ಒಲೆಯ ಮೇಲೆ ಪ್ರೆಶರ್ ಕುಕ್ಕರ್ ಇಟ್ಟಿದ್ದೀರಿ. ಹಬೆ ಹೊರಗೆ ಬರುತ್ತಿದೆ. ಯಾಕೆ ಇನ್ನೂ ಕೂಗಿಲ್ಲ ಎಂದು ಅದರ ಮೇಲಿನ ಗುಂಡು ತೆಗೆಯಹೋದರೆ ಕುಕ್ಕರ್ ಸ್ಫೋಟಗೊಳ್ಳಬಹುದು ಅಥವಾ ಒಳಗಿನ ಒತ್ತಡ ಹೆಚ್ಚಾಗಿ ರಕ್ಷಣಾಕವಚ ತೂತುಬಿದ್ದು ಒಳಗಿನ ಪದಾರ್ಥವೆಲ್ಲ ಮುಚ್ಚಿಗೆವರೆಗೆ ಹಾರಿ ಬೀಳಬಹುದು. ಕುಕ್ಕರ್ ನಲ್ಲಿ ಹಾಕಿದ ನೀರೆಲ್ಲ ಆವಿಯಾಗಿ ಒತ್ತಡ ಹೆಚ್ಚಾಗಿ ಸ್ಫೋಟಿಸಬಹುದು. ಈಗ ಕಣ್ಮರೆಯಾಗಿರುವ ಅಥವಾ ತೀರ ಹಳ್ಳಿ ಪ್ರಾಂತ್ಯಗಳಲ್ಲಿ ಮಾತ್ರ ಕಂಡುಬರುವ ಗೋಲಿ ಸೋಡಾ ಬಾಟ್ಲಿಗಳು ಬೇಸಗೆಯಲ್ಲಿ ಒಳಗಿನ ಒತ್ತಡ ಹೆಚ್ಚಾಗಿ ಸ್ಫೋಟಗೊಳ್ಳುವುದನ್ನು ನೀವು ನೋಡಿರಬಹುದು.

ಇತ್ತೀಚಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಾದುಹೋಗುತ್ತಿರುವ ಪರಿಸ್ಥಿತಿಗೆ ಮೇಲಿನ ಉಪಮೆ ಸೂಕ್ತವಾಗಿದೆ. ಅತ್ಯಧಿಕ ಅಂಕ ಗಳಿಸಬೇಕು; ಅತ್ಯುನ್ನತ ಗ್ರೇಡ್‌ಗಳನ್ನು ಸಂಪಾದಿಸಬೇಕು, ತರಗತಿಯಲ್ಲಿ ಸದಾ ಮೊದಮೊದಲ ಸ್ಥಾನ ಸಂಪಾದಿಸಬೇಕೆಂಬ ಒತ್ತಡ ಇಂದಿನ ಹಲವು ವಿದ್ಯಾರ್ಥಿಗಳ ಮೇಲಿದೆ. ಈ ಪರಿಸ್ಥಿತಿಗೆ ಪಾಲಕರ ಮಿತಿಮೀರಿದ ಆಕಾಂಕ್ಷೆ ಹಾಗೂ ಅವರು ತಮ್ಮ ಮಕ್ಕಳ ಮೇಲೆ ಹೊರಿಸುವ ಒತ್ತಡವೇ ಕಾರಣ. ಮುಗ್ಧರಾದ ಮಕ್ಕಳು ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ.  ಇಂದಿನ ಸಮಾಜ ತರುಣ ಜನಾಂಗದ ಮುಂದೆ ಒಡ್ಡುತ್ತಿರುವ ಸ್ಪರ್ಧಾತ್ಮಕ ಸವಾಲುಗಳು ಕಾರಣವೇ ಹೊರತು ಶಾಲೆ ಕಾಲೇಜುಗಳು ಈ ದುಃಸ್ಥಿತಿಗೆ ಕಾರಣವಲ್ಲ ಎಂದು ಯಾರಾದರೂ ವಾದಿಸಬಹ ಉದು.  ಇದೊಂದು ಪಾರ್ಶ್ವಸತ್ಯ. ಹೆತ್ತವರ ಅಪಾರ ಬೇಡಿಕೆ ಹಾಗೂ ಒತ್ತಡದ ದೆಸೆಯಿಂದಾಗಿ ಕೆಲವೊಂದು ಪ್ರತಿಷ್ಠಿತ ಶಾಲೆ ಕಾಲೇಜುಗಳೆಂಬ ಕಾರ್ಖಾನೆಗಳು ಒತ್ತಡ ನಿರ್ಮಾಣದ ಕೇಂದ್ರಗಳಾಗಿ ಪರಿಣಮಿಸಿವೆ. ಶಾಲೆ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವ ಒತ್ತಡಗಳೇನೂ ಕಡಿಮೆಯಿಲ್ಲ. ಒತ್ತಡದ ವಿದ್ಯಮಾನದಲ್ಲಿ ಅವರ ಪಾಲು ಕಡಿಮೆಯದೇನಲ್ಲ ಎಂಬುದನ್ನೂ ಗಮನಿಸಬೇಕು.

ವಿದ್ಯಾರ್ಥಿಗಳ ಬುದ್ಧಿಭಾವ , ಪ್ರತಿಭೆ, ಸೃಜನಶೀಲತೆ, ಚಾರಿತ್ಯ್ರ ಇತ್ಯಾದಿಗಳನ್ನು ರೂಪಿಸಬೇಕಾದ ಹೊಣೆ ಶಿಕ್ಷಕ ಸಮುದಾಯದ ಮೇಲಿದೆ. ಆದರೆ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹುಸಿ ಪ್ರತಿಷ್ಠೆಯ ಸ್ಥಾನಮಾನ, ಗುಣಮಟ್ಟ ಸ್ಪರ್ಧೆಯ ಮೂಲಕ ಗಳಿಸುವ ಸಾಧನೆ ಮುಖ್ಯವಾಗಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಕೈಗೊಂಬೆಗಳಾಗಿರುವ ಶಿಕ್ಷಕರು ‘ಅಂಕಗಳಿಕೆ’ಯ ಕಂಬಳಕ್ಕಾಗಿ ವಿದ್ಯಾರ್ಥಿಗಳನ್ನು ಓಟದ ಕೋಣಗಳಂತೆ ರೂಪಿಸುತ್ತಿದ್ದಾರೆ. ಯಾರು ಉತ್ತಮ ವಿದ್ಯಾರ್ಥಿ? ಇಂದಿನ ಪರಿಭಾಷೆಯ ಪ್ರಕಾರ ರ‍್ಯಾಂಕು ಗಳಿಸುವವರು! ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನ ಗಳಿಸುವವರು. ಏಕೆಂದರೆ ಇಂಥ ವಿದ್ಯಾರ್ಥಿಗಳಿಂದಾಗಿಯೇ ಶಿಕ್ಷಣಸಂಸ್ಥೆಗೆ ಹೆಸರು, ಕೀರ್ತಿ, ಪ್ರಚಾರ, ಜನಬೆಂಬಲ ಎಲ್ಲ ದೊರೆಯುತ್ತದೆ!

ಪದವಿಪೂರ್ವ ಫಲಿತಾಂಶ ಪ್ರಕಟವಾದ ಸಂದರ್ಭದ ತಿಂಗಳ ಪತ್ರಿಕೆಗಳನ್ನು ಗಮನಿಸಿ. ಅತ್ಯುತ್ತಮ ಅಂಕಗಳಿಸಿದ, ರ‍್ಯಾಂಕು ಸಂಪಾದಿಸಿದ, ಸಿಇಟಿ-ಕಾಮೆಡ್‌-ಕೆಗಳಲ್ಲಿ ಅಗ್ರಸ್ಥಾನ ಗಳಿಸಿದ ವಿದ್ಯಾರ್ಥಿಗಳ ವಿವರಗಳು ಅದೂ ಸಂಸ್ಥೆಗಳ ಜಾಹೀರಾತುಗಳೊಂದಿಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ನಮ್ಮ ಸಂಸ್ಥೆಗೆ ಈ ವರ್ಷ ಇಷ್ಟು ಮಂದಿ ವಿದ್ಯಾರ್ಥಿಗಳಿಂದ ಕೀರ್ತಿ ಬಂದಿದೆ. ನಾವು ಇಷ್ಟು ಮಂದಿ ವಿದ್ಯಾರ್ಥಿಗಳನ್ನು ಐಐಟಿ, ಎಐಇಇಇ ಅಥವಾ ಎನ್‌ಟಿಎಸ್‌ ಪರೀಕ್ಷೆಗಳಲ್ಲಿ ವಿಜೇತರಾಗುವಂತೆ ಮಾಡಿದ್ದೇವೆ ಎಂದು ವಿದ್ಯಾಲಯಗಳು, ‘ಪರಿಣತ’ ಅಥವಾ ‘ಶ್ರೇಷ್ಠ’ ಅಥವಾ ‘ಪ್ರತಿಭಾವಂತ’ ಅಥವಾ ‘ಹೆಗ್ಗಣ’ ಕೋಚಿಂಗ್‌ ಕೇಂದ್ರಗಳು ತಮ್ಮ ತುತ್ತೂರಿಯನ್ನು ತಾವೇ ಊದಿಕೊಳ್ಳುತ್ತವೆ.

