ಸೃಷ್ಟಿಶೀಲತೆ ಎಂಬುದು ಮಾನವನ ನಾಗರಿಕತೆ, ಸಂಸ್ಕೃತಿ ಹಾಗೂ ಒಟ್ಟು ಬಾಳ್ವೆಯ ತಳಹದಿ. ಬೆಂಕಿಯ ಉಗಮ, ಚಕ್ರ, ಯಂತ್ರ, ಭಾಷೆ, ಲಿಪಿ, ಕಂಪ್ಯೂಟರ್ ಆವಿಷ್ಕಾರಗಳೆಲ್ಲ ಮನುಷ್ಯನ ವಿಕಸನಶೀಲ ಸೃಜನಶೀಲತೆಗೆ ಸಾಕ್ಷಿ. ಮನುಷ್ಯ ಪ್ರಯೋಗಶೀಲನಾಗಿ ಒಂದೊಂದನ್ನೂ ಆವಿಷ್ಕಾರಮಾಡುತ್ತ ಹೋದಂತೆ ಬದುಕು ಹೊಸತನಕ್ಕೆ ತೆರೆದುಕೊಂಡಿತು, ಸುಗಮವಾಯಿತು.

ಸಾಮಾನ್ಯವಾಗಿ ಜನರಲ್ಲಿರುವ ತಪ್ಪು ಕಲ್ಪನೆಯೆಂದರೆ ಕವಿ, ಕಲಾವಿದ, ಸಾಹಿತಿಗಳು ಮಾತ್ರ ಸೃಜನಶೀಲರು; ತಾವು ಸೃಜನಶೀಲರಲ್ಲ. ನಿಜವೆಂದರೆ ಒಂದು ಸುಂದರ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಚಮ್ಮಾರ, ಕಮ್ಮಾರ, ಬಡಗಿ, ಮಾಲೆಗಾರ, ಜಾಡಮಾಲಿ ಇವರೆಲ್ಲರೂ ಅಗತ್ಯ. ಇವರೆಲ್ಲರೂ ಮಾನವತಾವಾದಿ ಮನೋವಿಜ್ಞಾನದ ದೃಷ್ಟಿಯಲ್ಲಿ ಸೃಜನಶೀಲರೇ. ಎಂ.ಎಫ್‌. ಹುಸೇನರು ಮಾತ್ರವೇ ಕಲಾವಿದರಲ್ಲ. ಸಂಪ್ರದಾಯದ ಮನೆಗಳಲ್ಲಿ ಬೆಳಗ್ಗೆ ಎದ್ದೊಡನೆ ಮನೆಯ ಮುಂದೆ ರಂಗೋಲಿ ಬಿಡಿಸುವ ಮಹಿಳೆಯೂ ಸೃಜನಶೀಲಳೆ. ರುಚಿರುಚಿಯಾದ ಸಾರುಮಾಡುವುದೂ ಸೃಜನಶೀಲ ಕ್ರಿಯೆ. ಬೀದಿಬದಿಯ ಕುರುಡಿ ಗಾಯಕಿಯೂ ಕಲಾವಿದೆಯೇ. ಲತಾ ಮಂಗೇಶ್ಕರ್ ಕೂಡ ಕಲಾವಿದೆಯೇ. ಇವರಿಬ್ಬರೂ ಸೃಜನಶೀಲರೇ. ಆದರೆ ಸೃಜನಶೀಲತೆಯ ಪ್ರಮಾಣದಲ್ಲಿ, ತೀವ್ರತೆಯಲ್ಲಿ ಹಾಗೂ ಅದರ ಗುಣದಲ್ಲಿ ವ್ಯತ್ಯಾಸಗಳಿರುತ್ತವೆ.

ಸೃಜನಶೀಲತೆಯನ್ನು ಭಾರತೀಯ ಕಾವ್ಯಮೀಮಾಂಸಕರು, ಆಧುನಿಕ ಮನೋವಿಜ್ಞಾನಿಗಳು ವಿವಿಧ ಬಗೆಗಳಲ್ಲಿ ಕಂಡರಿಸಿದ್ದಾರೆ. ‘ಅಪೂರ್ವ ವಸ್ತುನಿರ್ಮಾಣ ಕ್ಷಮತಾ’, ‘ಪ್ರತಿಭಾ ನವನವೋನ್ಮೇಷ ಶಾಲಿನಿ’, ‘ನವೋ ನವೋ ಭವತಿ ಜಾಯಮಾನಃ ’, ಬಹುಮುಖ ಚಿಂತನ, ಸಮಸ್ಯಾ ಪರಿಹಾರಶಕ್ತಿ, ಆಲೋಚನಾ ನಿರರ್ಗಳತೆ, ಪಾರ್ಶ್ವಚಿಂತನ, ಸ್ವಂತಿಕೆ, ಸ್ವೋಪಜ್ಞತೆ, ಅನನ್ಯತೆ, ಹೊಸತನದ ಹುಡುಕಾಟ, ವಿನೂತನ ನೋಟ ಮಾಟ ಎಂದು ಬಗೆಬಗೆಯಾಗಿ ಸೃಜನಶೀಲತೆಯನ್ನು ಬಣ್ಣಿಸಲಾಗಿದೆ. ಎಷ್ಟು ಮಂದಿಯೋ ಅಷ್ಟು ವ್ಯಾಖ್ಯೆಗಳು, ಕುರುಡರು ಆನೆಯನ್ನು ಮುಟ್ಟಿ ಹೇಳಿದ ಹಾಗೆ.

ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ಶಿಕ್ಷಕರು ಮತ್ತು ರಕ್ಷಕರು ಮಾಡುವ ದೊಡ್ಡ ತಪ್ಪೆಂದರೆ ಬುದ್ಧಿಶಕ್ತಿ ಹಾಗೂ ಸೃಜನಶೀಲತೆಯನ್ನು ಸಮೀಕರಿಸುವುದು ಅಥವಾ ಬುದ್ಧಿಶಕ್ತಿಯನ್ನು ಎತ್ತರದ ಪೀಠದಲ್ಲಿ ಕುಳ್ಳಿರಿಸಿ ಸೃಜನಶೀಲತೆಯನ್ನು ಹೊರಬಾಗಿಲಲ್ಲೇ ಆಚೆ ತರುಬುವುದು. ನಾವು ತಿಳಿಯಬೇಕಾದ ಮಾತೆಂದರೆ ಸೃಜನಶೀಲತೆ ಹಾಗೂ ಬುದ್ಧಿಶಕ್ತಿ ಎರಡೂ ಒಂದೇ ಅಲ್ಲ; ಭಿನ್ನ ಭಿನ್ನ ಸಾಮರ್ಥ್ಯಗಳು. ಅತಿ ಬುದ್ಧಿವಂತರಲ್ಲಿ ಸೃಜನಾತ್ಮಕತೆಯ ಪ್ರಮಾಣ ಕಡಿಮೆ. ಸೃಜನಶೀಲರ‍ಲ್ಲಿ ತಕ್ಕಮಟ್ಟಿನ ಬುದ್ಧಿಶಕ್ತಿ ಇದ್ದೇ ಇರುತ್ತದೆ ಎಂಬುದನ್ನು ಮನೋವಿಜ್ಞಾನಿಗಳು ಪ್ರಯೋಗಮುಖೇನ ಕಂಡುಕೊಂಡಿದ್ದಾರೆ. ಹೀಗಾಗಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದವರು, ರ‍್ಯಾಂಕ್‌ ಗಳಿಸಿದವರು ಸೃಜನಶೀಲರಾಗಿರಬೇಕಾಗಿಲ್ಲ. ಪ್ರಶ್ನೆ ಎಂದರೆ ಇವರೆಲ್ಲ ಎಲ್ಲಿಗೆ ಹೋಗಿದ್ದಾರೆ? ಏನು ಸೃಷ್ಟಿಸಿದ್ದಾರೆ? ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ?

ಸೃಜನಶೀಲ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ತೆಗೆಯದಿರಬಹುದು; ರ‍್ಯಾಂಕ್‌ ಗಳಿಸದಿರಬಹುದು. ಆದರೆ ಅವರು ಪ್ರಯೋಗಶೀಲರೂ ಆವಿಷ್ಕಾರಪ್ರಿಯರೂ ಹೊಸತನದ ಹರಿಕಾರರೂ ಆಗಿರುತ್ತಾರೆ. ಅವರ ಕೊಡುಗೆಗಳಿಂದ ಇಂದಲ್ಲ ನಾಳೆ ಸಮಾಜಕ್ಕೆ ಒಳಿತಾಗುತ್ತದೆ. ಬ್ರಿಟನ್‌ನಲ್ಲಿ ಯಾವನೋ ಒಬ್ಬ ವಿಜ್ಞಾನಿ ಏನನ್ನೋ ಸಂಶೋಧಿಸಿದಾಗ ರಾಜ ಕೇಳಿದನಂತೆ: ‘ಇದರಿಂದ ನಮಗೇನು ಪ್ರಯೋಜನ?’ ಥಟ್ಟನೆ ವಿಜ್ಞಾನಿ ಉತ್ತರಿಸಿದ: ‘ಪ್ರಭು, ನೀವು ಜನರ ಮೇಲೆ ತೆರಿಗೆ ವಿಧಿಸಬಹುದು’.

ಪ್ರಸಿದ್ಧ ವಿಜ್ಞಾನಿ ಥಾಮಸ್‌ ಆಲ್ವ ಎಡಿಸನ್‌ ಶಾಲೆಯಲ್ಲಿ ಓದುತ್ತಿದ್ದಾಗ ಅವನು ಶಿಕ್ಷಕರ ಪಾಲಿಗೆ ದಡ್ಡನಾಗಿದ್ದ. ಒಂದು ಸಲ ಅವನ ತಾಯಿ ಶಾಲೆಗೆ ಬಂದು ತನ್ನ ಮಗನನ್ನು ‘ದಡ್ಡ’ನೆಂದು ಬೈದದ್ದಕ್ಕಾಗಿ ಶಿಕ್ಷಕನನ್ನು ಚೆನ್ನಗಿ ತರಾಟೆಗೆ ತೆಗೆದುಕೊಂಡು ಹೀಗೆ ಹೇಳಲುತ್ತಾಳೆ: “My son is not addled. You are addled. One dAy the world will hear of him”- ನನ್ನ ಮಗ ದಡ್ಡನಲ್ಲ. ದಡ್ಡ ನೀನು. ಮುಂದೊಂದು ದಿನ ಜಗತ್ತಿನಲ್ಲಿ ನನ್ನ ಮಗನದ್ದೇ ಸುದ್ದಿ (ನಿನ್ನನ್ನು ಯಾರು ಕೇಳುತ್ತಾರೆ). ಆ ತಾಯಿಯ ಮಾತು ಎಷ್ಟು ನಿಜವಾಯಿತು? ಶಿಕ್ಷಕ ಎಡಿಸನ್‌ನನ್ನು ಅಂಕಗಳ ನೆಲೆಯಲ್ಲಿ ಅಳೆದು ಸುರಿದು ತೀರ್ಪುನೀಡಿದ. ಆದರೆ ಆ ತಾಯಿ ಆತನ ವಿಶಿಷ್ಟ ಚಿಂತನಕ್ರಮವನ್ನು ಸನಿಹದಿಂದ ಕಂಡು ಭರವಸೆ ತಳೆದಳು.

ನಮ್ಮ ಶಿಕ್ಷಣವ್ಯವಸ್ಥೆ ದಿನಹೋದಂತೆಸೃಜನಶೀಲವಾಗುವ ಬದಲು ಜಡವಾಗುತ್ತಿದೆ. ಹೆಣವಾಗುತ್ತಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಇಂದು ಅಂಕಗಳು, ಫಲಿತಾಂಶಗಳು, ಶೇಕಡಾವಾರು ಮುಖ್ಯವಾಗಿವೆ. ಕಡಿಮೆ ಅಂಕ ಗಳಿಸುವವರು, ಹಾಡುವವರು, ಕವಿತೆ ಬರೆಯುವವರು, ಓಡುವವರು, ಹಾರುವವರು ನಿರುಪಯುಕ್ತರು. ಈ ಎಲ್ಲ ಚಟುವಟಕೆಗಳಿಂದ ಏನಾದರೂ ಪ್ರತಿಫಲವಿದೆಯೋ, ಬಹುಮಾನ-ಪ್ರಶಸ್ತಿ-ಪುರಸ್ಕಾರ ದೊರೆಯುವುದೋ ಆಗ ಎಲ್ಲರಿಗೂ ಬೇಕು; ಪರೀಕ್ಷೆಗೆ ಹೊರತಾದ ಫಲರೂಪದಲ್ಲಿ ಕಾಣಿಸಿಕೊಳ್ಳದ ಯಾವ ಚಟುವಟಿಕಲೆಯೂ ಯಾರಿಗೂ ಬೇಡ!

