕ್ಷಿ. ಗಂಗರೂ ರೈತರಿದ್ದಿರಬಹುದು.

೬. ಚಾಳುಕ್ಯ ಎಂಬ ಶಬ್ದಕ್ಕೆ ದೈವ ಮೂಲದ ಊಹಾತ್ಮಕ ನಿಷ್ಪತ್ತಿಗಿಂತ ಮನುಷ್ಯ ಮೂಲದ ನಿಷ್ಪತ್ತಿಯಲ್ಲಿರುವ, ವಾಸ್ತವತೆಗೆ ಹತ್ತಿರವಾಗುವ ಸಮಂಜಸತೆಯನ್ನು ಪ್ರಾಜ್ಞರಾದ ಚರಿತ್ರಕಾರರು ಪರಿಭಾವಿಸಬೇಕು.

೭. ಬೆಳ್ವೊಲ [*ವೆಳ್‑ +ಪೊಲ (ನ್) =ವೆಳ್ವೊಲ, ಬೆಳ್ವೊಲ, ಬೆಳ್ವಲ] ಎಂಬಲ್ಲಿ ಉತ್ತರಾರ್ಧವಾಗಿ ಇರುವ ಶಬ್ದ ರೂಪವೂ ‘ಪೊಲ’ ಎಂಬುದೇ. ಬೆಳ್ವೊಲ ಮುನ್ನೂರರ ಪ್ರದೇಶದವರು ಚಾಳುಕ್ಯ ಕುಲಜರು.

೮. ಪುಲಿಗೆಱೀ‑ಪುರಿಕರ ಎಂಬ ಸ್ಥಳವಾಚಿ ಶಬ್ದಗಳಿಗೂ ಪೊಲಗೆಱೀ (ಹೊಲದಕೆರೆ) ಎಂಬುದು ಮೂಲ ಪ್ರಾಚೀನ ರೂಪವಿರಬಹುದು. ಪುರಿಕರನಗರಿ ಎಂಬುದು ಇದರ ಸಂಸ್ಕೃತ ರೂಪ. ಪೊಲಗೆಱೀ‑ಪುಲಿಗೆರೆ(ಲಕ್ಷ್ಮೇಶ್ವರ): ಇದರಂತೆಯೇ ಪೊಲಕೇಸಿನ್‑ಪುಲಿಕೇಸಿ‑ ಎಂಬ ಬೆಳವಣಿಗೆಯನ್ನು ಮನಗಾಣಬಹುದು.

೯. ಚಾಳುಕ್ಯರಿಗೆ (ಪೊ) ಪುಲಿಗೆರೆಯೇ ಮೂಲ ಸ್ಥಳವಿರಬೇಕು. ಪುಲಿಗೆರೆಯ ಶಂಖಬಸದಿಯು ಬಾದಾಮಿ ಚಾಳುಕ್ಯರ ಮನೆದೇವರು, ಪಟ್ಟ ಜಿನಾಲಯ. ಈ ಕಾರಣಕ್ಕಾಗಿಯೇ ಬಾದಾಮಿ ಚಾಳುಕ್ಯರು, ಕಲ್ಯಾಣಿ ಚಾಳುಕ್ಯರು ಒಂದೇ ಸಮನೆ ಪುಲಿಗೆರೆಯ ಶಂಖ ಜಿನಾಲಯಕ್ಕೆ ದಾನ ದತ್ತಿಗಳನ್ನು ಪುನರ್ಭರಣಗೊಳಿಸುತ್ತ ಭಕ್ತಿಯಿಂದ ನಡೆದು ಕೊಂಡರು.