ಬೌದ್ಧಧರ್ಮ

ಬೌದ್ಧಧರ್ಮದ ಬಗೆಗೆ ಚಾಲುಕ್ಯ ರಾಜರ ಯಾವುದೇ ಶಾಸನದಲ್ಲಿ ಉಲ್ಲೇಖವಿದ್ದುದು ಇನ್ನೂವರೆಗೂ ಬೆಳಕಿಗೆ ಬಂದಿಲ್ಲ. ಆದರೆ ಚಾಲುಕ್ಯ ಸಾಮ್ರಾಜ್ಯದ ತಿರುಳು ಎನಿಸಿದ ಬಾದಾಮಿ-ಐಹೊಳೆಯಲ್ಲಿ ಬೌದ್ಧಧರ್ಮ ಪ್ರಚಾರದಲ್ಲಿ ಇದ್ದುದನ್ನು ತೋರಿಸುವ ವಾಸ್ತುಗಳು ಮತ್ತು ಶಿಲ್ಪಗಳಿವೆ. ಬಾದಾಮಿ ೨ನೇ ಮತ್ತು ೩ನೇ ಗುಹಾದೇವಾಲಯಗಳ ನಡುವೆ ಒಂದು ನೈಸರ್ಗಿಕವಾಗಿ ನಿರ್ಮಿತವಾಗಿರುವ ಗವಿ ಇದೆ. ಅದರ ಭಿತ್ತಿಯ ಮೇಲೆ ಬೌದ್ಧಧರ್ಮಕ್ಕೆ ಸಂಬಂಧಿಸಿದಂತಹ ಅಪೂರ್ಣವಾದ ಉಬ್ಬು-ಶಿಲ್ಪಗಳಿವೆ. ಅದರಲ್ಲಿ ಒಂದು ಶಿಲ್ಪವು ಅಷ್ಟಭಯಗಳಿಂದ  ಆವೃತವಾದ ‘ಬೋಧಿಸತ್ವ ಪದ್ಮಪಾಣಿ’, ಐಹೊಳೆಯಲ್ಲಿಯ ಮೇಗುತಿ ಬೆಟ್ಟದ ಉತ್ತರದ ಮಧ್ಯದಲ್ಲಿ ಒಂದು ಬೌದ್ಧ ಚೈತ್ಯವಿದೆ. ಅದು ಬೌದ್ಧವಿಹಾರವೂ ಆಗಿತ್ತು. ಅದರ ಕೆಲಭಾಗವನ್ನು ಬಂಡೆಗವಿಯಲ್ಲಿ ಅವಶ್ಯವಿದ್ದಷ್ಟು ಕೊರೆದು ತೆಗೆಯಲಾಗಿದೆ. ಇನ್ನುಳಿದ ಭಾಗದಲ್ಲಿ ಕಟ್ಟಲಾದ ಒಂದು ಅಂತಸ್ತು ಇದೆ. ಅತ್ಯಂತ ಸುಂದರವಾದ ಒಂದು ಉಬ್ಬುಶಿಲ್ಪವಿದೆ. ಅದರಲ್ಲಿ ಬುದ್ಧನು ಒಂದು ಸಿಂಹಾಸನದ ಮೇಲೆ ಕುಳಿತಂತಿದೆ. ಕೈಗಳು ವ್ಯಾಖ್ಯಾನ ಮುದ್ರೆಯಲ್ಲಿವೆ. ತಲೆಯ ಮೇಲೆ ಮೂರು ಹೊಡೆಗಳಿವೆ. ಆಸನಸ್ಥನಾದ ಬುದ್ಧನ ಎರಡು ಭಗ್ನ ಮೂರ್ತಿಗಳು ಈ ಚೈತ್ಯಾಲಯದ ಬಳಿ ದೊರೆತಿವೆ. ಬಹುಶಃ ಅಂತಸ್ತನ್ನುಳ್ಳ ಆ ಚೈತ್ಯವಿಹಾರದ ಮೇಲಿನ ಮತ್ತು ಕೆಳಗಿನ ಕೋಣೆಗಳಲ್ಲಿ ಇರಿಸಲು ಈ ಮೂರ್ತಿಗಳನ್ನು ರಚಿಸಿದ್ದಿರಬಹುದು. ಇದಲ್ಲದೆ ಈ ಚೈತ್ಯಾಲಯದ ಬಾಗಿಲುಗಳ ಚೌಕಟ್ಟಿನ ಶಾಲೆಗಳಲ್ಲಿ ಬುದ್ಧನ ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನು ಪ್ರತಿಬಿಂಬಿಸುವ  ಉಬ್ಬುಶಿಲ್ಪಗಳಿವೆ. ಬುದ್ಧನ ಮಹಾನಿರ್ವಾಣ, ಧರ್ಮಚಕ್ರ ಪ್ರವರ್ತನ, ನಳಗಿರಿ ಘಟನೆ, ಬುದ್ಧನನ್ನು ಕೊಲ್ಲಲು ದೇವದತ್ತ ಮಾಡಿದ ಪ್ರಯತ್ನ ಮುಂತಾದ ಘಟನೆಗಳನ್ನು ಈ ಉಬ್ಬುಶಿಲ್ಪಗಳು ತೋರಿಸುತ್ತವೆ. ಇದಲ್ಲದೆ ಗುಲಹಂಸ ಜಾತಕ, ಅರಮಧುಸಕ ಜಾತಕ ಮುಂತಾದ ಜಾತಕದ ಕಥೆಗಳನ್ನು ತೋರಿಸಲಾಗಿದೆ. ಇಲ್ಲಿಯ ಒಂದು ಕಂಬದ ಮೇಲಿದ್ದ ಶಾಸನದಲ್ಲಿ ‘ಆನಂದ ಸ್ಥವಿರ’ನ ಶಿಷ್ಯನಾದ ‘ಪಿಂಡಾಪತಿಮಹೇಂದ್ರ’ನ ಉಲ್ಲೇಖವಿದೆ. ಪಿಂಡಾಪತಿ ಪಂಥದ ಒಬ್ಬ ಬೌದ್ಧ ಭಿಕ್ಷುವಿನ ಬಗ್ಗೆ ಬಹುಶಃ ಈ ಉಲ್ಲೇಖ ಇದ್ದಿರಬಹುದು. ಚೈತನ್ಯಪುರಿಯ (ಹೈದರಾಬಾದ್) ವಿಷ್ಣುಕುಂಡಿ ಅರಸ ಗೋವಿಂದರಾಜನ ೫ನೇ ಶತಮಾನದ ಒಂದು ಶಾಸನದಲ್ಲಿಯೂ ಈ ಪಂಥವನ್ನು ಉಲ್ಲೇಖಿಸಲಾಗಿದೆ.

ಚಾಲುಕ್ಯರ ರಾಜ್ಯದಲ್ಲಿಯ ಬೌದ್ಧಧರ್ಮದ ಬಗೆಗೆ ಚೀನ ಪ್ರವಾಸಿಗ ಹ್ಯೂಯೆನ್ ತ್ಸಾಂಗನು ತನ್ನ ಕಥನಗಳಲ್ಲಿ ಹೇಳಿದ್ದಾನೆ. ಅವನು ಬಾದಾಮಿಗೂ ಬಂದಿದ್ದನು. ಅಲ್ಲಿಯ ಹೀನಯಾನರು ಮತ್ತು ಮಹಾಯಾನರ ಬಗ್ಗೆ ಅವನು ಬರೆದಿದ್ದಾನೆ. ಚುಲಿಯ ದೇಶದಲ್ಲಿ ಬೌದ್ಧವಿಹಾರಗಳೆಲ್ಲ ಹಾಳು ಬಿದ್ದಿದ್ದವು. ಕೆಲವೊಂದರಲ್ಲಿ ಮಾತ್ರ ಭಿಕ್ಷುಗಳು ವಾಸಿಸುತ್ತಿದ್ದರು. ನೂರಾರು  ದೇವಮಂದಿರಗಳಿದ್ದವು. ಅಸಂಖ್ಯ ದಿಗಂಬರರು ಇದ್ದರು. ರಾಜಧಾನಿಯ ಪೂರ್ವದ ಪೂರ್ವ ದಿಕ್ಕಿಗೆ ಅದರ ಬಳಿಯಲ್ಲಿಯೆ ಅಶೋಕವನವೊಂದಿತ್ತು. ಅದು ಬುದ್ಧನು ಉಪದೇಶ ಮಾಡಿದ ಸ್ಥಳ. ನಗರದ ಪಶ್ಚಿಮವಲಯದ ಹತ್ತಿರ ಒಂದು ಹಳೆ ವಿಹಾರವಿದ್ದಿತು. ಅಲ್ಲಿ ದೇವಪುರುಷನು ಅಹ್ರತ ಉಥರನೊಂದಿಗೆ ಚರ್ಚೆ ಮಾಡಿದ್ದನು. ಹ್ಯೂಯೆನ್‌ತ್ಸಾಂಗನು ಕರ್ನಾಟಕದ ಪಶ್ಚಿಮಭಾಗಕ್ಕೂ ಹೋಗಿದ್ದನು. ಅಲ್ಲಿ ಕೊಂಕಣಪುರದಂತಹ ಸ್ಥಳಗಳಲ್ಲಿ ಬೌದ್ಧಧರ್ಮದ ಗುರುತುಗಳನ್ನು ಕಂಡಿದ್ದಾಗಿ ಅವನು ಹೇಳುತ್ತಾನೆ. ಒಟ್ಟಿನಲ್ಲಿ ಅಂದಿನ ಕರ್ನಾಟಕದಲ್ಲಿ ಬೌದ್ಧಧರ್ಮ ಸುಸ್ಥಿತಿಯಲ್ಲಿ ಇದ್ದಿರಲಿಲ್ಲವೆಂದು ಈ ಚೀನ ದೇಶದ ಪ್ರವಾಸಿಗನ ವೃತ್ತಾಂತದಿಂದ ಸ್ಪಷ್ಟವಾಗುತ್ತದೆ. ಆದರೆ, ೧೩ನೇ ಶತಮಾನದವರೆಗೂ ಬೌದ್ಧಧರ್ಮವು ಕರ್ನಾಟಕದಲ್ಲಿ ಉಸಿರಾಡಿಕೊಂಡಿದ್ದಿತು. ತಾನು ದಕ್ಷಿಣಕನ್ನಡದ ಕದಿರಿ, ಉತ್ತರಕನ್ನಡದ ಬನವಾಸಿ, ಶಿವಮೊಗ್ಗದ ಬಳ್ಳಿಗಾವೆ, ಧಾರವಾಡದ ಡಂಬಳ ಮತ್ತು ಕೋಳಿವಾಡ ಹಾಗೂ ಬಳ್ಳಾರಿ ಜಿಲ್ಲೆಯ ಕುರುಗೋಡು ಮುಂತಾದ ಸ್ಥಳಗಳಲ್ಲಿ ಬೌದ್ಧಧರ್ಮ ಮುಂದುವರೆದುಕೊಂಡು ಬಂದಿತ್ತು ಎಂಬುದಕ್ಕೆ ಅಲ್ಲಿಯ ವಾಸ್ತು ಮತ್ತು ಶಿಲ್ಪಗಳು ಸಾಕ್ಷ್ಯ ನುಡಿಯುತ್ತವೆ.

ಜೈನಧರ್ಮ

ವಾತಾಪಿಯ ಚಾಲುಕ್ಯವಂಶ ಧಾರ್ಮಿಕ ಉದಾರತನದಲ್ಲಿ ಹೆಸರಾದುದು. ಅವರ ಕಾಲದಲ್ಲಿ ಜೈನಧರ್ಮವು ಉತ್ತರ ಕರ್ನಾಟಕದಲ್ಲಿ ಶಾಖೋಪಶಾಖವಾಗಿ ಹಬ್ಬಿಕೊಂಡಿತು. ಚೈತ್ಯಾಲಯಗಳ ರಚನೆಯಲ್ಲಿ ಸಕ್ರಿಯವಾದ ಆಸಕ್ತಿಯನ್ನು ತೋರ್ಪಡಿಸಿದ ರಾಜಮನೆತನ ದವರು ಮತ್ತು ಮನ್ನೆಯರು ಅವುಗಳಿಗೆ ಇನ್ನಷ್ಟು ದಾನಗಳನ್ನು ಕೊಡಮಾಡಿದರು. ತಮ್ಮ ರಾಜಧಾನಿ ಬಾದಾಮಿ ಹಾಗೂ ಹತ್ತಿರದ ಐಹೊಳೆಯಲ್ಲಿ ಜೈನ ಗುಹೆಗಳನ್ನು ಕೊರೆಯಿಸಿದರು. ಅಲ್ಲದೆ ಕರಟಗೇರಿ, ಲಕ್ಷ್ಮೇಶ್ವರ ಮತ್ತು ಅಡೂರಗಳಲ್ಲಿ ಜೈನ ವಿಶ್ರಾಮಧಾಮಗಳನ್ನೂ ಕಟ್ಟಿಸಿದರು. ಜೈನ ಸಂಘಸಂಸ್ಥೆಗಳಿಗೆ ಕೊಡಲಾದ ವಿಪುಲ ದಾನಗಳನ್ನು ಉಲ್ಲೇಖಿಸುವ ಅನೇಕ ಶಾಸನಗಳು ಲಭ್ಯವಾಗಿವೆ.

