ಒಂದು ನಾಡಿನ ಸಾಂಸ್ಕೃತಿಕ ಅಧ್ಯಯನ ಆ ನಾಡಿನ ತತ್ಕಾಲೀನ ಧಾರ್ಮಿಕ ಪರಿಸರದ ಹಿನ್ನೆಲೆಯಲ್ಲಿ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಏಕೆಂದರೆ ಧರ್ಮ ಒಂದು ಜನಾಂಗದ ಸಂಸ್ಕೃತಿಯನ್ನು ರೂಪಿಸುವಲ್ಲಿ ತುಂಬಾ ಮಹತ್ವದ ಪಾತ್ರವಾಡುತ್ತದೆ.

ಒಂದು ಕಾಲದ ಧಾರ್ಮಿಕ ಪರಿಸರದ ಅಧ್ಯಯನಕ್ಕೆ ಆ ಕಾಲದ ಸಾಹಿತ್ಯ ಇತಿಹಾಸ ಹಾಗೂ ಶಾಸ್ತ್ರಗ್ರಂಥಗಳು, ವಿದೇಶೀ ಪ್ರವಾಸಿಕರ ಬರಹಗಳು, ಉತ್ಖನನಗಳಲ್ಲಿ ದೊರೆತ ಪ್ರಾಚೀನ ಅವಶೇಷಗಳು, ಮುಖ್ಯವಾಗಿ ಶಾಸನಗಳು ನೆರವು ನೀಡುತ್ತದೆ. ಈ ನಿಟ್ಟಿನಲ್ಲಿ ಗಮನಿಸಬೇಕಾದ ಇನ್ನೂ ಮಹತ್ವದ ಹಾಗೂ ಹೆಚ್ಚು ವಿಶ್ವಾಸಾರ್ಹ ಸಾಮಗ್ರಿಗಳೆಂದರೆ ವಾಸ್ತು ಹಾಗೂ ಮೂರ್ತಿಶಿಲ್ಪಗಳು. ಅವು ಆಯಾಕಾಲದ ಜನರ ಧಾರ್ಮಿಕ ಭಾವನೆಗಳನ್ನು ಅವರ ದೈವೀಭಕ್ತಿಯನ್ನು ಅವರ ನಂಬಿಕೆ, ಆಚಾರ, ವಿಚಾರ, ಸಂಪ್ರದಾಯ, ಮೊದಲಾದವನ್ನು ಒಂದಿಲ್ಲೊಂದು ರೀತಿಯಲ್ಲಿ ಇಟ್ಟುಕೊಂಡಿರುತ್ತವೆ. “ಬಹುಧರ್ಮಧೇನು ನಿವಹಕ್ಕೆ ಆಡುಂಬೊಲಂ” ಎಂದು ಶಾಸನವೊಂದರಲ್ಲಿ ವರ್ಣಿತವಾಗಿರುವ ನಮ್ಮ ಈ ಕನ್ನಡ ನಾಡಿನಲ್ಲಿ ವಿವಿಧ ಧರ್ಮದವರಿಗೆ ಪೂಜ್ಯರಾದ ದೇವ ದೇವತೆಗಳನ್ನು, ರಾಜ‑ಮಹಾರಾಜರ ಧಾರ್ಮಿಕ ದೃಷ್ಟಿಯನ್ನು ಒಟ್ಟಿನಲ್ಲಿ ತತ್ಕಾಲೀನ ಧಾರ್ಮಿಕ ಪರಿಸರವನ್ನು ತಿಳಿಯಲು ಮೂರ್ತಿ ಮತ್ತು ವಾಸ್ತುಶಿಲ್ಪಗಳು ನಮಗೆ ನೀಡುವ ನೆರವು ಅಧಿಕ.

ಒಂದು ಕಾಲಾವಧಿಯಲ್ಲಿ ನಿರ್ಮಾಣಗೊಂಡ ವಿವಿಧ ಧರ್ಮೀಯರ ದೇವಸ್ಥಾನಗಳ ಸಂಖ್ಯೆ, ಅವುಗಳ ಒಳ ಹೊರಗಿನ ಗೋಡೆಗಳು, ಕಂಬ, ತೊಲೆ, ಛತ್ತು, ಬಾಗಿಲು, ಲಲಾಟಬಿಂಬ, ಶಿಖರ, ಅಧಿಷ್ಠಾನ ಇತ್ಯಾದಿ ಸ್ಥಳಗಳಲ್ಲಿ ಕೆತ್ತಿದ, ಕೊರೆದ, ಕಂಡರಿಸಿದ, ಕಟೆದ ಹಾಗೂ ಬಿಡಿಸಿದ ವಿಗ್ರಹಗಳು ಉಬ್ಬುಶಿಲ್ಪ, ರೇಖಾಶಿಲ್ಪ ಮತ್ತು ಮೂರ್ತಿಶಿಲ್ಪಗಳು ಧಾರ್ಮಿಕ ಪರಿಸರದ ಅಧ್ಯಯನದ ದೃಷ್ಟಿಯಿಂದ ಹೆಚ್ಚು ಮಹತ್ವದವೆನಿಸುತ್ತವೆ. ಈ ಒಂದು ವಿಚಾರದ ಹಿನ್ನೆಲೆಯಲ್ಲಿ ಬಾದಾಮಿಯ ಚಾಲುಕ್ಯರ ಕಾಲದ ಧಾರ್ಮಿಕ ಪರಿಸರವನ್ನು ಗುರುತಿಸಲು ಪ್ರಸ್ತುತ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

ಈ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಗಮನಿಸುವುದು ಮುಖ್ಯ. ಒಂದು ಕಾಲದ ಧಾರ್ಮಿಕ ಪರಿಸರದ ಮೆಲೆ ತತ್ಪೂರ್ವದ ಧಾರ್ಮಿಕ ಸ್ಥಿತಿ‑ಗತಿಗಳು ಹಾಗೂ ಸ್ಥಿತ್ಯಂತರಗಳು ಪ್ರಭಾವ ಬೀರುತ್ತವೆ. ಬಾದಾಮಿಯ ಚಾಲುಕ್ಯರು ಇಡೀ ಕನ್ನಡ ಪ್ರದೇಶವನ್ನು ಏಕಛತ್ರಾಧಿಪತಿಗಳಾಗಿ ಆಳುವ ಮೊದಲು, ಕೆಲವು ಹಿರಿ ಕಿರಿ ಅರಸುಮನೆತನಗಳು, ಕರ್ನಾಟಕದ ಬೇರೆ ಬೇರೆ ಭಾಗಗಳನ್ನು ಆಳುತ್ತಿದ್ದವು. ಅವುಗಳಲ್ಲಿ ಪ್ರಾಚೀನವಾದುದು ಸಾತವಾಹನ ಅರಸುಮನೆತನ. ಅವರು ಆಳ್ವಿಕೆ ನಡೆಸಿದ ಉತ್ಖನನಗಳಲ್ಲಿ ಬೌದ್ಧಧರ್ಮದ ಅವಶೇಷಗಳು ದೊರೆತಿವೆ. ಅವುಗಳ ಕಾಲ ಕ್ರಿ.ಶ. ಒಂದು, ಎರಡನೆಯ ಶತಮಾನವೆಂದು ಹೇಳಲಾಗುತ್ತದೆ. ಇದರಿಂದ ಕ್ರಿ.ಶ. ಆರಂಭದ ಹೊತ್ತಿಗಾಗಲೇ ಬೌದ್ಧಧರ್ಮ ಕರ್ನಾಟಕದಲ್ಲಿ ಚೆನ್ನಾಗಿ ನೆಲೆಯೂರಿತ್ತೆಂದು ಹೇಳಬಹುದು.

ಸಾತವಾಹನ ದೊರೆಗಳು, ತಾಳಗುಂದದ ಪ್ರಣವೇಶ್ವರ ದೇವರನ್ನು ಪೂಜಿಸಿದಂತೆ ಅಲ್ಲಿಯ ಸ್ತಂಭಶಾಸನ ತಿಳಿಸುತ್ತದೆ. ಶಿವಲಿಂಗವನ್ನೊಳಗೊಂಡ ಸಾತವಾಹನರ ಕಾಲದ ದೇವಾಲಯದ ಅವಶೇಷಗಳು ಕರ್ನಾಟಕದ ಕೆಲಭಾಗಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ದೊರೆತಿವೆ. ಇದರಿಂದ ಬೌದ್ಧ ಧರ್ಮದ ಜೊತೆ ಜೊತೆಗೆ ಶೈವಧರ್ಮಕೂಡ ಪ್ರಚಲಿತವಿರುವುದು ಅವೆರಡು ಪ್ರಮುಖ ಧರ್ಮಗಳನ್ನು ಸಾತವಾಹನರು ಸಮಾನ ದೃಷ್ಟಿಯಿಂದ ಕಾಣುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ.

ಸಾತವಾಹನರ ಸಾಮಂತರಾಗಿದ್ದ ಚುಟುಕುಲದ ಅರಸರು ಕ್ರಿ.ಶ. ಮೂರನೆಯ ಶತಮಾನದಲ್ಲಿ ಕುಂತಳದ ಅಧಿಪತಿಗಳಾಗಿದ್ದರು. ಬನವಾಸಿಯಲ್ಲಿ ಇವರ ಕಾಲದ ಒಂದು ಸುಂದರ ನಾಗಪ್ರತಿಮೆ ಸಿಕ್ಕಿದ್ದು ಅದರ ಎರಡೂ ಕಡೆ ಶಾಸನವಿದೆ. ಅದರಲ್ಲಿ ಚುಟುಕುಲಾನಂದ ಸಾತಕರಣಿಯ ಮಗಳು ನಾಗಶ್ರೀ ಎಂಬವಳು ಈ ನಾಗನನ್ನೂ ಕೆರೆ ವಿಹಾರಗಳನ್ನೂ ದಾನ ಮಾಡಿದುದರ ಉಲ್ಲೇಖವಿದೆ. ಕ್ರಿ.ಶ. ಮೂರನೆಯ ಶತಮಾನದಲ್ಲಿ ನಾಗಪೂಜೆ ನಮ್ಮ ದೇಶದಲ್ಲಿ ಪ್ರಚಲಿತವಿದ್ದುದನ್ನು ಇದು ಸಾಬೀತು ಪಡಿಸುತ್ತದೆ. ನಾಗಶ್ರೀ ವಿಹಾರವನ್ನೂ ಇಲ್ಲಿ ದಾನ ಮಾಡಿರುವುದು ಅವಳು ಬೌದ್ಧ ಶೈವಗಳೆರಡಕ್ಕೂ ಸಮಾನಗೌರವ ಕೊಡುತ್ತಿದ್ದುದರ ಸೂಚನೆಯಾಗಿದೆ.

ಉತ್ತರಕನ್ನಡದ ಇತಿಹಾಸಾನ್ವೇಷಣೆಯ ಸಂದರ್ಭದಲ್ಲಿ ಕೆಲವು ಮೂರ್ತಿಗಳು ದೊರೆತಿದ್ದು ಅವುಗಳಲ್ಲಿ ಸ್ಕಂದ ಹಾಗೂ ವಿಷ್ಣುಮೂರ್ತಿಗಳು ಮುಖ್ಯವಾಗಿವೆ. ಇವುಗಳ ಜೊತೆ ಬುದ್ಧನ ವಿಗ್ರಹಗಳೂ ಸಿಕ್ಕಿವೆ. ಇವೆಲ್ಲವುಗಳ ಕಾಲ ಕ್ರಿ.ಶ. ೨, ೩ನೆಯ ಶತಮಾನವೆಂದು ಸಂಶೋಧಕರ ಅಭಿಪ್ರಾಯ. ಇದರಿಂದ ವಿಷ್ಣು, ಬುದ್ಧ ಹಾಗೂ ಸ್ಕಂದ ‑ಇತ್ಯಾದಿ ದೇವತೆಗಳ ಪೂಜೆ ಆಗ ಪ್ರಚಲಿತವಿದ್ದಂತೆ ತಿಳಿದುಬರುತ್ತದೆ.

ಕರ್ನಾಟಕವನ್ನಾಳಿದ ಬಾದಾಮಿಯ ಚಾಲುಕ್ಯರ ಪೂರ್ವದ ಅರಸುಮನೆತನಗಳಲ್ಲಿ, ಕದಂಬ ಅರಸುಮನೆತನ ಗಮನಾರ್ಹವಾದುದು. ಇವರು ವೈದಿಕರಾಗಿದ್ದರೂ ಜೈನ ಹಾಗೂ ಬೌದ್ಧ ಧರ್ಮಗಳ ಬಗ್ಗೆ ಗೌರವ ಭಾವನೆಯುಳ್ಳವರಾಗಿದ್ದು, ಅವುಗಳಿಗೆ ದಾನ‑ದತ್ತಿಗಳನ್ನು ಕೊಟ್ಟ ಬಗ್ಗೆ ಶಾಸನಗಳು ಉಲ್ಲೇಖಿಸುತ್ತವೆ. ಜೈನರಲ್ಲಿ ಶ್ವೇತಾಂಬರ ಹಾಗೂ ದಿಗಂಬರ ಪಂಗಡಗಳೆರಡೂ ಆಗ ಕರ್ನಾಟಕದಲ್ಲಿ ಇದ್ದುದರ ಉಲ್ಲೇಖ ಆ ಶಾಸನಗಳಲ್ಲಿ ಬರುತ್ತದೆ. ಕದಂಬರ ಕಾಲದ ಕೆಲವು ಶಾಸನಗಳಲ್ಲಿ ಮನ್ಮಥ (ಬಾಹುಬಲಿ) ದೇವಾಲಯ ನಿರ್ಮಿಸಿದ ಉಲ್ಲೇಖದ ಜೊತೆಗೆ ಪದ್ಮಾವತಿ(ಪಾರ್ಶ್ವನಾಥಜಿನನ ಯಕ್ಷಿ)ಯ ಹೆಸರೂ ಬರುತ್ತವೆ. ಇದರಿಂದ ತೀರ್ಥಂಕರನ ಪೂಜೆಯ ಜೊತೆಗೆ ಕದಂಬರ ಕಾಲದಲ್ಲಿ ಕಾಮದೇವ ಹಾಗೂ ಯಕ್ಷಿಯರ ಪೂಜೆಯೂ ಜೈನರಲ್ಲಿ ರೂಢಿಗೆ ಬಂದಿದ್ದುದು ವಿದಿತವಾಗುತ್ತದೆ. ಇವರ ಕಾಲದಲ್ಲಿ ಬೌದ್ಧಧರ್ಮ ಇಳಿಮುಖವಾಗುತ್ತಿದ್ದುದನ್ನು ಗುರುತಿಸಬಹುದು.

