ಬಾಲ್ಯವೆಂಬ ಭದ್ರವಾದ ಕೋಟೆಯನ್ನು ಕಟ್ಟಿ ಮಕ್ಕಳನ್ನು ಅದರೊಳಗೆ ರಕ್ಷಿಸಲಾಗುತ್ತದೆ. ಆದರೆ ಈ ಕೋಟೆಯೇ ಎಷ್ಟೋ ಸಲ ನಿಷ್ಫಲವೆನಿಸುತ್ತದೆ. ಆದುದರಿಂದಲೇ ಕೆಲವು ತಂದೆತಾಯಿಗಳು ಆಗಾಗ್ಗೆ ತಮ್ಮ ಬಾಲ್ಯವನ್ನೂ ತಮ್ಮ ಮಕ್ಕಳ ಬಾಲ್ಯವನ್ನೂ ಹೋಲಿಸಿ ನೋಡಿ “ಈಗಿನ ಮಕ್ಕಳಿಗೆ ಏನಾಗಬೇಕು? ಎಲ್ಲ ಸುಲಭ. ಹಿಂದೆ ನಾವು ಎಷ್ಟೆಲ್ಲ ಕಷ್ಟಪಟ್ಟಿದ್ದೆವು. ಅದು ಇವಕ್ಕೇನಾದರೂ ಗೊತ್ತಾ? ದುಡ್ಡಿನ ಬೆಲೆಯೇ ಗೊತ್ತಿಲ್ಲ ಇವಕ್ಕೆ”  ಅಂತ ಗೊಣಗುತ್ತಿರುತ್ತಾರೆ. ಇದು ಹೇಗೆಂದರೆ, ಕಠೋರ ವಾಸ್ತವದಿಂದ ಮಕ್ಕಳನ್ನ ರಕ್ಷಿಸಲು ಸುಂದರ ಪಂಜರ ನಿರ್ಮಿಸಿದ ಹಿರಿಯರು ಅದರೊಳಗೆ ಕಸಕಡ್ಡಿ, ಗಲೀಜು, ಮುಳ್ಳು, ಗಾಜಿನಚೂರು ತುಂಬಿದ ಹಾಗಾಯ್ತು. “ಜೀವನ ಅಂದ್ರೆ ಏನು ಅನ್ನೋದು ಹಾಳುಮುಂಡೇವಕ್ಕೆ ಗೊತ್ತಾಗೋದು ಯಾವಾಗ? ಇವು ಕಲಿಯೋದು ಯಾವಾಗ? ಜವಾಬ್ದಾರಿ ಬರೋದು ಯಾವಾಗ?” ಅಂತ ತಾವು ನಿರ್ಮಿಸಿದ ಪಂಜರಕ್ಕೆ ತಾವೇ ಮುಳ್ಳುತಂತಿ ಬಿಗಿದಂತೆ ಆಯ್ತು.

ಮಕ್ಕಳನಮ್ನು ಪ್ರೀತಿಸುವ ಹಿರಿಯರು ತಾವು ಮಕ್ಕಳನ್ನು ನಿಜಕ್ಕೂ ಪ್ರೀತಿಸುತ್ತಿದ್ದೇವೆ ಎಂದು ಬಾಯಲ್ಲಿ ಹೇಳಿದರೂ ಅವರ ನಡವಳಿಕೆ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಅವರ ನಡವಳಿಕೆಯಲ್ಲಿ ಆತಂಕವಿರುತ್ತದೆ. ಸುಮ್ಮಸುಮ್ಮನೆ ರೇಗುತ್ತಾರೆ. ಅಸಹನೆಯಿಂದ ನಡೆದುಕೊಳ್ಳುತ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನ ಹಾಗೂ ಕ್ರಿಯೆಯಲ್ಲಿ ತಪ್ಪು ಕಂಡು ಹುಡುಕುವುದೇ ಅವರ ಮುಖ್ಯ ಗುರಿಯಾಗಿರುತ್ತದೆ. ಮಕ್ಕಳನ್ನು ‘ಸರಿಯಾಗಿ ತಿದ್ದ’ ಬೇಕೆಂಬ ಅತಿಕಾಳಜಿಯೇ ತಪ್ಪು ಕಂಡುಹಿಡಿಯುವಂತೆ ಮಾಡುತ್ತದೆ. ನನ್ನಪ್ಪ ಮತ್ತು  ನಾನು ಚಿಕ್ಕಂದಿನಲ್ಲಿ ಒಟ್ಟಿಗೆ ಪೇಟೆಗೆ ಹೋಗಿಬರುವಾಗ ನಾನು ಅಪ್ಪನ ಕೈಲಿ ಯಾವಾಗ್ಲೂ ಬೈಸಿಕೊಳ್ತಿದ್ದೆ. “ಏನದು ಚಪ್ಪಲಿ ಪರಪರ? ಸದ್ದುಮಾಡದೆ, ಕಾಲೆಳೆಯದೆ ನಡೆಯೋಕೆ ಬರೊಲ್ಲವೊ?” ಅಂತ ಅಪ್ಪ ಹೇಳ್ತಾ ಇದ್ದ.’

ನನ್ನ ಅಜ್ಜಿ ಪ್ರತಿನಿತ್ಯ ನನಗೆ ‘ಮಂಗಳಾರತಿ’ ಮಾಡುತ್ತಿದ್ದಳು. “ಆ ಮಾಣಿ ಹಾಸಿಗೆಯಲ್ಲಿ ಉಚ್ಚೆ ಹೊಯ್ದಿತ್ತು. ಕುಂಟೆಕೋಣ, ಅಷ್ಟೂ ಬುದ್ಧಿಯಲ್ಲೆ ಅದಕ್ಕೆ” ಅಂತ ಅಡುಗೆಮನೆ ಮೂಲೆಯಲ್ಲಿ ಕುಳಿತು ಸಹಸ್ರನಾಮ ಅರ್ಚನೆ ಮಾಡುತ್ತಿದ್ದಳು. ತಾಯಿ ಇಲ್ಲದ ತಬ್ಬಲಿಯಾದ ನಾನು ಅವಮಾನದ ಮುದ್ದೆಯಾಗುತ್ತಿದ್ದೆ. ದಿನ ಹೋದಂತೆ ಕತ್ತಲಾಗುತ್ತಿದ್ದಂತೆ ಭಯ ಆತಂಕ ಹೆಚ್ಚಾಗುತ್ತಿತ್ತು. ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಹೊಯ್ಯುವ ಹಾಗಾಗದಿರಲಿ ಎಂದು ಪ್ರಾರ್ಥಿಸುತ್ತಿದ್ದೆ. ಆದರೆ ಬೆಳಿಗ್ಗೆ ಎಚ್ಚರಾದಾಗ ಹಾಸಿಗೆ ಒದ್ದೆ ಯಾರಿಗೂ ತಿಳಿಯದಂತೆ ಅದೇ ಬಟ್ಟೆಗಳನ್ನು ಕಟ್ಟಿ ಕೋಣೆಯೊಳಗಿಡುತ್ತಿದ್ದೆ. ಗೂಢಚಾರಿಣಿ ಅಕ್ಕ (ನನ್ನ ದೊಡ್ಡಮ್ಮನ ಮಗಳು) ನಾನು ಹಾಸಿಗೆಯಲ್ಲಿ ಉಚ್ಚೆ ಹೊಯ್ದದ್ದನ್ನು ಜಗತ್ತಿಗೇ ಜಾಹೀರು ಮಾಡುತ್ತಿದ್ದಳು. ಈ ತಪ್ಪು ಕಂಡು ಹುಡುಕುವ ಪ್ರವೃತ್ತಿಯೇ ನನ್ನಲ್ಲಿ ಕೀಳರಿಮೆ ಬೆಳೆಯಲು ಕಾರಣವಾಯಿತು ಎಂದು ಈಗ ಹಿನ್ನೋಟದಲ್ಲಿ ಹೇಳಿದರೆ ನಂಬುವವರು ಯಾರು? ಕಾಲವೇ ಹಾಗೆ! ಆಗಿನ ಕ್ರಮವೇ ಹಾಗೆ ಎಂಬ ಸಮರ್ಥನೆಗಳು ಕೇಳಿಬರುತ್ತವೆ.

