ಕಲಿಕೆ ಎಂಬ ಪರಿಕಲ್ಪನೆಯನ್ನು ಮನೋವಿಜ್ಞಾನಿಗಳು ಬಗೆಬಗೆಯಾಗಿ ಬಣ್ಣಿಸಿದ್ದಾರೆ. ಪ್ರಚೋದನೆ ಹಾಗೂ ಪ್ರತಿಕ್ರಿಯೆ ನಡುವೆ ಉದ್ಭವಿಸುವ ಹೊಸ ಬಂಧ, ಯತ್ನದೋಷದ ಪ್ರತಿಫಲ, ಅನುಕರಣೆಯ ಫಲ, ಮಾದರಿಯ ಅನುಕರಣೆ, ಶೋಧನೆಯ ಫಲಿತ ಹಾಗೂ ಅಂತಃಪ್ರೇರಣೆ ಅಥವಾ ಒಳನೋಟದ ಪ್ರತಿಫಲನ ಎಂದೆಲ್ಲ ವ್ಯಾಖ್ಯಾನಿಸಿದ್ದಾರೆ.

ಕಲಿಕೆ ಮಗುವಿನ ಪಾಲಿಗೆ ಶುಷ್ಕವೂ ಯಾತನಾಮಯವೂ ಆಗುತ್ತದೆ. ಅದು ಹೊರೆ ಅನ್ನಿಸುತ್ತದೆ. ಮಕ್ಕಳು ಕಣ್ಣೀರಿನ ಹೊಳೆಯಲ್ಲಿ ಕೈತೊಳೆಯುತ್ತ ಕಲಿಯುವ ಸ್ಥಿತಿ ಉದ್ಭವಿಸಿದೆ. ಇದರ ಬದಲಿಗೆ ಕಲಿಕೆ ಹೊರೆರಹಿತವಾಗಿರಬೇಕು; ಆನಂದದಾಯಕವಾಗಿರಬೇಕು; ನಲಿಯುತ್ತಾ ಕಲಿಯಬೇಕು ಎಂಬ ಧೋರಣೆ ಮಾನವತಾವಾದಿ ಮನೋವಿಜ್ಞಾನದ ಪ್ರಭಾವದಿಂದ ಉಂಟಾಗಿದೆ. ಹೀಗಾಗಿಯೇ ನಮ್ಮಲ್ಲೀಗ ‘ಆನಂದದಾಯಕ ಕಲಿಕೆ’, ‘ಹೊರೆರಹಿತ ಕಲಿಕೆ’, ‘ಚಟುವಟಿಕೆ ಆಧಾರಿತ ಕಲಿಕೆ, ‘ಚೈತನ್ಯ’, ‘ಕಲಿನಲಿ’, ‘ನಲಿಕಲಿ’ ಎಂಬಂಥ ಕಾರ್ಯಕ್ರಮಗಳು ಶಿಕ್ಷಣ ಕ್ಷೇತ್ರದಲ್ಲಿ ದಾಳಿಯಿಟ್ಟಿವೆ.

ಕಲಿಕೆ ಹೊರೆಯೂ ಆಗಬಹುದು, ಹಗುರವೂ ಆಗಬಹುದು, ನೀರಸವಾಗಬಹುದು, ಸರಸವೂ ಆಗಬಹುದು. ಆನಂದದಾಯಕವಾಗಬಹುದು ಅಥವಾ ದುಃಖದಾಯಕವೂ ಆಗಬಹುದು. ಏನೇ ಆಗಲಿ, ನಿಜವಾದ ಕಲಿಕೆ ಉಪಯುಕ್ತವೂ ಶಾಶ್ವತವೂ ಆಗುವುದರಲ್ಲಿ ಸಂದೇಹವಿಲ್ಲ. ಇಂಥ ಕಲಿಕೆಯು ಮತ್ತೆ ಅಧಿಕ ವಿವೇಚನೆ ಮತ್ತು ವಿವೇಕದಿಂದ ಕ್ರಿಯಾಶೀಲನಾಗಲು ಮತ್ತಷ್ಟು ಕಲಿಯಲು ಉತ್ತೇಜಿಸುತ್ತದೆ. ವಿದ್ಯಾರ್ಥಿಯ ಕಾಳಜಿ, ಆಸಕ್ತಿಗಳು ಹಾಗೂ ಅನುಭವದಿಂದಲೇ ಇಂಥ ಕಲಿಕೆ ಹೊರಹೊಮ್ಮುತ್ತದೆ.

ಕಲಿಯುವುದಕ್ಕೆ ಕಲಿಯುವವರಲ್ಲಿ ಕಾಳಜಿ, ಆಸಕ್ತಿ ಬೇಕು. ಅದಿಲ್ಲದಿದ್ದರೆ ಎಂಥ ದಕ್ಷ ಶಿಕ್ಷಕರಿಬ್ಬರೂ ಅದೆಷ್ಟೇ ಶ್ರೀಮಂತವಾದ ಕಲಿಕೆಯ ಆವರಣವಿದ್ದರೂ ನಿಜವಾದ ಕಲಿಕೆ ನಡೆಯುವುದಿಲ್ಲ. ಒತ್ತಾಯ, ಕಡ್ಡಾಯ ಹಾಗೂ ನಿರ್ಬಂಧದಲ್ಲಿ ಕಲಿಕೆಯ ಹೂವು ಅರಳಲಾರದು. ಏಕಲವ್ಯನನ್ನು ಶಿಷ್ಯನನ್ನಾಗಿ ಒಪ್ಪಿಕೊಳ್ಳಲು ದ್ರೋಣರು ನಿರಾಕರಿಸಿದರೂ ಆತ ಅವರ ಮೃಣ್ಮಯಮೂರ್ತಿಯನ್ನು ಮಾಡಿ ಏಕಾಗ್ರತೆಯಿಂದ ಸಾಧನೆಮಾಡಿ ಅರ್ಜುನನಿಗೆ ಸರಿಸಾಟಿಯಾದ ಬಿಲ್ಗಾರನೆನಿಸಿದ. ಈ ‘ಏಕಲವ್ಯತ್ವ’ ಕಲಿಕೆಗೆ ಅತ್ಯಗತ್ಯ.