ಕ್ರಿ.ಶ.೩೨೫ರ ಹೊತ್ತಿಗೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಇನ್ನೊಂದು ಅರಸುಮನೆತನ ಗಂಗರದು. ಜೈನ ಆಚಾರ್ಯ ಸಿಂಹನಂದಿಯ ಆಶೀರ್ವಾದದಿಂದ ಈ ಅರಸು ಮನೆತನ ಸ್ಥಾಪನೆಗೊಂಡಿತೆಂದೂ, ಆ ಮನೆತನದ ಎಲ್ಲ ಅರಸರು ಜೈನರಾಗಿದ್ದರೆಂದೂ ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಇಂತಹ ಹೇಳಿಕೆಗಳು ಬರುವುದು ಹನ್ನೆರಡನೆಯ ಶತಮಾನದ ಶಾಸನಗಳಲ್ಲೆಂಬುದನ್ನು ಮರೆಯಲಾಗದು. ಈ ವಂಶದ ಅರಸರ ಹೆಸರುಗಳು, ಮಾಧವ, ವಿಷ್ಣುಗೋಪ, ಹರಿವರ್ಮ ಮುಂತಾಗಿ ಇರುವುದನ್ನೂ, ಇವರಲ್ಲಿ ಕೆಲವರನ್ನು ಶಾಸನಗಳಲ್ಲಿ “ನಾರಾಯಣಚರಣಾನುಧ್ಯಾತ”, “ತ್ರ್ಯಂಬಕ ಚರಣಾಧ್ಯಾತ”, “ಕಮಲೋದರ ಚರಣ ಕಮಲಾನುಧ್ಯಾತ” ಮುಂತಾಗಿ ಬಣ್ಣಿಸಿರುವುದನ್ನೂ ನೋಡಿದಾಗ, ರೂಢಿಯಲ್ಲಿರುವ ಮಾತುಗಳನ್ನು ನಂಬುವುದು ಕಷ್ಟ. ಈ ವಂಶದ ಅರಸರು ಜೈನದತ್ತ ಹೆಚ್ಚು ಒಲವು ತೋರಿರಬಹುದು. ಕೆಲವು ಜನ ಅರಸರು ಜೈನರೂ ಆಗಿರಬಹುದು. ಇವರ ಕಾಲದಲ್ಲಿ ಜೈನಬಸದಿಗಳು ನಿರ್ಮಾಣಗೊಂಡ ಬಗ್ಗೆಯೂ ಆಧಾರಗಳಿವೆ. ಇದರಿಂದ ಜೈನ, ಬೌದ್ಧ ಹಾಗೂ ಶೈವಧರ್ಮಗಳನ್ನು ಗಂಗ ಅರಸರು ಸಮಾನವಾಗಿ ಗೌರವಿಸುತ್ತಿದ್ದುದು ಸ್ಪಷ್ಟವಾಗುತ್ತದೆ.

ಇದು ಬಾದಾಮಿ ಚಾಲುಕ್ಯರ ಪೂರ್ವದಲ್ಲಿ ಇದ್ದ ಧಾರ್ಮಿಕ ಪರಿಸ್ಥಿತಿ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಾತವಾಹನರ ಕಾಲದಲ್ಲಿ ಒಂದು ಗಟ್ಟಿ ನೆಲೆಯನ್ನು ಹೊಂದಿದ್ದ ಬೌದ್ಧಧರ್ಮ ಬಾದಾಮಿಯ ಚಾಲುಕ್ಯರು ಅಧಿಕಾರಕ್ಕೆ ಬರುವ ಹೊತ್ತಿಗೆ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತ ನಡೆದಿರುವುದು ಸ್ಪಷ್ಟವಾಗುತ್ತದೆ. ಆದರೆ ಜೈನಧರ್ಮ ಈ ಅವಧಿಯಲ್ಲಿ ಚೇತರಿಸಿಕೊಳ್ಳುತ್ತ ನಡೆದಿದ್ದುದು ಗಮನಾರ್ಹ. ಶೈವ, ವೈಷ್ಣವ ಧರ್ಮಗಳೂ ಸುಳಿದೆಗೆದು ಬೆಳೆಯಲಾರಂಭಿಸಿದ್ದವು. ಇಲ್ಲಿ ಲಕ್ಷಿಸಬೇಕಾದ ಒಂದು ಮಹತ್ವದ ಅಂಶವೆಂದರೆ ಬಾದಾಮಿ ಚಾಲುಕ್ಯರ ಪೂರ್ವದಲ್ಲಿ ಕರ್ನಾಟಕ ಬೇರೆ ಬೇರೆ ಭಾಗಗಳನ್ನು ಆಳುತ್ತಿದ್ದ ಅರಸರು ತಾವು ಯಾವುದೇ ಧರ್ಮವನ್ನು ಅನುಸರಿಸುತ್ತಿರಲಿ, ಉಳಿದೆಲ್ಲ ಧರ್ಮಗಳನ್ನು ಸಮಾನದೃಷ್ಟಿಯಿಂದ ಕಾಣುವ ಹಾಗೂ ಅವುಗಳನ್ನು ಗೌರವಿಸುವ ಒಂದು ಸತ್‌ಪರಂಪರೆಯನ್ನು ಆರಂಭಿಸಿ ಅದನ್ನು ಮುಂದುವರಿಸಿಕೊಂಡು ಬಂದುದು. ಈ ಒಂದು ಹಿನ್ನೆಲೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಧಾರ್ಮಿಕ ಪರಿಸರದ ಅವಲೋಕನಕ್ಕೆ ತೊಡಗಬಹುದು.

ಬಾದಾಮಿಯ ಚಾಲುಕ್ಯರು ಅಖಂಡ ಕರ್ನಾಟಕವನ್ನು ಕ್ರಿ.ಶ. ಸುಮಾರು ೫೩೫ರಿಂದ ೭೫೭ರವರೆಗೆ ಎಂದರೆ ಎರಡು ಎರಡೂ ಕಾಲು ಶತಮಾನಗಳ ಕಾಲ ಏಕಛತ್ರಾಧಿಪತಿಗಳಾಗಿ ಆಳಿದರು. ಕನ್ನಡಿಗರಲ್ಲಿ ಮೊಟ್ಟಮೊದಲ ಅಖಂಡ ಕರ್ನಾಟಕದ ಪರಿಕಲ್ಪನೆಯ ಬೀಜಾರೋಪಣವಾದುದು ಇವರ ಕಾಲದಲ್ಲಿ. ವಾಸ್ತು ಮತ್ತು ಮೂರ್ತಿಶಿಲ್ಪಗಳಿಗೆ ಇವರು ಹೆಚ್ಚು ಪ್ರೋಒಬ್ಬ ದೊರೆಯಿಂದ ಮತ್ತೊಬ್ಬ ದೊರೆಯ ಕಾಲಕ್ಕೆ ದೇವಾಲಯಗಳ ನಿರ್ಮಾಣ ಅಧಿಕಗೊಳ್ಳುತ್ತ ನಡೆದಿರುವುದನ್ನು ಇವರ ಆಳ್ವಿಕೆಯ ಅವಧಿಯಲ್ಲಿ ಕಾಣುತ್ತೇವೆ. ಇವರ ಕಾಲದ ದೇವಾಲಯಗಳ ಸಂಖ್ಯೆ ಹಾಗೂ ಆ ದೇವಾಲಯಗಳ ವಿವಿಧ ಭಾಗಗಳಲ್ಲಿ ಕಂಡುಬರುವ ಮೂರ್ತಿಶಿಲ್ಪಗಳು ತತ್ಕಾಲೀನ ಧಾರ್ಮಿಕ ಪರಿಸರವನ್ನು ಗುರುತಿಸಲು ಹೆಚ್ಚು ಸಹಾಯ ಒದಗಿಸುತ್ತವೆ.

ಈ ವಂಶದ ಬೇರೆ ಬೇರೆ ಅರಸರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಿವಿಧ ಧರ್ಮೀಯರ ದೇವಸ್ಥಾನಗಳ ಸಂಕ್ಷಿಪ್ತ ವಿವರಣೆ ಇಲ್ಲಿ ಪ್ರಸ್ತುತ.

ಬಾದಾಮಿಯ ಚಾಲುಕ್ಯರ ಆಳ್ವಿಕೆಗೆ ಗಟ್ಟಿನೆಲಗಟ್ಟನ್ನು ಒದಗಿಸಿದವ ಮೊದಲನೆಯ ಪುಲಿಕೇಶಿ. ಬಾದಾಮಿಯ ಕೋಟೆಯನ್ನು ಕಟ್ಟಿಸಿದವನು ಇವನೇ. ಬಾದಾಮಿಯ ಬೆಟ್ಟವನ್ನು ಕೊರೆದು ಮೊದಲ ಎರಡು ಗುಹಾಲಯಗಳನ್ನು‑ಒಂದು ಶೈವ ಇನ್ನೊಂದು ವೈಷ್ಣವ‑ ನಿರ್ಮಿಸಿದವನೂ ಇವನೇ ಎಂದು ತೋರುತ್ತದೆ. ಔಹೊಳೆಯ ಬೌದ್ಧಗುಹಾಲಯ ಇವನ ಕಾಲದಲ್ಲೇ ನಿರ್ಮಾಣಗೊಂಡುದೆಂದು ಹೇಳಲಾಗುತ್ತದೆ. ಇವನ ಅನಂತರ ಬಂದ ಮೊದಲನೆಯ ಕೀರ್ತಿವರ್ಮನ ಕಾಲದಲ್ಲಿ ಐಹೊಳೆಯ ಜೈನ ಮೀನಬಸದಿ ಮತ್ತು ಮಹಾಕೂಟದ ಮಕುಟೇಶ್ವರ ದೇವಾಲಯಗಳ ನಿರ್ಮಾಣವಾಯಿತು. ಈತನ ತಮ್ಮ ಮಂಗಲೇಶ ಬಾದಾಮಿಯ ವೈಷ್ಣವ ಗುಹಾಲಯವನ್ನು ಕ್ರಿ.ಶ.೫೭೮ರಲ್ಲಿ ಕೊರೆಯಿಸಿದಂತೆ ಅಲ್ಲಿಯ ಒಂದು ಶಾಸನ ತಿಳಿಸುತ್ತದೆ.

ಬಾದಾಮಿಯ ಮೇಗಣ ಶಿವಾಲಯ (ಮೂಲತಃ ಇದು ವಿಷ್ಣುದೇವಾಲಯವಂತೆ) ಐಹೊಳೆಯ ರಾವಣಫಡಿ ಮತ್ತು ಜೈನಬಸದಿ (ರವಿಕೀರ್ತಿ ನಿರ್ಮಿಸಿದ್ದು) ಇವೆಲ್ಲ ಸುಪ್ರಸಿದ್ಧ ಬಾದಾಮಿ ಚಾಲುಕ್ಯಚಕ್ರವರ್ತಿ ಎರಡನೆಯ ಪುಲಿಕೇಶಿಯ ಕಾಲದವು.

ಬಾದಾಮಿಯ ಗುಹಾದೇವಾಲಯಗಳಿರುವ ಬೆಟ್ಟದಲ್ಲಿಯೆ ಒಂದು ನಿಸರ್ಗ ನಿರ್ಮಿತ ಗುಹೆ ಇದ್ದು ಅಲ್ಲಿ ಪದ್ಮಪಾಣಿಬುದ್ಧನ ಶಿಲ್ಪವಿದೆ. ಇದರ ಕಾಲ ತಿಳಿಯದು.

ಹೀಗೆ ಮೊದಲನೆಯ ಪುಲಿಕೇಶಿಯಿಂದ ಮೊದಲುಗೊಂಡು ಎರಡನೆಯ ಪುಲಿಕೇಶಿಯ ವರೆಗಿನ ಅವಧಿಯಲ್ಲಿ ಶೈವ, ವೈಷ್ಣವ, ಜೈನ ಹಾಗೂ ಬೌದ್ಧಧರ್ಮಕ್ಕೆ ಸಂಬಂಧಿಸಿದಂತೆ ಹಲವು ಗುಹಾ ಮತ್ತು ಕಟ್ಟಡದೇವಾಲಯಗಳು ನಿರ್ಮಾಣಗೊಂಡಿವೆ. ಮೊದಲನೆಯ ಪುಲಿಕೇಶಿ ಅಶ್ವಮೇಧಾದಿ ಯಾಗಗಳನ್ನು ಮಾಡಿದಂತೆ ಅವನ ಶಾಸನ ತಿಳಿಸುತ್ತದೆ. ಆದುದರಿಂದ ಬಾದಾಮಿ ಚಾಲುಕ್ಯರು ವೈದಿಕಮತಾವಲಂಬಿಗಳಾಗಿದ್ದರೆಂಬುದು ಸ್ಪಷ್ಟ. ಆದರೂ ಅವರ ಕಾಲದಲ್ಲಿ ಜೈನಬಸದಿ, ಬೌದ್ಧಚೈತ್ಯಾಲಯಗಳು ನಿರ್ಮಾಣಗೊಂಡಿರುವುದು ಅವರ ಸರ್ವಧರ್ಮಸಮಾನ ದೃಷ್ಟಿಯ ದ್ಯೋತಕ. ‘ಮಹಾಭಾಗವತ’ ಎನಿಸಿಕೊಂಡಿದ್ದ, ಮಂಗಲೇಶ ವಿಷ್ಣುಗುಹೆಯನ್ನು ಕೊರೆಯಿಸಿರುವ ಜೊತೆಗೆ, ಮಹಾಕೂಟೇಶ್ವರನಿಗೆ ದಾನ ದತ್ತಿಗಳನ್ನೂ ಬಿಟ್ಟಿದ್ದಾನೆ. ಇದು ಶಿವ ಮತ್ತು ವಿಷ್ಣುಗಳನ್ನು ಅವನು ಸಮಾನ ಗೌರವದಿಂದ ಕಾಣುತ್ತಿದ್ದುದರ ಸೂಚನೆಯಾಗಿದೆ. ಅಂತೂ ಈ ಅವಧಿಯಲ್ಲಿ ವೈದಿಕ ಮತ್ತು ವೈದಿಕೇತರ ಧರ್ಮದವರು, ಪರಸ್ಪರ ಸ್ನೇಹಭಾವನೆಯಿಂದಿದ್ದು ಸಹಬಾಳ್ವೆ ನಡೆಸುತ್ತಿದ್ದರೆಂದು ಹೇಳಬಹುದಾಗಿದೆ.

ಉತ್ತರಾಪಥದ ಚಕ್ರವರ್ತಿ ಹರ್ಷವರ್ಧನನನ್ನು ಸೋಲಿಸಿ ‘ಪರಮೇಶ್ವರ’ ಬಿರುದನ್ನು ಧರಿಸಿದ್ದ ಎರಡನೆಯ ಪುಲಿಕೇಶಿಯನ್ನು ಸೋಲಿಸಿ, ಒಂದು ದಶಕಕ್ಕೂ ಹೆಚ್ಚು ಕಾಲ ಬಾದಾಮಿ ಕೋಟೆಯನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದ ಪಲ್ಲವದೊರೆಯನ್ನು ಅಲ್ಲಿಂದ ಓಡಿಸಿದ ಮೊದಲನೆಯ ವಿಕ್ರಮಾದಿತ್ಯ, ವೈಷ್ಣವಧರ್ಮವನ್ನು ಬಿಟ್ಟು, ಸುದರ್ಶನಾಚಾರ್ಯರಿಂದ ‘ಶೈವದೀಕ್ಷೆ’ ಪಡೆದುದು, ಬಾದಾಮಿಯ ಚಾಲುಕ್ಯರ ಕಾಲದ ಧಾರ್ಮಿಕ ಪರಿಸರದ ಮೇಲೆ ಪ್ರಭಾವ ಬೀರದೆ ಹೋಗಲಿಲ್ಲ. ಇವನ ಅನಂತರ ಬಂದ ಈ ಮನೆತನದ ಅರಸರೆಲ್ಲರೂ ಶೈವಧರ್ಮದ ಅನುಯಾಯಿಗಳೇ ಆಗಿದ್ದುದರಿಂದ ಸಹಜವಾಗಿಯೇ ಇವರ ಕಾಲದಲ್ಲಿ ಶೈವದೇವಾಲಯಗಳೇ ಅಧಿಕಸಂಖ್ಯೆಯಲ್ಲಿ ನಿರ್ಮಾಣಗೊಂಡವು.