ಈ ವ್ಯಾಪಾರಿ ಸಂಸ್ಥೆಗಳು ಜಯಶಾಲಿ ವಿದ್ಯಾರ್ಥಿಗಳೊಂದಿಗೆ ಸಂದರ್ಶನವೆಂಬ ನಾಟಕವೇರ್ಪಡಿಸಿ ಯಶಸ್ಸಿನ ಗುಟ್ಟೇನು ಎಂಬುದನ್ನು ಜಗಜ್ಜಾಹೀರು ಮಾಡುವ ವರ್ಣರಂಜಿತ ಪತ್ರಿಕಾವರದಿಗಳನ್ನು ಸಂಪಾದಕರನ್ನು ಮರುಳುಮಾಡಿ ಪ್ರಕಟಿಸಿಕೊಳ್ಳುತ್ತವೆ.

ಮೇಲೆ ಹೇಳಿದ ಸಂಸ್ಥೆಗಳವರ ಜೊತೆ ಮಾತನಾಡಿ ವಿದ್ಯಾರ್ಥಿಗಳ ಮೇಲಿರುವ ಅಧಿಕ ಒತ್ತಡ ಅಥವಾ ಅವರಲ್ಲಿ ಮನೆಮಾಡಿರುವ ಭವಿಷ್ಯದ ಬಗೆಗಿನ ಆತಂಕ ಕಡಿಮೆ ಮಾಡುವ ಬಗ್ಗೆ ಮಾತನಾಡಿ. “ಒತ್ತಡ ಕಡಿಮೆಯಾದರೆ ವಿದ್ಯಾರ್ಥಿಗಳು ಓದುವುದಿಲ್ಲ. ಅವರ ಪರೀಕ್ಷಾ ಫಲಿತಾಂಶದ ಮಟ್ಟ ಕುಸಿಯುತ್ತದೆ. ಇದರಿಂದ ನಮ್ಮ ಸಂಸ್ಥೆಯ ಹೆಸರು ಹಾಳಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ಸದಾ ತುದಿಗಾಲಿನಲ್ಲಿ ಇರುವುದೇ ಕ್ಷೇಮಕರ. ಒತ್ತಡದ ಸ್ಥಿತಿಯಲ್ಲೇ ಉನ್ನತಮಟ್ಟದ ಸಾಧನೆ ಸಾಧ್ಯ” ಎಂಬಂಥ ಮುಕ್ತಾಫಲಗಳನ್ನು ಉದುರಿಸುತ್ತಾರೆ.

ಎಐಇಇಇ, ಐಐಟಿ, ಜೆಇಇ ಪ್ರವೇಶಪರೀಕ್ಷೆ, ಕಂಪ್ಯೂಟರ್ ತರಬೇತಿ, ಟ್ಯೂಶನ್‌ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ದಿನಚರಿಯನ್ನು ನಾನು ಗಮನಿಸಿದ್ದೇನೆ. ಬೆಳಗ್ಗೆ ಐದು ಗಂಟೆಗೆ ಪ್ರಾರಂಭವಾಗಿರುವ ಅವರ ದಿನಚರಿ ಸಂದುಕಡಿಯದೆ ರಾತ್ರಿ ಹನ್ನೊಂದು-ಹನ್ನೆರಡು ಗಂಟೆವರೆಗೂ ಮುಂದುವರಿಯುತ್ತದೆ. ಒಮ್ಮೆ ಪರೀಕ್ಷೆಗಳೆಲ್ಲ ಮುಗಿದರೆ ಸಾಕು ಎಂದು ಅನ್ನಿಸಿಬಿಡುತ್ತದೆ. ಈ ಎಲ್ಲ ಶ್ರಮ ಯಾಕಾಗಿ? ಇಷ್ಟೆಲ್ಲ ಕಷ್ಟಪಡಬೇಕೇ? ಬದುಕು ಎಂದರೆ ಇಷ್ಟೇಯಾ ಅಥವಾ ಇಷ್ಟೆಲ್ಲ ಅನುಭವಿಸಬೇಕಾ? ಎಂದು ಅನ್ನಿಸಿಬಿಡಬಹುದು.

ಇಂಥ ಯಶವಂತ ಶಾಲೆ ಕಾಲೇಜುಗಳ ಮಾತಿನ ಧಾಟಿ, ವರಸೆ ಹೇಗಿರುತ್ತದೆ ಬಲ್ಲಿರಾ? “ನಮ್ಮ ಸಂಸ್ಥೆ ರಾಜ್ಯದಲ್ಲೇ ಅತ್ಯಂತ ಶ್ರೇಷ್ಠವಾದದ್ದು. ಇಲ್ಲಿ ಪ್ರವೇಶ ಪಡೆಯುವುದು ಸುಲಭವಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳ ಹಾಗೂ ಪ್ರಜ್ಞಾವಂತ ಪಾಲಕರ ಮೊದಲ ಆಯ್ಕೆ ನಮ್ಮ ಸಂಸ್ಥೆ. ಪ್ರವೇಶಪರೀಕ್ಷೆ ನಡೆಸಿ ನಾವು ಆಯ್ಕೆ ಮಾಡುತ್ತೇವೆ. ಶೇಕಡ ೮೫ಕ್ಕಿಂತ ಕಡಿಮೆ ಅಂಕ ಗಳಿಸಿದವರಿಗೆ ನಮ್ಮ ಸಂಸ್ಥೆಯಲ್ಲಿ ಪ್ರವೇಶವಿಲ್ಲ. ಗುಣಮಟ್ಟದ ವಿಚಾರದಲ್ಲಿ ನಮ್ಮಲ್ಲಿ ರಾಜಿಯಿಲ್ಲ” ಇತ್ಯಾದಿ ಇತ್ಯಾದಿ. ಮಾತಿನ ಧ್ವನಿ ಹೇಗಿರುತ್ತದೆಂದರೆ “ಬೇರೆ ಕಂಪೆನಿಯವರ ಸೋಪಿಗಿಂತ ನಮ್ಮ ಸೋಪೇ ಸರ್ವೋತ್ಕೃಷ್ಟ” ಎಂಬ ಹಾಗೆ. ನಾವು ನಮ್ಮ ಪ್ರತಿಸ್ಪರ್ಧಿಗಳನ್ನು ಮೀರಿಸಿದ್ದೇವೆ ಎಂಬ ಅಹಂಭಾವ. ಹೀಗಾಗಿ ಕೆಲವೊಂದು ವಿದ್ಯಾರ್ಥಿಗಳ ಸಾಧನೆ ತೃಪ್ತಿಕರವಾಗಿಲ್ಲದಿದ್ದಲ್ಲಿ ಅಧ್ಯಾಪಕರಲ್ಲಿ ಬೇಸರ, ಕಳವಳ ಎದ್ದುಕಾಣುತ್ತದೆ.

ಒಂದು ರೀತಿಯಿಂದ ನೋಡುವುದಾದರೆ ಅನೇಕ ಖಾಸಗಿ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಹಾಗೂ ಉತ್ಕೃಷ್ಟ ಸಾಧಣೆಯ ಹೆಸರಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಸ್ವತಂತ್ರ ಚಿಂತಕರನ್ನಾಗಿ ರೂಪಿಸುವ ಬದಲು ವಿಪರೀತ ಒತ್ತಡ ಹೇರಿ ಶೋಷಣೆ ಮಾಡಲಾಗುತ್ತಿದೆ. ಈ ಮಕ್ಕಳು ಒತ್ತಡ ತಾಳಲಾರದೆ ಮಾನಸಿಕವಾಗಿ ಬಿರುಕು ಬಿಡುವ ಅಪಾಯಗಳೂ ಆಗಾಗ್ಗೆ ಗೋಚರಿಸುತ್ತವೆ. ಪ್ರಾಯಃ ರಾಷ್ಟ್ರೀಯ ಮಕ್ಕಳ ಹಕ್ಕಕುಗಳ ಆಯೋಗ ಇಂತಹ ಶಾಲೆಗಳಲ್ಲಿನ ಮಕ್ಕಳ ಶೋಷಣೆಯ ಹೊಸ ಹೊಸ ಅವತಾರಗಳನ್ನು ಗಂಭೀರವಾಗಿ ಪರಿಗಣಿಸುವ ಕಾಲ ಒದಗಿಬಂದಿದೆ.