ಕಲಿಯುವ ಆಸಕ್ತಿಗೆ ಸಂಬಂಧಿಸಿದಂತೆ ಎರಡು ಘಟನೆಗಳನ್ನು ನಿರೂಪಿಸಿ ಬಳಿಕ ವಾಸ್ತವಕ್ಕೆ ಬರುತ್ತೇನೆ. ಉತ್ತರ ಕನ್ನಡದ ತೀರ ಹಿಂದುಳಿದ ಜಾತಿಗೆ ಸೇರಿದ ನನ್ನ ಓರ್ವ ಕನ್ನಡ ವಿದ್ಯಾರ್ಥಿಗೆ ಪರೀಕ್ಷೆಗಳಲ್ಲಿ ಅಷ್ಟೇನೂ ಉತ್ತಮ ಅಂಕಗಳು ಬರುತ್ತಿರಲಿಲ್ಲ. ಮೌಖಿಕ ಅಭಿವ್ಯಕ್ತಿಯಲ್ಲೂ ಆತ ಕೊಂಚ ಹಿಂದೆ. ಆದರೆ ವಿಧೇಯತೆ-ವಿನಯಗಳ ಸಾಕಾರ ಮೂರ್ತಿ. ಬೋಧಾನಾಭ್ಯಾಸಕ್ಕಾಗಿ ಒಂದು ಶಾಲೆಗೆ ಹೋಗಿದ್ದಾಗ ಅಲ್ಲಿನ ಪ್ರತಿಭಾವಂತ ಹಾಗೂ ಸೃಜನಶೀಲ ಕನ್ನಡ ವಿದ್ಯಾರ್ಥಿಗಳ ಅಧ್ಯಯನ ಮಾಡಿ ಒಂದು ವರದಿ ಸಿದ್ಧಪಡಿಸುವ ದತ್ತಕಾರ್ಯ ನೀಡಿದ್ದೆ. ಬೋಧನಾಭ್ಯಾಸ ಪ್ರಾರಂಭವಾದ ಕೆಲದಿನಗಳ ಮೇಲೆ ಆತ ನನಗೆ ತಾನೇ ಸಿದ್ಧಪಡಿಸಿದ ಒಂದು ಸುದೀರ್ಘ ಪ್ರಶ್ನಾವಳಿ ನೀಡಿದಾಗ ದಂಗಾದೆ. ನಾನು ಆತನಿಂದ ಈ ಬಗೆಯ ಕಾರ್ಯಕ್ಷಮತೆಯನ್ನು ನಿರೀಕ್ಷಿಸಿರಲಿಲ್ಲ. ಆತ ಸಿದ್ಧಪಡಿಸಿದ ಪ್ರಶ್ನಾವಳಿ ಕಲಿಕೆಯ ವಿಚಾರದಲ್ಲಿ ಆತನಿಗಿರುವ ಕಾಳಜಿ-ಆಸಕ್ತಿಯ ಸಂಕೇತ. ಅದೇ ತರಗತಿಯ ಆತನ ಪ್ರತಿಭಾವಂತ ಸಹಪಾಠಿಗಳು ಅಂಥದ್ದೊಂದು ಪ್ರಶ್ನಾವಳಿ ಸಿದ್ಧಪಡಿಸಿರಲಿಲ್ಲ. ಆಗ ನನಗನ್ನಿಸಿದ್ದು ವಿದ್ಯಾರ್ಥಿಯ ಮೌಖಿಕ ಅಭಿವ್ಯಕ್ತಿ, ಪ್ರತಿಭೆ, ಅಂಕಗಳು, ಸಾಧನೆ ಇತ್ಯಾದಿಗಳಿಗಿಂತ ಆತನಲ್ಲಿರುವ ಕಲಿಯಬೇಕೆಂಬ ಹಂಬಲ, ಕಾಳಜಿ ಬಹಳ ಮುಖ್ಯ. ಪ್ರತಿಭೆ ಇದ್ದರೂ ಉಡಾಫೆಯಿಂದ ಬೇಕಾಬಿಟ್ಟಿಯಾಗಿ ಕೆಲಸ ಮಾಡಿದ ವಿದ್ಯಾರ್ಥಿಶಿಕ್ಷಕರನ್ನು ನಾನು ಕಂಡಿದ್ದೇನೆ. ಅವರ ಎದುರಿನಲ್ಲಿ ‘ಸಾಮಾನ್ಯರಲ್ಲಿ ಸಾಮಾನ್ಯ’ನಾದ ಈತ ತನ್ನ ಕಲಿಕೆಯ ಕಾಳಜಿಯಿಂದಾಗಿ ಅತ್ಯಂತ ಪ್ರಿಯನಾದ.

