ಕಾಲ ಬದಲಾಗಿದೆ. ಜನ ಬದಲಾಗಿದ್ದಾರೆ. ಮೌಲ್ಯಗಳು ಬದಲಾಗಿವೆ. ಜೀವನದ ರೀತಿನೀತಿಗಳು ಬದಲಾಗಿವೆ. ಕುಟುಂಬ ಜೀವನವೂ ಬದಲಾವಣೆಯ ಬಿರುಗಾಳಿಗೆ ಸಿಲುಕಿದೆ. ಈಗಿನ ನಮ್ಮ ಕುಟುಂಬಗಳು ತುಂಬ ಸಿಕ್ಕವು. ಗಂಡಹೆಂಡತಿ, ಒಂದೋ ಎರಡೋ ಮಕ್ಕಳು. ವಿದ್ಯಾಭ್ಯಾಸ, ಸಂಪಾದನೆ ಎಂದು ಯಾರಿಗೂ ಬಿಡುವಿಲ್ಲ. ರಜಾದಿನಗಳಲ್ಲಿ ಒಂದು ಹೊತ್ತು ಒಟ್ಟಿಗೆ ಕೂತು ಉಂಡರೆ ಅದು ಬಲು ವಿಶೇಷ.

ಚಲನಚಿತ್ರಗಳ ಪ್ರಭಾವದಿಂದಲೋ ಏನೋ ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಚಿಕಣಿ ಕುಟುಂಬಗಳಲ್ಲಿ ‘ಡೈನಿಂಗ್‌ ಟೇಬಲ್‌ ಸಂಸ್ಕೃತಿ (!)’ ಕಾಣಿಸಿಕೊಂಡಿತು. ಮನೆಗೆ ಬಂದ ಅತಿಥಿಗಳು, ಮನೆಯವರು ಅದರ ಮುಂದೆ ಕುಳಿತು ಉಣ್ಣುವ, ತಿನ್ನುವ ಕ್ರಮ ರೂಢಿಯಾಯಿತು. ನೆಲದಮೇಲೆ ಚಕ್ಕಳಮಕ್ಕಳ ಕುಳಿತು ತಿನ್ನುವ ಪರಿಪಾಠ ಹೆಚ್ಚುಕಡಿಮೆ ನಿಂತೇ ಹೋಯಿತು.

‘ಮನೋರಂಜನೆಯ ಪೆಟ್ಟಿಗೆ’ ಬಂದದ್ದೇ ತಡ ಮತ್ತಿಷ್ಟು ಬದಲಾವಣೆಗಳು ದಾಳಿಯಿಟ್ಟವು. ನಡುಮನೆಯಲ್ಲೋ ಮಲಗುವ ಕೋಣೆಯಲ್ಲೋ ಟಿವಿ ಪ್ರತಿಷ್ಠಾಪನೆ. ನಿತ್ಯವೂ ಹತ್ತಾರು ವಾಹಿನಿಗಳ ಮೂಲಕ ನೂರಾರು ಕಾರ್ಯಕ್ರಮಗಳ ಅದರಲ್ಲೂ ಮುಖ್ಯವಾಗಿ ಚಲನಚಿತ್ರಗಳ, ರಿಯಾಲಿಟಿ ಶೋಗಳ ವೀಕ್ಷಣೆ. ಊಟ ತಿಂಡಿಗೆ ಈಗ ಡೈನಿಂಗ್‌ ಟೇಬಲ್‌ ಬೇಕೆಂದಿಲ್ಲ. ಟಿವಿಯ ಮುಂದೆ ಹಾಸಿಗೆಯಲ್ಲಿ ಪವಡಿಸಿ, ಕುಳಿತು- ನಿಂತು ಹೇಗೋ ಕಾರ್ಯಕ್ರಮ ನೋಡುತ್ತ ಅದರ ಟೀಕೆ ಮಾಡುತ್ತ, ನಗುತ್ತ, ಹರಟುತ್ತ ಭಿನ್ನಾಭಿಪ್ರಾಯಗಳನ್ನು ತೂರಿಬಿಡುತ್ತ, ಜಗಳವಾಡುತ್ತ ಉಣ್ಣುವ-ತಿನ್ನುವ ಪರಿ ರೂಢಿಗೆ ಬಂದಿದೆ. ಅವರವರ ಸಮಯ ಅವರವರಿಗೆ. ಹೀಗಾಗಿ ಹೆಂಡತಿ ಗಂಡನಿಗೋ ಮಗನಿಗೋ ಕಾಯುವ ಪ್ರಶ್ನೆಯಿಲ್ಲ. ಅವರವರ ಕೆಲಸದ ವೇಳೆ ಹೊಂದಿಕೊಂಡು ಹಸಿವಾದೊಡನೆ ಉಂಡು ತಿಂದು ಎದ್ದು ನಡೆದುಬಿಡುವ ದಿನಗಳಿವು! ಕೆಲಸ, ಸಂಪಾದನೆ, ವೈಯಕ್ತಿಕ ಸಾಧನೆಗೆ ಮಹತ್ತ್ವಕೊಟ್ಟಿರುವ ಈ ದಿನಗಳಲ್ಲಿ ಬಾವನೆಗಳು ಕಾಗದದ ಹೂವುಗಳು!

ನಾವು ಚಿಕ್ಕವರಾಗಿದ್ದಾಗ ನಮ್ಮ ಕುಟುಂಬಗಳ ಪರಿಸ್ಥಿತಿಯನ್ನು ಈಗ ಊಹಿಸಲೂ ಸಾಧ್ಯವಿಲ್ಲ. ಊಟದ ಹೊತ್ತು ನನಗೆ ನೆನಪಾಗುತ್ತಿದೆ. ನಾವು, ಚಿಕ್ಕಮಕ್ಕಳು, ವಯಸ್ಸಾದವರು ಮೊದಲು ಊಟಮಾಡಿಬಿಡುತ್ತಿದ್ದೆವು. ಯಜಮಾನನಿಗಾಗಿ ಆತನ ಹೆಂಡತಿ ಬಾಗಿಲಬಳಿ ನಿಂತು ಕಾಯುತ್ತಿದ್ದಳು.ಎಷ್ಟೇ ಹೊತ್ತಾಗಲಿ, ಆತ ಬಾರದೆ ಆಕೆಯ ಊಟವಿಲ್ಲ. ಬಂದವನು “ನನ್ನ ಊಟ ಆಯಿತು” ಎಂದರೆ ಎಷ್ಟೊಂದು ನಿರಾಸೆ ಆಕೆಯ ಪಾಲಿಗೆ! ಕೇಳುವವರಾರು?
ಗಂಡಸರ ಪಂಕ್ತಿ ಎಂದರೆ ಉಸಿರಾಟಕ್ಕೂ ಅಲ್ಲಿ ಅವಕಾಶವಿಲ್ಲ. ಎರಡು ದೃಶ್ಯಗಳು ನೆನಪಿಗೆ ಬರುತ್ತವೆ. ನನ್ನಜ್ಜನ ಮನೆಯಲ್ಲಿ ನಾವು ಚಿಕ್ಕಮಕ್ಕಳು, ಸೋದರಮಾವ ಎಲ್ಲ ಒಟ್ಟಿಗೆ ನೆಲದಮೇಲೆ ಪದ್ಮಾಸನ ಹಾಕಿಕೊಂಡು ಊಟಮಾಡುವಾಗ ಯಾರೂ ಮಾತನಾಡುವಂತಿಲ್ಲ. ಸ್ಮಶಾನಮೌನ ತಾಂಡವಮಾಡುತ್ತಿತ್ತು. ಸಾರಿಗೆ ಉಪ್ಪು ಕಡಿಮೆಯಾದರೆ, ಗೊಜ್ಜಿಗೆ ಖಾರ ಕಡಿಮೆಯಾದರೆ ಮಾವ ಬೈದುಬಿಟ್ಟಾರು! ಸಿಟ್ಟುಬಂದರೆ ಬಟ್ಟಲಲ್ಲೆ ಕೈತೊಳೆದು ಅರ್ಧದಲ್ಲೆ ಊಟ ಬಿಟ್ಟು ನಡೆದಾರು! ಅತ್ತೆ ಮತ್ತೆ ಕಣ್ಣೀರಲ್ಲಿ ಕೈತೊಳೆಯಬೇಕು! ನಾವು ಉಣ್ಣುವಾಗ, ತಿನ್ನುವಾಗ ಏನೊಂದೂ ಸದ್ದಾಗಕೂಡದು. ನನ್ನ ಒಂದು ಸ್ಟೀಲ್‌ ಬಟ್ಟಲಿಗೆ ಮೂರುನಾಲ್ಕು ಕಾಲುಗಳಿದ್ದವು. ನೆಲ ಸ್ವಲ್ಪ ಏರುತಗ್ಗಿತ್ತು. ಹೀಗಾಗಿ ನಾನು ಊಟ ಹೊಡೆಯುವಾಗ ‘ಕಟಕಟ’ ಸದ್ದಾಗುತ್ತಿತ್ತು . ನನ್ನ ಸೋದರ ಮಾವನಿಗೆ ಕೊಂಚ ಸಿಟ್ಟು ಬಂದು ‘ಎಂಥ ಶಬ್ದ ಅದು? ‘ಅಂತ ಒಮ್ಮೆ ಗೆದರಿಸಿದ್ದರು. ಆಮೇಲಿನಿಂದ ನನಗೆ ಅವರ ಜೊತೆ ಊಟಮಾಡುವಾಗ ಆ ಬಟ್ಟಲಿನಿಂದ ಶಬ್ದ ಹೊರಡದಂತೆ ಊಟ ಮಾಡುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತಿತ್ತು!