ಚಾಲುಕ್ಯ ಮಾಂಡಲೀಕರೂ ಕೂಡ ಜೈನ ಧರ್ಮಕ್ಕೆ ಪ್ರೋಕೊಟ್ಟರು. ಈಗಿನ ಧಾರವಾಡ ಜಿಲ್ಲೆಯಲ್ಲಿಯ ಗದಗ ತಾಲೂಕಿನಲ್ಲಿರುವ ಕರಟಗೇರಿಯಲ್ಲಿಯ ಶಾಂತಿಭಗವತ್ ಚೈತ್ಯಾಲಯಕ್ಕೆ (ಇದು ೧೨ನೇ ತೀರ್ಥಂಕರ ಶಾಂತಿನಾಥನಿಗೆ ಅರ್ಪಿತವಾಗಿದೆ) ರವಿಕೀರ್ತಿ ಎಂಬ ಸೇಂದ್ರಕ ಅರಸನು ಭೂಮಿಗಳನ್ನು ದಾನ ಕೊಟ್ಟನು. ಪರಲೂರ ಸಂಘ ಪರಂಪರೆಯ ಶ್ರೀನಂದಿ ಆಚಾರ್ಯ ಶಿಷ್ಯ ಅಭಯನಂದಿ ಆಚಾರ್ಯರು ಈ ದಾನವನ್ನು ಸ್ವೀಕರಿಸಿದರು (ಬಹುಶಃ ಇವರು ಈಗಿನ ಬಿಜಾಪುರ ಜಿಲ್ಲೆಯಲ್ಲಿಯ ಬಾಗಲಕೋಟೆ ತಾಲೂಕಿನ ಹುಲ್ಲೂರು ಗ್ರಾಮದ ಜೈನ ಬಸದಿಗೆ ಸಂಬಂಧಿಸಿದವರು ಇರಬಹುದು). ಎರಡನೇ ಪುಲಿಕೇಶಿಯ ಆಸ್ಥಾನಕವಿಯಾದ ಹಾಗೂ ಬಹುಶಃ ಜೈನಧರ್ಮದ ಯಾಪನೀಯ ಸಂಘಕ್ಕೆ ಸೇರಿದವನಾದ ರವಿಕೀರ್ತಿಯು ಐಹೊಳೆಯಲ್ಲಿ ದಿಬ್ಬವೊಂದರ ಮೇಲೆ ಜಿನೇಂದ್ರನು ಒಂದು ಕಲ್ಲಿನ ಗುಡಿಯನ್ನು ಕಟ್ಟಿಸಿದನು. ಅಲ್ಲಿಯ ಸ್ಥಳೀಕರು ಈ ದಿಬ್ಬವನ್ನು ಮೇಗುತಿದಿಬ್ಬ ಎಂದು ಕರೆಯುತ್ತಾರೆ. ಮುಳವಳ್ಳಿ, ವೆಳವಳ್ಟಿಕವಾಡ, ಮಚ್ಚನೂರ, ಗಂಗೆವೂರ(ಗಂಗುರ, ಹುನಗುಂದ ತಾ. ಬಿಜಾಪುರ). ಮತ್ತು ಪುಲಿಗೆರೆ (ಲಕ್ಷ್ಮೇಶ್ವರ, ಧಾರವಾಡ ಜಿಲ್ಲೆ) ಊರುಗಳನ್ನು ಈ ಜಿನೇಂದ್ರ ದೇವಾಲಯಕ್ಕೆ ದತ್ತಿ ಕೊಡಲಾಯಿತು. ಅಲ್ಲದೆ ಐಹೊಳೆಯಲ್ಲಿಯೂ ಕೆಲ ಭೂಮಿಗಳನ್ನು ಕೊಡಲಾಯಿತು. ಈ ದೇವಾಲಯಕ್ಕೆ ಅಂತಸ್ತುಗಳಿವೆ. ಆದರೆ ಕಟ್ಟಡ ಅಪೂರ್ಣವಾಗಿದೆ. ಈ ದೇವಾಲಯದಲ್ಲಿ ದೊರೆತ ಅಂಬಿಕಾ (ಕೂಷ್ಮಾಂಡಿನಿ) ಯಕ್ಷಿಯ ಪ್ರತಿಮೆಯನ್ನು ಗಮನಿಸಿದರೆ, ಇದು ಬಹುಶಃ ನೇಮಿನಾಥನ ದೇವಾಲಯವಾಗಿದ್ದಿರಬಹುದು ಎಂದೆನಿಸುತ್ತದೆ.

ಎರಡನೇ ಪುಲಕೇಶಿಯ ಸಮಯದಲ್ಲಿಯೆ ಪ್ರಾಚೀನ ಪುಲಿಗೆರೆ ಅಂದರೆ ಈಗ ಧಾರವಾಡ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರವು ಜೈನ ಕೇಂದ್ರವಾಗಿತ್ತು. ಅದರ ಹತ್ತಿರದಲ್ಲಿಯೆ ಅರಸರಾಗಿದ್ದ ಸೇಂದ್ರಕರು ಆ ಕೇಂದ್ರವನ್ನು ಪ್ರೋತನ್ನ ಆಳಿಕೆಯಲ್ಲಿ ಸೇಂದ್ರಕ ದುರ್ಗಶಕ್ತಿ ಐದುನೂರು ನಿವರ್ತನಗಳಷ್ಟು ಭೂಮಿಯನ್ನು ಜಿನೇಂದ್ರದೇವ ಅಂದರೆ ನೇಮಿನಾಥ ಪೂಜೆ-ಪುರಸ್ಕಾರಗಳಿಗಾಗಿ ದಾನವಾಗಿ ಕೊಟ್ಟನು. ಹಡಗಿಲೆಗ್ರಾಮ(ಹಡಗಲೆ, ಶಿರಹಟ್ಟಿ ತಾ. ಧಾರವಾಡ ಜಿಲ್ಲೆ)ವನ್ನು ಶಂಖ ಜಿನಾಲಯದ ದುರಸ್ತಿ, ಪೂಜೆ, ನೈವೇದ್ಯಗಳಿಗಾಗಿ ಕ್ರಿ.ಶ. ೬೮೬ರಲ್ಲಿ ಚಾಲುಕ್ಯ ವಿಕ್ರಮಾದಿತ್ಯನು ದಾನವಾಗಿ ಕೊಟ್ಟಿದ್ದನು. ಮೂಲಸಂಘ ದೇವಗಣ ಶಾಕೆಯ ಧ್ರವದೇವಚಾರ್ಯರ ಕೋರಿಕೆಯ ಮೇರೆಗೆ ಈ ದಾನವನ್ನು ಮಾಡಲಾಗಿತ್ತು. ವಿನಯಾದಿತ್ಯನ ಆಳ್ವಿಕೆಯಲ್ಲಿ ಇಲ್ಲಿಯ ಜೈನ ದೇವಸ್ಥಾನಗಳಿಗೆ ಇನ್ನೂ ಮೂರು ದಾನಗಳು ಬಂದಿದ್ದವು. ತನ್ನ ಸಹೋದರಿ ಕುಂಕುಮದೇವಿಯು ಲಕ್ಷ್ಮೇಶ್ವರದಲ್ಲಿ ಕಟ್ಟಿಸಿದ ಜಿನದೇವಾಲಯಕ್ಕೆ ಸಾಮ್ರಾಟನು ಹಲವಾರು ಗ್ರಾಮಗಳನ್ನು ಮತ್ತು ಭೂಮಿಗಳನ್ನು ಕ್ರಿ.ಶ.೭೦೭ರಲ್ಲಿ ದಾನವಾಗಿತ್ತನು. ಗುಡ್ಡಿಗೇರೆ (ಗುಡಿಗೆರೆ, ಕುಂದಗೋಳ ತಾ. ಧಾರವಾಡ ಜಿಲ್ಲೆ), ಉಪಹಟ್ಟಿ (ಉಳಟ್ಟಿ, ಶಿರಹಟ್ಟಿ ತಾ.), ಪಾತಳಿ, ಮರಗುಂಡಿ (ಮಾರಗುಂಡಿ, ಸಿರಸಿ ತಾ. ಉತ್ತರ ಕನ್ನಡ ಜಿಲ್ಲೆ) ಮತ್ತು ನೆರಿಲಿಕಾ (ನೀರಲಗಿ, ಗದಗ ತಾ). ಹೀಗೆ ದಾನವಾಗಿ ಕೊಟ್ಟ ಗ್ರಾಮಗಳು ಮತ್ತು ಭೂಮಿಗಳಾಗಿದ್ದವು. ಗುಡ್ಡಿಗೇರಿಯೂ ಒಂದು ಜೈನ ಕೇಂದ್ರವಾಗಿತ್ತು. ಮೂಲ ಸಂಘದ ಸೂರಸೃತಗಣದವರು ಅಲ್ಲಿ ಇರುತ್ತಿದ್ದರು. ಕುಂಕುಮದೇವಿ ಕಟ್ಟಿಸಿದ ಜಿನಾಲಯವನ್ನು ಆನೆಸೆಜ್ಜೆಯ ಬಸದಿ ಎಂದು ಕರೆಯುತ್ತಿದ್ದರು ಎಂದು ೧೧ನೇ ಶತಮಾನದ ಒಂದು ಶಾಸನದಲ್ಲಿ ಹೇಳಿದೆ. ವಿಜಯಾದಿತ್ಯನು ಕೊಟ್ಟ ಮೊದಲನೆಯ ದಾನದ ನಂತರದ ೨೦ ವರ್ಷಗಳಲ್ಲಿ ಬಿಕ್ಕಿರಾಣಂಕನು ಶೆಂಬೊಳಲ (ಶ್ಯಾಬಾಳ, ಶಿರಹಟ್ಟಿ ತಾ.) ಗ್ರಾಮವನ್ನು ಶಂಖಜಿನಾಲಯದ ಆವರಣದಲ್ಲಿ ಇದ್ದ ಜಿನ-ಭಟ್ಟಾರಕ ದೇವಸ್ಥಾನಕ್ಕೆ ದಾನವಾಗಿತ್ತನು. ಆಗ ಮಹತ್ತರ ಎಂಬ ಅಧಿಕಾರ ಸ್ಥಾನದಲ್ಲಿದ್ದ ವಿಜಯ ಎಂಬುವನ ಕೋರಿಕೆಯ ಮೇರೆಗೆ (ಕ್ರಿ.ಶ.೭೨೩) ಈ ದಾನವನ್ನು ಕೊಡಲಾಗಿತ್ತು. ಈ ಮಹತ್ತರ ಆಗಿನ ಸಾಮ್ರಾಟನ ಅಧೀನದಲ್ಲಿದ್ದನು. ದೇವಸ್ಥಾನದಲ್ಲಿಯ ಪೂಜೆಗೆಂದು ಹಾಗೂ ಅದರ ದಾನಶಾಲೆಯನ್ನು ನಡೆಸಬೇಕೆಂಬುದು ಈ ದಾನದ ಉದ್ದೇಶವಾಗಿತ್ತು. ಮೂಲಸಂಘದ ಜಯದೇವ ಪಂಡಿತಾಚಾರ್ಯರು ಈ ದಾನವನ್ನು ಸ್ವೀಕರಿಸಿದ್ದರು. ಅವರ ಪರಂಪರೆ ಈ ರೀತಿಯಾಗಿತ್ತು:

ಶ್ರೀ ದೇವಾಚಾರ್ಯ

|

ಚಿಕಣ ದೇವಾಚಾರ್ಯ

|

ರಾಮದೇವಾಚಾರ್ಯ

|

ಜಯದೇವಪಂಡಿತಾಚಾರ್ಯ

ಏಳು ವರ್ಷಗಳ ನಂತರ ಕ್ರಿ.ಶ. ೭೩೦ರಲ್ಲಿ ಸಾಮ್ರಾಟ ವಿಜಯಾದಿತ್ಯನು ಕದ್ದಮ ಗ್ರಾಮವನ್ನು ಈ ದೇವಾಲಯದಲ್ಲಿ ಒಂದು ದಾನಶಾಲೆಯನ್ನು ನಡೆಸಲು ದಾನವಾಗಿ ಕೊಟ್ಟನು. ಮೂಲಸಂಘದ ದೇವಗಣ ಶಾಖೆಯ ಉದಯದೇವಪಂಡಿತ ಅಂದರೆ ನಿರವದ್ಯಪಂತರೆಂಬ ತನ್ನ ಸ್ವಗುರುವಿನ ಆದೇಶದ ಮೇರೆಗೆ ಸಾಮ್ರಾಟ ವಿಜಯಾದಿತ್ಯನು ಈ ದಾನವನ್ನು ಕೊಟ್ಟಿದ್ದನು. ಕ್ರಿ.ಶ.೭೩೪ರಲ್ಲಿ ಎರಡನೇ ವಿಕ್ರಮಾದಿತ್ಯನು ಶಂಖತೀರ್ಥ ಬಸದಿಯನ್ನು ಸುಂದರಗೊಳಿಸಿ ಪವಿತ್ರವಾಗಿಸಿದನು. ಬಹುಶಃ ಒಂದನೇ ತೀರ್ಥಂಕರನಾದ ವೃಷಭೇಂದ್ರನಾಥನದ್ದೆಂದು ಹೇಳಬಹುದಾದ ಧವಳಜಿನಾಲಯವನ್ನು ದುರಸ್ತಿಗೊಳಿಸಿದನು. ಅಲ್ಲದೆ ಬಾಹುಬಲ ಎಂಬ ವರ್ತಕನ ಕೋರಿಕೆಯ ಮೇರೆಗೆ ಧವಳಜಿನಾಲಯದ ದಾನಶಾಲೆಯ ದುರಸ್ತಿ, ನಿರ್ವಹಣೆ ಮತ್ತು ಅಲ್ಲಿ ನಡೆಯುವ ಪೂಜೆಗಳಿಗಾಗಿ ಭೂಮಿಯನ್ನು ಕೊಟ್ಟನು. ರಾಮದೇವಾಚಾರ್ಯರ ಶಿಷ್ಯರೂ, ಜಯದೇವ ಪಂಡಿತರ ಗೃಹಶಿಷ್ಯರೂ ಹಾಗೂ ಮೂಲಸಂಘದ ದೇವಗಣ ಶಾಖೆಯವರೂ ಆದ ವಿಜಯದೇವ ಪಂಡಿತಾಚಾರ್ಯರಿಗೆ ಈ ದಾನವನ್ನು ವಹಿಸಿಕೊಡಲಾಗಿತ್ತು.

