“ಪುಟ್ಟ ಬಾ ಇಲ್ಲಿ.”

“ಇವಳು ನನ್ನ ಮಗಳು ಶ್ವೇತಾ.  ಈಗ ಪದವಿಪೂರ್ವ ಹಂತದಲ್ಲಿದ್ದಾಳೆ. ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿಯಹೆಚ್ಚು ಅಂಕ ಗಳಿಸಿದ್ದಕ್ಕೆ ರಾಜ್ಯ ಸರಕಾರದಿಂದ ಬಹುಮಾನ ಗಳಿಸಿದ್ದಾಳೆ. ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳು. ಗಣಿತದಲ್ಲಿ ನೂರಕ್ಕೆ ನೂರು.”

ಶ್ವೇತಾ ಬಂದವರ ಎದುರುನಿಂತು ಮುಗುಳ್ನಗು ಬೀರಿ ಹೊರಟುಹೋದಳು.  ಅಷ್ಟು ಹೊತ್ತಿಗೆ ರಮೇಶ ಕೈಕಾಲೆಲ್ಲ ಮಣ್ಣುಮಾಡಿಕೊಂಡು ಆಟದ ಬಯಲಿನಿಂದ ನೇರ ಲಿವಿಂಗ್‌ ರೂಮಿಗೆ ಬಂದ.

“ಬೆಳಿಗ್ಗೆ ಬೆಳಿಗ್ಗೆ ಎಲ್ಲಿಗೆ ಹಾಳಾಗಿ ಹೋಗಿದ್ಯೋ? ಮಣ್ಣಕಾಲಲ್ಲೇ ಒಳಗೆ ಬರ್ತಿದ್ದೀಯ? ಕಾಮನ್‌ಸೆನ್ಸ್‌ ಬೇಡ್ವಾ?” ಅಂತ ಅಪ್ಪ ಗದರಿದರು. “ಇವನು ನನ್ನ ಮಗ. ಎಂಟನೇ ಕ್ಲಾಸನಲ್ಲಿದ್ದಾನೆ. ‘ಗುಡ್‌ಫಾರ್ ನತಿಂಗ್‌’ ನನಗೆ ಇವನದ್ದೇ ಚಿಂತೆಯಾಗಿದೆ.”

ನಮ್ಮ ಗುರಿಸಾಧನೆಗಾಗಿ, ನಮ್ಮ ಸಂತೋಷಕ್ಕಾಗಿ, ನಮ್ಮ ಅಹಂ ತೃಪ್ತಿಗಾಗಿ ಗಂಡಸರು ಹೆಂಗಸರು ಹಾಗೂ ಅವರಿವರನ್ನು ನಾವು ಬಳಸಿಕೊಳ್ಳುತ್ತೇವೆ. ಹೆಣ್ಣು ನಮಗೆ ಹೆಣ್ಣಾಗಿ ಕಾಣುವುದಿಲ್ಲ. ಹೆಣ್ಣನ್ನು ಕಾಮದ ಗೊಂಬೆಯಾಗಿ, ವ್ಯಾಪಾರದ ಸರಕಾಗಿ ನೋಡುತ್ತೇವೆ. ನಮ್ಮ ಜಾಹಿರಾತುಗಳು, ಧಾರಾವಾಹಿಗಳು ಹೆಣ್ಣನ್ನು ಚಿತ್ರಿಸುವುದು ಹೀಗೆಯೇ ಅಲ್ಲವೆ? ಇಲ್ಲವಾದರೆ ಬ್ಲೇಡ್‌, ಪೆನ್‌, ಫ್ರಿಜ್‌ ಇತ್ಯಾದಿಯಾದ ಎಲ್ಲ ವಸ್ತುಗಳ ಮಾರಾಟದಲ್ಲಿ ಸುಂದರ ಹೆಣ್ಣುಗಳು ರೂಪದರ್ಶಿಯಾಗಿ ಏಕಿರಬೇಕು? ಅಂತೆಯೇ ನಾವು ನಮ್ಮ ಮಕ್ಕಳನ್ನು ಕೂಡ ಜಾನ್‌ ಹೋಲ್ಟ್‌ ಅವರು ಹೇಳುವಂತೆ ಪ್ರೇಮದ ವಸ್ತುಗಳೆಂಬಂತೆ ಬಳಸಿಕೊಳ್ಳುತ್ತೇವೆ. ಮಕ್ಕಳಿಗೆ ಇಷ್ಟವಿರಲಿ, ಇಲ್ಲದಿರಲಿ ಅವರ ಬಗ್ಗೆ ಪ್ರೀತಿ ತೋರಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯುವೆಂದು ಭಾವಿಸುತ್ತೇವೆ . ನಮ್ಮ ಮಕ್ಕಳ ಬಗ್ಗೆ ಮಾತ್ರವಲ್ಲ. ಬೇರೆ ಮಕ್ಕಳನ್ನು ಕಂಡಾಗಲೂ ನಾವು ಅವರ ಮೈತಡವುತ್ತೇವೆ. ತಲೆ ನೇವರಿಸುತ್ತೇವೆ . ಕೆನ್ನೆ ಹಿಂಡುತ್ತೇವೆ.  ಹೀಗೆ ಮಕ್ಕಳು ನಮಗೆ ಪ್ರೇಮದ ವಸ್ತುಗಳು. ಹೀಗಾಗಿ ನಾವೆಲ್ಲ ಮನೆಯಲ್ಲಿ ಮಕ್ಕಳಿರಬೇಕು ಎಂದು ಹಾರೈಸುತ್ತೇವೆ. ಮಕ್ಕಳಿದ್ದರೆ ಮನೆ ಚಂದ ಎಂದು ಭಾವಿಸುತ್ತೇವೆ.