ಒಟ್ಟಿನಲ್ಲಿ ಮಕ್ಕಳು ಎಲ್ಲೇ ಹೋಗಲಿ, ಏನೇ ಮಾಡಲಿ, ಅಲ್ಲಿ ನಗು-ಕೇಕೆ-ಹಾಸ್ಯ-ಲವಲವಿಕೆ ಬದಲಿಗೆ ಸದಾ ಹಿಂಬಾಲಿಸುವ ಕಣ್ಣುಗಳು. ಸಣ್ಣ ತಪ್ಪನ್ನು ಭೂತಕನ್ನಡಿಯಲ್ಲಿ ನೋಡಿ ಶಿಕ್ಷಿಸುವ ಕೈಗಳು. ಪಾರ್ಕಿನಲ್ಲಿ ಚಂದದ ಎರಡು ಮಕ್ಕಳು ಸುಮ್ಮನೆ ಹೀಗೆ ನಿಂತಿರಲಿ-ಕೂಡಲೆ ಯಾರೋ ಕೇಳುತ್ತಾರೆ “ಏನು ಮಕ್ಕಳಾ! ಒಟ್ಟಿಗೇ ನಿಂತಿದ್ದೀರಿ? ಅಪ್ಪ ಅಮ್ಮ ಎಲ್ಲಿ? ಹೋಗಿ ಅಲ್ಲ/ಇಗೆ. ಅವರು ನಿಮ್ಮನ್ನು ಹುಡುಕುತ್ತಿರಬಹುದು.”

ಈಗಿನ ಕೆಲವರಿಗೆ ಮಕ್ಕಳು ಅಂದರೆ ಕಿರಿಕಿರಿ-ಕರಕರೆ ಅನ್ನಿಸತೊಡಗಿದೆ. ಮನೆಯಲ್ಲಿ ಮಕ್ಕಳೇ ಬೇಡ. ಅದೂ ಹೊರುವುದು ಹೆರುವುದು ಬೇಡ. ಮಗು ಬೇಕೇಬೇಕು ಅಂತಿದ್ದರೆ ಯಾವುದೋ ಒಂದು ಅನಾಥಮಗುವನ್ನು ದತ್ತು ತಗೊಂಡರೆ ಆಯ್ತು… ಹೊತ್ತು ಹೆತ್ತು ದೇಹಸೌಂದರ್ಯ ಹಾಳುಮಾಡಿಕೊಳ್ಳುವುದೇಕೆ? ಎಂಬಂಥ ಭಾವನೆಗಳು ಆಧುನಿಕ ಮಹಿಳೆಯರಲ್ಲಿ ಜಾಗೃತಗೊಂಡಿವೆ.

ಈ ಹಿಂದೆ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆ ಅಂಥ ಕಷ್ಟದ ಕೆಲಸವಾಗಿರಲಿಲ್ಲ. ‘ಮಕ್ಕಳಿರಲವ್ವ  ಮನೆತುಂಬ’. ಮಕ್ಕಳಿದ್ದೆರೆ ಅವರು ಬೇಗಬೇಗನೆ ಬೆಳೆದು ದೊಡ್ಡವರಾದರೆ ದುಡಿದು ಸಂಪಾದಿಸುತ್ತಾರೆ. ಕುಟುಂಬದ ಆದಾಯ ಹೆಚ್ಚುತ್ತದೆ ಎಂಬ ನಂಬಿಕೆ ಇದ್ದಿತ್ತಲ್ಲವೆ?

ಮಧ್ಯಮ ಹಾಗೂ ಮೇಲುಮಧ್ಯಮ ವರ್ಗಗಳಲ್ಲಿ ಅವರು ಕೆಲಸಮಾಡದಿದ್ದರೇನಂತೆ? ಅವರ ಮೇಲ್ವಿಚಾರಣೆ ಅಂಥ ಕಷ್ಟದ ಸಂಗತಿಯಾಗಿರಲಿಲ್ಲ. ಮೇಲಾಗಿ ಈಗಿನ ಹಾಗೆ ಮಕ್ಕಳ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕಾದ ಪರಿಸ್ಥಿತಿ ಆಗ ಇದ್ದಿರಲಿಲ್ಲ. ನಗರಗಳ ಸಂಖ್ಯೆ ಬಲು ಕಡಿಮೆ. ಜನಸಂದಣಿ ವಿರಳ. ವಾಹನಗಳೇ ಬಲು ಸೀಮಿತ. ಮಾರಕ ಯಂತ್ರಗಳಿದ್ದಿರಲಿಲ್ಲ. ತಂತ್ರಜ್ಞಾನ ಬಲು ಸರಳ. ರೋಗರುಜಿನ ಹೊರತುಪಡಿಸಿದರೆ ಮಕ್ಕಳನ್ನು ಬಲಿತೆಗೆದುಕೊಳ್ಳುವ ಗಂಡಾಂತರಗಳಿರಲಿಲ್ಲ. ಮಕ್ಕಳು ಆಟವಾಡಿಕೊಂಡಿರಲು, ಕೂಡಿ ನಲಿಯಲು ವಿಶಾಲವಾದ ಅಂಗಳ, ಗದ್ದೆ, ಗುಡ್ಡ, ಬಯಲುಪ್ರದೇಶಗಳು ಧಾರಾಳವಾಗಿದ್ದವು. ಸಣ್ಣಪುಟ್ಟ ನಗರಗಳಲಕ್ಲಿ ಮಕ್ಕಳು ರಸ್ತೆಯ ಮೇಲೆ ಆಟವಾಡಿಕೊಂಡಿರಬಹುದಿತ್ತು.

ಹತ್ತಾರು  ಮಕ್ಕಳಲ್ಲಿ ಒಂದೆರಡು ಸತ್ತರೂ ಆಗಿನ ತಂದೆತಾಯಿಗಳು ವಿಶೇಷ ಕಾಳಜಿ ಮಾಡುತ್ತಿದ್ದ ಹಾಗೆ ಕಂಡುಬರುವುದಿಲ್ಲ. ಹತ್ತು ಮಕ್ಕಳಲ್ಲಿ ನಾಲ್ಕು ಸತ್ತರೂ ಇನ್ನೂ ಆರಾದರೂ ಉಳಿದುಕೊಂಡಿದ್ದಾವಲ್ಲ ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು.

