ಪರೀಕ್ಷೆ ಎಂಬುದು ಶಿಕ್ಷಣ ವ್ಯವಸ್ಥೆಯ ಅನಿವಾರ್ಯ ಪೀಡೆ ಎಂದು ಎಲ್ಲರೂ ಹೇಳುತ್ತಾರೆ. ಪರೀಕ್ಷೆಗಳು ಆವಶ್ಯಕ,ಅನಿವಾರ್ಯ ಎಂಬುದಕ್ಕಿಂತ ಮಿಗಿಲಾಗಿ ಅವು ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯದ ದೃಷ್ಟಿಯಿಂದ ಸಾಕಷ್ಟು ಹಾನಿಕಾರಕ. ಅವು ಕಲಿಕೆಯ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸಿಬಿಡುತ್ತವೆ. ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಪರೀಕ್ಷೆಗಳನ್ನು ಆದಷ್ಟು ಮಟ್ಟಿಗೆ ವಸ್ತುನಿಷ್ಠವಾಗಿ ನಡೆಸುವ, ವಸ್ತುನಿಷ್ಠವಾಗಿ ನಡೆಸುವ, ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುವ ಹಾಗೂ ವಿದ್ಯಾರ್ಥಿವೃಂದಕ್ಕೂನ್ಯಾಯ ಸಲ್ಲಿಸುವ ಹಲವಾರು ಪ್ರಯತ್ನಗಳು ನಡೆದಿವೆ; ನಡೆಯುತ್ತಲೇ ಇವೆ. ‘ಇಂವ ಚಾಪೆ ಕೆಳಗೆ ತೂರಿದರೆ, ಅಂವ ರಂಗೋಲಿ ಕೆಳಗೆ ತೂರಿದ’ ಎಂಬ ಹಳೆಯ ಗಾದೆಯ ಹಾಗೆ ಎಷ್ಟೆಷ್ಟು ಸುಧಾರಣೆಗಳನ್ನು ಮಾಡಿದರೂ ಪರೀಕ್ಷಾ ಅಕ್ರಮಗಳು ಕಡಿಮೆಯಾಗುವ ಬದಲು ಹೆಚ್ಚುತ್ತಲಿವೆ. ಬೇಲಿಯೇ ಎದ್ದು ಹೊಲ ಮೇಯುವ ಪ್ರವೃತ್ತಿ ಅಧಿಕವಾಗುತ್ತಿದೆ. ಎಂಥ ನಾಚಿಕೆಗೇಡಿನ ಸಂಗತಿ ಎಂದರೆ ನಾವು ೧೪೪ ನೇ ಕಲಮು ಜಾರಿಗೊಳಿಸಿ ಪೊಲೀಸರ ನೆರಳಿನಲ್ಲಿ ವಿದ್ಯಾಲಯಗಳಲ್ಲಿ ಪ್ರಮುಖ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಪ್ರಶ್ನೆಪತ್ರಿಕೆ ಸೋರಿಕೆ, ಸಾಮೂಹಿಕ ನಕಲು, ಚೀಟಿ ವ್ಯವಹಾರ, ಪರೀಕ್ಷಾ ಭವನ ಮೇಲ್ವಿಚಾರಣೆಗೆ ಪೈಪೋಟಿ, ಉತ್ತರ ಪತ್ರಿಕೆಗಳ ಕಳವು, ಟ್ಯಾಬುಲೇಶನ್‌ನಲ್ಲಿ ಅಕ್ರಮ-ಹೀಗೆ ಪಟ್ಟಿಮಾಡುತ್ತ ವಿವರಿಸುತ್ತ ಹೋದರೆ ಪರೀಕ್ಷಾ ಅಕ್ರಮಗಳ ಬಗ್ಗೆ ಒಂದು ಉದ್ಗ್ರಂಥವನ್ನು ಬರೆಯಬೇಕಾದೀತು! ಪರೀಕ್ಷಾ ಕ್ರಮವನ್ನು ಎಷ್ಟು ಸುಧಾರಿಸಿದರೂ ಅಷ್ಟೇ; ವಸ್ತುನಿಷ್ಠ ಮೌಲ್ಯಮಾಪನ,ನಿಖರ ಮೌಲ್ಯಮಾಪನ, ಸಮರ್ಪಕ ಮೌಲ್ಯಮಾಪನ-ಇತ್ಯಾದಿಗಳೆಲ್ಲ ಕನಸಿನ ಮಾತು. ಡಾ|| ಬಿ.ಎಂ. ಹೆಗ್ಡೆ ಅವರು ಹೇಳುವ ಹಾಗೆ ಪರೀಕ್ಷೆಗಳನ್ನು ರದ್ದುಪಡಿಸಲು ಸಾಧ್ಯವಾದರೆ?

ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಪರೀಕ್ಷೆ ಅವಶ್ಯಕವಿರಬಹುದು. ಉದಾಹರಣೆಗೆ, ಒಲಿಂಪಿಕ್ಸ್‌ ಪಂದ್ಯಾಟಗಳಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ಓಟಗಾರ ನಿರ್ದಿಷ್ಟ ಮಾನದಂಡಕ್ಕೆ ತಕ್ಕಂಥ ನಿರ್ವಹಣೆಯನ್ನು ಮಾಡಿರಬೇಕು. ಒಂಬತ್ತರಿಂದ ಹತ್ತು ಹನ್ನೊಂದು ಸೆಕೆಂಡ್‌ಗಳ ಅವಧಿಯಲ್ಲಿ ಓಡುವ ಸಾಮರ್ಥ್ಯ, ದಾಖಲೆ ಓಟಗಾರನಿಗೆ ಇರಬೇಕು; ಇಲ್ಲವಾದರೆ ಆತ ಒಲಿಂಪಿಕ್ಸ್‌ನಲ್ಲಿ ಓಡಲು ಅನರ್ಹನಾಗುತ್ತಾನೆ. ಒಂದು ಯಂತ್ರವನ್ನು ಕೊಂಡುಕೊಳ್ಳುವ ಮೊದಲು ನಾವು ಅದರ ಪರೀಕ್ಷೆ ಮಾಡುತ್ತೇವೆ. ಅಥವಾ ಮಾರಾಟ ಪ್ರತಿನಿಧಿ ನಮ್ಮ ಮುಂದೆ ಅದನ್ನು ವಿವಿಧ ಪರೀಕ್ಷೆಗಳಿಗೆ ಒಡ್ಡಿ ನಮಗೆ ತೃಪ್ತಿಯಾದರೆ ಆ ವಸ್ತುವನ್ನು ನಮಗೆ ಆತ ಮಾರಾಟ ಮಾಡುತ್ತಾನೆ.

