ಬಾದಾಮಿ ಅರಸು ಮನೆತನದ ಹೆಸರಾದ ‘ಚಲುಕ್ಯ’ ಎಂಬ ಪದವನ್ನು ಜೇಮ್ಸ್ ಬರ್ಜೆಸ್,

[1] ಹೆನ್ರಿ ಕಜಿನ್ಸ[2] ಮೊದಲಾದವರು ತಪ್ಪಾಗಿ ಚಾಲುಕ್ಯ ಎಂದು ಬಳಸಿದರು. ಕೆ.ಎ. ನೀಲಕಂಠ ಶಾಸ್ತ್ರಿ,[3] ಆರ್.ಡಿ.ಬ್ಯಾನರ್ಜಿ[4] ಇದನ್ನೆ ಅನುಕರಿಸಿದರು. ಆರ್.ಎಸ್.ಪಂಚಮುಖಿ, ಮತ್ತು ಲಕ್ಷ್ಮೀನಾರಾಯಣರಾಯರು ಚಲುಕ್ಯ ಎಂದು ಉಪಯೋಗಿಸಿದ್ದಾರೆ.[5]

ಒಂದನೆಯ ಪುಲಿಕೇಶಿಯ  ಬಂಡೆಗಲ್ಲು ಶಾಸನವು ಚಲುಕ್ಯರ ಅತಿ ಪ್ರಾಚೀನ ಶಾಸನ.[6] ಇದರಲ್ಲಿ  ಈ ರಾಜವಂಶದ ಹೆಸರು ಚಲಿಕ್ಯ ಎಂದು ಕಾಣಿಸಿಕೊಂಡಿದ್ದು ಇದೇ ಈ ಪದದ ಮೂಲರೂಪವಿರಬಹುದು. ನಂತರ ಸಂಕ್ಷಿಪ್ತವಾಗಿ ಚಲ್ಕ್ಯ[7] ಎಂದು, ಇಲ್ಲವೆ ಉಚ್ಚರಿಸಲು ಹೆಚ್ಚು ಸರಳವೆನಿಸುವ ಚಲುಕ್ಯ ಎಂದು ಬಳಕೆಯಲ್ಲಿ ಬಂದಿರಬಹುದು. ಶಾಸನದಲ್ಲಿ ಹೆಚ್ಚಾಗಿ ಕಂಡುಬರುವ ರೂಪಗಳೆಂದರೆ ಚಲಿಕ್ಕ ಮತ್ತು ಚಲುಕ್ಯ.[8] ಇವುಗಳ ಜೊತೆಗೆ ವಿರಳವಾಗಿ ಚಲುಕಿನ್,[9] ಚಳ್ಕಿ,[10] ಚುಳುಕಿ,[11] ಚಳುಕ್ಯ,[12] ಮತ್ತು ಚಲುಕಿಕಿ[13] ಎಂಬ ರೂಪಗಳೂ ಇವೆ. ಈ ಪದಗಳ ಆದಿಯಲ್ಲಿ ಇರುವ ಅಕ್ಷರವು ‘ಚ’ಆಗಿರುವುದು ಗಮನಾರ್ಹ. ಚಲುಕ್ಯ ಎಂಬುದೇ ಈ ಅರಸು ಮನೆತನದ ಸರಿಯಾದ ಹೆಸರು. ಮೂಲವಂಶದಿಂದ ಶಾಖೆಗೊಂಡ ಮನೆತನವು ಚಾಲುಕ್ಯ ಎಂದೆನಿಸುತ್ತದೆ. ಹೀಗಾಗಿ ಕಲ್ಯಾಣದ ಅರಸರು, ವೆಂಗಿ ಅರಸರು ಚಾಲುಕ್ಯರು.

