ವ್ಯಕ್ತಿಗಳನ್ನು ವ್ಯಕ್ತಿಗಳೆಂದು ಪರಿಭಾವಿಸದೆ ‘ಕಲಾವಿದ’, ‘ಕವಿ’, ‘ಜನಪ್ರಿಯ ರಾಜಕಾರಣಿ’. ‘ಗಂಭೀರ ವಿಮರ್ಶಕ’, ‘ಯಶಸ್ವೀ ವರ್ತಕ’-ಎಂಬ ಪಡಿಯಚ್ಚುಗಳ ಮೂಲಕ ಗ್ರಹಿಸಲು ತೊಡಗಿದಾಗ ನಮ್ಮ ಹಾಗೂ ಅವರ ನಡುವಿನ ಸಹಜ ಸಂಬಂಧ ಕಮರುತ್ತದೆ. ಒಂದು ಬಗೆಯ ಅಂತರ ನಿರ್ಮಾಣವಾಗುತ್ತದೆ. ಅವರು ನಮ್ಮ ಜೊತೆ ಸಾಮಾನ್ಯ ಮನುಷ್ಯರ ಹಾಗೆ ವರ್ತಿಸಿದಾಗ ಆಶ್ಚರ್ಯಚಕಿತರಾಗುತ್ತೇವೆ. “ಇಂಥ ದೊಡ್ಡ ಲೇಖಕ ಎಷ್ಟೊಂದು ಸರಳ ವ್ಯಕ್ತಿಯಾಗಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಅವರು ತೀರ ‘ಅನ್‌ಅಸ್ಯೂಮಿಂಗ್‌’ ಆಗಿದ್ದಾರೆ . ನಂಬಲಿಕ್ಕೇ ಆಗದು’ ಎನ್ನುತ್ತೇವೆ. ಮಕ್ಕಳ ಬಗ್ಗೆ ನಾವು ಹೀಗೆಯೇ ನಡೆದುಕೊಳ್ಳುತ್ತೇವೆ. ಮಕ್ಕಳು ನಮ್ಮ ಕಣ್ಣಿನಲ್ಲಿ ಚೂಟಿಯಾಗಿ, ಮುಗ್ಧರಾಗಿ ಪ್ರೀತಿಪಾತ್ರರಾಗಿ ಕಾಣಿಸಿಕೊಳ್ಳುತ್ತಾರೆ. ಬಾಲ್ಯದ ಬಗ್ಗೆ ನಮ್ಮ ಮನದಲ್ಲಿರುವ ಯಾವುದೋ ಒಂದು ವಿಚಾರ/ಚಿತ್ರವನ್ನು ನಿಜವಾದ ಮಕ್ಕಳ ಜಾಗದಲ್ಲಿಟ್ಟು ನೋಡುತ್ತೇವೆ. ಹೀಗೆ ನಾವು ಹಣೆಪಟ್ಟಿ ಹಚ್ಚುವಾಗ, ನಿಜದ ಬದಲಿಗೆ ಚಿತ್ರ ನಿಲ್ಲಿಸುವಾಗ ಆ ವ್ಯಕ್ತಿಗೆ ಮಾಂತ್ರಿಕ ಗುಣಗಳನ್ನು ಆರೋಪಿಸುತ್ತೇವೆ.

ಮೈಬಣ್ಣ, ಸೌಂದರ್ಯ, ದೇಹದಾರ್ಢ್ಯವನ್ನು ಆರಾಧಿಸುವ ಒಂದು ಸಮಾಜದಲ್ಲಿ ವ್ಯಕ್ತಿಗಳು ಬೇರೆಯವರಿಗೆ ಹೇಗೆ ಕಾಣಿಸಿಕೊಳ್ಳುವರು ಎಂಬ ಆಧಾರದಲ್ಲಿ ಅವರಿಗೆ ನಾವು ಮಾಂತ್ರಿಕ ಗುಣಗಳನ್ನು ಆರೋಪಿಸುತ್ತೇವೆ. ಮಕ್ಕಳ ವಿಷಯದಲ್ಲೂ ಹೀಗೆಯೇ ಆಗುತ್ತದೆ. ಶಿಕ್ಷಕರು ತುಂಬ ಸುಂದರವಾಗಿರುವ ಮಕ್ಕಳ ಬಗ್ಗೆ ಬುದ್ಧಿವಂತರು. ಪ್ರತಿಭಾವಂತರು. ಉತ್ತಮ ಗುಣ ನಡತೆಯವರು ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಇಂಥ ಮಕ್ಕಳ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅಂತೆಯೇ ಅವರು ಮಾಡುವ ಅನೇಕ ತಪ್ಪುಗಳನ್ನೂ ಕ್ಷಮಿಸಿಬಿಡುತ್ತಾರೆ. ಚೂಟಿಯಾದ ಮಕ್ಕಳು ತಪ್ಪು ಮಾಡಿದರೂ ಶಿಕ್ಷಕರು ಅವುಗಳನ್ನು  ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಓರ್ವ ಸಾಮಾನ್ಯ ಬಾಲಕ ನೋಡಲು ಅಷ್ಟೇನೂ ಚಂದವಿಲ್ಲದ ಹುಡುಗ ತಪ್ಪು ಮಾಡಿದರೆ ವಿಪರೀತ ಶಿಕ್ಷೆ ಕೊಟ್ಟುಬಿಡುತ್ತಾರೆ.