ನಮ್ಮ ಶಾಲಾಶಿಕ್ಷಣ ಶುಷ್ಕ ಕಂಠಪಾಠ, ಯಾಂತ್ರಿಕ ಕಲಿಕೆ, ಯಶಸ್ಸು ಹಾಗೂ ಫಲಿತಾಂಶಕ್ಕೆ ಕೊಡುವಷ್ಟು ಗಮನವನ್ನು ಸೃಜನಶೀಲತೆಯ ವಿಕಾಸಕ್ಕೆ ನೀಡುತ್ತಿಲ್ಲ. ಇಂದು ನಾವು ಗೆಲ್ಲುವ ಕುದುರೆಗಳನ್ನು, ಭಾರಹೊರುವ ಹೇಸರಗತ್ತೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಅದಕ್ಕೆಂದೇ ಅಲೆಕ್ಸ್‌ ಕರೋಲ್‌ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾರ್ಮಿಕವಾದ ಮಾತನಾಡಿದ್ದಾನೆ: “ಪ್ರತಿಯೊಂದು ನವಜಾತಶಿಶುವೂ ಪ್ರತಿಭಾ ಸಂಪನ್ನನೇ. ಆದರೆ ಶಾಲೆಯು ಆತನನ್ನು ಮೂರ್ಖನನ್ನಾಗಿಸುತ್ತದೆ.” ಪ್ರಖ್ಯಾತ ಚಿತ್ರಕಲಾವಿದ ಪಾಬ್ಲೊ ಪಿಕಾಸೊ ಕೂಡ ಇಂಥದ್ದೇ ಮಾತುಗಳನ್ನು ಹೇಳಿದ್ದಾನೆ: “ಪ್ರತಿಯೊಂದು ಮಗುವೂ ಕಲಾವಿದನೇ. ಆದರೆ ಮಗು ಬೆಳೆಯುತ ಹೋದಂತೆ ಕಲಾವಿದನಾಗಿ ಉಳಿಯುವ ಬಗೆ ಹೇಗೆ ಎಂಬುದೇ ಸಮಸ್ಯೆ.”

ನಮ್ಮ ಸಾಂಪ್ರದಾಯಿಕ ಸಮಾಜ ಹಾಗೂ ಕುಟುಂಬ ವ್ಯವಸ್ಥೆ ಮಕ್ಕಳ ಜೊತೆ ನಿಷೇಧ ರೂಪದಲ್ಲಿ ಮಾತಾಡುತ್ತದೆ; ‘ಹಾರಬೇಡ, ಓಡಬೇಡ, ಬೀಳಬೇಡ,ಮರಹತ್ತಬೇಡ, ತಂಟೆಮಾಡಬೇಡ, ಹರಿಯಬೇಡ, ಕತ್ತರಿಸಬೇಡ’ ಎಲ್ಲ ಬೇಡ ಬೇಡ ಬೇಡ. “ನಿನಗೆ ಸಂತೋಷವಾಗುವುದಾದರೆ ಇದನ್ನು ಮಾಡು” ಎಂದು ಹೇಳುವ ತಂದೆ ತಾಯಿಗಳು ಬಲುವಿರಳ. ಇಂಥ ಸಮಾಜದಲ್ಲಿ ಸೃಜನಶೀಲತೆ ಅರಳುವುದಾದರೂ ಹೇಗೆ?

ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ‘ಪ್ರೋತ್ಸಾಹದ ನಡುವೆ ಬೆಳೆಯುವ ಮಗು ಆತ್ಮವಿಶ್ವಾಸವನ್ನು ಕಲಿಯುತ್ತದೆ.’ ಆದುದರಿಂದ ನಮ್ಮ ಕುಟುಂಬಗಳಲ್ಲಿ ತಾಯ್ತಂದೆಗಳು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ನೀರೆರೆದು ಪೋಷಿಸಬೇಕು. ಬೇರೆ ಬೇರೆ ಕ್ರಮಗಳ ಮೂಲಕ ಇದು ಸಾಧ್ಯ.

. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಮುಕ್ತ ಅವಕಾಶವಿರಲಿ

ಪ್ರಶ್ನೆಗಳು ಕುತೂಹಲದ ಸಲಕರಣೆಗಳು. ಮಕ್ಕಳು ತಮ್ಮ ಸುತ್ತಲಿನ ಪ್ರಪಂಚವನ್ನು ತಿಳಿದುಕೊಳ್ಳಲು ಹತ್ತು ಹಲವು ಬಗೆಗಳಲ್ಲಿ ಹಿರಿಯರನ್ನು ಪ್ರಶ್ನಿಸುತ್ತಾರೆ. ಹಿರಿಯರ ಬುದ್ಧಿಶಕ್ತಿಯನ್ನು ಪರೀಕ್ಷಿಸಲು ಮಕ್ಕಳು ಪ್ರಶ್ನೆ ಕೇಳುವುದಿಲ್ಲ. ಉದ್ಧಟತನದಿಂದ ಪ್ರಶ್ನಿಸುವುದಿಲ್ಲ. ಬದಲಾಗಿ ಇದೇನಿದು? ಇದು ನನಗೆ ತಿಳಿಯಬೇಕು ಎಂಬ ಕಾರಣಕ್ಕೆ ತಮ್ಮ ಜ್ಞಾನವಿಕಾಸದ ದೃಷ್ಟಿಯಿಂದ ಪ್ರಶ್ನೆ ಕೇಳುತ್ತಾರೆ. ಮಕ್ಕಳ ಪ್ರಶ್ನೆಯ ಹಿಂದಿರುವ ಉದ್ದೇಶಗಳನ್ನು ಹಿರಿಯರು ಗ್ರಹಿಸಬೇಕು. ರುಡ್‌ಯಾರ್ಡ್ ಕಿಪ್ಲಿಂಗ್‌ ಎಂಬ ಲೇಖಕ ಹೇಳುತ್ತಾನೆ: “ನನ್ನ ಬಳಿಯಲ್ಲಿ ಆರು ಮಂದಿ ಸೇವಕರಿದ್ದಾರೆ. ಏನು? ಯಾರು? ಏಕೆ? ಹೇಗೆ? ಎಲ್ಲಿ? ಯಾವಾಗ?” ಇವರೇ ಆತನ ಸೇವಕರು. ಈ ಪ್ರಶ್ನೆಗಳೇ ವಿಜ್ಞಾನದ ತಳಹದಿ. ಶೋಧನೆಯೇ ವಿಜ್ಞಾನದ ತಾಯಿಬೇರು ಇಂಥ ಪ್ರಶ್ನೆಗಳ ಮೂಲಕ ಮಗು ವಿದ್ಯಮಾನಗಳನ್ನು, ಘಟನೆಗಳನ್ನು, ವ್ಯಕ್ತಿಗಳನ್ನು ತಿಳಿದುಕೊಂಡು ಪ್ರತಿಸ್ಪಂದಿಸಲು ಬಯಸುತ್ತದೆ. ಹೀಗಿರುವಾಗ ಮಕ್ಕಳ ಇಂಥ ಪ್ರಶ್ನೆಗಳಿಗೆ ಮನೆಗಳಲ್ಲಿ ಶಾಲೆಗಳಲ್ಲಿ ಮುಕ್ತ ಅವಕಾಶ ನೀಡಬೇಕು.ಕೆಲವೊಮ್ಮೆ ಮಕ್ಕಳು ಕೇಳುವ ಪ್ರಶ್ನೆಗಳು ವಿಚಿತ್ರವೂ ಮುಜುಗರಕರವೂ ಆಗಿರುತ್ತವೆ. ನನ್ನ ಮಗಳು ಚಿಕ್ಕಪ್ರಾಯದಲ್ಲಿ ಕೇಳಿದ ಪ್ರಶ್ನೆ. “ಅಮ್ಮಾ, ಟಿ.ವಿ.ಯಲ್ಲಿ ತೋರಿಸುವ ‘ಕೊಟೆಕ್ಸ್‌’ ಅಂದರೇನು?” ವಿಸ್ಮಯ, ತಿಳಿಯುವ ಕುತೂಹಲ ಪ್ರಶ್ನೆಗಳಲ್ಲಿದೆ.

ಆದರೆ ನಾವು ಹಿರಿಯರು ಹಾಗೂ ಶಿಕ್ಷಕರು ಇಂಥ ಪ್ರಶ್ನೆಗಳನ್ನು ತಲೆಮೊಟಕಿ ಬಿಡುತ್ತೇವೆ. “ಅಧಿಕಪ್ರಸಂಗಿ, ಮುಚ್ಚುಬಾಯಿ, ಚೋಟುದ್ದ ಇಲ್ಲ. ಬಾಯಿಗೆ ಬಂದದ್ದು ಕೇಳ್ತಾನೆ” ಅಂತ ಬೈಯುತ್ತೇವೆ. “ನನಗೆ ಪುರುಸೊತ್ತಿಲ್ಲ. ಹೋಗು ಆಡಿಕೊ” ಎನ್ನುತ್ತೇವೆ. ಇಲ್ಲಾಂದ್ರೆ “ಅದೆಲ್ಲ ದೇವರಲೀಲೆ. ನಿನಗೆ ಅರ್ಥವಾಗುವುದಿಲ್ಲ” ಎಂದು ಕುತೂಹಲದ ಬೇರನ್ನೇ ಕತ್ತರಿಸುತ್ತೇವೆ.

ಶಾಲೆಗಳಲ್ಲಿ ಮಕ್ಕಳು ಏನಾದರೂ ಪ್ರಶ್ನೆ ಕೇಳಿದರೆ “ತಲೆಹರಟೆ, ಏನು ನೀನು ನನ್ನನ್ನು ಪರೀಕ್ಷೆ ಮಾಡ್ತೀಯಾ” ಅಂತ ಶಿಕ್ಷಕರು ಗದರಿಸುತ್ತಾರೆ ಅಥವಾ “ಅದೆಲ್ಲ ಪರೀಕ್ಷೆಗೆ ಬರುವುದಿಲ್ಲ, ಸುಮ್ಮನಿರು” ಎಂಬ ಸಬೂಬು ಹೇಳುತ್ತಾರೆ. ಪದೇ ಪದೇ ಪ್ರಶ್ನೆ ಕೇಳುವ ಮಗುವಿಗೆ ‘ಅಧಿಕಪ್ರಸಂಗಿ’, ‘ತಲೆಹರಟೆ’ ಎಂಬ ಹಣೆಪಟ್ಟಿ ಹಚ್ಚುತ್ತಾರೆ. ನಮ್ಮ ಶಾಲೆಗಳಲ್ಲಿ ಈಗಲೂ ವಿಜ್ಞಾನಿ ಲೂಯಿಪಾಶ್ಚರ್ ನ ಶಿಕ್ಷಕನ ಸಂತತಿಯವರಿದ್ದಾರೆ! ಲೂಯಿ ಪಾಶ್ಚರ್ ತನ್ನ ಶಿಕ್ಷಕರನ್ನು ಪ್ರಶ್ನಿಸುತ್ತಿದ್ದನಂತೆ. ಆಗ ಓರ್ವ ಶಿಕ್ಷಕರು “ಶಿಕ್ಷಕರನ್ನು ಪ್ರಶ್ನಿಸುವ ಅಧಿಕಾರ ನಿನಗಿಲ್ಲ. ಶಿಕ್ಷಕನು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಯಾಗಿ ಉತ್ತರ ಕೊಡುವುದಷ್ಟೇ ನಿನ್ನ ಕೆಲಸ” ಎಂದನಂತೆ. ಬಹುಮಾಧ್ಯಮಗಳಿಂದ ಮಾಹಿತಿ ಸಂಗ್ರಹಿಸಿ ಚುರುಕಾಗುತ್ತಿರುವ ಮಕ್ಕಳ ಮುಂದೆ ಈಗಲೂ ಹೀಗೆ ಹೇಳುವ ಶಿಕ್ಷಕರಿದ್ದಾರೆ!

ನನ್ನ ಪತ್ರಕರ್ತ ಗೆಳೆಯರೊಬ್ಬರು ಒಂದು ಸಂಜೆ ಪುಸ್ತಕದ ಅಂಗಡಿಯಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದರು. “ಏನು ಹುಡುಕುತ್ತಿದ್ದೀರಿ?” ಎಂದು ಕೇಳಿದೆ. “ಕಾಮನಬಿಲ್ಲು ಮೂಡುವುದು ಹೇಗೆ?” ಎಂಬ ಬಗ್ಗೆ ಪುಸ್ತಕ ಹುಡುಕುತ್ತಿದ್ದೇನೆ. ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ನೀವು ಇಷ್ಟೊಂದು ಲೇಖನಗಳನ್ನು ಬರೆಯುತ್ತೀರಿ. ಆದರೆ ನಮ್ಮ ಶಾಲೆಯ ಸ್ಥಿತಿ ನೋಡಿ. ಇವತ್ತು ನನ್ನ ಮಗ ತರಗತಿಯಲ್ಲಿ ಶಿಕ್ಷಕಿಗೆ ‘ಕಾಮನಬಿಲ್ಲು ಮೂಡುವುದು ಹೇಗೆ?’ ಎಂದು ಪ್ರಶ್ನೆ ಕೇಳಿದ. ಆದರೆ ಶಿಕ್ಷಕಿ ‘ಅದೆಲ್ಲಲ ಯಾಕೆ ನಿನಗೆ? ಪಾಠದಲ್ಲಿ ಇಲ್ಲದ ವಿಷಯ ಪ್ರಶ್ನೆ ಕೇಳಬೇಡ’ ಎಂದು ದಬಾಯಿಸಿದರಂತೆ. ಮನೆಗೆ ಬಂದು ನನಗೆ ದುಂಬಾಲು ಬಿದ್ದ. ಅದಕ್ಕಾಗಿ ಈಗ ಪುಸ್ತಕ ಹುಡುಕುತ್ತಿದ್ದೀನಿ” ಅಂದರು. ಹೀಗೆ ಮನೆಯಲ್ಲಿ, ಶಾಲೆಯಲ್ಲಿ ಹಿರಿಯರಿಂದ-ಶಿಕ್ಷಕರಿಂದ ದಬಾಯಿಸಿಕೊಂಡ ಅನೇಕ ಮಕ್ಕಳು ವಿದ್ಯಾಭ್ಯಾಸದ ಮುಂದಿನ ಹಂತಗಳಲ್ಲಿ ಬಾಯೇ ಬಿಡುವುದಿಲ್ಲ. ಪ್ರಶ್ನೆ ಕೇಳಿದರೆ ಏನು ಆಪತ್ತು ಎರಗುವುದೋ ಎಂದು ಮೂಕ ಸಂಸ್ಕೃತಿಗೆ ಶರಣುಹೋಗುತ್ತಾರೆ. ತಪ್ಪು-ಸರಿ, ಒಳಿತು-ಕೆಡುಕು, ತಾರ್ಕಿಕ-ಅತಾರ್ಕಿಕ, ಬಾಲಿಶ-ಪ್ರೌಢ ಎಂಬ ಪರಿಭೇದಗಳಿಲ್ಲದೆ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸಿದರೆ ಅವರು ನಾಳೆ ವಿಜ್ಞಾನಿಗಳಾಗಿ, ಕವಿ , ಕಲಾವಿದರಾಗಿ, ಸಮಾಜ ಸುಧಾರಕರಾಗಿ ವಿಕಸನಗೊಳ್ಳಲು ಸಾಧ್ಯ; ಏನಲ್ಲದಿದ್ದರೂ ಈ ಸಮಾಜವ್ಯವಸ್ಥೆಯ ಓರೆಕೋರೆಗಳನ್ನು ಪ್ರಶ್ನಿಸುವ ಒಳಗಿನ ವಿಮರ್ಶಕರಾಗಿ ನಮ್ಮ ಸಾಕ್ಷಿ ಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಿಲ್ಲವೆ?