‘ಪರಮ ಮಾಹೇಶ್ವರ’ ಬಿರುದು ಧರಿಸಿದ್ದ ಈ ವಿಕ್ರಮಾದಿತ್ಯನ ಕಾಲದಲ್ಲಿ, ಹಳೆಯ ಮಹಾಕೂಟದ ಗಜಪೃಷ್ಠಾಕಾರದ ಶಿವಾಲಯ, ಬಾದಾಮಿಯ ಮಾಲೆಗಿತ್ತಿ ಶಿವಾಲಯ ಮೊದಲಾದವು ಕರ್ನಾಟಕದಲ್ಲಿ ನಿರ್ಮಾಣಗೊಂಡಿದ್ದರೆ ಆಂಧ್ರದ ಆಲಂಪುರದಲ್ಲಿ ಅರ್ಕಬ್ರಹ್ಮ ತಾರಕಬ್ರಹ್ಮ ದೇವಾಲಯಗಳು ಕಡಮರಕಲವದಲ್ಲಿ ಶಿವನಂದೀಶ್ವರ ದೇವಾಲಯ ನಿರ್ಮಾಣಗೊಂಡಿವೆ.

ವಿಕ್ರಮಾದಿತ್ಯನ ಅನಂತರ ಪಟ್ಟಕ್ಕೆ ಬಂದ ವಿನಯಾದಿತ್ಯ ತನ್ನ ರಾಣಿಯ ಸ್ಮರಣಾರ್ಥ ಆಲಂಪುರದಲ್ಲಿ ಸ್ವರ್ಗಬ್ರಹ್ಮದೇವಾಲಯ ಕಟ್ಟಿಸಿದ್ದಾನೆ. ಪಾಣ್ಯದ ಶಿವದೇವಾಲಯ ಮಹಾನಂದಿಯ ಮಹಾನಂದೀಶ್ವರ ದೇವಾಲಯಗಳು ಇವನ ಕಾಲದವೇ ಆಗಿವೆ.

ವಿನಯಾದಿತ್ಯನಾದ ಮೇಲೆ ರಾಜ್ಯವಾಳಿದ ವಿಜಯಾದಿತ್ಯನ ಕಾಲದಲ್ಲಿ ದೇವಾಲಯಗಳ  ನಿರ್ಮಾಣ ಇನ್ನೂ ಅಧಿಕಗೊಂಡಿತು. ಪಟ್ಟದಕಲ್ಲಿನಲ್ಲಿ ಈತನು ತನ್ನ ಹೆಸರಿನ ‘ವಿಜಯೇಶ್ವರ’ ದೇವಾಲಯ (ಇಂದಿನ ಸಂಗಮೇಶ್ವರ ದೇವಾಲಯ) ಕಟ್ಟಿಸಿದ್ದಾನೆ. ಪ್ರಾಯಃ ಪಟ್ಟದಕಲ್ಲಿನಲ್ಲಿ ನಿರ್ಮಾಣಗೊಂಡ ಮೊಟ್ಟಮೊದಲ ದೇವಾಲಯವಿದು. ವಿಜಯಾದಿತ್ಯನ ತಾಯಿ ವಿನಯವತಿ ಬಾದಾಮಿಯಲ್ಲಿ ‘ಜಂಬುನಾಥ’ ಹೆಸರಿನ ಒಂದು ತ್ರಿಕೂಟದೇವಾಲಯ ಕಟ್ಟಿಸಿದ್ದಾಳೆ. ಕರ್ನಾಟಕದ ತ್ರಿಕೂಟದೇವಾಲಯಗಳಲ್ಲಿ ಇದೇ ಅತ್ಯಂತ ಪ್ರಾಚೀನವೆಂದು ಹೇಳಲಾಗುತ್ತದೆ. ವಿಜಯಾದಿತ್ಯನ ಸೋದರಿ ಕಂಕುಮ ಮಹಾದೇವಿ ಲಕ್ಷ್ಮೇಶ್ವರದಲ್ಲಿ ಆನೆಸಜ್ಜೆಯ ಬಸದಿಯನ್ನು ಕಟ್ಟಿಸಿರುವುದು ಗಮನಾರ್ಹ ಅಂಶ. ಮಹಾಕೂಟದ ಬಳಿಯ ನಾಗನಾಥನಕೊಳ್ಳದ ನಾಗನಾಥ ದೇವಾಲಯ, ಬನ್ನಿಕೊಪ್ಪದ (ಧಾರವಾಡ ಜಿಲ್ಲೆ) ಅರ್ಜುನೇಶ್ವರ ದೇವಾಲಯ, ಐಹೊಳೆಯ ಹುಚ್ಚಪ್ಪಯ್ಯ ಹಾಗೂ ದುರ್ಗಾಭಗವತಿ ದೇವಾಲಯ ಇವೆಲ್ಲ ನಿರ್ಮಾಣಗೊಂಡುದು ವಿಜಯಾದಿತ್ಯನ ಆಳ್ವಿಕೆಯಲ್ಲಿಯೆ.

ವಿಜಯಾದಿತ್ಯನ ಅನಂತರ ಪಟ್ಟಕ್ಕೆ ಬಂದ ಎರಡನೆಯ ವಿಕ್ರಮಾದಿತ್ಯನ ಕಾಲದಲ್ಲಿಯೂ ಸಾಕಷ್ಟು ದೇವಾಲಯಗಳು ನಿರ್ಮಾಣಗೊಂಡಿವೆ. ತಮ್ಮ ಪತಿ ಎರಡನೆಯ ವಿಕ್ರಮಾದಿತ್ಯ ಕಂಚಿಯ ಪಲ್ಲವರನ್ನು ಮೂರು ಸಲ ಗೆದ್ದುದರ ನೆನಪಿಗಾಗಿ ಆತನ ಒಬ್ಬ ರಾಣಿ ತ್ರೈಲೋಕ್ಯಮಹಾದೇವಿ ಪಟ್ಟದಕಲ್ಲಿನಲ್ಲಿ ತ್ರೈಲೋಕೇಶ್ವರ ದೇವಾಲಯ ಕಟ್ಟಿಸಿದರೆ (ಈಗ ಮಲ್ಲಿಕಾರ್ಜುನ ದೇವಾಲಯ) ಆತನ ಇನ್ನೊಬ್ಬ ರಾಣಿ ಲೋಕಮಹಾದೇವಿ ‘ಲೋಕೇಶ್ವರ ದೇವಾಲಯ’ (ಈಗಿನ ವಿರೂಪಾಕ್ಷದೇವಾಲಯ) ಕಟ್ಟಿಸಿದಳು. ಪಟ್ಟದಕಲ್ಲಿನಲ್ಲಿ ಪಾಪನಾಥ ದೇವಾಲಯ, ಮಹಾಕೂಟದಲ್ಲಿಯ ಚಿಕ್ಕ ಚಿಕ್ಕ ದೇವಾಲಯಗಳು, ಆಲಂಪುರದ ಪದ್ಮ ಬ್ರಹ್ಮ ದೇವಾಲಯ ಇವೆಲ್ಲ ಎರಡನೆಯ ವಿಕ್ರಮಾದಿತ್ಯನ ಕಾಲದಲ್ಲಿಯೆ ನಿರ್ಮಾಣಗೊಂಡಿವೆ. ಐಹೊಳೆಯ ಸುಪ್ರಸಿದ್ಧ ದುರ್ಗದೇವಾಲಯ ಕಟ್ಟಿಸಿದವ ಎರಡನೆಯ ವಿಕ್ರಮಾದಿತ್ಯನ ಒಬ್ಬ ಅಧಿಕಾರಿ ಅಳೆಕೊಮರಸಿಂಗ. ಐಹೊಳೆಯಲ್ಲಿಯ ಚಕ್ರಗುಡಿ ಕೂಡ ಎರಡನೆಯ ವಿಕ್ರಮಾದಿತ್ಯನ ಕಾಲದ್ದೇ ಇರಬೇಕೆನಿಸುತ್ತದೆ.

ಪಟ್ಟದಕಲ್ಲಿನ ಪಾಪನಾಥ ದೇವಾಲಯ ಪೂರ್ಣಗೊಂಡುದು, ಐಹೊಳೆಯ ಕೊಂತಗುಡಿಗಳ ನಿರ್ಮಾಣ ಆರಂಭವಾದುದು, ಈ ಅರಸುಮನೆತನದ ಕೊನೆಯ ದೊರೆ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ. ಜೋಬುಳಗೇರಿಯ ಗಾವುಂಡನೊಬ್ಬ ಅಣ್ಣಿಗೆರೆಯಲ್ಲಿ ಜೈನಬಸದಿಯೊಂದನ್ನು ಕಟ್ಟಿಸಿದ್ದು ಈ ದೊರೆಯ ಆಳ್ವಿಕೆಯಲ್ಲಿಯೆ.

ಮೇಲಣ ವಿವರಗಳನ್ನು ಪರಿಶೀಲಿಸಿದಾಗ ಎರಡನೆಯ ಪುಲಿಕೇಶಿಯ ಕಾಲದವರೆಗೆ ಬಾದಾಮಿಯ ಚಾಲುಕ್ಯರ ರಾಜ್ಯದಲ್ಲಿ ವೈಷ್ಣವ ಧರ್ಮಕ್ಕೆ ಹೆಚ್ಚಿನ ಪ್ರೋತದನಂತರ ಎಂದರೆ ಮೊದಲನೆಯ ವಿಕ್ರಮಾದಿತ್ಯನ ಕಾಲದಿಂದ ಶೈವಧರ್ಮ ಪ್ರಬಲವಾಗುತ್ತ ನಡೆದಿರುವುದು ವಿದಿತವಾಗುತ್ತದೆ. ಇವೆರಡು ವೈದಿಕಧರ್ಮಗಳ ಜೊತೆಗೆ, ವೈದಿಕೇತರ ಧರ್ಮಗಳಾದ ಬೌದ್ಧ ಹಾಗೂ ಜೈನಧರ್ಮಗಳೂ ಪ್ರಚಲಿತವಿದ್ದುದನ್ನು ತಿಳಿದುಕೊಳ್ಳ ಬಹುದಾಗಿದೆ. ಇಲ್ಲಿ ಲಕ್ಷಿಸಬಹುದಾದ ಇನ್ನೊಂದು ಅಂಶವೆಂದರೆ ಸೂರ‌್ಯೋಪಾಸಕರು ಮತ್ತು ಗಾಣಾಪತ್ಯರು ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಕಡಿಮೆ ಪ್ರಮಾಣದಲ್ಲಾದರೂ ಇದ್ದುದು.

ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಆರಂಭದಲ್ಲಿ ವೈಷ್ಣವಧರ್ಮಕ್ಕೆ ಪ್ರೊತ್ಸಾಹವಿದ್ದ ಬಗ್ಗೆ ಆಧಾರಗಳು ದೊರೆಯುತ್ತವೆ. ಮಂಗಲೇಶ ವಿಷ್ಣುವಿನ ಉಪಾಸಕನಾಗಿದ್ದುದಕ್ಕೆ ಅವನು ಬಾದಾಮಿಯಲ್ಲಿ ವಿಷ್ಣು ಗುಹಾಲಯ(ಮೂರನೆಯ ಗುಹೆ)ವನ್ನು ಬೆಟ್ಟದಲ್ಲಿ ಕೊರೆಯಿಸಿರುವುದು (ಕ್ರಿ.ಶ. ೫೭೮) ಮತ್ತು ಆತನು ತನ್ನನ್ನು ತಾನು ‘ಪರಮಭಾಗವತ’ ಎಂದು ಕರೆದುಕೊಂಡಿರುವುದು ಸಮರ್ಥನೆ ಒದಗಿಸುತ್ತವೆ. ಬಾದಾಮಿಯಲ್ಲಿಯೇ ಇರುವ ಭೂತನಾಥ ದೇವಾಲಯಗಳ ಮೊದಲ ಗುಂಪಿನ ಒಂದು ಸಾಧಾರಣಗುಡಿಯ ಗರ್ಭಗೃಹದಲ್ಲಿ ಈಗ ಶಿವಲಿಂಗವಿದ್ದರೂ ಅದರ ಪೀಠದ ಮೇಲೆ ಗರುಡನ ಚಿತ್ರವಿರುವುದರಿಂದ ಅದು ಮೂಲತಃ ವೈಷ್ಣವ ದೇವಾಲಯವಾಗಿರಬೇಕು. ಬಾದಾಮಿಯ ಮೇಗಣ ಶಿವಾಲಯದಲ್ಲಿ ಕಂಡುಬರುವ ಕೆಲವು ಕುರುಹುಗಳನ್ನು ಆಧರಿಸಿ ಅದು ವೈಷ್ಣವ ದೇವಾಲಯವಾಗಿರಬೇಕೆಂದು ವಿದ್ವಾಂಸರು ಊಹಿಸುತ್ತಾರೆ.

ಸೂರ‌್ಯೋಪಾಸನೆಯೂ ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಪ್ರಚಲಿತವಿತ್ತು. ಬಾದಾಮಿಯ ಮಾಲೆಗಿತ್ತಿ ಶಿವಾಲಯ ಮೂಲತಃ ಒಂದು ಸೂರ್ಯದೇವಾಲಯವಾಗಿದೆಯೆಂದು ಹೇಳಲಾಗುತ್ತದೆ. ಐಹೊಳೆಯ ಬಡಿಗೇರಗುಡಿಯ ಶಿಖರದ ಚೈತ್ಯದಲ್ಲಿ ಹಾಗೂ ಗರ್ಭಗೃಹದ ದ್ವಾರದ ಮೇಲ್ಭಾಗದಲ್ಲಿ ಸೂರ್ಯನ ಶಿಲ್ಪಗಳಿರುವುದರಿಂದ ಅದೊಂದು ಸೂರ್ಯ ದೇವಾಲಯ ವಾಗಿತ್ತೆಂದು ಹೇಳಬಹುದಾಗಿದೆ. ಇದೇ ರೀತಿ ಐಹೊಳೆಯ ಸುಪ್ರಸಿದ್ಧ ದುರ್ಗದೇವಾಲಯದ ಪ್ರಾಕಾರದಲ್ಲಿರುವ ಒಂದು ಶಾಸನದ ಹೇಳಿಕೆ ಹಾಗೂ ಮಹಾದ್ವಾರದ ಮೇಲ್ಭಾಗದಲ್ಲಿರುವ ಸೂರ್ಯವಿಗ್ರಹವನ್ನು ಆಧರಿಸಿ ಆ ದೇವಾಲಯ ಕೂಡ ಸೂರ್ಯದೇವಾಲಯವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇಂಥ ದೇವಾಲಯಗಳಲ್ಲದೆ, ಬಾದಾಮಿಯ ಭೂತನಾಥಗುಡಿಗಳ ಗುಂಪಿನಲ್ಲಿರುವ ಅನಂತಶಯನಗುಡಿಯ ಸಮೀಪದ ಬಂಡೆಗಲ್ಲೊಂದರ ಮೇಲೆ ಮತ್ತು ಪಟ್ಟದಕಲ್ಲಿನ ವಿರೂಪಾಕ್ಷದೇವಾಲಯದ ಪೂರ್ವದಿಕ್ಕಿನ ಮುಖಮಂಟಪದ ಛತ್ತು, ಅದರ ಹೊರಗೋಡೆ, ಹಾಗೆಯೆ ಐಹೊಳೆಯ ಲಾಡಖಾನ ದೇವಾಲಯದ ಮೇಲಣ ಗರ್ಭಗುಡಿಯ ಪಶ್ಚಿಮದಿಕ್ಕಿನ ಹೊರಗೋಡೆಯ ಮಾಡ ಇತ್ಯಾದಿ ಇನ್ನೂ ಕೆಲವು ಗುಡಿಗಳಲ್ಲಿ ಸೂರ್ಯದೇವನ ಮೂರ್ತಿಗಳು, ಉಬ್ಬುಶಿಲ್ಪಗಳು ಇರುವುದನ್ನು ನೋಡಿದಾಗ ಬಾದಾಮಿ ಚಾಲುಕ್ಯರ ಕಾಲದಲ್ಲಿ ಸೂರ್ಯೋಪಾಸಕರಿದ್ದುದು ಸ್ಪಷ್ಟವಾಗುತ್ತದೆ.