ನಮ್ಮ ದೇಶದಲ್ಲಂತೂ ತರಗತಿಗಳಲ್ಲಿ ಹುಡುಗರು ಶಿಕ್ಷೆ ಅನುಭವಿಸುವಷ್ಟು ಹುಡುಗಿಯರು ಅನುಭವಿಸುವುದಿಲ್ಲ. ಹುಡುಗಿಯರು ತಪ್ಪು ಮಾಡುವುದಿಲ್ಲ. ಮಾಡಿದರೂ ಒಪ್ಪಿಕೊಂಡುಬಿಡುತ್ತಾರೆ. ಒಂದೊಮ್ಮೆ ತಪ್ಪು ಮಾಡಿದರೆ ಶಿಕ್ಷಕರು ಬಿರುಗಣ್ಣುಬಿಟ್ಟರೆ ಅವರ ಕಣ್ಣುಗಳಿಂದ ‘ಗಂಗಾಭಾಗೀರಥಿ’ ಹರಿದುಬಿಡುತ್ತದೆ. ಆದುದರಿಂದ ಹುಡುಗಿಯರಿಗೆ ಯಾಕೆ ಬೈಯಬೇಕು ಎಂದು ಶಿಕ್ಷಕರು ಸುಮ್ಮನಾಗುತ್ತಾಋಎ. ಹುಡುಗರಿಗೆ ಈ ವಿನಾಯಿತಿ ಇಲ್ಲ ಮತ್ತು ಹುಡುಗರು ಪೋಕರಿಗಳು ಎಂಬ ಪೂರ್ವಾಗ್ರಹ ಶಿಕ್ಷಕರಲ್ಲಿರುತ್ತದೆ. ಇನ್ನು ಕೆಲವು ಹುಡುಗರು ಅಧ್ಯಾಪಕರು ಅಡಿಕೋಲಿನಿಂದ ಹೊಡೆಯಲು ಹೊರಟಾಗ ಕೈತಪ್ಪಿಸಿ ಇನ್ನಷ್ಟು ಮತ್ತಷ್ಟು ಏಟು ತಿನ್ನುತ್ತಾರೆ. ಹುಡುಗರು ಅಪರಾಧಿಗಳು, ಶಿಕ್ಷಾರ್ಹರು ಎಂಬ ಪೂರ್ವಗ್ರಹೀತ ಶಾಲಾ ವಾತಾವರಣದಲ್ಲಿರುವುದು ಖೇದದ ಸಂಗತಿ.

‘ಚೂಟಿಯಾದ ಮಕ್ಕಳು’ ಎಂಬ ಹಣೆಪಟ್ಟಿಯ ಮೂಲಕ ಮಕ್ಕಳನ್ನು ನೋಡತೊಡಗಿದಾಗ ಅವರ ಬಗ್ಗೆ ಹೆತ್ತವರು ವಿಪರೀತ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಶಿಕ್ಷಕರು ಕೂಡ ಇಂಥ ಮಕ್ಕಳು ಊರ್ಧ್ವಗಾಮಿಯಾಗಿರಬೇಕೆಂದು ಬಯಸುತ್ತಾರೆ. ಶಿಕ್ಷಕರು ಹಾಗೂ ರಕ್ಷಕರು ಸದಾ ಇಂಥ ಮಕ್ಕಳ ಪ್ರಗತಿ ಪರಿಶೀಲನೆಯಲ್ಲಿ ತೊಡಗುತ್ತಾರೆ.  ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿರುತ್ತಾರೆ. ವಿಶೇಷ ಪ್ರೋತ್ಸಾಹ ಅಥವಾ ಮಾರ್ಗದರ್ಶನದ ಅಗತ್ಯವಿದೆಯೇ ಎಂದು ಗಮನಿಸುತ್ತಾರೆ.  ಈ ಮಕ್ಕಳು ಸರಿದಾರಿಯಲ್ಲಿದ್ದಾರಾ? ಸರಿಯಾದ ರೀತಿಯಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರಾ? ಅವರ ಮನೋಭಾವಗಳು, ಮೌಲ್ಯಗಳು, ಚಾರಿತ್ಯ್ರ ಸರಿಯಾಗಿದೆಯಾ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಒಂದುವೇಳೆ ಯಾವುದಾದರೊಂದು ಕಾರಣಕ್ಕೆ ಗುರಿ ತಪ್ಪಿದರೆ, ಆಲಸ್ಯ ಕಂಡುಬಂದರೆ “ಏನು ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಗುತ್ತಿದೆ?” ಎಂದೂ ಹಂಗಿಸುತ್ತಾರೆ.