ಶಾಲೆ ಪ್ರತಿಷ್ಠಿತವಾದುದು, ಅಲ್ಲಿಯ ಶಿಕ್ಷಣದ ಗುಣಮಟ್ಟ ಅತ್ಯುತ್ತಮವಾಗಿದೆ. ಶಿಕ್ಷಕರು ಮಕ್ಕಳ ಕಲಿಕೆ ಬಗ್ಗೆ ಬಹಳ ಕಳಕಳಿಯುಳ್ಳವರು ಎಂದು ಬಿಂಬಿಸಲಿಕ್ಕೋಸ್ಕರ ಇಂಥ ಶಾಲೆಗಳಲ್ಲಿ ಪುಟಗಟ್ಟಲೆ ‘ಮನೆಗೆಲಸ’ (ಹೋಂವರ್ಕ್) ನೀಡಲಾಗುತ್ತದೆ. ಪ್ರೊ|| ಯಶಪಾಲ್‌ ವರದಿ ‘ಹೊರೆರಹಿತ ಕಲಿಕೆ’ ಧೂಳುಮುಕ್ಕುತ್ತಿದೆ. ಅದನ್ನು ಓದಿ ಅನುಷ್ಠಾನಕ್ಕೆ ತಂದವರು ಎಲ್ಲಿದ್ದಾರೆ? ನಮ್ಮ ಪಾಲಕರೂ ಎಂಥ ಮೂರ್ಖರೆಂದರೆ ಹೆಚ್ಚಿನ ಹೋಂವರ್ಕ್ ಕೊಡದಿದ್ದರೆ “ಶಾಲೆ ಸರಿಯಿಲ್ಲ… ಮೇಷ್ಟ್ರುಗಳು ಸೋಂಬೇರಿಗಳು” ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ ಮತ್ತು ಶಾಲೆಯವರ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ ಮಗು ಶಾಲೆಯಲ್ಲಿ ಬೆಳಗ್ಗೆ ಒಂಬತ್ತರಿಂದ ಸಂಜೆ ನಾಲ್ಕುಗಂಟೆ ತನಕ ಪಾಠ ಕೇಳಿ ಕೇಳಿ ಸುಸ್ತಾಗಿದ್ದರೂ ಮನೆಗೆ ಬಂದು ಆಟ ಊಟ ಬಿಟ್ಟು ಮತ್ತೆ ಎರಡುಮೂರು ಗಂಟೆ ಕಾಲ ಹೋಂವರ್ಕ್ ಮಾಡಬೇಕು.ಅಸಹಾಯಕ ಮಗುವಿಗೆ ಅಪ್ಪ ಅಮ್ಮ ಸಹಾಯ ಮಾಡಬೇಕು; ಇಲ್ಲವಾದರೆ ಮರುದಿನ ತರಗತಿಯ ಹೊರಗೆ ಇಡಿ ದಿನ ನಿಲ್ಲಬೇಕು ಅಥವಾ ಆಟದ ಬಯಲಿನಲ್ಲಿ ಹಲವು ಸುತ್ತು ಓಡಬೇಕು. ಎಂಥ ಅವಮಾನ! ವಿದ್ಯಾಭ್ಯಾಸ ಮುಂದುವರಿದಂತೆ ಹೊರೆ ಹೆಚ್ಚುತ್ತಾ ಹೋಗುತ್ತದೆ. ಪದವಿಪೂರ್ವ (ವಿಜ್ಞಾನ) ಹಂತದಲ್ಲಂತೂ ಸ್ಫೋಟಗೊಳ್ಳುವ ಮಟ್ಟ ತಲುಪುತ್ತದೆ.

ಇಂದಿನ ಸಮಾಜಕ್ಕೆ ಹೆಚ್ಚು ಬುದ್ಧಿವಂತರಾದ, ಕುಶಲಿಗಳಾದ ವ್ಯಕ್ತಿಗಳು ಬೇಕು. ಹೀಗಾಗಿ ವಿದ್ಯಾಥಿಗಳ ತರಬೇತಿಯ ದೃಷ್ಟಿಯಿಂದ ಅಧಿಕ ಒತ್ತಡ ಹೇರುವುದು ಅನಿವಾರ್ಯವೆಂದು ಶಿಕ್ಷಣ ಸಂಸ್ಥೆಗಳವರು ಮಾಡುವ ವಾದ ಸತ್ಯದೂರವೂ ಅಪ್ರಾಮಾಣಿಕವೂ ಆಗಿದೆ. ನಿಜ ಹೇಳಬೇಕೆಂದರೆ “ನೋಡಿ , ನಾವು ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟು ಶಿಸ್ತಿನ ಶಿಕ್ಷಣ ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಕಲಿತವರಿಗೇ ಉದ್ಯೋಗಾವಕಾಶಗಳು ಹೆಚ್ಚು” ಎಂದು ಪಾಲಕರಿಗೆ ಸಂಸ್ಥೆಗಳವರು ನಿರೂಪಿಸುತ್ತಾರೆ. ಅದೇ ವೇಳೆಗೆ ಉದ್ಯೋಗದಾತರಿಗೂ ಇವರು ಹೇಳುವುದೇನೆಂದರೆ “ನಮ್ಮ ಉತ್ಪನ್ನಗಳು ಅತ್ಯಂತ ಶ್ರೇಷ್ಠ. ಉಳಿದವರ ಉತ್ಪನ್ನಗಳು ನಿಷ್ಪ್ರಯೋಜಕ. ಆದುದರಿಂದ ನಮ್ಮವರಿಗೇ ನೀವು ಅವಕಾಶಕೊಡತಕ್ಕದ್ದು.” ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ಹಾಗೂ ಇತರ ವೃತ್ತಿಪರ ಕಾಲೇಜುಗಳನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ಬೆಲೆಕಟ್ಟುವುದು ಅವು ಉದ್ಯೋಗಕ್ಕೆ ಎಷ್ಟರಮಟ್ಟಿಗೆ ಅನುಕೂಲಕರವಾಗಿವೆ ಅಥವಾ ‘ಪ್ಲೇಸ್‌ಮೆಂಟ್‌ ಸಂಭಾವ್ಯತೆ’ ಹೇಗೆ ಎಂಬುದರ ಆಧಾರದಲ್ಲಿ.

ಪಡೆದ ಶಿಕ್ಷಣಕ್ಕೆ ಸರಿಯಾಗಿ ಉದ್ಯೋಗ ಸಿಗಬೇಕೆಂಬ ನಿರೀಕ್ಷೆ ಸಹಜವಾದರೂ ವಿದ್ಯಾಸಂಸ್ಥೆಗಳ ಉದ್ದೇಶ ವಿದ್ಯಾರ್ಥಿಗಳನ್ನು ಪರೀಕ್ಷೆ ಪಾಸುಮಾಡಲು, ಉದ್ಯೋಗ ಗಳಿಸಲು ಸಿದ್ಧಮಾಡುವುದಲ್ಲ. ಔದ್ಯೋಗಿಕ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯದ ದೃಷ್ಟಿಯಿಂದ ಕಲಿಸುವುದು ಯೋಗ್ಯವೇ ಆದರೂ ವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಸುಶಿಕ್ಷಿತರೂ ಸಂಸ್ಕಾರವಂತರೂ ಹಾಗೂ ಉತ್ತಮ ನಾಗರಿಕರನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿವೆ. ನಾಳಿನ ಸಮಾಜ ಕಟ್ಟಲುನೇತಾರರು, ಸಾಂಸ್ಕೃತಿಕ ಮುಖಂಡರು, ವಿಜ್ಞಾನಿಗಳು ಬೇಕು. ಅವರನ್ನೆಲ್ಲ ರೂಪಿಸುವುದು ವಿದ್ಯಾಲಯಗಳ ಕರ್ತವ್ಯ. ಎಲ್ಲಕ್ಕಿಂತ ಮುಖ್ಯವಾಗಿ ಶಾಲಾಕಾಲೇಜುಗಳು ಹೃದಯವಂತ ಮನುಷ್ಯರ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಬೇಕಾಗಿದೆ. ಅದೇ ಅದರ ಏಕಮೇವ ಗುರಿ. ಉಳಿದುದೆಲ್ಲ ಬರೀ ಅಲಂಕಾರ. ಆದರೆ ಅಂಕಗಳಿಗಾಗಿ ತುರುಸಿನ ಸ್ಪರ್ಧೆ ಏರ್ಪಡಿಸುವುದು ಹಾಗೂ ಆ ಮೂಲಕ ಮಾನಸಿಕ ಒತ್ತಡವನ್ನು ನಿರ್ಮಾಣ ಮಾಡುವುದಂತೂ ಶಿಕ್ಷಕರ, ಶಿಕ್ಷಣಾಲಯಗಳ ಉದ್ದೇಶ ಆಗಲೇ ಕೂಡದು. ಆದರೆ ಅದು ಅಮಾನವೀಯ ಶಿಕ್ಷಣವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಸಾಗುತ್ತಿರುವುದು ದುರಂತದ ಸಂಗತಿ.