ಶಾಲಾ ಶಿಕ್ಷಕರಾಗಬೇಕಾದರೆ ಪದವಿ ಹಂತದವರೆಗೆ ವ್ಯಾಸಂಗ ಮಾಡಿರಬೇಕು. ನಿಗದಿತ ವಿಷಯದ್ಲಿ ಬಿ.ಎಡ್‌. ಪದವಿ ಗಳಿಸಿರಬೇಕು. ಈ ಅರ್ಹತೆಗಳನ್ನು ಗಳಿಸಿದವರು ಮಾತ್ರವೇ ಆಯ್ಕೆಗೆ ಅರ್ಹರು. ಇಂಥದ್ದೇ ಪರೀಕ್ಷೆಗಳನ್ನು ಮಾಡಿ ವ್ಯಕ್ತಿಗಳು ತಮ್ಮ ಪ್ರಗತಿ-ಸಾಧನೆಯನ್ನು ಬೆಲೆಕಟ್ಟಲು ನೋಡುತ್ತಾರೆ. ಉದಾಹರಣೆಗೆ, ಓರ್ವ ವೇಗದ ಬೌಲರ್ ‘ಬೌಲಿಂಗ್‌ ಯಂತ್ರ’ದ ಮುಂದೆ ವೇಗವಾಗಿ ಬೌಲಿಂಗ್‌ ಮಾಡಿ ತನ್ನ ಓಟ, ಅದರ ಲಯಬದ್ಧತೆ, ಚೆಂಡನ್ನು ಕೈಬಿಡುವ ಮುನ್ನ ನೀಡುವ ನೆಗೆತ ಇತ್ಯಾದಿಯನ್ನು ಗಮನಿಸುತ್ತಾನೆ. ಟೆನಿಸ್‌ ಆಟಗಾರ ವೇಗವಾಗಿ ಸರ್ವ್ ಮಾಡಿ ‘ಏಸ್‌’ ಎಸೆಯಲು ಅಭ್ಯಾಸಮಾಡುತ್ತಾನೆ. ಒಟ್ಟಿನಲ್ಲಿ ಎಲ್ಲ ಬಗೆಯ ಅಭ್ಯಾಸಗಳಲ್ಲಿ ಕಲಿಯುವ ವ್ಯಕ್ತಿ ತನ್ನ ತಿಳಿವಳಿಕೆ ಹಾಗೂ ಕೌಶಲಗಳನ್ನು ತಾನೆ ಪಣಕ್ಕೊಡ್ಡಿ ಪರಿಶೀಲಿಸಿ ಬೆಲೆಕಟ್ಟುತ್ತಾನಲ್ಲವೆ?

ಆದರೆ ನಮ್ಮ ಶಾಲೆಗಳಲ್ಲಿ ನಡೆಯುವ ಪರೀಕ್ಷೆ ಈ ಬಗೆಯದ್ದಂತೂ ಅಲ್ಲ! ವಿದ್ಯಾರ್ಥಿಗಳು ಕೆಲವೊಂದು ಚಟುವಟಿಕೆಗಳನ್ನು ಸಮರ್ಥವಾಗಿ ಮಾಡಬಲ್ಲರು ಅಥವಾ ತಮ್ಮ ಸಾಮರ್ಥ್ಯಗಳನ್ನು ಪೂರ್ಣವಾಗಿ ಪ್ರಕಟಿಸಬಲ್ಲರು ಎಂದು ಜಾಹೀರುಪಡಿಸಲಿಕ್ಕಾಗಿ ಪರೀಕ್ಷೆ ನಡೆಸಲಾಗುತ್ತಿಲ್ಲ. ಬೇರೆಬೇರೆ ಉದ್ದೇಶಗಳಿಗಾಗಿ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮಕ್ಕಳು ಏನನ್ನು ಕಲಿತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಹಾಗೆ ನಂಬಲು ನಾವು ಶಿಕ್ಷಕರು ಪರೀಕ್ಷೆಯನ್ನು ನಡೆಸುತ್ತಿದ್ದೇವೆ ಎಂದು ಸಾರ್ವಜನಿಕರಿಗೆ ತಿಳಿಸುತ್ತೇವೆ. ಮಕ್ಕಳು ಏನನ್ನು ಕಲಿತಿದ್ದಾರೆ ಎಂಬುದನ್ನು ತಿಳಿದುಕೊಂಡು ಅವರು ಇನ್ನೂ ಚೆನ್ನಾಗಿ ಕಲಿಯಲು ಮತ್ತು ಇನ್ನೂ ಹೆಚ್ಚಿಗೆ ಕಲಿಯುವುದಕ್ಕೆ ಸಹಕರಿಸಲು ಶಿಕ್ಷಕರು ಪರೀಕ್ಷಿಸುತ್ತಾರೆ ಎಂದು ಹೇಳಲಾಗುತ್ತದೆ. ಇದು ಪಾರ್ಶ್ವ ಸತ್ಯ.

ವಿದ್ಯಾರ್ಥಿಗಳನ್ನು ಏಕೆ ಪರೀಕ್ಷಿಸುತ್ತಾರೆ ಗೊತ್ತಾ? ತಾವು ತರಗತಿಗಳಲ್ಲಿ ಏನು ಮಾಡಿದ್ದಾರೋ ಅದನ್ನು ವಿದ್ಯಾರ್ಥಿಗಳು ಮಾಡಬೇಕಲು ಎಂದು ಬೆದರಿಸಲು ಪರೀಕ್ಷೆ ನಡೆಸುತ್ತಾರೆ. “ನಾನು ಏನು ಉತ್ತರ ಬರೆಸಿದ್ದೇನೆ ಅದನ್ನು ಬರೆಯಬೇಕು,ನಿಮ್ಮ ಸ್ವಂತ ಉತ್ತರ ಬರೆದರೆ ನಾನು ಮಾರ್ಕ್ ಕೊಡುವುದಿಲ್ಲ” ಎಂದು ಶಿಕ್ಷಕರು ಮೊದಲಿಗೇ ಮಕ್ಕಳನ್ನು ಬೆದರಿಸುತ್ತರೆ. “ನಿಮಗೆ ತುಂಬ ತುಂಬ ಮಾರ್ಕ್ಸ್ ಕೊಟ್ಟರೆ ನೀವು ಪಬ್ಲಿಕ್‌ ಪರೀಕ್ಷೆಯನ್ನು ಹಗುರವಾಗಿ ತೆಗೆದುಕೊಳ್ಳುತ್ತೀರಿ. ಅದಕ್ಕೆ ಕಷ್ಟದ ಪ್ರಶ್ನೆಗಳನ್ನು ಕೇಳುತ್ತೇನೆ ಮತ್ತು ಕಡಿಮೆ ಅಂಕಗಳನ್ನು ಕೊಡುತ್ತೇನೆ. ಈ ಭಯದಿಂದಲಾದರೂ ನೀವು ಚೆನ್ನಾಗಿ ಅಭ್ಯಾಸ ಮಾಡುತ್ತೀರಿ.” ವಿದ್ಯಾರ್ಥಿಯನ್ನು ಬೆದರಿಸಿ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಶಿಕ್ಷಕರು ಪರೀಕ್ಷೆ ನಡೆಸುತ್ತಾರೆ. ಎರಡನೆಯದು-ಇತರ ಎಲ್ಲ ನಿರ್ಬಂಧಾತ್ಮಕ ದಮನಕಾರಿ ವ್ಯವಸ್ಥೆಗಳು ಕ್ರಿಯಾಶೀಲವಾಗಿರುವ ರೀತಿಯಲ್ಲೇ ಶಿಕ್ಷಣ ವ್ಯವಸ್ಥೆಯೂ ಕ್ರಿಯಾಶೀಲವಾಗಿದೆ. ಈ ವ್ಯವಸ್ಥೆಯಲ್ಲಿ ಪರೀಕ್ಷೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಶಿಕ್ಷೆ ನೀಡಲಾಗುತ್ತದೆ. ಅತಿಹೆಚ್ಚು ಅಂಕ ಗಳಿಸಿದವರಿಗೆ ಶಹಭಾಷ್‌ಗಿರಿ , ಬಹುಮಾನ. ಕಡಿಮೆ ಅಂಕ ಗಳಿಸಿದವರಿಗೆ ಬೈಗುಳ, ಪೆಟ್ಟು, ಅವಮಾನ.ಪರೀಕ್ಷೆಯು ವಿದ್ಯಾರ್ಥಿಗಳ ಮನದಲ್ಲಿ ಭಯದ ಬೀಜ ಬಿತ್ತಿ ಅವರು ಅಧಿಕ ಅಂಕಗಳಿಗಾಗಿ ಹಪಹಪಿಸುವಂತೆ ಮಾಡುತ್ತದೆ.

