Categories
ಲೇಖನಗಳು ಸರೋಜಾ ಪ್ರಕಾಶ

ಬಾನಲ್ಲಿನ ಇನ್ನೊಂದು ಚಂದ್ರ

ಈಗಿರುವ ನಮ್ಮ ಚಂದ್ರನ ಹೊರತಾಗಿ ಇನ್ನೊಂದು ಚಂದ್ರನೂ ಭೂಮಿಯನ್ನು ಸುತ್ತುತ್ತಿರುವನೆಂದರೆ ನಿಮಗೆ ಆಶ್ಚರ್ಯವಾದೀತು! ಆದರಿದು ನಿಜ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕೃತಕ ಚಂದ್ರನನ್ನು ಆಕಾಶಕ್ಕೆ ಹಾರಿಬಿಟ್ಟಿದೆ . ಕಳೆದ ವರ್ಷದ ಜುಲೈ ತಿಂಗಳಲ್ಲಿ ಈ ಚಂದ್ರ ಒಂದು ದಶಕದ ಸಾರ್ಥಕ ಸೇವೆಯನ್ನು ಪೂರೈಸಿತೆಂದು ಸಂತೋಷದ ಆಚರಣೆಯೂ ನಾಸಾದಲ್ಲಿ ನಡೆಯಿತು. (ದಾಖಲೆಗಳ ಪ್ರಕಾರ ಗೆಲಿಲಿಯೋ ಎಂಬ ವಿಜ್ಞಾನಿ ೧೬೦೯ರಲ್ಲಿ ಮೊಟ್ಟಮೊದಲಬಾರಿ ದೂರದರ್ಶಕದ ಮೂಲಕ ಬಾಹ್ಯ ಆಕಾಶವನ್ನು ವೀಕ್ಷಿಸಿದ್ದ. ಆದ್ದರಿಂದ ೨೦೦೯ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಆಚರಣಾ ವರ್ಷ’ ಎಂದು ಆಚರಿಸಲಾಯಿತು. ಭೂಮಿಯ ಮೇಲ್ಮೈನಿಂದ ನೂರು ಕಿಮೀ ಆಚೆಯ ಆಕಾಶವನ್ನು ಬಾಹ್ಯ ಆಕಾಶ ಎಂದು ಗುರುತಿಸಲಾಗುತ್ತಿದೆ. ಹಾಗಾಗಿ ಬಾಹ್ಯ ಆಕಾಶದ ವೈಚಿತ್ರ್ಯಗಳ ಬಗ್ಗೆ ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಿಸುವುದೇ ಈ ಆಚರಣೆಯ ಗುರಿ.)

ಅಂದ ಹಾಗೆ ಇದು ನಮ್ಮ ಅಚ್ಚಕನ್ನಡದ ಚಂದಮಾಮನ ‘ಚಂದ್ರ’ ಹೆಸರಲ್ಲ. ಭಾರತೀಯ ಮೂಲದ ಖ್ಯಾತ ಭೌತ ಶಾಸ್ತ್ರಜ್ಞರಾಗಿದ್ದ ‘ಸುಬ್ರಹ್ಮಣಿಯನ್ ಚಂದ್ರಶೇಖರ’ ಅವರ ನೆನಪಿಗೆ ಈ ಹೆಸರು. ಹತ್ತು ವರ್ಷಗಳ ಹಿಂದೆ ದೂರದರ್ಶಕವೊಂದನ್ನು ಮಡಿಲಲ್ಲಿಟ್ಟುಕೊಂಡು ಕೊಲಂಬಿಯಾ ಅಂತರಿಕ್ಷ ನೌಕೆಯಲ್ಲಿ ಕುಳಿತು ಬಾನಿಗೆ ಹಾರಿದ ಈ ಚಂದ್ರನನ್ನು ಕೃತಕ ಉಪಗ್ರಹ ಎನ್ನುವುದಕ್ಕಿಂತಲೂ ವೇಧಶಾಲೆ ಅಥವಾ ಅಂತರಿಕ್ಷ ವೀಕ್ಷಣಾಲಯ ಎಂದು ಕರೆಯುವುದು ಸೂಕ್ತ. ಇದು ಪ್ರತಿ ಅರವತ್ನಾಲ್ಕು ಘಂಟೆಗಳಿಗೊಮ್ಮೆ ಭೂಮಿಯ ಪ್ರದಕ್ಷಿಣೆ ಮಾಡುತ್ತಿದೆ.