ಲಕ್ಷ್ಮೇಶ್ವರವು ಜೈನರ ಮೂಲಸಂಘದ ಅದರಲ್ಲಿಯೂ ಅದರ ದೇವಗಣ ಶಾಖೆಯ ಕೇಂದ್ರಸ್ಥಾನವಾಗಿತ್ತು ಎಂಬುದು ಸ್ಪಷ್ಟವಿದೆ. ಮೇಲಿಂದ ಮೇಲೆ ಉಲ್ಲೇಖಿತಗೊಳ್ಳುವ ದಾನಶಾಲೆಗಳಲ್ಲಿ ಬಡವರಿಗೂ ಹಾಗೂ ನಿರ್ಗತಿಕರಿಗೂ ಉಚಿತ ಆಹಾರವನ್ನು ಒದಗಿಸ ಲಾಗುತ್ತಿತ್ತು. ಇದರಿಂದ ಜೈನಧರ್ಮವನ್ನು ಸ್ವೀಕರಿಸಲು ಬಡವರು ಮುಂದಾಗುತ್ತಿದ್ದ ಸಾಧ್ಯತೆಗಳೂ ಇದ್ದವು. ಕ್ರಿ.ಶ. ೧೨ನೇ ಶತಮಾನದಲ್ಲಿಯೂ ಲಕ್ಷ್ಮೇಶ್ವರದಲ್ಲಿ ಹೊಸ ಹೊಸ ಬಸದಿಗಳ ಕಟ್ಟಡ ಕೆಲಸ ನಡೆಯುತ್ತಿದ್ದುದರಿಂದ ಆ ಊರು ಜೈನರ ಕೇಂದ್ರಸ್ಥಾನವಾಗಿ ತನ್ನ ಸ್ಥಾನವನ್ನು ಆ ಕಾಲದವರೆಗೂ ಉಳಿಸಿಕೊಂಡು ಬಂದಿತ್ತು.

ಎರಡನೇ ಕೀರ್ತಿವರ್ಮನ ಆಳ್ವಿಕೆಯಲ್ಲಿ ಜಾಬುಳಗೇರಿಯ ಗಾಮುಂಡ ಕಲಿಯಮ್ಮಳು ಅಣ್ಣಿಗೇರಿಯಲ್ಲಿ ಒಂದು ಚೇದಿಯ ಅಂದರೆ ಜೈನ ಚೈತ್ಯಾಲಯವನ್ನು ಕಟ್ಟಿಸಿದಳು. ಕೊಂಡಿಶೂಳರ ಕುಪ್ಪ ಅಂದರೆ ಕೀರ್ತಿವರ್ಮ ಗೋಸಾಸಿ ಎಂಬುವನು ಆ ದೇವಸ್ಥಾನದ ಎದುರು ಒಂದು ವಿಗ್ರಹವನ್ನು ನಿಲ್ಲಿಸಿದನು. ಗಾಮುಂಡನೊಬ್ಬನ ಪಂಡಿಪುರ(ಅಂದರೆ ಅಡೂರ, ಹಾನಗಲ್ ತಾ. ಧಾರವಾಡ ಜಿಲ್ಲೆ)ದಲ್ಲಿ ಒಂದು ಜಿನೇಂದ್ರ ಭವನವನ್ನು ಕಟ್ಟಿಸಿದ್ದನು. ದೋಣಗಾಮುಂಡ ಮತ್ತು ಎಳಗಾಮುಂಡ ಎಂಬುವರು ಈ ಭವನಕ್ಕೆ ಭತ್ತದ ಗದ್ದೆಗಳನ್ನು ದಾನವಾಗಿ ಕೊಟ್ಟಿದ್ದರು. ದೇವಾಲಯಕ್ಕೆ ಬೇಕಾಗುವ ಹೂವುಗಳು, ಸುಗಂಧದ್ರವ್ಯಗಳು, ನೈವೇದ್ಯ ಮತ್ತು ಅಕ್ಕಿಯನ್ನು ಪೂರೈಸುವುದಕ್ಕಾಗಿ ಗದ್ದೆಯ ಉತ್ಪನ್ನವನ್ನು ಬಳಸಲಾಗುತ್ತಿತು.

ಈ ಎಲ್ಲ ಸ್ಥಳಗಳಲ್ಲದೆ ಇದೇ ಕಾಲದಲ್ಲಿ ರಾಯಚೂರು ಜಿಲ್ಲೆಯ ಕೊಪ್ಪಳವೂ ಕೂಡ ಜೈನ ಮುನಿಗಳ ಒಂದು ಮಹತ್ವದ ಆಶ್ರಯ ಸ್ಥಾನವಾಗಿತ್ತು. ಕ್ರಿ.ಶ. ೭-೮ ಶತಮಾನಗಳ ಲಿಪಿಯಲ್ಲಿದ್ದ ಶಾಸನಗಳು ಸರ್ವನಂದಿ, ಜಟಾಸಿಂಗನಂದಿ ಆಚಾರ್ಯರಂತಹ ಜೈನ ಸನ್ಯಾಸಿಗಳನ್ನು ಹೆಸರಿಸುತ್ತವೆ. ಇವರು ಕೊಪ್ಪಳದ ಬಂಡೆಗಲ್ಲುಗಳ ಬೆಟ್ಟದಲ್ಲಿ ಸಮಾಧಿವಿಧಿಯನ್ನು ಅನುಸರಿಸಿ ನಿರ್ವಾಣವನ್ನು ಹೊಂದಿದವರು. ಇತ್ತೀಚೆಗೆ ಇಲ್ಲಿಯ ಕೋಟೆಯ ಗೋಡೆಗಳಲ್ಲಿ ಕೂಡಿಸಿದ ಕಲ್ಲುಗಳಲ್ಲಿ ಕೆಲವೊಂದು ದಾಖಲೆಗಳು ದೊರೆತಿವೆ. ಇವು ರಾಷ್ಟ್ರಕೂಟರ ಕಾಲದವು ಎಂದು ಹೇಳಬಹುದು. ಅನ್ವೇಷಣೆಯನ್ನು ಇಲ್ಲಿ ಇನ್ನೂ ಮುಂದುವರೆಸಿದರೆ ಚಾಲುಕ್ಯರ ಕಾಲದ ಶಾಸನಗಳು ದೊರೆಯಬಹುದು.

ಬಾದಾಮಿ, ಐಹೊಳೆ, ಹಳ್ಳೂರ (ಬಿಜಾಪುರ ಜಿಲ್ಲೆ) ಮತ್ತು ಹುಮಚಾ (ಶಿವಮೊಗ್ಗಾ ಜಿಲ್ಲೆ) ಇವು ವಾತಾಪಿ ಚಾಲುಕ್ಯ ಕಾಲದಲ್ಲಿಯ ಇನ್ನಿತರ ಕೇಂದ್ರಗಳಲ್ಲಿ ಉಲ್ಲೇಖಾರ್ಹ ವಾದವುಗಳು. ಬಾದಾಮಿಯಲ್ಲಿ ೪ನೆಯದಾದ ಜೈನ ಗುಹೆಯು ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ಅಷ್ಟು ಮಹತ್ವದ್ದಾಗಿ ತೋರುವುದಿಲ್ಲ. ಅದರಲ್ಲಿ ೬-೭ ಶತಮಾನದ ಪಾರ್ಶ್ವ ನಾಥ ಅಥವಾ (ಸುಪಾರ್ಶ್ವನಾಥ) ಹಾಗೂ ಬಾಹುಬಲಿಯವರ ಸೂಕ್ಷ್ಮ ಉಬ್ಬುಕೆತ್ತನೆಯಲ್ಲಿಯ ಪ್ರತಿಮೆಗಳು ಇವೆ. ಇದರಲ್ಲಿಯ ಎರಡನೆಯದ್ದು, ಭಾರತದಲ್ಲಿಯೆ ಅತ್ಯಂತ ಪ್ರಾಚೀನವಾದದ್ದು. ಅಲ್ಲದೆ ಆಗಿನ ಕಾಲದ ಜೈನರಲ್ಲಿ ಬಾಹುಬಲಿ ಬಹಳ ಜನಪ್ರಿಯ ನಾಗಿದ್ದನು ಎಂಬುದಕ್ಕೂ ಅದೊಂದು ನಿದರ್ಶನವಾಗಿದೆ. ಈ ಗವಿಯನ್ನು ಯಾವ ತೀರ್ಥಂಕರನಿಗಾಗಿ ಕೊರೆದರು ಎಂಬುದನ್ನು ಹೇಳುವುದು ಕಠಿಣವಾದರೂ ಅದು ಮಹಾವೀರ ಅಥವಾ ವೃಷಭನಿಗಾಗಿ ಇದ್ದಿರಬಹುದು ಎಂದು ಊಹಿಸಬಹುದಾಗಿದೆ.

ಬಾದಾಮಿಯಲ್ಲಿಯ ಗವಿಗಿಂತಲೂ ಐಹೊಳೆಯಲ್ಲಿಯ ಗವಿ ಹೆಚ್ಚು ವಿಶಾಲವಾಗಿದೆ. ಆದರೆ ಇಲ್ಲಿಯ ಪ್ರತಿಮಾರಚನೆಯ ವಿಧಾನವು ಬಾದಾಮಿ ಗವಿಯಲ್ಲಿಯ ವಿಧಾನವನ್ನೇ ಹೋಲುತ್ತದೆ. ಪಾರ್ಶ್ವನಾಥ ಅಥವಾ ಸುಪಾರ್ಶ್ವನಾಥ ಮತ್ತು ಬಾಹುಬಲಿ ಅವರ ಪ್ರತಿಮೆಗಳ ಉಬ್ಬುಕೆತ್ತನೆಗಳು ಇಲ್ಲಿಯೂ ಇವೆ. ಗವಿಯ ಒಳಗೆ ಮಂದಿರದ ಮೂರು ಬದಿಯ ಗೋಡೆಯಲ್ಲಿ ಮೂರು ಗರ್ಭಗೃಹಗಳಿವೆ. ಮುಖ್ಯ ಗರ್ಭಗುಡಿಯಲ್ಲಿ ಒಂದು ಜೈನ ಪ್ರತಿಮೆ ಇದೆ. ಇದು ಮಹಾವೀರ ಅಥವಾ ವೃಷಭನ ಪ್ರತಿಮೆಯಾಗಬಹುದು. ಒಂದು ಬದಿಯ ಗರ್ಭಗುಡಿಯಲ್ಲಿ ಅಪೂರ್ಣವಾಗಿರುವ, ಆದರೆ ಮಹತ್ಕಲ್ಪನೆಯ ಒಂದು ಉಬ್ಬುಶಿಲ್ಪವಿದೆ. ಇದು ಪಾರ್ಶ್ವನಾಥನ ಸಮವಸರಣವನ್ನು ತೋರಿಸುವ ಶಿಲ್ಪವಾಗಿರಬಹುದು ಎಂದು ಊಹಿಸಲಾಗಿದೆ. ಇಡೀ ದೇಶದಲ್ಲಿ ಈ ಉಬ್ಬುಶಿಲ್ಪ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ.

ಹಳ್ಳೂರದ ಜೈನ ಬಸದಿಯಲ್ಲಿ ಒಂದು ಗರ್ಭಗುಡಿ, ಅದಾದ ನಂತರ ಒಂದು ಅಂತರ್ಭವನ ಹಾಗೂ ಅದರ ನಂತರ ಒಂದು ಸಭಾಸ್ಥಾನಗಳಿವೆ. ಸಭಾಸ್ಥಾನದ ಹೊರಗೋಡೆಯ ಮೇಲೆ ತೀರ್ಥಂಕರರ ಉಬ್ಬುಶಿಲ್ಪಗಳಿವೆ. ಮಂಗಳೇಶನ ಹೂಲಿ ತಾಮ್ರಶಾಸನದಲ್ಲಿ ಹೇಳಿದ ಪರಲೂರ ಸಂಘಕ್ಕೆ ಹಳ್ಳೂರವೆ ಮುಖ್ಯ ಸ್ಥಾನವೆನಿಸಿತ್ತು.

