ಬಾಲ್ಯ, ಯೌವನ, ವಾರ್ಧಕ್ಯ ಇವೆಲ್ಲ ಮನುಷ್ಯ ಜೀವನದ ವಿವಿಧ ಘಟ್ಟಗಳು. ಮನುಷ್ಯ ಪ್ರಾಣಿಯಷ್ಟು ಪರಾವಲಂಬಿ ಜೀವಿ ಬೇರೊಂದಿಲ್ಲ. ನಾಯಿ, ಬೆಕ್ಕು ಹಾಗೂ ಹಸುವಿನ ಮರಿಗಳನ್ನು ಗಮನಿಸಿ. ಹುಟ್ಟಿದ ಸ್ವಲ್ಪೇ ಸ್ವಲ್ಪ ಸಮಯದಲ್ಲಿ ಅವು ಸ್ವಾವಲಂಬಿಗಳಾಗುತ್ತವೆ. ತಾಯಿಯ ಜೊತೆ ಆಹಾರ ಬೇಟೆಗೆ ಹೋಗುತ್ತವೆ. ಆದರೆ ನಾವು ಆಹಾರ, ಬಿಸುಪು, ರಕ್ಷಣೆ ಹಾಗೂ ಬೆಳವಣಿಗೆಗಾಗಿ ತಂದೆತಾಯಿಗಳನ್ನು ಆಶ್ರಯಿಸುತ್ತೇವೆ. ನಾವು ಸ್ವತಂತ್ರರಾಗಲು ಕೆಲವು ವರ್ಷಗಳೇ ಬೇಕು. ಆರ್ಥರ್ ಕೆಸ್ಲರ್ ಹೇಳುವಂತೆ ಭಾರತೀಯ ಸಮಾಜದಲ್ಲಿ ಹುಡುಗ ಗಂಡುಸಾಗುವುದು ಅಪ್ಪ ಸತ್ತಮೇಲೆಯೇ! ನಮ್ಮಲ್ಲಿ ಹಲವರು ಮತದಾನದ ಹಕ್ಕಿನ ವಯಸ್ಸಿನವರಾದರೂ ಮದುವೆಯಾಗುವ ವಯಸ್ಸು ಮುಟ್ಟಿದರೂ ಇನ್ನೂ ಅಪ್ಪನ ನೆರಳನ್ನು ಕಂಡು ಭಯಪಡುವವರು ಅಥವಾ ತಾಯಿಯ ಸೀರೆಯ ಸೆರಗಿನಲ್ಲಿ ಮರೆಯಾಗುವವರು!

ಹಿರಿಯರ ಮೇಲಿನ ಈ ಅವಲಂಬನ ಹೀಗೆಯೇ ಮುಂದುವರಿಯಬೇಕೆ? ಇದರಿಂದ ಬಿಡಿಸಿಕೊಳ್ಳಲು ಸಾಧ್ಯವೆ? ಈ ಅವಲಂಬನ ತಪ್ಪಿದಾಗ ಬದುಕು ಘೋರವಾದೀತೇ? ಬಾಲ್ಯದ ಅನುಭವಗಳೇ ವ್ಯಕ್ತಿತ್ವನಿರ್ಮಾಣದ ಇಟ್ಟಿಗೆಗಳು ಎಂದು ಸಿಗ್ಮಂಢ್‌ ಫ್ರಾಯ್ಡ್‌ ಹೇಳಿದ. ಬಾಲ್ಯದಲ್ಲಿ ಮಧುರ ಅನುಭವಗಳಾದರೆ ವ್ಯಕ್ತಿ ಬೆಳೆದಮತೆ ಆತ್ಮವಿಶ್ವಾಸಿಯೂ ಆತ್ಮಾಭಿಮಾನಿಯಯೂ ಆಗುತ್ತಾನೆ; ಇಲ್ಲವಾದರೆ ಕೀಳರಿಮೆಯ ಸಂಕೀರ್ಣ ಬೆಳೆಯಬಹುದು ಮತ್ತು ಆತ ಸಾಮಾಜಿಕ ಹಿಂತೆಗೆತಕ್ಕೆ ಪಕ್ಕಾಗಬಹುದು. ಆದರೆ ಬಾಳೆಂಬುದು ಒಂದು ವಕ್ರರೇಖೆಯ ಹಾಗೆ. ಹುಟ್ಟಿನಿಂದ ಆರಂಭಗೊಂಡ ಈ ರೇಖೆ ಸಾವಿನ ತನಕ ಬೆಳವಣಿಗೆ ಹಾಗೂ ವಿಕಾಸದ ಬೇರೆಬೇರೆ ಮಜಲುಗಳನ್ನು ಗುರುತಿಸುತ್ತ ಮುಂದುವರಿಯುತ್ತದೆ. ಈ ಜೀವನರೇಖೆ ಎಲ್ಲರ ಬಾಳಿನಲ್ಲೂ ಒಂದೇ ತೆರನಲ್ಲ. ಆದರೆ ಇದು ಹುಟ್ಟಿನಿಂದ ಸಾವಿನ ತನಕ ಸತತವಾಗಿ ಬೆಳವಣಿಗೆ ಹಾಗೂ ಬದಲಾವಣೆಯ ಪಲ್ಲವಗಳನ್ನು ಹೊತ್ತು ಸಾಗಿಸುವ ರೇಖೆ. ನಿನ್ನೆಯ ನಾವು ಇಂದು ನಿನ್ನೆಯಂಥೆ ಮೇಲ್ನೋಟಕ್ಕೆ ಕಂಡರೂ ನಿನ್ನೆಯಂತಿಲ್ಲ. ಏನೋ ಒಂದಿಷ್ಟು ಬದಲಾವಣೇ ನಮ್ಮ ಅರಿವಿಗೆ ಬರುವುದಕ್ಕೆ ಮುನ್ನವೇ ಆಗಿದೆ. ಇದು ಒಂದೇ ಸಲ ತಿರುಗಿ ಕುಂಬಾರನ ಕೈಗೆ ಮಡಿಕೆ ಕೊಟ್ಟು ಕಾಣದಂತೆ ಮಾಯವಾಗುವ ಚಕ್ರವಲ್ಲ; ಬೆಳವಣಿಗೆ, ಬದಲಾವಣೆ ಹಾಗೂ ವಿಕಾಸದ ಚಕ್ರ ನಿತ್ಯ ತಿರುಗುತ್ತದೆ. ನಿನ್ನೆ ಮಗುವಾಗಿದ್ದವನು ಇಂದು ದಿಢೀರನೆ ಆರಡಿ ಎತ್ತರದ ಯುವಕನಾಗಿ ನಿಮ್ಮ ಮುಂದೆ ಧುತ್ತನೆ ನಿಲ್ಲುವುದಿಲ್ಲ. ಬಾಳು ಎಂಬುದು ಆಗುವ ಮಾಗುವ ಕ್ರಿಯೆ.

