‘ಮಕ್ಕಳು ಮಕ್ಕಳಂತೆ ಇರಬೇಕು’, ‘ಮಕ್ಕಳು ತಮ್ಮ ಬಾಲ್ಯವನ್ನು ಸುಖವಾಗಿ ಅನುಭವಿಸಲಿ’, ‘ಮಗುವಿನ ಮಗುತನವನ್ನು ಉಳಿಸಿ’, ‘ಹಿರಿಯರು ಮಕ್ಕಳ ಮುಗ್ಧತೆಯನ್ನು ಹಾಳುಮಾಡಕೂಡದು’, ‘ಮಕ್ಕಳ ಬದುಕಿನಿಂದ ಅವರ ಬಾಲ್ಯವನ್ನು ಕಿತ್ತುಕೊಳ್ಳಬೇಡಿ’-ಎಂದೆಲ್ಲ ಮಕ್ಕಳ ತಜ್ಞರು, ಶಿಕ್ಷಣವೇತ್ತರು, ವಿದ್ವಾಂಸರು ಹೇಳುತ್ತಿರುತ್ತಾರೆ.

ಈ ಎಲ್ಲ ಮಾತುಗಳ ಅರ್ಥವನ್ನು ಹೀಗೆ ಸಂಗ್ರಹವಾಗಿ ಹೇಳಬಹುದು. ಬಾಲ್ಯವೆಂಬುದೊಂದು ಕಾಲ. ಅದು ಯೌವನ, ವಾರ್ಧಕ್ಯ ಮುಂತಾದ ಬದುಕಿನ ಇತರ ಅವಸ್ಥೆಗಳಿಗಿಂತ ತೀರ ಭಿನ್ನವಾದ ಒಂದು ಅನುಭವ ವಿಶೇಷ. ಅದು ನಮ್ಮೆಲ್ಲರ ಬಾಳಿನ ಸ್ವರ್ಣಯುಗ. ಆದರೆ ಬಾಲ್ಯವೆಂಬುದು ಬಾಳಿನ ಸ್ವರ್ಣಯುಗವಾಗಬೇಕಾಗಿಲ್ಲವೆಂಬುದು ಈ ಜಗತ್ತಿನ ಲಕ್ಷಾಂತರ ಮಕ್ಕಳಿಗೆ ತಿಳಿದಿದೆ. ಇಂದಿಗೂ ಜಗತ್ತಿನಲ್ಲಿ ಮಿಲಿಯಗಟ್ಟಲೆ ಮಕ್ಕಳಿಗೆ ಅವರ ಬಾಲ್ಯವೆಂಬುದು ಕರುಣಾಜನಕವಾದ ದುರಂತಕತೆ.

ಮಕ್ಕಳು ಇದ್ದ ಹಾಗೆ ಇರುವುದಿಲ್ಲ. ಅವರು ಬೆಳೆದು ದೊಡ್ಡವರಾಗುತ್ತಾರೆ. ಅದೊಂದು ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ಸುತ್ತಲಿನ ಪ್ರಪಂಚವನ್ನು ಶೋಧಿಸುತ್ತಾ ಹಿರಿಯರ ಜೊತೆ ಸಂಪರ್ಕ ಸಾಧಿಸುತ್ತಾ ವಿಕಾಸ ಹೊಂದುತ್ತಾರೆ. ಹೀಗಿರುವಾಗ “ನೋಡಿ, ನಿಮ್ಮ ಬಾಲ್ಯವೆಂಬುದು ಅತ್ಯಂತ ಮಧುರ ಕಾಲ. ನಾವು ಇದನ್ನು ನಿಮಗಾಗಿ ಕಾಪಿಡುತ್ತೇವೆ. ಜಗತ್ತಿನ ಕಠೋರತೆ, ದುಷ್ಟತನ ನಿಮ್ಮನ್ನು ಬಾಧಿಸದಂತೆ ನೋಡಿಕೊಳ್ಳುತ್ತೇವೆ” ಎಂದು ಹಿರಿಯರು ಹೇಳುವ ಮಾತು ಮಕ್ಕಳಿಗೆ ಸಮಾಧಾನ ಉಂಟುಮಾಡಲಾರದು.

