ನನ್ನ ಮುಂದೆ ಓರ್ವ ತಂದೆ ಹಾಗೂ ಆತನ ಒಂದೂವರೆ ವರ್ಷದ ಮಗ ರಸ್ತೆಬದಿಯಲ್ಲಿ ಸಾಗುತ್ತಿದ್ದರು. ತಂದೆ ಮಗನ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದ. ಮಗ ತಂದೆಯ ಕೈಯಿಂದ ತನ್ನ ಕೈಯನ್ನು ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದ. ಮುಂದೆ ಮುಂದೆ ಓಡಲು ಹವಣಿಸುತ್ತಿದ್ದ. ಅಪ್ಪನ ಮುಷ್ಟಿ ಬಲವಾಗತೊಡಗಿತು. ಕೊನೆಗೊಮ್ಮೆ ಅಪ್ಪ ಸಿಟ್ಟಿನಿಂದ ಹೇಳಿದ “ಇದು ರಸ್ತೆ. ಅಪಾಯ. ಬಸ್ಸು-ಕಾರುಗಳು ಓಡಾಡ್ತವೆ. ನೀನು ನನ್ನ ಕೈ ಬಿಡಿಸಿಕೊಂಡು ಹೋಗ್ಬೇಡ.” ಸ್ವತಂತ್ರವಾಗಿ ರಸ್ತೆಯಲ್ಲಿ ತಂದೆಯ ಪಕ್ಕದಲ್ಲಿ ನಡೆಯುವ ಅವಕಾಶವೊಂದು ಹುಡುಗನ ಕೈತಪ್ಪಿಹೋಯಿತು.

ಅದೊಂದು ಉದ್ಯಾನ. ಸಂಜೆಯ ಸಮಯ. ಅಲ್ಲಲ್ಲಿ ಮೀನ್ಮನೆಗಳು, ಕಾರಂಜಿಗಳು ಇದ್ದವು. ತಂದೆ-ತಾಯಿ-ಮಗಳು ಕಾಲುದಾರಿಯಲ್ಲಿ ಹೋಗ್ತಾ ಇದ್ದರು. ಮಗಳು ತಂದೆಯ ಕೈಬಿಡಿಸಿಕೊಂಡು ಮೀನ್ಮನೆಗಳ ಬಳಿಗೆ ಓಡಿಹೋದಳು. ತಂದೆ ಅವಳನ್ನು ಹಿಂಬಾಲಿಸಿಕೊಂಡು ಬಂದು ಅವಳ ಹಿಂದೆಯೇ ನಿಂತ. ಅವಳು ಮೀನಿನ ತೊಟ್ಟಿಗಳನ್ನು ಬೀಳಿಸಿ ಏನಾದರೂ ಅನಾಹುತ ಮಾಡದಿರಲೆಂದು ಹಿಂದೆ ನಿಂತಿದ್ದ. ಅಲ್ಲಿಂದ ಮಗಳು ನೀರಿನ ಕಾರಂಜಿ ಹಾಗೂ ಕೊಳದ ಬಳಿಗೆ ತೆರಳಿದಳು. ತಂದೆ ಅಲ್ಲಿಗೂ ಹಿಂಬಾಲಿಸಿ ಸ್ವಲ್ಪ ದೂರ ನಿಂತ. ಮಗಳು ನೀರಿನ ಕಾರಂಜ ನೋಡಿ ಖಷಿಪಟ್ಟಳು. ಕುಣಿದು ಕುಪ್ಪಳಿಸಿದಳು. ಮಗಳು ಕೊಳದ ತೀರ ಸಮೀಪಕ್ಕೆ ಹೋಗುವವರೆಗೂ ಅವನೇನೂ ಹೇಳಲಿಲ್ಲ. ಕೊಳದ ಮೆಟ್ಟಿಲು ಇಳಿಯಬೇಕೆನ್ನುವಾಗ ಹಿಂತಿರುಗಿ ನೋಡಿ ಅಪ್ಪನ ಅನುಮತಿ ಕೇಳಿದಳು. ಅದಕ್ಕೆ ಅಪ್ಪ  “ನೀನೊಬ್ಬಳೇ ಹೋಗ್ಬೇಡ. ಕಾಲುಜಾರೀತು. ನಾನು ಬರುತ್ತೇನೆ. ಕೈಹಿಡಿದುಕೊಳ್ಳುತ್ತೇನೆ” ಎಂದು ಹೇಳಿ ಮುಂದೆ ಬಂದು ಅವಳ ಕೈಹಿಡಿದು ಮೆಟ್ಟಿಲಿಳಿದು ಕೊಳದ ಬುಡ ತಲುಪಿದರು. ಮೇಲಿನ ಎರಡೂ ಘಟನೆಗಳನ್ನು ಪರಿಶೀಲಿಸಿ ಮಗಳಿಗೆ ಒಂದಿಷ್ಟೂ ಸ್ವಾತಂತ್ಯ್ರ ಕೊಡದ ಹಾಗೂ ಹಿತಮಿತವಾದ ಸ್ವಾತಂತ್ಯ್ರವನ್ನು ಒದಗಿಸುವ ತಂದೆತಾಯಿಗಳಿಗೆ ಸಂಬಂಧಿಸಿದ ಎರಡು ಚಿತ್ರಗಳಿವು.

ಬಸ್ಸಿನಲ್ಲಿ ನನಗಿಂತ ಎರಡು  ಸೀಟು ಆಚೆ ಒಬ್ಬಳು ತಾಯಿ ಕೂತಿದ್ದಳು. ಮೊಬೈಲ್‌ನಲ್ಲಿ ಮಗಳ ಜೊತೆ ಮಾತಾಡುತ್ತಿದ್ದಳು. “ಅಲ್ಲ. ಜಾಗ್ರತೆ ಮಾಡು. ಒಬ್ಬೊಬ್ಬಳೇ ಹೊರಗೆ ಹೋಗ್ಬೇಡ. ರೌಡಿಗಳಿರ್ತಾರೆ. ಏನಾದರೂ ಮಾಡಿದರೆ?” ದೂರದ ಊರಿನಲ್ಲಿ ಧೈರ್ಯವಾಗಿ ಓಡಾಡುವ ಮಗಳನ್ನು ನಿರ್ಬಂಧಿಸುವುದು ಮಾತ್ರವಲ್ಲದೆ ಅವಳ ಮನದಲ್ಲಿ ಅನಗತ್ಯ ಭಯವನ್ನು ಆ ತಾಯಿ ಬಿತ್ತಿದಳು.

