ಕರ್ನಾಟಕವು ಭವ್ಯಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಂಪರೆಗಳಂತೆಯೇ ಸಾಹಿತ್ಯಿಕ ಪರಂಪರೆಯನ್ನು ಹೊಂದಿದ ನಾಡಾಗಿದೆ. ನಾಡಿನ ಆಯಾ ಅರಸು ಮನೆತನಗಳ ಕಾಲದಲ್ಲಿ ಬರೆಯಿಸಲಾದ ಶಾಸನ ಸಾಹಿತ್ಯವು ಕನ್ನಡ ಸಾಹಿತ್ಯದ ಬಗೆಗಿನ ಅಧ್ಯಯನಕ್ಕೆ ಆಧಾರವಾಗಿದೆ. ಹೀಗೆ ಶಾಸನಗಳು ಸಾಹಿತ್ತಿಕ ಪರಂಪರೆಗೆ ಬುನಾದಿಯಾಗಿದೆ.

ಪ್ರಾಯಃ ಕವಿರಾಜಮಾರ್ಗದ ಪೂರ್ವದ ಸಾಹಿತ್ಯ ಪ್ರಕಾರ ಬೆದಂಡೆ, ಚಿತ್ತಾಣಗಳ ಜೊತೆಯಲ್ಲಿ ತತ್ತಾಣವೂ ತ್ರಿಪದಿಯ ಲಕ್ಷಣವನ್ನು ಹೊಂದಿದ್ದು ಅಂತಹ ದೇಶಿಯ ಸಾಹಿತ್ಯ ರೂಪವನ್ನು ಚಲುಕ್ಯರ ಕಾಲದಲ್ಲಿ ಕಾಣುತ್ತೇವೆ. ಸುಮಾರು ಕ್ರಿ.ಶ.೭೦೦ರ ಅವಧಿಯಲ್ಲಿ ಬರೆಯಲಾದ ಕಪ್ಪೆ ಆರಭಟ್ಟನ ಶಾಸನದಲ್ಲಿ ಪ್ರಪ್ರಥಮ ಬಾರಿ ತ್ರಿಪದಿಯ ರೂಪ ಕಾಣಿಸಿಕೊಳ್ಳುತ್ತದೆ. ಕಪ್ಪೆ ಆರಭಟ್ಟನನ್ನು ಸ್ತುತಿಸುವ ಈ ತ್ರಿಪದಿಯ ಕರ್ತೃ ಯಾರೆಂಬುದು ತಿಳಿಯದು. ಇಂತಹ ಶಾಸನಗಳಲ್ಲಿ ತಮ್ಮ ಕವಿತ್ವವನ್ನು ಪರೋಕ್ಷವಾಗಿ ಪ್ರಕಟಿಸಿದ್ದಾರೆ. ಅವರನ್ನು ಕುರಿತು ಹೀಗೆ ಟಿಪ್ಪಣಿ ಮಾಡಬಹುದು.

ರವಿಕೀರ್ತಿ (ಕ್ರಿ.ಶ.ಸು.೬೨೮)

ಈತನು ರಾಷ್ಟ್ರೀಯ ಮಟ್ಟದ ಪ್ರೌಢಿಮೆವುಳ್ಳ ಸಂಸ್ಕೃತ ಕವಿ ಆಗಿದ್ದಾನೆ. ಸದ್ಯದ ಹುನಗುಂದ ತಾಲೂಕಿನ ಐಹೊಳೆಯಲ್ಲಿರುವ ಮೇಗುತಿ ದೇವಾಲಯದಲ್ಲಿ ದೊರೆಯುವ ಸಂಸ್ಕೃತ ಶಾಸನ ಕರ್ತೃವು ಈತನಾಗಿದ್ದಾನೆ. ಈ ರವಿಕೀರ್ತಿ ಶಾಸನವು ಸತ್ವ, ಕಾವ್ಯಶಕ್ತಿ ಮತ್ತ ಪ್ರೌಢ ಭಾಷೆಯನ್ನೊಳಗೊಂಡಂತೆ, ಉತ್ತಮ ಕೃತಿಯಾಗಿ ರೂಪುಗೊಂಡಿದೆ. ಇಂಥ ಅವನ ಶಾಸನ ಕೃತಿಯ ರವಿಕೀರ್ತಿಯ ಅಸಾಧಾರಣ ಪಾಂಡಿತ್ಯವನ್ನು ತೋರುತ್ತದೆ.