. ಸ್ವಯಂ ಅಭಿವ್ಯಕ್ತಿಗೆ ಅವಕಾಶವಿರಲಿ

ಮಕ್ಕಳು ಒಂದೆಡೆ ಸುಮ್ಮನೆ ಕೂರುವವರಲ್ಲ. ಅವರು ಉತ್ಸಾಹದ ಬುಗ್ಗೆಗಳು. ಆಟ, ಓಟ, ಮಾತು, ನಗೆ ಸದಾ ಅವರ ಒಡನಾಡಿ. ಏನಾದರೂ ಹೇಳುತ್ತಲೇ ಇರಬೇಕು; ಏನಾದರೂ ಮಾಡುತ್ತಲೇ ಇರಬೇಕು. ಅಂದರೆ ಮಕ್ಕಳು ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳಲು ಬಯಸುತ್ತಾರೆ. ಇಂಥ ಸಹಜ ಅಭಿವ್ಯಕ್ತಿಗೆ ಹೆಚ್ಚಿನ ಪ್ರೋತ್ಸಾಹ ಮನೆಯಲ್ಲಿ ಶಾಲೆಯಲ್ಲಿ ದೊರೆಯಬೇಕು. ಆಗ ಸೃಜನಶೀಲತೆಯನ್ನು ಗುರುತಿಸಿ ಪೋಷಿಸಲು ಸಾಧ್ಯ. ಆದರೆ ನಮ್ಮ ಮನೆಗಳಲ್ಲಿ ‘ಮಾತಾಡಬೇಡ, ದೇವರ ಹಾಗೆ ಕೂತಿರು’ ಎಂದು ತಂದೆತಾಯಿಗಳು ಗದರುತ್ತಾರೆ. ಅದನ್ನು ಮುಟ್ಟಬೇಡ, ಇದನ್ನು ಒಡೆಯಬೇಡ, ಹಾರಬೇಡ, ಮರಹತ್ತಬೇಡ ಎಂದು ಪದೇ ಪದೇ ಕಣ್ನಿಟ್ಟು ಹೆದರಿಸುತ್ತಾರೆ; ಬೆದರಿಸುತ್ತಾರೆ. ಇದರಿಂದಾಗಿ ಅಭಿವ್ಯಕ್ತಿ ಮುರುಟಿಹೋಗುತ್ತದೆ. ಮಾತನಾಡಲು ಅವಕಾಶಗಳಿಲ್ಲದ ಮಗು ಇನ್ನೇನೋ ಹಾಳು ಕೆಲಸಮಾಡಿ ಬೈಸಿಕೊಳ್ಳುತ್ತದೆ.

ಶಾಲೆಯಲ್ಲಾದರೋ ‘ಕೈಕಟ್ಟು ಬಾಯಿಮುಚ್ಚು’ ಸಂಸ್ಕೃತಿ. ಶಿಕ್ಷಕರು ಕೆಲವರು ಬೆತ್ತಹಿಡಿದೇ ತರಗತಿಗೆ ಬರುವುದು. ತಾವು ಕೇಳಿದ್ದಕ್ಕೆ ಮಾತ್ರವೇ ಮಕ್ಕಳು ಉತ್ತರ ಹೇಳಬೇಕು. ಅವರಿಗೂ ಹೇಳಲಿಕ್ಕೆ ಇರುತ್ತದೆ ಎಂಬುದನ್ನು ಅವರು ಗಮನಿಸುವುದೇ ಇಲ್ಲ. ಕೆಲವು ಶಾಲೆಗಳವರಿಗೆ ಪಾಠ ಪರೀಕ್ಷೆ ಫಲಿತಾಂಶ ಮಾತ್ರ ಮುಖ್ಯ. ಅಲ್ಲಿ ಬೇರಾವ ಸಹಪಠ್ಯ ಚಟುವಟಿಕೆಗಳಿಗೂ ಎಡೆಯಿಲ್ಲ. ಈ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮಕ್ಕಳು ಫೈಲಾಗುತ್ತಾರೆ. ಅದರಿಂದ ನಮ್ಮ ಸಂಸ್ಥೆಯ ಪ್ರತಿಷ್ಠೆಗೆ ಭಂಗಬರುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಸಹಪಠ್ಯ ಚಟುವಟಿಕೆಗಳಿಲ್ಲದ ಶಾಲೆಗಳು ಸ್ಮಶಾನಕ್ಕೆ ಸಮ. ಇಂಥ ಶಾಲೆಗಳು ಮಕ್ಕಳನ್ನು ಜಡೆಗೊಳಿಸುತ್ತವೆ. ಯಾವ ಶಾಲೆಗಳಲ್ಲಿ ವೈವಿಧ್ಯಮಯ ಸಹಪಠ್ಯ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿವೆಯೋ ಅಂಥ ಶಾಲೆಯ ಮಕ್ಕಳು ಫಲಿತಾಂಶದ ದೃಷ್ಟಿಯಿಂದ ಸ್ವಲ್ಪ ಹಿಂದೆ ಎಂಬ ಭಾವನೆ ಬಂದರೂ ಜೀವನರಂಗದಲ್ಲಿ ಅವರು ಸದಾ ಮುಂದೆ. ಯಾವ ಸನ್ನಿವೇಶವನ್ನೂ ಅವರು ಎದುರಿಸಬಲ್ಲರು. ಸಹಪಠ್ಯ ಚಟುವಟಿಕೆಗಳು ಆ ರೀತಿಯ ಸಿದ್ಧತೆಯನ್ನು ಮಕ್ಕಳ ಮನಸ್ಸಿಗೆ ಒದಗಿಸುತ್ತವೆ ಎಂಬುದನ್ನು ಮರೆಯಬಾರದು.

ಮನೆಗಳು ಹೇಗೆ ಮಕ್ಕಳ ಸಹಜಾಭಿವ್ಯಕ್ತಿಯನ್ನು ಮುರುಟಿಸುತ್ತವೆ ಎಂಬುದಕ್ಕೆ ನನ್ನ ಸ್ನೇಹಿತ ರಂಗಕರ್ಮಿಯೊಬ್ಬರು ನೀಡಿದ ನಿದರ್ಶನ ಇಲ್ಲಿದೆ. ಅವರೊಮ್ಮೆ ತಮ್ಮ ಪರಿಚಿತರೊಬ್ಬರ ಮನೆಗೆ ಹೋದಾಗ ಮಗು ಹೊರಗೆ ಅಂಗಳದಲ್ಲಿ ಆಡುತ್ತಿತ್ತು. ಚಹಾ ಚೆಲ್ಲಿತ್ತು. ಆ ಚೆಲ್ಲಿದ ಚಹಾವನ್ನು ಮಗು ಪಚ ಪಚ ತಟ್ಟುತ್ತಿತ್ತು. ಇಳಿಯುತ್ತಿರುವ ಚಹಾದಿಮದ ಕೊಂಬು, ಬಾಲದ ಆಕೃತಿ ಮಾಡುತ್ತಿತ್ತು” “ಏನು ಮಾಡುತ್ತಿದ್ದೀ ಮರಿ?”ಎಂದು ಗೆಳೆಯರು ಕೇಳಿದರು: “ಇದು ದನ . ಇದು ಅದರ ಬಾಲ. ಓ ಇಲ್ಲಿದೆಯಲ್ಲ ಅದು ಅದರ ಕೋಡು” ಎಂದು ಮಗು ಉತ್ತರ ಕೊಟ್ಟಿತು. “ನಿನ್ನ ದನ ಚೆನ್ನಾಗಿದೆ” ಎಂದು ಗೆಳೆಯರು ಮನೆಯೊಳಗೆ ಬಂದರು. ತಾಯಿ ಮಗುವನ್ನು ನೋಡಿ “ನೀನೇನು ಮಾರಾಯ, ಚಹಾ ಎಲ್ಲ ಚೆಲ್ಲಿ ಅಂಗಳ ರಣಾರಮಪ ಮಾಡಿದ್ದೀಯ” ಅಂತ ಬೈದರು. ಆಗ ಗೆಳೆಯರು “ನಿಮ್ಮ ಮಗು ಕ್ರಿಯೇಟಿವ್‌ ಇದ್ದಾನೆ. ಯಾರೂ ಹೇಳದೆ ಸಹಜವಾಗಿ ತನ್ನ ಭಾವನೆಯನ್ನು ಹೇಗೆ ಅಭಿವ್ಯಕ್ತಿಸಿದ್ದಾನೆ ನೋಡಿ” ಎಂದರು. ಅದಕ್ಕೆ ತಾಯಿ “ಸುಮ್ಮನಿರಿ. ನಿಮಗೆ ಬೇರೆ ಕೆಲ್ಸವಿಲ್ಲ. ಅವನು ಯಾವಾಗ್ಲೂ ಹಾಗೆ;’ ಬೇಡದ್ದನೇ ಮಾಡುವುದು”  ಎಂದು ಮಾರುತ್ತರ ಕೊಟ್ಟರು.

ಸೃಜನಶೀಲತೆ ಎಂದರೆ ಹುಚ್ಚು, ಅಧಿಕಪ್ರಸಂಗ, ತರಲೆ, ತಂಟೆ , ಬೇಡದ್ದನ್ನು ಮಾಡುವುದು ಎಂಬ ಧೋರಣೆ ತೊಲಗದೆ ಈ ಸಮಾಜ ಉದ್ಧಾರವಾಗದು.

 

. ಪ್ರಯೋಗಶೀಲತೆಗೆ ಎಡೆಯಿರಲಿ
ಮಕ್ಕಳು ತಮ್ಮ ಕೈಗೆ ಸಿಕ್ಕಿದ ವಸ್ತುವನ್ನು ಸಾದ್ಯಂತವಾಗಿ ಪರಿಶೀಲಿಸಿ ಮುಟ್ಟಿ ತಟ್ಟಿ ಕುಟ್ಟಿ ಒಡೆದು ಬಿಡಿಸಿ ಹರಿದು ಹೀಗೆ ಏನೇನೋ ಮಾಡಿ ನೋಡುತ್ತಾರೆ. ಅದೇನದು? ಅದೇಕೆ ಹಾಗಿದೆ? ಎಂದು ಅರಿಯುವ ಪ್ರಯತ್ನ. ಇದನ್ನು ಅದನ್ನು ಜೋಡಿಸಿ ಅದನ್ನು ಇದನ್ನು ಕೂಡಿಸಿ ಹೊಸತೊಂದನ್ನು ರೂಪಿಸುವ ಪ್ರವೃತ್ತಿ ಮಕ್ಕಳಲ್ಲಿ ಸಹಜವಾಗಿರುತ್ತದೆ. ಶಾಲೆಯಲ್ಲಿ ಶಿಕ್ಷಕರು ‘ ನೀವಿದನ್ನು ಮನೆಯಲ್ಲಿ ಮಾಡಿನೋಡಿ” ಎಂದು ಹೇಳಿದ್ದನ್ನು ಕೇಳಿ ಮಕ್ಕಳು ಮನೆಯಲ್ಲಿ ಹಾಗೆ ಮಾಡಲು ಹೋದಾಗ ಪಾಲಕರಿಂದ ಪ್ರತಿರ ಓಧ ಎದುರಾಗುತ್ತದೆ. “ಆ ಗ್ಲಾಸ್‌ ಒಡಿಬೇಡ. ಆ ಪುಸ್ತಕ ಹರೀಬೇಡ. ನೀನು ಹತ್ತಿ ಹಾರಿ ಎಲ್ಲ ಹಾಳುಮಾಡ್ತೀಯ” ಎಂಬ ಗದರಿಕೆಯಿಂದ ಮಕ್ಕಳು ನಿರುತ್ಸಾಹಿತರಾಗುತ್ತಾರೆ. ಶಾಲೆಯಲ್ಲಿ ವಿಜ್ಞಾನ ಕಲಿಸುವ ಮೇಷ್ಟ್ರು ಪ್ರಯೋಗಗಳನ್ನು ಮಾಡಿ ತೋರಿಸುವುದಿಲ್ಲ. ಪ್ರಾತ್ಯಕ್ಷಿಕೆಯಿಲ್ಲದೆ ಪಠ್ಯಪುಸ್ತಕ ಆಧರಿಸಿ ವಿಜ್ಞಾನದ ಶುಷ್ಕ ಬೋಧನೆ ನಡೆಯುತ್ತದೆ.  ಹೀಗಿರುವಾಗ ಪ್ರಯೋಗಶೀಲತೆ ಬೆಳೆಯುವುದು ಹೇಗೆ? ಇತರ ಪಾಠವಿಷಯಗಳಲ್ಲಿ ಮಗು ಸ್ವತಂತ್ರವಾಗಿ ಯೋಚಿಸಿ ಸ್ವಂತ ಉತ್ತರ ಬರೆದರೆ ಶಿಕ್ಷಕರು “ಹಾಗೆಲ್ಲ ಬರೆದರೆ ಮಾರ್ಕು ಕೊಡುವುದಿಲ್ಲ. ನಾನು ಕೊಟ್ಟದ್ದನ್ನು ಬರೆದವರಿಗೆ ಫುಲ್‌ ಮಾರ್ಕ್ಸ್ ಕೊಡುತ್ತೇನೆ” ಎಂದು ಹೇಳುತ್ತಾರೆ. ಕೆಲವು ಸೋಮಾರಿ ಶಿಕ್ಷಕರು ಅಭ್ಯಾಸದ ಪ್ರಶ್ನೆಗಳಿಗೆ ಪಾಠದಲ್ಲೇ ಒಂದು, ಎರಡು, ಮೂರು ಎಂದು ಗುರುತುಹಾಕಿಕೊಳ್ಳಲು ಹೇಳುತ್ತಾರೆ. ಹಾಗೆ ಮಾಡದಿದ್ದರೆ ಗದರುತ್ತಾರೆ. ನನ್ನ ಮಗಳು ಒಮ್ಮೆ ಶಾಲೆಯಲ್ಲಿ ಹಾಗೆ ಮಾಡದಿದ್ದುದಕ್ಕೆ ಶಿಕ್ಷಕರಿಂದ ಗದರಿಸಿಕೊಂಡಿದ್ದಳು! ಹೀಗಾದರೆ ಸ್ವಂತಿಕೆ, ಸ್ವತಂತ್ರ ಚಿಂತನ, ಪ್ರಯೋಗ ಪ್ರಿಯತೆ ತನ್ಮೂಲಕ ಸೃಜನಶೀಲತೆ ವಿಕಾಸವಾಗುವುದು ಹೇಗೆ?