ಆದರೆ ಈಗ? ಜನಸಂಖ್ಯಾಸ್ಫೋಟ ತಡೆಗಟ್ಟಬೇಕಲು, ಚಿಕ್ಕ ಸಂಸಾರವೇ ಚೊಕ್ಕ ಸಂಸಾರ ಎಂಬ ಆಲೋಚನೆಗಳಿಂದಾಗಿ ಕುಟುಂಬಗಳ ಗಾತ್ರ ಕಿರಿದಾಗಿದೆ. ಕುಟುಂಬಯೋಜನೆಯಿಂದಾಗಿ ಮಕ್ಕಳ ಸಂಖ್ಯೆ ವರ್ಷೇ ವರ್ಷೇ ಕಡಿಮೆಯಾಗುತ್ತಿದೆ. ನಗರಪ್ರದೇಶಗಳಲ್ಲಿ, ಅರೆನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಚಿಕಣಿ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಈಗೀಗ ಸರಕಾರಿ ಶಾಲೆಗಳನ್ನು ಎಷ್ಟೆಷ್ಟು ಸುಂದರಗೊಳಿಸಿ, ಏನೇನು ಸೌಕರ್ಯಗಳನ್ನು ಒದಗಿಸಿದರೂ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿಯುತ್ತಿದೆ. ಆಂಗ್ಲಮಾಧ್ಯಮ ಶಿಕ್ಷಣದ ವ್ಯಾಮೋಹ ಒಂದು ಪ್ರಬಲ ಕಾರಣವೆಂಬುದು ನಿಜವಾದರೂ ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಈಚಿನ ವರ್ಷಗಳಲ್ಲಿ ಭಾರಿ ಕುಸಿತ ಉಂಟಾಗಿದೆ.

ಚಿಕ್ಕ ಸಂಸಾರ ಚೊಕ್ಕ ಸಂಸಾರವೆಂಬ ನೀರಗುಳ್ಳೆ ಒಡೆದಿದೆ. ಆರ್ಥಿಕವಾಗಿ ಕುಟುಂಬಗಳು ಗಟ್ಟಿಯಾದರೂ ಖರ್ಚು ವೆಚ್ಚಗಳು ಹೆಚ್ಚಿವೆ. ಭಾವನಾತ್ಮಕ ಭದ್ರತೆಯ ಕೋಟೆ ಬಿರುಕು ಬಿಟ್ಟಿದೆ. ಚಿಕಣಿ ಕುಟುಂಬಗಳಲ್ಲಿ ಮಕ್ಕಳನ್ನು ಸಾಕಿ ಬೆಳೆಸುವುದು ತಂದೆತಾಯಿಗಳಿಗೆ ಅದರಲ್ಲೂ ಉದ್ಯೋಗಿ ದಂಪತಿಗಳಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಜಗತ್ತಿನಲ್ಲಿ ಈಗ ಎಲ್ಲದಕ್ಕೂ ತರಬೇತಿ ಶಾಲೆಗಳು, ಕಾರ್ಯಾಗಾರಗಳು ಏಕಪ್ರಕಾರವಾಗಿ ನಡೆಯುತ್ತಿವೆ. ಆದರೆ ದಾಂಪತ್ಯಜೀವನ ಹಾಗೂ ಮಕ್ಕಳ ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ಕಾರ್ಯದ ಯಾವುದೇ ಶಾಲೆ ಇನ್ನೂ ತೆರೆದಿಲ್ಲ!
ಇವತ್ತಿನ ತಂದೆತಾಯಿಗಳಿಗೆ ಬೆಳಗ್ಗಿನಿಂದ ತೊಡಗಿ ರಾತ್ರಿ ಹಾಸಿಗೆಯಲ್ಲಿ ಒರಗುವ ತನಕವೂ ಮಕಳದ್ದೇ ಚಿಂತೆ. ಮಲಗಿದಮೇಲೂ ಚಿಂತೆ ತಪ್ಪಿದ್ದಲ್ಲ. ನಿದ್ರೆ ಬಳಿ ಸುಳಿಯುವುದೇ ಇಲ್ಲ! ಬೆಳಿಗ್ಗೆ ಬೇಗನೆ ಏಳಬೇಕು. ಕುಂಭಕರ್ಣ ಮಕ್ಕಳನ್ನು ಬಡಿದು ಎಚ್ಚರಿಸಿ ಹಲ್ಲುಜ್ಜಿಸಬೇಕು. ಕಾಫಿಮಾಡಿ ಕೊಡಬೇಕು. ಟಿಫನ್‌ ರೆಡಿಮಾಡಿ ಒಲ್ಲೆನೆಂದರೂ ತಿನ್ನಿಸಬೇಕು.

ಸ್ನಾನ ಮಾಡಿಸಿ ಡ್ರೆಸ್‌ ಮಾಡಬೇಕು. ರಿಕ್ಷಾಕ್ಕಾಗಿ ಕಾಯಬೇಕು. ಬಾಕಿಯಿರುವ ‘ಹೋಂವರ್ಕ್’, ಕಾಪಿ ಬರೆಸಬೇಕು. ಭಾಷಣ ಬರೆದುಕೊಡಬೇಕು. ಈ ನಡುವೆ ಕಛೇರಿಗೆ ಹೋಗಲು ತಾನೂ ತಯಾರಾಗಬೇಕು. ಗಂಡನಿಗೆ ಟಿಫನ್‌ಬಾಕ್ಸ್‌ ರೆಡಿಮಾಡಬೇಕು. ಫೋನ್‌ಕಾಲ್‌ ಎಟೆಂಡ್‌ ಮಾಡಬೇಕು. ರಿಕ್ಷಾದಲ್ಲಿ ತುಂಬಿಸಿ ಕಳಿಸಬೇಕು, ಇಲ್ಲ ತಾನು ಕಛೇರಿಗೆ ಹೋಗುವಾಗ ತನ್ನ ಸ್ಕೂಟಿಯಲ್ಲಿ ಮಗುವಿಗೆ ಡ್ರಾಪ್‌ ಕೊಡಬೇಕು. ಮಗು ಶಾಲೆಯಲ್ಲಿ ಏನು ಮಾಡುತ್ತೋ? ಉಣ್ಣುತ್ತೋ ಇಲ್ಲವೋ? ಮೇಡಂ ಕೈಯಲ್ಲಿ ಪೆಟ್ಟುತಿನ್ನುತ್ತಾ? ಅತ್ತುಕೊಂಡು ಮನೆಗೆ ಬರುತ್ತಾ? ರಸ್ತೆ ದಾಟುವಾಗ ಏನಾದರೂ ಆದ್ರೆ…? ದಾರಿಯಲ್ಲಿ ಯಾರಾದರೂ ಕಿಡ್‌ನ್ಯಾಪ್‌ ಮಾಡಿದರೆ? ಮನೆಯ ಬೀಗದಕ್ಕೆ ಸಿಗದಿದ್ದರೆ? ನಾವು ಬರೋತನಕ ಮನೆಯಲ್ಲಿ ಒಬ್ಬಳೇ ಇರ್ತಾಳೆ-ಯಾರಾದ್ರೂ ರೇಪ್‌ ಮಾಡಿದ್ರೆ?” ಅಯ್ಯೋ ಅಯ್ಯೋ ಚಿಂತೆಗಳ ಸರಮಾಲೆ. “ಸಿಡಿಲಪೊಟ್ಟಣಗಟ್ಟಿ ಸೇಕವ ಕೊಟ್ಟಂತಲ್ಲವೆ ಈ ಸ್ಥಿತಿ?” ಹಾವಿನ ಹೆಡೆಯಲಿ ತಲೆಯ ತುರಿಸಿಕೊಂಬ ಹಾಗಲ್ಲವೆ ಇದು? ನಮ್ಮ ತಂದೆತಾಯಿ ಎಂದಾದರೂ ನಮ್ಮ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡದ್ದುಂಟಾ?

