ನನ್ನ ಮಗಳು ಪದವಿಪೂರ್ವ ಹಂತದಲ್ಲಿದ್ದಾಗ ಅಖಿಲ ಭಾರತ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಇತ್ಯಾದಿಗಳಿಗೆ ಸಿದ್ಧವಾಗುವುದಕ್ಕೆ ವಿಶೇಷ ತರಬೇತಿ ಪಡೆಯುತ್ತಿದ್ದಳು. ಅವಳ ಜೊತೆ ಅವಳ ಸಹಪಾಠಿಗಳು ಒಂದಿಬ್ಬರು ಆ ತರಗತಿಗಳಿಗೆ ಹಾಜರಾಗುತ್ತಿದ್ದರು. ಸುಮಾರು ಎರಡು ವರ್ಷಗಳ ಕಾಲ ಈ ತರಗತಿಗಳು ಸಂಜೆ ಹೊತ್ತು ಹಾಗೂ ರಜಾದಿನಗಳಲ್ಲಿ ನಡೆಯುತ್ತಿದ್ದವು. ನನ್ನ ಮಗಳ ಜೊತೆ ಈ ತರಗತಿಗಳಿಗೆ ಹಾಜರಾಗುತ್ತಿದ್ದ ಒಬ್ಬಳು ಹುಡುಗಿಗೆ ಹೇಗಾದರೂ ಸರಿ ತಾನು ಹೆಚ್ಚು ಬುದ್ಧಿವಂಥೆ; ನಿನ್ನನ್ನು ನಾನು ಮೀರಿಸಬಲ್ಲೆ ಎಂದು ತೋರ್ಪಡಿಸುವ ಬಯಕೆ. ಹೀಗಾಗಿ ವಾರ್ಯಂತ್ಯ ಪರೀಕ್ಷೆ, ಮಾಸಿಕ ಪರೀಕ್ಷೆಗಳಾದೊಡನೆ ತನಗೆ ಬಂದ ಅಂಕಗಳನ್ನು ಮುಚ್ಚಿಟ್ಟುಕೊಂಡು ನನ್ನ ಮಗಳು ಗಳಿಸಿದ ಅಂಕಗಳನ್ನು ವಿಚಾರಿಸಿ “ನಿನಗಿಂತ ನನಗೆ ಜಾಸ್ತಿ ಅಂಕಗಳು ಬಂದಿವೆ. ನೀನು ಪ್ರಯೋಜನವಿಲ್ಲ.  ಹೀಗೆ ಆದರೆ ನೀನು ಇದು ಬಿಡು, ಸಿ.ಇ.ಟಿ .ಯಲ್ಲೂ ಒಳ್ಳೆ ರ‍್ಯಾಂಕಿಂಗ್‌ ಪಡೆಯಲಾರೆ” ಅಂತ ಯಾವಾಗಲೂ ಹಂಗಿಸುತ್ತಿದ್ದಳು. “ನಿನ್ನ ಅಪ್ಪ ನಿನ್ನನ್ನು ಇಲ್ಲಿಗೆ ತಂದುಬಿಟ್ಟು ಮನೆಗೆ ಕರೆದುಕೊಂಡು ಹೋಗಲು ಪೆಟ್ರೋಲ್‌ ಖರ್ಚು ಮಾಡಿದ್ದೇ ಬಂತು” ಎಂದು ತೀರ ಹೀನಾಯವಾಗಿ ಮಾತನಾಡಿ ನನ್ನ ಮಗಳ ಮನಸ್ಸು ನೋಯಿಸುತ್ತಿದ್ದಳು. ನನ್ನ ಮಗಳ ಮುಖ ಬಾಡಿದ್ದನ್ನು ಕಂಡು, ಮಾತು ಸೊರಗಿದ್ದನ್ನು ಕಂಡು ಅವಳಿಗೆ ಒಳಗೊಳಗೇ ಖುಷಿ. ಅವಳು ಭಾವನಾತ್ಮಕವಾಗಿ ಪೀಡಿಸುತ್ತಿದ್ದ ರೀತಿಯನ್ನು ನನ್ನ ಮಗಳು ನನಗೆ ವರದಿ ಒಪ್ಪಿಸುತ್ತ ನೋಯುತ್ತಿದ್ದಳು. ಕೆಲವೊಮ್ಮೆ ಅಳುತ್ತಿದ್ದಳು. ಸಮಸ್ಯೆ ಬಗೆಹರಿಸುವುದು ಹೇಗೆ ಎಂಬ ಚಿಂತೆ ಕಾಡತೊಡಗಿತು.

ಅದೃಷ್ಟವಶಾತ್‌ ಅವಳ ಬಣ್ಣ ಬೇಗೆ ಬಯಲಾಯಿತು. ಉದ್ದಕ್ಕೂ ಅವಳು ನನ್ನ ಮಗಳು ಗಳಿಸಿದ ಅಂಕಗಳಿಗಿಂತ ಸಾಕಷ್ಟು ಕಡಿಮೆ ಅಂಕ ಗಳಿಸುತ್ತಿದ್ದಳು. ಈ ವಿಷಯ ಒಮ್ಮೆ ಶಿಕ್ಷಕರಿಂದ ತಿಳಿದದ್ದೇ ನನ್ನ ಮಗಳು ಕಳೆದುಕೊಂಡ ಆತ್ಮವಿಶ್ವಾಸವನ್ನು ಗಳಿಸಿದಳು. ಆದರೆ ಅವಳೆಂದೂ ಪ್ರತೀಕಾರ ಬಗೆಯಲಿಲ್ಲ. ಗೆಳತಿಯ ಮನ ನೋಯಿಸಲಿಲ್ಲ. ಇಂದು ಯಾವುದನ್ನು ಬುಲ್ಲಿಯಿಂಗ್‌, ರ‍್ಯಾಗಿಂಗ್‌ ಎಂದು ಕರೆಯುತ್ತೇವೋ ಅದರ ಒಂದು ರೂಪವಿದು; ಭಾವನಾತ್ಮಕ ಹಿಂಸಾನಂದವಿದು.