ಅಬ್ರಹಾಂ ಮಾಸ್ಲೊರವರು ಪ್ರತಿಪಾದಿಸುವಂತೆ ಅನೇಕರು ಕೊರೆತೆ ಅಗತ್ಯಗಳಿಂದ ಬಳಲುತ್ತಿರುತ್ತಾರೆ. ಅಂದರೆ ಅವರಿಗೆ ಬೇಕಾದ ಸಂಪರ್ಕವೂ ಇರುವುದಿಲ್ಲ. ಪ್ರೀತಿಪಾತ್ರರೂ ಇರುವುದಿಲ್ಲ. ಅವರು ಪ್ರೀತಿ ತೋರುವುದಕ್ಕೆ ಆಪ್ತರಾದವರು ಇರುವುದಿಲ್ಲ. ಹೀಗಾಗಿ ಮಕ್ಕಳನ್ನು ಪ್ರೀತಿಯ ವಸ್ತುಗಳೆಂದು ಭಾವಿಸುತ್ತೇವೆ. ಏಕೆಂದರೆ ನಾವು ಅವರಿಗೆ ಮುಕ್ತವಾಗಿ ಪ್ರೀತಿ ತೋರಿಸಬಹುದು ಮತ್ತು ಅವರಿಂದ ಪ್ರೀತಿಯನ್ನು ಪಡೆಯಬಹುದು. ವಿಚಿತ್ರವೆಂದರೆ ನಾವು ಮಕ್ಕಳಿಗೆ ಪ್ರೀತಿ ತೋರಬಹುದು. ಆದರೆ ಮಕ್ಕಳಿಗೆ ಆ ಪ್ರೀತಿ ಬೇಡವಾದರೆ? ಅಥವಾ ಅವರೇ ನಮ್ಮನ್ನು ಇಷ್ಟಪಡದಿದ್ದರೆ? ಎಷ್ಟೋ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಅಮ್ಮನ ಪ್ರೀತಿ ಬೇಕು. ಅಮ್ಮ ಬೈದರೂ ಹೊಡೆದರೂ ತೀರ ಕೆಟ್ಟ ಮಾತುಗಳನ್ನು ಆಡಿದರೂ ಅಮ್ಮನ ಬಗ್ಗೆ ವಿಶೇಷ ಪ್ರೀತಿ. ಅದೇ ಅಪ್ಪ ಎಷ್ಟೇ ಪ್ರೀತಿಯಿಂದ ಮಾತನಾಡಿಸಿದರೂ ಏನೇ ತಂದುಕೊಟ್ಟರೂ ಬಟ್ಟೆಬರೆ, ವಿದ್ಯಾಭ್ಯಾಸ, ವಿಹಾರ ಇತ್ಯಾದಿಗಳಿಗೆಲ್ಲ ವೆಚ್ಚ ಮಾಡಿದರೂ ಅಪ್ಪನ ಜೊತೆ ಮಾತಾಡಲು ಮಗಳಿಗೆ ಇಷ್ಟವಿರುವುದಿಲ್ಲ. ಅಪ್ಪನಿಂದ ದೂರವೇ ಉಳಿಯುವ ಮಗಳು. ಮಗಳ ಪ್ರೀತಿಯ ಮಾತಿಗಾಗಿ ಹಾತೊರೆವ ಅಪ್ಪ.