ಆಕಾಶಕ್ಕೆ ಹಾರುವ ಉಪಕರಣಗಳೆಂದರೆ ಅತ್ಯುನ್ನತ ತಂತ್ರಜ್ಞಾನ ಬೇಡುವ ಅಥವಾ ಅಪಾರ ಹಣ ನುಂಗುವ ಯೋಜನೆಗಳು. ಬಾಹ್ಯಾಕಾಶ ಸಂಸ್ಥೆಗಳು ಉಪಕರಣಗಳ ವೆಚ್ಚ ಕಡಿತಗೊಳಿಸಲು ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಂದ್ರ ವೇಧಶಾಲೆಯ ನಿರ್ಮಾಣದ ವೇಳೆಯಲ್ಲಿ ಮೂಲ ನಕ್ಷೆಯಲ್ಲಿದ್ದ ಹನ್ನೆರಡು ಫಲಕಗಳಲ್ಲಿ ನಾಲ್ಕನ್ನು ಹಾಗೂ ಆರು ವೈಜ್ಞಾನಿಕ ಉಪಕರಣಗಳಲ್ಲಿ ಎರಡನ್ನು ಕಡಿಮೆಗೊಳಿಸಲಾಯಿತು. ವೃತ್ತಾಕಾರದ ಬದಲು ಅಂಡಾಕಾರದ ಕಕ್ಷೆಯಲ್ಲಿ ಅದು ಹಾರುವಂತೆ ರಚಿಸಲಾಯಿತು. ಏಕೆಂದರೆ ಈ ಕಕ್ಷೆಯಲ್ಲಿ ಅದು ಭೂಮಿಯ ಹೊರವಲಯದಿಂದ ಸಿಡಿಯುವ ವಿಕಿರಣಗಳಿಂದ ಸುರಕ್ಷಿತವಾಗಿರುತ್ತದೆ. ವೃತ್ತಾಕಾರದ ಕಕ್ಷೆಯಲ್ಲಿ ಹಾರುವಂತಿದ್ದರೆ ಈ ವೇಧಶಾಲೆಯ ರಿಪೇರಿಗೆಂದು ಭೂಮಿಯಿಂದ ಅಂತರಿಕ್ಷ ನೌಕೆಗಳು ಹಾರಿ ಹೋಗಬಹುದಿತ್ತು. (ಆದರೆ ವಿಕಿರಣಗಳಿಂದ ರಕ್ಷಣೆ ಪಡೆಯಲು ವಿಶೇಷ ತಗಡುಗಳನ್ನು ಅಳವಡಿಸಬೇಕಾಗಿ ಬರುತ್ತಿತ್ತು)ಅಂಡಾಕಾರದ ಕಕ್ಷೆಯಲ್ಲಿ ಚಂದ್ರ ವೇಧಶಾಲೆಯ ರಿಪೇರಿಯೂ ಸಾಧ್ಯವಿಲ್ಲ, ಅದು ಮರಳಿ ಭೂಮಿಗೆ ಬರುವಂತೆ ಮಾಡುವುದೂ ಸಾಧ್ಯವಿಲ್ಲ. ಇಷ್ಟಾದರೂ ೨೨೭೨೩ ಕೆಜಿ ತೂಕದ ಮಾನವ ನಿರ್ಮಿತ ಈ ಚಂದ್ರನನ್ನು ಗಗನಯಾನಿಯನ್ನಾಗಿಸಲು ವಿಶೇಷವಾದ ರಾಕೆಟ್ ವ್ಯವಸ್ಥೆ ಬೇಕಾಯಿತು. ಹಾರಿದ ಒಂದು ತಿಂಗಳ ನಂತರ ಚಂದ್ರ ವೇಧಶಾಲೆಯಿಂದ ಮಾಹಿತಿ ಬಿತ್ತರವಾಗಲು ಆರಂಭವಾಯಿತು. ಅಂದಿನಿಂದಲೂ ಕೇಂಬ್ರಿಜ್ ನ ‘ಚಂದ್ರ’ ಎಕ್ಸ್ ರೇ ಕೇಂದ್ರ ಅದರ ಮೇಲ್ವಿಚಾರಣೆ ನಡೆಸುತ್ತಿದೆ.

ಮಾನವನ ದೃಷ್ಟಿಗೆ ನಿಲುಕದ ದೂರದ ವಿದ್ಯಮಾನಗಳನ್ನು ಅರಿಯಲು ವಿಜ್ಞಾನಿಗಳು ಬಳಸಿದ ಉಪಕರಣ ದೂರದರ್ಶಕ. ಅಂದರೆ ಬಾಹ್ಯಾಕಾಶ ವಿಜ್ಞಾನಕ್ಕೂ, ದೂರದರ್ಶಕಗಳಿಗೂ ಬಿಡಲಾರದ ನಂಟು. ೧೬೦೮ರಲ್ಲಿ ಭೂಮಿಯ ಪ್ರಥಮ ದೂರದರ್ಶಕ ನೆದರ್ ಲ್ಯಾಂಡಿನ ಕನ್ನಡಕ ತಯಾರಿಸುವ ಮೂವರು ವರ್ತಕರ ಕೈಯ್ಯಲ್ಲಿ ಜನ್ಮ ತಾಳಿತು ಎಂದು ಇತಿಹಾಸ ಹೇಳುತ್ತದೆ. ಬೆಳಕಿನ ವಕ್ರೀಭವನ ಗುಣವನ್ನಾಧರಿಸಿದ ಆ ದರ್ಶಕದ ಸುಧಾರಿತ ಮಾದರಿಯನ್ನು ಗೆಲಿಲಿಯೋ ೧೬೦೯ ರಲ್ಲಿ ತನ್ನ ಪ್ರಯೋಗಗಳಲ್ಲಿ ಬಳಸಿದನಂತೆ. **ಆದ್ದರಿಂದ ಈ ವರ್ಷವನ್ನು ದೂರದರ್ಶಕಗಳ ಸಾಧನೆಯ ನಾಲ್ಕುನೂರನೆಯ ವರ್ಷ ಎಂದೂ ಆಚರಿಸಬಹುದು.