ಶಿವಮೊಗ್ಗಾ ಜಿಲ್ಲೆಯಲ್ಲಿನ ಹುಮಚಾವನ್ನು, ಪ್ರಾಚೀನ ಕಾಲದಲ್ಲಿ ಪಟ್ಟಪಂಬಳ್ಚಾ ಎಂದು ಕರೆಯುತ್ತಿದ್ದರು. ಇದು ಸಾಂತರ ಅರಸರ ರಾಜಧಾನಿಯಾಗಿತ್ತು. ಜಿನದತ್ತರಾಯ ಎಂಬುವನು ೭ನೇ ಶತಮಾನದಲ್ಲಿ ಈ ವಂಶವನ್ನು ಇಲ್ಲಿ ಸ್ಥಾಪಿಸಿದನೆಂದು ಐತಿಹ್ಯಗಳಿವೆ. ಅವನೆ ಇಲ್ಲಿ ಪದ್ಮಾವತಿ ದೇವಾಲಯವನ್ನು ಕಟ್ಟಿಸಿದನು ಮತ್ತು ಜಿನನಿಗೆ ನೈವೇದ್ಯಗಳ ವ್ಯವಸ್ಥೆ ಮಾಡಲು ಕುಂಭಾಸಿ ಎಂಬ ಗ್ರಾಮವನ್ನು ದತ್ತಿ ಹಾಕಿಕೊಟ್ಟನು. ಇಲ್ಲಿಯ ಜೈನ ಮಂದಿರಗಳನ್ನೆಲ್ಲ ಇತ್ತೀಚಿನ ದಿನಗಳಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಆದ್ದರಿಂದ ಅವು ಮೂಲದಲ್ಲಿ ಹೇಗಿದ್ದವು ಎಂಬ ಬಗ್ಗೆ ನಿದರ್ಶನಗಳು ಇಲ್ಲ. ಬೋಗಾರ ಬಸದಿಯನ್ನು ಸುಮಾರು ೮ನೇ ಶತಮಾನದಲ್ಲಿ ಕಟ್ಟಿಸಿರಬಹುದು ಎಂದು ಅದರ ಶೈಲಿಯ ಮೇಲಿಂದ ಊಹಿಸಬಹುದು. ಹಳ್ಳೂರು ಜಿನಾಲಯದಲ್ಲಿ ಇದ್ದಂತೆ ಇಲ್ಲಿಯ ಬಸದಿಗೂ ಒಂದು ಮೇಲಂತಸ್ತಿನ ಗರ್ಭಗುಡಿ ಇದೆ. ಈ ಮಂದಿರಕ್ಕೆ ಸಂಬಂಧಿಸಿದಂತೆ ಆಸನಸ್ಥನಾದ ನೇಮಿನಾಥ, ಯಕ್ಷ-ಯಕ್ಷಿಣಿಯ ಪ್ರತಿಮೆಗಳು ಹಾಗೂ ಪದ್ಮಾವತಿಯ ತುಲಾಭಾರ ಸಂದರ್ಭದ ಒಂದು ಚಿತ್ರಫಲಕವು ಇವೆ. ಇಲ್ಲಿರುವ ಎಲ್ಲ ಪ್ರತಿಮೆಗಳಲ್ಲಿ ಅತ್ಯಂತ ಆಕರ್ಷಕವಾದುದೆಂದರೆ ಕಮಥೋಪಸರ್ಗ ವಿಜಯ ಪಾರ್ಶ್ವನಾಥನ ಪ್ರತಿಮೆ. ಕೌಸಾಂಬಿಯಲ್ಲಿ ಕಮಥನು ಕೊಟ್ಟ ಚಿತ್ರಹಿಂಸೆಯನ್ನು ಪಾರ್ಶ್ವನಾಥನು ಗೆದ್ದು ಜಯಸಿದ ಸಂಗತಿಯನ್ನು ಶಿಲ್ಪ ಪ್ರತಿನಿಧಿಸುತ್ತದೆ. ಪಾರ್ಶ್ವನಾಥನು ಕಾಯೋತ್ಸರ್ಗ ಭಂಗಿಯಲ್ಲಿ ಪದ್ಮಾವತಿ ಮತ್ತು ಧರಣೇಂದ್ರರಿಂದ ರಕ್ಷಿತನಾಗಿ ಅಚಲವಾಗಿ ನಿಂತಾಗ ಹಠಯೋಗಿಯಾದ ಕಮಥ ಎಂಬವನು ದೈತ್ಯರೂಪವನ್ನು ತಾಳಿ ಕಾಡುಮೃಗಗಳು ಹಾಗೂ ಕಾಡು ಜನರನ್ನು ಬಳಸಿ ಪಾರ್ಶ್ವನಾಥನಿಗೆ ಚಿತ್ರಹಿಂಸೆ ಕೊಟ್ಟನು ಎಂದು ಒಂದು ಕಥೆ ಇದೆ. ತನ್ನೆಲ್ಲ ವ್ಯವಹಾರಗಳು ವಿಫಲಗೊಂಡಾಗ ಕಮಥನು ತಾನಾಗಿಯೇ ಪಾರ್ಶ್ವನಾಥ ಜಿನನಿಗೆ ಶರಣು ಹೋಗುತ್ತಾನೆ. ಇದು ೮ನೇ ಶತಮಾನದ ಶಿಲ್ಪವಾಗಿದೆ. ನಂತರ ಅರಸರು ಕೊಡುತ್ತಿದ್ದ ಪ್ರೋಹುಮಚಾವು ಜೈನರ ಮುಖ್ಯ ಕೇಂದ್ರವಾಗಿಯೆ ಮಧ್ಯಯುಗದ ಪ್ರಾರಂಭದವರೆಗೂ ಉಳಿದುಕೊಂಡು ಬಂದಿತ್ತು.

ಗಂಗರು ಆಳಿದ ರಾಜ್ಯದಲ್ಲಿ ಜೈನ ಧರ್ಮಕ್ಕೆ ದೊರೆತ ಪ್ರೊತ್ಸಾಹದ ಬಗೆಗಿನ ಸಂಗತಿಗಳು ತಿಳಿದು ಬಂದಿಲ್ಲ. ಗಂಗ ಶಿವಮಾರ ಕ್ರಿ.ಶ. ಸುಮಾರು ೬೭೯ರಿಂದ ೭೨೫ರವರೆಗೆ ಆಳುವ ಸಮಯದಲ್ಲಿ ಕೊಡಗರು ನಾಡುವಿನಲ್ಲಿಯ ಕೆಳ್ಳಿಪುಸೂರದಲ್ಲಿ ಚೈತ್ಯ ಅಥವ ಜಿನಾಲಯಕ್ಕೆ ಅನೇಕ ಗ್ರಾಮಗಳನ್ನು, ಗದ್ದೆಗಳನ್ನು, ತೋಟಗಳನ್ನು ಹಾಗೂ ಒಂದು ಮನೆಯನ್ನೂ ದಾನ ಕೊಡಲಾಗಿತ್ತು. ಮೇಳಪಾಳು, ಜಾಡಿಗಳು, ಕೊಳಿಗಂ ಕೆರಕಾಲು, ತಿಳ್ವಿಲಕಾಲ ಇವು ಹೀಗೆ ದಾನವಾಗಿ ಕೊಟ್ಟ ಹಳ್ಳಿಗಳಾಗಿದ್ದವು. ಈ ದಾನಗಳನ್ನು ಚಂದ್ರ ಸೇನಾಚಾರ್ಯರು ಸ್ವೀಕರಿಸಿದ್ದರು. ಪಲ್ಲವ ಯುವರಾಜರ(?) ಗುಣ್ಜಿನಾಡುವಿನ ಕಣ್ಣಮ್ಮನ ಮತ್ತು ಮಾರಗೊಟಿರ್ ಇವರು ಆ ದಾನಿಗಳಾಗಿದ್ದರು. ಶಿವಮಾರ ಅರಸನು ಈ ದಾನಗಳನ್ನೇ ಮುಂದುವರೆಸಿದನು. ಕೊಳಿಂಗಕೆರೆಕಾಲು ಈಗಿನ ಕುಳಗಣವೆ ಆಗಿದ್ದರೆ, ಜೈನಧರ್ಮವು ಆ ಸಮಯದಲ್ಲಿ ಮೈಸೂರು ಭಾಗಕ್ಕೂ ಹಬ್ಬಿದ್ದು ಸ್ಪಷ್ಟವಾಗುತ್ತದೆ. ಈ ದಾನಗಳನ್ನು ಉಲ್ಲೇಖಿಸುವ ಶಾಸನಗಳು ಕುಳಗಣದಲ್ಲಿಯೇ ದೊರೆತಿವೆ. ಗಂಗರ ಅನಂತರದ ದಾಖಲೆಗಳು ಇದನ್ನೆ ಪುಷ್ಟೀಕರಿಸುತ್ತವೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿಯ ಶ್ರವಣಬೆಳಗೊಳವು ಜೈನಧರ್ಮದ ಒಂದು ಪ್ರಾಚೀನ ಕ್ಷೇತ್ರವಾಗಿತ್ತು ಎಂಬುದನ್ನು ಈಗಾಗಲೆ ಹೇಳಲಾಗಿದೆ. ಅಲ್ಲಿ ೬-೭ನೇ ಶತಮಾನದ ಶಾಸನಗಳು ದೊರೆಯುತ್ತವೆ. ಇದರಲ್ಲಿ ಅತ್ಯಂತ ಪ್ರಾಚೀನವಾದ ಶಾಸನವನ್ನು ಚಿಕ್ಕಬೆಟ್ಟದ ಮೇಲಿರುವ ಪಾರ್ಶ್ವನಾಥ ಬಸದಿಯ ಹತ್ತಿರದ ಬಂಡೆಯೊಂದರ ಮೇಲೆ ಕೆತ್ತಲಾಗಿದೆ. ಭದ್ರಬಾಹು ಮತ್ತು ಅವನ ಶಿಷ್ಯರು ದಕ್ಷಿಣಕ್ಕೆ ವಲಸೆ ಬಂದ ಸಂಗತಿಯನ್ನು ಹಾಗೂ ಪ್ರಭಾಚಂದ್ರ ಆಚಾರ್ಯರು ಕಟವಪ್ರದ ಮೇಲೆ ಅಂದರೆ ಚಿಕ್ಕಬೆಟ್ಟದ ಮೇಲೆ ಸಮಾಧಿಸ್ಥರಾದರು ಎಂಬುದನ್ನು ಆ ಶಾಸನದಲ್ಲಿ ಬರೆದಿದೆ. ಚಂದ್ರಗುಪ್ತ ಮೌರ್ಯನು ಜೈನಮುನಿಯಾದ ಬಳಿಕ ಅವನು ತನ್ನ ಹೆಸರನ್ನು ಪ್ರಭಾಚಂದ್ರ ಆಚಾರ್ಯ ಎಂದು ನಾಮಧಾರಣ ಮಾಡಿಕೊಂಡಿರುವ ಸಾಧ್ಯತೆ ಇದೆ. ಅವನ ನಂತರ ೭೦೦ ಋಷಿಗಳೂ ಕೂಡ ಇದೆ ಬಗೆಯಾಗಿ ಸಮಾಧಿ ಹೊಂದಿದರೆಂದು ಹೇಳಿದೆ. ಅದೇ ಬೆಟ್ಟದ ಮೇಲೆ ೭-೮ನೇ ಶತಮಾನಗಳ ಸುಮಾರು ೫೨ ಶಾಸನಗಳಾದರೂ ದೊರೆತಿವೆ. ಸಲ್ಲೇಖನ, ಸನ್ಯಾಸನ ಮುಂತಾದ ವ್ರತಗಳನ್ನು ಹಿಡಿದು ಜೈನ ಸನ್ಯಾಸಿಗಳು ಸಾವನ್ನಪ್ಪಿದರು ಎಂದು ಶಾಸನಗಳು ತಿಳಿಸುತ್ತವೆ. ಕಟವಪ್ರವ ಸಮಾಧಿಗೆ ಅನುಕೂಲವಾಗಿದ್ದ ಬೆಟ್ಟವಾಗಿತ್ತು ಎಂದು ತೋರುತ್ತದೆ. ಕರ್ನಾಟಕದ ಒಳಗಿನಿಂದಲೂ ಹೊರಗಿನಿಂದಲೂ ಬಂದ ಬೇರೆ ಬೇರೆ ಭಾಗಗಳ ಜೈನ ಸನ್ಯಾಸಿಗಳು ಇದು ಪವಿತ್ರವೆಂದು ಈ ಬೆಟ್ಟದಿಂದ ಆಕರ್ಷಿತರಾಗಿ ಇದರ ಮೇಲೆ ಸಮಾಧಿ ಮರಣವನ್ನು ಹೊಂದಿದರು. ಆದರೆ ವಾಸ್ತು ಚಟುವಟಿಕೆಗಳು ಮಾತ್ರ ಇಲ್ಲಿ ೯ನೇ ಶತಮಾನದಿಂದ ಪ್ರಾರಂಭ ವಾದವು.

ಜೈನರ ಮೂಲಸಂಘದ ಮುನಿಗಳ ಕರ್ನಾಟಕದಲ್ಲಿಯ ಪ್ರಾಬಲ್ಯವೂ ವಾತಾಪಿ ಚಾಲುಕ್ಯರ ಕಾಲದ ಜೈನಧರ್ಮದ ಒಂದು ಮಹತ್ವದ ವೈಶಿಷ್ಟ್ಯವಾಗಿದೆ. ಮೊದಲಿನ ಶ್ವೇತಪಟರ ಮತ್ತು ಕೂರ್ಚಕರ ಹೆಸರುಗಳು ಕೇಳದಂತಾಗಿದ್ದವು. ಯಾಪನೀಯರು ಚಾಲುಕ್ಯ ರಾಜ್ಯದಲ್ಲಿ ಇನ್ನೂ ಬೇರೂರಿರಲಿಲ್ಲ. ಮೂಲಸಂಘವು ಸನಾತನ ದಿಗಂಬರ ಮುನಿಗಳ ಪಂಥದ್ದು ಎಂಬುದು ಸ್ಪಷ್ಟವಿದೆ. ಆಗಾಗಲೆ ಅದು ಶಾಖೆಗಳಲ್ಲಿ ಕವಲು ಒಡೆಯಹತ್ತಿತ್ತು. ಅಂಥ ಶಾಖೆಗಳಲ್ಲಿ ದೇವಗಣ ಶಾಖೆಯು ಲಕ್ಷ್ಮೇಶ್ವರದಲ್ಲಿ ಪ್ರಬಲವಾಗಿತ್ತು. ಸೂಕ್ತಗಣವು ಕೂಡ ಪ್ರಚಾರ ದಲ್ಲಿತ್ತು. ಪರಲೂರು ಸಂಘವೂ ಮೂಲಸಂಘದ ಒಂದು ಶಾಖೆಯಾಗಿದ್ದಿರುವುದನ್ನೂ ಅಲ್ಲಗಳೆಯುವಂತಿಲ್ಲ.