‘ದ ಲೈವ್ಸ್‌ ಆಫ್‌ ಚಿಲ್ಡ್ರನ್‌’ ಎಂಬ ಕೃತಿಯಲ್ಲಿ ಸ್ಟ್ಯಾನ್ಲಿ ಎಂಬ ಹನ್ನೆರಡು ವರ್ಷದ ಹುಡುಗನೊಬ್ಬನ ಬಗ್ಗೆ ಜಾರ್ಜ್ ಡೆನಿಸನ್‌ ಬರೆಯುತ್ತಾನೆ. ಈ ಹುಡುಗ ಮಹಾ ಉಪದ್ರವಿ. ಶಾಲೆಯಲ್ಲಿ ಎಲ್ಲವನ್ನೂ ಎಲ್ಲರನ್ನೂ ಲಗಾಡಿ ತೆಗೆಯುವವನು. ಇತರ ವಿದ್ಯಾರ್ಥಿಗಳಿಗೆ ಅವನು ಕೊಡುತ್ತಿದ್ದ ಉಪಟಳ ಅಷ್ಟಿಷ್ಟಲ್ಲ. ಅವರೆಲ್ಲಾ ಸೇರಿ ಅವನನ್ನು ಶಾಲೆಯಿಂದ ಹೊರಗೆ ಅಟ್ಟಬೇಕೆಂದು ಶಾಲಾ ಆಡಳಿತಕ್ಕೆ ಮನವಿ ಮಾಡಿದರು. ಸ್ಟ್ಯಾನ್ಲಿ ಬದಲಾಗಬಹುದು ಎಂದು ಶಾಲೆಯವರು ಕಾದರು. ಅಷ್ಟರೊಳಗಾಗಲೆ ಅವನು ಸಾಕಷ್ಟು ಹಾನಿ ಮಾಡಿದ್ದ. ನಿರ್ವಾಹವಿಲ್ಲದೆ ಅವನನ್ನು ಶಾಲೆಯಿಂದ ಬಹಿಷ್ಕರಿಸಿದರು.

ನಮ್ಮ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳು ಅನಗತ್ಯವಾಗಿ ಇತರ ಮಕ್ಕಳನ್ನು ಗೋಳುಹೊಯ್ದುಕೊಳ್ಳುತ್ತಿರುತ್ತಾರೆ. ಅನಗತ್ಯವಾಗಿ ಲೇವಡಿ ಮಾಡುತ್ತಾರೆ . ಛೇಡಿಸುತ್ತಾರೆ. ಜಗಳ ಕಾಯುತ್ತಾರೆ.  ದುರ್ಬಲ ಮಕ್ಕಳಿಗೆ ನಾಲ್ಕು ಬಾರಿಸುತ್ತಾರೆ. ಅಧ್ಯಾಪಕರಲ್ಲಿ ಸುಳ್ಳು ಹೇಳಿ ಇತರ ಮಕ್ಕಳಿಗೆ ಶಿಕ್ಷೆಕೊಡಿಸಿ ನಗುತ್ತಾರೆ. ನಾನು ಚಿಕ್ಕಂದಿನಲ್ಲಿ ಎಲಿಮೆಂಟರಿ ಶಾಲೆಗೆ ಹೋಗುತ್ತಿದ್ದಾಗ ಒಬ್ಬ ಠೊಣಪನಿದ್ದ. ಅವನು ಯಾವಾಗಲೂ ನನ್ನ ಬೆನ್ನಿಗೆ ಗುದ್ದುತ್ತಿದ್ದ . ನಾನು ಯಾರಲ್ಲೂ ಹೇಳಲಾಗದೆ ಅವನ ಕಾಟ ಸಹಿಸಿಕೊಂಡೆ. ಕೊನೆಗೊಮ್ಮೆ ನನ್ನ ಮೇಲೆ ಕರುಣೆಯುಳ್ಳ ನಮ್ಮ ಮನೆ ಸಮೀಪದ ಹೈಸ್ಕೂಲು ವಿದ್ಯಾರ್ಥಿಗೆ ಈ ವಿಷಯ ತಿಳಿಯಿತು. ಆತ ಬಲಿಷ್ಠನಾಗಿದ್ದ. ಅವನು ಠೊಣಪನನ್ನು ಚೆನ್ನಾಗಿ ಗದರಿಸಿದ ಮೇಲೆ ಆತ ನನ್ನ ಸುದ್ಧಿಗೆ ಬರಲಿಲ್ಲ.

ಉಡುಪಿಯ ಒಂದು ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಂಟನೆಯ ತರಗತಿಗೆ ಗುಲಾಮ ಎಂಬ ಹುಡುಗನನ್ನು ತಂದೆತಾಯಿ ಸೇರಿಸಿದರು. ಗುಲಾಮ ಹಾಗೂ ಅವನ ತಂದೆತಾಯಿ ಬಿಜಾಪುರದಿಂದ ಉಡುಪಿಗೆ ಕೆಲಸ ಅರಸಿಕೊಂಡು ಬಂದವರು. ಗುಲಾಮ ಏಳನೆಯ ಇಯತ್ತೆಯಲ್ಲಿ ನಪಾಸಾಗಿ ಅಪ್ಪ-ಅಮ್ಮನ ಜೊತೆ ಅಲ್ಲಿ ಇಲ್ಲಿ ಕೆಲಸಮಾಡಿ ಖಾಸಗಿಯಾಗಿ ಪಾಸಾದವನು. ಉಡುಪಿಯಲ್ಲಿ ಅಪ್ಪ-ಅಮ್ಮನಿಗೆ ಕಟ್ಟಡ ನಿರ್ಮಾಣದ ಕಂಟ್ರಾಕ್ಟರ್ ಬಳಿ ಕೆಲಸ ಸಿಕ್ಕಿತು. ಕೆಲವೊಮ್ಮೆ ಶಾಲೆಗೆ ಚಕ್ಕರ್ ಹಾಕಿ ಅಪ್ಪ ಅಮ್ಮನ ಜೊತೆ ಗುಲಾಮ ಕೆಲಸಕ್ಕೆ ಹೋಗುತ್ತಿದ್ದ.

