ಅಪ್ಪ, ಅಮ್ಮ,ಮಗು-ಮೂವರು ತಪ್ಪಿದರೆ ನಾಲ್ವರು ಇರುವ ಕುಟುಂಬವ್ಯವಸ್ಥೆ ತೀರ ಈಚಿನದ್ದು. ನೂರಾರು ವರ್ಷಗಳಿಂದ ರೂಢಿಯಲ್ಲಿದ್ದ ದೊಡ್ಡ ಕುಟುಂಬಗಳು, ಅವಿಭಕ್ತ ಕುಟುಂಬಗಳು ಕಳೆದ ಐದು ಅರು ದಶಕಗಳಲ್ಲಿ ನಾಮಾವಶೇಷವಾಗಿವೆ. ಈಗ ಪತ್ರಿಕೆಯ ‘ವಿಚಿತ್ರ ಆದರೂ ನಿಜ’, ‘ಸುದ್ದಿಸೂರು’ ಇತ್ಯಾದಿ ಅಂಕಣಗಳಲ್ಲಿ ಆಗೊಮ್ಮೆ ಈಗೊಮ್ಮೆ ನಲ್ವತ್ತು ಐವತ್ತು ಜನರಿರುವ ಅವಿಭಕ್ತ ಕುಟುಂಬದ ವಿವರಗಳು ಪ್ರಕಟವಾಗುತ್ತವೆ!
‘ದೊಡ್ಡ ಕುಟುಂಬಗಳಲ್ಲಿ ವ್ಯಕ್ತಿಸ್ವಾತಂತ್ಯ್ರವಿಲ್ಲ, ಖಾಸಗಿತನವಿಲ್ಲ, ಒಬ್ಬರ ದುಡಿಮೆ ಹಲವರ ಪಾಲು’ ಇತ್ಯಾದಿ ಟೀಕೆಗಳನ್ನು ಮಾಡುತ್ತ ನಮ್ಮ ಸಮಾಜ ಅದರಿಂದ ಬಿಡುಗಡೆಗೊಂಡಿದೆ. ‘ಚಿಕ್ಕದು ಚಂದ’ ಎಂಬ ನಂಬಿಕೆಯಿಂದ ಹೆಚ್ಚು ಸ್ನಿಗ್ಧವಾದ ಸಣ್ಣ ಅಥವಾ ‘ಚಿಕಣಿ ಕುಟುಂಬ’ಗಳನ್ನು ಬರಸೆಳೆದು ಅಪ್ಪಿಕೊಂಡಿದೆ. ಆದರೆ ಈ ಕುಟುಂಬಗಳು ಎದುರಿಸುತ್ತಿರುವ ಚಿತ್ರವಿಚಿತ್ರ ಸಮಸ್ಯೆಗಳು ಈಗ ಬಟಾಬಯಲಾಗುತ್ತಿವೆ.

ಕುಟುಂಬವೆಂಬುದು ಪ್ರೀತಿಯ ನಂದನವನ. ಕಠೋರ ಜಗತ್ತಿನ ನಡುವೆ ವ್ಯಕ್ತಿಗಳಿಗೆ ತಂಪರೆವ ನೀರಸೆಲೆ. ಸ್ವೀಕಾರ, ಅನುಮೋದನೆಯ ಅಗರ ಎಂದು ಜನ ನಂಬಿದ್ದಾರೆ. ಹಲವು ಸಂದರ್ಭಗಳಲ್ಲಿ ಇದು ದಿಟವು ಹೌದು. ಕುಟುಂಬಜೀವನ ವ್ಯಕ್ತಿಗಳ ಬಾಳನ್ನು ಬೆಳಗಿದೆ. ಆದರೆ ಅದೇ ಕುಟುಂಬ ಜೀವನ ಹಲವರ ಬಾಳನ್ನು ನರಕಸದೃಶವಾಗಿಸಿದೆ. ಎಲ್ಲಿ ಪ್ರೀತಿಪ್ರೇಮದ ಹೂಗಳು ಸೌಗಂಧ ಸೂಸುತ್ತವೆ, ಭ್ರಾತೃತ್ವದ ಬೀಜಗಳು ಮೊಳಕೆಯೊಡೆಯುತ್ತವೆ ಹಾಗೂ ವಾತ್ಸಲ್ಯದ ಕಾರಂಜಿ ಪುಟಿಯುತ್ತದೆ ಎಂದೆಲ್ಲ ನಂಬಲಾಗಿದೆಯೋ ಅಲ್ಲೇ ದ್ವೇಷ, ಹಿಂಸೆ, ಅಸೂಯೆ, ಬದ್ಧ ವೈರದ ಕಿಡಿಗಳು ಮೇಲೆ ನಗೆಯುತ್ತವೆ. ಮಮತೆಯ ಮಾತುಗಳಿಗೆ ಬದಲಾಗಿ ಕ್ರೂರ ಕಿಡಿನುಡಿಗಳು ಉದ್ಭವಿಸುತ್ತವೆ. ‘ಅಮೃಫಲ’ದ ಬದಲಾಗಿ ‘ಕಾರ್ಕೋಟಕವಿಷ’ದ ಜ್ವಾಲೆ ಪಸರಿಸುತ್ತದೆ!