ಸಮಾಜದಿಂದ ದೂರವಾಗಿದ್ದು ಏಕಾಂತ ಜೀವನ ನಡೆಸುವವರಿಗಿಂತ ಸಾಮಾಜಿಕ ಮಧ್ಯದಲ್ಲಿಯೆ ಕಾರ್ಯ ಮಾಡುವ ಒಂದು ಹೊಸ ಪ್ರವೃತ್ತಿ ಸನ್ಯಾಸ ಪಂಥೀಯರಲ್ಲಿ ಬೆಳೆಯತೊಡಗಿತ್ತು ಎಂಬುದು ಈ ಶಾಸನಗಳನ್ನು ನೋಡಿದರೆ ಕಂಡುಬರುತ್ತದೆ. ಅವರು ಆಳುವ ಅರಸರ ಪೋಷಣೆಯನ್ನು ಬಯಸುತ್ತಿದ್ದರು. ಅವರ ಪ್ರಮುಖ ಕಾರ್ಯವು ಹೆಚ್ಚು ಹೆಚ್ಚು ಜನರನ್ನು ತಮ್ಮ ಮತಕ್ಕೆ ತಿರುಗಿಸುವುದಾಗಿತ್ತು. ಆದ್ದರಿಂದ ಜಿನಾಲಯಗಳನ್ನು ರಚಿಸಲಾಯಿತು. ಜನರಿಗೆ ಆಕರ್ಷಕವಾದ ದ್ರವ್ಯಪೂಜೆಯ ವಿಧಾನಕ್ಕೆ ಪ್ರಾಶಸ್ತ್ಯ ಕೊಡಲಾಯಿತು. ಐಹೊಳೆಯ ಕೂಷ್ಮಾಂಡಿನಿ ಯಕ್ಷಿಣಿಯ ವಿಗ್ರಹವನ್ನು ಗಮನಿಸಿದರೆ ಮಂತ್ರ-ತಂತ್ರ ವಿಧಾನಗಳೂ ಜೈನಧರ್ಮವನ್ನು ಪ್ರವೇಶಿಸಿದ್ದವು ಎಂದು ಅನಿಸುತ್ತದೆ. ತೀರ್ಥಂಕರರಲ್ಲಿ ಅದಿನಾಥ, ಶಾಂತಿನಾಥ, ನೇಮಿನಾಥ, ಪಾರ್ಶ್ವನಾಥ ಇವರು ಜನರ ವಿಶೇಷ ಭಕ್ತಿಗೌರವಗಳಿಗೆ ಪಾತ್ರರಾಗಿದ್ದರು. ಗೋಮಟನೆಂದು ಪರಿಚಿತನಾದ ಬಾಹುಬಲಿಯ ಜನಪ್ರಿಯತೆಯೂ ಬೆಳೆಯ ತೊಡಗಿತ್ತು.

ಶೈವಧರ್ಮ

ಚಾಲುಕ್ಯರ ಕಾಲದಿಂದ ಶೈವಧರ್ಮವು ಉಚ್ಛ್ರಾಯ ಸ್ಥಿತಿಗೆ ಏರುತ್ತಾ ಹೋಯಿತು. ಇವರ ಆಳ್ವಿಕೆಯ ಶುರುವಿನಲ್ಲಿಯೆ ಈ ಮತವು ಪ್ರಧಾನವಾಗಿತ್ತು. ಬಹುಮಟ್ಟಿಗೆ ಬಾದಾಮಿ ಯಲ್ಲಿಯ ಶೈವ ಗುಹಾಲಯದ ನಿರ್ಮಾಣಕ್ಕೆ ಒಂದನೇ ಪುಲಕೇಶಿಯೆ ಕಾರಣನಿರಬಹುದು. ಗರ್ಭಗುಡಿಯಲ್ಲಿ ಪೀಠಸ್ಥ ಏಕ ಶಿವಲಿಂಗವಿದೆ. ಇದರಲ್ಲಿ ದ್ವಿಭುಜ ಗಣೇಶ, ದುರ್ಗಾ ಮಹಿಷಮರ್ದಿನಿ, ಕಾರ್ತಿಕೇಯ, ಭೃಂಗಿ ಸಹಿತ ಉಮಾ-ಮಹೇಶ್ವರ, ಅರ್ಧನಾರೀಶ್ವರ, ಇವೆಲ್ಲವುಗಳಿಗಿಂತ ಮಿಗಿಲಾಗಿ ಹದಿನೆಂಟು ತೋಳಿನ ನಟರಾಜ ಮೊದಲಾದ ಮನಮೋಹಕ ಬೃಹತ್ ಶಿಲ್ಪಗಳಿವೆ. ಜಂತಿಯಲ್ಲಿ ಪಾರ್ವತಿ-ಕಲ್ಯಾಣ ಮೊದಲಾದ ಕಥಾನಕ ಶಿಲ್ಪಗಳಿವೆ. ಸಮಕಾಲೀನ ಜನಪ್ರಿಯ ಶೈವ ಕಥೆಗಳನ್ನು ಇಲ್ಲಿ ಪ್ರತಿಬಿಂಬಿಸಲಾಗಿದೆ.

ಚಾಲುಕ್ಯ ರಾಜಧಾನಿ ಬಾದಾಮಿ ಹತ್ತಿರದ ಮಹಾಕೂಟವು ಚಾಲುಕ್ಯ ಪೂರ್ವದ ಒಂದು ಪ್ರಧಾನ ಶೈವಕೇಂದ್ರ. ಚಾಲುಕ್ಯರ ಕಾಲದಲ್ಲಿ ಇದಕ್ಕೆ ವಿಶೇಷ ಉತ್ತೇಜನ ಸಿಕ್ಕಿತು. ಇಲ್ಲಿಯ ಪುಷ್ಕರಣಿಯಲ್ಲಿ ಸರ್ವತೋಭದ್ರ ಮಂಟಪದಲ್ಲಿ ಚತುರ್ಮುಖ ಲಿಂಗವಿದೆ. ಇಲ್ಲಿಯ ದೇವಾಲಯಗಳ ಸಂಕೀರ್ಣದ ಕೇಂದ್ರ ಬಿಂದು. ಇದರ ಉತ್ತರ ಬದಿಯಲ್ಲಿರುವ ಮಹಾಕೂಟೇಶ್ವರ (ಮಕುಟೇಶ್ವರ) ಮತ್ತು ಪುಷ್ಕರಣಿಯು ಬಹುಶಃ ಒಂದನೇ ಪುಲಕೇಶಿಯ ಕಾಲದ್ದು. ಈ ಅರಸನು ಮತ್ತು ಇವನ ಮಗ ಒಂದನೇ ಕೀರ್ತಿವರ್ಮರು ಈ ದೇವಾಲಯಕ್ಕೆ ದತ್ತಿಗಳನ್ನು ಬಿಟ್ಟರು. ಮಂಗಳೇಶನು ಯುದ್ಧದಲ್ಲಿ ಕಲತ್ಸೂರಿ ರಾಜನಿಂದ ವಶಪಡಿಸಿಕೊಂಡ ಐಶ್ವರ್ಯವನ್ನು ಶ್ರೀಯಂಬಾಟಕ ವ್ರಿಹೀಮುಖ, ಕಿಸುವುಳಲ್(ಪಟ್ಟದಕಲ್), ಕೆಂದೂರ ಮಾನ್ಯ (ಕೆಂದೂರು), ನಂದಿಗ್ರಾಮ(ನಂದಿಕೇಶ್ವರ), ಆರ್ಯಪುರ (=ಐಹೊಳೆ) ಮೊದಲಾದ ಹತ್ತುಗ್ರಾಮಗಳೊಡನೆ ಈ ದೇವಾಲಯಕ್ಕೆ ತನ್ನ ದೊಡ್ಡಮ್ಮ ದುರ್ಲಭದೇವಿಯ ಸಮ್ಮುಖದಲ್ಲಿ ದಾನ ಮಾಡಿದನು. ಸ್ವತಃ ವಿಷ್ಣು ಭಕ್ತನಾಗಿದ್ದರೂ ಇಲ್ಲಿ ತನ್ನ ಧರ್ಮಸ್ತಂಭ ವನ್ನು ನೆಡಿಸಿದುದನ್ನು ನೋಡಿದರೆ ಚಾಲುಕ್ಯ ಮನೆತನದವರಲ್ಲಿದ್ದ ಈ ಕ್ಷೇತ್ರದ ಮೇಲಿನ ವಿಶಿಷ್ಟ ಭಕ್ತಿಯನ್ನು ಸೂಚಿಸುತ್ತದೆ. ತರುವಾಯ ಚಾಲುಕ್ಯ ವಿಜಯಾದಿತ್ಯನ ಪ್ರೇಯಸಿ ವಿನಾಪೋಟಿಯ ಹಲವಾರು ಮಹಾದಾನಗಳೊಡನೆ ಹಿರಣ್ಯಗರ್ಭ ಕರ್ಮವನ್ನು ಮಾಡಿಸಿ, ದೇವರಿಗೆ ರತ್ನಖಚಿತ ಪೀಠ, ಬೆಳ್ಳಿಕೊಡೆ ಮತ್ತು ಮಂಗಲುಳ್ಳೆ (ಮಂಗಳ ಗುಡ್ಡ) ಗ್ರಾಮದಲ್ಲಿಯ ಭೂಮಿಯನ್ನು ದೇವರಿಗೆ ದಾನ ಕೊಟ್ಟಳು.

ಮುನವಳ್ಳಿ ಹತ್ತಿರ ಯಕ್ಕೇರಿಯಲ್ಲಿ ಮಹಾದೇವ ದೇವಾಲಯವು ಒಂದನೇ ಪುಲಕೇಶಿಯ ಕಾಲದಲ್ಲಿತ್ತು. ಇದಕ್ಕೆ ಹರಸೇನನು ತನ್ನ ತಾಯಿ-ತಂದೆಗೆ ಪುಣ್ಯವಾಗಲೆಂದು ಸುಮಾರು ಕ್ರಿ.ಶ.೫೫೦ರಲ್ಲಿ ಬೇನೀರ, ಧೂತಿಪುರ, ಅಗರಿಯಪುರ, ಕೃಷ್ಣಪುರ ಗ್ರಾಮಗಳಿಂದ ಭೂಮಿಯನ್ನು ಈ ದೇವಾಲಯಕ್ಕೆ ದಾನ ಮಾಡಿದನು. ಇದನ್ನು ತಿಳಿಸುವ ಶಾಸನವನ್ನು ಈಶಾನನು ರಚಿಸಿದನು. ಈ ಹೆಸರು ಗಮನಾರ್ಹ.

ಐಹೊಳೆಯ ರಾವಳಫಡಿ ಶೈವ ಗುಹಾದೇವಾಲಯವು ಬಹುಶಃ ಒಂದನೇ ಪುಲಕೇಶಿಯ ಅವಧಿಯದು. ಇದರಲ್ಲಿಯ ಸಪ್ತಮಾತೃಕೆಯರು, ದ್ವಿಭುಜ ಗಣೇಶ, ಮಹಾಸೇನ, ಪಾರ್ವತಿಯರೊಡನೆ ಭವ್ಯ ನಟರಾಜ, ಹರಿಹರ, ಗಂಗಾಧರ, ಅರ್ಧನಾರೀಶ್ವರ, ವರಾಹ, ದುರ್ಗಾ ಮಹಿಷಮರ್ದಿನಿ ಭಿತ್ತಿ ಶಿಲ್ಪಗಳು ಅತಿ ಸೊಗಸಾಗಿವೆ. ಗರ್ಭಗೃಹದಲ್ಲಿ ಪೀಠಸ್ಥ ಏಕಶಿಲೆ ಲಿಂಗವಿದೆ. ಇದರಲ್ಲಿ ಶ್ರೀವಿಕ್ರ (ಶ್ರೀ ವಿಕ್ರಮನ್) ಎಂಬ ಒಂದು ಸಾಲಿನ ಶಾಸನವಿದೆ. ಇದು ಒಂದನೇ ಪುಲಕೇಶಿಯ ವಿಶೇಷ ಹೆಸರು. ಆದ್ದರಿಂದ ಈ ಶೈವ ಗುಹಾದೇವಾಲಯವನ್ನು ಈ ಅರಸನ ಇಚ್ಛೆಯಂತೆ ನಿರ್ಮಿಸಿದ್ದಿರಬೇಕು. ಬಹುಶಃ ಈ ಅರಸನು ಶೈವ ಧರ್ಮನಿರತ ನಾಗಿರಬೇಕು.

ಇವನ ಮಕ್ಕಳು ಒಂದನೇ ಕೀರ್ತಿವರ್ಮ ಮತ್ತು ಮಂಗಳೇಶರು ಹಾಗೂ ಮೊಮ್ಮಗ ಇಮ್ಮಡಿ ಪುಲಕೇಶಿಯು ವೈಷ್ಣವಧರ್ಮ ಪ್ರಿಯರು. ಆದರೆ ಪ್ರತಿಯೊಬ್ಬರಲ್ಲಿಯೂ ಧರ್ಮಸಹಿಷ್ಣುತೆಯಿತ್ತು. ಮಂಗಳೇಶನು ಮಹಾಕೂಟೇಶ್ವರ ದೇವಾಲಯಕ್ಕೆ ಧಾರಾಳವಾಗಿ ದಾನ ಮಾಡಿದನು. ಇಮ್ಮಡಿ ಪುಲಕೇಶಿಯ ಸೋದರಮಾವ ಸೇಂದ್ರಕ ಶ್ರೀವಲ್ಲಭ ಸೇನಾನಂದ ರಾಜನು ಪರಮಮಾಹೇಶ್ವರನು. ಇಮ್ಮಡಿ ಪುಲಕೇಶಿಯು ಆಲಂಪುರ ಹತ್ತಿರದ ಸಂಗಮೇಶ್ವರ (ಕೂಡಲ ಸಂಗಮೇಶ್ವರ)ನ ಸನ್ನಿಧಿಯಲ್ಲಿ ಮಾಬುಗಣಸ್ವಾಮಿ ಬ್ರಾಹ್ಮಣನಿಗೆ ಚಾಲುಕ್ಯ ವಿಷಯದಲ್ಲಿಯ ತಿಮ್ಮೆಯನೂರು ಗ್ರಾಮವನ್ನು ದಾನ ಮಾಡಿದನು. ಕದಮರ ಕಲವದಲ್ಲಿಯ ಶಿವನಂದೀಶ್ವರ ದೇವಾಲಯವನ್ನು ಬಹುಶಃ ಈ ಅರಸನೇ ಕಟ್ಟಿಸಿದನು. ಈ ರೀತಿ ತರುವಾಯದ ಅರಸರುಗಳೂ ತಮ್ಮ ವೈಯಕ್ತಿಕ ಧರ್ಮ ಯಾವುದೇ ಆಗಿದ್ದರೂ ಇತರ ಧರ್ಮಪಂಥಗಳನ್ನು, ಅವುಗಳ ಅನುಯಾಯಿಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದರು.