ಈ ಬಾಳಿನ ವಕ್ರರೇಖೆಯಲ್ಲಿ ನಾವು ಬೇಗನೆ ಪರಾವಲಂಬನದಿಂದ ಹೊರಗೆ ಬಂದು ಸ್ವಂತ ವ್ಯಕ್ತಿತ್ವ ರೂಪಸಿಕೊಳ್ಳಬೇಕು. ಪದವಿಪೂರ್ವ ಹಂತದಲ್ಲಿ  ವ್ಯಾಸಂಗ ಮಾಡುತ್ತಿರುವ ಓರ್ವ ವಿದ್ಯಾರ್ಥಿ ಈಚೆಗೆ ಸಮಾರಂಭವೊಂದರಲ್ಲಿ ಭೆಟ್ಟಿಯಾಗಿ ನನ್ನ ಪುಸ್ತಕಗಳ ಬಗ್ಗೆ, ಭಾಷಣಗಳ ಬಗ್ಗೆ ಮಾತನಾಡಿದ. ಇತರ ಕೆಲವು ಸಾಹಿತಿಗಳ ಜೊತೆಗೆ ತನಗಿರುವ ಸಂರ್ಪಕದ ಬಗ್ಗೆ ಹೇಳಿದ. ವಿನೀತನಾದ ಆದರೆ ಚುರುಕಾಗಿರುವ ಆತ ಯಾವುದೇ ಸಂಕೋಚವಿಲ್ಲದೆ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ನನ್ನ ಜೊತೆ ತೀರ ಪರಿಚಿತನಂತೆ ಮಾತನಾಡುತ್ತಿದ್ದ. ಸ್ವಲ್ಪ ಹೊತ್ತಿನ ಬಳಿಕ ನನ್ನ ಕಾರಿನಲ್ಲೇ ಒಂದಷ್ಟು ದೂರಬಂದ. ನನ್ನ ಕವಯಿತ್ರಿ-ಹಾಸ್ಯಸಾಹಿತಿ ಮಡದಿ ಅವನ ಜೊತೆ ಮಾತನಾಡುತ್ತ ಹುಟ್ಟು, ಬಾಲ್ಯ, ತಂದೆತಾಯಿಗಳ ಬಗ್ಗೆ ಕೇಳಿದಳು. ಆ ಪ್ರಶ್ನೆಗೆ ಆತ ಮೊದಲು ಉತ್ತರ ಕೊಡಲಿಲ್ಲ. ಅರೆಗಳಿಗೆ ತಡೆದು ಮತ್ತೆ ಹೇಳುವೆ ಎಂದ. ಮತ್ತೆ ಹೇಳಲಿಲ್ಲ. ಆದರೆ ಆ ಹುಡುಗ ಆಂಧ್ರಪ್ರದೇಶದವನಾಗಿದ್ದು ಬಾಲ್ಯದಲ್ಲಿ ಏನೋ ಸಮಸ್ಯೆಯಾಗಿ ತಂದೆತಾಯಿಗಳಿಂದ ಬೇರೆಯಾಗಿ ಬಾಲಕಾರ್ಮಿಕನಾಗಿ ಮುಂದೆ ಆತನನ್ನು ಬಾಲಕಾರ್ಮಿಕ ಹಿತರಕ್ಷಣಾ ಸಂಸ್ಥೆಯೊಂದು ಗುರುತಿಸಿ ದುಡಿಯಲು ಹಾಗೂ ಓದಲು ಅಮದರೆ ದುಡಿದು ಕಲಿಯಲು ಅವಕಾಶ ಮಾಡಿಕೊಟ್ಟಿತು. ಈಗ ಆತ ಒಂದು ಜನಪದ ಕಲೆಯನ್ನು ಸಾಂಪ್ರದಾಯಿಕ ನೆಲೆಯಲ್ಲಿ ಕಲಿಸುವ ಸಂಸ್ಥೆಯ ವಿದ್ಯಾರ್ಥಿ. ಊಟ, ತಿಂಡಿ, ವಸತಿ ಎಲ್ಲ ಆ ಸಂಸ್ಥೆ ನೋಡಿಕೊಳ್ಳುತ್ತದೆ. ಬಿಡುವಿನ ವೇಳೆ ಆತ ಪದವಿಪುರ್ವ ಹಂತದ ವಿದ್ಯಾರ್ಥಿ.

ಈ ಪ್ರಕರಣವನ್ನು ಗಮನಿಸಿ. ಕುಟುಂಬ ಜೀವನದಿಂದ ಆ ಹುಡುಗ ವಂಚಿತನಾದ ನಿಜ. ಆದರೆ ಅದರಿಂದ ಆತ ಖಿನ್ನನಾಗಲಿಲ್ಲ. ಕೀಳರಿಮೆ ಆಕ್ರಮಿಸಲಿಲ್ಲ. ಬದಲಾಗಿ ಆತ ಸ್ವಾವಲಂಬಿಯಾದ. ಜನಸ್ನೇಹಿಯಾದ. ಬದುಕಿಗೆ ಬೇಕಾದುದನ್ನು ಅರಸಿ ಗಳಿಸಲು ಯತ್ನಿಸಿದ. ಒಂದೊಂದು ಸಲ ಕುಟುಂಬಜೀವನದಿಂದ ಹೊರಗೆ ಬರುವುದು, ಅದಕ್ಕೆ ಅಂಟಿಕೊಳ್ಳದಿರುವುದು, ಬಾಲ್ಯದಿಂದ ಬೇಗ ಬಿಡುಗಡೆಗೊಂಡು ಸ್ವಾವಲಂಬನೆಯ ಹುಡುಕಾಟದಲ್ಲಿ ತೊಡಗುವುದು ಉತ್ತಮವೆಂದು ಅನ್ನಿಸುವುದಿಲ್ಲವೆ? ಏಕೆಂದರೆ ಕಿರಿಯರು ದೊಡ್ಡ ಸಮಾಜದ ಜೊತೆ ಸಂಪರ್ಕಕ್ಕೆ ಬರಲು ಬಾಲ್ಯದಲ್ಲಿ ಹಿರಿಯರು ಅವಕಾಶ ಕೊಡುವುದಿಲ್ಲ. ನಿಯಮ ನಿಬಂಧನೆಗಳು, ಕಟ್ಟುಪಾಡುಗಳು, ರೀತಿರಿವಾಜುಗಳು ಇತ್ಯಾದಿಗಳ ಮೂಲಕ ಅದಕ್ಕೆ ದೊಡ್ಡ ಬೀಗ ಜಡಿದಿಡುತ್ತಾರೆ. ಹೀಗಾಗಿ ಬಾಲಕ ಬಾಲಿಕೆಯರು ಪ್ರಾಯಕ್ಕೆ ಬರುವ ತನಕ ಅಥವಾ ಕೆಲವೊಮ್ಮೆ ಮದುವೆಯಾಗಿ ಸಂಸಾರ ಹೂಡುವ ತನಕ ಗರಿಬಿಚ್ಚಿ ಹಾರುವುದಕ್ಕೆ ಕಾಯುತ್ತಲೇ ಇರಬೇಕಾಗುತ್ತದೆ.

ಅನೇಕ ಮಕ್ಕಳ ಪಾಲಿಗೆ ಬಾಲ್ಯವೆಂಬುದೊಂದು ಸುಂದರ ಉದ್ಯಾನ. ಮುಗ್ಧತೆಯ ನಂದನವನ. ಹಿರಿಯರ ಕ್ರೂರ ಪ್ರಪಂಚದಿಂದ ರಕ್ಷಿಸಲು ಕಟ್ಟಿದ ಎತ್ತರದ ಗೋಡೆಗಳ ತೋಟ. ಕೆಲವೊಮ್ಮೆ ಇದು ಅಪಾಯಕಾರಿ. ಮುಗ್ಧತೆಯಲ್ಲೇ ಅದ್ದಿ ತೆಗೆದ ಮಗುವಿಗೆ ಒಮ್ಮೆಲೆ ಕರಾಳತೆಯ ದರ್ಶನವಾದರೆ ಹೇಗಾಗಬಹುದು? ಸಿದ್ಧಾರ್ಥನಿಗೆ ಆದುದೇನು? ರೋಗಿ, ಮುದುಕ, ಹೆಣವನ್ನು ಕಂಡ; ವಿರಾಗಿಯಾದ! ಹೀಗಾಗಿ ಬಾಲ್ಯದ ಉದ್ಯಾನದಲ್ಲಿ ಆಗಾಗ್ಗೆ ಸಣ್ಣಸಣ್ಣ ಆಘಾತಗಳು ಒದಗಿಬರಬೇಕು. ಹಿರಿಯರಿಂದ ಕಳಚಿಕೊಳ್ಳುವುದಕ್ಕೆ ಒಂದಿಷ್ಟು ಅವಕಾಶಗಳೂ ದೊರೆಯಬೇಕು.