ಕುಟುಂಬದ ಬಗ್ಗೆ ರಮ್ಯ ಭಾವನೆಗಳ ಚಿತ್ರ ಕಲ್ಪಿಸಿಕೊಂಡ ಕೆಲವರಿಗೆ ನಿರಾಸೆ ಉಂಟುಮಾಡಬಹುದಾದರೂ ಇದು ಈ ಲೋಕದ ಸತ್ಯ. ಮಕ್ಕಳಿಗೆ ಸಂತೋಷವುಉಂಟು ಮಾಡಬೇಕೆಂಬ ಏಕೈಕ ಕಾರಣಕ್ಕಾಗಿ ಕುಟುಂಬವೆಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಲ್ಲ. ಪುಟ್ಟ ಸಮಾಜಗಳಲ್ಲಿ ಕುಟುಂಬವು ಭದ್ರತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಐದಾರು ಮಂದಿಗಿಂತ ಹೆಚ್ಚುಮಂದಿ ಕುಟುಂಬದ ಸದಸ್ಯರಾದಾಗ ಅವರೆಲ್ಲ ದುಡಿದಾಗ ಕುಟುಂಬದ ಆದಾಯವೂ ಹೆಚ್ಚುತ್ತದೆ. ಆದುದರಿಂದ ‘ಮಕ್ಕಳಿರಲವ್ವ ಮನೆತುಂಬ’ ಎಂಬ ಘೋಷಣೆ ಕೇಳಿಬಂದಿತು.  ಹೆಚ್ಚು ಮಕ್ಕಳಾದರೆ ಉಣ್ಣುವ ಬಾಯಿಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಅಪಾಯವಿದ್ದರೂ ದುಡಿಯಲು ಹೆಚ್ಚು ಕೈಗಳು ಒದಗುತವೆ; ಹತ್ತಾರು ಮಕ್ಕಳಲ್ಲಿ ಕೆಲವರಾದರೂ ದುಡಿದು ಕುಟುಂಬದ ಆರ್ಥಿಕ ಭದ್ರತೆಗೆ ಕಾರಣವಾಗುತ್ತಾರೆ ಎಂಬ ನಂಬಿಕೆಯೇ ಕುಟುಂಬದ ಆಧಾರ ಕಲ್ಪನೆಯಾಯಿತು. ಹುಟ್ಟಿದ ಮಕ್ಕಳು ಚೆನ್ನಾಗಿ ಬೆಳೆದರೆ ದುಡಿಮೆ ಹೆಚ್ಚುತ್ತದೆ. ಆದುದರಿಂದ ಅವರು ಸ್ವತಂತ್ರರಾಗುವ ತನಕ ಅವರ ಪಾಲನೆ ಪೋಷಣೆ ತಂದೆತಾಯಿಗಳ ಗುರಿಯಾಯಿತು.

ಹಿಂದಿನ ಕಾಲದಲ್ಲಿ ಪ್ಲೇಗು, ಮಲೇರಿಯ, ಸಿಡುಬು ಇತ್ಯಾದಿ ಮಾರಕ ರೋಗಗಳಿಂದಾಗಿ, ಭೀಕರ ಪ್ರವಾಹ, ಚಂಡಮಾರುತ ಅಥವಾ ಬರಗಾಲದೆ ಕಾರಣದಿಂದಾಗಿ ಕುಟುಂಬ ಕುಟುಂಬವೇ ನಿರ್ಣಾಮವಾಗುವ ದಾರುಣ ಪರಿಸ್ಥಿತಿ ಇತ್ತು. ಹೀಗಾಗಿ ಹುಟ್ಟಿದ ಹಲವು ಮಕ್ಕಳಲ್ಲಿ ಕೆಲವು ಸತ್ತರೂ ಕೆಲವಾದರೂ ಉಳಿಯುತ್ತವೆ. ಆದುದರಿಂದ ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತ, ಕುಟುಂಬದ ಗಾತ್ರವನ್ನು ಹಿಗ್ಗಿಸುವ ಪ್ರಯತ್ನಗಳಿಗೆ ಮಾನ್ಯತೆ ಲಭಿಸಿತು. ಲೈಂಗಿಕ ಕಾಮನೆಗಳನ್ನು ತಣಿಸಿಕೊಳ್ಳುವುದು ಮಕ್ಕಳನ್ನು ಪಡೆಯಲು . ಮಕ್ಕಳನ್ನು ಪಡೆದಮೇಲೆ ಲೈಂಗಿಕ ಬಯಕೆಗಳನ್ನು ವಿಶೇಷವಾಗಿ ಪೋಷಿಸಬೇಕಾಗಿಲ್ಲ ಎಂಬ ಭಾವನೆಗಳು ಒಂದು ಕಾಲದಲ್ಲಿ ಪ್ರಬಲವಾಗಿದ್ದವು.

ಮದುವೆಯಾದ ಹೆಣ್ಣು ಗರ್ಭವತಿಯಾಗಿ ಮಕ್ಕಳನ್ನು ಹೆರಬೇಕು. ಅಜ್ಜ ಅಜ್ಜಿ ಆ ಮಕ್ಕಳನ್ನು ಕಣ್ತುಂಬ ನೋಡಿ ಕೊನೆ ಉಸಿರೆಳೆಯಬೇಕು. ಮಕ್ಕಳು ತಂದೆತಾಯಿಗಳನ್ನು ನರಕದಿಂದ ಪಾರುಮಾಡಬೇಕು. ಮಕ್ಕಳನ್ನು ಹೆರಲಾರದ ಹೆಣ್ಣು ‘ಬಂಜೆ’. ಆಖೆಗೆ ಕುಟುಂಬದಲ್ಲಿ ಅತ್ಯಂತ ನಿಕೃಷ್ಟ ಸ್ಥಾನ. ಆದುದರಿಂದಲೇ ಜನಪದ ಗೀತೆಗಳಲ್ಲಿ ಹೆಣ್ಣು ಮತ್ತೆ ಮತ್ತೆ ಹೇಳುವ ಮಾತು ‘ಬಂಜೆಂಬ ಶಬುದ ಹೊರಲಾರೆ.”