ಇದಕ್ಕೆ ತದ್ವಿರುದ್ಧ ಸ್ಥಿತಿಯೊಂದನ್ನು ನಾನು ಕಂಡಿದ್ದೇನೆ. ಮಗುವಿಗೆ ಅಪ್ಪನ ಪ್ರೀತಿ ಬೇಕು; ಮೆಚ್ಚುಗೆ ಬೇಕು. ಅಪ್ಪನ ತೊಡೆಯ ಮೇಲೇರಿ ಆಟವಾಡಬೇಕು. ಆದರೆ ಅಪ್ಪ ಮಗುವಿನಿಂದ ದೂರ ದೂರ ಸರಿಯುತ್ತಾನೆ. ಮಗುವಿನ ಜೊತೆ ಮಾತೇ ಆಡುವುದಿಲ್ಲ. ಮಗುವಿಗೂ ತನಗೂ ಸಂಬಂಧವೇ ಇಲ್ಲ. ಆ ಮಗು ತನ್ನದಲ್ಲವೇ ಅಲ್ಲ ಎಂಬಂತೆ ಬದುಕುತ್ತಾನೆ. ಇದೆಂಥ ವಿಚಿತ್ರ!

ತನಗೆ ಇಷ್ಟವಿಲ್ಲದ ಹಿರಿಯರು ಮಗುವಿನ ಮೈಮುಟ್ಟಿ ಮಾತಾಡಿಸುತ್ತಾರೆ. ಕೆನ್ನೆ ಸವರುತ್ತಾರೆ. ಬೆನ್ನು ತಡವುತ್ತಾರೆ. ಎತ್ತಿ ಹಾರಿಸುತ್ತಾರೆ. ಮಗು ಇದನ್ನು ಇಷ್ಟಪಡುತ್ತದೋ ಇಲ್ಲವೋ ಎಂಬುದನ್ನು ತಿಳಿಯಲು ಹೋಗದೆ ಮಗುವಿಗೆ ಇಷ್ಟವಿಲ್ಲ ಎಂದು ಗೊತ್ತಾದರೂ ಬಲಾತ್ಕಾರದಿಂದ ಹೀಗೆ ಮಾಡುತ್ತಾರೆ. ಇದು ತನ್ನ ಪ್ರೀತಿಗಾಗಿ ಹಿರಿಯನ್ನೊಬ್ಬ ಮಗುವನ್ನು ಬಳಸಿಕೊಳ್ಳುವ ರೀತಿ. ಮಗುವಿಗೆ ಇಷ್ಟವಿಲ್ಲದಿದ್ದರೂ ಕೊಸರಾಡಿದರೂ ಒತ್ತಾಯಪೂರ್ವಕ ಮಗುವನ್ನು ಮುದ್ದುಮಾಡುವ ವ್ಯಕ್ತಿ ನಿಜಕ್ಕೂ ರಕ್ತಮಾಂಸ ತುಂಬಿದ ಮಗುವನ್ನು ಮುದ್ದುಮಾಡುವುದಿಲ್ಲ; ಬದಲಾಗಿ ಮಗುವೆಂಬ ವಸ್ತುವನ್ನು, ವಿಷಯವನ್ನು ಮುದ್ದಿಸುತ್ತಿರುತ್ತಾನೆ ಎಂದು ಭಾವಿಸಬೇಕು.

ಮಕ್ಕಳನ್ನು ಪ್ರೀತಿಸುವುದು ತಪ್ಪು ಎಂದು ಹೇಳುವುದು ನನ್ನ ಉದ್ದೇಶವಲ್ಲ.  ಮಕ್ಕಳಲ್ಲಿ ಕಂಡುಬರುವ ಸಹಜತೆ, ಮುಗ್ಧತೆ, ಉತ್ಸಾಹ , ಶಕ್ತಿ ಲಾಲಿತ್ಯ,  ಚುರುಕುತನ, ಹುಡುಗಾಟಿಕೆ. ತುಂಟತನ, ಕುತೂಹಲ, ಜಾಣ್ಮೆ, ಸತ್ಯಸಂಧತೆ, ಭಾವತೀವ್ರತೆ, ನಿಷ್ಕಾಪಟ್ಟ, ಬೆರಗು ಹಾಗೂ ಆನಂದ ಮುಂತಾದ ಗುಣಗಳು ನಮ್ಮನ್ನು ಆನಂದದ ಕಡಲಲ್ಲಿ ಮುಳುಗಿಸುತ್ತವೆ. ನಾವು ಮಕ್ಕಳನ್ನು ಕಂಡೊಡನೆ ಎಲ್ಲ ನೋವುಗಳನ್ನೂ ಮರೆಯುತ್ತೇವೆ. ಅವರತ್ತ ಆಕರ್ಷಿಸಲ್ಪಡುತ್ತೇವೆ. ಇದು ತೀರ ಸಹಜ ಪ್ರಕ್ರಿಯೆ. ಕೆಲವೊಮ್ಮ ಅವರ ಹಠಮಾರಿತನ, ದೌರ್ಬಲ್ಯ, ಅನುಭವರಾಹಿತ್ಯ, ಅಸಹಾಯಕತೆಗಳಿಂದಲೂ ನಮಗೆ ನೋವಾಗುತ್ತದೆ. ಆದರೆ ಅವರ ಒಪ್ಪಿಗೆಯಿಲ್ಲದೆ ನಾವು ಅವರನ್ನು ಮುದ್ದಿಸುವುದು, ಒತ್ತಿ ಹಿಡಿಯುವುದು ಅವರ ಪಾಲಿಗೆ ಹಿಂಸೆಯಾಗಿ ಪರಿಣಮಿಸುತ್ತದೆ ಮತ್ತು ಈ ಗುಣದಿಂದಾಗಿ ಅವರು ನಮ್ಮನ್ನು ದ್ವೇಷಿಸಲೂಬಹುದು. ನಮ್ಮ ಕೊಂಗಾಟ, ಮುದ್ದಾಟಗಳನ್ನು ಮಕ್ಕಳು ಇಷ್ಟಪಡುವುದಾದರೆ ಮಾತ್ರವೇ ನಾವು ಅದನ್ನು ಮುಂದುವರಿಸಬಹುದು; ಇಲ್ಲದಿದ್ದರೆ ನಾವು ಅವರ ಏಕಾಂತವನ್ನು, ಖಾಸಗಿತನದ ಹಕ್ಕನ್ನು ಗೌರವಿಸಬೇಕು. ನಮ್ಮ ಆಪ್ತ ವಲಯದ, ರಕ್ತಸಂಬಂಧದ ಮಗುವನ್ನು ಮುದ್ದಿಸುವ ಹಕ್ಕು ನಮಗಿದೆ ಎಂಬ ಒತ್ತಾಯದಿಂದ ಪ್ರೀತಿಯನ್ನು ಉಣಬಡಿಸಿ ಪ್ರೀತಿಯನ್ನು ಗಳಿಸಲು ಹೊರಡುವುದು ಕ್ರೌರ್ಯವಾದೀತು!