ಗುಲಾಮ ತನ್ನ ತರಗತಿಯಲ್ಲಿ ಎತ್ತರದ ಹುಡುಗ. ಉಳಿದವರಿಗಿಂತ ಹೆಚ್ಚು ಬಲಿಷ್ಠ. ಫೈಲಾಗಿ ಫೈಲಾಗಿ ಎಂಟನೇ ಕ್ಲಾಸಿಗೆ ಬಂದದ್ದರಿಂದ ಪ್ರಾಯದಲ್ಲಿ ಉಳಿದ ಮಕ್ಕಳಿಗಿಂತ ದೊಡ್ಡವನು. ಹೀಗಾಗಿ ಅವನು ಶಾಲೆಗೆ ಸೇರಿದ ಸ್ವಲ್ಪ ದಿನಗಳಲ್ಲೇ ಉಳಿದವರಿಗೆ ತಂಟೆಮಾಡಲು ಶೂರುಮಾಡಿದ. ಹುಡುಗಿಯರನ್ನು ಗೇಲಿಮಾಡುತ್ತಿದ್ದ. ಸಿಟ್ಟುಬಂದರೆ ಹುಡುಗರನ್ನು ಹಿಡಿದು ದರದರನೆ ಎಳೆಯುತ್ತಿದ್ದ. ತರಗತಿಯ ಮಕ್ಕಳಿಗೆ ಅವನೆಂದರೆ ಭಯ-ತಿರಸ್ಕಾರ. ತರಗತಿ ಶಿಕ್ಷಕರಿಗೆ ಮಕ್ಕಳು ದೂರುಕೊಡುತ್ತಿದ್ದರು. ಶಿಕ್ಷಕಿಯ ಮಾತುಗಳಿಗೆ ಗುಲಾಮ ಕಿವಿಗೊಟ್ಟರೆ ತಾನೆ?  ನಿರ್ವಾಹವಿಲ್ಲದೆ ಶಿಕ್ಷಕಿ ಆತನನ್ನು ಆಗಾಗ್ಗೆ ಮುಖ್ಯೋಪಾಧ್ಯಾಯರ ಬಳಿಗೆ ಕಳುಹಿಸುತ್ತಿದ್ದರು. ಮುಖ್ಯೋಪಾಧ್ಯಾಯರಿಗೋ ಸಮಸ್ಯೆ ಈಗಾಗಲೇ ಕನ್ನಡಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಮೇಲ್‌ ಮಧ್ಯಮವರ್ಗದ ಮಕ್ಕಳು ಹಾಗೂ ಶ್ರೀಮಂತವರ್ಗದ ಮಕ್ಕಳೆಲ್ಲ ಆಂಗ್ಲಮಾಧ್ಯಮ ಶಾಲೆಗಳಲ್ಲಿ; ಕೂಲಿಕಾರ್ಮಿಕರು, ವಲಸೆ ಕಾರ್ಮಿಕರು ಇತ್ಯಾದಿ ವರ್ಗಗಳ ಮಕ್ಕಳನ್ನು ಹಾಗೂ ಹೀಗೂ ಪುಸಲಾಯಿಸಿ ಒಂದಿಷ್ಟು ಸೌಲಭ್ಯಗಳನ್ನು ಒದಗಿಸಿ ದಾಖಲು ಮಾಡಿಕೊಂಡು ವಿದ್ಯಾರ್ಥಿ ಸಂಖ್ಯೆಯನ್ನು ಕಷ್ಟದಲ್ಲಿ ಕಾಪಾಡಿಕೊಂಡು ಬರುತ್ತಿರುವಾಗ ಗುಲಾಮನಂಥ ಹುಡುಗನನ್ನು ಗದರಿಸಿ ಬೆದರಿಸಿ ಶಿಕ್ಷಿಸಿದರೆ ಶಾಲೆ ಬಿಟ್ಟೇಬಿಡುತ್ತಾನೆ.  ಹಾಗೆಂದು ವಿಚಾರಣೆ ಮಾಡದೇ ಇರುವಂತಿಲ್ಲ. ಏನೂ ಮಾಡದಿದ್ದರೆ ಆ ಶಿಕ್ಷಕಿಯ ಕಣ್ಣಲ್ಲಿ ‘ಎಚ್ಚೆಮ್‌ ಬುರ್ನಾಸು’ ಆಗಬೇಕಾಗುತ್ತದೆ!