ಬಾದಾಮಿ ಚಾಲುಕ್ಯರು ಕಾರ್ತಿಕೇಯನ ಉಪಾಸಕರು. ೧. ಬಾದಾಮಿಯ ಒಂದನೆಯ ಹಾಗೂ ಎರಡನೆಯ ಗುಹೆ ೨. ಪಟ್ಟದಕಲ್ಲಿನ ಕಾಶೀವಿಶ್ವೇಶ್ವರ ದೇವಾಲಯದ ಸಭಾಮಂಟಪದ ಛತ್ತು ೩. ವಿರೂಪಾಕ್ಷ ದೇವಾಲಯದ ಪೂರ್ವ ಪ್ರವೇಶದ್ವಾರದ ಛತ್ತು ೪. ಐಹೊಳೆಯ ರಾವಣಫಡಿಯ ಬಲಭಾಗದ ಚಿಕ್ಕ ಕೋಣೆ ೫. ಹುಚ್ಚಮಲ್ಲಿಯ ಗುಡಿಯ ಅರ್ಧಮಂಟಪದ ಛತ್ತು ೬. ಅಂಬಿಗೇರ ಗುಡಿಯ ಮಂಟಪದ ಚೌಕಟ್ಟಿನ ಮೇಲ್ಭಾಗ ಇತ್ಯಾದಿ ಇನ್ನೂ ಕೆಲವೆಡೆ ಕಾರ‌್ತೀಕೇಯನ ಶಿಲ್ಪಗಳಿವೆ.

ಬಾದಾಮಿಯ ಮೊದಲ ಗುಹದೇವಾಲಯಕ್ಕೆ ಹೊಂದಿಕೊಂಡಂತಿರುವ ಚಿಕ್ಕಕೋಣೆಯಲ್ಲಿ ಕೆತ್ತಿರುವ ಮಹಿಷಾಸುರಮರ್ದಿನಿ ಮೂರ್ತಿಯ ಪಕ್ಕದಲ್ಲಿ ಇನ್ನೊಂದು ಮೂರ್ತಿಯಿದೆ. ಅದೇ ಸುಪ್ರಸಿದ್ಧ ವಾತಾಪಿಗಣಪತಿ. ಐಹೊಳೆಯ ತಾರಬಸಪ್ಪಗುಡಿ, ಹುಚ್ಚಮಲ್ಲಿಗುಡಿ ಮತ್ತು ಇನ್ನೂ ಹಲವಾರು ದೇವಾಲಯಗಳಲಿ್ಲ ಗಣಪತಿಯ ಶಿಲ್ಪಗಳಿವೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಂತಹ ಕೆಲವು ದೇವಾಲಯಗಳ ಗರ್ಭಗುಡಿಯ ದ್ವಾರದ ಎಡ‑ಬಲಗಳಲ್ಲಿ ಗರ್ಭಗುಡಿಯ ಗೋಡೆಗೆ ಹೊಂದಿಕೊಂಡು, ಮಹಿಷಾಸುರಮರ್ದಿನಿ ಹಾಗೂ ಗಣಪತಿ ಯರಿಗಾಗಿ ಚಿಕ್ಕ ಗೂಡುಗಳಿರುವುದು ಗಮನೀಯ ಅಂಶ. ಅದೆಲ್ಲವನ್ನು ಪರಿಶೀಲಿಸಿದಾಗ ಗಣಪತಿಯ ಉಪಾಸನೆ ಆಗ ಪ್ರಚಲಿತವಿದ್ದುದು ತಿಳಿದುಬರುತ್ತದೆ.

ಬಾದಾಮಿ ಚಾಲುಕ್ಯರ ಕಾಲದ ಬಹುತೇಕ ದೇವಾಲಯಗಳ ರಂಗಮಂಟಪದ ಇಲ್ಲವೆ ಅದಕ್ಕೆ ಹೊಂದಿಕೊಂಡಿರುವ ಛತ್ತಿನಲ್ಲಿ ತ್ರಿಮೂರ್ತಿಗಳನ್ನು ಬಿಡಿಸಲಾಗಿದೆ. ಅಲ್ಲಿ ಬ್ರಹ್ಮನಿಗಂತೂ ಸ್ಥಾನ ಇದ್ದೇ ಇದೆ. ಆದರೆ ಬ್ರಹ್ಮನಿಗಾಗಿಯೆ ಒಂದು ಸ್ವತಂತ್ರ ದೇವಾಲಯ ಇದ್ದಂತಿಲ್ಲ. ಐಹೊಳೆಯ ರಾಮಲಿಂಗದೇವಾಲಯಗಳ ಗುಂಪಿನ ಒಂದು ಗುಡಿ ಗರ್ಭಗೃಹದಲ್ಲಿ ಹಂಸವಾಹನ ಮತ್ತು ಚತುರ್ಮುಖಗಳುಳ್ಳ ಒಂದು ವಿಗ್ರಹವಿದೆ. ಅದು ಬ್ರಹ್ಮನದೆಂದು ಹೇಳಲಾಗುತ್ತದೆ. ಆದರೆ ಡಾ.ಎಸ್.ರಾಜಶೇಖರ ಅವರ ಪ್ರಕಾರ ಅದು ಜೈನ ಯಕ್ಷನೊಬ್ಬನ ವಿಗ್ರಹ. ಅದಕ್ಕೆ ಅವರು ಆಧಾರವನ್ನೂ ಕೊಡುತ್ತಾರೆ.

ಬಾದಾಮಿಯ ಚಾಲುಕ್ಯರ ಕಾಲದ ವೈದಿಕೇತರ ಧರ್ಮಗಳಲ್ಲಿ ಜೈನಧರ್ಮ ತಕ್ಕಷ್ಟು ಪ್ರಚಾರದಲ್ಲಿದ್ದುದಕ್ಕೆ ಆಧಾರಗಳು ದೊರೆಯುತ್ತವೆ. ಬಾದಾಮಿಯ ಗುಹಾದೇವಾಲಯಗಳಲ್ಲಿ ನಾಲ್ಕನೆಯದು ಜೈನ ಗುಹಾದೇವಾಲಯವಾಗಿದೆ. ಐಹೊಳೆಯ ಮೀನಬಸದಿ(ಗುಹಾಲಯ), ರವಿಕೀರ್ತಿ ನಿರ್ಮಿಸಿದ ಜೈನಬಸದಿ (ಮೇಗುತಿ‑ಗುಡಿ) ವಿಜಯಾದಿತ್ಯನ ಸೋದರಿ ಕುಂಕುಮ ಮಹಾದೇವಿ ಲಕ್ಷ್ಮೇಶ್ವರದಲ್ಲಿ ಕಟ್ಟಿಸಿದ ಆನೆಸಜ್ಜೆಯ ಬಸದಿ, ಜೋಬುಗಳಗೇರಿಯ ಗಾವುಂಡನೊಬ್ಬ ಅಣ್ಣಿಗೇರಿಯಲ್ಲಿ ನಿರ್ಮಿಸಿದ ಜೈನಬಸದಿ ಇತ್ಯಾದಿಗಳು ಆಗ ಜೈನರ ಸಂಖ್ಯೆ ಗಮನಾರ್ಹವಾಗಿದ್ದುದನ್ನು ಸೂಚಿಸುತ್ತವೆ. ಐಹೊಳೆಯಲ್ಲಿ ಇನ್ನೊಂದು ಗುಹಾಲಯವಿದ್ದು ಅದು ಜೈನವೆಂದು ಹೇಳಲಾಗುತ್ತದೆ. ಆದರೆ ಅದು ಇನ್ನೂ ನಿರ್ಣೀತವಾಗಬೇಕಾದ ವಿಷಯ.

ಬಾದಾಮಿಯ ಚಾಲುಕ್ಯರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡ ಒಂದೇ ಒಂದು ಬೌದ್ಧಗುಹಾಲಯ ಐಹೊಳೆಯಲ್ಲಿದೆ. ಬಾದಾಮಿಯ ನಿಸರ್ಗನಿರ್ಮಿತ ಗುಹೆಯೊಂದರಲ್ಲಿ ಪದ್ಮಪಾಣಿ ಬುದ್ಧನ ಶಿಲಾಚಿತ್ರವಿದೆ. ಇವನ್ನು ಬಿಟ್ಟು ಬೇರಾವ ಕುರುಹುಗಳೂ ಬೌದ್ಧರ ಧರ್ಮಕ್ಕೆ ಸಂಬಂಧಿಸಿದಂತೆ ಇವರ ಕಾಲದಲ್ಲಿ ದೊರೆತಂತೆ ಕಾಣುವುದಿಲ್ಲ. ಇದು ಆಲೋಚ ನೀಯವಾಗಿದೆ.

ಬೌದ್ಧಧರ್ಮ ಇಡೀ ಭರತಖಂಡವನ್ನು ವ್ಯಾಪಿಸಿ ವೈದಿಕ ಧರ್ಮಗಳ ಅಸ್ತಿತ್ವವೆ ಇಲ್ಲ ವಾಗುವಂತಹ ಒಂದು ಪರಿಸ್ಥಿತಿ ನಿರ್ಮಾಣಗೊಂಡಾಗ, ಬೌದ್ಧಧರ್ಮದ ಪ್ರಭಾವವನ್ನು ತಗ್ಗಿಸಿ, ವೈದಿಕ ಧರ್ಮಗಳನ್ನು ಉಳಿಸಿ ಬೆಳೆಸುವ ಒಂದು ಮಹಾಮಣಿಹದಲ್ಲಿ ಆ ಧರ್ಮಗಳ ಆಚಾರ್ಯರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆ ಒಂದು ಮಹತ್ವದ ಸಂದರ್ಭದ ಎಡ ಬಲದಲ್ಲಿ ಬಾದಾಮಿಯ ಚಾಳುಕ್ಯರು ರಾಜ್ಯಭಾರ ಮಾಡುತ್ತಿದ್ದರು. ಆದುದರಿಂದ ಅಂದಿನ ಪರಿಸರಕ್ಕೆ ಪರಿಸ್ಥಿತಿಗೆ ಅವರು ಸ್ಪಂದಿಸುವುದು ಅನಿವಾರ್ಯವಾಗಿತ್ತು.

ವೈದಿಕಧರ್ಮಗಳನ್ನು ಪುನರುಜ್ಜೀವಿಸಲು ಆಗ ಅನುಸರಿಸಿದ ಮಾರ್ಗೋಪಾಯಗಳಲ್ಲಿ ಶಿವ ವಿಷ್ಣು ಮೊದಲಾದ ತಮ್ಮ ಅಧಿದೈವಗಳ ಶಕ್ತಿ ಸಾಮರ್ಥ್ಯಗಳನ್ನು, ದುಷ್ಟಶಕ್ತಿಗಳನ್ನು ದಂಡಿಸಿ ಶಿಷ್ಟರನ್ನು ರಕ್ಷಿಸುವ ಅವುಗಳ ಧೀರೋದಾತ್ತಗುಣಗಳನ್ನು, ಬಹುಸಂಖ್ಯಾತ ಸಾಮಾನ್ಯರಿಗೆ ತಿಳಿಸಿಕೊಡುವ ತನ್ಮೂಲಕ ಆ ದೇವರುಗಳ ಬಗ್ಗೆ ಅವರಲ್ಲಿ ಭಕ್ತಿ‑ಶ್ರದ್ಧೆಗಳು ನೆಲೆಯೂರುವಂತೆ ಮಾಡುವುದು ಪ್ರಮುಖೋಪಾಯವಾಗಿತ್ತು. ಪುರಾಣ, ಕಾವ್ಯ ಶಾಸ್ತ್ರಗ್ರಂಥಗಳ ರಚನೆಯ ಮೂಲಕ ಶಿಷ್ಟರು ಆ ಕಾರ್ಯವನ್ನು ಮುಂದುವರಿಸಿದರೆ ಆ ಕಾಲದ ಶಿಲ್ಪಗಳು ಅದನ್ನು ವಿವಿಧ ಬಗೆಯ ಶಿಲ್ಪಮಾಧ್ಯಮಗಳ ಮೂಲಕ ಮತ್ತು ದೊರೆಗಳು, ಅಧಿಕಾರಿಗಳು ಶ್ರೀಮಂತರು ದೇವಾಲಯಗಳ ನಿರ್ಮಾಣದ ಮೂಲಕ ಸಾಕಾರಗೊಳಿಸಿದರು.

ಬಾದಾಮಿಯ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಹಲವಾರು ದೇವಾಲಯಗಳ ವಿವಿಧ ಭಾಗಗಳಲ್ಲಿ ಕಾಣಸಿಗುವ ಮೂರ್ತಿಶಿಲ್ಪ, ಉಬ್ಬುಶಿಲ್ಪ, ರೇಖಾಶಿಲ್ಪ ಹಾಗೂ ಶಿಲಾಚಿತ್ರಗಳ ಮೇಲೆ ಸುಮ್ಮನೆ ಕಣ್ಣಾಡಿಸಿದಾಗ, ವೈದಿಕ ದೇವ ‑ದೇವತೆಗಳ ಶಕ್ತಿ‑ಸಾಮರ್ಥ್ಯ ಹಾಗೂ ಪ್ರಭಾವಾದಿಗಳನ್ನು ಎತ್ತಿಕೊಟ್ಟಿರುವುದು ಎದ್ದು ಕಾಣುತ್ತದೆ.