ರೌಡಿಗಳಿದ್ದಾರೆ. ಈಗೀಗ ಹೆಣ್ಣುಮಕ್ಕಳು ಒಬ್ಬೊಬ್ಬರೇ ತಿರುಗುವುದು ಕಷ್ಟ. ಯಾರ ದೃಷ್ಟಿ, ವಿಚಾರ ಹೇಗೋ ಹೇಳುವುದು ಕಷ್ಟ. ಸುಲಭದಲ್ಲಿ ಕೈಗೆ ಬರುವ ಮಾದಕದ್ರವ್ಯಗಳಿಂದಾಗಿ ಅನೇಕರು ವಾಸ್ತವ ಶ್ರದ್ಧೆಯನ್ನೇ ಕಳೆದುಕೊಂಡಿರುತ್ತಾರೆ. ಹೀಗಾಗಿ ಆ ತಾಯಿಯನ್ನು ನಾನು ದೂಷಿಸುತ್ತಿಲ್ಲ. ಮಕ್ಕಳು ತಂಟರಮಾರಿಗಳಾಗಿದ್ದಿರಬಹುದು. ಅವರ ಮಕ್ಕಳಾಟಿಕೆಯಿಂದ ಯಾರಿಗೋ ತೊಂದರೆ ಆಗಬಹುದು. ಅವರ ಕುತೂಹಲವೇ ಅವರ ಬದುಕಿಗೆ ಮುಳುವಾಗಬಹುದು. ಆದರೆ ವಯಸ್ಕರ ಆತಂಕಗಳಿಂದ ಮಕ್ಕಳ ಮೇಲೆ ಏನು ಪರಿಣಾಮಗಳಾಗುತ್ತವೆ? ಹಿರಿಯರ ಆತಂಕಪೀಡಿತ ಭಾವನೆಗಳು ಮಕ್ಕಳಿಗೆ ಅವರ ಬಗ್ಗೆ ಮತ್ತು ಅವರ ಸುತ್ತಲಿನ ಪ್ರಪಂಚದ ಬಗ್ಗೆ ಯಾವ ಸಂದೇಶಗಳನ್ನು ನೀಡುತ್ತವೆ? ಮೇಲಾಗಿ ಅವರ ಸಾಮರ್ಥ್ಯಗಳ ಬಗ್ಗೆ ಏನು ಸೂಚನೆಗಳು ಹೊರಹೊಮ್ಮುತ್ತವೆ?

ಮೇಲೆ ನಿರೂಪಿಸಿದ ಒಂದು ಹಾಗೂ ಮೂರನೆಯ ಪ್ರಕರಣಗಳಿಂದ ತಂದೆತಾಯಿಗಳ ಆಲೋಚನೆಗಳೇನು ಎಂಬುದು ಹೀಗೆ ಸ್ಪಷ್ಟವಾಗುತ್ತದೆ: (೧) ಈ ಜಗತ್ತು ಕ್ರೂರವಾಗಿದೆ. ಅನೂಹ್ಯವಾಗಿದೆ. ಅತ್ಯಂತ ಅಪಾಯಕಾರಿಯಾಗಿದೆ. (೨) ಈ ಕ್ಷಣದ ಜಗತ್ತಿನೊಂದಿಗೆ ಏಗುವುದು ನಿನ್ನಿಂದ ಸಾಧ್ಯವಿಲ್ಲ. ನೀನು ಕಷ್ಟಗಳಿಂದ ಪಾರಾಗಲು ನನ್ನನ್ನು ಅವಲಂಬಿಸಬೇಕು.

ಆತಂಕಕ್ಕೆ ಒಳಗಾದ ತಂದೆತಾಯಿಗಳೇ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಮಕ್ಕಳು ಚೆನ್ನಾಗಿ ಓದುವಂತೆ ಮಾಡುವುದು ಹೇಗೆ? ಅವರು ಹೆಚ್ಚು ಅಂಕ ಗಳಿಸಲಿಕ್ಕೆ ಏನ ಉ ಮಾಡಲಿ? ಎಂದೆಲ್ಲ ಚಿಂತಿತರಾಗುತ್ತಾರೆ. ಕೊನೆಗೊಂದು ದಿನ ‘ನನ್ನ ಮಗನಿಗೆ ಯಾವುದರಲ್ಲೂ ಆಸಕ್ತಿಯಿಲ್ಲ’ ಎಂದು ತೀರ್ಪು ಕೊಡುತ್ತಾರೆ. ಅಪ್ಪ ಅಮ್ಮನಿಗೆ ಗೊತ್ತಾದರೆ ‘ಯಾಕೆ ಅದನ್ನು ಮಾಡ್ತೀಯಾ? ಅದೆಲ್ಲ ಮಾಡ್ತಾ ಕೂತ್ರೆ ನೀನು ಪಾಸಾಗೋದು ಹೇಗೆ?’ ಅಂತ ಬೈತಾರೆ ಅಂತಂದುಕೊಂಡು ಮಕ್ಕಳು ಕೆಲವು ಸಂಗತಿಗಳನ್ನು ತಂದೆತಾಯಿಗಳ ಗಮನಕ್ಕೆ ತರುವುದಿಲ್ಲ. ಕುತೂಹಲವನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಎಷ್ಟು ಸಮಯ ಹೀಗೆ ಮಕ್ಕಳ ಆಸಕ್ತಿ, ಕುತೂಹಲ ಮತ್ತು ಉತ್ಸಾಹವನ್ನು ಬತ್ತಿಹಿಡಿಯಲು ಸಾಧ್ಯ ಹೇಳಿ? ಹೀಗೆಲ್ಲ ಒತ್ತಿ ಹಿಡಿದಿದ್ದರಿಂದ ತಾನೆ ಮುಂದೆ ಅವರು ಕಲಿಕೆಯ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು?