ಇನ್ನೊಂದು ತೀರಾ ವಿಚಿತ್ರವೆನಿಸಬಹುದಾದ ಘಟನೆ: ಕೆಲವು ವರ್ಷಗಳ ಹಿಂದೆ ಓರ್ವ ಹುಡುಗಿ ನನ್ನ ಕಛೇರಿಗೆ ಬಂದು ‘ನೀವು ನನಗೆ ಇಂಟರ್ ವ್ಯೂಹಗೆ ಕಳಿಸಬೇಡಿ ಸರ್’ ಎಂದಾಗ ಒಮ್ಮೆ ನನಗೆ ಆಘಾತವಾಯಿತು. ಅದು ಬಿ.ಎಡ್‌ ಪ್ರವೇಶದ ಸಂಧರ್ಭ. ಬೆಳಗ್ಗಿನಿಂದ ಸಂಜೆತನಕ ನನ್ನ ಕಛೇರಿಗೆ ಅನೇಕ ಮಂದಿ ಬಂದು ‘ಇಷ್ಟು ಅಂಕಗಳಿವೆ, ಅಷ್ಟಿವೆ. ಹೇಗಾದರೂ ಒಂದು ಸೀಟು ಕೊಡಿ’ ಎಂದು ಗೋಗರೆಯುತ್ತಿದ್ದರು. ಮಿತವಾದ ಸೀಟುಗಳು, ಮಿತಿಮೀರಿದ ಬೇಡಿಕೆ – ಇವುಗಳ ನಡುವೆ ಹೊಂದಾಣಿಕೆ ಮಾಡುವುದು ಹೇಗೆಂದು ನಾನು ತಲೆಕೆಡಿಸಿಕೊಳ್ಳುತ್ತಿದ್ದರೆ ಈ ಹುಡುಗಿ ನನ್ನನ್ನು ಸಂದರ್ಶನಕ್ಕೆ ಕರೆಯಬೇಡಿ ಎಂದು ಗೋಗರೆಯುತ್ತಿದ್ದಾಳೆ! ವಿಚಾರಿಸಿ ನೋಡಿದಾಗ ಆಕೆಗೆ ಬಿ.ಎಡ್‌. ವ್ಯಾಸಂಗ ಮಾಡಲು ಏನೇನೂ ಆಸಕ್ತಿ ಇರಲಿಲ್ಲ. ಆದರೆ ಆಕೆಯ ಮನೆಯವರ ಒತ್ತಾಯ. ಸಂದರ್ಶನಕ್ಕೆ ಕರೆ ಬಂದರೆ ಬಿ.ಎಡ್‌.ಗೆ ಅವರು ಸೇರಿಸುವುದು ಖಂಡಿತ. ಸಂದರ್ಶನಕ್ಕೆ ಕರೆ ಬರದಿದ್ದರೆ ತಾನು ಬಚಾವಾಗಬಲ್ಲೆ ಎಂದು ಯೋಚಿಸಿ ಆಕೆ ನನ್ನನ್ನು ಕಂಡು ವಿನಂತಿಸಿಕೊಂಡಳು. ಅದ್ವಿತೀಯವಾದ ಈ ಘಟನೆ ನನ್ನ ಪಾಲಿಗೆ ಅವಿಸ್ಮರಣೀಯ. ಆಕೆಯ ಪ್ರಾಮಾಣಿಕತೆ ಮಾನಸ್ತಂಭದಂತೆ ನನ್ನ ಮನದಲ್ಲಿ ನಿಂತಿದೆ.

೪-೦೫೦ ವರ್ಷಗಳ ಹಿಂದೆ ವಿದ್ಯಾಭ್ಯಾಸವೆಂಬುದು ಸುಲಭದ ವಿಷಯವಾಗಿರಲಿಲ್ಲ. ಸಾರಿಗೆ ಸೌಕರ್ಯಗಳಿರಲಿಲ್ಲ. ಸೌಲಭ್ಯಗಳಿರಲಿಲ್ಲ. ವೆಚ್ಚಕ್ಕೆ ಹೊನ್ನಿರಲಿಲ್ಲ. ಹತ್ತಾರು ಮೈಲಿ ನಡೆದು ಯಾರದೊ ಮನೆಯಲ್ಲಿ ಉಂಡು ಅಂತೂ ಬಹಳ ಕಷ್ಟದಲ್ಲಿ ಮಕ್ಕಳ ವಿದ್ಯಾಭ್ಯಾಸ ಸಾಗುತ್ತಿತ್ತು. ಹೀಗಾಗಿ ಶಾಲೆಗೆ ಹೋಗುವ ಅನೇಕರಲ್ಲಿ ಚೆನ್ನಾಗಿ ಕಲಿಯಬೇಕೆಂಬ ಕಳಕಳಿ ಇದ್ದಿತು. ಅವರ ಕಣ್ಣೆದುರಿನ ದುಃಸ್ಥಿತಿ ಚೆನ್ನಾಗಿ ಕಲಿಯಲು ಬೇಕಾದ ಪ್ರೇರಣೆ ಹಾಗೂ ಸಂಕಲ್ಪಶಕ್ತಿಯನ್ನು ಒದಗಿಸುತ್ತಿತ್ತು.