ಇಷ್ಟವಿರಲಿ, ಇಲ್ಲದಿರಲಿ ಮಕ್ಕಳು ಬೆಳೆಯಲೇ ಬೇಕು. ಪ್ರಪಂಚದ ಸಾಗರದಲ್ಲಿ ಈಜಲೇಬೇಕು. ಮುಂದಿನ ಬದುಕು ಸುಂದರವಾಗಿರಬಹುದು ಎಂದು ಆಸೆ ಕಂಗಳಿಂದ ಅದನ್ನು ಅವರು ನಿರೀಕ್ಷಿಸುವುದು ಸಹಜತಾನೆ? ಆದರೆ ನೀವು ಈಗಿರುವ ಸ್ಥಿತಿಯೇ ಉತ್ತಮವಾದದ್ದು. ಮುಂದೆ ನಿಮಗೆ ಕಷ್ಟಕಾಲ ಒದಗಲಿದೆ ಎಂದು ಸತ್ತ ಹಾವನ್ನು ಅವರ ಮೇಲೆಸೆಯುವುದು ಕ್ರೂರವ್ಯಂಗ್ಯವಲ್ಲವೆ? ಅವರ ನಿರೀಕ್ಷೆಗಳಿಗೆ ಕನಸುಗಳ ಹಂದರಕ್ಕೆ ಬಿಸಿನೀರೆರೆಯುವುದು ಹಿರಿಯರು ಮಾಡುವ ತಪ್ಪಲ್ಲವೆ? ಬದುಕು.  ಜಗತ್ತು ಇದ್ದ ಹಾಗೆ ಇರುವುದಿಲ್ಲ. ಬದಲಾಗುತ್ತಿರುತ್ತದೆ. ಅದು ಈಗ ಇರುವುದಕ್ಕಿಂತಲೂ ಉತ್ತಮವಾಗಬಹುದು. ಈಗ ಆಗಿರುವುದೂ ಹಾಗೆಯೇ ಅಲ್ಲವೆ? ಆದಿಮಾನವನ, ಗುಹಾಮಾನವನ ಕಾಲಕ್ಕೂ ಈಗಿನ ಕಾಲಕ್ಕೂ ಎಷ್ಟೊಂದು ಅಂತರ! ಹೆಚ್ಚೇಕೆ, ಹತ್ತಿಪ್ಪತ್ತು ವರ್ಷಗಳ ಹಿಂದಿನ ಬದುಕಿಗೂ ಈಗಿನ ಬದುಕಿಗೂ ಹೋಲಿಸಿ ನೋಡಿದರೆ ಅನೇಕ ವಿಷಯಗಳಲ್ಲಿ ಸುಧಾರಣೆ, ಪ್ರಗತಿ ಆಗಿಲ್ಲವೆ? ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಆಗುವುದಿಲ್ಲವೆ? ಹೀಗಿರುವಾಗ ‘ಉತ್ತಮವಾದುದು ಇನ್ನಷ್ಟೇ ಬರಲಿದೆ – “The best is yet to come’ ಎಂದು ಹಿರಿಯರು ಹೇಳಬೇಕೆಂದು ಮಕ್ಕಳು ನಿರೀಕ್ಷಿಸುವುದಿಲ್ಲವೆ? ಹಿರಿಯರು ಹಾಗೇಕೆ ಹೇಳಬಾರದು? ಬಾಳಿನ ಹೋರಾಟದಲ್ಲಿ ಬಾಲ್ಯಕ್ಕಿಂತ ಯೌವನ, ಯೌವನಕ್ಕಿಂತ ವಯಸ್ಕತನ ಮಿಗಿಲಲ್ಲವೆ?

“ನನಗೆ ಮಕ್ಕಳೆಂದರೆ ತುಂಬ ಇಷ್ಟ. ಅವರ ಜೊತೆ ಆಟವಾಡುವುದು ಇಷ್ಟ. ಅವರಿಗಾಗಿ ನಾಟಕಮಾಡುವುದು ಇಷ್ಟ” ಎಂದು ಕೆಲವು ನಾಟಕಕಾರರು, ಸಾಹಿತಿಗಳು ಹೇಳುತ್ತಿರುತ್ತಾರೆ. ಯಾಕೆಂದರೆ ಮಕ್ಕಳಲ್ಲಿ ಕಾಪಟ್ಯವಿಲ್ಲ. ಅವರು ಮೋಸಗಾರರಲ್ಲ. ಅವರು ಮುಗ್ಧರು; ಪ್ರಾಮಾಣಿಕರು. ಅವರ ಜೊತೆ ಸೇರಿ ನೀವು ಮಗುವೆ ಆಗಿಬಿಡಬಹುದು ಎಂದು ಇವರು ಕಾರಣ ಕೊಡುತ್ತಾರೆ. ಆದರೆ ಇದು ಪೂರ್ಣ ಸತ್ಯವಲ್ಲ. ದೊಡ್ಡವರ ಹಾಗೆ ಮಕ್ಕಳು ಕೂಡ ಲೆಕ್ಕಚಾರದವರಾಗಿರಬಹುದು. ತುಟಿ ಬಿಚ್ಚದಿರಬಹುದು. ತಮ್ಮ ಭಾವನೆಗಳನ್ನು ಒಂದಿಷ್ಟೂ ಬಿಟ್ಟುಕೊಡದಿರಬಹುದು. ಬಹಳ ಪ್ರಯತ್ನಪೂರ್ವಕವಾಗಿ ಒಂದು ಮೆಲುನಗೆ ಬೀರಬಹುದು. ಬಹಳ ಮಾತನಾಡಿಸಿದ ಮೇಲೆ ಶ್ರೀಮದ್‌ ಗಾಂಭೀರ್ಯದಿಂದ ಒಂದೆರಡು ಮಾತು ಆಡಬಹುದು. ಜಾನ್‌ ಹೋಲ್ಟ್‌ ಅವರ ಪ್ರಕಾರ ಮಕ್ಕಳ ಪ್ರಪಂಚ ದೊಡ್ಡವರ ಪ್ರಪಂಚಕ್ಕಿಂತ ತೀರ ಭಿನ್ನವೇನಲ್ಲ; ಮಗುವಿನ ಜಗತ್ತು ಸ್ವರ್ಗವೇನಲ್ಲ!