ಕೆಲವು ತಾಯಂದಿರು ಹೇಳುವುದಿದೆ: “ನಮ್ಮ ಮಗಳು ಹಾಲು, ಬಿಸಿನೀರು ಇತ್ಯಾದಿ ಕಾಯಿಸ್ತಾಳೆ. ಆಫೀಸಿನಿಂದ ಬಂದಕೂಡಲೆ ಬೇಕಾದರೆ ನನಗೊಂದು ಲೋಟ ಕಾಫಿ ಮಾಡಿಕೊಡ್ತಾಳೆ. ಅಡುಗೆ ಮಾಡುವುದನ್ನು ಇನ್ನೂ ಕಲಿತಿಲ್ಲ. ಕಡೆಗೆ ಪಾತ್ರೆಗೀತ್ರೆ ಮೈಮೇಲೆ ಬಿದ್ದು ಏನಾದ್ರೂ ಅನಾಹುತ ಆದ್ರೆ?” ಕೈಮೈ ಸುಟ್ಟುಕೊಂಡರೆ? ಗಾಯಗೀಯ ಆದ್ರೆ? ಎಂಬೀ ಪ್ರಶ್ನೆಗಳು ಸೃಷ್ಟಿಸುವ ಭಯದಿಂದಾಗಿ ನಾವು ಮಕ್ಕಳನ್ನು ಕೆಲವೊಂದು ಕೆಲಸಗಳಿಂದ ದೂರ ಇಟ್ಟುಬಿಡುತ್ತೇವೆ . ನನ್ನ ಪರಿಚಿತರೊಬ್ಬರು ಶಾಲಾ ಶಿಕ್ಷಕರಾಗಿದ್ದರು. ಅವರು ಏಳನೆಯ ತರಗತಿ ಓದುತ್ತಿರುವ ತಮ್ಮ ಕಿರಿಯ ಮಗನನ್ನು ಆಗಾಗ್ಗೆ ಉಡುಪಿಯಿಂದ ಮಂಗಳೂರಿಗೆ ವ್ಯವಹಾರದ ನಿಮಿತ್ತ ಕಳುಹಿಸಿಕೊಡುತ್ತಿದ್ದರು. ಆ ಹುಡುಗ ಮಂಗಳೂರಿಗೆ ಹೋಗಿ ಅಲ್ಲಿ ಕೆಲವರನ್ನು ಕಂಡು ಮಾತನಾಡಿಸಿ ತಂದೆ ವಹಿಸಿಕೊಟ್ಟ ಕೆಲಸವನ್ನು ಒಂದಿಷ್ಟೂ ಲೋಪಬಾರದಂತೆ ಮಾಡಿಕೊಂಡು ಬರುತ್ತಿದ್ದ.  ಅವರು ಆಗಾಗ್ಗೆ ನನ್ನ ಬಳಿ ತಮ್ಮ ಕಿರಿಮಗನ ಈ ಸಾಹಸದ ಕತೆಗಳನ್ನು ಹೇಳುತ್ತಿದ್ದರು. ಬಾಲ್ಯದಲ್ಲಿ ಇಂಥ ಅವಕಾಶವನ್ನು ಪಡೆಯದ ನನಗೆ ಅಚ್ಚರಿಯೋ ಅಚ್ಚರಿ! ವ್ಯಕ್ತಿಯ ಸಾಮರ್ಥ್ಯದಲ್ಲಿ ವಿಶ್ವಾಸವಿಟ್ಟು ಹೊಣೆಗಾರಿಕೆಯನ್ನು ವಹಿಸಿಕೊಡುವ ಜಾಣ್ಮೆಯಿದು.

ಕಿರಿಯರಲ್ಲಿರುವ ಸಾಮರ್ಥ್ಯ ಹಾಗೂ ಉತ್ಸಾಹವನ್ನು ಬಹಳಷ್ಟು ಸಂದರ್ಭಗಳಲ್ಲಿ ನಾವು ಕೀಳಂದಾಜು ಮಾಡುತ್ತೇವೆ. “ಈಗಿನ ಮಕ್ಕಳಲ್ಲಿ ಕ್ರಿಕೆಟ್‌ ಹೊರತುಪಡಿಸಿ ಬೇರಾವುದರಲ್ಲಕೂ ಆಸಕ್ತಿಯಿಲ್ಲ. ಕ್ರಿಕಟ್‌ ಬಗ್ಗೆ ಏನು ಬೇಕಾದರೂ ಕೇಳಿ, ಹೇಳ್ತಾರೆ. ಅದೇ ಪಾಠದ ಬಗ್ಗೆ ಕೇಳಿ, ಏನೂ ಗೊತ್ತಿಲ್ಲ” ಎಂಬ ಟೀಕೆ ಸಾಮಾನ್ಯವಾಗಿ ಶಿಕ್ಷಕರಿಂದ ಬರುತ್ತಿದೆ. ಮನೆಗೆ ಬಂದ ಅತಿಥಿಗಳ ಮುಂದೆ “ನಮ್‌ ಹುಡುಗ ಮಾರ್ಕು ತೆಗೆಯುವುದರಲ್ಲಿ ಹಿಂಧೆ. ಮೈಗಳ್ಳ, ಸೋಂಭೇರಿ. ಹಾಗಂತ ಆಟಕ್ಕೆ ಮುಂದು” ಎಂದು ಅಪ್ಪ ಮಗನ ಮರ್ಯಾದೆ ತೆಗೆಯುತ್ತಾನೆ.

ಸಮಸ್ಯೆಯಿರುವುದು ಮಕ್ಕಳಲ್ಲಲ್ಲ. ದೊಡ್ಡವರಲ್ಲಿ; ಹೆತ್ತವರು ಹಾಗೂ ಶಿಕ್ಷಕರಲ್ಲಿ ನಾವು ಮಕ್ಕಳು ನಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸದಿದ್ದರೆ ಹತಾಶರಾಗಿ ಅವರು ನಿರುಪಯುಕ್ತರು ಎಂದು  ಹಣೆಪಟ್ಟಿ ಹಚ್ಚಿ ಹೀಯಾಳಿಸುತ್ತೇವೆ ಮತ್ತು ಅವರ ಆತ್ಮಸಂಮಾನಕ್ಕೆ ಕೊಡಲಿ ಏಟು ಹಾಕುತ್ತೇವೆ. “ನೀನು ಪ್ರಯೋಜನವಿಲ್ಲ.  ವೇಸ್ಟ್‌ಬಾಡಿ.  ಬೇಜವಾಬ್ದಾರಿಯ ಅಸಮರ್ಥ ವ್ಯಕ್ತಿ. ನಿನ್ನ ಕೈಲಿ ಯಾವ ಕೆಲ್ಸವೂ ಆಗುವುದಿಲ್ಲ . ನೀನು ಶತ ದಡ್ಡ” ಎಂಬಂಥ ಭಾವನೆಗಳನ್ನು ನಮ್ಮ ನೋಟ, ಮಾಟ ಹಾಗೂ ಮಾತು ಗಳ ಮೂಲಕ ಅವರಲ್ಲಿ ಬಿಂಬಿಸುತ್ತೇವೆ. “ನನ್ನ ಅಪ್ಪ ಅಮ್ಮ ಮೇಷ್ಟ್ರು ಎಲ್ಲ ನನ್ನನ್ನು ದಡ್ಡ-ನಿಷ್ಪ್ರಯೋಜಕ ಅಂತ ಕರೀತಿದ್ದಾರೆ. ಹಾಗಾದರೆ ನಾನು ಬುದ್ಧಿವಂತ ಯಾಕಾಗಬೇಕು? ನಾನು ದಡ್ಡ ಆಗಿರೋದ್ರಿಂದ ಅವರು ನನ್ನ ತಂಟೆಗೆ ಬರೋಲ್ಲ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡ್ತಾರೆ” ಅಂತ ಮಕ್ಕಳು ಅಂದುಕೊಂಡು ಸಂತೋವಾಗಿರ್ತಾರೆ. ಬಾಲ್ಯದ ಈ ಕಾಲದಲ್ಲಿ ಮಕ್ಕಳಲ್ಲಿ ನಿರುಪಯುಕ್ತತೆಯ ಭಾವನೆಗಳು ಬೆಳೆಯದಂತೆ ಹೆತ್ತವರು ಹಾಗೂ ಶಿಕ್ಷಕರು ನೋಡಿಕೊಳ್ಳಬೇಕು.