ಇಂಥ ಒಂದು ಪರೀಕ್ಷಾ ವ್ಯವಸ್ಥೆ ಅವಶ್ಯಕವೂ ಅನಿವಾರ್ಯವೂ ಆಗಿರಬಹುದು. ಪರೀಕ್ಷೆಯ ಭಯ ಹುಟ್ಟಿಸುವ ಮೂಲಕ ಮಕ್ಕಳು ನಿಗದಿಪಡಿಸಿದ ವಿಷಯಗಳನ್ನು ಕಲಿಯುತ್ತಾರೆ. ಹೀಗೆ ಮಾಡುವುದು ಶಿಕ್ಷಕರ ಕರ್ತವ್ಯವಿದ್ದೀತು. ಮಕ್ಕಳು ಏನನ್ನು ಕಲಿಯಬೇಕೆಂದು ನಾವು ನಿರ್ಧರಿಸಿ ಅವರ ಹೆಗಲಮೇಲಿರಿಸಿದ್ದೇವೋ ಅದನ್ನು ಅವರು ಕಲಿಯುವಂಥೆ ಮಾಡಲು ಅವರ ಯಶಸ್ಸು ಹಾಗೂ ವೈಫಲ್ಯವನ್ನು ಹೊಂದಿಕೊಂಡು ಪುರಸ್ಕಾರ ಹಾಗೂ ಶಿಕ್ಷೆ ನೀಡುವ ವ್ಯವಸ್ಥೆ ಬೇಕಾದೀತು. ಶಾಲೆಗಳಲ್ಲಿ ಪರೀಕ್ಷೆಗಳನ್ನು ನಡೆಸುವುದು ಮುಖ್ಯವಾಗಿ ಈ ಉದ್ದೇಶಗಳಿಗಾಗಿ.ಕಲಿಯಲು, ಚೆನ್ನಾಗಿ ಕಲಿಯಲು, ಜ್ಞಾನಸಂಪಾದನೆ ಮಾಡಲು, ಸಾಮರ್ಥ್ಯ ಹಾಗೂ ಕೌಶಲವನ್ನು ಕರಗತ ಮಾಡಲು ಎಂಬುದೆಲ್ಲ ಬೊಗಳೆ; ಅಷ್ಟೊಂದು ನಿಜವಲ್ಲದ ಸಂಗತಿಗಳು.

ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆ ಮಾಡಿದರೂ ಬೋಧನೆ-ಕಲಿಕೆಯ ಗುಣಮಟ್ಟ ಮೌಲ್ಯಮಾಪನದ ಕಾರ್ಯದಲ್ಲಿ ಅವು ಸಹಕಾರಿ ಎಂದು ಅನೇಕರು ಭಾವಿಸುತ್ತಾರೆ. ಪರೀಕ್ಷೆಗಳು ಹೆಚ್ಚು ಹೆಚ್ಚು ಭಯವನ್ನು ಸೃಷ್ಟಿಸಿದಷ್ಟೂ ಕಡಿಮೆ ಕಡಿಮೆ ಪ್ರಮಾಣದಲ್ಲಿ ಅವು ಕಲಿಕೆಯ ಕ್ರಿಯೆಯನ್ನು ಬೆಲೆಕಟ್ಟುತ್ತವೆ. ಮೇಲಾಗಿ ಅವು ಕಲಿಕೆಯ ಕ್ರಿಯೆಯನ್ನು ಚುರುಕುಗೊಳಿಸುವಲ್ಲಿ ಯಾವುದೇ ಬಗೆಯ ಉತ್ತೇಜನ ನೀಡಲಾರವು.ಕಾರಣ ಬಹಳ ಸ್ಪಷ್ಟ. ಅಧ್ಯಾಪಕರು ಪರೀಕ್ಷೆಗಳ ಮೂಲಕ ನಮ್ಮನ್ನು ಪರೀಕ್ಷಿಸಲು ಹೊರಟಿದ್ದಾರೆ ಅಂದ ಕೂಡಲೆ ವಿದ್ಯಾರ್ಥಿಗಳು ಪಠ್ಯವಿಷಯವನ್ನು ಸರಿಯಾಗಿ ಅಧ್ಯಯನ ಮಾಡದೆ ಪರೀಕ್ಷಕನ ಮನಸ್ಸಿನಲ್ಲಿ ಏನಿದೆ? ಆತ ನಮ್ಮನ್ನು ಹೇಗೆಲ್ಲ ಪರೀಕ್ಷಿಸಬಹುದು? ಹಿಂದೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಿದ್ದ? ಈತ ಕಡುಕೋಪಿಯೇ ಕರುಣಿಯೇ ಎಂದು ಆತನ ಕಡೆಗೆ ಹೆಚ್ಚಿನ ಲಕ್ಷ್ಯ ನೀಡುತ್ತಾರೆ. “ಈ ವಿಷಯದ ಅಧ್ಯಾಪಕರು ತಲೆತಿರುಕ ಪ್ರಶ್ನೆ ಕೇಳ್ತಾರೆ. ಎಲ್ಲೆಲ್ಲಿಂದಲೋ ಪ್ರಶ್ನೆಗಳನ್ನು ಆಯ್ದುಕೊಳ್ತಾರೆ. ಕ್ಲಿಷ್ಟ ವಿಷಯಗಳ ಮೇಲೆ ಕ್ಲಿಷ್ಟವಾದ ಪ್ರಶ್ನೆಗಳನ್ನು ಕೇಳ್ತಾರೆ. ಈ ವಿಷಯದಲ್ಲಿ ಫೈಲಾಗುವುದೇ ಹೆಚ್ಚು. ನಮ್ಮನ್ನು ಪೇಚಿಗೆ ಸಿಲುಕಿಸುವ ಪ್ರಶ್ನೆಗಳೇ ಹೆಚ್ಚು” ಎಂದೆಲ್ಲ ವಿದ್ಯಾರ್ಥಿಗಳು ಯೋಚಿಸುತ್ತಾರೆ. “ಇಂಥ ಒಬ್ಬ ವ್ಯಕ್ತಿ ಪ್ರಶ್ನೆಪತ್ರಿಕೆ ತಯಾರಿ ಮಾಡದಿರಲಿ ದೇವರೆ” ಎಂದು ಪ್ರಾರ್ಥಿಸುತ್ತಾರೆ. ತಮ್ಮ ಅಧ್ಯಯನಕ್ಕಿಂತ ಮಿಗಿಲಾಗಿ “ಈ ಸಲ ಸುಲಭದ ಪ್ರಶ್ನೆಗಳೇ ಬರಲಿ” ಎಂದು ಹರಕೆ ಹೊರುತ್ತಾರೆ! ಹೀಗಾಗಿ ಕಲಿಕೆಯ ಕ್ರಿಯೆ ಮರೆಯಾಗುತ್ತದೆ . ಸೂತ್ರ, ಟಿಪ್ಪಣಿ, ಗೈಡ್‌, ಸಿದ್ಧ ಉತ್ತರಗಳ ಪುಸ್ತಕ, ಅಧ್ಯಾಯಗಳ ಆಯ್ಕೆ, ಪ್ರಶ್ನೆಪತ್ರಿಕೆಗಳ ಹುಡುಕಾಟ ಶುರುವಾಗುತ್ತದೆ . ಪರೀಕ್ಷೆಗಳನ್ನು ಶಪಿಸುವ ಪರಿ ಆರಂಭವಾಗುತ್ತದೆ.