ಮಕ್ಕಳ ಜೊತೆ ಒಡನಾಡುವ ಕೆಲವರಿಗೆ ಈ ಸೂಕ್ಷ್ಮತೆಗಳು ಅರ್ಥವಾಗುವುದಿಲ್ಲ. “ಏನು ಮಾರಾಯರೆ, ನಿಮ್ಮ ಮಗು ನನ್ನನ್ನು ಕಂಡಕೂಡ್ಲೆ ಓಡಿಹೋಗ್ತದೆ! ನಾನೇನು ಭೂತವಾ? ನಮ್ಮ ಮನೆಯಲ್ಲೂ ಚಿಕ್ಕಮಕ್ಕಳಿದ್ದಾರೆ. ಯಾರೂ ಹೀಗೆ ಮಾಡುವುದಿಲ್ಲ! ಇದೆಂಥ ವಿಚಿತ್ರ!” ಎಂದು ಅಂಥವರು ಗೊಣಗುತ್ತಾರೆ. ಆದರೆ ಮಗು ತನಗೆ ಬೇಕಾದವರ ಜೊತೆ ಸಾಮೀಪ್ಯ ಸಾಧಿಸುವ, ಇಷ್ಟವಾಗದವರಿಂದ ದೂರ ಉಳಿಯುವ ಹಕ್ಕನ್ನು ಹೊಂದಿದೆ. ಈ ಹಕ್ಕನ್ನು ನಾವು ಗುರುತಿಸಬೇಡವೆ? ಮಗುವಿನ ಭೌತಿಕ ಹಾಗೂ ಭಾವನಾತ್ಮಕ ಪ್ರಪಂಚಕ್ಕೆ ಪ್ರವೇಶಿಸಲು ಹಿರಿಯರು ಅಪ್ಪಣೆ ಪಡೆಯಬೇಡವೆ? ಅಪ್ಪನೆಂಬ ಕಾರಣಕ್ಕೆ ಮಗುವಿನ ಪ್ರಪಂಚದೊಳಕ್ಕೆ ನೀವು ಬಲಾತ್ಕಾರದಿಂದ ನುಗ್ಗಿದರೆ ಮಗು ನಿಮ್ಮನ್ನು ಅಲ್ಲೆ ಬಿಟ್ಟು ಬೇರೆಡೆಗೆ ಓಡಿ ಹೋದೀತು. ಮನುಷ್ಯರ ಓಡಾಟ ಹೆಚ್ಚಾಗುವುದು ಕಂಡೊಡನೆ ಹಕ್ಕಿ ತನ್ನ ಮರಿಗಳೊಡನೆ ಗೂಡುಬಿಟ್ಟು ದೂರದಲ್ಲೆಲ್ಲೋ ಗೂಡುಕಟ್ಟುವುದಿಲ್ಲವೆ?