ಈ ನಾನೂರು ವರ್ಷಗಳಲ್ಲಿ ದೂರದರ್ಶಕ ವಿಜ್ಞಾನ ಬಹಳೇ ಬೆಳೆದಿದೆ. ಮೊದಮೊದಲು ಭೂಮಿಯಲ್ಲಿದ್ದೇ ಆಕಾಶದ ದೂರನೋಟವನ್ನು ಪಡೆಯಲಾಗುತ್ತಿತ್ತು. ಖಗೋಲ ವಿಜ್ಞಾನ ಪ್ರಗತಿ ಹೊಂದಿದ ಹಾಗೆ ಆಕಾಶದಲ್ಲಿಹಾರಾಡುತ್ತಲೇ ಮಾಹಿತಿ ಕಲೆಹಾಕುವ ದೂರದರ್ಶಕಗಳು ನಿರ್ಮಾಣಗೊಳ್ಳತೊಡಗಿದವು. ಕಳೆದ ಶತಮಾನದಲ್ಲಿ ಅದರಲ್ಲೂ ಎರಡನೆಯ ಮಹಾಯುದ್ಧ ಮುಗಿದ ನಂತರದ ದಿನಗಳಲ್ಲಿ ಮುಂದುವರೆದ ಅಮೆರಿಕಾ ಮತ್ತು ಬ್ರಿಟನ್ ದೇಶಗಳು ಹಾರಾಡುವ ದೂರದರ್ಶಕಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸತೊಡಗಿದವು. ಯಶಸ್ಸು ಸುಲಭವಾಗಿ ಎಟಕುವಂತಿರಲಿಲ್ಲ. ಹತ್ತಾರು ವೈಫಲ್ಯಗಳ ನಂತರ ಬಾಹ್ಯಾಕಾಶ ಹಾರಾಟ ತಂತ್ರಜ್ಞಾನ ಉತ್ತಮಗೊಳ್ಳತೊಡಗಿತು. ದೀರ್ಘಾವಧಿ ಬಾಳಿಕೆಯ ದೂರದರ್ಶಕಗಳು, ಅವನ್ನು ಹೊತ್ತೊಯ್ಯುವ ಸುಧಾರಿತ ಅಂತರಿಕ್ಷ ನೌಕೆಗಳು ಬಾಹ್ಯಾಕಾಶದಲ್ಲಿ ಹಾರಲಾರಂಭಿಸಿದವು.

ಇಪ್ಪತ್ತನೆಯ ಶತಮಾನದಲ್ಲಿ ಅತಿ ಹೆಚ್ಚು ಬಗೆಯ ಹಾಗೂ ಅತ್ಯುಚ್ಚ ಮಟ್ಟದ ದೂರದರ್ಶಕಗಳು ತಯಾರಾದವು. ನಾವು ಕರೆಯುವ ‘ಬೆಳಕು’ ವಿದ್ಯುತ್ ಕಾಂತೀಯ ಅಲೆಪಟ್ಟಿಯ ಒಂದಲ್ಪ ಭಾಗ ಎಂಬ ವಿಷಯ ಬಹಿರಂಗವಾದಮೇಲಂತೂ ವಿವಿಧ ರೀತಿಯ ಕಿರಣಗಳನ್ನು ಪತ್ತೆ ಹಚ್ಚುವಂಥಹ ದರ್ಶಕಗಳ ಬಗ್ಗೆ ತಜ್ಞರಲ್ಲಿ ಹೆಚ್ಚು ಆಸ್ಥೆ ಬೆಳೆಯತೊಡಗಿತು. ಈಗಂತೂ ರೇಡಿಯೋ ತರಂಗದಿಂದ ಗ್ಯಾಮಾ ತರಂಗದ ವ್ಯಾಪ್ತಿಯವರೆಗೂ ಮಾಹಿತಿಗಳನ್ನು ದಾಖಲಿಸುವ ದರ್ಶಕಗಳನ್ನು ರೂಪಿಸಲಾಗಿದೆ. ಅವು ಭುವಿಯ ಸುತ್ತಲ ಬ್ರಹ್ಮಾಂಡದಲ್ಲಿ ಸಂಭವಿಸುತ್ತಿರುವ ವಿಸ್ಮಯಕಾರಿ, ರಂಗುರಂಗಿನ ಘಟನೆಗಳನ್ನು ವಿಜ್ಞಾನಿಗಳಿಗೆ ಚಿತ್ರಗಳ ಮೂಲಕ ರವಾನಿಸುವ ಕಾಯಕದಲ್ಲಿ ಸದಾ ನಿರತವಾಗಿವೆ.

