ಗುರುವಿನ ಮುಖದಿಂದ ಗುರುತು ಕಂಡರಿಪಾದ ಗುರಿ ಕಂಡು ನೀ ಬಾಳೋ ಕುರಿಯೇ ನಾನ ಪರಿ ಪರಿ ವರ್ಣದ ಕುರಿಗಳ ಮೇಯುವ ಕುರುಬನ ನೀ ಸೇರೋ ಕುರಿಯೇ ವೇದ ಶಾಸ್ತ್ರಗಳೆಂಬ ಗಾದೆಗೆ ಒಳಗಾಗಿ ಬಾದೆ ನೀ ಪಡಬೇಡ ಕುರಿಯೇ ಆದಿ ಅನಾದಿಗೆ ಆಧಾರವಾಗಿಹೆ ಆದಿಯಾ ನೀ ಸೇರೋ ಕುರಿಯೇ ||

ಬುದ್ಧಿಯಿಲ್ಲದೆ ನೀನು ಭುವನವ ತಿರುಗಿ ಒದ್ದಾಡಿ ಸಾಯುವೇ ಕುರಿಯೇ | ನಿನ್ನ ಸದ್ದು ಅಡಗಲು ಯಮದೂತರು ಬಂದು ಗುದ್ದೆಳೆದೊಯ್ವರು ಕುರಿಯೇ | ಬಲ್ಲ ಸದ್ಗುರು ಕೂಡಿ ಬಲ್ಲಂತವನಾಗಿ ಸಲ್ಲುವೇ ಮೋಕ್ಷಕ್ಕೆ ಕುರಿಯೇ || ಬಲ್ಲಾತ ನಲ್ಲದೇ | ಬರಿಯ ಮಾತುಗಳಾಡಿ ಕಲ್ಲು ಹಾಯ್ದಂತಾಯ್ತೆ ಕುರಿಯೇ || ಹಾಳು ತೋಟಕೆ ನೀರು ಎತ್ತಿದ ರಟ್ಟೆಯು ಬೀಳು ಬಿದ್ದಾಂತಾಯ್ತು ಕುರಿಯೇ | ನೀನು ಕೂಳು ಹೋಗದ ಮುನ್ನ ದಾಳಿಗೆ ಸಿಲುಕದೆ ಮಾಳಿಗೆ ಮನೆ ಸೇರೊ ಕುರಿಯೇ || ಇಲ್ಲದಂಗಡಿಯೊಳು ಯಾತಾರ ಯಾಪಾರ ಬಲ್ಲವರ ನೀಸೇರೋ ಕುರಿಯೇ | ನಮ್ಮ ಪುಲ್ಲ ಲೋಚನ | ಜಗದಾದಿ | ರೇವಣ ಸಿದ್ದನಂಘ್ರಿನಿಲ್ಲದೆ ನೀ ಸೇರೋ ಕುರಿಯೇ ||