ಥಾಮಸ್‌ ಆಲ್ವ ಎಡಿಸನ್‌ ಪ್ರಯೋಗಮಾಡುತ್ತಾ ಮಾಡುತ್ತಾ ಟ್ರೈನಿಗೆ ಬೆಂಕಿ ಹೊತ್ತಿಕೊಂಡಿತು. ಜನ ಅವನನ್ನು ಹೊರಗೆ ದಬ್ಬಿದರು. ಆದರೂ ಆತ ನನ್ನ ಪ್ರಯೋಗ ಶೀಲತೆಗೆ ತಿಲಾಂಜಲಿ ನೀಡಲಿಲ್ಲ. ಯಾವುದೋ ಒಂದು ಪ್ರಯೋಗವನ್ನು ೧೦,೦೦೦ನೇ ಸಲ ಮಾಡಿದ ಬಳಿಕ ಅವನಿಗೆ ಬೇಕಾದ್ದು ಲಭಿಸಿತಂತೆ. ಆಗ ಯಾರೋ ಅವನನ್ನು ಕೇಳಿದರಂತೆ: ‘ಯಾಕೆ ಇಷ್ಟೆಲ್ಲ ಒದ್ದಾಟ?’ ಅದಕ್ಕೆ ಆತ ಮಾರ್ಮಿಕವಾಗಿ ಉತ್ತರ ನೀಡಿದ್ದ ‘೯,೯೯೯ ಸಲ ಮಾಡಿದ ರೀತಿ ತಪ್ಪು ಎಂಬುದು ನನಗೆ ತಿಳಿಯಬೇಕಾಗಿತ್ತು’. ಇದು ನಿಜವಾದ ಪ್ರಯೋಗಶೀಲತೆಯ ಸತ್ವ. ಮಕ್ಕಳಲ್ಲಿರವ ಈ ಬಗೆಯ ಪ್ರಯೋಗ ಶೀಲತೆಗೆ ಮನೆ ಹಾಗೂ ಶಾಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಅದನ್ನು ಅದುಮಿದರೆ, ದಮನಿಸಿದರೆ ರೂಢಿ ಸಂಪ್ರದಾಯಶರಣತೆ ಬಲಿಯುತ್ತದೆ. ಆಗ ಯಾರೂ ಸಾಹಸ ಕೃತ್ಯಗಳಲ್ಲಿ ತೊಡಗದೆ ನಿಯಮಗಳಿಗೆ ವಿಧೇಯರಾಗಿ ಬದುಕುತ್ತಾರೆ.

. ್ಯಾಂಕ್ಡಿಸ್ಟಿಂಕ್ಷನ್ಸರ್ವಸ್ವವಲ್ಲ
ಇಂದು ಬಹಳಷ್ಟು ತಂದೆತಾಯಿಗಳಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿದರೆ ಸಾಲದು. ಅವರು ರ‍್ಯಾಂಕ್‌ ಗಳಿಸಬೇಕು. ವಿಶೇಷ ಶ್ರೇಣಿಯಲ್ಲಿ ಪಾಸಾಗಬೇಕು. ತರಗತಿಯಲ್ಲಿ ಪ್ರಥಮ ಸ್ಥಾನಿಗಳಾಗಬೇಕು ಎಂಬ ಹಂಬಲ. ಎಲ್ಲ ಮಕ್ಕಳಿಗೂ ಇದು ಸಾಧ್ಯವಿಲ್ಲ. ಭಾಷಾಶಕ್ತಿ, ಸ್ಮರಣಶಕ್ತಿ, ವಿವೇಚನೆ, ಚಿಂತನೆ ಉಳ್ಳ, ಸಾಧನೆಯ ಅಭಿಪ್ರೇರಣೆ ಬಲವಾಗಿರುವ ಕೆಲವೇ ಕೆಲವರು ಈ ಬಗೆಯ ಸಾಧನೆ ಮಾಡಬಹುದು. ಆದರೆ ನಮ್ಮ ಪಾಲಕರಿಗೆ ತಮ್ಮ ಮಕ್ಕಳ ಯೋಗ್ಯತೆ ಸರಿಯಾಗಿ ತಿಳಿದಿರುವುದಿಲ್ಲ. ಹೀಗಾಗಿ ಮಕ್ಕಳ ಮೇಲೆ ಒತ್ತಡ ಹೇರಿ ಅವರನ್ನು ಹಾಳುಮಾಡುತ್ತಾರೆ.

ಪರೀಕ್ಷೆಯಲ್ಲಿ ಸಾಧನೆ ಮಾಡುವುದು ಬಲುದೊಡ್ಡ ಸಂಗತಿಯಲ್ಲ. ಆ ಬಗೆಯ ಸಾಧನೆ ಮಾಡಿದವರಿಂದ ಮುಂದೆ ಸಮಾಜಕ್ಕೆ ಎಷ್ಟು ಹಿತವಿದೆ ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ರ‍್ಯಾಂಕ್‌, ಡಿಸ್ಟಿಂಕ್ಷನ್‌ ಗಳಿಸಿದವರು ತಮ್ಮ ವೃತ್ತಿಯಲ್ಲಿ ಔನ್ನತ್ಯ, ಸಾಧನೆ ಕಡೆಗೆ ಗಮನಕೊಟ್ಟವರು; ಸಾಮಾಜಿಕ ಬದ್ಧತೆ ಇಲ್ಲದವರು. ಹೀಗಾಗಿ ಇಂದು ಸಮಾಜದಲ್ಲಿ ಅಂಥವರ ಪಾತ್ರ ಅತ್ಯಲ್ಪ. ಈ ಸಮಾಜ ಬೆಳೆದುನಿಂತಿರುವುದೇ ತೃತೀಯ ದರ್ಜೆಯಲ್ಲಿ ಪಾಸಾದ, ಅನುತ್ತೀರ್ನರಾದ ಸಾಮಾನ್ಯರಿಂದ. ಆದುದರಿಂದ ಸೃಜನಶೀಲ ಸಾಮರ್ಥ್ಯಗಳನ್ನು ಹೆತ್ತವರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು. ಪರೀಕ್ಷೆಗಳಲ್ಲಿ ಸಾಮಾನ್ಯ ನಿರ್ವಹಣೆ ಮಾಡಿದ ಹಲವು ಮಕ್ಕಳು ಕತೆ, ಕವನ, ಕ್ರೀಡೆಗಳು,ಚಿತ್ರ, ನೃತ್ಯ, ನಾಟಕ, ಸಂಗೀತ ಇತ್ಯಾದಿಗಳಲ್ಲಿ ಪರಿಣತರೂ ಆಸಕ್ತರೂ ಇರಬಹುದು. ಒಂದು ಕ್ಷೇತ್ರದಲ್ಲಾದ ಸೋಲನ್ನು ಇನ್ನೊಂದು ಕ್ಷೇತ್ರದಲ್ಲಿನ ಸಾಧನೆ ಮೂಲಕ ತುಂಬಲು ಪ್ರಯತ್ನಿಸುತ್ತಾರೆ. ಹೀಗಾಗಿ ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ಮೆಚ್ಚುಗೆ, ಪ್ರೋತ್ಸಾಹವಿರಲಿ. ಅದಕ್ಕೆ ಬದಲಾಗಿ “ನೀನು ನಾಟಕ ಮಾಡ್ತಾ ಇದ್ದರೆ ಈ ವರ್ಷ ಎಸ್‌.ಎಸ್‌.ಎಲ್‌.ಸಿ. ಪಾಸಾದ ಹಾಗೆ”, “ನೀನು ಓಡ್ತಾ ಇರು, ಮ್ಯಾಥ್ಸ್‌ನಲ್ಲಿ ಮಾರ್ಕ್ಸ್ ಬೇಡ ನಿನಗೆ ಅಲ್ವಾ?”, “ಓಹ್‌, ನೀನು ಭಾರಿ ದೊಡ್ಡ ಕಪಿಯಾಗ್ಬಿಟ್ಟೆ” ಎನ್ನುವಂಥ ತಾತ್ಸಾರದ, ತಿರಸ್ಕಾರದ ಮಾತುಗಳನ್ನಾಡಿದರೆ ಮಕ್ಕಳ ಸೃಜನಶೀಲ ಪ್ರತಿಭೆ ಮುರುಟಿ ಹೋಗುತ್ತದೆ.

ಒಬ್ಬರು ಪ್ರೊಫೆಸರ್ ತಮ್ಮ ಮಗ ಕವನ ಬರೆಯುವುದನ್ನು ನೋಡಿ ಮೆಚ್ಚುವ ಬದಲಿಗೆ ಕಿಡಿಕಿಡಿಯಾದರು. ಅವನ ಕಣ್ಣೆದುರೆ ಆತ ಬರೆದ ಕವನಗಳನ್ನೆಲ್ಲ ಒಲೆಗೆ ಹಾಕಿ ಸುಟ್ಟರು. “ಕವನ ಬರೆದರೆ ಹೊಟ್ಟೆ ತುಂಬುತ್ತನಾ? ಓದು,  ಸಿಇಟಿಗೆ ತಯಾರಾಗಿ ಎಂಜಿನಿಯರ್ ಆಗು. ಸಂಪಾದನೆ ಮುಖ್ಯ” ಎಂದು ಗದರಿದರು. ಹುಡುಗ ಎಂಜಿನಿಯರ್ ಆಗಲಿಲ್ಲ. ಬಿ.ಎಸ್ಸಿ. ಮಾಡಿ ಒಂದು ಸಣ್ಣ ಉದ್ಯೋಗ ಹಿಡಿದ. ಸಾವಿರದಲ್ಲಿ ಒಬ್ಬನಾದ. ಅದೇ ಪ್ರೊಫೆಸರ್ ಮಗನ ಕವಿತಾಶಕ್ತಿಯನ್ನು ಕಂಡು ಮೆಚ್ಚಿ ಕೊಂಡಾಡಿ ಪ್ರೋತ್ಸಾಹಿಸಿದ್ದರೆ, ಒಳ್ಳೆಯ ಕವಿಗಳ ನಾಲ್ಕಾರು ಕವನಸಂಕಲನಗಳನ್ನು ಓದಲು ತಂದುಕೊಟ್ಟಿದ್ದರೆ ಅವನು ಒಳ್ಳೆಯ ಕವಿಯಾಗುತ್ತಿದ್ದನೋ ಏನೋ. ತನ್ನ ನೋವುಗಳನ್ನು ಕವನ ರೂಪದಲ್ಲಿ ಹೇಳುತ್ತಿದ್ದ. ಸಾವಿರದಲ್ಲಿ ಒಬ್ಬನಾದರೂ ತನ್ನ ಕವಿತಾರಚನೆಯಿಂದಾಗಿ ಊಳಿದವರಿಗಿಂತ ಭಿನ್ನನಾಗಿ ಒಂದು ‘ಐಡೆಂಟಿಟಿ’ ಕಂಡುಕೊಳ್ಳುತ್ತಿದ್ದನೇನೋ! ಬಾಲ್ಯದಲ್ಲಿ ತಂದೆತಾಯಿಗಳು ಮಕ್ಕಳ ಬಗ್ಗೆ ಮಾಡುವ “ನೀನು ದಡ್ಡ, ನೀನು ಪೋಕರಿ, ನಿನ್ನ ತಲೆಯಲ್ಲಿ ಸಗಣಿ ತುಂಬಿದೆ. ನೀನು ಯಾಕೂ ಬೇಡ” ಎಂಬ ನಕರಾತ್ಮಕ ಹೇಳಿಕೆಗಳು ಅವರನ್ನು ಮುಂದೆ ಹಾಗೆಯೇ ರೂಪಿಸಬಹುದು ಎಂಬುದನ್ನು ಹಿರಿಯರು ಮೊದಲು ಮನಗಾಣಬೇಕು. ‘ಸಕಾರಾತ್ಮಕ ಸ್ಪರ್ಶ (Positive Stroke) ದಿಂದ ಮಕ್ಕಳ ಸೃಜನಶೀಲತೆ ವಿಕಸಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಕೊನೆಗೂ ಮೆಚ್ಚಲಾಗದಿದ್ದರೆ ಟೀಕಿಸುವ ಬದಲು ಬಾಯ್ಮುಚ್ಚಿಕೊಂಡಿರುವುದು ಸೂಕ್ತ.