ಮಕ್ಕಳಿಗೆ ಸೂಕ್ತ ತರಬೇತಿ ಕೊಡಿ. ಜವಾಬ್ದಾರಿ ವಹಿಸಿಕೊಡಿ. ಏನು ಮಾಡಬೇಕೆಂಬುದನ್ನು ತಿಳಿಸಿ. ಹೇಗೆ ಮಾಡಬೇಕೆಂಬುದನ್ನೂ ತಿಳಿಸಿ. ಅಥವಾ ನೀವೇ ನಿಮಗೆ ತೋಚಿದ ಹಾಗೆ ಮಾಡಿ ಅನ್ನಿ. ಖಂಡಿತಕ್ಕೂ ಹಲವು ಮಕ್ಕಳು ತಮಗೆ ಕೊಟ್ಟ ಹೊಣೆಯನ್ನು ಬಹಳ ಚೆನ್ನಾಗಿ ಹಿರಿಯರು ನಾಚುವಂತೆ ನಿರ್ವಹಿಸುತ್ತಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಮಾವೇಶಗಳು, ಶಾಲಾ ಸಂಸತ್ತು ಇತ್ಯಾದಿಗಳೆಲ್ಲ ಇವಕ್ಕೆ ನಿದರ್ಶನಗಳು. ಕೆಲಸ ಮಕ್ಕಳ ಪಾಲಿಗೆ ಬೋರಿಂಗ್‌. ಅವರು ಅದನ್ನು ಮಾಡಲಾರರು ಎಂದು ಅನ್ನಿಸಬಹುದು . ಆದರೆ ತಮಗೆ ಆಸಕ್ತಿಕರವೆನಿಸುವ ಎಲ್ಲ ಕೆಲಸಗಳನ್ನೂ ಅವರು ದಕ್ಷತೆಯಿಂದ ಮಾಡಬಲ್ಲರು. ಅವರಿಗೆ ನಿರಂಥರ ಪ್ರೇರಣೆ. ಮೆಚ್ಚುಗೆ ಬೇಕಾದೀತಷ್ಟೆ. ಹೀಗೆ ಪ್ರೀತಿಯಿಂದ, ಪರರ ಪ್ರೇರಣೆಯಿಂದ ಕೆಲಸಮಾಡುತ್ತಾ ಹುಡುಗ-ಹುಡುಗಿಯರು ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ತಮ್ಮ ಸಾಮರ್ಥ್ಯಗಳ ಕೌಶಲಗಳ ಲೋಕವನ್ನು ಅನಾವರಣ ಮಾಡಿಕೊಳ್ಳುತ್ತಾರೆ. ಬಟ್ಟೆ ಒಗೆದು, ಪಾತ್ರೆ ತೊಳೆದು, ಮನೆಮನೆಗೆ ‘ನಂದಿನಿ’ ಹಾಗೂ ಪೇಪರ್ ಹಾಕಿ ತಮ್ಮ ಸಾಮರ್ಥ್ಯಗಳ ಬಗ್ಗೆ ತಾವೇ ಋಷಿಪಡಬಹುದು. ತರಗತಿಯ ಪಾಠಪ್ರವಚನಗಳು ಬಹುಮಟ್ಟಿಗೆ ಏಕತಾನತೆಯಿಂದ ಕೂಡಿರುವುದರಿಂದ, ಒಂದೇ ಬಗೆಯ ಅನುಭವ ಲಭಿಸುವುದರಿಂದ ಅವರು ಅದರಲ್ಲಿ ವಿಶೇಷ ಆಸಕ್ತಿ ತೋರಿಸದಿರಬಹುದು ಅಥವಾ ಅವರ ಪಾಠಪಟ್ಟಿಯ ಅನೇಕ ವಿಷಯಗಳು ತೀರ ಅಮೂರ್ತವಾಗಿದ್ದು ಗ್ರಹಿಕೆಗೆ ನಿಲುಕದಿರಬಹುದು. ಆದರೆ ಈ ಬಗ್ಗೆ ನಾವೆಂದೂ ಯೋಚಿಸುವುದಿಲ್ಲ. ಸುಲಭದಲ್ಲಿ ‘ದಂಡ’ ಎಂದು ತೀರ್ಪು ಕೊಟ್ಟು ಬಿಡುತ್ತೇವೆ! ಇಡಿ ತರಗತಿಯ ಎದುರು ಘೋಷಣೆ ಮಾಡಿಬಿಡುತ್ತೇವೆ! ಮಗುವಿನ ಮನಸ್ಸಿನ ಮೇಲಾಗುವ ಗಾಯ ನಮಗೆ ಗೋಚರಿಸುವುದೇ ಇಲ್ಲ.

ಬಗೆಬಗೆಯ ಚಟುವಟಿಕೆಗಳನ್ನು ಮಕ್ಕಳು ಮಾಡಬಲ್ಲರು ಎಂದರೆ ಕೆಲವರು ನಂಬುವುದೇ ಇಲ್ಲ. ಅದು ಹೇಗೆ ಮಕ್ಕಳು ಅಷ್ಟು ಬುದ್ಧಿವಂತರಾಗಲು ಸಾಧ್ಯ? ಅದ್ಹೇಗೆ ಉಡುಪಿಯಿಂದ ಮಂಗಳೂರಿಗೆ ಹೋಗಿ ದೊಡ್ಡವರ ಹಾಗೆ ಕೆಲ್ಸ ಮಾಡ್ಕೊಂಡು ಬರಲು ಸಾಧ್ಯ? ಎಲ್ಲ ಕಟ್ಟುಕತೆ, ಉತ್ಪ್ರೇಕ್ಷೆ ಅನ್ನಬಹುದು. ಆದರೆ ಮಾರ್ಗದರ್ಶನ, ಅನುಭವ ಹಾಗೂ ಒಡ್ಡುವಿಕೆಯ ಅವಕಾಶಗಳು ಸಿಕ್ಕಿದ ಮಕ್ಕಳು ಸಹಜವಾಗಿ ವೈವಿಧ್ಯಮಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾರೆ.