ಕೊನೆಗೂ ಮುಖ್ಯೋಪಾಧ್ಯಾಯರು ಗುಲಾಮನ ಜೊತೆ ಹತ್ತಾರುಬಾರಿ ಮಾತನಾಡಿ ಇತರ ಹುಡುಗರ ಜೊತೆ ಕೂಡಿ ನಡೆದುಕೊಂಡರೆ ಅವರಿಗೆ ಸಹಕಾರಿಯಾದರೆ ತರಗತಿಯಲ್ಲಿ ಏನೂ ಸಮಸ್ಯೆಯಾಗದು ಎಂಬು ಭರವಸೆ ನೀಡಿದರು. ಗುಲಾಮ ತನ್ನ ವರ್ತನೆ ತಿದ್ದಿಕೊಳ್ಳಲು ಒಪ್ಪಿಕೊಂಡ. ಸ್ವಲ್ಪ ದಿನ ತರಗತಿಯ ವಾತಾವರಣ ತಿಳಿಯಾಯಿತು. ತರಗತಿಯ ಶಿಕ್ಷಕಿಗೂ ಋಷಿಯಾಯಿತು. ಮುಖ್ಯೋಪಾಧ್ಯಾಯರು ಗುಲಾಮನನ್ನು ಅಭಿನಂದಿಸಿದರು. ಆದರೆ ಇದಾದ ತಿಂಗಳೊಪ್ಪತ್ತಿನಲ್ಲಿ  ಯಥಾಪ್ರಕಾರ ಅದೇ ಹಳೆ ಪರಿಸ್ಥಿತಿ. ಕೈಸೋತ ಶಿಕ್ಷಕಿ ‘ಹೋಗಪ್ಪಾ ಹೆಡ್‌ಮಾಸ್ಟರ್ ಬಳಿಗೆ’ ಅನ್ನುತ್ತಿದ್ದರು.  ಮತ್ತೆ ಮುಖ್ಯ ಶಿಕ್ಷಕರ ಕಛೇರಿಯಲ್ಲಿ ಗುಲಾಮನ ತಲೆ ಕಾಣಿಸಿಕೊಂಡಿತು. “ಈಗ ಯಾವ ಹೊಸ ಸಮಸ್ಯೆ ಗುಲಾಮ? ನೀನು ಬದಲಾಗಲಿಲ್ವೆ? ಮತ್ತೆ ಕ್ಲಾಸಿನಲ್ಲಿ ಏನು ತೊಂದರೆ?” ಹುಡುಗ ಹೇಳಿದ “ಸಮಸ್ಯೆ ಹಳೆಯದೆ. ಬದಲಾಗಲು ಹೋಗಿ ಬದಲಾಗಬಾರದೆಂದು ತೀರ್ಮಾನಿಸಿದ್ದೇನೆ. ಏಕೆಂದರೆ ಹೀಗಿರುವುದೇ ನನಗೆ ಕ್ಷೇಮ!”

ಯಾಕೆ ಹೀಗಾಯಿತು! ಹಲವು ಕಾರಣಗಳಿರಬಹುದು. ಇತರ ಹುಡುಗರ ಸ್ನೇಹ ಸಂಪಾದನೆಗೆ ಹೊರಟಾಗ ಗುಲಾಮ ಹಲವು ತೊಂದರೆಗಳನ್ನು ಎದುರಿಸಬೇಕಾಗಿ ಬಂದಿರಬಹುದು. ತರಗತಿಯಲ್ಲಿ ಉಳಿದ ಮಕ್ಕಳು ಒಂದು ರೀತಿಯಾದರೆ ಇವನ ರೀತಿಯೇ ಬೇರೆ. ಇವನು ನಮ್ಮ ಹಾಗಿರುವವನಲ್ಲ ಎಂಬ ಕಾರಣಕ್ಕೆ ಮಕ್ಕಳು ಅವನನ್ನು ತಿರಸ್ಕರಿಸಿರಬಹುದು. ಗುಲಾಮನಿಗೆ ತನ್ನ ಬಡತನದ ಬಗ್ಗೆ ತುಂಬ ಅಪಮಾನವಿದ್ದಿರಬೇಕು. ಈ ಬಡ ಹುಡುಗನ ಜೊತೆ ಆಟ ಆಡಬೇಡಿ ಎಂದು ತಂದೆತಾಯಿಗಳು ತಮ್ಮ ಮಕ್ಕಳಿಗೆ ಹೇಳಿರಬಹುದು. ವಯಸ್ಸಾದ ಹಾಗೆ ಈ ಅಂತರ ಹೆಚ್ಚುವುದೇ ಹೊರತು ಅಳಿಯುವುದಿಲ್ಲವೆಮಬುದೂ ಅವನಿಗೆ ಅರಿವಾಗಿರಬೇಕು.

ಹತಾಶೆ, ಅಪಮಾನ, ನಾಚಿಕೆ ಹಾಗೂ ಅಸಹಾಯಕತೆಯಿಂದ ಪಾರಾಗಲು ಅನೇಕರು ಮಾಡುವಂತೆ ಈ ಹುಡುಗ ಉದ್ದೇಶಪೂರ್ವಕ ಸೋಲಿಗೆ ಶರಣಾದ. ಈ ಮೊದಲು ತರಗತಿಯಲ್ಲಿ ಏನುಮಾಡುತ್ತಿದ್ದನೋ ಅದನ್ನು ಮುಂದುವರಿಸುವುದು ಯೋಗ್ಯವೆಂದು ಕಂಡುಕೊಂಡ.  ಈ ಹಿಂದೆ ತಾನು ಮಾಡದೇ ಇರುವುದನ್ನು ಮಾಡುವುದು ನಿಜಕ್ಕೂ ಯಾತನಾಮಯ ಹಾಗೂ ಅಪಮಾನಕರ ಎಂಬುದನ್ನು ಅನುಭವದಿಂದ ಕಂಡುಕೊಂಡ.  ತನ್ನತ್ತಲೇ ಗಮನ ಕೇಂದ್ರೀಕರಿಸಬೇಕು. ತನ್ನ ಬಗ್ಗೆ ಕಾಳಜಿ ವ್ಯಕ್ತಪಡಿಸಬೇಕು. ತನಗೆ ಬೇಕಾದ್ದನ್ನು ಕೊಡಬೇಕೆ ಹೊರತು ಶಿಕ್ಷೆಯನ್ನಲ್ಲ ಎಂದು ಬಯಸಿದ ಗುಲಾಮ ಇತರ ಮಕ್ಕಳನ್ನು ಹಿಂಸಿಸಿ ಆನಂದಿಸುತ್ತಿದ್ದ. ಬೇಕಾದದ್ದು ಗಮನ! ಆದರೆ ಅದಷ್ಟೇ ಅಲ್ಲ; ಇನ್ನೂ ಏನೇನೋ ಇದೆ. ಶಾಲೆಯಲ್ಲಿ ತಂಟೆಕೋರರೆಂದೋ ಉಡಾಳರೆಂದೋ ಅಥವಾ ಅಪರಾಧಿಗಳೆಂದೋ ಪರಿಗಣಿಸಲಾದ ಈ ಸ್ಟ್ಯಾನ್ಲಿ, ಗುಲಾಮ ಮುಂತಾದ ವಿದ್ಯಾರ್ಥಿಗಳು ನಿರುಪಯುಕ್ತತೆ ಹಾಗೂ ನೈರಾಶ್ಯದ ಭಾವನೆಗಳಿಂದ ನರಳುತ್ತಾರೆ. “ನಾನೇನೂ ಪ್ರಯೋಜನವಿಲ್ಲ. ನನ್ನನ್ನು ಯಾರೂ ಇಷ್ಟಪಡುವುದಿಲ್ಲ. ನನ್ನ ಜೊತೆ ಯಾರೂ ಸ್ನೇಹ ಬೆಳೆಸುವುದಿಲ್ಲ. ನಾನೊಬ್ಬ ಮೂರ್ಖನೆಂದು ಅವರೆಲ್ಲ ಭಾವಿಸಿರುವಂತಿದೆ. ಆದುದರಿಂದ ನಾನು ಕೂಡ ಅವರ ಸ್ನೇಹವನ್ನು ನಿರಾಕರಿಸುವೆ. ನಾನು ಏನೂ ಮಾಡಿದರೂ ಅವರು ನನ್ನನ್ನು ಇಷ್ಟಪಡುವವರಲ್ಲ; ಆದ್ದರಿಂದ ನಾನು ಕೂಡ ಅವರನ್ನು ವಿರೋಧಿಸಿ ಋಷಿಪಡಬೇಕು”-ಹೀಗೆ ತಮ್ಮನ್ನು ತಾವು ದ್ವೇಷಿಸುವ ಹುಡುಗರು ಅನ್ಯರು ತಮಗೆ ನೆರವಿಗೆ ಬರುವುದನ್ನು ಧಿಕ್ಕರಿಸಿ ಅವರಿಗೆ ನೋವುಂಟುಮಾಡುತ್ತಾರೆ!