ಬಾದಾಮಿ ಚಲುಕ್ಯರ ಕಾಲದಲ್ಲಿಯೇ ಹಲವಾರು ಪದ್ಯ ಶಾಸನಗಳು ದೊರಕುತ್ತಿದ್ದು. ‘ಪುಲಕೇಶಿ ಪ್ರಶಸ್ತಿ’ ಬರೆದ ರವಿಕೀರ್ತಿಯೇ ‘ಪುಲಕೇಶಿ ವಲ್ಲಭ’ ಎಂದು ಅಂತ್ಯಗೊಳ್ಳುವ ಹಲವಾರು ವರ್ಣ ವೃತ್ತಗಳನ್ನು ಇಮ್ಮಡಿ ಪುಲಕೇಶಿಯ ಆಸ್ಥಾನದಲ್ಲಿ ರಾಜಾಶ್ರಯ ಪಡೆದುಕೊಂಡು ಈತನ ಕುರಿತು ಕಾವ್ಯ ರಚಿಸಿರುವಂತಿದೆ ಎಂದು ಸಂಶೋಧಕ ಡಾ.ಬಿ.ಆರ್. ಹಿರೇಮಠ ಅವರು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಕನ್ನಡದಲ್ಲೂ ಶಾಸನ ಪದ್ಯಗಳನ್ನು ರಚಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಸಂಸ್ಕೃತ ವೃತ್ತಗಳಲ್ಲಿ ರಚಿಸಿದ ರವಿಕೀರ್ತಿಯ ಪದ್ಯದಲ್ಲಿ ಕಾಣುವ ಅಲಂಕಾರಗಳು ಅವಲ ಅಲಂಕಾರ ಶಾಸ್ತ್ರದಲ್ಲಿದ್ದ ಪರಿಪಕ್ವತೆಯನ್ನು ತೋರಿಸುತ್ತದೆ. ಅಲ್ಲದೆ, ಅಲಂಕಾರದಲ್ಲಿ ನಿಸ್ಸೀಮನಾದ ಕಾಳಿದಾಸ ಮತ್ತು ಭಾರವಿ ಇವರಿಗೆ ಸಮಾನನೆಂದು (ವಿಜಯತಾಂ ರವಿಕೀರ್ತಿಃ ಕವಿತಾಶ್ರಿತ ಕಾಳಿದಾಸ ಭಾರವಿ ಕೀರ್ತಿಃ) ಹೇಳಿಕೊಂಡಿದ್ದಾನೆ.

ಕಾಳಿದಾಸನ ‘ರಘುವಂಶ’ದ ರಘು ದಿಗ್ವಿಜಯದ ವರ್ಣನೆಯಿಂದ ಪ್ರಭಾವಿತನಾಗಿದ್ದಾ ನೆಂದು ವಿದ್ವಾಂಸರು ಸಾಧಾರಪಡಿಸಿದ್ದಾರೆ. ಉದಾ: ‘ರಘುವಂಶ’ದ ಶ್ಲೋಕವೊಂದರಲ್ಲಿ,

“ಸ ಸೈನ್ಯ ಪರಿಭೋಗೇನ ಗಜದಾನ ಸಂಧಿ ನಾ
ಕಾವೇರೀಂ ಸರಿತಾ ಪತ್ಯುಃ ಶಂಕನೀಯಾಮವಾಕರೋತ್||”

ಈ ಶ್ಲೋಕದಿಂದ ಪ್ರಭಾವಿತ ಎನ್ನುವಂತೆ ರವಿಕೀರ್ತಿಯು ತನ್ನ ಪ್ರಹರ್ಷಿಣಿ ವೃತ್ತದಲ್ಲಿ,

ಕಾವೇರೀ ಧೃತ – ಶಫರೀ – ವಿಲೋಲ ನೇತ್ರಾ
ಚೋಳನಾಂ ಸಪದಿ ಜಯೋಧ್ಯ ತಸ್ಯ ಯಸ್ಯ|
ಪ್ರಶ್ಚೋತನ್ಮದ – ಗಜ ಸೇತು ರುದ್ಧಾ – ನೀರಾ
ಸಂಸ್ಪರ್ಶಂ ಪರಿಹರತಿ ಸ್ಮರತ್ನಾರಾಶೇಃ || ಎಂದಿದ್ದಾನೆ.