ನನ್ನ ಜೀವನದ ಒಂದು ಸಂದರ್ಭದಲ್ಲಿ ನಾನು ಸೃಜನಶೀಲತೆಗೆ ಸಂಬಂಧಿಸಿದಂತೆ ನೈರಾಶ್ಯವನ್ನು ಅನುಭವಿಸಿದೆ. ಒಂದು ಬಗೆಯ ವಿರಕ್ತಿಯೂ ತಾತ್ಕಾಲಿಕವಾಗಿ ನನ್ನನ್ನು ಆವರಿಸಿತು. ಒಂದಿಬ್ಬರು ಸಹೋದ್ಯೋಗಿಗಳು ನನಗೆ ಬಂದ ಪ್ರಸಿದ್ಧಿಯನ್ನು ಕಂಡು ಸಹಿಸಲಾಗದೆ ಕರುಬುತ್ತಾ ಹೇಳತೊಡಗಿದರು “ಮೊನ್ನೆ ಅವರ್ಯಾರೋ ಹೇಳಿದರು: ಅವರು ಮೊದಲು ಚೆನ್ನಾಗಿ ಬರೆಯುತ್ತಿದ್ದರು. ಈಗೀಗ ಬರವಣಿಗೆ ಬರೇ ಜಾಳುಜಾಳು.” “ನಿಮ್ಮ ಬರವಣಿಗೆ ಸಂಶೋಧನಾತ್ಮಕವಾಗಿಲ್ಲ. ಜನಪ್ರಿಯ ಪತ್ರಿಕೆಗಳಲ್ಲಿ ಬರೆದ ಮಾತ್ರಕ್ಕೆ ಶಿಕ್ಷಣ ಚಿಂತಕ ಎಂದು ಹೇಳುವುದು ಸರಿಯಲ್ಲ. ನಿಮ್ಮ ಬರವಣಿಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾದರೆ ನಿಮ್ಮ ಪ್ರತಿಭೆಯನ್ನು ಮಾನ್ಯ ಮಾಡಬಹುದು.” “ಅವರು ಹೇಳಿದರು ನಿಮ್ಮದೆಲ್ಲ ಅಪಕ್ವ ಅರೆಬೆಂದ ಅಡುಗೆ. ಅದರಲ್ಲೇನೂ ‘ಸ್ಟಫ್‌’ ಇಲ್ಲ ಅಂತ.” ಈ ನಂಜಿನ ಮಾತುಗಳನ್ನು ಕೇಳಿಕೇಳಿ ಬರವಣಿಗೆಯನ್ನು ಸ್ಥಗಿತಗೊಳಿಸೋಣ; ಬರೆದದ್ದು ಸಾಕು ಎಂದನ್ನಿಸುವುದು ನಿಜ. ಆದರೆ ನನ್ನ ಬಗ್ಗೆ ಕುತ್ಸಿತ ಮಾತುಗಳನ್ನಾಡಿದ ನನ್ನ ಈ ಸಹೋದ್ಯೋಗಿಗಳ ಇದುವರೆಗಿನ ಸಾಧನೆ ಏನು ಎಂದು ಪರಿಶೀಲಿಸಿದೆ. ಮಾಡಿದ್ದೇನೂ ಇಲ್ಲ. ತರಗತಿಯಲ್ಲಿ ಅದೇ ಅದೇ ಪಾಠ ಮಾಡುತ್ತಾ, ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತಾ, ಸ್ಟಾಫ್‌ ರೂಮಿನಲ್ಲಿ-ಕ್ಯಾಂಟೀನ್‌ನಲ್ಲಿ ಕುಳಿತು ಗುಸುಗುಸು ಪಿಸುಪಿಸು ಮಾತನಾಡುತ್ತಾ, ಜಗತ್ತಿನ ಎಲ್ಲರ ಬಗ್ಗೆ ಕೆಟ್ಟ ಟೀಕೆಗಳನ್ನು ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ. ಇಂಥವರ ನಂಜಿನ ಮಾತುಗಳಿಗೆ ನಾನು ಏಕೆ ಕಿವಿಗೊಡಬೇಕು? ಬದಲಾಗಿ ಇವರ ಹೊಟ್ಟೆಕಿಚ್ಚು ಹೆಚ್ಚಾಗುವ ಹಾಗೆ ಇನ್ನಷ್ಟು ಚೆನ್ನಾಗಿ ಬರೆಯುತ್ತಾ ಇರಬೇಕು ಎಂದು ನಿಶ್ಚಯಿಸಿದೆ. ಅದೇ ವೇಳೆಗೆ ಶಿವರಾಮ ಕಾರಂತರು “ಅವರಿವರು ಏನು ಹೇಳುತ್ತಾರೆ ಎಂಬ ಬಗ್ಗೆ ಚಿಂತಿಸದೆ ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ, ನಿಮಗೆ ತೃಪ್ತಿಯಾಗುವ ಕೆಲಸದಲ್ಲಿ ತೊಡಗಿಕೊಳ್ಳಬೇಕು” ಎಂದು ಹೇಳಿದ ಮಾತು ನೆನಪಿಗೆ ಬಂತು. ಅದು ನನಗೆ ದಾರಿದೀಪವಾಯಿತು. ಅಲ್ಲಿಂದ ಮುಂದೆ ನಾನು ಹಿಂತಿರುಗಿ ನೋಡಿದ್ದಿಲ್ಲ! ಹೇಳುವವರು ಹೇಳುತ್ತಲೇ ಇರುತ್ತಾರೆ. ಏನನ್ನೂ ಮಾಡುವುದಿಲ್ಲ. ನಾವು ನಮಗೆ ಖುಷಿಕೊಡುವ ಕೆಲಸಗಳನ್ನು ಮಾಡುತ್ತಲಿರಬೇಕು ಎಂಬ ಸಿದ್ಧಾಂತ ನನಗೀಗ ನೆಮ್ಮದಿ ಕೊಡುತ್ತಿದೆ!

. ಸೃಜನಶೀಲತೆಗೆ ಪ್ರೋತ್ಸಾಹ ಮಾರಕವಾಗುತ್ತಿದೆಯೆ!

ಸದ್ಯದ ಸಂದರ್ಭದಲ್ಲಿ ಇಂಥ ಅನುಮಾನಗಳು ಮೂಡುತಿವೆ. ಇಂದು ಮಾಧ್ಯಮಗಳ ಸಂಖ್ಯೆ ಹೆಚ್ಚಿದೆ. ಮಾಧ್ಯಮಗಳು ಬಾಲಕ ಬಾಲಿಕೆಯರ ಮೇಲೆ ಸಾಕಷ್ಟು ಬೆಳಕುಚೆಲ್ಲುತ್ತಿವೆ. ಸರಕಾರ ಸ್ಪರ್ಧೆಗಳನ್ನು ‘ಪ್ರತಿಭಾಕಾರಂಜಿ’ ಮೂಲಕ ಸಾಂಸ್ಥೀಕರಣಗೊಳಿಸಿದೆ. ಆದುದರಿಂದ ರಿಯಾಲಿಟಿ ಶೋಗಳಲ್ಲಿ, ಪ್ರತಿಭಾಕಾರಂಜಿಯಂಥ ಸ್ಪರ್ಧೆಗಳಲ್ಲಿ ಭಾಗವಹಿಸಿಬೇಕು. ಅದಕ್ಕಾಗಿ ಸರ್ಕಸ್‌, ಸಂಗೀತ, ಭರತನಾಟ್ಯ, ಫಿಲ್ಮ್ ಡ್ಯಾನ್ಸ್‌, ಕರಾಟೆ-ಹೀಗೆ ಯಾವುದೆಂದರೆ ಅದರಲ್ಲಿ ಮಕ್ಕಳಿಗೆ ತರಬೇತಿ ಕೊಡುವ ಹುಚ್ಚು ಪಾಲಕರಲ್ಲಿ ಹೆಚ್ಚಾಗಿದೆ. ಶಾಲೆಗಳವರೂ ಸಾಕಷ್ಟು ಹಣ ವೆಚ್ಚಮಾಡಿ ಪ್ರತಿಭಾಕಾರಂಜಿಗೆ ಮಕ್ಕಳನ್ನು ಸಿದ್ಧಪಡಿಸುತ್ತಿದ್ದಾರೆ. ಉಪಯುಕ್ತತಾವಾದ ಹಾಗೂ ಫಲವಾದ ಈಗ ಪ್ರಬಲವಾಗಿ ಮಕ್ಕಳು ಶಿಕ್ಷಕರ, ಪಾಲಕರ ಹಾಗೂ ತೀರ್ಪುಗಾರರ ಶೋಷಣೆಗೆ ಬಲಿಯಾಗುತ್ತಿದ್ದಾರೆ. ಈ ಬಗೆಯ ಶೋಗಳಲ್ಲಿ ಭಾಗವಹಿಸುವ ಮಕ್ಕಳ ಮೇಲೆ ಪಾಲಕರ ಒತ್ತಡ ಅಧಿಕ. ಶೂಟಿಂಗ್‌ಗಾಗಿ ಪಾಠಪ್ರವಚನ ಪರೀಕ್ಷೆಗಳಿಗೆ ಸರಿಯಾಗಿ ಹಾಜರಾಗದ ಸ್ಥಿತಿ. ನಿರ್ವಹಣೆ ಕೆಟ್ಟದಾದರೆ ತಂದೆತಾಯಿಗಳಿಂದ ಬೈಗುಳ. ಮಾಡಿದ ಖರ್ಚೆಲ್ಲ ವ್ಯರ್ಥವೆಂಬ, ನೀನು ನಿಷ್ಪ್ರಯೋಜಕ ಎಂಬ ಟೀಕೆ. ಇತ್ತ ಶೋಗಳಲ್ಲಿನ ತೀರ್ಪುಗಾರರು ಭಾಗವಹಿಸುವವರು ಮಕ್ಕಳು ಎಂದು ಭಾವಿಸದೆ ಕಟುವಾದ ವಿಮರ್ಶೆ ಮಾಡುವುದು, ಅವಹೇಳನ ಮಾಡುವುದು, ಫಲಿತಾಂಶ ಬೇಗನೆ ಒದರದೆ ಈಗ ‘ಎಲಿಮಿನೇಶನ್‌’, ಯಾರು ಹೊರಗೆ ಹೋಗ್ತಾರೆ ನೋಡುವ ಅಂತ ಪದೇ ಪದೇ ಮುಖಗಳನ್ನು ತೋರಿಸುವುದು ಹಾಗೂ ಮತ್ತೂ ಆತಂಕ ಹೆಚ್ಚಿಸುವುದು-ಇದೆಲ್ಲ ದುಡ್ಡಿಗಾಗಿ, ಕೀರ್ತಿಗಾಗಿ, ಪಾಲಕರ ಮನೋಭೀಷ್ಟ ಈಡೇರಿಕೆಗಾಗಿ ಮಕ್ಕಳ ಶೋಷಣೆ ಅಲ್ಲದೆ ಇನ್ನೇನು? ಸರಿ ಬಹುಮಾನ ಬಂತಾ? ಅಲ್ಲಿಂದ ಶುರು ಎಲ್ಲ ಮಾಧ್ಯಮಗಳಲ್ಲಿ ಈ ಮಕ್ಕಳ ಗುಣಗಾನ, ಊರಲ್ಲೆಲ್ಲ ಸಂಮಾನ. ಇದರಿಂದ ತಾವು ಮಹಾ ಸೆಲೆಬ್ರಿಟಿ ಎಂಬ ಅಹಂಭಾವವವನ್ನು ತುಂಬುವ ಅಪಾಯವಿದೆ. ವಿದ್ಯಾಲಯಗಳಲ್ಲಿ ಇಂಥ ಮಕ್ಕಳು ಉಳಿದವರಿಂದ ದೂರಸರಿಯುವ, ತಾವು ಉಳಿದವರಿಗಿಂತ ಮೇಲೆಂದು ಜಂಭದಿಂದ ಬೀಗುವ ಅಪಾಯವಿದೆ. ಪಾಠ ಪ್ರವಚನಗಳನ್ನೂ ಕಡೆಗಣಿಸುವ ಅಪಾಯ ಇದೆ. ಆದುದರಿಂದ ಮಾಧ್ಯಮಗಳಲ್ಲಿ ಮಕ್ಕಳ ತೊಡಗುವಿಕೆಯನ್ನು ನಿಯಂತ್ರಿಸಬೇಕಾದ, ಅದರ ದಿಕ್ಕು ಬದಲಿಸುವ ಅವಶ್ಯಕತೆ ಹೆಚ್ಚಿದೆ.