ದುರಂತದ ಸಂಗತಿಯೆಂದರೆ ಜಗತ್ತಿನಾದ್ಯಂತ ಬಾಲ್ಯವೆಂಬುದು ಎಲ್ಲ ಮಕ್ಕಳಿಗೂ ಮಧುರ ಅನುಭವವೇನಲ್ಲ. ‘ಎಲ್ಲ ಇದ್ದೂ ಏನೂ ಇಲ್ಲದ’ ಅಥವಾ ಕನಸುಗಳೇ ಸತ್ತುಹೋದ ನರಕದಲ್ಲಿ ಹಲವು ಮಕ್ಕಳು ಬದುಕುತ್ತಾರೆ. ತಂದೆತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳು, ವಿಚ್ಛೇದಿತ ದಂಪತಿಗಳಲ್ಲಿ ಒಬ್ಬರ ಜೊತೆ ವಾಸಿಸುತ್ತಾ ಮತ್ತೊಬ್ಬರನ್ನು ಕಾಣಲು ಕಾತರಿಸುವ ಮಕ್ಕಳು, ಜೀತಕ್ಕೆ ಒಳಗಾದ ಮಕ್ಕಳು. ದತ್ತುಸ್ವೀಕಾರದಿಂದ ಯಾರದೋ ಮನೆ ಸೇರಿದ ಮಕ್ಕಳು, ಅನೈತಿಕ ಸಂಪರ್ಕ-ಮಾನಭಂಗಗಳ ಫಲಿತಾಂಶವಾಗಿ ಹುಟ್ಟಿದ, ತಂದೆತಾಯಿ ಎಲ್ಲೋ ಎಸೆದುಹೋದ ಮಕ್ಕಳು. ಅಭಯಾಶ್ರಮ-ಬಾಲನಿಕೇತನ-ರಿಮಾಂಡ್‌ಹೋಮ್‌-ಪ್ರಮಾಣಿತ ಶಾಲೆ ಇತ್ಯಾದಿ ಸ್ಥಳಗಳಿಗೆ ಹೋಗಿ ನೋಡಿದರೆ ಮಕ್ಕಳ ಬಾಲ್ಯ ಅದೆಷ್ಟು ಕಟುವಾಗಿರಬಹುದು ಎಂಬುದು ಮನವರಿಕೆ ಆಗದಿರದು.

ಬರೆಯುತ್ತ ಬರೆಯುತ್ತ ನನ್ನ ಬಾಲ್ಯದ ದಿನಗಳು, ಅಂದಿನ ಒಂಟಿತನ ನೆನಪಿಗೆ ಬರುತ್ತಿದೆ. ನಾನು ‘ಸಿರಿವಂತನಾಗಿ ಹುಟ್ಟಿದೆ; ಬಡವನಾಗಿ ಬೆಳೆದೆ’. ನನ್ನ ತಂದೆ ದೊಡ್ಡ ಹೋಟೆಲ್‌ ಮಾಲಿಕರಾಗಿದ್ದರು. ಆಂಧ್ರದ ವಿಜಯವಾಡದಲ್ಲಿ ನನ್ನನ್ನು ೧೯೫೭ ರಲ್ಲಿ ಶಾಲೆಗೆ ಸೇರಿಸುವ ದಿನ ಹೋಟೆಲಿಗೆ ಧ್ವನಿವರ್ಧಕ ಅಳವಡಿಸಿ ರಿಕಾರ್ಡ್‌ ಹಾಕಿಸಿದ್ದರು. ಕುದುರೆ ಸಾರೋಟಿನಲ್ಲಿ ನನ್ನನ್ನು ಮೆರವಣಿಗೆಯಲ್ಲಿ ಶಾಲೆಗೆ ಕೊಂಡೊಯ್ದು ಒಂದನೆಯ ತರಗತಿಗೆ ಸೇರಿಸಿದ್ದರು. ಆದರೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ನಾನು ತಂದೆಯಿಂದ ದೂರ ಉಳಿಯಬೇಕಾಯಿತು. ಉಬ್ಬಸ ಹಾಗೂ ಕ್ಷಯಕ್ಕೆ ತುತ್ತಾದ ತಾಯಿಯೊಡನೆ ನಾನು ನನ್ನ ತಾಯಿಯ ಮನೆ ಬೈಕಾಡಿಗೆ ಬಂದು ಐದನೆಯ ತರಗತಿಗೆ ಕನ್ನಡ ಶಾಲೆಗೆ ಸೇರಿದೆ. ಕೆಲವೇ  ದಿನಗಳಲ್ಲಿ ತಾಯಿಯ ರೋಗ ಉಲ್ಬಣಿಸಿ ತೀರಿಕೊಂಡಳು. ಮುಂದಿನ ಮೂರು ವರ್ಷ ನಾನು ಅಜ್ಜನ ಮನೆಯಲ್ಲೇ ಬೆಳೆದೆ. ನನ್ನಜ್ಜಿ ಆಗಾಗ್ಗೆ ನನ್ನನ್ನು ಬೈಯುತ್ತಿದ್ದರು. ಆದರೆ ಅಜ್ಜ, ಸೋದರಮಾವ, ಅತ್ತೆ ನನ್ನನ್ನೆಂದೂ ಹೊಡೆದದ್ದಿಲ್ಲ; ಬೈದದ್ದಿಲ್ಲ. ಆದರೆ ನನ್ನನ್ನು ಒಳಗೊಳಗೇ ಅವಮಾನಿಸುತ್ತಿದ್ದ ಚುಚ್ಚುತ್ತಿದ್ದ ಅಂಶವೆಂದರೆ ‘ಅಮ್ಮ ಇಲ್ಲ. ಅಪ್ಪ ದೂರದಲ್ಲೆಲ್ಲೋ.. ನನ್ನ ನೋವು-ನಲಿವು ಯಾರಲ್ಲಿ ಹೇಳಲಿ? ನನ್ನವರು ಯಾರಿದ್ದಾರೆ?’ ಎಷ್ಟೋ ಸಲ ನಾನು ಪಡುಕೋಣೆ (ಮನೆಯ ಒಂದು ಕೊಠಡಿಯ ಹೆಸರು) ಯಲ್ಲಿ ಕಿಟಕಿ ಬಳಿ ನಿಂತು ಅಮ್ಮನ ಹೆಣ ಸುಟ್ಟ ಗದ್ದೆಯ ಕಡೆ ನೋಡಿ (ಅಮ್ಮನ ಹೆಣಕ್ಕೆ ಕೊಳ್ಳಿ ಇಟ್ಟವನು ನಾನೆ) ಅಳುತ್ತಿದ್ದೆ. ಬಾಲ್ಯದ ಆ ಕೊರತೆ, ಕೊರಗು ಈಗಲೂ ನನ್ನನ್ನು ಕಾಡುತ್ತದೆ.