ಒಮ್ಮೆ ‘ಆರೋಗ್ಯವಂತ ತಾಯಿ-ಮಗು’ ಪ್ರದರ್ಶನ ನೋಡಲು ಹೋಗಿದ್ದೆ. ಅಲ್ಲಿಗೆ ಬಂದ ತಾಯಿಯರು ತಮ್ಮ ಮಕ್ಕಳನ್ನು ಎದೆಗಪ್ಪಿಕೊಂಡು ತುಂಬ ಮುದ್ದುಮಾಡುತ್ತಿದ್ದರು . ತಮ್ಮ ಮಕ್ಕಳು ತಮಗೆಷ್ಟು ಮುದ್ದು ಎಂಬುದನ್ನು ಬೇರೆಯವರಿಗೆ ತೋರಿಸಲೋ ಎಂಬಂತೆ ಅವರ ವರ್ತನೆ ಇತ್ತು. ಛಾಯಾಚಿತ್ರಗ್ರಾಹಕರ ಎದುರಿಗಂತೂ ಅವರು ಮಕ್ಕಳನ್ನು ಎದೆಗವಚಿಕೊಂಡು ಮುದ್ದಾಡಿದರು. ಜಗತ್ತಿನಲ್ಲಿ ಇವರಂಥ ತಾಯಿಯರು ಇನ್ನಿಲ್ಲವೆಂಬ ಹಾಗೆ ಅವರ ನಡವಳಿಕೆಯಿದ್ದಿತ್ತು.

“ಮಕ್ಕಳೆಂದರೆ ಮಕ್ಕಳು. ಅವರು ದೊಡ್ಡವರಲ್ಲ” ಎನ್ನುವವರು ಮಕ್ಕಳ ಬಗ್ಗೆ ರಮ್ಯ ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಮಕ್ಕಳು ಹೀಗೆಯೇ ಇರಬೇಕು ಎಂಬ ಧೋರಣೆ ಅವರಲ್ಲಿರುತ್ತದೆ. “ಮಕ್ಕಳೆಂದರೆ ಹ್ಯಾಗಿರಬೇಕು ಗೊತ್ತಾ? ದೇವರ ಹಾಗೆ ಇರಬೇಕು” ಎಂದು ನನ್ನ ಬಾಲ್ಯದಲ್ಲಿ ಹಿರಿಯರು ಸದಾ ಹೇಳುತ್ತಿದ್ದರು; ಅಂದರೆ ಆ ಕಡೆ ಈ ಕಡೆ ಓಡಾಡದೆ ಚೇಷ್ಟೆಮಾಡದೆ ಒಂದು ಮೂಲೆಯಲ್ಲಿ ಬಿದ್ದಿರಬೇಕು. ಹಿರಿಯರು ನಗು ಎಂದಾಗ ನಗಬೇಕು. ಕುಣಿ ಎಂದಾಗ ಕುಣಿಯಬೇಕು. ಮನೆಯ ವಿಧೇಯ ನಾಯಿಯ ಹಾಗೆ!

ಗಮನಿಸಬೇಕಾದ ಸಂಗತಿ ಎಂದರೆ ಪುಟ್ಟಮಕ್ಕಳು ಇದ್ದಂತೆ ಇರುವುದಿಲ್ಲ. ಅವರು ಪರಾವಲಂಬಿಗಳಾಗಿ ಚೂಟಿಯಾಗಿ ಉಳಿಯುವುದಿಲ್ಲ. ಅವರು ಪ್ರಾಯ ಸರಿದಂತೆ ಬೆಳೆಯುತ್ತಾರೆ. ಅವರ ಬುದ್ಧಿಭಾವ, ನೈತಿಕತೆ ಎಲ್ಲವೂ ವಿಕಾಸಗೊಳ್ಳುತ್ತಾ ಹೋಗುತ್ತದೆ. ಅವರ ಮುಂದೊಂದು ಬದುಕಿದೆ . ಆ ಬದುಕಿನಲ್ಲಿ ಮುಂದೊಂದು ದಿನ ಎತ್ತರದ ವ್ಯಕ್ತಿಗಳಾಗಬಹುದಲ್ಲವೆ? ಹೀಗಿರುವಾಗ ಬಾಲ್ಯದಲ್ಲೇ ಅವರು ಮುಂದೇನಾಗಬಹುದೋ ಅದನ್ನು ಮುರುಟಿಸುವ ಹಕ್ಕು ನಮಗಿಲ್ಲ ಅಲ್ಲವೆ?