ಇನ್ನೊಂದು ಪ್ರಕರಣ: ನನ್ನ ತಂದೆಯ ಅಣ್ಣ ಶಾಲಾ ಅಧ್ಯಾಪಕರಿದ್ದರು. ಇಬ್ಬರು ಹೆಂಡರಿಂದ ಒಟ್ಟು ಹನ್ನೆರಡೋ ಹದಿಮೂರೋ ಮಕ್ಕಳು. ಬೆಳಿಗ್ಗೆ ಶಾಲೆಗೆ ಹೊರಡುವ ಮೊದಲು ದೊಡ್ಡ ಕೋಣೆಯಲ್ಲಿ ಗಂಜಿ ಊಟ. ಸುಮಾರು ಹತ್ತು ಹದಿನೆಂಟು ಬಟ್ಟಲುಗಳನ್ನು ವೃತ್ತಾಕಾರವಾಗಿ ಇಡುತ್ತಿದ್ದರು. ನಾವೆಲ್ಲ ದೊಡ್ಡಪ್ಪನ ಜೊತೆ ಕುಳಿತು ಉಣ್ಣುತಿದ್ದೆವು. ಎಲ್ಲರೂ ಊಟಕ್ಕೆ ಕುಳಿತ ಮೇಲೆ ಅವರು ಬಂದು ಕುಳಿತುಕೊಳ್ಳುತ್ತಿದ್ದರು. ಅವರು ಊಟ ಮುಗಿಸಿ ಎದ್ದುಹೋಗುವ ತನಕ ಅಲ್ಲಿ ಯಾರಾದರೂ ಉಸಿರೆತ್ತಿದರೆ ಕೇಳಿ! ಅಭಿವ್ಯಕ್ತಿ ಸ್ವಾತಂತ್ಯ್ರ, ಅಭಿಪ್ರಾಯ ಸ್ವಾತಂತ್ಯ್ರ, ಬದುಕುವ ಹಕ್ಕು ಎಲ್ಲ ಅಲ್ಲಿ ಸತ್ತೇ ಹೋಗಿರುತ್ತಿದ್ದವು! ಹಾಗೆ ನೋಡಿದರೆ ಆ ಕಾಲದಲ್ಲೂ ಅಂದರೆ ಅರುವತ್ತು-ಎಪ್ಪತ್ತರ ದಶಕದಲ್ಲೂ ನಾನು ಮುಕ್ತತೆಯ ತಂಪುಗಾಗಳಿಯ ಅನುಭವ ಪಡೆದದ್ದು ನನ್ನ ಶಿವಮೊಗ್ಗ. ಹುಬ್ಬಳ್ಳಿ, ಮಂಡ್ಯ ಹಾಗೂ ಬೆಂಗಳೂರು ಚಿಕ್ಕಪ್ಪಂದಿರ ಒಡನಾಟದಲ್ಲಿ!
ಬಾಲ್ಯಕಾಲದ ರೀತಿರಿವಾಜುಗಳು ಲನಶಿಸುತ್ತಿವೆ ಎಂದು ‘ಹಳೆಯಮಂದಿ’ ಬೊಬ್ಬೆ ಹೊಡೆಯುವುದರೊಳಗಾಗಿ ಅವು ಅದಾಗಲೆ ಆವಿಯಾಗಿ ಹೋಗಿವೆ. ಆದರೆ ಬಾಲ್ಯ, ತಾಯ್ತನ, ಮನೆ, ಕುಟುಂಬ – ಈ ಎಲ್ಲವೂ ಜಗತ್ತಿನೆಲ್ಲೆಡೆ ಏಕರೂಪವಾಗಿಲ್ಲ. ಇವೆಲ್ಲ ಆಯಾ ಪ್ರದೇಶ, ಸ್ಥಳದಲ್ಲಿ ಹುಟ್ಟಿ ಬೆಳೆದ ಸಂಸ್ಥೆಗಳು. ಪ್ರಾದೇಶಿಕತೆ, ಸಾಂಸ್ಕೃತಿಕ ವಿಶಿಷ್ಟತೆಗಳು ಹಾಗೂ ಆರ್ಥಿಕತೆಯ ಮೂಸೆಯಲ್ಲಿ ರೂಪುತಳೆದ ಸಂಗತಿಗಳು.

ಪಾಶ್ಚಾತ್ ಯ ಜಗತ್ತಿನಲ್ಲಿ ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಮಧ್ಯಮ ವರ್ಗದ ಉದಯದೊಂದಿಗೆ ಕುಟುಂಬದ ಅನುವರ್ತಿಯಾಗಿ ಬಾಲ್ಯಕಾಲ ಜೀವನದ ಒಂದು ಘಟ್ಟವೆಂಬಂತೆ ರೂಪುಗೊಂಡಿತು. ಕ್ರಿ.ಶ. ೧೬೦೦ರ ಬಳಿಕ ಮಕ್ಕಳ ಆಟಿಕೆಗಳು ಉಗಮಿಸಿದವು. ಹದಿನೇಳನೆಯ ಶತಮಾನದ ಹೊತ್ತಿಗೆ ಮಕ್ಕಳಿಗಾಗಿಯೇ ವಿಶೇಷವಾದ ಆಟಿಕೆಗಳು ತಯಾರಾಗತೊಡಗಿದವು. ಮಕ್ಕಳ ವಿಶಿಷ್ಟವಾದ ಮಾನಸಿಕ, ಶೈಕ್ಷಣಿಕ ಹಾಗೂ ದೈಹಿಕ ಅಗತ್ಯಗಳನ್ನು ಪೂರೈಸಬೇಕಾಗಿದೆ ಎಂಬ ಅಂಶವನ್ನು ಈ ಕಾಲಘಟ್ಟದಲ್ಲಿ ತತ್ತ್ವಜ್ಞಾನಿಗಳು ಗುರುತಿಸಿದರು. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಬಾಲ್ಯ ಕಾಲವನ್ನು ಗ್ರಹಿಸುವ ಒಂದು ಹೊಲಸ ದೃಷ್ಟಿ ಚಿಗುರೊಡೆಯಿತು. ಮಗುವಿನ ಮನಸ್ಸು ‘ಖಾಲಿ ಪಾಟಿ’ ಎಂಬ ಧೋರಣೆ ಹಿಂದೆ ಸರಿದು ಪ್ರಾಯೋಗಿಕವಾಗಿ ಕಂಡುಕೊಂಡ ಅಂಶಗಳು ಮುನ್ನೆಲೆಗೆ ಬಂದವು.  ಮಕ್ಕಳ ವರ್ತನೆಯನ್ನು ಅಧ್ಯಯನಮಾಡುವ ಕ್ರಮಗಳು ಚಾಲ್ತಿಗೆ ಬರಲಾರಂಭಿಸಿದವು.

ಇಷ್ಟಾದರೂ ೧೭-೧೮ನೇ ಶತಮಾನದಲ್ಲಿ ಹೆಣ್ಣುಮಗು ಗಂಡುಮಗುವಿನ ಹಾಗೆ ಶಾಲೆಗೆ ಹೋಗುವಂತಿರಲಿಲ್ಲ. ತನ್ನ ಒಂಬತ್ತು ಹತ್ತನೆಯ ಪ್ರಾಯದಲ್ಲಿ ಆಕೆ ‘ಪುಟ್ಟ ಹೆಂಗಸಿ’ನಂತೆ ವರ್ತಿಬೇಕಾಗಿತ್ತು. ಭಾರತದಲ್ಲಂತೂ ಆಕೆ ಮೈನೆರೆಯುವುದಕ್ಕೆ ಮೊದಲೆ ಮದುವೆ ಮಾಡಿಬಿಡುತ್ತಿದ್ದರು. ಹಲವು ದುರ್ದೈವಿ ಪ್ರಸಂಗಗಳಲ್ಲಿ ಮೈನೆರೆಯುವ ಹೊತ್ತಿಗೆ ಆಕೆಯ ನಾಲ್ಕುಪಟ್ಟು ವಯಸ್ಸಾದ ಗಂಡ ತೀರಿಹೋಗಿ ಬಾಲವಿಧವೆಯಾಗಿ ಬಿಡುತ್ತಿದದಳು! ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಸ್ಟೇನ್ಲಿ ಹಾಲ್‌, ಆಲ್ಪ್ರೇಡ್‌ ಬೀನೆ, ಸಿಗ್ಮಂಡ್‌ ಫ್ರಾಯ್ಡ್‌ ಮೊದಲಾದವರು ಮಕ್ಕಳ ಬಾಲ್ಯದ ಬಗೆಗೆ ವ್ಯಾಪಕ ಅಧ್ಯಯನಗಳನ್ನು ಆರಂಭಿಸಿದರು.