ಇಷ್ಟಾದರೂ ಮಕ್ಕಳ ಒಡನಾಟ ಖಂಡಿತಕ್ಕೂ ಕುತೂಹಲಕಾರಿ ಮತ್ತು ಆಸಕ್ತಿದಾಯಕವಾಗಿರಬಲ್ಲುದು. ಹೀಗಾಗಿ ತಮ್ಮ ಕಹಿಯಾದ ಬಾಲ್ಯ ಮತ್ತು ದುಃಖಕರ ಶಾಲಾ ಜೀವನದಿಂದ ಬೆಂದು ಬಸವಳಿದ ಮಂದಿ ಮಕ್ಕಳ ಜೊತೆಗಿನ ಒಡನಾಟದಲ್ಲಿ ಸುಖಸಂತೋಷ ಕಾಣಲು ತಹತಹಿಸುತ್ತಾರೆ. ಮಕ್ಕಳ ಜೊತೆಗಿದ್ದು ಅವರ ಜೊತೆ ಕೆಲಸಮಾಡುವವರು ಮಕ್ಕಳ ಜೊತೆ ಏನನ್ನು ಹಂಚಿಕೊಳ್ಳುತ್ತಾರೆ? ತಮ್ಮ ಯಾವ ಜ್ಞಾನ-ತಿಳಿವಳಿಕೆ ಕೌಶಲವನ್ನು ಅವರಿಗೆ ಧಾರೆ ಎರೆಯುತ್ತಾರೆ? ತಮಗೆ ಗೊತ್ತಿರುವುದನ್ನು ಅವರಿಗೆ ಕೊಡುವುದೇ ಅವರ ಉದ್ದೇಶವೆ? ಬಹಳ ಮಂದಿ ಯೋಚಿಸುವುದು ಹೀಗೆ: ಮಕ್ಕಳಿಗೇನೂ ಗೊತ್ತಿಲ್ಲ. ಅವರಿಗೆ ನಾವು ಮೌಲ್ಯವನ್ನು, ಜ್ಞಾನವನ್ನು, ಕೌಶಲವನ್ನು ಕೊಟ್ಟು ಅವರನ್ನು ಹೆಚ್ಚು ಬುದ್ಧಿವಂತರನ್ನಾಗಿಸಬೇಕು ಎಂದು. ಅದಕ್ಕಿಂತ ಮಿಗಿಲಾಗಿ ಮಕ್ಕಳಿಂದ ನೀವೇನು ಪಡೆದಿರಿ? ಎಂಬುದು ಹೆಚ್ಚು ಮುಖ್ಯವಾದ ಪ್ರಶ್ನೆ. ಕೆಲವೇ ಕೆಲವರು ನಾವು ಮಕ್ಕಳಿಂದ ಸಾಕಷ್ಟು ಕಲಿತಿದ್ದೇವೆ ಎಂದು ಹೇಳುತ್ತಾರೆ. ಹೀಗೆ ಹೇಳುವವರಲ್ಲಿ ಶಿಕ್ಷಕರ ಪಾಲು ಬಲು ಕಡಿಮೆ. ಸಾಮಾನ್ಯವಾಗಿ ಪ್ರಜ್ಞಾವಂತರಾದ ರಂಗನಿರ್ದೇಶಕರು ಮಕ್ಕಳಿಂದ ತುಂಬ ಕಲಿಯುವುದಿದೆ ಎನ್ನುತ್ತಾರೆ.

‘ಮಗುವನ್ನು ಮಗುವಾಗಿರಲು ಬಿಡಿ’ ಎಂದರೇನರ್ಥ? ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಮಗು ಮಗುವಾಗಿರುತ್ತದೆ. ಬಾಕಿ ಉಳಿದ ಸಂದರ್ಭಗಳಲ್ಲಿ ಅದು ದೊಡ್ಡವರ ಹಾಗೆ ವರ್ತಿಸಲು ನಾವು ಬಲಾತ್ಕರಿಸುತ್ತೇವೆ ಎಂದಲ್ಲವೇ? ಇತರ ಎಲ್ಲ ವ್ಯಕ್ತಿಗಳಂತೆ ಮಕ್ಕಳು ಕೂಡ ಕೆಲವೊಮ್ಮೆ ತುಂಬ ಖಷಿಯಾಗುತ್ತಾರೆ. ಕೆಲವೊಮ್ಮೆ ಬೇಸರಪಟ್ಟುಕೊಳ್ಳುತ್ತಾರೆ. ದುಃಖದಿಂದ ನೋಯುತ್ತಾರೆ. ಸಿಟ್ಟಿನಿಂದ ಕುದಿಯುತ್ತಾರೆ. ಪ್ರತಿಭಟಿಸುತ್ತಾರೆ. ಹಿರಿಯರಲ್ಲಿ ಕಂಡುಬರುವ ಎಲ್ಲ ಭಾವಾನುಭಾವಗಳು ಮಕ್ಕಳಲ್ಲಿ ಕಂಡುಬರುತ್ತವೆ.  ಈ ಎಲ್ಲ ಅನುಭವಗಳನ್ನು ಅನುಭವಿಸುವಾಗ ಅವರು ಮಗುವಾಗಿಯೇ ಇರುತ್ತಾರೆ.