ಎಲ್ಲ ಮಕ್ಕಳೂ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ಹೇಳುವುದು ಸುಲಭ. ಆದರೆ ಹಾಗೆ ಆಗುವುದು ಕಷ್ಟ . ಮನೆಯಲ್ಲೇ ಅಣ್ಣ ತಂಗಿ, ಅಕ್ಕ ತಮ್ಮ, ಅಣ್ಣ ತಮ್ಮ, ಅಕ್ಕ ತಂಗಿ ನಡುವೆ ಪ್ರೇಮದ ಬಂಧ ಬೆಸೆಯದ ಸಂದರ್ಭಗಳು ಹಲವಿವೆ. ಹೀಗಿರುವಾಗ ಶಾಲೆಯಲ್ಲಿ ಪರಿಸ್ಥಿತಿ ಇನ್ನೂ ಕಠಿಣ. ತಾವು ಪ್ರೀತಿಪಾತ್ರರು ಹೌದೋ ಅಲ್ಲವೋ ಎಂಬುದನ್ನು ತಾತ್ಕಾಲಿಕವಾಗಿ ಮರೆಯುವಂಥ ಕೆಲವಾರು ಅನುಭವಗಳನ್ನು  ಇಂಥ ಮಕ್ಕಳಿಗೆ ಒದಗಿಸುವುದು ಸೂಕ್ತ.

ಓರ್ವ ಅಮೇರಿಕನ್‌ ಪರಿಣತರು ವಿದ್ಯಾರ್ಥಿಗಳಿಗೆ ನೀಡಿದ ಸಂದೇಶವೊಂದು ಇಲ್ಲಿ ಮನನೀಯ.  ಡೀನ್‌ಪಾಲ್‌ ರಾಬರ್ಟ್ಸ್ ಅಪ್ರಾಪ್ತ, ಗೊಂದಲಬಡುಕ ಹಾಗೂ ಸ್ವದ್ವೇಷಿ ಯುವಕರಿಗೆ ನೀಡಿದ ಸಂದೇಶ ಹೀಗಿದೆ: (೧) ನಿಮ್ಮನ್ನು ನೀವು ಮೊದಲು ಒಪ್ಪಿಕೊರ್ಳಳಿ. (೨ ) ನಿಮ್ಮನ್ನು ನೀವು ಮರೆಯಿರಿ. (೩) ನಿಮಗಿಂತ ಮುಖ್ಯವಾದ ಮತ್ತು ಹೆಚ್ಚು ಆಸಕ್ತಿದಾಯಕವಾದ ಏನಾದರೊಂದು ಕೆಲಸ ಮಾಡಿ.

ಎಷ್ಟೊಂದು ಮಹತ್ವದ ಸಂದೇಶ? ನಾವು ಹೇಗಿದ್ದೇವೋ ಹಾಗೆ ಒಪ್ಪಿಕೊಳ್ಳುವುದು ತುಂಬ ಮುಖ್ಯ ಏನಾಗಿದ್ದೆವು? ಏನಾಗಬೇಕೆಂದಿದ್ದವು? ಅವೆಲ್ಲ ದೂರದ ಭೂತ ಹಾಗೂ ನಿಗೂಢ ಭವಿಷ್ಯ. ವರ್ತಮಾನದಲ್ಲಿ ಕ್ಷಣಕ್ಷಣಕ್ಕೂ ಬುದಕುತ್ತ ನಮ್ಮ ಇರುವಿಕೆಯನ್ನು ನಾವೇ ಮೊದಲು ಸ್ವೀಕರಿಸಬೇಕು; ಅಂತೆಯೇ ನಮ್ಮ ಸ್ಥಾನಮಾನ, ಹಿನ್ನೆಲೆ, ಬಡತನ, ಸಿರಿತನ ಇತ್ಯಾದಿ ಬೇತಾಳಗಳು ನಮ್ಮ ಬೆನ್ನೇರಿ ನಮ್ಮ ವ್ಯಕ್ತಿತ್ವದ ಚೀಲಕ್ಕೆ ಗಾಳಿ ತುಂಬಿಸುತ್ತವೆ ಅಥವಾ ವ್ಯಕ್ತಿತ್ವದ ಬಲೂನಿಗೆ ಸೂಜಿ ಚುಚ್ಚಿಬಿಡುತ್ತವೆ. ಆದುದರಿಂದ ನಮ್ಮನ್ನು ನಾವು ಮರೆಯಬೇಕು. ಎಷ್ಟೊಂದು ಸಲ ನಮ್ಮ ಚಿಂತನಗಳು ಆತ್ಮಕೇಂದ್ರಿತವಾಗಿರುತ್ತವೆ. ಆ ಲೋಕದಲ್ಲಿ ನಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ.  ನಾವು  ಬಹುಮುಖ್ಯ ವ್ಯಕ್ತಿಗಳಾಗಿರುತ್ತೇವೆ. ಆದರೆ ನಮಗಿಂತಲೂ ಆಸಕ್ತಿದಾಯಕವಾದುದನ್ನು ಮಿಗಿಲಾದುದನ್ನು ಕಂಡು ಅದಕ್ಕೆ ಬೆಲೆಕೊಟ್ಟು ಏನಾದರೂ ಮಾಡಿದಾಗ ಬಾಳು ಸಾರ್ಥಕ.