. ತಪ್ಪುಗಳ ಬಗ್ಗೆ ಸೋಲುಗಳ ಬಗ್ಗೆ ಸಹನೆ
ನಾವಿಂದು ಯಶೋಕೇಂದ್ರಿತ ಸಮಾಜದಲ್ಲಿ ಬದುಕುತ್ತಿದ್ದೇವೆ. ಹೀಗಾಗಿ ನಮ್ಮ ಮಕ್ಕಳು ಸಾಧಕರಾಗಬೇಕು. Achiever ಆಗಬೇಕು. ಬಹುಮಾನ ಕೊಳ್ಳೆಹೊಡೆಯಬೇಕು. ಮುಂದೊತ್ತಿ ಗೆಲ್ಲಬೇಕು. ಸೋಲಲೇಬಾರದು ಎಂಬ ಭಾವನೆ ಬಲವಾಗಿದೆ. ಆದುದರಿಂದಲೇ ನಮ್ಮ ಸಮಾಜದಲ್ಲಿ ಹತ್ತರ‍ಲ್ಲಿ ಹನ್ನೊಂದು, ಗುಂಪಿನಲ್ಲಿ ಗೋವಿಂದದವರಿಗೆ ಬೆಲೆಯಿಲ್ಲ. ‘ಉತ್ತಮರಲ್ಲಿ ಅತ್ಯುತ್ತಮ’ ಆಗಬೇಕು ಎಂದು ಆಶಿಸುತ್ತಾರೆ. ಹೀಗೆ ಯಶಸ್ವಿ ಆದವರ ಯಶೋಗಾಥೆಗಳನ್ನು ಊರೆಲ್ಲ ಪ್ರಚುರ ಪಡಿಸುತ್ತಾರೆ . “ನೋಡಿ, ಹೇಗಿದ್ದವನು ಹೇಗಾದ? ನೀವೂ ಹಾಗೆ ಆಗಿ” ಎಂದು ಉಪದೇಶ ನೀಡುತ್ತಾರೆ. ಜೀವನದಲ್ಲಿ ಎಲ್ಲರೂ ಯಶಸ್ಸು ಗಳಿಸಲಾರರು. ಯಶಸ್ಸೇ ಒಳ್ಳೆಯ ಜೀವನದ ಮಾನದಂಡವಲ್ಲ. ನಮ್ಮಲ್ಲಿ ಯಶಸ್ಸಿನ ಕತೆಗಳೇ ಏಕೆ? ಸೋಲಿನ ಕತೆಗಳು ಬೇಡವೆ? ಸೋತವರಿಗಾಗಿ ಯಾರೂ ಕಂಬನಿ ಮಿಡಿಯರೇಕೆ? “ಯಶಸ್ಸಿಗೆ ಹಲವು ಅಪ್ಪಂದಿರು. ಆದರೆ ಸೋಲು ಅನಾಥ! ಸೋಲಿನ ಕತೆಗಳು ಎಲ್ಲರಿಗೂ ತಿಳಿಯಲಿ. ಅದರಲ್ಲೂ ಕೆಲವು ಜೀವನಪಾಠಗಳಿವೆ.”

ಸ್ಪರ್ಧೆಯಲ್ಲಿ ಸೋಲುಗೆಲುವುಗಳಿವೆ. ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಗೆಲ್ಲುವುದು ಸಾಧ್ಯವಿಲ್ಲ. ಯಾವುದೇ ಸೋಲು ಗೆಲುವು ಸಾಪೇಕ್ಷ. ಆದುದರಿಂದ ಸೋತೆನೆಂದು ಕಂಗೆಡಬೇಕಿಲ್ಲ. ಸೋತ ಮಕ್ಕಳನ್ನು ಹಂಗಿಸಬೇಕಿಲ್ಲ. ಗೆದ್ದವರನ್ನು ಹಾರತುರಾಯಿ ಹಾಕಿ ಆರಾಧಿಸುವ ಈ ಸಮಾಜ ಸೋತವರನ್ನು ದೂರತಳ್ಳುತ್ತದೆ. ನಿಕೃಷ್ಟನೆಂದು ಪರಿಗಣಿಸುತ್ತದೆ. ಹೀಗಾಗಿಯೇ ಸೋತೊಡನೆ, ಫಲಿತಾಂಶ ಬಂದೊಡನೆ ಅನೇಕರು ಆತ್ಮಹತ್ಯೆಗೆ ಶರಣುಹೋಗುತ್ತಾರೆ. ಗುರುಹಿರಿಯರ ಭಾವನಾತ್ಮಕ ಬೆಂಬಲ ಸಿಗದಿದ್ದುದೇ ಇದಕ್ಕೆಲ್ಲ ಕಾರಣ. ಆದುದರಿಂದ “ಸೋತರೂ ಒಂದೇ ಗೆದ್ದರೂ ಒಂದೇ. ನಿನ್ನ ಸೋಲಿನಲ್ಲಿ ನಾನೂ ಪಾಲು ಪಡೆಯುವೆ” “ಸೋತವರಾರೂ ಸೋಲಲೆ ಇಲ್ಲ. ಗೆದ್ದವರಾರೂ ಗೆಲ್ಲಲೆ ಇಲ್ಲ” (ತಿರುಮಲೇಶ್‌) ಎಂಬ ಮಾತನ್ನು ಮಕ್ಕಳಿಗೆ ಪದೇ ಪದೇ ಹೇಳಬೇಕು. ಸೋಲುಗಳನ್ನು ಸಹನೆಯಿಂದ ಸ್ವೀಕರಿಸುವ, ಸೋಲನ್ನು ಗೆಲುವಿನ ಸೋಪಾನವೆಂದು ರೂಪಿಸುವ ಜಾಣ್ಮೆಯನ್ನು ಅವರಲ್ಲಿ ಬೆಳೆಸಬೇಕು. ಯಾವುದೇ ಪರೀಕ್ಷೆ, ಸ್ಪರ್ಧೆ, ಸಾಹಸ , ಉದ್ಯೋಗ, ವ್ಯಾಪಾರದಲ್ಲಿ ಸೋಲಾದರೇನಂತೆ? ಸೋತವರೂ ಮನುಷ್ಯರಲ್ಲವೆ? ಅವರಿಗೂ ಬದುಕುವ ಹಕ್ಕಿಲ್ಲವೆ? ಇವತ್ತು ಸೋತರೇನು? ನಾಳೆ ಗೆಲ್ಲಲಾರರೆ? ಇಷ್ಟಕ್ಕೂ ಸೋಲು ಗೆಲುವು ಒಳ್ಳೆಯ ಬದುಕಿನ ಮಾನದಂಡ ಏಕಾಗಬೇಕು? ಸೃಜನಶೀಲತೆಯಲ್ಲಿ ಫಲಕ್ಕಿಂತ ಪ್ರಕ್ರಿಯೆಯೇ ಮುಖ್ಯವಲ್ಲವೆ? ಹಿರಿಯರ, ಶಿಕ್ಷಕರ ಅಥವಾ ಒಟ್ಟು ಸಮಾಜದ ದೃಷ್ಟಿಕೋನ ಬದಲಾದರೆ ಕಿರಿಯರ ಮನಃಸ್ಥಿತಿಗಳೂ ಬದಲಾಗುತ್ತವೆ; ಇಲ್ಲವಾದರೆ ಅವಹೇಳನ, ಟೀಕೆ, ಪರಾಭವಗಳಿಂದ ನೊಂದ ವ್ಯಕ್ತಿ ಮತ್ತೆಂದೂ ಯಾವ ಸಾಹಸದಲ್ಲೂ ಕೈಹಾಕದೆ ಮೂಲೆಪಾಲಾಗುತ್ತಾನೆ.

ನನ್ನಪ್ಪನ ಬದುಕನ್ನು ಪ್ರೀತಿ ಅಭಿಮಾನಗಳಿಂದ, ನೋವಿನಿಂದ ಕಂಡ ಅನುಭವ ನನ್ನದು. ನನ್ನಪ್ಪ ನಾನು ಚಿಕ್ಕವನಿದ್ದಾಗ ವಿಜಯವಾಡದಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದರು. ಕೈತುಂಬ ಸಂಪಾದನೆ. ಭವಿಷ್ಯದ ಲೆಕ್ಕಾಚಾರದಲ್ಲಿ ನಂಬಿಕೆಯಿಲ್ಲದ ಅಪ್ಪ ಉದಾರವಾಗಿ ದುಡ್ಡು ಖರ್ಚುಮಾಡಿದರು. ನನಗೆ ಚಿನ್ನದ ಉಡಿದಾರ, ಎರಡು ಬೆರಳುಗಳಿಗೆ ಉಂಗುರ, ಚಿನ್ನದ ಚೈನ್‌ ಎಲ್ಲ ಮಾಡಿಸಿಕೊಟ್ಟರು. ಆದರೆ ಐದಾರು ವರ್ಷಗಳಲ್ಲಿ ನಾನಾ ಕಾರಣಗಳಿಂದಾಗಿ ಸಂಪಾದಿಸಿದ ಹಣವೆಲ್ಲ ಮಣ್ಣುಪಾಲಾಯಿತು. ಅಪ್ಪ ಉನ್ನತ ಶಿಖರದಿಂದ ಪಾತಾಳಕ್ಕೆ ಕುಸಿದುಬಿದ್ದರು. ಒಂದುಕಾಲಕ್ಕೆ ತೀರ ಸಾಮಾನ್ಯರಾಗಿದ್ದವರು ಈಗ ಸಿರಿವಂತರು. “ನಿನ್ನಪ್ಪ ದುಡ್ಡುಹಾಳು ಮಾಡಿದ, ದರ್ಬಾರು ಮಾಡಿದ” ಎಂದು ಬಂಧುಗಳು ನನ್ನೆದುರೇ ಅನ್ನತೊಡಗಿದರು. ಬಂಧುವರ್ಗದಲ್ಲಿ ಅವರ ‘ಬೆಲೆ’ ಕಡಿಮೆಯಾಯಿತು. ಅವರನ್ನು ಆದರದಿಂದ ಮಾತನಾಡಿಸುವವರ ಸಂಖ್ಯೆ ವಿರಳವಾಯಿತು.

ಬಾಳಿನಲ್ಲಿ ಸೋಲು ಗೆಲವು,ನೋವು ನಲಿವು ಸ್ವಾಭಾವಿಕ. ಅದನ್ನು ಸಮಚಿತ್ತದಿಂದ ಎದುರಿಸಬೇಕು ಎಂಬುದನ್ನು ತಂದೆತಾಯಿ ಹಾಗೂ ಶಿಕ್ಷಕರು ಮಕ್ಕಳ ಮನದಲ್ಲಿ ಬಿಂಬಿಸಬೇಕು.

. ವ್ಯಕ್ತಿಗತ ವ್ಯತ್ಯಾಸಗಳಿಗೆ ಮನ್ನಣೆ ಬೇಕು

ನಾವೆಲ್ಲಲ ಒಂದೇ ಆದರೂ ಒಂದಾಗಿಲ್ಲ. ನಮ್ಮ ನಡುವೆ ಬುದ್ಧಿ, ಸ್ಮರಣೆ, ಗ್ರಹಿಕೆ. ಭಾಷಿಕಜ್ಞಾನ, ತಿಳಿವಳಿಕೆ, ಕೌಶಲ, ಮನೋಭಾವ ಇತ್ಯಾದಿಗಳಲ್ಲಿ ಸಾಕಷ್ಟು ಅಂತರವಿದೆ. ಈ ವ್ಯಕ್ತಿಗತ ವ್ಯತ್ಯಾಸಗಳನ್ನು ಗುರುಹಿರಿಯರು ಗುರುತಿಸಿ ಮಕ್ಕಳಿಗೆ ಸೂಕ್ತ ಕಲಿಕೆಯ ಅವಕಾಶಗಳನ್ನು ಕಲ್ಪಿಸಬೇಕು. “ಅವನಿಗೆ ಲೆಕ್ಕದಲ್ಲಿ ನೂರಕ್ಕೆ ನೂರು, ನಿನಗೇನು ಕಲಿಯಲು ದಾಡಿ?” ನೆರೆಮನೆಯ ದೀಪ ಸಂಗೀತದಲ್ಲಿ ಜಾಣೆ. ನೀನ್ಯಾಕೆ ಅವಳ ಹಾಗೆ ಆಗಬಾರದು?” ಎಂದು ತಂದೆತಾಯಿ ಹಾಗೂ ಶಿಕ್ಷಕರು ಮಕ್ಕಳಲ ನಡುವೆ ತುಲನೆ ಮಾಡುತ್ತಾರೆ. ತಾರತಮ್ಯವೆಣಿಸುತ್ತರೆ. ಈ ತಾರತಮ್ಯವು ಹೊಟ್ಟೆಕಿಚ್ಚು, ಅಪಮಾನ, ಸೋಲಿಗೆ ಕಾರಣವಾಗುತ್ತದೆ. ಆದುದರಿಂದ ಯಾವ ಮಗುವನ್ನೂ ಇನ್ನೊಂದು ಮಗುವಿನೊಂದಿಗೆ ತುಲನೆಮಾಡಿ ಮಗುವಿನ ಆತ್ಮಸಂಮಾನದ ಕುಸಿತಕ್ಕೆ ನಾವು ಕಾರಣವಾಗಕೂಡದು. “ಅವಳು ಕಲಿಯುವುದರಲ್ಲಿ ಜಾಣೆ. ನೀನೇನೂ ಕಡಿಮೆಯಿಲ್ಲ. ನಿನ್ನ ಹಗೆ ಅವಳಿಗೆ ನೃತ್ಯಮಾಡಲು ಬರುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಶಕ್ತಿಯಿದೆ” ಎಂದು ಮನಗಾಣಿಸಬೇಕು. ಮಕ್ಕಳ ಆಸಕ್ತಿಗೆ ತಕ್ಕಂತೆ ನಾವು ನೀರೆರೆದು ಪೋಷಿಸಬೇಕೇ ಹೊರತು ನಮ್ಮ ವಿಚಾರವನ್ನು ಅವರ ಮೇಲೆ ಹೇರಕೂಡದು.