ನನ್ನ ಬೆಳವಣಿಗೆಯನ್ನು ಗಮನಿಸಿದರೆ, ನನ್ನ ಅಜ್ಜನ ಮನೆಗೆ ಮಳೆಗಾಲದ ಮುಸ್ಸಂಜೆ ಹೊತ್ತಿನಲ್ಲಿ ಕೆಲವರು ಬಂದು ಲಾಟೀನು ಬೆಳಕಿನಲ್ಲಿ ರಂಗಾಗಿ ಮಾತನಾಡುತ್ತಿದ್ದರೆ ನಾನು ಖುಷಿಯಿಂದ ಕೇಳುತ್ತಿದ್ದೆ. ಅವರು ಮತ್ತೆ ಮತ್ತೆ ಬರಲಿ ಎಂದು ಹಾರೈಸುತ್ತಿದ್ದೆ. ಬೆಳಗಿನಜಾವ ಬೇಗೆ ಎದ್ದು ಎಣ್ಣೆ ಸ್ನಾನಮಾಡಿ ದೋಸೆ ತಿನ್ನುವ ದೀಪಾವಳಿ ನನಗೆ ಹಿತಕರ ಅನುಭವ. ಕಟಕಟನೆ ಹಲ್ಲುಕಡಿಯುತ್ತಿದ್ದ ಮಾವನನ್ನು ಕಂಡಾಗಲೆಲ್ಲ ಭಯ. ನಮ್ಮ ಮನೆ ಸಮೀಪದಲ್ಲಿರುವ ನನ್ನಜ್ಜನ ಬಂಧುವೊಬ್ಬರ ಮನೆಗೆ ಹೂವು ಕೊಯ್ಯಲು ಹೋಗುವಾಗಲೆಲ್ಲ ಅಲ್ಲಿದ್ದ ನಾಯಿಗಳ ಭಯ. ಅಜ್ಜ ಎಂದೂ ಆ ಕೆಲಸ ನನಗೆ ಒಪ್ಪಿಸದಿರಲಿ ಎಂದು ಬಯಸುತ್ತಿದ್ದೆ. ನಾನು ಐದು ಆರನೆಯ ತರಗತಿಯಲ್ಲಿದ್ದಾಗ ಹಾಸಿಗೆಯಲ್ಲಿ ಉಚ್ಚೆಹೊಯ್ದುಕೊಂಡು ಬೆಳಗ್ಗೆ ಅಜ್ಜಿಯಿಂದ, ನನ್ನ ದೊಡ್ಡಮ್ಮನ ಮಗಳಿಂದ ಬೈಗುಳ ತಿನ್ನುತ್ತಿದ್ದಾಗ ಅಪಮಾನದಿಂದ ಸಿಟ್ಟಾಗುತ್ತಿದ್ದೆ. ಸಂಜೆಯಾಗುತ್ತಿದ್ದಂತೆ ಅವ್ಯಕ್ತಭಯ ಆವರಿಸಿಕೊಳ್ಳುತ್ತಿತ್ತು. ಶಾಲೆಯಲ್ಲಿ ಎ.ಪಿ. ರಾಯರ ಕನ್ನಡ, ಬಿ.ಸಿ. ರಾಯರ ಹಿಂದಿ, ಫಾದರ್ ವರ್ಗೀಸರ ಇಂಗ್ಲಿಷ್‌ ಪಾಠ ಕೇಳುವಾಗ ಎಲ್ಲಿಲ್ಲದ ಖುಷಿ. ಕಾಲೇಜಿಗೆ ಹೋಗುವಾಗ ನನ್ನ ಉಡುಪಿಯ ದೊಡ್ಡಪ್ಪ, ಮಂಡ್ಯದ ನನ್ನನ್ನು ಮಾತನಾಡಿಸಲು ಬಂದರೆ ನನ್ನ ಆತ್ಮವಿಶ್ವಾಸ ವೃದ್ಧಿಸುತ್ತಿತ್ತು. ಒಳ್ಳೆಯ ಅನುಭವಗಳು ನನ್ನ ಪಾಲಿಗೆ ಮತ್ತೆ ಮತ್ತೆ ಬರಲಿ. ಕೆಟ್ಟ ಕ್ಷಣಗಳು ಕಡಿಮೆಯಾಗಲಿ ಎಂದು ಹಾರೈಸುತ್ತಿದ್ದೆ ಆಗಲೂ ಈಗಲೂ. ಆದರೆ ಬಾಲ್ಯದಲ್ಲಿ ನಾನು ಮಗುವೇ ಆಗಿದ್ದೆ. ಕುಬ್ಜ ವಯಸ್ಕನಾಗಿರಲಿಲ್ಲ!