ಆದರೆ ಇಂದು! ಮನೆಬಾಗಿಲಲ್ಲೇ ಶಾಲೆಯಿದೆ. ಸರ್ವವೂ ಉಚಿತವಾಗಿ ದೊರೆಯುತ್ತದೆ. ಯಾರನ್ನೂ ಅನುತ್ತೀರ್ಣಗೊಳಿಸುವ ಪ್ರಶ್ನೆಯಿಲ್ಲ. ವಿಪರೀತ ಶಿಕ್ಷೆಕೊಡುವ ಪ್ರಮೇಯವಿಲ್ಲ. ಹಣಕ್ಕೆ ಕೊರತೆಯಿಲ್ಲ. ಸೌಲಭ್ಯಗಳಿಗೆ ಕೊರತೆಯಿಲ್ಲ. ಆದರೆ ಒತ್ತಾಯಕ್ಕೆ, ಜುಲುಮೆಗೆ ಕಡ್ಡಾಯವಾಗಿ ಶಾಲೆಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಯಾವ ಆಸಕ್ತಿಯೂ ಇಲ್ಲ. ಹೇಳಿದ ಕೆಲಸ ಒಂದನ್ನೂ ಮಾಡುವುದಿಲ್ಲ. ಪಾಠ ಓದುವುದಿಲ್ಲ. ‘ಮನೆಗೆಲಸ’ ಮಾಡುವುದಿಲ್ಲ. ಬಲಾತ್ಕಾರದ ಶಿಕ್ಷಣದಿಂದಾಗಿ ಈ ಪರಿಸ್ಥಿತಿ ಈಗ ವ್ಯಾಪಕವೆನಿಸುತ್ತಿದೆ. ಇಂದಿನ ಶಾಲಾಶಿಕ್ಷಕರು ಹಾಗೂ ಕಾಲೇಜು ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಈಗೀಗ ಮಾಡುತ್ತಿರುವ ದೂರು ಇದೇ. “ಏನೂ ಆಸಕ್ತಿಯಿಲ್ಲ. ಯಾರದೋ ಒತ್ತಾಯಕ್ಕೆ ಬಂದು ಬೆಂಚು ಬಿಸಿಮಾಡುತ್ತಾರೆ.;; ಇದು ಪೂರ್ತಿ ಸತ್ಯವೇನಲ್ಲ. ತರಗತಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳೂ ಆಸಕ್ತಿಶೂನ್ಯರಲ್ಲ. ಆದರೆ ಕಡ್ಡಾಯ ಶಿಕ್ಷಣದ ದೆಸೆಯಿಂದಾಗಿ ಸರಕಾರ ಕೊಡುತ್ತಿರುವ ಸೌಲಭ್ಯಗಳನ್ನು ಪಡೆಯುವ ದೃಷ್ಟಿಯಿಂದ ಶಾಲಾ ತರಗತಿಗಳಲ್ಲಿ ಆಸಕ್ತಿರಹಿತ ವಿದ್ಯಾರ್ಥಿಗಳ ಸಂಖ್ಯೆ ಹಿಂದಿಗಿಂತ ಇಂದು ಹೆಚ್ಚಿದೆ ಎಂಬುದೂ ಸತ್ಯವೇ.

ಪ್ರತಿಯೊಂದು ಮಗುವಿನಲ್ಲೂ ತನ್ನ ಸುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಅಂತಸ್ಥವಾದ ಹಾಗೂ ಅದ್ಭುತವಾದ ಒಂದು ಪ್ರೇರಣೆ ಇದ್ದೇ ಇರುತ್ತದೆ. ಈ ಶಕ್ತಿಯಿಂದ ಮಗು ಗಳಿಸಿದ ತಿಳಿವಳಿಕೆ, ಬೆಳವಣಿಗೆ, ಆನಂದ, ಘನತೆ, ಸ್ವಾತಂತ್ಯ್ರ ಹಾಗೂ ಮೌಲಿಕತೆ ಇತ್ಯಾದಿಗಳೇ ನಿಜವಾದ ಶಿಕ್ಷಣ ಎನ್ನಬಹುದು.

ಸಾಮಾನ್ಯವಾಗಿ ನಾವು ಶಿಕ್ಷಣ ನೀಡುವುದು, ವಿದ್ಯೆ ಕೊಡುವುದು ಎಂದು ಹೇಳುತ್ತೇವೆ. ‘ವಿದ್ಯಾರಂಭ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ‘ಮಗುವಿಗೆ ಒಳ್ಳೆಯ ವಿದ್ಯೆ ಬುದ್ಧಿ ಕೊಡಪ್ಪಾ ದೇವರೇ’ ಎಂದು ತಂದೆತಾಯಿ ಹಾರೈಸುತ್ತಾರೆ. “ನೋಡಿ, ನಾನು ನಿಮಗೆ ವಿದ್ಯಾದಾನ ಮಾಡುತ್ತಿದ್ದೇನೆ. ನನಗೆ ತಿಳಿದ ವಿದ್ಯೆಯನ್ನು ನಿಮಗೆ ಧಾರೆಯೆರೆಯುತ್ತಿದ್ದೇನೆ” ಎಂದು ಗುರುಗಳು, ಶಿಕ್ಷಕರು- ನುಡಿಯುತ್ತಾಋಎ. ನಿಜ ಹೇಳಬೇಕೆಂದರೆ ವಿದ್ಯೆಯನ್ನು ಕೊಡಲು, ಧಾರೆ ಎರೆಯಲು ಬರುವುದಿಲ್ಲ. ಅದೇನೂ ಅಂಗಡಿಯಲ್ಲಿ ಮಾರಾಟಕ್ಕಿಟ್ಟ ವಸ್ತುವಲ್ಲ (ನಾವು ಹಾಗೆ ಮಾಡಿದ್ದೇವೆ). ವ್ಯಕ್ತಿ ತನ್ನ ಇಂದ್ರಿಯಗಳ ಮೂಲಕ, ಬುದ್ಧಿಭಾವಗಳ ಮೂಲಕ ತನಗಾಗಿ ಗಳಿಸುವ ಆರ್ಜಿಸುವ ಶಕ್ತಿಯೇ ವಿದ್ಯೆ. ಅದು ತನ್ನ ತಲೆಯಲ್ಲಿ ತುಂಬಿಸಿಟ್ಟುಕೊಳ್ಳಲು ಪರರು ದಾನಮಾಡಿದ ಗಂಗಾಜಲವಲ್ಲ! ಹಾಗಿದ್ದರೆ ಅದು ಸೋರಿಹೋಗುತ್ತದೆ! ಹುಳಹಿಡಿಯುತ್ತದೆ. ಆರ್ಜಿಸಿದ ವಿದ್ಯೆ ಇಮ್ಮಡಿ ಮುಮ್ಮಡಿಯಾಗಬಹುದೇ ಹೊರತು ಎಂದೆಂದೂ ಸೋರಿಹೋಗುವುದಿಲ್ಲ.