ಮಗು ಶಾಲೆಯಿಂದ ಮನೆಗೆ ಬಂದರೂ ತಂದೆತಾಯಿಗೆ ಚಿಂತೆ ತಪ್ಪಿದ್ದಲ್ಲ. “ಹುಡುಗ ಡಲ್‌ ಆಗಿದ್ದಾನೆ. ಆ ಸ್ಕೂಲ್‌ ಬೇಡ್ವಂತೆ ಅವನಿಗೆ. ಬೇರೆಲ್ಲಿ ಸೇರಿಸ್ಲಿ?” “ಏನೇನು ಮಾಡಿದ್ರೂ ಒಳ್ಳೇ ಮಾರ್ಕ್ಸ್ ತಗೋತಿಲ್ಲ ಈಕೆ. ನನ್ನ ಮರ್ಯಾದೆ ಹೋಗತ್ತೆ. ಏನ್‌ ಮಾಡ್ಲಿ?” “ಯಾವ ಕಾಂಬಿನೇಶನ್ಗೆ ಹೋದ್ರೂ ಬಹುಮಾನ ಬರ್ತಾ ಇಲ್ಲ. ಎಷ್ಟು ದುಡ್ಡು ಖರ್ಚಾಯ್ತು? ಪ್ರೈಜ್‌ ತಗೊಳ್ಳೋಕೆ ದಾಡಿ ಇವ್ಳಿಗೆ?” “‘ನೂರು’ ಚಿಂತೆ ಹಾಸಲುಂಟು, ಹೊದೆಯಲುಂಟು.”

ಇಂಥ ಚಿಂತೆ ಆತಂಕಗಳ ನಡುವೆ ಬದುಕುವ ತಂದೆತಾಯಿಗಳು ಹೈರಾಣಾಗಿ “ಸಾಕಪ್ಪಾ ಸಾಕು, ಒಂದು ಮಗುವಿಗೇ ಇಷ್ಟಾದರೆ ನಮ್ಮ ಅಮ್ಮ-ಅಪ್ಪ  ಹತ್ತತ್ತು ಹೆತ್ತು ಅದ್ಹೇಗೆ ನಮ್ಮನ್ನು ಬೆಳೆಸಿದ್ರು?” ಅಂತ ಅಂದ್ಕೋತಾರೆ.

ಹಾಗಿದ್ದರೆ ಮಕ್ಕಳ ಮುಗ್ಧ ನಗು, ತುಂಟಾಟ, ಹೊರಳಾಟ, ತೊದಲುಲಿ, ಅಂಬೆಗಾಲಿಕ್ಕುವಿಕೆ, ಮುಗ್ಧ ಪ್ರಶ್ನೆಗಳು, ಮಧುರ ಮಾತು ಇವೆಲ್ಲವಕ್ಕೆ ಬಲೆಯೇ ಇಲ್ಲವೆ? ಮಗುವಿನ ‘ಅಮ್ಮಾ’ಎಂಬ ಕೊಳಲಿನ ಕರೆಗಾಗಿ ತಾಯಿ ಕಾತರಿಸುವುದಿಲ್ಲವೆ? ಇದೆಲ್ಲ ಮಹದಾನಂದದ ಸಂಗತಿಗಳೇ ಆದರೂ ಇಂದು ಹಲವು ತಂದೆತಾಯಿಗಳಿಗೆ ಮಕ್ಕಳು ದೊಡ್ಡವರಾಗುವ ತನಕ ಒಂದಿಲ್ಲೊಂದು ಚಿಂತೆರ ತಪ್ಪಿದ್ದಲ್ಲ. ಅದೂ ಪುಟ್ಟ ಮಗುವಿಗೆ ಏನೋ ಜಡಜಾಪತ್ತು, ಕಾಯಿಲೆಯಾದರಂತೂ ತಾಯಿಗೆ ಊಟತಿಂಡಿನಿದ್ರೆ ಏನೂ ಬೇಡ. ಅವಳ ಕಣ್ಣುಗಳು ಕಣ್ಣೀರಿನ ಪ್ರವಾಹವೇ ಆಗಿಬಿಡುತ್ತವೆ. ಎಷ್ಟೊಂದು ರಸನಿಮಿಷಗಳೋ ಅದಕ್ಕೂ ಮಿಗಿಲಾದ ವಿಷನಿಮಿಷಗಳು! ಅದರಲ್ಲೂ ತಂದೆಗಿಂತ ಹೆಚ್ಚಾಗಿ ನೋಯುವುದು, ಬೇಯುವುದು ತಾಯಿ. ಮದುವೆಯಾದ ಹೊಸದರಲ್ಲಿ ಕಿಲಕಿಲ ನಗುತ್ತ ಸರಬರ ಓಡಾಡಿಕೊಂಡಿರುವ ಕಣ್ಣಿಗೆ ತಾಯಿಯಾದೊಡನೆ ‘ಮಗುವಿಗೇನಾಗುತ್ತೋ’ ಎಂಬ ಚಿಂತೆಯ ಭೂತ ಅಮರಿಕೊಳ್ಳುತ್ತದೆ.