ವಿಷ್ಣುವಿನ ವಿವಿಧರೂಪ ಹಾಗೂ ಅವತಾರಗಳನ್ನು ಒಳಗೊಂಡ ಮೂರ್ತಿಗಳಲ್ಲಿ ಅವನ ಮೂಲರೂಪದ ಮೂರ್ತಿಗಳಂತೂ ಸರಿಯೆ. ಅದರ ಜೊತೆಗೆ, ಅವನು ದುಷ್ಟರನ್ನು ಶಿಕ್ಷಿಸುವ, ಅವರ ಗರ್ವಭಂಗ ಮಾಡುವ, ಹಾಗೂ ಅವನ ಶೌರ್ಯಪ್ರತಾಪಗಳನ್ನು ಬಿಂಬಿಸುವ ಅವತಾರ ಮೂರ್ತಿಗಳನ್ನು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಕೆತ್ತಲಾಗಿದೆ.

ಬಾದಾಮಿಯ ಎರಡನೆಯ ಮತ್ತು ಮೂರನೆಯ ಗುಹಾಲಯ, ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ ಮತ್ತು ಪಾಪನಾಥ, ಐಹೊಳೆಯ ಜ್ಯೋತಿರ್ಲಿಂಗ ಗುಂಪಿನ ಒಂದು ಪ್ರಾಚೀನ ಗುಡಿ‑ಇವೇ ಮೊದಲಾದ ಇನ್ನೂ ಕೆಲವು ಈ ಕಾಲದ ಗುಡಿಗಳಲ್ಲಿ ತ್ರಿವಿಕ್ರಮನ ಶಿಲ್ಪಗಳಿವೆ. ಬಾದಾಮಿಯ ಗುಹಾಲಯಗಳಲ್ಲಿರುವ ತ್ರಿವಿಕ್ರಮರ ಮೂರ್ತಿಗಳು ದೊಡ್ಡ ಗಾತ್ರವಾಗಿದ್ದು ಅದ್ಭುತವಾಗಿವೆ ಹಾಗೂ ಎದ್ದು ಬರುವಂತಿವೆ.

ವಿಷ್ಣುವಿನ ವರಾಹಾವತಾರದ ಮೂರ್ತಿಶಿಲ್ಪಗಳು ಬಾದಾಮಿಯ ಎರಡು ಮತ್ತು ಮೂರನೆಯ ಗುಹಾಲಯಗಳಲ್ಲಿ ಬೃಹದಾಕಾರವಾಗಿವೆ. ಅವುಗಳ ಮುಖದಲ್ಲಿ ದೃಢತೆ ಸ್ಥೈರ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಭೂತನಾಥ ಗುಡಿಯ ಗುಂಪು, ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ, ಐಹೊಳೆಯ ರಾವಣಫಡಿ, ದುರ್ಗದೇವಾಲಯ ಇತ್ಯಾದಿ ಇನ್ನೂ ಹಲಕೆಲವು ದೇವಾಲಯಗಳಲ್ಲಿ ನರಸಿಂಹನ ಶಿಲ್ಪಗಳಿವೆ. ಈ ಶಿಲ್ಪಗಳಲ್ಲಿ ನರಸಿಂಹನ ಮುಖದ ಉಗ್ರತೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಪಟ್ಟದಕಲ್ಲಿನ ವಿರೂಪಾಕ್ಷ ಹಾಗೂ ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಗಜೇಂದ್ರಮೋಕ್ಷದ ಶಿಲಾಚಿತ್ರಗಳಿರುವುದನ್ನು ಮರೆಯ ಲಾಗದು.

ಸಪ್ತಮಾತೃಗಳು ಬಾದಾಮಿಯ ಚಾಲುಕ್ಯ ದೊರೆಗಳ ಪೋಷಕರು. ಆದುದರಿಂದ ಇವರ ಶಿಲ್ಪಗಳನ್ನು ನಾವು ಐಹೊಳೆಯ ಗಳಗನಾಥ, ತಾರಪ್ಪನ ಗುಡಿ, ಹುಚ್ಚಮಲ್ಲಿಗುಡಿ, ಮಲ್ಲಿಕಾರ್ಜುನಗುಡಿಗಳ ಗುಂಪಿನಲ್ಲಿ ಒಂದು ಗುಡಿ, ಹಾಗೂ ರಾವಣಫಡಿ ಇವೇ ಮೊದಲಾದ ಹಲವು ದೇವಾಲಯಗಳಲ್ಲಿ ಕಾಣುತ್ತೇವೆ. ಇವುಗಳಲ್ಲಿ ಕೆಲವು ಹೊರಗಿನಿಂದ ತಂದು ಇಟ್ಟವುಗಳು. ರಾವಣಫಡಿಯಲ್ಲಿ ಎರಡು ಕಡೆ ಸಪ್ತಮಾತೃಕೆಯರ ಶಿಲ್ಪಗಳಿವೆ. ಒಂದುಕಡೆ ಅವರು ಶಿವನೊಡನೆ ಇನ್ನೊಂದೆಡೆ ಅವರು ನಟರಾಜರೊಡನೆ ತಾವೂ ನೃತ್ಯ ಮಾಡುತ್ತಿದ್ದಾರೆ.

ಸಮುದ್ರ ಮಥನದ ಘಟನೆಯಲ್ಲಿ ಒಂದು ಸಾಂಕೇತಿಕತೆಯನ್ನು ಗುರುತಿಸಿರಬಹುದಾದ ಆ ಕಾಲದ ಶಿಲ್ಪಿಗಳು, ಆ ದೃಶ್ಯವನ್ನು ಬಾದಾಮಿಯ ಎರಡನೆಯ ಹಾಗೂ ಮೂರನೆಯ ಗುಹೆ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ಇವೇ ಮೊದಲಾದ ದೇವಸ್ಥಾನಗಳಲ್ಲಿ ಶಿಲ್ಪದಲ್ಲಿ ಹಿಡಿದಿಟ್ಟಿದ್ದಾರೆ. ವಿಷ್ಣುವಿನ ಕೂರ್ಮಾವತಾರವನ್ನು ತೋರಿಸುವಲ್ಲಿಯೂ ಶಿಲ್ಪಿಗಳದು ಅದೇ ಉದ್ದೇಶವಾಗಿರುವ ಸಾಧ್ಯತೆಯಿದೆ.

ಶಿವನ ವಿವಿಧ ರೂಪಗಳು ಬಾದಾಮಿ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ಶಿಲಾಮಾಧ್ಯಮದ ಮೂಲಕ ಪ್ರಕಟಗೊಂಡಿವೆ. ಅವುಗಳಲ್ಲಿ ನಟರಾಜನ ರೂಪ ಆ ಕಾಲದ ಶಿಲ್ಪಿಗಳನ್ನು ಬಹುವಾಗಿ ಆಕರ್ಷಿಸಿದಂತೆ ತೋರುತ್ತದೆ. ಅಪಸ್ಮಾರನನ್ನು ತುಳಿದಂತೆ ಕುಣಿಯುತ್ತಿರುವ ನಟರಾಜ ಆ ಕಾಲದ ಯುಗಧರ್ಮವನ್ನು ಸಂಕೇತಿಸುತ್ತಿರುವಂತೆ ಅವರಿಗೆ ಕಂಡಿರಬೇಕು ಎಂತಲೇ ನಟರಾಜನ ಅನೇಕ ಸಣ್ಣ ದೊಡ್ಡ ಶಿಲ್ಪಗಳನ್ನು ಕಲ್ಲಿನಲ್ಲಿ ಒಡಮೂಡಿಸಿದ್ದಾರೆ.

ತನ್ನ ಎಡಗಾಲನ್ನು ಅಪಸ್ಮಾರನ ಮೇಲಿಟ್ಟು ನಾಟ್ಯವಾಡುತ್ತಿರುವ ಚತುರ್ಭುಜ, ಅಷ್ಟಭುಜ, ದಶಭುಜ ಹಾಗೂ ಅಷ್ಟಾದಶಭುಜಗಳಿರುವ ನಟರಾಜನ ವಿವಿಧ ಗಾತ್ರದ ಶಿಲ್ಪಗಳು ಬಾದಾಮಿ ಐಹೊಳೆ ಪಟ್ಟದಕಲ್ಲು ಮತ್ತು ಇತರೆಡೆಯ ಪ್ರಮುಖ ದೇವಾಲಯಗಳ ಗೋಡೆ, ಕೋಷ್ಠ, ಕಂಬ, ಶಿಖರ, ಮಂಟಪಗಳ ಛತ್ತು ಮುಂತಾದ ಕಡೆ ಕಂಡರಣೆಗೊಂಡಿರು ವುದನ್ನೊ ಕೆತ್ತಿರುವುದನ್ನೋ ಕಾಣಬಹುದಾಗಿದೆ. ಶಿವನ ಇತರ ರೂಪಗಳಿಗಿಂತ ನಟರಾಜನ ಮೂರ್ತಿಗಳ ಸಂಖ್ಯೆ ಅಧಿಕವಾಗಿದೆ.

ಉಮಾಸಹಿತಶಿವ, ನಂದಿವಾಹನಶಿವ, ಗಂಗಾಧರಶಿವ, ಜಟಾಧಾರಿಶಿವ, ಕಿರೀಟಧಾರಿ ಶಿವ, ಚತುರ್ಭುಜಶಿವ, ಅಷ್ಟಭುಜಶಿವ, ಹೀಗೆ ಶಿವನ ಹತ್ತು ಹಲವು ರೂಪಗಳನ್ನು, ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಗಳು ದೇವಾಲಯಗಳಲ್ಲಿ ಅನೇಕ ಕಡೆ ಶಿಲೆಯಲ್ಲಿ ಬಿಡಿಸಿದ್ದಾರೆ.

ಶಿವನಿಗೆ ಸಂಬಂಧಿಸಿದಂತೆ ೧. ಗಿರಿಜಾಕಲ್ಯಾಣದ ದೃಶ್ಯ (ಬಾದಾಮಿಯ ಮೂರನೆಯ ಗುಹಾಲಯದ ವರ್ಣಚಿತ್ರ, ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ, ಪಾಪನಾಥ, ಮಲ್ಲಿಕಾರ್ಜುನ ಇತ್ಯಾದಿ ದೇವಾಲಯಗಳಲ್ಲಿ) ೨. ಕಿರಾತಾರ್ಜುನೀಯ ಪ್ರಸಂಗ(ಪಟ್ಟದಕಲ್ಲಿನ ಪಾಪನಾಥ, ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳು, ಐಹೊಳೆಯ ಹುಚ್ಚಮಲ್ಲಿಗುಡಿಯ ಬಳಿ ಇರುವ ಬಾವಿಯ ಒಂದು ಕಲ್ಲು ಇತ.ಯಾದಿ ಕಡೆ), ೩. ದಕ್ಷಯಜ್ಞ ಸತಿದೇವಿಯ ಅಗ್ನಿಪ್ರವೇಶ (ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ) ೪. ಮಾರ್ಕಂಡೇಯನಿಗೆ ಶಿವಪ್ರತ್ಯಕ್ಷ (ವಿರೂಪಾಕ್ಷ ದೇವಾಲಯ) ಇವೇ ಮೊದಲಾದ ಶಿವನಿಗೆ ಸಂಬಂಧಿಸಿದ ಇನ್ನೂ ಹಲವಾರು ಸನ್ನಿವೇಶಗಳನ್ನು ಈ ಕಾಲದ ದೇವಾಲಯಗಳಲ್ಲಿ ವಿಪುಲವಾಗಿ ಕಾಣುತ್ತೇವೆ. ಶಿವನ ಪಂಚವಿಂಶತಿ ಲೀಲೆಗಳಲ್ಲಿ ಒಂದಾದ ಲಿಂಗೋದ್ಭವಲೀಲೆಯನ್ನು ೧. ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ ದೇವಾಲಯದ ಚಿಕ್ಕಮಂಟಪದ ಕಂಬ ೨. ವಿರೂಪಾಕ್ಷ ದೇವಾಲಯದ ಪೂರ್ವದಿಕ್ಕಿನ ಹೊರಗೋಡೆ ಮತ್ತು ೩. ಆಲಂಪುರದ ಸ್ವರ್ಗಬ್ರಹ್ಮದೇವಾಲಯದ ಕೋಷ್ಠ ಮೊದಲಾದೆಡೆ ಕೆತ್ತಿರುವುದನ್ನು ಕಾಣುತ್ತೇವೆ.

ಶಿವನ ಅರ್ಧನಾರೀಶ್ವರ ರೂಪವೂ ಆ ಕಾಲದ ಶಿಲ್ಪಿಗಳನ್ನು ಬಹುವಾಗಿ ಆಕರ್ಷಿಸಿದಂತೆ ತೋರುತ್ತದೆ. ಶಿವ‑ಶಕ್ತಿ, ಪ್ರಕೃತಿ‑ಪುರುಷ, ಗಂಡು‑ಹೆಣ್ಣುಗಳಲ್ಲಿರುವ ಬಿಚ್ಚಿ ಬೇರೆ ಮಾಡಲಾಗದಂತಹ ಸಂಬಂಧವನ್ನು, ಸೃಷ್ಟಿಕಾರ್ಯ ಅವರಿಂದಲೇ ನಡೆಯುತ್ತದೆಂಬುದನ್ನು ಸಂಕೇತಿಸುವ ಶಿವನ ಈ ಅರ್ಥಪೂರ್ಣ ಅರ್ಧನಾರೀಶ್ವರ ಶಿಲ್ಪಗಳು ೧. ಬಾದಾಮಿಯ ಮೊದಲ ಗುಹಾಲಯದ ಕಂಬವೊಂದರ ಮೇಲಿನ ಬೋದುಗೆ ೨. ಮೂರನೇ ಗುಹಾಲಯದ ಮೊಗಸಾಲೆ ೩. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಉತ್ತರಗೋಡೆಯ ಹೊರಭಾಗ (ಇಲ್ಲಿರುವುದು ಅರ್ಧನಾರೀಶ್ವರನ ಮೂರ್ತಿ) ೪. ಕಾಶಿವಿಶ್ವೇಶ್ವರ ದೇವಾಲಯದ ಉತ್ತರದ ಗೋಡೆಯ ಕೋಷ್ಠ ೫. ಮಲ್ಲಿಕಾರ್ಜುನ ದೇವಾಲಯದ ಪಶ್ಚಿಮಗೋಡೆ ಹೊರಭಾಗ ೬. ಐಹೊಳೆಯ ರಾವಣಫಡಿ ೭. ದುರ್ಗದೇವಾಲಯ ಇತ್ಯಾದಿ ಇನ್ನೂ ಕೆಲವೆಡೆ ಕಂಡುಬರುತ್ತವೆ.