ನಾನು ಹತ್ತೊಂಬತ್ತರ ಪ್ರಾಯದಲ್ಲಿ ಪದವೀಧರನಾದೆ. ಆದರೆ ಒಂದು ವರ್ಷ ಕಾಲ ನಿರುದ್ಯೋಗಿಯಾಗಿ ಬೀದಿಬೀದಿ ಅಲೆದೆ. ನನ್ನ ಬಗ್ಗೆ ನನಗೇ ತಿರಸ್ಕಾರ ಮೂಡಿತು. ಇತರರು ‘ಅಯ್ಯೋ ಪಾಪ’ ಅಂತ ಯೋಚಿಸುತ್ತಿದ್ದರು. “ಸೆಕೆಂಡ್‌ಕ್ಲಾಸ್‌ನಲ್ಲಿ ಪಾಸಾಗಿದ್ದಿದ್ದರೆ ಬ್ಯಾಂಕ್‌ ಕೆಲ್ಸ ತೆಗ್ಸಿ ಕೊಡ್ತಿದ್ದೆ. ಏನು ಮಾಡೋದು? ಥರ್ಡ್‌ಕ್ಲಾಸಿನಲ್ಲಿ ಪಾಸಾದ೧ ಯಾರು ಕೆಲ್ಸ ಕೊಡ್ತಾರೆ?” ಎಂಬ ಮಾತುಗಳನ್ನು ಕೇಳಬೇಕಾಯಿತು. ಆದರೆ ನಾನು ನನ್ನ ತಂದೆಗೆ ಹೊರೆಯಾಗಬಾರದು ಮತ್ತು ಬಡತನ, ಅಪಮಾನಗಳ ಕುಲುಮೆಯಿಂದ ಹೊರಕ್ಕೆ, ಮುಕ್ತ ಬಯಲಿಗೆ ಧುಮುಕಬೇಕು ಎಂದು ನಿರ್ಧರಿಸಿ ಹೋಟೆಲ್‌ ಕೆಲಸಕ್ಕೆ ಸೇರಿಕೊಂಡೆ. ಚೆನ್ನಾಗಿ ಕೆಲಸ ಮಾಡಿದೆ. ತಿಂದೆ, ಉಂಡೆ, ಅಲ್ಪ ಸ್ವಲ್ಪ ಸಂಪಾದನೆ ಮಾಡಿದೆ. ಮುಂದೆ ಜೀವವಿಮಾ ನಿಗಮದಲ್ಲಿ ಮೂರುತಿಂಗಳು ತಾತ್ಕಾಲಿಕ ನೆಲೆಯಲ್ಲಿ ಸಹಾಯಕನಾಗಿ ದುಡಿದದ್ದು ಬಾಳಿನ ಒಂದು ಮುಖ್ಯ ತಿರುವು. ಅಲ್ಲಿಯವರೆಗೆ ನಾನು ಪ್ಯಾಂಟ್‌ ಹಾಕಿದ್ದಿಲ್ಲ. ವಾಚ್‌ ಕಟ್ಟಿದ್ದಿಲ್ಲ. ಒಳ್ಳೆಯ ಶರ್ಟ್ ತೊಟ್ಟಿದ್ದಿಲ್ಲ. ಮೊದಲ ತಿಂಗಳ ಸಂಬಳ ಬಂದೊಡನೆ ಪ್ಯಾಂಟು, ಶರ್ಟ್ ಹೊಲಿಸಿದೆ. ವಾಚ್‌ ಕೊಂಡುಕೊಂಡೆ! ಜೀವವಿಮಾ ನಿಗಮದ ತಾತ್ಕಾಲಿಕ ಕೆಲಸ ಮುಗಿಯುತ್ತಿದ್ದಂತೆಯೆ ಬ್ರಹ್ಮಾವರ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದಲ್ಲಿ ಒಂಬತ್ತು ತಿಂಗಳಮಟ್ಟಿಗೆ ಕನ್ನಡ ಪಂಡಿತನಾಗಿ ಕೆಲಸಕ್ಕೆ ಸೇರಿಕೊಂಡೆ. ನನ್ನ ಅಧ್ಯಾಪನದ ವೃತ್ತಿಜೀವನಕ್ಕೇ ತಿರುವುನೀಡಿದ ಸಂದರ್ಭವಿದು. ನನ್ನೊಳಗಿನ ಶಿಕ್ಷಕನನ್ನು ನಾನಿಲ್ಲಿ ಕಂಡುಕೊಂಡೆ. ಬೋಧನೆಯ ಮೂಲಕ ಆತ್ಮಾನಂದ ಹಾಗೂ ಆತ್ಮತೃಪ್ತಿಯನ್ನು ಕಂಡುಕೊಂಡೆ. ಪಾಠಮಾಡುತ್ತ ಮಾಡುತ್ತ ತನ್ನನ್ನು ತಾನು ಮರೆಯಲು ಸಾಧ್ಯವೆಂಬುದನ್ನು ತಿಳಿದುಕೊಂಡೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡವುಲ್ಲಿ ನನಗಿಂತ ಮಿಗಿಲಾದುದೇನೋ ಇದೆ ಎಂದು ಮನವರಿಕೆಯಾಯಿತು.