‘ಮಕ್ಕಳು ಮಕ್ಕಳೆ; ದೊಡ್ಡವರಲ್ಲ’ ಎಂಬ ಮಾತನ್ನು ಹೀಗೆ ವ್ಯಾಖ್ಯಾನಿಸಬಹುದು.  ಮಕ್ಕಳು ದೊಡ್ಡವರಲ್ಲ ನಿಜ.  ಹಾಗೆಂದು ಅವರಿಗೆ  ಭವಿಷ್ಯ ಇಲ್ಲವೆ? ಅವರು ಕೇವಲ ವರ್ತಮಾಠನದ ಗೊಂಬೆಗಳೇ? ಈಗ ದೊಡ್ಡವರಲ್ಲದಿದ್ದರೂ ಬೆಳೆದು ದೊಡ್ಡವರಾಗುವುದಿಲ್ಲವೆ? ಅವರನ್ನು ಕೇವಲ ವರ್ತಮಾನದ ಗೂಟಕ್ಕೆ ಕಟ್ಟಿಹಾಕುವುದು ಎಷ್ಟು ಸರಿ? ಅವರಲ್ಲಿ ದೊಡ್ಡವರಾಗುವ,  ಬೆಳೆಯುವ, ವಿಕಸನಗೊಳ್ಳುವ ಲಕ್ಷಣಗಳು ಅಂತಸ್ಥವಾಗಿಲ್ಲವೆ? ಹಾಗಂತ ಅವರ ಭವಿಷ್ಯ ಚೆನ್ನಾಗಿರಲಾರದು ಎಂದು ಊಹಿಸುವುದು ಕೂಡ ತಪ್ಪಲ್ಲವೆ? ‘ಚರಿಪಾರಣ್ಯದ ಪಕ್ಷಿಗೊಂದು ತರುಗೊಡ್ಡಾಗಲ್‌ ಫಲಂ ತೀವಿದ ವೃಕ್ಷಂಗಳಿಲ್ಲವೆ? ಲೋಕದೊಳ್‌ ಕಾಲಾನುಕಾಲಕ್ಕೆ ಬಡವಂ ಬಲ್ಲಿದನಾಗನೆ? ಎಳಗರುಂ ಎತ್ತಾಗದೆ? ಮಿಡಿ ಪಣ್ಣಾಗದೆ? ’ ಹೀಗಿರುವಾಗ ಮಕ್ಕಳಿಗೆ ಭವಿಷ್ಯವೇ ಇಲ್ಲ ಎಂದು ಭಾವಿಸುವುದು ತಪ್ಪು. ಎಷ್ಟೋ ತಂದೆತಾಯಿಗಳು ಹಾಗೂ ಶಿಕ್ಷಕರು ಬಾಲ್ಯದಲ್ಲಿ ಮಕ್ಕಳ ಮುಂದೆ ಹೇಳುವ ಮಾತುಗಳಿವು: ‘ನೀನು ಮುಂದೆ ದೊಡ್ಡವನಾಗಿ ಏನು ಮಾಡ್ತೀಯೋ? ಹೇಗೆ ಸಂಸಾರ ಮಾಡ್ತೀಯೋ?’ ‘ನಿನ್ನ ತಲೆಯಲ್ಲಿ ಸಗಣಿ ತುಂಬಿದೆ’. ‘ನಗರಕ್ಕೆ ಹೆಣ ಹೊರ್ಲಿಕ್ಕೆ ಹೋಗು’. ‘ಬಪ್ಪನಾಡಿಗೆ ಡೋಲು ಗುದ್ದಲು ಹೋಗು. ನೀನು ಕಲಿತು ಉದ್ಧಾರವಾಗುವುದು ಅಷ್ಟರಲ್ಲೇ ಇದೆ’-ಭವಿಷ್ಯದ ಮೇಲೆ ಬರೆ ಎಳೆಯುವ ಎಂಥ ಕಠೋರ ವ್ಯಾಖ್ಯಾನ!

ಮಕ್ಕಳನ್ನು ಮಕ್ಕಳಂತೆಯೇ ನೋಡಬೇಕು. ಅವರಲ್ಲಿ ಭಾವಿ ಹಿರಿಯರಿಲ್ಲ ಎಂದು ವಾದಿಸುವವರಿಗೆ ಮಕ್ಕಳು ಕೇವಲ ತಮ್ಮ ಪ್ರೇಮದ ಗೊಂಬೆಗಳು. ತಮ್ಮ ಇಷ್ಟಾರ್ಥ ಪೂರೈಸುವ ಯಂತ್ರಗಳು. ಮಕ್ಕಳಲ್ಲಿ ಭಾವಿ ಹಿರಿಯರಿದ್ದಾರೆ. ಭವಿಷ್ಯದ ಕಲಾವಿದರು, ಕವಿಗಳು, ವೈದ್ಯರು ಇದ್ದಾರೆ ಎಂಬುದನ್ನು ಗುರುತಿಸಲೊಲ್ಲದ ಹಿರಿಯರು ಮಕ್ಕಳ ವ್ಯಕ್ತಿತ್ವವನ್ನು ಅಗೌರವದಿಂದ ಕಾಣುವವರು ಎಂದೆನ್ನದೆ ವಿಧಿಯಿಲ್ಲ.

ಮಕ್ಕಳ ಬಗ್ಗೆ ಪೂರ್ವಗ್ರಹೀತ ವಿಚಾರಗಳನ್ನು ಇಟ್ಟುಕೊಂಡಾಗ ಮಕ್ಕಳು ಈ ವಿಚಾರಗಳ ಪಡಿಯಚ್ಚಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂದು ನಾವು ಗಮನಿಸುತ್ತೇವೆ ಮತ್ತು ಆ ನೆಲೆಯಲ್ಲಿ ಅವರ ಬಗ್ಗೆ ತೀರ್ಪು ನೀಡುತ್ತೇವೆ. ನಾವು ಬರೆದುಕೊಟ್ಟ ಸಂಭಾಷಣೆಯನ್ನ ಉ ಅವರು ಚೆನ್ನಾಗಿ ಹೇಳಿದಾಗ, ನಾವು ಕೊಟ್ಟ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದಾಗ ನಮಗೆ ಮಹದಾನಂದವಾಗುತ್ತದೆ. ಮಕ್ಕಳು ಸರಿದಾರಿಯಲ್ಲಿದ್ದಾರೆ. ನಾವು ಹಾಕಿದ ಗೆರೆ ದಾಟುತ್ತಿಲ್ಲ ಎಂದು ಬೀಗುತ್ತೇವೆ. ಎಲ್ಲರೆದುರಿಗೆ ಅದನ್ನು ಆಡಿ ತೋರಿಸುತ್ತೇವೆ . ನಾವು ಹಾಕಿದ ಗೆರೆಯನ್ನು ಮಕ್ಕಳು ದಾಟಿದಾಗ ಚಿಂತಾಕ್ರಾಂತರಾಗುತ್ತೇವೆ. ಕೋಪಗೊಂಡು ಕಿರುಚಾಡುತ್ತೇವೆ. ಅಸಹಾಯಕತೆಯಿಂದ ಮೈಪರಚಿಕೊಳ್ಳುತ್ತೇವೆ.

