ಶ್ರದ್ಧೆ ಕೊಡುವನ್ನ ನೀರಿಲ್ಲದೆಯೆ
ಉರುಳುವರು ಪಿತೃಪಿತಾಮಹರು. ಹೊಕ್ಕುಳಿನ ಬಳ್ಳಿ
ಕತ್ತರಿಸಬಾರದೋ ಏನೋ ಬಿತ್ತಕ್ಕೆ ಬೇರಿನ ಚಿಂತೆ ಇಲ್ಲ
(ಗೋಪಾಲಕೃಷ್ಣ ಅಡಿಗ – ‘ವರ್ಧಮಾನ’ ಕವನ)

ಹಳೆಯ ತಲೆಮಾರು ಇಂದು ದುರ್ಬಲವಾಗಿದೆ. ಅದಕ್ಕೆ ಹೊಸ ತಲೆಮಾರಿನ ಮೇಲೆ ಹಿಡಿತವಿಲ್ಲ.  ಹಳೆತಲೆಮಾರಿನ ಮಂದಿಗೆ ಹೊಸ ತಲೆಮಾರಿನ ಮಂದಿ ಕಿಮ್ಮತ್ತು ನೀಡುವುದಿಲ್ಲ. ಅವರ ಉಪದೇಶಗಳಿಗೆ ಕಿವಿಕೊಡುವುದಿಲ್ಲ. ಅವರ ಅನುಭವದ ಮಾತುಗಳು ಈಗಿನ ತಲೆಮಾರಿಗೆ ತೃಣಸಮಾನ. ಹೇಗೆ ಮತ್ತು ಯಾಕೆ ಹಳೆಯ ತಲೆಮಾರು ಹೊಸ ತಲೆಮಾರಿನ ಮೇಲೆ ಪ್ರಭಾವಬೀರಲು ಸೋತಿದೆ? ಎಂದು ಹಲವರು ಪ್ರಶ್ನಿಸುವುದುಂಟು. ಬಹುಶಃ  ಹಳೆಯ ತಲೆಮಾರು ದಿನಹೋದಂತೆ ಹೆಚ್ಚು ಹೆಚ್ಚು ಉದಾರಗೊಳ್ಳುತ್ತ ಬಂದಿದೆ. ಹೆಚ್ಚು ಮೃದುವಾಗಿದೆ. ಕಿರಿಯರಿಗೆ ಹೆಚ್ಚಿನ ಸ್ವಾತಂತ್ಯ್ರ ಒದಗಿಸಲು ಸಜ್ಜುಗೊಂಡಿದೆ.

ಒಂದು ಸಣ್ಣ ಉದಾಹರಣೆ ಗಮನಿಸಿ: ನನ್ನ ಅಜ್ಜನ ಮನೆಯಲ್ಲಿ ನನ್ನ ಜೊತೆ ಬೆಳೆದ ನನ್ನ ತಂಗಿ ಮುಟ್ಟಾದಾಗಲೆಲ್ಲ ಚಾವಡಿಯಿಂದ ಕೆಳಗೆ ಪ್ರತ್ಯೇಕ ಕೊಠಡಿಯಲ್ಲಿ ನಾಲ್ಕು ದಿನ ಇರಬೇಕಿತ್ತು. ಯಾರೂ ಅವಳನ್ನು ‘ಮುಟ್ಟ’ಬಾರದು. ಅಡುಗೆಮನೆ. ದೇವರಮನೆ, ಬಚ್ಚಲುಮನೆ ಇತ್ಯಾದಿಗಳಿಗೆ ಯಾವುದಕ್ಕೂ ಪ್ರವೇಶವಿರಲಿಲ್ಲ. ಅದೇ ಮನೆಯಲ್ಲಿ ಕೆಲವು ವರ್ಷಗಳ ಬಳಿಕ ನಮ್ಮ ಸೋದರತ್ತೆಯ ಇಬ್ಬರು ಹೆಣ್ಣುಮಕ್ಕಳು ಮೈನೆರೆದ ಮೇಲೆ ಚಿತ್ರಣ ಪೂರ್ಣ ಬದಲಾಯಿತು. ಈ ಹೆಣ್ಣುಮಕ್ಕಳು ಯಾವ ಅಂಕೆಯಿಲ್ಲದೆ ಒಳಹೊರಗೆ ಓಡಾಡಿಕೊಂಡಿದ್ದರು. ಮಗಳು ಕಾಲೇಜಿಗೆ ಹೋಗುವವಳಾದ್ದರಿಂದ ತಂದೆತಾಯಿ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಹೇಳಿದರೂ ಅವರು ಧಿಕ್ಕರಿಸುವ ಮನಃಸ್ಥಿತಿಯಲ್ಲಿದ್ದರು. ಹೀಗಾಗಿ ಉದಾರವಾದಿ ಕ್ರಮ ಜಾರಿಗೆ ಬಂದಿತು!