ಹೀಗೆ ಬಾಲ್ಯಕಾಲವೆಂಬುದು ಆಧುನಿಕ ಸಂಗತಿ ಎಂದು ವಾದಿಸುವಂತೆ ಕುಟುಂಬ ಜೀವನವೂ ಆಧುನಿಕವೆಂದು ಪರಿಭಾವಿಸಬಹುದು. ಹಿಂದಿನ ಕಾಲದ ಸಾಮುದಾಯಿಕ ಜೀವನದಿಂದ ಬಿಡಿಸಿಕೊಂಡು ಗಂಡಹೆಂಡತಿ ಹಾಗೂ ಮಕ್ಕಳು ಎಂಬ ಕುಟುಂಬ ಜೀವನ ಆರಂಭವಾದದ್ದು ಈಚೆಗೆ.  ಮನೆಯವರ ಚಾಕರಿ ಮಾಡಲೆಂದು ಮನೆಗೆಲಸ ಮಾಡುವ ಒಂದು ವರ್ಗವೂ ಇದರೊಂದಿಗೆ ಸೃಷ್ಟಿಯಾಯಿತು. ದುಡಿಮೆಯ ಲೋಕದಿಂಧ ಪ್ರತ್ಯೇಕಗೊಂಡ ಮನೆ ಕುಟುಂಬಜೀವನದ ಭದ್ರ ನೆಲೆಯಾಯಿತು. ಮನೆಗಳಲ್ಲಿ ಈಗಿನ ಹಾಗೆ ಖಾಸಗಿತನ ಎಂಬುದಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಪ್ರತ್ಯೇಕ ಕೊಠಡಿಗಳಿರಲಿಲ್ಲ. ಗಂಡಹೆಂಡತಿ ದೊಡ್ಡವರೆದುರು ಮಾತನಾಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ರಾತ್ರಿ ಹಾಸಿಗೆಯಲ್ಲಿ ಒಂದಾದಾಗ ಗುಸುಗುಸು ಮಾತಿನಲ್ಲಿ ನೋವುನಲಿವುಗಳ ವಿನಿಮಯ ಸಾಗುತ್ತಿತ್ತು.

ಮಕ್ಕಳ ತಾಯಿಯರು ಮಕ್ಕಳ ಜೊತೆ ಇಡೀ ದಿನ ಆಟವಾಡಿಕೊಂಡು ಇರಲು ಆಗುತ್ತಿರಲಿಲ್ಲ. ದಿನವಿಡೀ ಒಂದೋ ಮನೆಯೊಳಗೆ ಇಲ್ಲವೆ ಹೊಲದಲ್ಲಿ ದುಡಿಮೆ. ಹೊಲದಲ್ಲಿ ದುಡಿಮೆಯಾದರೆ ಮಕ್ಕಳನ್ನೂ ಅಲ್ಲಿಗೇ ಕರೆದೊಯ್ಯುತ್ತಿದ್ದರು. ಅವರನ್ನು ಸಣ್ಣಪುಟ್ಟ ಕೆಲಸಕ್ಕೆ ಹಚ್ಚುತ್ತಿದ್ದರು. ತಾಯಿ ದುಡಿಯುವಾಗ ಕೆಲವೊಮ್ಮೆ ಇತರರು ಮಗುವನ್ನು ನೋಡಿಕೊಳ್ಳುತ್ತಿದ್ದರು. ಶಾಲೆಗಳು ಪ್ರಾರಂಭವಾದ ಮೇಲೆ ಹುಡುಗರು ಶಾಲೆಗೆ ಹೋದರೆ ಹೆಣ್ಣುಮಕ್ಕಳು ಅಡುಗೆ ಕೆಲಸ, ಮಕ್ಕಳನ್ನು ನೋಡಿಕೊಳ್ಳುವುದು ಇತ್ಯಾದಿಗಳಲ್ಲಿ ನಿರತರಾಗಬೇಕಾಗುತ್ತಿತ್ತು. ಕೇವಲ ಶ್ರೀಮಂತರ ಕುಟುಂಬಗಳಲ್ಲಿ ಮಾತ್ರವೇ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಹಕ್ಕು ಲಭಿಸುತ್ತಿತ್ತು. ಮಹಾರಾಷ್ಟ್ರದಲ್ಲಿ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯಾದಾಗ (ಈಕೆ ಭಾರತದ ಮೊದಲ ಶಿಕ್ಷಕಿ) ಅವಳ ಮೇಲೆ ಜನ ಮೊಟ್ಟ ಎಸೆಯುತ್ತಿದ್ದರಂತೆ. ಕಳೆದ ಮೂವತ್ತು ವರ್ಷಗಳಿಂದ ಈಚೆಗೆ ಸ್ತ್ರೀಶಿಕ್ಷಣ, ಸ್ತ್ರೀಬಸಲೀಕರಣ ಇತ್ಯಾದಿಗಳಿಗೆ ಮಾನ್ಯತೆ ಸಿಕ್ಕಿದ್ದು.

ಹಿಂದಿನ ಕಾಲದ ಬಾಲ್ಯ ಭಯಾನಕ ಅಥವಾ ಆಧುನಿಕ ಕಾಲದ ಬಾಲ್ಯ ಉತ್ತಮ ಎಂಬ ವಿಚಾರವೇ ಅಸಂಗತ. ಬಹಳ ಹಿಂದಿನಿಂದಲೂ ಮಕ್ಕಳ ಮೇಲಿನ ಹಿಡಿತ, ನಿಯಂತ್ರಣ ಅಥವಾ ಪ್ರಭುತ್ವವೆಲ್ಲ ಹಿರಿಯರದ್ದೇ. ಹಿರಿಯರ ಆಜ್ಞಾಧಾರಕರಾಗಿ ಆಜ್ಞಾಪಲಕರಾಗಿ ಮಕ್ಕಳು ವರ್ತಿಸಬೇಕು. ಅವರ ಇಷ್ಟಾನಿಷ್ಟ, ಹಿತಾಹಿತ, ಒಳಿತುಕೆಡುಕು ಇತ್ಯಾದಿಗಳೆಲ್ಲದರ ನಿರ್ಧಾರ ಹಿರಿಯರದ್ದು.

ಹಾಗೆ ನೋಡಿದರೆ ಆಧುನಿಕ ಸಮಾಜದಲ್ಲಿ ಕಿರಿಯರ ಮೇಲೆ ತಂದೆತಾಯಿಗಳ ಹಿಡಿತವೇ ಅಧಿಕ. ಮಾವ, ಚಿಕ್ಕಪ್ಪ , ಚಿಕ್ಕಮ್ಮ, ಅಜ್ಜಿ, ದೊಡ್ಡಪ್ಪನ ಮಗ ಇತ್ಯಾದಿಯಾಗಿ ಯಾರ ಹಿಡಿತವೂ ಇಲ್ಲ. ಮೇಲಾಗಿ ಅವರೆಲ್ಲ ಈಗ ಕುಟುಂಬ ವ್ಯವಸ್ಥೆಯಿಂದ ಮಾಯವಾಗುತ್ತಿದ್ದಾರೆ. ಒಂದು ಕಾಲಕ್ಕೆ ಅವಿಭಕ್ತ ಕುಟುಂಬದಲ್ಲಿ ಮನೆತುಂಬ ಜನವೋ ಜನ. ದೊಡ್ಡ ಕುಟುಂಬದಲ್ಲಿ ಒಂದೊಂದು ಸಲ ಊಟಕ್ಕೆ ನಲ್ವತ್ತು ಐವತ್ತು ಮಂದಿ ಒಟ್ಟಿಗೆ ಕೂರುತ್ತಿದ್ದರು. ಮಕ್ಕಳು ಅಪ್ಪ ಅಮ್ಮನ ಮಾತು ಕೇಳದಿದ್ದರೆ ಚಿಕ್ಕಪ್ಪ, ಚಿಕ್ಕಿ, ಸೋದರ ಮಾವ-ಹೀಗೆ ಯಾರಾದರೊಬ್ಬರ ಸಂಪರ್ಕದಿಂದ ಮಗು ಸರಿದಾರಿಗೆ ಬರುತ್ತಿತ್ತು. ಅಂಥ ಕುಟುಂಬಗಳಲ್ಲಿ ತಂದೆತಾಯಿ ಮಾತ್ರವಲ್ಲದೆ ಇತರ ಸದಸ್ಯರ ಸಂಪರ್ಕಕ್ಕೆ ವಿಪುಲ ಅವಕಾಶಗಳು ಲಭಿಸುತ್ತಿದ್ದವು. ಆದರೆ ಈಗ ವಿಭಕ್ತ ಸೂಕ್ಷ್ಮ ಕುಟುಂಬಗಳಲ್ಲಿ ಗಂಡಹೆಂಡತಿ, ಮಗು . ಹೀಗಿರುವಾಗ ಇತರ ಸದಸ್ಯರ ಸಂಪರ್ಕ ಹೇಗೆ ತಾನೆ ಸಾಧ್ಯ? ಮತ್ತೆ ಈ ಸಂಬಂಧಗಳ ಜಾಲವೂ ಮಕ್ಕಳಪಾಲಿಗೆ ಅರ್ಥಗ್ರಾಹ್ಯವಲ್ಲ. ಆದುದರಿಂದಲೆ ಇಂದು ಇರುವುದು ‘ಆಂಟಿ, ಅಂಕಲ್‌’ಗಳು ಮಾತ್ರ. ಸಂಬಂಧಗಳ ಸೂಕ್ಷ್ಮತೆಯು ಸಂಸ್ಕೃತಿ ಹಾಗೂ ಭಾಷಾ ಅನಾದರದಿಂದ ಮಸುಕಾಗುತ್ತಿರುವುದು ಇಂದಿನ ವಿದ್ಯಮಾನ.