ಸೃಷ್ಟಿಸಲ್ಪಡುವ ಒತ್ತಡಗಳು ಹಲವು ಬಗೆಯ ಅಪಾಯಕಾರಿ ಕ್ಲೇಶಗಳನ್ನು ಸೃಷ್ಟಿಸುತ್ತವೆ. ಸದಾ ಸರಿ ಉತ್ತರಗಳನ್ನು ಉರುಹೊಡೆಯಬೇಕು; ಸರಿಯಾದುದನ್ನು ಬರೆಯಬೇಕು. ತಪ್ಪುಗಳನ್ನು ಮಾಡಕೂಡದು ಎಂಬ ರೊಬೊನ ಖಚಿತ ಲೆಕ್ಕಾಚಾರದ ಅವಾಸ್ತವಿಕ ತಿಳಿವಳಿಕೆಯನ್ನು ಬೆಳೆಸುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಅಸಾಂಪ್ರದಾಯಿಕ ಚಿಂತನೆಗಳಲ್ಲಿ ತೊಡಗುವುದಿಲ್ಲ. ಬಾಯಿ ತೆರೆಯುವುದಿಲ್ಲ. ಹೆಚ್ಚು ಬರೆಯಲು ಹೋಗುವುದಿಲ್ಲ. ಹೀಗೆ ಮಾಡಿ ನಾವು ನಿಜಕ್ಕೂ ಅವರ ಪ್ರತಿಭೇ, ಸೃಜನಶೀಲತೆ ಹಾಗೂ ನಿಜವಾದ ಕಲಿಕೆಯ ಆಸಕ್ತಿಕಯನ್ನು ಕೊಂದುಬಿಡುತ್ತಿದ್ದೇವೆ.

ಹದಿಹರೆಯದ ವಿದ್ಯಾರ್ಥಿಗಳ ಮೇಲೆ ಈ ಬಗೆಯ ಒತ್ತಡ ಇನ್ನೂ ಅಧಿಕಗೊಳ್ಳುತ್ತದೆ. ಬೆಳೆಯುವ, ಅರಿಯುವ, ಪ್ರತಿಸ್ಪಂದಿಸುವ, ಕುತೂಹಲದಿಂದ ಕಣ್ಣರಳಿಸುವ ಹದಿಹರೆಯದ ಹುಡುಗ ಹುಡುಗಿಯರು ಸ್ವಾತಂತ್ಯ್ರಪ್ರಿಯರು. ತಮ್ಮದೇ ವ್ಯಕ್ತಿತ್ವದ ಅನನ್ಯ ಛಾಪನ್ನು ಮೂಡಿಸಲು ಹಾತೊರೆಯುವವರು. ಈ ಹಂತದಲ್ಲಿ ಅವರು ತಮ್ಮದೇ ಆಸಕ್ತಿ-ಅಭಿರುಚಿಗಳನ್ನು, ಒಲವು-ನಿಲುವುಗಳನ್ನು ರೀತಿ-ನೀತಿಗಳನ್ನು, ಜೀವನದರ್ಶನವನ್ನು ರೂಪಿಸಿಕೊಳ್ಳಲು ಹೆಣಗುತ್ತಾರೆ. ಆದರೆ ಇವರ ಒಟ್ಟು ಚರ್ಯೆ, ವ್ಯಕ್ತಿತ್ವ, ಮೌಲ್ಯಗಳು ಇವೆಲ್ಲವನ್ನು ಹಿರಿಯರು ತಮ್ಮ ಕಣ್ಣುಗಳಿಂದ ಅಳೆದು ಸುರಿದು ತೂಕಹಾಕುತ್ತಾರೆ. ಹುಡುಗ-ಹುಡುಗಿ ತಮಗೆ ಹೇಗೆ ಬೇಕೋ ಹಾಗೆ ಬೆಳೆಯಲು ಬಿಡದೆ ತಮ್ಮ ಮೂಗಿನ ನೇರಕ್ಕೆ ತಕ್ಕಂತಿರಬೇಕು ಎಂದು ಭಾವಿಸುತ್ತಾಋಎ. ತಮ್ಮ ಆಸಕ್ತಿ ಒಲವು-ನಿಲುವುಗಳನ್ನು ಅವರ ಮೇಲೆ ಹೇರುತ್ತಾರೆ. ಮೀರಿ ನಡೆದರೆ ಅವಿಧೇಯತೆ-ಅಹಂ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಹೀಗಾಗಿ ಹದಿಹರೆಯದವರು ತಮ್ಮ ಆತ್ಮಸಾಕ್ಷಿಗೆ ತಕ್ಕಹಾಗೆ ನಡೆಯುವ ಬದಲು ತಂದೆತಾಯಿ, ಸಮಾಜ ಹಾಗೂ ಗುರುವೃಂದದವರು ಬಯಸಿದಂತೆ ನಡೆಯಲು ಒದ್ದಾಡಬೇಕಾಗುತ್ತದೆ. ಪರಿಣಾಮದಲ್ಲಿ ಅವರು ತಮ್ಮ ಸ್ವಂತಿಕೆಯನ್ನು ಮಾರಿಕೊಳ್ಳುತ್ತಾರೆ. ನಿಜಕ್ಕೂ ಅವರು ಉದ್ಯೋಗಕ್ಕೆ ಸೇರಿಕೊಂಡು ಸಂಸಾರಜೀವನ ತೊಡಗಿದಾಗ ಈ ಭದ್ರಕೋಟೆಯಿಂದ ಹೊರಕ್ಕೆ ಸಿಡಿದು ಸ್ವತಂತ್ರರಾಗಬಹುದು! ಬೇರೆಯವರು ತಮ್ಮ ಬಗ್ಗೆ ಏನು ತಿಳಿದುಕೊಳ್ಳುವರೋ ಎಂಬ ಚಿಂತೆಯಲ್ಲಿ, ಅನ್ಯರ ನಿರೀಕ್ಷೆಗಳಿಗೆ ಹೊಂದಿಕೊಳ್ಳುವ ಸಂಕಟದಲ್ಲಿ ಇವರ ಹದಿಹರೆಯ ಸೋರಿಹೋಗುತ್ತದೆ.

ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ತೀರ್ಮಾನಗಳು ಅಹಿತಕರವಾಗಿರುತ್ತವೆ. ಕಟುವಾಗಿರುತ್ತವೆ. ಅನ್ಯರ ತಪ್ಪುಗಳನ್ನು ನಾವು ಭೂತಕನ್ನಡಿ ಹಿಡಿದು ನೋಡುತ್ತೇವೆ. ಇದರಿಂದಾಗಿ “ಬೇರೆಯವರಿಗೆ ನನ್ನ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ಬೇರೆಯವರು ನನ್ನನ್ನು ಮೆಚ್ಚುವುದಿಲ್ಲ” ಎಂಬ ಭಾವನೆ ಸುಲಭವಾಗಿ ಹದಿಹರೆಯದವರಲ್ಲಿ ಬೆಳೇದು ಆತಂಕ ಹಾಗೂ ಕೀಳರಿಮೆಯನ್ನು ಉಂಟುಮಾಡುತ್ತದೆ. ಹದಿಹರೆಯದ ಸಂದರ್ಭದಲ್ಲಿ ತರುಣತರುಣಿಯರು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದರ ಜೊತೆಜೊತೆಗೆ ತಮ್ಮ ಮೌಲ್ಯವೇನು ಎಂಬುದನ್ನು ಕಂಡುಕೊಳ್ಳಬೇಕು. ಆದರೆ ಅನ್ಯರ ಟೀಕೆಟಿಪ್ಪಣಿಗಳ ಪಂಜರದಲ್ಲಿ ಬೆಳೆಯುವ ಅವರಲ್ಲಿ ಕ್ರಮೇಣ ನೈರಾಶ್ಯ, ಭರವಸೆ ಶೂನ್ಯತೆ, ಅಸಹಾಯಕತೆ ಹಾಗೂ ನಿಷ್ಟ್ರಯೋಜಕತೆಯ ಭಾವನೆಗಳು ಗಟ್ಟಿಗೊಂಡು ಮನೆಬಿಟ್ಟು ಓಡಿಹೋಗುವ ಅಥವಾ ಆತ್ಮಹತ್ಯೆಗೆ ಮನಮಾಡುವ ಪ್ರಕರಣಗಳಿಗೆ ನಾಂದಿಹಾಡುತ್ತದೆ.