ನಾನು ಮದುವೆಯಾಗುವ ತನಕ ನಮ್ಮ ಅಜ್ಜಿಯ ಮನೆಯಲ್ಲಿ ಸ್ಥಾನಿಕ ಬ್ರಾಹ್ಮಣರಿಗೆ (ಬ್ರಾಹ್ಮಣರಲ್ಲೇ ಒಂದು ಪ್ರಭೇದ. ದೇವಾಲಯದ ಸೇವಕರಾದ ಇವರು ಅನ್ಯ ಬ್ರಾಹ್ಮಣರಿಗಿಂತ ಕೀಳು ಎಂಬ ಭಾವನೆ) ವಿಶೇಷ ಭೋಜನ ಸಮಾರಂಭಗಳಲ್ಲಿ ‘ಅಡ್ಡಪಂಕ್ತಿ’ ಹಾಕುತ್ತಿದ್ದರು. ಆದರೆ ನಾನು ಸ್ಥಾನಿಕ ಬ್ರಾಹ್ಮಣವರ್ಗಕ್ಕೆ ಸೇರಿದ ಹುಡುಗಿಯನ್ನು ಮದುವೆಯಾದ ಮೇಲಿನಿಂದ ನಮ್ಮಲ್ಲಿ ಆ ಅಡ್ಡಪಂಕ್ತಿ ಹೋಯಿತು. ಗಂಡಸರ, ಹೆಂಗಸರ ಪಂಕ್ತಿಯ ಕೊನೆಯಲ್ಲಿ ಅವರು ಇತರ ಬ್ರಾಹ್ಮಣರ ಜೊತೆ ಕುಳಿತು ಉಣ್ಣುವುದಕ್ಕೆ ಅವಕಾಶ ಮಾಡಿಕೊಡಲಾಯಿತು! ಹೀಗೆ ಹಳೆಯ ತಲೆಮಾರು ತನ್ನ ಧೋರಣೆಗಳನ್ನು ಸರಳಗೊಳಿಸುತ್ತಾ ಹೋಗಿದೆ.

ಶಿಸ್ತು, ಶಿಕ್ಷೆ ಹಾಗೂ ನಿರ್ಬಂಧ ಅತಿಯಾದ ಮನೆಗಳಲ್ಲಿ ಬೆಳೆಯುವ ಮಕ್ಕಳು ದೊಡ್ಡವರಾದಾಗ ಅವಿಧೇಯರೂ ಹಠಮಾರಿಗಳೂ ರೌಡಿಗಳೂ ಆಗುವ ಸಾಧ್ಯತೆಯಿದೆ. ಬಾಲ್ಯದ ಅತಿಶಿಸ್ತು-ಶಿಕ್ಷೆಯೇ ವ್ಯಕ್ತಿತ್ವ ಹೀಗೆ ರೂಪುಗೊಳ್ಳುವುದಕ್ಕೆ ಕಾರಣ.