ಈ ದಿನಗಳಲ್ಲಿ ಮಕ್ಕಳನ್ನು ಚೆನ್ನಾಗಿ ಸಾಕುವುದು ಕುಶಾಲಿನ ಮಾತಲ್ಲ. ಒಂದು ಕಾಲಕ್ಕೆ ಮಕ್ಕಳಿಗೆ ತಾಯಿ ಚೆನ್ನಾಗಿ ಮೊಲೆಹಾಲು ಕುಡಿಸುತ್ತಿದ್ದಳು. “ಅವನಿನ್ನೂ ಮೊಲೆ ತಿನ್ನುವುದು ಬಿಟ್ಟಿಲ್ವಾ?” ಎಂದು ಕೇಳುವುದು ವಾಡಿಕೆಯಾಗಿತ್ತು. ಈಗ ಮಗು ಹುಟ್ಟಿ ಒಂದು ತಿಂಗಳಾಗುವ ಹೊತ್ತಿಗೆ ತಾಯಿ ಕೆಲಸಕ್ಕೆ ಹೋಗುತ್ತಾಳೆ. ಹೀಗಾಗಿ ‘ಸಿದ್ಧಶಿಶು ಆಹಾರ’ಕ್ಕೆ ಭಾರಿ ಬೇಡಿಕೆ ಮತ್ತು ಅದಕ್ಕಾಗಿ ಸಾಕಷ್ಟು ವ್ಯಯಿಸಬೇಕು. ವಿದ್ಯಾಭ್ಯಾಸದ ವಿಚಾರಕ್ಕೆ ಬಂದರೆ ಕೇಳುವುದೇ ಬೇಡ. ನನ್ನ ಒಟ್ಟು ವಿದ್ಯಾಭ್ಯಾಸಕ್ಕೆ ಬಹುಶಃ ಶುಲ್ಕವೆಂದು ಒಂದೈದು ಸಾವಿರ ರೂ. ಖರ್ಚಾಗಿರಬಹುದಷ್ಟೆ. ಆಗೆಲ್ಲ ಶಾಲೆ ಕಾಲೇಜುಗಳಲ್ಲಿ ಸುಲಭವಾಗಿ ಸೀಟು ಸಿಗುತ್ತಿತ್ತು. ದಾನಶುಲ್ಕದ ಪ್ರಶ್ನೆ ಇದ್ದಿರಲಿಲ್ಲ. ಆದರೆ ಈಗ ಮೂರು ನಾಲ್ಕು ವರ್ಷಗಳ ಅನಂತರ ಮಗುವಿಗೆ ನರ್ಸರಿ ಶಾಲೆಗೆ ಸೇರಬೇಕಾದರೆ ಈಗಲೆ ಮುಂಗಡ ಸೀಟು ಕಾದಿರಿಸಬೇಕು. ಅದೂ ಕನಿಷ್ಠ ೫೦-೬೦ ಸಾವಿರ ರೂ. ಶುಲ್ಕ ತೆತ್ತು ಪದವಿವ್ಯಾಸಂಗ ಮುಗಿಯುವ ಹೊತ್ತಿಗೆ ಕನಿಷ್ಠ ಒಂದೈದು ಲಕ್ಷ ರೂ. ವೆಚ್ಚವಾದೀತು. ಇನ್ನು ವೃತ್ತಿಶಿಕ್ಷಣ ಕೋರ್ಸುಗಳನ್ನು ಆಯ್ಕೆಮಾಡಿಕೊಂಡರೆ ಕೆಲವು ಲಕ್ಷ ರೂ.ಗಳು ಕೈಬಿಟ್ಟು ಹೋಗುತ್ತವೆ. ಎಂ.ಡಿ., ಎಂ.ಬಿ.ಎ. ಇತ್ಯಾದಿ ಕೋರ್ಸ್ ಎಂದರೆ ಮೊದಲೇ ಹಣ ಕೂಡಿಟ್ಟಿರಬೇಕು ಇಲ್ಲವೆ ಶೈಕ್ಷಣಿಕ ಸಾಲ ತಗೋಬೇಕು. ಇಷ್ಟೆಲ್ಲ ದುಡ್ಡು ವೆಚ್ಚಮಾಡಿ ವಿದ್ಯೆ ಕೊಡಿಸಿದರೂ ‘ಮಗ ಮನೆಯಲ್ಲಿ ಕೂತು ಕೆಟ್ಟ’ (ಉದ್ಯೋಗವಿಲ್ಲ!) ಮಗಳು ಗಂಡು ಸಿಗದೆ ಮೂಲೆ ಸೇರಿದಳು! ಎಲ್ಲದಕ್ಕೂ ಹಣ ಬೇಕು ಮತ್ತು ದುರಂತವೆಂದರೆ ಎಲ್ಲವನ್ನೂ ಹಣದ ರೂಪದಲ್ಲೇ ಬೆಲೆಕಟ್ಟುವ ದುಃಸ್ಥಿತಿ ಉದ್ಭವಿಸಿದೆ..

ಬಡವರಿರಲಿ, ಶ್ರೀಮಂತರಿರಲಿ ಉತ್ತರಾಯಣ ಬಂತೆಂದರೆ ಸಾಕು. ನಮ್ಮಲ್ಲಿ ಶುಭಕಾರ್ಯಗಳ ಶ್ರಾಯ ಆರಂಭವಾಗುತ್ತದೆ. ಚಿನ್ನದ ಅಂಗಡಿಗಳಲ್ಲಿ ಜವುಳಿ ಮಳಿಗೆಗಳಲ್ಲಿ ಜನವೋ ಜನ. ಒಂದು ಕಾಲಕ್ಕೆ ಭಾನುವಾರ ಹಾಗೂ ಹಬ್ಬಹರಿದಿನಗಳಂದು ಅಂಗಡಿಗಳಿಗೆ ರಜಾ. ಆದರೆ ಈಗ ‘ಭಾನುವಾರವೂ ಅಂಗಡಿ ತೆರೆದಿರುತ್ತದೆ’ ಎಂದು ಮೊದಲೇ ಜಾಹೀರು ಮಾಡುತ್ತಾರೆ. ರಜಾದಿನಗಳಲ್ಲೂ ಈ ಅಂಗಡಿಗಳ ಮುಂದಿರುವ ಸಾಲು ಕರುಗುವುದೇ ಇಲ್ಲ! ಮೇ ತಿಂಗಳು ಬಂದಿತೆಂದರೆ ಪುಸ್ತಕದಂಗಡಿಯವರಿಗೆ, ಬಟ್ಟೆ ಅಂಗಡಿಯವರಿಗೆ ಹಾಗೂ ದರ್ಜಿಗಳಿಗೆ ಸುಗ್ಗಿಯ ಕಾಲ. ಶಾಲಾಚೀಲ, ಬೂಟ್ಸು, ಸಮವಸ್ತ್ರಗಳ ಮಾರಾಟ ಭರದಿಂದ ಸಾಗುತ್ತದೆ. ಕೆಲವು ಖಾಸಗಿ ಶಾಲೆಗಳವರು “ಹೆತ್ತವರಿಗೇಕೆ ತೊಂದರೆ? ಅವರಿವರು ಲಾಭಮಾಡಿಕೊಳ್ಳುವುದೇಕೆ?” ಎಂದು ತಾವೇ ಒಂದಿಷ್ಟು ದರ ನಿಗದಿಪಡಿಸಿ ಅವೆಲ್ಲವನ್ನೂ ಕಡ್ಡಾಯವಾಗಿ ಶಾಲೆಗಳಲ್ಲಿ ಮಾರುತ್ತಾರೆ. ಬಂದ ಲಾಭಾಂಶವನ್ನು ಇನ್ನಾವುದೋ ಕೆಲಸಕ್ಕೆ ಬಳಸುತ್ತಾಋಎ. ಈಗಂತೂ ಕರ್ನಾಟಕ ಸರಕಾರದ ಪಠ್ಯಪುಸ್ತಕ ಸಂಘವೇ ನೇರವಾಗಿ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಮಾರಾಟ ಮಾಡುತ್ತಿದೆ!