ಕತ್ತುಕೊಯ್ಯುವ ಸ್ಪರ್ಧಾಕಣಕ್ಕೆ ನಾವು ನಮ್ಮ ಮಕ್ಕಳನ್ನು ತಳ್ಳಿ “ಓಡು ಓಡು, ಇನ್ನೂ ಜೋರಾಗಿ ಓಡು. ನೀನು ಓಡದಿದ್ದರೆ ಫಲವಿಲ್ಲ. ನೀನು ವೇಗವಾಗಿ ಓಡದಿದ್ದರೆ ನಾನು ಇದುವರೆಗೆ ಮಾಡಿದ್ದೆಲ್ಲ ವ್ಯರ್ಥ. ಮೇಲಾಗಿ ನಿನ್ನ ಸೋಲಿನಿಂದ ನನ್ನ ಮರ್ಯಾದೆ ಮೂರುಕಾಸು” ಎಂದು ಹೇಳಿ ಹೇಳಿ ಅವರು ಸೋಲುವಂತೆ ಮಾಡುತ್ತಿದ್ದೇವೆ. ಗೆಲ್ಲಲಾಗದ ಮಕ್ಕಳ ಕಣ್ಣೀರಿನ ಮುಖಗಳನ್ನು ಗಮನಿಸಿ. ತಮ್ಮ ಮಕ್ಕಳು ಗೆದ್ದೇ ಗೆಲ್ಲುತ್ತಾರೆ. ಜಗತ್ತನ್ನು ಮುಷ್ಟಿಯಲ್ಲಿ ಹಿಡಿದಿಡುತ್ತಾರೆ ಎಂದು ಭ್ರಮಿಸಿದ ತಂದೆತಾಯಿಗಳು ಸೋಲಾದಾಗ ನಡೆದುಕೊಳ್ಳುವ ರೀತಿಯನ್ನು ಗಮನಿಸಿ.

ಕಣ್ಣೀಋ ಧಾರೆ ಹರಿಯುತ್ತದೆ. ವ್ಯವಸ್ಥೆಯ ನಿಂದನೆ ನಡೆಯುತ್ತದೆ. ಆಕ್ರೋಶದ ಹೊಳೆ ಹರಿಯುತ್ತದೆ. ಮೌಲ್ಯಮಾಪಕರ, ತೀರ್ಪುಗಾರರ ಜನ್ಮ ಜಾಲಾಡಲಾಗುತ್ತದೆ. ಏಕೆ ಸೋಲಾಯಿತು? ಸೋಲಿಗೆ ತಾವೆಷ್ಟು ಕಾರಣ? ತಮ್ಮ ಮಗುವೆಷ್ಟು ಕಾರಣ? ಅರ್ಹತೆಗಳೇನು? ಅನರ್ಹತೆಗಳೇನು? ಇಷ್ಟಕ್ಕೂ ಅನಾರೋಗ್ಯಕರವಾದ ಇಂಥ ಸ್ಪರ್ಧಾ ವಾತಾವರಣ ಬೇಕಿತ್ತೇ? ಎಂದು ಯಾರೂ ಪ್ರಶ್ನಿಸುವುದಿಲ್ಲ. ಬದಲಾಗಿ ಇದೆಲ್ಲ ತೀರ ಸಹಜ ಮತ್ತು ಅಗತ್ಯ ಎಂದೇ ಪ್ರತಿಪಾದಿಸಲಾಗುತ್ತದೆ. ಪ್ರತಿಷ್ಠಿತ ಕೋರ್ಸಿಗೆ ಪ್ರವೇಶ ಪಡೆಯಲಾಗದ, ಅಧಿಕ ಅಂಕ ಗಳಿಸಲಾಗದ ಹುಡುಗ ಹುಡುಗಿಯರು ತಮ್ಮನ್ನು ತಾವು ಮೂರ್ಖರೆಂಬಂತೆ, ನಿರುಪಯುಕ್ತರೆಂಬಂತೆ ಭಾವಿಸಿಕೊಂಡು ಒಳಗೊಳಗೇ ನೋಯುತ್ತಾರೆ.

ಶಾಲಾ ಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಒದಗಿಸಿಕೊಡಿ. ಪ್ರಾಂಶುಪಾಲರಿಗೆ ಒಂದು ಮಾತು ಹೇಳಿ. ‘ನೀವು ಶಿಫಾರಸು ಮಾಡಿ’ ಎಂದು ನನ್ನಲ್ಲಿಗೆ ಬರುವ ತಂದೆ ತಾಯಿಗಳು ಹೇಳುವುದುಂಟು. “ಇವನಿಗೆ ಬಹಳ ಸಲ ಹೇಳಿದೆ ಚೆನ್ನಾಗಿ ಓದು; ಒಳ್ಳೆ ಮಾರ್ಕ್ಸು ತೆಗಿ ಅಂತ. ಕೇಳಲಿಲ್ಲ. ಈಗ ನೋಡಿ ೪೫ ಮಾರ್ಕ್ಸ್ ಬಂದಿದೆ. ನಾವು ಅವರಿವರ ಕೈಕಾಲು ಹಿಡಿಯಬೇಕಾಗಿ ಬಂದಿದೆ” ಎನ್ನುವಾಗ ಹುಡುಗ ಹುಡುಗಿ ತಲೆತಗ್ಗಿಸಿ ಕೊಂಡು, ಕಣ್ಣಂಚಿನಲ್ಲಿ ನೀರುತುಂಬಿಸಿಕೊಂಡು ಅಪರಾಧಿಗಳ ಹಾಗೆ ನಿಂತಿರುತ್ತಾರೆ!

ಕೆಲವೊಂದು ವೃತ್ತಿಪರ ಕೋರ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಎಸೈನ್‌ಮೆಂಟ್‌ಗಳು, ಪ್ರಾಜೆಕ್ಟ್‌ ಕಾರ್ಯಗಳು ಸಾಕಷ್ಟು ಒತ್ತಡವನ್ನುಂಟುಮಾಡುತ್ತವೆ. “ನೀವು ಮೊದಲಿನಿಂದ ಕೆಲಸಮಾಡಿ. ಒತ್ತಡವೆಂದು ಭಯಪಡಬೇಡಿ. ಒತ್ತಡ ನಿರ್ವಹಣೆಯ ಕೌಶಲಗಳನ್ನು ಕಲಿಯಿರಿ” ಎಂದು ಉಪನ್ಯಾಸಕವೃಂದ ಹೇಳಬಹುದು. ಆದರೆ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನವಿರುವಲ್ಲಿ ಇದೆಲ್ಲ ಒತ್ತಡವೇ. ರಾತ್ರಿ ಎರಡು ಗಂಟೆವರೆಗೆ ಬರೆದು ಬೆಳಗ್ಗೆ ತರಗತಿಗೆ ಬಂದು ಅನಾರೋಗ್ಯವೆಂದು ಹೇಳಿ ಹೊರಟುಹೋಗುವುದು, ದತ್ತ ಕಾರ್ಯಗಳನ್ನು ಉಪನ್ಯಾಸಕರಿಗೆ ಒಪ್ಪಿಸುವ ಕೊನೆಯ ದಿವಸ ತರಗತಿಗೆ ಗೈರುಹಾಜರಾಗುವುದು, ಕಾಲೇಜಿಗೆ ಬಂದರೂ ತರಗತಿಗಳಿಗೆ ಹಾಜರಾಗದೆ ಇನ್ನೆಲ್ಲೋ ಕುಳಿತು ಬರೆಯುವುದು ಇದೆಲ್ಲ ನಾವು ನೋಡುವ ದೃಶ್ಯಗಳು. ಇಷ್ಟೆಲ್ಲ ಕೆಲಸಗಳು ಅಗತ್ಯವೇ? ಇವುಗಳ ಹೊರೆ ಕಡಿಮೆಮಾಡಲು ಸಾಧ್ಯವೇ? ಎಂಬ ಯೋಚನೆ ಯಾರ ತಲೆಗೂ ಬರುವುದಿಲ್ಲ. ಉಪನ್ಯಾಸಕರನ್ನು ಪ್ರಶ್ನಿಸಿದರೆ ವೃತ್ತಿಪರ ತರಗತಿಗಳಲ್ಲಿ ಓದುವವರು ಒತ್ತಡದಲ್ಲೇ ಕೆಲಸಮಾಡಬೇಕು. ಆಗಲೇ ಕೆಲಸದ ಮಹತ್ವ ತಿಳಿಯುತ್ತದೆ ಎಂದು ಸುಲಭದಲ್ಲಿ ತಮ್ಮ ಭುಜ ಕೊಡವಿಕೊಳ್ಳುತ್ತಾರೆ!