ಹೈಸ್ಕೂಲು ವ್ಯಾಸಂಗಕ್ಕೆ ಮತ್ತೆ ತಂದೆಯ ಬಳಿಗೆ ಬಂದೆ. ಒಂದು ವರ್ಷ ತಂದೆ ಶಿವಮೊಗ್ಗೆ ಸಮೀಪದ ನ್ಯಾಮತಿಯಲ್ಲಿ ಹೋಟೆಲು ಮಾಡಿಕೊಂಡಿದ್ದರು. ಮತ್ತೆ ಕೆಲವು ವರ್ಷ ಬೆಂಗಳೂರು ಸಮೀಪದ ರಾಮನಗರ-ಅರ್ಚಕರ ಹಳ್ಳೊ ಹೊಗೆಸೊಪ್ಪಿನ ಕಾರ್ಖಾನೆ ಎದುರು ಗುಡಿಸಲು ಹೋಟೆಲು ಮಾಡಿಕೊಂಡಿದ್ದರು (ಈಗ ಜಾನಪದ ಲೋಕ ಇರುವಲ್ಲಿ).

ನ್ಯಾಮತಿಯಲ್ಲಿ  ವರ್ಷದ ಕೊನೆಗೆ ಮತ್ತೆ ನಾನು ಅನಾಥನದೆ. ಅಲ್ಲಿಯ ಸರಕಾರಿ ಹೈಸ್ಕೂಲಿನಲ್ಲಿ ಎಂಟನೆಯ ತರಗತಿ ಓದುತ್ತಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ತಂದೆಯವರು ಹೋಟೆಲು ಮುಚ್ಚಿದರು. ಇದು ೧೯೬೪-೬೫ರ ಸುಮಾರಿಗೆ. ಏಕೆಂದು ಇದುವರೆಗೂ ನನಗೆ ತಿಳಿದಿಲ್ಲ. ರಾತ್ರೋರಾತ್ರಿ ನನ್ನನ್ನು ಜೋಶಿ ಎಂಬವರ ಮನೆಗೆ ತಂದುಬಿಟ್ಟರು. ಅವರು ಆಗ ಅಲ್ಲಿ ಮುದ್ರಣಾಲಯವೊಂದನ್ನು ನಡೆಸುತ್ತಿದ್ದರು. ಈಗ ಅವರು ಇದ್ದಾರೋ ಇಲ್ಲವೋ, ಅವರ ಮನೆಯವರು ಬಂಧುಗಳು ಎಲ್ಲಿ ಎಲ್ಲಿದ್ದಾರೆ ಎಂಬುದು ಯಾವುದೂ ನನಗೆ ತಿಳಿಯದು. ೧೯೬೫ ರಲ್ಲಿ ನ್ಯಾಮತಿ ಬಿಟ್ಟವನು ಈವರೆಗೂ ಮತ್ತೆ ಅಲ್ಲಿ ಕಾಲಿಟ್ಟಿಲ್ಲ! ತಂದೆಯವರು ನಡುರಾತ್ರಿಯಲ್ಲೇ ಮಾಯವಾದರು. ನನಗೆ ಏನೂ ಹೇಳಲಿಲ್ಲ. ಏನೂ ಗೊತ್ತಾಗಲಿಲ್ಲ! ಜೋಶಿಯವರ ಮನೆಯವರೆಲ್ಲ ಒಳ್ಳೆಯವರೇ. ಅವರ ಮನೆಯ ಪರಿಮಳ ಎಂಬ ಹುಡುಗಿ ನನ್ನ ಸಹಪಾಠಿ. ರಾತ್ರಿ ಮಕ್ಕಳಿಗೆಲ್ಲ ಕೈತುತ್ತು ಬಡಿಸುತ್ತಿದ್ದರು. ನನಗೋ ವಿಪರೀತ ಸಂಕೋಚ. ಈ ಸಂಕೋಚ, ನೋವು, ಒಂಟಿತನದಲ್ಲೇ ನಾನಲ್ಲಿ ಎಂಟನೆಯ ತರಗತಿ ಮುಗಿಸಿದೆ.

ಒಂಬತ್ತು ಹತ್ತನೆಯ ತರಗತಿಗೆ ನನ್ನನ್ನು ತಂದೆಯವರು ರಾಮನಗರದ ಸರಕಾರಿ ಶಾಲೆಗೆ ಸೇರಿಸಿದರು. ನ್ಯಾಮತಿಗಿಂತ ಕಠಿಣತರ ದಿನಗಳಿವು. ನ್ಯಾಮತಿಯಲ್ಲಿ ಹೋಟೆಲು ಚೆನ್ನಾಗಿತ್ತು. ದೊಡ್ಡ ಕಟ್ಟಡ. ಒಳ್ಳೆಯ ವ್ಯಾಪಾರ. ಆಳುಕಾಳುಗಳಿದ್ದರು. ನನಗೆ ವಿಶೇಷ ಕೆಲಸವಿರಲಿಲ್ಲ. ತಂದೆಯವರು ಬೆಳಿಗ್ಗೆ ವಡೆ, ಬೋಂಡಾ ಮಾಡುವ ತನಕ ಅಂದರೆ ಒಂಬತ್ತು ಗಂಟೆಯತನಕ ಮಧ್ಯಾಹ್ನ ನಾನು ಊಟಮಾಡಿದ ಬಳಿಕ ಅವರು ಊಟಮಾಡಿ ಬರುವ ತನಕ ಮತ್ತು ಸಂಜೆ ಶಾಲೆಬಿಟ್ಟ ಮೇಲೆ ಸುಮಾರು ಎಂಟು ಗಂಟೆ ತನಕ ಗಲ್ಲದಲ್ಲಿ ಕೂರಬೇಕಿತ್ತು. ಓದುವುದಕ್ಕೆ ಬಿಡುವು ಸಿಗುತ್ತಿತ್ತು. ವಿದ್ಯುಚ್ಛಕ್ತಿ ಇತ್ತು. ಉಣ್ಣಲು ತಿನ್ನಲು ಕೊರತೆಯಿರಲಿಲ್ಲ. ತಂದೆಯವರು ಈ ಅವಧಿಯಲ್ಲಿ ಹೊಡೆದದ್ದು ಬೈದದ್ದು ನೆನಪಿಗೆ ಬರುತ್ತಿಲ್ಲ.

ಆದರೆ ರಾಮನಗರದ ಜೀವನ ನಿಜಕ್ಕೂ ದಾರುಣವಾಗಿತ್ತು. ನನ್ನ ಹದಿಹರೆಯ ಅಲ್ಲಿ ಕುದಿವ ನೀರಿನಲ್ಲಿ ಸಾಯಿಸಿ ಬೀದಿಗೆಸೆವ ರೇಷ್ಮೆಹುಳದಂತಾಗಿತ್ತು.