“ನೀನು ಮುಂದೆ ಏನಾಗುತ್ತಿ?” ಎಂದು ಶಾಲೆಗಳಲ್ಲಿ ನಮ್ಮನ್ನು ಮೇಷ್ಟ್ರುಗಳು ಇನ್ಸ್‌ಪೆಕ್ಟರುಗಳು ಕೇಳುತ್ತಿದ್ದರು. ಏನಾಗುವುದು ಎಂದು ಸ್ಪಷ್ಟ ಗೊತ್ತಿಲ್ಲದಿದ್ದರೂ “ನಾನು ಭಾರತದ ಪ್ರಧಾನಿಯಾಗಿ ಹೀಗೆಲ್ಲ ಮಾಡಿ ದೇಶೋದ್ಧಾರ ಮಾಡುವೆ. ಸೈನಿಕನಾಗಿ ದಾಳಿಕೋರ ಚೀನಿಯರ ಸದೆಬಡಿಯುವೆ” ಎಂದೆಲ್ಲ ನಾವು ಹೇಳುತ್ತಿದ್ದೆವು. ಭವಿಷ್ಯವೆಂದರೇನು? ಅದು ಹೇಗಿರುತ್ತದೆ? ಉನ್ನತ ಶಿಕ್ಷಣ ಹೇಗೆ? ಕೆಲಸ ಎಲ್ಲಿ? ಯಾವುದೂ ನಮಗೆ ಗೊತ್ತಿರಲಿಲ್ಲ. ನಮಗೆ ಆ ಬಗ್ಗೆ ಹೇಳುವವರೂ ಇರಲಿಲ್ಲ. ಈಗಿನಂತೆ ಸುದ್ದಿರಾಶಿಯನ್ನು ಹೊತ್ತು ತರುವ ಮಾಧ್ಯಮಗಳೂ ಇರಲಿಲ್ಲ. ಹೀಗಾಗಿ ನಾವೇನಾಗುತ್ತೇವೆ ಎಂಬುದು ನಮಗೆ ಗೊತ್ತಿರಲಿಲ್ಲ; ಆದರೆ ಎಷ್ಟೇ ಕಷ್ಟದಲ್ಲಿದ್ದರೂ ಭವಿಷ್ಯದ ಬಗ್ಗೆ ಒಂದು ಭರವಸೆ ನಮ್ಮಲ್ಲಿತ್ತು.

ಈಗ ಮಕ್ಕಳಿಗೆ ‘‘ಒಂದು ವೇಳೆ ನೀನು ಭಾರತದ ಪ್ರಧಾನಿ ಆದರೆ..” ಎಂಬ ವಿಷಯ ಮಾತನಾಡಲು ಹೇಳಿ. ಹೆಚ್ಚಿನವರು ತರ್ಕವನ್ನು ಬಳಸಿ ಕಲ್ಪನಾಶೀಲತೆಯನ್ನು ಕಾಡಿಗಟ್ಟಿ “ನಾನು ಹಾಗೆ ಆಗಲು ಸಾಧ್ಯವಿಲ್ಲ. ಆಗುವುದೂ ಇಲ್ಲ.” “ನಮ್ಮಂಥ ಬ್ರಾಹ್ಮಣರಿಗೆ ಯಾರು ಕೆಲ್ಸ ಕೊಡ್ತಾರೆ? ಕೆಲ್ಸಗಳೆಲ್ಲ ಕೆಳಜಾತಿಯವರಿಗೆ ರಿಸರ್ವ್‌ಡ್ ಆಗಿದೆಯಂತೆ?” “ಇನ್ನು ಮುಂದೆ ಹೆಣ್ಣುಮಕ್ಳಿಗೇ ಚಾನ್ಸ್‌ ಅಂತೆ”, “೨೦೧೧ ರಲ್ಲಿ ಪ್ರಳಯವಂತೆ. ಯಾಕೆ ಚಿಂತೆ ನಮಗೆ?” ಎನ್ನುತ್ತಾರೆ. ಮುಂದೆ ಬರುವ ದಿನಗಳು ಭೀಕರ ಸ್ಪರ್ಧೆಯ ಕಿತ್ತುತಿನ್ನುವ ದಿನಗಳು. ಕುಡಿಯಲು ನೀರಿಲ್ಲದ, ತಿನ್ನಲು ಆಹಾರವಿಲ್ಲದ, ಉಸಿರಾಡಲು ಗಾಳಿಯಿಲ್ಲದ, ನಡೆದಾಡಲು ನೆಲವಿಲ್ಲದ ದಿನಗಳು. ಹೀಗಾಗಿ ನಮ್ಮ ಪಾಲಿಗೆ ಭವಿಷ್ಯವೇ ಇಲ್ಲದ ದಿನಗಳು ಎಂದು ಭಾವಿಸುವ ಮಕ್ಕಳು ಇಂದು ನಮ್ಮ ನಡುವೆ ಇದ್ದಾರೆ. ಅವರ ತಂದೆತಾಯಿಗಳು, ಅವರು ಓದುವ ಪತ್ರಿಕೆಗಳು, ನೋಡುವ ಚಿತ್ರಗಳು ದಿನವೂ ಈ ಸಂದೇಶವನ್ನು ಅವರಿಗೆ ಬಿತ್ತರಿಸುತ್ತವೆ.