ಒಂದನೇ ವಿಕ್ರಮಾದಿತ್ಯನ ಜೀವನದಲ್ಲಿ ಒಂದು ಅಪರೂಪದ ಮಹತ್ವದ ಬೆಳವಣಿಗೆ ಯುಂಟಾಯಿತು. ಇವನು ಕ್ರಿ.ಶ.೬೫೮-೫೯ರಲ್ಲಿ ಸುದರ್ಶನಾಚಾರ್ಯರಿಂದ ‘ಶಿವಮಂಡಲ ದೀಕ್ಷೆ’ಯನ್ನು ಪಡೆದನು. ಆಚಾರ್ಯರಿಗೆ ವಂಗೂರವಾಡಿಯ ವಿಷಯದಲ್ಲಿಯ ಇಪರುಂಕಲ್ ಗ್ರಾಮವನ್ನು ಗುರುದಕ್ಷಿಣೆಯಾಗಿ ಕೊಟ್ಟನು. ಆಚಾರ್ಯರು ದಾನ ಬಂದ ಗ್ರಾಮದ ಭೂಮಿಯನ್ನು ೨೭ ಬ್ರಾಹ್ಮಣರಿಗೆ ಹಂಚಿದರು. ಈ ಬ್ರಾಹ್ಮಣರ ಹೆಸರುಗಳು ಈ ಸಂದರ್ಭದಲ್ಲಿ ಗಮನಾರ್ಹ: ರುದ್ರಶಿವಾಚಾರ್ಯ, ಗಾಯತ್ರೀಶಿವ, ಪರಮಶಿವ ಇತ್ಯಾದಿ. ಈ ಹೆಸರುಗಳೆಲ್ಲವೂ ಶಿವ ಎಂಬ ಪದದಿಂದ ಕೊನೆಗೊಳ್ಳುತ್ತವೆ. ಶೈವ ಸಿದ್ಧಾಂತ ಪಂಥದ ಆಚಾರ್ಯರ ಹೆಸರುಗಳು ಶಿವ ಅಥವಾ ಶಂಭುವಿನಿಂದ ಕೊನೆಗೊಳ್ಳುತ್ತವೆ. ಈ ಶೈವಾಚಾರ್ಯರು ಕರ್ನಾಟಕ ಆಂಧ್ರ ಗಡಿಭಾಗದಲ್ಲಿ ಚಾಲುಕ್ಯರ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದರು. ಈ ಪಂಥದ ಆಚಾರ್ಯರೆಲ್ಲರೂ ಶುದ್ಧ ಶೈವರೆಂಬ ನಂಬಿಕೆ ಬಲವಾಗಿತ್ತು. ಇವರೆಲ್ಲರೂ ಆನುವಂಶಿಕವಾಗಿ ಅಗಸ್ತ್ಯ, ಭಾರದ್ವಾಜ, ಗೌತಮ(ನಂದಿ), ಕೌಶಿಕ, ಕಾಶ್ಯಪ, ಅತ್ರಿ ಮಹರ್ಷಿಗಳಿಂದ ಬಂದವರೆಂದು ತಿಳಿಯಲಾಗಿದೆ. ಈ ಋಷಿಗಳು ನೇರವಾಗಿ ಪರಶಿವನ ಐದು ಮುಖಗಳಿಂದ ದೀಕ್ಷೆಯನ್ನು ಪಡೆದವರು. ಆದ್ದರಿಂದ ಅವರು ಆದಿಶೈವರು ಅಥವಾ ಶೈವ ದ್ವಿಜರು. ಅವರು ವೇದಗಳಲ್ಲಿ, ಆಗಮ ಸಂಕುಲದಲ್ಲಿ ಮತ್ತು ತತ್ಸಂಬಂಧ ಶಾಸ್ತ್ರಗಳಲ್ಲಿ ಪಾರಂಗತರು, ಆದ್ದರಿಂದ ದೇವಾಲಯ ಶುದ್ದೀಕರಣ, ಮೂರ್ತಿ ಪ್ರತಿಷ್ಠಾಪನೆ, ಅರ್ಚನೆ ಮೊದಲಾದ ದೇವಕಾರ್ಯಗಳನ್ನು ಮನೆಯಲ್ಲಾಗಲಿ ಅಥವಾ ಸಾರ್ವಜನಿಕ ದೇವಾಲಯ ಗಳಲ್ಲಾಗಲಿ ಯಜಮಾನರಾಗಿ ನಡೆಸುವ ಅಧಿಕಾರವುಳ್ಳವರು. ಅವರು ದೇವಾಲಯ ಮತ್ತು ಮಠಗಳಲ್ಲಿ ಅರ್ಚನೆ ಮಾಡಬೇಕಾಗುವುದು. ಈ ಶೈವ ಸಿದ್ಧಾಂತ ಪ್ರಕಾರ ಮೋಕ್ಷವನ್ನು ಜ್ಞಾನಮಾರ್ಗದಿಂದ ಪಡೆಯಲಾಗುವುದಿಲ್ಲ. ದೀಕ್ಷೆಯನ್ನು ಪಡೆಯುವುದರ ಮೂಲಕ ದೇವರ ಅನುಗ್ರಹ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಶೈವನಿಗೂ ದೀಕ್ಷೆಯು ಪರಮ ಮಹತ್ವದ್ದು. ಇದನ್ನು ಅನುಸರಿಸುವ ಮಾರ್ಗದ ಶುದ್ದೀಕರಣವೇ (ಆದ್ಯ ಸೈ ಶುದ್ದಿ) ಇದರ ಪ್ರಥಮ ಉದ್ದೇಶ. ಇದು ಕ್ರಮೇಣ ಲೌಕಿಕ ಸ್ಥಿತಿಯಿಂದ ಕಳಚುವಂತೆ ಮಾಡುತ್ತದೆ.

ಯಾವ ಪ್ರದೇಶದಿಂದ ಈ ಶೈವ ಸಿದ್ಧಾಂತವು ಕರ್ನಾಟಕ-ಆಂಧ್ರಗಡಿ ಪ್ರದೇಶದಲ್ಲಿ ಪ್ರಸರಣವಾಯಿತೆಂಬುದು ನಿಶ್ಚಯವಾಗಿ ಹೇಳಲಾಗುವುದಿಲ್ಲ. ಆದರೆ ಪಲ್ಲವ ರಾಜ್ಯದಲ್ಲಿಯೂ ಮಧ್ಯ ಭಾರತದಲ್ಲಿಯೂ ಈ ಪಂಥದ ವಿಚಾರಗಳು ಚೆನ್ನಾಗಿಯೆ ಪ್ರಚಲಿತವಾಗಿದ್ದವು. ಈ ದೃಷ್ಟಿಕೋನದಿಂದ ಒಂದನೇ ವಿಕ್ರಮಾದಿತ್ಯನ ಕಾಲದಿಂದ ಈ ಪ್ರದೇಶದಲ್ಲಿ ಉತ್ತರದ ರೇಖಾನಗರ ದೇವಾಲಯ ಮಾದರಿಯನ್ನು ಕರ್ನಾಟಕಾಂಧ್ರ ಗಡಿ ಭಾಗದಲ್ಲಿ ಆಲಂಪುರ, ಐಹೊಳೆ, ಪಟ್ಟದಕಲ್ಲು ಶೈವ ದೇವಾಲಯ ನಿರ್ಮಿತಿಗಳಲ್ಲಿ, ಅನುಸರಿಸಿದ್ದಲ್ಲಿ ಏನಾದರೂ ಸೂಚನೆ ಇದ್ದರೆ ಬಹುಶಃ ಈ ಶೈವಸಿದ್ಧಾಂತವು ಉತ್ತರಭಾರತದಿಂದ ಬಂದಿತೆಂದು ತೋರುತ್ತದೆ. ಈ ಸಂದರ್ಭದಲ್ಲಿ ಬನ್ನಿಕೊಪ್ಪ ಮತ್ತು ಪಟ್ಟದಕಲ್ಲಿನ ಎರಡು ಶಾಸನಗಳನ್ನು ಗಮನಿಸ ಬೇಕಾಗುವುದು.

ಮೊದಲನೆಯದರಲ್ಲಿ ಉತ್ತರಾಪಥದಿಂದ ಬಂದ ಒಬ್ಬ ವ್ಯಕ್ತಿಯು ಅರ್ಜುನೀಶ್ವರ ದೇವರಿಗೆ ದೇವಾಲಯವನ್ನು ಕಟ್ಟಿಸಿ ನಂದೀಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದನು ಎಂದು ಹೇಳಿದೆ. ಎರಡನೆಯದು ಪಟ್ಟದಕಲ್ಲಿನ ವಿಜಯೇಶ್ವರ (ಸಂಗಮೇಶ್ವರ) ಮತ್ತು ಲೋಕೇಶ್ವರ (ವಿರೂಪಾಕ್ಷ) ದೇವಾಲಯಗಳ ನಡುವಿನ ಭಾಗದಲ್ಲಿ ಇದೆ. ಗಂಗಾನದಿ ದಡದ ಮೇಲಿನ ಮೃಗಫಣಿಕಾಹಾರದಿಂದ ಬಂದ ಜ್ಞಾನ ಶಿವಾಚಾರ್ಯನು ಇಲ್ಲಿಗೆ ಬಂದು ಈ ಸ್ತಂಭವನ್ನು ಸ್ಥಾಪಿಸಿದನೆಂದಿದೆ. ಇದು ಆದದ್ದು ಚಾಲುಕ್ಯ ಅರಸು ಶಿವಾಚಾರ್ಯನು ಇಲ್ಲಿಗೆ ಬಂದು ಈ ಸ್ತಂಭವನ್ನು ಸ್ಥಾಪಿಸಿದನೆಂದಿದೆ. ಇದು ಆದದ್ದು ಚಾಲುಕ್ಯ ಅರಸು ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ. ಈ ಆಚಾರ್ಯನ ಹೆಸರು ಶಿವನಂದ ಕೊನೆಗೊಳ್ಳುವುದು ಗಮನಾರ್ಹ. ಇವು ಪ್ರಭಾವಿಶಾಲಿಗಳಾದ ಈ ಶೈವರು, ಶೈವಾಚಾರ್ಯರು ಉತ್ತರದಿಂದ ಬಂದವರೆಂದು ಸೂಚಿಸುತ್ತವೆ.

ಒಂದನೇ ವಿಕ್ರಮಾದಿತ್ಯನ ಇನ್ನೊಬ್ಬ ಗುರು ಮೇಘಾಚಾರ್ಯ. ಇವರಿಗೆ ಕ್ರಿ.ಶ. ೬೬೦ರಲ್ಲೂ ಎಳಸೆಟ್ಟಿ ಗ್ರಾಮವನ್ನು ಅರಸನು ದಾನ ಮಾಡಿದನು. ಶಿವನಂದೀಶ್ವರ ದೇವಾಲಯದ ಬ್ರಾಹ್ಮಣರಿಗೂ ಕ್ರಿ.ಶ. ೬೬೨ರಲ್ಲಿ ಭೂಮಿ ದಾನವನ್ನು ಮಾಡಿದನು. ಚಾಲುಕ್ಯ ವಿನಯಾದಿತ್ಯನ ಕಾಲದಲ್ಲಿ ಪಂಪಾಕ್ಷೇತ್ರವು ಪ್ರಸಿದ್ದಿಯಾಗಿತ್ತು. ಆ ಭಾಗದ ತುಂಗಭದ್ರಾ ನದಿಯನ್ನು ಪಂಪಾ ಎಂದೇ ಈ ಅರಸನ ತೊಗರಚೇಡು ಶಾಸನದಲ್ಲಿದೆ. ಕದಮರ ಕಳವ(ಕರ್ನೂಲ್ ಜಿಲ್ಲೆ)ದ ರಾಜನು ರಾಮೇಶ್ವರ ತೀರ್ಥದಲ್ಲಿ (ಕರ್ನೂಲ್ ಜಿಲ್ಲೆ) ಬೀಡು ಬಿಟ್ಟಾಗ ಪಂಚಲಿಂಗಾಲಯ ದಲ್ಲಿಯ ಪಂಚಲಿಂಗ ದೇವರಿಗೂ ಭೂಮಿ ದಾನ ಮಾಡಿದನು.

ಆಲಂಪುರದಲ್ಲಿಯ ಸ್ವರ್ಗಬ್ರಹ್ಮದೇವಾಲಯವನ್ನು ವಿನಯಾದಿತ್ಯನ ಮಗ ಲೋಕಾದಿತ್ಯನು ಅರಸನ ಅಥವಾ ವಿಜಯಾದಿತ್ಯನ ಕಾಲದಲ್ಲಿ ತನ್ನ ಾಯಿಯ ಗೌರವಾರ್ಥವಾಗಿ ಕಟ್ಟಿಸಿದನು. ಇವನ ರಾಣಿಯು ಈ ದೇವಾಲಯಕ್ಕೆ ಕಲ್‌ಕೊಲ, ಕುರಿಂಬಳ ಮತ್ತು ಕಲಲೆ ಗ್ರಾಮಗಳನ್ನು ದಾನ ಮಾಡಿದಳು. ವಿನಯಾದಿತ್ಯನ ಕಾಲದಲ್ಲಿಯೆ ಮಹಾನಂದಿ(ಕರ್ನೂಲ್ ಜಿಲ್ಲೆ)ಯ ಮಹಾನಂದೀಶ್ವರ ದೇವಾಲಯವನ್ನು ಕಟ್ಟಲಾಯಿತು.