ಇಬ್ಬರು ಬಾಲಕರು ಚಿತ್ರಕಲಾವಿದರೇ ಆದರೂ ಅವರ ಚಿತ್ರರಚನಾ ಕೌಶಲ, ಶೈಲಿ, ಪರಿಣತಿ ಇವುಗಳಲ್ಲಿ ವ್ಯತ್ಯಾಸವಿರುತ್ತದೆ. ಈ ಎರಡನ್ನೂ ನಾವು ಮಾನ್ಯಮಾಡಬೇಕಲ್ಲದೆ ‘ನಿನ್ನ ಚಿತ್ರಕ್ಕಿಂತ ಅವನ ಚಿತ್ರವೇ ಚೆಂದ’ ಎನ್ನುವುದೂ ಉತ್ತಮವಲ್ಲ. “ನಿನ್ನ ಚಿತ್ರಗಳು ವಿಶಿಷ್ಟವಾಗಿವೆ. ನಿನ್ನದೇ ಆದ ಶೈಲಿಯಿದೆ. ಆದರೂ ಅವನ ಶೈಲಿಯನ್ನೂ ಗಮನಿಸು. ಅದನ್ನು ನಿನ್ನದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆಯೋ ನೋಡು” ಎನ್ನುವುದು ಉಚಿತ.

. ಎಡ್ವರ್ಡ್ ಡಿಬೊನೊ ಅವರ ಪಿನ್
‘ಸೀರಿಯಸ್‌ ಕ್ರಿಯೇಟಿವಿಟಿ’, ‘ಲ್ಯಾಟರಲ್‌ ಥಿಂಕಿಂಗ್‌’, ‘ಸಿಕ್ಸ್‌ ಥಿಂಕಿಂಗ್‌ ಹ್ಯಾಟ್ಸ್‌’ ಮುಂತಾದ ಕೃತಿಗಳ ಕರ್ತೃ ಹಾಗೂ ಸೃಜನಶೀಲತೆಯ ಕ್ಷೇತ್ರದಲ್ಲಿ ವ್ಯಾಪಕ ಕೆಲಸ ಮಾಡಿದ ಎಡ್ವರ್ಡ್ ಡಿಬೊನೊ ಅವರು ಮಕ್ಕಳಲ್ಲಿ ಕಂಡುಬರುವ ಯಾವುದೇ ವಿನೂತನ ವಿಚಾರಗಳನ್ನು ಅಪ್ರಾಯೋಗಿಕ, ಕ್ಷುಲ್ಲಕವೆಂದು ತಿಪ್ಪೆಗೆಸೆಯಬೇಡಿ ಎಂದು ಹೇಳುತ್ತಾರೆ. ಒಂದು ವೇಳೆ ಯಾವುದೇ ಇಂಥ ವಿಚಾರವನ್ನು ಟೀಕಿಸುವುದಾದರೂ ‘ಪಿನ್‌’ `PIN’ ಸೂತ್ರ ಅಳವಡಿಸಿ ಎಂದು ಸಲಹೆ ನೀಡುತ್ತಾರೆ. P ಅಂದರೆ Positive. ನಿರೂಪಿಸಲಾದ ವಿಚಾರದಲ್ಲಿ ಸಕಾರಾತ್ಮಕವಾದುದು. ಗ್ರಾಹ್ಯವಾದುದು, ಸ್ವೀಕಾರಾರ್ಹವಾದುದು ಏನಿದೆ ಅದನ್ನು ಮೊದಲು ಗ್ರಹಿಸಿ, ಸ್ವೀಕರಿಸಿ, I ಅಂದರೆ Interesting. ವಿನೂತನ ವಿಚಾರಗಳಲ್ಲಿ ಕುತೂಹಲಕರವಾದುದು, ಆಸಕ್ತಿದಾಯಕವಾದುದು ಏನೋ ಒಂದಿರುತ್ತದೆ. ಅದನ್ನು ಗುರುತಿಸಿ ಎತ್ತಿಹೇಳಿ. ಕೊನೆಯಲ್ಲಿ N ಅಂದರೆ Negative ನೇತ್ಯಾತ್ಮಕವಾದುದು, ನಕಾರಾತ್ಮಕವಾದುದು, ಒಪ್ಪಿತವಲ್ಲದ್ದು, ಹೊಂದಿಕೆಯಾಗದ್ದು ಏನಿದೆ ಆ ಬಗ್ಗೆ ಹೇಳಿ. ಉದಾಹರಣೆಗೆ , ಒಂದು ದಿನ ಬೆಳ್ಳಂಬೆಳಗ್ಗೆ ಮನುಷ್ಯರೆಲ್ಲರ ತಲೆಕೂದಲು ಉದುರಿಹೋಗಿತಲೆ ಬೋಳಾದರೆ… ಒಳ್ಳೆಯದೇ ಆಯಿತು. ಜನ ಕನ್ನಡಿಯ ಮುಂದೆ ನಿಂತು ಗಂಟೆಗಟ್ಟಲೆ ತಲೆಬಾಚುವ ಅಭ್ಯಾಸವೇ ತಪ್ಪಿಹೋಗಿ ಅಪಾರ ಸಮಯ ಉಳಿತಾಯವಾಗುತ್ತದೆ (ಸಕಾರಾತ್ಮಕ). ಕೆಲವರ ತಲೆ ಬೋಳಾಗುವುದು ಅನುವಂಶೀಯ ಲಕ್ಷಣ. ಆದರೆ ಸ್ತ್ರೀಯರು, ಮಕ್ಕಳು ಎಂಬ ಭೇವಿಲ್ಲದೆ ಎಲ್ಲರ ತಲೆ ಬೋಳಾಗುವುದು ಒಂದು ಕುತೂಹಲಕರ ವಿದ್ಯಮಾನ. ಆಗ ಜಗತ್ತನ್ನು ಹೊಸ ನೋಟದಿಂದ ನೋಡಬಹುದು (ಆಸಕ್ತಿದಾಯಕ). ಅಯ್ಯೋ ಪಾಪ, ಎಲ್ಲರ ತಲೆ ಬೋಳಾದರೆ ಬ್ಯೂಟಿ ಪಾರ್ಲರ್ ಗಳು, ಸೆಲೂನುಗಳು ಬಿಕೊ ಅನ್ನುತ್ತವೆ. ಕೇಶತೈಲ ಸಂಸ್ಥೆಯು ನಷ್ಟ ಅನುಭವಿಸುತ್ತದೆ. ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳುತ್ತದೆ. ಹೀಗೆ ಆಗಬಾರದು (ನಕಾರಾತ್ಮಕ).

. ಕಲ್ಪನಾಶಕ್ತಿಗೆ ಮನ್ನಣೆ
ಆಧುನಿಕ ವಿದ್ಯಾಭ್ಯಾಸದಲ್ಲಿ ವಿಜ್ಞಾನದ ಗಣಿತದ ಕಲಿಕೆಗೆ ವಿಶೇಷ ಮನ್ನಣೆಯಿದೆ. ಏಕೆಂದರೆ ಇವೆರಡೂ ವಿಷಯಗಳು ಮಕ್ಕಳಲ್ಲಿ ತಾರ್ಕಿಕ, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನ ಕ್ರಮವನ್ನು ಬೆಳೆಸುತ್ತವೆ. ವ್ಯಕ್ತಿತ್ವದ ಸರ್ವಾಂಗೀಣ ವಿಕಾಸಕ್ಕೆ ಡಾ|| ರಾಧಾಕೃಷ್ಣನ್‌ ಅವರು ಪ್ರತಿಪಾದಿಸುವಂತೆ ವಿಜ್ಞಾನಶಿಕ್ಷಣ, ಕಲಾಶಿಕ್ಷಣ ಅಥವಾ ಮಾನವಿಕಗಳ ಅಧ್ಯಯನ ಅತ್ಯಾವಶ್ಯಕ . ಆದರೆ ತಮ್ಮ ಮಕ್ಕಳು ವಿಜ್ಞಾನಿಗಳಾಗಬೇಕು, ತಂತ್ರಜ್ಞಾನಿಗಳಾಗಬೇಕು, ವೈದ್ಯರಾಗಬೇಕು ಎಂಬ ಕಾರಣಕ್ಕೆ ಹೆತ್ತವರು ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಲ್ಪನಾಶಕ್ತಿ ಎಂಬುದು ಕವಿಕಲಾವಿದನಿಗೂ ಬೇಕು,ವಿಜ್ಞಾನಿಗೂ ಬೇಕು. ಆದುದರಿಂದಲೆ ಐ.ಎ. ರಿಚರ್ಡ್ಸ್ ಕಲ್ಪನಾಶಕ್ತಿಯನ್ನು ಕಾವ್ಯಾತ್ಮಕ ಹಾಗೂ ವೈಜ್ಞಾನಿಕ ಎಂದು ಎರಡು ಬಗೆಯಾಗಿ ವಿಂಗಡಿಸಿದ್ದಾನೆ. ಕತೆ, ಕಾದಂಬರಿ,ನಾಟಕ, ಕವನ, ಚಿತ್ರ ಹಾಗೂ ನರ್ತನ ಇತ್ಯಾದಿಗಳ ರಚನೆಗೆ ಕಲಾತ್ಮಕ ಕಲ್ಪನಾಶಕ್ತಿ ಅಗತ್ಯವಾದರೆ ಬಾಹ್ಯಾಕಾಶಕ್ಕೆ ಒಂದು ಉಪಗ್ರಹವನ್ನು ಉಡ್ಡಯಿಸಬೇಕಾದರೆ ಆ ಉಪಗ್ರಹದ ರಚನೆ ಮಾಡಲು, ಅದರ ಕಕ್ಷೆಯನ್ನು ನಿರ್ಧರಿಸಲು, ಅದರ ವೇಗವನ್ನು ನಿರ್ಧರಿಸಲು ವೈಜ್ಞಾನಿಕ ಕಲ್ಪನಾಶಕ್ತಿ ಬೇಕು. ಮಕ್ಕಳು ಕನಸು ಕಾಣಬೇಕು. ಹಗಲುಕನಸು ಕಾಣಬೇಕು.  ‘ಆದರೆ ಹೋದರೆ’ ಪ್ರಪಂಚದಲ್ಲಿ ವಿಹರಿಸಬೇಕು. ಇದಕ್ಕಾಗಿ ಚಂದಮಾಮ, ಪಂಚತಂತ್ರ, ಈಸೋಪನ ಕತೆಗಳು, ಭೂತಪ್ರೇತ ಕತೆಗಳು – ಇವುಗಳನ್ನು ಹೆಚ್ಚು ಹೆಚ್ಚು ಓದಬೇಕು. ವೈಜ್ಞಾನಿಕ ಕಾದಂಬರಿಗಳನ್ನು ಓದಬೇಕು. ಆದರೆ ಇಂದು ಹೆತ್ತವರು ಮಕ್ಕಳು ಕತೆ ಕಾದಂಬರಿಗಳನ್ನು ಓದಲು ಬಿಡುವುದಿಲ್ಲ. ಕತೆ ಕಾದಂಬರಿ ಓದಿದರೆ ಮಕ್ಕಳು ಹಾಳಾಗುತ್ತಾರೆ ಎಂಬ ತಪ್ಪು ಕಲ್ಪನೆ ಅವರಲ್ಲಿದೆ. ಶಾಲೆಯಲ್ಲಿ ಶಿಕ್ಷಕರು ಹಾಗೂ ಗ್ರಂಥಪಾಲಕರು ಇದೇ ಸಿದ್ಧಾಂತಕ್ಕೆ ಬಲಿಬಿದ್ದಿದ್ದಾರೆ. ಆದುದರಿಂದ ಮಕ್ಕಳಿಗೆ ಕತೆಪುಸ್ತಕಗಳನ್ನು ಅವರು ಎರವಲು ಕೊಡುವುದಿಲ್ಲ. ತನ್ನ ಇಚ್ಛೆ ಮೀರಿ ಅಂತರ್ಜಾತೀಯ ವಿವಾಹವಾದ ಒಬ್ಬಳು ಹೆಣ್ಣುಮಗಳನ್ನು ತಂದೆ ಬೈಯುತ್ತಾ “ಅವಳು ಬೇಡದ ಕಾದಂಬರಿಗಳನ್ನು ಓದಿಯೇ ಇಂಥ ಮನೆಹಾಳು ಕೆಲಸ ಮಾಡಿದ್ದು” ಎಂದರು. ನಾನು ಯಾವಾಗಲೂ ಹೇಳುವ ಮಾತೆಂದರೆ ಹಾಳಾಗುವ ಮಕ್ಕಳು ಹೇಗಿದ್ದರೂ ಎಲ್ಲಿದ್ದರೂ ಹಾಳಾಗುತ್ತಾರೆ. ಕತೆ ಕಾದಂಬರಿ ಓದಿ, ಸಿನೆಮಾ ನೋಡಿ ಹಾಳಾಗಬೇಕೆಂದಿಲ್ಲ. ಹಾಗೆ ನೋಡಿದರೆ ಇಂಥ ಪುಸ್ತಕಗಳ ಓದಿನಿಂದ ಭಾಷಾಶಕ್ತಿ,  ಕಲ್ಪನಾಶಕ್ತಿ, ಲೋಕಜ್ಞಾನ, ಮಾನವನ ಅಂತರಂಗ, ಜೀವನಕ್ರಮ ಎಲ್ಲವೂ ವಿಕಸಿತವಾಗುತ್ತದೆ.  ಸಾಹಿತ್ಯಾಧ್ಯಯನದಿಂದ ಮಕ್ಕಳಲ್ಲಿ ಅನುಭೂತಿಯ ಪ್ರಮಾಣ ಹೆಚ್ಚುತ್ತದೆ. ಅವರು ಹೆಚ್ಚು ಸಂಸ್ಕಾರವಂತರಾಗಬಹುದು.