ಈ ವ್ಯವಸ್ಥೆಯಿಂದಾಗಿ ಹೊರುವ ಹೆರುವ ಹೆಣ್ಣು ಗಂಡಿನ ಆಸ್ತಿಯಾಗಿ ಮಾರ್ಪಟ್ಟಳು. ಹೆಣ್ಣು ತನ್ನ ಮಕ್ಕಳೊಂದಿಗೆ ಗಂಡ ಹೇಳಿದ ಕೆಲಸ ಮಾಡಬೇಕಿತ್ತು. ಗಂಡು ಮನೆಯ,ಕುಟುಂಬದ ಯಜಮಾನನಾದ. ಹೆಣ್ಣನ್ನು ತನಗೆ ಬೇಕಾದಂತೆ ಬಳಸಿಕೊಮಡ, ದುಡಿಸಿಕೊಂಡ. ಮಕ್ಕಳಾದ ಮೇಲೂ ವಿವಾಹಬಾಹಿರವಾಗಿ ತನ್ನ ಕಾಮನೆಗಳನ್ನು ಬೇರೆಬೆರೆ ಹೆಂಡಿರನ್ನು ಮನೆಯಲ್ಲಿಟ್ಟುಕೊಂಡು ಸಾಕಿದ. ಹೆಚ್ಚು ಹೆಂಡಿರನ್ನು ಹೊಂದುವುದು ತನ್ನ ಪೌರುಷದ, ಲೈಂಗಿಕ ಶಕ್ತಿಯ ಸಂಕೇತವೆಂದು ಭಾವಿಸಿ ಬೀಗಿದ. ವೇಶ್ಯೆಯರ ಸಂಗದಲ್ಲಿ ತನ್ನ ರಸಿಕತೆಯನ್ನು ಮೆರೆದಚ. ಅಧಿಕಾರಹೀನಳಾದ, ಗಂಡಿನ ಅಡಿಯಾಳಾದ ಹೆಣ್ಣು ಕುಟುಂಬ ವ್ಯವಸ್ಥೆಯಲ್ಲಿ ತನ್ನ ನೋವುಗಳನ್ನು ಯಾರಲ್ಲೂ ಹೇಳದೆ ಒಳಗೊಳಗೇ ಮರುಗಿದಳು. ತನ್ನ ಹಾಗೂ ಮಕ್ಕಳ ಹೊಟ್ಟೆ ಹೊರೆಯುವ ‘ಪತಿಯೆ ಪರದೈವ’ವೆಂದು ಭಾವಿಸಿದಳು.

ತನ್ನ ಹೆಣ್ಣನ್ನು, ಪರರ ಹೆಣ್ಣನ್ನು ಅಥವಾ ಎಲ್ಲ ಗಂಡಸರಿಗೂ ಸೇರಿದ ಹೆಣ್ಣನ್ನು ಬಗೆಬಗೆಯಾಗಿ ಹೀರಿ ಹಿಪ್ಪೆಮಾಡಿದ ಗಂಡಸು ಅವರ ಸುತ್ತ ನೈತಿಕತೆಯ ಬೇಲಿ ಕಟ್ಟಿದ. ಧರ್ಮಶಾಸ್ತ್ರಗಳ ಕರಿಪರದೆ ಎಳೆದ.

ಮಕ್ಕಳುಮರಿಗಳ ಸಂಖ್ಯೆ ಹೆಚ್ಚಿದಂತೆ ಕುಟುಂಬದ ಗಾತ್ರ ಬೆಳೆಯಿತು. ದೊಡ್ಡ ಕುಟುಂಬ ಸಿರಿವಂತಿಕೆಯ ನೆಲೆಮನೆ ಎಂದು ಆಧುನಿಕ ಯುಗದವರೆಗೂ ಭಾವಿಸಲಾಯಿತು. ಹೀಗೆ ಕುಟುಂಬವೆಂದರೆ ಕೆಲವರು ಹಲವರನ್ನು ತಮ್ಮ ಅಂಕೆಯಲ್ಲಿಟ್ಟು ಆಡಿಸುವ ಆಡುಂಬೊಲವಾಯಿತು. ಗಂಡಸರು ಹೆಂಗಸರನ್ನು ಅಡುಗೆಮನೆಗೆ ತಳ್ಳಿ ಅವರ ಕೊರಳಿಗೆ ‘ಸೂತ್ರ’, ಮೂಗಿಗೆ ಮೂಗುತಿ ತೊಡಿಸಿ ಅಳತೊಡಗಿದರು. ಬಾಗಿಲ ಮರೆಯಲ್ಲಿ ನಿಂತ ಅಸಹಾಯಕರಾದ ಮಕ್ಕಳು ಹಾಗೂ ಹೆಂಗಸರು ಚಾವಡಿಯಲ್ಲಿ ಕೂತ ಗಂಡಸರಿಂದ ಆಳಿಸಿಕೊಂಡರು. ಇದಕ್ಕೆಲ್ಲ ಅಲ್ಲಿ ಇಲ್ಲಿ ಮಾತೃಪ್ರಧಾನ ವ್ಯವಸ್ಥೆ ಅಪವಾದವಾಗಿ ಪರಿಣಮಿಸಿತು. ಮಾತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಪ್ರಾಬಲ್ಯ ಮೆರೆಯಿತು. ಆದರೆ ಈಗ ಈ ಎಲ್ಲ ಕುಟುಂಬ ರಚನೆಗಳೂ ಮುರಿದುಬಿದ್ದಿವೆ ಅಥವಾ ಮುರಿದುಬೀಳುತ್ತಿವೆ. ಇಂದು ಗಂಡುಪ್ರಧಾನವಾದ, ಹೆಣ್ಣುಪ್ರಧಾನವಾದ ಅಥವಾ ಗಂಡುಹೆಣ್ಣು ಇಬ್ಬರೂ ಪ್ರಧಾನವಾದ ಮತ್ತು ಕೆಲವು ಕಡೆಗಳಲ್ಲಿ ಮಕ್ಕಳ ಆಧಿಪತ್ಯವೇ ಪ್ರಧಾನವಾದ ಕುಟುಂಬಗಳು ಕಾಣಸಿಗುತ್ತಿವೆ.