ಅರ್ಚಕರ ಹಳ್ಳಿಯ ಹೋಟೆಲು ಎಂದರೆ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದ ಹೊಲದಲ್ಲಿನ ಒಂದು ಗುಡಿಸಲು. ವಿದ್ಯುತ್‌ ಇಲ್ಲ. ಅಡುಗೆಮನೆ ಕಂ ಬೆಡ್‌ರೂಮ್‌. ಗಿರಾಕಿಗಳು ಕುಳಿತುಕೊಳ್ಳುವ ಸ್ಥಳ, ಅರೆಯುವ ಸ್ಥಳ. ಅದೇ ರಾತ್ರಿ ನನ್ನ ಓದುವ ಕೋಣೆ, ಮಲಗುವುದಕ್ಕೆ ಬೆಂಚು. ನೆಲ ಮಣ್ಣಿನದ್ದು. ಬಹಿರ್ದೆಶೆಗೆ ಬೆಳಗ್ಗೆ ಬೇಗ ಬಯಲಿಗೆ ಹೋಗಬೇಕು. ಹೋಟೆಲಿನಲ್ಲಿ ಕೆಲಸಗಾರ ಎಂದರೆ ಒಬ್ಬನೇ ಒಬ್ಬ ಲೋಟ ತೊಳೆಯುವವನು. ಮತ್ತೆಲ್ಲ ತಂದೆಯವರದ್ದೇ ಬಹುಪಾತ್ರಾಭಿನಯ.

ಬೆಳಗ್ಗೆ ಎದ್ದು ಚಟ್ಟನಿಗೆ ರುಬ್ಬಬೇಕು. ಇಡ್ಲಿಗೆ ರುಬ್ಬಬೇಕು. ಗಿರಾಕಿಗಳಿಗೆ ಸಪ್ಲೈ ಮಾಡಬೇಕು. ಒಂಬತ್ತು ಗಂಟೆಗೆ ಶಾಲೆಗೆ ನಾಲ್ಕೈದು ಮೈಲಿ ದೂರ ನಡೆದು ಹೋಗಬೇಕು. ಸಂಜೆ ಹೋಟೆಲಿನ ಕ್ಲೀನರ್ ರಾಮನಗರಕ್ಕೆ ಬಂದಮೇಲೆ ಹೋಟೆಲು ಸಾಮಾನುಗಳನ್ನು ಕೊಂಡುಕೊಂಡು ಅವನ ತಲೆಯ ಮೇಲೆ ಹೂರಿಸಿ ನಾನು ಕೈಯಲ್ಲಿ ಎಣ್ಣೆಕ್ಯಾನ್‌ ಹಿಡಿದು ಕಗ್ಗತ್ತಲಲ್ಲಿ ನಡೆದುಕೊಂಡು ಗುಡಿಸಲಿಗೆ ಬರಬೇಕು. ಸುಖದುಃಖ ಕೇಳುವ, ನೋವುನಲಿವು ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ. ಚಳಿಗಾಲದಲ್ಲಂತೂ ಕಾಲುಒಡೆದು ರಕ್ತ ಬರುವಂತಾಗುತ್ತಿತ್ತು. ಕುಂಟುತ್ತ ಶಾಲೆಗೆ ಹೋಗುತ್ತಿದ್ದೆ. ಹೋಟೆಲಿನಲ್ಲಿ ಉಳಿದ ಚಿತ್ರಾನ್ನ, ಉಪ್ಪಿಟ್ಟು ಇದೇ ನನಗೆ ರಾತ್ರಿ ಊಟ! ಏನೂ ಉಳಿಯದಿದ್ದರೆ ರಾಮನಗರದಲ್ಲಿ ಬ್ರೆಡ್ಡಿನ ಅಂಗಡಿಯಲ್ಲಿ ಸಿಹಿಬ್ರೆಡ್‌ ಕೊಂಡುಕೊಂಡು ತಿನ್ನುತ್ತಿದ್ದೆ.

ಸಂಜೆ ಒಂದು ಪ್ಲೇಟ್‌ ಇಡ್ಲಿ ಸಾಂಬಾರ್ ಸಿಗುತ್ತಿತ್ತು ನನಗೆ. ಬಸ್‌ನಿಲ್ದಾಣದಲ್ಲಿ ನಮ್ಮ ಪರಿಚಿತರೋರ್ವರ ಹೋಟೆಲ್‌ ಇತ್ತು. ಆ ಸಾಹುಕಾರರಿಗೆ ೧೫-೨೦ ನಿಮಿಷ ವಿರಾಮಕೊಡಲು ನಾನು ಗಲ್ಲದಲ್ಲಿ ಕೂರುತ್ತಿದ್ದೆ. ಅವರು ಮರಳಿ ಬಂದೊಡನೆ ನನಗೆ ಒಂದು ಪ್ಲೇಟ್‌ ಇಡ್ಲಿ ಸಾಂಬಾರ್ ಒಂದು ಕಾಫಿ ಸಿಗುತ್ತಿತ್ತು!

ಉಡುಪಿ ತಾಲ್ಲೂಕು ಕೋಟದ ಮಣೂರಿನ ನನ್ನ ತಂದೆಯ ಕುಲದೈವ ಸಾಲಿಗ್ರಾಮದ ಉಗ್ರನರಸಿಂಹ! ಹೀಗಾಗಿ ವ್ಯಾಪಾರ ಚೆನ್ನಾಗಿ ಆಗದಿದ್ದ ದಿನಗಳಲ್ಲಿ ತಂದೆಯವರು ಸಣ್ಣ ಕಾರಣಕ್ಕೂ ಸಿಟ್ಟಾಗುತ್ತಿದ್ದರು. ಕೈಗೆ ಸಿಕ್ಕಿದ್ದರಲ್ಲೇ ನನ್ನನ್ನು ಹೊಡೆದುಬಿಡುತ್ತಿದ್ದರು. ‘ತಾಯಿಯಿಲ್ಲದ ತಬ್ಬಲಿ’ ಎಂಬ ವಿಚಾರ ಆ ಗಳಿಗೆಯಲ್ಲಿ ಅವರ ಮನಃಪಟಲದ ಮುಂದೆ ಹಾದುಹೋಗುತ್ತಿರಲಿಲ್ಲ. ಒಂದುಸಲ ಚೆನ್ನಾಗಿ ಹೊಡೆದು ಬೆನ್ನ ತುಂಬಾ ಬಾಸುಂಡೆ ಬಂದಿತ್ತು. ರಾತ್ರಿ ಅಳುತ್ತ ಬೆಂಚಿನ ಮೇಲೆ ಬೋರಲಾಗಿ ಮಲಗಿದ್ದೆ.  ತಂದೆಯವರು ಬಾಸುಂಡೆಯ ಮೇಲೆ ತೆಂಗಿನೆಣ್ಣೆ ಸವರಿದರು! ಈಗ ಅದನ್ನು ಬರೆಯುವಾಗ ನಿಜಕ್ಕೂ ಕಣ್ಣೀರು ಬರುತ್ತಿದೆ. ಅತ್ತುಬಿಡಬೇಕು ಎನ್ನಿಸುತ್ತಿದೆ. ಎಷ್ಟೊಂದು ಸಲ ಈ ಘಟನೆ ನೆನಪಿಗೆ ಬಂದರೂ ಇದೇ ಅನುಭವ!