ಕ್ರೀಡೆ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ನಾವು ಬಾಲಪ್ರತಿಭೆ (child prodigಯ) ಗಳ ಬಗ್ಗೆ ಕೇಳುತ್ತೇವೆ . ತೆಂಡುಲ್ಕರ್, ಮಾಸ್ಟರ್ ಶ್ರೀನಿವಾಸ್‌ ಹೀಗೆ ಪಟ್ಟಿ ಮಾಡಬಹುದು. ಆದರೆ ಇಲ್ಲೂ ಅಸಾಧಾರಣ  ಪ್ರತಿಭೆಯ ಬಗ್ಗೆ ವಿಸ್ಮಯಪಡುವ ಬದಲು ಅಪ್ಪ ಅಮ್ಮ ಬಹಳ ಬಲವಂತಮಾಡಿ  ತಲೆಗೆ ತುರುಕಿ, ಗುದ್ದಿ ಈ ರೂಪಕ್ಕೆ ತಂದಿದ್ದಾರೆ ಎನ್ನುವವರುಂಟು. ಕೇವಲ ಎರಡು ಎರಡೂವರೆ ವರ್ಷದ ಹುಡುಗನೊಬ್ಬ ಮಂಗಳೂರಿನಲ್ಲಿ ಕಂಪ್ಯೂಟರ್ ಜ್ಞಾನ ಸಾಧಿಸಿದ್ದು ಕೇಳಿ, ನೋಡಿ, ಪರಿಶೀಲಿಸಿ ಡಾ|| ವೀರೇಂದ್ರ ಹೆಗ್ಗಡೆಯವರು ಆ ಬಾಲಕನಿಗೆ ಒಂದು ಕಂಪ್ಯೂಟರ್ ಕೊಡುಗೆ ನೀಡಿದರು. ಆಗ ಆ ಬಾಲಕನ ಬುದ್ಧಿಮತ್ತೆ ಬಗ್ಗೆ ನಂಬದವರೇ ಬಹಳ. ಇಂಥ ಮಕ್ಕಳನ್ನು ಕಂಡಾಗ ಎರಡು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಒಂದು ದೈವಾಂಶ ಸಂಭೂತ ಮಕ್ಕಳಿರಬೇಕು. ಸರಸ್ವತಿಯೇ ನಾಲಗೆ ಮೇಲೆ ಕುಳಿತು ಮಾತಾಡಿಸುತ್ತಿರಬೇಕು ಎಂಬ ಆರಾಧನಾಭಾವ. ಇನ್ನೊಂದು, ಈ ಮಗು ಮಾನುಷ ಸಹಜವಲ್ಲ. ಇದು ಭೂತ ಮೆಟ್ಟಿದ ಮಗು ಎಂಬ ಅಪನಂಬಿಕೆಯ ದೃಷ್ಟಿ. ಆದರೆ ಜಪಾನಿ ಸಂಗೀತ ನಿರ್ದೇಶಕ ಹಾಗೂ ಗುರು ಸುಜುಕಿ ಅವರ ಪ್ರಕಾರ ‘ನಾಲ್ಕು’, ಐದು ಅಥವಾ ಆರರ ಹರೆಯದ ಮಕ್ಕಳು ಅಸಾಧಾರಣ ಹಿಡಿತದೊಂದಿಗೆ ವಯೊಲಿನ್‌ ನುಡಿಸುವುದನ್ನು ಕಲಿಯಬಲ್ಲರು. ಹೀಗೆ ಕಲಿಯುವ ಮಕ್ಕಳಲ್ಲಿ ಕೆಲವೇ ಕೆಲವರು ಅಸಾಧಾರಣ ಪ್ರತಿಭೆಯುಳ್ಳವರು; ಬಹುಮಂದಿ ಸಾಧಾರಣ ಬುದ್ಧಿಶಕ್ತಿ ಉಳ್ಳ ಮಕ್ಕಳು. ತಮ್ಮ ಇಡಿ ಜೀವನವನ್ನು ಮುಡಿಪಾಗಿಡದೆ, ಅಮೂಲ್ಯ ಬಾಲ್ಯವನ್ನು ಬಲಿಗೊಡದೆ, ಓದುಬರೆಹವನ್ನು ಮೂಲೆಗುಂಪು ಮಾಡದೆ ಮಕ್ಕಳು ವಯೊಲಿನ್‌ ಕಲಿಯಬಲ್ಲರು ಮತ್ತು ಚೆನ್ನಾಗಿ ನುಡಿಸಬಲ್ಲರು. ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದರೆ ಮಕ್ಕಳು ಏನನ್ನೂ ಚೆನ್ನಾಗಿ ಕಲಿಯಬಲ್ಲರು. ಜೆರೋಮ್‌ ಬ್ರುನರ್ ಇದನ್ನು ತಾನೆ ಹೇಳಿದ್ದು. ಯಾವ ವಯಸ್ಸಿನ ಮಗುವೂ ಏನನ್ನೂ ಕಲಿಯಬಹುದು . ಅದು ಸುಲಭ, ಇದು ಕಷ್ಟ ಎಂಬುದಿಲ್ಲ . ಕಲಿಯುವ ವಿಷಯವನ್ನು ಸಮಸ್ಯಾತ್ಮಕ ರೀತಿಯಲ್ಲಿ ನಿರೂಪಿಸುತ್ತ ಕಲಿಸಿರಿ. ಶೋಧನಾತ್ಮಕ ಆವರಣ ಸೃಷ್ಟಿಸಿ. ಪುಟಾಣಿ ವಿಜ್ಞಾನಿ ಮಗುವಗಿಎ ಸ್ವಯಂಶೋಧನೆಗೆ ಅವಕಾಶ ಕೊಡಿ. ಮಗು ಹುಡುಕುತ್ತ , ತಿರುಗುತ್ತ ಪರಿಶೀಲಿಸುತ್ತ, ಒರೆಗೆ ಹಚ್ಚುತ್ತ ಕಲಿಯುತ್ತದೆ . ಅದು ಕಲಿಯುವುದಿಲ್ಲ; ಅದಕ್ಕೆ ಕಲಿಯುವ ಶಕ್ತಿ ಇಲ್ಲ ಎಂಬುದು ನಿಮ್ಮ ತಪ್ಪು; ದಡ್ಡ ಊಹೆ ಅಷ್ಟೆ.