ಪರೀಕ್ಷೆಗಳ ದೆಸೆಯಿಂದಾಗಿ ಇಂದು ವಿಷಯಗಳಲ್ಲಿ ಕಲಿಕೆ ಮೂಲೆ ಸೇರಿದೆ. ಪರೀಕ್ಷಾ ಕೇಂದ್ರಿತ ಬೋಧನೆಯಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುವುದನ್ನು ಕಲಿಕೆ ಎಂದು ಭ್ರಮಿಸಿದ್ದಾರೆ. ಕಾಲೇಜುಗಳಲ್ಲಿ ಅನೇಕ ವಿದ್ಯಾರ್ಥಿಗಳು ಆರಂಭದ ದಿನದಿಂದಲೇ ಗ್ರಂಥಾಲಯಕ್ಕೆ ಹೋಗಿ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬರೆದುಕೊಳ್ಳಲು, ಸಂಭಾವ್ಯ ಪ್ರಶ್ನೆಗಳನ್ನು ಗುರುತುಹಾಕಿಕೊಳ್ಳು ಶುರುಮಾಡುತ್ತಾರೆ. ಈಗೀಗಲಂತೂ ಪ್ರತಿಯೊಂದು ಶಿಕ್ಷಣ ಸಂಸ್ಥೆಯವರೂ ಪರೀಕ್ಷಾಭಯ  ಹೋಗಲಾಡಿಸುವುದು ಹೇಗೆ? ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ಎಂಬ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿದ್ದಾರೆ. ಭದ್ರವಾದ ಕಲಿಕೆಯ ಮೂಲಕ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆ ಎಂಬ ಮಾತನ್ನು ಗುಡಿಸಿ ಎಸೆಯಲಾಗಿದೆ; ಇಲ್ಲವಾದರೆ ಪರೀಕ್ಷೆ ಎದುರಿಸುವುದು ಎಂದರೇನು? ಅದೇನು ಶತ್ರುವೇ? ಯುದ್ಧವೇ? ನಾವು ಮೊದಲಿನಿಂದಲೂ ಈ ಬಗೆಯ ಭಯವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ್ದೇವೆ. ಅದೊಂದು ಯುದ್ಧ ಎಂಬಂತೆ ಬಿಂಬಿಸುತ್ತಿದ್ದೇವೆ. ಹೀಗಾಗಿ ಎದುರಿಸುವುದು, ಹೋರಾಡುವುದು, ಗೆಲ್ಲುವುದು ಮುಖ್ಯವಾಗಿದೆ. ನಿಜವಾದ ಕಲಿಕೆ ಶೂನ್ಯವಾಗಿದೆ!

ಪರೀಕ್ಷೆ ಎಂಬುದು ಇಲಿಬೋನು, ಖೆಡ್ಡಾ; ಅಂತೆಯೇ ಪರೀಕ್ಷಕ ಓರ್ವ ಶತ್ರು, ಭಯೋತ್ಪಾದಕ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಾವು ಶಾಲೆ ಕಾಲೇಜುಗಳಲ್ಲಿ ಎಷ್ಟೋ ಸಲ ಈ ಮಾತು ಕೇಳಿದ್ದೇವೆ. “ಈ ವರ್ಷ ನೀವು ಹೇಗೆ ಪಾಸಾಗ್ತೀರಿ ಅಂತ ನಾನೂ ನೋಢ್ತೇನೆ. ಕಠಿಣವಾದ ಪ್ರಶ್ನೆಪತ್ರಿಕೆ ತಯಾರಿಸಿ ನಿಮ್ಮನ್ನೆಲ್ಲ ಫೈಲ್‌ ಮಾಡಿಬಿಡ್ತೀನಿ” ಅಂತ ಕೆಲವು ಶಿಕ್ಷಕರು ಹೆದರಿಸ್ತಾರೆ. “ಹೋದ ವರ್ಷ ಗಣಿತ ಪೇಪರ್ ತುಂಬ ಕಷ್ಟ ಇತ್ತು. ಈ ವರ್ಷವೂ ಹಾಗೆ ಆಗಬಹುದು. ನಿಮ್ಮಲ್ಲಿ ಕೆಲವರು ಪಾಸಾಗಲಿಕ್ಕಿಲ್ಲ. ನಾನು ಬೇಕಿದ್ದರೆ ಬರೆದುಕೊಡ್ತೇನೆ” ಅಂತ ಶಿಕ್ಷಕರು ಆರಂಭದಲ್ಲೆ ಘೋಷಣೆ ಮಾಡಿಬಿಡುತ್ತಾರೆ. ಕ್ಲಿಷ್ಟವಾದ ಪ್ರಶ್ನೆಗಳ ಮೂಲಕ ಮಕ್ಕಳನ್ನು ಬೋನಿಗೆ ಬೀಳಿಸುವುದು ಅಧ್ಯಾಪಕರ ಕಾರ್ಯಭಾರವೆಂಬಂತಾಗಿದೆ. ಅಂತೆಯೇ ಅಧ್ಯಾಪಕರು ಯಾವ್ಯಾವ ರೀತಿ ಪ್ರಶ್ನೆ ಕೇಳಬಹುದು ಅಂತ ಊಹಿಸುವುದು ವಿದ್ಯಾರ್ಥಿಯ ಕಲಿಕೆ ಎಂಬ ಸ್ಥಿತಿ ನಿರ್ಮಾಣವಾಗಿರುವುದು ತುಂಬ ಶೋಚನೀಯ.

ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ನಿಜವಾದ ಕಲಿಕೆಯ ಪ್ರಗತಿಯ ತೋರು ಬೆರಳಾಗುವುದಕ್ಕೆ ಬದಲಾಗಿ ಅವರಲ್ಲಿ ಹೆದರಿಕೆಯ ಅಲೆಗಳನ್ನು ಎಬ್ಬಿಸುತ್ತಿರುವುದರಿಂದಲೆ ಪರೀಕ್ಷಾ ವ್ಯವಸ್ಥೆಯನ್ನು ಮೀರಿಸುವಂತೆ, ಅದನ್ನು ಬುಡಮೇಲು ಮಾಡುವ ರೀತಿಯಲ್ಲಿ ಮೋಸ, ವಂಚನೆ, ಅಕ್ರಮಗಳು ನಡೆಯುತ್ತಿವೆ. ಈ ಅಕ್ರಮಗಳು ಕೇವಲ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಮಾತ್ರವೇ ನಡೆಯುತ್ತಿರುವುದಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಮಾತ್ರವೇ ಅಲ್ಲ, ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ಹಾಗೂ ಪ್ರತಿಷ್ಠಿತ ಶಾಲೆಗಳಲ್ಲೂ ಈಗೀಗ ಪರೀಕ್ಷಾ ಅಕ್ರಮಗಳು ಹೆಚ್ಚಿವೆ. ೨೦೧೦ರ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕೊಠಡಿ ಪರಿಶೀಲನೆಗೆ ಗಣಿತ ಪರೀಕ್ಷೆಯ ಸಂದರ್ಭದಲ್ಲಿ ವಿಶೇಷ ವ್ಯಕ್ತಿಯೊಬ್ಬನನ್ನು ನೇಮಿಸಿ ಬುದ್ಧಿವಂತ ವಿದ್ಯಾರ್ಥಿನಿ ಸರಿಯಾಗಿ ಬರೆದ ಉತ್ತರ ಪತ್ರಿಕೆಯನ್ನು ಕಸಿದುಕೊಂಡು ಅದನ್ನು ಪರೀಕ್ಷಾ ಭವನದಲ್ಲಿರುವ ಇತರ ವಿದ್ಯಾರ್ಥಿಗಳು ನಕಲು ತೆಗೆಯಲು ಈ ವಿಶೇಷ ಪರಿವೀಕ್ಷಕ ವ್ಯವಸ್ಥೆ ಮಾಡಿದ್ದ. ಉತ್ತರಪತ್ರಿಕೆಯಲ್ಲಿ ಹುಡುಗಿಗೆ ಉತ್ತರ ಬರೆಯಲು ಸಮಯಾವಕಾಶ ಇರಲಿಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಪರೀಕ್ಷಾ ಮಂಡಳಿ ಅಧ್ಯಕ್ಷರು ನಮಗೆ ದೂರು ಬಂದಿಲ್ಲ ಎಂದು ಕೈತೊಳೆದುಕೊಂಡರು. ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಈ ಇಬ್ಬರಿಗೂ ತನಿಖೆ ನಡೆಸುವ ನೈತಿಕತೆ ಇಲ್ಲದೆ ಹೋಯಿತೇ?

ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಬೋಧನ ಸಾಮರ್ಥ್ಯವನ್ನು ಯಾವುದೇ ಪ್ರಮಾಣೀಕೃತ ಪರೀಕ್ಷೆ ಮೂಲಕ ಅಳೆಯುತ್ತಿಲ್ಲ. ಅದಕ್ಕೆ ಬದಲಾಗಿ ಅವರು ಕಲಿಸುವ ವಿಷಯದಲ್ಲಿ ಪಬ್ಲಿಕ್‌ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣವನ್ನು ಆಧರಿಸಿ ದಕ್ಷತೆಯನ್ನು ಅಳೆಯಲಾಗುತ್ತದೆ. ಖಾಸಗಿ ಶಿಕ್ಷಣಸಂಸ್ಥೆಗಳಲ್ಲಂತೂ ಈ ಹಾವಳಿ ಅಧಿಕ, ಗಣಿತ, ವಿಜ್ಞಾನ, ಇಂಗ್ಲಿಷ್‌ ಇತ್ಯಾದಿ ವಿಷಯಗಳಲ್ಲಿ ಮಕ್ಕಳು ಸಾಮಾನ್ಯವಾಗಿ ಅನುತ್ತೀರ್ಣರಾಗುತ್ತಾರೆ. ಸಹಜವಾಗಿ ಈ ಮೇಲೆ ಹೇಳಿದ ಶಿಕ್ಷಕರು ಪಡಿಪಾಟಲು ಅನುಭವಿಸುತ್ತಾರೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಹಿಂದೆಬಿದ್ದಿಲ್ಲ. ಗಣಿತದಲ್ಲಿ ಶೇಕಡ ೪೦ ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಸಂಬಂಧಪಟ್ಟ ಶಾಲೆಯ ಗಣಿತ ಶಿಕ್ಷಕರ ಮುಂಬಡ್ತಿ ತಡೆಹಿಡಿತ, ಕಲಿಸಿದ್ದೆಲ್ಲವೂ ಉತ್ತಮ ಅಂಕಗಳಾಗಿ ಪರಿವರ್ತಿತವಾಗಬೇಕೆಂಬ ತಪ್ಪು ಧೋರಣೆ ಹಲವು ಶಿಕ್ಷಕರಿಗೆ ಮುಳುವಾಗಿದೆ. ಹೀಗಾಗಿ ಸ್ವತಃ ಶಿಕ್ಷಕರೇ ಪರೀಕ್ಷಾ ಅಕ್ರಮಗಳಲ್ಲಿ ಉತ್ಸಾಹದಿಂದ ತೊಡಗುತ್ತಾರೆ. ವಿದ್ಯಾರ್ಥಿಗಳಿಗೂ ನಕಲು ತೆಗೆಯಲು, ಚೀಟಿ ತರಲು ಹುರಿದುಂಬಿಸುತ್ತಾರೆ. ಪರೀಕ್ಷಾಭವನದಲ್ಲಿ ಯಾರಾದರೂ ಕದ್ದುಮುಚ್ಚಿ ಉತ್ತರ ಬರೆಯುತ್ತಿದ್ದರೆ, ನಕಲು ಮಾಡುತ್ತಿದ್ದರೆ, ಎದುರಿಗೆ ಪುಸ್ತಕ ಇಟ್ಟುಕೊಂಡು ಬರೆಯುತ್ತಿದ್ದರೆ ಇವರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತರೆ! ಹೆತ್ತವರು ಕೂಡ ಈ ಅಕ್ರಮ ದಂಧೆಗೆ ಬೆಂಬಲವಾಗಿದ್ದಾರೆ.ದ ‘ಸರಿಯಾದ ದಾರಿಯಲ್ಲಿ ನಡೆಯಿರಿ’ ಎಂದು ಬುದ್ಧಿ ಹೇಳಬೇಕಾದ ಹೆತ್ತವರೇ ಪರೀಕ್ಷಾ ಭವನದ ಹೊರಗೆ ಘೇರಾಯಿಸಿ ಉತ್ತರ ಚೀಟಿಯನ್ನು ಸರಬರಾಜು ಮಾಡುತ್ತಾರೆ.  ಸಹಕಾರಿಯಾದ ಪರಿವೀಕ್ಷಕರಿಗೆ ಒಳ್ಳೆಯ ಕೊಡುಗೆಗಳನ್ನು ನೀಡುತ್ತಾರೆ. ಪೊಲೀಸರು ತಪಾಸಣಾಧಿಕಾರಿಗಳು ಪರೀಕ್ಷಾಕೇಂದ್ರದ ಬಳಿ ಸುಳಿಯದಂತೆ ನೋಡಿಕೊಳ್ಳುತ್ತಾರೆ!

ಈ ಹೊತ್ತು ನಮ್ಮ ಕಣ್ಮುಂದೆ ಬರುವ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದ ಲೆಕ್ಕಾಚಾರದಲ್ಲಿ ಮಹಾಬುದ್ಧಿವಂತರು. ೭೫ರ ಮೇಲೆ ಅಂಕ ಗಳಿಸುವವರು ಶೇಕಡ ೮೦-೭೫ ರಷ್ಟಿದ್ದಾರೆ! ಸಂತೋಷ. ಆದರೆ ಇವರ ಆಲೋಚನೆ, ಅಭಿವ್ಯಕ್ತಿ, ಆಸಕ್ತಿ ಹಾಗೂ ಮೌಲ್ಯಪ್ರಜ್ಞೆ ಹೇಗಿದೆ? ಒಂದೆರಡು ನಿದರ್ಶನ ಗಮನಿಸಿ. ನನ್ನ ಕಾಲೇಜಿನ ಬಿ.ಎಡ್‌. ಹಂತದ ವಿದ್ಯಾರ್ಥಿಗಳ ಮಾತು ಹಾಗೂ ಬರೆವಣಿಗೆಯನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಈಗೀಗ ಬರುತ್ತಿರುವ ವಿದ್ಯಾರ್ಥಿಶಿಕ್ಷಕರು ತಮ್ಮಷ್ಟಕ್ಕೆ ಗುಂಪಿನಲ್ಲಿ ಎಷ್ಟು ಹೊತ್ತು ಬೇಕಾದರೂ ಹರಟೆ ಹೊಡೀತಾರೆ. ಆದರೆ ವೇದಿಕೆ ಏರಿ ಐದು ನಿಮಿಷ ಕೂಡ ಮಾತಾಡಲಾರರು. ಕೇವಲ ಒಂದು ನಿಮಿಷದಲ್ಲಿ ೩-೪ ವಾಕ್ಯ ಮಾತಾಡಿ ‘ಇದು ಚೆನ್ನಾಗಿದೆ. ಒಳ್ಳೆಯ ಕಾರ್ಯಕ್ರಮ’ ಎಂದಷ್ಟೇ ಹೇಳಿ ಮಾತು ಮುಗಿಸುತ್ತಾರೆ. ಉಪ್ಪು ಇಲ್ಲ. ಚಪ್ಪೆ ಇಲ್ಲ. ಬರೆವಣಿಗೆಗೆ ಬಂದರೆ ಅನೇಕರಿಗೆ ಸರಿಯಾಗಿ ರಜೆ ಅರ್ಜಿ ಬರೆಯುವುದೂ ಗೊತ್ತಿಲ್ಲ.ಕನ್ನಡ ಅಕ್ಷರಗಳ ಸರಿಯಾದ ಪರಿಜ್ಞಾನವಿಲ್ಲ. ಇಂಗ್ಲಿಷ್‌ ಅಂತೂ ಕೇಳುವುದೇ ಬೇಡ! ಹಾಗಿದ್ದರೆ ಹತ್ತು ಹದಿನೈದು ವರ್ಷಗಳ ಕಾಲ ಕಲಿತ ಭಾಷೆ ಎಲ್ಲಿಹೋಯಿತು? ಕಲಿತದ್ದೇನು? ಒಂದು ಅಂಕ, ಎರಡು ಅಂಕದ ಪ್ರಶ್ನೆಗಳಿಗೆ ಉತ್ತರ ಬರೆದು ಪಾಸಾಗಿ ಬಂದವರೇ ಇವರು! ವರ್ಣನಾತ್ಮಕ ಶಕ್ತಿಯಿಲ್ಲದ ಅಭಿವ್ಯಕ್ತಿ ಸಾಮರ್ಥ್ಯ ಕುಗ್ಗಿರುವ ಇವರು ಅಧ್ಯಾಪಕರಾಗುವುದೆಂತು? ಹಾಗಾದರೆ ಶಾಲೆಗಳಲ್ಲಿ ನಾವು ನಿಜಕ್ಕೂ ಇವರಿಗೆ ಕಲಿಸದ್ದೇನು? ಶಾಲೆಗಳಲ್ಲಿ ನಾವು ಶಿಕ್ಷಕರು ಭಾಷಾ ಸಾಮರ್ಥ್ಯಗಳು, ವೈಜ್ಞಾನಿಕ ಚಿಂತನಕ್ರಮ ಇತ್ಯಾದಿ ಮೌಲ್ಯಗಳಿಗೆ ತಿಲಾಂಜಲಿಯಿತ್ತು ಅಂಕಗಳಿಕೆಗಾಗಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದೇವೆ. ಹೆತ್ತವರಿಗೆ ಬೇಕಾದದ್ದೂ ಇದೆ. ವಿದ್ಯಾರ್ಥಿಗಳು ಶಿಕ್ಷಕರು ಕೊಟ್ಟ ಟಿಪ್ಪಣಿಗಳನ್ನು ಪ್ರಶ್ನೋತ್ತರಗಳನ್ನು ಬಾಯಿಪಾಠಮಾಡಿ ಒಪ್ಪಿಸಿ ಅಂಕಗಳಿಸಿದ್ದಾರಷ್ಟೇ. ಇದೊಂದು ಬಗೆಯಲ್ಲಿ ಕಲಿಕಗೆಗ ಮಾಡಿದ ದ್ರೋಹವಲ್ಲವೆ?