ಚಲುಕಿ, ಚಲ್ಕಿ, ಮತ್ತು ಸಲುಕಿ ಇವು ಸಲ್ಕಿ ಎಂಬ ಪದದ ರೂಪಗಳೆಂದೂ ಸಲ್ಕಿ ಎಂಬುದು ಒಂದು ಕೃಷಿ ಉಪಕರಣವೆಂದೂ ಸಮೀಕರಿಸಿ ಡಾ.ಎಸ್.ಸಿ.ನಂದಿಮಠ ಅವರು ಚಲುಕ್ಯರು ಬಾದಾಮಿ ಪರಿಸರದ ಕೃಷಿಕರಾಗಿರಬೇಕೆಂದು ಊಹಿಸುತ್ತಾರೆ.[14] ಈ ಪ್ರದೇಶದಲ್ಲಿ ಈಗಲೂ ಸಲಿಕೆಪ್ಪ, ಗುದ್ಲೆಪ್ಪ ಎಂಬ ಹೆಸರುಗಳಿರುವುದನ್ನು ತಿಳಿಸುತ್ತ ಈ ಅರಸು ಮನೆತನದ ಮೂಲಪುರುಷನು ‘ಸಲ್ಕಿ’ ಎಂಬ ಕೃಷಿ ಉಪಕರಣವನ್ನೇ ಅಂಕಿತನಾಮವಾಗಿ  ಸ್ವೀಕರಿಸಿರಬಹುದೆಂದು ಅಭಿಪ್ರಾಯ ಪಡುತ್ತಾರೆ. ಹಾಗಿದ್ದಲ್ಲಿ ‘ಸಲ್ಕಿ’ ಜನಪ್ರಿಯ ಕೃಷಿ ಉಪಕರಣವಾಗಿರಬೇಕು. ಚಲುಕ್ಯರ ಶಾಸನಗಳಲ್ಲಿ ಮೆಂಡಿ, ನೇಗಿಲು, ಕುಡುಗೋಲು, ಕೊಡಲಿ ಎಂಬ ಕೃಷಿ ಉಪಕರಣಗಳ ಉಲ್ಲೇಖಗಳಿರುವುದನ್ನು ಎಸ್.ರಾಜೇಂದ್ರಪ್ಪ ಎತ್ತಿ ತೋರಿಸಿದ್ದಾರೆ.[15] ಆದರೆ ಸಲ್ಕಿ ಉಪಕರಣದ ಪ್ರಸ್ತಾಪವೇ ಕಂಡುಬರುವುದಿಲ್ಲ. ಇದರಿಂದಾಗಿ ಡಾ.ನಂದಿಮಠರ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಮನಸ್ಸಾಗುವುದಿಲ್ಲ. ಸಲ್ಕಿ ಎಂಬುದು ಕೃಷಿ ಉಪಕರಣವಾಗಿರದೆ ಸಲ್ಲಕಿ ಎಂಬ ವೃಕ್ಷವಾಗಿರುವ ಸಂಭಾವ್ಯವಿದೆ. ಸಲ್ಲಕಿ ಪದವೇ ಸಲ್ಕಿ, ಚಲ್ಕಿ, ಚಲಿಕ್ಕ ಎಂಬ ರೂಪಗಳನ್ನು ಪಡೆದಿರುವ ಸಾಧ್ಯತೆ ಇದೆ. ಸಲ್ಲಕಿ ಎಂದರೆ ಬೆಳವಲ ಮರ, ಪಂಪನ ಆದಿಪುರಾಣದಲ್ಲಿ ಸಲ್ಲಕಿಯ ಪ್ರಾಸ್ತಾಪವಿದೆ.[16] ಆದ್ದರಿಂದ ಪ್ರಾಚೀನ ಕಾಲದಲ್ಲಿ ಇದು ಬಳಕೆಯಲ್ಲಿದ್ದ ಪದ ಎಂಬುದು ಸ್ಪಷ್ಟ. ಈ ವೃಕ್ಷವು ಭಾರತದಲ್ಲೆಲ್ಲ ಬೆಳೆಯುತ್ತಿದ್ದರೂ ಬೆಳವಲ ನಾಡಿನ ವಿಶೇಷತೆ ಎನ್ನಬಹುದು. ಇದು ಉತ್ತರ ಕರ್ನಾಟಕದ ಜನಪದರ ಪ್ರೀತಿಯ ಮರವಾಗಿದ್ದು, ಸಸ್ಯ ಸಂಪದ ಕ್ಷೀಣಗೊಂಡಿರುವ ಈ ದಿನಗಳಲ್ಲೂ ಬಾದಾಮಿ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುವ ಮರವಾಗಿದೆ.