ಶೈವ ದೇವಾಲಯದ ನಿರ್ಮಾಣ ಚಟುವಟಿಕೆಯಲ್ಲಿ ವಿಜಯಾದಿತ್ಯನ ಕಾಲ ಎದ್ದು ಕಾಣುವಂಥಾದ್ದು.  ಕ್ರಿ.ಶ. ೬೯೮-೯೯ರಲ್ಲಿ ಇವನ ತಾಯಿಯು ಬಾದಾಮಿಯಲ್ಲಿ ಬ್ರಹ್ಮ-ಶಿವ-ವಿಷ್ಣು ದೇವಾಲಯ (ಜಂಬುಲಿಂಗ) ಕಟ್ಟಿಸಿದ್ದು ಸರಿಯಷ್ಟೆ. ಇದಕ್ಕೆ ಅಂಗಡಿಗಳಿಂದ ಎಣ್ಣೆ, ಸಕ್ಕರೆ, ಅರಶಿನ ಮೊದಲಾದ ಪದಾರ್ಥಗಳ ಮೇಲೆ ಸಂಗ್ರಹಿಸಿದ ಸುಂಕವನ್ನು ದೇವಾಲಯಕ್ಕೆ ಬಿಟ್ಟು ಕೊಡಲಾಯಿತು. ಆಲಂಪುರದಲ್ಲಿ ಭಗವತ್ ಈಶಾನಾಚಾರ್ಯ ಸ್ವಾಮಿನ್ ನವಬ್ರಹ್ಮ ದೇವಾಲಯ ಸಮೂಹಕ್ಕೆ ಸುತ್ತಲೂ ‘ನಿರವದ್ಯ ಪ್ರಕಾರ’ವನ್ನು ಸುಮಾರು ಕ್ರಿ.ಶ.೭೧೪-೧೫ರಲ್ಲಿ ಆ ಎಲ್ಲ ದೇವಾಲಯಗಳನ್ನು ಕಟ್ಟಲಾಗಿತ್ತೆಂದು ಅರ್ಥವಾಗುತ್ತದೆ. ಸ್ವತಃ ವಿಜಯಾದಿತ್ಯನೆ ಪಟ್ಟದಕಲ್ಲಿನಲ್ಲಿ ವಿಜಯೇಶ್ವರ (ಸಂಗಮೇಶ್ವರ) ದೇವಾಲಯವನ್ನು ಕಟ್ಟಿಸಿದನು. ಇದೊಂದು ಪೂರ್ಣ ವಿಕಸಿತ ವಿಮಾನ ಮಾದರಿ ದೇವಾಲಯ. ಇದರ ಉತ್ತರ ಬದಿಗಿರುವ ಗಳಗನಾಥ ದೇವಾಲಯವು ಇದೇ ಕಾಲದ್ದೆ.

ಇಮ್ಮಡಿ ವಿಕ್ರಮಾದಿತ್ಯನ ಕಾಲವು ಶೈವ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮ ಘಟ್ಟ. ಈಗ ಸುಪ್ರಸಿದ್ಧವಾಗಿರುವ ಲೋಕೇಶ್ವರ (ವಿರೂಪಾಕ್ಷ) ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯಗಳನ್ನು ಇವನ ಪಟ್ಟಮಹಿಷಿಯರಾದ ಹೈಹಯ ವಂಶದ ಲೋಕಮಹಾದೇವಿ ಮತ್ತು ತ್ರೈಲೋಕಮಹಾದೇವಿಯವರು, ತಮ್ಮ ಗಂಡ ವಿಕ್ರಮಾದಿತ್ಯನು ಪಲ್ಲವರ ರಾಜಧಾನಿ ಕಂಚಿಯನ್ನು ಮೂರು ಸಲ ಗೆದ್ದುದರ ಜ್ಞಾಪಕಾರ್ಥವಾಗಿ ಕಟ್ಟಿಸಿದರು. ಇವು ಪರಿವಾರ ದೇವತೆಗಳು. ಪ್ರಾಕಾರ ಸಹಿತ ಒಂದು ದೊಡ್ಡ ಸಂಕೀರ್ಣ ಈ ಕಾಲದ ದೇವಾಲಯ ನಿರ್ಮಿತಿಗೆ ಕಲಶಪ್ರಾಯವಾಗಿದೆ.

ಭೈರವೇಶ್ವರಕೊಂಡ ಬೆಟ್ಟದ ಮೇಲಿನ ಕಲ್ಲಿಬೋಲನು ಸ್ಥಾಪಿಸಿದ ಗಣಪತಿ ನಂದೀಶ್ವರ ಮತ್ತು ದಂಡೀಶ್ವರ ವಿಗ್ರಹಗಳಲ್ಲಿ ಕೊನೆಯದು ಬಹುಶಃ ಶಿವ-ಲಕುಲೀಶನನ್ನು ಸೂಚಿಸುತ್ತದೆ ಯೆಂದು ಕಾಣುತ್ತದೆ.

ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಉತ್ತರದ ಗಂಗಾ ಪ್ರದೇಶದ ಮೃಗಪಣಿಕಾಹಾರದಿಂದ ಬಂದ ಜ್ಞಾನಶಿವಾಚಾರ್ಯನು ವಿಜಯೇಶ್ವರ ಮತ್ತು ಲೋಕೇಶ್ವರ-ಮಲ್ಲಿಕಾರ್ಜುನ ದೇವಾಲಯಗಳ ನಡುವಿನ ಸ್ಥಳದಲ್ಲಿ ತ್ರಿಶೂಲ ಸ್ತಂಭವನ್ನು ನೆಡಿಸಿದ್ದನ್ನು ಈಗಾಗಲೇ ಗಮನಿಸಲಾಗಿದೆ. ಈ ಆಚಾರ್ಯನು ವಿಜಯೇಶ್ವರ ದೇವಾಲಯದಲ್ಲಿ ಬೀಡುಬಿಟ್ಟಿದ್ದನು. ಇವನು ತನ್ನ ತಂದೆತಾಯಿಗಳಿಗೆ ಮತ್ತು ತನಗೆ ಪುಣ್ಯವಾಗಲಿಯೆಂದು, ದೇವಾಲಯದಲ್ಲಿ ಆಚಾರ್ಯರ ಪ್ರವಚನಗಳಿಗೋಸ್ಕರ, ದೇವಾಲಯದಲ್ಲಿಯೆ ನಡೆಯುವ ಧಾರ್ಮಿಕ ಕಾರ್ಯಗಳ ಅಧ್ಯಯನಕ್ಕೋಸ್ಕರ ಮತ್ತು ದೇವತಾರ್ಚನೆಯ ಕ್ರಮವನ್ನು ಸರಿಯಾಗಿ ತಿಳಿಯಲಿಕ್ಕೋಸ್ಕರ ಅರಪುಣಗೆ ಗ್ರಾಮದಿಂದ ಭೂಮಿ ದಾನವನ್ನು ವಾಡಿದನು.

ಈ ಕಾಲದಲ್ಲಿ ಪಾಶುಪತ ಶೈವದ ಒಂದು ಶಾಕೆಯಾದ ಅತಿಮಾರ್ಗಿಕ ಶೈವ ಪಂಥದ ಬಗ್ಗೆ ಏನೂ ತಿಳಿದುಬರುವುದಿಲ್ಲ. ಮಹಾಕೂಟದ ಮಹಾಕೂಟೇಶ್ವರ ಸಂಕೀರ್ಣದ ಪ್ರಕಾರದ ದಕ್ಷಿಣ ಮಹಾದ್ವಾರದ ಸ್ತ್ರೀ-ಪುರುಷ ಎರಡು ಪಿಶಾಚಿ ಮೂರ್ತಿಗಳು ಪ್ರಾಯಶಃ ಕಾಪಾಲಿಕ ಶೈವ ಪ್ರಭಾವವನ್ನು ಸೂಚಿಸಬಹುದೆಂಬ ಅಭಿಪ್ರಾಯವೇನೋ ಇದೆ. ಆದರೆ ಇದನ್ನು ನಿಶ್ಚಯವಾಗಿ ಹೇಳಲು ಬರುವುದಿಲ್ಲ. ಈ ಸಂದರ್ಭ ಇಮ್ಮಡಿ ಪುಲಕೇಶಿಯ ಮಗ ಚಂದ್ರಾದಿತ್ಯನೆಂದು ಗುರುತಿಸಲಾದ ತ್ರಿಭುವನ ನಾಗವರ್ಧನನು ಗೋಪಕರಾಷ್ಟ್ರದ (ಗೋವಾ ಪ್ರದೇಶ) ಬೆಲೆಗ್ರಾಮವನ್ನು ಠಕ್ಕೂರನ ವಿನಂತಿಯ ಮೇರೆಗೆ ಕಪಾಲೇಶ್ವರ ದೇವಾಲಯಕ್ಕೆ ಮಹಾವ್ರತಿಗಳ ಜೀವನ ಭರಣಕ್ಕೋಸ್ಕರ ಮತ್ತು ಗುಗ್ಗುಳ ಪೂಜೆಗೋಸ್ಕರ ದಾನ ಮಾಡಿದನು. ಕಾಪಾಲಿಕರ ಸಾಧನ ಕ್ರಮಕ್ಕೆ ಮಹಾವ್ರತವೆಂದು ಹೆಸರು. ಈ ಸಾಧನ ಕ್ರಮವನ್ನು ಅನುಸರಿಸುವ ಕಾಪಾಲಿಕ ಶೈವರನ್ನು ಮಹಾವ್ರತಿಗಳೆಂದು ಕರೆಯಲಾಗಿದೆ. ಕಪಾಲೇಶ್ವರ ಎಂಬ ದೇವಾಲಯದ ಹೆಸರು ಈ ಅರ್ಥವನ್ನು ಬಲಪಡಿಸುತ್ತದೆ. ಪಟ್ಟದಕಲ್ಲಿನ ೮ನೇ ಶತಮಾನದ ಒಂದು ಶಾಸನದಲ್ಲಿ ಕಾಪಾಲಿಕೆ ಗುರುಗಳಿಗೆ ಅನುಮಾನಾಸ್ಪದ ಉಲ್ಲೇಖವಿದೆ. ಇದರಲ್ಲಿ ಕಪಾಲವನ್ನು ಹಿಡಿದುಕೊಂಡು ತಿರುಗಾಡುವ ಕಂಪಾರಿ ಬಲಿ ಎಂದು ಅರ್ಥೈಸಬಹುದಾದ ‘ಕಂಪಾರ್ ಬಲಿ’ ಎಂಬ ಪದ ಸಮುಚ್ಚಯವಿದೆ.

ಚಾಲುಕ್ಯ ದೇವಾಲಯಗಳಲ್ಲಿ ಮೂರ್ತಿಶಿಲ್ಪ ಸಂಕುಲವು ಸ್ವಲ್ಪ ಸ್ಪಷ್ಟ ಚಿತ್ರವನ್ನು ಕೊಡಬಹುದು. ಚಾಲುಕ್ಯ ಆಳಿಕೆಯ ಪೂರ್ವಾರ್ಧದಲ್ಲಿ ಶಿವನ ಪ್ರಸನ್ನ ಮತ್ತು ಅನುಗ್ರಹ ರೂಪಗಳಾದ ಗಂಗಾಧರ, ಅರ್ಧನಾರೀಶ್ವರ, ಹರಿಹರ, ನಟರಾಜ ಮೊದಲಾದವುಗಳು ಪ್ರಧಾನವಾಗಿದ್ದವು. ಉತ್ತರಾರ್ಧದಲ್ಲಿ ಶಿವನ ಭೀಕರ ರೂಪಗಳಾದ ಕಾಲಾರಿ ಶಿವ, ತ್ರಿಪುರಾಂತಕ, ಗಜೇಂದ್ರ ಸಂಹಾರ ಮೂರ್ತಿಗಳೂ ಪದೇಪದೇ ಕಾಣಿಸಿಕೊಳ್ಳುತ್ತವೆ. ಎಲ್ಲೋರದಲ್ಲಿಯ ಶೈವ ಗುಹಾ-ದೇವಾಲಯಗಳಲ್ಲಿದ್ದಂತೆ, ಈ ಪ್ರದೇಶದಲ್ಲಿ ಶಿವನ ಲಕುಲೀಶರೂಪವು ಅಷ್ಟಾಗಿ ಪ್ರಾಮುಖ್ಯತೆಯನ್ನು ಪಡೆದಿಲ್ಲ. ಅಪಸ್ಮಾರ ನಟರಾಜ ಶಿವಮೂರ್ತಿಗಳೇ ಹೆಚ್ಚು.

ಚಾಲುಕ್ಯ ಕಾಲದಲ್ಲಿ ಬರಬರುತ್ತಾ ಶೈವಧರ್ಮ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದರೂ ಶೈವ ದೇವಾಲಯಮೂರ್ತಿ ಶಿಲ್ಪ ಸರಣಿಯಲ್ಲಿ ಗಜೇಂದ್ರ ಮೋಕ್ಷ, ವಾಮನ-ತ್ರಿವಿಕ್ರಮ , ಕೃಷ್ಣ ಚರಿತೆ ಮೊದಲಾದ ವೈಷ್ಣವ ಶಿಲ್ಪಗಳೂ ಇವೆ. ಹಾಗೆ ನೋಡಿದಲ್ಲಿ ಶಿವನ ಸರ್ವೋತ್ತಮತೆಯನ್ನು ಸೂಚಿಸುವ ಲಿಂಗೋದ್ಭವ ಶಿಲ್ಪವು ವಿರಳ. ಚಾಲುಕ್ಯ ಕಾಲದ ಕೊನೆಯ ಹಂತದಲ್ಲಿ ಶೈವ ದೇವಾಲಯ ವಿನ್ಯಾಸ ಕ್ರಮದಲ್ಲಿ ಮುಖ್ಯಗರ್ಭಗುಡಿಗೆ ಹೊಂದಿಕೊಂಡು ಗಣೇಶ ಮತ್ತು ಮಹಿಷಾಸುರಮರ್ದಿನಿ ಉಪಗುಡಿಗಳನ್ನು ಸೇರಿಸುವ ಪದ್ಧತಿ ಬೆಳೆಯಿತು. ಇದನ್ನು ಪಟ್ಟದಕಲ್ಲಿನ ಸಂಗಮೇಶ್ವರ, ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಕಾಣಬಹುದು. ಸ್ವಲ್ಪ ನಿರ್ಜನ ಪ್ರದೇಶಗಳಾದ ನಾಗರಾಳ (ಬಾದಾಮಿ ಹತ್ತಿರ), ಹಳೆ-ಹೊಸ ಮಹಾಕೂಟ, ಜಾಲಿಹಾಳ, ಸಿದ್ಧನಕೊಳ್ಳ ಮೊದಲಾದೆಡೆಗಳಲ್ಲಿ ಲಜ್ಜಾಗೌರಿ ಮೂರ್ತಿಗಳಿವೆ. ಬಹುಶಃ ಇಂಥ ಸ್ಥಳಗಳಲ್ಲಿ ತಾಂತ್ರಿಕ  ಶೈವರಿದ್ದಿರಬಹುದು.