೧೦. ಜೀವನಚರಿತ್ರೆಗಳ ಓದಿಗೆ ಎಡೆಯಿರಲಿ
ಎಂಥ ಕಷ್ಟಗಳನ್ನು ಎದುರಿಸಿ ಮಹಾನ್‌ ವಿಜ್ಞಾನಿಗಳು, ರಾಜಕಾರಣಿಗಳು, ಕವಿಗಳು, ಕಲಾವಿದರು ರೂಪುಗೊಂಡರು ಎಂಬುದು ಅವರ ಜೀವನಚರಿತ್ರೆ ಹಾಗೂ ಆತ್ಮಕತೆಗಳನ್ನು ಓದಿದಾಗ ತಿಳಿಯುತ್ತದೆ. ಮೂಕನಾಯಕ ಅಂಬೇಡ್ಕರ್ ದಲಿತೋದ್ಧಾರಕರಾಗಿ ರೂಪುಗೊಳ್ಳಲು ಅವರು ಅನುಭವಿಸಿದ ನೋವು, ಯಾತನೆ ಇವುಗಳನ್ನು ಅವರ ಜೀವನಚರಿತ್ರೆಯ ಓದಿನಿಂದ ತಿಳಿಯಬಹುದು . ಲೂಯಿಪಾಶ್ಚರ್, ಐನ್‌ಸ್ಪೈನ್‌, ಜೆನ್ನರ್, ಚಾಪ್ಲಿನ್‌, ಗಾಂಧಿ, ಕಾರಂತ ಮೊದಲಾ ಧೀಮಂತರ ಜೀವನಚರಿತ್ರೆಯ ಓದು ಚೇತೋಹಾರಿಯೂ ಸ್ಫೂರ್ತಿದಾಯಕವೂ ಆದುದು. ಅದು ಹೊಸ ಬಗೆಯ ಚಿಂತನಕ್ಕೆ ಪ್ರೇರಣೆನೀಡುವ ಓದು. ಆದರೆ ಇಂದು ಹಿರಿಯರು ಹಾಗೂ ಶಿಕ್ಷಕರಲ್ಲೇ ಓದಿನ ಹವ್ಯಾಸವಿಲ್ಲ. ಟಿ.ವಿ. ಬಂದ ಮೇಲಂತೂ ಧಾರಾವಾಹಿಗಳನ್ನು ನೋಡುವುದರಲ್ಲಿ, ಮೊಬೈಲ್‌ ಜೊತೆ ಆಡುವುದರಲ್ಲಿ ಬಹುಮಂದಿ ಕಾಲಕಳೆಯುತ್ತಾರೆ. ಮಕ್ಕಳಿಗೆ ಬೂಟು, ಸೂಟು, ಸೈಕಲ್‌, ಐಸ್ಕ್ರೀಂ ತೆಗೆಸಿಕೊಡುವ ತಂದೆತಾಯಿಗಳಿಗೆ ಪುಸ್ತಕಗಳನ್ನು ಕೊಂಡು ಒದಗಿಸಬೇಕೆಂಬ ಪರಿವೆಯಿಲ್ಲ. ಮೂರು ಹೊತ್ತೂ ‘ಪಾಠಪುಸ್ತಕ ಓದು, ಪರೀಕ್ಷೆಗೆ ತಯಾರಾಗು’ ಇದೇ ಅವರ ಮಂತ್ರ ಹಾಗಾಗಿ ಇಂದಿನ ಅನೇಕರಲ್ಲಿ ಓದುವ ಹವ್ಯಾಸವೇ ನಶಿಸಿದೆ. ಹೀಗಾದರೆ ಕಲ್ಪನಾಶಕ್ತಿ, ಭಾಷಾಶಕ್ತಿ ಹಾಗೂ ಸೃಜನಾತ್ಮಕ ಶಕ್ತಿ ಬೆಳೆಯುವುದು ಹೇಗೆ? ಹೊಸ ಹೊಸ ಓದು ಹೊಸ ಹೊಸ ಆವಿಷ್ಕಾರಗಳಿಗೆ , ನೂತನ ಪ್ರಯೋಗಗಳಿಗೆ ಕಾರಣವಾಗುತ್ತದೆ ಎಂಬ ಪ್ರಜ್ಞೆ ಶಿಕ್ಷಕರಲ್ಲಿ ಹಾಗೂ ಹಿರಿಯರಲ್ಲಿ ಮೂಡಬೇಕಾಗಿದೆ.

ಪುಸ್ತಕಗಳು ತಿನ್ನುವ ಅನ್ನದ ಅಗುಳಿನ ಹಾಗೆ ಅನಿವಾರ್ಯವಾಗುವ ಸ್ಥಿತಿ ಮೂಡಿಬರಬೇಕು. ಆದರೆ ‘ಮೊಬೈಲ್‌ ಬಳಸಿ ಕಾಗದ ಉಳಿಸಿ’ ಅಂದರೆ ಓದುಬರೆಹ ಹೊಡೆದೋಡಿಸಿ ಎಂಬ ಕೆಟ್ಟಕಾಲದಲ್ಲಿ ನಾವಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಶಾಲಾಶಿಕ್ಷಣದಲ್ಲಿ ಪುಸ್ತಕಗಳ ಓದಿನ ರುಚಿಯನ್ನು ಶಿಕ್ಷಕರು ವ್ರತದಂತೆ ಮಕ್ಕಳಲ್ಲಿ ಮೂಡಿಸುವುದು ಅಗತ್ಯ.

೧೧. ಊಹಾಲೋಕ
ಕಲ್ಪನಾಶಕ್ತಿಯನ್ನು ಬೆಳೆಸುವ ಹಾಗೆ ಮಕ್ಕಳಲ್ಲಿ ಊಹಿಸುವ ಶಕ್ತಿಯನ್ನೂ ಬೆಳೆಸುವುದು ಅಗತ್ಯ. ಇದು ಸೃಜನಶೀಲತೆಯ ವರ್ಧನೆಗೆ ಪೂರಕ. ಯಾವುದೇ ವಿದ್ಯಮಾನವನ್ನು ಕೈಗೆತ್ತಿಕೊಂಡು ಇದೇಕೆ ಹೀಗಿದೆ? ಯಾವ ಕಾರಣದಿಂದ ಹೀಗಾಗಿರಬಹುದು? ಇದು ಹೀಗೆಯೇ ಏಕಿರಬೇಕು? ಬೇರೆ ಯಾವ ರೀತಿಯಲ್ಲಿ ಇರಲು ಸಾಧ್ಯ? ಇದನ್ನು ಬೇರೆ ರೂಪಕ್ಕೆ ಬದಲಿಸಲು ಸಾಧ್ಯವೆ? ಮಾರ್ಪಾಡು ಸಾಧ್ಯವೆ? ಸಾಧ್ಯವಾಗುವುದಾದರೆ ಹೇಗೆ ? ಎಂದೆಲ್ಲ ಪ್ರಶ್ನಿಸುತ್ತ ಹೋದಂತೆ ಹೊಸ ವಿಚಾರಗಳು ಅರಳುತ್ತವೆ. ಉದಾಹರಣೆಗೆ: ಆನೆಗೇಕೆ ಸೊಂಡಿಲಿದೆ? ಸೊಂಡಿಲು ಹಾಗೇಕೆ ಇರಬೇಕು? ಸೊಂಡಿಲು ಇಲ್ಲದಿರುತ್ತಿದ್ದರೆ ಏನಾಗಬಹುದಿತ್ತು? ಸೊಂಡಿಲಿನ ಬದಲಿಗೆ ಬೇರೆ ಅಂಗವಿದ್ದಿದ್ದರೆ? ಸೊಂಡಿಲು ದಪ್ಪಗೇಕೆ ಇರಬೇಕು? ತೆಳ್ಳಗಿದ್ದರೆ ಆಗದೆ? ಸೊಂಡಿಲಿನ ತುದಿ ಹಾಗೆ ಏಕಿರಬೇಕು? ಜಾತಿಪದ್ಧತಿ ಹೇಗೆ ಮೂಡಿತು? ಅದು ಅಗತ್ಯವೆ? ಇದ್ದರೆ ಏನು ಲಾಭ? ಇರದಿದ್ದರೆ? ಎಂದೆಲ್ಲ ಊಹಿಸುತ್ತಾ ಹೋದಂತೆ ಪರಿಸ್ಥಿತಿಯ ಸೂಕ್ಷ್ಮತೆಗಳು ತಿಳಿಯುತ್ತವೆ. ಹಾಗಿದ್ದರೆ ಜಾತಿಪದ್ಧತಿಯನ್ನು ನಾಶಮಾಡಿದರೆ ಮುಂದೆ ಏನಾಗಬಹುದು? ಸಾಧಕಬಾಧಕಗಳೇನು? ಅಂತರ್ಜಾತೀಯ ವಿವಾಹವಾದವರ ಜೀವನ ಹೇಗಿರಬಹುದು? ಅವರ ಕುಟುಂಬಗಳಲ್ಲಿ ಜಾತಿ ಉಳಿದಿದೆಯೆ? ಅಳಿದಿದೆಯೆ? ಅವರ ಮಕ್ಕಳ ಮದುವೆ ಹೇಗೆ? ಊಹನೆಯ ಕುದುರೆಗೆ ಕಡಿವಾಣ ಹಾಕದೆ ಓಡಿಸಿದೆರೆ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ. ‘ನಾನೊಂದು ಮರವಾದರೆ’… ನಾನೊಂದು ಹುಳುವಾದರೆ’… ಊಹಿಸಿ ನೋಡಿ. ನಿಮಗೇ ಅರಿವಾಗದೇ ಊಹನೆಯ ಶಕ್ತಿ ಏನೆಂಬುದು?

ಇಷ್ಟೆಲ್ಲ ಚರ್ಚಿಸಿದ ಮೇಲೂ ಹೇಳಲೇಬೇಕಾದ ಮಾತೆಂದರೆ ಸೃಜನಶೀಲತೆ ಮಕ್ಕಳಲ್ಲಿ ಅಂತಃಸ್ಥವಾಗಿರುತ್ತದೆ.  ಅದನ್ನು ಬಹಿರಂಗಪಡಿಸಿ ಪೋಷಿಸುವುದು ಹೆತ್ತವರ ಕರ್ತವ್ಯ , ಶಾಲೆಯ ಹೊಣೆ. ಮಕ್ಕಳ ಬೆನ್ನುತಟ್ಟಿ  ನಿಮ್ಮ ಲಾಭಕ್ಕಾಗಿಯಲ್ಲ, ಬಹುಮಾನ ಗೆಲ್ಲಲಿಕ್ಕಾಗಿ ಅಲ್ಲ. ನಿರ್ಮಮಕಾರದಿಂದ, ಪ್ರತಿಫಲಾಪೇಕ್ಷೆಯಿಲ್ಲದೆ ಪ್ರೋತ್ಸಾಹಿಸಿ. ಸೃಜನಶೀಲತೆಯನ್ನು ಲಾಭದಾಯಕ ಉತ್ಪನ್ನಹವೆಂದು ತಿಳಿಯದೆ ಆಗುವ ಮಾಗುವ ಪ್ರಕ್ರಿಯೆ ಎಂದು ಭಾವಿಸಿ. ಮಗುವನ್ನು ನಿಮ್ಮಂತೆಯೇ ಇರುವ ಮನುಷ್ಯನೆಂದು ಪರಿಗಣಿಸಿ ಬೆಲೆ ಕೊಡಿ. ಮಗುವನ್ನು ಗೆಲ್ಲುವ ಕುದುರೆಯಾಗಿಸಲು ಹೋಗಬೇಡಿ. ಸಹಜವಾಗಿ ಪ್ರತಿಸ್ಪಂದಿಸುವ, ಸಹಜವಾಗಿ ಅಭಿವ್ಯಕ್ತಿಸುವ, ಹೊಸತನ್ನು ಸೃಜಿಸುವ, ಹಳೆಯದಕ್ಕೆ ಹೊಸ ಲೇಪ ಕೊಡುವ ವ್ಯಕ್ತಿ ಎಂದು ನಂಬಿಕೆಯಿಡಿ. ಮಗು ಕವಿ, ಕಲಾವಿದ, ವಿಜ್ಞಾನಿ ಆಗಲೇಬೇಕೆಂಬ ಹಠ ಬೇಡ. ಸಹೃದಯತೆಯಿಂದ ಬದುಕಿನ ಸೌಂದರ್ಯವನ್ನು ಮೆಲ್ಲುವ, ಅಂತರಂಗದಲ್ಲಿ ಸೌಂದರ್ಯವರಳಿದ ಮನುಷ್ಯನಾದರೆ ಸಾಕು.