ಮೂಲಭೂತವಾಗಿ ಕುಟುಂಬವೆಂದರೆ ಒಂದು ಆಧಿಪತ್ಯದ ಆಳ್ವಿಕೆಯ ಬೀಡು. ಹೆಂಡತಿ ಮಕ್ಕಳ ಜೀವನ್ಮರಣದ ಹಕ್ಕು ಗಂಡನಿಗೆ ಎಂದು ರೋಮ್‌ನ ಹಿಂದಿನ ಕಾನೂನುಗಳು ಹೇಳುತ್ತವೆ. ಅರಬ್‌ದೇಶಗಳಲ್ಲೂ ತಂದೆಗೆ ಈ ಹಕ್ಕು ಇದೆಯಂತೆ. ಉತ್ತರ ಭಾರತದಲ್ಲಿ ಇತ್ತೀಚೆಗೆ ಮತ್ತಗೆ ಬೆಳಕಿಗೆ ಬರುತ್ತಿರುವ ‘ಮರ್ಯಾದಾಹತ್ಯೆ’ಗಳು ಇದನ್ನು ಸಾರುತ್ತಿವೆ. ಹುಡುಗಿ-ಹುಡುಗ ಯಾರನ್ನು ಮದುವೆಯಾಗಬೇಕು ಎಂಬುದನ್ನು ತಂದೆ ನಿರ್ಧರಿಸಬೇಕು. ತಂದೆಯ ಅಥವಾ ಕುಟುಂಬದ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ‘ಕುಲಗೌರವ’ಕ್ಕೆ ಅಪಚಾರವಾಯಿತೆಂದು ತಂದೆ ಹಾಗೂ ಕುಟುಂಬದ ಇತರ ಸದಸ್ಯರು ಪ್ರೇಮಿಗಳನ್ನು ಬಡಿದು ಕೊಲ್ಲುತ್ತಾರೆ! ಆದರೂ ಕ್ರಮೇಣ ಇಂಥ ವಿಚಾರಗಳಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂಬುದಕ್ಕೆ ಈಚೆಗೆ ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆದ ಘಟನೆಗಳು ಸಾಕ್ಷಿಯಾಗಿವೆ. ಕುಡಿದ ಅಮಲಿನಲ್ಲಿ ತನ್ನ ಪ್ರಾಯಕ್ಕೆ ಬಂದ ಮಗಳ ಮೇಲೆ ಏರಿಹೋಗಿ ಲೈಂಗಿಕ ಬಲಾತ್ಕಾರ ನಡೆದಸಲು ಹವಣಿಸಿದ ತಂದೆಗೆ ಸಾರ್ವಜನಿಕರು ಸೇರಿ ‘ಧರ್ಮದೇಟು’ ನೀಡಿದ್ದಾರೆ.

ಕುಟುಂಬ ವ್ಯವಸ್ಥೆ ಎಂಬುದು ಮಕ್ಕಳ ಲಾಲನೆ, ಪಾಲನೆ, ಬೆಳವಣಿಗೆ ಹಾಗೂ ವಿಕಾಸಕ್ಕೆ ಪೂರಕವಾಗಿರಬೇಕಾದ ಸಂಸ್ಥೆ. ಮಕ್ಕಳ ಸಹಜ ವಿಕಾಸಕ್ಕೆ, ಸಹಜ ಅಭಿವ್ಯಕ್ತಿಯ ವಿಕಾಸಕ್ಕೆ ಕುಟುಂಬವ್ಯವಸ್ಥೆ ಅನುಕೂಲಕರವಾಗಿರಬೇಕು. ಆದರೆ ಇಂದು ನಮ್ಮ ಕುಟುಂಬ ಜೀವನ ನಶಿಸುತ್ತಿದೆ. ಚಿಕಣಿ ಕುಟುಂಬಗಳ ದೆಸೆಯಿಂದಾಗಿ ಮಕ್ಕಳಲ್ಲಿ ಮೌಲ್ಯಪ್ರಜ್ಞೆಯಿಲ್ಲ. ಅವರು ಸಂಸ್ಕಾರಶೂನ್ಯರಾಗಿದ್ದಾರೆ. ಅವಿಧೇಯರೂ ಉದ್ಧಟರೂ ಆಗಿ ಬೆಳೆಯುತ್ತಿದ್ದಾರೆ. ಗುರುಹಿರಿಯರನ್ನು ತಾತ್ಸಾರದಿಂದ ಕಾಣುತ್ತಾರೆ ಎಂದು ಬೊಬ್ಬೆ ಹೊಡೆಯುತ್ತಿರುವವರಿಗೆ ಕುಟುಂಬವೆಂಬುದು ವ್ಯಕ್ತಿವಿಕಾಸದ ಕೇಂದ್ರವಾಗಿ ಕಾಣುತ್ತಿಲ್ಲ. ಬದಲಾಗಿ ಅದು ಪ್ರಾಬಲ್ಯ, ಗುಲಾಮತನ, ಪ್ರೇಮದ ಮುಸುಕಿನೊಳಗಿನ ನಿರಂಕುಶ ವ್ಯವಸ್ಥೆ ಆಗಿರಬೇಕು ಎಂಬುದು ಅವರ ಆಶಯ. ಕುಟುಂಬವೆಂಬುದು ಮಕ್ಕಳು ಹಿರಿಯರ ಅಧಿಕಾರವನ್ನು ಪ್ರಶ್ನಿಸದೆ ತಗ್ಗಿಬಗ್ಗಿ ನಡೆಯಲು ಕಲಿಸುವ ವ್ಯವಸ್ಥೆಯಾಗಿಯೇ ಮುಂದುವರಿಯಬೇಕು ಎಂದು ಅವರು ಇಂದಿಗೂ ಬಯಸುತ್ತಿದ್ದಾರೆ.

ಮಕ್ಕಳ ಬೆಳವಣಿಗೆ ಹಾಗೂ ವಿಕಾಸದಲ್ಲಿ ಕುಟುಂಬದ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳನ್ನು ಆಪ್ತವೂ ವಾತ್ಸಲ್ಯಭರಿತವೂ ಆದ ಪರಿಸರದಲ್ಲಿ ಬೆಳೆಸಬೇಕು; ಮಕ್ಕಳಿಗೆ ಪ್ರೀತಿ, ಪ್ರೇಮ, ವಾತ್ಸಲ್ಯ, ರಕ್ಷಣೆ, ಆಸರೆ, ಕಾಳಜಿ, ಕಕ್ಕುಲಾತಿ ಇತ್ಯಾದಿಗಳೆಲ್ಲವನ್ನೂ ಹಿರಿಯರು ನೀಡಬೇಕು. ಹಿರಿಯರ ಮೇಲುಸ್ತುವಾರಿಯ ಕಣ್ಣಳತೆಯಲ್ಲಿ ಮಕ್ಕಳು ಬೆಳೆಯಬೇಕು ಎಂಬುದು ಆಧುನಿಕ ದೃಷ್ಟಿ.