ವೈಷ್ಣವ ಧರ್ಮ

ಬಾದಾಮಿ ಚಾಲುಕ್ಯರ ಮೊದಲಿನ ಕೆಲವು ಅರಸರು ವೈಷ್ಣವ ಧರ್ಮಾನುಯಾಯಿಗಳು. ತಮ್ಮ ವಂಶ ಪ್ರಶಸ್ತಿಯಲ್ಲಿ ತಮ್ಮ ರಾಜಲಾಂಛನವಾದ ವರಾಹವನ್ನು ಭಗವಾನ್ ನಾರಾಯಣನೆ ಅನುಗ್ರಹಿಸಿದನೆಂದು ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೊ ಏನೊ ಇವರಿಂದ ನಿರ್ಮಿಸಲ್ಪಟ್ಟ ದೇವಾಲಯಗಳಲ್ಲಿ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ವರಾಹ ಮೂರ್ತಿಗಳು ಹೆಚ್ಚು. ಈಗ ಒಂದನೇ ಕೀರ್ತಿವರ್ಮನೆಂದು ಗುರುತಿಸಲಾದ ಪೂಗವರ್ಮನು ವಾರಾಹಿದೇವಸ್ವಾಮಿ ದೇವಾಲಯಕ್ಕೆ ಮಲಖೇಟಕ (ಮಳಖೇಡ್, ಗುಲ್ಬರ್ಗಾ ಜಿಲ್ಲೆ) ಗ್ರಾಮವನ್ನು ದಾನ ಮಾಡಿದನು. ಬಹುಶಃ ಬಾದಾಮಿಯಲ್ಲಿಯ ಎರಡನೇ ವೈಷ್ಣವ ಗುಹಾ ದೇವಾಲಯದ ಸೃಷ್ಟಿಗೆ ಕಾರಣನೆಂದು ಕಾಣುತ್ತದೆ. ಇವನ ತಮ್ಮ ಮಂಗಳೇಶನು ಇಲ್ಲಿಯ ಮೂರನೇ ಭವ್ಯ ವೈಷ್ಣವ ಗುಹಾದೇವಾಲಯವನ್ನು ಮಾಡಿಸಿರುವುದು ತಿಳಿದ ವಿಷಯ. ಮಂಗಳೇಶನು ತನ್ನನ್ನು ‘ಪರಮಭಾಗವತ’ನೆಂದು ಕರೆದುಕೊಂಡಿದ್ದನು. ಕ್ರಿ.ಶ. ೫೭೮ರಲ್ಲಿ ಪ್ರತಿಸ್ಥಾಪಿಸಲ್ಪಟ್ಟ ಈ ಮಹಾವಿಷ್ಣುಗೃಹವು ಒಂದು ಅದ್ಭುತವಾಸ್ತು ಕ್ತಿಯೆಂದು ವರ್ಣಿಸಲಾಗಿದೆ. ಈ ಸ್ಥಳ ಗುಹಾದೇವಾಲಯಗಳಲ್ಲಿ ಇದು ನಿಜವಾಗಿಯೂ ಒಂದು ಮಹಾನ್ ಸುಂದರ ದೇವಾಲಯ. ಇದರಲ್ಲಿ ಅತ್ಯಂತ ಚೆಲುವಾದ ಅಷ್ಟಭುಜಸ್ವಾಮಿ, ಪರಾ-ವಾಸುದೇವ, ಭೂವರಾಹ, ಹರಿಹರ, ನರಸಿಂಹ, ವಾಮನ-ತ್ರಿವಿಕ್ರಮ ಮೊದಲಾದ ಬೃಹತ್‌ಭಿತ್ತಿ ಶಿಲ್ಪಗಳಿವೆ ಮತ್ತು ಪುರಾಣ, ಹರಿವಂಶ ಮೊದಲಾದ ಕೃತಿಗಳಿಂದ ಆಯ್ದ ಕೃಷ್ಣಚರಿತೆ, ಪಾರಿಜಾತಹರಣ, ಸಮುದ್ರಮಥನ ಮೊದಲಾದ ಕಥೆಗಳ ಕಥಾನಕ ಶಿಲ್ಪಪಟ್ಟಿಕೆಗಳಿವೆ.

ಇಷ್ಟು ಹೊತ್ತಿಗಾಗಲೇ ವೈಷ್ಣವ ಭಕ್ತರು ಕಾರ್ತೀಕ ಶುದ್ಧ ದ್ವಾದಶಿಯಂದು ಮಹಾವಿಷ್ಣುವು ತನ್ನ ಯೋಗನಿದ್ರೆಯಿಂದ ಬಹಿರ್ಮುಖನಾಗಿದ್ದರಿಂದ ಆ ದಿನವು ಪವಿತ್ರವೂ ದಿವ್ಯವೂ ಎಂಬ ನಂಬಿಕೆ ಬೆಳೆದಿತ್ತು. ಅಂಥ ಒಂದು ದಿನದಂದು ಮಂಗಳೇಶನು ಉಪವಾಸವಿದ್ದು, ವಿಷ್ಣುವನ್ನು ಪೂಜಿಸಿ ಅನಂತರ ಕೊಂಕಣ ವಿಷಯದಲ್ಲಿಯ ಕುಂಡಿ-ವಾಟಕ  ಗ್ರಾಮವನ್ನು ಆರ್ಯಸ್ವಾಮಿಗೆ ದಾನ ಮಾಡಿದನು.

ಇಮ್ಮಡಿ ಪುಲಕೇಶಿಯ ಕಾಲದಿಂದ ಶಾಸನಗಳ ಆದಿಯಲ್ಲಿ ವರಾಹ ಸ್ತುತಿಯಿರುವುದು ಸಾಮಾನ್ಯವಾಯಿತು. ಈ ಅರಸನ ಚಿಪ್ಳುನ ಶಾಸನದಲ್ಲಿ ಮತ್ತು ಇವನ ಮೊಮ್ಮಗ ಅಭಿನವಾದಿತ್ಯ (ಆದಿತ್ಯ ವರ್ಮನ ಮಗ)ನ ಗಂಜಿಗಟ್ಟಿ ಶಾಸನದಲ್ಲಿ ವಾಮನ ತ್ರಿವಿಕ್ರಮನ ಸ್ತುತಿಯಿದೆ. ಇವನನ್ನು ಲೋನ್ಹೇರ್ ತಾಮ್ರಶಾಸನದಲ್ಲಿ ಮಾತ್ರ ‘ಪರಮಭಾಗವತ’ನೆಂದು ವರ್ಣಿಸಿದೆ.

ಬಾದಾಮಿಯಲ್ಲಿಯ ಕೆಳಗಣ ಮತ್ತು ಮೇಲಣ ಶಿವಾಲಯಗಳು ಅವುಗಳಲ್ಲಿಯ ಶಿಲ್ಪಗಳಿಂದ ಮೂಲತಃ ವಿಷ್ಣು ದೇವಾಲಯಗಳೆಂದು ಹೇಳಬಹುದು.

ಒಂದನೇ ವಿಕ್ರಮಾದಿತ್ಯನ ಕಾಲದಿಂದ ಈ ಅರಸು ಮನೆತನದ ಮೇಲೆ ಶೈವಧರ್ಮದ ಪ್ರಭಾವವು ಗಂಭೀರವಾಗಿ ಆಯಿತು. ಇಲ್ಲಿಂದ ಮುಂದಕ್ಕೆ ಶೈವ ದೇವಾಲಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾದವು. ಅರಸರುಗಳು ತಮ್ಮನ್ನು ‘ಪರಮ ಮಾಹೇಶ್ವರ’ರೆಂದು ಕರೆದುಕೊಂಡರು. ಆದರೂ ಒಂದನೇ ವಿಕ್ರಮಾದಿತ್ಯನ ಸವಣೂರು ಶಾಸನವು ನಾರಾಯಣನಿಗೆ ನಮಸ್ಕಾರದೊಂದಿಗೆ ಮುಕ್ತಾಯವಾಗುತ್ತದೆ. ಹೀಗೆ ವಿಷ್ಣುಭಕ್ತಿ ಆಳರಸರಲ್ಲಿ ಅಪರೂಪ ವಾಯಿತು. ವಿಜಯಾದಿತ್ಯನು ಬಾದಾಮಿಯಲ್ಲಿ ಬ್ರಹ್ಮ-ವಿಷ್ಣು-ಶಿವ ದೇವಾಲಯವನ್ನು ಕಟ್ಟಿಸಿದನು. ಇದರಲ್ಲಿ ಮಧ್ಯದ ಗರ್ಭಗೃಹದಲ್ಲಿ ಶಿವಲಿಂಗವಿದ್ದಿರಬೇಕು.

ಜನ ಸಮುದಾಯದಲ್ಲಿ ನಾರಾಯಣಸ್ವಾಮಿ, ವಿಷ್ಣುಸ್ವಾಮಿ, ಗೋಪಸ್ವಾಮಿ, ದಾಮ ದೀಕ್ಷಿತ, ಕೃಷ್ಣಸ್ವಾಮಿ, ವಾಮನಸ್ವಾಮಿ, ಕೇಶವಸ್ವಾಮಿ, ದಾಮೋದರಸ್ವಾಮಿ, ತ್ರಿವಿಕ್ರಮ ಸ್ವಾಮಿ, ಹರಿದತ್ತ, ಮಾಧವಸ್ವಾಮಿ, ಗದಾಧರಸ್ವಾಮಿ, ಉಪೇಂದ್ರ, ರಾಮಶರ್ಮ, ಯಜ್ಞ ಸ್ವಾಮಿ ಮೊದಲಾದ ಹೆಸರುಗಳು ರೂಢಿಯಲ್ಲಿದ್ದವು.

ಶಿಲ್ಪದಲ್ಲಿ ವಿಷ್ಣುವಿನ ಸ್ಥಾನಕ, ಆಸನ ಮತ್ತು ಶಯನ ರೂಪಗಳಲ್ಲಿ ಮೂರ್ತಿಗಳು ಬಹಳ. ಇವುಗಳು ಸ್ವಲ್ಪ ಹೆಚ್ಚುಕಡಿಮೆ ವೈಖಾನಸಾಗಮದಲ್ಲಿಯ ವಿಷ್ಣುಮೂರ್ತಿಗಳ ರೂಪಣ ನಿಯಮದಂತೆ ಇವೆ. ಮೂರ್ತಿಶಿಲ್ಪಿಗಳಿಗೆ ರಾಮಾಯಣ, ಮಹಾಭಾರತ, ವಿಷ್ಣುಪುರಾಣ ಮೊದಲಾದವುಗಳ ಪರಿಚಯ ಚೆನ್ನಾಗಿಯೇ ಇದ್ದಿತು. ಸುಮಾರು ೭ನೇ ಶತಮಾನದ ಮಧ್ಯಭಾಗದಿಂದ ಭಾಗವತಪುರಾಣವು ಕರ್ನಾಟಕದಲ್ಲಿ ಪ್ರಸಿದ್ದಿಯಾಗುತ್ತಾ ಬಂದಿತು.

ಒಟ್ಟಿನಲ್ಲಿ, ದಖನ್ನಿನಲ್ಲಿ ವಾಸುದೇವ ಸಂಕರ್ಷಣ ಆರಾಧನೆಯ ಭಾಗವತ ಪಂಥವು ಕ್ತಿಸ್ತಶಕದ ಶುರುವಿನ ಹೊತ್ತಿಗೆ ಪ್ರಚಲಿತವಿದ್ದು, ಕ್ರಮೇಣ ಸುಮಾರು ೨ನೇ ಶತಮಾನದ ಹೊತ್ತಿಗೆ ವೈದಿಕ ವಿಷ್ಣುನಾರಾಯಣ ಪಂಥವು ಬೆಳೆದದ್ದರಿಂದ ಮೊದಲನೆಯದು ಹಿಂದಕ್ಕೆ ಸರಿಯಿತು. ಬಹುಶಃ ಬೇರೆ ಯಾವುದಕ್ಕೂ ಬಗ್ಗದ ವೈಖಾನಸರು ವೈದಿಕ ವಿಷ್ಣು-ನಾರಾಯಣ ಪಂಥವು ಕರ್ನಾಟಕದಲ್ಲಿ ಬೆಳೆಯಲು ಕಾರಣರಾದರು. ವ್ಯೆಹ ಮತ್ತು ವ್ಯೆಹಾಂತರ ಪರಿಕಲ್ಪಗಳೊಡನೆ ಪರಾ-ವಾಸುದೇವನೇ ಸರ್ವೋತ್ತಮನೆಂಬ ತತ್ವಪ್ರನಾಳಿಕೆಯ ನವ ಪಾಂಚಾರಾತ್ರ ಪಂಥವು ಸುಮಾರು ೮ನೇ ಶತಮಾನದಿಂದ ತಮ್ಮ ಪ್ರಭಾವವನ್ನು ಬೀರುತ್ತಾ ಸುಮಾರು ೧೦ನೇ ಶತಮಾನದ ಹೊತ್ತಿಗೆ ಪ್ರಬಲವಾಯಿತು.