‘ಬಾಲ್ಯವನ್ನು ಅನುಭವಿಸುವುದು’ ಎಂದರೇನು? ಈ ಅಭಿವ್ಯಕ್ತಿ ಮೌಲಿಕವಾಗಿರುವಂತೆಯೇ ಅಮೌಲಿಕವೂ ಹೌದು. ಯಾವುದೇ ಪ್ರಾಯದಲ್ಲಿ ಆ ಪ್ರಾಯಕ್ಕೆ ಸಹಜವಾದ ವಿಕಾಸದ ಕಾರ್ಯಗಳನ್ನು ನಾವು ನೆರವೇರಿಸಲೇಬೇಕು. ಇಲ್ಲವಾದರೆ ಹ್ಯಾವಿಗ್‌ ಹರ್ಸ್ಟ್ ಹೇಳುವಂತೆ ವಿಕಾಸದ ಮುಂದಿನ ಹಂತದಲ್ಲಿ ತೊಂದರೆಗಳನ್ನು ಅನುಭವಿಸುತ್ತೇವೆ. ಆಯಾಯ ಪ್ರಾಯಕ್ಕೆ ಸಹಜವಾದ ರೀತಿಯಲ್ಲಿ ನಮ್ಮ ಮಾತು, ನಡವಳಿಕೆ, ವ್ಯವಹಾರ ಇರಬೇಕಾಗುತ್ತದೆ. ಬಾಲ್ಯವನ್ನು ಅನುಭವಿಸುವುದು ಎಂದರೆ ಪ್ರಾಯಃ ಕೆಲವು ಕೆಲಸಗಳನ್ನು ಮಾಡುವುದು ಮತ್ತು ಕೆಲವನ್ನು ಮಾಡದಿರುವುದು; ಅಂದರೆ ವಿಧಿನಿಷೇಧಗಳಿಗೆ ಅನುಸಾರವಾಗಿ ಬದುಕುವುದು. ಮಕ್ಕಳು ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಹಿರಿಯರು ನಿರ್ಧರಿಸುತ್ತಾರೆ. ‘ಕೋಳಿಯನ್ನು ಕೇಳಿ ಖಾರ ಅರೆಯುವರೇ?’ ಎಂಬ ಮಾತಿದೆ. ಕೆಲವು ಬಗೆಯ ಅನುಭವಗಳು ಎಲ್ಲ ಮಕ್ಕಳಿಗೂ ಬೇಕು. ಮಕ್ಕಳು ಆ ಅನುಭವಗಳಿಗೆ ಒಳಗಾಗಬೇಕಲು. ಕೆಲವೊಂದು ಅನುಭವಗಳಿಗೆ ಮಕ್ಕಳನ್ನು ಒಡ್ಡಬಾರದು. ಅವರನ್ನು ಅವುಗಳಿಂದ ದೂರ ಇಡಬೇಕು ಎಂದು ಹಿರಿಯರು ನಿರ್ಧರಿಸುತ್ತಾರೆ. ಉದಾಹರಣೆಗೆ, ಮಕ್ಕಳು ಟಿವಿ ನೋಡಬಾರದು, ಸಿನೆಮಾ ನೋಡಬಾರದು, ಕತೆಪುಸ್ತಕ ಓದಬಾರದು. ಪೋಲಿಗಳ ಸಂಗ ಮಾಡಬಾರದು. ಇತ್ಯಾದಿ. ಬ್ರಾಹ್ಮಣರ ಮಕ್ಕಳು ಬ್ರಾಹ್ಮಣರ ಸಂಗಮಾಡಬೇಕು. ಸಸ್ಯಾಹಾರಿಗಳ ಜೊತೆಗೇ ಒಡನಾಡಬೇಕು ಇತ್ಯಾದಿ.

ಮಕ್ಕಳಿಗೆ ಏನು ಬೇಕು? ಏನು ಬೇಡ? ಅವರಿಗೆ ಯಾವುದು ಹಿತ? ಯಾವುದು ಅಹಿತ? ಎಂದು ನಿರ್ಣಯಿಸುವ ಸ್ವಾತಂತ್ಯ್ರ ಮಕ್ಕಳಿಗಿಲ್ಲ. ಹಿರಿಯರೇ ಮಕ್ಕಳ ಪರವಾಗಿ ನಿರ್ಧರಿಸಿ ಆಜ್ಞೆಯನ್ನು ಕೊಟ್ಟು ಸರ್ಕಸ್‌ನ ಪ್ರಾಣಿಗಳನ್ನು ರಿಂಗ್‌ಮಾಸ್ಟರ್ ನಡೆಸಿಕೊಳ್ಳುವಂತೆ ವ್ಯವಹರಿಸುತ್ತಾರೆ.

ಹಾರಬೇಡ, ಹತ್ತಬೇಡ, ಓಡಬೇಡ, ಕುಣಿಯಬೇಡ, ಓದಬೇಡ ಎಂಬ ನಿರ್ಬಂಧಗಳನ್ನು ಹೇರುವ ಬದಲಿಗೆ ಮಕ್ಕಳಿಗೆ ತಮಗೆ ಬೇಕಾದುದನ್ನು ಅನುಭವಿಸುವ, ಮಾಡುವ ಸ್ವಾತಂತ್ಯ್ರವನ್ನು ಒದಗಿಸಬಾರದೇಕೆ? ಪಾಲಕರಿಂದ ತುಂಬಿದ ಒಂದು ಸಭೆಯಲ್ಲಿ ಮಕ್ಕಳಮೇಲೆ ನಾವು ಹೇರಿರುವ ನಿಷೇಧಗಳ ಬಗ್ಗೆ ಪ್ರಸ್ತಾಪಿಸಿ ಮಕ್ಕಳಿಗೆ ಮುಕ್ತ ವಾತಾವರಣ ಒದಗಿಸಿ ಎಂದಾಗ “ನಮ್ಮ ಮಗು ಚೂರಿಹಿಡಿದುಕೊಂಡು ತಿರುಗುತ್ತದೆ. ಯಾರಿಗಾದರೂ ಹಾನಿ ಮಾಡಿದರೆ?” ಎಂದು ಕೇಳಿದರು. ಬೇರೆಯವರಿಗೆ ಹಾನಿಮಾಡುವ ಅಥವಾ ಸ್ವಯಂ ಹಾನಿಮಾಡಿಕೊಳ್ಳುವ ಅನುಭವಗಳನ್ನು ನಿಷೇಧಿಸಬೇಕು. ಮುಕ್ತ ಸ್ವಾತಂತ್ಯ್ರವೆಂದರೆ ಸ್ವಚ್ಛಂದತೆಯಲ್ಲ, ಸ್ವೈರತೆಯಲ್ಲ. ಅದು ಜವಾಬ್ದಾರಿ ಪ್ರಜ್ಞೆಯುಳ್ಳ, ತನ್ನ ಹಾಗೂ ಪರರ ಬಗ್ಗೆ ಅರಿವುಳ್ಳ ಸ್ವಾತಂತ್ಯ್ರ ಎಂದರ್ಥ. ಚೂರಿಹಿಡಿದು ಓಡಾಡುವ ಮಗು ಪರರನ್ನು ಗಾಸಿಗೊಳಿಸಬೇಕೆಂದಿಲ್ಲ. ಒಂದು ಚೂರಿಯಿಂದ ಹಣ್ಣನ್ನು ಕತ್ತರಿಸಬಹುದು, ಇನ್ನೊಬ್ಬರ ಎದೆಯನ್ನು ಇರಿಯಬಹುದು. ಯಾವುದು ಆಗಬೇಕು? ಯಾವುದರಿಂದ ಏನಾಗುತ್ತದೆ? ಅದರ ಪರಿಣಾಮವೇನು? ಎಂಬ ಅರಿವಿನ ಬೆಳಕನ್ನು ಹಿರಿಯರು ಒದಗಿಸಬೇಕು. ಚೂರಿಯನ್ನು ಕಸಿದುಕೊಳ್ಳುವುದು, “ಈಗಲೆ ಚೂರಿ ಹಿಡಿದಿದ್ದೀಯ – ಮುಂದೇನು ಕತೆ”  ಎಂದು ಹಂಗಿಸುವುದು ತರವಲ್ಲ. ಅದೇ ಚೂರಿಯಿಂದ ತರಕಾರಿ ಕತ್ತರಿಸುವುದನ್ನು ಹೇಳಕೊಡಬಹುದಲ್ಲವೆ? ಇಷ್ಟಕ್ಕೂ ಚೂರಿಯಿಂದ ತರಕಾರಿ ಕತ್ತರಿಸುವಾಗ ಮಗು ಕೈಬೆರಳಿಗೆ ಗಾಯಮಾಡಿಕೊಂಡರೆ ‘ಇನ್ನು ಮೇಲೆ ಚೂರಿ ಮುಟ್ಟಿದರೆ ಜಾಗ್ರತೆ’ ಎಂದು ಗದರಿಸುವುದರಿಂದ ಪ್ರಯೋಜನವಿಲ್ಲ; ಬದಲಾಗಿ ಚೂರಿಯನ್ನು ಬಳಸುವಾಗ ವಹಿಸಬೇಕಾದ ಎಚ್ಚರಿಕೆಯನ್ನು ತಿಳಿಸುವುದು ಅಥವಾ ಮಗುವೇ ಸ್ವಾನುಭವದಿಂದ ತಿಳಿದುಕೊಳ್ಳುವಂತೆ ಮಾಡುವುದು ಹೆಚ್ಚು ಸೂಕ್ತ.

ಈ ಹೊತ್ತು ಭಾರತದಲ್ಲಿ ನಾವು ‘ಶಿಶುಕೇಂದ್ರಿತ ಶಿಕ್ಷಣ’ದ ಬಗ್ಗೆ ಬಹಳ ಮಾತನಾಡುತ್ತೇವೆ. ಆದರೆ ಎಲ್ಲಿದೆ ಅದು? ಇಂದಿಗೂ ನಮ್ಮ ತರಗತಿಗಳು ‘ಶಿಕ್ಷಕ ಕೇಂದ್ರಿತ’ವಾಗಿಯೇ ಇವೆ. ‘ಚಟುವಟಿಕೆ ಪ್ರಧಾನ’ ಎಂಬ ಘೋಷಣೆ ಹೊರಡಿಸಲಾಗಿದೆ. ಆದರೆ ಚಟುವಟಿಕೆಗಳನ್ನು ರೂಪಿಸುವವರು, ಮಕ್ಕಳ ಮೇಲೆ ಹೇರುವವರು, ನಿಯಂತ್ರಿಸುವವರು ಶಿಕ್ಷಕರೇ. ಮಗುವಿಗೆ ಯಾವ ಸ್ಥಾನವೂ ಇಲ್ಲ. ಮಗುವೇ ತನಗೆ ಬೇಕಾದ ಕಲಿಕೆಯ ಅನುಭವಗಳನ್ನು ಆಯ್ದುಕೊಳ್ಳುವುದಕ್ಕೆ ನಮ್ಮಲ್ಲಿ ಅವಕಾಶಗಳೇ ಇಲ್ಲ. ವಿದೇಶಗಳಲ್ಲಿ ಒಂದು ತರಗತಿಯಲ್ಲಿ ‘ಕಥಾಮೂಲೆ’, ‘ವಾಚನಮೂಲೆ’, ‘ಚಟುವಟಿಕೆ ಮೂಲೆ’, ‘ಚಿತ್ರಮೂಲೆ’, ‘ಪುಸ್ತಕಮೂಲೆ’, ‘ಮೌನಮೂಲೆ’-ಹೀಗೆ ಬೇರೆ ಬೇರೆ ಮೂಲೆಗಳಿರುತ್ತವೆ. ಮಕ್ಕಳು ತಮತಮಗೆ ಇಷ್ಟವಾದ ಮೂಲೆಗಳಿಗೆ ತೆರಳಿ ತಮಗೆ  ಆಸಕ್ತಿದಾಯಕವೆನಿಸಿದ ಕ್ರಿಯೆಯಲ್ಲಿ ತೊಡಗಿ ಕಲಿಯುತ್ತವೆ. ನಮ್ಮಲ್ಲಾದರೋ ಈ ಸ್ವಾತಂತ್ಯ್ರವಿಲ್ಲ. ನಮ್ಮಲ್ಲಿ ಇರುವುದೊಂದೇ ಮೂಲೆ. ಅದು ‘ಶಿಕ್ಷಕಮೂಲೆ’ ಅಥವಾ ‘ಶಿಕ್ಷಕಮೂಲ’. ಆದಿ ಅಂತ್ಯ ಎಲ್ಲವೂ ಅಲ್ಲೇ ಅದರಲ್ಲೇ!