ಯಾರ ಮೇಲು? ಯಾರು ಕೀಳು? ಎಂಬುದನ್ನು ಎಲ್ಲಿಯವರೆಗೆ ನಮ್ಮ ಪರೀಕ್ಷೆಗಳು ತೀರ್ಮಾನಿಸುತ್ತವೋ ಅಲ್ಲಿಯತನಕ ಅವು ಮಿಕ ಹಿಡಿಯಲು ಹಾಕಿದ ಬಲೆಯೇ ಸರಿ. ಇಂಗ್ಲೆಡಿನ ಮಾಜಿ ಪ್ರಧಾನಿ ಚರ್ಚಿಲರ ಪ್ರಕಾರ ಅವರಿಗೇನು ತಿಳಿದಿದೆ ಎಂಬುದರ ಬಗ್ಗೆ ಅವರ ಶಿಕ್ಷಕರಿಗೆ ಕಾಳಜಿಯಿರಲಿಲ್ಲವಂತೆ; ಬದಲಾಗಿ ಏನು ಗೊತ್ತಿಲ್ಲ ಎಂಬುದನ್ನು ಪತ್ತೆಹಚ್ಚುವುದೇ ಅವರ ಮುಖ್ಯ ಕರ್ತವ್ಯವಾಗಿತ್ತಂತೆ. ಕಾಳನ್ನು ಜೊಳ್ಳಿನಿಂದ ಪ್ರತ್ಯೇಕಿಸುವ, ಕುರಿಯನ್ನು ಆಡಿನಿಂಧ ಪ್ರತ್ಯೇಕಿಸುವಂಥ ವ್ಯವಸ್ಥೆಗೆ ಇದು ಬೇಕು. ಇದಕ್ಕಿಂತ ಮಿಗಿಲಾಗಿ ಪರೀಕ್ಷೆಗಳು ನಿಧಾನಗತಿಯಲ್ಲಿ ಕಾರ್ಯವೆಸಗಿದ ವಿದ್ಯಾರ್ಥಿಗಳನ್ನು ಶಿಕ್ಷಿಸುತ್ತವೆ. ಎಲ್ಲವನ್ನೂ ಚೆನ್ನಾಗಿ ಓದಿಕೊಂಡ ವಿದ್ಯಾರ್ಥಿಗಳಿಗೆ ಎಷ್ಟೋ ಸಲ ಉತ್ತಮ ಅಂಕಗಳು ದೊರೆಯುವುದಿಲ್ಲ. ಆದರೆ ಸಂಭಾವ್ಯ ಪ್ರಶ್ನೆಗಳೇನಿರಬಹುದು? ಹೇಗೆ ಬರೆದರೆ ಏನು ಬರೆದರೆ ಉತ್ತಮ ಅಂಕಗಳು ಸಿಗಬಹುದು ಎಂದು ಊಹಿಸಿ ಅಷ್ಟಕ್ಕೆ ಸನ್ನದ್ಧರಾಗಿರುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳು ಸಿಗುತ್ತವೆ. ಸಾಮಾನ್ಯತಃ ಪರೀಕ್ಷಾ ಫಲಿತಾಂಶ ಬಂದಾಗ ಕೆಲವೊಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅವರ ಶಿಕ್ಷಕರಿಗೆ ಬೇಸರವಾಗುವುದುಂಟು. “ನೀನು ಈ ಸಲ ಫಸ್ಟ್‌ ಬರ್ತಿ ಅಂತ ಎಣಿಸಿದ್ದೆ. ಈ ಸಲ ಫಸ್ಟ್‌ ಬಂದವನಿಗಿಂತ ನೀನೇ ನಿಜಕ್ಕೂ ಬುದ್ಧಿವಂತ” ಅಂತ ಶಿಕ್ಷಕರು ಹೇಳುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ತನಗೆ ಏಕೆ ಕಡಿಮೆ ಅಂಕ ಬಂದಿತೋ ಅಂತ ಚಿಂತಿಸುತ್ತಾರೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬಂದರೆ ಸಾಮಾನ್ಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಪ್ರತಿಭಾವಂತರೂ ಭಯಭೀತರಾಗುತ್ತಾರೆ. ಒಂದು ಪರೀಕ್ಷೆಯಲ್ಲಿ ಯಾವುದೇ ಒಂದೆರಡು ವಿಷಯಗಳಲ್ಲಿ ಕಡಿಮೆ ಅಂಕ ಬಂದರೆ ಮುಂದಿನ ಸಲ ಆ ಪರೀಕ್ಷೆಯ ವೇಳೆಯಲ್ಲಿ ಅವರಲ್ಲಿ ಇನ್ನಿಲ್ಲದ ಆತಂಕ ಮನೆಮಾಡುತ್ತದೆ.  ಅನಗತ್ಯವಾದ ಗಾಬರಿ, ಆತಂಕದಿಂದಾಗಿ ಅವರ ನಿರ್ವಹಣೆಯೂ ಕುಸಿಯುತ್ತದೆ. ಇದು ಒಂದು ವಿಷಮ ವರ್ತುಲದ ಸೃಷ್ಟಿಗೆ ಕಾರಣವಾಗಿದೆ.

ಸರಿತಪ್ಪುಗಳಿಗೂ ವಸ್ತುಸ್ಥಿತಿಗೂ ಎಷ್ಟೋ ವೇಳೆ ಸಂಬಂಧವಿಲ್ಲ. ಶಿಕ್ಷಕರು ಯಾವುದನ್ನು ಸರಿ ಎಂದು ಹೇಳಿರುತ್ತಾರೋ ಅದು ಮಕ್ಕಳ ಪಾಲಿಗೆ ಸರಿ. ತಿಳಿದ ಹೆತ್ತವರು ಅದು ತಪ್ಪು ಎಂದು ಹೇಳಿದರೂ ಅವರು ನಂಬುವುದಿಲ್ಲ. ‘ನಮ್ಮ ಮಿಸ್‌ ಹೇಳಿದ್ದೇ ಸರಿ’ ಎಂದು ಬಲವಾಗಿ ನಂಬುತ್ತಾರೆ. ಆದರೆ ಮಕ್ಕಳಿಗೆ ಹಿರಿಯರು ಬಗೆಯುವ ದೊಡ್ಡ ಅನ್ಯಾಯ ಯಾವುದೆಂದರೆ ಅವರು ಮಾಡಿರುವ ಸರಿತಪ್ಪನ್ನು ಅವರೇ ಬೆಲೆಕಟ್ಟಿ ಮೌಲ್ಯ ನಿರ್ಣಯಿಸುವ ಅವಕಾಶವನ್ನು ಕಲ್ಪಿಸದೇ ಇರುವುದು. ಹೀಗಾಗಿ ಅವರಲ್ಲಿ ಬೆಲೆ ಕಟ್ಟುವ, ವಿವೇಚನೆಯ ಸಾಮರ್ಥ್ಯವೇ ಬೆಳೆಯುವುದಿಲ್ಲ. ಯಾರೋ ಏನೋ ಹೇಳಿದ್ದನ್ನು ನಂಬುತ್ತಾರೆ. ಅದು ನಿಜವಿರಬಹುದೆ? ಸುಳ್ಳಿರಬಹುದೆ? ಪಾರ್ಶ್ವ ಸತ್ಯವೇ? ಹಾಗಿರಲು ಸಾಧ್ಯವೇ? ಎಂಬ ಪ್ರಶ್ನೆಗಳು ಅವರ ಮನದಲ್ಲಿ ಹಾದುಹೋಗುವುದಿಲ್ಲ.

ಜೀವನವಿಡೀ ಹೆಣಗಿದರೂ ನಮ್ಮ ಮನಸ್ಸು ಹೇಗೆ ಕೆಲಸಮಾಡುತ್ತದೆ? ನಾವು ಹೇಗೆ ಯೋಚಿಸುತ್ತೇವೆ? ಹೇಗೆ ಭಾವಿಸುತ್ತೇವೆ ಎಂಬುದರ ಬಗ್ಗೆ ಖಚಿತವಾಗಿ ಬೆಲೆಕಟ್ಟಿ ಹೇಳಲು ಸಾಧ್ಯವಿಲ್ಲದಿರುವಾಗ ಮೂರು ಗಂಟೆ ಅವಧಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ, ಸಾಮರ್ಥ್ಯ ಹಾಗೂ ವ್ಯಕ್ತಿತ್ವದ ಗುಣಗಳನ್ನು ಅಳೆದು ಸುರಿದು ಹೇಳುವುದು ಹೇಗೆ? ವ್ಯಕ್ತಿಗೆ ತನ್ನನ್ನು ತಾನು ತಿಳಿದು ಬೆಲೆಕಟ್ಟಲು ಅವಕಾಶಗಳನ್ನು ಕೊಡದಿರುವಾಗ ಪರೀಕ್ಷೆಗಳ ಮೂಲಕ ನಾವು ಸಾಧಿಸುವುದೇನನ್ನು?