ಕಾಳಿದಾಸನು “…. ಸುವಾಸನೆಯಿಂದೊಡಗೂಡಿದ ಕಾವೇರಿಯನ್ನೇ ಸಮುದ್ರ ರಾಜನು ಶಂಕಿಸಿದ” ಎಂದರೆ ರವಿಕೀರ್ತಿಯ…. ಗಜ ಸೇತುವೆಯಿಂದಾಗಿ ಕಾವೇರಿಗೂ ಪತಿಯಾದ ಸಮುದ್ರಕ್ರೂ ಸಂಪರ್ಕವಿಲ್ಲದಾಯಿತು ಎಂದಿದ್ದಾನೆ. ಒಟ್ಟಿನಲ್ಲಿ ಭಾರತೀಯ ಸಾಹಿತ್ಯ ಮಹತ್ವದ ಈ ರವಿಕೀರ್ತಿಯು ನಮ್ಮ ನಾಡಿನವನು ಎನ್ನುವದು ಅಭಿಮಾನದ ಸಂಗತಿ.

ಅಚಲನ್ (ಕ್ರಿ.ಶ.ಸು. ೭೪೪)

ಬಾದಾಮಿ ಚಲುಕ್ಯ ವಂಶದ ಇಮ್ಮಡಿ ವಿಕ್ರಮಾದಿತ್ಯನ ಹೆಂಡತಿಯಾದ ಲೋಕ ಮಾದೇವಿಯು ತನ್ನ ಗಂಡನ ಕಂಚಿಯ ವಿಜಯದ ದ್ಯೋತಕವಾಗಿ ಪಟ್ಟದ ಕಲ್ಲಿನಲ್ಲಿ ವಿರೂಪಾಕ್ಷ ದೇವಾಲಯವನ್ನು ಕಟ್ಟಿಸಿದ್ದಾಳೆ. ಈ ದೇವಾಲಯದ ಮುಂದಿನ ಅರ್ಧಮಂಟಪದ ಎಡಕಂಬದ ಮಗ್ಗುಲಿನಲ್ಲಿ ಸಂಸ್ಕೃತದ ಆರ್ಯ ಪದ್ಯವಿದೆ. ಅದರ ಕೆಳಗೆ ‘ಅಚಲನ್’ ಎಂದು ಹೆಸರಿದೆ. ಇದಲ್ಲದೆ ಅದರ ಪದ್ಮನಿಧಿ ಕೆಳಗಡೆ ಒಂದು ಉತ್ಪಲಮಾಲಾ ವೃತ್ತದ ಕನ್ನಡ ಪದ್ಯವೂ ಸಹ ಕಂಡು ಬರುತ್ತಿದ್ದು “ದೇವಯ್ಯಗಳಾ ಮಗ ಅಚಲನ್” ಎಂಬ ಅಂಕಿತವಿದೆ. ಆದುದರಿಂದ ಈವೆರಡೂ ಪದ್ಯಗಳ ಕರ್ತೃ ಅಚಲನ್ ಒಬ್ಬನೆ ಆಗಿರುವುದರಲ್ಲಿ ಸಂದೇಹವಿಲ್ಲ.