ಇಷ್ಟಾದರೂ ಬದಲಾಗುತ್ತಿರುವ ಆಧುನಿಕ ಸಂದರ್ಭದಲ್ಲಿ ಉದ್ಯೋಗಿ ಮಹಿಳೆ ಮೇಲೆ ಹೇಳಿದ್ದೆಲ್ಲವನ್ನೂ ಮಗುವಿಗೆ ಒದಗಿಸುವ ಸ್ಥಿತಿಯಲ್ಲಿಲ್ಲ. ಕೂಲಿನಾಲಿ ಮಾಡುವ ಹೆಂಗಸರಿಂದ ಹಿಡಿದು ಕಛೇರಿಯಲ್ಲಿ ದುಡಿಯುವ ಮಹಿಳೆವರೆಗೆ ಇಂದು ಗಂಡಸು ದುಡಿದರಷ್ಟೇ ಸಾಲದು; ಹೆಣ್ಣು ದುಡಿಯಬೇಕು. ಇಬ್ಬರೂ ದುಡಿದರೆ ಇದ್ದುದರಲ್ಲಿ ‘ಸುಖಮಯ ಜೀವನ’ ನಡೆಸಬಹುದು, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬಹುದು ಮತ್ತು ಅವರ ಬದುಕು ಹಸನಾಗುತ್ತದೆ ಎಂಬ ಧೋರಣೆ ಪ್ರಬಲವಾಗಿದೆ. ಪರಿಣಾಮವಾಗಿ ಈಗ ‘ಗೃಹಿಣೇ ಗೃಹಮುಚ್ಯತೆ’ ಎಂಬ ಮಧ್ಯಮವರ್ಗದ ಪೌರಾಣಿಕ ಮಿಥ್ಯೆ ಮುರಿದು ಬಿದ್ದಿದೆ. ಹೆಣ್ಣಿನ ದುಡಿಮೆ ಅನಿವಾರ್ಯವಾಗಿದೆ. ಹೆಣ್ಣು ಮನೆಯ ಹೊಸಲು ದಾಟಿ ಆರೇಳು ಗಂಟೆಗಳ ಕಾಲ ಒಂದೆಡೆ ಕೆಲಸಮಾಡುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಿಂದಾಗಿ ದುಡಿಯುವ ಮಹಿಳೆ ತನ್ನ ಮಕ್ಕಳಿಂದ ತಾತ್ಕಾಲಿಕವಾಗಿ ದೂರವಾಗುವ, ಪ್ರೀತಿಪ್ರೇಮ ಆರೈಕೆ ಒದಗಿಸಲಾರದ ಸ್ಥಿತಿ ಉದ್ಭವಿಸಿದೆ. ಇಂಥ ಪರಿಸ್ಥಿತಿಯಲ್ಲಿ ಇಂದು ಕುಟುಂಬಗಳಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ. ಅವರು ಎದುರಿಸುತ್ತಿರುವ ಕೊರತೆಯನ್ನು ಕಂಪ್ಯೂಟರ್ ಆಟಗಳು, ಮಾಧ್ಯಮಗಳು, ಮೊಬೈಲ್‌ಗಳು, ಕಾರ್ಟೂನುಗಳು ಇತ್ಯಾದಿಗಳ ಮೂಲಕ ಪರಿಹರಿಸಿಕೊಳ್ಳುತ್ತಿದ್ದಾರೆ! “ಅಮ್ಮ ಕೆಲಸಕ್ಕೆ ಹೋಗುವುದು ಅನಿವಾರ್ಯ. ನನಗಾಗಿ,  ನಮಗಾಗಿ” ಎಂಬುದನ್ನು ಕೆಲವು ಮಕ್ಕಳು ಅರ್ಥಮಾಡಿಕೊಂಡು ತಾಯಿಯೊಂದಿಗೆ ಸಹಕರಿಸಿದರೆ ಮತ್ತೆ ಕೆಲವು ಮಕ್ಕಳು ಉಡಾಳರಾಗಿ, ಅವಿಧೇಯರಾಗಿ ವರ್ತಿಸಬಹುದು.

ಕುಟುಂಬಜೀವನ ಮಕ್ಕಳಿಗೆ ತಮ್ಮ ಅಪ್ಪ ಅಮ್ಮನಲ್ಲಿ ‘ಆದರ್ಶ ವ್ಯಕ್ತಿತ್ವ’ಗಳನ್ನು ಕಂಡುಕೊಳ್ಳಲು ಸಹಕರಿಸುತ್ತದೆ. ಹೀಗಾಗಿ ಅಪ್ಪ ಅಮ್ಮನ ನಡವಳಿಕೆ ಆದರ್ಶಪ್ರಾಯವಾಗಿರಬೇಕು ಎನ್ನಲಾಗುತ್ತದೆ. ಆದರೆ ಯಾವುದು ಯಾರಿಗೆ ಆದರ್ಶ? ಮತ್ತು ಅದು ನಿಜಕ್ಕೂ ಆದರ್ಶವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನನ್ನ ಬಾಲ್ಯದಲ್ಲಿ ನಾನು ಅನುಭವಿಸಿದ ತಂದೆಯ ಸಿಟ್ಟು, ಕಂಡ ಸೋದರಮಾವನ ಕೋಪ ಅದು ಹೇಗೋ ನನ್ನ ವ್ಯಕ್ತಿತ್ವದಲ್ಲೂ ನುಸುಳಿಕೊಂಡಿತಲ್ಲ? ಮುಂದೆ ಉದ್ಯೋಗ ರಂಗದಲ್ಲಿ ನನ್ನ ಕೋಪವೇ ನನ್ನ ವಿರುದ್ಧ ಒಂದಿಷ್ಟು ಶತ್ರುಗಳನ್ನು ಬೆಳೆಸಿತಲ್ಲ? ಗಂಡಸರು ಬಿಗಿಯಾಗಿರಬೇಕು. ಸಿಟ್ಟಿನಿಂದ ಉಳಿದವರನ್ನು ನಿಯಂತ್ರಿಸಬೇಕು ಎಂಬ ಈ ಆದರ್ಶ ಅಪಾಯಕಾರಿಯಲ್ಲವೆ? ಆಧುನಿಕ ತಂದೆತಾಯಿಗಳು ಮಕ್ಕಳಿಗೆ ಯಾವ ಆದರ್ಶದ ಪಡಿಯೆಚ್ಚುಗಳನ್ನು ಒದಗಿಸಬಲ್ಲರು? ಸಂಜೆ ತಡವಾಗಿ ಮನೆಗೆ ಬರುವ ಅಪ್ಪ ಯಾರ ಜೊತೆಗೂ ಮಾತಾಡದೆ ಪತ್ರಿಕೆ ಓದಿ ಬಳಿಕ ಟಿ.ವಿ. ನೋಡುತ್ತ ಬಾಟ್ಲಿ ಜಗತ್ತಿಗೆ ಮೊರೆ ಹೋಗುವುದು ಮಕ್ಕಳಿಗೆ ಆದರ್ಶವಾದೀತೇ? ಅಥವಾ ಕಛೇರಿಯಿಂದ ಮರಳುವ ತಾಯಿ “ಬೆನ್ನು ನೋಯ್ತಾ ಇದೆ; ತುಂಬ ಕೆಲಸ ಇವತ್ತು; ಸುಸ್ತೋ ಸುಸ್ತು” ಎಂದು ಸೂಗೂಡುತ್ತ ಮಕ್ಕಳು ಪ್ರೀತಿಯಿಂದ ಮಾತಾಡಿಸಿದರೆ ಸಿಡಿಮಿಡಿಗುಟ್ಟುತ್ತ ಕೋಣೆಯಲ್ಲಿ ಬಿದ್ದುಕೊಂಡರೆ ಅದು ಮಕ್ಕಳಿಗೆ ಆದರ್ಶವಾಗುವುದು ಹೇಗೆ? ಮಕ್ಕಳ ಸಣ್ಣಪುಟ್ಟ ಉಪಟಳವನ್ನು ಸಹಿಸಿಕೊಳ್ಳದೆ ವಿಪರೀತವಾಗಿ ಹೊಡೆಯುವ ಬಡಿಯುವ, ಕಿವಿಹಿಂಡುವ, ಉಪವಾಸ ಕೆಡಹುವ ‘ತಂದೆತಾಯಿಗಳು ಸತ್ತೇ ಹೋಗ್ಲಿ’ ಎಂದು ಮಕ್ಕಳು ಶಪಿಸಿದರೆ ತಪ್ಪೇನು?

ಇಂದಿನ ನಮ್ಮ ಚಿಕಣಿ ಕುಟುಂಬ ವ್ಯವಸ್ಥೆ ನಿಜಕ್ಕೂ ಮಕ್ಕಳಿಗೆ ಆದರ್ಶಪ್ರಾಯ ಎಂಬಂತಿಲ್ಲ. ಏಕೆಂದರೆ ಅದು ಅಪರಿಪೂರ್ಣವೂ ವಿಕಾರವೂ ಆಗಿದೆ.

ಮಕ್ಕಳು ಬೆಳೆಯುವ ಕಾಲಕ್ಕೆ ಅವರ ಸಮಾಜೀಕರಣ ಮತ್ತು ಮನೋಸಾಮಾಜಿಕ ವಿಕಾಸದ ದೃಷ್ಟಿಯಿಂದ ಹೆಚ್ಚು ಹೆಚ್ಚು ವೈವಿದ್ಯಮಯವಾದ ಜನರ ಜೊತೆಗಿನ ಸಂಪರ್ಕ ಬೆಳೆಯಬೇಕು. ಆದರೆ ಸಣ್ಣ ಕುಟುಂಬದ ಗಾತ್ರವೆ ಈ ಸಂಪರ್ಕಕ್ಕೆ ಕುಠಾರಪ್ರಾಯವಾಗಿದೆ. ನಮ್ಮ ಮಗು ನಮ್ಮ ಕಣ್ಣಳತೆಯಲ್ಲಿ ಚೆನ್ನಾಗಿ ಬೆಳೆಯಬೇಕು. ನಾವು ಮಾತ್ರ ಮನುಷ್ಯರು. ಮನೆಯಾಚೆಗಿರುವ ಬಡವರು, ಹೀನಕುಲಜರು ಮನುಷ್ಯರಲ್ಲ. ಅವರು ಸಂಸ್ಕಾರಹೀನರು. ಅನ್ಯಮತೀಯರು ದೇಶದ್ರೋಹಿಗಳು. ಅವರ ಜೊತೆ ಸಂಪರ್ಕ ಬೆಳೆಸಬಾರದು. ಪಕ್ಕದ ಮನೆಯಲ್ಲಿರುವ ‘ಅವರು’ ಮೀನು ಮಾಂಸ ತಿನ್ನುವವರು. ಕ್ಷಾತ್ರ-ತಾಮಸ ಪ್ರವೃತ್ತಿಯವರು. ಅವರೊಡನೆ ಬೆರೆಯಬಾರದು. “ನಮ್ಮಷ್ಟೇ ಯೋಗ್ಯತೆ, ಅಂತಸ್ತು ಉಳ್ಳವರನ್ನು ಬಿಟ್ಟು ಬೇರಾರ ಜೊತೆ ಬರೆಯಕೂಡದು; ಮಾತಾಡಕೂಡದು; ಸ್ನೇಹ ಬೆಳೆಸಕೂಡದು” ಎಂಬ ವಿಷಬೀಜವನ್ನು ಮಕ್ಕಳ ತಲೆಯಲ್ಲಿ ಇಂದಿನ ಹೆತ್ತವರು ಬಿತ್ತುತ್ತಿದ್ದಾರೆ.  ಹೀಗಾಗಿಯೇ ಮಧ್ಯಮ ವರ್ಗದ ಬಹುಮಂದಿ ಕೋಮುವಾದಿಗಳೂ ಜಾತಿವಾದಿಗಳೂ ಆಗಿ ಬೆಳೆಯುತ್ತಿದ್ದಾರೆ! ಅವರು ಗಳಿಸುವ ವಿದ್ಯೆ ಕೂಡ ಅವರನ್ನು ಕೌಟುಂಬಿಕ ಪೂರ್ವಾಗ್ರಹಗಳಿಂದ ವಿಮೋಚನೆಗೊಳಿಸುವಲ್ಲಿ ವಿಫಲವಾಗುತ್ತಿದೆ.