ಮಕ್ಕಳ ಸಹಜ ಸಾಮರ್ಥ್ಯಗಳು ಏನು ಎನ್ನುವುದಕ್ಕೆ ದಿ|| ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಶ್ರೀ ಎಚ್‌. ಶ್ರೀಧರ ಹಂದೆ ಎಂಬ ಇಬ್ಬರು ಪ್ರೌಢಶಾಲಾ ಶಿಕ್ಷಕರು ಕೆಲವು ದಶಕಗಳ ಹಿಂದೆ ಆರಂಭಿಸಿದ ಮಕ್ಕಳಮೇಳ ಸಾಲಿಗ್ರಾಮ ದೇಶವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಸ್ವಂಭೀಭೂತಗೊಳಿಸಿದೆ. ಪುಟ್ಟ ಮಕ್ಕಳು ವೃತ್ತಿಪರ ಯಕ್ಷಗಾನ ಕಲಾವಿದರಿಗೂ ಮಿಗಿಲಾಗಿ ಕುಣಿಯುವುದನ್ನೂ ಕಂಡು ಜನ ದಂಗಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶಾಸಕ ಶ್ರೀ ರಘುಪತಿ ಭಟ್ಟರ ‘ಯಕ್ಷ ಶಿಕ್ಷಣ ಟ್ರಸ್ಟ್‌’ನ ದೆಸೆಯಿಂದಾಗಿ ಮಕ್ಕಳ ಯಕ್ಷಗಾನ ಈಗ ಶಾಲೆಗಳಲ್ಲಿ ಮಾಮೂಲಿಯಾಗಿ ಬಿಟ್ಟಿದೆ. ಕಣ್ಣು ಸರಿಯಾಗಿ ಕಾಣದ, ಕಿವಿ ಸರಿಯಾಗಿ ಕೇಳದ ಮಕ್ಕಳು ಕೂಡ ಈಗ ಯಕ್ಷಗಾನ ಪ್ರದರ್ಶನ ನೀಡಿ ‘ಸೈ’ ಅನ್ನಿಸಿಕೊಳ್ಳುತ್ತಾರೆ. ಅಷ್ಟೇಕೆ, ಈಗ ಜನಪ್ರಿಯ  ವಾಹಿನಿಗಳಲ್ಲಿ. ರಿಯಾಲಿಟಿ ಶೋಗಳಲ್ಲಿ ಪುಟ್ಟ ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ.  ಮಧುರಕಂಠದಿಂದ ಹಾಡಿ ರಂಜಿಸುತ್ತಿದ್ದಾರೆ. ಹಿರಿಯ ನೃತ್ಯಪಟ ಉಗಳು, ಗಾನವಿಶಾರದವರು ಇವರ ನರ್ತನ ಪ್ರತಿಭೆಗೆ, ಕಂಠಸಿರಿಗೆ ಅಸಾಧಾರಣ ಪ್ರಭುತ್ವಕ್ಕೆ ಮಾರುಹೋಗುತ್ತಿದ್ದಾರೆ!

ಈ ಬಗೆಯ ಅಸಾಧಾರಣ ಬಾಲಪ್ರತಿಭೆಗಳ ಬಗ್ಗೆ ಎರಡು ದೃಷ್ಟಿಗಳಿವೆ. ಒಂದು, ಎಳವೆಯಲ್ಲಿ ಕಂಡುಬಂದ ಪ್ರತಿಭಾಕಿರಣ ಪ್ರಾಯವಾದಂತೆ ಹೆಚ್ಚುಹೆಚ್ಚು ಪ್ರಖರವಾಗುತ್ತಾ ಅಪ್ರತಿಮ ಕಲಾಕಾರನೋ ವಿಜ್ಞಾನಿಯೋ ಆಗಿ ಮಾರ್ಪಾಡುತ್ತದೆ. ಭೀಮಸೇನ್‌ ಜೋಶಿ, ಯೆಹುದಿ ಮೆನುಹಿನ್‌ ಇತ್ಯಾದಿ. ಇನ್ನು ಕೆಲವು ಪ್ರಕರಣಗಳಲ್ಲಿ ಬಾಲ್ಯದಲ್ಲಿ ಈ ಪ್ರತಿಭೆಗಳ ಬಗ್ಗೆ ಭಾರಿ ಪ್ರಚಾರ,  ಮೆಚ್ಚುಗೆ ಎಲ್ಲ ಕೇಳಿಬರುತ್ತದೆ. ಮುಂದೆ ಒಂದೆರಡು ವರ್ಷಗಳಲ್ಲಿ ಯಾರೂ ಅವರ ಹೆಸರು ಹೇಳುವುದಿಲ್ಲ. ಬೆಳೆದು ದೊಡ್ಡವರಾದಾಗ ಮೊದಲಿನ ಪ್ರತಿಭಾ ವಿಶೇಷ ಫಳಫಳ ಹೊಳೆಯುವುದಿಲ್ಲ.  ಕೆಲವರು ತಮಗೆ ಸಿಕ್ಕ ಪ್ರಚಾರ , ಪ್ರೋತ್ಸಾಹದಿಂದ ಪ್ರತಿಭೆ ಸೋರಿಹೋಗುವ ಹಾಗೆ ನಡೆದುಕೊಳ್ಳುತ್ತಾರೆ. ಉದಾಹರಣೆ: ತೆಂಡುಲ್ಕರ್ ಹಾಗೂ ವಿನೋದ್‌ ಕಾಂಬ್ಳಿ ಶಾಲಾ ಹಂತದಲ್ಲಿ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಮಾಡಿದವರು. ತೆಂಡುಲ್ಕರ್ ಅವರ ಬೆಳವಣಿಗೆಯ, ಪ್ರಸಿದ್ಧಿಯ ಗ್ರಾಫ್‌ ಗಮನಿಸಿ . ಕಾಂಬ್ಳಿ ಅವಕಾಶಗಳ ಮೇಲೆ ಅವಕಾಶ ಕೊಟ್ಟರೂ ಹೇಗೆ ಪ್ರಪಾತದತ್ತ ಜಾರಿದ ಎಂಬುದನ್ನು ಗಮನಿಸಿ!

ಜನ ಮಕ್ಕಳಿಂದ ಬಹಳಷ್ಟನ್ನು ‘ನಿರೀಕ್ಷಿ’ಸುತ್ತಾರೆ. ‘ನಿಮ್ಮ ಬಗ್ಗೆ ನಾವು ತುಂಬ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೇವೆ’ ಎಂದು ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬಗ್ಗೆ ಹೇಳುತ್ತಾರೆ. ಇವು ನಿರೀಕ್ಷೆಗಳಲ್ಲ. ಬದಲಾಗಿ ಒತ್ತಾಯಗಳು, ಬೇಡಿಕೆಗಳು…“ಮಕ್ಕಳು ಬುದ್ಧಿವಂತರಿದ್ದಾರೆ. ಆದುದರಿಂದ ಅವರು ಇಷ್ಟು ಅಂಕಗಳನ್ನು ಗಳಿಸಲೇಬೇಕು”. “ನಾವು ಮಕ್ಕಳ ಶಿಕ್ಷಣಕ್ಕಾಗಿ ವರ್ಷಕ್ಕೆ ಒಂದುಲಕ್ಷ ರೂ. ವೆಚ್ಚಮಾಡುತ್ತಿದ್ದೇವೆ . ಆದುದರಿಂದ ನೀವು ಈ ಫಲಿತಾಂಶವನ್ನು ನಮಗೆ ತಂದುಕೊಡಲೇಬೇಕಲು” . “ಪ್ರತಿಭಾ ಕಾರಂಜಿಯಲ್ಲಿ ಈ ಬಾರಿ ಪ್ರಥಮ ಬಹು ಮಾನ ಪಡೆಯಲೇಬೇಕೆಂದು ಸಾಕಷ್ಟು ಹಣ ವೆಚ್ಚಮಾಡಿದ್ದಾಗಿದೆ. ನೃತ್ಯ ಪರಿಣತರಿಂದ ತರಬೇತಿ ಕೊಡಿಸಿದ್ದಾಗಿದೆ. ಆದುದರಿಂದ ನೀವು ಬಹುಮಾನ ಅದೂ ಪ್ರಥಮ ಬಹುಮಾನ ತರಲೇಬೇಕು.”