ಜಾನ್‌ ಹೋಲ್ಟ್‌ (೧೯೬೮) ಅವರ ಪ್ರಕಾರ ನಮಗೆ ನಮ್ಮ ಆಲೋಚನೆಗಳು, ವಿಚಾರಗಳು ತಿಳಿಯುತ್ತವೆ, ತಿಳಿದಿದೆ ಎಂದು ಭಾವಿಸಿದರೂ ಕೂಡ ನಮ್ಮ ಪರೀಕ್ಷಾ ಸನ್ನಿವೇಶಗಳಲ್ಲಿ ಎರಡು ಅಪರಿಹಾರ್ಯ ಅಪಾಯಗಳಿವೆ. ಒಂದು ಭಾಷೆಯ ಮಿತಿಗೆ ಸಂಬಂಧಿಸಿದ ಅಪಾಯ. ಪರೀಕ್ಷಕನು ತನ್ನ ಪ್ರಶ್ನೆಗಳಲ್ಲಿ ಅಡಕಗೊಳಿಸಿದ ಪದಗಳ ಮೂಲಕ ನಿಜಕ್ಕೂ ತಾನು ಏನನ್ನು ಪರೀಕ್ಷಿಸಲು ಹೊರಟಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಲಾರ. ಉತ್ತರ ಬರೆಯುವ ವಿದ್ಯಾರ್ಥಿ ತನ್ನ ಉತ್ತರವನ್ನು ಸ್ಪಷ್ಟವಾಗಿ ಪದಗಳ ಮೂಲಕ ನಿರೂಪಿಸಲಾರ. ಎರಡನೆಯದು ಯಾವುದೇ ಪ್ರಶ್ನೆಯ ಸಂದರ್ಭದಲ್ಲಿ ತೀರ್ಪು ನೀಡುವ ಸಣ್ಣ ಅಂಶ ಇದ್ದೇ ಇದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಭಯ ಉತ್ಪನ್ನವಾಗುತ್ತದೆ. ಪ್ರಶ್ನಿಸುವವನು ಉತ್ತರ ಕೊಡುವವನ ಸಮೀಪಗತನಾಗಬಹುದು ಅಥವಾ ದೂರಸರಿಯಬಹುದು. ಉತ್ತರ ಕೊಡುವಾತನೂ ಉತ್ತರ ಕೊಡಬೇಕೇ ಬೇಡವೇ ಎಂಬ ದ್ವಂದ್ವದಲ್ಲಿ ಸಿಲುಕುತ್ತಾನೆ.

ಪ್ರಶ್ನೆ ರಚಿಸುವವನಿಗೂ ಸಮಸ್ಯೆ ತಪ್ಪಿದ್ದಲ್ಲ. ಅವನಿಗೆ ಯಾವುದೋ ಒಂದು ನಿರ್ದಿಷ್ಟ ಬಗೆಯ ಉತ್ತರ ಬೇಕು. ಆ ಉತ್ತರ ತರಿಸಲು ಪ್ರಶ್ನೆ ಹೇಗೆ ಕೇಳಬೇಕು? ಪ್ರಶ್ನೆಗಳನ್ನು ಅತಿಸರಳೀಕರಿಸಿದರೆ ಪ್ರಾಯಃ ಪ್ರಶ್ನೆಯೊಂದಿಗೆ ಸರಿ ಉತ್ತರವೂ ಬಂದೀತು! ಪ್ರಶ್ನೆ ಸರಿಯಾಗಿ ಕೇಳದಿದ್ದರೆ ಆಗಲೂ ತಪ್ಪು ತಿಳಿವಳಿಕೆ ಹುಟ್ಟಿಕೊಂಡೀತು!

ಮುಖ್ಯವಾದ ಸಂಗತಿ ಎಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ? ಏಕೆ ಕಲಿಯುತ್ತಾರೆ? ಎಂಬುದನ್ನು ಸತತವಾಗಿ ತಿಳಿಯುವ ಪ್ರಯತ್ನ ಮಾಡಬೇಕು. ಜೀವನದ ಅರ್ಥವನ್ನು ತಮ್ಮದೇ ರೀತಿಯಲ್ಲಿ ತಿಳಿಯುವ ಸಾಮರ್ಥ್ಯ ಮಕ್ಕಳಿಗಿದೆ. ಅದಕ್ಕಗಿ ಅವರು ಶ್ರಮಿಸಬಲ್ಲರು ಎಂಬ ವಿಶ್ವಾಸ ಹಾಗೂ ಯಾವ ತಂಟೆ ತಕರಾರು, ಮಧ್ಯಪ್ರವೇಶ, ಅಧಿಕಪ್ರಸಂಗ, ಆಕ್ಷೇಪ ಇತ್ಯಾದಿಗಳಿಲ್ಲದೆ ಅವರು ಕಲಿಯುತ್ತಾರೆ ಎಂಬ ನಂಬಿಕೆ ಪರೀಕ್ಷಕರಲ್ಲಿರಬೇಕು. ಇದೇ ನಿಜವಾದ ಶಿಕ್ಷಣ ನಮ್ಮ ಮುಂದಿಡುವ ಗುರಿ. ದುರ್ದೈವವೆಂದರೆ ಕಲಿಯಬೇಕಾದ್ದದನ್ನು ಕಲಿತುದನ್ನು ತೂಗಿ ನೋಡದೆ ನಾವು ಕಲಿಯಲು ಹೇಳಿದ್ದನ್ನು ಮಾತ್ರವೇ ಪರಿಶೀಲಿಸಿ ನಿಜವಾದ ಶಿಕ್ಷಣವನ್ನು ಮೂಲೆಗುಂಪು ಮಾಡುತ್ತಿದ್ದೇವೆ.

ನಮ್ಮಲ್ಲಿ ‘ಭೂತ ಬಿಡಿಸುವುದು’ ಹಾಗೂ ‘ಮಾರಿ ಓಡಿಸುವುದು’ ಎಂಬ ಮಾತಿದೆ. ‘ಭೂತ ಬಿಡಿಸುವುದು ’ ಬೇಡ. ಏಕೆಂದರೆ ಕೆಲವು ಭೂತಗಳು ಪ್ರಾರ್ಥಿಸಿಕೊಂಡರೆ, ಸರಿಯಾಗಿ ‘ನಡೆದುಕೊಂಡರೆ’ ಒಳ್ಳೆಯದನ್ನು ಕರುಣಿಸುತ್ತವೆ. ಆದರೆ ಮಾರಿ ಊರಿಗೆ ಊರನ್ನೇ ನುಂಗಿ ನೀರು ಕುಡಿಯುತ್ತದೆ. ಅದು ಪ್ಲೇಗ್‌, ಕಾಲರಾದಂಥ ಮಾರಿಯಿರಬಹುದು ಅಥವಾ ಪರೀಕ್ಷೆಯಂಥ ಹೆಮ್ಮಾರಿ ಇರಬಹುದು. ಅಪಾಯಕಾರಿಯಾದ ಮಾರಿಯನ್ನು ಊರಿಂದಾಚೆಗೆ ಗಡಿ ದಾಟಿಸುವ ಕೆಲಸವೇ ಮಾರಿ ಓಡಿಸುವುದು. ಅಂತೆಯೇ ಪರೀಕ್ಷೆ ಎಂಬ ಹೆಮ್ಮಾರಿಯನ್ನು ಓಡಿಸಲು ಏಕೆ ಸಾಧ್ಯವಿಲ್ಲ ನಮಗೆ? ಅದು ಅಷ್ಟು ಕಠಿಣವೇ? ಅಥವಾ ನಾವು ರೂಢಿಗೆ ಅಷ್ಟೊಂದು ಒಗ್ಗಿಕೊಂಡುಬಿಟ್ಟಿದ್ದೇವಾ?