ಖ್ಯಾತ ಶಿಕ್ಷಣ ಚಿಂತಕ ಜಾನ್‌ ಹೋಲ್ಟ್‌ (೧೯೭೪) ಅವರ ಪ್ರಕಾರ ಈಗಿನ ಹೆತ್ತವರಿಗೆ ಮಕ್ಕಳ ಬಾಲ್ಯವೆಂಬುದು ಅಸಾಧಾರಣವಾದ ಭಾವನಾತ್ಮಕ ಮತ್ತು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ತಮ್ಮ ಮಕ್ಕಳನ್ನು ಪ್ರೀತಿಸುವ ಹೊಣೆ ಹೆತ್ತವರ ಮೇಲಿದೆ ಮತ್ತು ಹೆತ್ತವರನ್ನು ಪ್ರೀತಿಸುವ ಹೊಣೆ ಮಕ್ಕಳ ಮೇಲಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ಆತಂಕಕಾರಿಯೂ ಅಪಾಯಕಾರಿಯೂ ಆದ ಸಂಬಂಧ ಜಾಲದಲ್ಲಿ ಹೆತ್ತವರು ಹಾಗೂ ಮಕ್ಕಳು ಸಿಲುಕಿಕೊಂಡಿದ್ದಾರೆ. ಈ ಮಕ್ಕಳು ನಮಗೆ ಬೇಡವಾಗಿತ್ತು. ಇವರು ನಮಗೊಂದು ಹೊರೆ ಅಥವಾ ಮಕ್ಕಳನ್ನು ಸಾಕುವುದರಲ್ಲಿ ಬಸವಳಿದ್ದೇವೆ ಎಂದು ಹೆತ್ತವರು ಹೇಳಿದರೆ ಅಪರಾಧವೆಂಬ ಭಾವ ಸೃಷ್ಟಿಯಾಗುತ್ತದೆ. ಅಂತೆಯೇ ತಮ್ಮನ್ನು ಸಾಕಿ ಬೆಳೆಸಿದ್ದಕ್ಕೆ, ಬೇಕುಬೇಕಾದುದನ್ನು ಒದಗಿಸಿದ್ದಕ್ಕೆ ಮಕ್ಕಳು ಹೆತ್ತವರಿಗೆ ಜೀವನಪರ್ಯಂತ ಋಣಿಯಾಗಿರಬೇಕು. ವಿಧೇಯರಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಯಾವುದಾದರೂ ಒಂದು ಹೆಣ್ಣುಮಗು “ನನಗೆ ಇದೆಲ್ಲ ಬೇಕಿರಲಿಲ್ಲ ಅಮ್ಮ. ನಾನು ಕೇಳಿದ್ದು ಇದನ್ನಲ್ಲ” ಅಂತ ಹೇಳಲಿ. ಆಗ ಕೂಡಲೆ ಅಮ್ಮ ಏನು ಹೇಳುತ್ತಾಳೆ ಗೊತ್ತೇ? “ನಿನಗೆ ಒಂಚೂರೂ ಕೃತಜ್ಞತೆ ಇಲ್ಲ ಕಣೆ. ನಿನಗಾಗಿ ನಾವು ಎಷ್ಟು ಖರ್ಚು ಮಾಡ್ತೀವಿ ಅನ್ನೋ ಪರಿವೆ ನಿನಗಿಲ್ಲ. ಏನೋ ಸ್ವಲ್ಪ ಬಣ್ಣ ಹೆಚ್ಚುಕಡಿಮೆ ಆಯ್ತು, ಅಡ್ಜಸ್ಟ್‌ ಮಾಡ್ಕೋಬಾರ್ದ?”, “ಹಾಗಲ್ಲಮ್ಮ ನಾ ಹೇಳಿದ್ದು” , “ಹೋಗ್ಲಿಬಿಡು, ಇನ್ನುಮೇಲೆ ನಿನಗೆ ನಾನೇನೂ ತೆಗೆಸ್ಕೊಡೊಲ್ಲ”.

ಹಿಂದಿನ ಕಾಲದಲ್ಲಿ ಮಕ್ಕಳು ಬೆಳೆದಂತೆ ಅವರು ತಂದೆತಾಯಿಗಳಿಗೆ ಹೆಚ್ಚುಹೆಚ್ಚು ಸಹಕರಿಸುವವರಾಗುತ್ತಿದ್ದರು. ಜೊತೆಗೂಡಿ ದುಡಿಯುತ್ತಿದ್ದರು; ಕುಟುಂಬದ ಆದಾಯವನ್ನು ಹೆಚ್ಚಿಸುತ್ತಿದ್ದರು. ಆದರೆ ಈಗ ಹಾಗಲ್ಲ. ಬೆಳೆದಂತೆ ತಂದೆತಾಯಿಗಳಿಗೆ ಉಪಕಾರಿ ಆಗುವುದಕ್ಕಿಂತ ಹೆಚ್ಚಾಗಿ ಉಪದ್ರವಕಾರಿ ಆಗುವ ಸಾಧ್ಯತೆಗಳಿವೆ. ಮಗ, ಮಗಳು ಬೆಳೆದಂತೆ ಅವರು ಬಳಸುವ ಪ್ರತಿಯೊಂದು ವಸ್ತುವೂ ಹೆಚ್ಚುಹೆಚ್ಚು ದುಬಾರಿಯಾಗುತ್ತಾ ಹೋಗುತ್ತದೆ. ಬಟ್ಟೆ, ಪುಸ್ತಕಗಳು, ಶುಲ್ಕ, ಆಟದ ಸಾಮಾನು, ಸಾರಿಗೆ ಇತ್ಯಾದಿ. ಬಹಳ ಮುಖ್ಯವಾಗಿ ಇಂದಿನ ಸಮಸ್ಯೆ ಎಂದರೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತ ಹೋದಂತೆ ಮಕ್ಕಳು ದಾರಿತಪ್ಪದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಮತ್ತು ಚಿಂತೆ ಹೆತ್ತವರನ್ನು  ಕಾಡುತ್ತಿದೆ. ಹೆತ್ತವರನ್ನು ಭೆಟ್ಟಿಯಾದಾಗಲೆಲ್ಲ ಅವರು ಹೇಳುವ ಮಾತುಗಳಿವು. “ನನಗೆ ಅವನದೇ ಚಿಂತೆಯಾಗಿದೆ. ಹೇಗೆ ತಿದ್ದೋದು ಗೊತ್ತಾಗ್ತಿಲ್ಲ. ಕೆಟ್ಟ ಹುಡುಗರ ಸಹವಾಸ ಮಾಡಿದ್ದಾನೆ. ಹೇಳಿದ ಮಾತು ಕೇಳ್ತಾ ಇಲ್ಲ.”

“ಅವಳಿಗೆ ಬೈದು ಹೊಡೆದು ಎಲ್ಲ ವಿದ್ಯೆ ಪ್ರಯೋಗಿಸಿ ಹೇಳಿ ಆಯಿತು. ಆ ಹುಡುಗನ ಸಹವಾಸ ಬಿಡು; ಎಲ್ಲೆಲ್ಲೊ ಅಲೀಬೇಡ. ನಮ್ಮ ಮರ್ಯಾದೆ ಕಳೀಬೇಡ ಅಂತ. ಮೈಮೇಲೆ ಹಾರ್ತಾಳೆ. ಹೆಚ್ಚು ಹೇಳಿದರೆ ಅವನ್ಜೊತೆ ಓಡಿಹೋಗ್ತೀನಿ ಅಂತಾಳೆ. ಸುಯಿಸೈಡ್‌ ಮಾಡ್ಕೋತೀನಿ ಅಂತಾಳೆ.” ಮುಖದಲ್ಲಿ ಮುಗುಳ್ನಗು ಸೂಸುವ ಹೆತ್ತವರ ಎದೆಯಾಳದಲ್ಲಿ ಎಷ್ಟೊಂದಲು ಚಿಂತೆಯ ಗೆರೆಗಳಿವೆ? ಅಂತರಗಂಗೆ ತುಂಬಿದ ಕೊಳದ ಆಳದಲ್ಲಿ ಕೆಸರೆಷ್ಟೋ?