ಶಿಕ್ಷಕರ ಹಾಗೂ ಹೆತ್ತವರ ಈ ನಿರೀಕ್ಷೆಗೆ ತಕ್ಕಂತೆ ಆದರೆ ಸಂತೋಷ. ಆದರೆ ಹಿರಿಯರು ಹೇರಿದ ಒತ್ತಡಗಳು ಮಕ್ಕಳ ಮನಸ್ಸಿನಲ್ಲಿ ಆತಂಕ ಸೃಷ್ಟಿಸಿ ಫಲಿತಾಂಶ ಏರುಪೇರಾದರೆ ಅಪಮಾನ ಶಿಕ್ಷೆ ತಪ್ಪಿದ್ದಲ್ಲ! ಮಕ್ಕಳಿಂದ ನಾವು ಏನನ್ನೂ ನಿರೀಕ್ಷಿಸಬಾರದು. ತರಬೇತಿ ಕೊಡಿಸುವುದು, ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯ. ಅವರ ಸಾಧನೆ ಚೆನ್ನಾಗಿದ್ದರೆ ಮೆಚ್ಚೋಣ, ಸಂತೋಷಪಡೋಣ. ಇನ್ನೂ ಹೆಚ್ಚಿನ ಸಾಧನೆ ಸಾಧ್ಯವೇ ಎಂದು ಅವರನ್ನೇ ಕೇಳೋಣ. ಇದಕ್ಕೆ ವ್ಯತಿರಿಕ್ತವಾಗಿ ಅವರಿಂದ ಸಾಧ್ಯವಾಗದೆ ಹೋದರೆ ಅವರನ್ನು ನಿಂದಿಸಿ, ಶಿಕ್ಷಿಸಿ ಅಪಮಾನಿಸುವುದಕ್ಕಿಂತ ಏಕೆ ಸಾಧ್ಯವಾಗಿಲ್ಲ? ಅವರ ಶಕ್ತಿಸಾಮಾರ್ಥ್ಯಗಳೆಷ್ಟು? ನಮ್ಮ ಒತ್ತಡ-ಒತ್ತಾಯಗಳು ಹೆಚ್ಚಾದವೆ? ಎಂದು ಯೋಚಿಸುವುದು ಸೂಕ್ತ. ಅವರಿಂದ ಏನು ಸಾಧ್ಯವೊ,  ಎಷ್ಟು ಸಾಧ್ಯವೊ ಅಷ್ಟು ಆದರೆ ಸಾಕಲ್ಲವೆ? ಒಂದೊಮ್ಮೆ ತಮ್ಮ ಶಕ್ತಿಗೆ ತಕ್ಕಷ್ಟು ಸಾಧನೆ ಆಗದಿದ್ದರೆ ಚಿಂತೆ ಏಕೆ? ಆಕಾಶವೇನು ಕಳಚಿ ಬೀಳುವುದೆ? ಜೀವನ ಮುಗಿದೇ ಹೋಯಿತೆ? ಅದೇನು ಮುಚ್ಚಿದ ಕೊನೆಯ ಬಾಗಿಲೆ? ಅಂಥ ಭಾವನೆಗಳನ್ನು ಮಕ್ಕಳಲ್ಲಿ ಹಿರಿಯರು ಏಕೆ ಬಿಂಬಿಸಬೇಕು? ಸೋಲಿನ ನೈರಾಶ್ಯದ ಭಾವನೆಗಳನ್ನು ಅವರ ಮನದಲ್ಲಿ ತುಂಬುವುದೇಕೆ?

ಮಕ್ಕಳ ಬೆಳವಣಿಗೆ ಸಹಜವಾಗಿರಲಿ ಎಂದು ನಾವು ಮುಕ್ತಮನ್ಸಿನಿಂದ ಯೋಚಿಸಬೇಕು.  ಕಲಿಕೆ, ಸಹಪಠ್ಯ ಚಟುವಟಿಕೆ, ಹವ್ಯಾಸಗಳು ಇತ್ಯಾದಿಗಳ ವಿಚಾರದಲ್ಲಿ ಅವರ ಮೇಲೆ ಯಾವ ಒತ್ತಡವನ್ನೂ ಹೇರಕೂಡದು. ಅವರಿಂದ ಸಾಧ್ಯವಾಗದೆ ಹೋದರೆ ಅವರನ್ನು ನಿಂದಿಸಿ, ಶಿಕ್ಷಿಸಿ ಅಪಮಾನಿಸುವುದಕ್ಕಿಂತ ಏಕೆ ಸಾಧ್ಯವಾಗಿಲ್ಲ? ಅವರ ಶಕ್ತಿಸಾಮರ್ಥ್ಯಗಳೆಷ್ಟು? ನಮ್ಮ ಒತ್ತಡ-ಒತ್ತಾಯಗಳು ಹೆಚ್ಚಾದವೆ? ಎಂದು ಯೋಚಿಸುವುದು ಸೂಕ್ತ. ಅವರಿಂದ ಏನು ಸಾಧ್ಯವೊ, ಎಷ್ಟು ಸಾಧ್ಯವೊ  ಅಷ್ಟು ಆದರೆ ಸಾಕಲ್ಲವೆ? ಒಂದೊಮ್ಮೆ ತಮ್ಮ ಶಕ್ತಿಗೆ ತಕ್ಕಷ್ಟು ಸಾಧನೆ ಆಗದಿದ್ದರೆ ಚಿಂತೆ ಏಕೆ? ಆಕಾಶವೇನು ಕಳಚಿ ಬೀಳುವುದೆ? ಜೀವನ ಮುಗಿದೇ ಹೋಯಿತೆ? ಅದೇನು ಮುಚ್ಚಿದ ಕೊನೆಯ ಬಾಗಿಲೆ? ಅಂಥ ಭಾವನೆಗಳನ್ನು ಮಕ್ಕಳಲ್ಲಿ ಹಿರಿಯರು ಏಕೆ ಬಿಂಬಿಸಬೇಕು? ಸೋಲಿನ, ನೈರಾಶ್ಯದ ಭಾವನೆಗಳನ್ನು ಅವರ ಮನದಲ್ಲಿ ತುಂಬುವುದೇಕೆ?