ಶಿಕ್ಷಣದಿಂದ ಇಂದಿನ ಜನಾಂಗಕ್ಕೆ ಅಥವಾ ಎಲ್ಲ ಕಾಲಗಳ ಜನರಿಗೆ ಬೇಕಾದುದೇನು? ಒಂದು-ತಮ್ಮ ಸುತ್ತಲಿನ ಜಗತ್ತನ್ನು ಅದರ ಎಲ್ಲ ವೈವಿಧ್ಯ ಹಾಗೂ ವಿಸ್ತಾರದೊಂದಿಗೆ ಅರ್ಥಮಾಡಿಕೊಳ್ಳುವ ಶಕ್ತಿ. ಎರಡು-ತಮ್ಮ ಸ್ವ-ವ್ಯಕ್ತಿತ್ವದ ವಿಕಸನ. ಮೂರು-ಪಡೆದ ವಿದ್ಯೆಯಿಂದ ತಮ್ಮ ದುಡಿಮೆಯ ಕ್ಷೇತ್ರವನ್ನು ಗುರುತಿಸಿಕೊಂಡು ದುಡಿಯುವುದು.  ತಮ್ಮ ಆಸಕ್ತಿ, ಅಭಿರುಚಿ, ಹವ್ಯಾಸ, ಸೃಜನಶೀಲ ಪ್ರತಿಭೆಗಳ ನೆರವಿನಿಂದ ಬದುಕಿನ ಸವಾಲುಗಳನ್ನು ಕಂಡುಕೊಂಡು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಫಲವಾಗುವುದು ತನ್ಮೂಲಕ ಮನುಕುಲದ ಸೇವೆ ಮಾಡುವುದು; ತಮ್ಮ ಪ್ರತಿಭಾವಿಶೇಷದಿಂದ ಸಾಮಾಜಿಕ, ಆರ್ಥಿಕ ಮುಖ್ಯವಾಗಿ ಸಾಂಸ್ಕೃತಿಕ ರಂಗವನ್ನು ಮೊದಲು ಇದ್ದುದಕ್ಕಿಂತ ಹೆಚ್ಚು ಸುಂದರಗೊಳಿಸುವುದು, ಶ್ರೀಮಂತಗೊಳಿಸುವುದು.

ನಮ್ಮ ಸಮಾಜ ಶಾಲೆಗಳಿಂದ ಏನನ್ನು ನಿರೀಕ್ಷಿಸುತ್ತದೆ? ಈ ಶಾಲೆಗಳು ನಮ್ಮ ಮಕ್ಕಳಿಗೆ ಏನನ್ನು ಕಲಿಸಿಕೊಡಬೇಕಿದೆ? ಮುಖ್ಯವಾಗಿ ಮೂರು ಅಂಶಗಳನ್ನು ನಾವೆಲ್ಲ ಶಾಲೆಗಳಿಂದ ನಿರೀಕ್ಷಿಸುತ್ತೇವೆ:

೧. ಶಾಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ದಾಟಿಸಬೇಕು; ನಮ್ಮ ಸಾಂಸ್ಕೃತಿಕವಾದ ಉದಾತ್ತ ಆಶಯವನ್ನು ಹಾಗೂ ಉನ್ನತ ಮೌಲ್ಯಗಳನ್ನು ಶಾಲೆಗಳು ಮಕ್ಕಳಲ್ಲಿ ಪೋಷಿಸಬೇಕು. ಅದಕ್ಕಾಗಿಯೇ ೧೯೮೬ರ ರಾಷ್ಟ್ರೀಯ ಶಿಕ್ಷಣ ನೀತಿಯು ಆಯ್ದುಕೊಂಡಿರುವ ಹಾಗೂ ಪಠ್ಯಕ್ರಮದಲ್ಲಿ ಪ್ರತಿಬಿಂಬಿತವಾಗಬೇಕೆಂದು ಬಯಸಿರುವ ಒಂದು ಮೂಲಾಂಶವೇ ಭಾರತದ ಸಾಂಸ್ಕೃತಿಕ ಅನನ್ಯತೆ.