ನಾವೆಲ್ಲ ಚಿಕ್ಕವರಿದ್ದಾಗ ರಜೆ ಬಂತೆಂದರೆ ಅಜ್ಜನ ಮನೆಗೋ ಅಜ್ಜಿ ಮನೆಗೋ ದೂರದ ಊರಲ್ಲಿರುವ ದೊಡ್ಡಪ್ಪ  ಅಥವಾ ಚಿಕ್ಕಮ್ಮನ ಮನೆಗೋ ಹೋಗಿ ಹದಿನೈದು ಇಪ್ಪತ್ತು ದಿನ ಇದ್ದು ಬರುತ್ತಿದ್ದೆವು. ಅವರೂ ಅಷ್ಟೆ. “ರಜೆಗೆ ಬಂದುಬಿಡು. ಬೆಂಗ್ಳೂರು ನೋಡಿದಂಗೆ ಆಯ್ತು”, “ಹುಬ್ಳಿ ಕಾಣಲಿಲ್ಲೆ ಅಲ್ದ. ಬಾ, ಹುಬ್ಳಿ ತೋರಿಸ್ತೇನೆ” ಅಂತ ಆಗ್ರಹಿಸುತ್ತಿದ್ದರು. ಇದರಿಂದಾಗಿ ನಮ್ಮ ಅವರ ಸಂಬಂಧಗಳು ಹೆಚ್ಚು ಗಾಢವಾಗುತಿದ್ದವು. ಇತರ ಹಿರಿಯರ ಸಂಪರ್ಕವೂ ಆಗುತ್ತಿತ್ತು. ತಂದೆ ತಾಯಿ ಹಾಗೂ ಒಡಹುಟ್ಟಿದವರನ್ನು ಬಿಟ್ಟು ಒಂದಷ್ಟು ದಿನ ಇತರರ ಮನೆಯಲ್ಲಿ ಇರುವುದು ಹೇಗೆ ಎಂಬುದು ತಿಳಿಯುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ಸಂಚಾರ, ಲೋಕಸಂಪರ್ಕ ಹಾಗೂ ಸಂಬಂಧ ಜಾಲ ವರ್ಧಿಸುತ್ತಿತ್ತು.

ಆದರೆ ನಮ್ಮ ಮಕ್ಕಳ ಕಾಲಕ್ಕೆ ಬಂದರೆ? ಅವರು ಒಂಟಿಯಾಗಿ ಎಲ್ಲಿಗೂ ಹೋಗಲು ಮನಸ್ಸು ಮಾಡುವುದಿಲ್ಲ. ಯಾರ ಮನೆಯಲ್ಲೂ ತಂಗಲು ಇಷ್ಟಪಡುವುದಿಲ್ಲ. ಅವರಿಗೆ ಅಲ್ಲಿ ಏನೋ ಕೊರೆತೆ ಕಾಡುತ್ತದೆ. ಎಲ್ಲ ಇದ್ದರೂ ‘ಅಮ್ಮ ಇಲ್ಲ, ಅಪ್ಪ ಇಲ್ಲ’ ಅನ್ನಿಸುತ್ತದೆ. ನನ್ನ ಮಗಳು ಚಿಕ್ಕ ಪ್ರಾಯದಲ್ಲಿ ನನ್ನ ತಾಯಿಮನೆ ಬೈಕಾಡಿಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಯಾಕೆಂದರೆ ಅವರು ಬೇರೆ ಭಾಷೆ ಮಾತಾಡ್ತಾರೆ! ಅವರು ಕೋಟದ ಕನ್ನಡ ಮಾತನಾಡುವುದು ಇವಳಿಗೆ ವಿಚಿತ್ರವಾಗಿ ಕೇಳಿಸುತ್ತದೆ. ನನ್ನ ಸೋದರಳಿಯ ಇದುವರೆಗೆ ಬೇರೊಬ್ಬರ ಮನೆಯಲ್ಲಿ ರಾತ್ರಿ ಕಳೆದವನಲ್ಲ! ಹೆಚ್ಚೇಕೆ, ನನ್ನ ಕಾಲೇಜಿನ ಅನೇಕ ವಿದ್ಯಾರ್ಥಿನಿಯರು ದೂರದ ಪ್ರವಾಸ ಹಾಗೂ ಶಿಬಿರದ ಸಂದರ್ಭದಲ್ಲಿ ಆ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹೊಡೆಯುತ್ತಾರೆ. “ನಾವು ಇದುವರೆಗೆ ಮನೆಬಿಟ್ಟು, ಅಪ್ಪ ಅಮ್ಮನನ್ನು ಬಿಟ್ಟು ಹೋದವರಲ್ಲ. ಟೂರ್ ಕಂಪಲ್ಸರಿಯಾ? ಕ್ಯಾಂಪ್‌ನಲ್ಲಿ ಮನೆಗೆ ಬರ್ಲಿಕ್ಕಿಲ್ಲವಾ?” ಎಂದೆಲ್ಲ ಪ್ರಶ್ನೆ ಕೇಳುತ್ತಾರೆ. ಕೆಲವೊಮ್ಮೆ ಅವರ ತಂದೆತಾಯಿ ಬಂದು “ಏನಾದರೂ ವಿನಾಯಿತಿ ಕೊಡ್ಬಹುದೇ?” ಅಂತ ಕೇಳ್ತಾರೆ. ಮಹಿಳಾ ವಸತಿಗೃಹಕ್ಕೆ ಸೇರುವಾಗಲೂ ಇದೇ ಫಜೀತಿ. ಸೇರುವ ಮೊದಲು ತಂದೆತಾಯಿ ಹಾಸ್ಟೆಲ್‌ ಕೋಣೆ ನೋಡಿಕೊಂಡು ಬಂದು ಮತ್ತೆ ಕೊಠಡಿ ನೀಡುವಾಗ ತಮ್ಮ ಊರಿನ, ತಮ್ಮ ಜಾತಿ ಮತದ, ತಮ್ಮ ಕಾಲೇಜಿನ ಇನ್ನೊಬ್ಬ ಹುಡುಗಿಯನ್ನೇ ಜತೆಮಾಡಿ ಅಂತ ಗೋಗರೆಯುತ್ತಾರೆ. ನಾನು ಹೀಗಾಗದರೆ ಹೇಗೆ? ಜನಸಂಪರ್ಕ ಆಗುವುದು ಹೇಗೆ? ಲೋಕಾನುಭವ ಆಗುವುದು ಹೇಗೆ? ಸ್ವತಂತ್ರವಾಗಿ ಬದುಕುವುದು ಹೇಗೆ? ಎಂದು ಪ್ರಶ್ನಿಸುತ್ತಿರುತ್ತೇನೆ.

ಮನೆಯಿಂದಾಚೆ ಕಾಲಿಟ್ಟು ತಮಗಿಂತ ಹಿರಿಯರಾದ ನಾಲ್ಕು ಜನರ ಜೊತೆ ಬೆರೆತು ಸಂಪರ್ಕಸಾಧಿಸುವ ಮನಸ್ಸು ಹಾಗೂ ಅವಕಾಶ ಇಂದಿನ ಮಕ್ಕಳಿಗಿಲ್ಲ. ಗಂಡು ಮಕ್ಕಳಿಗಾದರೂ ಈ ಅನುಭವ ದಕ್ಕೀತು. ಹೆಣ್ಣುಮಕ್ಕಳಿಗೆ ನಿಷಿದ್ಧ. ಏಕೆಂದರೆ ಸಂಪರ್ಕಕ್ಕೆ ಬರುವವರು ಯಾರೋ ಏನೋ? ಯಾವ ಉದ್ದೇಶಕ್ಕೆ ಮಾತನಾಡಿಸುತ್ತಾರೋ? ಸಲುಗೆ ಬೆಳೆದು ಲವ್‌ ಆಗಿ ಮತ್ತೆ ಅಕ್ರಮಸಂತಾನ ಬೆಳೆದರೆ? ಮನೆಬಿಟ್ಟು ಓಡಿಹೋದರೆ? ವೇಶ್ಯಾವಾಟಿಕೆಗೆ ತಳ್ಳಿದರೆ? ಪರದೇಶಕ್ಕೆ ಸಾಗಾಟ ಮಾಡಿದರೆ? ಪ್ರೀತಿಸಲಿಲ್ಲ ಎಂದು ಮುಖಕ್ಕೆ ಆಸಿಡ್‌ ಎರಚಿದರೆ? ಹೀಗೆ ಏನೆಲ್ಲ ತಲ್ಲಣಗಳು! ಸಂಶಯಗಳು! ಹೆಣ್ಣು ಮತ್ತಷ್ಟೂ ಉಸುಕಿನೊಳಗೆ ತಲೆ ಹುಗಿದುಕೊಳ್ಳುವ ದುಃಸ್ಥಿತಿ.

ಒಂದು ಕಾಲಕ್ಕೆ ಮಕ್ಕಳ ಬಾಲ್ಯದ ಬಗ್ಗೆ ಈಗಿನ ಹಾಗೆ ಯಾರೂ ಚಿಂತಿಸುತ್ತಿದ್ದಿಲ್ಲ. ಅದೊಂದು ಸಾಮಾನ್ಯ ಸಂಗತಿ. ರಾತ್ರಿಯ ಕತ್ತಲಲ್ಲಿ ಕಾಮಕೇಳಿ. ಪರಿಣಾಮ ನವಜಾತ ಶಿಶುವಿನ ಜನನ. ಹುಟ್ಟಿದ ಮಗು ಪರಿಸರದಲ್ಲಿ ಲಭ್ಯವಾದುದನ್ನು ಪಡೆದುಕೊಂಡು ಬೆಳೆಯುತ್ತದೆ. ವಿಶೇಷ ಕಾಳಜಿ, ಕಕ್ಕುಲಾತಿ ಎಂಬುದಿಲ್ಲ. ಏಕೆಂದರೆ ಒಂದು ಎರಡು ಮಕ್ಕಳಲ್ಲ. ಎಂಟು, ಹತ್ತು, ಹನ್ನೆರಡು. ಇದರಲ್ಲಿ ಕೆಲವು ಸಾಯುತ್ತಿದ್ದವು. ಕೆಲವು ಉಳಿಯುತ್ತಿದ್ದವು. ಹಿಂದಿನ ಕಾಲದ ಹೆಂಗಸರು ಹೇಳುವುದನ್ನು ಕೇಳಿದ್ದೇನೆ: “ನಂಗೆ ಒಟ್ಟು ಹನ್ನೆರಡು ಮಕ್ಕಳು. ಮೂರು ತಿಂಗಳಿಗೆ ಸತ್ತುಹೋದ್ವು. ಈಗ ನಾಲ್ಕು ಗಂಡು, ನಾಲ್ಕು ಹೆಣ್ಣು ಇದ್ದೊ, ಅವಕ್ಕೆಲ್ಲ ಮದಿ ಆಯಿ ಮಕ್ಕಳಾಯಿದ್ವೊ.”