ಬಾಹ್ಯಪ್ರಭಾವ-ಪರಿಸರ ಹಾಗೂ ಶಕ್ತಿಗಳಿಂದ ಮಕ್ಕಳನ್ನು ರಕ್ಷಿಸಲೆಂದು ತಂದೆ ತಾಯಿಗಳು ಬಿಲಗಳನ್ನಲು ತೋಡುತ್ತಾರೆ. ಈ ಬಿಲಗಳಲ್ಲಿ ಕುಟುಂಬಗಳು ಹುದುಗಿ ಕೊಳ್ಳುತ್ತವೆ. ಹೀಗಾಗಿ ಇಂದು ಯಾರಿಗೆ ಏನಾದರೂ ಆದರೆ ಏನೂ ಅನ್ನಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಯಾವ ಪ್ರಕರಣವೂ ಸಿಟ್ಟುಬರಿವುಸುದಿಲ್ಲ; ಹೋರಾಟದ ಕೆಚ್ಚು ಮೂಡಿಸುವುದಿಲ್ಲ.  “ನಾನು, ನನ್ನ ಕುಟುಂಬ ಆದಷ್ಟು ಸುರಕ್ಷಿತವಾಗಿರುವುದು ಮುಖ್ಯ! ಉಳಿದವರು ಸತ್ತರೆ ಸಾಯಲಿ ಬಿಡಿ ನಮಗೇನು?” ಎಂಬ ತೀರ ಸಂಕುಚಿತ ಸ್ವಾರ್ಥಪರ ದೃಷ್ಟಿಯನ್ನು ನಮ್ಮ ಕುಟುಂಬವ್ಯವಸ್ಥೆ ಮಕ್ಕಳಲ್ಲಿ ಮೂಡಿಸುತ್ತಿದೆ. “ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ; ಸಮಬಗೆಯ, ಸಮಸುಖದ, ಸಾಮರಸ್ಯದ, ಸಾಮಗಾನ ಲಹರಿಯ ಮೇಲೆ ತೇಲಿಬರಲಿದೆ ನೋಡು ನಮ್ಮ ನಾಡು” ಈಗ ಆದರ್ಶವಲ್ಲ. “ಇರುವೆಲ್ಲವು ನಮಗಿರಲಿ. ಪರರ ದುಃಖ ನಮಗೇಕೆ?  ನಮ್ಮ ಸುಖ ನಮಗೆ” ಎಂಬ ಭಾವ ಬಲಿಯುತ್ತಿದೆ. ಹೀಗಾಗಿಯೆ ಆಧುನಿಕೋತ್ತರ ಕಾಲಘಟ್ಟದಲ್ಲಿ ದೊಡ್ಡ ಸಮಾಜಮುಖಿ ಆಂದೋಲನಗಳು ಕ್ಷೀಣಿಸುತ್ತಿವೆ.

ಇಂದಿನ ಕುಟುಂಬ ವ್ಯವಸ್ಥೆ ಹುಟ್ಟುಹಾಕುತ್ತಿರುವ ಆತ್ಮಕೇಂದ್ರಿತ ಪ್ರವೃತ್ತಿ ಎಷ್ಟು ತೀವ್ರವಾದುದೆಂದರೆ ಎಲ್ಲ ಕನ್ನಡಿಗಳಲ್ಲೂ ನಮ್ಮದೇ ಬಿಂಬ; ಅನ್ಯರ ಬಿಂಬಗಳೊಂದೂ ಇಲ್ಲ. ಹೀಗಾಗಿ ಇತರರ ಜೊತೆ ಸಂಪರ್ಕವಿಲ್ಲ; ಸಮುದಾಯದ ಒಡನೆ ಬಾಂಧವ್ಯವಿಲ್ಲ. ಕನಿಷ್ಠ ಮನುಷ್ಯ-ಸಹಜ ಕುತೂಹಲ ಕೂಡ ಇಲ್ಲ. ಇತ್ತೀಚೆಗೆ ಮೈಸೂರಿನಲ್ಲಿ ಒಬ್ಬರ ಮನೆಗೆ ಭೇಟಿಕೊಟ್ಟಿದ್ದೆ. ಸಣ್ಣ ಕುಟುಂಬವದು. ಗಂಡ-ಹೆಂಡತಿ-ಒಬ್ಬನೇ ಮಗ. ನಾನು ಆ ಮನೆಗೆ ಭೇಟಿಕೊಡುವುದು ಪೂರ್ವನಿಗದಿತವಾಗಿತ್ತು . ಗಂಡಹೆಂಡತಿ ಮಾತನಾಡಿಸಿದರು. ಕಾಫಿ ಕೊಟ್ಟು ಉಪಚರಿಸಿದರು. ಆದರೆ ಪಿ.ಯು.ಸಿ. ಓದುವ ಅವರ ಮಗ ಒಳಕೋಣೆಯಲ್ಲಿ ಹಾಸಿಗೆಯಲ್ಲಿ ಸುಮ್ಮನೆ ಒರಗಿಕೊಂಡಿದ್ದ. ಆತ ಕುತೂಹಲಕ್ಕೂ ಹೊರಗೆ ಹಾಲಿಗೆ ಬಂದು ನನ್ನನ್ನು ನೋಡಲೂ ಇಲ್ಲ. ಯಾರು ಏನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಲೂ ಇಲ್ಲ. ದೊಡ್ಡವರ ವ್ಯವಹಾರಕ್ಕೂ ತನಗೂ ಏನೂ ಸಂಬಂಧವಿಲ್ಲ. ತನಗೆ ಅದು ಅನಗತ್ಯವೆಂದು ತಂದೆತಾಯಿ ಹೇಳಿದ್ದಾರೆ. ಹೀಗಿರುವಾಗ ಬಂದವನು ಉಡುಪಿಯವನಾದರೇನು? ಬೀದರ್ ನವನಾದರೆ ನನಗೇನು? ಎಂದು ತನ್ನ ಪಾಡಿಗೆ ತಾನಿದ್ದ. ಇನ್ನೊಬ್ಬ ಮನುಷ್ಯನ ಇರುವಿಕೆ-ಸಾಮೀಪ್ಯ-ಸಂಪರ್ಕವೇ ಅಸಹನೀಯವಾಗುವ ಹಾಗೆ ಮಕ್ಕಳನ್ನು ಇಂದಿನ ಕುಟುಂಬವ್ಯವಸ್ಥೆ ಬೆಳೆಸುತ್ತಿದೆ.