೨. ಮಗುವಿಗೆ ತನ್ನ ಸುತ್ತಲಿನ ಪರಿಸರ-ಜಗತ್ತಿನ ಪರಿಚಯ ಚೆನ್ನಾಗಿ ಆಗಬೇಕು. ಶಾಲೆಗಳು ಈ ಕೆಲಸವನ್ನು ಚೆನ್ನಾಗಿ ಮಾಡಬೇಕು. ಆಸ್ಟ್ರೇಲಿಯ, ಅಮೇರಿಕ ಅಥವಾ ಇಡಿ ಜಗತ್ತಿನ ಭೂಪಟ ಎದುರಿಟ್ಟುಕೊಂಡು ಅಲ್ಲಿನ ಹವಾಮಾನ, ಬೆಳೆಗಳು, ಕ್ರಾಂತಿ ಇತ್ಯಾದಿ ಕಲಿತರೇನು ಫಲ? ನಮ್ಮ ಊರು, ನಮ್ಮ ಕೇರಿ, ನಮ್ಮ ಜಿಲ್ಲೆ, ರಾಜ್ಯದ ವಿವರಗಳು ನಮಗೆ ತಿಳಿಯದಿದ್ದರೆ? ಸ್ಥಳೀಯ ಇತಿಹಾಸವೇ ತಿಳಿದಿಲ್ಲದ ಅನೇಕ ಮಂದಿ ಇಂದು ನಮ್ಮ ಮುಂದಿರುವುದಕ್ಕೆ ಶಾಲೆಗಳು ಕಲಿಸುವ ಸಮಾಜ ಅಧ್ಯಯನ-ಸಮಾಜವಿಜ್ಞಾನ ಪಠ್ಯಕ್ರಮದಲ್ಲೇ ದೋಷವಿರುವುದು.

೩. ಮಗುವನ್ನು ಉದ್ಯೋಗದ ದೃಷ್ಟಿಯಿಂದ ಸಜ್ಜುಗೊಳಿಸುವುದು. ದುರ್ದೈವವೆಂದರೆ ನಮ್ಮ ಇಂದಿನ ಶಿಕ್ಷಣ ತರಗತಿಯ ನಾಲ್ಕು ಗೋಡೆಗಳ ನಡುವೆ ಉಸಿರುಕಟ್ಟಿ ಸಾಯುತ್ತಿದೆ. ತರಗತಿಯ ಒಳಗೆ ನಡೆಯುವ ಕ್ರಿಯೆ ಪುಸ್ತಕ ಆಧಾರಿತ ಹಾಗೂ ಪುಸ್ತಕಕೇಂದ್ರಿತ. ಇಂದ್ರಿಯಗಳ ತರಬೇತಿಗೆ ಅಲ್ಲಿ ಎಡೆಯಿಲ್ಲ. ಹೀಗಾಗಿ ಇಂದಿನ ಅನೇಕ ಮಕ್ಕಳು ‘ಕ್ವಿಜ್‌ ಪಂಡಿತ’ರಿರಬಹುದು ಆದರೆ ಅನುಭವಸಾಂದ್ರತೆಯ ವಿಷಯದಲ್ಲಿ ಅವರು ಹಿಂದಿದ್ದಾರೆ.

ಆಂಗ್ಲಶಿಕ್ಷಣ ಪಡೆಯುವ ಪ್ರತಿಯೊಬ್ಬನಿಗೂ ವೃತ್ತಿಶಿಕ್ಷಣ ನೀಢಬೇಕು. ಇದರಿಂದಾಗಿ ಆತ ಉದ್ಯೋಗರಂಗ ಸೇರಲು ಸನ್ನದ್ಧನಾಗುತ್ತಾನೆ. ಶಾಲೆ ಈ ಕೆಲಸವನ್ನು ಚೆನ್ನಾಗಿ ಮಾಡಿದ್ದೇ ಆದಲ್ಲಿ ವಿದ್ಯಾರ್ಥಿ ಉದ್ಯೋಗರಂಗಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲ. ಪದವಿಪೂರ್ವ ಹಂತಕ್ಕೆ ಬರುವ ಹೊತ್ತಿಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ಉದ್ಯೋಗ/ಕಾರ್ಯಕ್ಕೆ ಸಜ್ಜಾಗಬೇಕು. ಹಾಗೆ ಆಗದಿದ್ದರೆ ಈ ವ್ಯವಸ್ಥೆ ನಿರರ್ಥಕವೆಂದೇ ಹೇಳಬೇಕು. ಗಾಂಧೀಜಿ ಪ್ರತಿಪಾದಿಸಿದ ಕೈಕಸುಬು ಆಧಾರಿತ ಅಥವ ಉದ್ಯೋಗಾಧಾರಿತ ಶಿಕ್ಷಣಕ್ಕೆ ನಾವು ವಿಶೇಷ ಒತ್ತು ನೀಡದಿದ್ದುದೇ ಇಂದಿನ ದುಃಸ್ಥಿತಿಗೆ ಕಾರಣ. ಬಹಳ ಹಿಂದೆ ಈ ಮೂರೂ ಉದ್ದೇಶಗಳನ್ನು ಸಮುದಾಯವೇ ಪೂರೈಸುತ್ತಿತ್ತು. ಶಾಲೆಗಳ ಮೇಲೆ ಈ ಹೊರೆ ಇದ್ದಿರಲಿಲ್ಲ. ಕೇವಲ ಅಕ್ಷರವಿದ್ಯೆ ಕಲಿಸಲು ಶಾಲೆಗಳಿದ್ದವಷ್ಟೆ. ಶಾಲೆಗಳಿಂದ ಈ ಉದ್ದೇಶಗಳನ್ನು ಈಡೇರಿಸುವುದು ಸುಲಭಸಾಧ್ಯವಲ್ಲ.