ಮನೆತನಕ್ಕೆ ಹಣ್ಣಿನ ಮರಗಳ ಹೆಸರುಗಳಿರುವುದು ಈ ಪ್ರದೇಶದಲ್ಲಿ ಸಾಮಾನ್ಯ. ಬಾರಿಗಿಡದ, ಮಾವಿನಮರದ, ಅರಳಿಮರದ, ಹುಣಸಿಮರದ ಎಂಬ ಹೆಸರುಗಳು ಹೇರಳವಾಗಿವೆ. ಬಳೂಲದ ಎಂಬ ಹೆಸರಿನ ಮನೆತನಗಳೂ ಇವೆ. ಬಳೂಲ ಎಂಬುದು ಬೆಳವಲ (=ಸಲ್ಲಕಿ) ಪದದ ಸಂಕ್ಷಿಪ್ತ ರೂಪ.

ಚಲುಕ್ಯರು ಕದಂಬರಂತೆ ತಾವು ಮಾನವ್ಯಗೋತ್ರದವರೆಂದೂ ಹಾರಿತೀಪುತ್ರರೆಂದೂ ಹೇಳಿಕೊಂಡದ್ದಲ್ಲದೆ ಯಜ್ಞಯಾಗಾದಿಗಳ ಆಚರಣೆ ಆಡಳಿತ ವ್ಯವಸ್ಥೆಗಳಲ್ಲಿ ಕದಂಬರನ್ನು ಅನುಸರಿಸಿದಂತೆ ತೋರುತ್ತದೆ. ಕದಂಬರು ಕದಂಬ ವೃಕ್ಷವನ್ನು ತಮ್ಮ ಮನೆತನದ ಅಂಕಿತನಾಮವಾಗಿ ಸ್ವೀಕರಿಸಿದಂತೆ ಚಲುಕ್ಯರು ಸಲ್ಲಕಿ (ಸಲ್ಕಿ) ಮರವನ್ನು ಸ್ವೀಕರಿಸಿರಬಹುದು.

‘ಸಲ್ಲಕಿ’ಗೆ ಅಂದರೆ ಕಪಿತ್ಥ ಮರಕ್ಕೆ ಪಾವಿತ್ರ್ಯದ ಹಿನ್ನೆಲೆ ಇದೆ. ಚಲುಕ್ಯರು ಗಣೇಶನನ್ನು ಆರಾಧಿಸಿದ್ದುದು ಅವರ ಬಹು ಸಂಖ್ಯೆಯ ಗಣಪತಿ ಶಿಲ್ಪಗಳಿಂದ ಸೂಚಿತ. ಶಿವ ಗುಹಾಲಯ ಒಂದರಲ್ಲಿಯೇ ಮೂರು ಇಂಥ ಶಿಲ್ಪಗಳಿವೆ. ಕೆಳಗಿನ ಶಿವಾಲಯವು ವಾತಾಪಿ ಗಣಪತಿಯ ಗುಡಿಯಾಗಿರಬಹುದೆಂಬ ಅಭಿಪ್ರಾಯವಿದೆ.[17] ಗಣಪತಿ ಕಪಿತ್ಥಪ್ರಿಯ, ಗಜಪ್ರಿಯ ಎಂಬುದು ಬೆಳವಲ್ಲ(ಸಲ್ಲಕಿ)ದ ಇನ್ನೊಂದು ಹೆಸರು. ಅದನ್ನು ಆನೆ ಬೇಲ ಎಂದೂ ಕರೆಯುತ್ತಾರೆ. ಹೀಗೆ ಸಲ್ಲಕಿಯೂ ಗಣೇಶನ ಪ್ರಿಯಫಲವಾಗಿದೆ. ಗಣಪತಿಯನ್ನು ‘ಕಪಿತ್ಥಫಲ ಜಂಬೂ ಫಲಸಾರ ಭಕ್ಷಿತಂ ಉಮಾಸುತಂ’ ಎಂದು ಬಣ್ಣಿಸಲಾಗಿದೆ, ಗಣಪತಿಗೆ ಪ್ರಿಯವಾದ ಸಲ್ಲಕಿ ವೃಕ್ಷದ ಹೆಸರನ್ನು ಚಲುಕ್ಯರು ತಮ್ಮ ಮನೆತನದ ಹೆಸರಾಗಿ ಸ್ವೀಕರಿಸಿರಬಹುದೆಂದು ತಿಳಿಯಬಹುದು.