ಪ್ರಾಜ್ಞರೆನಿಸಿಕೊಂಡ ಕೆಲವರು ವೇದಿಕೆಗಳಿಂದ ಹೇಳುವುದುಂಟು “ಮಕ್ಕಳಿಗೆ ಬೆಳೆಯಲು ಸಮಯ ಕೊಡಿ.” ಮಕ್ಕಳ ಪರವಗಿರುವವರೆಲ್ಲ ಭಾರಿ ಕರತಾಡನ ಮಾಡಿ ಈ ಹೇಳಿಕೆಯನ್ನು ಸ್ವಾಗತಿಸುತ್ತಾರೆ. ಆದರೆ ಯೋಚಿಸಿ. ಯಾರಿಗಾದರೂ ನೀವು ಸಮಯ ಕೊಡುವುದು ಹೇಗೆ? ನಾವು ಇನ್ನೊಬ್ಬರ ಸಮಯ ಹಾಳುಮಾಡುವುದನ್ನು ತಡೆಗಟ್ಟಬಹುದು.  ಆದರೆ ಸಮಯ ಕೊಡಲು ಬರುವುದಿಲ್ಲ. ಕಾರ್ಯಕ್ರಮಗಳಲ್ಲಿ ಹೇಳುವುದುಂಟು: ‘ನಿಮಗೆ ಅರ್ಧಗಂಟೆ ಕೊಟ್ಟಿದ್ದೇನೆ’ ಎಂದು. ಅದು ಅಲ್ಲಿ ನೆರೆದ ಪ್ರೇಕ್ಷಕರ ಸಮಯವಾಗಿರಬಹುದು. ಸಮಯ ಕೊಡುವುದು, ಬಿಡುವುದು ಏನೇ ಇರಲಿ, ಮಗು ತನ್ನ ಅಂತಃಸ್ಥ ಜೈವಿಕ ನಕಾಶೆಗೆ ಅನುಗುಣವಾಗಿ ಬೆಳೆಯುತ್ತದೆ. ಪೌಷ್ಟಿಕ ಆಹಾರ ದೊರೆತರೆ ದಷ್ಟಪುಷ್ಟವಾಗಿ ಬೆಳೆಯಬಹುದು. ಪೋಷಣೆ ನ್ಯೂನವಾದರೆ ದುರ್ಬಲವಾಗಬಹುದು. ಮಗು ದೇಹದ ಗಾತ್ರ, ತೂಕ, ಎತ್ತರದಲ್ಲಿ ಬೆಳೆಯುವುದು ಮಾತ್ರವಲ್ಲದೆ ಬೆಳೆಯುವುದು ಮಾತ್ರವಲ್ಲದೆ ಬುದ್ಧಿ, ಜ್ಞಾನ, ಸೃಜನಶಕ್ತಿ, ಮನೋಭಾವ, ಮೌಲ್ಯಗಳು, ಆಸಕ್ತಿ, ಅಭಿಕ್ಷಮತೆ ಇತ್ಯಾದಿ ಕ್ಷೇತ್ರಗಳಲ್ಲಿ ವಿಕಾಸ ಹೊಂದಬೇಕಾದರೆ ಅದಕ್ಕೆ ಸಮಯಬೇಕಲ್ಲ. ಈ ಎಲ್ಲ ಗುಣ ವಿಶೇಷಗಳನ್ನು, ಸಾಮರ್ಥ್ಯಗಳನ್ನು ರೂಪಿಸುವಂಥ ಪರಿಸರ ಹಾಗೂ ವೈವಿಧ್ಯಮಯ ಅನುಭವಗಳು ಬೇಕು. ಈ ಅನುಭವಗಳೇ ಮಗುವನ್ನು ಪೂರ್ಣ ಸ್ವರೂಪದ ವ್ಯಕ್ತಿಯನ್ನಾಗಿ ರೂಪಿಸುತ್ತವೆ. ಅಂತೆಯೇ ಮಗು ಭಯ, ಆತಂಕ, ಅಪಮಾನ, ಮೋಸಗಾರಿಕೆ, ವಿಶ್ವಾಸದ್ರೋಹ, ಆಯ್ಕೆಯ ಅವಕಾಶವಿಲ್ಲದಿರುವುದು, ಯಾಂತ್ರಿಕ ಏಕತಾನತೆ ಇತ್ಯಾದಿ ಅನುಭವಗಳಿಂದ ದೂರ ಉಳಿಯಲು ಬಯಸುತ್ತದೆ.