ಹಿರಿಯರ ಅಧಿಕಾರದ ಪ್ರಾಬಲ್ಯ ಕುಸಿದಿದೆ. ಕೇವಲ ಬಲವನ್ನು ನಂಬಿಕೊಂಡಿರುವ ಅಧಿಕಾರಕ್ಕೆ ಉಳಿಗಾಲವಿಲ್ಲ. ನೈತಿಕತೆಯೇ ನಿಜವಾದ ಅಧಿಕಾರದ ತಳಹದಿ. ಎಲ್ಲ ಕಾಲಗಳಲ್ಲೂ ಎಲ್ಲ ಸಂಸ್ಕೃತಿಗಳಲ್ಲೂ ಹಿರಿಯರು ಕಿರಿಯರನ್ನು ರಂಗಮಧ್ಯಕ್ಕೆ ಬರಲು ಬಿಡದೆ ‘ಈಗಲ್ಲ ಈಗಲ್ಲ’ ಎಂದು ಹೇಳುತ್ತ ಸೈಡ್‌ವಿಂಗ್ಸ್‌ನತ್ತ ತಳ್ಳುತ್ತಲೇ ಇದ್ದಾರೆ. ಅಂತೆಯೇ ಕಿರಿಯರು ತಮ್ಮ ವಯೋಸಹಜ ಆವೇಶದಿಂದ ಹಿರಿಯರನ್ನು ಬದಿಗೆ ತಳ್ಳಿ ಮುಂದೊತ್ತುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ಕಿರಿಯರು ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ ಎಂಬುದು ಹಿರಿಯರ ಗಮನಕ್ಕೆ ಬಂದಾಗ ತಮ್ಮ ಜವಾಬ್ದಾರಿಗಳನ್ನು ಅವರ ಹೆಗಲಮೇಲೆ ಇರಿಸುತ್ತಿದ್ದರು. ಅತ್ತೆ ಸೊಸೆಗೆ ಬೀಗದ ಕೈ ಕೊಟ್ಟ ಹಾಗೆ. “ಮಕ್ಕಳಾ, ನೀವೇ ಕುಟುಂಬ ನಿರ್ವಹಣೆ ಮಾಡಿ. ನಾವಿನ್ನು ವಾನಪ್ರಸ್ಥಕ್ಕೆ ತೆರಳುತ್ತೇವೆ” ಎಂದಂತೆ. “ನೀವಿನ್ನೂ ತಯಾರಾಗಿಲ್ಲ. ನಿಮಗೆ ಯಾವಾಗ ಅಧಿಕಾರದಂಡ ಕೊಡಬೇಕೆಂಬುದು ನಮಗೆ ಗೊತ್ತು. ನಾವು ಹೇಳಿದಂತೆ ಮಾಡಿ. ನಮ್ಮನ್ನು ನಂಬಿ” ಎಂದು ಹಿರಿಯರು ಹೇಳಿದ್ದನ್ನು ಮಕ್ಕಳು ವಿಶ್ವಾಸದಿಂದ ಕೇಳುತ್ತಿದ್ದರು. ಹಿರಿಯರು ನಮ್ಮ ಹಿತ ಕಾಯ್ವವರು. ಅವರ ಮಾತುಗಳನ್ನು ಕೇಳುವುದರಲ್ಲಿ ನಮ್ಮ ಹಿತವಿದೆ ಎಂದು ಕಿರಿಯರು ಭಾವಿಸುತ್ತಿದ್ದರು.