ಬಾಹ್ಯಾಕಾಶದ ವೇಧಶಾಲೆಗಳಲ್ಲಿ ಬಳಸಲಾಗುವ ದೂರದರ್ಶಕಗಳಲ್ಲಿ ನಾನಾ ವಿಧಗಳಿವೆ. ಕಾರಣವೆಂದರೆ ಪ್ರತಿಯೊಂದೂ ಪ್ರತ್ಯೇಕವಾದ ಲಕ್ಷಣಗಳುಳ್ಳ ವಿದ್ಯುತ್ ಕಾಂತೀಯ ಕಿರಣಗಳ ಅಧ್ಯಯನಕ್ಕೆಂದು ರಚಿತವಾಗಿವೆ. ಈ ವಿದ್ಯುತ್ ಕಾಂತೀಯ ಕಿರಣಗಳು ಅಥವಾ ಅಲೆಗಳು ಎಂದರೇನು? ಇವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ವಿಶ್ವದಲ್ಲಿ ಎಲ್ಲೆಡೆ ಪಸರಿಸಿರುವ, ಪಸರಿಸುತ್ತಿರುವ ಶಕ್ತಿಅಲೆಗಳು. ಇವು ಅಲೆಗಳ ರೂಪದಲ್ಲಿ ಹಾಗೂ ಬೆಳಕಿನ ವೇಗದಲ್ಲಿಚಲಿಸುತ್ತವೆ. ವಿದ್ಯುತ್ ಮತ್ತು ಆಯಸ್ಕಾಂತ ಕ್ಷೇತ್ರಗಳ ಮಿಳಿತದಲ್ಲಿ ಉದ್ಭವಿಸುವ ಈ ಅಲೆಗಳು ಬಿಸಿಯಾದ, ಶಕ್ತಿ ತುಂಬಿದ ವಸ್ತುಗಳಿಂದ ಹೊರಚಿಮ್ಮುತ್ತಿರುತ್ತವೆ. ಇದಕ್ಕೆ ಉದಾಹರಣೆಯೆಂದರೆ, ನಕ್ಷತ್ರಗಳು. ವಸ್ತುಗಳ ಮೂಲರೂಪವೆನಿಸಿರುವ ಪರಮಾಣುಗಳ ಆಂತರಿಕ ಕ್ರಿಯೆಯಿಂದಾಗಿ ಈ ವಿದ್ಯುತ್ ಕಾಂತೀಯ ಶಕ್ತಿ ಉತ್ಪತ್ತಿಯಾಗುತ್ತದೆ. ಈ ಶಕ್ತಿಯ ವಿವಿಧ ಹಂತಗಳೇ ಭಿನ್ನ ಹೆಸರಿನ ಅಲೆಗಳು. ರೇಡಿಯೋ, ಮೈಕ್ರೋವೇವ್, ಅವರೋಹಿತ, ದೃಗ್ಗೋಚರ(ಅಂದರೆ ನಮ್ಮ ಕಣ್ಣಿಗೆ ಕಾಣಿಸುವ ಕೆಂಪಿನಿಂದ ನೇರಳೆ ಬಣ್ಣದವರೆಗಿನ ವರ್ಣಪಂಕ್ತಿ), ಅತಿನೇರಳೆ, ಎಕ್ಸ್ ರೇ ಹಾಗೂ ಗಾಮಾ ಕಿರಣಗಳನ್ನು ಕ್ರಮವಾಗಿ ಒಳಗೊಂಡಿರುವ ವಿದ್ಯುತ್ ಕಾಂತೀಯ ರೋಹಿತಪಟ್ಟಿ. ಈ ರೋಹಿತಪಟ್ಟಿಯಲ್ಲಿ ಬಲದಿಂದ ಎಡಕ್ಕೆ ಅಲೆಗಳ ಶಕ್ತಿ ಏರಿಕೆಯ ಕ್ರಮದಲ್ಲಿದ್ದರೆ, ಎಡದಿಂದ ಬಲಕ್ಕೆ ತರಂಗದೂರ ಏರಿಕೆಯ ಕ್ರಮದಲ್ಲಿರುತ್ತದೆ. ನಾವು ಬೆಳಕು ಎಂದು ಕರೆಯುವ ವರ್ಣಪಂಕ್ತಿ ಈ ವಿದ್ಯುತ್ ಕಾಂತೀಯ ಅಲೆಗಳ ಒಂದು ಅಲ್ಪ ಭಾಗವಷ್ಟೆ. ನಿಸರ್ಗದ ವೈಚಿತ್ರ್ಯ ಹೇಗಿದೆಯೆಂದರೆ ಈ ಅಲೆಗಳು ಬಾಹ್ಯ ಆಕಾಶದಲ್ಲಿ ಸರ್ವವ್ಯಾಪಿಯಾಗಿದ್ದರೂ ಜೀವಿಗಳಿಗೆ ಮಾರಕವಾಗದ ಅಲೆಗಳು ಮಾತ್ರ ಭೂ ವಾತಾವರಣವನ್ನು ನುಗ್ಗಬಲ್ಲವು. ಆದ್ದರಿಂದಲೇ ಶಕ್ತಿಯುತವಾದ ಕ್ಷಕಿರಣಗಳಿಗೆ, ಮೈಕ್ರೋವೇವ್ ಕಿರಣಗಳಿಗೆ ಅಷ್ಟೇಕೆ ಇನ್ಫ್ರಾರೆಡ್ ಅಥವಾ ಅವರೋಹಿತ ಕಿರಣಗಳಿಗೂ ಕೂಡ ಭೂಮಿಯ ವಾತಾವರಣವೆಂಬ ರಕ್ಷಾಕವಚದೊಳಕ್ಕೆ ಪ್ರವೇಶವಿಲ್ಲ.