ಶಿವನ ಇಂತಹ ಸೌಮ್ಯ ಹಾಗೂ ಸಾಂಕೇತಿಕ ರೂಪಗಳ ಜೊತೆಗೆ ದುಷ್ಟರನ್ನು ಮರ್ದಿಸುವ ಅವನ ಉಗ್ರರೂಪಗಳಿಗೂ ಪ್ರಾಧಾನ್ಯವಿತ್ತಿರುವರು. ಅದು ಅಂದಿನ ಅಗತ್ಯವೆಂದು ಶಿಲ್ಪಿಗಳು ಸರಿಯಾಗಿಯೆ ಭಾವಿಸಿದ್ದರು. ಶಿವನ ಅಂತಹ ಉಗ್ರರೂಪಗಳಲ್ಲಿ ಗಜಾಸುರಸಂಹಾರಿ ಶಿವನ ಶಿಲ್ಪಗಳು ೧. ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ ದೇವಾಲಯದ ಚಿಕ್ಕಮಂಟಪದ ಕಂಬ ೨. ಪಾಪನಾಥ ದೇವಾಲಯದ ಪಶ್ಚಿಮ ದಿಕ್ಕಿನ ಕುರುಡುಮಂಟಪ ೩. ಐಹೊಳೆಯ ಕೊಂತಗುಡಿಯ ಅರ್ಧಮಂಟಪ ೪. ಹುಚ್ಚಪ್ಪಯ್ಯನ ಗುಡಿಯ ಗರ್ಭಗೃಹದ ಉತ್ತರ ಗೋಡೆಯ ಹೊರಭಾಗದ  ಮಾಡ ಇತ್ಯಾದಿ ಕಡೆ ಇವೆ. ಇವುಗಳಲ್ಲಿ ಐಹೊಳೆಯ ಹುಚ್ಚಪ್ಪಯ್ಯನ ಗುಡಿಯಲ್ಲಿರುವ ಗಜಾಸುರಸಂಹಾರಮೂರ್ತಿ ಬಹಳ ಅದ್ಭುತವಾಗಿದೆ. ಆರು ಕೈಗಳ ಆ ಉಗ್ರಮೂರ್ತಿ ತನ್ನ ಮೂರು ಕೈಗಳಿಂದ ಗಜಾಸುರನ ಚರ್ಮವನ್ನು ಸೀಳಿ ಅದನ್ನು ಎತ್ತಿ ಹಿಡಿದಿದ್ದಾನೆ. ಟೊಂಕಕ್ಕೆ ಸರ್ಪಗಳನ್ನು ಬಿಗಿದುಕೊಂಡಿದ್ದಾನೆ.

ಅಂಧಕಾಸುರಸಂಹಾರಿ ಶಿವನ ಶಿಲ್ಪಗಳು ೧. ಐಹೊಳೆಯ ಗಳಗನಾಥಧ ದೇವಾಲಯದ ಪ್ರದಕ್ಷಿಣಾ ಪಥದ ದಕ್ಷಿಣ ಹೊರಗೋಡೆಗೆ ಹೊಂದಿ ದೊಡ್ಡ ಕೋಷ್ಠದಂತಿರುವ ಕುರುಡುಮಂಟಪ ೨. ಪಟ್ಟದಕಲ್ ವಿರೂಪಾಕ್ಷ ದೇವಾಲಯದ ದಕ್ಷಿಣಗೋಡೆಯ ಹೊರಭಾಗ ೩. ಐಹೊಳೆಯ ಚಿಕ್ಕಗುಡಿ ಮಂಟಪದ ಛತ್ತು ಇತ್ಯಾದಿ ಹಲವೆಡೆಗಳಲ್ಲಿರುವುದನ್ನು ಕಾಣಬಹುದು. ಇವುಗಳಲ್ಲಿ ಗಳಗನಾಥನ ಗುಡಿಯಲ್ಲಿರುವ ಅಂಧಕಾಸುರಸಂಹಾರ ಮೂರ್ತಿಗೆ ಎಂಟು ಕೈಗಳಿದ್ದು ಹರಡಿದ ಜಡೆಯನ್ನು ರುಂಡಮಾಲೆಯಿಂದ ಕಟ್ಟಲಾಗಿದೆ. ವಿರೂಪಾಕ್ಷ ಗುಡಿಯಲ್ಲಿರುವ ಮೂರ್ತಿ ಇನ್ನೂ ಭಯಂಕರವಾಗಿದ್ದು ಶಿವನು ಅಂಧಕಾಸುರನನ್ನು ತನ್ನ ತ್ರಿಶೂಲದಿಎಂದ ಚುಚ್ಚಿ ಮೇಲಕ್ಕೆ ಎತ್ತಿ ಹಿಡಿದಿದ್ದಾನೆ.

ಇದೇ ರೀತಿ ಶಿವನ ಇನ್ನೊಂದು ಉಗ್ರರೂಪವಾದ ತ್ರಿಪುರಾಂತಕನ ಶಿಲ್ಪಗಳನ್ನು ೧. ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ ದೇವಾಲಯದ ಸಣ್ಣ ಮಂಟಪದ ಕಂಬ ೨. ವಿರೂಪಾಕ್ಷ ದೇವಾಲಯದ ಪ್ರಕಾರದ ಗೋಡೆ ೩. ಐಹೊಳೆಯ ಕೊಂತಿಗುಡಿಯ ಮಂಟಪದ ಕಂಬ ಮುಂತಾದೆಡೆ ಕೆತ್ತಿರುವುದನ್ನು ಕಾಣಬಹುದು. ಇವುಗಳಲ್ಲಿ ಕೊಂತಿಗುಡಿಯಲ್ಲಿರುವ ತ್ರಿಪುರಾಂತಕಮೂರ್ತಿಗೆ ಅಷ್ಟಭುಜಗಳಿದ್ದು, ತ್ರಿಶೂಲ, ಧನಸ್ಸು ಮೊದಲಾದ ವಿವಿಧ ಆಯುಧಗಳನ್ನು ಧರಿಸಿರುವ ಅದು ತುಂಬಾ ಭೀಕರವಾಗಿದೆ.

ಇವುಗಳ ಜೊತೆಗೆ ಯಮಾರಿಶಿವ(ಪಟ್ಟದಕಲ್ ವಿರೂಪಾಕ್ಷದೇವಾಲಯದ ಪ್ರಕಾರದ ಗೋಡೆಯಲ್ಲಿದ್ದ ಇದು ಈಗ ಬಾದಾಮಿಯ ವಸ್ತುಸಂಗ್ರಹಾಲಯದಲ್ಲಿದೆ). ತಾಂಡವ ಮೂರ್ತಿ ಶಿವ ೧. ಐಹೊಳೆಯ ಕೊಂತಗುಡಿಯ ಗರ್ಭಗೃಹದ ದಕ್ಷಿಣಗೋಡೆಯ ಹೊರಭಾಗ ೨. ಚಿಕ್ಕಗುಡಿಯ ಮಂಟಪದ ಛತ್ತು ಇವರ ಶಿಲ್ಪಗಳನ್ನು ಬಾದಾಮಿ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ಕಾಣುತ್ತೇವೆ. ತಾರಕಾಸುರಸಂಹಾರ ಮೂರ್ತಿಯ ಶಿಲ್ಪವೂ ಐಹೊಳೆಯ ಹುಚ್ಚಮಲ್ಲಿ ಗುಡಿಯಲ್ಲಿದೆ.

ಶಕ್ತಿದೇವತೆಯ ವಿವಿಧರೂಪಗಳಲ್ಲಿ ಮಹಿಷಾಸುರಮರ್ದಿನಿಯ ರೂಪ, ಆ ಕಾಲದ ಶಿಲ್ಪಿಗಳನ್ನು ಬಹುವಾಗಿ ಆಕರ್ಷಿಸಿದ್ದುದನ್ನು ಕಾಣುತ್ತೇವೆ. ಅದಕ್ಕೆ ಅಂದಿನ ಯುಗಧರ್ಮ ಕಾರಣವಾಗಿರಬಹುದು. ಶಕ್ತಿದೇವತೆಯ ಅಸಾಮಾನ್ಯ ಸಾಮರ್ಥ್ಯವನ್ನು ಅಂದಿನ ಬಹುಸಂಖ್ಯಾತ ಸಾಮಾನ್ಯರಿಗೆ ತಿಳಿಸಿಕೊಡುವ ಅಗತ್ಯವಿತ್ತು. ಅದಕ್ಕಾಗಿ ಅವರು ಆಯ್ದುಕೊಂಡ ಶಕ್ತಿದೇವತೆಯ ಮಹಿಷಾಸುರಮರ್ದಿನಿ ರೂಪ ಹೆಚ್ಚು ಯುಕ್ತಿ‑ಯುಕ್ತವೂ, ಔಚಿತ್ಯಪೂರ್ಣವೂ ಆಗಿದೆ.

ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯ ಪ್ರಮುಖ ದೇವಾಲಯಗಳಲ್ಲಿ ಸುಮಾರು ಹದಿನೈದರಷ್ಟು, ಮಹಿಷಾಸುರ ಮರ್ದಿನಿಯ ಶಿಲ್ಪಗಳು ಕಾಣದೊರೆಯುತ್ತವೆ. ಇವುಗಳಲ್ಲಿ ಐಹೊಳೆಯ ರಾವಣಫಡಿಯಲ್ಲಿಯ ಮಹಿಷಾಸುರ ಮರ್ದಿನಿಯ ಶಿಲ್ಪ ದೊಡ್ಡ ಗಾತ್ರದ್ದೂ ಭಯಂಕರವೂ ಆಗಿದೆ. ಇಂತಹ ದೊಡ್ಡಗಾತ್ರದ ಮಹಿಷಾಸುರ ಮರ್ದಿನಿಯ ಶಿಲ್ಪಗಳು ಕೆಲವು ಮಾತ್ರ ಇದ್ದು ಉಳಿದವು ಸಣ್ಣ ಗಾತ್ರದವಾಗಿವೆ. ಈ ಶಿಲ್ಪಗಳು ದೇವಾಲಯಗಳ ಒಳಗೋಡೆ, ಹೊರಗೋಡೆ, ಕೋಷ್ಠ, ಕಂಬ, ಅಧಿಷ್ಠಾನ ಇತ್ಯಾದಿ ವಿವಿಧ ಸ್ಥಳಗಳಲ್ಲಿ ಕಂಡುಬರುತ್ತವೆ.

ಇಲ್ಲಿ ಒಂದು ಅಂಶ ಗಮನಾರ್ಹವಾಗಿದೆ. ಪಟ್ಟದಕಲ್ಲಿನ ಪಾಪನಾಥ, ವಿರೂಪಾಕ್ಷ ದೇವಾಲಯಗಳಲ್ಲಿ ಐಹೊಳೆಯ ತಾರಬಸಪ್ಪ, ಕೊಂತ, ುಚ್ಚಪ್ಪಯ್ಯನ ಗುಡಿಗಳಲ್ಲಿ ಇನ್ನೂ ಕೆಲವು ಬೇರೆ ಬೇರೆ ದೇವಾಲಯಗಳಲ್ಲಿ ಅವುಗಳ ಗರ್ಭಗುಡಿಯ ಮುಂಭಾಗದ ಗೋಡೆಗೆ ಹೊಂದಿಕೊಂಡು ಗರ್ಭದ್ವಾರದ ಎಡಬದಿಗೆ ಮಹಿಷಾಸುರಮರ್ದಿನಿ, ಬಲಬದಿಗೆ ಗಣೇಶ ಮೂರ್ತಿಗಳಿವೆ. ದೇವಾಲಯಗಳ ನಿರ್ಮಾಣದಲ್ಲಿ ಇದೊಂದು ಸಂಪ್ರದಾಯವಾಗಿ ಬೆಳೆದು ಬಂದುದನ್ನು ಗುರುತಿಸಬಹುದಾಗಿದೆ.

ಹಿಂದೂಧರ್ಮದ ಪ್ರಮುಖಘಟಕಗಳಾದ, ಶೈವ ಮತ್ತು ವೈಷ್ಣವ ಧರ್ಮೀಯರಲ್ಲಿ ಪರಸ್ಪರ ಸ್ನೇಹ ಸೌಹಾರ್ದ, ಪ್ರೀತಿ, ವಿಶ್ವಾಸಗಳನ್ನು ಕುದುರಿಸಿ ಒಗ್ಗಟ್ಟನ್ನು ಗಟ್ಟಿಗೊಳಿಸುವುದು ಕೂಡ ಅಂದು ಬಹಳ ಅಗತ್ಯವಾಗಿತ್ತು. ಅದನ್ನು ಆ ಕಾಲದ ಶಿಲ್ಪಿಗಳು ತಮ್ಮದೇ ಆದ ವಿಶಿಷ್ಟ ಶಿಲ್ಪಯೋಜನೆಯ ಮೂಲಕ ಪೂರೈಸಿರುವುದು ಅರ್ಥವತ್ತಾಗಿದೆ.

ಶಿವ ಮತ್ತು ವಿಷ್ಣು ಇವರಲ್ಲಿ ಅಭೇದವನ್ನು ಕಲ್ಪಿಸುವ ಹರಿಹರ ಮೂರ್ತಿಯ ಶಿಲ್ಪದ ಮೂಲಕ ತಮ್ಮ ಉದ್ದೇಶವನ್ನು ಸಫಲಗೊಳಿಸಲು ಆ ಕಾಲದ ಶಿಲ್ಪಿಗಳು ಪ್ರಯತ್ನಿಸಿರುವುದು ಕಂಡುಬರುತ್ತದೆ. ಬಾದಾಮಿಯ ಒಂದು ಹಾಗೂ ಮೂರನೆಯ ಗುಹಾಲಯಗಳ ಮೊಗಸಾಲೆಗಳಲ್ಲಿ, ಐಹೊಳೆಯ ರಾವಣಫಡಿಯ ಮಂಟಪದ ಗೋಡೆಯಲ್ಲಿ, ದುರ್ಗದೇವಾಲಯದ ಪ್ರದಕ್ಷಿಣಪಥದ ಗೋಡೆಯ ಮಾಡವೊಂದರಲ್ಲಿ ಇನ್ನೂ ಕೆಲವೆಡೆಗಳಲ್ಲಿ ಹರಿಹರನ ಶಿಲ್ಪಗಳಿರುವುದನ್ನು ಕಾಣಬಹುದಾಗಿದೆ.