ಈಗ ಸಮುದಾಯ ಅಥವಾ ಸಮಾಜ ಶಾಲೆಗಳ ಮೇಲೆ ವಿನೂತನವೂ ವಿಪರೀತವೂ ಆದ ಕೆಲಸದ ಭಾರವನ್ನು ಹೊರಿಸಿದೆ. ಬೇರೆ ಬೇರೆ ಕೆಲಸಗಳ ಹೊರ ಶಿಕ್ಷಕರ ಮೇಲಿದೆ. ಶಿಕ್ಷಕರು ಶಾಲೆಗಳಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಜನಗಣತಿ, ತರಬೇತಿ, ಚುನಾವಣಾ ಕಾರ್ಯ ಇತ್ಯಾದಿಗಳಲ್ಲಿ ಮುಳುಗೇಳುತ್ತಿದ್ದಾರೆ. ‘ನಮ್ಮನ್ನು ತರಗತಿಗಳಲ್ಲಿ ಇರಲು ಬಿಡಿ. ಪಾಠಮಾಡಲು ಬಿಡಿ’ ಎಂದು ಗೋಗರೆಯುತ್ತಿದ್ದಾರೆ. ಜೊತೆಗೆ ಹಳೆಯ ಪಠ್ಯಕ್ರಮಕ್ಕೆ ಹೊಸ ಹೊಸ ವಿಷಯಗಳನ್ನು ಒಲವುಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಹೀಗಾಗಿ ನಿಜಕ್ಕೂ ಏನನ್ನು ಕಲಿಸಬೇಕು? ಎಷ್ಟು ಕಲಿಸಬೇಕು? ಎಂಬುದೇ ಈಗ ಮುಖ್ಯ ಪ್ರಶ್ನೆ.

ಮಕ್ಕಳ ಶಿಕ್ಷಣಕ್ಕೆ ಬೇಕಾದ ಸಂಪನ್ಮೂಲಗಳಲ್ಲಿ ಶಾಲೆಯೂ ಒಂದು ಸಂಪನ್ಮೂಲ. ಮಕ್ಕಳು ಈ ಸಂಪನ್ಮೂಲ ಅಥವಾ ನಿಧಿಯಿಂದ ತಮಗೆ ಬೇಕಾದುದನ್ನು ಪಡೆದುಕೊಂಢು ತಮಗೆ ಬೇಕಾದ ವಿದ್ಯೆಯನ್ನು ಗಳಿಸುತ್ತಾರೆ. ಶಾಲೆಗಳಲ್ಲಿ ಲಭ್ಯವಿರುವ ಹಲವು ಪರಿಕರಗಳನ್ನೂ, ಸಂಪನ್ಮೂಲಗಳನ್ನೂ ಬಳಸಿಕೊಳ್ಳುವ ಸ್ವಾತಂತ್ಯ್ರ ಮಕ್ಕಳಿಗಿರಬೇಕು. ತಮ್ಮ ಭಾವೀಜೀವನಕ್ಕೆ ಅಗತ್ಯವಾದ ವಿಷಯಗಳನ್ನು ಆಯ್ದುಕೊಳ್ಳುವ ಸ್ವಾತಂತ್ಯ್ರವೂ ಇರಬೇಕು. ಆಗ ಅವರು ತಮಗೆ ಬೇಕಾದುದನ್ನು ಆಯ್ದುಕೊಂಡು ವಿದ್ಯೆ ಗಳಿಸುತ್ತಾರೆ.

ವಿದ್ಯೆ ಗಳಿಸಲು, ಶಿಕ್ಷಣ ಪಡೆಯಲು ಇರುವುದೊಂದೇ ದಾರಿಯಲ್ಲ. ದಾರಿಗಳು ಅನಂತ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇಧ ಆದ ಮಾರ್ಗ ಹಾಗೂ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಮುಕ್ತ ಅವಕಾಶಗಳಿರಬೇಕು. ಆದರೆ ನಮ್ಮಲ್ಲಿರುವುದು ಒಂದೇ ಮಂತ್ರ, ಒಂದೇ ತಂತ್ರ, ಒಂದೇ ಮಾರ್ಗ. ಎಲ್ಲರೂ ಆ ಹಾದಿಯಲ್ಲಿ ಒಂದೇ ವೇಗದಲ್ಲಿ ಸಾಗಿ ಸಮರೂಪದ ಫಲಿತಾಂಶ ಗಳಿಸಬೇಕೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಕಾರ್ಖಾನೆಯಲ್ಲಿ ಸುಸಂಘಟಿತವಾಗಿ ಅಂತಿಮ ಉತ್ಪನ್ನಗಳು ಸಾಲುಸಾಲಾಗಿ ಹೊರಬೀಳುವುದಿಲ್ಲವೆ? ಹಾಗೆಯೇ ಶಿಕ್ಷಣ ಸಂಸ್ಥೆಗಳೆಂಬ ಕಾರ್ಖಾನೆಗಳಿಂದ ಸಾಬೂನುಬಿಲ್ಲೆಗಳಂಥ ವ್ಯಕ್ತಿಗಳನ್ನು ನಾವು ಹೊರಹಾಕುತ್ತಿದ್ದೇವೆ!