ನಾನೇ ನನ್ನ ಅಜ್ಜನ ಮನೆಯಲ್ಲಿ ಮೂರು ವರ್ಷ ಇದ್ದೆನನಲ್ಲ. ಪದವಿಪೂರ್ವ ಹಂತದಿಂದ ಪದವಿ ವ್ಯಾಸಂಗದ ಮುಕ್ತಾಯದವರೆಗೆ ರಜಾಕಾಲದಲ್ಲಿ ಅಲ್ಲೇ ಇರುತ್ತಿದ್ದೆ. ನನ್ನ ಬಾಲ್ಯದಲ್ಲಿ ಮನೆಯವರು ಯಾವತ್ತೂ ನಿನಗೆ ಹುಷಾರಿಲ್ವ? ಜ್ವರವಾ? ನಿಂಗೆ ಬಟ್ಟೆಯಿದ್ಯಾ? ಅಂತೆಲ್ಲ ಕೇಳಿದ್ದಿಲ್ಲ. ಕೇಳಬಾರದು ಅಂತಲ್ಲ. ಆದರೆ ಹಾಗೆ ವಿಶೇಷ ಗಮನ ಕೊಡುವ ಕ್ರಮ ಆಗ ಇರ್ಲಿಲ್ಲ. ಶಾಲೆಗೆ ಹೋಗಿಬರುವಾಗ ನಿನಗೆಷ್ಟು ಮಾರ್ಕ್ಸ್? ಫಸ್ಟಾ? ಸೆಕೆಂಡಾ? ಎಷ್ಟು ಬಹುಮಾನ ಬಂತು? ಅಂತೆಲ್ಲ ಮನೆಯಲ್ಲಿ ಯಾರೂ ಕೇಳ್ತಿರಲಿಲ್ಲ. ಮೇಷ್ಟ್ರು ಪುಸ್ತಕದ ಪಟ್ಟಿ ಕೊಟ್ಟರೆ ಅದರ ಅರ್ಧದಷ್ಟು ಪುಸ್ತಕ ನಮಗೆ ಸಿಗುತ್ತಿದ್ದವು. ಅದೂ ಹೊಸ ಪುಸ್ತಕಗಳಲ್ಲ. ನಮ್ಮ ಅಜ್ಜನ ಶಾನುಭೋಗಿಕೆಯ ಹಳೆಯ ಕಡತಗಳ ಉಳಿದ ಹಾಳೆಗಳು!

ಆದರೆ ಈಗ ಬೆಂಗಳೂರಿನ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಒಂದು ಮಗು ಹುಟ್ಟಿತೆಂದರೆ ತಂದೆಯ ಮುಖದಲ್ಲಿ ಚಿಂತೆಯ ನಿರಿಗೆಗಳು ಕಾಣಿಸಿಕೊಳ್ಳುತ್ತವೆ. ಮಗುವಿಗೆ ಉತ್ತಮವಾದ ‘ಆಂಗ್ಲಮಾಧ್ಯಮ ಶಿಕ್ಷಣ’ಒದಗಿಸಬೇಕು. ಅದಕ್ಕಾಗಿ ಅಂದೇ ಲಕ್ಷ ರೂ. ತೆತ್ತು ನರ್ಸರಿ ಶಾಲೆಯಲ್ಲಿ ಮಗುವಿಗೆ ಮುಂಗಡ ಸೀಟು ಕಾಯ್ದಿರಿಸುವ ಪಡಿಪಾಟಲು. ದುಬಾರಿ ಶಿಕ್ಷಣ ಕೊಡಿಸಲು ಹೆಚ್ಚು ಹೆಚ್ಚು ದುಡಿಮೆ ಮಾಡಿ ಕಡಿಮೆ ಖರ್ಚುಮಾಡಿ ಉಳಿತಾಯ ಮಾಡುವತ್ತ ಗಮನ. ನಿರಂತರವಾಗಿ ಇಂದಿನ ತಾಯ್ತಂದೆಯರು ತಮ್ಮನ್ನು ತಾವು ಆತಂಕ ಹಾಗೂ ನೋವಿನಲ್ಲಿ ಪ್ರಶ್ನಿಸಿಕೊಳ್ಳುತ್ತಿರುತ್ತಾರೆ “ಮಕ್ಕಳಿಗೆ ಉತ್ತಮವಾದುದು ಯಾವುದು? ಅವರಿಗೆ ಯೋಗ್ಯವಾದುದು ಯಾವುದು? ನಾವು ನಮ್ಮ ಮಕ್ಕಳಿಗಾಗಿ ಏನು ಮಾಡಬೇಕು? ಇನ್ನೂ ಹೆಚ್ಚಾಗಿ ಏನು ಮಾಡಬೇಕು?” ನಮಗಂತೂ ಒಳ್ಳೆಯ ವಿದ್ಯೆ ಸಿಗಲಿಲ್ಲ. ಅದರಿಂದ ಈ ದುಃಸ್ಥಿತಿ. ನಾನಂತೂ ವೈದ್ಯಕೀಯ ಓದಲಿಲ್ಲ. ಆದರೆ, ನನ್ನ ಮಗ-ಮಗಳು ತುಂಬ ಓದಿ ಕೈತುಂಬ ಸಂಪಾದಿಸಬೇಕು. ನೆರಮನೆಯವರಿಗಿಂತ, ನಮ್ಮ ಬಂಧುಗಳಿಗಿಂತ ನಾಲ್ಕು ಮೆಟ್ಟಿಲು ನಾವು ಮೇಲೇರಬೇಕು! ಈ ಮಹತ್ವಾಕಾಂಕ್ಷೆ ಹಾಗೂ ಆತಂಕಗಳೇ ಈಗ ಮಕ್ಕಳ ಬದುಕಿನ ಜೀವಸತ್ತ್ವವನ್ನು ಹಿಂಡಿ ಹಿಪ್ಪೆಮಾಡುತ್ತಿವೆ.