ಮತ್ತೀಗ ವೇಧಶಾಲೆಗಳಲ್ಲಿ ಬಳಸುವ ದೂರದರ್ಶಕಗಳಿಗೆ ಬರೋಣ. ಇವುಗಳಲ್ಲಿ ನಮ್ಮ ದೃಷ್ಟಿಗೋಚರ ಬೆಳಕನ್ನು ಗುರುತಿಸುವ ಆಪ್ಟಿಕಲ್ ಟೆಲಿಸ್ಕೋಪುಗಳು, ರೇಡಿಯೋ ಅಲೆಗಳನ್ನು ಗುರುತಿಸುವ ರೇಡಿಯೋ ಟೆಲಿಸ್ಕೋಪುಗಳು, ಅವರೋಹಿತ ಮತ್ತು ದೃಗ್ಗೋಚರ ಬೆಳಕಿನ ಚಿತ್ರಗಳನ್ನು ಗುರುತಿಸುವ ಹಬ್ಬಲ್, ಗಾಮಾ ರೇ ಹೀರುವ ಕಾಂಪ್ಟನ್, ಅತಿನೇರಳೆ ಕಿರಣಗಳನ್ನು ಗುರುತಿಸುವ ಜೇಮ್ಸ್ ವೆಬ್ ಇತ್ಯಾದಿ ಹಲಬಗೆಗಳಿವೆ. ಚಂದ್ರ ವೇಧಶಾಲೆ ಮೇಲೆ ವಿವರಿಸಿದ ವಿದ್ಯುತ್ ಕಾಂತೀಯ ಅಲೆಗಳ ಎಕ್ಸ್ ರೇ ಗಳ ಚಿತ್ರಗಳನ್ನು ಮಾತ್ರ ತೆಗೆಯುತ್ತದೆ. ಇವು ಅತ್ಯಂತ ಶಕ್ತಿಕಾರಿಯಾದ ಕಿರಣಗಳು. ಭೂವಾತಾವರಣದಲ್ಲಿ ಕಾಣಬರುವುದಿಲ್ಲ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಇದರ ಸದುಪಯೋಗವನ್ನು ಪಡೆಯಲು ಕೃತಕವಾಗಿ ಉತ್ಪಾದಿಸಲಾಗುತ್ತದೆ. ಎಕ್ಸ್ ರೇಗಳು ಗಾಳಿಯಲ್ಲಿ ಹೆಚ್ಚು ದೂರ ಕ್ರಮಿಸಲಾರವು.

ಮೊಟ್ಟಮೊದಲ ಬಾರಿ ಇದರ ಇರುವಿಕೆಯ ಪತ್ತೆಯಾದಾಗ ಜರ್ಮನ್ ವಿಜ್ಞಾನಿ ಕೊನ್ರಾಡ್ ರಾಯೆಂಟ್ಜೆನ್ ಇದ್ಯಾವುದೋ ಗೊತ್ತಿಲ್ಲದ ಕಿರಣಗಳೆಂದು ಎಕ್ಸ್ ರೇ ಎಂದು ಕರೆದಿದ್ದು ಮುಂದೆ ಅದೇ ಹೆಸರು ಖಾಯಂ ಆಗಿ ಉಳಿಯಿತು. ಅಂತರಿಕ್ಷದಲ್ಲಿ ಲಕ್ಷಲಕ್ಷ ಡಿಗ್ರಿಯಷ್ಟು ಬಿಸಿಯಾದ ವಸ್ತುಗಳಿಂದ ಎಕ್ಸ್ ರೇಗಳು ಹೊರಹೊಮ್ಮುತ್ತವೆ. ಅಂತರಿಕ್ಷದ ನಿರ್ವಾತ ಪ್ರದೇಶದಲ್ಲಿ ಯಾವುದೇ ಅದೇತಡೆ ಇಲ್ಲದೆ ಎಲ್ಲಾ ಕಡೆ ಪಸರಿಸುವ ಆ ಕಿರಣಗಳನ್ನು ಹೀರಿಕೊಂಡು ಚಂದ್ರವೇಧಶಾಲೆ ಚಿತ್ರ ತೆಗೆಯುತ್ತದೆ. ತೀಕ್ಷ್ಣವಾದ ಎಕ್ಸ್ ಕಿರಣಗಳನ್ನು ಸೆರೆ ಹಿಡಿಯುವ ಚಂದ್ರ ದೂರದರ್ಶಕದ ಫಲಕಗಳನ್ನು ಅತಿ ನುಣುಪಾಗಿಯೂ ಮತ್ತು ಅತ್ಯಂತ ಬಲಿಷ್ಟವಾಗಿಯೂ ರಚಿಸಲಾಗಿದೆ. ಕೃತಕ ಚಂದ್ರನಿಂದ ಬಂದ ಚಿತ್ರಗಳನ್ನು ವಿಶ್ಲೇಷಿಸಿ ಎಕ್ಸ್ ರೇಗಳ ಮೂಲವನ್ನೂ ಮತ್ತು ಆ ಮೂಲದ ಸ್ವರೂಪವನ್ನೂ, ಅದರ ರಚನೆಯನ್ನೂ ಹಾಗೂ ಅದರಿಂದ ಸುತ್ತಲ ಆಕಾಶಕಾಯಗಳ ಮೇಲಾಗುವ ಗಾಢ ಪ್ರಭಾವವನ್ನೂ ವಿಜ್ಞಾನಿಗಳು ಪತ್ತೆ ಹಚ್ಚುತ್ತಾರೆ. ಈ ಚಂದ್ರನಿಂದ ಬಿತ್ತರವಾಗುವ ಚಿತ್ರಗಳ ಅಧ್ಯಯನಕ್ಕೆಂದೇ ನೂರಾರು ಯುವ ವಿಜ್ಞಾನಿಗಳು ಕಾದು ಕುಳಿತಿರುತ್ತಾರೆ.