ಮಕ್ಕಳ ಬೆಳವಣಿಗೆ ಸಹಜವಾಗಿರಲಿ ಎಂದು ನಾವು ಮುಕ್ತಮನಸ್ಸಿನಿಂದ ಯೋಚಿಸಬೇಕು. ಕಲಿಕೆ, ಸಹಪಠ್ಯ ಚಟುವಟಿಕೆ , ಹವ್ಯಾಸಗಳು ಇತ್ಯಾದಿಗಳ ವಿಚಾರದಲ್ಲಿ ಅವರ ಮೇಲೆ ಯಾವ ಒತ್ತಡವನ್ನೂ ಹೇರಕೂಡದು. ಅವರಿಂದ ಈ ಕೆಲಸ ಸಾಧ್ಯವೇ ಇಲ್ಲ  ಎಂದು ತಿಳಿಯಬಾರದು, ಅಂತೆಯೇ ಏನೋ ಒಂದು ಸಾಧನೆ ಮಾಡಿದಾಗ ದಿಗ್ಭ್ರಾಂತರಾಗಬಾರದು. ಅವರ ಪಾಡಿಗೆ ಅವರು ಬೆಳೆಯಲಿ, ಸಹಜಗತಿಯಲ್ಲಿ ವಿಕಸಿಸಲಿ. ಇಂಥ ಒಂದು ಪರಿಸರದಲ್ಲಿ ಅವರು ನಿಜಕ್ಕೂ ಉತ್ತಮವಾದುದನ್ನು ಕಲಿಯುತ್ತಾರೆ . ಚೆನ್ನಾಗಿ ಕಲಿಯುತ್ತಾರೆ. ಗಂಭೀರತೆಯಿಂದ ಕಲಿಯುತ್ತಾರೆ. ಕಲಿಕೆಯ ರಾಜಮಾರ್ಗದಲ್ಲಿ ಸಾಗುತ್ತಾರೆ . ಒಳದಾರಿಗಳಿಂದ ಹರದಾರಿ ದೂರನಿಲ್ಲುತ್ತಾರೆ.

‘ಮಕ್ಕಳ ಜ್ಞಾನ ಸಾಲದು’ ‘ಅನುಭವ ಸಾಲದು’ ಎಂದು ತಿಳಿದ ತಾಯ್ತಂದೆಗಳು ಹಾಗೂ ಶಿಕ್ಷಕರು ಅವರ ಕೈಹಿಡಿದು ನಡೆಸುತ್ತಾರೆ. ಎಷ್ಟು ದೂರ, ಎಷ್ಟು ದಿನ ಹೀಗೆ ನಡೆಸಲು ಸಾಧ್ಯ? ‘ಕಟ್ಟಿಕೊಟ್ಟ ಬುತ್ತಿ’ ಇಂದಲ್ಲ ನಾಳೆ ಹಳಸದೆ? ಹಿರಿಯರಾಗಿ ನಾವು ಸ್ವಲ್ಪ ದೂರ ಮಾತ್ರ ಅವರ ಕೈಹಿಡಿದು ಮುನ್ನಡೆಸಿ ಬಿಟ್ಟುಬಿಟ್ಟರೆ ಏನಾದೀತು? ಒಮ್ಮೆ ಬಿದ್ದರೂ ಎದ್ದು ನಡೆ ಕಲಿಯರೆ ಅವರು? ‘ಬೆಂಕಿ ಬಿಸಿ, ಕೈ ಇಟ್ಟು ಸುಟ್ಟುಕೊಳ್ಳಬೇಡ’ ಎಂದು ಹಿರಿಯರೇಕೆ ಹೇಳಬೇಕು? ಬೆಂಕಿ ಎಂಬ ಶಬ್ದೋಚ್ಚಾರದಲ್ಲೇ ಭಯದ ಬೀಜ ಬಿತ್ತುವುದೇಕೆ? ಮಗು ಬೆಂಕಿಗೆ ಕೈಇಕ್ಕಿ ಕೈಸುಟ್ಟುಕೊಳ್ಳಲಿ. ಮುಂದೆ ಅದು ತಾನೇ ಜಾಗ್ರತೆ ವಹಿಸುತ್ತದೆ ಎಂದ ರೂಸೋ.  ಮಕ್ಕಳಿಗೆ ಅನುಭವ ಒದಗಿಸಿ. ಸಾಮರ್ಥ್ಯ–ಕಲಿಕೆ ಎರಡು ಅನುಭವದಿಂದ ಹೊರಹೊಮ್ಮುತ್ತವೆ ನಿಜ. ಮೊದಮೊಲದು ತಂದೆತಾಯಿ ಮಕ್ಕಳ ಹಿಂದೆ ಇರಬೇಕಾಗುತ್ತದೆ. ಅವರ ಕೈಹಿಡಿದು ನಡೆಸಬೇಕಾಗುತ್ತದೆ. ಆತಂಕದಿಂದ ಹಿಂಬಾಲಿಸಬೇಕಾಗುತ್ತದೆ. ತನಗೆ ಸಿಕ್ಕಿದ ಅನುಭವಗಳನ್ನು ಆಧರಿಸಿ ಮಗು ಆತ್ಮವಿಶ್ವಾಸವನ್ನು ಕೌಶಲಗಳನ್ನು ಸಂಪಾದಿಸುತ್ತದೆ. ಆಗ ಹಿರಿಯರು ಮಗುವಿನ ಬಗ್ಗೆ ಧೈರ್ಯ ತಳೆದು ಒಂದಿಷ್ಟು ಶೋಧನೆಯ ಅವಕಾಶಗಳನ್ನು ನೀಡಬೇಕು.  ಇಂಥ ಶೋಧನೆಯ ಅವಕಾಶಗಳು ಹೆಚ್ಚಿದಂತೆ ಮಗುವಿನ ಆತ್ಮವಿಶ್ವಾಸ ಹೆಚ್ಚುತ್ತದೆ. ಅನುಭವ ಸಂಪನ್ನತೆ ಅಧಿಕವಾಗುತ್ತದೆ. ಮಗು ಸ್ವಾಯತ್ತಜೀವನವನ್ನು ಕಲಿಯುತ್ತದೆ.

ಮಕ್ಕಳು ಪರಾವಲಂಬಿಗಳು ಮತ್ತು ಅಸಮರ್ಥರು ಎಂಬ ನಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಮನದಾಳದಿಂದ ಕಿತ್ತೊಗೆದರೆ ಮಕ್ಕಳು ಇನ್ನೂ ಬೇಗನೆ ಸ್ವತಂತ್ರರೂ ಸಮರ್ಥರೂ ಆಗಲಾರರೆ? ಹೊಸಕಾಲದ ತಂದೆತಾಯಿಗಳು ಮಕ್ಕಳನ್ನು ಯಾಕೆ ಇನ್ನೂ ತಮ್ಮ ಪ್ರೀತಿಯ ಪಂಜರದಲ್ಲಿ ಬಂಧಿಸಿಟ್ಟಿದ್ದಾರೆ?  ‘ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ’ ಅಂತ ಹಕ್ಕಿಯ ಹಾರಿಬಿಡಬಾರದೆ?