ನಾನು ಮೇಲೆ ಎತ್ತಿರುವ ಪ್ರಶ್ನೆಗಳು ಈ ಕಾಲದ ಬಾಲ್ಯದ ಪರಿಣಾಮ ಹಾಗೂ ಕಾರಣ. ಯಾವ ಶಾಲೆಗೆ ಸೇರಿಸಿದರೆ ಒಳ್ಳೆಯದು, ಕನ್ನಡ ಮಾಧ್ಯಮ ಒಳ್ಳೆಯದಾ? ಇಂಗ್ಲಿಷ್‌ ಮಾಧ್ಯಮ ಒಳ್ಳೆಯದಾ? ಅಂತ ಹಿಂದೆ ಯಾರೂ ಕೇಳ್ತಿರಲಿಲ್ಲ. ಯಾವುದೋ ಒಂದು ಶಾಲೆ. ಏನೋ ಒಂದು ಕಲಿಕೆ. ಉದಾಹರಣೆಗೆ, ನಾನು ಪದವಿಪೂರ್ವ ಹಂತದಲ್ಲಿ ವಿಜ್ಞಾನ ವಿಭಾಗಕ್ಕೆ ಅದರಲ್ಲೂ ಜೀವಶಾಸ್ತ್ರ ವಿಭಾಗಕ್ಕೆ ಸೇರಿದೆ. ಆಯ್ಕೆ ನನ್ನದಲ್ಲ; ನನ್ನಪ್ಪನದ್ದು. ಅದಕ್ಕೊಂದು ಕಾರಣವಿದೆ. ಪ್ರೌಢಶಾಲಾ ಹಂತದಲ್ಲಿ ೧೯೬೪-೬೭ರ ಅವಧಿಯಲ್ಲಿ ನಾವು ಐಚ್ಛಿಕಗಳನ್ನು ಓದಬೇಕಿತ್ತು. ಆಗ ನನ್ನ ಐಚ್ಛಿಕ ವಿಷಯಗಳು ವಿಜ್ಞಾನ ಮತ್ತು ಗಣಿತ. ದುರ್ದೈವವೆಂದರೆ ಗಣಿತಕ್ಕೂ ನನಗೂ ಅಷ್ಟಕಷ್ಟೆ. ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಐಚ್ಛಿಕ ಗಣಿತದಲ್ಲಿ ಉತ್ತೀರ್ಣನಾಗಲು ಎಷ್ಟು ಅಂಕಗಳು ಬೇಕೋ ಅಷ್ಟೇ ಅಂಕಗಳು ಬಂದಿದ್ದವು. ಹೀಗಾಗಿ ಪದವಿಪೂರ್ವ ಹಂತದಲ್ಲಿ ಗಣಿತವನ್ನು ಕೈಬಿಟ್ಟು ಜೀವವಿಜ್ಞಾನದ ವಿಷಯವನ್ನು ಆಯ್ಕೆ ಮಾಡಲಾಯಿತು. ಮೇಲಾಗಿ ನಾನು ಒಬ್ಬ ವೈದ್ಯನಾಗಬೇಕು ಎಂಬುದು ನಮ್ಮಪ್ಪನ ಆಕಾಂಕ್ಷೆಯಾಗಿತ್ತು. ಆದರೆ ಪದವಿಪೂರ್ವ ಹಂತದಲ್ಲಿ ದ್ವಿತೀಯ ದರ್ಜೆಯಲ್ಲಿ ಪಾಸಾದುದರಿಂದ ಅಪ್ಪನ ಆಸೆ ಈಡೇರಲಿಲ್ಲ! ಹೀಗೆ ವಿದ್ಯಾಭ್ಯಾಸದ ವಿಷಯದಲ್ಲೂ ನಮ್ಮ ಆಸೆ-ಕನಸು-ಪ್ರಾವೀಣ್ಯ ಯಾವುದನ್ನೂ ತುಲನೆ ಮಾಡುವ ನಮ್ಮ ನಿರ್ಧಾರಗಳಿಗೆ ಅವಕಾಶಕೊಡುವ ಕಾಲ ಅದಾಗಿರಲಿಲ್ಲ. ಹಿರಿಯರ ನಿರ್ಧಾರಗಳು ಪ್ರಶ್ನಾತೀತವಾಗಿ ನಮ್ಮ ಮೇಲೆ ಹೇರಲ್ಪಡುತ್ತಿದ್ದವು. ಅವರ ನಿರ್ಧಾರಗಳು ನಮ್ಮ ನಿರ್ಧಾರಗಳಾಗದೆ ಬೇರೆ ದಾರಿಯಿರಲಿಲ್ಲ. ಹಾಗಿದ್ದರೂ ನಾನು ಬಿ.ಎಸ್‌.ಸಿ. ಓದುವಾಗ ಅಪ್ಪನ ಜೊತೆ ಜಗಳಮಾಡಿ, ಹಠಹಿಡಿದು ಪದವಿಪೂರ್ವ ಹಂತದ ಬಳಿಕಿದ ಕನ್ನಡ ಡಿಪ್ಲೋಮ ತರಗತಿಗಳಿಗೆ ಸೇರಿಕೊಂಡೆ. “ನೀನು ದುಡ್ಡು ದಂಡಮಾಡ್ತೀಯ” ಅಂತ ಅಪ್ಪ ಬೈದಿದ್ದರು. ಆದರೆ ನಾನು ಅವರ ಮಾತಿಗೆ ಸೊಪ್ಪು ಹಾಕದೆ ನನ್ನ ನಿರ್ಧಾರವನ್ನು ಚಲಾಯಿಸಿದೆ. ಕನ್ನಡ ಡಿಪ್ಲೋಮ ನನ್ನ ಬಾಳಿನ ಭಾಗ್ಯದ ಬಾಗಿಲನ್ನು ತೆರೆಯಿತು. ಈ ಡಿಪ್ಲೋಮವನ್ನು ಆರಂಭಮಾಡಿದ ಡಾ|| ಹಾ. ಮಾ. ನಾಯಕರಿಗೆ ನಾನು ಚಿರ ಋಣಿ. ಈ ಮಾತನ್ನು ಅವರು ಬದುಕಿದ್ದಾಗ ಅವರಿಗೆ ಹೇಳಿದ್ದೆ. ಅವರು ಕೇಳಿ ಋಷಿಪಟ್ಟರು. ನನ್ನ ಬಿ.ಎಸ್‌.ಸಿ. ಜೀವಶಾಸ್ತ್ರ ನನ್ನ ಪಾಲಿಗೆ ನಿರ್ಜೀವ ಶಾಸ್ತ್ರವಾಯಿತು. ಕನ್ನಡ ನನಗೆ ಅನ್ನದ ಬಟ್ಟಲಾಯಿತು. ಬದುಕಿನ ಜೀವಸೆಲೆಯಾಯಿತು.

ದೊಡ್ಡವರು ಹಾಗೂ ಮಕ್ಕಳು – ಎರಡು ಭಿನ್ನ ಪ್ರಪಂಚಗಳು ಎಂದೇ ಉದ್ದಕ್ಕೂ ಪರಿಭಾವಿಸಲಾಗಿದೆ. ಅಧಿಕಾರ, ಯಜಮಾನಿಕೆ, ರಕ್ಷಣೆ, ಭದ್ರತೆ, ಹಿಂಸೆ, ಕ್ರೌರ್ಯ ಹಾಗೂ ಕಾಪಟ್ಯದ ಪ್ರಪಂಚ ದೊಡ್ಡವರದ್ದಾದರೆ ಮುಗ್ಧತೆ, ಪ್ರೀತಿ, ಕರುಣೆ, ಅಜ್ಞಾನ, ಪರಾಧೀನತೆ, ಪರಾವಲಂಬಿತ್ವದ ಪ್ರಪಂಚ ಕಿರಿಯರದ್ದು. ದೊಡ್ಡವರು ಹಾಗೂ ಮಕ್ಕಳ ನಡುವಿನ ಅಂತರ ಹೆಚ್ಚುತ್ತಲೇ ಬಂದಿದೆ. ಇವರಿಬ್ಬರೂ ಸಂಸಾರದ ಎರಡು ತುದಿಗಳೆಂದೇ ಪರಿಭಾವಿಸಲಾಗುತ್ತಿದೆ. ದೊಡ್ಡವರ ಪ್ರಪಂಚದ ತಿಳಿವಳಿಕೆಯನ್ನು ಮಕ್ಕಳಿಗೆ ಯಾಕೆ ಒದಗಿಸಬಾರದು? ಯಾಕೆ ಅವರನ್ನು ಮುಗ್ಧರೆಂದು ದೂರ ತಳ್ಳಬೇಕು? ಅಂತೆಯೇ ದೊಡ್ಡವರು ಜೀವನದ ವಿವಿಧ ಸಂದರ್ಭಗಳಲ್ಲಿ ಮಗುತನವನ್ನು, ಮುಗ್ಧತೆಯನ್ನು ಯಾಕೆ ಮೆರೆಯಬಾರದು? ಯಾಕೆ ಮಗುವೇ ಆಗಬಾರದು? “ಮನುಜಗೆ ಮಗು ತಂದೆ” ಅದರಂತೆಯೇ ತಂದೆಯ ಮನದಲ್ಲಿ ಪುಟ್ಟ ಮಗುವಿನ ಕಿಲಕಿಲ ನಗು ಇರಬಾರದೇಕೆ?

ದೊಡ್ಡವರು ಹಾಗೂ ಮಕ್ಕಳನ್ನು ಬೇರ್ಪಡಿಸಿದ್ದು  ದುಡಿಮೆಯ ಪ್ರಪಂಚ. ಬದುಕಿನುದ್ದಕ್ಕೂ ದೊಡ್ಡವರು ಕಠಿಣವಾದ ಕೆಲಸ ಮಾಡುತ್ತಾರೆ. ಕೆಲವರು ಮಾಡುವ ದುಡಿಮೆ ಅಪಾಯಕಾರಿಯೂ ಹೌದು. ಹೊಟ್ಟೆಪಾಡಿಗಾಗಿ, ಕುಟುಂಬದ ನಿರ್ವಹಣೆಗಾಗಿ ಅದರಲ್ಲೂ ಮುಖ್ಯವಾಗಿ ಮಕ್ಕಳ ಲಾಲನೆ ಪಾಲನೆಗಾಗಿ ಈ ದುಡಿಮೆ ಸಾಗುತ್ತದೆ. ಕಸುವು, ಕೌಶಲ ಹಾಗೂ ಸಕಾಲದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ತೀರ್ಮಾನಗಳನ್ನು ದುಡಿಮೆಯ ಕ್ಷೇತ್ರ ಒಳಗೊಂಡಿದ್ದು ಇದನ್ನೆಲ್ಲ ಅಂತರ್ಗತಗೊಳಿಸಿಕೊಳ್ಳಲು ಎಳೆಯ ಮಕ್ಕಳಿಂದ ಅಸಾಧ್ಯ.

ಕೈಗಾರಿಕೀಕರಣ ಹಾಗೂ ವಿಶೇಷೀಕರಣಕ್ಕೂ ಮೊದಲಿನ ದಿನಗಳಲ್ಲಿ ಹಿರಿಯರು ಮಾಡುವ ಕೆಲಸಗಳನ್ನು ಮಕ್ಕಳು ಕಣ್ಣಾರೆ ಕಾಣಬಹುದಿತ್ತು. ಅನೇಕ ಕೆಲಸಗಲನ್ನು ದೊಡ್ಡವರು ಮನೆಯಲ್ಲೇ ಮಾಡುತ್ತಿದ್ದರು. ಕೃಷಿ, ಹೈನುಗಾರಿಕೆ, ಗುಡಿಕೈಗಾರಿಕೆ , ನೂಲುವುದು ಇತ್ಯಾದಿ. ಆಗೊಮ್ಮೆ ಈಗೊಮ್ಮೆ ಹಿರಿಯ ಮಕ್ಕಳು ಅಥವಾ ಪ್ರಾಯಕ್ಕೆ ಬಂದ ಮಕ್ಕಳು ದೊಡ್ಡವರಿಗೆ ನೆರವಾಗಬಹುದಿತ್ತು. ಅವರೊಡನೆ ಸೇರಿ ಮಾಡುವ ಕೆಲಸವನ್ನು ಪ್ರತ್ಯಕ್ಷ ನೋಡಿ ತಾವೂ ಒಂದಿಷ್ಟು ಕಸುಬು ಕಲಿಯಬಹುದಿತ್ತು. ಮುಂದೊಂದು ದಿನ ತಂದೆತಾಯಿಯ ವೃತ್ತಿ/ಕಸುಬು ವಂಶಗತವಾಗಿ ಮಕ್ಕಳಿಗೂ ದಾಟಿ ಬರಬಹುದಿತ್ತು.