ಓಟದ ಕಣದಲ್ಲಿ ಉಸಿರುಬಿಡುವುದಕ್ಕೆ ಯೋಚಿಸುವುದಕ್ಕೆ ಬಿಡುವಿಲ್ಲದಂತೆ ಓಡಿ ಗುರಿಮುಟ್ಟಲೇಬೇಕಾದ ಅನಿವಾರ್ಯತೆ. ಕೊನೆಗೂ ಅನೇಕರು ಹೇಗೋ ಗುರಿಮುಟ್ಟುತ್ತಾರೆ. ಆದರೆ ಅದೇನೂ ಆನಂದದಾಯಕವಾದ ಸಂತೃಪ್ತಿಯ ಅನುಭವವಲ್ಲ. ‘ಸದ್ಯ ಮುಗಿಯಿತಲ್ಲ! ಜನ್ಮಕ್ಕೆ ಇದು ಬೇಡ’ ಎಂಬ ಹೇವರಿಕೆಯ ಉದ್ಗಾರಗಳು ಹೊರಹೊಮ್ಮುತ್ತವೆ.

ಕಿರಿಯರು ತಮ್ಮ ಕೆಲಸದಲ್ಲಿ ಹಾಗೂ ಬಿಡುವಿನ್ಲಲ್ಲಿ ಗಳಿಸಬಹುದಾದ ಸಂತೋಷಕ್ಕೆ ಈ ಎಲ್ಲ ಬಗೆಯ ಒತ್ತಡಗಳ ಮೂಲಕ ಕೊಡಲಿ ಏಟು ಹಾಕುತ್ತಿದ್ದೇವೆ. ಮಾಡುವ ಕೆಲಸದಲ್ಲಿ ಸಂತೋಷ, ಆನಂದ ಕಂಡುಕೊಳ್ಳಲಾಗದಿದ್ದರೆ ಆ ಕೆಲಸದಿಂದ ಯಾರಿಗೆ ತಾನೆ ಏನು ಪ್ರಯೋಜನ? ತೀರ ಗಡಿಬಿಡಿಯಲ್ಲಿ ವಿದ್ಯಾರ್ಥಿಗಳು ಗೀಚಿಕೊಟ್ಟ ಎಸೈನ್‌ಮೆಂಟನ್ನು ಓದಿ ನೋಡುವಾಗ ಅಧ್ಯಾಪಕರು ಸಂತೋಷಪಡುವ ಬದಲು ತಮ್ಮ ತಲೆಕೂದಲು ಕಿತ್ತುಕೊಳ್ಳುತ್ತಾರೆ. ರೇಗುತ್ತಾರೆ. ಅವರನ್ನು ವಾಚಾಮಗೋಚರ ನಿಂದಿಸುತ್ತಾರೆ. ನೀವು ನಿರರ್ಥಕ ಜೀವಿಗಳು ಎಂದು ಶಪಿಸುತ್ತಾರೆ.

ಎತ್ತರ ಜಿಗಿತ (ಹೈಜಂಪ್‌)ದಲ್ಲಿ ನೀವು ಮೇಲೆಮೇಲೆ ಹಾರಿದಷ್ಟೂ ತಡೆಗೋಲನ್ನು (ಬಾರ್) ಇನ್ನಷ್ಟು ಎತ್ತರಿಸುತ್ತಾರೆ. ಉತ್ತಮ ಸಾಧಕ ಮಾತ್ರವೇ ಅದನ್ನು ಹಾರಬಲ್ಲ. ಅವನಿಗೂ ಒಂದು ಮಿತಿಯಿದೆ. ಸಾಮಾನ್ಯರು ಹಾರಲಾಗದೆ ಅರ್ಧದಲ್ಲೆ ಹಿಂದೆ ತೆರಳುತ್ತಾರೆ. ನಮ್ಮ ಸದ್ಯದ ಅಂಕಗಳ ಹುಚ್ಚುಕುದುರೆಗಳ ಓಟವೂ ಹೀಗೆಯೇ ಆಗಿದೆ. ಒಂದು ಕಾಲಕ್ಕೆ ಪ್ರಥಮ ದರ್ಜೆಯಲ್ಲಿ ಪಾಸಾಗುವುದೇ ಬಹಳ ವಿಶೇಷ. ಈಗ ಅನೇಕ ಮಕ್ಕಳಲ್ಲಿ ಹಾಗೂ ಹೆತ್ತವರಲ್ಲಿ ಎಂಥ ಭಾವನೆ ಬಂದಿದೆ ಎಂದರೆ ಶೇಕಡ ೮೦-೮೫ ಅಂಕಗಳು ಏನೇನೂ ಅಲ್ಲ. ೯೦-೯೫ ಕೂಡ ಸಾಳದು. ನೂರಕ್ಕೆ ನೂರು ಅಂಕಗಳು ಸಿಗಬೇಕು. ಒಂದು ಅಂಕ ಕಡಿಮೆಯಾದರೂ ಶಿಕ್ಷಕರೊಡನೆ ಜಗಳವಾಡುವ, ಪರೀಕ್ಷಾ ಮಂಡಲಿಗಳಿಗೆ ದುಬಾರಿಶುಲ್ಕ ತೆತ್ತು ಅದನ್ನು ಪಡೆಯುವ ಯತ್ನಗಳು ಈಗೀಗ ಸಾಕಷ್ಟು ನಡೆಯುತ್ತಿವೆ. ಪ್ರತಿವರ್ಷ ಶೇಕಡ ೧೦೦ ಫಲಿತಾಂಶ ಗಳಿಸುವ ಶಾಲೆ ಸರ್ವಶ್ರೇಷ್ಠ; ನೂರಕ್ಕೆ ನೂರು ಅಂಕ ಗಳಿಕೆ ಸರ್ವೋತ್ಕೃಷ್ಟ ಸಾಧನೆ. ಇದೇ ಉಳಿದ ಎಲ್ಲರೂ ಅವರ ಯೋಗ್ಯತೆ, ಅರ್ಹತೆ ಏನೇ ಇರಲಿ ಸಾಧಿಸಬೇಕಾದ ಗುರಿ ಎಂಬಂತಾಗಿದೆ!

ಶಿಕ್ಷಣಾಲಯಗಳ ಮೂಲಕ ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿರುವ ಹೊರಲೆಯ ಭೀಕರ ಪರಿಣಾಮಗಳು ಇಂದು ಯಾರಿಗಾದರೂ ಅನುಭವವೇದ್ಯ. ಮನಃಕ್ಲೇಶಗಳು ಹೆಚ್ಚುತ್ತಿವೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಅನೇಕರು ಮಾದಕದ್ರವ್ಯಸೇವನೆ, ವಸ್ತುದೂಷಣೆ (substance abuse)ಗೆ ಬಲಿಯಾಗುತ್ತಿದ್ದಾರೆ.  ತನ್ಮೂಲಕ ತಮ್ಮ ಸೋಲು-ಅಪಮಾನವನ್ನು ಮರೆಯಲು ಹವಣಿಸುತ್ತಿದ್ದಾರೆ. ಮೇಲಾಗಿ ದಿನೇದಿನೇ ವಿದ್ಯಾರ್ಥಿಗಳ, ತರುಣರ ಆತ್ಮಹತ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ ಪತ್ರಿಕೆಗಳಲ್ಲಿ ಇಂಥ ಸುದ್ದಿಗಳು ಪ್ರಕಟವಾಗುತ್ತಿವೆ. ಪರೀಕ್ಷಾ ಫಲಿತಾಂಶ ಪ್ರಕಟವಾದ ಮೊದಮೊದಲಂತೂ ಇಂಥ ಪ್ರಕರಣಗಳು ಸರ್ವಸಾಮಾನ್ಯವಾಗಿವೆ.

ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲ ವಿದ್ಯಾರ್ಥಿಗಳೂ ಶಾಲಾ ಒತ್ತಡಕ್ಕೆ ಬಲಿಯಾದವರು ಎಂದು ಹೇಳುವಂತಿಲ್ಲ. ಮತ್ತೆ ಕೆಲವರು ನಿಜಕ್ಕೂ ನೊಂದು ಹತಾಶೆಯಿಂದ ತೀರ ಗಂಭೀರ ಕ್ರಮ ಕೈಗೊಳ್ಳುತ್ತಾರೆ. ಇದಲ್ಲದೆ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಅಂಕಗಣನೆಯಲ್ಲಿ ಮೋಸ, ಪರೀಕ್ಷಾಭವನದಲ್ಲಿ ಸಾಮೂಹಿಕ ನಕಲು-ಇತ್ಯಾದಿ ಪ್ರಕರಣಗಳ ಸಂಖ್ಯೆ ಮಿತಿಮೀರಿದೆ. ಯಾವ ವಿಶ್ವವಿದ್ಯಾನಿಲಯವೂ ಇದರಲ್ಲಿ ನಿಷ್ಕಲಂಕ ಎನ್ನುವಂತಿಲ್ಲ! ಹೆತ್ತವರು, ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳೂ ಈ ಅಕ್ರಮಗಳಲ್ಲಿ ಪಾಲು ಪಡೆಯುತ್ತಿದ್ದಾರೆ. ಯಶಸ್ಸಿನ ಶಿಖರವೇರಬೇಕಾದರೆ ಮೋಸ ಮಾಡಲೇಬೇಕು; ಮೋಸಮಾಡುವುದೇನೂ ಅಪಮಾನದ ಸಂಗತಿಯಲ್ಲ. ಈಗೀಗ ಅದೆಲ್ಲ ಮಾಮೂಲು. ಮೋಸಮಾಡಿ ಸಾಕ್ಷ್ಯಸಹಿತ ಸಿಕ್ಕಿಬಿದ್ದರೆ ಮಾತ್ರ ಅಪರಾಧ; ಸಾಕ್ಷ್ಯ ನಾಶಮಾಡಿದರೆ ಅಪರಾಧವಾಗದು ಎಂಬ ಅಪಾಯಕಾರಿ ಪ್ರಾಪಂಚಿಕ ಜ್ಞಾನ ಇಂಥವರ ಬೆಂಬಲಕ್ಕಿದೆ. ಹೆಸರು, ಕೀರ್ತಿ ಹಾಗೂ ಯಶಸ್ಸಿನ ಮುಂದೆ ಅಲ್ಪ ಪ್ರಮಾಣದ ಅಕ್ರಮ ಗೌಣ ಎಂಬ ಭಾವನೆ ಇಂದು ಸಾರ್ವತ್ರಿಕವಾಗಿರುವುದು ನಮ್ಮ ಸಾಮಾಜಿಕ ದುರಂತ!

ಶಿಕ್ಷಣವು ವಿದ್ಯಾರ್ಥಿಗಳ ಮುಂದೆ ಒಡ್ಡುತ್ತಿರುವ ಒತ್ತಡ ಹಾಗೂ ಅಂಕಗಳಿಕೆಗಾಗಿ ನಡೆಸಲಾಗುತ್ತಿರುವ ಉಸಿರುಬಿಡದ ಓಟದಿಂದಾಗಿ ಇಡೀ ನಮ್ಮ ಕಲಿಕೆಯ ವ್ಯವಸ್ಥೆಯೇ ಹದಗೆಟ್ಟಿದೆ. ಬಾಯಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಕಲಿಕೆಯ ಆನಂತ ಇತ್ಯಾದಿ ಮಂತ್ರಗಳನ್ನು ಉಚ್ಚರಿಸುತ್ತೇವೆ. ಆದರೆ ನಮ್ಮ ಆಚರಣೆಗಳು ಇದಕ್ಕೆ ತದ್ವಿರುದ್ಧವಾಗಿವೆ. ಸಂತೋಷದಿಂದ ಆನಂದದಿಂದ ಕಲಿಯುವ ಆದರೆ ಕಡಿಮೆ ಅಂಕಗಳಿಸುವ ಮಕ್ಕಳಿಗೆ ಈ ವ್ಯವಸ್ಥೆಯಲ್ಲಿ ಬೆಲೆಯಿಲ್ಲ. ಸಾಮಾನ್ಯಮಟ್ಟದ ಅಂಕ ಗಳಿಸಿದರೂ ತನ್ನ ಕಲಿಕೆಯನ್ನು ದಿನೇದಿನೇ ಸುಧಾರಿಸಿಕೊಳ್ಳಲು ವಿದ್ಯಾರ್ಥಿಯೊಬ್ಬನು ಮಾಡುವ ಪ್ರಯತ್ನಗಳನ್ನು ಯಾರೂ ಕೊಂಡಾಡುವುದಿಲ. ಮಕ್ಕಳು ನಿಜಕ್ಕೂ ಏನನ್ನು ಕಲಿತಿದ್ದಾರೆ? ಏನನ್ನು ಕಂಡು ಕೊಂಡಿದ್ದಾರೆ? ಕಲಿಯುವ ಪ್ರಕ್ರಿಯೆಯಲ್ಲಿ ಗಳಿಸಿದ ಲೋಕಾನುಭವ ಏನು? ಎಂಬುದು ಶಿಕ್ಷಕರಿಗೂ ಹೆತ್ತವರಿಗೂ ಬೇಕಾಗಿಲ್ಲ.

ಅತ್ಯಧಿಕ ಗ್ರೇಡನ್ನು ಅಥವಾ ಅಂಕಗಳನ್ನು ಗಳಿಸಿದ ಕೈಬೆರಳೆಣಿಕೆಯ ಹುಡುಗ ಹುಡುಗಿಯರನ್ನು ನಾವು ಸಾರ್ವತ್ರಿಕವಾಗಿ ಅಭಿನಂಧಿಸುತ್ತೇವೆ. ಪುರಸ್ಕಾರಗಳನ್ನು ನೀಡಿ ಅವರ ಪ್ರತಿಭೆ ಅದ್ಭುತ ಎಂದು ಕೊಂಡಾಡುತ್ತೇವೆ. ಪತ್ರಿಕೆಗಳಲ್ಲಿ ವರ್ಣರಂಜಿತ ಜಾಹೀರಾತು ನೀಡುತ್ತೇವೆ. ಅವರ ಸಂದರ್ಶನ ಪ್ರಕಟಿಸಿ ಯಶಸ್ಸಿನ ಗುಟ್ಟನ್ನು ಪ್ರಕಟಿಸುತ್ತೇವೆ. ತಿಳಿವಳಿಕೆ, ಜ್ಞಾನಸಂಪಾದನೆ ಹಾಗೂ ಕುತೂಹಲಕ್ಕಾಗಿ ಕಲಿಯುವುದಲ್ಲ; ಆನಂದಕ್ಕಾಗಿ , ಸಂತೃಪ್ತಿ ಗಳಿಕೆಗಾಗಿ ಕಲಿಯುವುದಲ್ಲ. ಬೇರೇನೋ ಉಪಾಧಿ, ಪ್ರಶಸ್ತಿ ಪುರಸ್ಕಾರ, ಮೆಚ್ಚುಗೆ ಗಳಿಸಲು ಕಲಿಯುವುದು ಎಂಬುದನ್ನು ನಾವು ಕಿರಿಯರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಶಾಲೆ ಕಾಲೇಜುಗಳಲ್ಲಿ ಜ್ಞಾನಸಂಪಾದನೆ, ತಿಳಿವಳಿಕೆ ಗಳಿಕೆಗೆ ಸ್ಥಾನವಿಲ್ಲ; ಇವನಿಗೆ ತಿಳಿದಿದೆ. ಇವನು ಬಲ್ಲವನು ಎಂದು ಬೇರೆಯವರಲ್ಲಿ ಬಿಂಬಿಸಲು ಕಲಿಯುವುದು; ಬದುಕಿನ ಸವಾಲುಗಳನ್ನು ಸಮರ್ಥವಾಗಿ ಪರಿಹರಿಸಲು ಜ್ಞಾನವು ಒಂದು ಶಕ್ತಿಯಾಗಿ ಕೆಲಸಮಾಡುತ್ತದೆ ಎಂಬ ಕಾರಣಕ್ಕೆ ಕಲಿಯುವುದಲ್ಲ; ಬದಲಾಗಿ ಅದೊಂದು ವಾಣಿಜ್ಯ ಉತ್ಪನ್ನ, ಹೆಚ್ಚಿನ ಬೆಲೆ ತೆತ್ತು ಇಂದು ಅದನ್ನು ಪಡೆದುಕೊಂಡರೆ ನಾಳೆ ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಹುದು ಎಂಬ ಧೋರಣೆ ಇಂದು ಪ್ರಬಲವಾಗಿದೆ. ಶಾಲೆ ಎಂಬುದು ಇಂದು ಯಶಸ್ಸಿನ ಭದ್ರಕೋಟೆಯಾಗಿದೆ. ಶಾಲೆಯಲ್ಲಿ ಇತರರನ್ನು ಮೀರಿಸಿ ಗೆಲ್ಲಬೇಕಾದರೆ ಮತ್ತು ನಾಳಿನ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಈ ಯಶಸ್ಸಿನ ಭದ್ರಕೋಟೆಯನ್ನು ಭೇದಿಸುವುದು ಹೇಗೆ ಎಂದು ಕಲಿಯುವುದು ಅನಿವಾರ್ಯವೆಂಬ ಭಾವನೆಯನ್ನು ನಮ್ಮ ಸಮಾಜವ್ಯವಸ್ಥೆ ಬಿಂಬಿಸುತ್ತಿದೆ. ಆದುದರಿಂದಲೆ ‘ಒಡೆದ ಗಾಜುಗಳ ಮೇಲೆ ಇಲಿಗಳ ನಿಲ್ಲದ ಓಟ’.ವಿದ್ಯಾರ್ಥಿಗಳು ಅಧಿಕಾಧಿಕ ಅಂಕಗಳನ್ನು ಸಂಪಾದಿಸಬೇಕು ಎಂದು ಶಿಕ್ಷಣ ಸಂಸ್ಥೆಗಳವರು ಹೇರುವ ಒತ್ತಡವನ್ನು ನಿವಾರಿಸಲು , ಕಡಿಮೆಮಾಡಲು ಸಾಧ್ಯವೆ? ಖ್ಯಾತ ಶಿಕ್ಷಣವೇತ್ತ ಜಾನ್‌ ಹೋಲ್ಟ್‌ರ ಪ್ರಕಾರ ಇದು ಸಾಧ್ಯವಾಗಲಾರದು. ಏಕೆಂದರೆ-
(ಅ) ತಮ್ಮ ಸಂಸ್ಥೆಗಳ ಘನತೆ ಗೌರವ ಕಾಪಾಡಲು ಪ್ರತಿಷ್ಠಿತ ಶಾಲೆಗಳವರು ಒಡ್ಡುತ್ತಿರುವ ಒತ್ತಡದ ವಿಪರೀತ ಪರಿಣಾಮವನ್ನು ಅವರು ಇನ್ನೂ ಸರಿಯಾಗಿ ಗ್ರಹಿಸಿಲ್ಲ. ಬದಲಾಗಿ ಶಿಕ್ಷಣಸಂಸ್ಥೆಗಳ ಘನತೆ-ಗೌರವ, ಖ್ಯಾತಿ ಹಾಗೂ ಗುಣಮಟ್ಟ ಸಂರಕ್ಷಣೆ ದೃಷ್ಟಿಯಿಂದ ಒತ್ತಡ ಹೇರುವುದು ಅನಿವಾರ್ಯವೆಂಬ ಭಾವನೆ ಅವರಲ್ಲಿದೆ.