ನಾವು ಮಕ್ಕಳನ್ನು ಪ್ರೀತಿಸುತ್ತಿದ್ದೇವೆ. ಆದುದರಿಂದ ಮಕ್ಕಳು ನಮ್ಮನ್ನು ಪ್ರೀತಿಸಲೇ ಬೇಕು ಎಂದು ಕಡ್ಡಾಯಗೊಳಿಸುವುದು ಎಷ್ಟು ಸರಿ? ವಸ್ತುವೈಭವವನ್ನು, ಸೌಕರ್ಯ ಸಂಭ್ರಮವನ್ನು ಮಕ್ಕಳ ಮುಂದೆ ತಂದು ಸುರಿಯುವುದರಿಂದ ತಂದೆತಾಯಿಗಳ ಬಗ್ಗೆ ಮಕ್ಕಳಲ್ಲಿ ಪ್ರೀತಿ ಅರಳುವುದಿಲ್ಲ. ದಿನನಿತ್ಯ ಬೈತಾರೆ, ಹೊಡೀತಾರೆ ಎಂಬ ಕಾರಣದಿಂದಲೂ ಪ್ರೀತಿ ನಶಿಸಬೇಕಾಗಿಲ್ಲ. ಪ್ರೀತಿ ಎಂಬುದು ಫಲಾಪೇಕ್ಷೆಯಿಲ್ಲದೆ ಒಳಗೇ ಅರಳುವ ಕುಸುಮ. ತಂದೆಯ ಬಗ್ಗೆ ಪ್ರೀತಿ ಕಡಿಮೆ. ತಾಯಿಯ ಬಗ್ಗೆ ಹೆಚ್ಚು-ಈ ತಕ್ಕಡಿಯ ತಟ್ಟೆ ಮುಂದೊಂದು ದಿನ ಏರುಪೇರಾಗಬಹುದು. ನಿರ್ದಿಷ್ಟ ತರ್ಕ, ಕಾರಣಗಳನ್ನು ಹೂಡಲು ಬರುವುದಿಲ್ಲ. ನಮ್ಮ ಮನಸ್ಸಿನ ಸಮಾಧಾನಕ್ಕೆ ನಾವು ತಾರ್ಕಿಕ ಬೌದ್ಧಿಕ ಕಾರಣಗಳನ್ನು ಹುಡುಕುತ್ತೇವಷ್ಟೆ.

ಮಕ್ಕಳಿಗೆ ಹಿರಿಯರ ಪ್ರೀತಿ ಬೇಕು. ನಾವು ಅವರನ್ನು ಎತ್ತಿ ಆಡಿಸಬೇಕು. ಎಲ್ಲ ಸರಿ. ಆದರೆ ಎಲ್ಲ ಸಂದರ್ಭಗಳಲ್ಲಿ ಅಲ್ಲ. ಬೆಳೆಬೆಳೆದಂತೆ ಅವರು ಈ ಪ್ರೀತಿಯ ಪಂಜರದಿಂದ ಬಿಡಿಸಿಕೊಳ್ಳಲು ಹೆಣಗುತ್ತಾರೆ. ಅಪ್ಪ ಅಮ್ಮನ ಪ್ರೀತಿಗೂ ಮಿಗಿಲಾಗಿ ಗೆಳೆಯ-ಗೆಳತಿಯರ ಪ್ರೀತಿ ಬೇಕೆನಿಸುತ್ತದೆ. ಸಂಗಾತಿಗಳ ಒಲುಮೆ ಬೇಕೆನಿಸುತ್ತದೆ. ಬಾಯ್‌ಫ್ರೆಂಡ್‌, ಗರ್ಲ್‌ಫ್ರೆಂಡ್‌ಗಳ ಸಾನ್ನಿಧ್ಯ ಬೇಕೆನಿಸುತ್ತದೆ. ಆಗ ಮಕ್ಕಳು ತಮ್ಮಿಂದ ದೂರ ಸರಿಯುತ್ತಿದ್ದಾರೆ ಎಂದು ತಂದೆತಾಯಿಗಳಿಗೆ ಅನ್ನಿಸತೊಡಗುತ್ತದೆ. ಮಗುವಿನ ಕೈಯಿಂದ ಯಾರಾದರೂ ಆಟಿಕೆ ಕಿತ್ತುಕೊಂಡರೆ ಹೇಗೆ ಆಗುತ್ತದೋ ಹಾಗೆ ತಂದೆತಾಯಿಗಳ ಸ್ಥಿತಿ ಕೂಡ. “ಈಗ ನೀನು ದೊಡ್ಡವನಾದೆ. ನಾನು, ನನ್ನ ಪ್ರೀತಿ ಬೇಡ ಅನ್ನಿಸ್ತದೆ ಅಲ್ವಾ?” “ನಿನ್ನನ್ನು ಹೆತ್ತ ತಾಯಿಗಿಂತ ಹೆಂಡತಿ ಹೆಚ್ಚಾದಳು ಅಲ್ವಾ?” ಅನ್ನುವಂಥ ಮಾತುಗಳು ಕೇಳಿಬರುತ್ತವೆ.