ಕೈಗಾರೀಕರಣದ ದೆಸೆಯಿಂದಾಗಿ, ಔದ್ಯಮೀಕರಣದ ದೆಸೆಯಿಂದಾಗಿ ಕೆಲಸದ ಸ್ವರೂಪ ಬದಲಾಯಿತು. ಪರಿಣತಿ ಕಲೆಗಾರಿಕೆ ಹೆಚ್ಚಾಯಿತು. ಮಾಡುವ ಕೆಲಸಕ್ಕೂ ಕೆಲಸಗಾರನ ಬದುಕಿಗೂ ಅರ್ಥಾರ್ಥ ಸಂಬಂಧ ಇಲ್ಲದಂತಾಯಿತು. ಕೆಲಸ ಹೆಚ್ಚು ಹೆಚ್ಚು ಯಾಂತ್ರಿಕವಾಯಿತು. ಯಂತ್ರಗಳ ದಾಸನಂತೆ ಮನುಷ್ಯ ದುಡಿಯಬೇಕಾಗಿ ಬಂದುದರ ಪರಿಣಾಮವಾಗಿ ಪರಕೀಯ ಪ್ರಜ್ಞೆ ಬೆಳೆಯಿತು. ಕೆಲಸದ ಸ್ವರೂಪ ಬದಲಾದುದರ ದೆಸೆಯಿಂದಾಗಿ ಕೆಲಸದ ಸ್ಥಳವೂ ಬದಲಾಯಿತು. ಅಪ್ಪ ಅಮ್ಮ ಮಾಡುವ ಕೆಲಸವೇನು ಎಂಬುದು ಮಕ್ಕಳ ಗ್ರಹಿಕೆಗೆ ನಿಲುಕದಾಯಿತು. ಇದಕ್ಕೂ ಮಿಗಿಲಾಗಿ ತಾವು ಮಾಡುವ ಕೆಲಸವನ್ನು ತಮ್ಮ ಮಕ್ಕಳು ಮುಂದುವರಿಸುವುದು ಯೋಗ್ಯವಲ್ಲ;  ಹಾಗೆ ಮುಂದುವರಿಸಿದ್ದೇ ಆದರೆ ತಮ್ಮ ಮಕ್ಕಳಿಗೆ ಸಾಮಾಜಿಕ ಮನ್ನಣೆ ದೊರೆಯಲಾರದು ಎಂಬ ಆತಂಕವೂ ಹಿರಿಯರನ್ನು ಕಾಡತೊಡಗಿತು. ಹೀಗಾಗಿ ಅಕ್ಷರ ವಿದ್ಯೆಗೆ ಎಲ್ಲಿಲ್ಲದ ಮಹತ್ತ್ವ ಲಭಿಸಿತು. ತನ್ನ ಮಗ ಪುರೋಹಿತನಾಗಬೇಕು, ಕೃಷಿಕನಾಗಬೇಕು, ಬೀಡಿಕಟ್ಟಬೇಕು ಎಂದು ಯಾವ ತಂದೆತಾಯಿಯೂ ಬಯಸುವುದಿಲ್ಲ. ನನ್ನ ತಂದೆ ನಾನು ಓದುವ ಕಾಲಕ್ಕೆ ಪ್ರತಿಯೊಂದು ಪತ್ರದಲ್ಲೂ ಬರೆಯುತ್ತಿದ್ದ ಒಕ್ಕಣೆ ಹೀಗಿರುತ್ತಿತ್ತು: “ಅನ್ನ ಮಾರಾಟಮಾಡುವ, ಇನ್ನೊಬ್ಬರ ಎಂಜಲು ಲೋಟ ತೊಳೆಯುವ ಕೆಲಸ ನನ್ನೊಂದಿಗೇ ಕೊನೆಗೊಳ್ಳಲಿ. ನಿನಗೆ ಅದು ಬೇಡ. ನೀನು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿ.” ಈ ಮಾತುಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು..

ರಿಕ್ಷಾ ಡ್ರೈವರ್ ಗಳನ್ನು, ಬೀಡಿಕಟ್ಟುವವರನ್ನು ನೀವು ಮಾತನಾಡಿಸಿ “ನಮ್ಮ ಜೀವನ ಕಷ್ಟದಲ್ಲೇ ಕಳೆಯಿತು. ನಾವು ಓದು-ಬರಹ ಕಲಿಯದೆ ಒದ್ದಾಡಿದೆವು. ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬೇಡ. ನಾವು ದುಡಿಯುವುದು ಯಾತಕ್ಕೆ? ನಮ್ಮ ಮಕ್ಕಳು ಸುಖವಾಗಿರಬೇಕು ಎಂದಲ್ಲವೆ? ಅದಕ್ಕೇ ಸಾಲಸೋಲ ಮಾಡಿ ಮಗನನ್ನು ಇಂಗ್ಲಿಷ್‌ ಮೀಡಿಯಂ ಸ್ಕೂಲಿಗೆ ಸೇರಿಸಿದ್ದೇನೆ.” ಹಿಂದಿನ ಕಾಲದ ಹಿರಿಯರು ಇದಕ್ಕೆ ಅಷ್ಟೊಂದು ಬೆಲೆ ಕೊಡುತ್ತಿರಲಿಲ್ಲ. ಅನೇಕ ಸಿರಿವಂತರು ತಮ್ಮ ಸಿರಿತನದ ಡೌಲು ಪ್ರದರ್ಶಿಸುತ್ತಿರಲಿಲ್ಲ. ಆದರೆ ಸಾಮಾಜಿಕ ಮನ್ನಣೆ-ಒಣ ಪ್ರತಿಷ್ಠೆ ಈ ಕಾಲದ ಆದರ್ಶ.

ಮಗು ಹಾಗೂ ವಯಸ್ಕರ ನಡುವೆ ಅಂತರ ಉಂಟಾಗಲು ಮತ್ತು ವಯಸ್ಕ ಹಾಗೂ ಆತನ ಜಗತ್ತಿನ ನಡುವೆ ದೂರ ನಿರ್ಮಾಣವಾಗಲು ನಾವು ಬದುಕನ್ನು ಪರಿಭಾವಿಸುವ ಕ್ರಮವೇ ಕಾರಣ. ಬದುಕಿಗೊಂದು ಅರ್ಥವಿದೆ ಎಂಬ ಸಿದ್ಧಾಂತವೇ ತಪ್ಪು ಎಂಬಂಥ ತಿಳಿವಳಿಕೆ ಬೆಳೆಯುತ್ತಿದೆ. ಪ್ರತಿಯೊಂದು ಸಂಗತಿಯನ್ನೂ ಕಾರ್ಯಕಾರಣ ಸಂಬಂಧದ ಹಿನ್ನೆಲೆಯಿಂದ ನಾವಿಂದು ನೋಡುತ್ತಿದ್ದೇವೆ. ಹಿಂದೆ ಏನೋ ಒಂದು ಕ್ರಿಯೆ ನಡೆದಿದೆ. ಆ ಕಾರಣದಿಂದಾಗಿ ಇಂದು ಹೀಗಾಗಿದೆ. ಒಂದು ಕಾರ್ಯಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಾರಣಗಳಿರಲೇಬೇಕು ಎಂಬುದು ಇಂದಿನ ನಮ್ಮ ಗ್ರಹಿಕೆ. ಈ ಗ್ರಹಿಕೆಯಿಂದಲೇ ನಾವು ಎಲ್ಲ ವಿದ್ಯಮಾನಗಳನ್ನು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತೇವೆ.

“ಆ ಹುಲ್ಲಿನ ರಾಶಿ ಏಕೆ ಉರಿಯುತ್ತಿದೆ?” ಎಂದು ಮಗು ಕೇಳುತ್ತದೆ. “ಯಾರೋ ಬೆಂಕಿಕಡ್ಡಿ ಗೀರಿರಬೇಕು” ಎಂದು ಅಪ್ಪ  ಹೇಳುತ್ತಾನೆ. “ಬೆಂಕಿ ಆದದ್ದು ಹೇಗೆ?” “ಬೆಂಕಿಪೆಟ್ಟಿಗೆಯ ತುದಿಗೆ ಕಡ್ಡಿ ತೀಡಿದಿರಬೇಕು”, “ಕಡ್ಡಿ ತೀಡಿದ್ದರಿಂದ ಬೆಂಕಿ ಆಯಿತು ಹೇಗೆ?”, “ಬೆಂಕಿಕಡ್ಡಿಯ ತುದಿಗೆ ಉರಿಯುವ ರಾಸಾಯನಿಕ ಸವರರಿಬೇಕು. ಬೆಂಕಪೆಟ್ಟಿಗೆಯ ತುದಿಗೆ ಘರ್ಷಿಸಿದಾಗ ಉರಿಯುವುದಕ್ಕೆ ಅನುಕೂಲಿಸುವ ವಸ್ತು ಲೇಪಿಸಿರಬೇಕು”, “ಆ ಕಡ್ಡಿಯ ತುದಿಗೆ ರಾಸಾಯನಿಕ ಹೇಗೆ ಬಂತು?”, “ಯಾರೋ ಆ ಕಡ್ಡಿಯನ್ನು ರಾಸಾಯನಿಕ ದ್ರಾವಣದಲ್ಲಿ ಅದ್ದಿ ತೆಗೆದಿರಬೇಕು” – ಹೀಗೆ ಸಾಕ್ರೆಟಿಸನಂತೆ ಪ್ರಶ್ನೆಯ ಮೇಲೆ ಪ್ರಶ್ನೆ ಎಸೆಯುತ್ತ ಕಾಲದಲ್ಲಿ ಹಿಮ್ಮೊಗಚಲನೆ ಪ್ರಾರಂಭವಾಗುತ್ತದೆ. ಹೀಗೆ ತರ್ಕವನ್ನು ಬೆಳೆಸುತ್ತ ಹೋದರೆ ಕೊನೆಗೊಮ್ಮೆ ಅದು ಅಸಂಗತವೆನಿಸುತ್ತದೆ. ಇಂಥ ಸಂದರ್ಭಗಳಲ್ಲಿ ಕಾಲ್ಪನಿಕತೆಗೆ, ಅದ್ಭುತ ರಮ್ಯಕ್ಕೆ ಬೆಲೆಯಿಲ್ಲವೆನ್ನಿಸುತ್ತದೆ. ಇಂದ್ರನ ರಥದ ಗಾಲಿಗಳ ಸದ್ದಿನಿಂದ ಗುಡುಗು, ಇಂದ್ರ ಬೀಸಿದ ವಜ್ರಾಯುಧದಿಂದ ಸಿಡಿಲು-ಮಿಂಚು. ಮೇಲೆ ಯಾರೋ ಎಸೆದ ತೂತುಗಳಿರುವ ಚರ್ಮದ ಚೀಲದಿಂದ ನೀರು ಹನಿಹನಿ ಸುರಿಯುತ್ತಿದೆ. ಇದೇ ಮಳೆ ಎಂಬ ಉತ್ತರಗಳು ಇಂದು ತಾರ್ಕಿಕವಾಗಿ, ವೈಜ್ಞಾನಿಕವಾಗಿ ಹಾಸ್ಯಾಸ್ಪದವೂ ಅಸ್ವೀಕಾರಾರ್ಹವೂ ಹೌದು. ಆದರೆ ಇದೊಂದು ತರ್ಕಾತೀತ ಅದ್ಭುತರಮ್ಯ ಕಲ್ಪನೆಯಲ್ಲವೆ? ದೊಡ್ಡವರ ಬದುಕಿನಲ್ಲಿ ಸ್ಥಾನವಿಲ್ಲದ ಈ ಅದ್ಭುತರಮ್ಯ ಕಲ್ಪನೆಗೆ ಮಕ್ಕಳ ಲೋಕದಲ್ಲೂ ಸ್ಥಾನವಿರಬಾರದು ಎಂದರೆ ಹೇಗೆ?

ಉದ್ದೇಶ ಹಾಗೂ ಪ್ರಯೋಜನದ ದೃಷ್ಟಿಯಿಂದ ಜನ ಬದುಕನ್ನು ಅರ್ಥೈಸುತ್ತಾರೆ. ಮರಕಟುಕ ಮರ ಕಡಿದು ಅದರಿಂದ ರೀಪುಗಳನ್ನು ಮಾಡಿ ಮನೆಕಟ್ಟಲು ಬಳಸುತ್ತಾನೆ ಅಥವಾ ಸುಂದರ ಪೀಠೋಪಕರಣಗಳನ್ನು ಮಾಡುತ್ತಾನೆ. ಸತ್ತ ಜಾನುವಾರುಗಳ ಸುಲಿದ ಚರ್ಮದಿಂದ ಚಮ್ಮಾರ ಚಪ್ಪಲಿಗಳನ್ನು ಮಾಡುತ್ತಾನೆ. ಅದನ್ನು ಹಾಕಿಕೊಂಡವನ ಕಾಲುಗಳು ನೋಯುವುದಿಲ್ಲ. ಅಂದರೆ ಒಟ್ಟು ವ್ಯಕ್ತಿಯ ಹಾಗೂ ಜಗದ ಜನರ ಬದುಕಿಗೊಂದು ಅರ್ಥವಿದೆ. ಅದು ‘ಮಾತು ಅರ್ಥ. ಎರಡು ವ್ಯರ್ಥ’ ಎಂಬ ಸ್ಥಿತಿಯಲ್ಲ. ಅದು ಭಾವುಕರ ದೈವನಿಯಾಮಕ ಅರ್ಥವಿರಬಹುದು ಅಥವಾ ದೇವರನ್ನು ನಿರಾಕರಿಸಿದ ಮನುಷ್ಯ ಕಂಡುಕೊಂಡ ಅರ್ಥವಿರಲೂಬಹುದು. ಸಾಮಾನ್ಯ ಜನಕ್ಕೆ ಇದೆಲ್ಲ ಅರ್ಥವಾಗಲಾರದು. ಇದೆಲ್ಲ ಅವರಿಗೆ ಅರ್ಥವಾಗಲಿ ಎಂಬ ಆಕಾಂಕ್ಷೆಯೂ ಈ ವ್ಯವಸ್ಥೆಗೆ ಇದ್ದಿರಲಾರದು. ಕೆಲವೊಮ್ಮೆ ಶ್ರೀಸಾಮಾನ್ಯರಿಗೆ ಅನೇಕ ಸಂಗತಿಗಳು ಅರ್ಥವಾದರೆ ವ್ಯವಸ್ಥೆಯ ಇರುವಿಕೆಗೆ ಗಂಡಾಂತರಕಾರಿಯಾಗಬಹುದು.

ನಾವೀಗ ಒಂದು ಗೊಂದಲದ ಅನಿಶ್ಚಿತತೆಯ ಪ್ರಪಂಚದಲ್ಲಿದ್ದೇವೆ. ನಮ್ಮ ಸುತ್ತಲಿನ ಜಗತ್ತು ದ್ರುತಗತಿಯಲ್ಲಿ ಬದಲಾಗುತ್ತಿದೆ. ನಮ್ಮ ಕಣ್ಣೆದುರೆ ನಮ್ಮೂರಿನ ಹಳೆಯ ಮನೆಗಳು ಅವಶೇಷಗಳಾಗಿ ಅವುಗಳ ಸಮಾಧಿಯ ಮೇಲೆ ಎತ್ತರದ ಕಟ್ಟಡಗಳೆದ್ದಿವೆ. ರಸ್ತೆಗಳ, ಅಂಗಡಿಗಳ ಚಹರೆ ಬದಲಾಗಿದೆ. ನಮ್ಮ ಊರು ನಮಗೇ ಅಪರಿಚಿತ ಎನ್ನಿಸತೊಡಗಿದೆ. ಮಕ್ಕಳಿಗೆ ಏನೂ ಗೊತ್ತಿಲ್ಲ ಎಂದು ಹಿರಿಯರು ಹೇಳುವ ಕಾಲ ಹೊರಟುಹೋಗಿದೆ. ಈಗಿನ ಮಕ್ಕಳಿಗೆ ಕೆಲವೊಂದು ವಿಷಯಗಳು ಬಹಳ ಚೆನ್ನಾಗಿ ಗೊತ್ತು. ನಾವು ಅವರ ಪ್ರಾಯದವರಾಗಿದ್ದಾಗ ನಿಜಕ್ಕೂ ಮೂಢರಾಗಿದ್ದೆವು. ಏನೂ ಗೊತ್ತಿರಲಿಲ್ಲ. ತೆಂಡುಲ್ಕರ್ ದಾಖಲೆ ಬೇಕಾ? ಆಟದ ನಿಯಮಗಳು ಬೇಕಾ? ಟಿ.ವಿ., ಐಪಾಡ್‌, ಮೊಬೈಲ್‌ ಇತ್ಯಾದಿಗಳ ಬಳಕೆ ಕ್ರಮ ಹೇಳಬೇಕಾ? ಎಲ್ಲ ಗೊತ್ತು. ಮೊಬೈಲ್ ಕೈಗೆ ಸಿಕ್ಕಿತಂದರೆ ಅರೆನಿಮಿಷದಲ್ಲಿ ಅದುಮುಗುಂಡಿ ಪಟಪಟ ಒತ್ತಿ ಸಂದೇಶಗಳ ಮಹಾಪೂರ ಹರಿಸಿಬಿಡುತ್ತಾರೆ. ಅದಕ್ಕೆಂದೇ ಎಲ್ಲರೂ ಹೇಳುವುದು ಈಗಿನ ಮಕ್ಕಳು ಬಹಳ ಹುಷಾರು ಎಂದು. ಆದರೆ ಅವರು ಬರೆಯುವ ರಜೆ ಅರ್ಜಿಯಲ್ಲಿ ಏಕೆ ಅಷ್ಟೊಂದು ತಪ್ಪುಗಳು? ಬ್ಯಾಂಕಿನಲ್ಲಿ, ಅಂಚೆ ಕಛೇರಿಯಲ್ಲಿ ಏಕೆ ಮಕ್ಕಳು ಕಾಣ ಸಿಗುವುದಿಲ್ಲ? ಆ ಬಗ್ಗೆ ಅವರಿಗೆ ಹೆಚ್ಚೇನೂ ಗೊತ್ತಿಲ್ಲ ಏಕೆ? ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಈಗ ಹೆಚ್ಚುತ್ತಿವೆ ಏಕೆ? ಬುದ್ಧಿವಂತರಿಗೆ ಬದುಕುವ ಕಲೆ ಗೊತ್ತಿಲ್ಲವೆ?