(ಆ) ಅತ್ಯುತ್ತಮ ಅಂಕಗಳಿಸುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪ್ರವೇಶ ಹಾಗೂ ಉದ್ಯೋಗ ಭರವಸೆ ಅಧಿಕವೆಂಬುದು ಅವರ ಅಭಿಪ್ರಾಯ. ಹೀಗಾಗಿ ಪರೀಕ್ಷಾ ಕೇಂದ್ರಿತ ಬೋಧನೆಗೆ ಎಲ್ಲಿಲ್ಲದ ಮಹತ್ತ್ವ. ಪರೀಕ್ಷಾ ಅಂಕಗಳ ಮೇಲಿನ ಒತ್ತು ಸಡಿಲವಾದರೆ ವಿದ್ಯಾರ್ಥಿಗಳು ಅಲಸಿಗಳೂ ಅಶಿಸ್ತಿನವರೂ ಆಗಿಬಿಡಬಹುದೆಂಬ ಭಯ.

(ಎ) ಹೆಚ್ಚಿನ ಅಂಕ ಗಳಿಸಿದವರಿಗೆ ಮಾತ್ರವೇ ಕಾಲೇಜುಗಳಲ್ಲಿ ಪ್ರವೇಶ ಎಂಬ ಧೋರಣೆಯನ್ನು ಪಾಲಿಸದಿದ್ದರೆ ೪೦-೪೫ ಅಂಕ ಗಳಿಸಿದ ವಿದ್ಯಾರ್ಥಿಗಳು ತುಂಬಿಕೊಂಡು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಬೋಧನೆ ಕಲಿಕೆಯೂ ಸೊರಗುತ್ತದೆ.

ಮೀಸಲಾತಿಯ ಮೂಲಕ ಪ್ರವೇಶ ಪಡೆಯುವ ಅನೇಕ ವಿದ್ಯಾರ್ಥಿಗಳಿಂದಾಗಿ ತಮ್ಮ ಸಂಸ್ಥೆಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂಬ ಕಾರಣಕ್ಕೆ ಅನೇಕ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಮೀಸಲಾತಿ ನೀತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅದರ ಹಿಂದಿರುವ ಸಾಮಾಜಿಕ ನ್ಯಾಯವನ್ನು ಮನಗಾಣುವುದಿಲ್ಲ.

ಮುಖ್ಯವಾದ ಸಂಗತಿ ಎಂದರೆ ಶಾಲಾ ಆಡಳಿತ ಮಂಡಳಿಗಳು, ಸರಕಾರಗಳು,ಶಿಕ್ಷಕರು ಹಾಗೂ ಹೆತ್ತವರು ಒಂದೆಡೆ ಕಲೆತು ಮಕ್ಕಳ ಮೇಲೆ ಹೆಚ್ಚುತ್ತಿರುವ ಕಲಿಕೆಯ ಹೊರೆ ಹಾಗೂ ಒತ್ತಡಗಳನ್ನು ಅವರ ಮಾನಸಿಕ ಸ್ವಾಸ್ಥ್ಯದ ಹಾಗೂ ಅರ್ಥಪೂರ್ಣ ವಿಕಾಸದ ದೃಷ್ಟಿಯಿಂದ ಕಡಿಮೆಮಾಡುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಚಿಂತನಮಂಥನ ನಡೆಸುವ ಅವಶ್ಯಕತೆಯಿದೆ. ಶಿಕ್ಷಣವೆಂಬುದು ಓಟದ ಕಣವಲ್ಲ. ಇಲ್ಲಿ ಒಬ್ಬ ವಿದ್ಯಾರ್ಥಿ ಮತ್ತೊಬ್ಬನನ್ನು ಹಿಂದಕ್ಕೆ ಒತ್ತಿ ತಾನು ಮುಂದೋಡಬೇಕಾಗಿಲ್ಲ. ಯಾರದೋ ಪ್ರಶಂಸೆ ಗಳಿಸಲಿಕ್ಕಾಗಿ ಕಲಿಯಬೇಕಾಗಿಲ್ಲ. ಅದು ನಿಜವಾದ ಕಲಿಕೆಯೂ ಅಲ್ಲ. ಬದಲಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಆಸಕ್ತಿ, ಕೌಶಲಕ್ಕೆ ಅನುಗುಣವಾಗಿ ತಾನಾಗಿ ಕಲಿಯುವ ಹಂಬಲ ಮೂಡಿಸುವುದು, ಬಾಳಿನ ಅರ್ಥವನ್ನು ಕಂಡುಕೊಳ್ಳಲು ಇಂಬುನೀಡುವುದು ಮತ್ತು ತಾನು ಮಾಡುವ ಎಲ್ಲ ಕೆಲಸಗಳಲ್ಲೂ ಸಂತೋಷವನ್ನು ಕಂಡುಕೊಳ್ಳುವುದು ಮುಖ್ಯ ಎಂಬ ತತ್ವವನ್ನು ಆಚರಣೆಗೆ ತರಬೇಕಾಗಿದೆ.

ಪ್ರತಿಯೊಂದು ಶಾಲೆಯಲ್ಲೂ ನಿಜಕ್ಕೂ ಹೊರೆ ಹಾಗೂ ಒತ್ತಡ ಕಡಿಮೆಮಾಡುವುದು ಹೇಗೆ ಎಂಬುದನ್ನು ಶಿಕ್ಷಕರು ಪರ್ಯಾಲೋಚಿಸಿ ನಿರ್ದಿಷ್ಟ ಸೂತ್ರಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು. ಬರವಣಿಗೆಯ ಹಾಗೂ ಪರೀಕ್ಷೆಯ ಹೊರೆಯನ್ನು ಕಡಿಮೆಗೊಳಿಸಬೇಕು. ಸಹಜ ಪರಿಸರದಲ್ಲಿ ಮಗುವಿನ ವ್ಯಕ್ತಿತ್ವ ವಿಕಾಸವಾಗುವಂತೆ ಮೌಲ್ಯಮಾಪನ ಮಾಡುವಂತಾಗಬೇಕು. ಇಷ್ಟಾದರೂ ಒತ್ತಡಕ್ಕೆ ಒಳಗಾಗುವ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯ ಸಂರಕ್ಷಣೆ ದೃಷ್ಟಿಯಿಂದ ಪ್ರತಿಯೊಂದು ವಿದ್ಯಾಲಯದಲ್ಲೂ ಆಪ್ತ ಸಲಹಾ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಇದಾಗದಿದ್ದಲ್ಲಿ ವಾರಕ್ಕೊಮ್ಮೆಯಾದರೂ ಚಿಕಿತ್ಸಕ ಮನೋವಿಜ್ಞಾನಿಗಳ ಜೊತೆ ಇಂಥ ಮಕ್ಕಳ ಭೇಟಿ ಸಂವಾದ ಕಾರ್ಯಕ್ರಮ ಏರ್ಪಡಿಸಬೇಕು.