ತಿಳಿಯಬೇಕಾದ ಮಾತು: ಮಕ್ಕಳನ್ನು ಪ್ರೀತಿಸಿ ನಮ್ಮ ಪ್ರೀತಿಯ ಕೊರತೆಯನ್ನು ತುಂಬಿಕೊಳ್ಳುವ ಭರದಲ್ಲಿ ನಾವು ಅವರಿಗೆ ಹಿಂಸೆಯಾಗಬಾರದು. ನಿರ್ಲಿಪ್ತಭಾವ ಮೊಳಕೆಯೊಡೆಯಬೇಕು.

ಹೀಗೆ ಹೇಳುತ್ತಿರುವಾಗಲೆ ಈ ವಿಷಯದ ಇನ್ನೆರಡು ಮಗ್ಗುಲುಗಳನ್ನು ಗಮನಿಸಬೇಕು. ಇತ್ತೀಚಿನ ದಿನಗಳಲ್ಲಿ ಚಿಕ್ಕ ಪ್ರಾಯದ ಹೆಣ್ಣುಮಕ್ಕಳ ಬದುಕು ನರಕವಾಗುತ್ತಿದೆ. ನಡುರಾತ್ರಿಯಲ್ಲೂ ಮಹಿಳೆ ಪುರುಷನ ಭಯವಿಲ್ಲದೆ ರಸ್ತೆಗಳಲ್ಲಿ ಓಡಾಡಬಹುದಾದ ಸ್ಥಿತಿಯೇ ರಾಮರಾಜ್ಯ ಎಂಬ ಅರ್ಥಬರುವ ಮಾತುಗಳನ್ನು ಗಾಂಧೀಜಿ ಹೇಳಿದ್ದರು . ಆದರೆ ಗಾಂಧೀಜಿ ಅವರ ಮಾತುಗಳು ಈಗ ಹುಸಿಯಾಗುತ್ತಿವೆ. ಗಂಡುಹೆಣ್ಣು ಒಟ್ಟಿಗೆ ಇರುವಲ್ಲಿ ತಣ್ಣನೆಯ ಭಯ ಕೊರೆಯುತ್ತದೆ. ಪ್ರಾಯ, ಸೌಂದರ್ಯ ಯಾವುದಕ್ಕೂ ಬೆಲೆಯಿಲ್ಲ. ಕಾಮಾಂಧತೆ, ವ್ಯಾಪಾರೀ ಪ್ರವೃತ್ತಿಯ ಕೈ ಮೇಲಾಗುತ್ತಿದೆ. ತಂದೆಯೇ ತನ್ನ ಮಗಳ ಶೀಲಭಂಗ ಮಾಡಹೋಗಬಹುದು. ಸೂಳೆಗೇರಿಗೆ ಮಾರಬಹುದು. ಅಂಗಾಂಗಗಳ ಕ್ರಯ-ವಿಕ್ರಯ ಮಾಡಬಹುದು. ಶಾಲೆಯಲ್ಲಿ ಪುರುಷ ಶಿಕ್ಷಕರು “ನೀ ತುಂಬಾ ಜಾಣೆ. ಚೂಟಿ ಹುಡುಗಿ” ಎಂದೆಲ್ಲ ರಮಿಸಿ ಮೈತಡವಿ. ಕೆನ್ನೆಸವರಿ ಯಾರೂ ಇಲ್ಲದ ವೇಳೆ ಲೈಂಗಿಕ ಆಕ್ರಮಣ ಮಾಡಬಹುದು.