ಇನ್ನೊಂದು ಸಲ ಪುಸ್ತಕ ಕೊಂಡುಕೊಳ್ಳಲು ಹಣ ಬೇಕಿತ್ತು. ನಾಲ್ಕೈದು ದಿನಗಳಿಂದ ಹಣಕ್ಕಾಗಿ ಪೀಡಿಸುತ್ತಲೇ ಇದ್ದೆ. ಆ ದಿನ ಪರಿಸ್ಥಿತಿ ಚೆನ್ನಾಗಿರಲಿಲ್ಲ. ವ್ಯಾಪಾರ ಆಗಿರಲಿಲ್ಲ. ಮಾಡಿಟ್ಟ ತಿಂಡಿ ಉಳಿದುಬಿಟ್ಟಿತ್ತು. ಒಂಬತ್ತು ಗಂಟೆಯ ಸಮಯ. ಹಾಲಿನವನು ಬಂದು ಹಾಲು ಹಾಕಿ ಸೈಕಲಿನಲ್ಲಿ ನನಗಾಗಿ ಕಾಯುತ್ತಿದ್ದ. ಏಕೆಂದರೆ ಅವನು ಮರಳಿ ರಾಮನಗರಕ್ಕೆ ಹೋಗುವವನು ನನ್ನನ್ನು ಹಿಂದುಗಡೆ ಕುಳ್ಳಿರಿಸಿಕೊಂಡು ಹೋಗುತ್ತಿದ್ದ. ಶಾಲೆಗೆ ಹೊರಟ ನಾನು ತಂದೆಯವರಲ್ಲಿ ದುಡ್ಡು ಕೇಳಿದೆ. ಆಗ ಅವರು ಹೊರಗಡೆಯಿಂದ ಸೌದೆ ಕೊಳ್ಳಿಗಳನ್ನು ತೆಗೆದುಕೊಂಡು  ಅಡುಗೆಮನೆ ಕಡೆ ಹೊರಟಿದ್ದರು. ‘ದುಡ್ಡು’ ಎಂದು ನಾನು ಕೇಳಿದ್ದೇ ತಡ ‘ಬೋಳಿಮಗನೆ’ ಅಂತ ಕೂಗುತ್ತ ಸೌದೆಕೊಳ್ಳಿ ತೆಗೆದುಕೊಂಡು ನನ್ನನ್ನು ಹೊಡೆಯಲು ಬಂದರು. ನಾನು ಎದ್ದೆನೋಬಿದ್ದೆನೋ ಎಂದು ಓಡಿಕೊಂಡು ಬಂದು ಸೈಕಲ್‌ನ ಹಿಂಭಾಗ ಹತ್ತಿ ಕುಳಿತೆ. ಹಾಲಿನವನು ಕೂಡಲೆ ಸೈಕಲ್‌ ಓಡಿಸಿದ; ಇಲ್ಲವಾಗಿದ್ದರೆ ಆ ದಿವಸ ಅಲ್ಲೇ ನನ್ನ ತಿಥಿ ಆಗಿಬಿಡುತ್ತಿತು!

ರಾಮನಗರ ಊರು ಭಣಭಣ. ಈಗಲೂ ಹಾಗೆಯೇ. ಕೊಳೆತ ರೇಷ್ಮೆಹುಳುಗಳ ಕೆಟ್ಟ ವಾಸನೆ. ಮೇಲೆ ಹಾರಾಡುವ ಹದ್ದುಗಳು. ರಾಮನಗರದ ನನ್ನ ಬದುಕಿಗೂ ಈ ಚಿತ್ರಕ್ಕೂ ಚೆನ್ನಾಗಿ ಸರಿಹೊಂದುತ್ತದೆ.

೧೯೬೭ರಲ್ಲಿ ಎಸ್‌.ಎಸ್‌.ಎಲ್‌.ಸಿ. ಮುಗಿಸಿ ಉಡುಪಿಯ ಭೋಜನಶಾಲೆಯ ಕೂಳಿಗೆ ಕೈಚಾಚಿ ಎಂಜಿಎಂ ಕಾಲೇಜು ಸೇರಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ನೋವು, ಒಂಟಿತನ, ಬಡತನದ ಅಪಮಾನ.

ನನ್ನಲ್ಲಿ ಕೀಳರಿಮೆ, ಒಂಟಿತನ, ಸಾಮಾಜಿಕ ಆತಂಕ ಇತ್ಯಾದಿ ನೇತ್ಯಾತ್ಮಕ ಭಾವನೆಗಳು ಬೆಳೆಯಲು ನನ್ನ ತಬ್ಬಲಿತನ ಹಾಗೂ ಅಹಿತಕರ ಬಾಲ್ಯವೇ ಕಾರಣ. ಆದರೆ ನನಗನ್ನಿಸುತ್ತದೆ ಈ ಬಗೆಯ ಕೊರಗಿನ ಹಾಗೂ ಕಳಚಿದ ಸಂಬಂಧಗಳ ಬಾಲ್ಯವೇ ನನ್ನಲ್ಲಿ ಸ್ವಾವಲಂಬನೆಯ ಭಾವಗಳನ್ನು ಬಡಿದೆಬ್ಬಿಸಿದ್ದು. ಏಕೆಂದರೆ ಪದವಿ ವ್ಯಾಸಂಗದ ದಿನಗಳಲ್ಲಿ ತಂದೆಯವರು ಎಂ.ಓ. ಮಾಡುತ್ತಿದ್ದ ಮಾಹೆಯಾನ ಮೂವತ್ತು ರೂ.ಗಳಿಗಾಗಿ ಹಪಹಪಿಸುತ್ತಿದ್ದೆ. ಹೆಚ್ಚು ಕೇಳುವಂತಿಲ್ಲ. ಕೊಟ್ಟದ್ದು ಸಾಕಾಗುತ್ತಿರಲಿಲ್ಲ. ಪಿಯುಸಿ ಹಂತದಲ್ಲಿ ಎರಡು ಪೈಜಾಮ, ಎರಡು ಟರ್ಲಿನ್‌ ಅಂಗಿ ಹೊಲಿಸಿಕೊಟ್ಟದ್ದು ಬಿಟ್ಟರೆ ಮತ್ತೇನೂ ಕೊಡಲಿಲ್ಲ! ಶಾಲಾ ದಿನಗಳಲ್ಲಿ ಹೋಟೆಲಿನ ಕೆಲಸ ಮಾಡಿದ್ದರಿಂದಾಗಿ ಪದವಿ ಆದೊಡನೆ ತಂದೆಯವರ ಬಳಿಗೆ ಹೋಗದೆ, ಅಜ್ಜನಮನೆಗೂ ಹೋಗದ ದುಡಿದು ಕನ್ನಡ ಎಂ.ಎ. ಓದಬೇಕೆಂಬ ಉತ್ಸಾಹದಲ್ಲಿ ಮೈಸೂರಿಗೆ ಹೋಗಿ ಉಡುಪಿಯವರೊಬ್ಬರ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡೆ! ಅಲ್ಲಿಂದ ಮುಂದೆ ನನ್ನ ವ್ಯಾಸಂಗ, ವೃತ್ತಿಜೀವನ, ವಿವಾಹಜೀವನ ಎಲ್ಲ ನನ್ನ ಸ್ವಂತ ನಿರ್ಧಾರಗಳ ಕಂತೆ. ಒಳಿತೋ ಕೆಡುಕೋ, ಸರಿಯೋ ತಪ್ಪೋ ನನ್ನ ನಿಶ್ಚಯಗಳಿಗೆ ನಾನೇ ಜವಾಬುದಾರ. ಈಗ ನನ್ನನ್ನು ‘ಸ್ವಯಂಸಿದ್ಧ ಮನುಷ್ಯ’ -`Selfmade man’ ಎಂದು ಅಭಿಮಾನದಿಂದ ಹೊಗಳುವವರೆಲ್ಲ ಆಗ ನನ್ನನ್ನು ತುಚ್ಛವಾಗಿ ಕಾಣುತ್ತಿದ್ದರು!