ಶಾಲೆಯಲ್ಲಿ ಅತೃಪ್ತಿಯಿಂದ ನಡೆದುಕೊಳ್ಳುವ ಇತರರಿಗೆ ಸಮಸ್ಯೆಯಾಗಿ ಪರಿಣಮಿಸುವ ಹುಡುಗ ಹುಡುಗಿಯರ ಒಂದು ಸಮಸ್ಯೆ ಇದು. ಅವರು ಯಾವ ಕೆಲಸದಲ್ಲಿ ತಮ್ಮನ್ನು ತಾವು ಮರೆಯಲು ಸಾಧ್ಯ? ಯಾವ ಕೆಲಸ ಅವರಿಗೆ ಗೊತ್ತಿದೆ? ಯಾವ ಕೆಲಸ ಮಾಡಲು ಅವರು ಸಿದ್ಧರಿದ್ದಾರೆ? ಎಲ್ಲರಿಗೂ ಬಿಳಿಯ ಕಾಲರಿನ ಕೆಲಸವೇ ಬೇಕು ಎಂದರೆ ಹೇಗೆ? ಪರಂಪರಾಗತ ಕುಲಕಸುಬುಗಳು ನಶಿಸುತ್ತಿವೆ. ಕೃಷಿ ಯಾರಿಗೂ ಬೇಡ. ಹಾಗಾದರೆ ಮಾಡುವುದೇನು? ಹಾಲಿನ ವಿತರಣೆ, ಪೇಪರ್ ಮಾರಾಟ, ಕೊರಿಯರ್ ಸೇವೆ, ರಿಪೇರಿ ಇತ್ಯಾದಿ ಕೆಲಸಗಳು ಹಲವರಿಗೆ ಬೇಡ. ಯುವಕ, ಯುವತಿ ಮಂಡಲಗಳು, ಮಹಿಳಾ ಮಂಡಳಿಗಳು ಸುಮ್ಮನೆ ಹೆಸರಿಗಾಗಿ ಇವೆ. ಇವುಗಳಿಂದ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಆಗುತ್ತಿಲ್ಲ. ಹೀಗಾಗಿ ಇಂದಿನ ಅತೃಪ್ತ, ಸಮಸ್ಯೆಯ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ, ಉದ್ಯೋಗ ಕೌಶಲಗಳ ತರಬೇತಿ ಅಗತ್ಯವಿದೆ. ಅವರಿಗೆ ವಿಶಾಲ ಜಗದಲ್ಲಿ ನೆಲೆನಿಲ್ಲುವ ಅಗತ್ಯವಿದೆ.

ಅತೃಪ್ತರಾದ, ಹತಾಶರಾದ ಇಂಥ ಮಕ್ಕಳು ಅಥವಾ ತರುಣರು ಅವಕಾಶ ಒದಗಿದರೆ ಬೇರೆಯವರಿಗೆ ಸಹಾಯಮಾಡಲು ಸಿದ್ಧರು. ಗುಂಪಿನಲ್ಲಿ ಅವರು ಗುಂಪಿನ ನಿರ್ದೇಶನಕ್ಕೆ ಅನುಗುಣವಾಗಿ ವರ್ತಿಸುತ್ತಾರೆ. ಆದರೆ ಅವರ ಹೃದಯತಂತಿಯನ್ನು ಮೀಟಿ ಮಾತನಾಡಿಸಿದರೆ ತಮ್ಮ ಹಂಬಲವನ್ನು ಹೇಳಿಕೊಳ್ಳುತ್ತಾರೆ. ಹೀಗಾಗಿ ಶಾಲೆಗಳವರು ಇಂಥ ಮಕ್ಕಳ ವರ್ತನೆಯಲ್ಲಿ ಪರಿವರ್ತನೆ ಉಂಟುಮಾಡಲು ಸಾಮಾಜಿಕವಾಗಿ ಉಪಯುಕ್ತವೂ ಉದಾತ್ತವೂ ಆದ ಏನಾದರೊಂದು ಕಾರ್ಯ ಯೋಜನೆಯನ್ನು ಕೈಗೆತ್ತಿಕೊಂಡರೆ ಒಳ್ಳೆಯ ಫಲಿತಾಂಶಗಳು ದಕ್ಕುತ್ತವೆ. ಏಕೆಂದರೆ ಇವರು ಕೆಲಸಗಳ್ಳರಲ್ಲ, ಸೋಂಬೇರಿಗಳಲ್ಲ.