ಈ ಸಮಾಜದಲ್ಲಿ ಮಕ್ಕಳು ಉಪಯುಕ್ತ ಪ್ರಜೆಗಳಾಗುವುದಕ್ಕೆ ಬೇಕಾದ ಸನ್ನಿವೇಶವನ್ನು ಅವಕಾಶಗಳನ್ನು ಹಿರಿಯರು ಒದಗಿಸಬೇಕು. ಅಂಥ ಅವಕಾಶ ಒದಗಿಸದಿರುವುದು ಒಂದು ಪಾಪವೇ ಸರಿ. ಮಕ್ಕಳು ಉಪಯುಕ್ತ ಉತ್ಪಾದಕ ಪ್ರಜೆಗಳಾಗುವುದಕ್ಕೆ ತಕ್ಕುದಾದ ಕೌಶಲಗಳನ್ನು ಶಾಲೆಗಳು ಇನ್ನಾದರೂ ಹೇಳಿಕೊಡಬೇಕು. ಕೌಶಲಗಳು ಎಂದೊಡನೆ ಕಂಪ್ಯೂಟರ್ ತರಬೇತಿ ಕೇಂದ್ರವೊಂದನ್ನು ಶಾಲೆಯಲ್ಲಿ ಆರಂಭಿಸುವುದಲ್ಲ. ಜಗತ್ತಿನಲ್ಲಿ ಇರುವುದು ಅದೊಂದೇ ಅಲ್ಲ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೈಕಸುಬು – ಹೀಗೆ ಮರೆಯಾಗುತ್ತಿರುವ ಹತ್ತುಹಲವು ಕಸುಬುಗಳನ್ನು ಪರಿಚಯಿಸಬೇಕು. ಈ ಕಸುಬುಗಳಲ್ಲಿ ಪರಿಣತರಾದ ವಿದ್ಯಾರ್ಥಿಗಳಿಗೆ ಕೈತುಂಬ ಲಾಭಗಳಿಸುವ ಅವಕಾಶಗಳೂ ದೊರೆಯಬೇಕು.

ಎಲ್ಲರೂ ಕಂಪ್ಯೂಟರ್ ಎಂಜಿನಿಯರಿಂಗ್‌ಗೆ ಹೋಗುತ್ತಾರೆ. ‘ಸಾಫ್ಟ್‌ವೇರ್’, ‘ಅಂಡರ್ ವೇರ್’ ಎಂದು ಹಂಗಿಸುವುದು ಸುಲಭ. ಏಕೆ ಆ ಕಡೆ ವಾಲುತ್ತಿದ್ದಾರೆಂದರೆ ಅವರಿಗೆ ಸಿಗುತ್ತಿರುವ ಸಾಮಾಜಿಕ ಮನ್ನಣೆ ಹಾಗೂ ಶ್ರೀಮಂತ ಬದುಕು ಬದುಕಲು ಲಭಿಸುತ್ತಿರುವ ಆರ್ಥಿಕ ಸಂಪನ್ಮೂಲಗಳು. ಹೈನುಗಾರಿಕೆ ಅಥವಾ ಪಶುವೈದ್ಯಕೀಯ ಪದವಿ ಪಡೆದವನಿಗೆ ಆ ಬಗೆಯ ಮಾನಸಂಮಾನ ನಾವು ಕೊಡುತ್ತಿಲ್ಲ. ಇವುಗಳಿಗೂ ಅದೇ ಮಾನಸಂಮಾನ ಒದಗಿಸಿದರೆ ಖಂಡಿತಕ್ಕೂ ‘ಸಾಫ್ಟ್‌ವೇರ್ ಹುಚ್ಚು’ ಅರ್ಧಕ್ಕರ್ಧ ಕಡಿಮೆಯಾದೀತು! ಅದೇನೇ ಇರಲಿ, ವಿದ್ಯಾಭ್ಯಾಸ ಹಾಗೂ ಕೆಲಸದ ನಡುವೆ ನಾವು ಸಾಧಿಸಿರುವ ವ್ಯತ್ಯಾಸ ಹಾಗೂ ವಿರೋಧ ನಿಜವಲ್ಲ ಮತ್ತು ಅದು ಅನಾರೋಗ್ಯಕರ. ಆಂಗ್ಲ ಶಿಕ್ಷಣ ಪಡೆದವರು ಕೈ ಮೈ ಕೆಸರುಮಾಡಿಕೊಳ್ಳದೆ, ದುಡಿಮೆಮಾಡಿ ಹೆಚ್ಚು ಸಂಪಾದಿಸಬೇಕು ಹಾಗೂ ಎಬಿಸಿಡಿ ಓದದವರು ಗದ್ದೆಬೇಸಾಯ ಅಥವಾ ಕೂಲಿನಾಲಿ ಮಾಡುತ್ತಾ ರಟ್ಟೆಮುರಿದು ದುಡಿದು ಕಡಿಮೆ ಸಂಪಾದಿಸಬೇಕು ಎಂಬ ಈ ವಿಚಿತ್ರ ತರ್ಕ ನಿಜಕ್ಕೂ ಅನಾರೋಗ್ಯಕರ.

ಮುಖ್ಯವಾದ ಮಾತೆಂದರೆ – ಶಿಕ್ಷಣವ್ಯವಸ್ಥೆ ಅದು ಹೇಗೇ ಇರಲಿ, ನಾವು ಅದನ್ನು ಎಷ್ಟೇ ವಾಚಾಮಗೋಚರ ಟೀಕಿಸಲಿ,ಕಲಿಯುವವನಿಗೆ ಕಳಕಳಿ, ಕುತೂಹಲ,ಕಲಿಯುವ ಹಂಬಲ ಹಾಗೂ ವಿಕಸನದ ಬಯಕೆ ಇರಬೇಕು; ಅದಿಲ್ಲದಿದ್ದರೆ ನಮ್ಮೆಲ್ಲರ ಪ್ರಯತ್ನಗಳಿಂದ ಅವನಿಗೆ ಒಳಿತಾಗುವ ಬದಲು ಕೆಡುಕಾಗುವ ಸಂಭವವೇ ಅಧಿಕ.