ಒಂದು ಕಾಲಕ್ಕೆ ನಮ್ಮ ದೊಡ್ಡ ಕುಟುಂಬಗಳಲ್ಲಿ ಒಡಹುಟ್ಟಿದವರ ನಡುವೆ ದ್ವೇಷ, ಮತ್ಸರದ ಭಾವನೆಗಳು ಹೊಗೆಯಾಡುತ್ತಿದ್ದವು. ದಾಯಾದಿಮತ್ಸರ-ಅದರಿಂದ ಜಗಳಗಳು ಸಾಮಾನ್ಯವಾಗಿರುತ್ತಿದ್ದವು. ಈಗ ಚಿಕಣಿ ಕುಟುಂಬದಲ್ಲಿ ಅದಕ್ಕೆಲ್ಲಿದೆ ಆಸ್ಪದ? ಒಂದೇ ಮಗು. ಅದೇ ಸರ್ವಸ್ವ. ಬದುಕು, ಅದರ ಸುತ್ತ ಕಟ್ಟಿದ ಕೋಟೆ. ಇನ್ನೊಂದು ಮಗು ಹುಟ್ಟದಿರುವುದೇ ಲೇಸು ಎಂದು ಬಯಸುವ ಕಾಲವಿದು.

ಮನೋವಿಜ್ಞಾನಿಗಳ ಪ್ರಕಾರ ಭಾರತೀಯ ಕುಟುಂಬದ ಸಂದರ್ಭದಲ್ಲಿ ಮಕ್ಕಳು ಅವಲಂಬಿತ, ಪರಸ್ಪರಾವಲಂಬಿತ ಹಾಗೂ ಅವಲಂಬನೀಯ ಎಂಬ ಮೂರು ನೆಲೆಗಳಲ್ಲಿ ಬೆಳೆಯುತ್ತೃಎ. ಕುಟುಂಬ ವ್ಯವಸ್ಥೆಯು ಮಕ್ಕಳಿಗೆ ರಕ್ಷಣೆ ಹಾಗೂ ಆಸರೆಯನ್ನು ನೀಡುತ್ತಿರುವುದು ನಿಜ. ಇದು ಹಡಗಿಗೆ ಲಂಗರು ಹೇಗೋ ಹಾಗೆ ಮಕ್ಕಳಿಗೆ ಅವಶ್ಯಕ. ಆದರೆ ಈ ರಕ್ಷಣೆ ಮತ್ತು ಆಸರೆ ಅತಿಯಾದರೆ ಮಕ್ಕಳ ‘ತನ್ನತನ’ಕ್ಕೆ ಹಾನಿಯಾದೀತು. ಇಂದಿನ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ಮಕ್ಕಳು ಕುಟುಂಬದ ಸೀಮಿತವಾದ ‘ರಕ್ಷಣಾ ತಡೆಗೋಡೆ’ಯ ನಡುವೆ ದೊರೆಯುವ ಸಾಂತ್ವನದ ವಲಯದಿಂದ ಆಚೆಗೆ ಜಿಗಿದು ವ್ಯಕ್ತಿಗತ ಸ್ಪರ್ಧಾತ್ಮಕ ಸಂಬಂಧಗಳ ಸಮಾಜದಲ್ಲಿ ಬದುಕುವುದನ್ನು ಕಲಿಯಬೇಕಾಗಿದೆ. ಆದುದರಿಂದ ‘ಲಗಾಮು ಬಿಗಿ ಹಿಡಿಯುವುದಕ್ಕೆ’ ಮತ್ತು ‘ಸಡಿಲಗೊಳಿಸುವುದಕ್ಕೆ’ ತಕ್ಕ ಸಮಯವಿದೆ. ಬಹುತೇಕ ಭಾರತೀಯ ಪಾಲಕರು ಇದನ್ನು ಸರಿಯಾಗಿ ಗುರುತಿಸಲು ವಿಫಲರಾಗುತ್ತಿದ್ದಾರೆ (ಮಾಲವಿಕ ಕಪೂರ್ ೧೯೯೫). ಆದುದರಿಂದ ಮಕ್ಕಳು ತಮ್ಮ ಪುಟ್ಟ ಕೂಪಗಳಿಂದ ಹೊರಗೆ ಬರಲಿ. ಮನೆಯಂಥ ಮನೆಗಳನ್ನು ರೂಪಿಸಿಕೊಂಡು ಕುಟುಂಬದ ಗಡಿಗಳನ್ನು ವಿಸ್ತರಿಸಿ ವಿಭಿನ್ನ ಸಾಮಾಜಿಕ ಸಂಬಂಧಗಳನ್ನು ಕುದುರಿಸಿ ತಮ್ಮತನವನ್ನು ಬೆಳೆಸಿಕೊಳ್ಳಲಿ.