ಈ ಶಾಸನ ಪದ್ಯಗಳಲ್ಲಿ ನಟಸೇವ್ಯ ಎಂಬವನ ವರ್ಣನೆ ಇದೆ. ಎಂ.ಎಂ.ಅಣ್ಣಿಗೇರಿಯವರು ಶಾಸನದ ಪದ್ಯಾರ್ಥದಲ್ಲಿ ಅಚಲನ್ ಎಂಬ ಹೆಸರು ಸಹ ಪದ್ಯಗಳಲ್ಲಿ ವರ್ಣಿತವಾದ ನಟಸೇವ್ಯನ ಹೆಸರೆಂದು ತೋರುವುದು. ಕಾರಣ ಈ ನಟಿಸೇವ್ಯನೆ ಅಚಲನಾಗಿದ್ದರೂ ಅವನು ಕವಿ ಎಂಬುದು ನಿರ್ವಿವಾದ ಎಂದಿದ್ದಾರೆ.

ದೇವಾಲಯ ನಿರ್ಮಾಣದ ಕಾಲ ಕ್ರಿ.ಶ. ೭೨೨ರಿಂದ ೭೪೪ ಇರುವುದರಿಂದಲೂ ಕ್ರಿ.ಶ. ೭೪೪ರೊಳಗಡೆಯೇ ಅಚಲನ್ ಶಾಸನ ರಚಿಸಿರಬಹುದೆಂದು ನಂಬಲಾಗಿದೆ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಪಡೆದಿರುವ ಈತನ ಪದ್ಯಗಳು ಈ ಮುಂದಿನಂತಿವೆ.

ಕನ್ನಡ ವೃತ್ತ

ಖ್ಯಾತ ಮಹಾಪ್ರಭಾವ ಭಾರತಾಗಮಯುಕ್ತ ಬಹುಪ್ರಕಾರದಾ
ಮಾತಿನೊಳೆಲ್ಲ ಮೇನೊ ನಟಸೇವ್ಯನ ಮನ್ತೆ ಯಥೋಕ್ತಮಾರ್ಗದಿ ||
ನ್ದೀತೆಱದಿಳ್ದುದಗ್ರತಲ ಸಞ್ಚರಮೆಮ್ಬುದಿನೆನ್ದು ಪ್ವೇಱ್ವಿೂಡಿ
ನ್ನಾತನೆ ನರ್ತ್ತಕಂ ನಟರೊಳಗ್ಗಳಮೀ ಭುವನಾನ್ತರಾಳದೊಳ್ ||
-ದೇವಯ್ಯಗಳಾಮಗ ಅಚಲನ್

ಸಂಸ್ಕೃತ ಆರ್ಯ ಪದ್ಯ

ಭರತನುತ ವಚನ ರಚನಾ
ವಿರಚಿತ ನಟಸೇವ್ಯ ಸಿಂಘನಾದೇನ
ಪರನಟ ಮದಾಂಧ ಹಸ್ತೀ
ಪರಹೀನ ಮದೋ ಭವತ್ಯೇವ ||
ನಟ ಸೇವ್ಯ ಭರತ ಮತಯುತ
ಪಟುತರ ವಚನಾಶನಿ ಪ್ರಪಾತೇನ
ಕುಟಿಲೋನ್ನತ ನಟಶೈಲ
ಸ್ಫುಟಿತಾನತ ಮಸ್ತಕಃ ಪತತಿ ||
-ಅಚಲನ್

ಈ ಮೇಲಿನ ಆರ್ಯೆಗೆ ಸಂಸ್ಕೃತದಲ್ಲಿಯೂ ದ್ವಿತೀಯಾಕ್ಷರ ಪ್ರಾಸವನ್ನು ಅಳವಡಿಸಿ ರುವುದು ಗಮನಾರ್ಹವಾಗಿದೆ.

ಇಂಥ ಮೇಲಿನ ಶಾಸನ ಪದ್ಯಗಳು ರಚನಾಕಾರ ಕವಿಗಳಿಂದ ಸಾಹಿತ್ಯಕ್ಕೆ ಚಾರಿತ್ರಿಕ ಮಹತ್ವ ಲಭಿಸುವಂತಾಗಿದೆ. ಕಾರಣ ಕವಿರಾಜ ಮಾರ್ಗದ ಪೂರ್ವ ಕನ್ನಡ ಅಧ್ಯಯನಕ್ಕೆ ಮುಖ್ಯ ಆಕರವಾಗಿವೆ.