ಟಿಪ್ಪಣಿ ೨ : ಕಪ್ಪೆ ಅರಭಟ್ಟ

ಬಾದಾಮಿಯ ಭೂತನಾಥ ಕೆರೆಯ (ಅಗಸ್ತ್ಯತೀರ್ಥ) ಪೂರ್ವದ ದಂಡೆಯ ಮೇಲೆ ಒಂದು ನೈಸರ್ಗಿಕ ಗುಹೆ ಇದೆ. ಇದನ್ನು ಕೋಷ್ಠರಾಯನ ಗುಡಿ ಎನ್ನುತ್ತಾರೆ. ಒಳಗೆ ಬೃಹದಾಕಾರದ ಕೋಷ್ಠರಾಯನ ಶಿಲ್ಪವಿದೆ.

ರಾಯನು ಸಿಂಹಾಸನ ಮೇಲೆ ಪದ್ಮಾಸನದಲ್ಲಿ ಕುಳಿತಂತೆ ಚಿತ್ರಿತನಾಗಿದ್ದಾನೆ. ಕರ್ಣಕುಂಡಲ, ರತ್ನಹಾರ, ಭುಜಕೀರ್ತಿ, ಕೈಕಡಗಗಳಿಂದ ಅಲಂಕೃತನಾಗಿದ್ದಾನೆ. ಜಪಮಾಲೆ ಹಿಡಿದ ಬಲಗೈ ಅಭಯ ಮುದ್ರೆಯಲ್ಲಿದೆ. ಎಡಗೈ ಧ್ಯಾನ ಮುದ್ರೆಯಲ್ಲಿದೆ.

ಪ್ರಚಲಿತ ದಂತಕಥೆಯಿಂದ ಈ ಗುಹೆಯಲ್ಲಿ ಕುಷ್ಠರೋಗದಿಂದ ಬಳಲುತ್ತಿದ್ದ ಅರಸನು ವಾಸವಾಗಿದ್ದನೆಂದು ತಿಳಿದುಬರುತ್ತದೆ. ಆ ಕುಷ್ಠರೋಗಿಯೇ ಈ ಕುಷ್ಠರಾಯ. ಬಾದಾಮಿಯ ಶಾಸನದಲ್ಲಿ ಕಾಣಿಸಿಕೊಳ್ಳುವ ಕಪ್ಪೆ ಅರಭಟ್ಟನ ಹೆಸರಿನ ಬಗ್ಗೆ ಅನೇಕ ವಿದ್ವಾಂಸರು ಚರ್ಚೆ ಮಾಡಿದ್ದಾರೆ. ಆದರೆ ಕಪ್ಪೆ ಎಂಬುದು ಒಂದು ರೋಗದ ಹೆಸರು ಅಗಿರುವ ಅಂಶವನ್ನು ಅವರು ಗಮನಿಸಿಲ್ಲ. ಕಪ್ಪೆ ಎಂದರೆ ಕಪ್ಪೆಹುಣ್ಣು, ಇದನ್ನು ಕಿಟ್ಟೆಲ್‌ರು ತಮ್ಮ ನಿಘಂಟಿನಲ್ಲಿ a spreading sore in the palm for the hand, on the sole of the foot etc., (South Maratha) ಎಂದು ಅರ್ಥೈಸಿದ್ಧಾರೆ. ಕಪ್ಪೆ ಅರಭಟ್ಟ ಎಂದರೆ ಕಪ್ಪೆಹುಣ್ಣಿನಿಂದ ಬಳಲುವ ಅರಸುಭಟ್ಟ ಅಥವಾ ಕುಷ್ಠರಾಯ ಎಂದರ್ಥ. ಅಂಗದೌರ್ಬಲ್ಯದ ಹಿನ್ನೆಲೆಯಲ್ಲಿ ವಿಷ್ಣುವರ್ಧನನನ್ನು ಕುಬ್ಜ ವಿಷ್ಣುವರ್ಧನನೆಂದು ಗುರುತಿಸಿದಂತೆ ಅರಭಟ್ಟನನ್ನು ಕಪ್ಪೆ ಅರಭಟ್ಟ ಎಂದು ಗುರುತಿಸಿರಬಹುದು.