ನನ್ನ ಬಾಲ್ಯ ಅದೆಷ್ಟೇ ಅಹಿತಕರವಾಗಿದ್ದರೂ ಈಗ ಹಿನ್ನೋಟದಲ್ಲಿ ನನಗೆ ಪ್ರಿಯವೇ. ಏಕೆಂದರೆ ಅದು ನನಗೆ ಸ್ವಾವಲಂಬನೆಯ ಪಾಠ ಕಲಿಸಿದೆ. ದುಡಿದು ಗಳಿಸುವುದನ್ನು, ಕಲಿಯುವುದನ್ನು ಕಲಿಸಿದೆ. ತಂದೆತಾಯಿಗಳ ಬಿಸಿಯಪ್ಪುಗೆಯಲ್ಲಿ ಸುಖದ ಪಂಜರದಲ್ಲಿ ಬೆಳೆಯುವ ಮಕ್ಕಳಿಗೆ ಸ್ವಾವಲಂಬನೆಯ, ಸ್ವತಂತ್ರ ನಿರ್ಧಾರದ ಈ ಪಾಠ ಸಿಗಲಾರದು.

ನನ್ನ ಬಾಲ್ಯದ ದಿನಗಳನ್ನು ನನ್ನ ಮಗಳಿಗೆ ಹೇಳುವಾಗ ಅವಳಲ್ಲಿ ಮೊದಮೊದಲಲು ಉತ್ಸಾಹವಿರುತ್ತಿತ್ತು. ಬರಬರುತ್ತ ‘ಅಪ್ಪನ ಕತೆ ಶುರುವಾಯ್ತು’ ಅನ್ನುತ್ತಿದ್ದಳು. ಇಂದಿಗೂ ಸ್ವಲ್ಪ ಏನಾದರೂ ಹೆಚ್ಚು ಕಡಿಮೆಯಾದರೆ ‘ಅಪ್ಪಾ, ಅಮ್ಮಾ’ ಎಂದು ಗೋಳಾಡುವ ಅವಳಿಗೆ ನನ್ನ ಬಾಲ್ಯ ‘ಕತೆಯಲ್ಲ ಜೀವನ’ವೆಂದರೂ ಅವಳಿಗೆ ಅದೊಂದು ಹೊತ್ತು ಕಳೆಯುವ ಕಾಲ್ಪನಿಕ ಕತೆ ಅಥವಾ ಕೇಳಿ ಕೇಳಿ ಸವಕಲಾದ ಹರಿಕತೆ! ತಮಾಷೆ ಎಂದರೆ ಸಣ್ಣ ತೊಂದರೆ ಬಂದಾಗಲೂ ಹೇಳಿಕೊಳ್ಳುವುದಕ್ಕೆ, ಪರಿಹಾರಕ್ಕೆ ಈ ಹರಿಕತೆ ದಾಸಯ್ಯನೇ ಬೇಕು!

ಬಾಲ್ಯಕಾಲ ಮಧುರ ನಿಜ. ಆದರೆ ಮುಂದೆ ಮುಂದೆ ಹೋದಂತೆ ಒಮ್ಮೆಲೆ ಕೆಲವು ಬದಲಾವಣೆಗಳು ಹುಡುಗ-ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತವೆ. ಐದು ಆರನೆಯ ಅಥವಾ ಏಳನೆಯ ತರಗತಿವರೆಗೆ ತಾಯಿ-ತಂದೆ ಮಕ್ಕಳ ನಡುವಿನ ಸಂಬಂಧ ಅತಿಮಧುರ. “ನನ್ನ ಅಮ್ಮ ತುಂಬ ಒಳ್ಳೆಯವಳು”; “ನನ್ನಪ್ಪ ದೇವರ ಹಾಗೆ” ಎಂದು ಹೇಳುವ ಮಕ್ಕಳೇ ಬದಲಾಗಿಬಿಡುತ್ತಾರೆ. ಹದಿಹರೆಯದ ಆರಂಭಿಕ ಹಂತವಿದು. “ಯಾಕೋ ಹೀಗಾಡ್ತೀಯಾ? ಏನಾಗಿದ್ದಯೋ ನಿನಗೆ! ಅಪ್ಪ ಅಮ್ಮನ್ನ ಕಂಡ್ರೆ ಯಾಕೋ ಉರಿ?” ಅಂತ ದೊಡ್ಡವರು ಕೇಳಿದರೆ “ಅಮ್ಮನಾ ಅವ್ಳು; ರಾಕ್ಷಸಿ” ಅಂತ ಮಕ್ಕಳು ಹೇಳೋಕೆ ಶುರುಮಾಡ್ತವೆ. ಒಬ್ಬರಿಗೊಬ್ಬರು ಅರ್ಥವಾಗದ ಸ್ಥಿತಿ. ಸಂಪರ್ಕಸೇತುವೆ ಭಗ್ನಗೊಂಡ ಸ್ಥಿತಿ. ಮಂಜು ಮುಸುಕಿದ ಹಾದಿಯಲ್ಲಿ ಪರಸ್ಪರ ಮುಖಗಳು ಮಸುಕು ಮಸುಕಾದ ಸ್ಥಿತಿ. ಅನೇಕರಿಗೆ ಬಾಲ್ಯಕಾಳದ ಕೊನೆ (ಹದಿಹರೆಯ ಅಬ್ಬರದ ಆರಂಭ). ಸಾಕಷ್ಟು ಯಾತನಾಮಯವೆಂಬು ನಿಜ.

ಮನೆ ನಂದಗೋಕುಲದ ಹಾಗಿದ್ದರೆ ಮಕ್ಕಳು ಚೆನ್ನಗಿ ಬೆಳೆಯುತ್ತವೆ. ಅದರ ಬದಲು ಮನೆಯನ್ನು ಗಂಡ-ಹೆಂಡತಿ ನರಕ ಮಾಡಿಬಿಟ್ಟರೆ ಅದು ಮಕ್ಕಳ ಪಾಲಿಗೆ ಸೆರಮನೆಯಾಗಿ ಬಿಡುತ್ತದೆ. ಮಕ್ಕಳು ಅವಕಾಶ ಸಿಕ್ಕರೆ ಮನೆಬಿಟ್ಟು ಓಡಿಹೋಗುತ್ತಾರೆ ಅಂತ ಕೆಲವರು ಹೇಳುವುದುಂಟು. “ಮಕ್ಕಳನ್ನು ಸರಿಯಾಗಿ ಸಾಕಲಿಕ್ಕೆ ಬಾರದಿದ್ದವರಿಗೆ ಮಕ್ಕಳ್ಯಾಕೆ ಬೇಕು?” ಎಂದು ಹಂಗಿಸುವವರಿಗೇನೂ ಕಮ್ಮಿಯಿಲ್ಲ. ಸಂತೋಷ ತುಂಬಿತುಳುಕುವ ಮನೆ ಮಕ್ಕಳಲ್ಲಿ ಒಂದಿಷ್ಟು ಹೆಚ್ಚಿಗೆ ಆತ್ಮವಿಶ್ವಾಸವನ್ನು, ಚೈತನ್ಯವನ್ನು, ಮುನ್ನುಗ್ಗುವ ಸ್ವಭಾವವನ್ನು ತುಂಬುತ್ತದೆ. ಸಹಜವಾಗಿ ಮಕ್ಕಳು ತಮ್ಮ ಈ ಶಕ್ತಿಸಾಮರ್ಥ್ಯಗಳನ್ನು ಹೊರಜಗತ್ತಿನಲ್ಲಿ ಪರೀಕ್ಷಿಸಲು ಸಿದ್ಧರಾಗುತ್ತಾರೆ. ತಂದೆತಾಯಿಗಳು ಅವರ ಉತ್ಸಾಹಕ್ಕೆ ಅಡ್ಡಿಬಂದರೆ, ಸ್ವಾತಂತ್ಯ್ರಕ್ಕೆ ಧಕ್ಕೆ ಉಂಟುಮಾಡಿದರೆ ಮನೆಬಿಟ್ಟು ಓಡಿಹೋಗುತ್ತಾರೆ ಅಥವಾ ಮನೆಯಲ್ಲೇ ಇದ್ದು ನಿತ್ಯವೂ ಕಾಲುಕೆರೆದು ಜಗಳ ಮಾಡುತ್ತಾರೆ. ಅಪ್ಪ ಅಥವಾ ಅಮ್ಮನನ್ನು ದ್ವೇಷಿಸುತ್ತಾರೆ.