ಶಾಲೆಗೆ ಹೋಗುವ ಪುಟ್ಟ ಹುಡುಗಿಯರ ಕೆನ್ನೆಗಳನ್ನು ಪುರುಷರು ಸವರಬಹುದು. “ಅಣ್ಣ ನಿನ್ನನ್ನು ಕರ‍್ಕೊಂಬಾ ಅಂತ ಹೇಳಿದ್ದಾನೆ” ಅಂತ ಹೇಳಿ ಎಲ್ಲಿಗೋ ಕರೆದೊಯ್ಯಬಹುದು. ಚಾಕಲೇಟ್‌ ಆಸೆ ತೋರಿಸಿ ಶೀಲಭಂಗ ಮಾಡಲು ಯತ್ನಿಸಬಹುದು. ಯಾರಲ್ಲಾದರೂ ಹೇಳಿದರೆ ಜಾಗ್ರತೆ ಎಂದು ಭಯೋತ್ಪಾದನೆ ಮಾಡಬಹುದು. ಹೀಗೆ ಇಂದು ತೀರ ಚಿಕ್ಕ ಪ್ರಾಯದ ಹುಡುಗಿಯರಿಂದ ತೊಡಗಿ ಹದಿಹರೆಯದ ಯುವತಿಯರವರೆಗೆ ಪುರುಷಸಿಂಹಗಳಿಂದ ಕಾಟ ತಪ್ಪಿದ್ದಲ್ಲ. ಇದಲ್ಲದೆ ತಮ್ಮ ಸರೀಕ ಹುಡುಗರು ಮೃದುಮಧುರ ಮಾತುಗಳಿಂದ ಮನಗೆದ್ದು ಹೆಣ್ಣುಮಕ್ಕಳನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಬಹುದು. ಆದುದರಿಂದ ಈ ಎಲ್ಲ ಬಗೆಯ ಚೇಷ್ಟೆಗಳಿಗೆ ‘ಇಲ್ಲ’ ಎಂದು ದೃಢವಾಗಿ ಹೇಳುವ, ಅತಿಕ್ರಮಣಗಳಿಂದ ಪಾರಾಗುವ, ಸಂದರ್ಭ ಬಂದರೆ ಬಲವಾಗಿ ಪ್ರತಿರೋಧಿಸಿ ಗೆಲ್ಲುವ ಮನೋಭೂಮಿಕೆಯನ್ನು ಹೆಣ್ಣುಮಕ್ಕಳಲ್ಲಿ ಸೃಷ್ಟಿಸಬೇಕಾಗಿದೆ. ಅಪರಿಚಿತರ ಬಗೆಗೆ ಎಚ್ಚರವಹಿಸಲು ಸೂಚಿಸುವುದು ಅಗತ್ಯ.

ಲೇಖನದ ಆರಂಭದಲ್ಲಿ ಕೊಟ್ಟ ನಿದರ್ಶನಕ್ಕೆ ಮರಳುವ. ಯಶಸ್ಸು ಗಳಿಸುತ್ತ ಹೆಸರು ಮಾಡುತ್ತ ಲಾಭ ತರುವ ಮಕ್ಕಳ ಬಗ್ಗೆ ಈಗ ಕುಟುಂಬಗಳಲ್ಲಿ ಒಲವು ಮೂಡುತ್ತಿದೆಯೆ? ತಮ್ಮ ಪಾಡಿಗೆ ತಾವಿರುವ’, ಸದ್ದಿಲ್ಲದೆ ಸಾಮಾನ್ಯ ಸಾಧನೆ ಮಾಡುವ ಮಕ್ಕಳ ಬಗ್ಗೆ ಉಪೇಕ್ಷೆಯೇ? ಇಂದು ಪ್ರತಿಯೊಂದು ಮನೆಯಲ್ಲೂ ಮಕ್ಕಳು ಸಾಧಕರಾಗಬೇಕು. ಕ್ಲಿಕ್ಕಿಸುವ ಕ್ಯಾಮರಾಗಳ ಮುಂದೆ ನಿಲ್ಲಬೇಕಲು; ಕಣ್‌ ಕೋರೈಸುವ ಬೆಳಕಿನ ಮುಂದೆ ನಿಂತು ಪ್ರೇಕ್ಷಕರತ್ತ ಕೈಬೀಸಬೇಕು ಎಂದು ಪಾಲಕರು ಬಯಸುತ್ತಿದ್ದಾರೆ. ಹೀಗಾಗಿ ತಮ್ಮ ಮಕ್ಕಳಿಗೆ ಬೆಳಗ್ಗಿನಿಂದ ನಡುರಾತ್ರಿ ತನಕ ಕರಾಟೆ, ಭರತನಾಟ್ಯ, ಸಿನೆಮಾ ಡ್ಯಾನ್ಸ್‌ ,ಸಂಗೀತ, ಚಿತ್ರಕಲೆ-ಹೀಗೆ ವಿವಿಧ ಕಲೆಗಳನ್ನು ಹೇಳಿಕೊಡುವ ವ್ಯವಸ್ಥೆ ಮಾಡಿ ನೆಟ್ಟಗೆ ಉಸಿರಾಡಲೂ ಅವಕಾಶಕೊಡದೆ ಅವರನ್ನು ಅನತಿ ಕಾಲದಲ್ಲಿ ‘ಸಕಲಕಲಾವಲ್ಲಭ’ರನ್ನಾಗಿಸಿ ಟಿವಿ ಪರದೆ ಮುಂದೆ ತಂದು ನಿಲ್ಲಿಸುವ ಪ್ರಯತ್ನದಲ್ಲಿದ್ದಾರೆ ಅನೇಕ ತಂದೆತಾಯಿಗಳು. ಮಕ್ಕಳನ್ನು ಗೆಲ್ಲುವ ಕುದುರೆಗಳನ್ನಾಗಿಸುವ ಕಾರ್ಖಾನೆ ಇದು. ಗೆಲ್ಲುವ ಮಕ್ಕಳಿಗೆ ಪ್ರೀತಿ, ಆರೈಕೆ, ಕೈತುಂಬ, ಹಣ, ಹೆಮ್ಮೆಯ ಆಲಿಂಗನ. ಮಗು ಸೋಲುತ್ತ ಬಂದರೆ ತಾತ್ಸಾರ, ತಿರಸ್ಕಾರ, ನಿರಾಕರಣ.