ಈ ವರ್ಷವೊಂದರಲ್ಲೇ ಚಂದ್ರ ವೇಧಶಾಲೆ ಕಳಿಸಿದ ಚಿತ್ರಗಳ ಆಧಾರದ ಮೇಲೆ ವಿಜ್ಞಾನಿಗಳು ಕಲೆಹಾಕಿದ ಮಾಹಿತಿಗಳು ಬಹಳಷ್ಟು. ಅದರ ಬಗ್ಗೆ ತಿಳಿಯುವುದಕ್ಕಿಂತ ಮೊದಲು ಖಗೋಲಶಾಸ್ತ್ರದಲ್ಲಿ ಬಳಸುವ ಕೆಲವು ಶಬ್ದಗಳನ್ನು ನಾವು ಅರಿತುಕೊಳ್ಳೋಣ.

ಸೂರ್ಯ ಒಂದು ನಕ್ಷತ್ರ ತಾನೆ? ನಕ್ಷತ್ರಗಳ ಗುಂಪನ್ನು ಗೆಲಾಕ್ಸಿ ಎಂದು ಕರೆಯುತ್ತಾರೆ. ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಗೆಲಾಕ್ಸಿಗಳಿವೆ. ‘ಮಿಲ್ಕೀವೇ’ ಅಥವಾ ’ಕ್ಷೀರಪಥ’ ಅಂದರೆ ನಮ್ಮ ಸೂರ್ಯನೂ ಅಂದರೆ ನಾವೂ ಒಂದು ಭಾಗವಾಗಿರುವ ಗೆಲಾಕ್ಸಿ . ಕ್ಷೀರಪಥವೊಂದರಲ್ಲೇ ಇನ್ನೂರರಿಂದ ನಾನೂರು ಶತಕೋಟಿ ನಕ್ಷತ್ರಗಳಿವೆಯೆಂದರೆ ವಿಶ್ವದ ಅಗಾಧತೆಯನ್ನು ನಾವು ಕಲ್ಪಿಸಿಕೊಳ್ಳಬಹುದು. ಗೆಲಾಕ್ಸಿಗಳ ಸದಸ್ಯ ನಕ್ಷತ್ರಗಳ ನಡುವಿನ ಅನಿಲ, ಧೂಳುಗಳಿಂದ ತುಂಬಿ ಮೋಡ ಮುಸುಕಿದಂತೆ ಕಾಣುವ ರಚನೆಯನ್ನು ನೆಬ್ಯುಲಾ ಎನ್ನುತ್ತಾರೆ. ನಕ್ಷತ್ರಗಳು ತಮ್ಮ ಜೀವಿತಾವಧಿಯಲ್ಲಿ ಹಂತಹಂತವಾಗಿ ರೂಪಾಂತರಗೊಳ್ಳುತ್ತವೆ. ’ಸೂಪರನೋವಾ’ ಎಂಬುದು ತಾರೆಯೊಂದು ಸಿಡಿದು ಹೋಳಾಗುವ ಹಂತ. ಈ ಹಂತದಲ್ಲಿ ಅದು ಬಹು ದೊಡ್ಡಅಕಾರ ಪಡೆದು, ಪ್ರಕಾಶಮಾನವಾಗಿ ಉರಿದು, ಆ ನಂತರ ಸಿಡಿದು ಸುತ್ತಲ ಪ್ರದೇಶದಲ್ಲಿ ತಲ್ಲಣವೆಬ್ಬಿಸಿ ಅತಿ ವೇಗವಾಗಿ ತನ್ನ ಶಕ್ತಿಯನ್ನು ಹೊರಹಾಕುತ್ತದೆ. ಕಪ್ಪುಕುಳಿ ಅಥವಾ ಕಪ್ಪುರಂಧ್ರಗಳೆಂದರೆ ಬಳಿ ಬರುವ ವಸ್ತುಗಳೆಲ್ಲವನ್ನೂ (ಬೆಳಕನ್ನೂ ಸಹ)ತನ್ನ ಒಡಲೊಳಗೆ ಸೆಳೆದುಕೊಂಡುನುಂಗಿ ಹಾಕುವ ಅಂದರೆ ಗರಿಷ್ಟ ಗುರುತ್ವ ಆಕರ್ಷಣೆಯನ್ನು ಹೊಂದಿದ ಪ್ರದೇಶಗಳು. ವೈಟ್ ಡ್ವಾರ್ಫ್ ಅಥವಾ ಬಿಳಿಕುಬ್ಜಗಳೆಂದರೆ ಜೀವಿತಾವಧಿಯ ಅಂತಿಮ ಹಂತವನ್ನು ತಲುಪಿ, ಪ್ರಖರವಾದ ಬೆಳ್ಳಿ ಬೆಳಕನ್ನು ಮಿಂಚಿಸುವ ಪುಟ್ಟ ನಕ್ಷತ್ರಗಳು. ನ್ಯೂಟ್ರಾನ್ ನಕ್ಷತ್ರಗಳೆಂದರೆ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತಾ ಕೊನೆಗೊಮ್ಮೆ ಬರೀ ನ್ಯೂಟ್ರಾನ್ ಕಣಗಳನ್ನು ಮಾತ್ರ ಒಡಲೊಳಗೆ ತುಂಬಿಕೊಂಡ ಪುಟ್ಟ ನಕ್ಷತ್ರಗಳು. ಕಪ್ಪುದ್ರವ್ಯವೆಂದರೆ ಮಾನವ ಬರೀ ತಾರ್ಕಿಕ ಬುದ್ಧಿಯಿಂದ ಮಾತ್ರ ಪತ್ತೆ ಹಚ್ಚಿದ ಆದರೆ ಭೌತಿಕವಾಗಿ ಇನ್ನೂ ನಮಗೆಟುಕದ ದ್ರವ್ಯ.