ನಮ್ಮ ಹಿರಿಯರು ನಮ್ಮನ್ನು ಬೆಳೆಸಿದ ಕಾಲಕ್ಕೆ ಮಕ್ಕಳು ಮುಂದೆ ಏನು ಆಗ್ಬೇಕು? ಅನ್ನೋ ಕಲ್ಪನೆ ಅಷ್ಟಾಗಿ ಜಾಗೃತವಾಗಿರಲಿಲ್ಲ.ಪರಸ್ಪರ ಹೋಲಿಕೆ ಇದ್ದಿರಲಿಲ್ಲ. ಊರಿಗೊಬ್ಬರೋ ಇಬ್ಬರೋ ವಿದ್ಯಾವಂತರು, ಸರಕಾರಿ ನೌಕರರು. ಅವರೇ ಉಳಿದವರಿಗೆ ಮಾದರಿ. ಆದರೆ ಈಗ ಹೆತ್ತವರ ಮುಂದಿರುವ ಸಮಸ್ಯೆ ಎಂದರೆ ಉಳಿದವರ ಮಕ್ಕಳು ಏನಾಗಿದ್ದಾರೋ ಅವರಂತೆ ತಮ್ಮ ಮಕ್ಕಳು ಆಗಬೇಕು ಮತ್ತು ಮಕ್ಕಳು ಏನು  ಸಾಧನೆ ಮಾಡುತ್ತಾರೆ ಅಥವಾ ಸೋಲುತ್ತಾರೆ ಎಂಬುದನ್ನು ಆಧರಿಸಿ ಇತರರು ತಮ್ಮನ್ನು ಬೆಲೆಕಟ್ಟುತ್ತಾರೆ ಎಂಬ ಚಿಂತೆ.

ಈಚೆಗೆ ಇಬ್ಬರು ಹುಡುಗರು ನಮ್ಮ ಮನೆಯ ಮಾವಿನಮರದಲ್ಲಿದ್ದ ಕಸುಗಾಯಿಯನ್ನು ಕೋಲಿನಿಂದ ನಮಗೆ ಗೊತ್ತಾಗದಂತೆ ಉದುರಿಸುತ್ತಿದ್ದರು ಕಾಂಪೌಂಡಿನ ಆಚೆ ನಿಂತು. ಅದನ್ನು ನೋಡಿದೊಡನೆಯೆ ನಾವು “ಯಾರದು? ಕಳ್ಳತನ ಮಾಡೋದು?” ಅಂತ ಬೊಬ್ಬೆ ಹೊಡೆದು ಬಿಸಿಲುಮಾಳಿಗೆಯ ಮೇಲೆ ಹೋಗಿ ನಿಂತೆವು. ಪಕ್ಕದ ಕಾಂಪೌಂಡಿನ ಮನೆಯೊಂದರ ಉಪ್ಪರಿಗೆ ಮೆಟ್ಟಿಲಲ್ಲಿ ನಿಂತ ತಾಯಿ ಕದಿಯಹೋದ ತನ್ನ ಮಗನಿಗೆ “ದೊಡ್ಡವನಾಗಿದ್ದೀಯ; ದೊಡ್ಡವನಾದ್ರೆ ಸಾಲದು, ಬುದ್ಧಿ ಬೆಳೀಬೇಕು” ಅಂತ ಉಪದೇಶ ಮಾಡ್ತಾ ಇದ್ದಳು! ತಮ್ಮ ಮಕ್ಕಳ ಆಟಪಾಠ, ತಂಟೆ, ಕೀಟಲೆ ಇತ್ಯಾದಿಗಳನ್ನು ದೊಡ್ಡವರು ನೋಡುತ್ತಿದ್ದಾರೆ ಎಂಬುದು ಗೊತ್ತಾದೊಡನೆ ತಂದೆತಾಯಿಯ ‘ವರ್ತನೆ ತಿದ್ದುವ’ ಅಧಿಕಾರವಾಣಿ ಮೊಳಗುತ್ತದೆ. “ಏಯ್‌, ಅದೆಲ್ಲ ಮುಟ್ಟಬೇಡ. ಮಾಮ ಬೈತಾರೆ. ತಂಟೆ ಮಾಡ್ಬೇಡ. ಅಂಕಲ್‌ ಕೈಲಿ ಬೆತ್ತ ಇದೆ. ಹೊಡೀತಾರೆ.” ಎಷ್ಟೊಂದು ಸಲ ನಾವು ಹೀಗೆ ಮಾಡಿಲ್ಲ?