ನಾನೇ ಉಡುಪಿಯ ನಾಕುಬೀದಿಯಲ್ಲಿ ನೋಡಿದ್ದೇನೆ: ಕೃಷ್ಣಾಷ್ಟಮಿಗೆ ಬಾಲ ಗೋಪಾಲನ ವೇಷತೊಟ್ಟ ನೂರಾರು ಪುಟ್ಟಮಕ್ಕಳು ‘ಬಾಲಗೋಪಾಲ’ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆರೇಳು ಮಕ್ಕಳು ಗೆಲ್ಲುತ್ತಾರೆ. ಉಳಿದವು ಸೋಲುತ್ತವೆ. ತಾವು ಸ್ಪರ್ಧೆಯಲ್ಲಿ ಸೋತಿದ್ದೇವೆ ಎಂಬುದೂ ಅವಕ್ಕೆ ತಿಳಿಯುವುದಿಲ್ಲ. ಹೆಚ್ಚೇಕೆ, ತಾವು ಭಾಗವಹಿಸುತ್ತಿರುವುದ ತಂದೆತಾಯಿಗಳ ಜಂಭವನ್ನು ಹೆಚ್ಚಿಸುವ ಅಥವಾ ಮುರಿಯುವ ಸ್ಪರ್ಧೆ ಎಂಬುದೂ ಅವಕ್ಕೆ ಗೊತ್ತಿರುವುದಿಲ್ಲ. ವೇದಿಕೆಗೆ ಹೋಗಿ ಏನು ಮಾಡಬೇಕೆಂಬುದು ತಿಳಿಯದೆ, ತಾಯಿ ಹೇಳಿಕೊಟ್ಟದ್ದನ್ನು ಮರೆತು ತಾಯಿಯ ಕಡೆ ಮುಖಮಾಡಿ ನಿಂತು ಅರೆಗಳಿಗೆಯಲ್ಲಿ ಓಡಿಬರುವ ಮಕ್ಕಳಿಗೆ ಎಂಥ ಸ್ಪರ್ಧೆ? ನನ್ನ ದೃಷ್ಟಿಯಲ್ಲಿ ಪ್ರತಿಯೊಂದು ಮಗುವೂ ಬಾಲಗೋಪಾಲನೆ, ರಾಧೆಯ. ಆದರೆ ಗೆಲುವು, ಬಹುಮಾನ, ಪ್ರತಿಷ್ಠೆ ಈ ವಿಷವರ್ತುಲದಲ್ಲೇ ಸುತ್ತುವ ತಾಯಿತಂದೆಗೆ ಮಗು ಸೋತರೆ ಕಾಲಕೆಳಗಿನ ನೆಲವೇ ಕುಸಿದಂತೆ. ಮಗುವನ್ನು ಸಂತೈಸುವ ಬದಲು ದಾರಿಯಲ್ಲಿ ಬೈಯುತ್ತಾ, ಹೊಡೆಯುತ್ತಾ ಬಾಲಗೋಪಾಲರನ್ನು ದರದರ ಮನೆಗೆ ಎಳೆದುಕೊಂಡು ಹೋಗುವ ತಾಯಂದಿರನ್ನೂ ನಾನು ಕಂಡಿದ್ದೇನೆ. ಅಂದರೇನರ್ಥ? ಗೆಲುವು, ಪದಕ, ಹೆಸರು ತಂದುಕೊಡುವುದಾದರೆ ನನಗೆ ಪ್ರೀತಿ ಉಣ್ಣಿಸುವ ಆ ಮಗು ನನ್ನ ಪ್ರೀತಿಯ ಪದಕ; ಸೋಲುವ ಮಗು ನನ್ನದಲ್ಲ. ಅನಾಥವಾದ ಸೋಲನ್ನು ಅನುಭವಿಸುವ ಮಗುವೂ ಅನಾಥವಾಗಬೇಕೆ? ಸೋಲು ಗೆಲುವುಗಳನ್ನು ಹಿರಿಯರು ಸಮಚಿತ್ತದಿಂದ ಸ್ವೀಕರಿಸಲಾರರೆ? ನಾವು ಮಕ್ಕಳನ್ನು ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಬಾರದೆ? ನಮ್ಮ ಗುರಿಸಾಧನೆಗಾಗಿ ಅವರನ್ನು ಬಳಸಿಕೊಳ್ಳುವುದು ಸರಿಯೆ?