ಈ ನಿಟ್ಟಿನಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ವಿಷಯವೆಂದರೆ, ತ್ರಿಮೂರ್ತಿಗಳ ಅಥವಾ ತ್ರೈಪುರುಷರ ಪರಿಕಲ್ಪನೆ. ಬ್ರಹ್ಮ ವಿಷ್ಣು ಮಹೇಶ್ವರರು ಕ್ರಿಯಾಭೇದದಿಂದ  ಬೇರೆ ಬೇರೆ ಎನಿಸಿಕೊಳ್ಳುತ್ತಾರೆಯೆ ವಿನಾ, ಮೂಲತಃ ಅವರು ಒಂದೇ ಪರವಸ್ತುವಿನ ಮೂರು ರೂಪಗಳು. ಆದುದರಿಂದ ಆಯಾ ದೈವತಗಳ ಉಪಾಸಕರು ಕೂಡ ಒಂದೇ. ಅವರಲ್ಲಿ ಭೇದವಿಲ್ಲ ಎಂಬುದನ್ನು ಜನಮಾನಸದಲ್ಲಿ ಬೇರೂರಿಸಲು, ತ್ರೈಪುರುಷರನ್ನು ಒಂದೇ ದೇವಸ್ಥಾನದಲ್ಲಿ  ಪ್ರತಿಷ್ಠಾಪಿಸಿ ಆರಾಧಿಸುವ ಸಂಪ್ರದಾಯಕ್ಕೆ ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಿಗಳು ಶ್ರೀಕಾರ ಹಾಕಿದರು. ವಿಜಯಾದಿತ್ಯನು ತನ್ನ ತಾಯಿ ವಿನಯವತಿಗಾಗಿ ಬಾದಾಮಿಯಲ್ಲಿ ಕಟ್ಟಿಸಿದ ತ್ರೈಪುರುಷದೇವಾಲಯ (ಈಗ ಜಂಬುಲಿಂಗನ ಗುಡಿ) ದಕ್ಷಿಣ ಭಾರತದಲ್ಲಿಯೆ ಅತ್ಯಂತ ಪ್ರಾಚೀನವೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಈ ತ್ರೈಪುರುಷರ ಮೊದಲ ದರ್ಶನ ನಮಗೆ ಆಗುವುದು, ಬಾದಾಮಿಯ ಮೂರನೆಯ (ವಿಷ್ಣು) ಗುಹಾಲಯದಲ್ಲಿ. ಅಲ್ಲಿಯ ಮಂಟಪದಲ್ಲಿ ಮೂರು ಅಂಕಣಗಳಿದ್ದು, ಪ್ರತಿಯೊಂದು ಅಂಕಣದ ಛತ್ತಿನ ಭಾಗದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕೆತ್ತಿದ್ದಾರೆ. ಪಟ್ಟದಕಲ್ಲಿನ ಪಾಪನಾಥ ದೇವಾಲಯದ ಗರ್ಭಗುಡಿಯ ದಕ್ಷಿಣ ಭಾಗದ ಗೋಡೆಯ ಹೊರಭಾಗದ ಕೋಷ್ಠದಲ್ಲಿ ಶಿವ, ಉತ್ತರಗೋಡೆಯ ಕೋಷ್ಠದಲ್ಲಿ ವಿಷ್ಣು ಮತ್ತು ಪಶ್ಚಿಮಗೋಡೆಯ ಕೋಷ್ಠದಲ್ಲಿ ಬ್ರಹ್ಮನಿಗೆ ಬದಲಾಗಿ ಸೂರ್ಯನಿದ್ದಾನೆ. ಇದು ಆಲೋಚನೀಯವಾಗಿದೆ. ಬ್ರಹ್ಮನಿಗೆ ಪೂಜೆನಿಂತ ಕಾರಣ ಸೂರ್ಯದೇವನನ್ನು ಆತನಿಗೆ ಬದಲಾಗಿ ಕೆತ್ತಿದಂತೆ ತೋರುತ್ತದೆ. ಈ ಒಂದು ಉದಾಹರಣೆಯನ್ನು ಬಿಟ್ಟರೆ ಬಾದಾಮಿಯ ಚಾಲುಕ್ಯರ ಕಾಲದ ದೇವಾಲಯ ಗಳಲ್ಲಿರುವ ತ್ರಿಮೂರ್ತಿಗಳು ಬ್ರಹ್ಮ, ವಿಷ್ಣು, ಮಹೇಶ್ವರರೇ ಆಗಿದ್ದಾರೆ.

ಶೈವ ಹಾಗೂ ವೈಷ್ಣವರಲ್ಲಿ ಸೌಹಾರ್ದತೆಯನ್ನು ತರುವ ನಿಟ್ಟಿನಲ್ಲಿ ಅಂದು ಅನುಸರಿಸಿದ ಇನ್ನೊಂದು ಮಾರ್ಗವೆಂದರೆ ಶೈವದೇವಾಲಯಗಳಲ್ಲಿ ವಿಷ್ಣುವಿಗೆ ಸಂಬಂಧಿಸಿದ ಮೂರ್ತಿ ಹಾಗೂ ದೃಶ್ಯಗಳನ್ನೂ, ವೈಷ್ಣವ ದೇವಾಲಯಗಳಲ್ಲಿ ಶಿವ ಹಾಗೂ ಶಿವಸಂಬಂಧಿ ದೃಶ್ಯಗಳನ್ನು ಕೆತ್ತಿರುವುದು. ಬಾದಾಮಿಯ ಮೂರನೆಯ ಗುಹೆ ವಿಷ್ಣುಗುಹೆಯಾಗಿದ್ದರೂ ಅದರ ಮೊಗಸಾಲೆಯ ಕಂಬಗಳ ಬೋದುಗೆಗಳಲ್ಲಿ ಶಿವ‑ಪಾರ್ವತಿಯರನ್ನು ಅರ್ಧನಾರೀಶ್ವರನನ್ನು ಅಲ್ಲಿಯ ಛತ್ತಿನಲ್ಲಿ ನಂದಿವಾಹನ ಶಿವನನ್ನು ಕೆತ್ತಲಾಗಿದೆ. ಇದೇ ರೀತಿ ಇಲ್ಲಿಯ ಮೊದಲ ಗುಹೆ ಶಿವನಿಗೆ ಮೀಸಲಿದ್ದರೂ ಅಲ್ಲಿಯ ಕಂಬವೊಂದರಲ್ಲಿ ನರಸಿಂಹನ ಶಿಲ್ಪವಿದೆ. ಮತ್ತೊಂದೆಡೆ ಗರುಡ, ಲಕ್ಷ್ಮಿಯರ ಶಿಲ್ಪಗಳೂ ಇವೆ.

ಪಟ್ಟದಕಲ್ಲಿನ ಕಾಶೀವಿಶ್ವನಾಥ ದೇವಾಲಯದ ಚಿಕ್ಕ ಮಂಟಪದ ಕಂಬಗಳ ಮೇಲೆ ಬೆಣ್ಣೆ ಕದಿಯುವ ಕೃಷ್ಣ, ಅವನು ಶಕಟಾಸುರ, ಕಾಕಾಸುರ, ಪೂತಿನಿ, ಕೇಶಿ ಮೊದಲಾದವರನ್ನು ಸಂಹರಿಸುವ, ಕಾಳಿಯನ್ನು ಮರ್ದಿಸುವ, ಗೋವರ್ಧನಗಿರಿಯನ್ನು ಎತ್ತುವ ಶಿಲ್ಪಗಳನ್ನು ಕಂಡರಿಸಲಾಗಿದೆ. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದ ಮಹಾಮಂಟಪದ ಕಂಬ, ಪಾಪನಾಥ ದೇವಾಲಯದ ಪಶ್ಚಿಮದ ಕುರುಡುಮಂಟಪ ಮುಂತಾದೆಡೆ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಶಿಲ್ಪಗಳಿವೆ.

ಪಟ್ಟದಕಲ್ಲು ಹಾಗೂ ಐಹೊಳೆಯ ಪ್ರಮುಖ ಶಿವದೇವಾಲಯಗಳಲ್ಲಿ ಶೇಷಶಾಯಿ ವಿಷ್ಣು, ಜನಾರ್ಧನರೂಪದ ವಿಷ್ಣು, ಗರುಡವಾಹನವಿಷ್ಣು, ಲಕ್ಷ್ಮೀಸಮೇತವಿಷ್ಣು, ಚತುರ್ಭುಜವಿಷ್ಣು, ಅಷ್ಟಭುಜವಿಷ್ಣು ಇತ್ಯಾದಿ ವಿಷ್ಣುವಿನ ವಿವಿಧರೂಪಗಳನ್ನು ವಿವಿಧ ಸ್ಥಳಗಳಲ್ಲಿ ಬಿಡಿಸಿರುವುದನ್ನು ಕಾಣಬಹುದು. ಇವುಗಳ ಜೊತೆಗೆ ವಿಷ್ಣುವಿನ ನರಸಿಂಹ, ವಾಮನ, (ತ್ರಿವಿಕ್ರಮ) ವರಾಹ, ಮೊದಲಾದ ಅವತಾರಗಳನ್ನು ಗಜೇಂದ್ರಮೋಕ್ಷದಂತಹ ಸನ್ನಿವೇಶಗಳನ್ನು ಕೂಡ ಶೈವದೇವಾಲಯಗಳಲ್ಲಿ ಕೆತ್ತಿದ್ದಾರೆ.

ಬಾದಾಮಿಯ ಚಾಲುಕ್ಯ ಕಾಲದ ಶಿವದೇವಾಲಯಗಳಲ್ಲಿ ರಾಮಾಯಣ ಮಹಾಭಾರತದ ಕೆಲವು ದೃಶ್ಯಗಳನ್ನು ವಿವಿಧ ಸ್ಥಳಗಳಲ್ಲಿ ಕೆತ್ತಿರುವುದು ಪರಸ್ಪರರಲ್ಲಿ ಸೌಹಾರ್ದತೆ ಮೂಡಿಸುವ ಉದ್ದೇಶದಿಂದಲೇ ಎಂದು ಬೇರೆ ಹೇಳಬೇಕಿಲ್ಲ.

ಪಟ್ಟದಕಲ್ ಪಾಪನಾಥ ದೇವಾಲಯದ ನಂದಿಮಂಟಪದ ತೊಲೆ ಹಾಗೂ ದಕ್ಷಿಣ ದಿಕ್ಕಿನ ಕುರುಡು ಮಂಟಪದಲ್ಲಿ ದಶರಥನು ವಶಿಷ್ಠಾದಿಗಳನ್ನು ಪುತ್ರಕಾಮೇಷ್ಟಿ ಯಾಗಕ್ಕೆ ಬರಮಾಡಿಕೊಳ್ಳುವ ದೃಶ್ಯದಿಂದ ಮೊದಲುಗೊಂಡು ಶ್ರೀರಾಮನ ಪಟ್ಟಾಭಿಷೇಕದವರೆಗಿನ ಪ್ರಮುಖ ದೃಶ್ಯಗಳನ್ನು ಕೆತ್ತಲಾಗಿದೆ. ವಿರೂಪಾಕ್ಷ ದೇವಾಲಯದ ಮಹಾಮಂಟಪದ ಕಂಬಗಳ ಮೇಲೆ ಹನುಮಂತನ ಸಮುದ್ರೋಲ್ಲಂಘನ, ಲಂಕೆಯ ವನದ ನಾಶ, ಅವನು ಸೀತೆಯನ್ನು ಕಂಡದ್ದು ಇವೇ ಮೊದಲಾದ ದೃಶ್ಯಗಳಿದ್ದರೆ ಇದೇ ದೇವಾಲಯದ ದಕ್ಷಿಣದ ಗೋಡೆಯ ಹೊರಭಾಗದಲ್ಲಿ ಇತರ ಸನ್ನಿವೇಶಗಳ ಜೊತೆ, ಜಟಾಯುವಧೆ, ಸೀತಾಪಹರಣದಂತಹ ಪ್ರಸಂಗಗಳನ್ನು ಕಂಡರಿಸಲಾಗಿದೆ. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯ ಹಾಗೂ ಐಹೊಳೆಯ ದುರ್ಗ ದೇವಾಲಯಗಳಂತಹ ಪ್ರಮುಖ ದೇವಾಲಯಗಳಲ್ಲೂ ರಾಮಾಯಣಕ್ಕೆ ಸಂಬಂಧಿಸಿದ ಅನೇಕ ದೃಶ್ಯಗಳನ್ನು ಶಿಲೆಯಲ್ಲಿ ಬಿಡಿಸಲಾಗಿದೆ.

ಇವೆಲ್ಲ ರಾಮಾಯಣದ ದೃಶ್ಯಗಳಾದರೆ, ಮಹಾಭಾರತದ ಸನ್ನಿವೇಶಗಳನ್ನು ಈ ಕಾಲದ ಶಿಲ್ಪಿಗಳು ಮರೆತಿಲ್ಲ. ಪಟ್ಟದಕಲ್ಲಿನ ವಿರೂಪಾಕ್ಷದೇವಾಲಯ ಮಹಾ ಮಂಟಪದ ಕಂಬಗಳ ಮೇಲೆ ಕೆತ್ತಿರುವ ಮಹಾಭಾರತದ ಯುದ್ಧಕ್ಕೆ ಸಂಬಂಧಿಸಿದ ಶರಶಯ್ಯೆಯ ಮೇಲೆ ಮಲಗಿರುವ ಭೀಷ್ಮ, ಭೀಮ ದುರ್ಯೋಧನರ ಯುದ್ಧ, ಗೋಗ್ರಹಣ ಇತ್ಯಾದಿ ಸನ್ನಿವೇಶಗಳು ಗಮನಾರ್ಹವಾಗಿವೆ. ಇಲ್ಲಿಯ ಪಾಪನಾಥ ಹಾಗೂ ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಕೂಡ ಮಹಾಭಾರತಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಕೆತ್ತಿರುವುದು ಕಂಡುಬರುತ್ತದೆ.

ಪಟ್ಟದಕಲ್ ಕಾಶೀವಿಶ್ವನಾಥ ದೇವಾಲಯದಲ್ಲಿ ಬಾಲಕೃಷ್ಣನ ಜೀವನದ ಸನ್ನಿವೇಶಗಳನ್ನು ಬಿಡಿಸಿರುವ ಬಗ್ಗೆ ಹಿಂದೆ ಉಲ್ಲೇಖಿಸಿದೆ. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದ ಮಹಾಮಂಟಪದ ಕಂಬದ ಮೇಲೆ ಕೃಷ್ಣಜನನ ಮತ್ತು ಯಶೋದೆಯ ಶಿಲ್ಪಗಳಿರುವುದನ್ನು ಮರೆಯಲಾಗದು.

ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಶಿವದೇವಾಲಯಗಳಲ್ಲಿ ಕಂಡುಬರುವ ರಾಮಾಯಣ ಮಹಾಭಾರತ ಹಾಗೂ ಭಾಗವತಗಳಿಗೆ ಸಂಬಂಧಿಸಿದ ಶಿಲ್ಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೆಲವು ವಿಶಿಷ್ಟ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಇಲ್ಲಿ ಮಹಾಭಾರತದ ದೃಶ್ಯಗಳಿಗಿಂತ, ರಾಮಾಯಣವನ್ನು ಹೆಚ್ಚು ಅಪೇಕ್ಷಿಸುತ್ತಿದ್ದುದನ್ನು ಇದು ಸೂಚಿಸುತ್ತಿದೆಯೇ? ಆಲೋಚನೀಯ. ಹಾಗೆಯೆ ಮಹಾಭಾರತದ ಕೃಷ್ಣನ ಶಿಲ್ಪಗಳು ಇಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಪ್ರತಿಯಾಗಿ ಭಾಗವತದ ಕೃಷ್ಣನಿಗೆ ಇಲ್ಲಿಯ ಶಿಲ್ಪಗಳಲ್ಲಿ ಹೆಚ್ಚು ಪ್ರಾಧಾನ್ಯ ದೊರೆತಿದೆ. ಅದರಲ್ಲಿಯೂ ಅವನು ಬಾಲಕನಾಗಿದ್ದಾಗಿನ ಲೀಲೆಗಳು ಈ ಕಾಲದ ಶಿಲ್ಪಿಗಳನ್ನು ಹೆಚ್ಚು ಆಕರ್ಷಿಸಿವೆ ಎನಿಸುತ್ತದೆ.