ಉಡಾಳರಿಗೆ, ಉಪದ್ರವಜೀವಿಗಳಿಗೆ ಎಷ್ಟೋ ವೇಳೇ ನಾವು ಇನ್ನೊಂದು ಅವಕಾಶ ಕೊಡುವುದಿಲ್ಲ, ಹೊಸಜೀವ ಮರುಜನ್ಮ ನೀಡಹೋಗುವುದಿಲ್ಲ. “ನಿನಗೆ ಸಾಕಷ್ಟು ಬುದ್ಧಿ ಹೇಳಿಯಾಯಿತು. ತಗೋ ನಿನ್ನ ಟಿ.ಸಿ. ನೀನಿಲ್ಲಿ ಏನೂ ಆಗುವುದಿಲ್ಲ ಅಂತ ನನಗೆ ಗೊತ್ತು. ನಿನ್ನ ಬಗ್ಗೆ ನಾನು ಕನಸುಕಾಣುವುದೇ ತಪ್ಪು” ಎಂದು ತಂದೆ ತೀರ್ಪು ನೀಡುತ್ತಾನೆ. “ನೀನು ಈ ಲವರ್ಷ ಎಸ್‌.ಎಸ್‌.ಎಲ್‌.ಸಿ. ಪಾಸಾದ ಹಾಗೆ”  ಅಂತ ಲೆಕ್ಕದ ಮಾಸ್ಟ್ರು ಪ್ರವಾದಿತ್ವದ ಮಾತುಗಳನ್ನು ತರಗತಿಯಲ್ಲಿ ಎಲ್ಲರೆದುರು ಘೋಷಣೆ ಮಾಡುತ್ತಾಋಎ . ಅವಕಾಶ ನಿರಾಕರಣೆಯೇ ಶಿಕ್ಷೆ. ಪ್ರಾಯಃ ಇನ್ನೊಂದು ಅವಕಾಶ ಸಿಕ್ಕರೆ ಚಿತ್ರ ಬದಲಾಗಲಾರದೆ? ಬಾಳಿನಲ್ಲಿ ಎಷ್ಟೋ ವೇಳೆ ಇನ್ನೊಂದು ಅವಕಾಶ, ಬೇರೊಂದು ಸನ್ನಿವೇಶ ಒದಗಿದರೆ ನಮ್ಮ ಗತಿ ಖಂಡಿತಕ್ಕೂ ಬದಲಾಗುತ್ತದೆ. ಬಿ.ಎಡ್‌. ಪದವಿಯಲ್ಲಿ ಒಂಬತ್ತನೆಯ ರ‍್ಯಾಂಕ್‌ ಗಳಿಸಿಯೂ ಒಂದು ವರ್ಷ ತರಬೇತಿರಹಿತ ಶಿಕ್ಷಕನಾಗಿ ದುಡಿದರೂ ನನಗೆ ಮೂರುನಾಲ್ಕು ತಿಂಗಳು ಉದ್ಯೋಗ ದೊರೆಯಲಿಲ್ಲ. ಎಲ್ಲೋ ಒಂದು ಕಡೆ ಆಯ್ಕೆಯಾಗಿ ಆ ಶಾಲೆಗೆ ನಾಳೆ ಸೇರಬೇಕೆನ್ನುವಾಗ ಇನ್ನೊಂದು ಶಾಲೆಯಲ್ಲಿ ಶಿಕ್ಷಕನಾಗಲು ಕರೆ ಬಂದಿತು. ಆ ಶಾಲೆಗೆ ಸೇರಿದೆ. ಐದು ವರ್ಷ ದುಡಿದೆ. ಬಾನುಲಿಗೆ ಹಾರಿದೆ. ಮತ್ತೆ ಬೋಧನೆಯ ಕ್ಷೇತ್ರಕ್ಕೆ ಮರಳಬೇಕೆಂದು ಹಂಬಲಿಸಿದೆ. ‘ಶಿಕ್ಷಕರ ಶಿಕ್ಷಕ’ (‘ಗುಗ್ಗುರು’)ನಾಗುವ ಅವಕಾಶ ಕೈಬೀಸಿ ಕರೆಯಿತು. ಪುನರಪಿ ವಿದ್ಯಾಭ್ಯಾಸದ ಕ್ಷೇತ್ರದ ಕಡೆಗೆ ಹೊರಳಿದೆ. ಅಲ್ಲಿಂದ ಹಿಂತಿರುಗಿ ನೋಡಿದ್ದಿಲ್ಲ. ಹಾದಿ ಸವೆಸುತ್ತಲೇ ಇದ್ದೇನೆ. ಬ್ರಹ್ಮಾವರ ಶಾಲೆಯನ್ನು, ಅದಮಾರು ಶಾಲೆಯನ್ನು ಬಿಡುವ ಅವಕಾಶ ನನಗೆ ಸಿಗದೇ ಇರುತ್ತಿದ್ದರೆ ಅಲ್ಲೇ ಪಾಚಿಗಟ್ಟುತ್ತಿದ್ದೆ. ಕೊಳೆಯುತ್ತಿದ್ದೆ. ಬಾನುಲಿಯನ್ನು ತೊರೆಯುವ ಅವಕಾಶ ಸಿಗದೇ ಇರುತ್ತಿದ್ದರೆ ನಾನೊಬ್ಬ ‘ಅತೃಪ್ತ ಅಧಿಕಾರಿ’ಯಾಗಿ ಯಾರ ಕಣ್ಣಿಗೂ ಬೀಳದ ನಿಷ್ಕ್ರಿಯತೆಯ ಬದುಕಿನ ಸಂಕೇತವಾಗಿ ಇರುತ್ತಿದ್ದೆ. ಆದರೆ ಬಾನುಲಿಯ ಸೇವೆಯನ್ನು ತೊರೆಯುವ ಅವಕಾಶದ ಬಾಗಿಲು ನನ್ನ ಬಾಳಿನಲ್ಲಿ ಭಾಗ್ಯದ ಬಾಗಿಲನ್ನು ತೆರೆದಂತಾಯ್ತು. ನನ್ನ ವ್ಯಕ್ತಿತ್ವ, ಧೋರಣೆ, ಚಿಂತನೆ, ಸಾಮಾಜಿಕ ಸ್ಥಿತಿಗತಿ-ಎಲ್ಲವೂ ಸುಧಾರಿಸಿದವು.

ತಂಟಕೋರರಿಗೆ, ಉಡಾಳರಿಗೆ, ‘ನೀನು ಬದಲಾಗುವುದಿಲ್ಲ’ ಎಂದು ಉಗಿಸಿಕೊಂಡವರಿಗೆ, ‘ಬದಲಾಗದೇ ಇರುವುದರಲ್ಲಿ ಸುಖವಿದೆ’ ಎಂದು ನಂಬಿದ ಹುಡುಗರಿಗೆ ಹೊಸಲೋಕದ ಹೊಸ ಪ್ರೇಮ ಮಕರಂದ ಬೇಕು.