ಚೂಟಿಯಾದ ಮಕ್ಕಳ ಮೂಲಕ ಹಿರಿಯರು ತಮ್ಮ ಆತ್ಮಗಳನ್ನು ತಣಿಸಿಕೊಳ್ಳುತ್ತಾರೆ. ಅಂಥ ಮಕ್ಕಳಿಗೆ ಜನ್ಮಕೊಟ್ಟದ್ದು ಸಾರ್ಥಕವಾಯಿತು ಎಂದು ಹೆಮ್ಮೆಯಿಂದ ಬೀಗುತ್ತಾರೆ. ಇದು ಅಪಾಯಕಾರಿ ಪ್ರವೃತ್ತಿ. ನಮ್ಮ ನೇರಕ್ಕೆ, ಆಕಾಂಕ್ಷೆಗಳಿಗೆ ತಕ್ಕಂತೆ ಮಗು ಚೂಟಿಯಾಗಿ ವರ್ತಿಸಬೇಕೆಂದು ಬಯಸುವ ಮೂಲಕ ನಾವು ಮಗುವನ್ನು ಶೋಷಣೆಗೆ ಒಳಪಡಿಸುತ್ತಿದ್ದೇವೆ. “ನೀನು ಸಾಕಷ್ಟು ಚುರುಕಾಗಿದ್ದೀಯಾ… ಪಟ ಪಟ ಮಾತಾಡ್ತೀಯಾ… ರಿಯಾಲಿಟಿ ಶೋನಲ್ಲಿ ಭಾಗವಹಿಸು. ಹೆಸರು ಗಳಿಸು, ಬಹುಮಾನ ಗಳಿಸು” ಎಂದು ಹೇಳಿ ಮಗುವನ್ನು ಮುಂದಕ್ಕೆ ತಳ್ಳಿ ಅದರಿಂದ ಸಾಕಷ್ಟು ದುಡಿಮೆ ಪಡೆದು ಆ ಯಶಸ್ವೀ ಮಗುವಿನ ಅಪ್ಪ-ಅಮ್ಮ ತಾವು ಎಂದು ಹೇಳಿಕೊಂಡು ತಿರುಗುತ್ತೇವೆ. ಮಗುವಿಗೆ ಇದು ಕ್ರಮೇಣ ಅರ್ಥವಾಗಿ ಅದು  ತನಗೆ ಬೇಕುಬೇಕಾದುದನ್ನು ಪಡೆದುಕೊಳ್ಳಲು ತಂದೆ ತಾಯಿಯನ್ನೆ ಶೋಷಣೆ ಮಾಡುತ್ತದೆ. ಯಾವ ರೀತಿಯಲ್ಲಿ ತಾನು ನಡೆದುಕೊಂಡರೆ ತಂದೆತಾಯಿಗಳಿಗೆ ಋಷಿಯಾಗುತ್ತದೆ ಎಂಬುದನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳುತ್ತದೆ. ಹೀಗೆ ತಮ್ಮ ಚೂಟಿತನದಿಂದ ಹಿರಿಯರನ್ನು ಶೋಷಿಸಲು ನಾವು ಮಕ್ಕಳಿಗೆ ಪರೋಕ್ಷವಾಗಿ ಹೇಳಿಕೊಡುತ್ತೇವೆ. ತೀರ ಸರಳ ವಿಚಾರಗಳಾದರೆ ಇದರಲ್ಲೇನೂ ಸಮಸ್ಯೆಯಿಲ್ಲ. ಆದರೆ ಈ ಪರಸ್ಪರ ಶೋಷಣೆ ಅಷ್ಟು ಸರಳವಲ್ಲ. ನಾವು ಮಗುವಿನಿಂದ ಏನನ್ನೋ ನಿರೀಕ್ಷಿಸುತ್ತಿದ್ದೇವೆ. ಆದರೆ ಅದೇನೆಂದು ಮಗುವಿಗೆ ತಿಳಿದಿಲ್ಲ. ಮಗು ಹೇಗಾದರೂ ಮಾಡಿ ತಿಳಿಯಲು ಯತ್ನಿಸಿ ತಂದೆತಾಯಿಗಳ ಜೊತೆ ಆಟವಾಡುತ್ತದೆ. ತಂದೆತಾಯಿಗಳಿಗೂ ಈ ಆಟ ಪ್ರಿಯವಾದದ್ದೇ. ಮಾನಸಿಕವಾಗಿ ಸದೃಢವಾದ, ಸ್ವತಂತ್ರವಾದ ಮಗು ಈ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಮಗುವನ್ನು ತನ್ನ ಪ್ರೇಮದ ಗೊಂಬೆಯಾಗಿ ಬಳಸಿಕೊಂಡು ಅದರ ಚೂಟಿತನದ ಮೂಲಕ ತನ್ನ ಆಸೆ ಈಡೇರಿಸಿಕೊಳ್ಳುವುದು ಹಿರಿಯ ಧೋರಣೆ. ಇದಕ್ಕೆ ಪ್ರತಿಯಾಗಿ ಮಗುವಿನಿಂದ ಇನ್ನೂ ಹೆಚ್ಚಿನದನ್ನು ತಂದೆತಾಯಿ ನಿರೀಕ್ಷಿಸುತ್ತಾರೆ. ಇದು ವ್ಯಾಪಾರದ ಸೂತ್ರ-‘ಹೆಚ್ಚು ಹಣ ಹೂಡಿದರೆ ಹೆಚ್ಚು ಹಣ ಬರುತ್ತದೆ’. “ನಾನು ನಿನ್ನನ್ನು ತುಂಬ ತುಂಬ ಪ್ರೀತಿಸುತ್ತೇನೆ” ಎನ್ನುವ ತಂದೆ ಮಗುವಿನಿಂದ ತನಗಾಗಿ ಇಮ್ಮಡಿ ಮುಮ್ಮಡಿ ಗೌರವ ಬಯಸುತ್ತಿರುತ್ತಾರೆ. “ನಾವೀಗ ನಿನ್ನನ್ನು ಚೆನ್ನಾಗಿ ಓದಿಸುವುದು ಯಾಕೆ ಗೊತ್ತಾ? ನಾಳೆ ನೀನು ದೊಡ್ಡ ಸಾಹೇಬನಾಗಿ ಹಳತಿನ ಕಾಲದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಡವೇ?” “ನಾನು ನಿನ್ನ ಓದಿಗಾಗಿ ಎಷ್ಟೆಲ್ಲ ಹಣ ಖರ್ಚುಮಾಡಿದ್ದೇನೆ. ಆದರೆ ನಿನಗೆ ನನಗಿಂತ ಅಮ್ಮನೇ ಹೆಚ್ಚು” ಎಂದು ಅಪ್ಪ ಹಲುಬುತ್ತಾನೆ. ತಂದೆಯಾಗಿರುವ ತಾನು ಮಗುವಾಗಿ ತನ್ನ ಮಗುವಿನಿಂದ ತನಗಾಗಿ ಅಧಿಕ ಪ್ರೀತಿ ಬೇಕೆಂದು ಹಂಬಲಿಸುತ್ತಾನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಒಬ್ಬ ತಂದೆ ತನ್ನ ಮಕ್ಕಳಲ್ಲಿ ತನ್ನ ಕನಸುಗಳ ಪ್ರೇಮಿಯನ್ನು ಅರಸುತ್ತಾನೆ. ತನ್ನ ಅರೆಹೊರೆದ ಕನಸುಗಳಿಗೆ ತನ್ನ ಮಕ್ಕಳ ಮಡಿಲಲ್ಲಿ ಕಾವುಕೊಡುತ್ತಾನೆ! ಅಪ್ಪನ ಕನಸುಗಳಿಗೆ ಕಾವುಕೊಡುವ ಚೂಟಿಯ ಮಕ್ಕಳು ಬೆಳೆದಂತೆಲ್ಲ ತಮ್ಮ ಬಗ್ಗೆ ತಾವು ಜಾಗರೂಕರಾಗುತ್ತಾರೆ. ಲೆಕ್ಕಾಚಾರ ಹಾಕುತ್ತಿರುತ್ತಾರೆ. ಇನ್ನೊಬ್ಬರನ್ನು  ಚೆನ್ನಾಗಿ ಆಟ ಆಡಿಸುವುದರಲ್ಲಿ ನಿಪುಣರಾಗುತ್ತಾರೆ. ಬೇರೆಯವರ ಕಣ್ಣಲ್ಲಿ ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬುದು ಈಗ ಅವರಿಗೆ ಮುಖ್ಯವಾಗುತ್ತದೆ. ‘ಒಳ್ಳೆಯ ಹುಡುಗ’, ‘ಚಂದದ ಹುಡುಗಿ’, ‘ವಿಧೇಯ ಮಗ’. ‘ಪ್ರೀತಿಯ ಮಡದಿ’, ‘ನಿಷ್ಠಾವಂತ ಗಂಡ’-ಈ ಬಗೆಯ ಪ್ರಶಂಸೆ ಗಳಿಕೆಗಾಗಿ ಅವರ ವರ್ತನೆ ವಿನ್ಯಾಸಗೊಳ್ಳುತ್ತದೆ. ಎರಿಕ್‌ ಫ್ರಾಮ್‌ ಅವರು ಹೇಳುವಂತೆ ಇಂಥ ಮಕ್ಕಳು ತಮ್ಮ ವರ್ತನೆ ಹಾಗೂ ವ್ಯಕ್ತಿತ್ವವನ್ನು ಪ್ರಶಂಸೆ-ಪುರಸ್ಕಾರಗಳಿಗಾಗಿ ಮಾರಿಕೊಳ್ಳುತ್ತಾರೆ. ಈ ಸಮಾಜದಲ್ಲಿ ತನ್ನನ್ನು ತಾನು ಚೆನ್ನಾಗಿ ಮಾರಿಕೊಳ್ಳುವವನಿಗೆ ಹೆಚ್ಚಿನ ಪುರಸ್ಕಾರ, ಪ್ರಶಂಸೆ, ಸ್ಥಾನಮಾನ, ಗೌರವ ದಕ್ಕುತ್ತದೆ! ಬೇರೆಯವರಿಂದ ಅತಿ ಹೆಚ್ಚು ಪ್ರೀತಿ-ಗೌರವವನ್ನು ಸಂಪಾದಿಸಬೇಕೆನ್ನುವ ಮಗುವೇ ಇರಲಿ , ದೊಡ್ಡವನೇ ಇರಲಿ ದಿನಹೋದಂತೆ ಅಸಹಜವಾಗುತ್ತಾನೆ. ಕೃತಕವಾಗುತ್ತಾನೆ . ಗಿಲೀಟಿನ ಪದಾರ್ಥವಾಗುತ್ತಾನೆ . ಮಾನವಸಂಬಂಧಗಳನ್ನು ಸಮರಸದಿಂದ ಕಾಪಾಡಿಕೊಂಡು ಬರುವಲ್ಲಿ ಎದುರಾಗುವ ಸೂಕ್ಷ್ಮತೆಗಳು ಹಾಗೂ ಅಡೆತಡೆಗಳನ್ನು ಮರೆಮಾಚಿ ಮಧುರಕಂಠದಿಂದ ನೂರಾರು ಭಾಷಣಗಳನ್ನು ಬಿಗಿದು ಮನ್ನಣೆ ಗಳಿಸುತ್ತಾನೆ!

ನಮ್ಮ ನಗರದ ಪ್ರಸಿದ್ಧ ನಾಟ್ಯಶಾಲೆಯ ವಾರ್ಷಿಕೋತ್ಸವದಲ್ಲಿ ನಾನೊಮ್ಮೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ. ಆ ಶಾಲೆಯ ಕೆಲವು ಪುಟ್ಟ ಮಕ್ಕಳು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದರು.  ಆ ಎಲ್ಲ ಮಕ್ಕಳನ್ನು ವೇದಿಕೆಗೆ ಕರೆಯಿಸಿಕೊಂಡು ನಾಟ್ಯಶಾಲೆಯ ನಾಟ್ಯಾಚಾರ್ಯರು ಬಹಳ ಹೆಮ್ಮೆಯಿಂದ ತಮ್ಮ ಹುಡುಗಿಯರು ಎಂಥವರೆಂಬುದನ್ನು ಹಾಡಿ ಹೊಗಳಿದರು. “ನಮ್ಮ ಹುಡುಗಿಯರು ಆತ್ಮವಿಶ್ವಾಸದ ಚಿಲುಮೆಗಳು. ಏಕೆಂದರೆ ನಾವು ಅವರನ್ನು ತುಂಬು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ನಮ್ಮ ಶಾಲೆಯಲ್ಲಿರುವ ಎಲ್ಲ ನೃತ್ಯಶಿಕ್ಷಕರೂ ಈ ಮಕ್ಕಳನ್ನು ವಾತ್ಸಲ್ಯಭಾವದಿಂದ ಕಾಣುತ್ತಾರೆ. ನಾನು ಈ ಪುಟ್ಟ ದೀಪದ ಮಲ್ಲಿಯರ ಕೆನ್ನೆ ಸವರುತ್ತೇನೆ. ಬೆನ್ನು ತಡವುತ್ತೇನೆ. ತಲೆ ನೇವರಿಸುತ್ತೇನೆ. ಹೆಜ್ಜೆ ತಪ್ಪಿದರೆ ಕಿವಿ ಹಿಂಡುತ್ತೇನೆ. ಅವರು ರಂಗದ ಮೇಲೆ ಹರಿಣದಂತೆ ಸಂಚರಿಸಿ ನನ್ನ ಮನಸೂರೆಗೊಳ್ಳುತ್ತಾರೆ. ನಿಮ್ಮ ಮಗಳನ್ನು ನಮ್ಮ ಶಾಲೆಗೆ ಸೇರಿಸಿ. ಸಂಕೋಚದ ಮುದ್ದೆಯಾಗಿರುವ ಪುಟ್ಟ ಹುಡುಗಿಯನ್ನು ಸಾವಿರಾರು ಜನರ ಮುಂದೆ ತಂದು ನಿಲ್ತಿಸ್ತೇನೆ. ಹುಡುಗಿ ನಿರ್ಭಯವಾಗಿ ಹಕ್ಕಿಯಂತೆ ಹಾಡುತ್ತಾಳೆ. ನವಿಲಿನಂತೆ ನರ್ತನ ಮಾಡುತ್ತಾಳೆ. ತಂದೆ ತಾಯಿ ಹಾಗೂ ನಾಟ್ಯಗುರುಗಳು ಆನಂದಬಾಷ್ಪ ಸುರಿಸಬಹುದಾದಂಥ ಪ್ರದರ್ಶನವನ್ನು ಆಕೆ ನೀಡುತ್ತಾಳೆ. ನೋಡುತ್ತಿರಿ.”