ರಾಮ ವೈರಿ ರಾವಣನಿಗಿಂತ ಶಿವಭಕ್ತ ರಾವಣ ಆ ಕಾಲದ ಜನರನ್ನು ಸಹಜವಾಗಿಯೆ ಹೆಚ್ಚು ಆಕರ್ಷಿಸಿದಂತೆ ತೋರುತ್ತದೆ. ಅವನು ಕೈಲಾಸ ಪರ್ವತವನ್ನು ಎತ್ತುತ್ತಿರುವ ಅದ್ಭುತ ದೃಶ್ಯ ಪಟ್ಟದಕಲ್ಲಿನ ವಿರೂಪಾಕ್ಷ, ಪಾಪನಾಥ ಹಾಗೂ ಕಾಶಿವಿಶ್ವೇಶ್ವರ ಇವೇ ಮೊದಲಾದ ಇನ್ನು ಕೆಲವು ದೇವಾಲಯಗಳಲ್ಲಿ ಕಾಣದೊರೆಯುತ್ತದೆ. ವಿರೂಪಾಕ್ಷ ದೇವಾಲಯದ ದಕ್ಷಿಣ ಮುಖಮಂಟಪದ ಆ ರಾವಣನ ಶಿಲ್ಪದಲ್ಲಿ ಅವನಿಗೆ ಹತ್ತು ತಲೆ, ಇಪ್ಪತ್ತು ಕೈಗಳಿದ್ದು, ಅವನು ಕೈಲಾಸ ಪರ್ವತವನ್ನು ಎತ್ತುತ್ತಿರುವಾಗ ಅದರಲ್ಲಿ ವಾಸವಾಗಿದ್ದ ಪಶು‑ಪಕ್ಷಿ ‑ಪ್ರಾಣಿಸಂಕುಲ ಜೀವಭೀತಿಯಿಂದ ಚದುರಿ ಹೋಗುತ್ತಿರುವ ಒಟ್ಟು ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಇದೇ ದೇವಾಲಯದ ಉತ್ತರದ ಗೋಡೆಯ ಹೊರಭಾಗದಲ್ಲಿ ಲಿಂಗಪೂಜಾನಿರತ ರಾವಣನ ಶಿಲ್ಪವಿರುವುದು ಗಮನಾರ್ಹ.

ಒಟ್ಟಿನಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳು ಹಾಗೂ ಆವುಗಳಲ್ಲಿರುವ ವಿವಿಧ ಶಿಲ್ಪಗಳನ್ನು ಆಧರಿಸಿ ಆಗ ಶಿವ, ವಿಷ್ಣು ಗಣಪತಿ, ಕಾರ್ತಿಕೇಯ, ಲಿಂಗ, ಶಕ್ತಿ ಇವರುಗಳ ಪೂಜೆ ಅಸ್ತಿತ್ವದಲ್ಲಿತ್ತೆಂದು ಹೇಳಬಹುದು. ಇವರಲ್ಲಿ ಶಿವ ಹಾಗೂ ವಿಷ್ಣು ದೇವತೆಗಳ ಪೂಜೆಗೆ ಮಹತ್ವವಿದ್ದು ಅವರ ಉಪಾಸಕರು ಅಥವಾ ಆ ಧರ್ಮೀಯರು ಆಗ ಅಧಿಕ ಸಂಖ್ಯೆಯಲ್ಲಿದ್ದರು. ಅವೈದಿಕ ಧರ್ಮಗಳಲ್ಲಿ ಬೌದ್ಧಧರ್ಮ ತನ್ನ ಪ್ರಾಬಲ್ಯವನ್ನು ಬಹುಮಟ್ಟಿಗೆ ಕಳೆದುಕೊಂಡಿತ್ತು. ಆದರೆ ಜೈನಧರ್ಮಕ್ಕೆ ಅಂತಹ ಸ್ಥಿತಿ ಒದಗಿರಲಿಲ್ಲವೆಂಬುದು ಗಮನೀಯ. ಈ ಎಲ್ಲ ಧರ್ಮೀಯರು ಪರಸ್ಪರ ಹೊಂದಿಕೊಂಡು ಸೌಹಾರ್ದಯುತ ಜೀವನ ನಡೆಸುತ್ತಿದ್ದುದು ತುಂಬಾ ಮಹತ್ವದ್ದು. ತತ್ಕಾಲೀನ ಪರಿಸ್ಥಿತಿಗನುಗುಣವಾಗಿ ಕೆಲವು ದೇವತೆಗಳು ಹಿಂದೆ ಬಿದ್ದು ಇನ್ನು ಕೆಲವು ದೇವತೆಗಳು ಹೆಚ್ಚು ಪ್ರಚಾರಕ್ಕೆ ಬಂದು ಈ ಕಾಲದ ಧಾರ್ಮಿಕ ಪರಿಸರದಲ್ಲಿ ಒಂದಿಷ್ಟು ಏರುಪೇರು ಕಾಣಿಸಿಕೊಂಡುದೂ ಉಂಟು.

ಇನ್ನು ವ್ಯಕ್ತಿಗಳಿಂದ ಸ್ಥಾಪನೆಗೊಂಡ ವಿವಿಧ ಧಾರ್ಮಿಕ ಪಂಥಗಳನ್ನು ಕುರಿತಂತೆ ಒಂದೆರಡು ಮಾತುಗಳು ಇಲ್ಲಿ ಅಪ್ರಸ್ತುತವೆನಿಸವು.

ಇಮ್ಮಡಿ ಪುಲಿಕೇಶಿಗೆ ಗುರುವಾಗಿದ್ದನೆಂದು ಹೇಳುವ ನಾಗವರ್ಧನಾಚಾರ್ಯ, ಒಂದನೆಯ ವಿಕ್ರಮಾದಿತ್ಯನಿಗೆ ಶೈವದೀಕ್ಷೆಯಿತ್ತ ಸುದರ್ಶನಾಚಾರ್ಯ, ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿದ್ದ ವ್ಯಾಘ್ರಸ್ವಾಮಿ ಇವರು ಯಾವ ಶೈವಪಂಥಕ್ಕೆ ಸೇರಿದವರೆಂಬುದು ತಿಳಿಯದು. ಆದರೆ ಮುಂದೆ ತುಂಬಾ ಪ್ರಭಾವಶಾಲಿಯಾಗಿ ರಾಜ ಮಹಾರಾಜರ ಗೌರವಾದರಗಳಿಗೆ ಪಾತ್ರವಾದ ಶೈವ ಲಕುಲೀಶ ಪಾಶುಪತ ಪಂಥವು ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವದಲ್ಲಿದ್ದುದಕ್ಕೆ ಅಧಾರಗಳು ದೊರೆಯುತ್ತವೆ. ಬಾದಾಮಿಯ ಭೂತನಾಥಗುಡಿಗಳ ಗುಂಪಿನಲ್ಲಿ ಇರುವ ಒಂದು ಚಿಕ್ಕ ಗುಡಿ ಲಕುಲೀಶನದಾಗಿದೆ. ಮಹಾಕೂಟದ ಮಕುಟೇಶ್ವರದೇವಾಲಯ ಲಕುಲೀಶ ಪಾಶುಪತ ಅಥವಾ ಲಾಕುಳರದಾಗಿರಬೇಕೆಂದು ಹೇಳಲಾಗುತ್ತಿದೆ. ಆ ದೇವಾಲಯದ ಮುಂದಿರುವ ದ್ವಾರಪಾಲಕರ ವಿಗ್ರಹಗಳು ಬಹುಜನರು ಭಾವಿಸಿರುವಂತೆ ವಾತಾಪಿ ಇಲ್ವಲರ ವಿಗ್ರಹಗಳಾಗಿರದೆ ಲಕುಲೀಶನ ಭಕ್ತರ ವಿಗ್ರಹಗಳಾಗಿರಬೇಕೆಂದು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಆ ದೇವಾಲಯದ ಹೊರಭಾಗದಲ್ಲಿ ಲಕುಲೀಶನ ಶಿಲ್ಪಗಳಿವೆ. ಪಟ್ಟದಕಲ್ಲಿನ ಜಂಬುಲಿಂಗನ ಗರ್ಭಗುಡಿಯ ಕೋಷ್ಠದಲ್ಲಿ ಲಕುಲೀಶನ (ಶಿವ) ಶಿಲ್ಪವಿದೆ. ವಿರೂಪಾಕ್ಷ ದೇವಾಲಯದ ದಕ್ಷಿಣ ಗೋಡೆಯ ಹೊರಭಾಗ ಮತ್ತು ಮಲ್ಲಿಕಾರ್ಜುನಗುಡಿಯ ದಕ್ಷಿಣ ಹೊರಗೋಡೆ ಇತ್ಯಾದಿ ಕಡೆಗಳಲ್ಲಿ ಲಕುಲೀಶನ ಮೂರ್ತಿಗಳಿವೆ. ಇದರಿಂದ ಲಕುಲೀಶಪಾಶುಪತರು, ಅಥವಾ ಕಾಳಾಮುಖರು ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಇ್ದುದು ಸುಸ್ಪಷ್ಟ.

ಶೈವಧರ್ಮದ ಇನ್ನೊಂದು ಶಾಖೆಯಾದ ಕಾಪಾಲಿಕ ಪಂಥವೂ ಇದ್ದ ಬಗ್ಗೆ ಕೆಲವು ಆಧಾರಗಳು ದೊರೆಯುತ್ತವೆ. ಮಹಾಕೂಟದ ಮಕುಟೇಶ್ವರ ದೇವಾಲಯದ ಆವರಣ ಪ್ರವೇಶಿಸಲು ನಿರ್ಮಿಸಿರುವ ದಕ್ಷಿಣ ದಿಕ್ಕಿನ ಪ್ರವೇಶದ್ವಾರದ ಬಳಿ ಕೆತ್ತಿರುವ ಒಂದು ಹೆಣ್ಣು ಹಾಗೂ ಒಂದು ಗಂಡು ಶಿಲ್ಪಗಳು ಕಾಪಾಲಿಕರವೆಂದು ಕೆಲವು ವಿದ್ವಾಂಸರ ಊಹೆ. ಇಲ್ಲಿ ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ, ಈ ಭಾಗದ ಸಿದ್ಧನಕೊಳ್ಳ ಮೊದಲಾದ ಸ್ಥಳಗಳಲ್ಲಿ ಲಜ್ಜಾಗೌರಿಯ ಶಿಲ್ಪಗಳು ದೊರೆಯುತ್ತಿರುವುದು. ಇದು ಶೈವದ ಇನ್ನೊಂದು ವಾಮಾಚಾರಿ ಪಂಥವಾದ ಕೌಳರತ್ತ ಬೆರಳು ತೋರಿಸುತ್ತಿದೆಯೆ?

ಬಾದಾಮಿಯ ಚಾಲುಕ್ಯರ ಕಾಲದ ದೇವಾಲಯಗಳ ವಿವಿಧೆಡೆಗಳಲ್ಲಿ ಕೆತ್ತಿರುವ ದೇವ‑ ದೇವತೆಗಳು ನಮ್ಮ ಪುರಾಣಗಳ ಸೃಷ್ಟಿ. ಅಲ್ಲಿ ವಿವರಣೆಗೊಂಡ ದೇವ ದೇವತೆಗಳ ಅವರ ಲೀಲೆ ಅವತಾರಗಳ ಸ್ವರೂಪ ಲಕ್ಷಣಗಳನ್ನೇ ಶಿಲ್ಪಿಗಳು ಕಲ್ಲಿನಲ್ಲಿ ಕಂಡರಿಸಿದ್ದಾರೆ, ಕೆತ್ತಿದ್ದಾರೆ. ಆದರೆ ಓದು ಬರಹಗಳಿಂದ ವಂಚಿತರಾಗಿದ್ದ ಅಂದಿನ ಬಹುಸಂಖ್ಯಾತ ಸಾಮಾನ್ಯರು ಅವುಗಳನ್ನು ಓದಿ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ಆ ದೇವ ದೇವತಾದಿಗಳ ಸ್ವರೂಪ ಲಕ್ಷಣಗಳನ್ನು ಶಿಲ್ಪಿಗಳು ತಮ್ಮ ಶಿಲ್ಪಕಲಾ ಮಾಧ್ಯಮದ ಮೂಲಕ ಶ್ರೀ ಸಾಮಾನ್ಯರಿಗೆ ಪರಿಚಯ ಮಾಡಿಕೊಟ್ಟು ಉಪಕರಿಸಿದ್ದಾರೆ. ಆದರೆ ಶೈವದೇವಾಲಯಗಳಲ್ಲಿ ವಿಷ್ಣುವನ್ನು ವಿಷ್ಣುವಿನ ಅವತಾರಗಳನ್ನು ಅವನ ಲೋಕೋದ್ದಾರದ ಪ್ರಸಂಗಗಳನ್ನು ಅದೇ ರೀತಿ ವೈಷ್ಣವ ದೇವಾಲಯಗಳಲ್ಲಿ ಶಿವನನ್ನು ಅವನ ಲೀಲಾದಿಗಳನ್ನು  ಶಿಲ್ಪಗಳಲ್ಲಿ ಸಾಕಾರಗೊಳಿಸಿ ಆಯಾಧರ್ಮೀಯರಲ್ಲಿ ಸರ್ವ ಧರ್ಮಗಳನ್ನು ಸಮಾನದೃಷ್ಟಿಯಿಂದ ಕಾಣುವ ಒಂದು ಸತ್‌ಸಂಪ್ರದಾಯಕ್ಕೆ ಶಿಲ್ಪಿಗಳು ಹಾಗೂ ಬಾದಾಮಿ ಚಾಲುಕ್ಯ ದೊರೆಗಳು ಶ್ರೀಕಾರ ಹಾಕಿ ಬಹುದೊಡ್ಡ ಕೆಲಸ ಮಾಡಿದರು. ಅವರ ಅನಂತರ ಬಂದ ಕರ್ನಾಟಕದ ಅರಸು ಮನೆತನಗಳು ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದವು. ಧಾರ್ಮಿಕ ಪರಿಸರವನ್ನು ತಿಳಿಯಾಗಿಸುವಲ್ಲಿ ಬಾದಾಮಿಯ ಚಾಲುಕ್ಯರ ಹಾಗೂ ಅವರ ಕಾಲದ ಶಿಲ್ಪಗಳು ಮಾಡಿದ ಪ್ರಯತ್ನ ಸಂಸ್ಮರಣೀಯ.

ಗ್ರಂಥಋಣ

೧. ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ; ಡಾ. ಎಸ್. ರಾಜಶೇಖರ

೨. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ:ಡಾ. ಎಂ. ಚಿದಾನಂದಮೂರ್ತಿ

೩. ಕರ್ನಾಟಕದ ಇತಿಹಾಸ:ಡಾ. ಬಾ.ರಾ. ಗೋಪಾಲ

೪. ಬಾದಾಮಿ ಚಾಲುಕ್ಯ ಶಿಲ್ಪವೈಭವ:ಎ.ಎಂ. ಅಣ್ಣೀಗೇರಿ

೫. ಕರ್ನಾಟಕ ಸಾಮ್ರಾಜ್ಯ (ಸಂ.೧):ರಾ.ಹ. ದೇಶಪಾಂಡೆ

೬. ಐಹೊಳೆ:ಸಂಸ್ಕೃತಿ ಮತ್ತು ಕಲೆ:ಎ.ಎಂ. ಅಣ್ಣಿಗೇರಿ

೭. ಮಾರ್ಗ (ಸಂ.೨):ಎಂ.ಎಂ. ಕಲಬುರ್ಗಿ

೮. The Chalukyas of Badami: ಸಂ. ಎಂ.ಎಸ್.ನಾಗರಾಜರಾವ್