ಇಲ್ಲಿವೆ ಚಂದ್ರ ವೇಧಶಾಲೆಯ ಕೆಲವೊಂದು ಅನ್ವೇಷಣೆಗಳು:

  • ೧೭ ಸಾವಿರ ಬೆಳಕಿನ ವರ್ಷಗಳಷ್ಟು ಹಳೆಯದಾದ ‘ಪಿಎಸ್‌ಆರ್ ಃ೧೫೦೯-೫೮’ ಹೆಸರಿನ ನ್ಯೂಟ್ರಾನ್ ನಕ್ಷತ್ರದ ಚಿತ್ರ ತೆಗೆದ ಮೊದಲ ದೂರದರ್ಶಕ ಚಂದ್ರ. ಇದು ವೇಗವಾಗಿ ಗಿರಕಿ ಹೊಡೆಯುತ್ತ ಶಕ್ತಿಯನ್ನು ಎಕ್ಸ್ ರೇಗಳಾಗಿ ಫೂತ್ಕರಿಸುತ್ತಿದೆ. ಆ ಅಬ್ಬರದಲ್ಲಿ ಕೈ ಆಕಾರದಂತೆ ಕಾಣಿಸುವ ಈ ನಕ್ಷತ್ರವನ್ನು ದೇವರ ಕೈ(ಅಥವಾ ಗಾಡ್ಸ್ ಓನ್ ಹ್ಯಾಂಡ್) ಎನ್ನಲಾಗುತ್ತಿದೆ.
  • ನ್ಯೂಟ್ರಾನ್ ನಕ್ಷತ್ರಗಳ ಅತಿ ವೇಗ ಹಾಗೂ ಅದರಿಂದಾಗಿ ಸುತ್ತಲ ಕೋಟಿಗಟ್ಟಲೆ ಮೈಲುಗಳ ಆಕಾಶದಲ್ಲಿ ಅವುಗಳ ಪ್ರಭಾವಲಯ ಇರುವುದೆಂದು ಏಡಿಯ ಆಕಾರದಲ್ಲಿರುವ ಕ್ರಾಬ್ ನೆಬ್ಯುಲಾ ಚಿತ್ರ ತೋರಿಸಿದೆ.
  • ಎ೧೬೮೯ ಈವರೆಗೆ ಕಂಡುಹಿಡಿಯಲಾದ ಗೆಲಾಕ್ಸಿಗಳಲ್ಲಿ ಅತಿ ದೊಡ್ಡದು. ಚಂದ್ರ ವೇಧಶಾಲೆ ಕಳುಹಿಸಿದ ಚಿತ್ರಗಳಿಂದಾಗಿ ಇಂಥ ದೊಡ್ಡ ಗೆಲಾಕ್ಸಿಗಳು ಚಿಕ್ಕ ಗೆಲಾಕ್ಸಿಗಳಿಂದ ಮಾಡಲ್ಪಟ್ಟಿವೆ ಎಂಬ ವಿಜ್ಞಾನಿಗಳ ಊಹೆಗೆ ಇಂಬು ಕೊಟ್ಟಂತಾಗಿದೆ.
  • ಹೆಸರಿನ ಪುಟ್ಟ ಗೆಲಾಕ್ಸಿಯೊಂದರ ನೆರಳನ್ನು ಎಂಬ ದೊಡ್ಡ ಗೆಲಾಕ್ಸಿಯ ನೆರಳಲ್ಲಿ ಹೂತಿದ್ದನ್ನು ಚಂದ್ರ ತೋರಿಸಿದೆ. ಬೃಹತ್ ಗೆಲಾಕ್ಸಿಗಳು ಚಿಕ್ಕ ಗೆಲಾಕ್ಸಿಗಳನ್ನು ನುಂಗಿಹಾಕುತ್ತಿವೆಯೆ ಎಂದು ತಜ್ಞರು ಅನುಮಾನಪಡುತ್ತಿದ್ದಾರೆ.
  • ಕಪ್ಪುರಂಧ್ರವೊಂದರ ಹೊರವಲಯದ ಬಿರುಸಾದ ವಾತಾವರಣದಲ್ಲಿ ಉದ್ಭವಿಸುತ್ತಿರುವ ಶಬ್ದದ ಅಲೆಗಳನ್ನು ಚಂದ್ರ ಗುರುತಿಸಿದೆ.
  • ಕೆಲವು ಗೆಲಾಕ್ಸಿಗಳಲ್ಲಿ ಸದಸ್ಯ ನಕ್ಷತ್ರಗಳ ನಡುವಿನ ಸ್ಥಳ ಬಿಸಿ ಅನಿಲಗಳಿಂದ ತುಂಬಿದ್ದು ಅವು ಎಕ್ಸ್ ರೇಗಳನ್ನು ಉಗುಳುತ್ತಿವೆ ಎಂದು ಚಂದ್ರನ ಚಿತ್ರಗಳು ತೋರಿಸಿವೆ.