ಆ ನಾಟ್ಯಾಚಾರ್ಯರು ಹೆಮ್ಮೆಯಿಂದ, ಅಪಾರ ಆತ್ಮವಿಶ್ವಾಸದಿಂದ ಹೇಳಿದ ಆ ಮಾತುಗಳು ನಿಜವಿರಬಹುದು . ಮಕ್ಕಳ ಜೊತೆಗಿನ ಬಹುಕಾಲದ ಒಡನಾಟದ ಅನುಭವದ ಆಳದಿಂದ ಆ ಮಾತುಗಳು ಹೊರಹೊಮ್ಮಿರಬಹುದು. ಆದರೆ ತಮ್ಮ ಚೂಟಿತನವನ್ನು ಹಿರಿಯರು ಬಳಸಿಕೊಳ್ಳುವುದನ್ನು ಕಂಡ ಇಂಥ ಮಕ್ಕಳು ತಮಗೆ ಬೇಕಾದುದನ್ನು ಹಿರಿಯರಿಂದ ಪಡೆದುಕೊಳ್ಳದೆ  ಬಿಡಲಾರರು. ಒಂದೊಮ್ಮೆ ಬಯಸಿದ್ದು ಸಿಗದಿದ್ದರೆ ಹಠಮಾರಿತನ, ಗರ್ವ, ಜಂಭ, ಕೋಪತಾಪ ಉಕ್ಕಿ ಹರಿಯದಿದ್ದೀತೇ? ಆಗಲೂ ಹಿರಿಯರು ಬಗ್ಗದಿದ್ದರೆ ಇದ್ದೇ ಇದೆ ಕಣ್ಣೀರು ಮತ್ತು ವಿಧ್ವಂಸಕತೆ .

ಇಂಥ ಮಕ್ಕಳು ಬೆಳೆದು ದೊಡ್ಡವರಾದಾಗ ಹೇಗೆ ವರ್ತಿಸಬಹುದು? ಎಂಥ ಸಮಾಜ ನಿರ್ಮಾಣ ಮಾಡಬಹುದು? ಎಲ್ಲದಕ್ಕೂ ಪರರ ಪ್ರಶಂಸೆ, ಪುರಸ್ಕಾರ , ಮೆಚ್ಚುಗೆಗಾಗಿ ಹಪಹಪಿಸುವ ಇವರು ಅದೆಲ್ಲವನ್ನೂ ಗಳಿಸಲು ಏನು ಮಾಡಬಹುದು? ಪ್ರಶಂಸೆ-ಪುರಸ್ಕಾರ-ಮಾನ್ಯತೆ ಸಿಗದೇ ಹೋದರೆ ಇವರ ಬಾಳು ಏನಾಗಬಹುದು? ನೀತಿ ಏನೆಂದರೆ ಮಕ್ಕಳು ಮತ್ತು ಹಿರಿಯರ ಸಂಬಂಧಗಳು ಸಹಜವಾಗಿರಬೇಕು. ಮಕ್ಕಳ ಚೂಟಿತನ ಹಿರಿಯರಿಗೆ ತಮ್ಮ ಸ್ವಾರ್ಥಸಾಧನೆಯ ಬಂಡವಾಳವಾಗಕೂಡದು. ತಮ್ಮ ಚೂಟಿತನದಿಂದಾಗಿ ತಾವು ಹಿರಿಯರಿಂದ ಬೇಕುಬೇಕಾದುದೆಲ್ಲ ಪಡೆದುಕೊಳ್ಳಲು ಸಾಧ್ಯ. ಎಂಬ ಭಾವನೆ ಮಕ್ಕಳಲ್ಲಿ ಬೆಳೆಯಕೂಡದು. ಹಿರಿಯರ ಮೆಚ್ಚುಗೆ , ಪ್ರಶಂಸೆ, ಪುರಸ್ಕಾರಗಳಿಗಾಗಿ ಅವರು ತಮ್ಮನ್ನು ಮಾರಿಕೊಳ್ಳುವ ಹಾಗಾಗಬಾರದು. “ನೀನು ಹೀಗೆ ನಡೆದುಕೊಂಡರೆ, ಇದನ್ನು ಸಾಧಿಸಿದರೆ ಮಾತ್ರವೇ ನಿನಗೆ ಬಹುಮಾನ” ಎಂಬ ಸ್ಥಿತಿಯನ್ನು ಹಿರಿಯರು ನಿರ್ಮಾಣ ಮಾಡಬಾರದು. ತನ್ನ ಚುರುಕುತನದಿಂದ ಹಿರಿಯರ ಮನಗೆಲ್ಲುವ ಮಗು ಹಿರಿಯರ ಪ್ರಶಂಸೆ-ಪುರಸ್ಕಾರ ದೊರೆಯಲಿಲ್ಲವೆಂದು ಕೊರಗುವ ಸೊರಗುವ ಕೂಸಾಗದಂತೆ, ವಿಧ್ವಂಸಕಭಾವ ಬೆಳೆಸಿಕೊಳ್ಳದಂತೆ ನೋಡಿಕೊಳ್ಳುವ ಹೊಣೆ ಹಿರಿಯರ ಮೇಲಿದೆ.  ಪರಸ್ಪರ ಪ್ರತಿಫಲಾಪೇಕ್ಷೆಯಿಲ್ಲದೆ ನಿಷ್ಕಾಮ ಸಂಬಂಧಗಳು ಸಹಜವಾಗಿ ಅರಳಬೇಕು.