ಆದರೆ ಈಗ ಆಧುನಿಕೋತ್ತರ ಯುಗದಲ್ಲಿ ಅಪ್ಪ ನೀಡುವ ಉಪದೇಶದಲ್ಲಿ ತನ್ನ ಭವಿಷ್ಯದ ಹಿತವಿದೆ ಎಂದು ಮಗನಿಗೆ ಅನ್ನಿಸುವುದಿಲ್ಲ. ಮಗಳಿಗೆ ತಾಯಿಯ ಮಮತೆಯ ಮಾತುಗಳಲ್ಲಿ ಯಾವುದೇ ಭವಿಷ್ಯದ ಹೊಂಗಿರಣ ಗೋಚರಿಸುವುದಿಲ್ಲ. ತೀರ ಸೀದಾ ಸಾದಾ ಇರುವ ತಮ್ಮ ಅಪ್ಪ ಅಮ್ಮನನ್ನು ತಮ್ಮ ಗೆಳೆಯರಿಗೆ ಪರಿಚಯಿಸಲು ನಾಚಿಕೆಪಡುವ ಮಕ್ಕಳಿರುವ ಈ ಕಾಲದಲ್ಲಿ ಭಾವನಾತ್ಮಕ ಸಂಬಂಧಗಳು ಕುಸಿದು ಬಿದ್ದಿವೆ ಎಂದು ಅನ್ನಿಸುವುದಿಲ್ಲವೆ?

ತಾನೊಂದು ಸುಂದರ ಭವಿಷ್ಯವನ್ನು ತನಗಾಗಿ ಮತ್ತು ಇತರರಿಗಾಗಿ ರೂಪಿಸಬಲ್ಲೆ ಎಂಬ ವಿಶ್ವಾಸವಿಲ್ಲದ, ಅಂಥ ಒಲವಿಲ್ಲದ, ಅಂಥ ಕನಸುಗಳನ್ನು ಕಾಣಲಾರದ ಒಂದು ತಲೆಮಾರು ಕಿರಿಯರಿಗೆ ಯಾವ ಬಳುವಳಿಯನ್ನು ತಾನೆ ಕೊಟ್ಟೀತು? ನಮಗೂ ಬದಲಾವಣೆ ಬೇಕು; ಪ್ರಗತಿ ಬೇಕು. ಹೊಸತು ಹಳೆಯದಕ್ಕಿಂತ ಉತ್ತಮ ಎಂದು ಭಾವಿಸುತ್ತೇವೆ. ಆದರೆ ಸ್ವತಃ ನಾವೇ ಬದಲಾಗಲು ತಯಾರಾಗಿದ್ದೇವಾ? ಹೊಸತನ್ನು ಅಪ್ಪಿಕೊಳ್ಳಲು ಸಿದ್ಧರಿದ್ದೇವಾ? ಬದಲಾವಣೆಯ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದೇವಾ?