ಮಕ್ಕಳನ್ನು ಹೆದರಿಸಲು ನಾವು ಮೂರು ಬೆದರು ಬೊಂಬೆಗಳನ್ನು ಸೃಷ್ಟಿಸಿದ್ದೇವೆ. “ತಂಟೆ ಮಾಡ್ಬೇಡ ಪೋಲೀಸ್‌ಮಾಮನ ಕೈಲಿ ಲಾಠಿ ಇದೆ. ಹೊಡೀತಾರೆ”, “ಅತ್ರೆ ಡಾಕ್ಟ್ರು ಇಂಜೆಕ್ಷನ್‌ ಚುಚ್ತಾರೆ”, “ಗಲಾಟೆ ಮಾಡ್ಬೇಡ. ಮೇಷ್ಟ್ರ ಹತ್ರ ಹೇಳ್ತೀನಿ. ಮೇಷ್ಟ್ರು ಬೆತ್ತ ತಗೊಂಡು ಹೋಡೀತಾರೆ”. ಲಾಠಿ, ಇಂಜೆಕ್ಷನ್‌ ಹಾಗೂ ಬೆತ್ತ ಮಕ್ಕಳಲ್ಲಿ ಭಯೋತ್ಪಾದನೆ ಮಾಡುವ ವಸ್ತುಗಳು. ಎಳವೆಯಲ್ಲಿ ಪೊಲೀಸ್‌, ಡಾಕ್ಟ್ರು ಹಾಗೂ ಮೇಷ್ಟ್ರು ಮಕ್ಕಳ ಪಾಲಿಗೆ ಭಯೋತ್ಪಾದಕರು. ಶಾಲೆಗಳಲ್ಲಂತೂ ಮಕ್ಕಳ ಬಗ್ಗೆ ಒಂದು ಬಗೆಯ ತಿರಸ್ಕಾರ. ತಾತ್ಸಾರದ ವಾತಾವರಣ ಇದ್ದೇ ಇದೆ. ಅಲ್ಲಿ ಸಹಜ ಸ್ಫೂರ್ತಿ ಕಾಲುಮುರಿದು ಮೂಲೆಯಲ್ಲಿ ಅನಾಥವಾಗಿ ಬಿದ್ದಿರುತ್ತದೆ. ಸಂತಸಕಲಿಕೆಗೆ ಬದಲಾಗಿ ಕಣ್ಣೀರಿನಕಲಿಕೆ ಕಂಡುಬರುತ್ತದೆ. ಹೊರೆರಹಿತ ಕಲಿಕೆಗೆ ಬದಲು ಕಲಿಕೆ ಭಾರವೆನಿಸುತ್ತದೆ. ಶಿವರಾಮ ಕಾರಂತರು ಬಣ್ಣಿಸುವಂತೆ ನಮ್ಮ ಹಲವು ಶಾಲೆಗಳು ಕಸಾಯಿಖಾನೆಗಳೇ ಆಗಿವೆ. ಸೈನಿಕಶಿಸ್ತು, ಸ್ವಾತಂತ್ಯ್ರನಾಶ, ಅಭಿಪ್ರಾಯ ಸ್ವಾತಂತ್ಯ್ರ ಹಾಗೂ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲಿ ಸ್ವಚ್ಛಂದವಾಗಿ ನಡೆಯುತ್ತಿದೆ. ಮುಕ್ತತೆ ಹಿಂದೆ ಸರಿದು ಕ್ಷುಲ್ಲಕ ನಿಯಮಗಳೇ ಕಾರುಭಾರು ನಡೆಸುತ್ತವೆ. “ನಮ್ಮ ಹುಡುಗರು ಶತ ದಡ್ಡರು. ಬುದ್ಧಿಯಿಲ್ಲ. ಈಗಿನ ಮಕ್ಕಳಿಗೆ ಕಲಿಯುವ ಆಸಕ್ತಿಯೇ ಇಲ್ಲ. ಈ ಮಕ್ಕಳು ಕಲಿತು ಏನಾಗಬೇಕು? ಅವು ನಾಳೆ ಭಯೋತ್ಪಾದಕರಾಗುವುದು ತಾನೆ? ಈ ಜಾತಿಯ ಮಕ್ಕಳ ತಲೆಯಲ್ಲಿ ಸಗಣಿ ತುಂಬಿದೆ. ಅವುಗಳಿಗೆ ಕಲಿಸಲಿಕ್ಕೇ ಆಗುವುದಿಲ್ಲ” ಎಂಬಂಥ ತಿರಸ್ಕಾರದ ಮಾತುಗಳು ಸದ್ಯದ ಶಿಕ್ಷಕರ ಬಾಯಿಂದ ಸದಾ ಉದುರುತ್ತಿರುತ್ತವೆ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣರಂಗದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿವೆ. ‘ಸಂತಸಕಲಿಕೆ’, ‘ಕಲಿ-ನಲಿ’, ‘ನಲಿ-ಕಲಿ’. ‘ಚೈತನ್ಯ’-ಹೀಗೆ ನಾನಾ ಬಗೆಯ ಹೊಸ ಹೊಸ ಉಪಕ್ರಮಗಳ ಮೂಲಕ ಶಿಕ್ಷಣವನ್ನು ಮಾನವೀಯಗೊಳಿಸುವ ಪ್ರಯತ್ನಗಳು ನಡೆದಿವೆ. ಸರಕಾರದ ಈ ಎಲ್ಲ ಕ್ರಮಗಳು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸಂವೇದನಾಶೀಲರಾಗಿರುವ ಶಾಲೆಗಳಲ್ಲಿ ಜಾರಿಗೊಳ್ಳುತ್ತಿವೆ. ಆದರೆ ಅನೇಕ ಶಾಲೆಗಳ ಕತೆಯೇನು? ಹೊಸ ಕಟ್ಟಡಗಳು ತಲೆ ಎತ್ತಿವೆ. ಸೌಕರ್ಯಗಳು ಹೆಚ್ಚಿವೆ. ಶಾಳಾ ಬಸ್‌ಗಳು ಹೊಸತಾಗಿವೆ. ಪಠ್ಯಪುಸ್ತಕಗಳು ಹೊಸತಾಗಿವೆ . ಆದರೆ ಈ ಎಲ್ಲ ಹೊಸತಿನ ಹಂದರದಲ್ಲಿ ಅದೇ ಹಳೆಯ ಹೂರಣ; ಶಿಕ್ಷಕರ ಮನೋಭಾವಗಳು ಕುಟ್ಟೆಹಿಡಿದ ಬೇಳೆಗಳಂತಿವೆ; ಅಲ್ಲ ಮೊದಲಿಗಿಂತಲೂ ಹೆಚ್ಚು ವಿರೂಪಗೊಂಡಿವೆ, ವಿಕೃತಗೊಂಡಿವೆ. ಮಕ್ಕಳು ಎಂದೆಂದಿಗೂ ಕಲಿಯಲಾರರು. ಅವಕ್ಕೆ ಕಲಿಸುವುದು ವ್ಯರ್ಥ ಎಂಬ ಸಿದ್ಧಾಂತವನ್ನು ಈ ಶಿಕ್ಷಕರು ಶೋಧಿಸಿ ಬಲವಾಗಿ ಅಪ್ಪಿಕೊಂಡುಬಿಟ್ಟಿದ್ದಾರೆ.

“ಮಕ್ಕಳಿಗೆ ಓದುಬರೆಹ ಬೇಡವಾಗಿದೆ. ಅವು ಕಲಿಯಬೇಕು. ಶಿಕ್ಷಕರು ಹೊಡೆದಾದರೂ ಸರಿ, ಬಡಿದಾದರೂ ಸರಿ ಮಕ್ಕಳಿಗೆ ಕಲಿಸಬೇಕು” ಎಂದು ವಾದಿಸುವ ಹೆತ್ತವರು ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೊಡೆಯದ, ಬಡಿಯದ, ಬೈಯದ ಶಿಕ್ಷಕರನ್ನು ಸಹೋದ್ಯೋಗಿಗಳು ‘ಗಾಂಧಿ’ ಎಂದು ಮೂದಲಿಸುತ್ತಾರೆ!

ಬಾಲ್ಯವೆಂಬ ನಂದನ ಹಿರಿಯರ ಪಾಲಿಗೆ ಕ್ರೂರ ಅನುಭವವೆಂದರೆ ತಪ್ಪಾಗದು. ಬಾಲ್ಯವೆಂಬ ಈ ಕಲ್ಪಿತ ಕೋಟೆಯ ಒಳಗಡೆ ಸಾಕಷ್ಟು ಹಿಂಸೆ, ಸ್ಪರ್ಧೆ, ಅನಾದರ ಇದೆ. ಮಕ್ಕಳು ವಾಸ್ತವಜಗತ್ತನ್ನು ಅರ್ಥಮಾಡಿಕೊಳ್ಳಬೇಕು. ಸೋಲುವುದಾದರೆ ಸ್ಪರ್ಧಿಸಕೂಡದು. ಎಂದು ತೋಟದ ಮಾಲಿಗಳು ಹೇಳಬಹುದು. ಜಗತ್ತಿನ ಕರಾಳತೆಯಿಂದ ಮಕ್ಕಳನ್ನು ಸಂರಕ್ಷಿಸುವುದು ನಮ್ಮ ಉದ್ದೇಶವೇ? ಅಲ್ಲ, ವಾಸ್ತವ ಜಗತ್ತು ಹೇಗಿದೆ? ಎಂದು ತಿಳಿಯಹೇಳುವುದು ನಮ್ಮ ಗುರಿಯೇ! ಹಾಗಿದ್ದರೆ ಕಲ್ಪಿತ ಕೋಟೆಯ ಬಾಗಿಲುಗಳನ್ನು ತೆರೆದು ನಾವೇಕೆ ಅವರನ್ನು ವಾಸ್ತವಜಗತ್ತಿಗೆ ಬಿಟ್ಟುಬಿಡಬಾರದು? ಅಲ್ಲಿ ಅವರ ಪಾಡಿಗೆ ಅವರು ಪ್ರಶ್ನೆ ಕೇಳಿಕೊಳ್ಳಲಿ, ನೋಡಿ ತಿಳಿಯಲಿ, ಮಾಡಿ ಕಲಿಯಲಿ?