ಹಿರಿಯರಾದ ನಾವು ಮಕ್ಕಳನ್ನು ನಿರಂತರವಾಗಿ ಅಳೆದು ಸುರಿದು ತೂಕಮಾಡಿ ‘ಬೆಲೆ ಕಟ್ಟುತ್ತೇವೆ’. ಹೀಗೆ ಬೆಲೆ ಕಟ್ಟುವುದಕ್ಕೆ ನಮ್ಮದೇ ಆದ ಅಸ್ಥಿರ ಮಾನದಂಡಗಳನ್ನು ರೂಪಿಸಿಕೊಂಡಿದ್ದೇವೆ. ತುಂಬ ಚೆನ್ನಾಗಿ ಹಾಡುವ ಒಂದು ಮಗುವಿಗೆ ಇಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಮೊದಲ ಬಹುಮಾನ. ಅದೇ ಮಗು ಇನ್ನೊಂದು ಕಡೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಅದಕ್ಕಿಂತ ಚೆನ್ನಾಗಿ ಹಾಡುವ ಮಕ್ಕಳಿರದಿದ್ದರೂ ಆ ಮಗುವಿಗೆ ಬಹುಮಾನ ಸಿಗುವುದಿಲ್ಲ! ಕಾರಣ ನಮ್ಮ ಮನಸೋಇಚ್ಛೆ ಏರುಪೇರು ಮಾಡುವ ಮಾನದಂಡಗಳು! ಬಹುಮಾನಗಳು, ರ‍್ಯಾಂಕ್‌ಗಳು, ಅಂಕಗಳು, ದರ್ಜೆಗಳು. ಬುದ್ಧಿಸೂಚ್ಯಂಕಗಳು, ಹಾಗೂ ಶಿಷ್ಯವೇತನಗಳ ಆಧಾರದಿಂದ ನಾವು ಮಕ್ಕಳನ್ನು ಅಳೆಯುತ್ತೇವೆ. ಇನ್ನೊಬ್ಬರನ್ನು ಅಳೆಯುವ ಹಕ್ಕು ಎಲ್ಲರಿಗೂ ಇರಬಹುದು. “ಪರರ ತೀರ್ಪಿಗೆ  ಒಳಗಾಗದಿರಬೇಕಾದರೆ ಅವರ ಬಗ್ಗೆ ನೀನು ತೀರ್ಪು ಕೊಡಬಾರದು” ಎಂಬ ಒಂದು ಮಾತಿದೆ. ಅನ್ಯರ ಕಡೆ ನೀನೊಂದು ಬೆರಳು ತೋರಿದರೆ ಅವರು ನಿನ್ನ ಕಡೆ ಐದು ಬೆರಳು ತೋರಬಹುದು. ಆದುದರಿಂದ ಜಾಣರು ಇನ್ನೊಬ್ಬರ ಬಗ್ಗೆ ತೀರ್ಪು ನೀಡದೆ ಪಾರಾಗಲು ಹವಣಿಸುತ್ತಾರೆ. ಬೇರೆಯವರ ಬಗ್ಗೆ ತೀರ್ಪು ನೀಡುವ ರೀತಿಯಲ್ಲಿ ಮಾತಾಡಬೇಡ. ಅದರಿಂದ ನಿನಗೇ ಹಾನಿ ಎಂದು ಮನೋವಿಜ್ಞಾನಿಗಳು ಹೇಳಬಹುದು. ಆದರೆ ತಾನು ಹೇಗೇ ಇರಲಿ, ಅನ್ಯರ ಬಗ್ಗೆ ತೀರ್ಪು ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಹಲವರು ಭಾವಿಸಿಕೊಂಡಿರುತ್ತಾರೆಎ. ಅಂತೆಯೇ ಮಕ್ಕಳ ಮಾತು, ವರ್ತನೆ. ಕ್ರಿಯೆ, ವಿದ್ಯೆ, ಬುದ್ಧಿ, ಸಾಮರ್ಥ್ಯ ಹಾಗು ಸಾಧನೆಗಳ ಬಗ್ಗೆ ತೀರ್ಪು ನೀಡಿ ಅವರನ್ನು ವರ್ಗೀಕರಿಸುವುದು ಹಿರಿಯರ ಕರ್ತವ್ಯವೆಂದು ಭಾವಿಸಿದ್ದೇವೆ. ಆದರೆ ಹೀಗೆ ಮಾಡುವ ಮೂಲಕ ನಾವು ಅವರ ಆತ್ಮವಿಶ್ವಾಸ ಹಾಗೂ ಆತ್ಮಸಂಮಾನವನ್ನು ಎಷ್ಟೋ ಸಲ ಧೂಳೀಪಟ ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೂ ನಮಗಿಲ್ಲ. ನಮ್ಮ ತೀರ್ಪು, ತೀರ್ಮಾನಗಳು ಏನೇ ಇರಲಿ, ಮಾನವ ಘನತೆ ಹೊಂದಿರುವ ಮಕ್ಕಳ ತಿಳಿವಳಿಕೆ, ಅರಿವು, ಭಾವನೆ ಇತ್ಯಾದಿಗಳೆಲ್ಲ ನಾವು ಅವರ ಬಗ್ಗೆ ಕಟ್ಟಿಕೊಂಡಿರುವ ಕಲ್ಪಿತ ಬಿಂಬಗಳ ಚೌಕಟ್ಟನ್ನು ಮೀರಿ ನಿಲ್ಲುತ್ತವೆ.