ನಮ್ಮ ಇಂದ್ರಿಯಗಳಿಗೆ ನಿಲುಕುವ ಈ ಬ್ರಹ್ಮಾಂಡ ಸುಂದರವಾಗಿದೆ. ಆದರೆ ಎಕ್ಸ್ ರೇಗಳ ಬ್ರಹ್ಮಾಂಡ ಬಲು ತೀಕ್ಷ್ಣ ಹಾಗೂ ಅತಿ ಕ್ರೂರವಾದದ್ದು. ಅಲ್ಲಿ ಸದಾ ತಾರಾಸಮರಗಳು, ಬೆಳಕು, ಅನಿಲಗಳ ಫೂತ್ಕಾರಗಳು, ಕಪ್ಪು ಕುಳಿಗಳಿಂದ ಆಕ್ರಮಣಕ್ಕೊಳಗಾಗುವ ತಾರೆಗಳು, ಗೆಲಾಕ್ಸಿಗಳ ನಡುವಿನ ತಿಕ್ಕಾಟ, ನ್ಯೂಟ್ರಾನ್ ನಕ್ಷತ್ರಗಳ ಉದಯ ಹೀಗೆ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿರುತ್ತವೆ. ಚಂದ್ರವೇದಶಾಲೆಯಿಂದಾಗಿ ಅಲ್ಲಿ ನಡೆಯುವ ಶಕ್ತಿ ವಿನಿಮಯದ ಕುರಿತಾದ ಮಾನವನ ಅರಿವಿನ ಹರವು ಹಿಗ್ಗಿ ವಿಸ್ತಾರಗೊಳ್ಳುತ್ತಿದೆ.

ಚಂದ್ರ ವೇಧಶಾಲೆ ಬರಿಯ ಐದು ವರ್ಷಗಳು ಮಾತ್ರ ಸಮರ್ಥವಾಗಿ ಕಾರ್ಯವೆಸಗಬಹುದೆಂದು ನಂಬಲಾಗಿತ್ತು. ಈಗ ಐದು ವರ್ಷಗಳ ಹಿಂದೆ ನಾಸಾದ ವಿಜ್ಞಾನಿಗಳು ಅದರ ಆಯುಸ್ಸನ್ನು ಮತ್ತೆ ಹತ್ತು ವರ್ಷಗಳ ಕಾಲ ಮುಂದೂಡಿದ್ದಾರೆ ಮುಂದೊಂದು ದಿನ ಬಾಹ್ಯಾಕಾಶ ಕಸವೆನ್ನಿಸಿಕೊಳ್ಳಲಿರುವ ಈ ಕೃತಕ ಚಂದ್ರ ಈಗಂತೂ ಖಗೋಲ ವಿಜ್ಞಾನಿಗಳ ಬಾಹ್ಯಾಕಾಶ ಎಕ್ಸ್ ರೇ ಕಣ್ಣಾಗಿದ್ದಾನೆ. ೨೦೨೦ರಲ್ಲಿ ಈ ಕೃತಕ ಚಂದ್ರನ ಹೊಣೆಯನ್ನು ವಹಿಸಿಕೊಳ್ಳಲೆಂದು ’ಅಂತಾರಾಷ್ಟ್ರೀಯ ಎಕ್ಸ್ ರೇ ವೇಧಶಾಲೆ’ ಉಡಾವಣೆಗೊಳ್ಳಲಿದೆ.