ಇದರಿಂದಾಗಿ ಕಪ್ಪೆ ಅರಭಟ್ಟನ ಶಾಸನವು ಹೆಚ್ಚು ಅರ್ಥಪೂರ್ಣವಾಗುತ್ತದೆ. ಕಪ್ಪೆ ಅರಭಟ್ಟನಿಗೆ ದಿನ ದಿನವು ಮಾನಭಂಗವನ್ನು ಅನುಭವಿಸುವ ದುರ್ದೆಸೆ ಬಂದದ್ದು ಈ ಕುಷ್ಠರೋಗದಿಂದ. ಸುಶ್ರುತನು ಕುಷ್ಠರೋಗವನ್ನು ಸಾಂಕ್ರಾಮಿಕ ರೋಗವೆಂದು ಹೇಳಿ ರೋಗಿಯ ಬಟ್ಟೆಯನ್ನು ಸಹ ಇತರರು ಮುಟ್ಟುವುದನ್ನು ನಿಷೇಧಿಸುತ್ತಾನೆ. ಹೀಗಾಗಿ ಕುಷ್ಠ ಪೀಡಿತನಾದ ಅರಸನು ಅರಮನೆಯಿಂದ ದೂರವಾಗಿ ಈ ನೈಸರ್ಗಿಕ ಗುಹೆಯಲ್ಲಿ ವಾಸವಾಗಿರಬಹುದಾಗಿದೆ. ಈ ಗುಹೆಯು ವಿಶಾಲವಾಗಿದ್ದು ಬಂಡೆಗಳ ನಡುವಿನ ಕಿಂಡಿಯಿಂದ ತೂರಿಬರುವ ಪ್ರಕಾಶ ಹಾಗೂ ಗಾಳಿ, ವಸತಿಗೆ ತಕ್ಕ ಅನುಕೂಲತೆಯನ್ನು ಒದಗಿಸಿದಂತಿದೆ. ಪ್ರಾಯಶಃ ಒಬ್ಬ ಸೇವಕನಿಂದಲೂ ತಿರಸ್ಕೃತನಾಗಿ ಒಂಟಿಯಾಗಿ ಇಲ್ಲಿ ದಿನ ಕಳೆದ ಅರಸನ ಸ್ಥಿತಿ ಅತ್ಯಂತ ದಯನೀಯವಾದುದಾಗಿರಬೇಕು. ಸಾಮಾಜಿಕವಾಗಿ  ಮಾನಭಂಗವನ್ನುಂಟು ಮಾಡಿದ ಈ ಕ್ಷಣಗಳು ಈಟಿಯಂತೆ ಆತನ ಮನಸ್ಸನ್ನು ಚುಚ್ಚಿರಬಹುದು.

ಕಪ್ಪೆ ಅರಭಟ್ಟನ ಶಾಸನದ ಒಂದೆರಡು ಸಾಲುಗಳ ಬಾದಾಮಿಯ ಹತ್ತಿರ ಮತ್ತೆರಡು ಜಾಗಗಳಲ್ಲಿ ಕಾಣಸಿಗುವುದು ಗಮನಾರ್ಹವೆನಿಸುತ್ತದೆ. ಕೋಷ್ಠರಾಯನ ಗುಡಿಗಿಂತಲೂ ವಿಶಾಲವಾದ ಇನ್ನೊಂದು ನೈಸರ್ಗಿಕ ಗುಹೆ ಎಂದರೆ ಬಾದಾಮಿಯಿಂದ ಸುಮಾರು ೪-೫ ಕಿ.ಮೀ. ಅಂತರದಲ್ಲಿರುವ ಸಿಡಿಲಫಡಿ, ಪ್ರಾಗೈತಿಹಾಸ ಕಾಲದ ಚಿತ್ರ, ಶಿಲಾ ಉಪಕರಣಗಳಿಂದಾಗಿ ಪುರಾತತ್ವ ಕೋವಿದರ ಗಮನ ಸೆಳೆದ ನೆಲೆ ಇದು. ಈ ಗುಹೆಯ ಉತ್ತರ ಗೋಡೆಯ ಮೇಲೆ ‘ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್’ ಎಂಬ ೭-೮ ನೆಯ ಶತಮಾನದ ಶಾಸನವಿದೆ. ಕುಷ್ಠರಾಯನು ಪ್ರಾಯಶಃ ಕೆಲಕಾಲ ಇಲ್ಲಿ ವಾಸವಾಗಿದ್ದನೆಂದು ತಿಳಿಯಬಹುದು. ಮಹಾಕೂಟಕ್ಕೆ ಹೋಗುವ ದಾರಿಯಲ್ಲಿ ಶಿಾರ ಎಂಬ ಸ್ಥಳದಲ್ಲಿಯ ಇನ್ನೊಂದು ಕಲ್ಲಾಸರೆಯಲ್ಲಿ ‘ವರನ್ತೇಜಸ್ವಿನೋ ಮೃತ್ಯುರ್ನತು ಮಾನಾವ ಖಂಡನಂ! ಮೃತ್ಯುಸ್ತತಣಿಕೋ ಮಾನಭಂಗ ದಿನೇ ದಿನೇ’ ಎಂಬ ಸಾಲುಗಳನ್ನು ಕೆತ್ತಲಾಗಿದೆ. ಹೀಗೆ ಕಪ್ಪೆ ಅರಭಟ್ಟನ ಶಾಸನದ ತುಂಡುಗಳು ಕಾಣಸಿಗುವ ಈ ನೈಸರ್ಗಿಕ ಗುಹೆಗಳಲ್ಲಿ ಅರಭಟ್ಟನು ವಾಸವಾಗಿದ್ದನೆಂದು ತಿಳಿಯಬಹುದು. ಇವೆಲ್ಲ ಬಾದಾಮಿಯಿಂದ ಅನತಿ ದೂರದಲ್ಲಿರುವ ಸ್ಥಳಗಳು.