ನನ್ನ ಬಂಧುವೊಬ್ಬನ ತಂದೆತಾಯಿ ಸಂಸ್ಕಾರವಂತರು. ಹಾಗಂತ ಸಂಪ್ರದಾಯಸ್ಥರು. ಮಕ್ಕಳನ್ನು ಪ್ರೀತಿಯಿಂದ ಸಾಕಿದವರು. ಯಾವುದಕ್ಕೂ ಕೊರತೆ ಎಂಬುದಿಲ್ಲ. ಆದರೆ ಅವನು ಸ್ವಾತಂತ್ಯ್ರ ಪ್ರೇಮಿ. ತಂದೆಯ ನಿಬಂಧನೆಗಳು ಅವನಿಗಿಷ್ಟವಿಲ್ಲ. ಹೀಗಾಗಿ ಅವನು ಹೈಸ್ಕೂಲು ಹಂತಕ್ಕೆ ಬರುವ ಹೊತ್ತಿಗೆ ತಂದೆಯ ವಿರುದ್ಧ ಸಿಡಿಯುತ್ತಿದ್ದ. ಒಮ್ಮೆ ಅವನ ತಂದೆ ನಮ್ಮ ಅಜ್ಜನ ಮನೆಗೆ ಬಂದರು. ಇವನು ಉಪ್ಪರಿಗೆ ಏರಿ ಕೋಣೆಯ ಬಾಗಿಲು ಹಾಕಿಕೊಂಡವನು ಯಾರು ಎಷ್ಟು ಕರೆದರೂ ಬಾಗಿಲು ತೆರೆಯಲಿಲ್ಲ. ಹತಾಶರಾದ ತಂದೆ ಸಂಜೆ ಮನೆಗೆ ಹೊರಟು ಹೋದಮೇಲೆ ಹೊರಗೆಬಂದ! ಮುಂದೆ ಕೆಲವೇ ದಿನಗಳಲ್ಲಿ ಅಜ್ಜನ ಮನೆಬಿಟ್ಟು ತಂದೆಮನೆ ಸೇರಿ ಅಲ್ಲೇನೋ ಜಗಳವಾಗಿ ಮನೆಬಿಟ್ಟು ಓಡಿ ಹೋದ. ಸುಮಾರು ಒಂದು ವರ್ಷದ ಬಳಿಕ ಮನೆಗೆ ಮರಳಿದ! ಈಗ ಅವನು ಸಭ್ಯ ಗೃಹಸ್ಥ ಬಿಡಿ!
ಬಾಲ್ಯದಲ್ಲಿ ಮಕ್ಕಳು ಚೆನ್ನಾಗಿ ಬೆಳೆಯಬೇಕು. ವಿದ್ಯೆ ಬುದ್ಧಿ ಸಂಸ್ಕಾರ ಗಳಿಸಬೇಕೆಂಬ ಅತೀವ ಉತ್ಸಾಹದಲ್ಲಿ ತಂದೆತಾಯಿಗಳು ಮಕ್ಕಳ ಮೇಲೆ ವಿಪರೀತ ನಿರ್ಬಂಧಗಳನ್ನು ವಿಧಿಸುತ್ತಾರೆ. ಇದರ ಪರಿಣಾಮ ಏನೆಂದರೆ ಹಲವು ಮಕ್ಕಳು “ಅವರಪ್ಪ ಎಷ್ಟು ಒಳ್ಳೆಯವರು. ಫ್ರೆಂಡ್ಸ್‌ ಜೊತ ಆಟ ಆಡೋಕೆ ಬಿಡ್ತಾಋಎ. ಸಿನೆಮಾಕ್ಕೆ ಹೋದ್ರೆ ಬಯ್ಯಲ್ಲ. ಅವರು ನನ್ನಪ್ಪ ಆಗಬೇಕಿತ್ತು!”, “ಅವರಮ್ಮ ತುಂಬ ಸಾಧು ಸ್ವಭಾವದವರು. ತುಂಬ ಮುದ್ದುಮಾಡ್ತಾರೆ. ಸ್ವಲ್ಪಾನೂ ಬೈಯಲ್ಲ. ನಾನು ನಿನ್ನ ಹೊಟ್ಟೇಲಿ ಹುಟ್ಟೋ ಬದ್ಲು ಅವ್ರ ಹೊಟ್ಟೇಲಿ ಹುಟ್ಬೇಕಾಗಿತ್ತು” ಅಂತ ಹೇಳ್ತಾರೆ! ಏನ್ಮಾಡ್ತೀರಿ ತಂದೆತಾಯಿಯನ್ನು ಬದಲಾಯಿಸೋಕೆ ಸಾಧ್ಯನಾ? ಬದಲಾಯಿಸಿದ ಮಾತ್ರಕ್ಕೆ ಸಮಸ್ಯೆ ಪರಿಹರ ಆಗುತ್ತಾ? ಆ ತಂದೆತಾಯಿ ಹೊರಗೆ ಪ್ರದರ್ಶನಕ್ಕೆ ಸೌಮ್ಯವಾಗಿದ್ದು ಒಳಗೆ ಬೇರೆ ರೀತಿ ಯಾಕಿರಬಾರ್ದು? ಅಥವಾ ಮಕ್ಕಳಿಂದ ಇಂಥ ಪ್ರತಿಕ್ರಿಯೆ ಬರದೆ ಇರೋ ಹಾಗೆ ವರ್ತಿಸಲಿಕ್ಕೆ ನಮ್ಮಿಂದ ಸಾಧ್ಯನಾ?

ನಮ್ಮ ಬಾಲ್ಯವನ್ನು ಒದ್ದೆ ಕಣ್ಣುಗಳಿಂದ ಹಿಂತಿರುಗಿ ನೋಡುತ್ತಿದ್ದೇವೆ. ನಮ್ಮ ಮಕ್ಕಳ ಬಾಲ್ಯ ಕಣ್ಣೆದುರೆ ನಡೆದಿದೆ. ಮೊಮ್ಮಕ್ಕಳ ಬಾಲ್ಯ ಇಲ್ಲರಳಿ ನಗಲಿದೆ. ನೋಡುನೋಡುತ್ತಾ ಒಂದಂತೂ ನಿಚ್ಚಳವಾಗುತ್ತಿದೆ: ಮಕ್ಕಳಿಗೆ ಬಾಲ್ಯಕಾಲದಲ್ಲಿ ಜವಾಬ್ದಾರಿಯುತ ಸ್ವಾಯತ್ತೆ-ಸ್ವಾತಂತ್ಯ್ರ ಬೇಕು. ಹಿರಿಯರು ಅವರ ಈ ಹಕ್ಕನ್ನು ಮಾನ್ಯಮಾಡಬೇಕು. ಮಕ್ಕಳು ಈ ಹಕ್ಕನ್ನು ಸ್ಥಾಪಿಸಬೇಕು.