ಆಧುನಿಕ ಮನುಷ್ಯನ ಜೀವನ-ಚಿಂತನ ಎಷ್ಟೊಂದು ವಿಚಿತ್ರ! ತಾನು ಅಜರಾಮರ, ತನ್ನಲ್ಲಿ ಜಗತ್ತನ್ನು ಬದಲಾಯಿಸುವ ದೈವೀಶಕ್ತಿಯಿದೆ. ತನ್ನ ಬುದ್ಧಿಶಕ್ತಿಯಿಂಧ ಏನು ಬೇಕಾದರೂ ಮಾಡಬಲ್ಲೆ ಎಂಬ ಜಂಭ ಒಂದೆಡೆ ಅವನ ತಲೆಗೆ ಅಡರಿದೆ. ಆತ ಇಡೀ ವಿಶ್ವದ ಬಹುಭಾಗವನ್ನು ನಾಶಪಡಿಸಿದ್ದಾನೆ. ನದಿಗಳನ್ನು ಕಲುಷಿತಗೊಳಿಸಿದ್ದಾನೆ. ಉಸಿರಾಡುವ ಗಾಳಿಯನ್ನು ಕೆಡಿಸಿದ್ದಾನೆ. ಗಣಿಗಳನ್ನು ಅಗೆದು ಬಗೆದು ಬರಿದುಗೊಳಿಸುತ್ತಿದ್ದಾನೆ. ಕಾಡುಗಳ ಕಡಿದು ಬೋಳಾಗಿಸುತ್ತಿದ್ದಾನೆ. ಕೆಲವೊಂದು ಸ್ಥಳಗಳನ್ನು ಹಾಳುಮಾಡದೆ ಹಾಗೇ ಇಡಲು ತನ್ನಿಂದ ಸಾಧ್ಯ ಎಂಬ ಭರವಸೆ ಅವನಲ್ಲಿ ಉಳಿದಿಲ್ಲ. ನೋಡಿ ವಾಸಿಸುವ ಈ ಪ್ರದೇಶ ಇನ್ನು ಹತ್ತು ವರ್ಷಗಳ ಬಳಿಕವೂ ಹೀಗೆಯೇ ಇರುತ್ತದೆ ಎಂದು ನಿಮ್ಮಿಂದ ಹೇಳಲು ಸಾಧ್ಯವೆ? ಅದು ಈಗ ಇರುವುದಕ್ಕಿಂತ ಉತ್ತಮವಾಗಿರಲು ಸಾಧ್ಯವೇ? ಹೇಳುವುದು ಕಷ್ಟ. ನಾವು ವಾಸಿಸುವ ಈ ಭೂಮಿಯನ್ನು ಇನ್ನೂ ಉತ್ತಮ ವಾಸಯೋಗ್ಯ ಪ್ರದೇಶವನ್ನಾಗಿ ಪರಿವಿರ್ತಸುವ ಕನಸುಗಾರಿಕೆ ಇಂದಿನ ನಮಗೆ ಇಲ್ಲವಾಗಿದೆ.

ಹೊಸ ತಲೆಮಾರು ಹುಸಿ ಕನಸುಗಳ ಬಳ್ಳಿಯ ಸುತ್ತೆಲ್ಲ ಹಬ್ಬಿಸಿ ಅದನ್ನು ‘ಪ್ರಗತಿ’ ಎಂದು ಕರೆಯುತ್ತಿದೆ. ಈ ಬಳ್ಳಿ ಹೂಬಿಡುತ್ತಿಲ್ಲವೆಂದು ಕೊರಗುತ್ತಿದೆ. ಕಾರಣವಿಷ್ಟೇ: ಉದ್ಯೋಗದಲ್ಲಿ ಮೇಲೇರುವ, ಕೈತುಂಬ ಸಂಪಾದಿಸುವ ಭವಿಷ್ಯವನ್ನು ಬಿಟ್ಟರೆ ಬೇರಾವ ಭವಿಷ್ಯವನ್ನೂ ಕಲ್ಪಿಸಿಕೊಳ್ಳಲಾಗದ ಅಸಮರ್ಥತೆ ಅದನ್ನು ಕಾಡುತ್ತಿದೆ. ‘ನಾದವಿರದ ಬದುಕು’, ‘ಕನಸಿರದ ಬಾಳು’ ಹಳೆಯ ಕೊರಕಲು ದಾರಿಯಲ್ಲಿ ಏಳುತ್ತ ಬೀಳುತ್ತ ಸಾಗುತ್ತಿರುತ್ತದೆ!