ಕೋಷ್ಠರಾಯಗುಡಿಯ ರಾಯನೇ, ಕಪ್ಪೆ ಅರಭಟ್ಟನ ಶಾಸನದಲ್ಲಿ ವರ್ಣಿತನಾದ ಮಾಧವ, ಈತನೇ ಪರಮ ಭಾಗವತನೆನಿಸಿದ ಒಂದನೆಯ ಕೀರ್ತಿವರ್ಮ ಆಗಿರಬಹುದೇ.


[1]     James Burgess, (೧೮೭೪), Antiquities of the Belgaum and Kaladig; Archaeogical Survey of Western india, Vol III.

[2]     Heny Cousens, (೧೯೨೬), The Chalukyan Architeure of the Kanarese Districts, Archaeolgical Survey of India. Vol. XLII, (Calcutta).

[3]     Yazdani, G. (Ed), (೧೯೮೨), The early History of the Deccan, New Delhi.

[4]     Banerji, R.D., (೧೯೨೮), Basreliefs of Badami, Memoris of the Archealogical Survey of India, Calcutta

[5]     ಎನ್. ಲಕ್ಷ್ಮೀನಾರಾಯಣರಾಯ ಮತ್ತು ಆರ್.ಎಸ್. ಪಂಚಮುಖಿ, (೧೯೪೬), ಕರ್ನಾಟಕದ ಅರಸು ಮನೆತನಗಳು,

[6]     E.I. XXVII, ೨

[7]     I.A.X, P. ೫೭

[8]     E.I., XXVIII, no. ೧೦

[9]     I.A., VII, p. ೨೩೭

[10]    Desai, P.B. (೧೯೭೦), A History of Karnataka, Dharwad, p.೯೨

[11]    ಅದೇ.

[12]    E.I.XXVIII, no. ೨೩

[13]    E.I.XXVII, P.೩೭-೪೧

[14]    ನಂದಿಮಠ ಎಸ್.ಸಿ., (೧೯೯೨), ಕರ್ನಾಟಕದ ಪರಂಪರೆ, ಸಂಪುಟ ೧, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಪು. ೨೩೮.

[15]    ರಾಜೇಂದ್ರಪ್ಪ., ಎಸ್. (೧೯೮೪), ಬಾದಾಮಿ ಚಲುಕ್ಯರ ಆಳ್ವಿಕೆಯಲ್ಲಿ ಕೃಷಿ, ಮಾನವಿಕ ಕರ್ನಾಟಕ, ಸಂಪುಟ ೧೪, ಸಂಚಿಕೆ ೫, ಮೈಸೂರು.

[16]    ಸೈನ್ಯದಂತಿ ಕರೋಚ್ಛಾಟಿತ ಸಲ್ಲಕೀಸಲಯಂ (ಆದಿಪುರಾಣ ೧೨.೫೫)

[17]     ಸುಂದರ ಅ., (೧೯೭೭), ಬಾದಾಮಿಯ ಕೆಳಗಣ ಶಿವಾಲಯವು ಮೂಲತಃ ಗಣೇಶ ದೇವಾಲಯವೇ?ಮಾನವಿಕ ಭಾರತಿ, ಸಂ. ೬, ಧಾರಾಡ, ಪು. ೧೭೯